26.1 C
Karnataka
Thursday, May 21, 2026
    Home Blog Page 156

    ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ…

    ಜಯಶ್ರೀ ಅಬ್ಬಿಗೇರಿ

    ಮೊನ್ನೆ ಸಂಜೆ ಸಂಜೆ ಬಾಲ್ಯದ ಗೆಳತಿ ರಾಜಿಯ ಮನೆಗೆ ಹೋಗಿದ್ದೆ. ಮನೆಯಲ್ಲಿ ಮಕ್ಕಳ ತುಂಟಾಟ ಚೆಲ್ಲಾಟಗಳ ಸದ್ದು ಇರಲಿಲ್ಲ. ಅವಳ ಪತಿ ಉರಿಯುತ್ತಿದ್ದ ಟಿವಿ ಮುಂದೆ ಕುಳಿತು ಲೈವ್ ಕ್ರಿಕೆಟ್‌ನಲ್ಲಿ ಕಣ್ಣು ನೆಟ್ಟುಕೊಂಡು ಸೋಫಾದ ಮೇಲೆ ಕಾಲು ಚಾಚಿ ಕೂತಿದ್ದರು. ರಾಜಿ ನನ್ನ ನೋಡಿ ಬಾಯಗಲಿಸಿ ತನ್ನ ಖಾಸಗಿ ಕೋಣೆಗೆ ಕರೆದೊಯ್ದಳು. ನಾನೇ ಅವಳನ್ನು ಮಾತಿಗೆಳೆಯುತ್ತ ಎಲ್ಲಿ ನಿನ್ನ ಮಕ್ಕಳ ಸದ್ದೇ ಇಲ್ಲ ಎಂದೆ. ಅವರಿಬ್ಬರೂ ತಮ್ಮ ಕೋಣೆಗಳಲ್ಲಿ ಮೊಬೈಲ್ ,ಲ್ಯಾಪ್ ಟಾಪಿನಲ್ಲಿ ಬಿಜಿಯಾಗಿದ್ದಾರೆ. ಎಂದಳು.

    ಕ್ಷಣಾರ್ಧದಲ್ಲಿ ನನ್ನ ಮೆದುಳು ಮೂವತ್ತು ವರ್ಷ ಹಿಂದೆ ಓಡಿತು. ಭಲೆ ಛೀನ್ ಲೋ ಮುಝಸೆ ಮೇರೀ ಜವಾನಿ
    ಮಗರ್ ಮುಝಕೋ ಲೌಟಾದೋ
    ವೋ ಬಚಪನ್ ಕೀ ಯಾದೇ
    ಹಾಡು ನೆನಪಿಗೆ ಬಂದು ಬಾಲ್ಯದ ಸವಿ ನೆನಪುಗಳು ಸುರಳಿ ಬಿಚ್ಚಿಕೊಂಡಿತು.

    ಅದೊಂದು ದೇವಲೋಕದ ಅನುಭವದಂತಿತ್ತು. ಬಾಲ್ಯದಲ್ಲಿಯ ಆಟೋಟಗಳಿಗೆ ಬರವೇ ಇರಲಿಲ್ಲ. ಅದೆಷ್ಟು ಕುಣಿದು ಕುಪ್ಪಳಿಸಿದರೂ ಆಟದ ಹಸಿವು ಹಿಂಗುತ್ತಿರಲಿಲ್ಲ. ಮತ್ತೆ ಬೇರೆ ಬೇರೆ ಆಟವಾಡಬೇಕೆಂಬ ತವಕ ಕಾಡುತ್ತಿತ್ತು. ತಂದೆ ತಾಯಿಯರಾಗಲಿ ಮನೆ ಹಿರಿಯರಾಗಲಿ ಅಭ್ಯಾಸದ ಒತ್ತಡದ ಮಾತುಗಳನ್ನು ತಪ್ಪಿಯೂ ಆಡುತ್ತಿರಲಿಲ್ಲ. ಕೇವಲ ಪಾಟಿ ಪೇಣೆ ಬಹಳವೆಂದರೆ ಒಂದೆರಡು ಪುಸ್ತಕವಿರುವ ಪಾಟೀ ಚೀಲವನ್ನು ಶಾಲೆಯಿಂದ ಬಂದ ಕೂಡಲೇ ಒಂದು ಮೂಲೆಗೆಸೆದು ಕೈ ಕಾಲು ತೊಳೆದು ಹೊಟ್ಟೆಗೆ ಒಂದಿಷ್ಟು ಇಳಿಸಿ ಓಣಿಗಿಳಿದರೆ ನಮ್ಮದೇ ಸಾಮ್ರಾಜ್ಯ.

    ಗಂಡು ಹುಡುಗರು ಗುಂಡ ಗಜಗವೆಂದು ಬಯಲಲ್ಲಿ ಕೇಕೆ ಹಾಕುತ್ತಿದ್ದರೆ ನಾವು ದೇವರ ಗುಡಿಯ ಕಟ್ಟೆಯ ಮೇಲೆ ಕೈಯಲ್ಲಿ ಆಲಿಕಲ್ಲುಗಳನ್ನು ಹಿಡಿದು ಅಂಕಿ ಎಣಿಸುತ್ತ ಮೇಲೆ ತೂರಿ ಹಿಡಿಯುವದರಲ್ಲಿ ಅದೇನೋ ಸಂತಸ ಪಡುತ್ತಿದ್ದೆವು. ಹಿರಿಯರು ನೋಡಿ ಆಲಿಕಲ್ಲುಗಳನ್ನಾಡಿದರೆ ಮಳೆ ಬರುವುದಿಲ್ಲವೆಂದು ಬೈದಾಗ ಕಟ್ಟೆಯಿಂದ ಜಾಗ ಖಾಲಿ ಮಾಡಿ ಅಂಗಳದಲ್ಲಿ ಚೌಕಗಳನ್ನು ಹಾಕಿ ಕುಂಟೆಬಿಲ್ಲೆಗೆ ತಯಾರಾಗುತ್ತಿದ್ದೆವು. ಡಾಂಬರಿನ ಮುಖವನ್ನೇ ನೋಡದ ರಸ್ತೆಗಳಲ್ಲಿ ಒಬ್ಬರನ್ನೊಬ್ಬರು ಮುಟ್ಟುವ ಆಟದಲ್ಲಿ ಕಾಲಿಗೆ ಮುಳ್ಳು ಕಲ್ಲು ಚುಚ್ಚಿಕೊಂಡು ಉಟ್ಟ ಬಟ್ಟೆಗಳಿಗೆ ಮಣ್ಣು ಮೆತ್ತಿಕೊಂಡು ಬಿದ್ದು ಮೊಣಕಾಲಿಗೆ ನೋವು ಮಾಡಿಕೊಂಡರೂ ಮತ್ತೆ ಏನೂ ಆಗದವರಂತೆ ಆಟ ಮುಂದುವರೆಸುವಲ್ಲಿ ಅದೆನೋ ಒಂಥರ ಖುಷಿ ಇರುತ್ತಿತ್ತು.

    ಇದೆಲ್ಲ ಸಾಕಾಗಿಲ್ಲವೆಂಬಂತೆ ರವಿವಾರ ಊರ ಹೊರಗಿನ ಬೇವಿನ ಮಾವಿನ ಮರಕ್ಕೆ ಅಪ್ಪ ವ್ಯವಸಾಯಕ್ಕೆ ತಂದ ಹಗ್ಗ ಮತ್ತು ಅವ್ವನ ಹಳೆಯ ಸೀರೆಯನ್ನು ಜೋಡಿಸಿ ಜೋಕಾಲಿ ಕಟ್ಟಿ ಜೀಕುತ್ತ ಚೀರುತ್ತ ಸಂಭ್ರಮಿಸುತ್ತಿದ್ದೆವು. ಊರಿಗಂಟಿಕೊಂಡಿರುವ ತೋಟದಲ್ಲಿ ಮಂಗಗಳಿಗಿಂತ ಹೆಚ್ಚು ನಮ್ಮದೇ ಹಾವಳಿ ಇರುತ್ತಿತ್ತು. ತರಹೇವಾರಿ ಹೂಗಳನ್ನು ಕಿತ್ತು ಒಬ್ಬರಿಗೊಬ್ಬರು ಮುಡಿಗೆ ಮುಡಿಸಿ ಒಂದಿಷ್ಟು ಮನೆಂiಲ್ಲಿಯ ದೇವರುಗಳಿಗೆಂದು ಕಿಸೆ ತುಂಬಿಸಿಕೊಳ್ಳುತ್ತಿದ್ದೆವು.

    ತಾಜಾ ತಾಜಾ ಹಣ್ಣುಗಳನ್ನು ಎಗ್ಗಿಲ್ಲದೇ ತಿಂದು ತೇಗುವದು ರೂಢಿಯಾಗಿಬಿಟ್ಟಿತ್ತು. ತೋಟ ಕಾಯುವವನ ಕಣ್ಣಿಗೆ ಬಿದ್ದರೆ ಸತ್ತೆನೋ ಬಿದ್ದೆನೋ ಎನ್ನುತ್ತ ಓಡಿ ಬಿದ್ದು ಗಾಯ ಮಾಡಿಕೊಂಡ ಕಲೆಗಳು ಇನ್ನೂ ಹಣೆ ಮೊಳಕೈ ಮೊಣಕಾಲುಗಳ ಮೇಲೆ ತಮ್ಮ ಗುರುತನ್ನು ಉಳಿಸಿ ಮೇಲಿಂದ ಮೇಲೆ ಆ ನೆನಪನ್ನು ಮರುಕಳಿಸುತ್ತವೆ.
    ಈಗಿನ ಮಕ್ಕಳ ಯುನಿಫಾರ್ಮ್ ಕೊಳೆಯಾಗುವುದೇ ಕಮ್ಮಿ. ಇನ್ನು ಗಾಯದ ಕಲೆಗಳಂತೂ ದೂರವೇ ಉಳಿಯಿತು. ಒಳಾಂಗಣ ಆಟಕ್ಕೆ ಒಗ್ಗಿಕೊಂಡಿರುವ ಅವರ ರವಿವಾರ ತಿಂಡಿ ತೀರ್ಥವೆಲ್ಲ ಟಿವಿ ಮುಂದೆಯೇ ಆಗಬೇಕು. ಟಿವಿ ಮುಂದಿರುವಾಗ ಯಾರು ಕರೆದರೂ ಕೇಳುವುದೇ ಇಲ್ಲ. ಕೇಳಿದರೆ ಮೈಯಲ್ಲಿ ವೀರಭದ್ರ ಬಂದವರಂತೆ ಆಡುತ್ತಾರೆ. ಈಗಿನ ತರ ವಿವಿಧ ತರಹದ ಆಟಿಕೆಗಳು ಆಗ ಇರುತ್ತಿರಲಿಲ್ಲ. ಮಣ್ಣು ಕಲ್ಲುಗಳೊಂದಿಗೆ ಆಟ. ನಿಸರ್ಗದೊಂದಿಗಿನ ಒಡನಾಟವೇ ಹೆಚ್ಚು. ಅಣ್ಣ ತಮ್ಮಂದಿರೆಲ್ಲ ತುಕ್ಕು ಹಿಡಿದ ಹಳೆಯ ಕಬ್ಬಿಣದ ಗಾಲಿಗಳನ್ನು ಸೈಕಲ್ ಚಕ್ರಗಳನ್ನು ನಾ ಮುಂದೆ ತಾ ಮುಂದೆ ಎನ್ನುತ್ತ ಊರ ಬೀದಿಗಳಲೆಲ್ಲ ಸುತ್ತುತ್ತಿದ್ದರು. ಸಂಜೆ ದೀಪ ಹಚ್ಚಿದ ಕೆಲ ತಾಸಿನಲ್ಲಿಯೇ ನಿದ್ರಾದೇವಿ ನಮ್ಮನ್ನು ಆವರಿಸಿ ಬಿಡುತ್ತಿದ್ದಳು.

    ಮುಂಜಾನೆ ಕೋಳಿ ಕೂಗುವ ಮುನ್ನವೇ ಅಜ್ಜಿಯಂದಿರೆಲ್ಲ ಎದ್ದು ಮಿನಕ್ ಎನ್ನುವ ದೀಪದಲ್ಲಿ ಮನೆ ಶುಚಿಗೊಳಿಸುವ ಭರದಲ್ಲಿರುವಾಗ ಏನೋ ಘನಂದಾರಿ ಕೆಲಸವಿರುವವರಂತೆ ಅವ್ವನ ಜೊತೆಗೆ ಎದ್ದು ಒಲೆಯಲ್ಲಿ ಕಟ್ಟಿಗೆಗಳನ್ನು ತುರುಕುತ್ತ ಮನೆಯಲೆಲ್ಲ ಹೊಗೆಯಾಡುವಂತೆ ಮಾಡಿ ಬೈಸಿಕೊಂಡಾಗ ಕೈಯಲ್ಲಿ ಚೊಂಬು ಹಿಡಿದು ಮುಂಜಾನೆ ವಾಯು ವಿಹಾರದೊಂದಿಗೆ ಬಯಲು ಶೌಚದಲ್ಲಿ ಗೆಳೆತಿಯರೆಲ್ಲ ಹಿಂದಿನ ದಿನ ಆಡಿದ ಆಟದ ಖುಷಿ ಹಂಚಿಕೊಳ್ಳುತ್ತ ಅವತ್ತು ಯಾರ ತೋಟ ಗದ್ದೆಗಳಿಗೆ ಲಗ್ಗೆ ಹಾಕುವದು ಯಾವ ಯಾವ ಆಟ ಆಡುವದರ ಕುರಿತು ಯೋಜನೆಗಳು ಅಲ್ಲಿಯೇ ನಿರ್ಧರಿಸಲ್ಪಡುತ್ತಿದ್ದವು. ಮನೆಗೆ ಮರಳಿ ಜಳಕದ ಶಾಸ್ತ್ರ ಮುಗಿಸಿ ಬಿಸಿ ಬಿಸಿ ರೊಟ್ಟಿ ಇಲ್ಲವೆ ಆಗ ತಾನೆ ಒಲೆಯಿಂದ ಇಳಿಸಿದ ಉಪ್ಪಿಟ್ಟನ್ನು ಊಫ್ ಊಫ್ ಎಂದು ಊದುತ್ತ ಗಂಟಲಿಗಳಿಸಿ ಪಾಟಿ ಚೀಲ ಹೆಗಲಿಗೇರಿಸಿಕೊಂಡು ಹೊರಟಾಗಲೂ ಅಭ್ಯಾಸದ ಅಥವಾ ಹೋಂ ವರ್ಕ್ ಕುರಿತ ಮಾತುಗಳು ತಪ್ಪಿಯೂ ಇರಲಿಲ್ಲ.


    ದಾರಿಯಲ್ಲಿ ಸಿಗುವ ಬಳಿಸಿ ಬೀಸಾಡಿದ ಹಾಳೆ ಚಿಂದಿಗಳನ್ನು ಒಳ್ಳೆ ಮುತ್ತು ರತ್ನಗಳನ್ನು ಶೇಖರಿಸುವಂತೆ ಸಂಗ್ರಹಿಸುತ್ತಿದ್ದೆವು. ಬಣ್ಣದ ಬಣ್ಣದ ಬುಗುರಿಗಳನ್ನು ಗುಯ್ಯೆನಿಸುತಿದ್ದ ಹುಡುಗರ ದಂಡು ರಸ್ತೆಯಲ್ಲಿ ಸಿಕ್ಕಾಗ ಬಾಯಿ ತೆಗೆದು ನೋಡುತ್ತ ನಮ್ಮ ಬಣ್ಣದ ಕೋಲುಗಳನ್ನು ನೆನಪಿಸಿಕೊಂಡು ಅಂದು ಸಂಜೆ ಕೋಲಾಟವನ್ನೇ ಆಡುವದೆಂದು ತೀರ್ಮಾನಿಸಿ ಬೆಳಿಗ್ಗೆ ಬೆಳಿಗ್ಗೆನೆ ಹುಳಿಯಾದ ಹಸಿ ಹುಣಸೆಕಾಯಿ ಮಾವಿನ ಕಾಯಿ ನೆಲ್ಲಿಕಾಯಿ ಮರಗಳನ್ನು ಗಂಡು ಬೀರಿಯರಂತೆ ಹತ್ತಿ ಹರಿದುಕೊಂಡು ಕದ್ದು ಒಳ್ಳೆ ಚಾಟ್ಸ್‌ಗಳನ್ನು ತಿಂದಂತೆ ಕುರುಂ ಕುರುಂ ತಿನ್ನುತ್ತ ಒಬ್ಬರ ಲಂಗದ ಚುಂಗು ಒಬ್ಬರು ಹಿಡಿದು ಮರದ ಸುತ್ತ ಸುತ್ತು ಹಾಕುತ್ತ ಚುಕು ಬುಕು ರೈಲಿನಾಟವಾಡುವುದರಲ್ಲಿ ಮಗ್ನರಾಗಿದ್ದ ನಮ್ಮನ್ನು ಕಂಡು ಹೊಲಕ್ಕೆ ಹೋಗುವವರು ಬೈದಾಗ ಶಾಲೆ ಕಡೆ ಮುಖ ಮಾಡುತ್ತಿದ್ದೆವು.

    ಈಗ ಸ್ಕೂಲ್ ಬಸ್ ಆಟೋ ಮನೆಗೆ ಬರುತ್ತವೆ ಹೀಗಾಗಿ ಇಂಥ ಯಾವುದೇ ಪ್ರಸಂಗಗಳಿಗೆ ಆಸ್ಪದವೇ ಇಲ್ಲ. ಅಲ್ಲದೇ ಮಕ್ಕಳಿಗೆ ಸಮಯವೂ ಇಲ್ಲ. ಪೆನ್ಸಿಲ್ಲ(ಪೇಣೆ)ನ್ನು ಉಗುಳು ಹಚ್ಚಿ ಪಾಟಿ ಮೆಲೆ ಬರೆಯೋದು ಅದನ್ನು ಚೂಪು ಮಾಡಲು ನೆಲದ ಪಾಟಿಕಲ್ಲಿಗೆ ತಿಕ್ಕುವದು ಎಲ್ಲರಿಗೂ ಸಾಮಾನ್ಯ ಕಾಯಿಲೆ. ಈಗೆಲ್ಲ ಪೆನ್‌ಗಳದ್ದೆ ರಾಜ್ಯಭಾರ. ಹೀಗಾಗಿ ಮಕ್ಕಳ ಉಗುಳು ಉಪಯೋಗವಾಗುತ್ತಿಲ್ಲ. ಇಂಥ ರಸಪ್ರಸಂಗಗಳಿಗೆ ಜಾಗವೇ ಇಲ್ಲ. ಮಳೆಗಾಲದಲ್ಲಿ ಹರಿಯುವ ನೀರಲ್ಲಿ ಕಾಗದದ ದೋಣಿ ಬಿಡುವದು.ಅಡುಗೆ ಆಟ ಮದುವೆ ಆಟಗಳಲ್ಲಿ ನಾವು ಪಟ್ಟ ಖುಷಿಯಂತೂ ಇಂದಿಗೂ ಹಸಿರಾಗಿದೆ.
    ಕೊಟ್ಟಿಗೆಯಲ್ಲಿ ಕಟ್ಟಿರುತ್ತಿದ್ದ ಆಕಳು ಎತ್ತುಗಳಿಗೆ ಗೌರಿ ಬಸವ ಎಂದು ಹೆಸರಿಟ್ಟು ಚೆಂಗನೆ ಜಿಗಿದಾಡುವ ಕರುಗಳೊಂದಿಗೆ ಚಿನ್ನಾಟವಾಡುವುದೆಂದರೆ ಎಲ್ಲಿಲ್ಲದ ಖುಷಿ ಸಮಯ ಸಮಯಕ್ಕೆ ಮೇವು ಉಣಿಸುತ್ತ ಕಾಳಜಿ ಪ್ರೀತಿ ತೋರುತ್ತಿದ್ದೆವು. ಮನೆಯ ಮುಂದೆ ನಿಂತ ನಾಯಿ ನಮ್ಮ ವಾಸನೆ ಹಿಡಿದು ಹೆಗಲಿನ ಮಟ್ಟಕ್ಕೆ ಜಿಗಿದು ತನ್ನ ಪ್ರೀತಿ ತೋರುತ್ತಿದ್ದ ರೀತಿ. ಹಗಲು ಹನ್ನೆರಡು ತಾಸು ಕಣ್ಣುಮುಚ್ಚಿ ನಿದ್ರೆ ಮಾಡುತ್ತಿದ್ದ ಕಳ್ಳ ಬೆಕ್ಕು ನಮ್ಮ ಗದ್ದಲಕ್ಕೆ ಹಿಂದೆ ಹಿಂದೆ ಮಿಯಾಂವ್ ಮಿಯಾಂವ್ ಎಂದು ಕಾಲು ಕಾಲಿಗೆ ಸಿಕ್ಕುತ್ತ ಬೈಸಿಕೊಳ್ಳುತ್ತಿತ್ತು. ಕೋಳಿ, ಹುಂಜ, ಆಡು, ಮೇಕೆ, ಕುರಿ, ಕತ್ತೆ ,ಕುದುರೆ ಮುಂತಾದವು ನಮ್ಮ ಆಟಿಕೆಯ ಸಾಮಾನುಗಳಾಗಿದ್ದವು. ಇಂದಿನ ಮಕ್ಕಳಿಗೆ ಚಾನೆಲ್‌ಗಳಲ್ಲಿ ಮಾತ್ರ ಎಲ್ಲ ಪ್ರಾಣಿಗಳ ಮುಖ ಕಾಣೋದು.

    ಇತ್ತೀಚಿಗೆ ನಮ್ಮ ಜೀವನದಲ್ಲಿ ಬರೀ ಗಡಿಬಿಡಿಯ ಧಾವಂತ ತುಂಬಿಕೊಂಡಿದೆ. ಹೀಗಾಗಿ ನಮ್ಮ ಮಕ್ಕಳಿಗೆಲ್ಲ ಇಂಥ ಬಂಗಾರದಂಥ ಬಾಲ್ಯ ಸಿಗುತ್ತಿಲ್ಲ. ಅವರ ಬಾಲ್ಯವೆಲ್ಲ ಟಿವಿ ಕಂಪ್ಯೂಟರ್, ಮೊಬೈಲ್ ವಿಡಿಯೋ ಗೇಮ್‌ಗಳಲ್ಲಿ ಕಳೆದು ಹೋಗುತ್ತಿದೆ. ಹೊರಾಂಗಣ ಆಟದ ಖುಷಿಯಿಂದ ವಂಚಿತರಾಗುತ್ತಿದ್ದಾರಲ್ಲದೇ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

    ಮನೆಯಲ್ಲಿ ಒಂದೊಂದೇ ಮಗು ಇರುವದರಿಂದ ಸೇರಿ ನಲಿಯುವದನ್ನು ಕೂಡಿ ಬಾಳುವ, ಒಗ್ಗಟ್ಟಿನ ಪಾಠವನ್ನು ಪಡೆಯಲಾಗುತ್ತಿಲ್ಲ. ಬರಿ ವಿದ್ಯಾಭ್ಯಾಸ ಮತ್ತು ಸ್ಪರ್ಧೆಗಳ ಹಾವಳಿಯ ಬಗ್ಗೆ ಹೆಚ್ಚು ಗಮನ ನೀಡುತ್ತಿರುವದರಿಂದ ಸೂಟಿಗಳಲ್ಲೂ ಟ್ಯೂಷನ್ ಭರಾಟೆಯಿಂದ ಮಾನವೀಯ ಸಂಬಂಧ ಹಾಗೂ ಮೌಲ್ಯಗ ಅರಿವು ಮೂಡುತ್ತಿಲ್ಲ. ನಿಸರ್ಗ ಸೌಂದರ್ಯವನ್ನು ಆಸ್ವಾದಿಸಲು ಪುರುಸೊತ್ತಿಲ್ಲ ಎಂಬ ಕಟುವಾದ ವಾಸ್ತವ ಚಿತ್ರಣ ಕಣ್ಣ ಮುಂದೆ ಸುಳಿದಾಗ ಮನಸ್ಸು ಭಾರವಾಗುತ್ತದೆ.

