26.8 C
Karnataka
Wednesday, May 20, 2026
    Home Blog Page 176

    ಬಂಧನ ಸಾಕಿನ್ನು, ಬಿಡುಗಡೆಯೂ ಬೇಕು

    ಕಣ್ಣಿಗೆ ಕಾಣದ ವೈರಸ್ ಒಂದು  ಇಡೀ ವಿಶ್ವವನ್ನೇ ಹೈರಾಣಾಗಿಸಿದೆ. ಕೇವಲ ಒಂದೆರಡು ತಿಂಗಳ ಲಾಕ್ ಡೌನ್ ಮನುಷ್ಯನ ಬದುಕಿಗೆ ತಂದಿಟ್ಟ ತಾಪತ್ರಯಗಳು ಅಷ್ಟಿಷ್ಟಲ್ಲ ಕೊರೋನಾ ಕಾಲದ ಲಾಕ್ ಡೌನ್ ನ  ಆರಂಭದ ದಿನಗಳು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಿದೆ. ಅಬ್ಬಾ… ಇಷ್ಟು ಕಾಲ ಮಕ್ಕಳು, ಸತಿಪತಿ ಒಂದಾಗಿ ಒಟ್ಟಿಗೇ ಸಮಯ ಕಳೆದದ್ದು ಇದೇ ಮೊದಲೇನೋ ಎಂಬಂತೆ ಸಂಭ್ರಮಿಸಿದವರು ಇದ್ದಾರೆ.

    ನಗರ ಜೀವನದಲ್ಲಿ ಪತಿ ಪತ್ನಿ ಇಬ್ಬರೂ ಹೊರಗೆ ಹೋಗಿ ದುಡಿಯುವ ವವರೆ. ಹಾಗಾಗಿ ಇಬ್ಬರ ನಡುವೆ ಮನೆ ಕೆಲಸ, ಮಕ್ಕಳ ಕೆಲಸ ಎಲ್ಲವೂ ಹಂಚಿಕೆಯಾಗಿ ಹೊಂದಾಣಿಕಯೇ ಜೀವನ  ಎಂಬಂತಾಗಿತ್ತು.ಕೊರೋನಾ ಕಿರಿಕಿರಿಯಿಂದ ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಂ. ಹಂಚಿಕೆಯಾಗಿದ್ದ ಕೆಲಸ ಮನೇಲಿ ಇದ್ದೇವೆಲ್ಲ ಆಮೇಲೆ ಮಾಡಿದರಾಯಿತು ಎನ್ನುವ ಭಾವ. ಸ್ವಲ್ಪ ಹೊತ್ತಿನ ನಂತರ ನೀನು ಮಾಡು, ನೀನು ಮಾಡು. ಕೊನೆಗೆ ನೀನೇ ಮಾಡು ಎನ್ನುವ ಸಣ್ಣ ಸಣ್ಣ ಸಂಘರ್ಷ ಗಳು ಶುರುವಾಗುತ್ತವೆ.

    ಕೊರೋನಾ ತಂದ ಬಿರುಕು

    ಇದು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪತಿ ಪತ್ನಿಯ ಸಂಬಂಧದಲ್ಲಿ ಬದಲಾವಣೆ. ಪ್ರತಿದಿನದ ಸಣ್ಣ ಪುಟ್ಟ ವೈಮನಸ್ಸು ಸಂಸಾರದಲ್ಲಿ ದೊಡ್ಡ ಬಿರುಕು ಮೂಡಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ  ಭಾರತ ಮತ್ತು ಚೈನಾದಲ್ಲಿ ಕೌಟುಂಬಿಕ ಕಲಹದ ಕಾರಣ ಕೊಟ್ಟು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಿದೆ .

     ಮತ್ತೊಂದು ಕಡೆ, ಉದ್ಯಾನಗಳಲ್ಲಿ, ಕಾಫಿ ಡೇ, ಮಾಲ್, ಸಿನಿಮಾ ಅಂತೆಲ್ಲ ಕೈ ಕೈ ಹಿಡಿದು ಸುತ್ತಾಡುವ ಕನಸು ಕಂಡಿದ್ದ ಮನಸುಗಳಿಗೆ ಕೊರೋನಾ ತಣ್ಣೀರೆರಚಿದೆ. ಇದರಿಂದಾಗಿ ಹೆಚ್ಚಿನ ಜನರು ಆನ್ಲೈನ್ ಡೇಟಿಂಗ್ ಮಾಡುತ್ತಿರುವುದು ಕೂಡಾ ಇತ್ತೀಚಿನ ಟ್ರೆಂಡ್ ಆಗಿದೆ. ಹೆಚ್ಚಿನವರಿಗೆ ಕೊರೋನಾ ಕಾಟ ಸಂಪೂರ್ಣ ಮುಗಿದರೆ ಸಾಕು, ಯಾವಾಗ ಒಮ್ಮೆ ಹೊರಗೆ ಹೋಗುತ್ತೇನೆ ಎಂದು ಕಾಯುವಂತಾಗಿದೆ.ಯಾಕೆಂದರೆ ಸಂಬಂಧ ಹೇಗೇ ಇರಲಿ, ಅದೆಷ್ಟೇ ಚೆನ್ನಾಗಿರಲಿ ಪ್ರತಿಯೊಬ್ಬರೂ ಕೂಡಾ ಒಂದಷ್ಟು ಹೊತ್ತು ಏಕಾಂತವನ್ನು ಬಯಸುತ್ತಾರೆ .ಮಾತ್ರವಲ್ಲ ಸಂಬಂಧದಲ್ಲಿ ಸಣ್ಣದೊಂದು ಸ್ಪೇಸ್, ಪ್ರೈವಸಿ ಇರಲೇಬೇಕು.

    ದೂರದಲ್ಲೇ ಇರಲಿ

    ಸಂಸಾರದಲ್ಲಿ ವ್ಯಕ್ತಿಯ ಬೆಲೆ ತಿಳಿಯುವುದು ದೂರ ದೂರ ಇದ್ದಾಗಲೇ. 24×7  ಜತೆಗೇ ಇರುವುದು ಅಂದ್ರೆ ಕಿರಿ ಕಿರಿ ಅನ್ನಿಸದೇ ಇರಲಾರದು. ಒಂದು  ಮಾತಿದೆ. ಚಿಕ್ಕ ಮಗುವನ್ನು ಬಿಗಿಯಾಗಿ ಅಪ್ಪಿ ಒಂದಷ್ಟು ಹೊತ್ತು ಎತ್ತಿಕೊಳ್ಳಿ. ಅದು ಸ್ವಲ್ಪ ಹೊತ್ತಲ್ಲೇ ಜಾರಿ ಇಳಿದುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತದೆ. ಅದೇ ಮಗುವನ್ನು ಸ್ವಲ್ಪ ಹೊತ್ತು ಎತ್ತಿ ಮುದ್ದಾಡಿ ಅದರ ಪಾಡಿಗೆ ಬಿಟ್ಟು ಬಿಡಿ. ಮತ್ತೆ ಅದಾಗಿಯೇ ನಮ್ಮೆಡೆಗೆ ಖುಷಿಯಿಂದ ಅರಸಿ ಬರುತ್ತದೆ. ಹಾಗೆಯೇ ಪ್ರತಿಯೊಬ್ಬರಿಗೂ ಒಂದಷ್ಟು ಹೊತ್ತು ಸ್ವಾತಂತ್ರ್ಯ ಬೇಕು.

    ದೂರ ಇದ್ದಾಗ  ಪರಸ್ಪರ ಕೊಡುವ ಮಹತ್ವ ಒಟ್ಟಿಗೇ ಇದ್ದಾಗ ಕೊಡುವುದು ಕಡಿಮೆ. ಒಟ್ಟಿಗೇ ಇರ್ತಿವಲ್ಲ ಅನ್ನೋ ಭಾವ. ದೂರ ಇದ್ದಾಗ ವಿಡಿಯೋ ಕಾಲ್, ಚಾಟಿಂಗ್, ಎಲ್ಲವನ್ನೂ ಹಂಚಿಕೊಳ್ಳುವ ಆ ಸಮಯ ಕ್ವಾಲಿಟಿ ಟೈಮ್ ಆಗಿರುತ್ತದೆ.

    ದೂರದಲ್ಲಿ ಇದ್ದಾಗ ಬರುತ್ತಿದ್ದ ಫೋನ್ ಕಾಲ್, ಮೆಸೇಜ್, ಕೆಲ್ಸಕ್ಕೆ ಹೊರಟಾಗ ಮಾಡುವ ವಿಷ್…. ಇವೆಲ್ಲವೂ ಈ ಸಂದರ್ಭದಲ್ಲಿ ಮಿಸ್ ಆಗಿರುತ್ತದೆ. ಅಂದರೆ ಜತೆಗಿದ್ದಾಗ ಇದ್ಯಾವುದೂ ಇರುವುದಿಲ್ಲ. ಹೆಚ್ಚು ಸಮಯ ಜತೆಗಿದ್ದಷ್ಟು ನಮ್ಮೆಡೆಗೆ ಒಂದು ಅಸಡ್ಡೆ ಗುಡ್ಡೆ ಹಾಕಿಕೊಂಡು ಕುಳಿತು ಬಿಡುತ್ತದೆ. ದೂರ ಇದ್ದಷ್ಟು ಹೊತ್ತು ನಮ್ಮನ್ನು ಕಾಯುವಂತೆ, ಕಾಡುವಂತೆ, ಪ್ರೀತಿಯ ಜಗಳ ಮಾಡುವಂತೆ ಮಾಡುತ್ತದೆ. ಯಾರೇ ಆದರೂ ಸರಿ ಪದೇ ಪದೆ ಗಮನಿಸುತ್ತಿರುತ್ತಾರೆ ಅಂತನಿಸಿದರೆ ಕಿರಿ ಕಿರಿಯಗುವುದು ಸಹಜ. ಹಾಗಾಗಿ  ಆತನ ಅಥವಾ ಆಕೆಯ ಅನುಪಸ್ಥಿತಿಯನ್ನು ಅನುಭವಿಸಲು ಒಂಚೂರು ಸ್ಪೇಸ್ ಕೊಟ್ಟು ಕೊಳ್ಳಬೇಕು.

    ಕೌಟುಂಬಿಕ ಕಲಹಗಳು ಹೆಚ್ಚ

    ಕೋರೋನಾದಿಂದ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ.  ನ್ಯಾಷನಲ್ ಲೀಗಲ್ ಸರ್ವೀಸ್ ಅಥಾರಿಟಿ  NALSA ಮಾಡಿದ ಸಮೀಕ್ಷೆ ಪ್ರಕಾರ ನಮ್ಮ ದೇಶದಲ್ಲಿ ಕಳೆದ 2 ತಿಂಗಳುಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ.

    ಲಾಕ್ ಡೌನ್ ಸಮಯದಲ್ಲಿ ವೃತ್ತಿ, ಸಾಮಾಜಿಕ ಬದುಕಿನಲ್ಲಾದ ಬದಲಾವಣೆ ತರುವ ಚಿಂತೆ, ಒತ್ತಡಗಳನ್ನೂ ತನ್ನವರ ಮೇಲೇ ತೋರ್ಪಡಿಸುವುದರಿಂದ   ಕಲಹ ಜಾಸ್ತಿ.

    ಸುಷ್ಮಸಿಂಧು, ಮನಃಶಾಸ್ತ್ರಜ್ಞೆ

    ಉತ್ತರಖಂಡ ದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಹರಿಯಾಣ, ದೆಹಲಿ 3ನೆ ಸ್ಥಾನದಲ್ಲಿದೆ. ಬೇರೆ ಬೇರೆ ರಾಜ್ಯಗಳ ಕಾನೂನು ಸೇವಾ ಕೇಂದ್ರದಿಂದ ಪಡೆದುಕೊಂಡ ಮಾಹಿತಿಯನ್ನಾಧರಿಸಿ ಈ ವರದಿಯನ್ನು ಬಿಡುಗಡೆ ಮಾಡಿತ್ತು.ತೆಲಂಗಾಣದಲ್ಲಿ ಕೂಡಾ ಇಂಥ ಪ್ರಕರಣಗಳು ಹೆಚ್ಚಿವೆ.

    ರಾಷ್ಟೀಯ ಮಹಿಳಾ ಆಯೋಗಕ್ಕೆ ಬಂದಿರುವ ದೂರುಗಳನ್ನು ಗಮನಿಸಿದರೆ ಕರ್ನಾಟಕ ದಲ್ಲೂ ಕೌಟುಂಬಿಕ ದೌರ್ಜನ್ಯ ವರದಿಗಳು ಹೆಚ್ಚಾಗಿರುವುದನ್ನು ಗಮನಿಸಬಹುದು.

    ಮಾರ್ಚ್ 1ರಿಂದ ಏಪ್ರಿಲ್ 22 ರವರೆಗಿನ ವರದಿ ಪ್ರಕಾರ ಬೆಂಗಳೂರು ನಲ್ಲಿ 40, ಬೆಳಗಾವಿ 11, ಮಂಡ್ಯ 10, ಕಲ್ಬುರ್ಗಿ 10, ರಾಮನಗರ 9, ರಾಯಚೂರು ನಲ್ಲಿ 9 ಪ್ರಕರಣಗಳು ದಾಖಲಾಗಿವೆ.

    ನಮ್ಮಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ

    ಇಟಲಿ ಯಲ್ಲಿ ಶೇ.30 ರಷ್ಟು ಡಿವೋರ್ಸ್ ಕೇಸ್ ಗಳು ಹೆಚ್ಚಾಗಿವೆ ಎಂದು ‘ದ ಟೆಲಿಗ್ರಾಫ್ ‘ ವರದಿ ಮಾಡಿತ್ತು. ಚೀನಾ, ಸೌದಿ ಅರೇಬಿಯಾದಲ್ಲೂ ಶೇ.40 ರಷ್ಟು ಪ್ರಕರಣಗಳು ಹೆಚ್ಚಿವೆ.

    ಯುರೋಪಿನಲ್ಲಿ ಶೇ. 60 ರಷ್ಟು ಪ್ರಕರಣಗಳು ಹೆಚ್ಚಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಕಚೇರಿ ಇತ್ತೀಚೆಗೆ ಮಾಹಿತಿ ನೀಡಿತ್ತು. ಲಾಕ್ ಡೌನ್ ಮುಂದುವರಿದ ರೆ ಮುಂದಿನ 6 ತಿಂಗಳುಗಳಲ್ಲಿ ವಿಶ್ವದಾದ್ಯಂತ 31 ಮಿಲಿಯನ್ ಗೂ ಅಧಿಕ ಪ್ರಕರಣಗಳು ದಾಖಲಾಗುವ ಆತಂಕ ವ್ಯಕ್ತಪಡಿಸಿದೆ.

    ಕೂಸು ಬಡವಾಗದಿರಲಿ

    * ಮನೆಯಲ್ಲಿ ಇಡೀ ದಿನ ಜತೆಗೇ ಕಳೆಯುವುದ್ರಿಂದ ಪರಸ್ಪರ ಅರ್ಗುಮೆಂಟ್ ಆಗುತ್ತಲೇ ಇರುತ್ತದೆ. ಇಬ್ಬರ ನಡುವೆ ನಡೆಯುವ ವಾಗ್ವಾದ ವನ್ನು ಗೌರವಯುತವಾಗಿ ಬಗೆಹರಿಸಿಕೊಳ್ಳಬೇಕು.

