26.2 C
Karnataka
Monday, May 25, 2026
    Home Blog Page 110

    ಏನಾದರು ಆಗು ಮೊದಲು ಸುಜ್ಞಾನಿಯಾಗು

    ಎಲ್ಲಿಯೂ ನಿಲ್ಲದಿರು,ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು…ಓ ನನ್ನ ಚೇತನ ಆಗು ನೀ ಅನಿಕೇತನ…..ಅಂದ ರಸ ಋಷಿ ಕವಿ ವಾಣಿ ಬಹಳ ದಿನದಿಂದ ಅವ್ಯಕ್ತ ಯೋಚನೆಯನ್ನು ನನ್ನಲ್ಲಿ ಹುಟ್ಟು ಹಾಕಿದೆ. ಕೊನೆ ಅನ್ನೋದು ಮುಟ್ಟಲಾಗದ ಅನಂತತೆಯಾ? ಅಥವಾ ಮುಟ್ಟುವ ಶಕ್ತಿ ಇದ್ದರೂ ಮುಟ್ಟಿ ನಿರಾಸೆ ಹೊಂದಬಾರದು ಅನ್ನುವ ಅರ್ಥವಾ? ಕೊನೆಯ ಉಸಾಬರಿಯೇ ಬೇಡ, ಇದ್ದಲ್ಲಿಯೇ ಮನೆ ಕಟ್ಟಿ ಕೊನೆ ಕಾಣುವ ಅಂದರೆ, ಎಲ್ಲಿಯೂ ನಿಲ್ಲಬೇಡ, ಮನೆ ಕಟ್ಟ ಬೇಡ ಅನ್ನುತ್ತಿದೆ ಕವಿ ವಾಣಿ! ಅನಂತತೆಯಲ್ಲಿ ಅನಂತನಾಗು, ಕೊನೆಯಾಗಬೇಡ ಎಂದಾರ್ಥವೇ?

    If Happiness is your destination, it’s along the road,not at the end of the road ಅಂದ ಮತ್ತೊಬ್ಬ ತತ್ವಜ್ಞಾನಿ ಇದನ್ನೇ ಹೇಳಿದನಾ? ವಿಶ್ರಮಿಸದೆ ನಿರಂತರತೆಯಲ್ಲಿ ಇರುವುದೇ ಸಂತೋಷ!! ಸರಳ ರೇಖೆಗೆ ಕೊನೆ ಉಂಟು, ವೃತ್ತಕ್ಕೆ ಕೊನೆ ಇಲ್ಲ! ಇಡೀ ವಿಶ್ವ, ಸೃಷ್ಟಿ ವೃತ್ತಾಕಾರವಾಗಿ, ಇಲ್ಲಿಯ ಜೀವನವೂ ಜೀವನ ಚಕ್ರವಾಯ್ತಾ?

    ಅನಂತತೆಯಲ್ಲಿ ಕೊನೆ ಅನ್ನೋದು ಇಲ್ಲ ಅಂತಾದ್ರೆ, ಸಾವು ಹೇಗೆ ಕೊನೆಯಾದೀತು?! ಕತ್ತಲು ದಿನದ ಅಂತ್ಯ. ರಾತ್ರಿಯ ಉಗಮ. ಬೆಳಕಲ್ಲಿ ಬದುಕುವವನಿಗೆ ಕತ್ತಲು ಅಂತ್ಯ. ಬೆಳಕು,ಕತ್ತಲೆಗಳ ಪರಿವೆ ಇಲ್ಲದವನಿಗೆ ಯಾವುದು ಅಂತ್ಯ, ಯಾವುದು ಉಗಮ? ಚೇತನವು ಇಂತಹ ಅಂತ್ಯ, ಉಗಮಗಳ ಪರಿವೆ ಮೀರಿ ಎಲ್ಲೂ ನಿಲ್ಲದೆ ಅನಿಕೇತನ ಆಗಬೇಕಾ? ಕೊನೆ ಇಲ್ಲದ ಪಯಣಕ್ಕೆ ಅರ್ಥ ಉಂಟಾ? ಹಾಗಾದರೆ ಈ ಪಯಣದ ಗುರಿ ಏನು? ಅನಂತತೆಯಲ್ಲಿ ಸ್ಪಷ್ಟ ಗುರಿ ಇಲ್ಲದ ಪಯಣಿಗನಾದ ಜೀವ ಹುಚ್ಚುಚ್ಚಾಗಿ ಆಡುತ್ತಿದ್ದಾನಾ?

    ಇಡೀ ಸೃಷ್ಟಿಯ ಜೀವರಾಶಿಗಳಲ್ಲಿ ಉನ್ನತ ಶ್ರೇಣಿಯ ವಿಕಸನ ಹೊಂದಿ ಪಂಚಭೂತಗಳನ್ನು, ಬ್ರಹ್ಮಾಂಡವನ್ನು ತನ್ನ ಸೀಮಿತ ಪಂಚೇಂದ್ರಿಯಗಳ ಮೂಲಕ ಅರಿತು ಅವುಗಳ ಮೇಲೆಯೇ ತನ್ನ ಅಸ್ತಿತ್ವನ್ನು ಹೇರಲು ಹೊರಟ ಜೀವವು ಎಲ್ಲಿಯ ತನಕ ಬಂದಿದೆ ಅಂದರೆ ತನಗೆ ಬಹುದೂರ ಅನ್ನಿಸಿದ್ದ ಈ ಭೂಮಂಡಲದ ಕ್ಷುಲ್ಲಕ ಧೂಳಿನ ವಿಸ್ತೀರ್ಣದಲ್ಲಿ ತನ್ನ ಸಂಪರ್ಕ ಸಾಧಿಸಿಕೊಂಡಿರುವುದು! ಸಾವಿರಾರು ಅಲ್ಲಲ್ಲ, ಕೋಟ್ಯಂತರ ಕಿಲೋಮೀಟರ್ ದೂರದ ತನಕ ಈ ಜೀವ ಇಂದು ಮಾತಾಡಬಲ್ಲ, ಅಲ್ಲಿಯ ತನ್ನಂತಹುದೇ ಜೀವಿಯ ಜೊತೆ ವ್ಯವಹರಿಸಬಲ್ಲ, ಅಲ್ಲಿಯ ಆಗು ಹೋಗುಗಳನ್ನು ಕುಳಿತಲ್ಲಿಂದಲೇ ನೋಡಬಲ್ಲ ಮತ್ತು ಈ ದೂರವನ್ನು ತನ್ನದೇ ಸೀಮಿತ ವೇಗದಲ್ಲಿ ಕ್ರಮಿಸಬಲ್ಲ ಕೂಡಾ!

    ನೆನಪಿರಲಿ ಈ ದೂರ ಬ್ರಹ್ಮಾಂಡದ ಒಂದು ಕಣದ ವಿಸ್ತೀರ್ಣಕ್ಕೂ ಸಮ ಅಲ್ಲ. ಇವೆಲ್ಲವೂ ಜೀವಿಯ ಪಂಚೇಂದ್ರಿಯ ಶಕ್ತಿಯ ಕ್ಷಮತೆಯನ್ನು ಹೆಚ್ಚಿಸಿವೆಯೇ ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ಇದರಿಂದ ಆದ ಅನಾನುಕೂಲದ ಕಡೆ ಗಮನ ಹರಿಸಿದರೆ ಗೊತ್ತಾಗುತ್ತೆ, ಈ ಭರದಲ್ಲಿ ತಾನು ಜೀವಿಸಲು ಯೋಗ್ಯವಿದ್ದಂತಾ ಒಂದೇ ಒಂದು ಜಾಗವಾದ ಈ ಭೂಮಿಯನ್ನು ಮತ್ತೆ ಸರಿಮಾಡಲಾಗದಂತೆ ಕೆಡಿಸಿ ಐದು ಭೂತಗಳಲ್ಲಿ ಎರಡು, ಗಾಳಿ,ನೀರನ್ನು ದುರ್ಲಭ ಮಾಡಿ ಆಹಾಕಾರ ಆಗುವಂತೆ ಮಾಡಿಬಿಟ್ಟಿದ್ದಾನೆ.

    ಮೂರನೇ ಭೂತವಾದ ಮಣ್ಣನ್ನು ನಾಶ ಮಾಡುವ ಎಲ್ಲ ಯೋಚನೆಯಲ್ಲಿದ್ದಾನೆ.ಎಷ್ಟೋ ಜೀವ ಸಂಕುಲಗಳನ್ನು ನಾಶ ಮಾಡಿಬಿಟ್ಟಿದ್ದಾನೆ. ಪ್ರಕೃತಿಯ ಮೇಲಿನ ದೌರ್ಜನ್ಯದ ಬಗ್ಗೆ ಹೇಳುವುದೇ ಬೇಡ. ಪಂಚ ಭೂತಗಳಲ್ಲಿ ಆಕಾಶ,ಬೆಂಕಿ ಇವನಿಗೆ ಇಲ್ಲಿಯವರೆಗೆ ನಿಲುಕಿಲ್ಲ, ಹಾಗಾಗಿ ಉಳಿದಿವೆ. ಇಂತಹ ಅತ್ಯಾಚಾರಿಯನ್ನು ಪ್ರಕೃತಿ ತನ್ನ ಮಾಡಿಲಲ್ಲಿಟ್ಟು ಇನ್ನೂ ಸಾಕುತ್ತಿರುವುದೇ ಆಶ್ಚರ್ಯ!

    ಪ್ರಕೃತಿ,ಪಂಚಭೂತಗಳನ್ನು ನಾಶ ಮಾಡುತ್ತಾ ಸಾಧಿಸಿದ ಈ ಕ್ಷುಲ್ಲಕನ ಅವಿವೇಕತನ ಎಂದಾದರೂ ಸಾಧನೆ ಆಗಬಹುದಾ?? ಹೋಗಲಿ ತಾನಾದರೂ ಸುಖವಾಗಿದ್ದಾನಾ? ಉಹೂಂ. ಮನುಷ್ಯ ಇಂದು ತಲುಪಿದ ಮಾನಸಿಕ ಅದಃಪತನವನ್ನು ತನ್ನ ವಿಕಸನದ ಪ್ರಯಾಣದ ಯಾವ ಅವಧಿಯಲ್ಲೂ ತಲುಪಿಲ್ಲ. ಆದರೂ ವಿಜಯದ ನಗು ಬಿರುತ್ತಿದ್ದಾನೆ. ತನ್ನ ಭಾರವನ್ನೇ ತಾಳದ ತಳಹದಿಯ ಮೇಲೆ ನಿಂತು,ಬ್ರಹ್ಮಾಂಡವನ್ನು ಹೊರುವ ಸಾಹಸ ಮಾಡುತ್ತಿದ್ದಾನೆ! ಮೂರ್ಖ ಅನ್ನಬೇಕೋ, ಅಮಾಯಕ ಅನ್ನಬೇಕೋ ಗೊತ್ತಾಗುತ್ತಿಲ್ಲ.

    ಪ್ರಕೃತಿಯ ಕೂಸಾದ ಮಾನವ ತನ್ನ ಮೆದುಳಿನ ಶಕ್ತಿಯನ್ನು ವಿರುದ್ಧ ದಿಕ್ಕಿನಲ್ಲಿ ಉಪಯೋಗಿಸುತ್ತಿದ್ದಾನಾ? ಎಲ್ಲ ಜೀವ ರಾಶಿಗಳನ್ನು ಸಲಹುವಂತೆ ಮಾನವನನ್ನೂ ಹೇಗೆ, ಎಷ್ಟರಮಟ್ಟಿಗೆ ಸಲುಹಬೇಕೆಂದು ಪ್ರಕೃತಿಗೆ ಗೊತ್ತಿತ್ತು. ಆದರೆ ಅತೀ ಬುದ್ಧಿವಂತಿಕೆಯಿಂದ ಇವನು ಪ್ರಕೃತಿಯ ವಿರುದ್ಧವೇ ಹೋಗಿ, ತನ್ನ ಆಯಸ್ಸು, ಪೀಳಿಗೆಗಳನ್ನು ಹೆಚ್ಚಿಸಿಕೊಂಡಿದ್ದಾನೆ. ಇದನ್ನು ಸಾಧನೆ ಅಂತ ತಿಳಿದು ಬೀಗುತ್ತಿದ್ದಾನೆ!

    ಇಂದಿಗೂ ಪ್ರಕೃತಿ ಸುಮ್ಮನೆ ಮುನಿದರೆ, ಹೇಳ ಹೆಸರಿಲ್ಲದಂತೆ ಆಗುವ ಮಾನವ ಪ್ರಕೃತಿಯನ್ನು ಮರೆತಂತೆ, ಅದರ ಅವಶ್ಯಕತೆಯೇ ಇಲ್ಲದವನಂತೆ ಧಿಮಾಕು ತೋರಿಸುತ್ತಾ, ಪ್ರಕೃತಿಯಿಂದ ಬಹು ದೂರ ನಡೆದು ಹೋಗಿ, ಹುಚ್ಚನಾಗಿದ್ದಾನೆ. ದೂರ ಸರಿದಂತೆಲ್ಲಾ ಕಾಣೆಯಾದ ನೀರಿಗೆ,ಗಾಳಿಗೆ ತತ್ತರಿಸುತ್ತಿದ್ದಾನೆ. ಮರ ಗಿಡ ಕಡಿದು ಮನೆಕಟ್ಟಿಕೊಂಡು, ತಣ್ಣನೆಯ ಗಾಳಿಗೆ ಹವಾ ನಿಯಂತ್ರಣ ವ್ಯವಸ್ಥೆ ಮಾಡಿಕೊಂಡು, ಇಂದು ಉಸಿರಾಡುವ ಗಾಳಿಗೆ ರೋಧಿಸುತ್ತಿದ್ದಾನೆ…. ಮನೆಯನೆಂದು ಕಟ್ಟದಿರು

    ಪ್ರಕೃತಿಗೆ ಯಾವುದೇ ತರಹದ ಧಕ್ಕೆ ತರದೆ, ಯಾವುದೇ ತರಹದ ಅದರ ವಿರುದ್ಧದ ಕೃತ್ಯ ಎಸಗದೆ, ಇಂದು ಮಾನವ ಸಾಧಿಸಿ ಬೀಗುತ್ತಿರುವ ಈ ದೂರ ಸಂಪರ್ಕವನ್ನು ಸಾವಿರ ಸಾವಿರ ವರ್ಷಗಳ ಹಿಂದೆ ಸಾವಿರಾರು ದಾರ್ಶನಿಕರು ಈ ಭೂಮಿಯಲ್ಲಿ ಬರೀ ಧ್ಯಾನದಿಂದ ಸಾಧಿಸಿ ತೋರಿಸಿ ಅದೂ ಉಪಯೋಗಕ್ಕೆ ಬರುವುದು ಅಲ್ಲ ಅಂತ ಹೇಳಿ ಮುಂದೆ ಹೋಗಿದ್ದಾರೆ…… ಎಲ್ಲಿಯೂ ನಿಲ್ಲದಿರು……

    ಪಂಚೇಂದ್ರಿಯಗಳಿಂದ ಕಾಣುವ ಪ್ರಪಂಚ ಸತ್ಯವಲ್ಲ. ಸತ್ಯವಾದ ಪ್ರಪಂಚವನ್ನು ಕಾಣ ಬಯಸಿದರೆ ಹೊರಗಣ್ಣು ಮುಚ್ಚಿ ಒಳಗಣ್ಣು ತೆರೆದು ನಿನ್ನಲ್ಲಿಯೇ ಇರುವ ನಿನ್ನನ್ನು ನೋಡು. ನಿನ್ನಲ್ಲಿಯ ಆಗಾಧ ಶಕ್ತಿ ನೋಡು. ಆ ಶಕ್ತಿಯೇ ಕೊನೆ ಇರದ ನಿನ್ನ ಪಯಣದ ಇಂಧನ. ಈ ಅಂತರ್ದರ್ಶನ ನೀನು ಹೊಂದಿದರೆ ಈ ಅನಂತದಲ್ಲಿ ಯಾರೂ ಎಲ್ಲಿಯೂ ನಿನ್ನನ್ನು ನಿಲ್ಲಿಸಲು ಸಾಧ್ಯವಿಲ್ಲ. ಕೊನೆ ಇರದ ಪಯಣದಲ್ಲಿ ಸದಾ ಸುಖಿ ನೀನು…… ಕೊನೆಯನೆಂದು ಮುಟ್ಟದಿರು….