    ಬದಲಾದ ಕಾಲಕ್ಕೆ ಹೊಂದಿಕೊಳ್ಳುವದು ಅನಿವಾರ್ಯವಾದರೂ ಬಾಲ್ಯದ ಸುಂದರ ಘಳಿಗೆಗಳು ಮರಳಿ ಬಾರವು. ಹೀಗಾಗಿ ಅವರ ಬಾಲ್ಯವನ್ನು ಯಾಂತ್ರಿಕ ಜಗತ್ತಿನಲ್ಲಿ ಮುದುಡಲು ಬಿಡದೇ ಹೂವಾಗಿ ಅರಳಿಸಲು ನಾವೆಲ್ಲ ಅಲ್ಪವಾದರೂ ಪುರುಸೊತ್ತು ಮಾಡಿಕೊಂಡು ಸುಂದರ ಬಾಲ್ಯಕ್ಕೆ ಕಾರಣವಾಗುವ ಅಂಶಗಳನ್ನು ಕಲ್ಪಿಸುವ ಅಗತ್ಯತೆಯಿದೆ. ನೋಡಿದ್ದನ್ನು, ಕೈಗೆ ಸಿಕ್ಕಿದ್ದನ್ನು ಹಿಡಿದುಕೊಂಡು ಆಟವಾಡುವ ವಯಸ್ಸಿನ ಮಕ್ಕಳಿಗೆಲ್ಲ ಪಿಳಿ ಪಿಳಿ ಕಣ್ಣು ಬಿಟ್ಟು ಕೌತುಕದಿಂದ ಜಗವ ನೋಡಿ ಆನಂದಿಸುವ ವಾತಾವರಣ ಕಲ್ಪಿಸಿ ಸುಂದರ ಬಾಲ್ಯ ಚಿಗುರೊಡೆಯಲು ಇಂಬು ಕೊಡೋಣ. ಬಾಲ್ಯದಂಗಳದಲ್ಲಿ ತುಂಟಾಟ ಚೆಲ್ಲಾಟ ಹುಡುಗಾಟದ ಮೆರಗಿನ ಮೆರವಣಿಗೆ ನಡೆಸಲು ಮಕ್ಕಳೊಂದಿಗೆ ಕೈ ಜೋಡಿಸೋಣ.
    (ಚಿತ್ರ: ಕಿರಣ ಆರ್)

    ಟುಟು-22- ಎಂಬ ರಹಸ್ಯ ತುಕುಡಿ

    ಕೆಲವು ದಿನಗಳ ಹಿಂದೆಯಷ್ಟೇ ಭಾರತವು ಚೀನಾ ಹಿಮಾಲಯ ಪ್ರದೇಶದಲ್ಲಿರುವ ಗಡಿಯ ಎತ್ತರದ ಪ್ರದೇಶವನ್ನು ಮರು ಸ್ವಾಧೀನ ಮಾಡಿಕೊಂಡು, ಕೆಂಪು ಸೇನೆಯ ಚಲನವಲನದ ಮೇಲೆ ನಿರಂತರ ನಿಗಾ ಇಡುವಲ್ಲಿ ಯಶಸ್ವಿಯಾಗಿದೆ. ಆದರೆ ಅದಕ್ಕಾಗಿ ಒಬ್ಬ ಯೋಧನನ್ನು ಕಳೆದುಕೊಂಡಿದೆ. ಆ ಯೋಧ ಟು ಟು -22- ರೆಜಿಮೆಂಟ್ ಎಂದು ಕರೆಯಲಾಗುವ Special Frontier Force (SFF) ಗೆ ಸೇರಿದವರು.

    ಆರಂಭದಲ್ಲಿ ಟು ಟು -22 – ಎಂದು ಕರೆಯಲಾಗುತ್ತಿದ್ದ ಈ ತುಕುಡಿಯನ್ನು ಈಗ Special Frontier Force (SFF) ಎಂದು ಕರೆಯಲಾಗುತ್ತಿದೆ. (ವಿಕಾಸ್ ಬೆಟಾಲಿಯನ್ ಎಂದೂ ಕರೆಯಲಾಗುತ್ತದೆ) ಈ ರೆಜಿಮೆಂಟಿನ ಮೊದಲ ಇನ್ ಸ್ಪೆಕ್ಟರ್ ಜನರಲ್ ಸುಜನ್ ಸಿಂಗ್. ಅವರು, ಎರಡನೇ ವಿಶ್ವ ಯುದ್ಧದ ಸಮಯದಲ್ಲಿ 22ನೇ ಮೌಂಟೇನ್ ರೆಜಿಮೆಂಟಿನ ಮುಖ್ಯಸ್ಥರಾಗಿದ್ದರು. ಹಾಗಾಗಿ ಈ ರೆಜಿಮೆಂಟನ್ನು 22 ಎಂದು ಕರೆಯಲಾಯಿತು. ಮುಂದೆ ಇದು ಟು ಟು -22- ಎಂದು ಹೆಸರಾಯಿತು.

    1962ರ ಯುದ್ಧದಲ್ಲಿ ಭಾರತ ಚೀನಾ ಎದುರು ಹೀನಾಯ ಸೋಲು ಕಂಡಿತ್ತು. ಆಗ ತೀರಾ ಆಘಾತಕ್ಕೆ ಒಳಗಾದ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು, ಶಾಂತಿ ಮಂತ್ರದ ಜತೆಗೆ ಸೇನಾ ಸನ್ನದ್ಧತೆ ಅನಿವಾರ್ಯ ಎಂದು ಮನಗಂಡರು. ಇದರ ಪರಿಣಾಮವಾಗಿಯೇ ಅಸ್ತಿತ್ವಕ್ಕೆ ಬಂದಿದ್ದು ಈ ರೆಜಿಮೆಂಟ್. ಚೀನಾ ಗಡಿಯಲ್ಲಿ ಚೀನಿ ಭಾಷೆಯನ್ನು ಮತ್ತು ಅಲ್ಲಿನ ಚಲನವಲನಗಳನ್ನು ಅರ್ಥೈಸಿಕೊಂಡು, ಆ ರಾಷ್ಟ್ರದ ಯುದ್ಧ ತಂತ್ರಕ್ಕೆ ಪ್ರತಿಯಾಗಿ ಅಂದರೆ ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ಹೋರಾಟ ನಡೆಸುವ ಯೋಧರ ಪಡೆಯು ಸಿದ್ಧವಾಗಬೇಕಾಗಿತ್ತು. ಇದರ ಪರಿಣಾಮವೇ ಟುಟು -22- ರೆಜಿಮೆಂಟ್.

    ಸಿಐಎ ತರಬೇತಿ

    1962ರಲ್ಲಿ ನಡೆದ ಯುದ್ಧದ ಬಳಿಕ ಆಗ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥರಾಗಿದ್ದ ಭೋಲಾನಾಥ್ ಮಲ್ಲಿಕ್, ಭವಿಷ್ಯದಲ್ಲಿ ಚೀನಿಯರ ದುಸ್ಸಾಹಸವನ್ನು ಮಣಿಸಲು ಇಂತಹ ವಿಶೇಷ ಪರಿಣತಿ ಪಡೆದ ಯೋಧರ ಪಡೆ ಬೇಕು ಎಂದು ಪ್ರತಿಪಾದಿಸಿದರು. ಅಳೆದು-ಸುರಿದು ಪ್ರಧಾನಿ ನೆಹರು ಒಪ್ಪಿಗೆ ಸೂಚಿಸಿದರು. ಚೀನಾದ ಗಡಿ ಭಾಗವನ್ನು ಒಳನುಗ್ಗುವ ಸಾಮರ್ಥ್ಯ ಹೊಂದಿರುವ ಯೋಧರ ಅಗತ್ಯತೆ ಕೊನೆಗೂ ಅವರಿಗೆ ಮನವರಿಕೆ ಆಯಿತು ಎಂದು ಕಾಣಿಸುತ್ತದೆ. ಹೀಗಾಗಿ ಟುಟು ರೆಜಿಮೆಂಟ್ ಸಿದ್ಧವಾಯಿತು. ಆಗ ಅದರಲ್ಲಿ ಇದ್ದವರು ಟಿಬೆಟ್ ನಿರಾಶ್ರಿತರು. ಅವರಿಗೆ ಅಮೆರಿಕ ಸಿಐಎ ಗೆರಿಲ್ಲಾ ಯುದ್ಧ ತರಬೇತಿ ನೀಡಿತು ಎಂದು ಹೇಳಲಾಗುತ್ತಿದೆ. ಎಂ-1, ಎಂ-2, ಎಂ-3ನಂತಹ ಆಧುನಿಕ ಬಂದೂಕುಗಳನ್ನು ಒದಗಿಸುವುದರ ಜತೆಗೆ ಕರಾರುವಕ್ ಪ್ರಯೋಗದ ಕುರಿತು ಕೂಡ ತರಬೇತಿ ನೀಡಲಾಗಿತ್ತು ಎನ್ನಲಾಗಿದೆ. ಕಡಿದಾದ ಬೆಟ್ಟ ಹತ್ತುವುದು, ಪ್ಯಾರಾ ಲೀಪಿಂಗ್, ಹಿಮಪಾತದಂತಹ ಕಠಿಣ ಸನ್ನಿವೇಶಗಳಲ್ಲಿ ಬದುಕುಳಿಯುವ ಮಾರ್ಗದ ಬಗ್ಗೆ ಇವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

    ತನ್ನದೇ ಆದ ತರಬೇತಿ ವ್ಯವಸ್ಥೆ

    ಈ ರೆಜಿಮೆಂಟಿನ ಯೋಧರ ನೇಮಕಾತಿಯೂ ಪರಮ ರಹಸ್ಯವಾಗಿಯೇ ಉಳಿದಿದೆ. ಸೇನಾ ಪಡೆಯ ಮೂರು ವಿಭಾಗದ ಅಧೀನಕ್ಕೂ ಇದು ಬರುವುದಿಲ್ಲ.ಇದು ತನ್ನದೇ ಆದ ತರಬೇತಿ ವ್ಯವಸ್ಥೆಯನ್ನು ಹೊಂದಿದೆ. ಬದಲಾಗಿ ಭಾರತದ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಆಂಡ್ ಅನಲೈಸಿಸ್ ವಿಂಗ್ (ಆರ್ ಎಡಬ್ಲ್ಯೂ) ಮೂಲಕ ಇದು ನೇರವಾಗಿ ಪ್ರಧಾನ ಮಂತ್ರಿ ಕಚೇರಿಗೆ ರಿಪೋರ್ಟ್ ಮಾಡಿಕೊಳ್ಳುತ್ತದೆ.

    ಒಂದು ನಿದರ್ಶನ

    2018ರಲ್ಲಿ ಯುರೋಪ್ ದೇಶದ ಖ್ಯಾತ ಗಾಯಕರಾದ ಎಸ್ಟೋನಿಯಾ ಯಾನಾ ಕಾಸ್ಕ್ ಎಂಬವರು ತಮ್ಮ ಹೊಸ ಆಲ್ಬಂಗೆ ಗಡಿ ಭಾಗವಾದ ಉತ್ತರಖಂಡದ ಚಕ್ರತಾ (ಚಿತ್ರ ನೋಡಿ) ಎಂಬ ಕಣಿವೆ ಶೂಟಿಂಗ್ ಮಾಡಲು ಬಯಸಿದ್ದರು. ಡೆಹ್ರಾಡೂನ್ ನಿಂದ 100 ಕಿ.ಮೀ. ದೂರದ ಹಿಮಚ್ಛಾದಿತ ಪರ್ವತ ಪ್ರದೇಶದಲ್ಲಿ ಅವರು ಕೆಲವೊಂದು ಫೋಟೋಗಳನ್ನು ಹಿಡಿದರಷ್ಟೇ ! ಆಗಲೇ ಟುಟು ಯೋಧರು ಆಗಮಿಸಿ ಅವರನ್ನು ವಶಕ್ಕೆ ಪಡೆದುಕೊಂಡರು. ಯಾಕೆಂದರೆ ಅಲ್ಲಿ ಒಂದು ಫೋಟೋ ತೆಗೆಯಬೇಕಾದರೂ (ಭಾರತದ ನಾಗರಿಕರು ಸೇರಿದಂತೆ) ಕೇಂದ್ರ ಗೃಹ ಸಚಿವಾಲಯದ ಅನುಮತಿ ಕಡ್ಡಾಯ. ಯೋಧರಿಗೆ ತರಬೇತಿ ನೀಡುವುದುಇಲ್ಲಿಯೇ.

    ಯಶಸ್ವಿ ಕಾರ್ಯಾಚರಣೆ

    1971ರ ಬಾಂಗ್ಲಾ ದೇಶ ವಿಮೋಚನೆ ಕಾರ್ಯಾಚರಣೆಯಲ್ಲೂ ಟುಟು ಪಡೆ ಮಹತ್ವದ ಪಾತ್ರ ವಹಿಸಿತ್ತು. ಅಪರೇಶನ್ ಈಗಲ್ ಹೆಸರಿನ ಈ ಕಾರ್ಯಾಚರಣೆಯಲ್ಲಿ ಟುಟು ಪಡೆಯ 46 ಯೋಧರು ಹುತಾತ್ಮರಾಗಿದ್ದರು. ಇನ್ನು 1984ಕ ಅಪರೇಶನ್ ಬ್ಲೂ ಸ್ಟಾರ್, ಬಳಿಕದ ಅಪರೇಶನ್ ಮೇಘದೂತ್, ಕಾರ್ಗಿಲ್ ಯುದ್ಧದ ಅಪರೇಶನ್ ವಿಜಯದಲ್ಲೂ ಪ್ರಮುಖ ಪಾತ್ರವನ್ನು ಟುಟು ರೆಜಿಮೆಂಟ್ ವಹಿಸಿತ್ತು ಎಂಬುದಿಲ್ಲಿ ಗಮನಾರ್ಹ.

    WFH ನಂತರ ಮೊದಲ ದಿನ ಆಫೀಸ್ ನಲ್ಲಿ

    ಕಳೆದ ಮಾರ್ಚ್ ರಂದು  ದೇಶದ  ಪ್ರಧಾನ ಮಂತ್ರಿಗಳು ಭಾನುವಾರ ಸಂಪೂರ್ಣ ಲಾಕ್ ಡೌನ್   ಮಾಡಿ, ಸಂಜೆ ಎಲ್ಲರೂ ತಮ್ಮ ತಮ್ಮ ಮಹಡಿಗಳಲ್ಲಿ ಚಪ್ಪಾಳೆ ತಟ್ಟುವ ಮೂಲಕ  ವೈದ್ಯರಿಗೆ ಹಾಗೂ ಹೆಲ್ತ್ ವಾರಿಯರ್ಸ್  ಗೆ  ಬೆಂಬಲ ಸೂಚಿಸಿ ಎಂದು ಹೇಳಿದ ದಿನದಿಂದಲೇ IT  ಕೆಲಸ ಮಾಡುವವರು, ವರ್ಕ್ ಫ್ರಮ್ ಹೋಮ್-WFH- ಮಾಡಲು ಪ್ರಾರಂಭ ಮಾಡಿದ್ದರು. 

    ತರಾತುರಿಯಲ್ಲಿ WFH  ಕೆಲಸ ಶುರು ಮಾಡಿದ್ದರಿಂದ ಕೆಲವರು ತಮ್ಮ ತಮ್ಮ ಡೆಸ್ಕ್ ಹತ್ತಿರ ಇಟ್ಟ ವಸ್ತುಗಳು ಹಾಗೇ ಬಿಟ್ಟು ಬಂದರು. ಕೆಲಸ ಮಾಡುವ ಕಂಪನಿಗಳು “ಮುಂದಿನ ಸುತ್ತೋಲೆ ಕೊಡುವ ವರೆಗೆ” ಎಲ್ಲರೂ ಮನೆಯಿಂದಲೇ ಕೆಲಸ ಮಾಡಬೇಕು ಹಾಗೂ ಯಾವುದೇ ರೀತಿಯಲ್ಲಿ ಆಫೀಸ್ ಬರುವುದು ಹಾಗು ಅಲ್ಲಿರುವ ವಸ್ತುಗಳನ್ನ ತೆಗೆದುಕೊಂಡು ಹೋಗುವಂತಿಲ್ಲ ಎಂದು ಹೇಳಿಬಿಟ್ಟಿದ್ದರು. ಜೊತೆಯಲ್ಲಿ ಯಾರಿಗೆ Laptop  ಇರಲಿಲ್ಲವೋ ಅವರ ಮನೆಬಾಗಿಲಿಗೆ laptop ತಲುಪಿಸುವ ವ್ಯವಸ್ಥೆ ಮಾಡಿದ್ದರು. 

    ಆರಂಭದಲ್ಲಿ ತುಂಬಾ ಖುಷಿಯಿಂದಲೇ  WFH ಶುರು ಮಾಡಿದ್ದಕ್ಕೆ ಹಲವಾರು  ಕಾರಣಗಳಿತ್ತು. ಜೀವನ, ಸಮಯದ ಚಕ್ರದ ಜೊತೆ ಮುಂಜಾನೆ ಓಡಲು ಶುರುಮಾಡಿದರೆ ರಾತ್ರಿ ಹನ್ನೆರೆಡು ಹೊಡೆದರೂ ನಿಲ್ಲುತ್ತಿರಲಿಲ್ಲ.  ತರಾತುರಿಯಲ್ಲಿ ಮುಂಜಾವಿನ ವಾಕಿಂಗ್, ಕಾಫೀ, ಸ್ನಾನ  ದೇವರಿಗೆ ಒಂದ್ ನಮಸ್ಕಾರ ಹಾಕಿ,ಮಕ್ಕಳನ್ನ ಶಾಲೆಗೋ, ಡೇ ಕೇರ್ ಗೋ ಬಿಟ್ಟು, ಅಮ್ಮ, ಹೆಂಡ್ತಿ ಕೊಟ್ಟ ತಿಂಡಿ ರಸ್ತೆಗಳಲ್ಲಿನ ಟ್ರಾಫಿಕ್ ಬಗ್ಗೆ ಗೊಣಗಾಡುತ್ತಾ  ಅವಸರದಲ್ಲೇ ತಿಂದು  ಬೆನ್ನಿಗೆ ಬ್ಯಾಗ್ ಹಾಕಿ ಊಟದ ಚೀಲ ಹಿಡಿದು ಬೈಕ್, ಬಸ್ ಅಥವಾ ಕ್ಯಾಬ್ ಹತ್ತುವಷ್ಟರಲ್ಲಿ ಬೆವರು ಕಿತ್ತುತ್ತಿತ್ತು.  ಮೇಲೆ ಹೇಳಿದ್ದ ಕೆಲಸ ಒಂದು ತೂಕವಾದರೆ  ರಸ್ತೆಗಳಲ್ಲಿನ ಟ್ರಾಫಿಕ್ ದಾಟಿ ಆಫೀಸ್ ಮುಟ್ಟುವುದೇ ಮತ್ತೊಂದು ತೂಕ ಹಾಗು ಪ್ರಯಾಸದಾಯಕವಾಗಿತ್ತು. ಎಷ್ಟೇ  9 ಗಂಟೆಯೊಳಗೆ ಆಫೀಸ್ ಸೇರಬೇಕು ಎಂದು ಕೊಂಡಿದ್ದರು ದಿನನಿತ್ಯ ಒಂದಲ್ಲಾ ಒಂದು ಕಾರಣದಿಂದ ಅರ್ಧ ಗಂಟೆ ತಡವಾಗೇ ಆಫೀಸ್ ಸೇರಿ ಸಮಯ ಸರಿದೂಗಿಸಲು ಸಂಜೆ ಹೆಚ್ಚು ಹೊತ್ತು ಕೆಲಸ ಮಾಡಿ, ಮತ್ತೆ ಅದೇ ರಾಗ ಅದೇ ಕಥೆ  ಮನೆ ಸೇರುವುದರಲ್ಲಿ ತಡರಾತ್ರಿ ಯಾಗಿರುತ್ತಿತ್ತು. 

    ವರ್ಕಿಂಗ್ ವಿಮೆನ್, ಸಿಂಗಲ್ ಪೇರೆಂಟ್ಸ್ ದು ಕಥೆ ಇನ್ನು ವಿಭಿನ್ನ.  ಆದರೆ ಸಮಯ ಕಳೆದಂತೆ WFH  ಅನ್ನುವುದು ಅದರ ಪರಿಮಿತಿ, ವಿದ್ಯುತ್, ಇಂಟರ್ನೆಟ್, laptop  ಸಮಸ್ಯೆಗಳು  ಮಕ್ಕಳು, ದೊಡ್ಡವರು, ಸಣ್ಣ ಮನೆಗಳು, ಇಬ್ಬರೂ ಕೆಲಸ ಮಾಡುತ್ತಿದ್ದರೆ  ಪ್ರತ್ಯೇಕವಾಗಿ ಕುಳಿತುಕೊಳ್ಳಲೂ ಆಗದಂತ ಸನ್ನಿವೇಶ,  ಇಬರಿಗೂ ಕಾನ್ಫೆರನ್ಸೆ ಕಾಲ್ಸ್ ಇದ್ದಾರೆ ಒಬ್ಬರಿಗೊಬ್ಬರು ಮಾತಾಡುವಾಗ ಆಗುವ ತೊಂದರೆ,  ಜೊತೆಯಲ್ಲಿ ಮಕ್ಕಳ ಆನ್ಲೈನ್ ಕ್ಲಾಸೆಸ್.. ಒಂದಾ ಎರೆಡಾ… wfh  ಎಷ್ಟು ಉಪಕಾರಿಯೋ ಅಷ್ಟೇ ತನ್ನದೇ ಆದ  ದೈಹಿಕ, ಮಾನಸಿಕ ಹಾಗು ಸಾಮಾಜಿಕ ಸಮಸ್ಯೆಗಳನ್ನು ತಂದು ಹಾಕಿರುವುದು ಅಷ್ಟೇ ಸತ್ಯ. 

