24.8 C
Karnataka
Wednesday, May 20, 2026
    Home Blog Page 170

    ಹೂಡುವ ಮೊದಲು ಕಂಪೆನಿಗಳ ಪೂರ್ವಾಪರ ಗೊತ್ತಿರಲಿ

    ಕೋವಿಡ್‌ 19 ರ ಈ ದಿನಗಳಲ್ಲಿ ಎಲ್ಲಾ ವ್ಯವಹಾರಗಳು ಸೊರಗಿ ಹೋಗುತ್ತಿವೆ. ವೃತ್ತಿಗಳಾಗಲಿ, ವೃತ್ತಿಪರರಾಗಲಿ, ದಿನನಿತ್ಯದ ಕಾರ್ಯಸ್ಥರಾಗಲಿ ಎಲ್ಲರೂ ತೊಂದರಗೊಳಪಟ್ಟಿರುವುದು ಜಗಜ್ಜಾಹಿರವಾದ ಅಂಶ. ಈ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ಲಭ್ಯವಿರುವ ವಲಯ ಎಂದರೆ ʼ ಷೇರುಪೇಟೆ.
    ಷೇರುಪೇಟೆಯ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಅಸ್ಪರ್ಷತಾ ಭಾವನೆ ಹಾಗೂ ಭಯ. ಇದಕ್ಕೆ ಮುಖ್ಯ ಕಾರಣ ಷೇರುಪೇಟೆಯ ಪ್ರಮುಖ ಗುಣ ಊಹೆಗೂ, ಕಲ್ಪನೆಗೂ ಸಿಗದಿರುವುದಾಗಿದೆ. ಷೇರುಪೇಟೆ ಚಟುವಟಿಕೆಯಲ್ಲಿ ಯಶಸ್ಸು ಕಾಣಬೇಕಾದರೆ ಕಲ್ಪನಾ ಲೋಕದ ವಿಶ್ಲೇಷಣೆಗಳಿಂದ ಹೊರಬಂದು ಗುಣಮಟ್ಟದ ಕಂಪನಿಗಳ ಬೆಲೆ ಕುಸಿತದಲ್ಲಿದ್ದಾಗ ಅವುಗಳ ಅರ್ಹತೆಯಾಧಾರಿತಗಳನ್ನು ಮಾಪನ ಮಾಡಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಅಪಾಯದ ಮಟ್ಟವನ್ನು ಮಿತಗೊಳಿಸುತ್ತದೆ.

    ಈ ವಲಯದ ಮತ್ತೊಂದು ವಿಶಿಷ್ಟತೆ ಎಂದರೆ ಇಲ್ಲಿ ಬಿದ್ದವರಿಗೊಂದು ಕಲ್ಲು- ಗೆದ್ದವರಿಗೊಂದು ಹಾರ ಎಂಬಂತೆ ಒಂದು ಉತ್ತಮ ಕಂಪನಿ ಷೇರಿನ ಬೆಲೆ ಕುಸಿತದಲ್ಲಿದ್ದಾಗ ವಿವಿಧ ರೀತಿಯ ನಕಾರಾತ್ಮಕ ಚಿಂತನೆಗಳು ವಿಜೃಂಭಿಸುತ್ತವೆ. ಅದೇ ಪೇಟೆ ಏರಿಕೆಯಲ್ಲಿದ್ದಾಗ ಕೊಳ್ಳುವ ಕಾತುರ ಹೆಚ್ಚು. ಇದಕ್ಕೆ ಹಲವಾರು ವಿಶ್ಲೇಷಣೆಗಳು ಪೂರಕ ಪಾತ್ರ ವಹಿಸುತ್ತವೆ. ಈ ರೀತಿಯ ಚಿಂತನೆಗಳಿಂದ ಹೊರಬಂದು ವಿಶ್ಲೇಷಣೆಗಳನ್ನು ಅರ್ಹತೆಯಾಧಾರದ ಮೇಲೆ ನಿರ್ಧರಿಸುವ ಗುಣ ಬೆಳೆಸಿಕೊಂಡಲ್ಲಿ ಷೇರುಪೇಟೆ ಒದಗಿಸುತ್ತದೆ ಸಂಪತ್ತಿನ ಮೂಟೆ.

    ಇತ್ತೀಚೆಗೆ ಕೆಳಮಧ್ಯಮ ಷೇರುಗಳು ಗರಿಷ್ಟಮಟ್ಟದ ಅವರಣ ಮಿತಿ ತಲುಪಿ ಹೂಡಿಕೆದಾರರನ್ನು ಆಕರ್ಷಿಸಿ, ಪ್ರೇರೇಪಿಸುವ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂಬ ಭಾವನೆ ಮೂಡಿಸುತ್ತದೆ. ಇಂತಹ ಬೆಳವಣಿಗೆಗಳಿಗೆ ಒಲವು ತೋರದೆ ಮಾನಸಿಕ ಚಿಂತನೆಗಳಿಗೆ ಅವಕಾಶ ನೀಡಿ, ಅರ್ಹತೆಯಾಧಾರಿತ, ಸರಿ-ತಪ್ಪುಗಳನ್ನು ನಿರ್ಧರಿಸುವ ಗುಣ ಬೆಳೆಸಿಕೊಳ್ಳುವುದು ಯಶಸ್ಸಿನ ಸಮೀಪಕ್ಕೆ ತಲುಪಿಸುತ್ತದೆ.

    ಮಿಡ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌ ಕಂಪನಿ ಷೇರುಗಳಲ್ಲಿ ವಹಿವಾಟು ನಡೆಸುವಾಗ ಕಂಪನಿಗಳ ಘನತೆ, ಗುಣ ಮಟ್ಟಕ್ಕೆ ಹೆಚ್ಚಿನ ಆದ್ಯತೆ ಅಗತ್ಯ. ವಿವಿಧ ಕಾರಣಗಳಿಂದ ಪ್ರೇರಣೆಪಡೆದು ಗರಿಷ್ಠ ಆವರಣ ಮಿತಿ ತಲುಪಿದ ರಿಲಯನ್ಸ್‌ ಇನ್ ಫ್ರಾ, ರಿಲಯನ್ಸ್ ಕ್ಯಾಪಿಟಲ್‌, ರಿಲಯನ್ಸ್‌ ಹೋಂ , ಸಿಂಟೆಕ್ಸ್‌, ಬಾಂಬೆ ರೆಯಾನ್ ನಂತಹ ಕಂಪನಿಗಳ ಬಗ್ಗೆ ಗಮನಿಸುವುದರ ಜೊತೆಗೆ ಸಾಧನೆ ಮಾಡುತ್ತಿರುವ ಸ್ಮಾಲ್ ಕ್ಯಾಪ್ ಕಂಪೆನಿಗಳ ಬಗ್ಗೆಯೂ ಗಮನಿಸಬಹುದು.

    ಉದಾಹರಣೆಗೆ ಕ್ಲಾರಿಯಂಟ್‌ ಕೆಮಿಕಲ್ಸ್‌ ಲಿಮಿಟೆಡ್‌ ಕಂಪನಿ. ಇದು 1958 ರಿಂದ ಲೀಸ್ಟಿಂಗ್‌ ಆಗಿರುವ ಕಂಪನಿ. ಸ್ಪೆಷಾಲಿಟಿ ಕೆಮಿಕಲ್ಸ್‌ ವಲಯದಲ್ಲಿದೆ. ಇದು ಆಕರ್ಷಕ ಡಿವಿಡೆಂಡ್‌ ಜೊತೆಗೆ ಆಂತರಿಕವಾಗಿಯೂ ಉತ್ತಮ ಸಾಧನೆ ಪ್ರದರ್ಶಿಸುತ್ತಿದೆ. ಇದು ಮಾರ್ಚ್‌ ಅಂತ್ಯದ ವರ್ಷದಲ್ಲಿ ರೂ.11 ರ ಡಿವಿಡೆಂಡ್ ಪ್ರಕಟಿಸಿದೆ. ಇದಕ್ಕೆ ಆಗಸ್ಟ್‌ 10 ನಿಗದಿತ ದಿನವಾಗಿದೆ. ಈ ಮಧ್ಯೆ ಈ ಕಂಪನಿ ಷೇರು ಬುಧವಾರದಂದು ಒಂದೇ ದಿನ 65 ರಷ್ಟು ಏರಿಕೆ ಕಂಡಿದೆ. ಒಂದು ವಾರದಲ್ಲಿ ರೂ.107 ಕ್ಕೂ ಹೆಚ್ಚಿನ ಏರಿಕೆ ಪಡೆರುವ ಈ ಷೇರು ಒಂದು ತಿಂಗಳಲ್ಲಿ ರೂ.136 ರಷ್ಟು ಏರಿಕೆ ಕಂಡಿದೆ.

    ಮಾರ್ಚ್‌ ನ ಕುಸಿತದ ಸಮಯದಲ್ಲಿ ರೂ.192 ರ ಸಮೀಪಕ್ಕೆ ಕುಸಿದಿದ್ದ ಈ ಷೇರಿನ ಬೆಲೆ ನಿನ್ನೆ ರೂ.477 ಕ್ಕೆ ಜಿಗಿತ ಕಂಡಿತ್ತು. ಆ ಜಿಗಿತ ಇಂದೂ ಮುಂದುವರೆದು 495 ತಲುಪಿ ಮತ್ತೆ 477 ರ ಆಸು ಪಾಸಿಗೆ ಇಳಿದಿದೆ. ಇದು ಕಂಪನಿಯ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಇದೇ 4 ರಂದು ಸ್ಪೆಷಲ್‌ ಡಿವಿಡೆಂಡ್‌ ಘೋಷಿಸಲು ಆಡಳಿತ ಮಂಡಳಿ ಸಭೆಯು ಪರಿಶೀಲಿಸಲಿದೆ ಎಂಬ ಸುದ್ದಿ ಈ ದಿಢೀರ್ ಏರಿಕೆಗೆ ಕಾರಣವಾಯಿತು.

    Value pick – profit book ಸೂತ್ರದಿಂದ ಘನತೆಯುಳ್ಳ ಕಂಪನಿಗಳನ್ನೇ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರ

    ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದೆ. ರಾಜ್ಯದಲ್ಲಿ ಮರಣ ಮೃದಂಗ ಬಾರಿಸಿದೆ. ವಿರುದ್ಧದ ಹೋರಾಟದಲ್ಲಿ ನಾಡಿನ ವೈದ್ಯ ಪಡೆ ಹಗಲೂ ರಾತ್ರಿ ದುಡಿಯುತ್ತಿದೆ. ಇಂದು ವೈದ್ಯರ ದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಹೆಸರಾಂತ ಆಯುರ್ವೇದ ತಜ್ಞ ಡಾ. ಬಿ. ಗುರುಬಸವರಾಜ ಅವರು ಕನ್ನಡ ಪ್ರೆಸ್.ಕಾಮ್ ನ ಪಾಡ್ಕಾಸ್ಟ್ ನಲ್ಲಿ ಭಾಗವಹಿಸಿದ್ದಾರೆ. ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರು ನಡೆಸಿಕೊಟ್ಟ ಪಾಡ್ಕಾಸ್ಟ್ ನಲ್ಲಿ ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರದ ಬಗ್ಗೆ ಡಾ. ಗುರುಬಸವರಾಜ ಮಾತಾಡಿದ್ದಾರೆ. ಆಲಿಸಿ. ನಿಮ್ಮ ಅಭಿಪ್ರಾಯ ತಿಳಿಸಿ. ಸುರಕ್ಷಿತವಾಗಿರಿ.

    ಶಾಂತಲಾದಲ್ಲಿ ಇನ್ನು ಕೇಳಿಸದ ನಮೋ ವೆಂಕಟೇಶ

    ಇತ್ತೀಚಿಗೆ, ಮೈಸೂರಿಗರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದ ಪದ್ಮ(ಪ್ರಭುದೇವ) ಮತ್ತು ಶಾಂತಲಾ ಚಿತ್ರಮಂದಿರಗಳನ್ನು ಮುಚ್ಚುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ ಆಘಾತವಾಯಿತು. ನನ್ನ ಮನಃಪಟಲದಲ್ಲಿ ಸಾಲು ಸಾಲು ನೆನಪುಗಳ ಮೆರವಣಿಗೆ.
    ಈ ಎರಡು ಚಿತ್ರಮಂದಿರಗಳ ಜೊತೆಗಿನ ನನ್ನ ನೆನಪುಗಳು ಹಾಗೂ ಅನುಭವಗಳು ಅಚ್ಚಳಿಯದೆ ಉಳಿದಿವೆ. ಇಂದು ವಿಶೇಷವಾಗಿ ಶಾಂತಲ ಚಿತ್ರಮಂದಿರದ ಕುರಿತು ಅನಿಸಿಕೆ, ನೆನಪುಗಳನ್ನು ಹಂಚಿಕೊಳ್ಳಬಯಸುವೆ.

    ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಡಬ್ಬಲ್ ರೋಡ್ ಗೆ ತಾಕಿದಂತಿರುವ ಶಾಂತಲ ಚಿತ್ರಮಂದಿರ ಬಹಳ ಹೆಸರು ವಾಸಿ. ಹಿಂದೆ ಓಂಕಾರ್ ಸೌಂಡ್ ಸಿಸ್ಟಮ್, ಎದುರುಗಡೆ ಸುಬ್ಬರಾಯ ಕೆರೆ.. ಸುಬ್ಬರಾಯ ಕೆರೆಯ ಈಜುಕೊಳ, ದಸರಾ ಸಮಯದ ಕೊಕ್ಕೋ ಮತ್ತು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗಳು.. ಶಾಂತಲಾ ಒಟ್ಟಿಗೆ ಮೇಳೈಸಿವೆ. ಈ ಚಿತ್ರಮಂದಿರದ ವಿಶೇಷ ಅಂದ್ರೆ ಇಲ್ಲಿ ಯಾವಾಗಲೂ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡ್ತಾ ಇದ್ದದ್ದು. ಪ್ರಶಸ್ತಿ ವಿಜೇತ ಗ್ರಹಣ ಇಲ್ಲಿಯೇ ತೆರೆ ಕಂಡಿದ್ದು ಮತ್ತೆ ಆ ಸಿನಿಮಾ ಇಲ್ಲಿ ನೋಡಿದ್ದು ನನ್ನ ಅತ್ಯಂತ ಹಳೆಯ ನೆನಪು. ಶಾಂತಲಾ ಚಿತ್ರಮಂದಿರದ ಆಕರ್ಷಣೆ ಎಂದರೆ ಅದರ ಮ್ಯಾನೇಜರ್.. ಗಿರಿಜಾ ಮೀಸೆಯ ಆ ವ್ಯಕ್ತಿ ಪೊಲೀಸ್ ಅಲ್ಲದಿದ್ದರೂ ಪೊಲೀಸರಿಗಿಂತ ಕಟ್ಟುನಿಟ್ಟು.. ಶಾಂತಲ ಚಿತ್ರಮಂದಿರದಲ್ಲಿ ಎಂದಿಗೂ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಆಗುತ್ತಿರಲಿಲ್ಲ. ಒಬ್ಬರಿಗೆ ಒಂದೇ ಟಿಕೆಟ್ ನೀಡುವ ಪರಿಪಾಠವಿತ್ತು. ಡಾ. ರಾಜಕುಮಾರ್ ಅಭಿನಯದ ಹಲವಾರು ಸಿನಿಮಾಗಳನ್ನು ನಾನು ಅಲ್ಲಿಯೇ ನೋಡಿದ್ದು ಅವುಗಳಲ್ಲಿ ಪ್ರಮುಖವಾದದ್ದು ಹೊಸಬೆಳಕು, ಕೆರಳಿದಸಿಂಹ ಇತ್ಯಾದಿ. ದಿನವಹಿ ಮೂರು ಆಟ ಕೆರಳಿದ ಸಿಂಹ ಇದ್ದಾಗ ಬೆಳಗಿನ ಆಟ ಸಾಹಸಸಿಂಹ. ಡಾ. ರಾಜಕುಮಾರ್ ಮತ್ತು ವಿಷ್ಣುವರ್ಧನ್ ರ ಈ ಚಿತ್ರಗಳಿಗೆ ಸ್ಟಾರ್ ಕಟ್ಟಿದವರು, ಮೆರವಣಿಗೆ ತಂದವರು, ಟಿಕೆಟ್ ಗಾಗಿ ಒದೆ ತಿಂದವರು.. ಇವರನ್ನೆಲ್ಲ ಕಂಡಾಗ ಕಣ್ಣಿಗೆ ಹಬ್ಬ. ರಾಜಕುಮಾರ್ ಚಿತ್ರಕ್ಕೆ ನಗರದ ಬೇರೆ ಬೇರೆ ಕಾರಣಗಳು ಅಭಿಮಾನಿ ಸಂಘದವರು ಸ್ಟಾರ್ ಮೆರವಣಿಗೆ, ಪಟಾಕಿ ಸದ್ದು, ಬ್ಯಾಂಡ್ ಸೆಟ್, ಕುಣಿತಗಳ ಸಮೇತ ಬರುತ್ತಿದ್ದುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.

    ದಸರಾ ಚಲನಚಿತ್ರೋತ್ಸವದಲ್ಲಿ ಒಂದು ರೂಪಾಯಿ, ಎರಡು ರೂಪಾಯಿಗೆ ದಿನಕ್ಕೊಂದು ಪ್ರಖ್ಯಾತ ಚಿತ್ರಗಳ ಪ್ರದರ್ಶನ ನಡೆಯುತ್ತಿದ್ದಾಗ ಮುಗಿಬಿದ್ದು ನೋಡುತ್ತಿದ್ದೆವು. ಶಿವರಾತ್ರಿಯ ತಡರಾತ್ರಿ ಶೋ ಕೂಡಾ ಇಲ್ಲಿ ನಡೆಯುತ್ತಿತ್ತು. ಇವೆಲ್ಲಾ ನೆನಪುಗಳು ವಿಶಿಷ್ಠ.

    ಯಾವುದೇ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಮಾಡುವ ವ್ಯವಸ್ಥೆ ಬೇರೆಲ್ಲಾ ಕಡೆ ಇದ್ದಾಗಲೂ ಶಾಂತಲಾದಲ್ಲಿ ಇರಲಿಲ್ಲ. ಪ್ರತಿ ಪ್ರದರ್ಶನಕ್ಕೂ ಒಂದರ್ಧ ಗಂಟೆ ಮೊದಲು ಗೇಟನ್ನು ತೆಗೆದು ಒಳಗೆ ಬಿಡುತ್ತಿದ್ದರು ಅದು ಕೂಡ ಒಂದೇ ಸಾಲಿನಲ್ಲಿ ನಿಲ್ಲಬೇಕೆಂಬ ಕಟ್ಟಳೆ. ಎರಡನೇ ಸಾಲು ರೂಪುಗೊಂಡರೆ ಹೊರಗೆ ಎಳೆದು ಹಾಕುತ್ತಿದ್ದರು. ಚಿತ್ರಮಂದಿರದ ಹೊರಗಿನ ಗದ್ದಲ ಹೇಗೆ ಇದ್ದರೂ ಒಳಗೆ ಮಾತ್ರ ಶಿಸ್ತು ತುಂಬಿತ್ತು. ಇದಕ್ಕೆ ಮುಖ್ಯ ಕಾರಣವೇ ಅಲ್ಲಿನ ಪೊದೆ ಮೀಸೆ ಮ್ಯಾನೇಜರ್.

    ಶಾಂತಲಾ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಪ್ರದರ್ಶನವಾಗುವ ಮೊದಲು ತೆರೆಮೇಲೆ ಏಳುವಾಗ ಘಂಟಸಾಲ ಅವರು ಹಾಡಿದ್ದ ತೆಲುಗಿನ ನಮೋ ವೆಂಕಟೇಶ ಹಾಡು ಹಾಕುವುದು ವಾಡಿಕೆ. ಸಿನಿಮಾ ಆರಂಭವಾಯಿತು ಎಂಬುದಕ್ಕೆ ನಾವೆಲ್ಲ ಬಳಸುತ್ತಿದ್ದುದ್ದೇ ನಮೋ ವೆಂಕಟೇಶ ಶುರುವಾಯಿತು ಎಂಬ ಮಾತನ್ನು.

    ಇಲ್ಲಿ ಅಂಬರೀಷ್ ಅಭಿನಯದ ಅಂತ ಚಿತ್ರ ಬಿಡುಗಡೆಯಾಗಿದ್ದು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಮೊದಲ ಮೂರು ದಿನ ಬಹುತೇಕ ಖಾಲಿ ಇದ್ದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ್ದೆ. ಆಗಿನ್ನೂ ಹಲವು ದೃಶ್ಯಗಳು ಕತ್ತರಿ ಪ್ರಯೋಗಕ್ಕೆ ಒಳಗಾಗಿರಲಿಲ್ಲ. ಮೂರನೆಯ ದಿನದಿಂದ ತನ್ನ ಹಸಿಹಸಿ ದೃಶ್ಯಗಳಿಂದ ಇದ್ದಕ್ಕಿದ್ದಂತೆ ಜನಪ್ರಿಯತೆ ಗಳಿಸಿದ ಚಿತ್ರದ ಕೆಲವು ದೃಶ್ಯಗಳಿಗೆಗಳಿಗೆ ಕತ್ತರಿ ಪ್ರಯೋಗವಾಗಿದ್ದು ಜನರಲ್ಲಿ ಕುತೂಹಲ ಹೆಚ್ಚಿಸಿ ಹಿಂದೆಂದೂ ಕಾಣದಷ್ಟು ಜನಸಂದಣಿ ಉಂಟಾಗಿತ್ತು.. ಜನರ ಸರತಿ ಸಾಲು ಚಿತ್ರಮಂದಿರದ ಹಿಂದಿನ ರಸ್ತೆಯನ್ನು ದಾಟಿ ಎಣ್ಣೆ ಗಾಣದವರೆಗೂ ಇರುತ್ತಿದ್ದುದನ್ನು ನೋಡಿ ನಮಗೆ ಒಳಗೊಳಗೆ ಪುಳಕ. ಇಷ್ಟು ಜನ ನೋಡಬೇಕೆಂದು ಒದ್ದಾಡುತ್ತಿರುವ ಚಿತ್ರವನ್ನು ಎಲ್ಲರಿಗಿಂತ ಮೊದಲು ಆರಾಮಾಗಿ ನೋಡಿದ್ದೇವೆ ಅಂತ ಜಂಬ ಪಡುತ್ತಿದ್ದೆವು.ವಿಷ್ಣುವರ್ಧನ್ ಅಭಿನಯದ ಅಡಿಮೈ ಚಂಗಲ್ ಎಂಬ ಪರಭಾಷಾ ಚಿತ್ರವನ್ನು ಕೂಡ ಇಲ್ಲಿ ಬೆಳಗಿನ ಆಟದಲ್ಲಿ ನೋಡಿದ ನೆನಪಿದೆ.

    ಚಿತ್ರಮಂದಿರ ಮನಸ್ಸಿಗೆ ಎಷ್ಟು ಹತ್ತಿರವಾಗಿತ್ತೋ ಅಷ್ಟೇ ಅದನ್ನು ಸಿಹಿ ಮಾಡಿದ್ದು ಎದುರಿನ ಪಾನಿಪುರಿ ಗಾಡಿ, ಪಕ್ಕದ ಸಣ್ಣ ಹೋಟೆಲ್, ಸಮೀಪದ ಜ್ಯೂಸ್ ಅಂಗಡಿಗಳು..

    ಒಟ್ಟಿನಲ್ಲಿ, ನನ್ನ ಬಾಲ್ಯದ ಹಲವು ವರ್ಷಗಳ ಕಾಲದ ಅವಧಿಯಲ್ಲಿ ಮರೆಯಲಾಗದ ನೆನಪುಗಳನ್ನು ಮನದಲ್ಲಿ ಅಚ್ಚು ಹಾಕಿದ ಶಾಂತಲ ಚಿತ್ರಮಂದಿರ ಇದೀಗ ಶಾಶ್ವತವಾಗಿ ಮುಚ್ಚುತ್ತಿರುವುದು ನೋವಿನ ಸಂಗತಿ. ಶಾಂತಲ ಚಿತ್ರಮಂದಿರ ಮೈಸೂರಿಗರ ಮನಗಳಲ್ಲಿ ಸದಾ ಉಳಿಯುತ್ತದೆ. ಮತ್ತೊಮ್ಮೆ ಅಲ್ಲಿನ ತೆರೆ ಮೇಲೆ ಏಳಬಹುದು, ಮತ್ತೊಮ್ಮೆ ನಮೋ ವೆಂಕಟೇಶ ಕೇಳಿಬರಬಹುದು ಎಂಬ ದೂರದ ಆಸೆ ನಮ್ಮೆಲ್ಲರ ಮನದಲ್ಲಿ ಸದಾ ಹಸಿರು.

