30.1 C
Karnataka
Thursday, May 21, 2026
    Home Blog Page 149

    ಸ್ನೇಹವು ಎಲ್ಲ ಎಲ್ಲೆಯ ಮೀರಿದ್ದು

    ಜಯಶ್ರೀ ಅಬ್ಬೀಗೇರಿ

    ನನ್ನ ಅಪ್ಪನದು ಸರಕಾರಿ ನೌಕರಿ ಹೀಗಾಗಿ ಮೂರು ವರ್ಷಗಳಿಗೊಮ್ಮೆ ನಾವು ಗಂಟು ಮೂಟೆ ಕಟ್ಟಲೇಬೇಕಿತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಾಗ ಎಸ್ ಎಸ್ ಎಲ್ ಸಿ ಟರ್ನಿಂಗ್ ಪಾಯಿಂಟ್ ಇದ್ದಂಗ ಅಂತ ಎಲ್ಲ ಗುರುಗಳೂ ಪ್ರತಿ ಪಿರಿಯೆಡ್‌ನಲ್ಲೂ ನಮ್ಮ ತಲೆಯೊಳಗ ತುಂಬುತ್ತಿದ್ದರು. ಅಂತಾ ಸಮಯದೊಳಗ ಅದೂ ನನ್ನದು ಅರ್ಧ ಎಸ್ ಎಸ್ ಎಲ್ ಸಿ ಮುಗಿದು ಅಕ್ಟೋಬರ್ ಸೂಟಿ ಬಿಟ್ಟಾಗ ಅಪ್ಪನಿಗೆ ಸರ್ಕಾರದಿಂದ ವರ್ಗಾವಣೆ ಭಾಗ್ಯ ದೊರೆತಿತ್ತು. ಅವ್ವ ಮನೆಯಲ್ಲಿ ಇದ್ದ ಬಿದ್ದ ಸಾಮಾನುಗಳನ್ನು ಮೂಟೆ ಕಟ್ಟ ತೊಡಗಿದಳು ಆ ಕೆಲಸಕ್ಕೆ ನನ್ನನ್ನು ಮತ್ತು ಅಣ್ಣನನ್ನು ನೆರವಿಗೆ ಕರೆದಿದ್ದಳು. ಹೊಸ ವಾತಾವರಣದಲ್ಲಿ ನನ್ನ ಪರಿಸ್ಥಿತಿಯ ಬಗ್ಗೆ ಆತಂಕದಲ್ಲಿದ್ದ ನಾನು ತೋರ್ಪಡಿಸದೆ ಅವ್ವನ ಮಾತಿಗೆ ಹೂಂಗುಟ್ಟಿ ಅವಳ ಕೆಲಸಕ್ಕೆ ಕೈ ಜೋಡಿಸಿದ್ದೆ.

    ಗೆಳತಿಯರೆಲ್ಲ ನನ್ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿ ಒಲ್ಲದ ಮನಸ್ಸಿನಿಂದ ಬೀಳ್ಕೊಡುತ್ತ ನನ್ನ ಕಣ್ಣಾಲಿಗಳನ್ನು ತೇವಗೊಳಿಸಿ ಬಿಕ್ಕುವಂತೆ ಮಾಡಿದ್ದರು. ನನಗೆ ಹಳೆ ಗೆಳತಿಯರಿಂದ ಬೀಳ್ಕೊಂಢು ಹೊಸ ಗೆಳತಿಯರನ್ನು ಮಾಡಿಕೊಳ್ಳುವದು ರೂಢಿಯಾಗಿಬಿಟ್ಟಿತ್ತು. ಆದರೆ ಈ ಸಾರಿ ಕಪ್ಪು ಬಿಳುಪಿನ ಕಣ್ಣುಗಳು ಜಗದ ಏಳು ಬೀಳುಗಳ ಬಗ್ಗೆ ಹೆದರಿದ್ದವು. ಊರು, ಜನ, ಸ್ಕೂಲು ಒಟ್ಟಿನಲ್ಲಿ ಎಲ್ಲವೂ ಹೊಸದು. ಹೊಸತು ಎಂಬ ಚಕ್ರದೊಳಗೆ ನನ್ನ ಮನಸ್ಸು ತಿರುಗುತ್ತಿತ್ತು. ಏನು ಬೇಕು ಬೇಡ ಎನ್ನುವದನ್ನು ಅರಿಯದಷ್ಟು ಬುದ್ಧಿ ಮಂಕಾಗಿತ್ತು. ಹೀಗೇಕೆ ಎದೆ ಭುಗಿಲೆದ್ದಿದೆ ಎಂದು ತಿಳಿಯದಾಗಿತ್ತು. ಇದು ನಾನು ಅಲ್ಲವೇ ಅಲ್ಲ ಅನ್ನುವಷ್ಟರ ಮಟ್ಟಿಗೆ ನನ್ನ ಹೆಜ್ಜೆಗಳು ಸೋತು ಹೋಗಿದ್ದವು. ಅಲ್ಲ ಬದುಕಿನ ಹಾದಿಗೆ ಮಗ್ಗಲುಗಳು ಇರದೆ ಹೋದರೆ ಹೇಗೆ? ಎಂದು ಅಂತರಂಗದ ದನಿಯೊಂದು ನನ್ನ ತೊಳಲಾಟಕ್ಕೆ ಮೇಲಿಂದ ಮೇಲೆ ಪ್ರಶ್ನಿಸುತ್ತಿತ್ತು.

    ಹೊಸತನದ ಜಂಜಾಟದಲ್ಲಿ ಬಿದ್ದು ತಲೆ ಬಿಸಿ ಮಾಡಿಕೊಳ್ಳುತ್ತಲೇ ಇತ್ತು.ಹೊಸ ಶಾಲೆ ಗೆಳತಿಯರ ಬಗ್ಗೆ ಚಿಂತಿಸದೆ ಹಾಯಾಗಿರಬೇಕೆಂದರೂ ಒಂದು ನಿಮಿಷವೂ ತೆಪ್ಪಗಿರದೆ, ಸುಮ್ಮನೆ ಏನಾದರೂ ವಟಗುಡತ್ತಲೇ ಇರುತ್ತಿತ್ತು. ಹಿಂದಿನ ಶಾಲೆಯ ಗೆಳತಿಯರನ್ನು ಅರೆಗಳಿಗೆ ನೆನೆದರೆ ಆಹಾ! ಎಷ್ಟು ಖುಷಿಯಾಗುತ್ತಿತ್ತು ಏನೋ ರೋಮಾಂಚನ, ತಲೆ ಹಗುರವಾಗಿ ಗಾಳಿಯಲ್ಲಿ ತೇಲಾಡಿದಂತಹ ಅನುಭವವಾಗುತ್ತಿತ್ತು. ಬದಲಾವಣೆಯನ್ನು ಎದುರಿಸುವ ಛಾತಿ ಬೆಳಸಿಕೊಳ್ಳದಿದ್ದರೆ ಸಾವು ನಿಶ್ಚಿತ ಎಂಬ ಸಂಗತಿ ಅರೆ ಪ್ರಜ್ಞಾವಸ್ಥಯಲ್ಲಿದ್ದ ನನ್ನನ್ನು ಬಡೆದಿಬ್ಬಿಸಿತ್ತು.

    ಅಂತೂ ಇಂತೂ ಅಕ್ಟೋಬರ್ ಸೂಟಿ ಕಳೆದು ಹೊಸ ಶಾಲೆಗೆ ಹೋಗುವ ದಿನ ಬಂದೇ ಬಿಟ್ಟಿತು. ಅಂದೆಕೋ ಬೆಳಕು ಸೂಸುವ ಕಂಗಳು ಮಂಜಾದವು. ಮನದ ಕಣ ಕಣದಲ್ಲೂ ನೀರವ ಮೌನ. ಪ್ರಜ್ಞಾವಸ್ಥೆಯಲ್ಲಿದ್ದ ಬುದ್ಧಿ ನಿನ್ನ ನೀರವ ಮೌನ ಮಡಚಿ ಎತ್ತಿಟ್ಟು ಬಾ. ನಿನಗಲ್ಲಿ ಸಿಹಿ ಮಾತುಗಳ ಸವಿ ಹಂಚುವ ಗೆಳೆತನ ಸಿಕ್ಕೀತು. ನಿನ್ನ ಭಯಕ್ಕೆ ಮುಕ್ತಿ ದೊರಕೀತು ಎಂದು ಹೇಳಿತ್ತು.
    ಜೀವನದಲ್ಲಿ ಬೇರೆ ಊರು ಬೇರೆ ಬೇರೆ ಜನ, ಜನರ ಸ್ನೇಹ ಅನ್ನೋದು ಸಾಮಾನ್ಯ. ಅದರಿಂದ ಹೊರಗುಳಿಯಲು ಪ್ರಯತ್ನಿಸುವದು ಮೂರ್ಖತನ. ಹೊಸ ವಾತಾವರಣದಲ್ಲಿ ನನ್ನ ಮೇಲೆ ಯಾರಾದರೂ ಎಗರಿದರೆ, ಹಳೆಯ ಆಪ್ತ ವಲಯದಿಂದ ಹೊರ ಬರದೆ ನಾನೇ ಎಡವಿ ಬಿದ್ದರೆ? ಎನ್ನುವ ಭಯದಲ್ಲಿ ಬೇಯದೇ ಸ್ನೇಹದ ಕಡಲಲ್ಲಿ ಎದೆಗಾರಿಕೆಯಿಂದ ಈಜಬೇಕು. ಗೆಳೆತನದ ಮಾತಿನಲ್ಲಿ ಎಲ್ಲವನ್ನೂ ಹೂಂ ಎಂದು ಒಪ್ಪಿ ನಗಬೇಕು. ಹುಡುಗಾಟದಲ್ಲಿ ತುಂಟತನ ತೋರಬೇಕು. ಎಂದು ಒಳಮನಸ್ಸು ನನಗೆ ಬುದ್ಧಿ ಹೇಳುತ್ತಲೇ ಇತ್ತು.

    ಈ ದೋಸ್ತಿ ಅನ್ನೋದು ಭಿನ್ನ ಭಿನ್ನ ರೀತಿಯಲ್ಲಿ ಸಿಕ್ಕುತ್ತೆ. ಕೆಲವರಿಗೆ ಈ ಗೆಳೆತನದಲ್ಲಿ ಬೇರಿಗಿಳಿಯುವಾಸೆ. ಇನ್ನೂ ಹಲವರಿಗೆ ಬೆವರಿಳಿಸುವಾಸೆ.ಬೇರಿಗಳಿದು ಹೃದಯದಲ್ಲಿ ಭಾವಾನುರಾಗದ ಹೂವುಗಳ ಪಲ್ಲವಿಸುವಂತೆ ಮಾಡುವಂಥ ಗೆಳೆಯರ ಜೊತೆ ಮನ ತೆರೆದು ನೆಗೆಯುವಾಸೆ.ಗೆಳೆತನದ ಹೆಸರಿನಲ್ಲಿ ತಮ್ಮ ಉಪಯೋಗಕ್ಕೆ ಉಪಯೋಗಿಸಿಕೊಂಡು ಅಯ್ಯೋ! ಇನ್ನು ಉಪಯೋಗಕ್ಕೆ ಬರಲ್ಲ ಎಂದು ಬಳಸಿ ಬೀಸಾಕುವಂಥ ಗೆಳೆಯರ ಕಾಟಕ್ಕೆ ನೋವಾದರೂ ಒಳಗೊಳಗೆ ಬಿಕ್ಕಿ ಎಲ್ಲವ ನುಂಗಿ ಕೂಡದಿರು. ಬದುಕು ಕಲಿಸಿದ ಬರಹವನು ಅವರಿಗೂ ಒಂದಿಷ್ಟು ಕಲಿಸು. ಓಲಂಪಿಕ್ಸ್‌ನ ಓಟದಲ್ಲಿ ಚಿನ್ನ ಗೆದ್ದ ಹಾಗೆ ಸಂಭ್ರಮಿಸುವುದೇ ನಿಜವಾದ ಗೆಳೆತನ. ಸ್ನೇಹವೇ ಉಸಿರು. ಗೆಳೆತನವೇ ಜೀವನ. ಗೆಳೆತನಕ್ಕೆ ಯವುದೇ ಸಂಬಂಧ ಬೇಕಿಲ್ಲ. ಅದಕ್ಕೆ ವಯಸ್ಸಿನ ಗಡಿಯಿಲ್ಲ.ಅದು ಜಾತಿ, ಲಿಂಗಭೇದ ನೋಡಲ್ಲ. ಅದು ಎಲ್ಲ ಎಲ್ಲೆಯನ್ನು ಮೀರಿದ್ದು. ಒಂದೇ ಒಂದು ಕಣ್ಣ ಹನಿ ಬಿದ್ದರೂ ಅದು ಸಹಿಸದು. ಸೊತರೂ, ಸೋತು ಗೆದ್ದರೂ ಜೀವನ ಪರ್ಯಂತ ಆಸರೆಯಾಗಿರುವದು ಸ್ನೇಹ ಮಾತ್ರ.