    ಕಳೆದ ಆರು ತಿಂಗಳಲ್ಲಿ ನಿಧಾನವಾಗಿ wfh ಕೆಲ್ಸಕ್ಕೆ ಹೊಂದಿಕೊಳ್ಳುತ್ತಾ ಸಾಗಿದ್ದ ನಮಗೆ  ಅಷ್ಟೇ ನಿಧಾನವಾಗಿ ತೀರಾ ಅಗತ್ಯ ವಿರುವವರನ್ನ ಮೊದಲಿಗೆ ಆಫೀಸ್ ಬರುವಂತೆ ಕಂಪನಿಗಳು ಹೇಳಿದವು.  ಕೋವಿಡ್-19 ನಿಯಮದಂತೆ  ಮಾಸ್ಕ್, ಸ್ಯಾನಿಟೈಝೆರ್, ಸಾಮಾಜಿಕ ಅಂತರ, ಒಂದು ಕ್ಯಾಬ್ ನಲ್ಲಿ ಕೇವಲ ಇಬ್ಬರಿಗೆ ಮಾತ್ರ ಪ್ರಯಾಣ ಮುಂತಾದ ಮುಂಜಾಗ್ರತೆ ತೆಗೆದುಕೊಂಡು ಆಫೀಸ್ ಪ್ರಾರಂಭ ಮಾಡಿದವು.  ಅದರಂತೆ ಆರುತಿಂಗಳ ನಂತರ ಆಫೀಸ್ ಹೋದಾಗ ಆದ ಅನುಭವವೂ ವಿಚಿತ್ರ , ಅದ್ಭುತ ಹಾಗು ಅವಿಸ್ಮರಣೀಯ. 

    ಬೇಸಿಗೆ ರಜೆಯ ನಂತರ ಶಾಲೆಗೆ ಹೋಗುವ ಮಕ್ಕಳಂತೆ

    ಬೇಸಿಗೆ ರಜೆಯ ನಂತರ ಶಾಲೆಗೆ ಹೋಗುವ ಮಕ್ಕಳ ಹಾಗೆ ಅಯ್ಯೋ ಆಫೀಸ್ ಹೋಗ್ಲೇ ಬೇಕಾ ಎಂದು ಅನ್ನಿಸಿದರೂ  ಅದೇನೋ ಖುಷಿ, ಅದೇನೋ ಉದ್ವೇಗ ಅದೇನೋ  ಲವಲವಿಕೆ.ಮುಂಜಾನೆ   ಬೇಗ ಎದ್ದು ವಾಕಿಂಗ್ ಮುಗ್ಸಿ ಎಂಟು ಗಂಟೆ ಹೊತ್ತಿಗೆ  ಸ್ನಾನ, ತಿಂಡಿ ಮುಗಿಸಿ,  ಬೆನ್ನಿಗೆ ಬ್ಯಾಗ್ ಹಾಕಿ, ಕೈಯಲ್ಲಿ ಊಟದ ಬಾಕ್ಸ್ ಹಿಡಿದುಕೊಂಡು ನೀಟಾಗಿ ಪಾಲಿಶ್  ಮಾಡಿದ ಬೂಟು ಹಾಕಿಕೊಂಡು ಮೊಬೈಲ್ ನಲ್ಲಿ ಕ್ಯಾಬ್  ಲೊಕೇಶನ್ ಟ್ರ್ಯಾಕ್ ಮಾಡುತ್ತಾ,  ಕ್ಯಾಬ್ ಬರೋದು ಐದು ನಿಮಿಷ ತಡವಾದರೂ ಒಂದು ಘಂಟೆ ಕಳೆದಂತೆ ಭಾಸವಾಗಿತ್ತು.   ಅಂತೂ ಕ್ಯಾಬ್ ಮನೆ ಮುಂದೆ  ಬಂದತಕ್ಷಣ  ಒಳಹೋಗಿ ಕುಳಿತು ಹೊರಗೆ ನಿಂತಿದ್ದ ಅಪ್ಪ ಅಮ್ಮ ಹೆಂಡತಿ ಮಕ್ಕಳು ಎಲ್ಲರಿಗೂ ಬಾಯ್ ಹೇಳಿದ್ದು ಮೊದಲನೆಯ ಅನುಭವ ಎನ್ನಬಹುದು.  ಹೀಗೆ ಯಾವತ್ತೂ ಎಲ್ಲರೂ ನಿಂತು ಆಫೀಸ್ ಗೆ ಬೀಳ್ಕೊಟ್ಟಿರಲಿಲ್ಲ. 

    ಕ್ಯಾಬ್ ಒಳಗೂ ಪ್ಲಾಸ್ಟಿಕ್ ಪರಧಿ ಬಂದಿತ್ತು, ಕ್ಯಾಬ್ ಡ್ರೈವರ್ ಹತ್ತಿರ ಮಾತಾಡುತ್ತಾ ಮುಂಚೆ ಒಂದು ಕ್ಯಾಬ್ ನಲ್ಲಿ 4 ಜನ ಮಾತಾಡುತ್ತಾ  ಹೋಗುತ್ತಿದ್ದೆವು ಆದರೆ ಈಗ ಇಬ್ಬರು ಅದು ಪರಧಿಯ ಆಚೆ.  ಹಾಗೆ ಟ್ರಾಫಿಕ್ ದಾಟಿ ಆಫೀಸ್ ಹೋಗೋದ್ರಲ್ಲಿ ತಡ ಆಗಬಹುದು ಅಂದುಕೊಂಡಿದ್ದೆ! ಆದರೆ ಕೋವಿಡ್ ಎಫೆಕ್ಟ್ ನಿಂದ ಆಶ್ಚರ್ಯ ರೀತಿಯಲ್ಲಿ ಸಿಲ್ಕ್ ಬೋರ್ಡ್ ಖಾಲಿ ಖಾಲಿ!   ಒಂದುವರೆ ಘಂಟೆ ತೆಗೆದುಕೊಳ್ಳುತ್ತಿದ್ದ ಸಮಯ ಕೇವಲ ಮೂವತ್ತು ನಿಮಿಷದಲ್ಲಿ ಆಫೀಸ್ ಸೇರಿದ್ದು ವಿಶೇಷವಾಗಿತ್ತು.  

    ಆಫೀಸ್ ಗೇಟ್ ಹತ್ತಿರ ಹೋದಾಗ, ಎಲ್ಲವೂ ಏನೋ ಹೊಸದು ಎನ್ನೋ ಭಾವನೆ.  ಆಫೀಸ್ ಕ್ಯಾಂಪಸ್ ನಲ್ಲಿ ಹಾಕಿದ್ದ ಗಿಡಗಳೆಲ್ಲ ಹೇರಳವಾಗಿ ಬೆಳದು ಹೂವು ಬಿಟ್ಟಿದ್ದವು, ಲಾಗಿನ್ ಗೆ ಇನ್ನು ಮೂವತ್ತು ನಿಮಿಷ ಬಾಕಿ ಇದ್ದ ಕಾರಣ ಹಾಗೆ ಕ್ಯಾಂಪಸ್ ಒಂದು ಸುತ್ತು ಹಾಕಿ ಬರುವಾ ಎಂದು ಹೋದಾಗ,  ಹುಲ್ಲು ಹಾಸಿನ ಮಧ್ಯ ಇದ್ದ ಕಾಲು ದಾರಿ ಕಾಣೆಯಾಗಿ ಹುಲ್ಲು ಹೇರಳವಾಗಿ ಹಸಿರಾಗಿ ಬೆಳೆದಿತ್ತು.  ದೂರದಲ್ಲಿದ್ದ ಕಾರಂಜಿ ಅದರ ಸುತ್ತಲೂ ನೀಟಾಗಿ ಕಟ್ ಮಾಡಿದ ಗಿಡಗಳಿಂದ ಕಂಗೊಳಿಸುತ್ತಿತ್ತು. ಯಾವುದೊ ಹೊಸಾ ಕೆಲ್ಸಕ್ಕೆ ಸೇರಿದಾಗ ಹೊಸಾ ಆಫೀಸ್ ಹೋದಂಥ ,  ಬೇರೆ ದೇಶದಲ್ಲಿ ಇರುವ ಆಫೀಸ್ ಹೋದಂಥ  ಅನುಭವ.  ಮುಂದೆ  ಹಾಗೆ ಗೆಳೆಯರೆಲ್ಲಾ ಕುಳಿತುಕೊಳ್ಳುವ ಬೆಂಚ್, ಆಟದ ಮೈದಾನ ಎಲ್ಲವೂ ಏನೋ ನವ ನವೀನ ರೀತಿಯಲ್ಲಿ ಹೊಸ ಉಡುಗೆ ಉಟ್ಟು ನಿಂತಂತೆ ನಿಮಗಾಗಿ ಕಾಯುತ್ತಿದ್ದೇವೆ ಎನ್ನುವಂತೆ ನನ್ನನ್ನೇ ನೋಡುತ್ತಿರುವಂತೆ ಅನ್ನಿಸಿತು. 

    ತಾನೇ ತೆರೆವ ಬಾಗಿಲು

    ಗಾಜಿನ ಬಾಗಿಲು ತನ್ನನ್ನು ತಾನೇ ತೆಗೆದು ಒಳಬರುವಂತೆ ಸ್ವಾಗತಿಸಿತು, ಒಳ ಹೋಗಿ ಲಿಫ್ಟ್ ಹತ್ತಿರವೂ ಖಾಲಿ ಖಾಲಿ, ಲಿಫ್ಟ್ ಒಳಗೆ ಹೋಗಿ ನನ್ನ ಮಹಡಿಯ ಬಟನ್ ಒತ್ತಿ ನಿಂತುಕೊಂಡಾಗಲೂ ಒಳಗಿದ್ದಿದ್ದು ಕೇವಲ ಇಬ್ಬರು.  ಆಫೀಸ್ ನಲ್ಲಿ ಗೊತ್ತಿರುವವರನ್ನ ಮಾತ್ರ ಮಾತನಾಡಿಸುತ್ತಿದ್ದ ನಾನು, ಇಂದು ಲಿಫ್ಟ್ ನಲ್ಲಿ  ಪರಿಚಯವಿಲ್ಲದಿದ್ದರು ಮೊದಲನೇ ಸಾರಿ  ಹಾಯ್  ಹೇಳಿ ನನ್ನ ಐದನೇ ಮಹಡಿ  ಬಂದ ತಕ್ಷಣ ಹೊರಬಂದಾಗ ಅಲ್ಲಿಯೂ ಆಶ್ಚರ್ಯ,  ಫ್ರಂಟ್ ಡೆಸ್ಕ್ ಹೂಗಳಿಂದ ಕಂಗೊಳಿಸುತ್ತಿತ್ತು , ಯಾವಾಗಲೂ ಜನ ಜಂಗುಳಿ ಇದ್ದ ಸೋಫಾ ಚೇರ್ ನ್ಯೂಸ್ ಪೇಪರ್ಸ್ ಎಲ್ಲವೂ ಖಾಲಿ.   ರಿಸೆಪ್ಶನಿಸ್ಚ್ ಗೂ ಒಂದು hi  ಹೇಳಿ, ನನ್ನ id  ಸ್ಕಾನ್  ಮಾಡಿ, ತೆರೆದ ಬಾಗಿಲ ಒಳಗೆ ಹೋಗಿ ನನ್ನ ಡೆಸ್ಕ್ ಹತ್ತಿರ  ಹೋಗುತ್ತಿರುವಾಗ ಅದೇನೋ ಪುಳಕ. 

    ಇಡೀ ಫ್ಲೋರ್  ವಿಭಿನ್ನ

    ಐಟಿ ಕಂಪೆನಿಗಳಲ್ಲಿ ಮುಂಚೆ ಇಂದಲೂ ಹೌಸ್ ಕೀಪಿಂಗ್ ಸ್ಟಾಫ್ ದಿನವೂ ನೀಟಾಗಿ ಆಫೀಸ್ ಡೆಸ್ಕ್ ಇಡುತ್ತಿದ್ದುದು ಇತ್ತಾದರೂ, ಇವತ್ತು ಅದೇನೋ ಇಡೀ ಫ್ಲೋರ್  ವಿಭಿನ್ನವಾಗಿ ಕಾಣಿಸುತ್ತಿತ್ತು. ನಮ್ಮ ನಮ್ಮ ಡೆಸ್ಕ್ ಗಳ ಮೇಲೆ ನಾವು ಬೆಳೆಸುತ್ತಿದ್ದ ಚಿಕ್ಕ ಚಿಕ್ಕ ಗಿಡಗಳು, ಬಳ್ಳಿಗಳು ಎತ್ತರ ಹಾಗು ಉದ್ದ ಉದ್ದ ಬೆಳೆದಿದ್ದವು.  ನಾವು ಆಫೀಸ್  ಬರದಿದ್ದರೂ ಹೌಸ್ ಕೀಪಿಂಗ್ ನವ್ರು ಎಲ್ಲಾ ಗಿಡ ಗಳನ್ನ ಚನ್ನಾಗಿ ನೀರೆರೆದು ಬೆಳೆಸಿದ್ದರು.  ಅಲ್ಲಲ್ಲಿ ಹಲವು ಬಳ್ಳಿಗಳಲ್ಲಿ ವಿವಿಧ ಬಣ್ಣದ ಹೂಗಳು ನಮ್ಮನ್ನ ಸ್ವಾಗತಿಸುವಂತೆ ಕಂಗೊಳಿಸುತ್ತಿದ್ದವು. ಹಾಗೆ ಮುಂದೆ ಸಾಗಿ ನನ್ನ ಡೆಸ್ಕ್ ಹತ್ತಿರ ಬಂದಾಗ ಆರು ತಿಂಗಳ ನಂತರ ಕೂಡಾ ಅಲ್ಲಿದ್ದ  ವಸ್ತುಗಳು ನನಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದಂತಿತ್ತು.   

    ನಾಲ್ಕು ಜನ ಕೂಡುತ್ತಿದ್ದ ಜಾಗದಲ್ಲಿ ಕೇವಲ ಇಬ್ಬರು ಕೂಡುವಂತೆ ವ್ಯವಸ್ಥೆ ಜೊತೆಗೆ  ಪ್ರತಿ ಡೆಸ್ಕ್ ಗೆ, ಪ್ರತಿ ಬಾಗಿಲಿಗೆ ಸ್ಯಾನಿಟೈಸರ್, ಮಾಸ್ಕ್ ಇಟ್ಟಿದ್ದರು, ಕುಳಿತುಕೊಳ್ಳುವ ಚೇರ್ ಗಳಲ್ಲಿ ಉಪಯೋಗಿಸಿ ಎಸೆಯಬಹುದಾದ ತೆಳು ಬಟ್ಟೆ ಹಾಸಿದ್ದರು.   

    ಒಮ್ಮೆ ಸುತ್ತಲೂ ಕಣ್ಣಾಡಿಸಿದಾಗ   ಒಬ್ಬೊಬ್ಬ ಗೆಳೆಯರು ಒಂದು ಒಂದು ಶೈಲಿಯಲ್ಲಿ ಬಂದಿದ್ದರು.  ಆರು ತಿಂಗಳು ಗಡ್ಡ ಕೂದಲು  ಬೆಳೆಸಿದ್ದ ಒಬ್ಬರು ನನ್ನ ಮ್ಯಾನೇಜರ್ ಎಂದು ಗುರುತು ಸಿಗದಷ್ಟು ಮುಖ ಚರ್ಯ ಬದಲಾಗಿತ್ತು!  ಮತ್ತೊಬ್ಬರು ಫುಲ್ ಬಾಲ್ಡ್! ಮಗದೊಬ್ಬರು ತಮ್ಮ ಕೂದಲಿಗೆ ಹಾಕುತ್ತಿದ್ದ ಡೈ ನಿಲ್ಲಿಸಿದ್ದಾಕ್ಕಾಗಿ ಪೂರ್ತಿ ಬಿಳಿ ತಲೆ!. ಮೀಸೆ ತೆಗೆದವರೆಷ್ಟೋ!  ಜೊತೆಗೆ ಆರುತಿಂಗಳಿಂದ ಮೇಕಪ್ ಮಾಡುವುದು ಬಿಟ್ಟಿದ್ದ ಒಬ್ಬ ಮಹಿಳಾ ಸಿಬ್ಬಂದಿ  ಯಾರು ಎಂದು ಕಂಡು ಹಿಡಿದವರಿಗೆ ಬಹುಮಾನ ಎಂಬ ಫಲಕ ಬೇರೆ ಹಾಕಿಕೊಂಡಿದ್ದರು.  ಹೇಗೆ ಹೇಳುತ್ತಾ ಹೋದರೆ ಮುಗಿಯದ ಕಥೆ. ಅದಕ್ಕಿಂತ ಬೇಸರದ ಸಂಗತಿ ಎಂದರೆ,  ಗೆಳೆಯರು ಒಂದಿಬ್ಬರು ಕರೋನಾದಿಂದ ಪ್ರಾಣ ಕಳೆದುಕೊಂಡಿದ್ದರು, ಅವರ ಡೆಸ್ಕ್ ಗಳಲ್ಲಿ ಅವರ ಫೋಟೋ ಹಾಗು ಶ್ರದ್ಧಾಂಜಲಿ ಫಲಕಗಳು ಕರೋನಾದ ಕರಾಳ ಛಾಯೆ ತೋರಿಸುತ್ತಿತ್ತು. 

    ತುಂಬಾ ದಿನಗಳ ನಂತರ ಭೇಟಿ ಆಗಿದ್ದರು, ಸಾಮಾಜಿಕ ಅಂತರ ಕಾಯ್ದುಕೊಂಡು ದೂರದಿಂದಲೇ ಶೇಕ್ ಹ್ಯಾಂಡ್ ಬದಲು ಭಾರತೀಯರಂತೆ ನಮಸ್ಕರಿಸಿ  ಶುಭಾಶಯಗಳನ್ನು ಹಂಚಿಕೊಂಡು ಎಲ್ಲರೂ ಕಾಫೀ ಕುಡಿಯಲು ಹೋದೆವು.  ಫುಡ್ ಕೋರ್ಟ್ ಗಳಲ್ಲಿ ಕೂಡ ಸಾಮಾಜಿಕ ಅಂತರ, ಪೇಪರ್ ಕಪ್ಸ್ ನಲ್ಲಿ ಕಾಫೀ, ಒಂದು ಟೇಬಲ್ ಗೆ ಇಬ್ಬರು ಕೂಡುವಂತೆ ಮಾತ್ರ ವ್ಯವಸ್ಥೆ!.  ಮಾಸ್ಕ ತೆಗೆದು ಕಾಫೀ ಕುಡಿಯುವುದು ಹೇಗೆ ಎಂಬ ಚರ್ಚೆ ಇಂದ ಶುರುವಾಗಿದ್ದು ಕಳೆದ ಆರುತಿಂಗಳಲ್ಲಿ  WFH ಮನೆ, ಹೆಂಡತಿ ಮಕ್ಕಳು, ಪಾರ್ಟಿ, ಆಫೀಸ್ ಇವೆಂಟ್ಸ್ , ಔಟಿಂಗ್ಸ್,  onsight ಟ್ರಿಪ್ಸ್, ಹಾಗು TGIF ಡ್ರಿಂಕ್ಸ್ ಹಾಗು birthday ಪಾರ್ಟಿ ಗಳನ್ನ ಮಿಸ್ ಮಾಡಿಕೊಂಡಿದ್ದು,  ಒಬ್ಬಬ್ಬರದು ಒಂದೊಂದು ಅನುಭವ ಹೇಳುತ್ತಾ ಹೋದರು. 

    ಬೆಂಗಳೂರು ಬಿಟ್ಟವರೆಷ್ಟೋ, ಇಲ್ಲೇ ಇದ್ದು ಎಲ್ಲೂ ಹೋಗಲಾಗದೆ ನರಳಾಡಿದವರು,  ಅಪ್ಪ ಅಮ್ಮ ಒಂದು ಕಡೆ, ಲಾಕ್ ನಾವು ಇನ್ನೊಂದು ಕಡೆ ಲಾಕ್ ಆಗಿದ್ದು  ಹೇಗೆ  ಕೊನೆಯಿಲ್ಲದ ಅನುಭವಗಳ ಹಂಚಿಕೆ ಮಧ್ಯೆ, ಈ ಕರೋನ ಭೀತಿ ನಡುವೆ ಆಫೀಸ್ ಬರುವಾಗ ಮನೆಯಲ್ಲಿ ಹೆಂಡತಿ, ತಾಯಿ, ಗಂಡ, ಮಕ್ಕಳು ಕೊಟ್ಟ ಸಲಹೆಗಳನ್ನ ಪಾಲಿಸುವ ಅನಿವಾರ್ಯತೆಯನ್ನು ಹೇಳುತ್ತಾ ಕೊನೆಗೂ ಅರ್ಧ ದಿನ ಕಳೆದಿದ್ದು ಗೊತ್ತಾಗಲೇ ಇಲ್ಲ.   ಉತ್ತರಾರ್ಧ ಮಾಮೂಲಿನಂತೆ ಕೆಲಸದಲ್ಲಿ ಮುಳುಗಿ ಹೋಗಿದ್ದು.. ಮತ್ತೆ ಅದೇ ಜೀವನ ಅದೇ ಕೆಲಸದ ಚಕ್ರ ಎನ್ನುವಂತೆ ಇದ್ದರೂ,  ಈಗ ಆದ ಬದಲಾವಣೆ ಲೈಫ್ ಟೈಮ್ ನಲ್ಲಿ ಒಮ್ಮೆ  ಮಾತ್ರ ಸಾಧ್ಯ ಎಂದೆನಿಸಿತು.  ಏನೇ ಇರಲಿ ಈ ರೀತಿಯ ಬ್ರೇಕ್ ಪ್ರತಿಯೊಬ್ಬ ಜನರಿಗೆ ಬೇಕಿತ್ತೇನೋ!  ಪ್ರಪಂಚದ ಭಾರ ಕಡಿಮೆ ಆಗಬೇಕಿತ್ತೇನೋ.  ಸಮಯದ ಪರಿವಿಲ್ಲದೆ ಓಡುತ್ತಿದ್ದವರಿಗೆ, ಹಣವೇ ಮುಖ್ಯವಾಗಿದ್ದವರಿಗೆ, ಪಾರ್ಟಿಗಳಲ್ಲಿ ತಲ್ಲೀನರಾಗಿದ್ದವರಿಗೆ  ಇದ್ದಕ್ಕಿದ್ದ ಹಾಗೆ ಒಂದು ದೊಡ್ಡ ಬ್ರೇಕ್! ಹಾಕಿ ಜೀವನದ, ಜೀವದ ಮೌಲ್ಯ ತಿಳಿಸಿದ್ದು, ಇದು ಕರೋನದಿಂದ ಮಾತ್ರ ಸಾಧ್ಯವಾಯಿತು  ಮುಂದೆ ಮಾಡುವ ಕೆಲಸದ ರೀತಿಗೆ,  ಹೊಸಾ  ಪರಿಕಲ್ಪನೆ ಯೊಂದಿಗೆ IT  ಕೆಲಸ ಮಾಡಲು ಇಂದಿನಿಂದಲೇ ನಾಂದಿ ಪೂಜೆ ಮಾಡಿದಂತಿತ್ತು. 