    *ಇಬ್ಬರ ಜಗಳದಿಂದ ಕೂಸು ಬಡವಾಯಿತು ಅಂತಾರೆ. ಅದಷ್ಟೇ ಅಲ್ಲ ಇಬ್ಬರ ನಡುವೆ ನಡೆಯುವ ನಾನು  ಸರಿ ನೀನು ತಪ್ಪು ಎನ್ನುವ ವಾದದಿಂದ ಕೊನೆಗೆ ಉಳಿಯುವುದು : ಪರಸ್ಪರ ತಪ್ಪು ತಿಳಿಯುವುದು, ನೋವು, ಬೇಸರ, ಹತಾಶೆ ಅಷ್ಟೆ.

    * ಜತೆಗೇ ಒಂದಷ್ಟು ಹೊತ್ತುಸಮಯ ಮೀಸಲಿಡುವುದು, ಒಬ್ಬರನ್ನೊಬ್ಬರು ಸಪೋರ್ಟ್ ಮಾಡಿಕೊಳ್ಳುವುದು, ಒಪ್ಪಿಕೊಳ್ಳುವುದು ಕೂಡಾ ಇಂಪಾರ್ಟೆಂಟ್.

    ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಮ್ಮ ಅಂತರಾಳವ/ ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯು ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ//

    ಕವಿ ಎಚ್ ಎಸ್ ವೆಂಕ ಟೇಶಮೂರ್ತಿ ಅವರ ಈ ಭಾವಗೀತೆ ಯನ್ನು ಸಂಸಾರವೆಂಬ  ಕಡಲಿನ ದೋಣಿಗೂ ಹೋಲಿಕೆ ಮಾಡಿಕೊಳ್ಳಬಹುದೇನೋ?

    ಫೋಟೋ ಕೃಪೆ : Jasmine Carter from Pexels

    ರಾಜ್ಯಸಭೆ ಚುನಾವಣೆ: ನಾಲ್ಕನೇ ಅಭ್ಯರ್ಥಿ ಯಾರು?

    ರಾಜ್ಯಸಭಾ ಚುನಾವಣೆಯ ಕಾವು ಏರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಘೋಷಣೆಯಾಗಿದೆ.ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವ ಬಿಜೆಪಿ, ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅಡ್ಡ ಮತದಾನಕ್ಕೆ ಪ್ರೋತ್ಸಾಹ ನೀಡುವುದೆ ಎಂಬ ಕುತೂಹಲವೂ ಸೃಷ್ಟಿಯಾಗಿದೆ . ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

    ಇದನ್ನೂ ಓದಿ: ಖರ್ಗೆಗೆ ಸಿಕ್ಕಿತು ಕಾಂಗ್ರೆಸ್ ಟಿಕೆಟ್ : ಮೂರನೇ ಸ್ಥಾನ ಗೆಲ್ಲುವುದೆ ಬಿಜೆಪಿ?

    ಖರ್ಗೆಗೆ ಸಿಕ್ಕಿತು ಕಾಂಗ್ರೆಸ್ ಟಿಕೆಟ್ : ಮೂರನೇ ಸ್ಥಾನ ಗೆಲ್ಲುವುದೆ ಬಿಜೆಪಿ?

    ಅಶೋಕ ಹೆಗಡೆ
    ಕೊರೊನಾ ಪ್ರಕರಣಗಳು ಒಂದೇಸಮನೆ ಏರುತ್ತಿವೆ. ಕೊರೊನಾ ಜತೆ ಜೀವನ ನಡೆಸುವುದು ಅನಿವಾರ್ಯ ಎನ್ನುವುದನ್ನು ಮನವರಿಕೆ ಮಾಡಿಕೊಂಡಿರುವ ಜನರು ನಿಧಾನಕ್ಕೆ ಎಂದಿನ ಜೀವನಶೈಲಿಗೆ ಮರಳುತ್ತಿದ್ದಾರೆ. ಇದೇವೇಳೆ ರಾಜ್ಯ ಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳು ಎದುರಾಗಿವೆ. ರಾಜಕೀಯ ಪಕ್ಷಗಳೂ ಕೊರೊನಾ ವಿಚಾರವನ್ನು ಮೆಲ್ಲಗೆ ಪಕ್ಕಕ್ಕೆ ಸರಿಸಿ ಚುನಾವಣೆಯತ್ತ ಗಮನ ಕೇಂದ್ರೀಕರಿಸಿವೆ.ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ರಾಜ್ಯಸಭೆಗೆ ಜೂನ್ ೧೯ರಂದು ಚುನಾವಣೆ ನಡೆಯಲಿದೆ. ಸದ್ಯ ಎಲ್ಲ ಪಕ್ಷಗಳೂ ರಾಜ್ಯಸಭೆ ಚುನಾವಣೆ ವಿಚಾರದಲ್ಲಿಯೇ ಹೆಚ್ಚು ತಲೆ ಕೆಡಿಸಿಕೊಂಡಿವೆ.
    ಚುನಾವಣೆಯ ಮೊದಲ ಬಿಸಿ ಎದುರಾಗಿರುವುದು ಬಿಜೆಪಿಗೆ. ಸಂಖ್ಯಾಬಲದ ಆಧಾರದಲ್ಲಿ ಎರಡು ಸ್ಥಾನ ನಿರಾಯಾಸವಾಗಿ ಗೆಲ್ಲಬಹುದು. ಅದರಲ್ಲಿ ಬೆಳಗಾವಿಯ ಪ್ರಭಾಕರ ಕೋರೆ ಆಯ್ಕೆ ಬಹುತೇಕ ಖಚಿತವಾಗಿದೆ. ಪಕ್ಷದ ಸಂಪನ್ಮೂಲದ ದೃಷ್ಟಿಯಿಂದ ಕೋರೆಯಂತಹವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಶಾಸಕ ಉಮೇಶ ಕತ್ತಿ ತಮ್ಮ ಸಹೋದರ ರಮೇಶ ಕತ್ತಿಗಾಗಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದಂತೆ ಅವರ ಅಂತರಂಗದಲ್ಲಿ ತಾವು ಮಂತ್ರಿಯಾಗಬೇಕೆಂಬ ಬಯಕೆ ಇತ್ತು. ಎರಡೂ ಗುರಿ ಇಟ್ಟರೆ ಒಂದಾದರೂ ತಾಗಲಿ ಎನ್ನುವುದು ಅವರ ನಡೆಯಾಗಿತ್ತು. ‘ನಿನ್ನನ್ನು ಮಂತ್ರಿ ಮಾಡ್ತೀನಿ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಅಲ್ಲಿಗೆ ಕತ್ತಿ ಸಮಾಧಾನಗೊಂಡಿದ್ದಾರೆ.
    ಎರಡನೇ ಸ್ಥಾನಕ್ಕೆ ತೇಜಸ್ವಿನಿ ಅನಂತಕುಮಾರ್, ಸುಧಾಮೂರ್ತಿ, ಆರ್ಥಿಕ ತಜ್ಞ ಕೆ.ವಿ.ಕಾಮತ್ ಹೆಸರುಗಳನ್ನು ಬಿಜೆಪಿ ರಾಜ್ಯ ನಾಯಕರು ತೇಲಿ ಬಿಟ್ಟಿದ್ದಾರೆ. ಇದರ ನಡುವೆ ಪಕ್ಷದಲ್ಲಿ ರಾಜ್ಯದ ಉಸ್ತುವಾರಿಯಾಗಿರುವ ಆಂಧ್ರಪ್ರದೇಶದ ವಿ.ಮುರಳೀಧರರಾವ್ ಸಹ ಟಿಕೆಟ್ ಕಸರತ್ತು ನಡೆಸಿದ್ದಾರೆ ಎಂಬ ವದಂತಿ ಇದೆ. ಅನಿರೀಕ್ಷಿತ ಹೆಸರುಗಳ್ನು ತೇಲಿಬಿಡುವುದು ಬಿಜೆಪಿ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ತಂತ್ರವಾಗಿದೆ.

    ತೇಜಸ್ವಿನಿ ಅನಂತಕುಮಾರ್ ಸಮರ್ಥ ನಾಯಕಿ, ಉತ್ತಮ ವಾಗ್ಮಿ. ಕಳೆದ ಲೋಕಸಭೆ ಚುನಾವಣೆ ವೇಳೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಿ ದಿ.ಅನಂತಕುಮಾರ್ ಅವರಿಗೆ ಗೌರವ ಸಲ್ಲಿಸಲು ಇದು ಸರಿಯಾದ ಸಮಯ. ಸುಧಾಮೂರ್ತಿ ಅವರನ್ನು ಕಣಕ್ಕೆ ಇಳಿಸಿದರೆ ಪಕ್ಷಕ್ಕೆ ಗೌರವ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬದಲು ಬ್ರಿಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್ ಅವರಿಗೆ ಆ ಹೊಣೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ ಎಂಬ ಸುದ್ದಿ ಕೆಲತಿಂಗಳುಗಳಿಂದ ಹರಿದಾಡುತ್ತಲೇ ಇದೆ. ಹೀಗೆ ಮೂವರ ಹೆಸರಿನ ಹಿಂದೆಯೂ ಒಂದೊಂದು ಕಾರಣಗಳಿವೆ. ಮೂವರೂ ಸಮರ್ಥರೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಎರಡನೇ ಸ್ಥಾನಕ್ಕೆ ಪಕ್ಷದ ಇತರರು ಲಾಬಿ ನಡೆಸಬಾರದು ಎಂಬ ಉದ್ದೇಶದಿಂದ ಮುರಳೀಧರ ರಾವ್ ಹೆಸರು ಗಾಳಿಗೆ ಬಂದಿರಬಹುದು. ಬಿಜೆಪಿಯ ನಡೆ ಗಮನಿಸಿದರೆ ಈ ನಾಲ್ವರನ್ನೂ ಬಿಟ್ಟು ಐದನೇ ವ್ಯಕ್ತಿಯನ್ನು ಕಣಕ್ಕೆ ಇಳಿಸಿದರೆ ಅಚ್ಚರಿ ಇಲ್ಲ.


    ಖರ್ಗೆಗೆ ಒಲಿದ ಕಾಂಗ್ರೆಸ್ ಟಿಕೆಟ್

    ಕಾಂಗ್ರೆಸ್‌ನಲ್ಲಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ತುಮಕೂರಿನ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೆಸರು ಕೇಳಿಬಂದಿತ್ತು. ಸದ್ಯದ ಸ್ಥಿತಿಯಲ್ಲಿ ರಾಜ್ಯಸಭೆಯಲ್ಲಿ ಸರಕಾರದ ವಿರುದ್ಧ ಗಟ್ಟಿ ಧ್ವನಿಯಲ್ಗಲಿ ಮಾತನಾಡುವ ವ್ಯಕ್ತಿಗಳ ಅಗತ್ಯ ಕಾಂಗ್ರೆಸ್‌ಗೆ ಇದೆ. ಆ ದೃಷ್ಟಿಯಿಂದ ನೋಡಿದರೆ ಖರ್ಗೆ ಸೂಕ್ತ ಆಯ್ಕೆ. ಹೀಗಾಗಿಯೇ ಅವರ ಹೆಸರು ಘೋಷಣೆ ಆಗಿದೆ. ಆದರೆ ಹಾಲಿ ಸಂಸದರಾಗಿದ್ದರೂ ಮುದ್ದಹನುಮೇಗೌಡರಿಗೆ ಮೈತ್ರಿ ಕಾರಣದಿಂದ ಕಳೆದ ಲೋಕಸಭೆ ಟಿಕೆಟ್ ನಿರಾಕರಿಸಲಾಗಿತ್ತು. ಆಗ, ಅವಕಾಶ ಸಿಕ್ಕಾಗ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಲಾಗಿತ್ತು.ಆದರೆ ಅವರು ಈಗ ಏನು ಮಾಡುತ್ತಾರೆ ಎಂಬುದು ಪ್ರಶ್ನೆ.


    ಜೆಡಿಎಸ್‌ಗೆ ಸ್ವತಂತ್ರವಾಗಿ ಗೆಲ್ಲಲು ಸಂಖ್ಯಾಬಲದ ಕೊರತೆ ಇದೆ. ಕೊಟ್ಟು-ಕೊಳ್ಳುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡರೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರೇ ಅಭ್ಯರ್ಥಿಯಾಗಬಹುದು. ವಿಧಾನ ಪರಿಷತ್‌ನಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೆಚ್ಚುವರಿ ಮತಗಳಿಂದ ದೇವೇಗೌಡರನ್ನು ಗೆಲ್ಲಿಸುವ ಸೂತ್ರ ಸಿದ್ಧವಾಗುತ್ತಿದೆ. ಅದು ಅಂತಿಮಗೊಂಡರೆ ಗೌಡರ ಆಯ್ಕೆ ಖಚಿತ. ಆರಂಭದಲ್ಲಿ, ‘ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡೋಣ. ಕುಟುಂಬ ರಾಜಕಾರಣದ ಅಪವಾದ ಬೇಡ’ ಎಂದು ಗೌಡರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಕೊನೆಗೆ ರಾಜ್ಯಸಭೆಯಲ್ಲಿ ಬಿಜೆಪಿ ವಿರುದ್ಧ ಮಾತನಾಡಲು ಅನುಭವಿಗಳು ಬೇಕು ಎಂದು ಕಾಂಗ್ರೆಸ್ ಮತ್ತು ಇತರ ಮಿತ್ತ್ರ ಪಕ್ಷಗಳು ಒತ್ತಡ ಹಾಕಿದ್ದರಿಂದ ಅನಿವಾರ್ಯವಾಗಿ ಸ್ಪರ್ಧಿಸಬೇಕಾಯಿತು ಎಂಬ ಸಮಜಾಯಿಷಿ ನೀಡುತ್ತಾರೆ.

    ಅಂದಹಾಗೆ ಸ್ವತಂತ್ರವಾಗಿ ಒಂದು ಸ್ಥಾನ ಗೆಲ್ಲುವ ಸಾಮರ್ಥ್ಯ ಇದ್ದಾಗ ಜೆಡಿಎಸ್ ರಾಜ್ಯಸಭೆ ಚುನಾವಣೆಯನ್ನು ಪಕ್ಕಾ ವ್ಯಾಪಾರವಾಗಿ ಮಾಡಿಕೊಂಡಿರುವ ಉದಾಹರಣೆಯೂ ಇದೆ.
    ಆದರೆ, ಬಿಜೆಪಿಗೆ ರಾಜ್ಯಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಗುಜರಾತ್‌ನಲ್ಲಿ ಮಾಡಿರುವಂತೆ ಕೊನೆಕ್ಷಣದಲ್ಲಿ ‘ಆಪರೇಷನ್’ ಅಥವಾ ಅಡ್ಡ ಮತದಾನಕ್ಕೆ ರಹಸ್ಯ ಕಾರ್ಯಾಚರಣೆ ನಡೆಸಿದರೂ ಆಶ್ಚರ್ಯವಿಲ್ಲ. ಆಗ ಕಾಂಗ್ರೆಸ್-ಜೆಡಿಎಸ್ ಲೆಕ್ಕಾಚಾರ ತಲೆ ಕೆಳಗಾಗುತ್ತದೆ. ೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ೧೧೭, ಕಾಂಗ್ರೆಸ್ ೬೮, ಜೆಡಿಎಸ್ ೩೪ ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರರು ಹಾಗೂ ಒಬ್ಬ ಬಿಎಸ್ಪಿ ಶಾಸಕರಿದ್ದಾರೆ. ಈ ಮೂವರು ಬಿಜೆಪಿ ಬೆಂಬಲಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ೪೫ ಮತ ಬೇಕು. ಅಂದರೆ ಬಿಜೆಪಿ ಬಳಿ ಇಬ್ಬರನ್ನು ಗೆಲ್ಲಿಸಿಕೊಂಡು ೨೭ ಹೆಚ್ಚುವರಿ ಮತಗಳು ಉಳಿಯುತ್ತವೆ. ಮೂವರು ಪಕ್ಷೇತರರನ್ನೂ ಸೇರಿಸಿಕೊಂಡರೆ ಮತಗಳ ಸಂಖ್ಯೆ ೩೦ ಆಗುತ್ತದೆ. ಕಾಂಗ್ರೆಸ್ ಬಳಿ ೨೩ ಹೆಚ್ಚುವರಿ ಮತಗಳಿರುತ್ತವೆ. ಬಿಜೆಪಿಗೆ ಹೆಚ್ಚುವರಿಯಾಗಿ ಬೇಕಾಗುವುದು ೧೫ ಮತಗಳು ಮಾತ್ರ. ಹೀಗಾಗಿ ಅಡ್ಡಮತದಾನ ಮಾಡಿಸಲು ಬಿಜೆಪಿ ಮುಂದಾದರೂ ಅಚ್ಚರಿ ಪಡಬೇಕಿಲ್ಲ.