    ಹೀಗೆ ಏನೇನೋ ವಿಚಾರಗಳು ತಲೆಯಲ್ಲಿ ಗಿರಗಿಟ್ಲೆ ಆಡುತ್ತಿರುವಾಗ ಅಕ್ಟೋಬರ್ ಸೂಟಿ ಕಳೆಯಲೆಂದು ಅಜ್ಜಿ ಮನೆ ಸೇರಿದ್ದ ಪಕ್ಕದ ಮನೆ ಹುಡುಗಿ ಸೂರ್ಯ ಬರೋ ಮುನ್ನವೇ ಊರಿಗೆ ಬಂದು ಶಾಲೆಗೆ ಬರೋ ತಯಾರಿ ಮಾಡಿಕೊಂಡು ಹೆಗಲಿಗೆ ಶಾಲೆಯ ಚೀಲ ಹಾಕಿ ನಮ್ಮ ಮನೆಗೆ ಬಂದು ತಾನೇ ತನ್ನ ಪರಿಚಯ ಮಾಡಿಕೊಂಡಳು. ಅವಳು ಎಸ್ ಎಸ್ ಎಲ್ ಸಿ ಯಲ್ಲಿಯೇ ಓದುತ್ತಿದ್ದಳು.ಸ್ನೇಹದ ಹಸ್ತವ ಚಾಚಿ ನನ್ನ ಮನೆವರೆಗೂ ಬಂದಿದ್ದಳು.

    ಇದುವರೆಗೂ ಹೊಸ ಗೆಳೆತನದ ನಟ್ಟಿರುಳಿನ ಭಯದಲ್ಲಿದ್ದ ನನ್ನನ್ನು ಆಚೆ ತಂದಿದ್ದಳು. ಅವಳ ಸ್ನೇಹಕೆ ನನ್ನ ಮೌನದ ಆಣೆಕಟ್ಟು ಒಡೆಯಿತು. ಸ್ನೇಹದ ಸವಿ ಸುಧೆಯ ಹರಿಸಿತು. ಕಾಲೇಜಿನ ದಿನಗಳಲ್ಲಿ ಮತ್ತೆ ಈಗ ವೃತ್ತಿ ಜೀವನದಲ್ಲಿ ಅನೇಕ ಗೆಳತಿಯರ ಮತ್ತು ಜನರ ಸ್ನೇಹದಲ್ಲಿ ಮಿಂದಿದ್ದೇನೆ. ಆ ಶುದ್ಧ ಗೆಳೆತನದಲ್ಲಿ ಚಂದಿರನ ಮೆಟ್ಟಿ, ಮಂಗಳನ ಮುಟ್ಟಿ, ಅವರ ಭಾವದೆದಯ ತಟ್ಟಿ ಅವರೊಳಗಂದಾಗಿದ್ದೇನೆ. ಎಂಬ ಹೆಮ್ಮೆಯು ನನ್ನದಾಗಿದೆ.

    ಶುಭ ದಿನ

    ಇಂದಿನ ನುಡಿ

    ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ. ಆದ್ದರಿಂದ ಆಹಾರ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.

    ಸಂಗ್ರಹ :ರಾಜೀವಲೋಚನ.

    ಇಂದಿನ ಪಂಚಾಂಗ

    ದಿನಾಂಕ 29 ಸೆಪ್ಟಂಬರ್ 2020,ಮಂಗಳವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ:ತ್ರಯೋದಶಿ ನಕ್ಷತ್ರ: ಶತಭಿಷ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.11

    ಇಂದಿನ ವಿಶೇಷ

    ವಿಶ್ವ ಹೃದಯ ದಿನ

    P

    ತೆಂಗಿನ ಕರಟ, ಮರದ ಬೇರಿನ ಕಲಾಕೃತಿ

    ಬಳಕೂರು ವಿ ಎಸ್ ನಾಯಕ

    ನಾವು ಪ್ರತಿನಿತ್ಯ ಉಪಯೋಗಿಸುವ ತೆಂಗಿನ ಚಿಪ್ಪನ್ನು ಸಾಮಾನ್ಯವಾಗಿ ಒಲೆಗೆ ಉರುವಲಾಗಿ ಬಳಸುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ಕಲಾವಿದ ನಿರುಪಯುಕ್ತ ವಸ್ತುಗಳಾದ ಕರಟ ಮತ್ತು ಮರದ ಬೇರಿನಲ್ಲಿ ತಮ್ಮ ಕೈಚಳಕದ ಮೂಲಕ ಕಲಾಕೃತಿಗಳನ್ನು ರಚಿಸಿ ಎಲ್ಲರ ಆಕರ್ಷಣೆಯ ಬಿಂದುವಾಗಿದ್ದಾರೆ.

    ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನ ಶಿವಮೂರ್ತಿ ಭಟ್ಟರು. ಪ್ರಗತಿ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ. ಇವರಿಗೆ ಕಲಾಸಕ್ತಿ ಮೂಡಿದ್ದು ಇವರ ತಂದೆಯವರಿಂದ. ಅವರೂ ಕೂಡ ಕಲಾವಿದರು. ಅವರು ಮಾಡಿದ ಮರದ ಕಲಾಕೃತಿಗಳಿಗೆ ಮನಸೋತ ಇವರು ತಾವೂ ಕೂಡ ಇಂತಹ ವಿಭಿನ್ನ ಕಲಾಕೃತಿಗಳನ್ನು ರಚಿಸುವುದರ ಮೂಲಕ ಎಲ್ಲರೂ ಒಂದು ಕ್ಷಣ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಯಾವುದೇ ಒಂದು ಮರವನ್ನು ಕಿತ್ತಾಗ ಅಥವಾ ಅದು ಗಾಳಿ ಮಳೆಗೆ ಬಿದ್ದಾಗ ಅದರ ಬೇರು ಸಾಮಾನ್ಯವಾಗಿ ಯಾವುದಕ್ಕೂ ಬಳಕೆ ಯಾಗುವುದಿಲ್ಲ. ಆದರೆ ಅದರಲ್ಲಿಯೇ ಕಲೆ ಅರಳಿಸಬಹುದು ಎಂದು ಅರಿತ ಶಿವಮೂರ್ತಿ ಭಟ್ಟರು ಮರಗಳ ಬೇರು ಮತ್ತು ಕರಟದಲ್ಲಿ ಬಹಳ ತಾಳ್ಮೆಯಿಂದ ಪರಿಸರದ ವಿಭಿನ್ನ ವಿಷಯಗಳನ್ನು ತೆಗೆದುಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಕೂಡ ಈ ಕಲಾಕೃತಿಗಳ ಮೂಲ ಗುರುತಿಸುವುದು ಕಷ್ಟ. ಅಷ್ಟು ಸೊಗಸಾದ ರಚನೆ.

    ಇವರಲ್ಲಿ ಹಕ್ಕಿಗಳ ಗೂಡು, ಮಾನವ, ಪಕ್ಷಿಗಳ, ಪ್ರಾಣಿಗಳ, ಹಾವು, ಆದಿಮಾನವ, ನಮ್ಮ ಹಳ್ಳಿಯ ಸಂಸ್ಕೃತಿ, ವೇಷಭೂಷಣಗಳು, ಕುದುರೆ, ಕಪ್ಪೆ, ದೇವರುಗಳನ್ನು ಹೋಲುವ ಮರದ ಬೇರಿನ ಕಲಾಕೃತಿಗಳ ಸಂಗ್ರಹವಿದೆ. ಇವರು ಬರೀ ಕೆತ್ತನೆ ಒಂದೇ ಅಲ್ಲದೆ ಅನ್ಯ ಮಾಧ್ಯಮದ ಮೂಲಕ ಕಲಾಕೃತಿಗಳನ್ನು ರಚಿಸಿದ್ದಾರೆ. ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ತೆಂಗಿನ ಚಿಪ್ಪು ಮತ್ತು ಮರದ ಬೇರುಗಳ ಕಲಾಕೃತಿಗಳು ಇವರ ಬಳಿಯಿದೆ. ಹವ್ಯಾಸ ಬೆಳೆಸಿಕೊಂಡ ಶಿವಮೂರ್ತಿ ಭಟ್ಟರವರು ಕಸದಿಂದ ರಸ ಎಂಬ ಕಲ್ಪನೆಯ ಮೂಲಕ ನಿರುಪಯೋಗಿ ವಸ್ತುಗಳಲ್ಲಿ ಕೂಡ ವಿಭಿನ್ನ ಆಕರ್ಷಕ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆಯಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

    ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಲ್ಲಿಯ ಆಸಕ್ತರಿಗೆ ಈ ಕಲೆಯನ್ನು ತರಬೇತಿ ಮೂಲಕ ಹೇಳಿಕೊಡುವ ಆಸಕ್ತಿ ಅವರಲ್ಲಿದೆ. ಆಸಕ್ತಿ, ಗುರಿ ಹೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಯಾವುದೂ ಕೂಡ ಆಗಲ್ಲ ಎಂದು ಕುಳಿತರೆ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಶಿವಮೂರ್ತಿ ಭಟ್ಟರವರ ಅಭಿಪ್ರಾಯ. ಇಂತಹ ಅದ್ಭುತ ಕಲಾ ಪ್ರಕಾರವನ್ನು ರಚಿಸುವ ಇವರಿಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ. ಇವರ ಈ ಅದ್ಭುತ ಕಲಾ ಸೇವೆಗೆ ನಮ್ಮೆಲ್ಲರ ಹೃದಯಪೂರ್ವಕ ನಮನಗಳು. ಇನ್ನಷ್ಟು ವಿಭಿನ್ನ ಕಲಾ ಸೇವೆ ಇವರದ್ದಾಗಲಿ ಎಂಬ ಹಾರೈಕೆ ನಮ್ಮದು.

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸಕರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಕರೆಂಟಿದ್ರೂ ವೋಲ್ಟೇಜ್ ಇಲ್ಲ, ಮೊಬೈಲಿದ್ರೂ ನೆಟ್‌ವರ್ಕ್‌ ಇಲ್ಲ!

    ಇಂದಿನ ಕ್ಯಾಂಪಸ್ ಪ್ರೆಸ್ ಅಂಕಣದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿನ ದ್ವಿತೀಯ ಬಿಎ ಪತ್ರಿಕೋದ್ಯಮ ವಿಭಾಗದ ಪ್ರಮೀಳಾ ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಶಿಕ್ಷಣ ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

    ಗುಡ್ಡ, ಕಾಡು -ಮೇಡುಗಳ ನಡುವೆ, ನಿಸರ್ಗದ ಮಡಿಲಲ್ಲಿರುವ ಜಾಗವೇ ಹಳ್ಳಿ. ಆಧುನೀಕತೆಯ ಗಾಳಿ ಸೋಂಕದೇ ಇರುವುದು ಹಳ್ಳಿಗರ ನೆಮ್ಮದಿಯನ್ನು ಉಳಿಸಿದೆಯಾದರೂ ಇದೇ ಮುಂದೆ ತಮ್ಮ ಅಭಿವೃದ್ಧಿಗೆ ಕುತ್ತಾಗಬಹುದು ಎಂಬ ಆತಂಕ ಇವರಲ್ಲಿದೆ. ಅದರಲ್ಲೂ ಕೋವಿಡ್‌ನಿಂದಾಗಿ ಶಿಕ್ಷಣವೂ ಆನ್‌ಲೈನ್‌ ಆಗಿರುವುದು ಇವರ ಚಿಂತೆ ಹೆಚ್ಚಿಸಿದೆ.