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಚ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಜೋಗದ ಅಭಿವೃದ್ಧಿಗೆ 120 ಕೋಟಿ ರೂ ಮಂಜೂರು

    ಶಿವಮೊಗ್ಗ ಜಿಲ್ಲೆ ಪ್ರಾಕೃತಿಕ ಸೊಬಗಿನ ತಾಣ. ಇಲ್ಲಿ ಪ್ರವಾಸೋದ್ಯಮಕ್ಕೆ ತೆರೆದ ಅವಕಾಶಗಳಿವೆ.ಕೋಟೆ,ಕೊತ್ತಲಗಳುಶಿಲ್ಪಕಲಾ
    ದೇಗುಲಗಳು,ರಮಣೀಯ ನಿಸರ್ಗಕ್ಕೆ ಹೆಸರುವಾಸಿ.

    ಜಗತ್ಪ್ರಸಿದ್ಧ ಜೋಗ ಜಲಪಾತ ಹೃನ್ಮನಗಳನ್ನ ತಣಿಸುವ ಸಮೃದ್ಧ ಪರಿಸರ.
    ಜೋಗದ ಅಭಿವೃದ್ಧಿ ಬಗ್ಗೆ ಪ್ರಾಧಿಕಾರ
    ಕಾರ್ಯಶೀಲವಾಗಿದೆ. ಜೋಗ,ಇಷ್ಟೂ ಕಾಲ ಪ್ರವಾಸೀ ಆಕರ್ಷಣೆ ಹೊಂದಲು ಕಾಯುತ್ತಿತ್ತು. ಅನೇಕ ಯೋಜನೆಗಳು ಅಗತ್ಯವಿದ್ದವು. ಅಂತಹ ಹಲವು ಯೋಜನೆಗಳನ್ನ ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರು ರೂಪಿಸಿದ್ದರು.ಅವರ ಕನಸನ್ನ ನನಸು ಮಾಡುವಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದ
    ಬಿ.ವೈ.ರಾಘವೇಂದ್ರ ಅವರುಕ್ರಿಯಾಶೀಲರಾದರು. ಯೋಜನೆಗಳ ಮಂಜೂರಾತಿಗೆ ರಾಜ್ಯ ಮತ್ತು ಕೇಂದ್ರದ ನಡುವೆ ಸಮರ್ಥವಾಗಿ ಸಮನ್ವಯತೆ ಸಾಧಿಸಿದರು.ಅದರ ಫಲವಾಗಿ ಈಗ ಜೋಗವನ್ನು ಆಕರ್ಷಣೀಯಗೊಳಿಸಲು 120 ಕೋಟಿ ರೂ ಗಳ ಯೋಜನೆಗೆ ಮಂಜೂರಾತಿ ದೊರೆತಿದೆ.

    ಸಂಸದ ರಾಘವೇಂದ್ರ

    ಸಂಸದರ ಪ್ರಯತ್ನದ ಫಲವಾಗಿ ಜೋಗ ಸರ್ವಋತು ಜಲಪಾತವಾಗಲಿದೆ. ದೀಪಾಲಂಕಾರ
    ಸೌಲಭ್ಯ ಸಹಿತ ಅನುಪಮ ಪ್ರೇಕ್ಷಣೀಯ ಸ್ಥಳವಾಗಲಿದೆ.ವಿಶೇಷವೆಂದರೆ ಬೇಸಿಗೆಯಲ್ಲೂ ಶನಿವಾರ- ಭಾನುವಾರ ಜಲಪಾತದಲ್ಲಿ ನೀರು ಧುಮ್ಮಿಕ್ಕಲಿದೆ.ಕೆಪಿಸಿ ಅವರ ಸಹಭಾಗಿತ್ವದಿಂದ ಇದು ಸಾಧ್ಯವಾಗಿದೆ.
    ಅಷ್ಟೇ ಅಲ್ಲ ಜಿಪ್ ಲೈನ್ ಅಳವಡಿಕೆಯಿಂದಾಗಿ
    ಜೋಗ ಸಾಹಸಿ ತಾಣವಾಗಿ ಕಂಗೊಳಿಸಲಿದೆ. ಸುಸಜ್ಜಿತ ವಾಹನ ನಿಲ್ದಾಣ,ನೋಡುಗರಿಗೆ ವೀಕ್ಷಣಾ ಗೋಪುರ,ಅತ್ಯಾಧುನಿಕ
    ಹೋಟೆಲ್,ಹೂದೋಟ,ಸೂಕ್ತವಾಗಿ ವಾಹನಗಳ ಪಾರ್ಕಿಂಗ್,ಜಲಸಾಹಸ,ದೋಣಿ ವಿಹಾರಗಳಿಗೆ ಜಲಮೂಲಗಳ ರಕ್ಷಣೆ,ಈಜುಕೊಳ,ಪ್ರವಾಸಿಗಳಿಗೆ
    ತಂಗುವುದಕ್ಕೆ ಕಾಟೇಜುಗಳು, ಇತ್ಯಾದಿ ಉತ್ತಮ ವಸತಿ ಸೌಕರ್ಯಗಳ ಬಗ್ಗೆ ಮಂಜೂರಾತಿ
    ದೊರೆತಿದೆ.ಪ್ರವಾಸಿಗಳಿಗೆ ಎಬಿ ಸೈಟ್ ವೀಕ್ಷಣೆ ಮಾಡಲು ರೋಪ್ ಲೈನ್ ವಿಶಾಲ ರಸ್ತೆಗಳು ನಿರ್ಮಾಣವಾಗಲಿವೆ.

    ಅಭಿನಂದನೆ : ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ ಸದಸ್ಯ ಮತ್ತು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ, ನಮ್ಮ
    ಕನಸಿನ ಶಿವಮೊಗ್ಗದ ಶ್ರೀಗೋಪೀನಾಥ್ ಮತ್ತು ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಉಪಾಧ್ಯಕ್ಷ ಶಂಕರಪ್ಪ,
    ಸಹ ಕಾರ್ಯದರ್ಶಿ ಅ.ನಾ.ವಿಜಯೇಂದ್ರ,
    ನಿರ್ದೇಶಕರಾದ ಡಾ.ಸುಧೀಂದ್ರ, ಕೆ.ಜಿ.ಮಂಜುನಾಥ ಶರ್ಮ, ಸುಕುಮಾರ್, ಶ್ರೀಮತಿ ನಿರ್ಮಲಾ ಕಾಶಿ ಹಾಗೂ ಸದಸ್ಯರು,
    ಸಂಸದ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಅಭದ್ರತೆ ಬದುಕಿನ ಭಾಗ ಅಲ್ಲವೇ?

    ಕೊರೊನಾ ಎಂಬ ಕಾಯಿಲೆ ಬಂದ ಕಾಲದಿಂದ ಏನೆಲ್ಲಾ ಆಗೋಯ್ತು. ಕಾಲಕಾಲಕ್ಕೆ ಲಾಕ್‍ಡೌನ್ ಆಯ್ತು. ನಿಯಮಗಳು ಜಾರಿಗೆ ಬಂದವು. ಎಂತಹದ್ದೇ ಕಷ್ಟ ಬಂದಾಗ ದೇವರಿದ್ದಾನೆ ಬಿಡು ಎಂದುಕೊಂಡು ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರಿಗೆ ಹರಕೆ ಹೊತ್ತು ಮನಸ್ಸಿಗೆ ತುಸು ನೆಮ್ಮದಿ ನೀಡುತ್ತಿದ್ದ ದೇವರ ಗುಡಿಗಳೂ ಬಂದ್ ಆದವು. ದೈವದೆಡೆಗೆ ಅಪಾರ ನಂಬಿಕೆ ಹೊಂದಿದ ಭಕ್ತಗಣಗಳ ಮನದೊಳಗೆ “ದೇವರಿದ್ದಾನಾ ಅಥವಾ ದೇವರೇ ಇದೆಲ್ಲವನ್ನು ಮಾಡಿಸುತ್ತಿದ್ದಾನಾ?’ ಎನ್ನುವ ಸಂಶಯ ಮೂಡಿಸಿದ್ದು ಸುಳ್ಳಲ್ಲ.ದಿನೇ ದಿನೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸಹ (ಕೆಲವು ಹೊರತುಪಡಿಸಿ)ಎಲ್ಲವೂ ತೆರವುಗೊಂಡಿದ್ದು ಜನರಿಗೆ ಎಂದಿನಂತೆ ಓಡಾಡಲು ಅವಕಾಶ ಸಿಕ್ಕಿದೆ.

    ಇದೆಲ್ಲವನ್ನು ಗಮನಿಸಿದರೆ ಪರಿಸ್ಥಿತಿ ಒಂದೇ ತೆರನಾಗಿರುವುದಿಲ್ಲ ಎಂಬುದು ಸ್ಪಷ್ಟ.
    ಕೊರೊನಾ ಬಂದಾಗಿನಿಂದ ಹೆಚ್ಚಿನವರ ಬದುಕಿನಲ್ಲಿ ಸಂಕಷ್ಟ. ಮುಂದೇನು, ಬದುಕಿಗೆ ದಾರಿ ಯಾವುದು ಎನ್ನುವ ಅನಿಶ್ಚಿತತೆ ಕಾಡಿದ್ದು ಅಷ್ಟೇ ಸತ್ಯ. ಬದಲಾವಣೆ ಬದುಕಿನ ಭಾಗವೇ. ಬದುಕೆಂಬ ಕಾಲಚಕ್ರದಲ್ಲಿ ಏರಿಳಿತಗಳು ಸಹಜ. ಅದನ್ನು ನಿಖರವಾಗಿ ಹೇಳುವುದು ಸುಲಭ ಸಾಧ್ಯವಿಲ್ಲ. ಯಾಕೆಂದರೆ ಬದುಕಿನ ಲೆಕ್ಕಾಚಾರಗಳು ಗಣಿತದಂತೆ ನಿಖರವಾಗಿಲ್ಲ. ಬುದ್ಧಿವಂತ ಮನುಷ್ಯ ಯಾವಾಗಲೂ ಅನಿಶ್ಚಿತತೆಯಿಂದಲೇ ಕೂಡಿರುತ್ತಾನೆ. ಅನಿಶ್ಚಿತತೆಯಲ್ಲಿ ಉಳಿಯುವುದು ಅಂದರೆ ಅದೊಂದು ರೀತಿಯ ಧೈರ್ಯವೇ ಸರಿ.

    ಮತ್ತೊಂದು ರೀತಿಯಲ್ಲಿ ಹೇಳುವುದಾದರೆ “ಅನಿಶ್ಚಿತತೆಯ”  ಖಚಿತತೆಯನ್ನು ಒಪ್ಪಿಕೊಳ್ಳುವುದು.ಪರಿಸ್ಥಿತಿ ಯಾವುದೇ ಆಗಿರಲಿ, ಅದನ್ನು ಹೃದಯಪೂರ್ವಕವಾಗಿ ಒಪ್ಪಿಕೊಳ್ಳುವ ಜಾಣ್ಮೆ ಬೇಕು.  ವಿಜ್ಞಾನದ ವಿಷಯಗಳಂತೆ ನಿರ್ದಿಷ್ಟ ಕಾರಣ ಮತ್ತು ಪರಿಣಾಮವನ್ನು “ಬದುಕಿನ ಹಾದಿ’ ಒಳಗೊಂಡಿಲ್ಲ. ಜೀವನದಲ್ಲಿ ಬರುವ ಏರಿಳಿತಗಳಿಗೆ ಕಾರಣ ಏನೋ ಇರಬಹುದು, ಹಾಗೆನೇ ಅದರ ಪರಿಣಾಮ ಇನ್ನೇನೋ ಆಗಿರಬಹುದು. ಅಂದರೆ ನಾವು ಎಣಿಸಿದಂತೆ ಇರದು. ನೀರನ್ನು 100 ಡಿಗ್ರಿಯಲ್ಲಿ ಕುದಿಸಿದರೆ ಕ್ರಮೇಣ ಆದು ಆವಿಯಾಗುತ್ತದೆ. ಅದು ವಿಜ್ಞಾನ. ಅದು ಎಲ್ಲರಿಗೂ ತಿಳಿದಿರುವ ವಿಚಾರ. ಮಾತ್ರವಲ್ಲ ಅದು ನಿಶ್ಚಿತ. ಆದರೆ ಜೀವನ ಹಾಗಲ್ಲವಲ್ಲ.

    ಮನುಷ್ಯನಿಗೆ ಕೆಲವೊಮ್ಮೆ ಅಭದ್ರತೆ ಕಾಡುವುದು ಸಹಜ. ಕೆಲವೊಮ್ಮೆ ಆ ಅಭದ್ರತೆಗಳೇ ಮನುಷ್ಯನ ಶಕ್ತಿಯಾಗಿ ಮಾರ್ಪಡಬಹುದು. ಯಾಕಂದರೆ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕತೆ ಇರುತ್ತದೆ. ತಾನು ಮತ್ತೊಬ್ಬರಂತೆ ಇರಬೇಕು ಎಂದುಕೊಂಡರೆ ಅದರಲ್ಲಿ ಭಿನ್ನತೆ ಏನೂ ಇರದು. ವಿಭಿನ್ನತೆ ಇಲ್ಲದೇ ಇದ್ದರೆ ಜಗತ್ತು ಅತಿ ಸುಂದರವಾಗಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯನಾ? ಇಲ್ಲವಲ್ಲ.

    ಕೆಲವರಿಗೆ ಬದಲಾವಣೆಗೆ ತೆರೆದುಕೊಳ್ಳಲು ಹೆಜ್ಜೆ ಇಡುವುದಕ್ಕೂ ಭಯ. ಯಾಕೆಂದರೆ ಅವರಲ್ಲೊಂದು ಅನಿಶ್ಚಿತತೆಯ ಭಯ ಕಾಡುತ್ತಿರುತ್ತದೆ. ಒಬ್ಬ ವ್ಯಕ್ತಿಯಲ್ಲಿರುವ ಬಲ ಮತ್ತು ಬಲಹೀನತೆಗಳೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುತ್ತದೆ. ಅವೆರಡೂ ಕೂಡಾ ವ್ಯಕ್ತಿಗೆ ಪೂರಕವೂ ಆಗಿರಬಹುದು, ಮಾರಕವೂ ಆಗಬಹುದು.

    ಅಭದ್ರತೆಯ ಸಾಮಾನ್ಯ ಲಕ್ಷಣಗಳು ಉದಾಹರಣೆಗೆ ನಾಚಿಕೆ. ನಾಚಿಕೆ ಸ್ವಭಾವ ಇರುವವರು ಗೆಳೆಯರನ್ನು ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದ ಸಂದರ್ಶನಗಳಲ್ಲಿ ಅನುತ್ತೀರ್ಣರಾಗುತ್ತಾರೆ.ನಾಚಿಕೆ ಪಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ, ಆದರೆ ಯಾವ ಸಂದರ್ಭದಲ್ಲಿ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.

    ಇತರರು ನಮ್ಮನ್ನು ಹೇಗೆ ಗ್ರಹಿಸುತ್ತಾರೆ ಎನ್ನುವ ವಿಚಾರ ಪದೇಪದೆ ಕಾಡುತ್ತಿರುತ್ತದೆ. ಇತರರು ನಮ್ಮ ಬಾಹ್ಯ ನೋಟ, ಮನೆ ಮಕ್ಕಳು, ಗಂಡಹೆಂಡತಿ ಬಗ್ಗೆ ಏನು ಗ್ರಹಿಸುತ್ತಾರೆ, ಯಾವ ರೀತಿಯ ಕಾಮೆಂಟ್ ಮಾಡುತ್ತಾರೆ ಎನ್ನುವ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ.  ಒಟ್ಟಿನಲ್ಲಿ ನಮ್ಮ ಜೀವನ ವಿಧಾನದ ಬಗ್ಗೆ “ಇತರರು ಏನು ಯೋಚಿಸುತ್ತಾರೋ ಏನೋ” ಎನ್ನುವುದೇ ದೊಡ್ಡ ವಿಚಾರವಾಗಿರುತ್ತದೆ. ನಮ್ಮ ಬಲಹೀನತೆಗಳನ್ನು ಬೇರೆಯವರ ಸ್ಟ್ರೆಂಥ್‍ನೊಂದಿಗೆ ಹೋಲಿಸಿಕೊಳ್ಳುವುದೇ ನಮಗೆ ಅಭ್ಯಾಸ ಆಗಿಬಿಟ್ಟಿರುತ್ತದೆ. ಇತರರಿಂದ ಬರುವ ಕಾಮೆಂಟ್‍ಗಳೇ ನಮಗೆ ಮುಖ್ಯವಾಗಿರುತ್ತದೆ. ಆದರೆ ಇತರರ ಅಪಾದನೆಯನ್ನು ಒಪ್ಪಿಕೊಳ್ಳಬೇಕೋ ಅಥವಾ ನಾವೇನು ಎಂಬುದನ್ನು ನಮಗೆ ನಾವೇ ಅರ್ಥ ಮಾಡಿಸಿಕೊಳ್ಳಬೇಕೋ ಎಂಬುದರ ಆಯ್ಕೆ ನಮ್ಮ ಕೈಯಲ್ಲೇ ಇದೆ.

    ಬದುಕಿನಲ್ಲಿ ಅನಿಶ್ಚಿತತೆ ಅನ್ನೊದು ಸತ್ಯ. ಆದಾಗ್ಯೂ ಜೀವನದಲ್ಲಿ ಬದಲಾವಣೆ ಬೇಕಿದ್ದರೆ ಹಲವು ದಿನಗಳವರೆಗೆ ಕಾಯಬೇಕು. ರಾತ್ರಿ ಬೆಳಗಾಗುವುದರೊಳಗೆ ಬದಲಾವಣೆ ನಿರೀಕ್ಷಿಸುವುದಕ್ಕೆ ಸಾಧ್ಯ ಇಲ್ಲ. ಅದಕ್ಕೆ ಮುಂದೊಂದು ದಿನ ಹೀಗಾದರೆ ಹೇಗೆ ಎನ್ನುವ ಜಾಗೃತಿ, ಮುಂದಾಲೋಚನೆಯೂ ಇರಬೇಕು.

    Photo by Fabio Comparelli on Unsplash

    ಮ್ಯಾನಿಕ್ಯೂರ್, ಪೆಡಿಕ್ಯೂರ್ ಗಳಿಲ್ಲದ ದಿನಗಳು

    ನೂತನ ಎಮ್. ದೋಶೆಟ್ಚಿ

    80ರ ದಶಕದ ಕೊನೆಯ ಭಾಗ. ನಮ್ಮ ಊರಿನಲ್ಲಿ ಆಗ ಬ್ಯೂಟಿಪಾರ್ಲರ್ ಇರಲಿಲ್ಲ ಎಂದರೆ ನೀವು ನಂಬಲೇಬೇಕು. ಅದು ತಾಲೂಕಿನ ಕೇಂದ್ರವಾಗಿದರೂ ದೊಡ್ಡ ಹಳ್ಳಿಯೇ ಆಗಿತ್ತು.ಆ ಕಾಲದಲ್ಲಿ ನಮ್ಮ ಊರು  ಆಗಷ್ಟೇ ಹೊಸತನಕ್ಕೆ, ಆಧುನಿಕತೆ ಎಂದು ಕರೆಯಲಾಗುತ್ತಿದ್ದ ಬ್ಯೂಟಿ ಪಾರ್ಲರ್ ನಂತಹ ಮುಜುಗರಗಳಿಗೆ ತೆರೆದುಕೊಳ್ಳಲು ಆರಂಭಿಸಿತ್ತು.

    ಬ್ಯೂಟಿ ಪಾರ್ಲರ್ ಎಂದರೆ ಈಗಿನಂತೆ ದೊಡ್ಡ ಬೋರ್ಡ್ ಹಾಕಿ ಆಹ್ವಾನಿಸುವ ಎದೆಗಾರಿಕೆ ಆಗ ಇರಲಿಲ್ಲ.  ಪಾರ್ಲರ್ ನಡೆಸುವವರ ಮನೆಯ ಎದುರಿನ ಕೋಣೆಯನ್ನೇ   ಅದಕ್ಕಾಗಿ ಬಳಸಲಾಗುತ್ತಿತ್ತು. ಅದರೊಳಗೆ ಕದ್ದು ಮುಚ್ಚಿಯೇ ಹೋಗಬೇಕು. ಊರಿನವರು ಯಾರಾದರೂ ನೋಡಿಬಿಟ್ಟರೆ ಎಂಬ ಎದೆಗುದಿ ಬೇರೆ.       

    ಇಂತಿಪ್ಪ ಒಂದು ಪಾರ್ಲರ್ ಕೂಡ ಊರಲ್ಲಿರದ ಕಾಲದಲ್ಲಿ ಮಲೆನಾಡಿನ ಮಳೆಗಾಲದ ಜಲಪಾತದಂತೆ ಇದ್ದ ನನ್ನ  ಉದ್ದನೆಯ, ದಪ್ಪ ಜಡೆ ಬಯಲು ಸೀಮೆಯ ಗಡಸು ನೀರಿಗೆ ಬಿಡು ಬೇಸಿಗೆಯ ಸಣ್ಣ ಝರಿಯಂತೆ ಸೊರಗಿತ್ತು. ಇದ್ದರೆ ಹಾಗೇ ಇರಬಹುದಿತ್ತೇನೋ. ಆದರೆ ನನ್ನೊಳಗೂ ಆಧುನಿಕತೆಯ ಗುಂಗಿ ಹುಳು ಸಣ್ಣಗೆ ಕೊರೆಯಲು ಶುರು ಹಚ್ಚಿಕೊಂಡಿತ್ತು. ಇದಕ್ಕೆ ನಾನೇ ನೇರವಾದ ಕಾರಣವಲ್ಲ.ಓರಗೆಯ ಶಹರದ ಗೆಳತಿಯರು, ಸಹಪಾಠಿಗಳ ಎದುರಿಗೆ ತೀರ ಹಳ್ಳಿಯವಳಂತೆ ಕಾಣುತ್ತಿದ್ದ ನನ್ನನ್ನು ಅವರ ಸಮಕ್ಕೆ ಹೇಗಾದರೂ ಏರಿಸಿಕೊಳ್ಳಬೇಕಿತ್ತು. ಇದಕ್ಕೆ ಇದ್ದ ಹಲವು ದಾರಿಗಳಲ್ಲಿ ಒಂದು ನೇರ ತಲೆಕೂದಲಿಗೇ ಸಾಗಿತು.  ಎರಡೂವರೆ ಅಡಿ ಇದ್ದ ಹೊಳೆಹೊಳೆವ, ನುಣುಪು ಕೂದಲಿಗೆ ಕತ್ತರಿ ಸೇವೆ ಮಾಡಿಸಲು 40 ಕಿಲೋ ಮೀಟರ್ ದೂರದಲ್ಲಿರುವ ಪಕ್ಕದ ಊರಿಗೆ ಅಮ್ಮನೊಂದಿಗೆ ಹೊರಟಿದ್ದು ಒಂದು ಬೇಸಿಗೆ ರಜೆಯಲ್ಲಿ. 