    ಕೊರೊನಾ ವೈರಸ್‌ಗಿಂತಲೂ ಅವರನ್ನು ವ್ಯವಸ್ಥೆ ಹೈರಾಣು ಮಾಡಿತ್ತು

    ಕೊರೊನಾ ಭಾರತದಲ್ಲಿನ್ನು ರಣಕೇಕೆ ಹಾಕಿರಲಿಲ್ಲ. ಸೋಷಿಯಲ್ ಮೀಡಿಯಾ ಆದಿಯಾಗಿ ಬಹುತೇಕ ಸುದ್ದಿ ಮಾಧ್ಯಮಗಳಲ್ಲಿ ಕೊರೊನಾ ಪೀಡಿತ ವಿದೇಶಿ ವಿಡಿಯೋಗಳು ಹರಿದಾಡುತ್ತಿದ್ದವು. ರಸ್ತೆ ರಸ್ತೆಯಲ್ಲೇ ಹೆಣವಾಗುವ ದೃಶ್ಯ ನಿಜಕ್ಕೂ ಆತಂಕ ಸೃಷ್ಟಿ ಮಾಡಿತ್ತು. ಬೆಂಕಿ ಸ್ಪರ್ಶಿಸಿದ ಹುಳದ ರೀತಿಯಲ್ಲಿ ಮನುಷ್ಯರು ಒದ್ದಾಡುವ ದೃಶ್ಯ ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು.

    ಭಾರತಕ್ಕೂ ಆ ವೈರಸ್ ಕಾಲಿಟ್ಟಿತು. ಮೊದಲ ಬಲಿ ಕರ್ನಾಟಕದಲ್ಲೇ ಆಯಿತು. ಸುದ್ದಿಗಳ ಅಬ್ಬರವೂ ಜೋರು. ಲಾಕ್‌ಡೌನ್, ಸೀಲ್ಡ್‌ಡೌನ್ ಆರ್ಭಟ. ಪೊಲೀಸರ ಅತಿರೇಕದ ವರ್ತನೆ. ಸರಕಾರಕ್ಕೆ ಸರಕಾರವೇ ತಬ್ಬಿಬ್ಬಾದ ಸನ್ನಿವೇಶ. ಸುಶಿಕ್ಷಿತರ ನಡೆ ಒಂದಡೆಯಾದರೆ, ಅಸುಶಿಕ್ಷಿತರ ಪಾಡು ಹೇಳತೀರದು. ಸಡನ್ನಾಗಿ ನೆನಪಾಗಿದ್ದು ನನ್ನ ನೆಲ. ಆ ಜನರು.

    ನೀವು ಏನೇ ಹೇಳಿ ಉತ್ತರ ಕರ್ನಾಟಕದ ಜನರು ಶಾಪಗ್ರಸ್ತರು. ಬರಗಾಲಕ್ಕೆ ಬಸವಳಿದವರು. ಬದುಕು ಕಟ್ಟಿಕೊಳ್ಳಲು ಪಟ್ಟಣ ಸೇರಿದವರು. ಹನಿ ನೀರಿಗೂ ಪರಿತಪಿಸುತ್ತಿರುವವರು. ಕಾಲಿಗೆ ಚಕ್ರಕಟ್ಟಿಕೊಂಡು ಕೆಲಸಕ್ಕೆ ನಿಲ್ಲುವವರು. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ನೆರೆರಾಜ್ಯಕ್ಕೂ ಗುಳೆ ಹೋದವರು. ಲಾಕ್‌ಡೌನ್ ಮತ್ತು ಕೊರೊನಾ ವೈರಸ್ ಇವರನ್ನು ಹೇಗೆಲ್ಲ ಕಾಡಿರಬಹುದು ಎಂಬ ನೋವು ನನ್ನೊಳಗೆ. ಹೊರಟೇ ಬಿಟ್ಟೆ. ಬರೋಬ್ಬರಿ ಎರಡೂವರೆ ಸಾವಿರ ಕಿಲೋ ಮೀಟರ್.

    ದಾರಿಯುದ್ದಕ್ಕೂ ಕಾಲ್ನಡಿಗೆ

    ಬೆಂಗಳೂರಿನಿಂದ ಹೊರಟ ನನಗೆ ದಾರಿಯುದ್ದಕ್ಕೂ ಕಂಡಿದ್ದು ಕೂಲಿ ಕಾರ್ಮಿಕರು. ಕಂಕುಳಲ್ಲಿ ಪುಟ್ಟ ಪುಟ್ಟ ಮಕ್ಕಳು. ತಲೆಯ ಮೇಲೆ ಹೆಣಭಾರದಂತಹ ಚೀಲ. ನಡೆದು, ನಡೆದು ಸೋತ ಕಾಲುಗಳು. ಹರಿದ ಚಪ್ಪಲಿಗಳು. ಉಟ್ಟ ಅರಿವೆಯ ಕಳಚಿ ಎರಡ್ಮೂರು ದಿನವಾಗಿರಬೇಕು, ಬೆವರಿಗೆ ಬಟ್ಟೆಯೂ ಸೆಟೆದು ನಿಂತಿದ್ದವು.

    ಅವರು ನಡೆದುಕೊಂಡೇ ಹೋಗುತ್ತಿದ್ದರು. ಅದು ಅತಿಂಥ ಬಿಸಿಲಲ್ಲ. ಮೈಯೊಳಗಿನ ಚರ್ಮವೇ ಸುಟ್ಟು ಹೋಗುವ ನಡಿಗೆ. ಬ್ರ್ಯಾಂಡೆಡ್ ಶೂ ಹಾಕಿಕೊಂಡು, ತಣ್ಣನೇ ನೀರು ಕುಡಿದುಕೊಂಡು ಪಾದಯಾತ್ರೆ ಮಾಡಿದ್ದನ್ನು ಕಂಡಿದ್ದೇನೆ. ಆದರೆ, ಇವರ ಪಾದದಡಿ ಹರಿದ ಚಪ್ಪಲಿಯೂ ಇರಲಿಲ್ಲ. ಅದೆಷ್ಟು ದೂರ ಸಾಗಬೇಕಿತ್ತೋ ಏನೋ? ಸುಸ್ತಾಗಿ ಡಾಂಬರ್ ರಸ್ತೆಯ ಮೇಲೆ ಕೂತಿದ್ದರು. ಹತ್ತಿರಕ್ಕೆ ಹೋದೆ.

    “ನೀವು ಸರಕಾರದೋರಾ? ನಮ್ ಪಾಡಿಗೆ ನಮ್ನ ಬಿಟ್‌ಬಿಡಿ.. ಹೇಗೋ ಮನೆ ಸೇರ‍್ಕೋತೀವಿ” ಅಂದರು.

    ಆಗಲೇ ಬೆಂಗಳೂರಿನಿಂದ ನೂರಾರು ಕಿಲೋ ಮೀಟರ್ ಅವರು ನಡೆದು ಬಂದಿದ್ದರು. ಅಲ್ಲಲ್ಲಿ ಹಾಕಲಾಗಿದ್ದ ಚೆಕ್‌ಪೋಸ್ಟ್ ಕಣ್ಣಿಗೂ ಬೀಳದೇ ಅವರು ಊರನ್ನು ಸೇರುವ ಆತುರದಲ್ಲಿದ್ದರು. ಕುಡಿಯೋಕೆ ನೀರುಕೊಟ್ಟೆ. ಬಿಸ್ಕೆಟ್ ನೀಡಿದೆ. ಅವರು ಮುಟ್ಟಲೇ ಇಲ್ಲ.

    ಹಸಿವಾಗಿಲ್ಲವಾ

    ?…………………

    ಬೆಂಗಳೂರಲ್ಲಿ ಏನ್ ಕೆಲ್ಸ ಮಾಡ್ಕೊಂಡಿದ್ರಿ?

    ……………….

    ಸರಿ, ಈಗ ಎಲ್ಲಿ ಹೋಗ್ತಿದ್ದೀರಿ?..

    ………………

    ಅವರಿಂದ ಯಾವ ಉತ್ತರವೂ ಬರಲಿಲ್ಲ. ನನ್ನ ಕಾರಿಗೆ ಕೆಂಪು ಅಕ್ಷರದಲ್ಲಿ ಪ್ರೆಸ್ ಅಂತ ಬರೆದಿದ್ದನ್ನು ನೋಡಿದ್ದ ಅವರು, ನಾನು ಪೊಲೀಸ್ ಅಂದುಕೊಂಡಿರಬೇಕು ಅನ್ನಿಸಿತು. ನಾನು ಉತ್ತರ ಕರ್ನಾಟಕದೋನು.. ಆ ಕಡೆ ಹೊರಟಿದ್ದೆ. ಸುಮ್ನೆ ನಿಮ್ಮನ್ನ ವಿಚಾರಿಸ್ತಿದ್ದೀನಿ ಅಂದೆ. ಅವರಿಗೂ ನನ್ನ ಮೇಲೆ ನಂಬಿಕೆ ಬಂತು. ನಮ್ಮ ವ್ಯವಸ್ಥೆ ಅವರನ್ನು ಇಷ್ಟೊಂದು ಹೆದರಿಸಿತ್ತು.

    ಶಿಬಿರಗಳ ದುರವಸ್ಥೆ

    ವಲಸೆ ಕಾರ್ಮಿಕರಿಗಾಗಿಯೇ ಸರಕಾರಗಳು ಶಿಬಿರಗಳನ್ನು ತೆರೆದಿದ್ದರು. ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಅವ್ಯವಸ್ಥೆಯೇ ಅವರನ್ನು ಮತ್ತಷ್ಟು ದುಗುಡಕ್ಕೆ ತಳ್ಳಿತ್ತು.

    ಉಪವಾಸ ನಡೆದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಬಳ್ಳಾರಿ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದ ಮಹಿಳೆಯೊಬ್ಬರ ಸಮಾಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು.ಸರಕಾರಿ ಶಿಬಿರಗಳ ಬಗ್ಗೆ ಅವರಿಗೆ ನಂಬುಗೆ ಬಂದಂತೆ ಕಾಣಲಿಲ್ಲ ಹೀಗಾಗಿ ಚೆಕ್‌ಪೋಸ್ಟ್ ತಪ್ಪಿಸಿಕೊಂಡು ಕೆಲವರು ಹೊರಟಿದ್ದರು.

    “ಅದೇನೋ ಸರಕಾರದೋರು ನಮ್ಮನ್ನ ಕೂಡಿ ಹಾಕ್ತಾರಂತರೀ.. ತಿನ್ನಾಕ ಉಣ್ಣಾಕ ಹುಳದ ಅನ್ನ ನೀಡ್ಯಾರಂತ.. ಅಲ್ಲಿರೋರು ಮಂದಿ ಅಪರಿಚಿತರು. ಅವರ ಜೋಡಿ ಇದ್ದು, ರೋಗ ತರಿಸ್ಕೊಳ್ಳೊಕ್ಕಿಂತ, ನಮ್ಮೂರಿಗೆ ಹೋಗೋದು ಛಲೋ ಅನಿಸ್ತ್ರಿ.. ಅದಕ್ಕ ಹೊಂಟಿವಿ” ಹೀಗಂತ ಅಂದವರೆ ಹೆಚ್ಚು.

    ಬದುಕನ್ನು ರಸ್ತೆಗೆ ಚೆಲ್ಲಿ

    ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆಯೇ ಎಲ್ಲರ ಬದುಕು ತಾತ್ಕಾಲಿಕವಾಗಿ ನಿಂತೇ ಹೋಯಿತು. ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆ ಆಗುವುದಿಲ್ಲ ಎಂದು ಸರಕಾರ ಹೇಳಿದ್ದರೂ, ಅಂದುಕೊಂಡಂತೆ ನಡೆಯಲಿಲ್ಲ. ಅಲ್ಲಲ್ಲಿ ತರಕಾರಿಗಳನ್ನು ರಸ್ತೆಗೆ ಚೆಲ್ಲಿದ ದೃಶ್ಯಗಳು ಕಂಡುಬಂದವು. ದುಬಾರಿಯ ಉಳ್ಳಾಗಡ್ಡಿ ರಸ್ತೆಗೆ ಬಂದು ಬಿದ್ದಿತ್ತು. ಹಾಲು ಕೆಟ್ಟಿತ್ತು. ಇದು ಮತ್ತೊಂದು ರೀತಿಯ ಸಂಕಟ. ಬಹುತೇಕ ಕಡೆ ಇಂತಹ ದೃಶ್ಯಗಳು ಸಾಮಾನ್ಯವಾಗಿತ್ತು.

    ತಣ್ಣಗೆ ಮಲಗಿದ್ದವು ಹಳ್ಳಿಗಳು

    ಪ್ರತಿ ಹಳ್ಳಿಯಲ್ಲೂ ಸೂತಕದ ಛಾಯೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ಮನೆಗೆಲಸ ಮಾಡಿಕೊಂಡು ಒಂಭತ್ತು ಗಂಟೆಗೆ ಹೊಲ ಸೇರುತ್ತಿದ್ದವರು, ಮನೆಯಲ್ಲಿ ತಣ್ಣಗೆ ಕೂತಿದ್ದಾರೆ. ಹೊಲದಲ್ಲಿ ಬೆಳೆ ಹಾಳಾಗುತ್ತಿದೆ ಎನ್ನುವ ನೋವು ರೈತನದ್ದು. ಮಾರಲು ಬಂದ ಬೆಳೆಗೆ ಬೆಲೆ ಸಿಗಲಿಲ್ಲ ಎನ್ನುವ ಸಂಕಟವೂ ಜತೆಗಿತ್ತು. ಒಬ್ಬೊಬ್ಬರದ್ದು ಒಂದೊಂದು ಕಥೆ. ಕೊರೊನಾ ವೈರಸ್ ಅವರನ್ನು ಬಾಧಿಸಿದ್ದಕ್ಕಿಂತ ನಮ್ಮ ವ್ಯವಸ್ಥೆ ಅವರನ್ನು ಹೈರಾಣು ಮಾಡಿತ್ತು.

    ಈಗಿನ ಸ್ಥಿತಿ

    ಲಾಕ್ ಡೌನ್ ಸಡಿಲ ಆಗುತ್ತಿದ್ದಂತೆಯೇ ಅಲ್ಲಿನ ಸ್ಥಿತಿ ಗತಿ ಕೂಡ ಬದಲಾಗಿದೆ. ರೈತ ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದರೆ, ಯುವಕರು ಮತ್ತೆ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ಜತೆ ಬದುಕುವ ಅನಿವಾರ್ಯದ ಜತೆಗೆ ಬಡತನದ ಜತೆ ಅವರು ಗುದ್ದಾಡಬೇಕಿದೆ. ಉಳ್ಳವರಿಗೆ ಏನೆಲ್ಲ ಉಂಟು, ಉಳುವವರಿಗೆ ಏನುಂಟು?