    ವಿಜ್ಞಾನಿಗಳೆಂದರೆ ಋಷಿಗಳಿದ್ದಂತೆ. ಅವರ ಜ್ಞಾನವೆಲ್ಲವೂ ಸೃಷ್ಟಿಯ ಒಳಿತಿಗಾಗಿಯೇ. ಅವರು ಹೇಳುವ ವಿಷಯವು ಧರ್ಮಾತೀತವಾದದ್ದು. ಪ್ರಕೃತಿಯೇ ತನ್ನ ಹಲವಾರು ವಿಷಯಗಳನ್ನು ಸೃಷ್ಟಿಗೆ ತಿಳಿಸಲು ವಿಜ್ಞಾನಿಗಳನ್ನು ಸೃಷ್ಟಿಸಿಕೊಂಡಿದೆ ಅಂತೆಲ್ಲಾ ನಂಬಿಕೊಂಡಿದ್ದ ಕಾಲ ಒಂದಿತ್ತು. ಆದರೆ ಇಂದು ಅವರೂ ಪೇಟೆಂಟ್ ಅನ್ನುವ ನಮ್ಮ ಸಂಸ್ಕೃತಿ ಕಂಡು ಕೇಳರಿಯದ ಶಬ್ದವನ್ನು ಅಳವಡಿಸಿಕೊಂಡು ಮಾನವರ ರಕ್ತ ಹೀರುತ್ತಾ ಸೃಷ್ಟಿಯ ವೈರಿಗಳಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮನುಷ್ಯ ಯಾವ ಮಟ್ಟಕ್ಕೆ ಹೋದರೂ ತನ್ನ ದುರ್ಬುದ್ಧಿ ಎನ್ನುವ ಇಂದ್ರಿಯಾಧಾರಿತ ಗುಣದಿಂದ ಹೊರಬರಲು ಸಾಧ್ಯವೇ ಇಲ್ಲ ಎನ್ನುವುದನ್ನು ಸಾಬೀತುಮಾಡಿದ್ದಾನೆ. ತಾನು ಕಂಡುಕೊಂಡ ಅಗಾಧ ಶಕ್ತಿಗಳನ್ನು ಮಾನವ ಕುಲದ ಏಳಿಗೆಗೆ ಉಪಯೋಗಿಸದೆ, ಇತರೆ ತನ್ನದೇ ತಂತುಗಳಾದ ಮಾನವರನ್ನು ದಮನಿಸಲು,ಪ್ರಾಣಿಗಳಂತೆ ನಡೆಸಿಕೊಂಡು ಆಳಲು ತವಕಿಸುತ್ತಿದ್ದಾನೆ, ಅಧಮ ಮಾನವ.

    ಇದು ಎಂದೆಂದಿಗೂ “ವಿ” ಜ್ಞಾನವೇ….ಸುಜ್ಞಾನವಲ್ಲ. (ರೂಪ,ವಿರೂಪ, ಸುರೂಪ ಅರ್ಥದಲ್ಲಿ) ಮಾನವಕುಲವನ್ನು ಇಂದು ಸುಜ್ಞಾನಡೆದೆಗೆ ನಡೆಸುವ ಸುಜ್ಞಾನಿಗಳು ಬೇಕಾಗಿದ್ದಾರೆ, ವಿಜ್ಞಾನಡೆದೆಗೆ ನಡೆಸುವ ವಿಜ್ಞಾನಿಗಳಲ್ಲ ಅಂತ ಬಹು ನೋವಿನಿಂದ ಹೇಳಬೇಕಾಗಿದೆ. ಸುಜ್ಞಾನ ಮಾತ್ರ ಮಾನವನನ್ನು ತಾನಿದ್ದ ಸ್ತರದಿಂದ ಮೇಲಕ್ಕೆತ್ತಬಹುದೇ ವಿನಾ ವಿಜ್ಞಾನ ಅಲ್ಲ. ಸುಜ್ಞಾನಿಯಾಗದ ಜ್ಞಾನಿ,ಗುರು, ನಾಯಕ, ವಿಜ್ಞಾನಿ, ವೈದ್ಯ, ಎಂಜಿನಿಯರ್, ಮನುಕುಲಕ್ಕೆ ಮಾರಕ. ಹೀಗೇ ಮುಂದುವರಿದರೆ, ಸ್ವಾರ್ಥತೆಯ ಮನುಕುಲ ನಾಶವನ್ನು ಯಾರೂ ತಡೆಯಲಾರರು.

    Photo by Sovit Chetri from Pexels

    ಟೊಮೊಟೊ ಬೆಳೆದು ಕೈ ಸುಟ್ಟುಕೊಂಡ ರೈತರು

    ನಿರಂತರ ಆದಾಯ ಗಳಿಸಲು ರೈತರು ವೈವಿಧ್ಯ ತರಕಾರಿ ಬೆಳೆಗಳನ್ನು ಪೋಷಿಸುತ್ತಾರೆ. ಅಪರೂಪಕ್ಕೆ ಬಂಪರ್ ಬೆಲೆ ಸಿಗುವ ರೈತರಿಗೆ ಬಹು ಪಾಲು ನಷ್ಟದ ಕಹಿ ಮಾಮೂಲು. ಉತ್ತಮ ಬೆಲೆ ನಿರೀಕ್ಷೆಯಲ್ಲಿ ಟೊಮೊಟೊ ಬೆಳೆದ ರೈತರಿಗೆ ಬೆಲೆ ಕುಸಿತದಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲದೆ ನಷ್ಟದ ಕಹಿ ಉಣಿಸಿದೆ.

    ಪ್ರತಿ ಕಿಲೋಗ್ರಾಂ ಟೊಮೊಟೊ ಸಗಟು ವಹಿವಾಟಿನಲ್ಲಿ ಸರಾಸರಿ ರೂ.5 ರಿಂದ 6 ಬೆಲೆಗೆ ಬಿಕರಿಗೊಂಡಿದೆ. ಕಳೆದ ಮಾರ್ಚ್ ಆರಂಭದಲ್ಲಿ ಟೊಮೊಟೊ ಸಸಿಗಳನ್ನು ಪೋಷಣೆ ಮಾಡಲಾಗಿತ್ತು. ಇಲ್ಲಿಯವರೆಗೆ ಸುಮಾರು 600 ಬಾಕ್ಸ್ ಮಾರಾಟ ಮಾಡಲಾಗಿದೆ. ಒಂದು ಬಾಕ್ಸ್ ನಲ್ಲಿ 28 ಕೆ.ಜಿ. ಟೊಮೊಟೊ ಸಂಗ್ರಹ ಸಾಮರ್ಥ್ಯ. ಕೇವಲ ರೂ.160 ರಂತೆ ಒಂದು ಬಾಕ್ಸ್ ದರ ನಿಗದಿಯಾಗಿದೆ. ವಾರದಲ್ಲಿ ಮೂರು ದಿನ 20 ಬಾಕ್ಸ್ ವರೆಗೆ ಇಳುವರಿ ಬಂದಿದೆ. ಬೇಡಿಕೆ ಇಲ್ಲದೆ ಪಾತಾಳಕ್ಕಿಳಿದ ಧಾರಣೆಯಿಂದ ಕಂಗಲಾಗಿದ್ದೇವೆ ಎನ್ನುತ್ತಾರೆ ರೈತ ಮೂರ್ತಿ.

    ದೀರ್ಘಾವಧಿ ಇಳುವರಿ ನೀಡುವ ಸಾವೊ ತಳಿಯ ಟೊಮೊಟೊ ಸಸಿಗಳನ್ನು ರೂ.1.80 ರಂತೆ ಖರೀದಿಸಲಾಗಿತ್ತು. ಮುಕ್ಕಾಲು ಎಕರೆಯಲ್ಲಿ 8 ಸಾವಿರ ಸಸಿಗಳನ್ನು ಪೋಷಣೆ ಮಾಡಲಾಗಿತ್ತು. ಔಷಧಿ ಗೊಬ್ಬರ ಸೇರಿ ಸುಮಾರು ರೂ.40 ರಿಂದ 50 ಸಾವಿರ ಖರ್ಚು ತಗುಲಿತ್ತು. ಮನೆಮಂದಿಯೆಲ್ಲಾ ಟೊಮೊಟೊ ಬಿಡಿಸಲು ತೆರಳಿದ್ದರಿಂದ ದುಬಾರಿ ಕೂಲಿ ಉಳಿದಿದೆ. ದಾವಣಗೆರೆಗೆ ರವಾನಿಸಿದ್ದರೆ ಬಾಡಿಗೆ, ಹಮಾಲಿ, ದಲ್ಲಾಳಿ ಖರ್ಚು ತೀವ್ರ ಹೊಡೆತ ಬೀಳುತ್ತಿತ್ತು. ಮನೆ ಬಾಗಿಲಲ್ಲೇ ಸಗುಟು ವ್ಯಾಪಾರಿಗಳಿಗೆ ಮಾರಾಟ ಮಾಡಿದೆವು. ಇಲ್ಲವಾದರೆ ಇನ್ನೂ ತೀವ್ರ ನಷ್ಟ ಅನುಭವಿಸಬೇಕಾಗಿತ್ತು ಎನ್ನುತ್ತಾರೆ ಅವರು.

    ಇದು ಟೊಮೊಟೊ ಬೆಳೆದ ಒಬ್ಬ ರೈತನ ಅಳಲು. ರಾಜ್ಯಾದ್ಯಾಂತ ಟೊಮೊಟೊ ಬೆಳೆದ ರೈತರಿಗೆ ಏಕರೂಪದ ಲಾಭದಾಯಕ ಮಾರುಕಟ್ಟೆ ಬೆಲೆ ಸಿಕ್ಕಿಲ್ಲ. ಎಲ್ಲೆಂದರಲ್ಲೆ ಸರಕು ಸಾಗಣೆ ವಾಹನಗಳಿಂದ ಟೊಮೊಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಉತ್ಪನ್ನಗಳಿಗೆ ಲಾಕ್ ಡೌನ್ ಸಮಯದಲ್ಲಿ ಓಡಾಟಕ್ಕೆ ಪರವಾನಗಿ ಇದೆ. ಜನರ ಓಡಾಟವಿಲ್ಲದೇ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಹಾಗಾಗಿ ದರದಲ್ಲಿ ಭಾರಿ ಇಳಿಕೆ ಕಂಡಿದೆ. ದೀರ್ಘಾವಧಿ ಸಂಗ್ರಹಣೆ ಸಾಧ್ಯವಿಲ್ಲದೇ, ಮಾರಾಟ ಮಾಡಲು ಸಾಧ್ಯವಾಗದೇ ಬೀದಿಗೆ ಚೆಲ್ಲಿದ್ದಾರೆ.

    ಟೊಮೊಟೊ ಬೆಳೆಯಲ್ಲದೆ ಬಹುತೇಕ ತರಕಾರಿ, ಹಣ್ಣು ಬೆಳೆದ ರೈತರ ಗೋಳಿಗೆ ಕೊನೆಯಲ್ಲಿ. ವೈಜ್ಞಾನಿಕ ಯುಗದಲ್ಲಿಯೂ ಬೇಡಿಕೆ, ಪೂರೈಕೆಯ ವಿಶ್ಲೇಷಣೆ ಪ್ರಾಮಾಣಿಕವಾಗಿ ನಡೆಸಿಲ್ಲ. ಸರ್ಕಾರ ರೈತ ಪರ ಇಲಾಖೆಗಳ ಮೂಲಕ ತರಕಾರಿ ಬೆಳೆ ಭೂಮಿ ಸರ್ವೇ ನಡೆಸಬೇಕು. ವಿವಿಧ ತರಕಾರಿ, ಹಣ್ಣುಗಳ ಬೇಡಿಕೆಯ ಅಂಕಿಅಂಶಗಳನ್ನು ಸಂಗ್ರಹಿಸಬೇಕು. ಪ್ರಾದೇಶಿಕ ಹವಾಗುಣ ವಿಶ್ಲೇಷಿಸಿ ತರಕಾರಿ, ಹಣ್ಣು ಬೆಳೆ ವಿಭಜಿಸಬೇಕು. ಬೇಡಿಕೆಗನುಗುಣವಾಗಿ ಇಂತಿಷ್ಟೇ ಹೆಕ್ಟೇರ್ ನಲ್ಲಿ ಬೆಳೆಯಲು ಉತ್ತೇಜಿಸಬೇಕು. ಒಂದೆರಡು ವರ್ಷ ಇಂತಹ ವೈಜ್ಞಾನಿಕ ಪ್ರಯೋಗ ಅಳವಡಿಸಿದಲ್ಲಿ ರೈತರಿಗೆ ಲಾಭ ತಂದುಕೊಡಲು ಸಾಧ್ಯ.

    ದೈಹಿಕ ಶ್ರಮ, ಆರ್ಥಿಕ ಹೊರೆ, ದೀರ್ಘಾವಧಿ ಕಾಯುವಿಕೆಯಿಂದ ಬೆಳೆ ಮಾರುಕಟ್ಟೆಗೆ ತಲುಪಿಸಿದರೆ ಕೇವಲ ಕೆಲವೇ ನಿಮಿಷದಲ್ಲಿ ದಲ್ಲಾಲಿಗಳು ಅವರಿಗಿಂತ ಹೆಚ್ಚು ಲಾಭ ಗಳಿಸುವರು. ಇದು ಅಸೂಯೆ ವೃದ್ಧಿಸುವ ವ್ಯವಸ್ಥೆ. ತಾತ್ಕಾಲಿಕ ಕೊರತೆ ಸೃಷ್ಟಿಸುವ ಮೂಲಕವೂ ರೈತರಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಲಾಭ ಪಡೆಯುವ ಹುನ್ನಾರಗಳು ನಡೆಯುತ್ತವೆ. ಸರ್ಕಾರ ಇಂದಿನ ಡಿಜಿಟಲ್ ತಂತ್ರಜ್ಞಾನದಲ್ಲಿ ರೈತರಿಗೆ ಬೇಡಿಕೆ, ಪೂರೈಕೆಯ ಪರಿಕಲ್ಪನೆಯಲ್ಲಿ ಉತ್ಪನ್ನಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು.