    ಹೊರಟಿದ್ದೇನೋ ಉತ್ಸಾಹದಿಂದಲೇ. ಆದರೆ ನನಗೆ ತೀರಾ ಹೊಸದಾಗಿದ್ದ  ಪಾರ್ಲರ್ ಎಂಬ  ಆ ಆಧುನಿಕತೆಯ ಎದುರು ನಿಂತಾಗ ಆದ ಮುಜುಗರವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಒಳ ಅಡಿಯಿಟ್ಟಾಗ ಎದುರುಗೊಂಡಿದ್ದು ಪಾರ್ಲರ್ ಒಡತಿ. ಅದುವರೆಗೂ ಕತ್ತರಿಸಿಯೇ ಇರದ ಕೂದಲನ್ನು ಕತ್ತರಿಸಲು ಹೇಳಲು ಯಾವ ಪದಗಳನ್ನು ಬಳಸಬೇಕು ಎಂಬುದೇ ತೋಚದಾಗಿತ್ತು. ವ್ಯವಹಾರದಲ್ಲಿ ಪಳಗಿದ್ದ ಆಕೆ ನನ್ನ ಮುಜುಗರವನ್ನು ತಿಳಿಯಾಗಿಸುತ್ತ ಹತಾರಗಳೊಂದಿಗೆ ಸಿದ್ಧವಾದರು. 

    ಮೊದಲ ಸಲಕ್ಕೇ ನೆಲದ ಮೇಲೆ ಒಂದೂವರೆ ಅಡಿ ಉದ್ದದ ಕಪ್ಪು ಹಾವಿನಂತಿದ್ದ ಕೂದಲ ಸಿಂಬಿ ಕತ್ತರಿಸಿಕೊಂಡು ಬಿದ್ದಾಗ ನನ್ನ  ತಗ್ಗಿಸಿದ ತಲೆ ಇನ್ನಷ್ಟು ಹುದುಗಿ ಹೋಯಿತು. ಏನೋ ಕಳೆದುಕೊಂಡಂತೆ,  ತಪ್ಪು ಮಾಡಿದಂತೆ ಅದೇಕೆ ಭಾಸವಾಯಿತೋ ಕಾಣೆ. ಆಧುನಿಕತೆಯಂತೂ ತಲೆಯ ಮೇಲೂ, ನೆಲದ ಮೇಲೂ ಸೂರೆಗೊಂಡಿತ್ತು. ಪಕ್ಕದಲ್ಲಿ ಅಮ್ಮ ಕಣ್ಣು ಪಿಳುಕಿಸುತ್ತ ಏನನ್ನೂ ಮಾತಾಡಿದೆ, ಓದಲಾಗದ ಭಾವನೆಗಳನ್ನು ಮುಖದ ತುಂಬಾ ಹರವಿಕೊಂಡು ಕುಳಿತಿದ್ದರು.

    ತಲಾ ಹತ್ತು ರೂಪಾಯಿ ಬಸ್ ಚಾರ್ಜ್, ಇಪ್ಪತ್ತು ರೂಪಾಯಿ ‘ತಲೆದಂಡ ‘ ಕೊಟ್ಟು ಹೊರಟಾಗ ತಲೆ ಹಗುರವಾಗಿತ್ತೋ, ಭಾರವಾಗಿತ್ತೋ ಹೇಳಲಾಗದು. ಮನೆಯ ದಾರಿ ತುಮುಲದಲ್ಲೇ ಸಾಗಿತು. ಮನೆ ತಲುಪುತ್ತಿದ್ದಂತೆ ಅಮ್ಮನಿಗೆ  “ನೀವಾದರೂ ಕತ್ತರಿಸಬೇಡ ಎಂದು ಹೇಳಬಹುದಿತ್ತಲ್ಲ. ಅಷ್ಟು ಉದ್ದದ ಕೂದಲು ಕತ್ತರಿಸಿಕೊಂಡು ಕೆಳಗೆ ಬಿದ್ದಿದ್ದನ್ನು ಸುಮ್ಮನೇ ನೋಡುತ್ತಾ ಕುಳಿತು ಬಿಟ್ಟಿರಿ ” ಎಂದು ಸಣ್ಣ ತಗಾದೆಗೆ ಶುರು ಹಚ್ಚಿಕೊಂಡೆ. 

    ಆಧುನಿಕತೆ ಎನ್ನುವುದು ಒಡಲಾಳದ ಇಂಥ ದ್ವಂದ್ವಗಳಿಗೆ ಮುಖಾಮುಖಿಯಾಗುತ್ತ, ತಪ್ಪು-ಒಪ್ಪುಗಳ ತುಮುಲಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಹುಟ್ಟಿದ್ದು. ಮುಂದಿನ  ಕೇವಲ ಅರ್ಧ ದಶಕದಲ್ಲಿ ಬೆನ್ನಿಗಂಟಿದ್ದ ಇಂಥ ಎಲ್ಲ ಬಲಿಯದ ರೆಕ್ಕೆಗಳು ಬಲಿತು ಆಧುನಿಕತೆ  ರಾಕೆಟ್ ವೇಗದಲ್ಲಿ   ಮೇಲೇರಿತು. ಇದರ ಭಾಗವಾಗಿದ್ದ ಪಾರ್ಲರ್ ಗಳು ವ್ಯವಸ್ಥಿತವಾದ ಉದ್ಯಮವಾಗುವಷ್ಟರ ಮಟ್ಟಿಗೆ ಬೆಳೆದವು. ಸೌಂದರ್ಯ ಕೇವಲ ಕನ್ನಡಿಯೆದುರಿನ ಸ್ವ ಆಸ್ವಾದನೆಯಾಗಿ  ಉಳಿಯದೇ ಸಾಗರಗಳಾಚೆ ವಿಸ್ತರಿಸಿದ ಬ್ರಹತ್ ಉದ್ದಿಮೆಯಾಯಿತು. ಇದರ ಅಡಿಯಲ್ಲಿ ಸೌಂದರ್ಯ ವರ್ಧಕಗಳು,  ಮಾಡೆಲಿಂಗ್, ಫ್ಯಾಷನ್ ಷೋ, ಇವೆಂಟ್ ಮ್ಯಾನೇಜ್ಮೆಂಟ್ , ವಸ್ತ್ರ ವಿನ್ಯಾಸ, ಫ್ಯಾಷನ್ ಡಿಸೈನಿಂಗ್ ಮೊದಲಾದ ಹತ್ತು ಹಲವು ಉದ್ದಿಮೆಗಳು ಸೇರಿದವು. ಈ ಇಡಿಯ ಸರಪಳಿಯ ಆರಂಭದ ಕೊಂಡಿಯಾಗಿದ್ದ ಪಾರ್ಲರ್ ಅತ್ಯಂತ ಚಿಕ್ಕ ಘಟಕವಾಗಿ ಉಳಿಯಿತು. ಆದರೆ ತನ್ನ ಮಹತ್ವವನ್ನು ಕಳೆದುಕೊಳ್ಳದೆ ಗಲ್ಲಿ ಗಲ್ಲಿಗಳಲ್ಲಿ ನೂರಾರು ಸಂಖ್ಯೆಗಳಲ್ಲಿ ಅಸ್ತಿತ್ವವನ್ನು ಹಾಗೆಯೇ ಉಳಿಸಿಕೊಂಡಿತು. 

    ಮುಜುಗರಗಳನ್ನೆಲ್ಲ ಹೊಡೆದೋಡಿಸಿದ ಪಾರ್ಲರ್

    ಈಗ ದಿನನಿತ್ಯದ ಅಗತ್ಯವಾಗಿ, ಸೌಂದರ್ಯದ ಭಾಷ್ಯವಾಗಿ, ಮಕ್ಕಳು, ಯುವತಿಯರು, ಮುದುಕಿಯರೆನ್ನದೆ ಎಲ್ಲ ವಯೋಮಾನದ, ಎಲ್ಲ ಆರ್ಥಿಕ ಸ್ಥಿತಿಗಳ ಮಹಿಳೆಯರಿಗೆ ಅವರವರ ಅಗತ್ಯ, ಆದ್ಯತೆಗೆ ಅನುಗುಣವಾಗಿ ಒದಗುತ್ತ , ಸಭೆ- ಸಮಾರಂಭ, ಮದುವೆ ಮೊದಲಾದ ಎಲ್ಲ ಸಂದರ್ಭಗಳಲ್ಲೂ ಅನಿವಾರ್ಯವಾಗಿದೆ. ಜೊತೆಗೆ ಆಧುನಿಕತೆಯ ಪರಿಭಾಷೆಯನ್ನು ಬದಲಿಸುತ್ತ ಸಾಗಿದೆ. ಇದಿಲ್ಲದ ಊರುಗಳನ್ನು ಈಗ ಊಹಿಸಿಕೊಳ್ಳುವುದೂ ಕಷ್ಟ. 

    ಮನೆಯ ಹೆಣ್ಣು ಮಕ್ಕಳ ಅಣ್ಣ-ತಮ್ಮಂದಿರು, ಅಪ್ಪ-ಚಿಕ್ಕಪ್ಪಂದಿರು, ಕೊನೆಗೆ ಗಂಡ- ಬಾಯ್ ಫ್ರೆಂಡ್ ಗಳಿಗೆ ಕೂಡ ಪಾರ್ಲರ್ ಎದುರಿಗೆ  ಆಗಾಗ ಕಾಯಬೇಕಾದ ಸಂದರ್ಭಗಳು ಸರ್ವೇ ಸಾಮಾನ್ಯ. ಅಷ್ಟರ ಮಟ್ಟಿಗೆ ಬ್ಯೂಟಿ ಪಾರ್ಲರ್ ಗಳು  ಕ್ರಾಂತಿಯ ಹರಿಕಾರವಾಗಿವೆ.

    ನಾಯಿಕೊಡೆಗಳಂತೆ ಹುಟ್ಟಿಕೊಂಡರೂ  ಸುಭಿಕ್ಷವಾದ ವಹಿವಾಟು, ಪುಷ್ಕಳವಾದ ಆದಾಯದೊಡನೆ ಆರಾಮವಾಗಿದ್ದ   ಇಂಥ ಪಾರ್ಲರ್ ಗಳಿಗೆ ಆಘಾತ ಉಂಟಾಗಿದ್ದು  ಸಧ್ಯದ   ಕೊರೊನಾದಿಂದ. ಲಾಕ್ ಡೌನ್ ಸಂದರ್ಭದಲ್ಲಿ ಇವುಗಳನ್ನು ಮುಚ್ಚಲು ಆದೇಶಿಸಿದಾಗ ಮೊದಲು 15-20 ದಿನಗಳು ತಕ್ಕಮಟ್ಟಿಗೆ  ಸಹಜವಾಗಿಯೇ ಕಳೆದವು. ಆನಂತರ ತಲೆಕೂದಲು ಉದ್ದವಾಗಿತ್ತು. ಹುಬ್ಬು ಬೆಳೆದಿತ್ತು. ಫೇಶಿಯಲ್ ಇಲ್ಲದೇ ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲು ಹೆದರುವಂತಾಗಿತ್ತು. ಇದರ ಕುರಿತ ಜೋಕುಗಳೂ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದವು. ಮ್ಯಾನಿಕ್ಯೂರ್ , ಪೆಡಿಕ್ಯೂರ್ ಗಳಿಲ್ಲದೆ ಕೈ ಕಾಲು ಸುಕ್ಕುಗಟ್ಟಿದಂತೆ ಅನ್ನಿಸಲು ಶುರುವಾಯಿತು. ಮನೆಯಲ್ಲಿ  ಹೆಣ್ಣುಮಕ್ಕಳ ಈ  ಸೈಲೆಂಟ್ ಪೇಚಾಟಗಳು ಗಂಡಸರಿಗೆ, ಹುಡುಗರಿಗೆ ಉಚಿತ ರಿಕ್ರಿಯೇಷನ್ ಆದವು. ಅನ್ನುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವುದು ಮಹಿಳಾ ಸ್ಥಿತಿಯಾದರೆ ಹಾಲು ಕುಡಿದಷ್ಟು ಖುಷಿ ಗಂಡುಗಳಿಗೆ! ಆದರೆ ಈ ಖುಷಿಯೇನು ಬಹಳ ಕಾಲ ಉಳಿಯಲಿಲ್ಲ. ಹುಡುಗರ ತಲೆಗೂದಲು, ಗಡ್ಡ ಉದ್ದವಾಗತೊಡಗಿತು. ತಲೆಗೂದಲೆಂದರೆ ಹುಡುಗಿಯರಿಗಿಂತ ಕೊಂಚ ಹೆಚ್ಚೇ ಕಾಳಜಿ ಮಾಡುವ ಹುಡುಗರು ಫಜೀತಿಗಿಟ್ಟುಕೊಂಡರು. ವಿರಾಟ್ ಕೊಹ್ಲಿಯ ಪತ್ನಿ ಅವನ ಕೂದಲು ಟ್ರಿಮ್ ಮಾಡಿದ್ದನ್ನು ಕಂಡು ಅದೆಷ್ಟು ಜನ ಮರುಗಿದರೋ? ಎಲ್ಲರಿಗೂ ಒಂದೇ ಸಮಾಧಾನ ಎಂದರೆ ಹೊರಗಡೆ ಹೋಗುವಂತಿಲ್ಲ. ಬೇರೆಯವರು ನೋಡುವಂತಿಲ್ಲ. ಮನೆಯಲ್ಲೇ ಇರುವುದರಿಂದ ಹೇಗಿದ್ದರೇನು ಎಂಬ ಅನಿವಾರ್ಯ ಅಸಡ್ಡೆ ಎಲ್ಲ  ಕೊರಗುಗಳಿಂದ ಬಿಡುಗಡೆಗೊಳಿಸಿತು. ಹಾಗಾದರೆ ಇಷ್ಟು ದಿನಗಳ ಒಪ್ಪ-ಓರಣ ಎಲ್ಲ ಬೇರೆಯವರಿಗಾಗಿ . ತನಗಾಗಿ ಅಲ್ಲ!! ಓನಿಡಾ ಟಿವಿ ಹೇಳುತ್ತೆ ನೋಡಿ ‘ ನೇಬರ್ಸ್ ಎನ್ವಿ’ ಅಂತ ಆ ಥರಾ. 

    ಆದರೆ  ಕೊರೊನಾ ವಿಷಯದಲ್ಲಿ  ಇದು  ಅನ್ವಯವಾಗಲಿಲ್ಲ.  ಯಾಕೆಂದರೆ ಈ ಕೊರೊನಾ ಮುಖ ಮೂತಿ ನೋಡದೆ ಎಲ್ಲರಿಗೂ ಮುಸುಕು ಹಾಕಿಸಿ, ತೊಳಿ, ಬಳಿ, ತಿಕ್ಕು ಎಕ್ಸರ್ಸೈಜಿನಲ್ಲಿ ಮನೆಮಂದಿಯನ್ನೆಲ್ಲ ತೊಡಗಿಸಿಬಿಟ್ಟಿತ್ತಲ್ಲ ! ಪಕ್ಕದ ಮನೆಯವರ ಮುಖ ನೋಡುವುದಿರಲಿ ತಮ್ಮ ಮನೆಯ ಅಂಗಳ ದಾಟಲೇ ಭಯಪಡಬೇಕಾದ ಪರಿಸ್ಥಿತಿಯಲ್ಲಿ ಮೇಕಪ್, ಹೇರ್ ಡೈಗಳ ಬಗ್ಗೆ ವಿರಕ್ತಿ ಹುಟ್ಟಿಬಿಟ್ಟಿತ್ತು. ಮನೆಯನ್ನು, ಪಾತ್ರೆ- ಪಡಗಳನ್ನು, ಬಟ್ಟೆಯನ್ನು, ಸೊಪ್ಪು-ತರಕಾರಿಗಳನ್ನು, ಹಣ್ಣುಗಳನ್ನು ತೊಳೆದು, ತೊಳೆದು ಹೈರಾಣಾಗಿದ್ದು ಸಾಲದೇ ಮತ್ತೆ ಹೇರ್ ಡೈ ತೊಳೆಯುವುದಾ? ಇರಲಿ ಬಿಡು ಬಿಳಿ ಕೂದಲು. ಯಾರು ನೋಡುತ್ತಾರೆ ಎಂಬ ವೇದಾಂತಕ್ಕೆ ಎಡೆ ಮಾಡಿಕೊಟ್ಟಿತ್ತು. 

    ಸರಿಯಾದ ಸಮಯಕ್ಕೆ ರಾಮಾಯಣ, ಮಹಾಭಾರತ ಧಾರಾವಾಹಿಗಳ ಪ್ರಸಾರ ಬೇರೆ ಟಿವಿಯಲ್ಲಿ ಶುರುವಾಯ್ತು.  ನಾರುಬಟ್ಟೆಯುಟ್ಟು ಕಾಡಿಗೆ ಹೋಗುವ ರಾಜಕುಮಾರಿ ಸೀತೆಯನ್ನು ಉದ್ದ ಕೂದಲ ಶ್ರೀರಾಮ, ಭೀಷ್ಮ, ಧರ್ಮರಾಯರನ್ನು ನೋಡುವ ದೃಷ್ಟಿಕೋನವೇ ಈಗ ಬದಲಾಗಿತ್ತು.  ಹೆಂಗಸರು ಮನೆಯೆಂಬ ವನವಾಸದಲ್ಲಿ ಶಾಂತಿ ಅರಸಿದರೆ, ಗಂಡಸರು ತಮ್ಮ ಉದ್ದ ತಲೆಕೂದಲನ್ನು ಮುಟ್ಟಿ ಸಮಾಧಾನ ಮಾಡಿಕೊಂಡರು. ಪುರಾಣ ಪುರುಷರ ಉದ್ದ ಕೂದಲು ಅನಾಗರಿಕವಲ್ಲ. ಬದಲಾಗಿ ಕಾಲದ ಅಗತ್ಯ ಎಂಬ ದಿವ್ಯ ಜ್ಞಾನದ ಬಲ್ಬ್ ಇವರ ಜೊಂಪೆ ಕೂದಲಲ್ಲಿ ಹೊತ್ತಿ ಅವರ ಮನವೆಲ್ಲ ಬೆಳಕಾಯಿತು.

     ಒಂದಾನೊಂದು ಕಾಲದಲ್ಲಿ ವಿಸ್ತಾರವಾಗಿ ಹರಡಿದ್ದ ಕಾಡಿನಲ್ಲಿ ಇಂಥ ‘ ನರ ಮನುಸರು’ ಇದ್ದರು. ಈಗ ಅದರ ದುಪ್ಪಟ್ಟು ವಿಶಾಲವಾದ  ಕಾಂಕ್ರೀಟ್ ಕಾಡಿನಲ್ಲಿ ಈ ‘ ನಾಗರಿಕರು’ ಇರುವ ಪ್ರಸಂಗ ಬಂದಿದೆ ಅಷ್ಟೆ ಎಂದು ಹಿಂದಕ್ಕೆಳೆದು  ತಂದು ನಿಲ್ಲಿಸಿರುವ ಕಾಲ ಮುಸಿಮುಸಿ ನಕ್ಕಿದ್ದು ಇವರ್ಯಾರಿಗೂ ಕಾಣಲಿಲ್ಲ.

    Photo by Anastasiia Chepinska on Unsplash

    ವಯಸ್ಸು ಹೊಸದು , ಪ್ರೀತಿ ಹೊಸದು , ಅನುರಾಗ ಹೊಸದು, ಪ್ರತಿಯೊಂದೂ ಹೊಸದು

    ಊರು …..ಊರಿಗೆ ಹೊಂದಿಕೊಂಡಂತಿರುವ ಹಳ್ಳಿ .‌ ಅದರಲ್ಲೊಂದು ಬಾಡಿಗೆ ಮನೆಯ ಹುಡುಗ. ಪ್ರೌಢ ವಯಸ್ಸು. ಪ್ರೀತಿ ಪ್ರೇಮವೆಂಬ ಅವಳಿ ಜವಳಿ ಮನಸ್ಸನ್ನು ಮೆದುಲನ್ನು ಬಾಡಿಗೆ ಪಡೆದುಕೊಂಡಂತಹ ಸಮಯ .

    ಓದು, ತಿಂಡಿ, ಆಟ , ನಿದ್ದೆ , ಸ್ನೇಹ ಎನ್ನುವ ಹೊತ್ತಲ್ಲೇ….ಎದುರು ಮನೆಯಲ್ಲಿ ಒಂದು ಸ್ವಂತ ಮನೆಯ ಹುಡುಗಿ ಸ್ವಭಾವದಲ್ಲೂ ಪ್ರಭಾವದಲ್ಲೂ ಸೌಮ್ಯತೆಯನ್ನು ಮೈ ಗೂಡಿಸಿಕೊಂಡಿದ್ದಂತಹ ಹುಡುಗಿ .‌‌ ಅದಾವ ಘಳಿಗೆಯಲ್ಲಿ ಇಬ್ಬರ ನೋಟ ಬೆರೆಯಿತೋ, ಅವನಿಗರಿವಿಲ್ಲದಂತೆಯೇ ಅವನಿಗೂ ಅವಳಿಗೂ ಪರಿಚಯವಿಲ್ಲದ ಪರಿಚಯ . ತುಂಬಾನೇ ಆಪ್ತವೆನಿಸುವಷ್ಟು ನೋಟ . ಕಣ್ಣಲ್ಲೇ ಗಂಟಗಟ್ಟಲೇ ಮಾತು .ಮನಸ್ಸು ಕೊಡಬೇಕಾ ಪಡೆಯಬೇಕಾ ಎನ್ನುವ ಗೊಂದಲ , ನಗಲೂ ಚೌಕಾಸಿ . ಸ್ಕೂಲು ಮುಗಿಸಿ ಬಿಳೀ ಬಣ್ಣದ ಷರ್ಟು ಕಡುನೀಲಿ ಸ್ಕರ್ಟಿನ ಯೂನಿಫಾರಂ ಧರಿಸಿ BSA SLR ಬೈಸಿಕಲ್ ಮೇಲೆ ಬರುತ್ತಿದ್ದ ಅವಳನ್ನು ನೋಡುತ್ತಿದ್ದರೆ ಇವನಿಗೆ ಸಣ್ಣ ಭಯ , ಬಲು ದೊಡ್ಡ ಖುಷಿ .

    ಕಣ್ಣುಮಿಟಿಕಿಸಿದರೆ ಅವಳು ಮನೆ ಹೊಕ್ಕಿಬಿಡುತ್ತಾಳೆ ಪುನಃ ಹೊರಗೆ ಬರುತ್ತಾಳೋ ಇಲ್ಲವೋ ಎಂಬ ನಿರಾಶೆ . ಯಾರು ನೋಡಿದರೆ ನನಗೇನು ಎಂಬ ತಾತ್ಸಾರ . ಅಕಸ್ಮಾತ್ ನೋಡಿ ಕೇಳಿಬಿಟ್ಟರೆ ಎಂಬ ಭಯ . ಒಟ್ಟಿನಲ್ಲಿ ಹರೆಯದ ಯೌವನದ ಹೊಸ ಪ್ರೀತಿ ಅದು . ಅವಳ ಕಣ್ಣೋಟಕ್ಕೇ ಕಾಯೋ ನಿತ್ಯ ನಿರಂತರ ಕಾಯಕ ಅವನದ್ದಾಗಿತ್ತು .ಆಟ ಆಡುತ್ತಿರುವಾಗ ಊಟ ಮಾಡುತ್ತಿರುವಾಗ ಪಾಠ ಓದುತ್ತಿರುವಾಗ ರಪ್ ಅಂತ ನೆನಪಾಗುತ್ತಿದ್ದಳು . ನೋಡಲು ನೆಪವಾಗುತ್ತಿದ್ದಳು . ಶುದ್ಧ ಪ್ರೀತಿಗೆ ಸಾಕ್ಷಿ ಅವಳು , ಪರಿಶುದ್ಧ ಪ್ರೀತಿಗೆ ಅರ್ಥ ಅವಳು. ಅರ್ಥವಾಗದ ಪ್ರೀತಿಯ ವ್ಯಾಕರಣಕ್ಕೆ ನಿಘಂಟವಳು .