    ಕರೋನಾ ಕರುಣಾಜನಕ ಕಥೆಗಳು

    ಕೊರೊನಾ ಪುಸ್ತಕ

    ಕೊರೊನಾದಿಂದ ಜೀವ ಕಳೆದುಕೊಂಡವರಿಗಿಂತ ಜೀವನ ಕಳೆದುಕೊಂಡವರೇ ಹೆಚ್ಚು. ಸರಕಾರದ ಆದೇಶ ಏನೇ ಇದ್ದರೂ, ಅದನ್ನು ಅಮಾನವೀಯವಾಗಿ ಜಾರಿಗೆ ತರಲಾಯಿತು. ಪರಿಣಾಮ ಕೆಲವರು ಪ್ರಾಣ ಕಳೆದುಕೊಂಡರು.

    ಡಾ. ಶರಣು ಹುಲ್ಲೂರು

    ಅನೇಕರು ಬೀದಿಗೆ ಬಿದ್ದರು. ಈ ಸಮಾಜ ಈ ವೈರಸ್ ಅನ್ನು ಮತ್ತೊಂದು ಬಗೆಯಲ್ಲಿ ಸ್ವೀಕರಿಸಿತು. ಹಾಗಾಗಿ ನಾಗರೀಕ ಸಮಾಜದಲ್ಲಿ ತಲೆತಗ್ಗಿಸುವಂತಹ ಘಟನೆಗಳು ಜರುಗಿದವು. ಇಂತಹ ಅನೇಕ ಸತ್ಯ ಘಟನೆಗಳ ಕಥಾ ಸ್ಪರ್ಶವೆ ಡಾ. ಶರಣು ಹುಲ್ಲೂರು ಬರೆದ ಕರೋನಾ ಕರುಣಾಜನಕ ಕಥೆಗಳು ಪುಸ್ತಕ.
    ಇಲ್ಲಿ ಕಲ್ಪನೆಗಿಂತ ವಾಸ್ತವತೆ ಮಾತಾಡಿದೆ… ಶೀಘ್ರದಲ್ಲೇ ಪುಸ್ತಕ ಲೋಕಾರ್ಪಣೆ ಆಗಲಿದೆ.

    ಶರಾವತಿ ವ್ಯಾಪ್ತಿಯ ದಟ್ಟ ಹಸಿರು ಮೈಗೆ ಮುಳ್ಳು ಬಕೆಟ್

    ಯೋಜನೆಗಳ ಕಡತಗಳು, ಅಭಿವೃದ್ಧಿಯ ಗುಂಡುಪಿನ್ನು ಹಚ್ಚಿಕೊಂಡೇ ಇರುತ್ತವೆ ನಿಜ.ಆದರೆ ಅವುಗಳ ರೂಪಿಸುವ ಮುನ್ನ ಸ್ಥಳೀಯವಾಗಿ ಪರಿಸರ,ಜನಜೀವನ ವಿರೂಪಗೊಳ್ಳುವುದೂ ಅಪಾರ ಹಾನಿಯೆಂದು ಉನ್ನತ ಅಧಿಕಾರದ ಪಂಡಿತರಿಗೆ ಹೊಳೆಯುವುದೇ ಇಲ್ಲ.

    ಬೆಂಗಳೂರಿನ ಜನರ ಬಾಯಾರಿಕೆ ನೀಗಲು, ಸರ್ಕಾರದ ಯೋಜನೆಯ ನಾಲಗೆ ಶರಾವತಿಯತ್ತ ಚಾಚಿರುವ ಸುದ್ದಿ ಹಳೆಯದಾದರೂ ಈಗ ಯಾವಹೊತ್ತಿಗೆ ಯಾವ ರೀತಿ ಜೆಸಿಬಿಗಳು ಬಂದು ಶರಾವತಿ ವ್ಯಾಪ್ತಿಯ ದಟ್ಟ ಹಸುರು ಮೈಗೆ ಮುಳ್ಳು ಬಕೆಟನ್ನ ನೆಡುವುವೋ ಇನ್ನೂ ಗೊತ್ತಿಲ್ಲ.ಇದು ಸುದ್ದಿಯಾಗುತ್ತಿದಂತೆಯೇ ಜೋಗದ ಜಲಪಾತದಿಂದ ಧುಮುಕಿ ಮುಂದೆ ಸಾಗರ ಸೇರುವ ಶರಾವತಿಯ ಕುತ್ತಿಗೆ ಹಿಡಿದು ಗೇರುಸೊಪ್ಪೆಯಿಂದ ಮತ್ತೆ ತಲಕಳಲೆ ಜಲ ಸಂಗ್ರಹಾಲಯಕ್ಕೆ ಗುರುತ್ವಾಕರ್ಷಣೆ ವಿರುದ್ಧ ಪಂಪ್ ಮಾಡಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುವ ಮತ್ತೊಂದು ಯೋಜನೆಯೂ ತಯಾರಾಯಿತು. ಅದರ  ತಿದಿ ಒತ್ತುತ್ತಿರುವ ಸದ್ದು ಪರಿಸರ ಪ್ರಿಯರ ನಿದ್ದೆಗೆಡಿಸಿದೆ.

    ಹಣ ದೋಚುವ ತಂತ್ರ

    ಜೋಗದ ನೀರು ವ್ಯರ್ಥವಾಗುತ್ತಿರುವ ಬಗ್ಗೆ ಹಿಂದೆಯೇ ವಿಶ್ವೇಶ್ವರಯ್ಯ ನವರು ಉದ್ಗರಿಸಿದ್ದು ಜಲವಿದ್ಯುತ್ ಉತ್ಪಾದನೆಗೆ ಪ್ರೇರೇಪಣೆ ಸಿಕ್ಕಿತು. ನಾಡಿಗೆ ಬೆಳಕು ಸಿಕ್ಕಿತು ಅಂತ ಅದನ್ನ ಸ್ವಾಗತಿಸಲಾಯಿತು.ಆದರೀಗ ಪರಿಸರ ಆಸಕ್ತರು ಹೊಸ ಯೋಜನೆಯ ಬಗ್ಗೆ ಈ ರೀತಿ ಆಲೋಚಿಸುತ್ತಿಲ್ಲ. ಸರ್ಕಾರದ ಹಣ ದೋಚಲು ಒಂದು ಹುನ್ನಾರು ಎಂದು ಅಭಿಪ್ರಾಯಪಡುತ್ತಾರೆ.ಏಕೆಂದರೆ ಅವರ ಪ್ರಕಾರ ಎರಡುಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಎರಡೂವರೆ ಸಾವಿರ ಮೆಗಾವ್ಯಾಟ್ ವಿದ್ಯುತ್ತನ್ನ ಅಪವ್ಯಯ ಮಾಡುವ ಮೂರ್ಖತನದ ಸಾಹಸ ಇದು.

    ಶರಾವತಿ ನದಿ ಉಳಿಸಿ ಹೋರಾಟಗಾರ ಅಖಿಲೇಶ್ ಚಿಪ್ಲಿ ಅವರೊಂದಿಗೆ ಡಾ. ಚನ್ನಗಿರಿ ಸುಧೀಂದ್ರ ಅವರು ನೆಡಸಿರುವ ಮಾತುಕತೆ

    ಬೆಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಮಾಡುವ  ಈ ಬಗ್ಗೆ ಹಿಂದಿನ ಸಮ್ಮಿಶ್ರ ಸರ್ಕಾರ ಹೇಳಿಕೆ ನೀಡಿತ್ತು  ಈ ಬಗ್ಗೆ ವಿವಾದವೆದ್ದಾಗ ಈಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಸ್ತಾವನೆ ಕುರಿತು ‘ನೋ’ ಎಂದಿದ್ದಾರೆ.ಆದರೆ ಸದ್ಯ ಈಗ ವ್ಯರ್ಥವಾಗಿ  ಹರಿದುಹೋಗುವ ನೀರನ್ನ ಪುನರ್ವಿದ್ಯುತ್ ಉತ್ಪಾದನೆಗೆ ಬಳಸುವ ಯೋಜನೆ ಸದ್ದು ಮಾಡುತ್ತಿದೆ.  ಸಿದ್ಧರಾಮಯ್ಯನವರ ಸರ್ಕಾರವಿದ್ದಾಗ ಇದು ರೂಪಿತವಾಗಿತ್ತು. ಪ್ರಸ್ತುತ ಸರ್ಕಾರ ಅದಕ್ಕೆ ಪೂರಕ ಏರ್ಪಾಡುಗಳನ್ನ ಕೈಗೆತ್ತಿಕೊಂಡಿದೆ.ಈಗಾಗಲೇ ಭೂಗರ್ಭದೊಳಗೇ ಸುರಂಗದ ಮೂಲಕ ನೀರನ್ನ ಮರು ಎತ್ತುವ,ಮತ್ತು ಬೆಟ್ಟದೊಳಗೇ ಭೂಅಂತರ್ಗತ ವಿದ್ಯುತ್ ಉತ್ಪಾದನಾ ಕೇಂದ್ರದ ಪ್ಲಾನ್ ಶುರುವಾಗಿದೆ.

    ಏನಿದು ಯೋಜನೆ?

    ಜಲಪಾತದಿಂದ ಬಿದ್ದ ನೀರು ಸಮುದ್ರ ಸೇರುತ್ತಿದೆ. ಗೇರುಸೊಪ್ಪ ಜಲಸಂಗ್ರಹಾಲಯದಲ್ಲಿ ಮುಂಚೆನಿಂತು ಅಲ್ಲಿಂದ ಕಾಫರ್ ಡ್ಯಾಂ ನಿರ್ಮಿಸಿ ಮತ್ತೆ ತಲಕಳಲೆ ಜಲಾಗಾರಕ್ಕೆ ಪಂಪ್ ಮಾಡಿ ಸುರಂಗ ಕೊಳವೆಗಳ ಮೂಲಕ ಪಂಪ್ ಮಾಡಿ ವಾಪಸ್ ಕಳಿಸುವುದು. ಅಲ್ಲಿಂದ ಪೈಪ್ ಮೂಲಕ ಹೊಸ ಪವರ್  ಹೌಸ್ ನಲ್ಲಿ ಟರ್ಬೈನ್ ಗಳ ಮೂಲಕ ನೀರುಹಾಯಿಸುವುದು ಎಂದು ಸರಳವಾಗಿ ಹೇಳಬಹುದು.

    ನಾರ್ವೆಯಲ್ಲಿ ಭೂಅಂತರ್ಗತ ವಿದ್ಯುತ್ ಉತ್ಪಾದನೆ

    ಇಂತಹ ಎರಡು ಪ್ರಾಜೆಕ್ಟುಗಳು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿವೆ. ಅವುಗಳ ಸಂರಚನೆಯ ರೂಪುರೇಷೆಗಳೇ ಶರಾವತಿ ಪಂಪ್ಡ್ ವಾಟರ್ ಪ್ರಾಜೆಕ್ಟ್ ಗೆ ಮಾದರಿ. ಇದರ ಅಂದಾಜು ಐದುಸಾವಿರ ಕೋಟಿ ರೂಪಾಯಿಗಳು. ಈಗಿನ ಮಹಾತ್ಮಗಾಂಧಿ ಪವರ್ ಜನರೇಷನ್ ಕೇಂದ್ರ ಕ್ಕಿಂತ ಬೇರೆಯೇ ವ್ಯವಸ್ಥೆ. ತಲಕಳಲೆ ಡ್ಯಾಮ್ ಮೇಲ್ಮಟ್ಟದ ಜಲಾಗಾರವಾಗಿ ಮತ್ತು ಗೇರುಸೊಪ್ಪ ಡ್ಯಾಮ್ ಕೆಳಮಟ್ಟದ ಜಲಾಗಾರವಾಗಿಯೇ ಇದ್ದು ಅವುಗಳ ಸ್ವರೂಪದಲ್ಲೇನೂ ಬದಲಾವಣೆಮಾಡುವುದಿಲ್ಲ. ತಲಕಳಲೆ ಡ್ಯಾಮಿನ ನೀರನ್ನ ಟರ್ಬೈನ್ ಗಳ ಮೂಲಕ ಹಾಯಿಸಿ ವಿದ್ಯುತ್ ಉತ್ಪಾದನೆ ಮಾಡುವುದಾಗಿದೆ .ಮತ್ತೆ ಅದೇ ನೀರು ಗೇರುಸೊಪ್ಪ ಜಲಾಗಾರದಲ್ಲೇ ಸಂಗ್ರಹವಾಗುತ್ತದೆ.ಇಲ್ಲಿ ನಡುವೆ ಸಂಪೂರ್ಣ ಸುರಂಗದಲ್ಲಿಯೇ ಪವರ್ ಹೌಸ್ ನಿರ್ಮಿಸುವ ಯೋಜನೆ.

    ಈ ಹಿಂದಿನ ಅಂದಾಜಿನಂತೆ 2021ಕ್ಕೆ ಈ ಯೋಜನೆ ಪೂರ್ಣವಾಗಬೇಕು.ಅದೀಗ ಅನುಮಾನವೇ.ಇದಕ್ಕೆ  ಅಲ್ಲಿರುವ ಸಿಂಹಬಾಲದ ಸಿಂಗಳಿಕ ಪ್ರಾಣಿ ಅಭಯಾರಣ್ಯಅಡ್ಡವಿದೆ. ಅದರ ಆಸುಪಾಸು ಈ ಯೋಜನೆ ಹಾದುಹೋಗುತ್ತದೆ .ಇದು ಅಭಯಾರಣ್ಯದ ನಡುವಿನ 902 ಚ.ಕಿಮೀ ವ್ಯಾಪ್ತಿ ಆವರಿಸಲಿದೆ ಎಂಬುದು ಇನ್ನೊಂದು ಅಂಶ.ಸರ್ಕಾರದ ದಾಖಲೆಗಳಲ್ಲಿ ಮಾತ್ರ 153 ಹೆ.ಭೂಮಿ ಸಾಕು ಎಂದಿದೆ.ಯೋಜನೆಯ ಸ್ಥಳ ಶರಾವತಿ ಅಭಯಾರಣ್ಯದಿಂದ 3.4ಕಿಮೀ ದೂರದಲ್ಲಿದೆ .ಅದಕ್ಕಾಗಿಯೇ ರಾಷ್ಟ್ರೀಯ. ವನ್ಯಜೀವಿ ಮಂಡಳಿ ಅನುಮೋದನೆಯೂ ಬೇಕಿದೆ.ಪರಿಸರ ಆಸಕ್ತರು ಹೇಳುವಂತೆ ಮುಂದೆ ಬರಲಿರುವ ಐವತ್ತೆಂಟನೇ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದು ಅನುಮತಿ ಬಗ್ಗೆ ತೀರ್ಮಾನವಾಗಲಿದೆ.ಯೋಜನೆ ಶುರುವಾದಂತೆ ಮತ್ತೇನು ವ್ಯತ್ಯಾಸಗಳಾಗುವವೋ ಗೊತ್ತಿಲ್ಲ.