    ಹಳ್ಳಿಗಳೇ ನಮ್ಮ ದೇಶದ ಆತ್ಮ ಎಂಬ ಮಾತಿದೆ. ಎಲ್ಲಾ ಸರ್ಕಾರಗಳೂ ಹಳ್ಳಿಗಳ, ಕೃಷಿಕರ ಅಭಿವೃದ್ಧಿಯೇ ನಮ್ಮ ಆದ್ಯತೆ ಎಂದು ಹೇಳಿದ್ದೂ ಆಯಿತು. ಆದರೆ ‘ಗ್ಲೋಬಲ್‌ ವಿಲೇಜ್‌ʼ ಪರಿಕಲ್ಪನೆ ಹಳತಾದರೂ ಹಳ್ಳಿಗರ ಪರಿಸ್ಥಿತಿ ಬದಲಾಗಿಲ್ಲ. ತಾವು ಹಸಿದರೂ ಊರಿಗೆಲ್ಲಾ ಊಟ ಬಡಿಸುವ ಮುಗ್ಧ ಮನಸ್ಸಿನ ಹಳ್ಳಿಗರಿಗೆ ಆಧುನಿಕ ಸೌಲಭ್ಯಗಳು ದೊರೆಯುತ್ತಿಲ್ಲ. ತಾವಂತೂ ಓದಲಾಗಲಿಲ್ಲ, ತಮ್ಮ ಮಕ್ಕಳಾದರೂ ಓದಲಿ ಎಂದು ಅವರನ್ನು ಪೇಟೆಯ ಖಾಸಗಿ ಶಾಲೆಗೆ ಸೇರಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಬದಲಾಗಿ ಆಧುನಿಕ ಮನಃಸ್ಥಿತಿ, ಹಳ್ಳಿಯ ಪರಿಸ್ಥಿತಿ ಒಟ್ಟಾಗಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ!  

    ಆಗಲೇ ಬಂತು ನೋಡಿ ಕೊವಿಡ್‌-19! ಶಿಕ್ಷಣವನ್ನೂ ಸೇರಿ ಎಲ್ಲವನ್ನೂ ಆನ್‌ಲೈನ್‌ ಮಾಡಿದ ಕೊವಿಡ್‌ ಹಳ್ಳಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೊದಲೇ ಸಾಲ-ಸೋಲ ಮಾಡಿ ಮಕ್ಕಳನ್ನು ಓದಿಸುತ್ತಿದ್ದ ಜನರಿಗೆ ಈಗ ಮಕ್ಕಳಿಗೆ ಮೊಬೈಲ್‌ ಪೋನ್‌, ಲ್ಯಾಪ್‌ಟಾಪ್‌ ಕೊಡಿಸುವ ಚಿಂತೆ. ವಸ್ತುಸ್ಥಿತಿಯೆಂದರೆ ಎಷ್ಟೋ ಹಳ್ಳಿಗಳಲ್ಲಿ ವಿದ್ಯುತ್‌  ಸಂಪರ್ಕ ಸರಿಯಾಗಿರುವುದಿಲ್ಲ. ಇನ್ನು ಮೊಬೈಲ್‌ ಟವರ್‌ ಇಲ್ಲವೇ ಇಲ್ಲ. ಇದ್ದರೂ ನೆಟ್‌ವರ್ಕ್‌ ಸರಿಯಾಗಿಲ್ಲ. ಇವರಿಗೆಲ್ಲಿಯ ಆನ್‌ಲೈನ್‌ ಶಿಕ್ಷಣ?!

    ಸಾಲ ಮಾಡಿ ಮಕ್ಕಳ ಶುಲ್ಕ ಕಟ್ಟಿ, ಅವರ ಸಮವಸ್ತ್ರ, ಪುಸ್ತಕ, ಬ್ಯಾಗ್, ಕೊಡಿಸುವ, ಎಲ್ಲರಂತೆ ನನ್ನ ಮಗು ಶಿಕ್ಷಣ ಪಡೆಯಲಿ ಎಂದು ಬಯಸುವ ಹೆತ್ತವರ ಪ್ರಶ್ನೆಗಳಿಗೆ ಏನನ್ನುತ್ತದೆ ನಮ್ಮ ಆಡಳಿತ? ಇರುವ ಅರ್ಧ ಎಕರೆ ತೋಟ, ಹೊಲಗಳನ್ನು ನಂಬಿ ಬದುಕುವ ಹಳ್ಳಿ ಜನಕ್ಕೆ ಮಳೆ ಬಂದರೆ ಬಿತ್ತಿದ ಬೆಳೆ ಕೈ ಸೇರುತ್ತದೆ. ಇಲ್ಲವಾದರೆ ಕೈ ತಪ್ಪಿ ಹೋಗುತ್ತದೆ. ಹಾಗಾಗಿ ಸ್ವಂತ ಹೊಲ, ಗದ್ದೆಗಳಿಗೆ ಖರ್ಚು ಮಾಡಲು ಸಾಧ್ಯವಾಗದ ಹಳ್ಳಿ ಮಂದಿಗೆ ಇನ್ನೂ ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ ಹೇಗೆ ಕೊಡಿಸಲು ಸಾಧ್ಯ? 

    ಹಲವು ಹಳ್ಳಿಗಳಿಗೆ ಇನ್ನೂ ಸೀಮೆಎಣ್ಣೆ ದೀಪ ಅಥವಾ ಮೊಂಬತ್ತಿಗಳೇ ಆಧಾರ. ಇದಕ್ಕೆ ಪರಿಹಾರವಾಗಿ ಸರ್ಕಾರ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಅಳವಡಿಸಲು ಸೂಚಿಸಿದೆ ಎಂಬುದೇನೋ ಸತ್ಯ. ಆದರೆ ವಿದ್ಯುತ್ ಸಂಪರ್ಕ ಇರುವ ಹಳ್ಳಿಗಳಲ್ಲೇ ಮರದ ಕೊಂಬೆ ತಗುಲಿಯೋ ಅಥವಾ ಮಳೆಯಿಂದಾಗಿ ಕಂಬ ಮುರಿದು ವಾರ-ತಿಂಗಳುಗಟ್ಟಲೆ ವಿದ್ಯುತ್‌ ಇಲ್ಲದಂತಾಗುವುದು ಹೊಸ ಸಂಗತಿಯಲ್ಲ. ಇಷ್ಟಾಗಿಯೂ, ಸಾಲ ಮಾಡಿಯಾದರೂ ಮೊಬೈಲ್‌, ಲ್ಯಾಪ್‌ಟಾಪ್‌ ಕೊಡಿಸೋಣಾ ಎಂದಿಟ್ಟುಕೊಳ್ಳೋಣ. ಮಾಡಿದ ಸಾಲ ತೀರಿಸಲು ಅವರು ಮತ್ತೊಂದು ಸಾಲ ಮಾಡಬೇಕಾಗಿದೆ ಎಂಬುದು ದುರಂತ ಸತ್ಯ. 

    ಹಳ್ಳಿಯ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಆಲಿಸಲು ಸಾಧ್ಯವಾಗುತ್ತಿಲ್ಲ ಅಥವಾ ತುಂಬಾ ಕಷ್ಟವಾಗುತ್ತದೆ. ಅಷ್ಟಿಷ್ಟು ಚಾರ್ಜ್‌ ಮಾಡಿದ ಮೊಬೈಲ್‌ ಒಂದು ಕ್ಲಾಸ್‌ ಆಗುವಷ್ಟರಲ್ಲಿ ಆಫ್‌ ಆಗಿರುತ್ತದೆ. ಈ ಸಮಸ್ಯೆಯಿಂದ ಮಗು ಆ ದಿನದ ಪಾಠ ಕೇಳಲು ಸಾಧ್ಯವಾಗದ್ದಿದ್ದಾಗ ಕಲಿಕೆಯಲಿ ಹಿಂದುಳಿಯುವ ಸಾಧ್ಯತೆ ಇದೆ. ಹಾಗಾಗಿ ಆನ್ಲೈನ್ ಕ್ಲಾಸ್ಸಲ್ಲಿ ತರಗತಿ ನಡೆಸಿದರೂ ಆಫ್ ಲೈನ್ ಕ್ಲಾಸ್ ನಡೆಸಬೇಕು. ನೆಟ್ವರ್ಕಿಗಾಗಿ ಗುಡ್ಡ, ಕಾಡು ಅಲೆಯುವಾಗ ಪಾಠ ಮುಗಿದುಹೋಗಿರುತ್ತದೆ.  

    Photo by Benny Liu on Unsplash

    ಶುಭ ದಿನ

    ಇಂದಿನ ನುಡಿ

    ಅಸಹನೆಯಿಂದ ಭಾವೋದ್ವೇಗ, ಅದರಿಂದ ಆತಂಕ, ಆತಂಕದಿಂದ ಆಪತ್ತು ಬರುತ್ತದೆ. ಆದ್ದರಿಂದಲೇ ಅಸಹನೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕಾದರೆ ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು

    -ಕೃಷ್ಣಮೂರ್ತಿ ಪುರಾಣಿಕ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 28 ಸೆಪ್ಟಂಬರ್ 2020,ಸೋಮವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ:ದ್ವಾದಶಿ ನಕ್ಷತ್ರ: ಧನಿಷ್ಠ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.12

    ಇಂದಿನ ವಿಶೇಷ

    ವಿಶ್ವ ಮಾಹಿತಿ ಮತ್ತು ತಂತ್ರಜ್ಞಾನ ದಿನ

    P

    91 ತುಂಬಿದ ಗಾನ ಕೋಗಿಲೆಗೆ ಹುಟ್ಟು ಹಬ್ಬದ ಶುಭಾಶಯ

    ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 130 ಕೋಟಿ ಜನಗಳಿಗೆ ಹೇಗೆ ಪರಿಚಿತರೋ ಹಾಗೆ ಗಾನಕೋಗಿಲೆ  ಲತಾ ಮಂಗೇಶ್ಕರ್ ಅವರೂ ಸಹ  ನಮ್ಮ ದೇಶದ ಜನತೆಗೆ ಚಿರಪರಿಚಿತರು. ಇವರ ಹುಟ್ಟಿದ ಹಬ್ಬಕ್ಕೆ ಪ್ರಧಾನಮಂತ್ರಿಯವರು ಸ್ವತ:  ಫೋನ್ ಮಾಡಿ ಅಭಿನಂದನೆ ಸಲ್ಲಿಸಬೇಕೆಂದರೆ ಆ ವ್ಯಕ್ತಿ ಇನ್ನೆಷ್ಟು ಗೌರವಾನ್ವಿತೆ ಎಂದು ನೀವೇ ಊಹಿಸಿ. ಮೋದಿಜೀಯವರು ಲತಾಜೀ ಅವರೇ ಕೈಯಿಂದ ತಯಾರಿಸಿದ ಗುಜರಾತಿ ಊಟವನ್ನು ಮಾಡಿದ್ದಾರೆ.

    ಹಿನ್ನೆಲೆ ಗಾಯಕಿಯರಲ್ಲಿ  ಮೊದಲನೇ ಸ್ಥಾನ ಇವರಿಗೆ  ಸಲ್ಲುತ್ತದೆ. ಎಂಟು ದಶಕಗಳಿಂದ  ತಲೆಮಾರುಗಳಿಗೆ ಹಾಡು ಗಳು ಅತ್ಯಂತ ಸುಮಧುರ. ಕೇಳುಗರಿಗೆ ಮತ್ತು ನೋಡುವವರಿಗೆ  ಬಾಲಿವುಡ್ ನಟಿಯರೇ  ಹಾಡುತ್ತಿರಬಹುದೆಂಬ  ಭ್ರಮೆ ಹುಟ್ಟಿಸುವಂತಹ ಧ್ವನಿ ಅವರದು.  ಅಷ್ಟೊಂದು ವೈವಿಧ್ಯತೆಯಲ್ಲಿ ಹಾಡುವ ಲತಾಜೀಗೆ ಮತ್ತೊಬ್ಬರು ಸಾಟಿ ಇಲ್ಲ.

