ಸುಮಾವೀಣಾ
ಕಂಡುದದ ಆಡೆ ಭೂಮಂಡಲ ಮುನಿವುದು-ಸರ್ವಜ್ಞನ ತ್ರಿಪದಿಯಲ್ಲಿ ಉಲ್ಲೇಖಿಸಲಾಗಿರುವ ಮಾತು. ನಾವು ನೇರವಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಕೆಲವರಿಗೆ ಅದು ಇಷ್ಟವಾಗುವುದಿಲ್ಲ. ಸತ್ಯ ಯಾವಾಗಲೂ ಕಹಿ ಅನ್ನುತ್ತಾರಲ್ಲ ಹಾಗೆ.
ಒಟ್ಟಾರೆಯಾಗಿ ಈ ಜಗತ್ತು, ಈ ಜನಗಳು ಭ್ರಮಾಲೋಕದಲ್ಲಿಯೇ ಇರುವರೇನೋ ಅನ್ನಿಸುತ್ತದೆ. ಸತ್ಯವನ್ನು ಕಂಡರೆ, ಕೇಳಿದರೆ ಅಪಥ್ಯ ಅನ್ನುವ ಹಾಗೆ ಆಡುತ್ತಾರೆ. ನೇರವಾಗಿ ನುಡಿಯುವವರ ಮೇಲೆ ಜನರು ಕೋಪಿಸಿಕೊಳ್ಳುತ್ತಾರೆ. ಖಂಡಿತವಾದಿ ಲೋಕಕ್ಕೆ ನಿಷ್ಠುರವಾದಿ ಎನ್ನುವ ಮಾತನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು.
ಸತ್ಯಯಾವಾಗಲೂ ಕಠಿಣ ಆದರೆ ಸುಳ್ಳು ತಕ್ಷಣಕ್ಕೆ ಸಿಹಿಯಾಗಿರುವುದರಿಂದ ಅದನ್ನೆ ಸ್ವೀಕರಿಸುತ್ತಾರೆ. ಮೇಲ್ನೋಟಕ್ಕೆ ಸುಂದರವಾಗಿ ಕಾಣುವುದೆಲ್ಲ ನಮಗೆ ಅನುಕೂಲವಾಗಿರುತ್ತದೆ ಎಂಬುದು ಭ್ರಮೆ ಅಷ್ಟೆ.
ರತ್ನಾಕರವರ್ಣಿಯ ‘ಭರತೇಶವೈಭವ’ದಲ್ಲಿ ಬರುವ ಪ್ರಸಂಗವೊಂದರಲ್ಲಿ ಭರತ ಚಕ್ರವರ್ತಿ ಭೂಮಂಡಲವನ್ನೇ ಗೆದ್ದ ಸಂತಸದಲ್ಲಿ ವೃಷಭಾದ್ರಿಯನ್ನು ಏರಿ ಅಲ್ಲಿ ಬೆಟ್ಟದ ತುದಿಯಲ್ಲಿ ನಾನೇ ಜಗದೇಕ ವೀರ ಎಂದು ಶಾಸನವನ್ನು ಕೆತ್ತಿಸುವ ಸಂದರ್ಭದಲ್ಲಿ ಅವನಿಗೂ ಮೊದಲೆ ಭೂಮಂಡಲವನ್ನು ಗೆದ್ದ ಸತ್ಯವನ್ನು ಕಂಡಾಗ ಅದನ್ನು ಸಹಿಸದೆ ಕೋಪಗೊಳ್ಳುತ್ತಾನೆ.ಇದರಿಂದ ತಿಳಿಯುವುದು ಇಷ್ಟೆ ರಾಜನಾಗಲಿ ಶ್ರೀಸಾಮಾನ್ಯನೆ ಆಗಲಿ ಇದ್ದುದನ್ನುಇದ್ದ ಹಾಗೆ ಸ್ವೀಕರಿಸಲಾರರು ಎಂದು. ಕರಿ ಕಾಗೆ ಬೆಳ್ಳಗೆ ಮಾಡಲಾದೀತೆ ಎಂಬ ಮಾತಿನಂತೆ ಸತ್ಯ ಯಾವಾಗಲೂ ಸಾಲಿಡ್ ಅದರ ಸ್ವರೂಪ ಬದಲಿಸಲು ಸಾಧ್ಯವಿಲ್ಲ.

ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.



ತಮ್ಮ ಬರವಣಿಗೆ ಹೆದ್ದಾರಿಯ ಮಾರ್ಗದರ್ಶಿಗಳು ಗಾತ್ರದಲ್ಲಿ ವಾಮನ ಅರ್ಥವಂತಿಕೆಯಲ್ಲಿ ತ್ರಿವಿಕ್ರಮ. ಸಾವಿರದ ನಮನಗಳು. ಹೀಗೆ ಸಾಗಲಿ ನಿಮ್ಮ ಸಾಹಿತ್ಯ ಯಾತ್ರೆ.