    ಪ್ರಸ್ತುತ ಯೋಜನೆಯ ಭೌ-ತಾಂತ್ರಿಕ ‌‌  ( geotechnical) ಅಧ್ಯಯನದ ಅಗತ್ಯವಿದೆ. ಸಾಗರ ಮತ್ತು ಹೊನ್ನಾವರ ಅರಣ್ಯ ವಿಭಾಗಗಳಿಗೆ ಸೇರಿರುವ ಸು,877.507 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶವಿದೆ. 2019 ಅಕ್ಟೋಬರ್ ತನಕವೂ ಇದಕ್ಕೆ ಕೇಂದ್ರ ಸರ್ಕಾರದ ಇಲಾಖಾ ಅನುಮತಿ ಸಿಕ್ಕಿರಲಿಲ್ಲ .( ನ್ಯೂ ಇಂಡಿಯನ್ ಎಕ್ಸ್ ಪ್ರೆಸ್. 23-10-2019. ವರದಿ )

    ಈ ಯೋಜನೆಯನ್ನು ರಾಜ್ಯ ವನ್ಯಜೀವಿ ಮಂಡಳಿ ಪ್ರಸ್ತಾವನೆಯನ್ನ ಅಮೂಲಾಗ್ರ ಚರ್ಚಿಸದೇ ಅನುಮೋದಿಸಿದೆಯೆಂದೂ ವರದಿಯಾಗಿತ್ತು.ವನ್ಯಜೀವಿ ಸಂರಕ್ಷಣೆ 19 ಸೆಕ್ಷನ್ ಪ್ರಕಾರ ವನ್ಯಜೀವಿಗಳ ಅಸ್ತಿತ್ವ ಉತ್ತಮಪಡಿಸಲು ಯೋಜನೆಗಳನ್ನ ಅರಣ್ಯದಲ್ಲಿ ಕೈಗೊಳ್ಳಬಹುದಷ್ಟೆ.ಈ ಯೋಜನೆಯಿಂದ ಅಲ್ಲಿರುವ ಸಿಂಹಬಾಲದ ಸಿಂಗಳಿಕ ಪ್ರಾಣಿಯ ಅಭಯಾರಣ್ಯದಲ್ಲಿ ಅವುಗಳ ಸಂರಕ್ಷಣೆಗೆ ಚ್ಯುತಿ ಬರುವುದಿಲ್ಲವೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ. ರಾಜ್ಯ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ಪ್ರಕಾರ ಈ ಯೋಜನೆ ಜಾರಿಯಾದರೆ ಕಾರ್ಗಲ್ ಮತ್ತು ಗೇರುಸೊಪ್ಪ ವಲಯದಲ್ಲಿನ ಸರ್ವಋತು ಹಸಿರಡವಿಯ ವನ್ಯಜೀವಿಗಳಿಗೆ ಮಾರಕವಾಗುತ್ತದೆ.

    ಮಾಹಿತಿಗಾಗಿ ಶರಾವತಿ ಉಳಿಸಿ ಹೋರಾಟ ಒಕ್ಕೂಟದ SWAN & MANವೇದಿಕೆಯ ಅಖಿಲೇಶ್ ಚಿಪ್ಳಿ ಅವರನ್ನ ಸಂಪರ್ಕಿಸಿದಾಗ ಶರಾವತಿ ಮೈಗೆ ನೆಲಕಿಂಡಿ ( ಡ್ರಿಲ್ಲ್  ಹೋಲ್ )ಮಾಡುವ ಘನ ಕಾರ್ಯ ಶುರುವಾಗಿಬಿಟ್ಟಿದೆ ಎಂಬ ಸಂಗತಿ ತಿಳಿಯಿತು. ಅದಕ್ಕೂ ಈಗ ಸದ್ಯಕ್ಕೆ  ನೆಲಕಿಂಡಿ ಚಟುವಟಿಕೆ ನಿಲ್ಲಿಸುವಂತೆ  ಮನವಿಯನ್ನೂ ಒಕ್ಕೂಟ ಅರಣ್ಯ ಇಲಾಖೆಗೆ ಸಲ್ಲಿಸಿದೆ.ಅಲ್ಲದೇ ಸಾಗರದ ಪವರ್ ಪಾಲಿಸಿ ಅನಾಲಿಸ್ಟ್ ಶಂಕರ್ ಶರ್ಮ ಅವರೂ ಪರಿಸರ ಉಳಿವಿನ ಕಾರ್ಯಕರ್ತರ ಪಡೆಯಲ್ಲಿದ್ದಾರೆ.ಈಗಾಗಲೇ ಮುಖ್ಯಮಂತ್ರಿಗಳಿಗೆ ,ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

    ಮನವಿಯಲ್ಲಿ ಏನಿದೆ?

    ರಾಜ್ಯದ ಹಾಗೂ ಸ್ಥಳೀಯ ಪರಿಸರವಾದಿಗಳಿಗೆ ಮತ್ತು ವನ್ಯಜೀವಿ  ಸಂರಕ್ಷಣಾ ಪ್ರಿಯರಿಗೆ ಸದ್ಯದ ಭೌತಾಂತ್ರಿಕ ಅನ್ವೇಷಣೆ ಕೈಗೊಂಡಿರುವ ಬಗ್ಗೆ ನಿರಾಶೆಯಾಗಿದೆ.ನಾಗರಿಕ ಸಮಾಜವು ವ್ಯಕ್ತಪಡಿಸಿರುವ ಅನೇಕ ಗಂಭೀರ ಸಮಸ್ಯೆಗಳಿಗೆ ಸಮಾಧಾನಕರವಾಗಿ ಪರಿಹಾರ ನೀಡದೇ ಅಭಯಾರಣ್ಯ ಪ್ರದೇಶದಲ್ಲಿ  ಪಂಪ್ ಮಾಡಿ ಜಲವಿದ್ಯುತ್  ಯೋಜನೆ ಆರಂಭಕ್ಕೆ ಅನುಮತಿ ನೀಡಿರುವುದು ಈ ನಿರಾಶೆಗೆ ಕಾರಣ.

    ಸದ್ಯ ಈಗ ಕೋವಿಡ್ 19 ರ ವ್ಯಾಪಕವಾಗಿ ಹಬ್ಬಿರುವ ವಾತಾವರಣವಿದೆ.ಅಲ್ಲಿಗೆ ನಿಯುಕ್ತವಾಗಿರುವ ಸಿಬ್ಬಂದಿಗಳು ಬೇರೆ ಬೇರೆ ರಾಜ್ಗಗಳ‌ ಪ್ರದೇಶದಿಂದ ಬಂದವರಾಗಿರುತ್ತಾರೆ.ವನ್ಯಜೀವಿಗಳೂ ಇದರಿಂದ ಬಾಧಕವಾಗಬಹುದು.ಕೋವಿಡ್ 19  ಸೋಂಕಿನ ಬಗ್ಗೆಯೂ ಪರಿಶೀಲನೆಯಾಗಿಲ್ಲ. ಸೋಂಕುಇದೆಯೋ ಇಲ್ಲವೋ  ಆರೋಗ್ಯ ಸಚಿವಾಲಯದ ಪ್ರಕಾರ 14 ದಿನಗಳ ಕ್ವಾರಂಟೈನ್ ಆಗಲೇಬೇಕು.ಅಭಯಾರಣ್ಯ ಪ್ರದೇಶದೊಳಕ್ಕೆ ಕಾಲಿಡುವ ಮೊದಲು ಈ ಬಗ್ಗೆಈ ಉಪಕ್ರಮ ಅತ್ಯವಶ್ಯವಾಗಿದೆ.ಮಳೆಗಾಲ ಆರಂಭವಾಗಿದೆ.‌ ವನ್ಯಜೀವಿಗಳ ಮತ್ತು ಸಸ್ಯ ಸಂಕುಲಗಳ  ಜೈವಿಕ ಕ್ರಿಯೆ ನಡೆಯುವ ಸೂಕ್ತ ಕಾಲವಾಗಿದೆ. ಇಂತಹ ಸನ್ನಿವೇಶದಲ್ಲಿ ಭೌಗೋಳಿಕ ತಾಂತ್ರಿಕ ಚಟುವಟಿಕೆ ಶುರುಮಾಡುವುದು ನಿಲ್ಲಿಸಬೇಕೆಂದು ಕೋರಿದ್ದಾರೆ.

    ಮತ್ತೊಬ್ಬ ಜೈವಿಕ ಶಾಸ್ತ್ರಜ್ಞ ಪ್ರೊ.ಮೇವಾಸಿಂಗ್ ಕೂಡ ಹೀಗೆಯೇ ಹೇಳಿದ್ದಾರೆ.ಪ್ರೊ.ಸಿಂಗ್ ಅವರ ಅಪಾರ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ ಆ ಅರಣ್ಯ ಪ್ರದೇಶವು ಸಿಂಹಬಾಲದ ಸಿಂಗಳಿಕಗಳ ಅಭಯಾರಣ್ಯವಾಗಿ ಇತ್ತೀಚೆಗೆ ಘೋಷಿಸಲ್ಪಟ್ಟಿದೆ.ಕೇವಲ 360 ಹೆಕ್ಟೇರ್ ಅರಣ್ಯ ಮಾತ್ರ ಬಳಕೆಯಾಗುತ್ತದೆ ಎಂಬುದನ್ನ ನೋಡಿದರೆ ಪ್ರಸ್ತುತ ಯೋಜನೆಯ ವಿವಿಧ ಕಾಮಗಾರಿಗಳಿಗೆ ಇನ್ನೂ ಹೆಚ್ಚಿನ ಪ್ರದೇಶ ಕಬಳಿಸಲ್ಪಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

    ಈಗ ಯೋಜನೆಯ ಸಮೀಕ್ಷೆಗಾಗಿಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಅಷ್ಟೆ.ಅದೂ ಮರಗಳನ್ನ ಕತ್ತರಿಸದೇ ವನ್ಯಜೀವಿಗಳ ದೈನಿಕ ಚಲನವಲನ ಚಟುವಟಿಕೆಗೆ ಭಂಗತಾರದೇ ಕೊರೆಯುವ ಯಂತ್ರಗಳನ್ನ ನಿರ್ವಹಿಸಬೇಕು. ಬೆಳಿಗ್ಗೆ ಒಂಭತ್ತಕ್ಕೆ ಶುರುಮಾಡಿ ಸಂಜೆ ಆರಕ್ಕೆ ಪೂರೈಸಬೇಕು.ಸ್ಥಳದಲ್ಲಿ ಯಾರೂ ವಾಸ್ತವ್ಯದ ಟೆಂಟ್ ಹಾಕುವಂತಿಲ್ಲ.ಮಳೆಗಾಲದಲ್ಲಿ ಸಮೀಕ್ಷೆ ನಿಲ್ಲಿಸಬೇಕು. ಶಿರಸಿಯ ಜೀವಶಾಸ್ತ್ರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ದಿ ಕೇಂದ್ರದ ನಿರ್ದೇಶಕ

    ಡಾ.ಕೇಶವ ಕೊರ್ಸೆ ಅವರೇ ಹೇಳುವಂತೆ….Anyway, I can only say that it is suicidal project… According to IISc experts, this region is landslide vulnerable. And ecologists say that this lower reaches is the home of rare Wildlife. So  digging earth in such a fragile zone is ecologically disastrous and economically illogical endeavour.May better sense prevail upon the govt to drop this project.

    ನೋಡುವುದಕ್ಕೆ ಬಹಳ ಸರಳ.ಮತ್ತು ಹೌದಲ್ಲ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನ ವಿದ್ಯುತ್ ಉತ್ಪಾದನೆಗೆ ಬಳಸಬಹುದಲ್ಲ?ಎಂದು ಕುಶಲಮತಿಗಳಂತೆ ಸರಿ ಎನ್ನ ಬಹುದು.ಆದರೆ ಅಷ್ಟು ಹಸಿರುಹೊದ್ದು ನಿಸರ್ಗವೇ ನಿರ್ಮಿಸಿದ ಅರಣ್ಯದ ಮೇಲ್ಮೈಮತ್ತೆ ನೈಜವಾಗಿ ಬೆಳೆದೀತೆ? ಮತ್ತೆ ಮನುಷ್ಯರ ಹಾವಳಿಯಿಂದ ಅಲ್ಲಿನಸಸ್ಯ ವನ್ಯ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳ ಉಳಿವು ಅಳಿವಿನ ಪ್ರಶ್ನೆಯೂ ಆಗಿದೆ.

    ಸದ್ಯಕ್ಕೆ ಭಾರತಕ್ಕೆ ಬರುವುದಿಲ್ಲ ವಿಜಯ್ ಮಲ್ಯ

    ಸುಮಾರು 9,961 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿ ಬ್ರಿಟನ್‌ಗೆ ಪರಾರಿಯಾಗಿದ್ದ ಮದ್ಯ ದೊರೆ, ಉದ್ಯಮಿ ವಿಜಯ್ ಮಲ್ಯ ಇನ್ನೇನು ಭಾರತಕ್ಕೆ ಗಡಿಪಾರು ಆಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ವ್ಯಾಪಕವಾಗಿ ಹಬ್ಬಿತ್ತು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕೂಡ ಈ ಕುರಿತು ನಡೆಯಬೇಕಾಗಿದ್ದ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಹೇಳಿವೆ ಎಂದು ಹೇಳಲಾಗಿತ್ತು. ಹೀಗಾಗಿ ಬುಧವಾರ ರಾತ್ರಿ ಲಂಡನ್‌ನಿಂದ ಹೊರಟು ಗುರುವಾರ ಭಾರತಕ್ಕೆ ಮದ್ಯದ ದೊರೆ ತಲುಪಬೇಕಿತ್ತು.

    ಆದರೆ ವಸ್ತುಸ್ಥಿತಿ ಹಾಗಿಲ್ಲ. ಸದ್ಯದ ಮಟ್ಟಿಗೆ ಮಲ್ಯ ಭಾರತಕ್ಕೆ ಗಡಿಪಾರು ಆಗುವ ಸಾಧ್ಯತೆಯಿಲ್ಲ. ಭಾರತದ ವಿಮಾನವನ್ನೂ ಮಲ್ಯ ಸದ್ಯಕ್ಕೆ ಹತ್ತಿಲ್ಲ ಮತ್ತು ಅಂತಹ ಸಾಧ್ಯತೆಗಳು ಕೂಡ ಕ್ಷೀಣ ಎನ್ನುವುದು ಹೊಸ ಬೆಳವಣಿಗೆ. ಮಲ್ಯ ಅವರ ಆಪ್ತ ಸಹಾಯಕಿ ಹಾಗೂ ಸ್ವತಃ ಮಲ್ಯ ಕೂಡ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಕೇಂದ್ರ ಗೃಹ ಕಾರ್ಯದರ್ಶಿ ಪ್ರೀತಿ ಪಾಟೀಲ್ ಇನ್ನೂ ಗಡಿಪಾರು ಒಪ್ಪಂದಕ್ಕೆ ಕಾನೂನಾತ್ಮಕ ಕಾರಣಗಳಿಂದಾಗಿ ಸಹಿ ಮಾಡಿಲ್ಲ ಎಂದು ತಿಳಿದು ಬಂದಿದ್ದು, ಇದುವೇ ಹೊಸ ಬೆಳವಣಿಗೆಗೆ ಕಾರಣ ಎಂದು ಹೇಳಲಾಗಿದೆ. ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯಲು ಮಲ್ಯ ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ, ಮಾತ್ರವಲ್ಲ ಅವರ ಮೇಲೆ ಡಿಯಾಗಿಯೋದ 303 ಕೋಟಿ ರೂ. ವಂಚನೆ ಸೇರಿದಂತೆ ಕೆಲವು ಪ್ರಕರಣಗಳ ವಿಚಾರಣೆ ಇನ್ನೂ ಅಲ್ಲಿನ ಸಿವಿಲ್ ಕೋರ್ಟ್‌ನಲ್ಲಿ  ವಿಚಾರಣೆಗೆ ಬಾಕಿ ಇದೆ. ಇದು ಕೂಡ ಮಲ್ಯ ಗಡಿಪಾರು ವಿಳಂಬಕ್ಕೆ ಕಾರಣವಾಗಿದೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಿಟನ್‌ನ ಮೆಟ್ರೊಪಾಲಿಟನ್ ಪೊಲೀಸ್ ಮುಖ್ಯಸ್ಥರು ಈ ಬಗ್ಗೆ ಇನ್ನೂ ಯಾವುದೇ ರೀತಿಯ ನಿರ್ದೇಶನ ತಮಗೆ ಬಂದಿಲ್ಲ ಎಂದು ಹೇಳಿದ್ದಾರೆ. ಮೇ 14ರಂದು ಬ್ರಿಟನ್ ಕೋರ್ಟ್‌ನ ಎದುರು ತಮ್ಮ ಕಾನೂನು ಹೋರಾಟದಲ್ಲಿ ಮಲ್ಯ ಸೋತು ಹೋಗಿದ್ದರು. ನ್ಯಾಯಾಲಯವು 28 ದಿನಗಳ ಒಳಗೆ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ಹಬ್ಬಿದ್ದವು.