    ಬೆಂಗಳೂರು ಮೈಸೂರು ಸೇರಿದಂತೆ ಅನೇಕ ನಗರಗಳಲ್ಲಿ ಅನೇಕ ಥಿಯೇಟರ್ ಗಳು ಬಂದ್ ಆಗಿವೆ.ಅಲ್ಲದೆ ಕರೋನಾ ಕಾರಣದಿಂದ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಚಿಂತೆ ಬೇಡ. ಅಮೆಜಾನ್ ಪ್ರೈಮ್ ಸದಸ್ಯರಾದರೆ ಕನ್ನಡ ಸೇರಿದಂತೆ ವಿಶ್ವದ ಸಿನಿಮಾ ಲೋಕವೇ ನಿಮ್ಮ ಮನೆಯಲ್ಲಿ ತೆರೆದುಕೊಳ್ಳುತ್ತದೆ ಈ ಕೆಳಗಿನ ಲಿಂಕ್ ಒತ್ತಿ ಅಮೆಜಾನ್ ಪ್ರೈಮ್ ವಿಡಿಯೋ ಬಳಗ ಸೇರಿ.

    ಅರಿತು ಹೂಡಿಕೆ ಮಾಡಿರಿ- ಅನುಸರಿಸಬೇಡಿರಿ

    ಇಂದಿನ ದಿನಗಳಲ್ಲಿ ಷೇರುಪೇಟೆಯ ಚಟುವಟಿಕೆ ಹೇಗಿದೆ ಎಂದರೆ ಯಾವುದೇ ವಿಧದಲ್ಲಿ ಸಮೀಕರಿಸಲು ಸಾಧ್ಯವಾಗದ ರೀತಿಯಲ್ಲಿರುತ್ತದೆ. ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ಪ್ರಮುಖ ವಿಮಾ ಕಂಪನಿಗಳಾದ ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಕಂಪನಿ ಮತ್ತು ಎಚ್ ಡಿ ಎಫ್ ಸಿ ಲೈಫ್ ಕಂಪೆನಿಗಳು ನ್ಯಾಶನಲ್‌ ಸ್ಟಾಕ್‌ ಎಕ್ಸ್ ಚೇಂಜ್‌ ನ ನಿಫ್ಟಿ ಯಲ್ಲಿ ಸೇರುವ ಸಾಧ್ಯತೆ ಕಂಡು ಬರುತ್ತಾ ಇದೆ. ಹೀಗೆಂದ ಮಾತ್ರಕ್ಕೆ ಈ ವಿಮಾ ಕಂಪನಿಗಳ ಷೇರುಗಳು ಹೆಚ್ಚಿನ ಅಭಿವೃದ್ದಿಯನ್ನು ಕಾಣುತ್ತವೆ ಎಂದು ನಿರ್ಧರಿಸುವುದು ಸರಿಯಲ್ಲ. ಇದನ್ನು ದೃಢೀಕರಿಸಲು ಈ ಕೆಳಗಿನ ಉದಾಹರಣೆಯತ್ತ ಕಣ್‌ ಹಾಯಿಸಿರಿ.

    2017 ರ ನವೆಂಬರ್‌ ನಲ್ಲಿ ಪ್ರತಿ ಷೇರಿಗೆ ರೂ.800 ರಂತೆ ಆರಂಭಿಕ ಷೇರು ವಿತರಣೆಯನ್ನು ಮಾಡಿದ ಸಾರ್ವಜನಿಕ ವಲಯದ ನ್ಯೂ ಇಂಡಿಯಾ ಅಶುರೆನ್ಸ್ ಕಂಪೆನಿ ಲಿಮಿಟೆಡ್ ಅ ವರ್ಷ ರೂ.8.75 ನ್ನು ಡಿವಿಡೆಂಡ್‌ ಆಗಿ ವಿತರಿಸಿತು. 2018 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರನ್ನು ವಿತರಿಸಿ, ಹೂಡಿಕೆಯ ಮೊತ್ತವನ್ನು ರೂ.400 ಕ್ಕೆ ಇಳಿಸಿತು. ಹಿಂದಿನ ವರ್ಷ ಪ್ರತಿ ಷೇರಿಗೆ ರೂ.1.50 ಯಂತೆ ಡಿವಿಡೆಂಡ್‌ ವಿತರಿಸಿದೆ. ಆದರೆ ಮಾರ್ಚ್‌ ನಲ್ಲಿ ಪೇಟೆ ಕಂಡ ಭಾರಿ ಕುಸಿತದ ಕಾರಣ ಷೇರಿನ ಬೆಲೆ ರೂ.75 ಕ್ಕೆ ಜಾರಿ ಇಂದು ರೂ.116 ರ ಸಮೀಪವಿದೆ. ನಿನ್ನೆ ಕಂಪನಿಯು ತನ್ನ ವಾರ್ಷಿಕ ಫಲಿತಾಂಶ ಪ್ರಕಟಿಸಿತು. ಅದರಂತೆ ಕಂಪನಿಯ ಲಾಭ ಗಳಿಕೆ ಹೆಚ್ಚು ಕುಸಿತ ಕಂಡಿದ್ದು ವಾರ್ಷಿಕ ಲಾಭವು ಹಿಂದಿನ ವರ್ಷದ ರೂ.483.04 ಕೋಟಿಗೆ ಬದಲಾಗಿ ಈ ವರ್ಷ ರೂ.126.64ಕೋಟಿ ಗೆ ಇಳಿದಿದೆ. ಲಾಭ ಗಳಿಕೆ ಭಾರಿ ಇಳಿಕೆಯ ಕಾರಣ ಈ ವರ್ಷ ಡಿವಿಡೆಂಡನ್ನು ಘೋಷಿಸಿಲ್ಲ. ಅಂದರೆ IPO ನಲ್ಲಿ ಹೂಡಿದ ರೂ.400 ಹೇಗೆ ಕರಗಿ ರೂ.116 ರ ಸಮೀಪಕ್ಕೆ ಕರಗಿರುವುದರೊಂದಿಗೆ ಮೂರು ವರ್ಷದ ಹೂಡಿಕೆಯೂ ನಿರುಪಯುಕ್ತವಾಗಿದೆ.

    ಇದು ಕೇವಲ ಈ ಕಂಪನಿಯ ಕಥೆಯಲ್ಲ ಇಂತಹ ಅನೇಕ IPO ಗಳ ಪಟ್ಟಿಯೇ ಇದೆ. 2018 ರಲ್ಲಿ HAL ಕಂಪನಿಯ IPO ರೂ.1,215 ರಂತೆ ಮಾಡಿತಾದರೂ ಇದುವರೆಗೂ ವಿತರಣೆ ಬೆಲೆ ತಲುಪಲಾಗಿಲ್ಲ. ಇನ್ನು ಖಾಸಗಿ ವಲಯದ ಕಂಪನಿ ರಿಯಲ್‌ ಎಸ್ಟೇಟ್‌ ಕಂಪನಿಗಳಾದ ಶೋಭಾ ಡೆವಲಪರ್ಸ, ಡಿ ಬಿ ರಿಯಾಲ್ಟಿ, ಅಲ್ಲದೆ ಜೆಟ್‌ ಏರ್ವೇಸ್‌, ಮನ್ ಪಸಂದ್‌ ಬೆವರೇಜಸ್‌, ಪಿ ಎನ್‌ ಬಿ ಹೌಸಿಂಗ್ ಗಳಂತಹ ಕಂಪನಿಗಳು ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ.

    ಇನ್ನು 2010 ರಲ್ಲಿ ಕೋಲ್‌ ಇಂಡಿಯಾ ರೂ.245 ರಂತೆ IPO ಮೂಲಕ ಪೇಟೆ ಪ್ರವೇಶಿಸಿತು. ಆ ಸಮಯದಲ್ಲಿ ಷೇರಿನ ಬೆಲೆ ರೂ.440 ರವರೆಗೂ ಏರಿಕೆ ಕಂಡು ವಿಜೃಂಬಿಸಿತು. ಆನಂತರದಲ್ಲಿ ಷೇರಿನ ಬೆಲೆ ಕುಸಿಯುತ್ತಾ ಜಾರಿದೆ. ಒಂದು ಸಮಾಧಾನಕರ ಅಂಶವೆಂದರೆ ಈ ಕಂಪನಿಯು ಹಲವು ಭಾರಿ ಆಕರ್ಷಕ ಡಿವಿಡೆಂಡ್‌ ವಿತರಿಸಿದೆ.

    ಒಟ್ಟಾರೆ ಹಣ ಹೂಡಿಕೆಗೂ ಮುನ್ನ ಯಾವುದೇ ಪ್ರಚಾರಿಕ ಅಂಶಗಳಿಗೆ ಮಾರುಹೋಗದೆ ಯೋಗ್ಯತೆಯ ಮಾಪನಮಾಡಿ ನಿರ್ಧರಿಸಿದಲ್ಲಿ ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ಅರಿತು ಹೂಡಿಕೆ ಮಾಡಿರಿ- ಅನುಸರಿಸಬೇಡಿರಿ. ಉಳಿಸಿದ ಹಣ – ಗಳಿಸಿದ ಹಣ

    ಚೀನಾ ಆ್ಯಪ್ ಗಳ ಅಸಲಿ ರಹಸ್ಯ

     ಚೀನಾ ನಿರ್ಮಿತ 59 ಮೊಬೈಲ್ ಅಪ್ಲಿಕೇಶನ್ ಗಳನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದ ಬೆನ್ನಲ್ಲೇ ಇಂಟರ್ ನೆಟ್ ಒದಗಿಸುವ ಕಂಪೆನಿಗಳು ಈ ಆ್ಯಪ್ ಗಳ ಸಂಪರ್ಕವನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿವೆ. ಈಗಾಗಲೇ ಅಳವಡಿಕೆಯಾಗಿರುವ ಅಪ್ಲಿಕೇಶನ್ ಗಳು ಓಪನ್ ಆಗುವುದಿಲ್ಲ.

    ಈಗಾಗಲೇ ಇನ್ಸ್ಚಾಲ್ ಆಗಿರುವ ಆ್ಯಪ್ ಗಳನ್ನು ತೆರೆಯಲು ಹೋದಾಗ ಕಾಣುವ ನೋಟೀಸ್

    ಟಿಕ್ ಟಾಕ್ , ಹೆಲೋ, ವಿ ಚಾಟ್ ಸೇರಿದಂತೆ ಹಲವು ಆ್ಯಪ್ ಗಳನ್ನು ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡುತ್ತವೆ ಎಂಬ ಕಾರಣಕ್ಕೆ ಐಟಿ ಕಾಯ್ದೆ 2009 ರ ಐಟಿ ಕಾಯ್ದೆ ಅನ್ವಯ ನಿಷೇಧಿಸಲಾಗಿದೆ. ಈ ಆ್ಯಪ್ ಗಳು ಹೇಗೆ ಗಂಡಾಂತರಕಾರಿ ಎಂಬುದನ್ನು ಅರಿಯೋಣ. 

    ಹೆಲೋ ಮತ್ತು ಶೇರಿಟ್ ಮತ್ತು ಯುಸಿ ಬ್ರೌಸರ್‌ನಂತಹ ಬ್ರೌಸರ್‌ಗಳು ಸೇರಿದಂತೆ ಚೀನಾದ ಹತ್ತು ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಕನಿಷ್ಠ ಆರು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಮತ್ತು ಮೈಕ್ರೊಫೋನ್ಗಳಿಗೆ ಪ್ರವೇಶವನ್ನು ಒದಗಿಸಲು  ಅನುಮತಿ ಕೊಡಲು ಕೇಳುತ್ತವೆ.  ಅಂತಹ ಪ್ರವೇಶ ಅಗತ್ಯವಿಲ್ಲದಿದ್ದರೂ ಸಹ, ವೈಯಕ್ತಿಕ ಮಾಹಿತಿಗಳನ್ನೂ  ಶೇಖರಿಸುತ್ತಿವೆ ಎಂದು  ಒಂದು ಅಧ್ಯಯನ ಪತ್ತೆ ಮಾಡಿದೆ.