    ಸವಿನಯದ ಪ್ರತಿರೂಪ

    ಸೌಜನ್ಯ, ಸರಳತೆ ಮತ್ತು  ಸವಿನಯದ ಪ್ರತಿರೂಪವೇ ಲತಾ ಮಂಗೇಶ್ಕರ್. ಸದಾ ಬಿಳಿಯ ಉಡುಪಿನಲ್ಲಿ ಕಾಣಿಸಿಕೊಳ್ಳುವ ಈ ಸ್ವರ ಸಂಗೀತದ ಗಾನಕೋಗಿಲೆ, ಬಹಳ ಸಂಕೋಚದ ಸ್ವಭಾವದವರು.

    ಹಾಗೆಂದು ಜೀವನವೇನು ಸುಖದಲ್ಲಿ ಶುರುವಾಗಲಿಲ್ಲ.ತಂದೆ ದೀನಾನಾಥ್ ಅವರ  ಅಕಾಲಿಕ ಮರಣ ದಿಂದಾಗಿ 12 ವರ್ಷದ ಲತಾಗೆ ಮೂರು ಜನ ತಂಗಿಯರು ಮತ್ತು ಒಬ್ಬ ತಮ್ಮನನ್ನು ಸಾಕುವ ಜವಾಬ್ದಾರಿ ಹೆಗಲೀರಿ ಹೇಗಾದರೂ ಕಷ್ಟಪಟ್ಟು ಸಂಪಾದಿಸಲೇ ಬೇಕಾದ  ಪರಿಸ್ಥಿತಿ ಎದುರಾಯಿತು.

    ತಂದೆಯಿಂದ  ಶಾಸ್ತ್ರೀಯ ಸಂಗೀತದ ಪಾಠ
    ಮನೆಯವರೆಲ್ಲರಿಗೂ ಆಗಿತ್ತು.   ಜೀವನದ ದಾರಿಗೆ ಮತ್ತೇನು ಗೊತ್ತಿಲ್ಲದ ಲತಾ ಮರಾಠಿ ನಾಟಕದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅಭಿನಯಿಸಿ ಹಾಡುತ್ತಿದ್ದರು.ಈ ರೀತಿ ಸಣ್ಣ ಝರಿಯಾಗಿ ಶುರುವಾದದ್ದು ಇಂದು 25000ಕ್ಕೂ ಹೆಚ್ಚಿನ ಹಾಡುಗಳನ್ನು 36 ಭಾಷೆಗಳಲ್ಲಿ ಹಾಡಿ ಪ್ರಪಂಚದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ  ಹಿನ್ನೆಲೆ ಗಾಯಕಿ ಎಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಇದೆ.

    ಇವರು ಹಾಡಿದ ಚಾಂದಿನಿ ಚಿತ್ರದ ಮೇರೆ ಹಾಥೋ  ಮೆ ನೌ ನೌ ಚೂಡಿಯಾ  ಹೆ ಹಾಗೂ ಹಮ್ ಆಪ್ ಕೆ ಹೈ ಕೌನ್ ನ ದೀದೀ ತೇರಾ ದೇವರ್ ದೀವಾನಾ ಹಾಡುಗಳು ಎಷ್ಟು ಫೇಮಸ್ ಎಂದರೆ ಆ ಕಾಲದಲ್ಲಿ ಮದುವೆ ಮನೆಗಳಲ್ಲಿ ಈ ಹಾಡುಗಳು ಇರಲೇ ಬೇಕಿತ್ತು.

    ಒಮ್ಮೆ  ಹಾಡುವಾಗ ಲತಾಗೆ ನಟ ದಿಲೀಪ್ ಕುಮಾರ್ ಹೇಳಿದರಂತೆ ನಿಮ್ಮ ಹಿಂದಿ  ಉಚ್ಛಾರಣೆಯಲ್ಲಿ  ಮರಾಠಿ ಭಾಷೆಯ ಛಾಯೆ ಎದ್ದು ಕಾಣುತ್ತದೆ ಎಂದು. ಅಷ್ಟಕ್ಕೆ ಲತಾರವರು ಉರ್ದು ಮತ್ತು ಹಿಂದಿಯನ್ನು ಕಲಿತು ಎಲ್ಲರಿಗೂ ನಾನೂ ಸರಿಯಾದ ಹಿಂದಿಯಲ್ಲಿ  ಹಾಡಬಲ್ಲೆ ಎಂದು  ತೋರಿಸಿದರಂತೆ. ಹಿಂದುಸ್ಥಾನಿ ಸಂಗೀತವನ್ನು ಹಲವಾರು ಗುರುಗಳಿಂದ ಕಲಿತಿದ್ದಾರೆ.

    ನಮ್ಮ ದೇಶದ ಎಲ್ಲಾ ಭಾಗದಲ್ಲಿ  ಲತಾ ಅವರ ಅಭಿಮಾನಿಗಳಿದ್ದಾರೆ. .ಇಂದಿಗೂ ವಯಸ್ಸಾದವರೇ ಆಗಲಿ ಯುವಕರೇ ಆಗಲಿ  ಲತಾ ಹಾಡನ್ನು  ಕೇಳಿ ಸಂತೋಷಪಡುತ್ತಾರೆ. ನಮ್ಮ ದೇಶ ಒಂದೇ ಅಲ್ಲ ಪರದೇಶಗಳಲ್ಲಿರುವ ಭಾರತೀಯರನ್ನೂ ಭಾವನಾತ್ಮಕವಾಗಿ ಒಂದುಗೂಡಿಸುವುದರಲ್ಲಿ ಲತಾ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. 
    ಲಾಂಗ್ ಡ್ರೈವ್ ಹೋಗಬೇಕಾದರೆ ಮೊದಲು ಲತಾ ಹಾಡಿರುವ ಹಾಡುಗಳ ಪೆನ್ ಡ್ರೈವ್  ಅನ್ನು ತಮ್ಮ ಕಾರಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಆಗ  ಎಲ್ಲರಿಗೂ ತಾಯಿನಾಡು ಭಾರತದೊಡನೆ ಸಂಪರ್ಕದಲ್ಲಿರುವೆವೇನೋ ಎಂಬಂತೆ  ಭಾಸವಾಗುತ್ತಿತ್ತಂತೆ. ಈಗ ಬಿಡಿ ಯಾವ ಹಾಡು ಬೇಕಾದರೂ ಆನ್ಲೈನ್ ನಲ್ಲಿ  ಸಿಗುತ್ತದೆ. ನನಗೆ ಈಗ  ಓ ಕೌನ್ ಥೀ ಚಿತ್ರದ ಲಗ್ ಜಾ ಗಲೆ ಹಾಡು ನೆನಪಿಗೆ ಬರುತ್ತಿದೆ.

    1962 ರಲ್ಲಿ ಭಾರತದೊಡನೆ ಚೀನಾ ಯುದ್ಧ ಮಾಡಿದ ಸಂದರ್ಭ. 1963ರ ಗಣರಾಜ್ಯೋತ್ಸವದಂದು ಲತಾಜಿ ನಮ್ಮ ಯೋಧರ ಬಲಿದಾನದ ಸ್ಮರಣಾರ್ಥ  ‘ಎ ಮೇರೆ ವತನ ಕೆ ಲೋಗೋ ಜ಼ರ  ಆಂಖೋ ಮೆ ಭರಲೋ ಪಾನಿ‘ ಎಂಬ ಹಾಡನ್ನು  ಹಾಡಿದರು.   ಆಗ ಅಲ್ಲಿ ಸೇರಿದ್ದ ಎಲ್ಲರ ಹಾಗೂ  ಪ್ರಧಾನಮಂತ್ರಿಗಳಾಗಿದ್ದ ನೆಹರೂ ಅವರ ಕಣ್ಣಲ್ಲಿ  ಸಹ ನೀರು ಬಂತಂತೆ.  ಈಗಲೂ ಆ ಹಾಡನ್ನು ಕೇಳಿದರೆ ಮೈ ಝುಮ್  ಎನ್ನುತ್ತದೆ. ಒಮ್ಮೆ ಕೇಳೋಣ ಬನ್ನಿ ಆ ಹಾಡಿನ ಎರಡು ಸಾಲುಗಳನ್ನು.

    ಆಲ್ಬರ್ಟ್ ಹಾಲ್ ಲಂಡನ್ನಲ್ಲಿ ಪ್ರಪ್ರಥಮ ಕನ್ಸರ್ಟ್ ಕೊಟ್ಟ ಶ್ರೇಯಸ್ಸು ಲತಾ ಮಂಗೇಶ್ವರ್ ಅವರ ಮುಡಿಗೇರಿದೆ. ಅಲ್ಲಿ ನೆಲೆಸಿದ್ದ 6000 ಪಾಕಿಸ್ತಾನಿಗಳು ಕನ್ಸರ್ಟ್ ಗೆ ಬಂದಿದ್ದರಂತೆ ! 1974ರಲ್ಲಿ ನಡೆದ ಈ ಉತ್ಸವಕ್ಕೆ ಕೆನಡಾ,ಅಮೇರಿಕಾ ಹಾಗೂ ಪ್ಯಾರಿಸ್ ನಿಂದ ಜನಗಳು ಬಂದಿದ್ದರಂತೆ. ಪ್ರಖ್ಯಾತಿ ಎಂದರೆ ಹೀಗೆ ಇರಬೇಕಲ್ಲವೇ?

    ಸಂಗೀತದಲ್ಲಿ ಮಾಡಿರುವ ಅದ್ವಿತೀಯ ಸೇವೆಗಾಗಿ ಭಾರತ ತನ್ನ  ಪ್ರಜೆಗಳಿಗೆ ಕೊಡುವ ಸರ್ವಶ್ರೇಷ್ಠ  ಭಾರತರತ್ನ  ಪ್ರಶಸ್ತಿಯನ್ನು ಲತಾಜಿ ಅವರಿಗೆ  2001ರಲ್ಲಿ ನಮ್ಮ ಘನ ಸರ್ಕಾರ ಕೊಟ್ಟು ಗೌರವಿಸಿದೆ. ಇದಕ್ಕೆ ಮೊದಲು ಎಂಎಸ್ ಸುಬ್ಬಲಕ್ಷ್ಮಿ ಯವರಿಗೆ 1998ರಲ್ಲಿ ಭಾರತರತ್ನ ಪ್ರಶಸ್ತಿ ಕೊಟ್ಟು ಗೌರವಿಸಿತ್ತು.

    ಇವರ ಜೀವನ ಚರಿತ್ರೆಯನ್ನು ಹಲವಾರು ಲೇಖಕರು ಬರೆದಿದ್ದಾರೆ. ಮನೆಗೆ ಬರುವ ಅತಿಥಿಗಳನ್ನು ಬಹಳ ಆದರದಿಂದ ಸ್ವಾಗತಿಸುತ್ತಾರೆ.  ಇವರನ್ನು  ನೈಟಿಂಗೇಲ್ ಆಫ್ ಬಾಲಿವುಡ್ ಅಂತ ಸಹ ಕರೆಯುತ್ತಾರೆ. ಲತಾಜೀಯವರಿಗೆ ಸ್ವಲ್ಪವೂ ಹಮ್ಮು-ಬಿಮ್ಮುಗಳಿಲ್ಲ. ಯಾವಾಗಲೂ ಕಲಿಯುತ್ತಲೇ ಇರಬೇಕೆಂದು ಹೇಳುವ ಲತಾಜೀಯವರ ಮನಸ್ಸು ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಷ . ಸಂಗೀತ ನಿರ್ದೇಶಕರುಗಳು ಹೇಳುವ ಹಾಗೆ  ಭಾವನಾತ್ಮಕವಾಗಿ ಹಾಡುತ್ತಿದ್ದರು ಹಾಗೂ ಉಪಾಧ್ಯಾಯರು ಹೇಳಿದಂತೆ ಕಲಿಯುವ  ವಿದ್ಯಾರ್ಥಿನಿಯೂ  ಆಗುತ್ತಿದ್ದರಂತೆ. ಅವರ ಹಾಡುಗಳಲ್ಲಿ  ನಾನು  ಯಾವಾಗಲೂ ಗುನುಗುವ ಹಾಡು ಆಜ್ ಫಿರ್ ಜೀನೇ ಕಿ ತಮನ್ನಾ ಹೈ

    ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸ್ವತ:  ಹಾಡುಗಳ ನಿರ್ದೇಶನವನ್ನೂ ಮಾಡಿದ್ದಾರೆ.