    STOP ONLINE CLASSES ಪುಟ್ಟ ಮಕ್ಕಳಿಂದ ಪ್ರಾಥಮಿಕ ಶಾಲಾ ಸವಿನೆನಪುಗಳನ್ನು ಕಿತ್ತುಕೊಳ್ಳಬೇಡಿ

    ಭಾರತದಲ್ಲಿ ಮಗುವಿನ ಕಲಿಕಾ ಪ್ರಕ್ರಿಯೆಯು ಪ್ರಾಚೀನವಾದ ಗುರುಕುಲ ಪದ್ಧತಿಯಿಂದ ಪ್ರಾರಂಭವಾಗಿ ಇಂದು ನಾವು ಕಾಣುತ್ತಿರುವ ಆಧುನಿಕ ಶಿಕ್ಷಣವ್ಯವಸ್ಥೆಯ ವರೆಗೆ ಕಾಲಕಾಲಕ್ಕೆ ಹಲವು ಬದಲಾವಣೆಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳುತ್ತ ಸಾಗಿಬಂದಿದೆ.

    “ಶಿಕ್ಷಣವೆಂದರೆ ಕೇವಲ ಮಾಹಿತಿಯನ್ನು ನೀಡುವುದಲ್ಲ ಜಗತ್ತಿನ ಇತರ ಜೀವಿಗಳೊಂದಿಗೆ ಸಾಮರಸ್ಯದಿಂದ ಬಾಳುವುದನ್ನು ಕಲಿಸುವುದು ಶಿಕ್ಷಣ”ಎಂದು ನೋಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ್ ಟ್ಯಾಗೋರ್ ಹೇಳಿದ್ದಾರೆ. ಶಿಕ್ಷಣವು ಮಗುವನ್ನು ಹೊರ ಜಗತ್ತಿನ ಆಗುಹೋಗುಗಳಿಗೆ ತೆರೆದುಕೊಳ್ಳುವಂತೆ ಮಾಡಲು ಕಿಟಕಿಯಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಸತತವಾದ ಬದಲಾವಣೆಯನ್ನು ಬಯಸುತ್ತದೆ.

    ಕೊರೋನಾ ಇಫೆಕ್ಟ್
    ಇವೆಲ್ಲವನ್ನೂ ಮೀರಿ ಕೊರೋನಾ ವೈರಾಣುವಿನ ದುಷ್ಪರಿಣಾಮವು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಪರಿವರ್ತನೆಯನ್ನು ಅಳವಡಿಸಿಕೊಳ್ಳುವ ಪರಿಸ್ಥಿತಿಯನ್ನು ತಂದೊಡ್ಡಿದೆ . ಈ ದಿಸೆಯಲ್ಲಿ ಶಿಕ್ಷಣ ತಜ್ಞರು ಮನಃಶಾಸ್ತ್ರಜ್ಞರಾದಿಯಾಗಿ ಪ್ರತಿಯೊಬ್ಬರೂ ಹೊಸ ಆಯಾಮದ ಅನ್ವೇಷಣೆಯಲ್ಲಿ ತೊಡಗಿದ್ದಾರೆ .ಈ ಮಂಥನದಲ್ಲಿ ಹೊಳೆದ ತತ್ ಕ್ಷಣದ ಪರಿಹಾರದ ಮಾರ್ಗ ಆನ್ ಲೈನ್ ಶಿಕ್ಷಣ.


    ಪೋಷಕರ ವಿಪರೀತ ಕಾಳಜಿಯೋ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿಯ ಒತ್ತಡವೋ ಅಥವಾ ಕಾಣದ ಕೈಗಳ ಲಾಬಿಯೋ ಕಾಣೆ ಪುಟ್ಟ ಮಕ್ಕಳಿಗೂ ಆನ್ ಲೈನ್ ತರಗತಿಗಳು ಪ್ರಾರಂಭವಾಗಿವೆ. ಗೆಳೆಯರೊಡನೆ ಆಡುತ್ತಾ ಹಾಡುತ್ತಾ ಕುಣಿಯುತ್ತಾ ಕಲಿಯುವ ಮಗು ಒಂದೇ ಕಡೆ ಕುಳಿತು ಕಂಪ್ಯೂಟರ್ ಪರದೆಯ ಮೇಲೆ ಗಂಟೆಗಟ್ಟಲೆ ದೃಷ್ಟಿನೆಟ್ಟು ಕೂರುವ ಪರಿಸ್ಥಿತಿ ಉಂಟಾಗಿದೆ.


    ಮಾಂಟೆಸರಿ ಶಿಕ್ಷಣ ಪದ್ದತಿಯ ಇಟಲಿಯ ವೈದ್ಯೆ ಡಾಕ್ಟರ್ ಮರಿಯಾ ಮಾಂಟೆಸ್ಸರಿಯ ಪ್ರಕಾರ “ಚಿಕ್ಕ ಮಕ್ಕಳ ಕಲಿಕೆಯ ಉದ್ದೇಶ ಅವರ ಭವಿಷ್ಯ ಜೀವನಕ್ಕೆ ಅತ್ಯವಶ್ಯಕವಾದ ಮೌಲ್ಯಗಳನ್ನು ಬಿತ್ತುವ ವೇದಿಕೆಯನ್ನು ಸೃಷ್ಟಿಸುವುದೇ ಹೊರತು ಒಣ ದಿನಚರಿಯನ್ನೆಲ್ಲ”. ಆದರೆ ಇಂದು ಪುಟ್ಟ ಮಕ್ಕಳಿಗೂ ಆರಂಭವಾಗಿರುವ ಆನ್ ಲೈನ್ ಶಿಕ್ಷಣ ಶಿಶು ಕೇಂದ್ರಿತವಾಗಿದೆಯೇ?


    ಮನೆಯಲ್ಲಿಯೇ ಆನ್ ಲೈನ್ ಕಲಿಕೆಯ ಪ್ರಕ್ರಿಯೆ ಆರಂಭವಾದರೆ ಮಗು ಕೊರೋನಾ ವೈರಾಣುವಿಗೆ ತುತ್ತಾಗುವ ಸಂಭವ ಕಡಿಮೆ.ಮನೆಯಲ್ಲೇ ಸುರಕ್ಷಿತವಾಗಿರುತ್ತವೆ. ಬ್ಯಾಗನ್ನು ಹೊರಲಾರದೆ ಹೊತ್ತು ಶಾಲೆೆಗೆ ಹೋಗುವ ಶ್ರಮವೂ ತಪ್ಪುತ್ತದೆ.ಜೊತಗೆ ಸಣ್ಣ ವಯಸ್ಸಿನಲ್ಲೇ ಕಂಪ್ಯೂಟರ್ ಜ್ಞಾನವು ಸಿಕ್ಕಂತಾಗುತ್ತದೆ. ಕೋವಿಡ್ ಕಾರಣದಿಂದಾಗಿ ಮಗುವಿನ ಶೈಕ್ಷಣಿಕ ವರ್ಷವೂ ವ್ಯರ್ಥವಾಗುವುದಿಲ್ಲ. ಇದೆಲ್ಲವೂ ಸರಿಯೇ.. ! ಆದರೆ ಆಳವಾಗಿ ಯೋಚಿಸಿದಾಗ ಆನ್ ಲೈನ್ ಶಿಕ್ಷಣವು ಪುಟ್ಟ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದರಲ್ಲಿ ಯಾವುದೇ ಅನುಮಾನ ಇಲ್ಲ.


    ಕಿಂಡರ್ ಗಾರ್ಟನ್ (ಅಂದರೆ ಮಕ್ಕಳ ಹೂಬನ) ಅಥವಾ ಕೆ.ಜಿ.ತರಗತಿಗಳ ಪಧ್ಧತಿಯನ್ನು ಪರಿಚಯಿಸಿದ ಜರ್ಮನಿಯ ಶಿಕ್ಷಣ ತಜ್ಞ ಫೆಡರಿಕ್ ಪ್ರೊಬೆಲ್ ರ ಪ್ರಕಾರ “children are like flowers. Each is beautiful alone but glorious when seen in the community of peers”
    ಶಿಸ್ತಿನ ಚೌಕಟ್ಟಿನಲ್ಲಿ ಪರಸ್ಪರ ಹೊಂದಾಣಿಕೆ ಸಹಕಾರಗಳಿಂದ ಗುಂಪಿನಲ್ಲಿ ಉಂಟಾಗುವ ಕಲಿಕೆಯು ಮಕ್ಕಳಲ್ಲಿ ಕಲಿಯುವ ಖುಷಿಯನ್ನು ಹುಟ್ಟುಹಾಕುತ್ತದೆ.

    miss ಆದ ಮಿಸ್


    ತರಗತಿಗಳಲ್ಲಿ ನಡೆಯುವ ಮನೋ ದೈಹಿಕ ಚಟುವಟಿಕೆಗಳು ಮಗುವಿನ ಮಾನಸಿಕ ಮತ್ತು ಶಾರೀರಿಕ ವಿಕಾಸವನ್ನು ಉತ್ತೇಜಿಸುತ್ತವೆ. ಜೊತೆಗಾರರೊಂದಿಗಿನ ಕಲಿಕೆಯು ಮಗುವಿನಲ್ಲಿ ಹೊಸಹೊಸ ಪರಿಕಲ್ಪನೆಗಳನ್ನು ಮೂಡಿಸಿ ಇತರರ ಮೆಚ್ಚುಗೆ ಗಳಿಸಲಾದರೂ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸುತ್ತದೆ. ಗುಂಪಿನಲ್ಲಿ ಕಲಿಕೆಯ ವೇಗವೂ ಅಧಿಕ ಮತ್ತು ಪರಿಣಾಮಕಾರಿಯಾಗಿರುತ್ತದೆ .ಏಕತೆಯ ಪರಿಕಲ್ಪನೆಯು ಸ್ವಾಭಾವಿಕವಾಗಿ ಒಡಮೂಡುತ್ತದೆ .ಕಣ್ಣೆದುರಿನಲ್ಲಿಯೇ ಇರುವ “miss” ಮಕ್ಕಳ ಪ್ರೀತ್ಯಾದರಗಳ

    ಕೇಂದ್ರವಾಗಿ ಮಗುವಿನ ಮುಗ್ಧ ಮಾತುಗಳಿಗೆ ಕಿವಿಯಾಗುತ್ತಾರೆ.
    ಮನೆಯಲ್ಲೇ ಕುಳಿತು ಆನ್ ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಇವುಗಳನ್ನೆಲ್ಲಾ ಕಲ್ಪಿಸಿಕೊಳ್ಳಲು ಅಸಾಧ್ಯ. ಮಗುವು ಸಂಭಾಷಣಾ ಕೌಶಲ್ಯ, ಸಂವಹನಾ ಚಾತುರ್ಯಗಳಿಂದ ವಂಚಿತವಾಗಿ ಒಂಟಿತನಕ್ಕೆ ತುತ್ತಾಗುತ್ತದೆ. ಅದರಲ್ಲೂ ಪೋಷಕರು ಕೆಲಸದ ನಿಮಿತ್ತ ಹೊರ ಹೋದರಂತೂ ಆನ್ ಲೈನ್ ಶಿಕ್ಷಣದ ಕಥೆ ವ್ಯಥೆಯೇ ಸರಿ .ಹಿರಿಯರ ಉಸ್ತುವಾರಿಯಿಲ್ಲದೆ ಆನ್ ಲೈನ್ ತರಗತಿಗಳು ನಡೆಯುವಾಗ ಇಂಟರ್ನೆಟ್ ಯುಗದ ಸೈಬರ್ ಕ್ರೈಮ್ ಗಳಿಂದ ಮಗುವನ್ನು ರಕ್ಷಿಸುವವರು ಯಾರೆಂಬುದು ಯಕ್ಷಪ್ರಶ್ನೆ.

    ಅಶ್ಲೀಲ ವೆಬ್ ಸೈಟ್ ಗಳ ವೀಕ್ಷಣೆಯ ಚಟಕ್ಕೆ ಮಗು ಒಳಗಾದರೆ?


    ಅಶ್ಲೀಲ ವೆಬ್ ಸೈಟ್ ಗಳ ವೀಕ್ಷಣೆಯ ಚಟಕ್ಕೆ ಮಗು ಒಳಗಾದರೆ ಆ ಕೂಪದಿಂದ ಅದನ್ನು ಮೇಲೆತ್ತುವ ಬಗೆಯಾದರೂ ಎಂತು ? ಸ್ಕ್ರೀನ್ ಟೈಂ ಅತಿಯಾಗಿ ಮಗುವಿನ ದೃಷ್ಟಿಯ ಮೇಲೆ ಉಂಟಾಗುವ ದುಷ್ಪರಿಣಾಮ, ವ್ಯಾಯಾಮವಿಲ್ಲದ ದಿನಚರಿಯಿಂದ ಚಿಕ್ಕವಯಸ್ಸಿನಲ್ಲೇ ಬರುವ ಬೊಜ್ಜು ಇವೆಲ್ಲವುಗಳಿಗೂ ಆನ್ ಲೈನ್ ಶಿಕ್ಷಣ ಕಾರಣೀಭೂತವಾಗುತ್ತದೆ . ಚಿಕ್ಕ ಮಕ್ಕಳಲ್ಲಿ ಏಕಾಗ್ರತೆ ಮತ್ತು ಜ್ಞಾನತ್ಮಕ ಹಾಗೂ ಭಾವನಾತ್ಮಕ ವಲಯಗಳು ಹಿರಿಯರಷ್ಟು ಬೆಳವಣಿಗೆ ಹೊಂದದೇ ಇರುವುದರಿಂದ ಆನ್ ಲೈನ್ ತರಗತಿಗಳ ನಿರ್ವಹಣೆ ಸುಲಭದ ಮಾತಲ್ಲ.