    ಪದವಿ ಹಾಗೂ ಸ್ನಾತಕೋತ್ತರ ಪದವಿ; ಪರೀಕ್ಷೆ ತಡವಾದರೂ ಆನ್‌ಲೈನ್‌ ಬೋಧನೆ ಮುಂದುವರಿಕೆ

    ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಕಾಲೇಜುಗಳು ಪದವಿ ಕೋರ್ಸ್‌ಗಳ ಸಮ ಸ್ಥಾನಿಕ ಸೆಮಿಸ್ಟರ್‌ ಕೋರ್ಸ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಈ ಕೋರ್ಸ್‌ಗಳ ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತು ಕೋವಿಡ್‌ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಶುಕ್ರವಾರ ತಿಳಿಸಿದ್ದಾರೆ.

    ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಪರೀಕ್ಷೆಗಳನ್ನು ಇನ್ನೂ ಮುಗಿಸದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕೂಡ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ (2ನೇ, 4ನೇ, 6ನೇ ಮತ್ತು 8ನೇ ಸೆಮಿಸ್ಟರ್‌ಗಳು) ಆನ್‌ಲೈನ್‌ ತರಗತಿಗಳನ್ನು ಶುರು ಮಾಡಬೇಕು. ಬಹುತೇಕ ಕೋರ್ಸ್‌ಗಳಿಗೆ ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದರಿಂದ ಪದವಿ ಕೋರ್ಸ್‌ಗಳ ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಪರೀಕ್ಷೆಗಳನ್ನು ಕೋವಿಡ್‌ ಪರಿಸ್ಥಿತಿ ತಹಬಂದಿಗೆ ಬಂದಮೇಲೆ ನಡೆಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    ಕೆಲವು ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಮಾತ್ರ ಮುಂದಿನ ಸೆಮಿಸ್ಟರ್‌ಗಳಿಗೆ ಹೋಗಲು ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದಿಲ್ಲ. ಅವುಗಳ ಬಗ್ಗೆ ಕುಲಪತಿಗಳು ಹಾಗೂ ಪ್ರಾಂಶುಪಾಲರುಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಜೊತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರಬೇಕು ಎಂದು ವಿವರಿಸಿದ್ದಾರೆ.

    ಸ್ನಾತಕೋತ್ತರ ಕೋರ್ಸ್‌ಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, “ಕೋವಿಡ್‌ ಕಾರಣದಿಂದಾಗಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೊದಲ ಸೆಮಿಸ್ಟರ್‌ಗೆ ಪ್ರವೇಶಾತಿ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಮೂರನೇ ಸೆಮಿಸ್ಟರ್‌ನ ತರಗತಿಗಳು ಮುಗಿದಿದ್ದು, ಕೆಲವೆಡೆ ಪರೀಕ್ಷೆಗಳು ಕೂಡ ಆರಂಭವಾಗಿದ್ದವು. ಹೀಗಾಗಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ, ಮೂರನೇ ಸೆಮಿಸ್ಟರ್‌ನ ತರಗತಿಗಳು ಈಗಾಗಲೇ ಮುಗಿದಿದ್ದು, ಪರೀಕ್ಷೆಗಳನ್ನು ನಡೆಸುವುದು ಮಾತ್ರ ಬಾಕಿ ಉಳಿದಿದ್ದರೆ, ಅಲ್ಲಿ ಕೂಡ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸಬೇಕು. ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಬಾಕಿ ಉಳಿಯುವ ಪರೀಕ್ಷೆಗಳನ್ನು ಕೋವಿಡ್‌ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುವುದು” ಎಂದಿದ್ದಾರೆ.

    ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ (1ನೇ, 3ನೇ, 5ನೇ, 7ನೇ ಸೆಮಿಸ್ಟರ್ ಗಳು) ಇನ್ನೂ ತರಗತಿಗಳನ್ನು ಮುಗಿಸದ ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಒಂದೊಮ್ಮೆ ಈ ತರಗತಿಗಳು ಮುಗಿದ ಮೇಲೂ ಕೋವಿಡ್‌ನಿಂದಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ತಕ್ಷಣವೇ ಮುಂದಿನ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಶುರುಮಾಡಬೇಕು. ಇದರಿಂದಾಗಿ ಬಾಕಿ ಉಳಿಯುವ ಬೆಸ ಸ್ಥಾನಿಕ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಕೋವಿಡ್‌ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಪರಿಸ್ಥಿತಿಯ ಬೆಳವಣಿಗೆಗಳಿಗೆ ಅನುಗುಣವಾಗಿ ಕುಲಪತಿಗಳು ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲಿ ಹೊರಹೊಮ್ಮುವ ನಿರ್ಧಾರಗಳನ್ನು ಆಧರಿಸಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಹಾಗೂ ವೇಳಾಪಟ್ಟಿಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ನಾಳೆಯಿಂದ 18- 44 ವಯೋಮಿತಿಯ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ; ಕೊವ್ಯಾಕ್ಸಿನ್‌ ಸೆಕೆಂಡ್‌ ಡೋಸ್‌ ಕೂಡ ಆರಂಭ

    18ರಿಂದ 44 ವರ್ಷ ವಯೋಮಿತಿಯೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ನಾಳೆಯಿಂದ (ಮೇ 22) ಕೋವಿಡ್ ಲಸಿಕೆ ಕೊಡಲಾಗುವುದು ಹಾಗೂ ಒಂದೆರಡು ತಿಂಗಳಲ್ಲಿ ರಾಜ್ಯದ 500 ಕಡೆ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಬಿಜೆಪಿ ಶುಕ್ರವಾರ ಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಜತೆ  ಮಾತನಾಡಿದರು.

    ರಾಜ್ಯವೇ ಲಸಿಕೆ ನೀಡಲು ಅದರ ಮೇಲೆ ವ್ಯವಸ್ಥಿತ ನಿಗಾ ಇರಿಸಲು ಪ್ರತ್ಯೇಕ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿ ಮಾಡಲಾಗಿದ್ದು, ಅದನ್ನು ಕೋವಿನ್‌ ಪೋರ್ಟಲ್‌ ಜತೆ ಲಿಂಕ್ ಮಾಡಲಾಗುತ್ತಿದೆ. ಜೂನ್ 1ರಿಂದ ಈ ಪೋರ್ಟಲ್ ಕೆಲಸ‌ ಮಾಡಲಿದೆ ಎಂದು ಡಿಸಿಎಂ ತಿಳಿಸಿದರು.

    ರಾಜ್ಯದಲ್ಲಿ 1,90,000 ಜನರಿಗೆ ಈಗ ಕೊವ್ಯಾಕ್ಸಿನ್‌ ಸೆಕೆಂಡ್‌ ಡೋಸ್‌ ಕೊಡಬೇಕಿದೆ. ಇದರಲ್ಲಿ 1,70,000 ಕೊವ್ಯಾಕ್ಸಿನ್‌ ಲಸಿಕೆ ಸಿದ್ಧವಿದ್ದು, ಈಗಾಗಲೇ ಕೊಡಲು ಪ್ರಾರಂಭಿಸಲಾಗಿದೆ.   ಕೋವಿಶೀಲ್ಡ್‌ ಕೂಡ ಸ್ಟಾಕ್‌ ಇದೆ. ಲಸಿಕೆ ಅಭಿಯಾನ ತೀವ್ರಗೊಳಿಸಲು ಮುಂಚೂಣಿಯ ಕಾರ್ಯಕರ್ತರ ಪಡೆ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಆದ್ಯತೆಯ ಮೇಲೆ ಅವರೆಲ್ಲರಿಗೂ ಲಸಿಕೆ ಕೊಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

    ನಾಳೆಯಿಂದ ಮಾಧ್ಯಮ ಸಿಬ್ಬಂದಿ, ಚಿತಾಗಾರ ಸಿಬ್ಬಂದಿ, ವಿಕಲಚೇತನರು, ಆರೋಗ್ಯ ಕಾರ್ಯಕರ್ತರು ಮತ್ತವರ ಕುಟುಂಬ ಸದಸ್ಯರು, ಕೋವಿಡ್‌ ಕೆಲಸಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಸರಕಾರಿ ಸಾರಿಗೆ ಸಿಬ್ಬಂದಿ, ವಿದ್ಯುತ್‌ ಮತ್ತು ನೀರು ಪೂರೈಕೆ ಸಿಬ್ಬಂದಿಗೆ ವ್ಕಾಕ್ಸಿನ್‌ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    ಇನ್ನೂ ಸೋಂಕಿತರಾಗಿ ಗುಣಮುಖರಾದವರಿಗೆ ತಕ್ಷಣವೇ ಲಸಿಕೆ ಕೊಡಬೇಕಿಲ್ಲ. ಮೂರು ತಿಂಗಳ ನಂತರ ಲಸಿಕೆ ಕೊಟ್ಟರೂ ಸಾಕು. ಕೋವಿಶೀಲ್ಡ್ ಪಡೆದವರಿಗೆ 4-6 ವಾರದಲ್ಲಿ ಸೆಕೆಂಡ್‌ ಡೋಸ್‌ ಕೊಡಬೇಕಿತ್ತು. ಆ ಅಂತರವನ್ನು 16 ವಾರಗಳ‌ ವರೆಗೆ ವಿಸ್ತರಿಸಲಾಗಿದೆ. ಡಿಸೆಂಬರ್‌ ಹೊತ್ತಿಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಕೊಡಲಾಗುವುದು. ಕೋವಿಡ್‌ ನಿಯಂತ್ರಣಕ್ಕೆ ಲಸಿಕೆಯೊಂದೇ ಅಂತಿಮ ಪರಿಹಾರ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    500 ಆಕ್ಷಿಜನ್‌ ಜನರೇಟರ್‌:ಇನ್ನು ಒಂದೆರಡು ತಿಂಗಳಲ್ಲಿಯೇ ರಾಜ್ಯದ ಎಲ್ಲೆಡೆ 400ರಿಂದ 500 ಆಕ್ಸಿಜನ್‌ ಜನರೇಟರ್‌ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಅಲ್ಲಿಯೂ ಐಸಿಯುಗಳನ್ನು ಹಾಕುತ್ತಿದ್ದೇವೆ ಎಂದು ಅವರು ಹೇಳಿದರು.

    ಒಂದು ಆಕ್ಸಿಜನ್‌ ಬೆಡ್‌ಗೆ 20,000 ಲೀಟರ್‌ ಆಮ್ಲಜನಕ ಬೇಕು. ಈ ಲೆಕ್ಕದಲ್ಲಿ ನೋಡಿದರೆ, ರಾಜ್ಯದಲ್ಲಿರುವ ಎಲ್ಲ ಆಕ್ಸಿಜನ್‌ ಬೆಡ್‌ಗಳಿಗೆ ಆಗಿ ಮಿಕ್ಕುವಷ್ಟು ಆಮ್ಲಜನಕದ ತುರ್ತು ಸಂಗ್ರಹ ನಮ್ಮಲ್ಲಿದೆ. ಮೂರನೇ ಅಲೆಯ ದೃಷ್ಟಿ ಇಟ್ಟುಕೊಂಡು ಇನ್ನು ಹೆಚ್ಚೆಚ್ಚು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 3,000 ವೆಂಟಿಲೇಟರ್‌, 25,000 ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚುವರಿಯಾಗಿ ಒಂದು ವರ್ಷದ ಅವಧಿಯಲ್ಲಿ ಮಾಡಿದ್ದೇವೆ. ಇದರ ಪ್ರಮಾಣವನ್ನು ಮತ್ತೂ  ಹೆಚ್ಚಿಸುತ್ತೇವೆ. ಇನ್ನು ಪಿಎಂ ಕೇರ್‌ನಿಂದ 315 ಕೋಟಿ ಹಣದ ಜತೆಗೆ ವೆಂಟಿಲೇಟರ್‌ಗಳನ್ನೂ ನಮಗೆ ಕೊಡಲಾಗಿದೆ ಎಂದು ಡಿಸಿಎಂ ಅಂಕಿ-ಅಂಶ ಕೊಟ್ಟರು.

    ಈಗಾಗಲೇ ನೋಂದಣಿಯಾಗಿರುವ, ನೋಂದಣಿಯಾಗದ ಎಷ್ಟೋ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್‌ ಸಿಲಿಂಡರ್‌ಗಳನ್ನು ನೀಡಿದ್ದೇವೆ. ಎಲ್ಲೋ ಕುಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆಕ್ಸಿಜನ್‌ ದೊರೆಯುತ್ತಿದೆ. ಹಾಗೆಯೇ ಸಣ್ಣ ಪ್ರಮಾಣದಲ್ಲಿದ್ದ ಆಕ್ಸಿಜನ್‌ ಸಾಗಾಣಿಕೆ ವ್ಯವಸ್ಥೆ ಈಗ ದೊಡ್ಡ ಪ್ರಮಾಣದಲ್ಲಿ ಆಗಿದ್ದು, ಪ್ರತ್ಯೇಕ ರೈಲುಗಳಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

    ಬ್ಲ್ಯಾಕ್‌ ಫಂಗಸ್‌ಗೆ ಔಷಧಿ:ಬ್ಲ್ಯಾಕ್‌ ಫಂಗಸ್‌ ಬೇರೆ ರಾಜ್ಯಗಳಲ್ಲಿ ಮೊದಲು ಕಂಡು ಬಂದಿತ್ತು. ನಮ್ಮಲ್ಲಿ ಈಗ ಕಂಡುಬಂದಿದೆ. ಈಗ ಒಂದು ನಿರ್ದಿಷ್ಟ ಔಷಧಿಗೆ ಬೇಡಿಕೆ ಬಂದಿದೆ. ಆದರೆ, ಇದಕ್ಕೆ ಹಲವಾರು ಔಷಧಿಗಳಿದ್ದರೂ ಜನರು ಮಾತ್ರ ʼಲೈಸೋಸೋಮಲ್ ಅಮಪೋಟೆರಿಸನ್ʼ (liposomal amphotericin) ಔಷಧಿಯನ್ನೇ ಕೇಳುತ್ತಿದ್ದಾರೆ. ʼಲೈಸೋಸೋಮಲ್ ಅಮಪೋಟೆರಿಸನ್-ಬಿʼ ಸೇರಿ ಇನ್ನೂ ಪರ್ಯಾಯ ಔಷಧ ಇದ್ದರೂ ಜನರು ಅದಕ್ಕೇ ಮುಗಿಬೀಳುತ್ತಿದ್ದಾರೆ. ಮೆಡಿಕಲ್‌ ಸ್ಟೋರ್‌ಗಳಲ್ಲಿಯೂ ಪರ್ಯಾಯ ಔಷಧಿಗಳು ಸಿಗುತ್ತಿವೆ. ಈ ತಿಂಗಳ 14ರಂದು  ʼಲೈಸೋಸೋಮಲ್ ಅಮಪೋಟೆರಿಸನ್ʼ ಔಷಧಿಗೆ ಬೇಡಿಕೆ ಸಲ್ಲಿಸಿದ್ದೇವೆ. ಇನ್ನು ಕೆಲ ದಿನಗಳಲ್ಲಿಯೇ ನಮ್ಮ ಕೈ ಸೇರಲಿದೆ ಎಂದರು ಡಿಸಿಎಂ.