    ಅಸಲಿಗೆ ಈ ಮಾಹಿತಿಯಿಂದ ಚೀನಾಕ್ಕೆೇನು ಉಪಯೋಗ ಎಂಬ ಸಂಗತಿಗಳನ್ನು ಹುಡುಕುತ್ತಾ ಹೋದರೆ ಅದರ ಅಸಲಿ ಆಟ ಗೊತ್ತಾಗುತ್ತದೆ. ಈ ಅಸಲಿ ಆಟ ಗೊತ್ತಿಲ್ಲದ ನಮ್ಮ ಹುಡುಗರು ಟಿಕ್ ಟಾಕ್ ಮಾಡುತ್ತಾ ಕುಣಿದಿದ್ದೇ ಕುಣಿದಿದ್ದು.

        
    ಮೊದಲನೇ ರೀತಿ :  
    ಚೀನೀ ಆ್ಯಪ್ಸ್ ಗಳು  ನಿಮ್ಮ ಮೊಬೈಲ್ ನಲ್ಲಿ  ದಾಖಲಾಗುವ, ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ನಿಮ್ಮ ಕಾಂಟಾಕ್ಟ್ ಡೀಟೇಲ್ಸ್, ನಿಮ್ಮ ಬ್ಯಾಂಕ್ ಅಪ್ಲಿಕೇಶನ್ಸ್ ಗಳ  ಮಾಹಿತಿಗಳನ್ನು ಸಂಗ್ರಹಿಸುತ್ತವೆ. ನೀವು ಯಾವುದಾದರೂ ಸೈಟ್ ಅಥವಾ ಆ್ಯಪ್ ಮೂಲಕ ತರಿಸಿದ ಸಾಮಗ್ರಿಗಳ ಸಾರಾಂಶವನ್ನು ನಿಮಗೆ ಗೊತ್ತಿಲ್ಲದೆ ಪಟ್ಟಿ ಮಾಡಿಕೊಳ್ಳುತ್ತವೆ. ನಿಮ್ಮ ತಿಂಗಳ ಹಣ ಖರ್ಚು ಮಾಡುವ ವಿಧಾನ, ನೀವು ಯಾವ ಯಾವ ಸ್ಥಳಗಳಲ್ಲಿ ಸಂಚಾರ ಮಾಡಿದ್ದೀರಾ?  ಈ ರೀತಿಯ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು  ಅದಕ್ಕೆ ತಕ್ಕಂತೆ ವಸ್ತುಗಳನ್ನು ತಯಾರಿಸಿ ಅದನ್ನುಭಾರತಕ್ಕೆ ಶಿಪ್ ಮಾಡುತ್ತದೆ . ಇದರಿಂದ ಚೀನಾ ಉತ್ಪಾದಕರು ಒತ್ತಡವಿಲ್ಲದೆ, ಹೆಚ್ಚಿನ ವಸ್ತುಗಳನ್ನು ತಯಾರಿಸಿ ಕಡಿಮೆ ವೆಚ್ಚದಲ್ಲಿ ಹೆಚ್ಚುಲಾಭ  ಮಾಡಿಕೊಳ್ಳುತ್ತಾರೆ.


    ಎರಡನೇ ರೀತಿ: 
    ಚೀನೀ ಆಪ್ಸ್ ಗಳಲ್ಲಿ  ಸಿಗುವ ಮಾಹಿತಿ ಆಧರಿಸಿ ಸಂಗ್ರಹಿಸುವ ಪರ್ಸನಲ್ ದತ್ತಾಂಶಗಳನ್ನ ಬೇರೆಯವರಿಗೆ ಮಾರಾಟಮಾಡಿ ಅದರಿಂದ ಹಣ ಸಂಗ್ರಹಿಸುವುದು.  ಚೀನೀ ಆಪ್ ಗಳಲ್ಲಿ ಹೆಚ್ಚಿನವು ಮಕ್ಕಳು ಉಪಯೋಗಿಸುವ  ಗೇಮಿಂಗ್ ಆಪ್ಸ್ . ಅದರ ಮುಖಾಂತರ ಮಕ್ಕಳ ಮನಸನ್ನ ಓದಿನಿಂದ ಹೆಚ್ಚು ಹೆಚ್ಚು  ಆಟವಾಡುವ ರೀತಿಯಲ್ಲಿ ಬದಲಿಸುವುದು. ಜೊತೆೆಗೆ
    ಹದಿ ಹರೆಯದವರ ಮಾಹಿತಿ ಪಡೆದು, ಅವರಿಗೆ ಬೇಡವಾಗಿದ್ದರೂ  ವಯಸ್ಕರ ವಿಷಯಗಳನ್ನು ಸೇರಿಸಿ ಅವರು ಉಪಯೋಗಿಸುವ ಆಪ್ ಗಳಲ್ಲಿ ತುರುಕುವುದು. 

    ಇದರ ಪರಿಣಾಮ ಸದ್ಯಕ್ಕೆ ಗೊತ್ತಾಗದಿದ್ದರೂ ಮುಂದೆ ಮಕ್ಕಳ, ಯುವಕರ ಹಾಗು ಪ್ರತಿಯೊಬ್ಬ ಬಳೆಕೆದಾರರ ಮನಸ್ಸಿನ ಮೇಲೆ ಆಗುವ ಪರಿಣಾಮ ಅಗಾಧ. 

    ಚೀನಿ ವಸ್ತುಗಳು ಅಷ್ಟು ಕಡಿಮೆ ಬೆಲೆಗೆ ಸಿಗುವುದಾದರೂ ಯಾಕೆ?  ಹೆಚ್ಚು ಗ್ರಾಹಕರು ಇದ್ದಾಗ ಹೆಚ್ಚು ಉತ್ಪಾದನೆ ಅದರಂತೆ ಹೆಚ್ಚು ಲಾಭ!.  ಈ ಸೂತ್ರದಮೇಲೆ ಚೀನೀ ಸರ್ಕಾರ ಕೆಲಸ ಮಾಡುತ್ತಿದೆ.

    ಬೆಂಗಳೂರಿನ ಬವಣೆ ಉಲ್ಬಣಿಸಲು ಐದು ಕಾರಣ

    ವಿ.ಜಯರಾಮ್

    ಬೆಂಗಳೂರಿಗೆ ಗರ ಬಡಿದಿದೆ. ಸದಾ ಗಿಜಿಗುಡುವ ರಸ್ತೆಗಳು ಈಗ ಬಣಬಣ. ಮಾಲು, ಮಂದಿರ ಮುಚ್ಚಿವೆ. ಶಾಲಾ ಕಾಲೇಜುಗಳಿಗೆ ಬಿದ್ದ ಬೀಗ ತೆರೆದಿಲ್ಲ. ವಿಧಾನಸೌಧ, ಹೈಕೋರ್ಟಿನಂತಹ ಶಕ್ತಿ ಕೇಂದ್ರಗಳೇ ಜನವಿಲ್ಲದೆ ಕಳೆಗುಂದಿ ಹೋಗಿವೆ. ಅಣುಬಾಂಬಿಗೂ ಹೆದರದ ಈ ಮಹಾನಗರದ ಬದುಕು ಅಣುವಿಗಿಂತಲೂ ಕಡೆ ಎನಿಸಿದ, ಕಣ್ಣಿಗೆ ಕಾಣಸಿಗದ ಯಕಃಶ್ಚಿತ್ ಒಂದು ಕ್ಷುದ್ರ ಕ್ರಿಮಿಗೆ ಬೆದರಿ ಬೆಚ್ಚಿ ಕುಳಿತಿದೆ. ಎಲ್ಲವೂ ಖಾಲಿ ಖಾಲಿ. ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ. ರಸ್ತೆಗಳಲ್ಲಿ ವಾಹನವಿಲ್ಲ. ಮಾರುಕಟ್ಟೆಗಳಲ್ಲಿ ಜನವಿಲ್ಲ. ಮೂರು ತಿಂಗಳಿಂದ ಮರೆಯಾದ ಲವಲವಿಕೆ ಮರಳುವುದು ಯಾವಾಗ ಗೊತ್ತಿಲ್ಲ.
    ಕೋವಿಡ್ ಎಂಬ ಒಂದು ಕ್ರಿಮಿಯ ರೂಪದಲ್ಲಿ ಬಂದೆರಗಿದ ಬವಣೆಗೆ ಬದುಕು ಎಷ್ಟೆಲ್ಲ ಬದಲಾಗಿದೆ?!

    ತಾನು ಅತಿ ಬಲಿಷ್ಠ ಎಂದು ಬೀಗುತ್ತಿದ್ದ ಸರಕಾರವೂ ಹೆಚ್ಚುತ್ತಿರುವ ಪ್ರಕರಣಗಳಿಂದ ತಬ್ಬಿಬ್ಬಾಗಿದೆ. ನಿಜಕ್ಕೂ ಸರಕಾರದ ಕೈಯಿಂದಲೂ ನಿಯಂತ್ರಿಸಲಾಗದ ಸಾಂಕ್ರಾಮಿಕವೇ ಇದು? ಖಂಡಿತ ಇಲ್ಲ. ಖಚಿತ ನಿರ್ಧಾರಗಳೊಂದಿಗೆ ಹೊರಟರೆ ಈ ಕ್ರಿಮಿಯ ಅಟ್ಟಹಾಸ ಕಟ್ಟಿಹಾಕುವುದು ಕಷ್ಟವೇನಲ್ಲ.

    ಇಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನೇ ನೋಡಿ ಏನಾಗಿದೆ?

    ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಿತ್ಯ 1000 ಹೊಸ ಪ್ರಕರಣ ಪತ್ತೆಯಾಗುತ್ತಿವೆ. ಮುಂಬಯಿ ನಗರದ ಛಿದ್ರಗೊಂಡ ಬದುಕಿನ ಕರಾಳ ಚಿತ್ರ ಕಣ್ಣು ಕಟ್ಟುತ್ತಿದೆ. ಯಾಕೆ ಹೀಗಾಗಿದೆ?
    ಈ ಪ್ರಶ್ನೆಯನ್ನು ಕನ್ನಡಪ್ರೆಸ್.ಕಾಂ ಕೆಲವು ದಕ್ಷ ಅಧಿಕಾರಿಗಳ ಮುಂದೆ ಇಟ್ಟಾಗ “ಹೌದು, ಈ ವೈಫಲ್ಯದಲ್ಲಿ ನಮ್ಮ ಅಧಿಕಾರಿ ವರ್ಗದ ಪಾತ್ರ ಢಾಳಾಗಿದೆ” ಎಂದು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.ಸರಕಾರದ ಮಟ್ಟದಲ್ಲಿ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಜಾರಿಗೆ ಬರುವ ಸಮಯದಲ್ಲಿ ಕಠಿಣತೆಯನ್ನು ಕಳೆದುಕೊಳ್ಳುತ್ತಿವೆ.

    1. ಬೆಂಗಳೂರಿನಲ್ಲಿ ಸೋಂಕು ಅಟ್ಟಹಾಸ ಮೇರೆ ಮೀರಲು ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡುವ ಅಧಿಕಾರಿಗಳ ಲೋಪ ಮಖ್ಯವಾಗುತ್ತಿದೆ. ಕೆಳವರ್ಗದ ದಕ್ಷತೆ ತೀರಾ ಕಳಪೆಯಾಗಿದೆ. ಇದಕ್ಕೆ ಪಕ್ಕದ ಕೇರಳ ಅಪವಾದ. ಅಲ್ಲಿ ಕೆಳ ವರ್ಗದ ಅಧಿಕಾರಿಗಳ ದಕ್ಷತೆ ಸಮರ್ಥವಾಗಿದೆ. ಆ ಕಾರಣ ಸೋಂಕು ಹೆಚ್ಚು ಆರ್ಭಟಿಸುತ್ತಿಲ್ಲ.ನಮ್ಮ ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸೋಂಕು ನಿಯಂತ್ರಣದಲ್ಲಿದೆ.

    2 ಅಂತಾರಾಜ್ಯಗಳಿಂದ ನೇರ ಬೆಂಗಳೂರಿಗೆ ಬರುವ ಜನರ ತಪಾಸಣೆ ವ್ಯವಸ್ಥೆ ತೀರ ಹದಗೆಟ್ಟು ಹೋಗಿದೆ. ಇವರು ಯಾವ ಅಡೆ ತಡೆಯೂ ಇಲ್ಲದೆ ನಗರದ ತಮ್ಮ ಗಮ್ಯ ಸೇರಿಕೊಳ್ಳಬಹುದಾಗಿದೆ. ಇವರಲ್ಲಿ ಇರಬಹುದಾದ ಸೋಂಕಿತರು ಸಮುದಾಯ ಮಟ್ಟಕ್ಕೆ ಸಾಂಕ್ರಾಮಿಕವನ್ನು ಕೊಂಡೊಯ್ಯುತ್ತಿರುವುದು ವರದಿಯಾಗುತ್ತಿದೆ.