    ಒಂದು ಕ್ಷಣ ಅವಳು ಕಾಣಲಿಲ್ಲವೆಂದರೂ ಕಂಗಾಲಾಗುವಂಥ ಮನಸ್ಥಿತಿ ಅವನದ್ದಾಗಿತ್ತು . ಇಬ್ಬರಿಗೂ ಮೊದ ಮೊದಲಾ ಪ್ರೀತಿ ಎಷ್ಟು ಚೆಂದ ಎನ್ನಿಸುತ್ತಿತ್ತು . ಪ್ರಪಂಚ ದುಂಡಗಿಲ್ಲ ಹೃದಯಾಕಾರದಲ್ಲಿದೆ ಎನ್ನಿಸುವಷ್ಟು ಪರಸ್ಪರ ಆವರಿಸಿಕೊಂಡಿದ್ದರು . ಇಡೀ ದಿನ ತುಟಿಯಾಡಿಸದ ನಾಲಿಗೆಯನ್ನೂ ನಲುಗಾಡಿಸದ ಪಿಸುಮಾತಿನ ಪ್ರೀತಿ ಇಬ್ಬರದ್ದಾಗಿತ್ತು . ಅವಳಿಗೆ ತನ್ನ ಮೇಲೆ ಪ್ರೀತಿ ಇದೆಯಾ ? ಗೊತ್ತಿಲ್ಲ , ಒಮ್ಮೆಯೂ ಅವನು ಕೇಳಿ ತಿಳಿದುಕೊಳ್ಳುವ ಗೋಜಿಗೇ ಹೋಗಲಿಲ್ಲ .

     ಅವಳು ತುಂಬಾ ಶ್ರದ್ಧೆಯಿಂದ ಅವನಿಗಾಗಿ ಕಾಯುತ್ತಿದ್ದಳು . ಪದೇ ಪದೇ ನೆಪವೊಡ್ಡಿ ಮನೆ ಅಂಗಳದ ಕೆಲಸಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಳು . ಒಂದು ನೂರು ಪ್ರೆಶ್ನೆಗಳನ್ನು ಮೌನದಲ್ಲೇ ಕೇಳುತ್ತಿದ್ದಳು ಸಾವಿರ ಉತ್ತರಗಳನ್ನು ಕಣ್ಣಲ್ಲೇ ಉತ್ತರಿಸುತ್ತಿದ್ದಳು . ಅವನು ಕಾಣದಿದ್ದಾಗ ವಿಚಲಿತಳಾಗುತ್ತಿದ್ದಳು . ಕಂಡಾಗ ಹರ್ಷಿಸುತ್ತಿದ್ದಳು . ಹಾಗಂತ ಅವಳಿಗೆ ಸಂಬಂಧಗಳ ಬರವಿರಲಿಲ್ಲ .ಒಟ್ಟು ಕುಟುಂಬದ ಭಾಂಧವ್ಯವೇ ಅವಳಿಗಿತ್ತು . ಇಬ್ಬರಿಗೂ…. ಆ ವಯಸ್ಸು ಹೊಸದು , ಪ್ರೀತಿ ಹೊಸದು , ಅನುರಾಗ ಹೊಸದು, ಪ್ರತಿಯೊಂದೂ ಹೊಸದು .

    ಬದುಕು ಒಂದು ಪ್ರಯಾಣ ಅಂತಾರೆ ಅದರಂತೆ ಆ ಪ್ರಯಾಣದಲ್ಲಿ ಅವನ ಜೊತೆ ಪ್ರಯಾಣಿಸಿದ ಹುಡುಗಿಯವಳು . ಅವನೊಂದು ಸ್ಟಾಪಿನಲ್ಲಿ ಇವಳೊಂದು ಸ್ಟಾಪಿನಲ್ಲಿ ಇಳಿದ ಯಾತ್ರಿಕರು ಅವರು

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಪಬ್ಜಿ ಗೇಮ್ ನಿಷೇಧ: ಹೊರಹೋದ ಬಹುದೊಡ್ಡ ಪಿಡುಗು

    ಚೀನಾದ ಅತಿಕ್ರಮಣದ ಕುತಂತ್ರದಿಂದ ಭಾರತಕ್ಕೆ ಬಲುದೊಡ್ಡ ಲಾಭ ಆಗಿದೆ. ಅದುವೇ ಮುಂದಿನ ಪೀಳಿಗೆ ಅಂದರೆ ಮಕ್ಕಳನ್ನು ಹಂತ ಹಂತವಾಗಿ ಕೊಂದು ಹಾಕುವ, ಅವರ ಮಾನಸಿಕತೆಯನ್ನೇ ಹಾಳುಗೆಡವುವ ಪಬ್ಜಿ ಗೇಮ್ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧರಿಸಿರುವುದು. ಇದರೊಂದಿಗೆ ಬಹುದೊಡ್ಡ ಪಿಡುಗು ದೇಶದಿಂದ ಹೊರ ನಡೆದಂತಾಗಿದೆ.

    ಕೊರೊನಾ ಸರಣಿಯ ಸಾರ್ಸ್, ಮಾರ್ಸ್, ಕೋವಿಡ್ -19 ಹೀಗೆ ಎಲ್ಲವೂ ಚೀನಾದ ಕೊಡುಗೆ ಎಂದು ಪರಿಗಣಿತವಾಗಿದೆ. ಜಗತ್ತಿನ ಸ್ವಾಸ್ಥ್ಯ ಕಾಪಾಡುವ ಯಾವುದೇ ಒಂದು ಉತ್ತಮ ಪ್ರಾಡಕ್ಟ್ ಚೀನಾದಿಂದ ಬಂದಿದೆ ಎಂದು ಹೆಸರಿಸಲು ಸಾಧ್ಯವೇ ಇಲ್ಲ. ಇವುಗಳ ಪೈಕಿ ಈಗ ನಿಷೇಧಕ್ಕೆ ಒಳಗಾಗಿರುವ ಪಬ್ಜಿ ಎಂಬ ಗೇಮಿಂಗ್ ಕೂಡ ಸೇರ್ಪಡೆಯಾಗುತ್ತದೆ. ಮಕ್ಕಳ ಮನಸ್ಸನ್ನು ಹಾಳು ಮಾಡಿ ಅವರನ್ನು ಮಾನಸಿಕ ಗುಲಾಮರನ್ನಾಗಿಸುವ ಈ ಮೊಬೈಲ್ ಗೇಮ್ ಜಗತ್ತಿನಲ್ಲಿ ಏನೆಲ್ಲಾ ಅನಾಹುತ ಮಾಡಿದೆ ಎಂದರೆ, ಒಮ್ಮೆ ಡೌನ್ ಲೋಡ್ ಮಾಡಿದರೆ ಸಾಕು ಇದೊಂದು ಮಾದಕ ದ್ರವ್ಯದಂತೆ ಕೆಲಸ ಮಾಡುತ್ತದೆ. ಅದೊಂದು ವ್ಯಸನವಾಗಿ (ಅಡಿಕ್ಷನ್) ಕಾರ್ಯ ನಿರ್ವಹಿಸಿ ಮಕ್ಕಳ ಬಾಳನ್ನೇ ಹಾಳು ಮಾಡುತ್ತದೆ.

    ಅಡಿಕ್ಷನ್ ಪ್ರಮಾಣ

    ಇತ್ತೀಚೆಗಷ್ಟೇ ಪಂಜಾಬಿನ 17 ವರ್ಷದ ಹುಡುಗನೊಬ್ಬ ತನ್ನ ಹೆತ್ತವರ ಬ್ಯಾಂಕ್ ಅಕೌಂಟ್ ನಿಂದ 16 ಲಕ್ಷ ರೂ.ಗೆ ಕನ್ನ ಹಾಕಿದ್ದ. ಕೇಳಿದರೆ ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಪಾಠಕ್ಕಾಗಿ ಈ ಹಣ ವ್ಯಯ ಮಾಡಿದ್ದೆ ಎಂದು ಸಮಜಾಯಿಸಿಕೊಟ್ಟಿದ್ದ. ಆದರೆ ನಿಜವಾಗಿ ಆತ ಈ ಪಬ್ಜಿ ಗೇಮ್ ನ ಹುಚ್ಚಾಟಕ್ಕೆ ಬಿದ್ದಿದ್ದ. ಅದಕ್ಕಾಗಿ ಬೇಕಾಗುವ ಸಾಮಗ್ರಿಗಳ (ವರ್ಚುವಲ್ ಸಾಮಗ್ರಿಗಳಾದ ಗನ್, ಮದ್ದು ಗುಂಡು ಇತ್ಯಾದಿ) ಖರೀದಿಗಾಗಿ ಈ ಹಣವನ್ನು ವ್ಯಯಿಸಿದ್ದ. ಅವರ ತಂದೆ ಈ ಹಣವನ್ನು ತಮ್ಮ ಆರೋಗ್ಯದ ಸಮಸ್ಯೆಯ ನಿವಾರಣೆಗಾಗಿ ಉಳಿತಾಯ ಮಾಡಿದ್ದರು. ಇದು ಹಣದ ಸಮಸ್ಯೆಯಾದರೆ ಇದನ್ನು ಆಡುತ್ತಾ ಪ್ರಾಣ ಕಳೆದುಕೊಂಡ ಮಕ್ಕಳ ಪ್ರಮಾಣವೂ ಕಡಿಮೆಯೇನಿಲ್ಲ. ಅಧಿಕೃತ ಲೆಕ್ಕಾಚಾರದ ಪ್ರಕಾರ ಇದು 10ನ್ನು ದಾಟಿದ್ದರೆ, ಉಳಿದಂತೆ ಅಜ್ಞಾತವಾಗಿ ಉಳಿದ ಪ್ರಕರಣಗಳಷ್ಟೋ ಗೊತ್ತಿಲ್ಲ. ಇದರ ವ್ಯಸನ ಎಷ್ಟರ ಮಟ್ಟಿಗೆ ಇದೆಯೆಂದರೆ, ಬೆಳಗಾವಿಯಲ್ಲಿ ಈ ಗೇಮ್ ಆಡುತ್ತಿದ್ದ ಬೈಯ್ದ ಅಪ್ಪನ ತಲೆಯನ್ನೇ ಕಡಿದು 21 ವರ್ಷದ ಮಗ ಕೊಲೆ ಮಾಡಿದ್ದು, ವಿಜಯಪುರದಲ್ಲಿ ಇನ್ನೊಬ್ಬ ಹುಡುಗ ಪಬ್ಜಿ ಗೇಮ್ ನಲ್ಲಿ ಸೋತ ಬಳಿಕ ಬಾಜಿಯಂತೆ ನೀರಿಗೆ ಹಾರಿದ ನಿದರ್ಶನಗಳೂ ಇದರಲ್ಲಿ ಸೇರಿದೆ.

    ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ಗೇಮ್ ವ್ಯಸನವನ್ನು ಹೊಂದಿರುವ ಹದಿಹರೆಯದವರ ಸಂಖ್ಯೆ  10ರಿಂದ 15 ಲಕ್ಷ ಎಂದು ಹೇಳಲಾಗುತ್ತಿದೆ.

    ಅಗಾಧ ಮೌಲ್ಯದ ಇಂಡಸ್ಟ್ರಿ

    ಭಾರತದಲ್ಲಿ ಆನ್ ಲೈನ್ ಗೇಮಿಂಗ್ ಕ್ಷೇತ್ರ ಇನ್ನಷ್ಟೇ ಅಂಬೆಗಾಲು ಇಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಮಾರ್ಟ್ ಫೋನ್ ಯಾವಾಗ ಕಾಲಿಟ್ಟಿತೋ ಆ ಕ್ಷಣದಿಂದ ಇದು ಶರವೇಗದಲ್ಲಿ ಮುನ್ನಡೆಯುತ್ತಿದೆ. ಸದ್ಯದ ಮಟ್ಟಿಗೆ 1.4 ಶತ ಕೋಟಿ ಡಾಲರ್ ಮೌಲ್ಯದ ಇದು 2022ರ ಹೊತ್ತಿಗೆ 5 ಶತ ಕೋಟಿ ಡಾಲರ್ ಮೌಲ್ಯದ ಉದ್ಯಮವಾಗಲಿದೆ. 24 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಶೇ. 66 ನಗರ ವಾಸಿಗಳು ಇದರ ವ್ಯಸನ ಹಚ್ಚಿಕೊಂಡಿದ್ದಾರೆ ಎಂದು ಕೆಪಿಎಂಜಿ ವರದಿ ಹೇಳುತ್ತದೆ. ಇದರ ಜತೆಗೆ ಉದ್ಯೋಗಿಗಳು, ಮನೆಯಲ್ಲೇ ಇರುವ ಗೃಹಿಣಿಯರು ಕೂಡ ಸೇರಿದ್ದಾರಂತೆ. ಚೀನಾವು ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿರುವುದು ಕೂಡ ಫೋನ್ ಬಳಕೆಯ ಜತೆಗೆ ಆನ್ ಲೈನ್ ಗೇಮ್ ಪ್ರಮಾಣ ಹೆಚ್ಚಲು ಕಾರಣ ಎಂದು ಅದು ಅಭಿಪ್ರಾಯ ಪಟ್ಟಿದೆ.

    ಹಲವು ದೇಶಗಳಲ್ಲಿ ನಿಷೇಧ

    ಹೀಗೆ ಎಲ್ಲರಿಗೂ ಅನಾಹುತ ಹಂಚುವ ಚೀನಾ ಪಬ್ಜಿ ಗೇಮ್ ನ ಮೇಲೆ ಮೊದಲ ವರ್ಷವೇ ನಿರ್ಬಂಧ ಹೇರಿತ್ತು. ಅಲ್ಲಿ 13 ವರ್ಷಕ್ಕಿಂತ ಕೆಳಗಿನವರು ಈ ಗೇಮ್ ಆಡುವುದು ಶಿಕ್ಷಾರ್ಹ ಅಪರಾಧ. ಇದಕ್ಕಾಗಿ ಪ್ರತ್ಯೇಕ ಆಪ್ ಕೂಡ ಚೀನಾ ಸಿದ್ಧ ಪಡಿಸಿತ್ತು.  ಡಿಜಿಟಲ್ ಲಾಕ್ ಮೂಲಕ ಇಂತಹ ನಿರ್ಬಂಧವನ್ನು ಸರಿಯಾಗಿ ಜಾರಿಗೆ ತರುವಲ್ಲಿ ಅದು ಯಶಸ್ವಿಯಾಗಿತ್ತು. ಮುಖ ಚಹರೆ ಗುರುತು, ಐಡಿ ಗುರುತು ಮೂಲಕ ಇಂತಹ ನಿರ್ಬಂಧ ಯಶಸ್ವಿಯಾಗಿತ್ತು.

    ಇದರ ಮೇಲೆ ನಿಷೇಧ ಹೇರಿದ ದೇಶಗಳ ಪೈಕಿ ಪಾಕಿಸ್ತಾನ, ಜೋರ್ಡನ್, ಇರಾಕ್ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಇದರ ಅನಾಹುತದ ಅರಿವು ಆದ ಕೂಡಲೇ ಈ ದೇಶಗಳು ಗೇಮ್ ಮೇಲೆ ನಿಷೇಧ ಹೇರಿದ್ದವು. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ರಾಜ್ಯಗಳು ಈ ಗೇಮ್ ಮೇಲೆ ನಿಷೇಧ ಹೇರಿದ್ದವು. ಆದರೆ, ಅಮೆರಿಕದ ಸುಪ್ರೀಂ ಕೋರ್ಟ್ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಸಂವಿಧಾನ ನೀಡಿದ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಿ ಅದನ್ನು ವಜಾಗೊಳಿಸಿತ್ತು.

    ಕಾನೂನು ಹೋರಾಟ

    ಹಾಗೆಂದು ಭಾರತದಲ್ಲಿ ಈ ಮಾರಕ ಗೇಮ್ ನಿಷೇಧಕ್ಕೆ ಈ ಮೊದಲೇ ಹೋರಾಟ ಆಗಿಲ್ಲವೆಂದೇನಿಲ್ಲ. ಇದರ ನಿಷೇಧಕ್ಕೆ ಆದೇಶ ನೀಡುವಂತೆ ಕೋರಿ ಹಿರಿಯ ವಕೀಲ ಎಚ್ ಸಿ ಅರೋರಾ ಎನ್ನುವವರು ಪಂಜಾಬ್-ಹರಿಯಾಣ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದೊಂದು ಮಾದಕ ದ್ರವ್ಯದಂತೆ ವ್ಯಸನಕ್ಕೆ ಒಳಪಡಿಸುವ ಗೇಮ್ ಎಂದವರು ಪ್ರತಿಪಾದಿಸಿದ್ದರು. ಆ ಬಳಿಕ 2019ರಲ್ಲಿ ಅಹಮದಾಬಾದ್, ರಾಜ್ ಕೋಟ್, ಸೂರತ್, ವಡೋದರ ಮತ್ತು ಭಾವನಗರದಲ್ಲಿ ಇದರ ಮೇಲೆ ನಿಷೇಧ ಹೇರಲ್ಪಟ್ಟಿತ್ತು.ಮುಂಬೈ ಹೈಕೋರ್ಟ್ ನಲ್ಲಿ ಕೂಡ ಇಂತಹುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.

    ನಮಗೂ ಕರೋನ ಬಂದು ಹೋಗಿರಬಹುದೇ?

    ತನ್ನ ಇರುವಿನ ಸುಳಿವನ್ನೇ ನೀಡದೆ, ಮನುಷ್ಯರಲ್ಲಿ ಹರಡಬಹುದಾದ ಸೋಂಕು ಉಂಟಾದರೆ ಅದು ನಮಗೆ ಬಂದು ಹೋಗಿರಬಹುದೇ ಎಂಬ ಸಂಶಯವೂ ಜನರಲ್ಲಿರುತ್ತದೆ. ಕೊರೊನಾ ಸೋಂಕು ಕೂಡ ಇಂತಹ ಒಂದು ರಹಸ್ಯ ಸೋಂಕಾಗಿರುವುದು, ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ರೀತಿ ಕಾಣಿಸಿಕೊಳ್ಳುತ್ತಿರುವುದು ಪ್ರತಿದೇಶದಲ್ಲಿ ವರದಿಯಾಗಿರುವ ವಿಚಾರ.ಆದರೆ ಈ ಆರು ತಿಂಗಳಲ್ಲಿ ಬಂದು ಹೋಗಿರುವ ಕೆಮ್ಮು-ಜ್ವರಗಳೆಲ್ಲ ಕೋವಿಡ್ ಸೋಂಕೇ ಅಲ್ಲದಿದ್ದರೂ ತಮಗೆ ಸೋಂಕು ಬಂದುಹೋಗಿರಬಹುದೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಜನರನ್ನು ಸುಪ್ತವಾಗಿ ಕಾಡುತ್ತಿದೆ. ರೋಗ ಲಕ್ಷಣಗಳ ಅಗತ್ಯವಿಲ್ಲದೆಯೂ ಕೋವಿಡ್ ಬರಬಹುದಾದ್ದರಿಂದ ಅಕ್ಷರಶಃ ನಮ್ಮಲ್ಲಿ ಯಾರಿಗೆ ಬೇಕಾದರೂ ಸೋಂಕು ಇರಬಹುದು ಅಥವ ಬಂದುಹೋಗಿರಬಹುದು.

    ಒಂದು ದಿನ ಅಥವಾ ಎರಡು ದಿನಗಳ ಕಾಲ ಬಂದು ಹೋದದ್ದು ಸಣ್ಣ ಜ್ವರ -ಕೆಮ್ಮು ಕೋವಿಡ್ ಆಗಿರಬಹುದೇ? ಕೋವಿಡ್ ಪರೀಕ್ಷೆಗೆ ತೆರಳಲೇ, ಬೇಡವೇ?- ಎಂದು ಯೋಚಿಸುತ್ತಿರುವಾಗಲೇ ಮತ್ತೆ ಪೂರ್ಣ ಆರೋಗ್ಯಕ್ಕೆ ಮರಳಿದ ಲಕ್ಷಾಂತರ ಜನರೂ ಇದ್ದಾರೆ. ಅವರಲ್ಲೂ ಈ ಪ್ರಶ್ನೆಗಳಿವೆ. ಆದರೆ ಹೇಳಲು ಅಪರಾಧಿ ಪ್ರಜ್ಞೆಅವರನ್ನು ಕಾಡುತ್ತಿರಬಹುದು. ತಾವೂ ಈ ಸೋಂಕನ್ನು ಹರಡುವಲ್ಲಿ ಅರಿವೇ ಇಲ್ಲದೆ  ಭಾಗಿಯಾಗಿರಬಹುದೆ ಎನ್ನುವ ಸಂಶಯ ಇವರನ್ನ ಭಾಧಿಸುತ್ತಿರಬಹುದು.

    ಆತ್ಮಸಾಕ್ಷಿಯುಳ್ಳ, ಕರ್ತವ್ಯ ಪ್ರಜ್ಞೆಯಿರುವ ಎಲ್ಲರಲ್ಲೂ ತಾವೊಂದು ಅಂಗಡಿಗೆ ಹೋಗಿ ಬಂದರೂ ಕೋವಿಡ್ ಬಂದಿರಬಹುದೇ ಅಥವಾ ಅದನ್ನು ಹರಡುವಲ್ಲಿ ತಾವೊಂದು ಅಪರಾಧ ಎಸಗಿರಬಹುದೇ ಎನ್ನುವ ವಿಚಿತ್ರ ಅನುಭೂತಿಗಳು ಕಾಡುತ್ತಿರುವ ಅತ್ಯಂತ ವಿರಳವಾದ,ವಿಶೇಷವಾದ ಕಾಲ ಘಟ್ಟವಿದು

    ಮೌನವಾಗಿ ಹರಡಿ ಹಬ್ಬುತ್ತಿರವ ಸೋಂಕು

    ಭಾರತದಲ್ಲಂತೂ ಮೌನವಾಗಿ ಹರಡಿ ಹಬ್ಬುತ್ತಿರವ ಸೋಂಕಿನ ವರದಿಗಳು ಅಪಾರಮಟ್ಟದಲ್ಲಿವೆ.ಆಗಾಗ ಕೆಮ್ಮೋ ಜ್ವರವೋ ಬರುವುದು ಪುಟ್ಟ ಮಕ್ಕಳಲ್ಲಿ ಅತ್ಯಂತ ಸಾಮಾನ್ಯ.ಆದರೆ ಕಳೆದ ತಿಂಗಳುಗಳಲ್ಲಿ ಮಕ್ಕಳಿಗೆ ಬಂದು ಹೋಗಿರಬಹುದೇ? -ಎನ್ನುವ ಅನುಮಾನಗಳು ನಮ್ಮಲ್ಲಿ ತಲೆ ಎತ್ತುತ್ತಿವೆ.ಹಾಗಿರುವಾಗ ಇಂಥಹ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ನೆಮ್ಮದಿಯಲ್ಲವೇ?