    ಮನೆಗಳಲ್ಲಿ ಆನ್ಲೈನ್ ಶಿಕ್ಷಣಕ್ಕಾಗಿ ಪ್ರತ್ಯೇಕ ಕೊಠಡಿ, ಕಂಪ್ಯೂಟರ್, ಕಲಿಕಾ ವಾತಾವರಣಗಳನ್ನು ಸೃಷ್ಠಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆಗ “ಶಿಕ್ಷಣ ಪಡೆಯುವ ಹಕ್ಕು” ಅರ್ಥಹೀನವಾಗಿಬಿಡುತ್ತದೆ. ಬಣ್ಣಬಣ್ಣದ ಅಂಗಿ ಧರಿಸಿ ಸ್ಕೂಟರ್ ನಲ್ಲಿ ತಾಯಿ/ತಂದೆಯ ಹಿಂದೆ ತಬ್ಬಿಕುಳಿತು, ಅಜ್ಜಿ ತಾತಂದಿರಿಗೆ ಪುಟ್ಟ ಕೈಗಳಿಂದ ಟಾಟಾ ಮಾಡುತ್ತಾ, ಪುಟ್ಟ ತಲೆಯಲ್ಲಿ ಅಂದು ಶಾಲೆಯಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳ ಬೇಕಿರುವ ನಾನಾ ವಿಷಯಗಳ ಬಗ್ಗೆ ಯೋಚಿಸುತ್ತಾ ಖುಷಿಯಿಂದ ಶಾಲೆಗೆ ತೆರಳುವ ದೃಶ್ಯವನ್ನು ನೋಡಿದವರಿಗೆ ಮಗು ಮನೆಯಲ್ಲಿ ಒಬ್ಬಂಟಿಯಾಗಿ ಕಂಪ್ಯೂಟರಿನೆದುರು ಏಕತಾನತೆಯಿಂದ ಕುಳಿತಿರುವ ದೃಶ್ಯ ನಿಜಕ್ಕೂ ಭೀತಿ ಹುಟ್ಟಿಸುತ್ತದೆ. ಮಗುವಿನ ಶಿಕ್ಷಣಿಕ ಜೀವನದ ಆರಂಭದ ವರ್ಷಗಳು ಹರುಷದ ವಾತಾವರಣವನ್ನು ನಿರ್ಮಿಸಬೇಕೆ ಹೊರತು ಬಂಧನದ ಅನುಭವವನ್ನಲ್ಲ.

    ಆಟವಾಡುತ್ತಾ ತಾನೇತಾನಾಗಿ ಕಲಿಯುವ ಹಂತದಲ್ಲಿ ಮಗುವಿನ ಆಸಕ್ತಿಯ ಕ್ಷೇತ್ರ, ರಚನಾತ್ಮಕ ಸ್ವಭಾವ, ಗುಂಪಿನಲ್ಲಿ ನಡವಳಿಕೆ, ಮನಸ್ಸಿನ ಸಂಕೀರ್ಣತೆ, ಕಲ್ಪನಾಶಕ್ತಿ ಇವೆಲ್ಲವುಗಳನ್ನು ಸತತವಾಗಿ ಗಮನಿಸಿ,ಪೋಷಕರಿಗೆ ತಿಳಿಯಪಡಿಸುವುದು ಸುಲಭವಲ್ಲ. ಇದಕ್ಕೆ ಅತ್ಯುತ್ತಮ ತರಬೇತಿ ಪಡೆದ ತಾಯಿ ಮನದ ಶಿಕ್ಷಕಿಯರೇ ಬೇಕು. ಮನೆಯಲ್ಲಿ ನಡೆಯುವ ಆನ್ಲೈನ್ ಶಿಕ್ಷಣದಿಂದ ಈ ಎಲ್ಲಾ ಪ್ರಕ್ರಿಯೆಗಳನ್ನು ಅಪೇಕ್ಷಿಸುವುದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮಾರಕವೇ ಸರಿ. ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ತರಗತಿಗಳು ಸಂಪೂರ್ಣವಾಗಿ ಚಟುವಟಿಕೆ ಆಧಾರಿತವಾಗಿ ನಡೆಯಬೇಕೆಂಬುದು RTE (Right to Education) ನ ಧ್ಯೇಯ. ಇದು ಸರ್ವ ಶಿಕ್ಷಣ ಅಭಿಯಾನದ ಮೂಲ ಮಂತ್ರವೂ ಹೌದು. ಆನ್ಲೈನ್ ಶಿಕ್ಷಣದಿಂದ ಈ ಮೂಲ ಉದ್ದೇಶಕ್ಕೆ ಕೊಡಲಿಯೇಟು ಬೀಳುತ್ತದೆ. ಆನ್ಲೈನ್ನಲ್ಲಿ ಬೋಧಿಸುವ ಶಿಕ್ಷಕರಿಗೆ ವಿಶೇಷವಾದ ತರಬೇತಿಯನ್ನು ನೀಡದ ಹೊರತು ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳೆರಡೂ ಯಶಸ್ವಿಯಾಗುವುದು ಅನುಮಾನ .


    ಆದಾಗ್ಯೂ ಜಾಗತಿಕ ಪರಿಸ್ಥಿತಿಯ ಒತ್ತಡದಿಂದ ಅನ್ಯಮಾರ್ಗವಿಲ್ಲದೆ ಪುಟ್ಟ ಮಕ್ಕಳಿಗೆ ಆನ್ ಲೈನ್ ಶಿಕ್ಷಣವನ್ನು ಸದ್ಯದ ಮಟ್ಟಿಗೆ ಒಪ್ಪಿಕೊಳ್ಳುವುದೇ ಆದರೆ ಅದಕ್ಕಾಗಿ ಸೂಕ್ತವಾದ ಮಾರ್ಗದರ್ಶಿಯನ್ನು ಅನುಸರಿಸಲೇಬೇಕು. ಆನ್ಲೈನ್ ತರಗತಿಯ ಪ್ರಾರಂಭದಲ್ಲಿ ಪ್ರಾರ್ಥನೆ, ವ್ಯಾಯಾಮ, ತರಗತಿಗಳ ಮಧ್ಯೆ ವಿಶ್ರಾಂತಿ, ಮನೆಯಲ್ಲೇ ಅತ್ತಿತ್ತ ಓಡಾಡುತ್ತಾ ಚಟುವಟಿಕೆ ಮಾಡುವಂತೆ ಮಾರ್ಗದರ್ಶನ ,ಕಂಪ್ಯೂಟರ್ ಗೇಮ್ ಗಳ ಮೂಲಕ ಪಾಠ ಇವೆಲ್ಲವನ್ನು ಅಳವಡಿಸಿ ವೇಳಾ ಪಟ್ಟಿಯನ್ನು ಸಿದ್ಧಗೊಳಿಸಲು ಬೇಕಾಗುತ್ತದೆ. ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಮಗುವಿಗೆ ಕಂಪ್ಯೂಟರ್ ಪರದೆಯ ಮೇಲೆ ಶಿಕ್ಷಕರೊಂದಿಗೆ ಇತರ ಸ್ನೇಹಿತರು ಕಾಣುವಂತಿರಬೇಕು. ಇವೆಲ್ಲ ಮಾನದಂಡಗಳನ್ನು ಪೂರೈಸಿ, ಆನ್ ಲೈನ್ ಶಿಕ್ಷಣ ವ್ಯವಸ್ಥೆಯನ್ನು ರಚಿಸುವುದು ಸುಲಭವೇ ?ಯೋಚಿಸಿ.

    ಮಕ್ಕಳಿಗೆ ಶಿಕ್ಷೆ

    ಎಲ್ಲರೊಡನೆ ಬೆರೆತು ಕಲಿಯಬೇಕಾದ ಮಗುವನ್ನು ಶಿಕ್ಷೆಗೊಳಪಡಿಸಿದಂತೆ ಆಗುವುದಿಲ್ಲವೇ ? ಪುಟ್ಟ ಮಕ್ಕಳಿಂದ ಅವರ ಪ್ರಾಥಮಿಕ ಶಾಲಾ ಸವಿನೆನಪುಗಳನ್ನು ಕಿತ್ತುಕೊಳ್ಳುವ ಹಕ್ಕು ನಮಗೆಲ್ಲಿದೆ? ಆನ್ ಲೈನ್ ಶಿಕ್ಷಣದಿಂದ ಪುಟ್ಟ ಮಕ್ಕಳನ್ನು ಕಷ್ಟಪಟ್ಟು ಕಲಿಯುವಂತೆ ಮಾಡಬಹುದೇ ವಿನಃ ಇಷ್ಟಪಟ್ಟು ಕಲಿಯುವಂತೆ ಮಾಡುವುದು ಕಷ್ಟಸಾಧ್ಯ.


    ಎಲ್ಲ ಕ್ರಿಯೆಗೂ ಒಂದು ಕೊನೆ ಇದ್ದೇ ಇರುತ್ತದೆ. ಹಾಗೆ ಕರೋನಾಗೆ ಸಹ . ಒಂದೆರಡು ತಿಂಗಳುಗಳಲ್ಲಿ ಪುಟ್ಟ ಮಕ್ಕಳು ಆನ್ ಲೈನ್ ನಲ್ಲಿ ಕಲಿತು ಗುಡ್ಡೆ ಹಾಕುವುದೇನು ಇರುವುದಿಲ್ಲ. ಕೆಲಕಾಲ ಮಕ್ಕಳನ್ನು ಮಕ್ಕಳಾಗಿ ಇರಲು ಬಿಟ್ಟು ಬಿಡೋಣ. ಅವರನ್ನು ಯಂತ್ರಗಳನ್ನಾಗಿಸಲು ಉಳಿದ ಜೀವನವೇ ಎದುರಿಗಿದೆ. ಹಾಗಾಗಿ ಕವಿದ ಮೋಡ ಕರಗಿದ ಮೇಲೆ ಮಕ್ಕಳು ಕುಣಿಯುತ್ತಾ ಶಾಲೆಗೆ ಹೋಗಲಿ ಅಲ್ಲವೇ ? 

    ಇದನ್ನೂ ಕೇಳಿ: ಮನೆಗೆ ಬಂದ ಸ್ಕೂಲು

    ಚೀನಾದ ಹುಸಿ ಆಕ್ರಮಣ ನೀತಿಯ ಹಿಂದೆ ಹಲವು ತಂತ್ರ

    ರಾಷ್ಟ್ರೀಯತೆ ವಿಷಯ ಬಂದಾಗ ಜನತೆ ಒಟ್ಟಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತನ್ನ ವೈಫಲ್ಯ, ಸಫಲತೆಗಳನ್ನು ಒಳಗಡೆಯೇ ಬಚ್ಚಿಟ್ಟುಕೊಂಡಿರುವ ಚೀನಾ ಕೂಡ ಇದಕ್ಕೆ ಹೊರತಲ್ಲ. ತನ್ನ ಮೇಲೆ ವೈಯಕ್ತಿಕವಾಗಿ ಕೇಳಿ ಬಂದಿರುವ ಎಲ್ಲಾ ಆರೋಪ ಮತ್ತು ಅಪಾದನೆಗಳನ್ನು ಹತ್ತಿಕ್ಕಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೊಸದಾಗಿ ಹೆಣೆದಿರುವ ಬಲೆಯೇ ಭಾರತ-ಚೀನಾ ನಡುವಿನ ಸಂಘರ್ಷ.

    ಈ ಹಿಂದೆ ಅಂದರೆ ದಶಕಗಳ ಹಿಂದೆ ಸೇನಾ ಬಲದ ವಿಷಯದಲ್ಲಿ ದುರ್ಬಲವಾಗಿದ್ದ ಭಾರತಕ್ಕೆ ಹೀನಾಯ ಸೋಲು ಉಣಿಸಿದ್ದ ಚೀನಾ ಈ ಬಾರಿ ಕೇವಲ ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಲಷ್ಟೇ ಮುಂದಾಗಿದೆ. ಲಡಾಖ್ ಘಟನೆಯೂ ಇದಕ್ಕಿಂತ ಹೆಚ್ಚಿನದ್ದೇನಲ್ಲ. ಯಾರೂ ಕೂಡ ಪೂರ್ಣ ಪ್ರಮಾಣದ ಯುದ್ಧ ಎರಡು ಅಣ್ವಸ್ತ್ರ ಶಕ್ತ ರಾಷ್ಟ್ರಗಳ ನಡುವೆ ನಡೆಯಬಹುದು ಎಂಬ ನಿರೀಕ್ಷೆ ಅಥವಾ ಅತಿಯಾದ ಭಯಂಕರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿಲ್ಲ. ಇದು ಒಂದು ಹಂತದಲ್ಲಿ ಸಹಜವಾಗಿಯೇ “ಪರಸ್ಪರ ಮಾತುಕತೆ”ಯ ಮೂಲಕ ಬಗೆಹರಿಯಲಿರುವ ಸಮಸ್ಯೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

    ಚೀನಾದ ಸಮಸ್ಯೆ

    ಕೋವಿಡ್ -19 ಸಮಸ್ಯೆಯು ಚೀನಾವನ್ನು ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಿದೆ. ಒಂದೆಡೆ ಅಮೆರಿಕ ಗುಡುಗಿದೆ.ಇನ್ನೊಂದೆಡೆ ಆಸ್ಟ್ರೇಲಿಯಾ ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ದೇಶಗಳು ವೈರಸ್ ಹಾವಳಿ ಹೇಗೆ ಆರಂಭವಾಯಿತು ಎಂಬ ಬಗ್ಗೆ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದು, ಅದಕ್ಕೆ ಭಾರತ ಕೂಡ ಪೂರ್ಣ ಸಮ್ಮತಿ ನೀಡಿದೆ. ಚೀನಾದಿಂದ ನಿರ್ಗಮಿಸುತ್ತಿರುವ ಕಂಪನಿಗಳಿಗೆ ಪೂರ್ಣಕುಂಭದ ಸ್ವಾಗತವನ್ನು ಕೋರುತ್ತಿರುವ ಭಾರತದಲ್ಲಿ ರಿಮೂವ್ ಚೀನಾ ಪ್ರಾಡಕ್ಟ್ ಆಂದೋಲನ ತೀವ್ರ ಸ್ವರೂಪ ಪಡೆಯುತ್ತಿದೆ. ಇದೆಲ್ಲವೂ ಚೀನಾಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿಯೇ ಭಾರತದ ಮೇಲೆ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಮೂಲಕ ತನ್ನ ಆರ್ಥಿಕತೆಗೆ ಹೊಡೆತ ಬೀಳದಂತೆ ತಡೆಯುವ ಯತ್ನವೇ ಲಡಾಖ್ ಸಂಘರ್ಷ ಎಂದು ವಿಶ್ಲೇಷಿಸಲಾಗುತ್ತಿದೆ.

    ಇವುಗಳನ್ನು ಹೊರತು ಪಡಿಸಿ ಚೀನಾದ ಭಯಕ್ಕೆ ಹಲವು ಕಾರಣಗಳಿವೆ. ರಷ್ಯಾದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಡೀ ದೇಶವನ್ನು ಸಮರ್ಥವಾಗಿ ನಿಭಾಯಿಸಿ ತಾವು ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ಸಾಧ್ಯತೆ ಬಹುತೇಕ ಖಚಿತಪಡಿಸಿಕೊಂಡಿದ್ದು ಅದಕ್ಕಾಗಿ ರಾಜಕೀಯವಾಗಿ ಶಾಸನಾತ್ಮಕವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ  ಜಿನ್ ಪಿಂಗ್  ವಿರುದ್ಧ ಮಾರ್ಚ್ ನಲ್ಲೇ ಕಮ್ಯೂನಿಸ್ಟ್ ಪಕ್ಷದ ಅತ್ಯುನ್ನತ ನೀತಿ ನಿರ್ದೇಶಕ ಘಟಕವಾದ ಪಾಲಿಟ್ ಬ್ಯೂರ್ ಗೆ ಹಲವರು ಪತ್ರ ಬರೆದು, ಚೀನಾದ ಬಲಿಷ್ಠತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿನ್ ಪಿಂಗ್ ಅವರನ್ನು ಪದಚ್ಯುತಗೊಳಿಸಬೇಕು ಎಂಬುದನ್ನು ಸಕಾರಣವಾಗಿ ಉಲ್ಲೇಖಿಸಿದ್ದರು. ಆ ಬಳಿಕ ಕೆರಳಿದ್ದ ಪಿಂಗ್ ಪಟ್ಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಉಳಿದಂತೆ ನಾನಾ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು ಸೇರಿದಂತೆ ಚೀನಾದ ಅಭಿವೃದ್ಧಿ ಪರವಾಗಿರುವ ವ್ಯಕ್ತಿಗಳು ಕೂಡ ಈ ನಿಟ್ಟಿನಲ್ಲಿ ಪತ್ರ ಬರೆದು ಎಚ್ಚರಿಸಿದ್ದರು.