    ಅಂದಹಾಗೆ, ಬ್ಲ್ಯಾಕ್‌ ಫಂಗಸ್‌ ಅನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಲಾಗಿದೆ.  ಖಾಸಗಿ ಆಸ್ಪತ್ರೆಗಳು ರಹಸ್ಯವಾಗಿ ಚಿಕಿತ್ಸೆ ನೀಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಔಷಧ ಹಂಚಿಕೆಯಲ್ಲಿ ತಾರತಮ್ಮ ಇಲ್ಲ:ರಾಜ್ಯಕ್ಕೆ ಔಷಧಿ ಹಂಚಿಕೆಯಲ್ಲಿ ಕೇಂದ್ರ ಸರಕಾರ ತಾರತಮ್ಮ ಎಸಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಡಾ.ಅಶ್ವತ್ಥನಾರಾಯಣ; “ಮಹಾರಾಷ್ಟ್ರ, ಗುಜರಾಜ್‌ ಮುಂತಾದ ರಾಜ್ಯಗಳಲ್ಲಿ ಜನವರಿಯಿಂದಲೇ ಎರಡನೇ ಅಲೆ ಆರಂಭವಾಯಿತು. ರಾಜ್ಯದಲ್ಲಿ ಏಪ್ರಿಲ್‌ನಿಂದ ಶುರುವಾಯಿತು. ಅಲ್ಲೆಲ್ಲ ಸೋಂಕಿತರು ಹೆಚ್ಚಾದ ಕಾರಣ ಮೊದಲು ಆದ್ಯತೆಯ ಮೇರೆಗೆ ಔಷಧಿ, ಆಕ್ಸಿಜನ್‌, ರೆಮಿಡಿಸಿವಿರ್‌ಗಳನ್ನು ಕೇಂದ್ರವು ಆ ರಾಜ್ಯಗಳಿಗೆ ಪೂರೈಕೆ ಮಾಡಿತು” ಎಂದರು.

    ರಾಜ್ಯದಲ್ಲಿ ಏಪ್ರಿಲ್‌ನಿಂದ ಸೋಂಕು ವಿಪರೀತ ಹೆಚ್ಚಲು ಶುರುವಾಯಿತು. ತಕ್ಷಣವೇ ರಾಜ್ಯ ಸರಕಾರ ಕೇಂದ್ರಕ್ಕೆ ಎಲ್ಲ ಮಾಹಿತಿ ನೀಡಿತು. ಕೂಡಲೇ ಕೇಂದ್ರವೂ ರಾಜ್ಯಕ್ಕೆ ಅಗತ್ಯವಾದ ಎಲ್ಲ ಔಷಧಿ ಒದಗಿಸಲು ತುರ್ತಾಗಿ ಲೈನಪ್‌ ಮಾಡಿ ಕ್ರಮ ವಹಿಸಿತು. ತಕ್ಷಣವೇ ಎಲ್ಲ ಔಷಧಿಗಳ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಯಿತು. ಅದಾದ ಕೆಲ ದಿನಗಳಲ್ಲಿಯೇ ರಾಜ್ಯಕ್ಕೆ ಪೂರೈಕೆ ಆರಂಭವಾಯಿತು. ರೆಮಿಡಿಸಿವರ್‌ ಹಂಚಿಕೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಹಂಚಿಕೆ ಆಗಿರುವುದು ರಾಜ್ಯಕ್ಕೆ ಮಾತ್ರ. ಈ ತಿಂಗಳ 23ರ ಹಂಚಿಕೆಯ ರೆಮಿಡಿಸಿವರ್ ಬಂದರೆ ಮಹಾರಾಷ್ಟ್ರಕ್ಕಿಂತ ನಮಗೇ ಹೆಚ್ಚು ಸಿಕ್ಕಂತಾಗುತ್ತದೆ ಎಂದರು ಅವರು.

    ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.‌ಆರ್.‌ವಿಶ್ವನಾಥ್‌ ಉಪಸ್ಥಿತರಿದ್ದರು.

    ಪ್ರೌಢಶಾಲೆಯ ಹಂತದಲ್ಲೇ ವೃತ್ತಿಪರ ಶಿಕ್ಷಣ

    ನಾಗೇಶ್ ಎಸ್ ವೈ

    ಇಂದು ಹೈಸ್ಕೂಲ್ ಶಿಕ್ಷಣದ ಅವಧಿಯಲ್ಲೇ ತಾಂತ್ರಿಕ ವೃತ್ತಿಪರ ಕೋರ್ಸ್ ಪಡೆಯಬಹುದೆಂಬ ಬಹಳಷ್ಟು ಮಂದಿಗೆ ಗೊತ್ತಿಲ್ಲ. 7ನೇ ತರಗತಿ ಉತ್ತೀರ್ಣರಾದ ನಂತರ 8ನೇ ತರಗತಿಯ ಹಂತದಲ್ಲಿಯೇ 6 ವಿಷಯಗಳೊಂದಿಗೆ(ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ವೃತ್ತಿಪರ ತಾಂತ್ರಿಕ ಶಿಕ್ಷಣವನ್ನು ಪಡೆಯುವ ಅವಕಾಶ ಇದೆ.

    ಕಾಲೇಜು ಶಿಕ್ಷಣ & ತಾಂತ್ರಿಕ ಶಿಕ್ಷಣ ಇಲಾಖೆ(DCTE) ಇದರ ಅಡಿಯಲ್ಲಿ 10ನೇ ತರಗತಿಯ ತನಕ ಈ ಕಿರಿಯ ತಾಂತ್ರಿಕ ಕೋರ್ಸ್ ಅನ್ನು ಮುಗಿಸಿಕೊಳ್ಳುವ ಅವಕಾಶವನ್ನು ಕಿರಿಯ ತಾಂತ್ರಿಕ ಶಾಲೆ(JTS) ಕಲ್ಪಿಸಿಕೊಟ್ಟಿದೆ. ಇದು ಕರ್ನಾಟಕದಲ್ಲಿ ಆರಂಭವಾಗಿದ್ದು 1965ರಲ್ಲಿ.

    ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರವೇಶಾತಿ ಪ್ರಕ್ರಿಯೆ:
    ಪ್ರತಿ ವರ್ಷ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಏಪ್ರಿಲ್ ಮಾಹೆಯಲ್ಲಿ (ಈ ಬಾರಿ ಕರೋನ ಕಾರಣದಿಂದ ದಿನಾಂಕಗಳು ವ್ಯತ್ಯಾಸವಾಗಿವೆ) ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ತದ ನಂತರ ಆಯ್ಕೆ ಪ್ರಕ್ರಿಯೆ ರೋಸ್ಟರ್ ಪದ್ಧತಿಯಲ್ಲಿ ನಡೆಯುತ್ತದೆ. ಒಟ್ಟು 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ 30ವಿದ್ಯಾರ್ಥಿಗಳನ್ನು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್(EEE) ಟ್ರೇಡ್ ಗೆ ಮತ್ತು ಉಳಿದ 30 ವಿದ್ಯಾರ್ಥಿಗಳನ್ನು ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್(EME) ಟ್ರೇಡ್ ಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


    ವಿದ್ಯಾರ್ಥಿಯು ಮಾಧ್ಯಮಿಕ ಹಂತದಲ್ಲಿಯೇ ಕಿರಿಯ ತಾಂತ್ರಿಕ ಶಿಕ್ಷಣವನ್ನು ಪಡೆಯುವುದು ಮುಂದಿನ ತಾಂತ್ರಿಕ ಡಿಪ್ಲೋಮ ವ್ಯಾಸಂಗಕ್ಕೆ ದಾರಿದೀಪ. ಇಂತಹ ಶಾಲೆಗಳು ಕೇವಲ ಕರ್ನಾಟಕ ರಾಜ್ಯದಲ್ಲಿ 6 ಮಾತ್ರ ಇವೆ. ಎಲ್ಲಾ ಭಾಗದಲ್ಲೂ ತೆರದರೆ ಬಹಳಷ್ಟು ಕಿರಿಯ ತಾಂತ್ರಿಕ ಕಲಿಕಾರ್ಥಿಗಳಿಗೆ ಅನುಕೂಲವಾಗುತ್ತದೆ.

    -ನಮಿತಾ ಸಿ,ಪ್ರಭಾರ ಪ್ರಾಚಾರ್ಯರು,ಕಿರಿಯ ತಾಂತ್ರಿಕ ಶಾಲೆ,ಭದ್ರಾವತಿ


    ಪ್ರಸಕ್ತ ಕರ್ನಾಟಕದಲ್ಲಿನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು:
    ಬಳ್ಳಾರಿ,ಬಾಗಲಕೋಟೆ,ಭದ್ರಾವತಿ,ಗುಲ್ಬರ್ಗಾ,ಮಂಗಳೂರು ಮತ್ತು
    ಹುಬ್ಬಳ್ಳಿಯಲ್ಲಿಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿವೆ.

    ಮುಂದಿನ ವ್ಯಾಸಂಗಕ್ಕೆ ಮೀಸಲಾತಿ:ಸರ್ಕಾರಿ ಕಿರಿಯ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳು ತಾಂತ್ರಿಕ ಡಿಪ್ಲೊಮಾ ಕೋರ್ಸ್ ಪ್ರವೇಶಾತಿ ಸಮಯದಲ್ಲಿ ರಾಜ್ಯದ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 5% ಮೀಸಲಾತಿ ದೊರೆಯಲಿದೆ. (ಅಲ್ಲದೇ ಈ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗಕ್ಕೂ ಅರ್ಹರಾಗಿರುತ್ತಾರೆ.)

    ಬೋಧನಾ ಮಾಧ್ಯಮ:ಕಿರಿಯ ತಾಂತ್ರಿಕ ಶಾಲೆಗಳಲ್ಲಿನ ಶಿಕ್ಷಣ ಮಾಧ್ಯಮ ಸಾಮಾನ್ಯ ವಿಷಯಗಳನ್ನು ಕನ್ನಡದಲ್ಲೂ ಹಾಗೂ ತಾಂತ್ರಿಕ ವಿಷಯಗಳನ್ನು ಇಂಗ್ಲಿಷ್ ನಲ್ಲಿ ಬೋಧಿಸಲಾಗುವುದು.

    ಶಿಷ್ಯವೇತನ:ಕಿರಿಯ ತಾಂತ್ರಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸರ್ಕಾರದಿಂದ ಪ್ರತಿ ವರ್ಷದಲ್ಲಿ 500ರೂ. ಶಿಷ್ಯ ವೇತನ ನೀಡಲಾಗುವುದು.

    ಕನಿಷ್ಠ ವಿದ್ಯಾರ್ಹತೆ ಹಾಗೂ ಇತರೆ ಅರ್ಹತೆಗಳು:ಪ್ರವೇಶಕ್ಕಾಗಿ ಅಭ್ಯರ್ಥಿಯು ಕರ್ನಾಟಕದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ, ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.ಅರ್ಜಿ ಸ್ವೀಕರಿಸುವ ಹಿಂದಿನ ದಿನಾಂಕಕ್ಕೆ ಅಭ್ಯರ್ಥಿಯು ಕರ್ನಾಟಕದ ಯಾವುದೇ ಅಂಗೀಕೃತ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕನಿಷ್ಠ 5 ವರ್ಷಗಳ ವ್ಯಾಸಂಗ ಮಾಡಿರಬೇಕು.

    ಅರ್ಜಿ ಸಿಗುವ ಸ್ಥಳ:
    ಅರ್ಜಿ ನಮೂನೆಯನ್ನು ಮೇಲೆ ಕಾಣುವ ನಿಮ್ಮ ಸ್ಥಳದಿಂದ ಹತ್ತಿರವಿರುವ ಯಾವುದಾದಾರೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಭೇಟಿ ನೀಡಿ ಕಚೇರಿಯಲ್ಲಿ ಪಡೆಯಬಹುದಾಗಿದೆ.
    ಹೆಚ್ಚಿನ ವಿವಿರಗಳನ್ನು ಸಂಬಂಧಿಸಿದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ(JTS) ಕಚೇರಿಯಿಂದ ಪಡೆಯಬಹುದು.

    ಕಿರಿಯ ತಾಂತ್ರಿಕ ಶಾಲೆ(JTS)ಯಲ್ಲಿ ಕೋರ್ಸ್ ಮುಗಿಸಿದವರಿಗೆ ಆಗುವ ಪ್ರಯೋಜನಗಳು:

    ಸ್ವಾವಲಂಬಿಯಾಗಿ, ಸ್ವ ಉದ್ಯೋಗಿಯಾಗಿ ಜೀವನ ನಿರ್ವಹಣೆ ಮಾಡುವ ಅವಕಾಶ.ಎಲೆಕ್ಟ್ರಿಷಿಯನ್,ಎಲೆಕ್ಟ್ರಿಕಲ್ ಶಾಪ್ ಉದ್ಯಮಿಯಾಗಿ ಕಾರ್ಯನಿರ್ವಹಿಸುವ ಕೌಶಲದ ಬೆಳವಣಿಗೆ,ಎಲೆಕ್ಟ್ರಿಕಲ್ ಟ್ರೇಡ್ ಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗುವ ಕೌಶಲದ ಬೆಳವಣಿಗೆ.ಮೆಕ್ಯಾನಿಕಲ್ ಟ್ರೇಡ್ ಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗುವ ಕೌಶಲದ ಬೆಳವಣಿಗೆ.

    ಉದಾ: Corpenter, Welder, Turner etc ಈ ಕೋರ್ಸ್ ಜೊತೆಗೆ ತಾಂತ್ರಿಕ ಡಿಪ್ಲೋಮ ಕೋರ್ಸ್ ಮಾಡಿಕೊಂಡವರಿಗೆ MNC ಕಂಪನಿಗಳಲ್ಲಿ ವಿಪುಲವಾದ ಉದ್ಯೋಗ ಅವಕಾಶವಿದೆ. ಅಲ್ಲದೇ ಮೊದಲ ಆದ್ಯತೆ ನೀಡಲಾಗುತ್ತದೆ.


    ನಾಗೇಶ್ ಎಸ್ ವೈ ಅವರು ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ
    ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕರು.

    ಕೋವಿಡ್ ಕಾಲದಲ್ಲಿ ಶಿಕ್ಷಣ ಪ್ರಕ್ರಿಯೆ: ತಜ್ಞರ ಸಮಿತಿ ರಚನೆ- ಸುರೇಶ್ ಕುಮಾರ್

    ಕೋವಿಡ್ ಸಂಕಷ್ಟದ ಕಾಲದಲ್ಲಿ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವ ಉದ್ದೇಶದಿಂದ ಶಿಕ್ಷಣದ ಮುಂದುವರಿಕೆ ಕ್ರಮಗಳ ಕುರಿತಂತೆ ತಜ್ಞರ ಸಮಿತಿ ರಚಿಸಿ ವರದಿ ಪಡೆಯಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಕೊರೋನಾ ಸೋಂಕಿನ ಭೀತಿಯಿಂದಾಗಿ 2021-22ನೇ ಶೈಕ್ಷಣಿಕ ವರ್ಷವೂ ನಿಗದಿಯಂತೆ ಆರಂಭವಾಗುವ ಲಕ್ಷಣಗಳು ಗೋಚರಿಸದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕಾ ನಿರಂತರತೆಗೆ ತೊಂದರೆಯಾಗದಂತೆ ಈಗಿನಿಂದಲೇ ಕ್ರಮ ವಹಿಸುವ ನಿಟ್ಟಿನಲ್ಲಿ ಬುಧವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯ ನಂತರ ಅವರು ಮಾತನಾಡಿದರು.