    ಮೊದಲಿಗೆ ನಮ್ಮಲ್ಲಿ ಕೊರೊನಾ ಲಕ್ಷಣಗಳಿದ್ದವೇ ಎಂದು ಆಲೋಚಿಸಬೇಕಾಗುತ್ತದೆ.

    ಕೊರೋನಾ ಸೋಂಕಿನ ಲಕ್ಷಣಗಳು

    ಈ ವೇಳೆಗೆ ಕೊರೊನಾ ಸೋಂಕಿನ ಮುಖ್ಯ ಲಕ್ಷಣಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ.

    1.ಜ್ವರ ಬರುವುದು

    ದೇಹದ ತಾಪಮಾನವನ್ನು ನೋಡಿಕೊಳ್ಳಲು ಅಳೆಯುವ ಮಾಪಕಗಳನ್ನು ಬಳಸಲೇಬೇಕು ಎಂದೇನಿಲ್ಲ. ಆದರೆ ನಿಮ್ಮ ದೇಹದ ಉಷ್ಣತೆ ಏರಿದಂತಾದರೆ ಅದು ನಿಮಗೆ ತಿಳಿಯುತ್ತದೆ.ಎದೆ ಅಥವಾ ಬೆನ್ನನ್ನು ಮುಟ್ಟಿದರೆ ಅದು ನಿಮ್ಮ ಅನುಭವಕ್ಕೆ ಬರುತ್ತದೆ.

    2. ಹೊಸದಾಗಿ ಶುರುವಾಗುವ ಅವಿರತ ಕೆಮ್ಮು

    ಅಂದರೆ ಗಂಟೆಯೊಂದರಲ್ಲಿ ಬಹಳಷ್ಟು ಕೆಮ್ಮುವುದು ಅಥವಾ ದಿನವೊಂದರಲ್ಲಿ ಮೂರು ಅಥವಾ ಅದಕ್ಕಿನ್ನ ಹೆಚ್ಚು ಬಾರಿ ಅವಿರತ ಕೆಮ್ಮು ಬರುವುದು. ಹಳೆಯ ಗೂರಲು, ಕಫದ ಕೆಮ್ಮು ಇತ್ಯಾದಿ ಇರುವವರು ಅದಕ್ಕಿನ್ನ ಹೆಚ್ಚಿನ ಕೆಮ್ಮು ಬಂದಿತೇ ಎಂದು ಗಮನಿಸಬೇಕಾಗುತ್ತದೆ.

    3. ನಿಮ್ಮ ವಾಸನಾ ಗ್ರಹಿಕೆ ಮತ್ತು ರುಚಿಯ ಗ್ರಹಿಕೆ ಕುಂದುವುದು ಅಥವಾ ಇಲ್ಲವಾಗುವುದು

    ಇದು ಒಂದೆರಡು ದಿನವಿರಬಹುದು ಅಥವಾ ಒಂದು ವಾರವೇ ಇರಬಹುದು.

    ಒಟ್ಟಿನಲ್ಲಿ ಮೇಲಿನ ಮೂರು ಲಕ್ಷಣಗಳಲ್ಲಿ ಎಲ್ಲ ಅಥವಾ ಯಾವುದಾದರೂ ಒಂದಾದರೂ ಇದ್ದರೆ ಅಥವಾ ಬಂದುಹೋಗಿದ್ದರೆ ಅದು ಕೊರೊನಾ ಸೋಂಕನ್ನು ಹೋಲುತ್ತದೆ.

    ಇತರೆ : ಇವಲ್ಲದೆ ಮೈ ಕೈ ನೋವು, ಗಂಟಲು ನೋವು, ತಲೆನೋವು, ವಾಂತಿ-ಬೇಧಿ, ಮೂಗು ಕಟ್ಟುವುದು ಅಥವಾ ಸೋರುವುದು ಮುಂತಾದ ಎಲ್ಲ ಲಕ್ಷಣಗಳನ್ನು ಜನರು ವರದಿಮಾಡಿದ್ದಾರೆ. ಕೆಲವರಲ್ಲಿ ಉಸಿರಾಟದ ತೊಂದರೆಗಳಾಗಿದ್ದರೆ ಇನ್ನು ಹಲವರಲ್ಲಿ ಅತ್ಯಂತ ತೀವ್ರ ನ್ಯೂಮೋನಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನು ಕೆಲವರಲ್ಲಿ ಯಾವುದೇ ಲಕ್ಷಣಗಳನ್ನು ಉಂಟುಮಾಡದ ವೈರಸ್ ಗಳು ಅವರಿಂದ ಸದ್ದಿಲ್ಲದೆ ಇನ್ನೊಬ್ಬರಿಗೆ ನೆಗೆದಿವೆ.

    ಅವರವರ ಲಕ್ಷಣಗಳಿಗನುಸಾರವಾಗಿ ಜನರು ಗುಣಮುಖವಾಗುತ್ತಾರೆ. ಅಂದರೆ ಕಡಿಮೆ ಲಕ್ಷಣಗಳಿರುವವರು ಎರಡು ವಾರಗಳಲ್ಲಿ ಗುಣಮುಖರಾದರೆ ಹೆಚ್ಚಿನ ತೊಂದರೆ ಅನುಭವಿಸುವ ಜನರು ಆರುವಾರಗಳ ಕಾಲ ತೆಗೆದುಕೊಳ್ಳಬಹುದು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಾಗುವ ಜನರು ಗುಣಮುಖರಾಗಲು ಮತ್ತೂ ಹೆಚ್ಚಿನಕಾಲ ಬೇಕಾಗಬಹುದು.

    ಮಕ್ಕಳಲ್ಲಿ ಮೇಲಿನ ಎಲ್ಲ ಲಕ್ಷಣಗಳು ಅತ್ಯಂತ  ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಬಹುತೇಕರು ಅತ್ಯಂತ ಬೇಗನೆ ಚೇತರಿಕೆಯನ್ನು ತೋರಿದ್ದಾರೆ.

    ಕೊರೊನಾ ಬಂದು ಹೋಗಿದೆಯೇ ಎಂದು ತಿಳಿಯುವುದು ಹೇಗೆ?

    ಬಹಳಷ್ಟು ಜನರ ಜೊತೆ ಒಡನಾಡಿದ ಜನರಿಗೆ ತಮಗೆ ಕೊರೊನಾ ಬಂದು ಹೋಗಿರಬಹುದೇ ಎನ್ನುವ ಅನುಮಾನವಿರಬಹುದು. ಅಥವಾ ಕೊರೊನಾ ಪರೀಕ್ಷೆಗೆ ಹೆದರಿ ಅದನ್ನು ಮಾಡಿಸಿಕೊಳ್ಳದೆ ಹೋಗಿರಬಹುದು. ಆದರೆ ಆ ಅನುಮಾನವನ್ನು ಬಗೆಹರಿಸಲು ಮತ್ತೊಂದು ಪರೀಕ್ಷೆಯಿದೆ. ಇದನ್ನು  ’ಆಂಟಿಬಾಡಿ ಟೆಸ್ಟ್ ’ ಎನ್ನುತ್ತೇವೆ.

     ’ಆಂಟಿಬಾಡಿ ಪರೀಕ್ಷೆ’ ಹೇಗೆ ನಡೆಯುತ್ತದೆ?

    ಕೊರೊನಾ ಸೋಂಕು ಬಂದು ಹೋಗಿರಬಹುದೇ ಎನ್ನುವುದನ್ನು ತಿಳಿಯಲು ಪರೀಕ್ಷೆಯನ್ನು ಗಂಟಲು ಮತ್ತು ಮೂಗಿನ ದ್ರವದ ಮಾದರಿಯ ಪರೀಕ್ಷೆಯಿಂದ ಮಾಡಿದರೆ ಆಂಟಿಬಾಡಿ ಪರೀಕ್ಷೆಯನ್ನು ರಕ್ತದ ಪರೀಕ್ಷೆಯ ಮೂಲಕ ಮಾಡುತ್ತಾರೆ. ನಮ್ಮ ದೇಹವನ್ನು ಯಾವುದೇ ಪರಜೀವಗಳು ಪ್ರವೇಶಿಸಿದಾಗ ಅವುಗಳನ್ನು ಹತ್ತಿಕ್ಕಲು ನಿರ್ದಿಷ್ಟ ಜೀವನಿರೋಧಕ ಪ್ರೋಟೀನುಗಳು ಉತ್ಪತ್ತಿಯಾಗುತ್ತವೆ

    ನಮ್ಮ ರಕ್ತದಲ್ಲಿ ಕೊರೊನಾ ವೈರಸ್ಸನ್ನು ವಿರೋಧಿಸುವ ಈ ಜೀವನಿರೋಧಕ ಪ್ರೋಟೀನುಗಳು ಕಂಡುಬಂದಲ್ಲಿ ನಮಗೆ ಕೊರೊನಾ ಸೋಂಕು ಬಂದುಹೋಗಿರಬಹುದು ಎಂದು ತಿಳಿಯುತ್ತದೆ. ಆ ಮೂಲಕ ನಮ್ಮ ಶಂಕೆಗಳಿಗೆ ಈ ಪರೀಕ್ಷೆ ಅಂತಿಮ ತೆರೆಯನ್ನು ಎಳೆಯುತ್ತದೆ.

    ಆಂಟಿಬಾಡಿ ಪರೀಕ್ಷೆಯ ಮಿತಿಗಳು

    ಈ ಜೀವ ನಿರೋದಕ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗಿ ಕಾಣಿಸಲು ಕನಿಷ್ಠ1-3 ವಾರಗಳು ಬೇಕಾಗುತ್ತದೆ. ಹಾಗಾಗಿ ಅಕಸ್ಮಾತ್ ನಮಗೆ ಲಕ್ಷಣಗಳೇ ಇಲ್ಲದ ಕೊರೊನಾ ಸೋಂಕು ಆಗ ತಾನೇ ಶುರುವಾಗಿದ್ದರೆ ಈ ಪರೀಕ್ಷೆಯಿಂದ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.

    ಆಂಟಿಬಾಡಿ ಫಲಿತಾಂಶಕ್ಕೆ ಬಹಳ ಮಿತಿಗಳಿವೆ. ಅಂದರೆ, ನಿಮಗೆ ಸೋಂಕು ಬಂದು ಹೋಗಿತ್ತೇ ಎಂದು ಇದರಿಂದ ಹೇಳಬಹುದೇ ಹೊರತು ನೀವು ಇನ್ನು ಮುಂದೆ ಮತ್ತೊಮ್ಮೆ ಈ ಸೋಂಕಿಗೆ ತುತ್ತಾಗಬಲ್ಲಿರೇ ಅಥವಾ ಇಲ್ಲವೇ ಎನ್ನುವುದನ್ನು ಹೇಳಲು ಬರುವುದಿಲ್ಲ.ಜೊತೆಗೆ ನೀವು ಮತ್ತೊಬ್ಬರಿಗೆ ಇನ್ನೂ ಸೋಂಕನ್ನು ಹರಡುತ್ತಿರುಬಹುದೇ ಎನ್ನುವುದು ಕೂಡ ತಿಳಿಯುವುದಿಲ್ಲ.

    ಆದ್ದರಿಂದ ಈ ಪರೀಕ್ಷೆಯಲ್ಲಿ ನಿಮಗೆ ಸೋಂಕು ಬಂದು ಹೋಗಿದೆ ಎಂದಾದರೂ ಎಲ್ಲರಂತೆ ಸಾಮಾಜಿಕ ಅಂತರ ಮತ್ತು ಪದೇ ಪದೇ ಕೈ ತೊಳೆಯುವುದನ್ನು ಮುಂದುವರೆಸಬೇಕಾಗುತ್ತದೆ.

    ನನಗೆ ತಿಳಿದ ಒಬ್ಬರಲ್ಲಿ ಒಂದ ವಾರದ ಕಾಲ ವಾಸನಾ ಶಕ್ತಿ ಇಲ್ಲವಾಗಿತ್ತು. ಆದರೆ ಇನ್ನಾವುದೇ ಖಾಯಿಲೆಯ ಲಕ್ಷಣಗಳಿರಲಿಲ್ಲ. ಆಕೆ ತನಗೆ ದೊರೆತ ನಿರ್ದೇಶನದ ಪ್ರಕಾರ ಕೋವಿಡ್ ಟೆಸ್ಟ್ ನ್ನು ಮಾಡಿಸಿಕೊಂಡರು. ಆಕೆಗ ಕೋವಿಡ್ ಇಲ್ಲ ಎಂದು ವರದಿ ಬಂದಾಗ ಆಕೆ ಅದುವರೆಗೆ ತನ್ನನ್ನು ತಾನು ಪ್ರತ್ಯೇಕಿಸಿಕೊಂಡದ್ದು, ಇತರರಿಗೆ ತೊಂದರೆ ಕೊಟ್ಟದ್ದು ಎಲ್ಲ ನೆನೆದು “ ಅಯ್ಯೋ ಸುಮ್ಮ ಸುಮ್ಮನೆ ಹೆದರಿದೆನಲ್ಲ “ ಎಂದು ಅಂದುಕೊಂಡರು. ಆದರೆ ಒಂದು ತಿಂಗಳ ನಂತರ ಆಕೆ ಕೆಲಸಕ್ಕೆ ಮರಳುವ ಕಾಲ ಬಂದಿತು. ಆಗ ಆಂಟಿ ಬಾಡಿ ಟೆಸ್ಟ್ ಮಾಡಿಸಲೇಬೇಕಿತ್ತು. ವರದಿಯಲ್ಲಿ ಅಶ್ಚರ್ಯಕರವಾಗಿ ಆಕೆಗೆ ಕೋವಿಡ್ ಬಂದು ಹೋದ ವರದಿಯಿತ್ತು.

    ಹಾಗಂದರೆ ಏನರ್ಥ?

    ಕಳೆದವಾರದ ಲೇಖನದಲ್ಲಿ ಹೇಳಿದಂತೆ ಕೊರೊನಾ ಪರೀಕ್ಷೆಎಲ್ಲ ಬಾರಿ ನಿಖರವಾದ ಫಲಿತಾಂಶವನ್ನು ನೀಡುವ ಪರೀಕ್ಷೆಯೇನಲ್ಲ.ಪರೀಕ್ಷೆಯಲ್ಲಿ ನಡೆಯಬಹುದಾದ ತಪ್ಪುಗಳು, ದ್ರವ ಮಾದರಿಯ ಪ್ರಮಾಣ, ಪರೀಕ್ಷಾ ವಿಧಾನ, ಪ್ರಯೋಗಾಲಯದ ಗುಣಮಟ್ಟ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪರೀಕ್ಷೆ ಯಾವಾಗ ಮಾಡಲಾಯಿತು ಇತ್ಯಾದಿ ಹಲವು ವಿಚಾರಗಳನ್ನು ನಾವು ವಿಷ್ಲೇಶಿಸಬೇಕಾಗುತ್ತದೆ. ಜೊತೆಗೆ ಎಲ್ಲವೂ ಸರಿಯಿದ್ದರೂ ಪ್ರತಿಬಾರಿ ನಿಖರ ಫಲಿತಾಂಶವನ್ನು ನೀಡಲು ಕೊರೊನಾ ಪರೀಕ್ಷೆ ಸಫಲವಾಗದೇ ಹೋಗಬಹುದು.

    ಅದರಂತೆಯೇ ಆಂಟಿಬಾಡಿ ಪರೀಕ್ಷೆಗಳೂ ಕರಾರುವಕ್ಕಾದ ಫಲಿತಾಂಶವನ್ನು ನೀಡುವುದಿಲ್ಲ.ಆಂಟಿಬಾಡಿಗಳಿದ್ದವು ಆದ್ದರಿಂದ ನಿಮಗೆ ಕೊರೊನಾ ಬಂದಿರಬಹುದು ಎನ್ನುವ ಸುಳ್ಳು ಫಲಿತಾಂಶ ಬರುವ ಸಾಧ್ಯತೆಗಳುಅರ್ಧಕ್ಕಿಂತ ಹೆಚ್ಚಿವೆ!ನಿಖರವಾದ ಫಲಿತಾಂಶ ನೀಡುವ ಸಾಧ್ಯತೆಯಿರುವುದು ಕೇವಲ 49 % ಪರೀಕ್ಷೆಗಳಲ್ಲ್ ಮಾತ್ರಎಂದು Infectious Disease Society of Americaಹೇಳಿದೆ.

    ಇನ್ನೂ ನೇರವಾಗಿ ಹೇಳಬೇಕೆಂದರೆ ಕೇವಲ ಅರ್ಧದಷ್ಟು ಕೇಸುಗಳಲ್ಲಿ ಮಾತ್ರ ಕೊರೊನಾ ವಿರುದ್ಧ ಜೀವನಿರೋಧಕ ಕಣಗಳು ನಿಜಕ್ಕೂ ಇದ್ದುದನ್ನು ಧೃಡ ಪಡಿಸುವ ಶಕ್ತಿಯಷ್ಟೇ ಈ ಪರೀಕ್ಷೆಗಿರುವುದು. ಉಳಿದಂತೆ  ಜೀವನಿರೋಧಕ ಕಣಗಳು ಕೊರೊನಾ ವಿರುದ್ಧ ಹುಟ್ಟಿದ್ದೇ ಎಂಬುದನ್ನು ಧೃಡಪಡಿಸುವಲ್ಲಿ ಈ ಪರೀಕ್ಷೆ ಸೋಲುತ್ತದೆ. ಅದರ ಮೇಲೆ,ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಇತ್ತೀಚೆಗಿನ ವರದಿಯ ಪ್ರಕಾರ ಕೋವಿಡ್  ಬಂದು ಹೋಗಿದ್ದರು ಆಂಟಿಬಾಡಿಗಳಿಲ್ಲವೆಂದು ಹೇಳುವ false-negative rateಶೇಕಡ 20%  ರಷ್ಟಿದೆ ಎನ್ನುತ್ತದೆ. ಅಂದರೆ ಇಲ್ಲಿ ಕೂಡ ಈ ಪರೀಕ್ಷೆಯನ್ನು ಯಾವಾಗ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ.ಅಂದರೆ ಈ ಪರೀಕ್ಷೆ ನಡೆವಾಗ ನಿಮ್ಮಲ್ಲಿ ಕೊರೊನಾ ಬಂದು ಹೋಗಿದ್ದ ಗುಮಾನಿಯಿದ್ದರೇನೋ ಪರವಾಗಿಲ್ಲ ಆದರೆ ಕೊರೊನಾ ಲಕ್ಷಣಗಳೇ ಇಲ್ಲದವರನ್ನು ಯಾವಾಗ  ಈ ಪರೀಕ್ಷೆಗ ಒಳಪಡಿಸಬೇಕು? ಎನ್ನುವ ಪ್ರಶ್ನೆಗೆ ತಾರ್ಕಿಕ, ಪ್ರಯೋಗಾತ್ಮಕ   ಉತ್ತರವನ್ನಿನ್ನೂ ಹುಡುಕುತ್ತಿದ್ದಾರೆ.

    ಯಾವ ಪರೀಕ್ಷೆಯೇ ಆದರೂ ಸುಳ್ಳು ಸುಳ್ಳೇ ಸೋಂಕಿಲ್ಲವೆಂದು ಬರುವ ಫಲಿತಾಂಶಗಳು ಸುಳ್ಳು ಸುಳ್ಳೇ ಸೋಂಕಿದೆಯೆಂದು ಬರುವ ಫಲಿತಾಂಶಕ್ಕಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಸೋಂಕು ಬಂದಿದ್ದರೂ ಫಲಿತಾಂಶ ಸೋಂಕಿಲ್ಲವೆಂದು ಬರುವ ಕಾರಣ ಜನರು ಕೊರೊನಾ ಸೋಂಕನ್ನು ಸಮಾಜದ ತುಂಬೆಲ್ಲ ಹರಡುತ್ತ ಹೋಗುತ್ತಾರೆ.

    ಹಾಗಾದರೆ ಆಂಟಿ ಬಾಡಿ ಟೆಸ್ಟನ್ನು ಯಾರು ಮತ್ತು ಏಕೆ ಮಾಡಿಸಿಕೊಳ್ಳಬೇಕು?

    ಕೊರೊನಾ ಎನ್ನುವ ಸೋಂಕು ವಿಶ್ವವ್ಯಾಪಿ ಹೊಸವ್ಯಾಧಿ. ಅಂದರೆ ಈ ಕ್ಷಣದಲ್ಲೂ ಈ ಹೊಸಪಿಡುಗಿನ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.ಆ ಕಾರಣ ಈ ವ್ಯಾಧಿಯ ಬಗ್ಗೆ ಮನುಷ್ಯನಿಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಜಾಸ್ತಿ.

    ಈಗಾಗಲೇ ಹಲವು ದೇಶಗಳು ಸಮುದಾಯಮಟ್ಟದಲ್ಲಿ ಆಂಟಿಬಾಡಿ ಪರೀಕ್ಷೆಗಳನ್ನು ಶುರುಮಾಡಿದ್ದಾರೆ. ಮತ್ತೆ ಕೆಲವು ದೇಶಗಳು ಅಗತ್ಯ ಕೆಲಸಗಾರರನ್ನು, ಅಥವಾ ಕೊರೊನಾ ಬಂದುಹೋದವರ ಸಂಪರ್ಕದಲ್ಲಿ ಇದ್ದವರನ್ನು ಅವರ ಮನೆಯವರನ್ನು ಈ ಪರೀಕ್ಷೆಗೆ ಒಳಪಡಿಸುತ್ತಿವೆ.

    ಸೋಂಕು ಬಂದು ಹೋಗಿದ್ದರೂ ಗೊತ್ತಿರದ ಜನರನ್ನು ಗಣಿಸುವುದು ಇದರ ಮುಖ್ಯ ಉದ್ದೇಶ.ಈ ಗಣತಿಯಿಂದ ಅರ್ಧದಷ್ಟು ಸಂಖ್ಯೆಯನ್ನು ಮಾತ್ರವೇ ತೆಗೆದುಕೊಂಡರೂ ಸೋಂಕಿನ ತೀವ್ರತೆಯನ್ನು ಕಂಡು ಹಿಡಿಯಬಹುದು. ಲಕ್ಷಣರಹಿತ ಸೋಂಕಿನ ಮಟ್ಟ ಎಷ್ಟಿರಬಹುದು ಎಂಬುದನ್ನು ಅಳೆಯಬಹುದು.