    3.ಅತಿ ಸೋಂಕು ಬಾಧಿತ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ನಿತ್ಯ ಲಕ್ಷಾಂತರ ಜನ ಬಂದು ಹೋಗುತ್ತಿದ್ದಾರೆ. ಇವರನ್ನು ಪರೀಕ್ಷೆಗೆ ಒಳಪಡಿಸುವ ಯಾವುದೇ ನಿಯಮ ಜಾರಿಯಲ್ಲಿಲ್ಲ.

    4. ಕೆಲವು ನಿರ್ಬಂಧಗಳು ಇದ್ದರೂ ಅವುಗಳ ಜಾರಿ ಇಲ್ಲವಾಗಿದೆ. ಗಡಿಯಲ್ಲಿ ಸೋಂಕಿತರು ಕೂಡ ನಿರಾಯಾಸವಾಗಿ ನುಸುಳಿ ಬರುತ್ತಿದ್ದಾರೆ. ದುಡ್ಡು, ಗಡಿ ಕಾವಲು ಸಿಬ್ಬಂದಿಯ ಕೈಬಿಸಿ ಮಾಡುತ್ತಿದ್ದು ನಿಯಮಗಳು ಚಿಂದಿಯಾಗಲು ಕಾರಣವಾಗಿದೆ.

    5. ನಾಗರಿಕ ಪ್ರಜ್ಞೆ ಕೊರತೆ ಕೂಡ ಬೆಂಗಳೂರಿನ ಸೋಂಕು ಉಲ್ಬಣಗೊಳ್ಳಲು ಪ್ರಧಾನ ಕಾರಣವಾಗಿದೆ. ಕೆಲಸವಿಲ್ಲದೇ ಅನಗತ್ಯ ಸುತ್ತಾಡುವುದು, ಮೋಜುಮಸ್ತಿ ಗೋಷ್ಠಿಗಳನ್ನು ಸೇರುವುದು, ಸೋಂಕು ಹಾಗೂ ಶುಚಿತ್ವದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

    ಸರಕಾರ ಲಾಕ್ ಡೌನ್ ಸಮಯದಲ್ಲಿದ್ದ ಕಠಿಣ ಕ್ರಮಗಳನ್ನು ಮತ್ತೆ ಅಳವಡಿಸಿದರೆ ಮಾತ್ರ ಸೋಂಕು ನಿಯಂತ್ರಣಕ್ಕೆ ಬರಬಹುದು.

    ಮಳೆಗಾಲದಲ್ಲಿ ಅರಳುವ ರುಚಿ ಮೊಗ್ಗುಗಳು

    ಹೊರಗಡೆ ವರ್ಷಧಾರೆ ಸುರಿಯುತ್ತಿರಬೇಕಾದರೆ ಮನೆಯೊಳಗಡೆ ಬಿಸಿ ಬಿಸಿ ತಿನಿಸುಗಳ ಸಮಾರಾಧನೆ ಶುರುವಾಗುತ್ತದೆ. ಬಿಸಿ ಬಿಸಿ ಕಾಫಿ, ಟೀ, ಕಷಾಯದ ಜೊತೆಗೆ ಕೆಲವು ತಿಂಡಿಗಳ ನೆನಪು ಬೇಡವೆಂದರೂ ಕಾಡುತ್ತದೆ. ಮಳೆಗಾಲದಲ್ಲೇ ತಿನ್ನಬೇಕೆಂದು ಅನಿಸುವ ಈ ತಿಂಡಿಗಳು ಮುಂಗಾರನ್ನು ಹಿತವಾಗಿಸುತ್ತವೆ. ನಗರವಾಸಿಗಳಿಗೂ ಮಳೆಗಾಲದಲ್ಲಿ ಆಪ್ತವೆನಿಸುವ ಈ ತಿನಿಸುಗಳನ್ನು ತಿನ್ನುವಾಗ ಅವರು ತಮ್ಮೂರಿನ ಸವಿನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುತ್ತಾರೆ…

    ಪ್ರಕೃತಿ ಮತ್ತು ಆಹಾರದ ಬೆಸುಗೆ ಎಂದೂ ಬಿಡಿಸಲಾಗದು. ಪ್ರಕೃತಿ ಬದಲಾದಂತೆ ಆಹಾರವೂ ಬದಲಾಗುತ್ತದೆ ಮತ್ತು ಬದಲಾಗಲೇಬೇಕು. ಯಾಕೆಂದರೆ ಆಯಾ ಋತುಮಾನಕ್ಕೆ ಇಂಥದ್ದೇ ಆಹಾರ ಸೇವಿಸಬೇಕು ಎಂಬುದು ನಿಸರ್ಗದ ನಿಯಮ. ಅದಕ್ಕೆ ತಕ್ಕಂತೆಯೇ ನಮ್ಮ ಆಹಾರ ಕ್ರಮಗಳು ರೂಪುಗೊಂಡಿವೆ. ಈ ಆಹಾರ ನಿಯಮ ಪಾಲಿಸದಿದ್ದರೆ ಆಯಾ ಸೀಸನ್‌ಗೆ ಸಿಗುವ ಕೆಲವು ಪ್ರಕೃತಿದತ್ತ ಆಹಾರಗಳ ಪೋಷಕಾಂಶಗಳಿಂದ ವಂಚಿತರಾಗುತ್ತೇವೆ ಮತ್ತು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತೇವೆ.

    ಮಾನ್ಸೂನ್ ರುಚಿಗಳು

    ಬೇಸಿಗೆ ಸೀಸನ್‌ನ ಧಗೆ ಮುಗಿದು ಈಗಷ್ಟೇ ಮಳೆಗಾಲ ಆರಂಭವಾಗಿದೆ. ಆಗಲೇ ಇಳೆಯೆಲ್ಲ ತಂಪಾಗಿದೆ. ಈ ಸೀಸನ್‌ಗೆ ಬೇಸಿಗೆ ಕಾಲದ ಆಹಾರಗಳನ್ನೇ ಸೇವಿಸಲಾಗುವುದಿಲ್ಲ. ಮಳೆಗಾಲ ಶುರುವಾದಾಗಲೇ ನಮಗೆ ಅರಿವಿಲ್ಲದಂತೆಯೇ ನಮ್ಮ ನಾಲಗೆ ರುಚಿ ರುಚಿಯಾದ ತಿನಿಸುಗಳನ್ನು ಬಯಸುತ್ತದೆ. ಜಡಿಮಳೆ ಸುರಿದಾಗ ಮರೆತೇ ಹೋಗಿದ್ದ ಕೆಲವು ತಿಂಡಿ, ತಿನಿಸುಗಳು ನೆನಪಾಗುತ್ತವೆ. ಅವುಗಳನ್ನು ಮಳೆಗಾಲದಲ್ಲಿ ತಿಂದರೇನೇ ರುಚಿ ಜಾಸ್ತಿ. ಹಲಸಿನಕಾಯಿ ಚಿಪ್ಸ್, ಹಪ್ಪಳ, ಕಳಲೆ ಪಲ್ಯ, ಕೆಸುವಿನೆಲೆಯ ಪತ್ರೊಡೆ, ಹೊಳೆ ಮೀನಿನ ಸಾರು, ಮಳೆಗಾಲದಲ್ಲೇ ಚಿಗುರಿಕೊಳ್ಳುವ ತಗ್ಚೆ, ಒಂದೆಲಗ ಮುಂತಾದ ಸೊಪ್ಪುಗಳ ಪಲ್ಯ, ಚಟ್ನಿಗಳು ಮಳೆಗಾಲದಲ್ಲೇ ಅತ್ಯಂತ ಟೇಸ್ಟಿಯೆನಿಸುತ್ತವೆ. ಇವುಗಳನ್ನು ಬೇರೆ ಸೀಸನ್‌ಗಳಲ್ಲಿ ಸವಿದಿದ್ದರೂ ಮಳೆಗಾಲದಲ್ಲಿ ಸಿಗುವ ರುಚಿಯೇ ಬೇರೆ. ಈ ಸಮಯದಲ್ಲಿ ಅದೆಷ್ಟೇ ಬಜ್ಜಿ, ಬೋಂಡಾ ಕರಿದು ತಿಂದರೂ ಹಲಸಿನ ಹಣ್ಣಿನ ಬೀಜಗಳನ್ನು ಸುಟ್ಟು ತಿನ್ನುವುದರಲ್ಲಿ ಇರುವ ಸ್ವಾದ ಬೇರೆ ಯಾವುದರಲ್ಲೂ ಸಿಗಲ್ಲ. ಇದುವೇ ಮಳೆಗಾಲದತಿನಿಸುಗಳ ವಿಶೇಷ.

    ಪ್ರಾದೇಶಿಕ ವೈವಿಧ್ಯ

    ಮಳೆಗಾಲದ ತಿನಿಸುಗಳಲ್ಲೂ ಪ್ರಾದೇಶಿಕ ವೈವಿಧ್ಯವಿದೆ. ಆಯಾ ಪ್ರದೇಶದಲ್ಲಿ ಆ ಸೀಸನ್‌ಗೆ ಸಿಗುವ ಹಣ್ಣು, ತರಕಾರಿಗಳಿಂದ ಮಾಡುವ ಕೆಲವು ವಿಶೇಷ ತಿನಿಸುಗಳು ಅವುಗಳ ಪ್ರಾದೇಶಿಕ ವೈಶಿಷ್ಟ್ಯವನ್ನೂ ಸಾರುತ್ತವೆ. ಉದಾಹರಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಗಾಲ ಬಂತೆಂದರೆ ಪ್ರತಿ ಮನೆಗಳಲ್ಲಿ ಕೆಸುವಿನೆಲೆಯ ಪತ್ರೊಡೆ, ಹಲಸಿನಹಣ್ಣಿ ಕಡುಬು, ಮುಳ್ಕ, ತಗ್ಚೆ ಪಲ್ಯ, ಅರಿಶಿನ ಎಲೆಯ ಕಡುಬು, ಹಲಸಿನ ಹಣ್ಣಿನ ಬೇಯಿಸಿ ಒಣಗಿಸಿದ ಬೀಜ, ಕಾಡು ಅಣಬೆಯ ಪಲ್ಯ, ಅಮಟೆಕಾಯಿ ಉಪ್ಪಿನಕಾಯಿ, ಹುರುಳಿಕಾಳಿನ  ಸಾರು ಇತ್ಯಾದಿಗಳು ಘಮಗುಟ್ಟಿದರೆ, ಉತ್ತರ ಕನ್ನಡದ ಭಾಗಗಳಲ್ಲಿ ಹಲಸಿನ ಚಿಪ್ಸ್, ಹಪ್ಪಳ, ಅಪ್ಪಿ ಪಾಯಸ, ಝುಣಕ ವಡೆ ಕಂಪು ಬೀರುತ್ತವೆ. ಧಾರಾಕಾರ ಮಳೆಯ ಸಮಯದಲ್ಲಿ ಕೈತೋಟ, ಹೊಲ, ಕಾಡುಗಳಲ್ಲಿ ಯಾವುದೇ ಶ್ರಮವಿಲ್ಲದೆ ತಮ್ಮ ಪಾಡಿಗೇ ಬೆಳೆದ ಹಸಿರು ಸೊಪ್ಪು, ತರಕಾರಿ, ಹಣ್ಣುಗಳೇ ಜನರಿಗೆ ಆಧಾರವಾಗುತ್ತವೆ. ಬಿಡದೇ ಸುರಿಯುವ ಮಳೆಗೆ ಹೊರಗಡೆ ಹೋಗಿ ತರಕಾರಿ, ಹಣ್ಣುಗಳನ್ನು ತರುವುದು ಕಷ್ಟವಾಗುವ ಕಾರಣ ಒಂದು ರೀತಿಯಲ್ಲಿ ಪ್ರಕೃತಿಯೇ ಜನರಿಗೆ ದಯಪಾಲಿಸಿರುವ ಆಹಾರಗಳಿವು.

    ಮಳೆಗಾಲದಲ್ಲಿ ತಿನ್ನಲೇಬೇಕಾದ ಅಂಥ ಕೆಲವು ರುಚಿ ವೈವಿಧ್ಯವನ್ನು ಮಾಡುವ ವಿಧಾನ ಇಲ್ಲಿದೆ.