    ವಿಶೇಷವಾಗಿ ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವುದು ಆ ಮೂಲಕ ಅವರ ಶಿಕ್ಷಣದ ಹಕ್ಕುಗಳನ್ನು ರಕ್ಷಿಸುವುದು ಹಾಗೆಯೇ ಕಳೆದ ಸಾಲಿನಲ್ಲಿ ಕಲಿತ ಪಾಠದಂತೆ ನಮ್ಮ ಮಕ್ಕಳನ್ನು ತಲುಪಲು ಪರ್ಯಾಯ ಕ್ರಮಗಳನ್ನು ಅನುಸರಿಸಬೇಕೆಂಬ ಕುರಿತು ಈ ಸಮಿತಿಯು ರೂಪುರೇಷೆ ಸಿದ್ಧಪಡಿಸಲಿದೆ ಎಂದರು.

    ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ಪರ್ಯಾಯ ಬೋಧನಾ ಹಾಗೂ ಕಲಿಕಾ ಕ್ರಮಗಳು ಪ್ರಾಮುಖ್ಯತೆ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ತಜ್ಞರ ತಂಡದಿಂದ ಸಲ್ಲಿಕೆಯಾಗುವ ವರದಿಯ ಆಧಾರದಲ್ಲಿ ಬರುವ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕಾರ್ಯೋನ್ಮುಖವಾಗಲಾಗುವುದು ಎಂದು ಸಚಿವರು ತಿಳಿಸಿದರು.

    ಲಭ್ಯವಿರುವ ಸ್ಥಿತಿಗತಿಗಳು, ಮೌಲ್ಯಾಂಕನ ಪದ್ಧತಿ, ಮಂಡಳಿ ಪರೀಕ್ಷೆಗಳು, ಆನ್ ಲೈನ್ / ದೂರಶಿಕ್ಷಣ, ಶಿಕ್ಷಕರ ತರಬೇತಿ, ಸಂಪನ್ಮೂಲ ಸದ್ಬಳಕೆ ಸೇರಿದಂತೆ ಎಲ್ಲ ಆಯಾಮಗಳನ್ನೂ ಆಧ್ಯಯನ ಮಾಡಿ ವರದಿ ನೀಡಲು ಸಮಿತಿಯಲ್ಲಿ ಖ್ಯಾತ ವಿವಿಧ ಶಿಕ್ಷಣ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ ಪ್ರತಿನಿಧಿಗಳು, ನಿಮ್ಹಾನ್ಸ್ ಪ್ರತಿನಿಧಿಗಳು, ರಾಜ್ಯದ ಆರೋಗ್ಯ ಇಲಾಖೆಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು, ಖಾಸಗಿ ಶಾಲೆಗಳ ಪ್ರತಿನಿಧಿ, ಪೋಷಕ ಸಂಘಟನೆಯ ಪ್ರತಿನಿಧಿಗಳು, ಶಿಕ್ಷಕ/ಉಪನ್ಯಾಸಕರ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ತಕ್ಷಣದಲ್ಲೇ ಸಮಿತಿ ರಚಿಸಿ ಇಲಾಖೆ ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿಯಲ್ಲಿ ನೀಲನಕ್ಷೆಯನ್ನು ಮಂಡಿಸಲು ಸಮಿತಿಯನ್ನು ಕೋರಲಾಗುವುದು ಎಂದು ಸಚಿವರು ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ :ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಕೇಂದ್ರ ಶಿಕ್ಷಣ ಸಚಿವರ ಮಂಗಳವಾರದ ಸಭೆಯಲ್ಲಿ ವಿಶೇಷ ಚರ್ಚೆ ನಡೆದಿದ್ದು, ಹಲವಾರು ರಾಜ್ಯಗಳು, ಅದರ ಅನುಷ್ಠಾನಕ್ಕೆ ಸಾಕಷ್ಟು ಪೂರ್ವಭಾವಿ ಕೆಲಸಗಳನ್ನು ಕೈಗೊಂಡಿವೆ. ಕರ್ನಾಟಕ ರಾಜ್ಯದಲ್ಲಿ‌ ಇದರ‌ ಬಗ್ಗೆ ವರದಿ ಸಲ್ಲಿಕೆಯಾದ ಬಳಿಕ ಇನ್ನಷ್ಟು ಸಾಂಸ್ಥಿಕ ಸುಧಾರಣೆಗಳು ಅವಶ್ಯವಿದ್ದು, ರಾಜ್ಯ ಸಂಪನ್ಮೂಲ ತಂಡದ ರಚನೆಯೂ ಸೇರಿದಂತೆ ಇದರಲ್ಲಿ ಉಲ್ಲೇಖಿಸಿರುವ ಹಲವು ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

    ಮೃತ ಶಿಕ್ಷಕರಿಗೆ ಪರಿಹಾರ- ಶಿಕ್ಷಕರಿಗೆ ಕೋವಿಡ್ ವ್ಯಾಕ್ಸಿನ್:
    ಕೋವಿಡ್ ನಿಂದ ರಾಜ್ಯದ ವಿವಿಧೆಡೆ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಮೃತರಾಗಿರುವ ಕುರಿತು ಅಂಕಿ ಅಂಶಗಳನ್ನು ಮಂಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಶಿಕ್ಷಕರ‌ ಕಲ್ಯಾಣ ನಿಧಿಯಿಂದ ವಿಶೇಷ ಪ್ರಕರಣವೆಂದು ಈ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತೂ ಇಲಾಖೆ ಚಿಂತನೆ ನಡೆಸಿದೆ ಎಂದರು.

    ಹಾಗೆಯೇ ಶಿಕ್ಷಕ ಸಮುದಾಯವನ್ನ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಮುಂದಿನ ಶೈಕ್ಷಣಿಕ ಸಾಲಿನ ಪ್ರಾರಂಭಕ್ಕೆ ಮುನ್ನ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಲಸಿಕೆ‌ ನೀಡುವಲ್ಲಿ ಪ್ರಾಧಾನ್ಯತೆ ನೀಡಬೇಕಿದ್ದು, ಈ ಕುರಿತು ಆರೋಗ್ಯ ಇಲಾಖೆಗೆ ಕೂಡಲೇ‌ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ ಸುರೇಶ್ ಕುಮಾರ್ ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರೂ ಸಹ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಸಹ ಮಾತನಾಡುವುದಾಗಿ ತಿಳಿಸಿದರು. ಕೂಡಲೇ ಈ ಕುರಿತು ಅರೋಗ್ಯ ಇಲಾಖೆಗೆ ಸಲ್ಲಿಸಿರುವ ಅಂಕಿ ಅಂಶಗಳನ್ನು ಅನುಪಾಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

    ಶಿಕ್ಷಕರ ವರ್ಗಾವಣೆ ಚುರುಕುಗೊಳಿಸಿ: ಈಗಾಗಲೇ ಶಿಕ್ಷಕರ ವರ್ಗಾವಣೆ ಬಹಳ ತಡವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು, ಲಾಕ್ ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು. ಶಿಕ್ಷಕರು ಇಲಾಖೆಯಿಂದ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಿದೆ. ಇದರಲ್ಲಿ ವಿಳಂಬ ಮಾಡಬಾರದೆಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

    ವೃಂದ ಮತ್ತು ನೇಮಕಾತಿ ನಿಯಮ:6-8ನೇ ತರಗತಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಆದೇಶ ಮಾಡಲಾಗಿತ್ತು. ವಿಳಂಬದ ಕಾರಣ ನೇಮಕಾತಿಗೆ ಯಾವುದೇ ಕ್ರಮವಾಗಿಲ್ಲ. ಕಾಲಮಿತಿ ವಿಧಿಸಿಕೊಂಡು ಇದನ್ನು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇಮಕಾತಿಗೆ ನಿರ್ಬಂಧ ಇಲ್ಲದ ಕಾರಣ, ಆ ಪ್ರದೇಶದ ಖಾಲಿ ಹುದ್ದೆಗಳ ನೇಮಕಾತಿಗೆ ಕೂಡಲೇ ಕ್ರಿಯಾಯೋಜನೆ ರೂಪಿಸಿ ಮಂಡಿಸಬೇಕೆಂದು ಸೂಚಿಸಿದರು.

    ಸಂಕನೂರ ನೇತೃತ್ವದ ಸಮಿತಿ ವರದಿ:ಶಾಲಾಕಾಲೇಜುಗಳ ಆರ್.ಆರ್.ನವೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ವರದಿ‌ ಮಂಡಿಸಲು ರಚಿಸಲಾಗಿದ್ದ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದ ಸಮಿತಿ ವರದಿ ಕುರಿತಂತೆ ಪ್ರಸ್ತಾಪಿಸಿದ ಸಚಿವರು, ಈ ಕುರಿತ ಪ್ರಗತಿ ಪರಿಶೀಲಿಸಿ ವರ್ಚುವಲ್ ಮೂಲಕ ಸಭೆ ನಡೆಸಿ ಶೀಘ್ರವೇ ವರದಿ ನೀಡುವ ಸಂಬಂಧದಲ್ಲಿ ಸಂಕನೂರು ಅವರೊಂದಿಗೆ ಚರ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಾವೂ ಸಹ ಸಂಕನೂರು ಅವರೊಂದಿಗೆ ಮಾತನಾಡಿ ಸಾಧ್ಯವಾದಷ್ಟು ಶೀಘ್ರವೇ ವರದಿ ಕೋರುವುದಾಗಿ ತಿಳಿಸಿದರು.

    ದೀಕ್ಷಾ ಆಪ್ ಸದ್ಬಳಕೆಗೆ ಸೂಚನೆ:ಭೌತಿಕ ತರಗತಿಗಳ ಅನುಪಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಪೋರ್ಟಲ್ ದೀಕ್ಷಾ ಆಪ್ ಮೂಲಕ ಪದವಿ ಪೂರ್ವ ವಿದ್ಯಾರ್ಥಿಗಳು ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಲು ಅನುವಾಗುವಂತೆ ಪಠ್ಯ ಭಾಗಗಳನ್ನು ಅದರಲ್ಲಿ ಅಳವಡಿಸಲಾಗುತ್ತಿದ್ದು, ಮುಂದಿನ ವಾರದಲ್ಲಿ ಪೋರ್ಟಲ್ ಲೋಕಾರ್ಪಣೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಇದು ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಲ್ಲಿರುವ ಪೋರ್ಟಲ್ ಆಗಿದ್ದು, ದೀಕ್ಷಾ ಪೋರ್ಟಲ್ ನಲ್ಲಿ ಅತಿ ಹೆಚ್ಚು ಪಠ್ಯ ಲಭ್ಯವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಉತ್ತಮ ಸ್ಥಾನದಲ್ಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ 1ರಿಂದ 10ನೇ ತರಗತಿಗಳಿಗೆ ಅನ್ವಯವಾಗುವಂತೆ 22 ಸಾವಿರ ಇ-ಪಠ್ಯಗಳನ್ನು ಅಳವಡಿಸಲಾಗಿದೆ. ಎಲ್ಲ ಪಠ್ಯಪುಸ್ತಕಗಳು, ವರ್ಕ್ ಪುಸ್ತಕಗಳು, ತರಬೇತಿ ಪಠ್ಯಗಳು ಅಧ್ಯಾಯವಾರು ದೀಕ್ಷಾ ಆಪ್ ನಲ್ಲಿ ಲಭ್ಯವಿದೆ. ಹಾಗೆಯೇ ಪದವಿ ಪೂರ್ವ ಶಿಕ್ಷಣಕ್ಕೆ ಅನುವಾಗುವಂತೆಯೂ ಪಠ್ಯರಚನೆ ಪೂರೈಸಿ ಆಪ್ ಗೆ ಅಪ್ ಲೋಡ್ ಮಾಡಲಾಗಿದೆ. ಪದವಿ ಪೂರ್ವ ಉಪನ್ಯಾಸಕರ ತರಬೇತಿ ಮಾಡ್ಯೂಲ್ ನ್ನು ಸಹ ಅಪ್ ಲೋಡ್ ಮಾಡಲಾಗುತ್ತಿದೆ. ಈ ಆಪ್ ನ ಬಳಕೆಯನ್ನು ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಪಡೆಯಬೇಕೆಂದು ಸಚಿವರು ಕೋರಿದರು.

    ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಪರ್ಯಾಯ ಬೋಧನಾ ಕ್ರಮಗಳಿಗೆ ಆದ್ಯತೆ ಇರಲಿದ್ದು, ಈಗಿನಿಂದಲೇ ದೂರದರ್ಶನ, ಆಕಾಶವಾಣಿಯಂತಹ ಸಮೂಹ ಮಾಧ್ಯಮಗಳು ಸೇರಿದಂತೆ ತಂತ್ರಜ್ಞಾನಾಧಾರಿತ ಬೋಧನೆಯ ಸಂಪೂರ್ಣ ಕ್ರಿಯಾಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

    ಸಕಾಲಕ್ಕೆ ಪಠ್ಯಪುಸ್ತಕ ಪೂರೈಕೆಗೆ ಸೂಚನೆ:ಭೌತಿಕವಾಗಿ ಶಾಲೆಗಳು ಆರಂಭವಾಗುವುದು ತಡವಾದರೂ ಸರಿಯೇ ಮಕ್ಕಳ ಕಲಿಕೆಗೆ ಪೂರಕವಾಗಿ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ತಲುಪಿಸಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಬೇಕು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪುಸ್ತಕಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ತಲುಪಬೇಕು ಎಂದು ಸಚಿವರು ಸೂಚಿಸಿದರು.

    ಶಾಲಾ ಶುಲ್ಕದ ಗೊಂದಲ ಪರಿಹಾರ:ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿರುವ ಶಾಲಾ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣದ ಮಾಹಿತಿ ಪಡೆದ ಸಚಿವರು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಮಾರ್ಗಗಳನ್ನು ಆಲೋಚಿಸಬೇಕೆಂದು ಸಲಹೆ ನೀಡಿದರು.

    ಸಭೆಯಲ್ಲಿ ಪಿಯು ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಫ್ಯಾಮಿಲಿ ಮ್ಯಾನ್ ಸೀಸನ್ 2 ಬಿಡುಗಡೆ ದಿನ ಪ್ರಕಟ

    ಸೀಸನ್ 1 ರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವೆಬ್ ಸಿರೀಸ್ ಫ್ಯಾಮಿಲಿ ಮ್ಯಾನ್ ಸೀಸನ್ 2 ರ ಬಿಡುಗಡೆ ದಿನಾಂಕವನ್ನು ಅಮೆಜಾನ್ ಪ್ರೈಮ್ ಇಂದು ಪ್ರಕಟಿಸಿದೆ. ಜೂನ್ 4 ರಂದು ಬಿಡುಗಡೆ ಮಾಡುವುದಾಗಿ ಅದು ಟ್ರೇಲರ್ ಬಿಡುಗಡೆ ಮಾಡುವುದರ ಮೂಲಕ ಪ್ರಕಟಿಸಿದೆ.