    ಆಕೆಯ ಖ್ಯಾತಿ ಮುಗಿಲೆತ್ತರವಾದಾಗ ಎಲ್ಲರೂ ಸಂಗೀತ ಕೋಗಿಲೆಯ ಸಂಪರ್ಕವನ್ನು ಬಯಸುತ್ತಿದ್ದರು.1999ರಲ್ಲಿ ಪರ್ಫ್ಯೂಮ್ ಒಂದಕ್ಕೆ ಲತಾ ಪರ್ಫ್ಯೂಮ್ ಎಂದು ನಾಮಕರಣ ಮಾಡಿದರು.  ರಾಜ್ಯಸಭೆಯ ಮೆಂಬರ್ ಆಗಿ ನೇಮಕಗೊಂಡಿದ್ದರು. ಅನಾರೋಗ್ಯದ ಕಾರಣ  2005 ರಲ್ಲಿ ನಿವೃತ್ತಿ ಪಡೆದರು.

    ಪುಣೆಯಲ್ಲಿ ಅವರ ತಂದೆಯ ಹೆಸರಿನಲ್ಲಿ ದೀನನಾಥ ಮಂಗೇಶ್ಕರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್  ನಡೆಸುತ್ತಿದ್ದಾರೆ.

    ಇವರು ಸೋದರ  ಹೃದಯನಾಥ್ ರೊಡನೆ ಕ್ರಿಕೆಟ್ ಆಡುತ್ತಿದ್ದರಂತೆ. ಬಹುಶ: ಇವರ ಕ್ರಿಕೆಟ್ ಮೇಲಿನ ಅಭಿಮಾನಕ್ಕೆ ಪರೋಕ್ಷವಾಗಿ ಇದು ಕಾರಣವಿರಬಹುದು. ಸಚಿನ್ ತೆಂಡೂಲ್ಕರ್ ಅವರ ಮೇಲೆ ಇವರಿಗೆ ಮಗನಂತೆ ವಿಶ್ವಾಸ. 

    ಈ ದಿನ ಅಂದರೆ  ಸೆಪ್ಟೆಂಬರ್ 28  ಅವರ ಹುಟ್ಟುಹಬ್ಬ, 91 ವರ್ಷಗಳು ತುಂಬುತ್ತದೆ.  ದೇವರು ಅವರಿಗೆ ಸುಖ, ಶಾಂತಿ,  ಆರೋಗ್ಯ, ಎಲ್ಲವನ್ನೂ ಕೊಟ್ಟು ನೆಮ್ಮದಿಯಾಗಿಡಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ. 

    ಇಲ್ಲಿರುವ ಹಾಡುಗಳನ್ನು ನಮ್ಮಓದುಗರಿಗಾಗಿ ಹಾಡಿದ್ದು ಪ್ರಿಯಾಂಕ ಪದಕಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗಿರುವ ಪ್ರಿಯಾಂಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ.

    ಸರಕಾರಿ ಶಾಲೆ ಶಿಕ್ಷಕರ ಮಾದರಿ ಕೆಲಸ

    ಸಂತೆಬೆನ್ನೂರು ಫೈಜ್ನಟ್ರಾಜ್

    ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ಇಲ್ಲೊಂದು ಶಾಲೆ ಅದಕ್ಕೆ ಅಪವಾದ. ಶಿಕ್ಷಕರ ಆಸಕ್ತಿಯ ಫಲವಾಗಿ ಗಮನ ಸೆಳೆಯುತ್ತಿದೆ.

    ದಾವಣಗೆರೆ ಜಿಲ್ಲೆ ಸಂತೇಬೆನ್ನೂರಿನ ಈ ಶಾಲೆಯ ಈಗಿನ ಹೆಸರು ಕರ್ನಾಟಕ ಪಬ್ಲಿಕ್ ಸ್ಕೂಲ್ .ಇದು 1948 ರಲ್ಲಿ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಆರಂಭಗೊಂಡ ಶಾಲೆ. ಒಂದು ಕಾಲದಲ್ಲಿ ಸುತ್ತಲ ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಇದೇ ಶಿಕ್ಷಣ ಕೇಂದ್ರವಾಗಿತ್ತು.

    72 ವರುಷ ದಾಟಿ ಸಾಗುತ್ತಿರುವ ಶಾಲೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ತಳಹದಿಯೊಂದಿಗೆ ಜ್ಞಾನ ದ ಹಸಿವನ್ನು ತಣಿಸುತ್ತಾ ಸಾಗಿದೆ. ಕಾಲ ಬದಲಾದಂತೆ ಮಕ್ಕಳು ಶಿಕ್ಷಕರು ಬದಲಾದಂತೆ ಶಾಲೆಯೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಲದ ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಉತ್ತಮ ಫಲಿತಾಂಶ ದ ಜೊತೆಗೆ ತಂತ್ರಜ್ಞಾನ, ಹೊಸ ಕಟ್ಟಡ, ನವೀನ ಶಿಕ್ಷಣ ಮೈಗೂಡಿಸಿಕೊಂಡು ಜಿಲ್ಲೆಯ ಉತ್ತಮ ಶಾಲೆ ಎನ್ನಿಸಿದೆ.

    ಒಂದೇ ಸೂರಿನಡಿ ಶಿಕ್ಷಣ

    ಈ ಎರಡು ಮೂರು ವರ್ಷಗಳಿಂದ ‘ ಒಂದೇ ಸೂರಿನಡಿ ಶಿಕ್ಷಣ’ ಎಂಬ ಸರ್ಕಾರದ ಹೊಸ ಯೋಜನೆಯ ಅನ್ವಯ ಪ್ರಾಯೋಗಿಕವಾಗಿ ಆರಂಭಗೊಂಡ’ ಕರ್ನಾಟಕ ಪಬ್ಲಿಕ್ ಸ್ಕೂಲ್’ ಪಟ್ಟಿಯಲ್ಲಿ ಸಂತೆಬೆನ್ನೂರು ಸರ್ಕಾರಿ ಪ್ರೌಢಶಾಲೆ ಯೂ ಸೇರಿ ನಾವಿನ್ಯತೆಗೆ ಒಗ್ಗಿಕೊಂಡು ಶೈಕ್ಷಣಿಕ ಪ್ರಗತಿ ಮಾಡುತ್ತಿದೆ.

    ಕಾಲನ ಹೊಡೆತಕ್ಕೆ ಸಿಕ್ಕಿ ಎಲ್ಲಾ ಕ್ಷೇತ್ರ ಗಳು ಕೋವಿಡ್,ಕರೋನದ ಅಡಿಯಲ್ಲಿ ನಜ್ಜುಗುಜ್ಜಾಗಿದ್ದು ಜಗಜ್ಜಾಹಿರಾಗಿದ್ದು ಎಲ್ಲರು ಬಲ್ಲರು. ಅದಕ್ಕೆ ಶಾಲೆಗಳೂ ಹೊರತಲ್ಲ.
    ಕಳೆದ ಮಾರ್ಚ್ ನಿಂದ ಮಕ್ಕಳು ಶಾಲೆಯ ಮುಖ ನೋಡಿಲ್ಲ.ಶಿಕ್ಷಕ ವೃಂದ ಬಂದರೂ ಒಳ ಹೋಗದೇ ಹೊರಗಿಂದ ಹೊರಗೇ ಕಾರ್ಯ ಚಟುವಟಿಕೆ ಮಾಡುತ್ತಾ ಬಂದರು.

    ಇದೀಗ ಸ್ವಲ್ಪ ಹೌದೋ ಅಲ್ಲವೋ ಅನ್ನುವಂಥಾ ತಣ್ಣನೆಯ ವಾತಾವರಣ ಮತ್ತು ಮಕ್ಕಳು ಶಾಲೆಗೆ ಮರಳುವ ಆಶಾಕಿರಣ ಕಾಣಿಸುತ್ತಿದೆ.
    ಆ ನಿಟ್ಟಿನಲ್ಲಿ ಈ ಸಂತೆಬೆನ್ನೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಎಲ್ಲಾ ಶಿಕ್ಷಕ, ಶಿಕ್ಷಕಿಯರು ಒಮ್ಮತದಿಂದ ಮುಂಬರುವ ಮಕ್ಕಳ ಆರೋಗ್ಯ ದ ದೃಷ್ಟಿಯಿಂದ ಇಡೀ ಶಾಲೆಯನ್ನು ಅಮೂಲಾಗ್ರ ವಾಗಿ ಶುಚಿಗೊಳಿಸುತ್ತಿದ್ದಾರೆ.

    ತಾರಸಿ,ಗೋಡೆ,ಕೊಠಡಿಗಳು, ಅಂಗಳ,ಹಿತ್ತಲು, ಕಸಕಡ್ಡಿ ಎಲ್ಲಾ ಒಪ್ಪ ಒರಣ ಮಾಡುತ್ತಿದ್ದಾರೆ. ಲಿಂಗ ತಾರತಮ್ಯ ಇಲ್ಲದೇ ಅನ್ನ ಕೊಡುವ ಮಕ್ಕಳಾಗಮನಕ್ಕೆ, ಕರೋನ ಮುಂಜಾಗ್ರತಾ ಕ್ರಮಕ್ಕೆ ಇಡೀ ಶಾಲೆ ಸುಂದರಗೊಳಿಸುತ್ತಿದ್ದಾರೆ.

    ಸ್ವತಃ ಸಲಿಕೆ,ಗುದ್ದಲಿ,ಹಾರೆ ಪುಟ್ಟಿ ಹಿಡಿದು ಒಂದು ಕಡೆಯಿಂದ ಕಸ ತೆಗೆದು ಅಡ್ಡಾದಿಡ್ಡಿ ಬೆಳದ ಕೊಂಬೆರಂಬೆಗಳಿಗೆ ಆಕಾರಕೊಟ್ಟು, ಅಲಂಕಾರಿಕ ಸಸಿ ನೆಟ್ಟು, ಇರುವ ಗಿಡಗಳಿಗೆ ನೀರು ನಿಲ್ಲುವ ವ್ಯವಸ್ಥೆ ಮಾಡಿ ,ಗೊಬ್ಬರ ಹಾಕಿ ಮತ್ತೆ ಹೊಸ ಸಸಿ ನೆಟ್ಟು ಮುಂದಿನ ದಿನಗಳಲ್ಲಿ ಶಾಲೆ ಹಸಿರಿನಿಂದ ನಳನಳಿಸುವ ಆಲೋಚನೆ ಇಲ್ಲಿನ ಸಮಸ್ತ ಗುರು ವೃಂದದವರದು.

    ಸ್ವಂತ ಖರ್ಚಿನಿಂದ ಸುಣ್ಣ ಬಣ್ಣ ಮಾಡಿಸುವ ಆಲೋಚನೆಯೂ ಹೊಂದಿದ್ದು, ಸಧ್ಯ ಇಡೀ ಶಾಲೆಯನ್ನು ಕಸಮುಕ್ತ, ರೋಗಮುಕ್ತ, ಪ್ಲಾಸ್ಟಿಕ್ ಮುಕ್ತ ಮಾಡುವತ್ತ ಇಲ್ಲಿನ ಶಿಕ್ಷಕರು ದಾಪುಗಾಲು ಇಡುತ್ತಿದ್ದಾರೆ.

    ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ತಾನು ಬದಲಾಗಿ,ತನ್ನ ಪರಿಸರ ಬದಲಾಯಿಸಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಬಲ್ಲ.

    ಸರ್ಕಾರಿ ಶಾಲೆ ಎಂಬ ಉದಾಸೀನ ತೊರೆದು, ಗುಣಾತ್ಮಕ ಶಿಕ್ಷಣ ಇಂದಿನ ದಿನಮಾನಗಳಲ್ಲಿ ಇಂತಹ ಶಾಲೆಗಳೆ ನೀಡುತ್ತಿವೆ ಎಂಬ ಭಾವನೆ ಮೂಡಿಸಿಕೊಂಡು ಸಮಾಜ,ಪೋಷಕರು,ಅಧಿಕಾರಿ ವರ್ಗ ಮುನ್ನಡೆದಾಗ ಸರಕಾರಿ ಶಾಲೆ ಉಳಿದಾವು…ಉಚಿತ ಶಿಕ್ಷಣ ಮತ್ತು ಸರ್ಕಾರದ ಸೌಲಭ್ಯಗಳನ್ನು ಪ್ರತಿ ಪ್ರಜೆ ಪಡೆದು ಗೌರವಯುತವಾಗಿ ಬಾಳಿಯಾನು!