    ಹಲಸಿನ ಹಣ್ಣಿನ ಕಡುಬು

    ಬೇಕಾಗುವ ಸಾಮಗ್ರಿ

    ಚೆನ್ನಾಗಿ ಮಾಗಿರುವ ಹಲಸಿನ ಹಣ್ಣಿನ ತೊಳೆಗಳು-ಎರಡೂವರೆ ಕಪ್, ಬೆಲ್ಲ-ಅರ್ಧ ಕಪ್, ಏಲಕ್ಕಿ ಪುಡಿ-ಅರ್ಧ ಚಮಚ, ತೆಂಗಿನಕಾಯಿ ತುರಿ-೧ ಕಪ್, ಅಕ್ಕಿ-೨ ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕಾಳುಮೆಣಸು-ಅರ್ಧ ಚಮಚ, ತೇಗದ ಎಲೆ ಅಥವಾ ಬಾಳೆ ಎಲೆ-೨೦.

    ಮಾಡುವ ವಿಧಾನ

    ಅಕ್ಕಿಯನ್ನು ತೊಳೆದು ನೀರಿನಲ್ಲಿ ಆರು ಗಂಟೆ ನೆನೆಸಿಡಿ. ತೇಗದ ಎಲೆಗಳನ್ನು ಸ್ವಚ್ಛ ಮಾಡಿ ಒರೆಸಿ ಒಣಗಿಸಿ. ಹಲಸಿನ ಹಣ್ಣಿನ ತೊಳೆಗಳ ಬೀಜಗಳನ್ನು ತೆಗೆದು ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ಬೆಲ್ಲ, ಏಲಕ್ಕಿ ಪುಡಿ ಹಾಕಿ ನುಣ್ಣಗೆ ಅರೆಯಿರಿ. ನಂತರ ತೆಂಗಿನಕಾಯಿ ತುರಿ ಮತ್ತು ಹಲಸಿನ ಹಣ್ಣಿನ ತೊಳೆಗಳನ್ನು ಹಾಕಿ ಮತ್ತೆ ನುಣ್ಣಗೆ ಅರೆಯಿರಿ. ಈ ಹಂತಗಳಲ್ಲಿ ಸ್ವಲ್ಪವೂ ನೀರು ಹಾಕಬಾರದು. ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು, ಕಾಳುಮೆಣಸು ಮತ್ತು ಒಂದು ಚಿಟಿಕೆ ಅರಶಿನ ಹಾಕಿ. ಈ ಒಂದೊಂದು ತೇಗದ ಎಲೆಗೆ ಈ ಮಿಶ್ರಣವನ್ನು ಒಂದೊಂದು ಸೌಟಿನಂತೆ ಹಾಕಿ ಎಲೆಯ ನಾಲ್ಕು ಅಂಚುಗಳನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ. ನಂತರ ಇದರ ಎಲೆಗಳನ್ನು ಬಿಡಿಸಿ ಬಿಸಿ ಬಿಸಿ ಕಡುಬನ್ನು ತುಪ್ಪದ ಜೊತೆಗೆ ತಿನ್ನಿ.

    ಕೆಸುವಿನೆಲೆಯ ತೇಟ್ಲ

    ಬೇಕಾಗುವ ಸಾಮಗ್ರಿ

    ಮಧ್ಯಮ ಗಾತ್ರದ ಕೆಸುವಿನ ಎಲೆ-೨೦, ಉಪ್ಪು-ರುಚಿಗೆ ತಕ್ಕಷ್ಟು, ಮಸಾಲೆಗೆ ಬ್ಯಾಡಗಿ ಮೆಣಸು-೬, ಅರಶಿನ ಪುಡಿ-ಅರ್ಧ ಟೀ ಸ್ಪೂನ್, ಜೀರಿಗೆ-ಅರ್ಧ ಟೀ ಸ್ಪೂನ್, ಬೆಳ್ಳುಳ್ಳಿ-೩ ಎಸಳು, ಮಧ್ಯಮ ಗಾತ್ರದ ಈರುಳ್ಳಿ-೧, ಹುಣಸೆ ಹಣ್ಣು-೧ ನಿಂಬೆ ಗಾತ್ರದ್ದು, ಒಗ್ಗರಣೆಗೆ ಸಾಸಿವೆ-ಕಾಲು ಟೀ ಸ್ಪೂನ್, ಜಜ್ಜಿದ ಬೆಳ್ಳುಳ್ಳಿ-೩, ಎಣ್ಣೆ-ಸ್ವಲ್ಪ.

    ಮಾಡುವ ವಿಧಾನ

    ಹಿಂದಿನ ದಿನ ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು ಒರೆಸಿ ಒಣಗಿಸಿ. ಮರುದಿನ ಪ್ರತಿ ಎಲೆಯನ್ನು ಉದ್ದಕ್ಕೆ ಸುರುಳಿ ಸುತ್ತಿ ಕೊನೆಗೆ ಒಂದು ಗಂಟು ಹಾಕಿ. ಮಸಾಲೆ ಸಾಮಗ್ರಿಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆಯಿರಿ. ಮಸಾಲೆಯ ನೀರಿನಲ್ಲಿ ಕೆಸುವಿನ ಎಲೆಯ ಗಂಟುಗಳನ್ನು ಐದು ನಿಮಿಷ ಬೇಯಿಸಿ ಆಮೇಲೆ ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಮಂದ ಉರಿಯಲ್ಲಿ ಹತ್ತು ನಿಮಿಷ ಕುದಿಸಿ. ನಂತರ ಇದಕ್ಕೆ ಸಾಸಿವೆ ಮತ್ತು ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಇದಕ್ಕೆ ಹಲಸಿನ ಬೀಜ ಹಾಕಿ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.

    ತಗ್ಚೆ ಸೊಪ್ಪಿನ ಪಲ್ಯ

    ಬೇಕಾಗುವ ಸಾಮಗ್ರಿ

    ತಗ್ಚೆ ಸೊಪ್ಪು-೧ ಬಟ್ಟಲು, ಬ್ಯಾಡಗಿ ಮೆಣಸು-೫, ಜೀರಿಗೆ-ಅರ್ಧ ಚಮಚ, ಕೊತ್ತಂಬರಿ ಬೀಜ-೧ ಚಮಚ, ಮೆಂತ್ಯೆ ಕಾಳು-ಅರ್ಧ ಚಮಚ, ಅರಶಿನ ಪುಡಿ-ಅರ್ಧ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ತೆಂಗಿನಕಾಯಿ ತುರಿ-ಅರ್ಧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ-೧ ಕಪ್, ಜಜ್ಜಿದ ಬೆಳ್ಳುಳ್ಳಿ-೩, ಸಾಸಿವೆ-ಅರ್ಧ ಚಮಚ, ಕರಿಬೇವಿನ ಎಲೆ-ಸ್ವಲ್ಪ, ಎಣ್ಣೆ-ಸ್ವಲ್ಪ.

    ಮಾಡುವ ವಿಧಾನ

    ತಗ್ಚೆ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಡಿ. ಮಸಾಲೆ ಸಾಮಗ್ರಿಗಳನ್ನು ಸ್ವಲ್ಪ ಹುರಿದು ಮಿಕ್ಸಿ ಜಾರ್‌ನಲ್ಲಿ ಪುಡಿ ಮಾಡಿ. ಇದಕ್ಕೆ ಹುರಿದ ತೆಂಗಿನಕಾಯಿ ತುರಿ ಹಾಕಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಸಿಡಿಸಿ. ಇದಕ್ಕೆ ಈರುಳ್ಳಿ ಹಾಕಿ ಹುರಿಯಿರಿ. ನಂತರ ತಗ್ಚೆ ಸೊಪ್ಪು ಹಾಕಿ ಚೆನ್ನಾಗಿ ಹುರಿದು ಬಾಡಿಸಿ. ಇದು ಬೆಂದ ಮೇಲೆ ಉಪ್ಪು ಮತ್ತು ಮಸಾಲೆ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಬೇಯಿಸಿ.

    ಎಚ್ಚರದಿಂದಿದ್ದರೆ ಷೇರುಪೇಟೆ ನೀಡುವುದು ಸಂಪತ್ತಿನ ಮೂಟೆ

    ಷೇರುಪೇಟೆಯ ಇಂದಿನ ದಿನಗಳಲ್ಲಿ ಯಾವ ನಿಖರವಾದ ನಿಯಮಗಳಿಲ್ಲದೆ ಚಲಿಸುತ್ತಿರುವಂತಿದೆ. ವಹಿವಾಟುದಾರರು ನಡೆಸುವ ಚಟುವಟಿಕೆಯೇ ಅಂತಿಮ ಎಂಬಂತಿದೆ. ಷೇರುಪೇಟೆಗಳು ರಭಸದ ಏರಿಳಿತ ಪ್ರದರ್ಶಿಸುತ್ತಿರುವುದರ ಹಿಂದೆ ಯಾವುದೇ ಪ್ರಮುಖ ಕಾರಣಗಾಳಿಲ್ಲದಂತಿದೆ. ಆಂತರಿಕ ಸಾಧನೆ ಮೀರಿ ಸೂಚ್ಯಂಕಗಳು ಏರಿಕೆ ಕಂಪನಿಗಳ ಸಾಧನೆಗೂ ಷೇರಿನ ದರ ಏರಿಕೆಗೂ ಸಂಬಂಧವಿಲ್ಲದಂತಿದೆ. ಕೆಳಗಿನ ಉದಾಹರಣೆ ಈ ಅಂಶ ದೃಢಪಡಿಸುತ್ತದೆ.

    ಆಂಧ್ರಾ ಪೇಪರ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ಗುರುವಾರದಂದು ಸುಮಾರು ೩೬ ರೂಪಾಯಿಗಳಷ್ಠು ಕುಸಿತಕ್ಕೊಳಗಾಯಿತು ಅದಕ್ಕೆ ಕಾರಣ ಕಂಪನಿಯ ಪ್ರವರ್ತಕರು ತಮ್ಮ ಭಾಗಿತ್ವದ ಶೇ.10 ರಷ್ಟನ್ನು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟಮಾಡಲಿರುವ ಅಂಶ ಪ್ರಕಟವಾಗಿದ್ದು. ಅಂದು ರೂ.194 ರ ಸಮೀಪಕ್ಕೆ ಕುಸಿದಿದ್ದ ಷೇರಿನ ಬೆಲೆ ಸೋಮವಾರ ದಿಢೀರನೆ ಶೇ.20 ರಷ್ಟರ ಏರಿಕೆಯಿಂದ ಮಿಂಚಿದೆ. ಅಂದರೆ ಕಂಪನಿಯ ಆಂತರಿಕ ಸಾಧನೆಗೆ ಸಂಬಂಧವಿಲ್ಲದ ಸುದ್ದಿಗೆ ಪೇಟೆ ಪ್ರದರ್ಶಿಸಿದ ರೀತಿ ಫಂಡಮೆಂಟಲ್ಸ ಆಧಾರದ ಹೂಡಿಕೆದಾರರಿಗೆ ಗೊಂದಲಮೂಡಿಸುವುದು ಸಹಜ. ಮೂರೇ ದಿನದಲ್ಲಿ ರೂ.60 ರಷ್ಟರ ಏರಿಕೆ ಕಂಡಿದೆ. ಕೇವಲ ವ್ಯಾಲ್ಯೂ ಪಿಕ್‌ ಅಧಾರದ ಮೇಲೆ ಕೊಂಡವರಿಗೆ ಉತ್ತಮ ಲಾಭದ ಅವಕಾಶ ಪೇಟೆ ಒದಗಿಸಿದೆ ಈ ಸಂದರ್ಭ ಹೇಗೆ ಅವಕಾಶ ಸೃಷ್ಟಿಸಿಕೊಟ್ಟಿದೆ ಎಂದರೆ S B I Mutual Fund ತನ್ನ ವಿವಿಧ ಯೋಜನೆಗಳಡಿಯಲ್ಲಿ ಒಟ್ಟು 31,33,000 ಷೇರುಗಳನ್ನು ಈ ಆಫರ್‌ ಫಾರ್‌ ಸೇಲ್‌ ಮೂಲಕ ಖರೀದಿಸಿದೆ. ಸೋಮವಾರ ನಡೆದ ವಹಿವಾಟಿನಲ್ಲಿ ಶೇ.28.07 ರಷ್ಟು ಮಾತ್ರ ವಿಲೇವಾರಿ ವಹಿವಾಟಾಗಿರುವುದು. ಪೇಟೆಯಲ್ಲಿ ನಡೆಯುತ್ತಿರುವ ವಿಲೇವಾರಿ ರಹಿತ ಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ.