    ಈ ಹಿಂದೆ ಫೆಬ್ರವರಿ 12 ರಂದೇ ಬಿಡುಗಡೆ ಮಾಡುವುದಾಗಿ ಪ್ರಕಟಿಸಿತ್ತು. ಆದರೆ ಆ ಸಮಯದಲ್ಲಿ ಬಿಡುಗಡೆಯಾದ ತಾಂಡವ್ ವೆಬ್ ಸರಣಿ ವಿವಾದಕ್ಕೆ ಕಾರಣವಾಗಿದ್ದರಿಂದ ಫ್ಯಾಮಿಲಿ ಮ್ಯಾನ್ 2 ರ ದಿನಾಂಕವನ್ನು ಮುಂದಕ್ಕೆ ಹಾಕಲಾಗಿತ್ತು.

    ಮಾತು ಕೊಟ್ಟಂತೆ ಈ ಬೇಸಿಗೆಗೆ ಸರಣಿಯನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ದೇಶಕರಾದ ರಾಜ್ ಮತ್ತು ಡಿಕೆ ಟ್ವೀಟ್ ಮಾಡಿದ್ದಾರೆ.

    ಕುಟುಂಬ ಪ್ರೇಮಿಯಾಗಿ ಜೊತೆಗೆ ಇಂಟೆಲಿಜೆನ್ಸ್ ಅಧಿಕಾರಿ ಶ್ರೀಕಾಂತ್ ತಿವಾರಿ ಆಗಿ ಮನೋಜ್ ಬಾಜ್ಪೇಯಿ ಅದ್ಭುತ ಅಭಿನಯ ನೀಡಿದ್ದ ಫ್ಯಾಮಿಲಿ ಮ್ಯಾನ್ 1 ತೀವ್ರ ಕುತೂಹಲ ಕೆರಳಿಸಿತ್ತು. ಎಲ್ಲರೂ ಒಂದೇ ಸಿಟ್ಟಿಂಗ್ ನಲ್ಲಿ ಎಲ್ಲಾ ಎಪಿಸೋಡ್ ಗಳನ್ನು ನೋಡುವಂತೆ ಮಾಡಿ ಸೀಸನ್ 2 ಕ್ಕೆ ಕಾಯುವಂತೆ ಮಾಡಿತ್ತು.

    ಮನೋಜ್ ಬಾಜ್ಪೇಯಿ ಜೊತೆ ಸಮಂತ ಅಕ್ಕಿನೇನಿ, ಪ್ರಿಯಾಮಣಿ, ಸೀಮಾ ಬಿಸ್ವಾಸ್, ದರ್ಶನ್ ಕುಮಾರ್ ಮತ್ತಿತರರು ನಟಿಸಿದ್ದಾರೆ.

    ಈ ಸರಣಿ ವೀಕ್ಷಿಸಲು ನೀವು ನೀವು ಅಮೆಜಾನ್ ಪ್ರೈಮ್ ಗೆ ಚಂದಾದಾರಗಬೇಕಾಗುತ್ತದೆ. ಚಂದಾದಾರರಾಗಲು ಈ ಕೆಳಗಿನ JOIN NOW ಲಿಂಕ್ ಒತ್ತಿ.

    ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಪಿಎಚ್‌ಸಿಗೊಂದು ಕೋವಿಡ್‌ ಕಾರ್ಯಪಡೆ

    ಕೋವಿಡ್‌-19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಹಾಗೂ ಪರಸ್ಪರ, ಸಹಕಾರ, ನೆರವು ಇತ್ಯಾದಿಗಳ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೋಮವಾರ ಜಾಗತಿಕ ಆವಿಷ್ಕಾರ ಮೈತ್ರಿಕೂಟ (GIA) ದೇಶಗಳ ರಾಜತಾಂತ್ರಿಕರ ಜತೆ ಮಹತ್ವದ ಮಾತುಕತೆ ನಡೆಸಿದರು.

    ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಚುಯಲ್‌ ಸಭೆಯಲ್ಲಿ ಕೋವಿಡ್‌ ಎದುರಿಸಲು ಕೈಗೊಳ್ಳಲಾಗಿರುವ ಕಾರ್ಯತಂತ್ರ, ವ್ಯಾಕ್ಸಿನೇಷನ್‌, ವೈದ್ಯಕೀಯ ಸೌಲಭ್ಯ, ಪರಸ್ಪರ ಸಹಕಾರ ಇತ್ಯಾದಿಗಳ ಬಗ್ಗೆ ಚ‌ರ್ಚೆ ನಡೆಸಲಾಯಿತು.

    ಅಮೆರಿಕ, ಕೆನಡಾ, ನೆದರ್‌ಲ್ಯಾಂಡ್ಸ್‌, ಬ್ರಿಟನ್‌, ಜರ್ಮನಿ, ಇಸ್ರೇಲ್‌, ಆಸ್ಟ್ರೇಲಿಯಾ, ಡೆನ್ಮಾರ್ಕ್‌, ದಕ್ಷಿಣ ಕೊರಿಯಾ, ಸ್ವಿಡ್ಜರ್‌ಲೆಂಡ್‌, ಜಪಾನ್‌ ಮುಂತಾದ ದೇಶಗಳ ದಕ್ಷಿಣ ಭಾರತ್‌ ಕಾನ್ಸುಲೇಟ್‌ ಜನರಲ್‌ಗಳ ಜತೆ ಡಿಸಿಎಂ ಮಾತುಕತೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ, ಕೋವಿಡ್‌ನಂಥ ಸೋಂಕಿನ ವಿರುದ್ಧ ಹೋರಾಟ ನಡೆಸಲು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ದೇಶಗಳ ಜತೆಗೆ ಎಲ್ಲ ರೀತಿಯ ಸಹಕಾರ ಸಂಬಂಧ ಹೊಂದಲು ಕರ್ನಾಟಕ ಸಿದ್ಧವಿದೆ ಎಂದರು.

    ಮೂರು ವಾರಗಳ ಹಿಂದೆ ರಾಜ್ಯದಲ್ಲಿ ಎರಡನೇ ಅಲೆ ಅಪ್ಪಳಿಸಿದೆ. ಸರಕಾರವು ಸೋಂಕು ಹರಡುವುದಕ್ಕಿಂತ ವೇಗವಾಗಿ ಹಾಸಿಗೆ ನಿರ್ವಹಣೆ, ಆಮ್ಲಜನಕ ಪೂರೈಕೆ, ಔಷಧಿ ಲಭ್ಯತೆ, ಹೋಮ್‌ ಐಸೋಲೇಷನ್‌ನಂಥ ಪರಿಹಾರ ಕಾರ್ಯಗಳನ್ನು ಕೈಗೊಂಡು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ ಎಂದರು ಡಿಸಿಎಂ.

    ರಾಜ್ಯದಲ್ಲಿ ಈಗ ಆಕ್ಸಿಜನ್‌, ಔಷಧಿ, ಬೆಡಗಳ ಕೊರತೆಯನ್ನು ಬಹುತೇಕ ನೀಗಿಸಲಾಗಿದೆ. ಮತ್ತೊಂದೆಡೆ ಸಂಭನೀಯ 3ನೇ ಅಲೆಯನ್ನು ಎದುರಿಸಲು ಸರಕಾರ ಸಜ್ಜಾಗಿದೆ ಎಂದು ಡಿಸಿಎಂ ಹೇಳಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಹೋಮ್‌ ಐಸೋಲೇಷನ್‌ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಪ್ರತಿಯೊಬ್ಬ ಸೋಂಕಿತರಿಗೂ ಕೋವಿಡ್‌ ಕೇರ್‌ನಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ. ಪ್ರತಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಒಂದು ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

    ವಿವಿಧ ದೇಶಗಳ ನೆರವು ಹೀಗಿದೆ:

    ಜಾಗತಿಕ ಆವಿಷ್ಕಾರ ಮೈತ್ರಿಕೂಟ (gia) ದೇಶಗಳ ರಾಜತಾಂತ್ರಿಕರು ಸಭೆಯಲ್ಲಿ ನೀಡಿದ ನೆರವಿನ ಮಾಹಿತಿ ಇಲ್ಲಿದೆ.

    ಜಪಾನ್‌ :ದಕ್ಷಿಣ ಭಾರತದ ಜಪಾನ್ ಕಾನ್ಸುಲೇಟ್‌ ಜನರಲ್‌ ಅಕಿಕೊ ಸುಗಿತಾ ಅವರು ಭಾರತ & ಕರ್ನಾಟಕಕ್ಕೆ ನೀಡಿರುವ ನೆರವಿನ ಮಾಹಿತಿ ನೀಡಿದರು. ಈಗಾಗಲೇ ರಾಜ್ಯದಲ್ಲಿದ್ದ ಬಹತೇಕ ಜಪಾನಿಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಜಪಾನ್‌ ಸರಕಾರ ಭಾರತಕ್ಕೆ 50 ದಶಲಕ್ಷ ಡಾಲರ್ ಅನುದಾನ ಘೋಷಿಸಿದೆ. 800 ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ ಎಂದ ಅಕಿಕೊ ಸುಗಿತಾ ಅವರು, ಉತ್ಪಾದನಾ & ಅತ್ಯಗತ್ಯ ಕೈಗಾರಿಕೆಗಳ ಕಾರ್ಯಚಟುವಟಿಕೆ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ಮನವಿ ಮಾಡಿದರು. ಜಪಾನಿನ ಅನೇಕ ಕಂಪನಿಗಳು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪುನಾರಂಭಿಸುವ ಆಶಯ ಹೊಂದಿದ್ದು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದರು.

    ದಕ್ಷಿಣ ಕೊರಿಯಾ:ದಕ್ಷಿಣ ಕೊರಿಯಾದ ಕಾನ್ಸುಲೇಟ್‌ ಜನರಲ್‌ ಯಂಗ್ ಸೀಪ್ ಕ್ವಾನ್ ಅವರು ಮಾತನಾಡಿ, ಈಗಾಗಲೇ 1,500 ಕೊರಿಯನ್‌ ಪ್ರಜೆಗಳು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕುವುದು ತುಂಬಾ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನೆರವಾಗಬೇಕು ಎಂದು ವಿನಂತಿ ಮಾಡಿದರು.

    ಜತೆಗೆ, ಜಾಗತಿಕ ಮಟ್ಟದಲ್ಲಿರುವ ಲಸಿಕೆಗಳ ಕೊರತೆಯನ್ನು ನೀಗಿಸಲು ವ್ಯಾಕ್ಸಿನ್‌ ತಯಾರಿಕೆ ಘಟಕಗಳನ್ನು ಸ್ಥಾಪನೆ ಮಾಡಲು ದಕ್ಷಿಣ ಕೊರಿಯಾ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತವೂ ಸೇರಿ ಜಗತ್ತಿನ ಎಲ್ಲ ದೇಶಗಳ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಿದೆ ಎಂದ ಅವರು, ಭಾರತಕ್ಕೆ ಐದು ವಿಮಾನಗಳಲ್ಲಿ ವೈದ್ಯಕೀಯ ಸರಂಜಾಮುಗಳ ಪೂರೈಕೆ, ಆಮ್ಲಜನಕ ಸಿಲಿಂಡರ್‌ಗಳು, ವೈದ್ಯಕೀಯ & ತಪಾಸಣೆ ಕಿಟ್‌ಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ವಸ್ತುಗಳು ಭಾರತಕ್ಕೆ ಬಂದಿವೆ. ಅಲ್ಲದೆ, ಇಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಕೊರಿಯಾದ ಎಲ್‌ಜಿ, ಸ್ಯಾಮ್‌ಸಂಗ್‌ ಮುಂತಾದವು ರಾಜ್ಯಕ್ಕೆ ಆರ್ಥಿಕ ನೆರವು ನೀಡುತ್ತಿವೆ ಎಂದರು.

    ಸ್ವಿಡ್ಜರ್‌ಲೆಂಡ್:‌ಸ್ವಿಡ್ಜರ್‌ಲೆಂಡ್ ದೇಶದ ಕಾನ್ಸುಲೇಟ್‌ ಜನರಲ್ ಸೆಬಾಸ್ಟಿಯನ್ ಹಗ್‌ ಅವರು ಮಾತನಾಡಿ, ಭಾರತಕ್ಕೆ ಎಲ್ಲ ರೀತಿಯ ನೆರವು ಮತ್ತು ತಾಂತ್ರಿಕ ಮಾಹಿತಿ ಹಂಚಿಕೊಳ್ಳಲು ನಮ್ಮ ದೇಶ ಸಿದ್ಧವಿದೆ. ಭಾರತಕ್ಕೆ 13 ಟನ್ ವೈದ್ಯಕೀಯ ವಸ್ತುಗಳ ನೆರವು ನೀಡಲಾಗಿದೆ. 600 ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಲಾಗಿದೆ. 40ಕ್ಕೂ ಹೆಚ್ಚು ಸ್ವಿಸ್ ಕಂಪನಿಗಳು ಭಾರತಕ್ಕೆ 7 ದಶಲಕ್ಷ  ಸ್ವಿಸ್ ಫ್ರಾಂಕ್ಗಳಷ್ಟು ನೆರವು ಕೊಟ್ಟಿವೆ ಎಂದರು.

    ಅಲ್ಲದೆ, ಜಾಗತಿಕ ಆವಿಷ್ಕಾರ ಪಾಲುದಾರ ಕೂಟದ ಸದಸ್ಯರು ಹೆಚ್ಚು ಹೆಚ್ಚು ಸಭೆಗಳನ್ನು ನಡೆಸುವ ಮೂಲಕ ನೆರವು ಮತ್ತು ಮಾಹಿತಿ ಹಂಚಿಕೆಗೆ ಹೆಚ್ಚು ಸಹಾಯಕವಾಗುತ್ತದೆ ಎಂದು ಸೆಬಾಸ್ಟಿಯನ್ ಹಗ್‌ ಸಲಹೆ ಮಾಡಿದರು. ಇದಕ್ಕೆ ಡಿಸಿಎಂ ಅವರು ಒಪ್ಪಿಗೆ ಸೂಚಿಸಿದರು.

    ನೆದರ್‌ಲ್ಯಾಂಡ್ಸ್:‌ಯಾವುದೇ ಸಂದರ್ಭದಲ್ಲೂ ನೆದರ್‌ಲ್ಯಾಂಡ್ಸ್ ಭಾರತದ ಜತೆ ಇರುತ್ತದೆ ಎಂದು ಆ ದೇಶದ ಕಾನ್ಸುಲೇಟ್‌ ಜನರಲ್‌ ಆದ ಗೆರ್ಟ್ ಹೈಜ್ಕೂಪ್ ಅವರು ಭರವಸೆ ನೀಡಿದರು. ಈಂಥ ಸಭೆಗಳನ್ನು ಹೆಚ್ಚೆಚ್ಚು ನಡೆಸಬೇಕು ಎಂದು ಸಲಹೆ ನೀಡಿದರಲ್ಲದೆ ನೆರೆಯ ಮಹಾರಾಷ್ಟ್ರದಲ್ಲಿ ರಾಯಭಾರ ಕಚೇರಿ ಮತ್ತು ದೂತಾವಾಸದ ಸಿಬ್ಬಂದಿಯನ್ನು ಅಗತ್ಯ ಸಿಬ್ಬಂದಿ ಎಂದು ಪರಿಗಣಿಸಲಾಗುತ್ತದೆ. ಕರ್ನಾಟಕವು ಹಾಗೆ ಪರಿಗಣಿಸಬೇಕು ಎಂದು ಕೋರಿದರು

    ಈಗಾಗಲೃ ನೆದರ್‌ಲ್ಯಾಂಡ್ಸ್ 3 ವಿಮಾನಗಳಷ್ಟು ವೈದ್ಯಕೀಯ ಸರಂಜಾಮುಗಳನ್ನು ಭಾರತಕ್ಕೆ ತಲುಪಿಸಿದೆ. ಫಿಲಿಪ್ಸ್ ಕಂಪನಿ ತಯಾರಿಸಿದ 10,000 ಆಮ್ಲಜನಕ ಸಾಂದ್ರಕಗಳನ್ನೂ ಕೂಡ ಒದಗಿಸಿದೆ ಎಂದು ಹೈಜ್ಕೂಪ್‌ ಮಾಹಿತಿ ನೀಡಿದರು.