    ಶಾಲೆಗಾಗಿ,ಶಾಲಾ ಮಕ್ಕಳಿಗಾಗಿ ನಾವೆಲ್ಲಾ ಶಿಕ್ಷಕರು ದುಡಿಯುತ್ತಿದ್ದೇವೆ .ಮಕ್ಕಳು ಬರುವ ಸಮಯವಾದ್ದರಿಂದ ಒಂದಿಷ್ಟು ಗುಡಿಯ ಸ್ವಚ್ಛತೆ ಸಾಗುತ್ತಿದೆ. ಜ್ಯೋತಿ ಕುಮಾರ್, ಗಣಿತಶಿಕ್ಷಕ

    ದೊಡ್ಡ ಶಾಲೆ ನಮ್ಮದು. ಮಕ್ಕಳ ಸಂಖ್ಯೇ ದಾವಣಗೆರೆ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನ. ಸರ್ಕಾರಿ ಶಾಲೆ ಎಂಬ ಅಸಡ್ಡೆ ಮಾಡದೇ ಒಗ್ಗಟ್ಟಿನಿಂದ ನಮ್ಮ ಮನೆ ಕೆಲಸ ಎಂಬಂತೆ ಶಾಲೆಯ ಶುದ್ಧತೆ ಮಾಡುತ್ತಿದ್ದೇವೆ. ಜೆ.ಒ ವಿಜಯ್ ಕುಮಾರ್

    ಸಂತೆಬೆನ್ನೂರು ಫೈಜ್ನಟ್ರಾಜ್ ವೃತ್ತಿಯಿಂದ ಇದೇ ಶಾಲೆಯಲ್ಲಿ ಶಿಕ್ಷಕ. ಪ್ರವೃತ್ತಿಯಿಂದ ಕವಿ, ಕಥೆಗಾರ , ಸಾಹಿತಿ.

    ಷೇರುಪೇಟೆಯ ಯಶಸ್ಸಿಗೆ ಸಪ್ತ ಸೂತ್ರ

    ಮಾಧ್ಯಮಗಳಲ್ಲಿ ಬರುವ ಅನೇಕ ಸಕಾರಾತ್ಮಕ ಪ್ರಚಾರಿಕ ವಿಚಾರಗಳು, ಷೇರುಪೇಟೆಯ ರಭಸದ ಏರಿಳಿತಗಳ ಲಾಭ ಪಡೆಯಲು ಅನೇಕರಿಗೆ ಪ್ರೇರಣೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಸುಮಾರು 1,457 ಪಾಯಿಂಟುಗಳ ಇಳಿಕೆ ದಾಖಲಿಸಿದೆ ಎಂಬ ವಿಚಾರ ಮೇಲ್ನೋಟಕ್ಕೆ ಗೋಚರಿಸಿದರೂ, ಆಂತರಿಕವಾಗಿ ಅದು ಪ್ರದರ್ಶಿಸಿದ ಚಲನೆಯು ಯಾವ ರೀತಿಯ ಅವಕಾಶಗಳು ಸೃಷ್ಠಿಸುತ್ತವೆ ಎಂಬುದನ್ನು ತೋರಿಸಿಕೊಟ್ಟಿದೆ.

    ಷೇರುಪೇಟೆಯಲ್ಲಿ ಚಟುವಟಿಕೆಗಾಗಿ ಜುಲೈ ಮೊದಲ ವಾರದಲ್ಲಿ 5,15,09,962 ರಷ್ಟರಲ್ಲಿದ್ದ ನೋಂದಾಯಿತ ಗ್ರಾಹಕರ ಸಂಖ್ಯೆ ಸೆಪ್ಟೆಂಬರ್ 25 ರಂದು ಈ ಸಂಖ್ಯೆ 5,48,67,062 ಕ್ಕೆ ಏರಿಕೆಯಾಗಿದೆ. ಅಂದರೆ ಸುಮಾರು ಎರಡೂವರೆ ತಿಂಗಳ ಅವಧಿಯಲ್ಲಿ 33 ಲಕ್ಷಕ್ಕೂ ಹೆಚ್ಚಿನ ಗ್ರಾಹಕರು ಪೇಟೆಯನ್ನು ಪ್ರವೇಶಿಸಿದ್ದಾರೆ. ಅಂದರೆ ಷೇರುಪೇಟೆಯು ಹೆಚ್ಚಿನವರನ್ನು ತನ್ನತ್ತ ಆಕರ್ಷಿಸುತ್ತಿದೆ ಎಂದಾಯಿತು. ಹೊಸದಾಗಿ ಪೇಟೆ ಪ್ರವೇಶಿಸುವವರು ಕೇವಲ ಕಲ್ಪನಾ ಲೋಕದಲ್ಲಿರದೆ ವಾಸ್ತವತೆಯನ್ನಾಧರಿಸಿ ಚಟುವಟಿಕೆ ನಡೆಸುವುದು ಸೂಕ್ತ.

    ಷೇರುಪೇಟೆ ಚಟುವಟಿಕೆಯಲ್ಲಿ ಯಶಸ್ಸು ಕಾಣಲು ಅಳವಡಿಸಿಕೊಳ್ಳಬೇಕಾದ / ಅಗತ್ಯವಿರುವ ಕೆಲವು ಸೂತ್ರಗಳು ಹೀಗಿವೆ.

    1. ಬಂಡವಾಳ :ಇಂದು ಉಳಿಸಿದ ಮೊಬಲಗು ನಾಳಿನ ಜೀವನಕೆ ಮೆರಗು ಎಂಬಂತೆ ಪೇಟೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತವಾಗಿ ಬೆಳೆಸುವ ಪ್ರಯತ್ನಮಾಡಿದಲ್ಲಿ ಮಾತ್ರ ಭವಿಷ್ಯದಲ್ಲಿ ಆ ಹೂಡಿಕೆ ಮೆರಗು ತರಲು ಸಾಧ್ಯ. ಈಗಿನ ಪರಿಸ್ಥಿತಿಯಲ್ಲಿ, ಸಂದರ್ಭದಲ್ಲಿ ಹೆಚ್ಚು ಪ್ರಚಾರ ಪಡೆದಿರುವ ವಿಧಗಳಾದ ಮಾರ್ಜಿನ್‌ ಟ್ರೇಡಿಂಗ್, ಇಂದು ಕೊಂಡು ನಾಳೆ ಮಾರು, ಲೀವರೇಜ್‌ ಟ್ರೇಡಿಂಗ್ ನಂತಹ ಚಟುವಟಿಕೆಗಳಿಗೆ ಮಾರುಹೋಗದೆ ಹೂಡಿಕೆ ಮಾಡಿದ ಬಂಡವಾಳ ಸುರಕ್ಷತೆಗೂ ಆದ್ಯತೆ ಅಗತ್ಯ. ಈ ದಿಶೆಯಲ್ಲಿ, ಕೈಲಿ ಕಾಸಿಲ್ಲದಿದ್ದರೂ, ಹಣ ಗಳಿಸಬೇಕೆಂಬ ಹಂಬಲಕ್ಕೆ ಮನಸ್ಸು ಬಲಿಯಾಗುವುದನ್ನು, ಈ ಮೂಲಕ ಪೇಟೆಯ ವ್ಯವಸ್ಥೆಯನ್ನು ಹದಗೆಡಿಸುವುದನ್ನು ತಪ್ಪಿಸಲು ವಿತ್ತೀಯ ಪೇಟೆಗಳ ನಿಯಂತ್ರಕ ಇತ್ತೀಚೆಗೆ ಜಾರಿಗೊಳಿಸಿದ ಮಾರ್ಜಿನ್ ವ್ಯವಸ್ಥೆಯು ಉತ್ತಮವಾಗಿದೆ. ಇದು ಲಂಗುಲಗಾಮಿಲ್ಲದ ರೀತಿ ಚಟುವಟಿಕೆ ನಡೆಸುವ ಚಪಲ ನಿಯಂತ್ರಿಸಲು ಪೂರಕವಾಗಿದೆ. ಪೇಟೆಗಳು ಉತ್ತುಂಗದಲ್ಲಿದ್ದಾಗ, ಅದಕ್ಕೆ ಪೂರಕವಾದ ಕಾರ್ಪೊರೇಟ್‌ ಸಾಧನೆಯಿಲ್ಲದೆ ಇರುವ ಸಂದರ್ಭದಲ್ಲಿ ಈ ರೀತಿಯ ಲೀವರೇಜ್‌ ಟ್ರೇಡಿಂಗ್ ನಡೆಸುವುದಕ್ಕಿಂತ, ಕೈಲಿ ಸದಾ ಹಣ ಉಳಿಸಿಕೊಂಡು ಸೂಕ್ತ ಅವಕಾಶಕ್ಕೆ ಕಾಯುವುದು ಉತ್ತಮ ಎಂಬುದನ್ನು ಹಿಂದಿನವಾರದ ಏರಿಳಿತಗಳು ತೋರಿಸಿಕೊಟ್ಟಿವೆ.

    ಉದಾಹರಣೆಗೆ: ಗ್ಲೆನ್‌ ಮಾರ್ಕ್‌ ಫಾರ್ಮ ಕಂಪನಿ ಷೇರು ರೂ.518 ರ ಸಮೀಪದಲ್ಲಿದ್ದು ನಂತರ ಬದಲಾದ ವಾತಾವರಣದಲ್ಲಿ ಜಾರಿ ರೂ.442 ರ ಸಮೀಪಕ್ಕೆ ಬಂದು ನಂತರ ದಿಶೆ ಬದಲಿಸಿ ರೂ.485 ರ ಸಮೀಪಕ್ಕೆ ಜಿಗಿತ ಕಂಡಿದೆ. ಕೇವಲ ನಾಲ್ಕೈದು ದಿನಗಳಲ್ಲಿ ರೂ.118 ರೂಪಾಯಿಗಳ ಏರಿಳಿತವು ಹಿತಕರವೋ, ಅಪಾಯಕಾರಿಯೋ ಎಂಬುದನ್ನು ನಡೆಸಿದ ಚಟುವಟಿಕೆಯನ್ನಾಧರಿಸಿದೆ. ಇದರಂತೆ ಇನ್ಫೋಸಿಸ್, ಹೆಚ್ಸಿ ಎಲ್ಟೆಕ್, ಟಾಟಾ ಕೆಮಿಕಲ್ಸ್, ಅಶೋಕ್‌ ಲೇಲ್ಯಾಂಡ್‌, ಬಯೋಕಾನ್, ಗ್ರಾಫೈಟ್ಇಂಡಿಯಾ, ಭಾರತಿ ಏರ್‌ ಟೆಲ್‌, ಮುಂತಾದ ಅನೇಕ ಕಂಪನಿಗಳು ರಭಸದ ಏರಿಳಿತಗಳನ್ನು ಪ್ರದರ್ಶಿಸಿವೆ.