    ಈ ಕಂಪನಿಯ ಇತ್ತೀಚಿನ ವಹಿವಾಟಿನ ರೀತಿ ಈ ಕೆಳಕಂಡಂತಿದೆ.

    ಈ ಷೇರಿನಲ್ಲಿ ಒಂದು ವಾರದ ಹೂಡಿಕೆ ಶೇ.2.7 ರಷ್ಟು ಏರಿಕೆ ಕಂಡಿದೆ.
    ಒಂದು ತಿಂಗಳಲ್ಲಿನ ಹೂಡಿಕೆ ಶೇ.45 ರಷ್ಟು ಏರಿಕೆ ಕಂಡಿದೆ.
    ಆರು ತಿಂಗಳಲ್ಲಿ ಈ ಕಂಪನಿ ಹೂಡಿಕೆ ಶೇ.18.67ರಷ್ಟು ಹಾನಿ ಕಂಡಿದೆ.
    ಒಂದು ವರ್ಷದ ಹೂಡಿಕೆಯು ಶೇ.40.57 ರಷ್ಟು ಹಾನಿ ಕಂಡಿದೆ.

    ಅಂದರೆ ಇತ್ತೀಚಿನ ದಿನಗಳಲ್ಲಿ ಈ ಷೇರು ಹೆಚ್ಚು ಹೆಚ್ಚು ಏರಿಕೆ ಕಂಡಿದೆ ಎಂಬುದು ಗಮನಿಸಬೇಕಾದ ಅಂಶ. 2011 ರ ನಂತರದಲ್ಲಿ ಈ ಕಂಪನಿ ಯಾವುದೇ ಡಿವಿಡೆಂಡ್‌ ನೀಡಿರದ ಈ ಕಂಪನಿ ಎಂತಹ ಮಟ್ಟದ ಲಾಭ ಗಳಿಸಿಕೊಟ್ಟಿದೆ. ಇಂತಹ ಸ್ಮಾಲ್‌ ಕ್ಯಾಪ್‌ ಕಂಪನಿಗಳಲ್ಲಿ ಚಟುವಟಿಕೆ ನಡೆಸುವಾಗ ಅಪಾಯದ ಮಾಟ್ಟವನ್ನರಿತು ನಡೆಸುವುದು ಒಳಿತು.

    ಬಂಡವಾಳ ಸುರಕ್ಷತೆಗೆ ವ್ಯಾಲ್ಯೂ ಪಿಕ್‌ – ಪ್ರಾಫಿಟ್‌ ಬುಕ್‌ ಗಳು ಜೊತೆ ಜೊತೆ ಇರಲೇಬೇಕು

    ಭಾರತದ ಘಾತಕ್ ಕಮಾಂಡೋಗಳಿಗೆ ಬೆದರಿದ ಚೀನಾ

    ವಾಸ್ತವ ಗಡಿ ರೇಖೆಯಲ್ಲಿ ಭಾರತ-ಚೀನಾ ಸಮರ ಸನ್ನದ್ಧತೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಸೇನಾ ಸಂಖ್ಯೆ, ಯುದ್ಧ ವಿಮಾನಗಳು, ಕ್ಷಿಪಣಿ ನಿರೋಧಕ ಪಡೆ ಹೀಗೆ ಈ ಪಟ್ಟಿ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ, ಉಭಯ ರಾಷ್ಟ್ರಗಳ ಮಧ್ಯೆ ಈಗಿರುವ ಒಪ್ಪಂದದ ಪ್ರಕಾರ ಬೆಂಕಿಯುಗುಳುವ ಅಸ್ತ್ರಗಳ ಪ್ರಯೋಗ (ಫೈರ್ ಆರ್ಮ್) ಬಳಸುವಂತಿಲ್ಲ. ಅದರ ಕಾರಣದಿಂದಾಗಿಯೇ ಕಳೆದ ಕೆಲ ದಿನಗಳ ಹಿಂದೆ ಮೊಳೆಗಳನ್ನು ಅಳವಡಿಸಿದ ಬಡಿಗೆಗಳಿಂದಲೇ ಉಭಯ ದೇಶಗಳ ಯೋಧರು ಕಾದಾಡಿದ್ದರು. ಚೀನಿಯರಿಗೆ ತಕ್ಕ ಶಾಸ್ತಿ ಮಾಡುತ್ತಲೇ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು.

    ಈಗ ಭಾರತದ ಘಾತಕ್ ತುಕಡಿ ಕಮಾಂಡೋಗಳ ಭಯಕ್ಕೆ ಬಿದ್ದಿರುವ ಚೀನಾ ಸೇನಾ ಪಡೆಯುವ ಟಿಬೆಟ್ ಭಾಗದಲ್ಲಿ ತನ್ನ ಸೇನಾ ಪಡೆಗೆ ತರಬೇತಿ ನೀಡಲು ಕನಿಷ್ಠವೆಂದರೂ 20 ಮಾರ್ಷಲ್ ಆರ್ಟ್ಸ್ ಪರಿಣಿತರನ್ನು ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.

    ಘಾತಕ್ ಕಮಾಂಡೋ

    ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಆರಂಭವಾಗುವ ಮೊದಲೇ ಭಾರತ ತನ್ನ ಘಾತಕ್ ಕಮಾಂಡೋಗಳನ್ನು ಈ ಭಾಗದಲ್ಲಿ ನಿಯೋಜಿಸಿತ್ತು ಎಂದು ಹೇಳಲಾಗುತ್ತಿದೆ. ಕೈ-ಕೈ ಹೋರಾಟದಲ್ಲಿ ಅತಿ ಪರಿಣತಿಯನ್ನು ಈ ಕಮಾಂಡೋಗಳು ಹೊಂದಿದ್ದಾರೆ. ವಿಶೇಷವೆಂದರೆ ಇವರಿಗೆ ಕರ್ನಾಟಕದ ಬೆಳಗಾವಿ ಸೇನಾ ನೆಲೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇವರೆಲ್ಲರಿಗೂ 43 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆಯಂತೆ. ಮೈಮೇಲೆ 35 ಕೆ. ಜಿ. ಗೂ ಅಧಿಕ ಭಾರ ಹೊತ್ತು ಸುಮಾರು 40 ಕಿ.ಮೀ. ವಿಶ್ರಾಂತಿ ಇಲ್ಲದೆ ಓಡುವ ತರಬೇತಿಯೂ ಇವರು ಪಡೆಯುತ್ತಾರೆ. ಒಮ್ಮೆ ಇವರ ತರಬೇತಿ ಪೂರ್ಣಗೊಂಡರೆ ಬಳಿಕ ಮರುಭೂಮಿ, ನಾನಾ ಭೌಗೋಳಿಕ ಸನ್ನಿವೇಶಗಳಲ್ಲಿ ಅವರನ್ನು ನಿಯೋಜಿಸಿ ತರಬೇತಿಯನ್ನು ನಿಯಮಿತವಾಗಿ ಮುಂದುವರಿಸಲಾಗುತ್ತದೆ.

    ಹಲವು ಕಮಾಂಡೋಗಳು

    ಪ್ರತಿ ಘಾತಕ್ ಕಮಾಂಡೋ ಯೂನಿಟ್ ನಲ್ಲಿ ಒಬ್ಬ ಹಿರಿಯ ಅಧಿಕಾರಿ ಮತ್ತು 22 ಯೋಧರು ಇರುತ್ತಾರೆ. ಸದ್ಯದ ಮಟ್ಟಿಗೆ ಚೀನಾ ಗಡಿಯಲ್ಲಿ 40-45 ಇಂತಹ ಯೋಧರನ್ನು ನಿಯೋಜನೆ ಮಾಡಲಾಗಿದೆ. ಉಳಿದವರು ಈ ಕಮಾಂಡೋಗಳಿಗೆ ಬ್ಯಾಕ್ ಅಫ್ ಆಗಿ ಹಿನ್ನೆಲೆಯಲ್ಲಿ ಇರುತ್ತಾರೆ.

    ಪ್ರತಿ ಬಾರಿಯೂ ಪದಾತಿ ಯೋಧರ ನೇಮಕ (ಇನ್ ಫ್ಯಾಂಟ್ರಿ)ವಾದಾಗಲೂ ಅವರಲ್ಲಿ ಕನಿಷ್ಠವೆಂದರೂ 40 ಜನರನ್ನು ಅವರ ಆರೋಗ್ಯ, ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ ಈ ಪಡೆಗೆ ಸೇರಿಸಲಾಗುತ್ತದೆ. ಬಳಿಕ ಅತಿ ಕಠಿಣ ತರಬೇತಿ ನೀಡಲಾಗುತ್ತದೆ. 

    ಯಾಕೆ ಈ ಕಮಾಂಡೋಗಳು

    ಭಾರತ ಮತ್ತು ಚೀನಾ ನಡುವೆ 1996ರಲ್ಲಿ ಆದ ಒಪ್ಪಂದದ ಪ್ರಕಾರ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬಂದೂಕು, ಸ್ಫೋಟಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಉಭಯ ದೇಶಗಳು ಬಳಕೆ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿಯೇ ಬಡಿಗೆ ಹೊಡೆದಾಟ ಈ ಬಾರಿ ಸಂಭವಿಸಿತ್ತು.

    ಹೆಚ್ಚುತ್ತಿರುವ ಸೋಂಕು; ಮುನ್ನೆಚ್ಚರಿಕೆ ಇಲ್ಲದೆ ಅನ್‌ಲಾಕ್ ಮಾಡಿದ್ದೇ ಮುಳುವಾಯ್ತ

    .ಅಶೋಕ ಹೆಗಡೆ
    ಕರ್ನಾಟಕದಲ್ಲಿ, ಅದರಲ್ಲಿಯೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಏರುತ್ತಿದೆ. ಎರಡು ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಸಾವಿರದ ಆಸುಪಾಸಿನಲ್ಲಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ ಅವರ ಈ ಕೆಳಗಿನ ಟ್ವೀಟ್ ಇದನ್ನು ದೃಢಪಡಿಸುತ್ತದೆ.

    ವೈದ್ಯಕೀಯ ಶಿಕ್ಷಣ ಸಚಿವರೇನೋ ಎಲ್ಲರಿಗೂ ಚಿಕಿತ್ಸೆ ನೀಡಲು ಸರಕಾರ ಸಜ್ಜಾಗಿದೆ ಎನ್ನುತ್ತಾರೆ. ಆದರೆ ಈ ಕೆಳಗಿನ ಘಟನೆಗಳು ಸರಕಾರದ ಸಿದ್ಧತೆಯನ್ನು ದೃಢೀಕರಿಸುವುದಿಲ್ಲ. ಅನ್ಲಾಕ್ ಆದ ನಂತರ ಸೋಂಕು ಜಾಸ್ತಿ ಆಗಬಹುದು ಎಂಬ ಅರಿವಿದ್ದರೂ ಬಿಬಿಎಂಪಿ ಅದನ್ನು ನಿಭಾಯಿಸಲು ಹೆಣಗಾಡುತ್ತಿರುವುದು ನಿತ್ಯವೂ ಸಾಬೀತಾಗುತ್ತಿದೆ. ಈಗಾಗಲೇ ವರದಿ ಆಗಿರುವ ಈ ಘಟನೆಗಳು ಬಿಬಿಎಂಪಿ ಕೈ ಚೆಲ್ಲಿ ಬಿಟ್ಟಿದೆಯೆ ಎಂಬ ಅನುಮಾನ ಮೂಡಿಸುವಂತೆ ಇದೆ.

    ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ ವಿಷಯ ತಲುಪಿಸಿದರು. ಬಿಬಿಎಂಪಿ ಅವರನ್ನು ಕರೆದೊಯ್ಯಲು ಬಂದಿದ್ದು ಎರಡು ದಿನಗಳ ಬಳಿಕ! ಆ ಎರಡು ದಿನದಲ್ಲೇ ಅವರು ನರಕ ನೋಡಿಬಿಟ್ಟರು. ಮನೆಯಮಂದಿ ಜತೆ ಮಾತನಾಡುವುದಿರಲಿ, ಮನೆಯಲ್ಲಿ ಇರುವ ಏಕೈಕ ಟಾಯ್ಲಟ್ ಬಳಸಲೂ ಭಯ.