    ರಾಷ್ಟ್ರೀಯವಾದದ ಸೋಗು

    ಈ ಸಂದರ್ಭದಲ್ಲಿ ಪಿಂಗ್ ರಾಷ್ಟ್ರೀಯವಾದದ ಸೋಗನ್ನು ಧರಿಸಲು ಆರಂಭಿಸಿದರು. ಕೊರೊನಾ ವೈರಸ್ ಹಾವಳಿಯಿಂದ ದೇಶವನ್ನು ಕಾಪಾಡಲು ಅಸಮರ್ಥರಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಟೀಕೆಗೆ ಗುರಿಯಾದ ಅವರು ಅದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೆ ತರಲು ರಹಸ್ಯ ಯೋಜನೆ ರೂಪಿಸುವಲ್ಲಿ ಸದ್ಯದ ಮಟ್ಟಿಗೆ ಯಶಸ್ವಿಯಾದರು. ಆದರೆ, ಹಾಂಗ್ ಕಾಂಗ್ ಕೇವಲ ಚೀನೀಯರನ್ನು ಮಾತ್ರ ಒಳಗೊಂಡಿಲ್ಲ. ಅಲ್ಲಿ 7.5 ದಶ ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ವಾಸಿಸುತ್ತಿದ್ದಾರೆ. ಹೀಗಾಗಿ ಅಲ್ಲಿ ಇಂತಹ ಕಾನೂನು ಜಾರಿಗೆ ತಂದರೆ ಅಗ ಸಹಜವಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗುತ್ತದೆ ಎಂಬುದನ್ನು ತಿಳಿಯದಷ್ಟು ಅಮಾಯಕ ಪಿಂಗ್ ಅಲ್ಲ. ಆದರೂ ಅ ನಿಟ್ಟಿನಲ್ಲಿ ಮನಸ್ಸು ಮಾಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಕಾರ್ಯತಂತ್ರ ಎಂದೇ ಹೇಳಲಾಗುತ್ತಿದೆ.

    ಭಾರತದ ಜತೆ ಸಂಘರ್ಷ

    ಭಾರತ-ಚೀನಾ ಎರಡು ಅಣ್ವಸ್ತ್ರ ಸಶಕ್ತ ರಾಷ್ಟ್ರಗಳು. ಹೀಗಾಗಿ ಇಲ್ಲಿ ನಡೆಯುವ ಯಾವುದೇ ಸಂಘರ್ಷ ಕೇವಲ ಏಷ್ಯಾ ಖಂಡಕ್ಕೆ ಸೀಮಿತವಾಗುವುದಿಲ್ಲ. ಅದರಲ್ಲೂ ಭಾರತದಲ್ಲಿ ನರೇಂದ್ರ ಮೋದಿಯಂತಹ ವರ್ಚಸ್ವಿ ನಾಯಕ ಪ್ರಧಾನಿಯಾಗಿದ್ದು, ಈಗಾಗಲೇ ಸರ್ಜಿಕಲ್ ಸ್ಟ್ರೈಕ್ ನಂಥ ವಿದ್ಯಮಾನಗಳ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಆದ್ದರಿಂದ ಇಲ್ಲಿ ಆಗುವ ಚಿಕ್ಕ ಸಂಘರ್ಷವನ್ನೂ ತೀರಾ ಲಘುವಾಗಿ ಯಾರೂ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿಯೇ ಕೆಲವು ವರ್ಷಗಳಿಂದ ಲಡಾಖ್ ವಲಯದಲ್ಲಿ ಭಾರತದಿಂದ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಈಗ ಹೆಚ್ಚು ಪ್ರಚಾರ ಪಡೆಯುತ್ತಿದ್ದು, ಮುಖ್ಯ ಭೂಮಿಕೆಗೆ ಬಂದಿದೆ.

    ಎರಡೂ ದೇಶಗಳಿಗೂ ಪೂರ್ಣ ಪ್ರಮಾಣದ ಯುದ್ಧ ಬೇಕಾಗಿಲ್ಲ. ಯಾಕೆಂದರೆ ಭಾರತವು ಈಗ ನೆಹರೂ ಕಾಲದಂತೆ ದುರ್ಬಲವಾಗಿಲ್ಲ. ಸಶಕ್ತ ಸೇನೆ, ರಫೇಲ್ ಸೇರಿದಂತೆ ನಾನಾ ಆಧುನಿಕ ಯುದ್ಧ ವಿಮಾನಗಳು, ಉಪಗ್ರಹ ನಿರ್ದೇಶಿತ ಕ್ಷಿಪಣಿ ತಂತ್ರಜ್ಞಾನ, ಅತ್ಯುನ್ನತ ಯುದ್ಧ ಟ್ಯಾಂಕ್ ಸೇರಿದಂತೆ ಸೇನಾ ವಿಭಾಗದಲ್ಲಿ ಸಾಕಷ್ಟು ಮುಂದುವರಿದಿದೆ. ಹೀಗಾಗಿ ಯುದ್ಧ ನಡೆಯುವ ಸಂಭವ ತೀರಾ ಕಡಿಮೆ. ಆದಾಗ್ಯೂ, ಬೆದರಿಸಿ ನೋಡುವ ಎಂಬ ಚೀನಾದ ತಂತ್ರವು ಯಾವಾಗಲೂ ಮುಂದುವರಿಯುತ್ತಲೇ ಇರುತ್ತದೆ. ಇದನ್ನು ಯಾವ ರೀತಿ ಭಾರತ ಯಶಸ್ವಿಯಾಗಿ ಹತ್ತಿಕ್ಕಿ ಇದೊಂದು ಭ್ರಮೆ ಎಂದು ವಿಶ್ವಕ್ಕೆ ತೋರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.-

    ಕೌಶಿಕ್ ಗಟ್ಟಿಗಾರು

    ಮನೆಗೆ ಬಂದ ಸ್ಕೂಲು

    ಮಕ್ಕಳ ಸ್ಖೂಲು ಮನೇಲಲ್ವೆ ಎಂದಿದ್ದರು ಕೈಲಾಸಂ. ಈಗ ಅಕ್ಷರಶಃ ಸ್ಕೂಲು ಮನೆಗೇ ಬಂದಿದೆ. ಎಲ್ಲೆಲ್ಲೂ ಆನ್ ಲೈನ್ ಶಾಲೆಗಳ ಆರ್ಭಟ.ಆಡುವ ಹೊತ್ತಲ್ಲಿ ಕಂಪ್ಯೂಟರ್ ಮುಂದೆ ಮಕ್ಕಳ ಪಾಠ. ಅವರ ಹಿಂದೆ ಪಾಲಕರ ಪರದಾಟ. ಕನ್ನಡಪ್ರೆಸ್.ಕಾಮ್ ನ ಇಂದಿನ ಪಾಡ್ ಕಾಸ್ಟ್ ನಲ್ಲಿ ಭಾರತಿ ಶ್ರೀನಿವಾಸ ಮತ್ತು ಸುಮಾ ಗಿರಿಧರ ಅವರು ಆನ್ ಲೈನ್ ತರಗತಿಗಳ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ

    ಪತ್ರಕರ್ತರ ಬದಲು ಕೃತಕ ಬುದ್ಧಿಮತ್ತೆ ಮೊರೆಹೋದ ಮೈಕ್ರೋಸಾಫ್ಟ್

    ಮೈಕ್ರೋಸಾಫ್ಟ್ ಮತ್ತು ಸಹ ಸಂಸ್ಥೆ ಎಂಎಸ್ಎನ್ ತನ್ನ ನ್ಯೂಸ್ ಪೋರ್ಟಲ್ ನಲ್ಲಿ ಕೆಲಸ ಮಾಡುತ್ತಿರುವ ನೂರಾರು ಪತ್ರಕರ್ತರ ಬದಲು ಈ ಮೂಲಕ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್)ಯನ್ನು ಪತ್ರಿಕಾರಂಗಕ್ಕೂ ಅನ್ವಯಿಸಲು ಮುಂದಾಗಿದೆ.

    ಕೊರೊನಾ ವೈರಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ ಈ ಕ್ರಮವನ್ನು ತೆಗೆದುಕೊಳ್ಳಲು ಕೆಲವು ಕಾಲದ ಹಿಂದೆಯೇ ಯೋಜನೆ ರೂಪಿಸಲಾಗಿತ್ತು ಎಂದು ಮೈಕ್ರೋಸಾಫ್ಟ್ ಸ್ಪಷ್ಟನೆ ನೀಡಿದೆ.

    ಕಳೆದ 25 ವರ್ಷಗಳಿಂದ ಮೈಕ್ರೋಸಾಫ್ಟ್ ಸುದ್ದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು,  1995ರಲ್ಲಿ ಪ್ರತ್ಯೇಕ ವೆಬ್ ಚಾನಲ್ ಆರಂಭಿಸಿತ್ತು.  ಹೊಸ ಪ್ರಕ್ರಿಯೆಯ ಮೂಲಕ ಸಂಸ್ಥೆಯು ಎಐ ಮೂಲಕವೇ ಸುದ್ದಿಯ ಪ್ರಾಮುಖ್ಯತೆಯನ್ನು ಅಳೆದು ಪ್ರಕಾಶನ ಮಾಡಲಿದೆಯಂತೆ. ಅದಕ್ಕಾಗಿ ನಿರ್ದಿಷ್ಟ ಸಂಖ್ಯೆಯ ಪತ್ರಕರ್ತರಿಗೆ ತರಬೇತಿಯನ್ನೂ ನೀಡಲಿದೆಯಂತೆ.ಈ ಮೂಲಕ ಮಾನವ ಬುದ್ಧಿಮತ್ತೆಗಿಂತಲೂ ರೊಬೋಟ್ ನಂತಹ ಯಾಂತ್ರಿಕ ಬುದ್ಧಿಮತ್ತೆಯು ಎಷ್ಟು ಪ್ರಮಾಣದಲ್ಲಿ ಸೂಕ್ತ ಸುದ್ದಿಯನ್ನು ಆಯ್ಕೆ ಮಾಡುತ್ತದೆ ಎಂದು ಗುರುತಿಸಲಿದೆ ಎಂದು ಹೇಳಲಾಗಿದೆ.

    ಆದರೆ ಪತ್ರಿಕಾರಂಗದಂತಹ ಅತಿ ಸೂಕ್ಷ್ಮ ಕ್ಷೇತ್ರದಲ್ಲಿ ಈ ರೀತಿ ಕೃತಕ ಬುದ್ಧಿಮತ್ತೆ ಯಾವ ರೀತಿ ನಿರ್ಧಾರಾತ್ಮಕ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಮುಖ್ಯವಾಗಿ ಇಂತಹ ಒಂದು ಕ್ರಮವನ್ನು ಸಾಕಷ್ಟು ಅಧ್ಯಯನ ಅಥವಾ ವಿಶ್ಲೇಷಣೆಯಿಲ್ಲದೆ ಯಾವ ರೀತಿ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ಜಗತ್ತು ಪ್ರತಿಕ್ರಿಯೆ ನೀಡಿದೆ.

    ಮಾನವನ ಬುದ್ಧಿಗೆ ಸಾಟಿಯಾಗದು

    ಯಂತ್ರಗಳು ಮಾನವ ಸೃಷ್ಟಿ. ಆತನ ಸೃಜನಶೀಲತೆಯಿಂದಲೇ ಅವುಗಳ ನಿರ್ಮಾಣವಾಗಿದ್ದು, ಹೀಗಾಗಿ ಎಐ ಯಾವ ಕಾರಣಕ್ಕೂ ಪೂರ್ಣವಾಗಿ ಮಾನವನ ಸ್ವಯಂ ಬುದ್ಧಿಮತ್ತೆ ಮತ್ತು ಆ ಕ್ಷಣದಲ್ಲಿ ಉದ್ಭವವಾಗುವ ಕ್ರಿಯೇಟಿವಿಟಿಗೆ ಸಾಟಿಯಾಗಲಾರದು ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುತ್ತಲೇ ಸಾಗಿದೆ. ಅದರಲ್ಲೂ ಪತ್ರಿಕಾ ರಂಗದಲ್ಲಿ ಆ ಕ್ಷಣದ ಆಗು ಹೋಗುಗಳ ಬಗ್ಗೆ ನಿರ್ಧಾರಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಯಾವುದೋ ಒಂದು ಕಾಲದಲ್ಲಿ ಸಿದ್ಧಪಡಿಸಿದ ಯಂತ್ರಮಾನವ ಸುದ್ದಿಯನ್ನು ಯಾವ ರೀತಿ ನಿರ್ಧರಿಸಬಲ್ಲ ?

    ಉದಾಹರಣೆ ಕೊರೊನಾ ವೈರಸ್, ನಿಸರ್ಗ ಚಂಡ ಮಾರುತದಂತಹ ವಿಕೋಪಗಳು ಆ ಕ್ಷಣದಲ್ಲಿ ಮಾಡಬಹುದಾದ ಅನಾಹುತಗಳನ್ನು ಗ್ರಹಿಸಿಯೇ ಸುದ್ದಿಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ ಎಂಬುದು ಬಹುತೇಕ ತಜ್ಞರ ಅಭಿಪ್ರಾಯವಾಗಿದೆ. ಇದಕ್ಕೆ ಐಬಿಎಂ ವಾಟ್ಸನ್ ಸಿದ್ಧಪಡಿಸಿದ ಮೋರ್ಗನ್ ಸಿನಿಮಾದ ಟ್ರೇಲರ್ ನ್ನು ಅವರು ಉಲ್ಲೇಖಿಸುತ್ತಾರೆ. ಇದನ್ನು ನೋಡಿದರೆ ಸಾಮಾನ್ಯ ಮನುಷ್ಯನಿಗೆ ಕ್ರಿಯೇಟಿವಿ ಅರ್ಥವಾಗುತ್ತದೆಯೇ ವಿನಾಃ ಇನ್ನಷ್ಟೇ ಜಗತ್ತನ್ನು ಅರಿಯಬೇಕಾಗಿದ್ದ, ತನ್ನದೇ ಕಣ್ಣುಗಳಿಂದ ಜಗತ್ತನ್ನು ನೋಡುತ್ತಿರುವ ಮಕ್ಕಳಿಗೆ ಅರ್ಥವಾಗಲು ಸಾಧ್ಯವಿಲ್ಲ. ಯಂತ್ರಗಳು ಮಾನವನ ಕ್ರಿಯೇಟಿವಿಟಿಗೆ ಪೂರಕವಾಗಬಹುದೇ ಹೊರತು ಅವುಗಳೇ ಸ್ವಯಂ ಯೋಚನೆ ಮಾಡುವ ಶಕ್ತಿಯನ್ನು ಹೊಂದಿಲ್ಲ. ಇದೇ ರೀತಿ ದಿನ ನಿತ್ಯದಲ್ಲಿ ಆಗುವ ನಾನಾ ಬೆಳವಣಿಗೆಗಳನ್ನು ಯಂತ್ರದ ಕಣ್ಣಿನಿಂದ ನೋಡಿ ಸುದ್ದಿಯ ಗ್ರಾವಿಟಿಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

    error: Content is protected !!