    2.ಸಹನೆ :ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಗಳು ಉತ್ತಮವಾಗಿದ್ದಲ್ಲಿ, ಷೇರುಗಳ ಬೆಲೆಗಳಲ್ಲಿ ಆಗುವ ಏರಿಳಿತಗಳಿಗೆ ಗಮನಕೊಡದೆ, ಅವುಗಳು ಏರಿಕೆ ಕಾಣುವವರೆಗೂ ಹೂಡಿಕೆ ಮುಂದುವರೆಸಬೇಕು. ಕೊಂಡ ಷೇರು ಏರಿಕೆ ಕಾಣಲಿಲ್ಲ ಎಂಬ ಕೊರಗು ಇರಬಾರದು. ಕಾರಣ, ಸೇವಿಸಿದ ಆಹಾರವು ಪಚನವಾಗಿ ರಕ್ತಗತವಾಗಲೂ ಸಹ ಸಮಯ ಬೇಕಾಗುವುದು, ಅದರಂತೆ ಖರೀದಿಸಿದ ಷೇರು ಲಾಭ ಗಳಿಸಿಕೊಡಲು ಸಹ ಸಮಯಾವಕಾಶ ನೀಡಬೇಕು. ಹೂಡಿಕೆಯು ಸಕಾರಾತ್ಮಕ ಫಲಿತಾಂಶ ನೀಡುವವರೆಗೂ ಮುಂದುವರೆಸುವಂತಿರಬೇಕು. ಒಂದು ವೇಳೆ ಹೂಡಿಕೆಮಾಡಿದ ಕಂಪನಿಯಲ್ಲಿನ ಆಂತರಿಕ ಬೆಳವಣಿಗೆ ಅಥವಾ ಕಂಪನಿಯ ಕಾರ್ಯನಿರ್ವಹಣೆಯ ಮೇಲೆ ನೇರವಾಗಿ ಪ್ರಭಾವ ಬೀರುವಂತಹ ಬಾಹ್ಯ ಬೆಳವಣಿಗೆ ಏನಾದರೂ ಇದ್ದಾಗ ಮಾತ್ರ ಅಂತಹ ಷೇರಿನಿಂದ ಹೊರಬರುವ ಚಿಂತನೆ ಮಾಡಬೇಕಷ್ಠೆ. ಇದು ಒಂದು ರೀತಿಯ ಸ್ಟಾಪ್‌ ಲಾಸ್‌ ಪ್ರಕ್ರಿಯೆಯಾಗಿದೆ.

    3. ಅನುಭವ :ಅಧ್ಯಯನದಿಂದ ಅರಿವು, ಅನುಭವದಿಂದ ತಿಳಿವು, ಚಿಂತನೆಯಿಂದ ಸುಳಿವು, ಅರಿವು ತಿಳಿವು ಸುಳಿವುಗಳಿಂದ ಉಳಿವು ಎಂಬಂತೆ ಅನುಭವವೇ ಚಟುವಟಿಕೆಗೆ ಪೂರಕ ಅಂಶವಾಗಿದ್ದು, ಚಟುವಟಿಕೆಗೆ ಸ್ವಂತ ಅನುಭವವಿಲ್ಲದೆ ಇದ್ದರೂ, ಅನುಭವಸ್ಥರಿಂದ, ವೃತ್ತಿಪರರಿಂದ ಸೂಕ್ತ ಮಾರ್ಗದರ್ಶನ ಪಡೆದಲ್ಲಿ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಧ್ಯ. ಷೇರುಪೇಟೆಯ ಬಗ್ಗೆ ಅರಿಯಲು ಸಹಸ್ರಾರು ರೂಪಾಯಿಗಳನ್ನು ತೆತ್ತು ಕ್ಲಾಸ್‌ ಗಳಿಗೆ ಹೋಗುವ ಬದಲು, ಅದೇ ಹಣವನ್ನು ಬಂಡವಾಳವಾಗಿಸಿಕೊಂಡು, ಚಟುವಟಿಕೆಯನ್ನು ನಡೆಸಿ ಅನುಭವ ಪಡೆಯಬಹುದು. ಷೇರುಗಳು ಡಿಮ್ಯಾಟ್‌ ನಲ್ಲಿರುವುದರಿಂದ ಕಡಿಮೆ ಸಂಖ್ಯೆಯ ಷೇರುಗಳನ್ನು ಖರೀದಿಸಿ, ಚಟುವಟಿಕೆ ನಡೆಸಿ ಅನುಭವ ಪಡೆಯಬಹುದು.

    4.ಸಂದರ್ಭೋಚಿತ ನಿರ್ಧಾರ:ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಾಗ, Invest and forget it, invest and sit tight, wealth creation ಎಂಬ ಸಂಪ್ರದಾಯಿಕ ಮಾಂತ್ರಿಕ ಪದಗಳಿಗೆ ಮರುಳಾಗದೆ invest and track it, invest and watch it, wealth protection ಎಂಬುದಕ್ಕೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಯಶಸ್ಸು ಸಮೀಪವಿರುತ್ತದೆ. ಸಮಯೋಚಿತ ನಿರ್ಧಾರ ಹಲವು ಭಾರಿ ಹೆಚ್ಚಿನ ಲಾಭ ತಂದುಕೊಡುವ ಸಾಧ್ಯತೆಗಳೂ ಉಂಟು. ವಿಶೇಷವಾಗಿ ಪೇಟೆಗಳು ಉತ್ತುಂಗದಲ್ಲಿದ್ದಾಗ, ಹೂಡಿಕೆಯು ಆರಂಭದಲ್ಲಿ ದೀರ್ಘಕಾಲೀನ ಉದ್ದೇಶ ಹೊಂದಿದ್ದರೂ, ನಂತರದಲ್ಲಿ ಅವಕಾಶ ಲಭಿಸಿದಾಗ ನಿರ್ಗಮಿಸುವ ವ್ಯವಹಾರಿಕತೆಯನ್ನು ಅಳವಡಿಸಿಕೊಳ್ಳುವುದು ಸೂಕ್ತ.

    ಉದಾಹರಣೆಗೆ ಕ್ಲಾರಿಯಂಟ್‌ ಕೆಮಿಕಲ್ಸ್‌ ಎಂಬ ಸ್ಪೆಷಾಲಿಟಿ ಕೆಮಿಕಲ್‌ ಕಂಪನಿಯ ಷೇರಿನ ಬೆಲೆ ಮಾರ್ಚ್‌ ತಿಂಗಳ ಕುಸಿತದ ವೇಳೆ ರೂ.192 ರ ಸಮೀಪಕ್ಕೆ ಕುಸಿದಿತ್ತು. ನಂತರದ ಬೆಳವಣಿಗೆಯಲ್ಲಿ ಷೇರಿನ ಬೆಲೆ ಜುಲೈ ತಿಂಗಳಲ್ಲಿ ರೂ.608 ರವರೆಗೂ ಜಿಗಿತ ಕಂಡಿತು. ನಂತರದಲ್ಲಿ ಕುಸಿಯುತ್ತಾ ಬಂದ ಷೇರಿನ ಬೆಲೆ ಸಧ್ಯ ರೂ.330 ರ ಸಮೀಪದಲ್ಲಿದೆ. ಅಂದರೆ ಶೇ.300 ರಷ್ಟು ಏರಿಕೆ ಕಂಡ ನಂತರ ಶೇ.50 ರಷ್ಟು ಕುಸಿತ ಕಾಣಲು ಕೇವಲ ಕೆಲವೇ ತಿಂಗಳುಗಳು ಸಾಕಾಗುವುದು ಈಗಿನ ಅಲ್ಪ ಬಡ್ಡಿಯುಗದಲ್ಲಿ ವಿಸ್ಮಯಕಾರಿಯೆನಿಸುವುದು. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ಕಂಪನಿಯು ಜುಲೈ ತಿಂಗಳಲ್ಲಿ ಪ್ರತಿ ಷೇರಿಗೆ ರೂ.140 ರಂತೆ special dividend ನ್ನು ವಿತರಿಸಿದೆ ಹಾಗಾಗಿ ಈ ರೀತಿಯ ಭರ್ಜರಿ ಏರಿಳಿತ ಪ್ರದರ್ಶಿತವಾಗಿದೆ. ಇಂತಹ ಬೆಳವಣಿಗೆಗಳನ್ನು ಅನೇಕ ಕಂಪನಿಗಳ ಷೇರುಗಳಲ್ಲಿ ಕಾಣಬಹುದಾಗಿದೆ. ಆದ್ದರಿಂದ Timing of the decision ಹೆಚ್ಚಿನ ಮಹತ್ವ ಹೊಂದಿದೆ.

    5.ನಿರ್ಲಿಪ್ತತೆ :ಸಾಮಾನ್ಯವಾಗಿ, ಸಾಂಪ್ರದಾಯಿಕವಾಗಿ ನಡೆದುಬಂದಿರುವ ಪದ್ಧತಿ ಎಂದರೆ ಹೂಡಿಕೆಯೊಂದಿಗೆ ಭಾವನಾತ್ಮಕ ಭಾಂದವ್ಯವನ್ನು ಹೊಂದುವುದು. ಈ ಭಾವನಾತ್ಮಕತೆಯು ಷೇರುಪೇಟೆಯಲ್ಲಿ ಹೆಚ್ಚಿರುತ್ತದೆ. ಈ ಭಾವನಾತ್ಮಕತೆಯ ಕಾರಣ ಅನೇಕ ಅವಕಾಶಗಳನ್ನು ಕೈ ಚೆಲ್ಲಬೇಕಾಗುತ್ತದೆ.
    ಉದಾಹರಣೆಗೆ ಅಶೋಕ್‌ ಲೇಲ್ಯಾಂಡ್‌ ಷೇರಿನ ಬೆಲೆ ಈ ತಿಂಗಳ ಎರಡನೇ ವಾರದಲ್ಲಿ ರೂ.83 ರ ಸಮೀಪದಲ್ಲಿತ್ತು. ಅದು ವಾರ್ಷಿಕ ಗರಿಷ್ಠದ ಸಮೀಪವೂ ಹೌದು. ಆ ಸಂದರ್ಭದಲ್ಲಿ ಷೇರನ್ನು ಮಾರಾಟ ಮಾಡಿದ್ದವರಿಗೆ, ಈ ತಿಂಗಳ 24 ರಂದು ಸುಮಾರು 68 ರೂಪಾಯಿಗಳ ಸಮೀಪ ಮರು ಖರೀದಿಸುವ ಅವಕಾಶವನ್ನು ಒದಗಿಸಿತ್ತು. ಶುಕ್ರವಾರ 25 ರಂದು ಮತ್ತೆ ರೂ.76 ರ ಗಡಿ ದಾಟಿದೆ. ಆರಂಭದಲ್ಲಿ ಹೂಡಿಕೆ ನಂತರದಲ್ಲಿ ಸರಕು ಎಂಬಂತಹ detachment ಇದ್ದವರಿಗೆ ಪ್ರಮುಖ ಕಂಪನಿಗಳಾದ ಭಾರತಿ ಏರ್‌ ಟೆಲ್‌, ಟಾಟಾ ಕೆಮಿಕಲ್ಸ್‌ ನಂತಹ ಕಂಪನಿಗಳು ಲಾಭ ಗಳಿಕೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ

    6.ಶಿಸ್ತು :ಹೂಡಿಕೆಯು ಉತ್ತಮ ಕಂಪನಿಯಲ್ಲಿದ್ದು, ಮೌಲ್ಯಾಧಾರಿತ ಖರೀದಿಯಾಗಿದ್ದಲ್ಲಿ ಪೇಟೆಯ ಏರಿಳಿತಗಳತ್ತ ಗಮನಹರಿಸದೆ ಕೇವಲ ಅವಕಾಶಕ್ಕಾಗಿ ಎದುರು ನೋಡಬೇಕು. ಇಂದಿನ ಪೇಟೆಗಳಲ್ಲಿ ನಾನಾ ರೀತಿಯ ವಹಿವಾಟುದಾರರು, ವಿತ್ತೀಯ ಸಂಸ್ಥೆಗಳು, ಸಾಹುಕಾರಿ ವ್ಯಕ್ತಿಗಳು ಭಾಗವಿಹಿಸುವುದರಿಂದ, ಹಾಗೂ Derivative ಪೇಟೆಯ ಚಟುವಟಿಕೆಯು, ಪ್ರತಿ ತಿಂಗಳ ಕೊನೆಯ ಗುರುವಾರ ಚುಕ್ತಾ ಆಗಬೇಕಾಗಿರುವುದರಿಂದ, ಹತ್ತಾರು ರಭಸದ ಏರಿಳಿತಗಳನ್ನು ಕಾಣಬಹುದಾಗಿದೆ. ಭಾರಿ ಕುಸಿತ ಕಂಡಂಥ ಕಂಪನಿಗಳು ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಅದು ಷೇರಿನ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ಕಾಣುವಂತೆ ಮಾಡುತ್ತದೆ. ಷೇರಿನ ಬೆಲೆಗಳು ಗರಿಷ್ಠದಲ್ಲಿದ್ದಾಗ ಅಲ್ಪ ಪ್ರಮಾಣದ ಲಾಭಕ್ಕೆ ತೃಪ್ತಿಪಟ್ಟು ನಗದೀಕರಿಸುವ ಶಿಸ್ತನ್ನು ರೂಢಿಸಿಕೊಳ್ಳುವುದು ಸೂಕ್ತ. ಕೈಲಿ ಹಣವಿದೆ ಎಂದು ಆತುರದಲ್ಲಿ ಮನಬಂದಂತೆ ಹೂಡಿಕೆ ನಿರ್ಧರಿಸದೆ, ಅವಕಾಶಕ್ಕಾಗಿ ಎದುರುನೋಡುವುದು ಒಳಿತು.