    ಮತ್ತೊಂದು ಘಟನೆಯಲ್ಲಿ ಆರೋಗ್ಯ ವಿಭಾಗದ ಸಿಬ್ಬಂದಿ ಆ ವ್ಯಕ್ತಿಗೆ ಮುಂಜಾನೆ ಕರೆ ಮಾಡಿ, ‘ನಿಮಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿಮ್ಮನ್ನು ಕರೆದೊಯ್ಯಲು ಆಂಬುಲೆನ್ಸ್ ಬರುತ್ತದೆ. ಸರಿಯಾಗಿ ಬೆಳಗ್ಗೆ 10 ಗಂಟೆಗೆ ಎರಡು ಜತೆ ಬಟ್ಟೆ ಜತೆ ಇಂತಹ ಸ್ಥಳಕ್ಕೆ ಬನ್ನಿ,” ಎಂದು ಹೇಳಿದರು. ಲಗೇಜ್ ಸಮೇತ ಅವರು 9.50ಕ್ಕೆ ನಿಗದಿತ ಸ್ಥಳದಲ್ಲಿ ಹಾಜರಿದ್ದರು. ಆದರೆ ಆಂಬುಲೆನ್ಸ್ ಬಂದಿದ್ದು ರಾತ್ರಿ 11 ಗಂಟೆಗೆ! ಮನೆಗೆ ಹೋಗುವಂತಿಲ್ಲ, ಹೋಟೆಲ್-ಬೇಕರಿಗೆ ಹೋಗಿ ಊಟ-ತಿಂಡಿ ಮಾಡುವಂತಿಲ್ಲ. ಅದು ಹೋಗಲಿ, ರಸ್ತೆ ಪಕ್ಕ ಕೂರಲೂ ಭಯ- ತಮ್ಮಿಂದಾಗಿ ಬೇರೆಯವರಿಗೆ ಸೋಂಕು ಅಂಟಿಕೊಂಡರೆ ಎಂಬ ಆತಂಕ!

    ಇನ್ನೊಂದು ಘಟನೆಯಲ್ಲಿ ಬಿಬಿಎಂಪಿ ಹೇಳಿದ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳದಲ್ಲಿ ಆಂಬುಲೆನ್ಸ್ ಬಂತು. ಇವರೂ ಹತ್ತಿ ಕುಳಿತರು. ಆದರೆ ಇವರನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವುದೇ ಆಂಬುಲೆನ್ಸ್ ಚಾಲಕನಿಗೆ ಗೊತ್ತಿರಲಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿ ಕೊನೆಗೆ ಎಲ್ಲೋ ಒಂದು ಕಡೆ ಹಾಸಿಗೆ ವ್ಯವಸ್ಥೆ ಮಾಡುವಷ್ಟರಲ್ಲಿ ಇವರ ಸ್ಥಿತಿ ಗಂಭೀರವಾಗಿ ನೇರವಾಗಿ ಐಸಿಯುಗೆ ದಾಖಲಿಸಬೇಕಾಗಿ ಬಂತು!

    ಬೆಂಗಳೂರಿನ ಅವ್ಯವಸ್ಥೆಯನ್ನು ಸಾದರಪಡಿಸುವ ಘಟನೆಗಳಿವು. ಇಡೀ ದೇಶದಲ್ಲಿ ಲಾಕ್‌ಡೌನ್ ಇದ್ದಾಗ ಬೆಂಗಳೂರು ಸೇರಿದಂತೆ ಎಲ್ಲೆಡೆ ಸೋಂಕು ನಿಯಂತ್ರಣದಲ್ಲಿತ್ತು. ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಸ್ಫೋಟಗೊಂಡಿತು. ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಅನ್‌ಲಾಕ್ ಪ್ರಕ್ರಿಯೆ ಜಾರಿಗೊಳಿಸಲು ಮುಂದಾದದ್ದೇ ಇದಕ್ಕೆ ಕಾರಣ. ಈಗ ಹೇಗಾಗಿದೆ ಎಂದರೆ ಯಾರು ಎಲ್ಲಿ ಏಕೆ ಸಂಚಾರ ಮಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ.

    ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ

    ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಯೂ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು ಸೋಂಕು ದೃಢಪಟ್ಟ ಬಳಿಕ ಕನಿಷ್ಠ ಎರಡು ದಿನ ತಡವಾಗುತ್ತಿದೆ. ಇದರಿಂದ ಏನಿಲ್ಲವೆಂದರೂ ಒಬ್ಬ ವ್ಯಕ್ತಿಯಿಂದ ಕಡೇಪಕ್ಷ ಹತ್ತು ಮಂದಿಗಾದರೂ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸೋಂಕು ಅಂಟಿರುತ್ತದೆ. ಸ್ವತಃ ಸೋಂಕಿತನ ಸ್ಥಿತಿಯೂ ಆಸ್ಪತ್ರೆ ಸೇರುವಷ್ಟರಲ್ಲಿ ಗಂಭೀರವಾಗಿರುತ್ತದೆ. ಮರಣ ಪ್ರಮಾಣ ಹೆಚ್ಚಲು ಇದೂ ಕಾರಣ.
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ವಾರ ಹಿಂದೆಯೇ ಭಾನುವಾರದ ಲಾಕ್‌ಡೌನ್ ಪ್ರಸ್ತಾಪ ಮಾಡಿದ್ದರು. ಹಿರಿಯ ಸಚಿವರ ವಿರೋಧದಿಂದ ಅದನ್ನು ಕೈ ಬಿಟ್ಟು, ಈಗ ಪರಿಸ್ಥಿತಿ ಉಲ್ಬಣಿಸಿದ ಬಳಿಕ ಮತ್ತೆ ಮುಂದಿನ ವಾರದಿಂದ ಭಾನುವಾರದ ಲಾಕ್‌ಡೌನ್ ಜಾರಿಗೆ ಮುಂದಾಗಿದ್ದಾರೆ.

    ರಾತ್ರಿ10ರಿಂದ ಬೆಳಗ್ಗೆ 5ರವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಜಾರಿಯಾಗಿಯೇ ಇಲ್ಲ. ಯಾವ್ಯಾವ ಪ್ರದೇಶಗಳಿಂದ ಸೋಂಕು ಹರಡುತ್ತಿದೆ ಎಂಬುದು ಗೊತ್ತಿದ್ದರೂ ‘ಭಯ’ದಿಂದ ಅಧಿಕಾರಿಗಳು ಅಂತಹ ಪ್ರದೇಶಗಳತ್ತ ಸುಳಿಯುತ್ತಲೇ ಇಲ್ಲ. ಕೆಲವರಿಗೆ ಬಾಯಿಮಾತಿನಲ್ಲಿ ಹೇಳಿದವರಿಗೆ ಅರ್ಥವಾಗುವುದಿಲ್ಲ, ದಂಡ ಪ್ರಯೋಗ ಅನಿವಾರ್ಯ. ಪೊಲೀಸ್ ಬಲದೊಂದಿಗೆ ಅಂತಹ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಜಾರಿಗೆ ಪ್ರಯತ್ನ ಮಾಡಿದ್ದರೆ ಪರಿಸ್ಥಿತಿ ಸ್ವಲ್ಪವಾದರೂ ಹಿಡಿತದಲ್ಲಿರುತ್ತಿತ್ತು.

    ಇನ್ನು ಹಾಸಿಗೆ ವಿಚಾರಕ್ಕೆ ಬರೋಣ. ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಬಹುದೆಂದು ಆರಂಭದಲ್ಲಿಯೇ ಎಚ್ಚರಿಕೆ ನೀಡಿದ್ದರು. ತಪಾಸಣೆಗೆ ವೇಗ ನೀಡುತ್ತಿದ್ದಂತೆಯೇ ಹೆಚ್ಚಿನ ಹಾಸಿಗೆ, ವೈದ್ಯ ಸಿಬ್ಬಂದಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಅದನ್ನೂ ಮಾಡಲಿಲ್ಲ. ಸಾವಿರಾರು ಹಾಸಿಗೆ ಸಾಮರ್ಥ್ಯದ ಕೋಚ್‌ಗಳು ರೆಡಿ ಇವೆ, ಅವುಗಳನ್ನು ಒದಗಿಸಲು ರಾಜ್ಯ ಸರಕಾರದಿಂದ ಮನವಿ ಬಂದಿಲ್ಲ ಎಂದು ರೈಲ್ವೆ ಇಲಾಖೆ ಹಲವು ಸಲ ಮಾಧ್ಯಮಗಳ ಮೂಲಕ ಬಹಿರಂಗ ಹೇಳಿಕೆ ನೀಡಿದರೂ ಅದನ್ನು ಬಳಸಿಕೊಳ್ಳುವ ಗೋಜಿಗೇ ಸರಕಾರ ಹೋಗಲಿಲ್ಲ.

    ಈಗ ರೈಲ್ವೆ ಕೋಚ್, ಸಮುದಾಯ ಭವನ, ಕ್ರೀಡಾಂಗಣ, ಹಾಸ್ಟೆಲ್‌ಗಳ ಪಟ್ಟಿ ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿ ಇರುವವರನ್ನೂ ಏಕಾಏಕಿ ತೆರವುಗೊಳಿಸಲಾಗುತ್ತಿದೆ. ಇದನ್ನೆಲ್ಲ ನೋಡಿದರೆ ರಾಜ್ಯ ಸರಕಾರ, ಬಿಬಿಎಂಪಿಗಳೇ ನಗರದ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿವೆ ಎಂಬ ಭಾವನೆ ಮೂಡಿದರೆ ತಪ್ಪಲ್ಲ.

    ಹಳ್ಳಿಗಳಲ್ಲೂ ಮಹಾಸ್ಫೋಟ?
    ಬೆಂಗಳೂರು ಹೊರತುಪಡಿಸಿದರೆ ಉಳಿದ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳೇ ಎಷ್ಟೋ ವಾಸಿ. ವಲಸಿಗರ ಸಮಸ್ಯೆ ಇದ್ದರೂ ಜಿಲ್ಲಾಡಳಿತಗಳು ಸಮರ್ಥವಾಗಿ ನಿಭಾಯಿಸುತ್ತಿವೆ. ಹಳ್ಳಿಗಳಲ್ಲಿ ಜನರೇ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳುತ್ತಿದ್ದಾರೆ. ಊರಿಗೆ ಯಾರೊಬ್ಬರೂ ಹೊರಗಿನಿಂದ, ಸ್ವತಃ ಮಹಾನಗರಗಳಲ್ಲಿ ಇರುವ ತಮ್ಮೂರಿನ ಜನ ಕೂಡ ಕಾಲಿಡದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಉತ್ತರ ಕನ್ನಡದಂತಹ ಜಿಲ್ಲೆಗಳಲ್ಲಿ ಬೆಂಗಳೂರಿನಿಂದ ಬರುವ ಬಸ್‌ಗಳು ನೇರವಾಗಿ ತಾಲೂಕು ಆಸ್ಪತ್ರೆಗೆ ತೆರಳಿ, ಪ್ರತಿಯೊಬ್ಬರ ಥರ್ಮಲ್ ತಪಾಸಣೆ ಕಡ್ಡಾಯ ಎಂಬ ನಿಯಮ ರೂಪಿಸಿಕೊಂಡಿವೆ. ವಿಶೇಷವಾಗಿ ಗ್ರಾಮ ಪಂಚಾಯಿತಿಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ.

    ಕಾಯಂ ನಿವಾಸಿ ಅಲ್ಲದ ಯಾರೇ ಊರಿಗೆ ಯಾರಾದರೂ ತಕ್ಷಣದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಪಂಚಾಯಿತಿಯವರಿಗೆ ಮಾಹಿತಿ ರವಾನೆಯಾಗುವ ವ್ಯವಸ್ಥೆ ಇದೆ. ಗ್ರಾಮ ಪಂಚಾಯಿತಿ ಸದಸ್ಯರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಅಲ್ಲಿಯೂ ಎಡವಟ್ಟು ಮಾಡಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿಗಳ ಅವಧಿ ಮುಗಿದಿದೆ ಎಂಬ ನೆಪ ಹೇಳಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.

    ಸುಗ್ರೀವಾಜ್ಞೆ ಮೂಲಕ ಆರು ತಿಂಗಳು ಪಂಚಾಯಿತಿ ಅವಧಿ ವಿಸ್ತರಿಸಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಈಗ ಆಡಳಿತಾಧಿಕಾರಿಗಳ ಸುಪರ್ದಿಗೆ ಒಪ್ಪಿಸಿ ಮತ್ತೊಂದು ಮಹಾಸ್ಫೋಟಕ್ಕೆ ಮುನ್ನಡಿ ಬರೆದಂತಿದೆ ಸರಕಾರದ ನಡೆ.

    error: Content is protected !!