    ಅಮೆರಿಕ:ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಚೆನ್ನೈನಲ್ಲಿರುವ ಅಮೆರಿಕನ್‌ ಕಾನ್ಸುಲೇಟ್‌ ಜನರಲ್‌ ಜುಡಿತ್ ರವಿನ್ ಅವರು, 100 ಮಿಲಿಯನ್ ಯುಎಸ್ ಡಾಲರ್‌ನಷ್ಟು ನೆರವು ನೀಡಲು ಅಮೆರಿಕ ಬದ್ಧವಾಗಿದೆ. ಆಮ್ಲಜನಕ, ವೈದ್ಯಕೀಯ ಸರಂಜಾಮು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಿದೆ. ಇದೆಲ್ಲವನ್ನೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಲಕ ಕೊಡಲಾಗುತ್ತಿದೆ ಎಂದರು.

    ಅಲ್ಲದೆ, ಭಾರತ-ಅಮೆರಿಕ ಜಂಟಿಯಾಗಿ ಕೋವಿಡ್‌ ಪರಿಹಾರ ನಿಧಿಗಾಗಿ ಕೆಲಸ ಮಾಡಲಿವೆ. ಭಾರತದಲ್ಲಿ 20 ದಶಲಲ್ಷ ಡೋಸ್‌ ಲಸಿಕೆ ತಯಾರಿಸಲು ಕೈಜೋಡಿಸಲಿದೆ ಎಂದು ಅವರು ತಿಳಿಸಿದರು.

    ಇನ್ನು ಇದೇ ಸಭೆಯಲ್ಲಿ ಮಾತನಾಡಿದ ಜರ್ಮನಿ ಕಾನ್ಸುಲೇಟ್‌ ಜನರಲ್‌ ಆಶಿಮ್‌ ಬರ್ಕಾಟ್‌ ಅವರು, ಸೋಂಕು ತಡೆಗಟ್ಟಲು ಕರ್ನಾಟಕದಲ್ಲಿ ಜಾರಿಗೆ ತಂದಿರುವ ಲಾಕ್‌ಡೌನ್‌ ಕ್ರಮ ಸರಿ ಇದೆ ಎಂದರಲ್ಲದೆ, ಭಾರತಕ್ಕೆ ಎಲ್ಲ ರೀತಿಯ ನೆರವು ನೀಡಲು ಜರ್ಮನಿ ಸಿದ್ಧವಿದೆ ಎಂದರು. ಇಸ್ರೇಲ್‌ ಕಾನ್ಸುಲೇಟ್‌ ಜನರಲ್‌ ಜೋನಾಥನ್‌ ಝಡ್ಕಾ, ಕೆನಡಾದ ನಿಕೋಲಾಸ್‌ ಗೆರಾರ್ಡ್‌, ಡೆನ್ಮಾರ್ಕ್‌ನ ಜೆ ಬೆಜೂರಿಮ್‌ ಹಾಗೂ ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ ಮುಮತಾದವರು ಮಾತನಾಡಿದರು.

    ಪ್ರಕೃತಿಸಂರಕ್ಷಣೆ ಮತ್ತು ಕರ್ತವ್ಯ ಬದ್ಧತೆ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ | ಧರೆ ಹತ್ತಿಉರಿದಡೆ ನಿಲಲು ಬಾರದು | ಏರಿ ನೀರುಂಬುಡೆ, ಬೇಲಿ ಕೆಯ್ಯ ಮೇವಡೆ | ನಾರಿ ತನ್ನ ಮನೆಯಲ್ಲಿ ಕಳುವಡೆ | ತಾಯ ಮೊಲೆಹಾಲು ನಂಜಾಗಿ ಕೊಲುವೆಡೆ | ಇನ್ನಾರಿಗೆ ದೂರುವೆ ಕೂಡಲ  ಸಂಗಮದೇವಾ |

    ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಹೊಣೆ  ನಮ್ಮೆಲ್ಲರ ಮೇಲೆ ಇರುತ್ತದೆ ಎಂಬುದನ್ನು ದಾರ್ಶನಿಕ ಬಸವಣ್ಣ  ಇಲ್ಲಿ ಉಲ್ಲೇಖಿಸಿರುವುದನ್ನು  ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ನೋಡಬಹುದು.

    ಜಾಗತಿಕ ತಾಪಮಾನದ ದಿಸೆಯಿಂದ ಭೂಮಿಯಲ್ಲಿ ಕೆಲವೆಡೆ ನಿಲ್ಲಲಾಗುತ್ತಿಲ್ಲ  ಬಿಸಿಲಿನ ತಾಪ ಸಹಿಸಲಾರದೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.. ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವೆ?  ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ? ಎಂಬಂತೆ ಭಿತ್ತಿ ಅರ್ಥಾತ್ ಭೂಮಿಯೇ ಇಲ್ಲದೆ ಇನ್ನೂ ಸರಳವಾಗಿ ಹೇಳುವುದಾದರೆ ಕೃಷಿ ಭೂಮಿಯೇ ಇಲ್ಲವಾದರೆ ನಾವು ಬೆಳೆಯುವುದಾದರು ಏನನ್ನು  ಎಂಬ ಪ್ರಶ್ನೆ ಏಳುತ್ತದೆ.

    ಅಕ್ರಮ ಭೂ ಒತ್ತುವರಿ, ಕೈಗಾರಿಕೆ,ನಿವೇಶನ,ರಸ್ತೆ ಇತ್ಯಾದಿ ಕಾರಣಕ್ಕೆ ಕೃಷಿ ಭೂಮಿ ಸವಕಲಾಗುತ್ತಿದೆ. ಕುಡಿಯುವ ನೀರು,ಸೇವಿಸುವ ವಾಯು ಅರ್ಥಾತ್ ಜೀವಜಲ  ಪ್ರಾಣವಾಯುವಿಗೂ ತತ್ವಾರ ಬಂದಿರುವ ಕಾಲವಿದು.  ಯದ್ವಾತದ್ವಾ ಬೋರ್ವೆಲ್ಗಳನ್ನು ಕೊರೆದು ನೀರನ್ನು ಪೋಲು ಮಾಡಿ ನೀರಿನ ಕುಡಿಯುವ ನೀರಿನ ಮಾರಾಟ ಪ್ರಾರಂಭವಾಗಿ ದಶಕಗಳೆ ಕಳೆದಿವೆ.  ನಮ್ಮ ಅನುಕೂಲಕ್ಕೆ   ಮರಗಳನ್ನು  ಹನನ  ಮಾಡಿ ಪ್ರಕೃತಿಯ ಮೇಲೆ  ಮನುಷ್ಯ ವಿಕೃತಅಟ್ಟಹಾಸ ಮೆರೆದಿದ್ದಾನೆ.

    ಸ್ವಚ್ಛ ಗಾಳಿಗೆ ಆಕ್ಸಿಜನ್  ಸೆಂಟರ್ ಗಳಿಗೆ ಹೋಗಬೇಕು ಅನ್ನುವ ಸುದ್ದಿ ಓದಿದ್ದೆವು ಕೇಳಿದ್ದೆವು ಹುಬ್ಬೇರಿಸಿದ್ದೆವು  ನಮ್ಮ ಮುಂದಿನ ತಲೆಮಾರಿಗೆ  ಇವೆಲ್ಲಾ ಎಂದು ಸುಮ್ಮನಿದ್ದೆವು, ಅದರೆ ಈಗ ಕೊರೊನಾ ಸಂದರ್ಭದಲ್ಲಿ ಈ  ಆಮ್ಲಜನಕವೇ ಇಲ್ಲದೆ  ಅನೇಕರು ಪ್ರಾಣಬಿಟ್ಟ ಸುದ್ದಿ ನಮ್ಮನ್ನು ಹೈರಾಣಾಗಿಸಿದೆ.   ನೂರಾರು ಸಾವಿರಾರು ಟನ್ಗಟ್ಟಲೆ ಆಕ್ಸಿಜನ್  ಉತ್ಪಾದನೆ ಆದರೂ   ಅವಶ್ಯಕತೆಗೆ ಲಭ್ಯವಿಲ್ಲದೆ ಇರುವುದು ಖೇದದ ಸಂಗತಿ.

    ಏರಿ ಅಂದರೆ ಕೆರೆಯ ನೀರನ್ನು ತಡೆಯುವ ಕಟ್ಟೆ ಎಂಬ ಅರ್ಥದಲ್ಲಿ ತೆಗೆದುಕೊಂಡರೆ  ಇಂದಿನ ಸಂದರ್ಭಕ್ಕೆ  ಮಾನವ ಸಂಪನ್ಮೂಲವನ್ನು ರಕ್ಷಣೆ ಮಾಡಬೇಕಾಗಿರುವ ಸರಕಾರ ಸರಕಾರದ ಅಂಗ ಸಂಸ್ಥೆಗಳು  ಎಂದು ತಿಳಿಯಬಹುದು.   ನಿನ್ನೆಯ  ವಿದ್ಯಾಮಾನಗಳನ್ನು ನೋಡಿದರೆ  ಅತೀವ ದುಃಖವಾಗುತ್ತದೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ.  ಜನರನ್ನು ರಕ್ಷಣೆ ಮಾಡುವ ಹೊಣೆ ಹೊತ್ತಿರುವ ವೈದ್ಯಕೀಯ ಸಿಬ್ಬಂದಿಯೇ  ಅಕ್ರಮದಲ್ಲಿ ಭಾಗಿಯಾಗಿರುವುದು ಇರುವ ಜೀವರಕ್ಷಕ ಔಷಧಿಗಳನ್ನು ತಾವೇ ಕಳವು ಮಾಡಿ ಕಾಳಸಂತೆಯಲ್ಲಿ  ಮಾರಾಟ ಮಾಡುತ್ತಿರುವುದು ಬೇಸರದ ಸಂಗತಿ.  

    ಕೊರೊನಾ ಸಂದರ್ಭಕ್ಕೆ  ಲಸಿಕೆಗಳು ಬಂದಿವೆ  ಇವುಗಳ ಅಭಾವವಾದರೆ ನಕಲಿ  ಲಸಿಕೆಗಳು ಮಾರುಕಟ್ಟೆಗೆ ಬರುತ್ತವೆ ಎಂಬ ಸುದ್ದಿ ತಿಳಿದು ಜೀವ ರಕ್ಷಕ ಮಾಡುವ ಔಷಧವೂ ಕಲಬೆರಕೆಯೆ  ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದನ್ನೆ ಅಲ್ಲವೇ  ತಾಯ ಹಾಲು ನಂಜಾಗುವುದು ಎನ್ನುವುದು  ಕಾಯುವ ಕೈಗಳೇ ಕೊಡಲಿ ಕಾವಾದಾರೆ ಮಲಗುವ ನೆಲವೆ  ಪ್ರಾಣ ರಕ್ಷಣೇ ಮಾಡಬೇಕಾದ ಹಾಸಿಗೆಗಳೆ ಮೃತ್ಯುಕೂಪವಾದರೆ  ಇನ್ನೆಲ್ಲಿ  ನಮ್ಮ ಸಂಕಷ್ಟಗಳ  ಪರಿಹಾರ ಎಂಬ ಪ್ರಶ್ನೆ ಕಾಡುತ್ತದೆ.   

    ಪ್ರಾಕೃತಿಕ ಸಂಪತ್ತನ್ನು ರಕ್ಷಣೆ ಮಾಡುವ ಉತ್ತರದಾಯಿತ್ವ ಎಲ್ಲರದ್ದಾಗಿದೆ ಮತ್ತು ಅಧಿಕಾರ ಹೊಂದಿದ ಕೇಂದ್ರಗಳು  ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದೆ  ಬದ್ಧತೆಯಿಂದ  ಇರಬೇಕು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು.  

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಕಂಡಿದ್ದು ಸತ್ಯವಲ್ಲ- ಕೈಗೆ ಎಟುಕಿಸಿಕೊಂಡಿದ್ದೇ ಸತ್ಯ

    ಈಗಿನ ಅನಿಶ್ಷಿತತೆಯ ಸಮಯದಲ್ಲಿ ಹೆಚ್ಚಿನವರ ಗಮನ ಶೀಘ್ರ ಹಣ ಸಂಪಾದನೆಯಾಗಿದೆ. ಎಷ್ಠು ಸುಲಭವಾಗಿ, ತ್ವರಿತವಾಗಿ ಹಣ ಸಂಪಾದನೆ ಮಾಡಬಹುದು ಎಂಬ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಷೇರುಪೇಟೆಯೂ ಇದಕ್ಕೆ ಹೊರತಲ್ಲ.

    ಷೇರುಪೇಟೆಯ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕಾದ ಸರಳ ಸಮೀಕರಣವೆಂದರೆ PFT Module ಅಂದರೆ Practical, Fundmental, Tehnicals ವಿಧ. ಪ್ರಸ್ತುತ ಸಂದರ್ಭದಲ್ಲಿ ಅಂತರ್ಗತವಾಗಿ ಅಡಕವಾಗಿರುವ ಮೂಲಭೂತಾಂಶಗಳನ್ನು ಆಧರಿಸಿ ಜೊತೆಗೆ ಪೇಟೆ ಒದಗಿಸುವ ಕ್ಷಣಿಕ, ಅಲ್ಪಕಾಲಿಕ ಅವಕಾಶಗಳನ್ನು ಬಳಸಿಕೊಂಡಲ್ಲಿ ಮಾತ್ರ ಷೇರುಪೇಟೆಯಲ್ಲಿ ಸ್ವಲ್ಪ ಮಟ್ಟಿನ ಸುರಕ್ಷತೆಯೊಂದಿಗೆ ಬಂಡವಾಳ ಬೆಳೆಸಲು ಸಾಧ್ಯ. ದೀರ್ಘಕಾಲೀನ ಹೂಡಿಕೆಯಿಂದ ಮಾತ್ರ ಹೆಚ್ಚಿನ ಲಾಭ ಪಡೆಯಬಹುದು ಎಂಬ ಪರಿಕಲ್ಪನೆ ಹೆಚ್ಚಿನವರಲ್ಲಿದೆ. ಷೇರುಪೇಟೆಯ ಸೂಚ್ಯಂಕಗಳು ಗರಿಷ್ಠದಲ್ಲಿರುವ ಈ ಸಮಯದಲ್ಲಿ ಹೂಡಿಕೆಗೆ ಅಂಟಿಕೊಳ್ಳದೆ ವ್ಯವಹಾರಿಕತೆಯತ್ತ ಒಲವು ತೋರುವುದು ಒಳಿತು.