    7.ನೆಮ್ಮದಿ: Value pick – prafit book ಎಂಬುದು ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ. ಯಾವುದೇ ಒಂದು ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು. ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ. ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ.

    ಪ್ರತಿ ದಿನವೂ, ಪ್ರತಿಗಳಿಗೆಯೂ ಪೇಟೆಯಲ್ಲಿ ಲಾಭಗಳಿಸುವ ಬಗ್ಗೆ ಹೊಸ ಹೊಸ ಮಾಧರಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಹಾಗಾಗಿ ಚಟುವಟಿಕೆಯನ್ನು ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ‘ಆನಂದ್, ಎನ್ನಾಚಿಮ್ಮಾ ಸ್ಕೋರೂ’

    ಕೆಲವೇ ನಿಮಿಷಗಳ ಹಿಂದೆ ಪರಿಚಯಾದವರನ್ನೂ ಕೂಡ ಆತ್ಮೀಯವಾಗಿ ಆವರಿಸುತ್ತಿದ್ದ ಎಸ್ ಪಿ ಬಿ ಅವರೊಂದಿಗಿನ ಒಡನಾಟವನ್ನು ಬನವಾಸಿ ಬಳಗದ ಆನಂದ್ ಗುರು ಇಲ್ಲಿ ನೆನಪಿಸಿಕೊಂಡಿದ್ದಾರೆ.

    1994ರಲ್ಲಿ ಮೇ ತಿಂಗಳ ಒಂದು ದಿನ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜೊತೆ ಒಂದಿಡೀ ದಿನ ಕಳೆಯುವ ಸೌಭಾಗ್ಯ ನನ್ನದಾಗಿತ್ತು.ಕಂಠೀರವ ಸ್ಟುಡಿಯೋ ಒಳಗಡೆ ಇರುವ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಂಸಲೇಖರ ಸಂಗೀತ ನಿರ್ದೇಶನದಲ್ಲಿ ಹಲವು ಹಾಡುಗಳ ಧ್ವನಿಮುದ್ರಣ ನಡೆದಿತ್ತು.. ಬಾಲು ಅವರು ಬರುವ ಕಾರ್ಯಕ್ರಮ ತಿಳಿದಿದ್ದ ನಾನೂ ಬೆಳಗ್ಗೆ 9ಕ್ಕೆ ಸ್ಟುಡಿಯೋ ಬಾಗಿಲಲ್ಲಿ ಇದ್ದೆ.ನನಗಿನ್ನೂ ನೆನಪಿದೆ..ಆಗ ಬಾಲು ಅವರ ಕಾಲಿಗೆ ಎಂಥದ್ದೋ ಪೆಟ್ಟಾಗಿ ಪ್ಲಾಸ್ಟರ್ ಹಾಕಿದ್ದರು. ಇಡೀ ಸ್ಟುಡಿಯೋದ ಒಳಗೆ ಇದ್ದದ್ದು ಬೆರಳೆಣಿಕೆಯಷ್ಟು ಜನರು ಮಾತ್ರ.

    ಹಂಸಲೇಖ, ರಾಜೇಶ್ ಕೃಷ್ಣನ್ ಅವರೊಡನೆ ಕೆಲವು ಸ್ಟುಡಿಯೋ ತಂತ್ರಜ್ಞರು ಮಾತ್ರವೇ ಅಲ್ಲಿದ್ದದ್ದು. ಹಾಗಾಗಿ ಬಹಳ ಸಮೀಪದಲ್ಲಿ ಇರುವ ಅವಕಾಶ ನನ್ನದಾಗಿತ್ತು.  ಅಂದು ಇಡೀ ದಿವಸ, ಅಂದರೆ ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ನನ್ನ ನೆಚ್ಚಿನ ಬಾಲು ಅವರ ಬಹಳ ಸಮೀಪದಲ್ಲಿ ಇದ್ದೆ.. ರಸಿಕ ಚಿತ್ರದ ಹಾಡುಗಳನ್ನು ಧ್ವನಿ ಮುದ್ರಿಸಿ ಕೊಂಡಿದ್ದರು. 

    ತನನಂ ತನನಂ ಎನಲು ಮನಸು ನೀನೇ ಕಾರಣ ಎನ್ನುವ ಹಾಡಲ್ಲಿ, ಆಕಾಶ ಭೂಮಿ ಎಲ್ಲಾ ಚಪ್ಪರ ಎನ್ನುವಾಗ ಒಂದೆಡೆ ಟ್ರಾಕ್ ಅಲ್ಲಿರದ ಒಂದು ಪಲುಕನ್ನು ಬಾಲು ಸಾರ್ ಹಾಡಿದಾಗ ನನಗೆ ರೋಮಾಂಚನ ಆಗಿಬಿಟ್ಟಿತ್ತು.
    ವಿರಾಮದ ಸಮಯದಲ್ಲಿ ಅವರು ಮೈಕ್ ಇಲ್ಲದೆ ಹಾಡಿದ್ದನ್ನು ಕೇಳುವ ಭಾಗ್ಯ ನನ್ನದಾಗಿತ್ತು. ನನ್ನ ಜೀವನದಲ್ಲಿ ನನಗಿದ್ದ ಒಂದು ಹುಚ್ಚು ಆಸೆ ಎಂದರೆ ಎಸ್ಪಿ, ಪಿಬಿ ಮತ್ತು ಅಣ್ಣಾವ್ರು ಹಾಡುವುದನ್ನು ನೇರವಾಗಿ ಕೇಳಬೇಕು ಎನ್ನುವುದು. ಅಂದರೆ ಮೈಕ್ ಇಲ್ಲದೆ ಎದುರು ಹಾಡುವುದು.. ಅಣ್ಣಾವ್ರ ಹಾಡು ಕೇಳುವ ಅವಕಾಶ ಆಗಲಿಲ್ಲ ಎಂಬ ನೋವು ಇದ್ದರೂ.. ಉಳಿದಿಬ್ಬರು ಹಾಡುವುದನ್ನು ಕೇಳುವ ಸೌಭಾಗ್ಯ ನನಗೆ ಸಿಕ್ಕಿತ್ತು.

    ನಡುವೆ ಯಾವಾಗಲೋ ವಿರಾಮದಲ್ಲಿ ಸಣ್ಣದೊಂದು ಕೋಣೆಯಲ್ಲಿ ಹಂಸಲೇಖ ಅವರೊಡನೆ ಬಾಲು ಅವರು ಕುಳಿತು ಮಾತಾಡುತ್ತಿದ್ದರು, ಹುಚ್ಚು ಅಭಿಮಾನದ ನಾನು ಕಣ್ಣೆವೆ ಇಲ್ಲದೆ ಅವರನ್ನೇ ನೋಡುತ್ತಾ ಕೈಕಟ್ಟಿ ಮೂಲೆಯೊಂದರಲ್ಲಿ ನಿಂತಿದ್ದೆ. ಆಗವರು ಒಂದು ಹಳೆಯ ಹಾಡಿನ ರಾಗ ಆಲಾಪಿಸಿ, ಈ ಹಾಡು ನನಗೆ ಇಷ್ಟ ಎಂದು ಯಾವುದು ಈ ಹಾಡು ಅಂತಾ ಹಂಸಲೇಖ ಅವರನ್ನು ಕೇಳಿ, ನನ್ನ ಕಡೆಯೂ ಮುಖ ಮಾಡಿದರು. ನಾನು ಆಗ  ಅವರೆದುರು ಸತ್ಯಂ ಮಾಡಿದ್ದ ಬಂಗಾರದ ಗೊಂಬೆಯೇ ಮಾತನಾಡು.. ಎನ್ನುವ ಸೀತಾರಾಮು ಚಿತ್ರದ ಆ ಹಾಡಿನ ಎರಡು ಸಾಲು ಹಾಡಿ, ವಿವರಗಳನ್ನೂ ಬಡಬಡಿಸಿ ನೆನಪು ಮಾಡಿದ್ದೆ.

    ಮಧ್ಯಾನದ ಊಟದ ಹೊತ್ತಲ್ಲಿ ಹೊರಗೆ ಹೂದೋಟದಲ್ಲಿ ನಾಲ್ಕೈದು ಜನರು ನಿಂತಿದ್ದೆವು. ನನ್ನ ಪಕ್ಕದಲ್ಲೇ ನಿಂತಿದ್ದ ಎಸ್ ಪಿ ಬಾಲುರವರು ನನ್ನ ಭುಜದ ಮೇಲೆ ತಮ್ಮ ಮೊಣಕೈಯನ್ನು ಊರಿಕೊಂಡು ಒಂದ್ ಹತ್ತು ನಿಮಿಷ ನಿಂತಿದ್ದರು. ನನ್ನ ಎದೆ ಬಡಿತ ನನಗೇ ಕೇಳುವಷ್ಟು ಜೋರಾಗಿ ಬಿಟ್ಟಿತ್ತು.ಅಂದು ಅದಾವುದೋ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಬಾಲು ಅವರು ನನ್ನನ್ನು ಎಂದಿನಿಂದಲೋ ಪರಿಚಯ ಇರುವಂತೆ. “ಆನಂದ್, ಎನ್ನಾಚಿಮ್ಮಾ ಸ್ಕೋರೂ” ಅಂತಾ ಕೇಳಿದ್ದದ್ದು ಇಂದಿಗೂ ಕಿವಿಯಲ್ಲಿ ರಿಂಗಣಿಸುತ್ತಿದೆ.

    ಇಪ್ಪತ್ತಾರು ವರ್ಷಗಳ ನಂತರವೂ ಅಂದಿನ ಸಾಮೀಪ್ಯದ ನೆನಪು ಹಸಿರಾಗಿದೆ.. ಆಗೆಲ್ಲಾ ನನ್ನ ಬಳಿ ಕ್ಯಾಮರಾ ಇರಲಿಲ್ಲ. ಹಾಗಾಗಿ ಫೋಟೋ ಇಲ್ಲ.ಒಂದು ಆಟೋಗ್ರಾಫ್ ಬರೆದು ಕೊಟ್ಟಿದ್ದರು.. Dear Anand, best wishes balu.. ಅಂತಾ..

    ಬಾಲ್ಯದಿಂದಲೂ ಬಾಲು ಅವರ ಹಾಡುಗಳನ್ನೇ ಕೇಳಿಕೊಂಡು ಬೆಳೆದ ನನ್ನಂತಹ ಸಾಮಾನ್ಯನಿಗೆ ಹೀಗೆ ಬಾಲು ಅವರೊಡನೆ ಒಂದಿಡೀ ದಿವಸ ಕಳೆಯಲು ಸಾಧ್ಯವಾದದ್ದು ನನ್ನ ಯಾವುದೋ ಜನ್ಮದ ಪುಣ್ಯ ಅನ್ನಿಸುತ್ತದೆ. ಇಂದಿಗೂ ಅಂದಿನ ಆ ನನ್ನ ಅನುಭವ ನಿಜಕ್ಕೂ ಕನಸೋ ಭ್ರಮೆಯೋ ನನಸೋ ಎಂದು ಮೈ ಚಿವುಟಿ ನೋಡಿಕೊಳ್ಳುವಂತೆ ಮಾಡುತ್ತದೆ..

    ಶುಭ ದಿನ

    ಇಂದಿನ ನುಡಿ

    ನಾವು ಎಂದಿಗೂ ಒಬ್ಬರನ್ನು ಹೆದರಿಸಿ ದೊಡ್ಡವರಾಗಲು ಸಾಧ್ಯವಿಲ್ಲ. ಹೃದಯದಿಂದ ಪ್ರೀತಿಸಿದರೆ ಅವರೇ ನಮ್ಮನ್ನು ದೊಡ್ಡವರನ್ನಾಗಿ ಕಾಣುತ್ತಾರೆ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 26 ಸೆಪ್ಟಂಬರ್ 2020,ಶನಿವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ:ದಶಮಿನಕ್ಷತ್ರ: ಉಷಾ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.13

    P

    error: Content is protected !!