    ಜೊತೆಗೆ ಕೋವಿಡ್ ಸೋಂಕಿನ ದಟ್ಟ ಲಕ್ಷಣಗಳಿದ್ದೂ ಕೋವಿಡ್ ಪರೀಕ್ಷೆ ಯಲ್ಲಿ ಸೋಂಕು ಇಲ್ಲ ಎಂದು ಫಲಿತಾಂಶ ಬಂದಿರುವ ಜನರಿಗೆ ನಿಜವನ್ನು ತಿಳಿಯಲು ಇರುವ ಇನ್ನೊಂದು ಏಕೈಕ ಮಾರ್ಗವೆಂದರೆ ಈ ಆಂಟಿಬಾಡಿ ಪರೀಕ್ಷೆ.ಆದರೆ ಫಲಿತಾಂಶವನ್ನು ಅನುಮಾನದ ದೃಷ್ಟಿಯಿಂದಲೇ ನೋಡಬೇಕಾದ ಅನಿವಾರ್ಯತೆ ನಮಗಿದೆ.

    ಆದರೆ ಆಂಟಿಬಾಡಿ ಟೆಸ್ಟ್ ಗಳನ್ನು ಕೋವಿಡ್ ಪಾಸ್ ಪೋರ್ಟುಗಳಂತೆ ಬಳಸಿಕೊಳ್ಳುವ ಸಂಸ್ಥೆ ಮತ್ತು ದೇಶಗಳು ಈ ಪರೀಕ್ಷೆಯ ನಿಖರತೆಯನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಕೆಲಸಕ್ಕೆ ಹಿಂತಿರುಗುವ ಮುನ್ನ ಆಂಟಿಬಾಡಿ ಟೆಸ್ಟ್ ಮಾಡಿಸಿಕೊಂಡು ಅದರಲ್ಲಿ ನಮಗೆ ಕೋವಿಡ್ ಬಂದು ಹೋಗಿದೆ ಎನ್ನುವ ಫಲಿತಾಂಶ ಬಂದಿದ್ದರೆ “ ಇನ್ನು ನಿಮಗೆ ಈ ಸೋಂಕು ಬರುವುದಿಲ್ಲ, ನಿಮ್ಮ ದೇಹದಲ್ಲಿ ಆ ಸೋಂಕನ್ನು ಹೊಡೆದೋಡಿಸುವ ಶಕ್ತಿ ಬಂದುಬಿಟ್ಟಿದೆ “ ಎನ್ನುವ ಮಾತುಗಳನ್ನು ಆಡಲಾಗುತ್ತಿದೆ.

    ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ಪಾಸಿಟಿವ್ ಇದ್ದಲ್ಲಿ “ ರೋಗಿಯಲ್ಲಿ ಈಗಾಗಲೇ ಕೋವಿಡ್ ವಿರೋಧಕ ಇಮ್ಯೂನಿಟಿ ಇರುವ ಕಾರಣ ಅವರನ್ನು ಇನ್ನು ಮನೆಗೆ ಕಳಿಸಬಹುದು” ಎನ್ನುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

    ಒಂದು ಆಫೀಸು, ಆಸ್ಪತ್ರೆ ಹೀಗೆ ಗುಂಪಿನಲ್ಲಿ ಕೆಲಸಮಾಡುವ ಸ್ಥಳಗಳಲ್ಲಿ  ಒಬ್ಬರಿಗೋ- ಇಬ್ಬರಿಗೋ ಕೋವಿಡ್ ಲಕ್ಷಣಗಳಿರಬಹುದು. ಅವರು ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. ಆದರೆ ಅವರಿಂದ ಇತರರಿಗೂ ಕೋವಿಡ್ ಬಂದು ಹೋಗಿದೆಯೇ ಮತ್ತು ಎಂತಹ ಸ್ಥಳಗಳಲ್ಲಿ ಇದು ಗುಂಪಿನ ಎಷ್ಟು ಜನರಿಗೆ ಹರಡಿತು ಎನ್ನುವುದನ್ನು ಕೂಡ ಈ ಪರೀಕ್ಷೆಯಿಂದ ತಿಳಿಯಬಹುದಾಗಿದೆ. ಸೋಂಕು ಬಂದು ಹೋದ ತಿಂಗಳುಗಳ ನಂತರವೂ ಆಂಟಿಬಾಡಿ ಪರೀಕ್ಷೆಯ ಮೂಲಕ ಬಂದಿತ್ತೇ? ಎಂದು ಕಂಡುಹಿಡಿಯುವ ಪ್ರಯತ್ನ ಮಾಡಬಹುದು.

    ಕೊರೊನಾ ಪರೀಕ್ಷೆಯಲ್ಲಿ ಸೋಂಕಿದೆ ಎಂದು ಗೊತ್ತಾಗಿ ಅವರು ಗುಣಮುಖರಾದ ನಂತರ ಅವರ ದೇಹದಲ್ಲಿ ಆಂಟಿಬಾಡಿಗಳಿವೆ ಎಂದು ಆಂಟಿಬಾಡಿ ಪರೀಕ್ಷೆಯ ಮೂಲಕ ತಿಳಿದಲ್ಲಿ ಅವರ ರಕ್ತದ ಪ್ಲಾಸ್ಮಾವನ್ನು ಇತರೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಆ ಮೂಲಕ ಆಂಟಿಬಾಡಿಗಳನ್ನು ಅಂದರೆ ಕೊರೊನಾ ವಿರುದ್ಧ ಹೋರಾಡಬಲ್ಲ ಸೈನಿಕರನ್ನು ನೇರವಾಗಿ ಗುಣಮುಖರಾಗಲು ಶ್ರಮಪಡುತ್ತಿರುವವರ ದೇಹಕ್ಕೆ ವರ್ಗಾಯಿಸಲಾಗುತ್ತಿದೆ. ಹೀಗಾಗಿ ಈ ಪರೀಕ್ಷೆಯ ಫಲಿತಾಂಶಗಳು ಕರಾರುವಕ್ಕಲ್ಲದಿದ್ದರೂ ಬಹಳಷ್ಟು ವಿಚಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದಿದೆ.

    ಆದರೆ ಈ ಪರೀಕ್ಷೆಗಳ ಬಗ್ಗೆ ಬಹಳಷ್ಟು ಅಧ್ಯಯನಗಳು ಈಗಲೂ ಜಾರಿಯಲ್ಲಿವೆ. ಈ ಅಧ್ಯಯನಗಳ ಮೂಲಕ ಇಂತಿಷ್ಟು ಆಂಟಿಬಾಡಿಗಳ ಪ್ರಮಾಣ ಇದ್ದರೆ ವೈರಸ್ಸಿನಿಂದ ರಕ್ಷಣೆ ಪಡೆಯಬಹುದು ಎಂಬುದನ್ನೇನಾದರೂ ಪತ್ತೆ ಹಚ್ಚಿದರೆ ಕೊರೊನಾ ಪರೀಕ್ಷೆ ಮತ್ತು ಆಂಟಿಬಾಡಿ ಪರೀಕ್ಷೆಗಳು ಕೊರೊನಾ ವಿರುದ್ಧದ ಸಮರದಲ್ಲಿ ನಮ್ಮ ಬತ್ತಳಿಕೆಯಲ್ಲಿರುವ ಅತ್ಯಮೂಲ್ಯ ಅಸ್ತ್ರಗಳಾಗುತ್ತವೆ. ಅಲ್ಲಿಯವರೆಗೂ ಆಂಟಿಬಾಡಿ ಪರೀಕ್ಷೆಗಳನ್ನು ನಾವು ಅದರ ಮಿತಿಗಳ ಪರಿಮಿತಿಯಲ್ಲೇ ನೋಡಬೇಕಾಗಿದೆ.

    ಏಕೆಂದರೆ ಸಧ್ಯದ ಆಂಟಿಬಾಡಿ ಟೆಸ್ಟ್ ಗಳು ನೀವು ವೈರಸ್ಸಿನ ಸಂಪರ್ಕಕ್ಕೆ ಬಂದಿದ್ದಿರೇ ಎನ್ನುವುದನ್ನು ಮಾತ್ರ ತಿಳಿಸುತ್ತವೆ. ಆದರೆ ಎಷ್ಟುಕಾಲ ಈ ಆಂಟಿಬಾಡಿಗಳು ಕೊರೊನಾ ಜೊತೆ ಹೋರಾಡಬಲ್ಲವು? ಆಂಟಿಬಾಡಿ ಇದ್ದವರಿಗೆ ಮತ್ತೆ ಇನ್ನೊಂದು ಬಾರಿ ಕೊರೊನಾ ಸೋಂಕು ಬರಬಹುದೇ?  ಎಷ್ಟು ಪ್ರಮಾಣದಲ್ಲಿ ಈ ಆಂಟಿಬಾಡಿಗಳು ಕೊರೊನಾ ವಿದ್ಧ ಫಲಪ್ರದವಾಗಿ ಹೋರಾಡಬಲ್ಲವು?-ಇತ್ಯಾದಿ ಹಲವು ಪ್ರಶ್ನೆಗಳಿಗೆ ಈ ಪರೀಕ್ಷೆಯಿಂದ ಉತ್ತರ ದೊರಕುವುದಿಲ್ಲ.

    ಮುಖ್ಯವಾಗಿ ಇವಿಷ್ಟು ತಿಳಿದಿದ್ದರೆ ಸಾಕು.

    ಆಂಟಿಬಾಡಿ ಪರೀಕ್ಷೆ ಪಾಸಿಟಿವ್ ಬಂದಲ್ಲಿ

    1.  ನಿಮ್ಮ ದೇಹದಲ್ಲಿ ಕೋವಿಡ್-19 ಎನ್ನುವ ವೈರಾಣುವಿನ ವಿರುದ್ಧ ಉತ್ಪತ್ತಿಯಾಗುವ ಪ್ರೋಟೀನುಗಳಿವೆ ಎಂದು ತಿಳಿಯುತ್ತದೆ. ಆದರೆ ಇದು ಕೊರೊನಾ ವೈರಸ್ ಎನ್ನುವ ಫ್ಯಾಮಿಲಿಯ ಇತರೆ ವೈರಸ್ಸುಗಳ ಸಂಪರ್ಕಕ್ಕೆ ಬಂದ ಕಾರಣದಿಂದಲೂ ಇರಬಹುದು. ಸಾಮಾನ್ಯ ಕೆಮ್ಮು-ನೆಗಡಿ ತರುವ ವಿಧದ ವೈರಸ್ಸುಗಳ ಕಾರಣವೂ ನಮ್ಮಲ್ಲಿ ಕೋವಿಡ್-೧೯ ರ ವಿರುದ್ಧ ಹೋರಾಡಬಲ್ಲ ಜೀವನಿರೋಧಕ ಪ್ರೋಟೀನುಗಳು ಉತ್ಪತ್ತಿಯಾಗಬಲ್ಲವು.

    2. ನಮ್ಮ ದೇಹಕ್ಕೆ ಕೋವಿಡ್ -19 ರ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾದ್ದನ್ನು ಖಾತರಿಮಾಡಿಕೊಳ್ಳಬಹುದು. ಆದರೆ, ಎಷ್ಟು ಕಾಲ ಎಷ್ಟು ಮತ್ತು  ರಕ್ಷಣೆ ಸಿಗಬಲ್ಲದು ಎನ್ನುವುದು ಇನ್ನೂ ತಿಳಿದಿಲ್ಲದ ವಿಚಾರ.

    3. ಇನ್ನೂ ಖಾತರಿಬೇಕೆಂದರೆ, ಮತ್ತೊಂದು ವಿಶೇಷ ಆಂಟಿಬಾಡಿ ಪರೀಕ್ಷೆ ಲಭ್ಯವಿದೆ. ಆದರೆ ಎಲ್ಲ ರೀತಿಯ ರಕ್ಷಣಾ ಧಿರಿಸುಗಳನ್ನು ಮುಂದುವರಿಸಲೇ ಬೇಕು.

    ಆಂಟಿಬಾಡಿ ಪರೀಕ್ಷೆ ನೆಗೆಟಿವ್ ಬಂದರೆ

    1.ನಮಗೆ ಕೊರೊನಾ ಫ್ಯಾಮಿಲಿಯ ವೈರಾಣುವಿನ ಸಂಪರ್ಕ ಆಗಿಲ್ಲದಿರಬಹುದು

    2 . ನಿಮ್ಮಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಇನ್ನೂಇರಬಹುದು ಅಥವಾ ಆಗಷ್ಟೆ ಬಂದಿರಬಹುದು

    3.ಮುಂದೆಕೊರೊನಾಸೋಂಕುಬರುವಸಾಧ್ಯತೆಗಳುಇರಬಹುದು

    4. ಏಕೆಂದರೆ, ಕೆಲವರಲ್ಲಿ ತಕ್ಷಣ ಆಂಟಿ ಬಾಡಿಗಳು ಉತ್ಪತ್ತಿಯಾದರೆ ಇನ್ನು ಕೆಲವರಲ್ಲಿ ನಿಧಾನಕ್ಕೆ ಉತ್ಪತ್ತಿಯಾಗಬಹುದು

    ಮೇಲಿನ ಈ ಕಾರಣಗಳಿಗಾಗಿ, ಫಲಿತಾಂಶ ಏನೇ ಆದರೂ ಸ್ವತಃ ನಿಮ್ಮನ್ನು ಮತ್ತು ಇತರರನ್ನು ರಕ್ಷಣೆ ಮಾಡುವುದನ್ನು ಮುಂದುವರೆಸಬೇಕಾಗುತ್ತದೆ.

    Photo by cottonbro from Pexels

    ಮನಸ್ಥಿತಿಗಳ ಬಿರುಕಿನ ಯುದ್ಧವನ್ನು ಸಾವಧಾನದಿಂದ ಜಯಿಸಬೇಕು

    ಮಮತಾ ಕುಲಕರ್ಣಿ

    ಭೂಮಿ ಅನ್ನೊ ಪುಟ್ಟ ಸಂಸಾರದಲ್ಲಿ ಎಲ್ಲಾ ಜೀವಿಗಳು ಒಂದಲ್ಲಾ ಒಂದು ಸಂಬಂಧದ ಸರಪಳಿಯಲ್ಲಿ ಸೇರಿಹೊಗಿರುತ್ತವೆ. ಅದರಲ್ಲಿ ಮನಸ್ಥಿತಿಗಳ ಆಧಾರದ ಮೇಲೆ ಒಳ್ಳೆ ಸಂಬಂಧ, ಕೆಟ್ಟ ಸಂಬಂಧ, ಕಾಟಾಚಾರದ ಸಂಬಂಧ ಹೀಗೆ ನಾನಾ ವಿಂಗಡನೆ ಆಗುತ್ತಾ ಹೋಗುತ್ತವೆ.

    ಎಂಜಿನಿಯರಿಂಗ್ ಎಂಬ ವಿಭಾಗದಲ್ಲಿ ಹೇಗೆ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ ಹೀಗೆ ನಾನಾ ರೀತಿಯ ವಿಭಾಗಗಳಿವೆಯೊ, ಹಾಗೆ ಮನುಷ್ಯ ತನ್ನದೆ ಆದ ಪುಟ್ಟ ಪ್ರಪಂಚದಲ್ಲಿ ತಂದೆ,ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ,ಗಂಡ, ಹೆಂಡತಿ,ಮಕ್ಕಳು, ಅಜ್ಜ,ಅಜ್ಜಿ ಹೀಗೆ ನಾನಾ ರೀತಿಯ ರೆಂಬೆ ಕೊಂಬೆಗಳನ್ನ ತನ್ನ ಜೀವನದ ವೃಕ್ಷಕ್ಕೆ ಅಂಟಿಸಿರುತ್ತಾನೆ. ಅವುಗಳ ಜೊತೆ ಸಮಯಕ್ಕೆ ತಕ್ಕಂತೆ ಬೆರೆತು ಹೋಗುತ್ತಾನೆ. ಸುಖ ದುಃಖಗಳಲ್ಲಿ  ಆ ರೆಂಬೆ ಕೊಂಬೆಗಳ ಸಾಂತ್ವನ ಹಾಗೂ ಸೌಹಾರ್ಧದ ಬಲದಿಂದ ತನ್ನ ಜೀವನದ ಕಟ್ಟಡವನ್ನು ಕಟ್ಟುತ್ತಾ ಹೋಗುತ್ತಾನೆ. ಹೀಗಿರುವಾಗ  ಸಂಬಂಧಗಳ ಬಾಂಧವ್ಯದಲ್ಲಿ ಸ್ವಲ್ಪ ಏರುಪೇರಾದರೂ ಸಹಿಸುವ ಶಕ್ತಿ ಹಾಗೂ ಯುಕ್ತಿಗಳನ್ನು ಕಳೆದುಕೊಳ್ಳುತ್ತಾನೆ. ಮನಸ್ಥಿತಿಗಳ ಬಿರುಕಿನ ಅಥವಾ ಬದಲಾವಣೆಯ ಯುದ್ಧವನ್ನು ಸಾವಧಾನದಿಂದ ಜಯಿಸಬೇಕು. ಇದು ಕೇವಲ ದೊಡ್ಡವರಿಗೆ ಅಥವಾ ಸಣ್ಣವರಿಗೆ ಇಲ್ಲಿ ಅನ್ವಯವಾಗುವ ಹಾಗೆ ಇಲ್ಲ.

    ಭೂಮಿಯ ಮೇಲೆ ಜನಿಸಿದ ಕ್ಷಣದಿಂದ ಪ್ರತಿನಿತ್ಯ ಬದಲಾವಣೆಗಳ ರೂಪವನ್ನು ಹೊಂದುವ ಮಗುವಿನಿಂದ ಹಿರಿಯ ಜೀವಿಗಳವರೆಗೂ ಅನ್ವಯವಾಗುತ್ತದೆ. ಒಂದು ಪುಟ್ಟ ಮಗು ಕೂಡ ತನ್ನ ಇಚ್ಛೆಯಂತೆ ತಿನ್ನಲು ಕುಡಿಯಲು ಬಯಸುತ್ತದೆ. ಬೆಳೆಯುವ ಮಕ್ಕಳು ತಮಗೆ ಇಷ್ಟವಾದ ವಿಷಯವನ್ನು ಮನಸ್ಸಿನಿಂದ ವಿಷಯವನ್ನು ಮನಸ್ಸಿನಿಂದ ಮಾಡುತ್ತಾರೆ. ಆಟವೇ ಆಗಿರಲಿ ಬೇರೆ ಬೇರೆ ವಿಷಯಗಳೇ ಆಗಿರಲಿ.

    ಮದುವೆಯಾದ ಮೇಲೆ ಎಲ್ಲ ಸಂಬಂಧಗಳನ್ನ ತೊರೆದು ಕೇವಲ ತನ್ನ ಹೆಂಡತಿ ತನ್ನ ಗಂಡ ಅಂತ ಬದುಕಿದರೆ ಸಾಕೇ? ಸಂಸಾರದ ಜವಾಬ್ದಾರಿಯತ್ತ ತಮ್ಮ ಕನಸುಗಳನ್ನು, ಕ್ಷಮತೆಯನ್ನು ಗಂಟು ಕಟ್ಟಬೇಕೇ? ವಯಸ್ಸಾದ ಮೇಲೆ ಅವರ ವಿಚಾರಗಳಿಗೆ, ಆಸೆಗಳಿಗೆ ರೆಕ್ಕೆಪುಕ್ಕ ಬೇಡವೇ?

    ಹೀಗೆಲ್ಲ ಯೋಚನೆ ಮಾಡುತ್ತಾ ಹೋದಂತೆ ಭಾಸವಾಗುವುದು ಒಂದು ವಿಚಾರ. ಅದು ಸಂಬಂಧಗಳಲ್ಲಿ ಸ್ವಾತಂತ್ರ್ಯದ ತುಣುಕು. ಅಂದರೆ ಉದಾಹರಣೆಗೆ, ಮಕ್ಕಳೊಂದಿಗೆ ಹೊರಗಡೆ ಹೋದಾಗ ಅವರಿಗೆ ಸ್ವತಂತ್ರವಾಗಿ ತಮಗೆ ಬೇಕಾಗುವ ಹಣ್ಣುಗಳನ್ನು ಆಯ್ಕೆ ಮಾಡಲು ಬಿಡಿ. ಅವರ ಆಯ್ಕೆ ತಪ್ಪಿದ್ದಲ್ಲಿ ತಿದ್ದಿ ಹೇಳುವುದು ನಮ್ಮ ಕೈಯಲ್ಲಿ ಇರುತ್ತೆ. ಆದರೆ ಅವರ ವಯಸ್ಸಿಗೆ ತಕ್ಕಂತೆ ಒಳ್ಳೆಯದು-ಕೆಟ್ಟದ್ದು ಯೋಚನೆ ಮಾಡುವ ಶಕ್ತಿ ಅವರಲ್ಲಿ ಬೆಳೆಯಲು ಸಹಕರಿಸುವುದೇ ಸ್ವಾತಂತ್ರ್ಯದ ಮಾನ್ಯತೆ ಇಲ್ಲಿ. ಯೋಚನಾಶಕ್ತಿ ಜೊತೆ ಸರಿ-ತಪ್ಪುಗಳ ತಿಳಿವಳಿಕೆಯನ್ನು ಗ್ರಹಿಸುವಿಕೆಯೇ ಸ್ವಾತಂತ್ರ್ಯ.

    ಅದೇರೀತಿ ಮದುವೆಯಾದ ಮೇಲೆ ಗಂಡ ಹೆಂಡತಿ ಅವರವರ ಇಷ್ಟ ಕಷ್ಟಗಳಿಗೆ ಮಾನ್ಯತೆ ನೀಡಬೇಕು. ಸ್ವಲ್ಪ ಸಮಯ ತಮ್ಮ ಸಂಬಂಧದ ಜೊತೆ ಅವರ ಸ್ವಂತ ವಿಚಾರ ಹಾಗೂ ಕೆಲಸಗಳನ್ನು, ಹವ್ಯಾಸಗಳನ್ನು ಮಾಡಲು, ಜೊತೆಗಾರರನ್ನು ಭೇಟಿಯಾಗಲು ಸಮಯ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ಭರದಲ್ಲಿ ಕಾಲ ಕಳೆದಂತೆ ಬೇಸರದ ಸ್ವರೂಪದಲ್ಲಿ ಕೂಪಮಂಡೂಕದ ತರಹ ಆಗಿ ಹೋಗುವುದು.

    ಹೀಗೆ ಯಾವುದೇ ಸಂಬಂಧಗಳಲ್ಲಿ ಆಗಲಿ ಪ್ರತಿಯೊಬ್ಬರಿಗೂ ಅವರದೇ ಆದ ಸ್ವತಂತ್ರ ವಿಚಾರ ಜೀವನಶೈಲಿಗೆ ಜಾಗ ಬಿಡಲೇಬೇಕು. ಅದರಿಂದ ಕೌಶಲ್ಯದ ಅಭಿವೃದ್ಧಿ ಆಗುವುದಲ್ಲದೆ, ಮಾನಸಿಕವಾಗಿ, ಭಾವನಾತ್ಮಕವಾಗಿ ಮನುಷ್ಯ ಹೆಚ್ಚು ದೃಢವಾಗುತ್ತಾನೆ. ಆದರೆ ಸ್ವಾತಂತ್ರ್ಯದ ದುರುಪಯೋಗ ಮಾತ್ರ ಸಲ್ಲದು.

    Photo by JOSHUA COLEMAN on Unsplash

    ಮಮತಾ ಕುಲಕರ್ಣಿ

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    error: Content is protected !!