    ತ್ವರಿತ ಲಾಭ ತಂದ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌

    ಸೆಪ್ಟೆಂಬರ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.166 ರಂತೆ ಐಪಿಒ ಮೂಲಕ ಸಾರ್ವಜನಿಕ ಷೇರು ವಿತರಣೆ ಮಾಡಿದ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಕಂಪನಿಯು ತನ್ನ ಷೇರುದಾರರಿಗೆ ಎಂತಹ ಅದ್ಭುತವಾದ ಲಾಭವನ್ನು ತಂದುಕೊಟ್ಟಿದೆ ಎಂದರೆ ಈ ತಿಂಗಳ 10 ರಂದು ರೂ.868 ರವರೆಗೂ ಜಿಗಿತ ಕಂಡಿದೆ. ಈ ಷೇರು ಆರಂಭಿಕ ದಿನಗಳಲ್ಲಿ ರೂ.286 ರಿಂದ ಆರಂಭವಾಗಿ ಕ್ರಮೇಣ ಏರಿಕೆಯ ಪಥದಲ್ಲಿ ಸಾಗಿ ಈ ಹಂತವನ್ನು ತಲುಪಿದೆ. ಕೇವಲ ಕೆಲವೇ ತಿಂಗಳಲ್ಲಿ ಪೇಟೆಯು ಎರಡಕ್ಕೂ ಹೆಚ್ಚು ಪಟ್ಟು ಲಾಭ ಗಳಿಸಿಕೊಟ್ಟಿದೆ. 10 ರಂದು ರೂ.868 ನ್ನು ತಲುಪಿದ ಈ ಷೇರು 14 ರಂದು ರೂ.720 ಕ್ಕೆ ಕುಸಿದು ರೂ.728 ರ ಸಮೀಪ ಕೊನೆಗೊಂಡಿದೆ. ಕಂಪನಿಯ ಪ್ರವರ್ತಕರನ್ನಾಧರಿಸಿ, ಉಜ್ವಲ ಭವಿಷ್ಯದ ನಿರೀಕ್ಷೆಯಿಂದ ಹೂಡಿಕೆದಾರರ ಬೆಂಬಲ ಹೆಚ್ಚಾಗಿ ಏರಿಕೆ ಕಂಡಿದೆ. ರೂ.300-400 ರ ಸಮೀಪ ಖರೀದಿ ಮಾಡಿದವರೂ ಸಹ ರೂ.860 ದಾಟಿದಾಗ ಮಾರಾಟ ಮಾಡಲು ನಿರುತ್ಸಾಹ ತೋರಲು ಕಾರಣ ಮೈಂಡ್‌ ಟ್ರೀ ಷೇರಿನ ಬೆಲೆಯಾಗಿದೆ. ಆದರೆ ಈಗಿನ ಅಲ್ಪ ಬಡ್ಡಿ ಯುಗದಲ್ಲಿ ಈ ರೀತಿ ಅನಿರೀಕ್ಷಿತ ಲಾಭದ ಇಳುವರಿ ದೊರೆತಾಗ ಲಾಭದ ನಗದೀಕರಣ ಸುರಕ್ಷಿತ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.

    ದೀರ್ಘ ಕಾಲದ ನಂತರ ಮರಳಿಬಂದ ಅಸಲು : ಜಿ ಎನ್‌ ಎಫ್‌ ಸಿ ಲಿಮಿಟೆಡ್

    ಈ ಷೇರಿನ ಬೆಲೆ ರೂ.390 ರ ಸಮೀಪವಿದ್ದು ಈ ತಿಂಗಳ 12 ರಂದು ಷೇರಿನ ಬೆಲೆ ರೂ.425 ನ್ನು ತಲುಪಿ ವಾರ್ಷಿಕ ಗರಿಷ್ಠದ ಸಂಭ್ರಮ ಮೂಡಿಸಿತು. ಹಿಂದಿನ ವರ್ಷ ಸುಮಾರು ರೂ.100 ರ ಕನಿಷ್ಠದಲ್ಲಿದ್ದು, ಈ ವರ್ಷ ರೂ.200 ರ ಸಮೀಪದಿಂದ ಕೆಲವೇ ತಿಂಗಳುಗಳಲ್ಲಿ ರೂ.425 ಕ್ಕೆ ಜಿಗಿತ ಕಂಡಿರುವುದು ಹಲವಾರು ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ. ಆದರೆ ಈಗಿನ ಬೆಲೆ ಸುಮಾರು ರೂ.400 ರಲ್ಲಿ ಖರೀದಿಮಾಡಿದಲ್ಲಿ ಅದು ಉತ್ತಮ ಹೂಡಿಕೆಯಾಗಬಹುದೇ? ಎಂಬ ಚಿಂತನೆ ಹಲವರಲ್ಲಿದೆ. ಅಂತಹವರ ಗಮನಕ್ಕೆ ಈ ಕೆಳಗಿನ ಅಂಶಗಳನ್ನು ತರಬಯಸುತ್ತೇನೆ.

    ಜಿ ಎನ್‌ ಎಫ್‌ ಸಿ ಷೇರಿನ ಬೆಲೆ 2018 ರಲ್ಲಿ ರೂ.547 ರವರೆಗೂ ಏರಿಕೆ ಕಂಡಿತ್ತು. ಆ ವರ್ಷ ರೂ.425 ರ ಸಮೀಪ ಖರೀದಿ ಮಾಡಿದವರು ಈಗಲೂ ಪರಿತಪಿಸುತ್ತಿದ್ದಾರೆ. 2018 ರ ನಂತರದಲ್ಲಿ ಈ ಷೇರಿನ ಬೆಲೆ ರೂ.96 ರವರೆಗೂ ಕುಸಿದಿದ್ದು ಅಲ್ಲಿಂದ ಈ ವರ್ಷ ರೂ.425 ನ್ನು ತಲುಪಿ ಮತ್ತೆ ಜಾರಿದೆ. ಅಂದರೆ ಷೇರುಪೇಟೆಯಲ್ಲಿ ಷೇರಿನ ದರಗಳು ನಿಂತ ನೀರಿನಂತಲ್ಲ, ಸದಾ ಹರಿಯುತ್ತಿರುತ್ತವೆ. ಹರಿಯುವ ದಿಶೆಯನ್ನಾಧರಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಅರಿವು, ಕೌಶಲ್ಯಗಳ ಅಗತ್ಯ ಹೆಚ್ಚಾಗಿದೆ. ಷೇರುಪೇಟೆಯು ಜೂಜಾಟ ಎಂಬ ಭಾವನೆಯಲ್ಲಿರುವವರಿಗೆ ಇದು ಉತ್ತರವನ್ನು ನೀಡುವಂತಿದೆ. ಜೂಜಾಟದಲ್ಲಿ ಹಣವು ಸಂಪೂರ್ಣವಾಗಿ ನಶಿಸುವುದು ಇಲ್ಲ ಆದಾಯ ತರುವುದು. ಆದರೆ ಷೇರುಪೇಟೆಯಲ್ಲಿ ಹೂಡಿಕೆ ಉತ್ತಮ ಕಂಪನಿಗಳಲ್ಲಾಗಿದ್ದರೆ ಪೇಟೆಯಲ್ಲಿ ಷೇರಿನ ದರಗಳು ಕುಸಿದರೂ, ಕಂಪನಿ ಉತ್ತಮವಾಗಿದ್ದರೆ, ಷೇರಿನ ದರಗಳು ಪುಟಿದೇಳುವ ಸಾಧ್ಯತೆ ಹೆಚ್ಚಿರುತ್ತದೆ.

    ದೀರ್ಘಕಾಲೀನವೋ ಶಾಶ್ವತವೋ : ಬಜಾಜ್‌ ಹಿಂದೂಸ್ಥಾನ್‌ ಶುಗರ್ ಲಿಮಿಟೆಡ್

    ಈ ಷೇರಿನ ಬೆಲೆ ಶುಕ್ರವಾರ ರೂ.14.28 ರ ವಾರ್ಷಿಕ ಗರಿಷ್ಠ ದಾಖಲಿಸಿ ನಂತರ ರೂ.12.92 ರ ಲೋವರ್‌ ಸರ್ಕ್ಯೂಟ್‌ ನಲ್ಲಿ ಕೊನೆಗೊಂಡಿದೆ. ರೂ.3.77 ಈ ಷೇರಿನ ವಾರ್ಷಿಕ ಕನಿಷ್ಠ ಬೆಲೆಯಾಗಿದೆ. ಅಂದರೆ ಈ ವರ್ಷದ ಕೆಲವು ತಿಂಗಳ ಹಿಂದೆ ಖರೀದಿ ಮಾಡಿದವರು ಅಧಿಕ ಲಾಭ ಗಳಿಸಿದಂತಾಗಿದೆ. ಓದುಗರ ಗಮನಕ್ಕೆ ಕೆಲವು ಅಂಶಗಳನ್ನು ತರಬಯಸುತ್ತೇನೆ. ಈ ಷೇರಿನ ಬೆಲೆ ರೂ.1 ಅಗಿದ್ದು 2020 ರಲ್ಲಿ ವರ್ಷಪೂರ್ತಿ ಒಂದಂಕಿಯಲ್ಲಿ ವಹಿವಾಟಾಗುತ್ತಿತ್ತು. ಸೋಜಿಗವೆಂದರೆ ಈ ಷೇರು 2010 ರಲ್ಲಿ ರೂ.240 ಕ್ಕೂ ಹೆಚ್ಚಿತ್ತು. 2006 ರಲ್ಲಿ ಈ ಷೇರಿನ ಬೆಲೆ ರೂ.568 ರಲ್ಲಿತ್ತು. ಅಲ್ಲಿಂದ ನಿರಂತರವಾಗಿ ಇಳಿಯುತ್ತಲೇ ಬಂದಿದೆ. 2010 ರಲ್ಲಿ ಹೂಡಿಕೆ ಮಾಡಿದವರಿಗೆ ಬಂಡವಾಳ ಹೇಗೆ ಕರಗಿಹೋಯಿತೆಂದರೆ, ಅವರು ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದ ಕಂಪನಿಯಲ್ಲಿ ಶಾಶ್ವತ ಹೂಡಿಕೆದಾರರಾಗಿದ್ದಾರೆ.

    ಟಾಟಾ ಕೆಮಿಕಲ್ಸ್‌ ಲಿಮಿಟೆಡ್‌ :

    ಸರಕು ರಸಾಯನಿಕಗಳನ್ನುತ್ಪಾದಿಸುವ ಈ ಕಂಪನಿ ಕಳೆದ ಒಂದು ತಿಂಗಳಿನಲ್ಲಿ ರೂ.800 ರ ಸಮೀಪದಿಂದ ರೂ.670 ರವರೆಗೂ ಇಳಿಕೆ ಕಂಡು ನಂತರ ಚೇತರಿಗೆ ಕಂಡು ಶುಕ್ರವಾರ 14 ರಂದು ರೂ.733 ನ್ನು ತಲುಪಿ ರೂ.702 ರ ಸಮೀಪ ಕೊನೆಗೊಂಡಿದೆ. ಪ್ರತಿ ಷೇರಿಗೆ ರೂ.10 ರಂತೆ ಲಾಭಾಂಶ ಘೋಷಿಸಿದೆ. ಡಿವಿಡೆಂಡ್‌ ನ್ನು ವಿತರಿಸಲು ಸುಮಾರು ಇನ್ನು ಒಂದು ತಿಂಗಳ ಸಮಯವಿರುವುದರಿಂದ ಮುಂದಿನ ದಿನಗಳಲ್ಲಿ ಚೇತರಿಕೆಯ ಚಟುವಟಿಕೆ ಪ್ರದರ್ಶಿತವಾಗಬಹುದು. ಬೇಗ ಬೇಗ ಡ್ರಾ ಬೇಗ ಬೇಗ ಹಣ ಎಂಬ ಹಂತದಲ್ಲಿರುವುದೇ ಕಾದು ನೋಡಬೇಕು.

    ಪಿರಮಲ್‌ ಎಂಟರ್‌ ಪ್ರೈಸಸ್‌ ಲಿಮಿಟೆಡ್:

    ಸುಮಾರು ರೂ.1,630 ರ ಸಮೀಪ ವಹಿವಾಟಾಗುತ್ತಿರುವ ಈ ಷೇರು ಮಾರ್ಚ್‌ 2021 ರ ತ್ರೈಮಾಸಿಕದಲ್ಲಿ ಲಾಭ ಗಳಿಸಿದೆ. ಫಾರ್ಮಾ ಮತ್ತು ವಿತ್ತೀಯ ವಲಯದಲ್ಲಿ ಗುರುತಿಸಿಕೊಂಡಿರುವ ಈ ಕಂಪನಿ 2020 ರಲ್ಲಿ ಪ್ರತಿ ಷೇರಿಗೆ ರೂ.14 ರಂತೆ ಡಿವಿಡೆಂಡ್‌ ವಿತರಿಸಿತ್ತು ಈ ವರ್ಷ ಪ್ರತಿ ಷೇರಿಗೆ ರೂ.33 ರಂತೆ ಡಿವಿಡೆಂಡ್‌ ಘೋಷಿಸಿದೆ. ಮಾರ್ಚ್‌ ತಿಂಗಳಲ್ಲಿ ರೂ.2,000 ದ ಸಮೀಪವಿದ್ದ ಈ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.1,760 ರ ಸಮೀಪದಿಂದ ಕುಸಿದಿದೆ. ಇದು ಹೈ ಬೀಟಾ ಸ್ಟಾಕ್‌ ಎಂಬುವ ರೀತಿಯಲ್ಲಿ ಏರಿಳಿತ ಪ್ರದರ್ಶಿಸುವ ಈ ಷೇರು ಅಲ್ಪಾವಧಿಯ ಹೂಡಿಕೆಗೆ ಉತ್ತಮವೆನಿಸುತ್ತದೆ. ಕಾದು ನೋಡೋಣ.

    ಪ್ರಮುಖ ಕಂಪನಿಗಳನೇಕವು ಇತ್ತೀಚಿನ ದಿನಗಳಲ್ಲಿ ರಭಸದ ಏರಿಕೆ ಕಂಡು ಸ್ಥಿರತೆ ಕಾಣದೆ ಜಾರಿವೆ. ಎನ್‌ ಎಂ ಡಿ ಸಿ ರೂ.135 ರ ಸಮೀಪದಿಂದ ರೂ.213 ರವರೆಗೂ ಏರಿಕೆ ಕಂಡು, ರೂ.185 ಕ್ಕೆ ಕುಸಿದಿರುವ ವೇಗ, ಬಲರಾಂಪುರ್‌ ಚಿನ್ನಿ ಮಿಲ್ಸ್‌ ರೂ.230 ರ ಸಮೀಪದಿಂದ ರೂ.348 ಕ್ಕೆ ಏರಿಕೆ ಕಂಡು ರೂ.300 ಕ್ಕೆ ಕುಸಿದ ರೀತಿ, ಟಾಟಾ ಸ್ಟೀಲ್‌ ಷೇರು ಒಂದೇ ತಿಂಗಳಲ್ಲಿ ರೂ.854 ಸಮೀಪದಿಂದ ರೂ.1.246 ನ್ನು ತಲುಪಿ ರೂ.1,130 ಕ್ಕೆ ಕುಸಿದ ಶೈಲಿ ಕಂಡಾಗ ಕಣ್ಣಿಗೆ ಕಂಡಿದ್ದು ಸತ್ಯವಲ್ಲ- ಕೈಗೆ ಎಟುಕಿಸಿಕೊಂಡಿರುವುದೇ ಸತ್ಯವೆಂದು ಸಾರುವಂತಿದೆ.

    error: Content is protected !!