26.4 C
Karnataka
Saturday, May 11, 2024

    ಟೀವಿ ಠೀವಿ

    Must read

    ಮಹಡಿಯ ಮೇಲೆ ಎತ್ತರದ ಕಬ್ಬಿಣದ ಪೈಪು. ಅದರ ತುದಿಯಲ್ಲಿ ಸಣ್ಣದು ಪಕ್ಕದಲ್ಲೇ ಸ್ವಲ್ಪ ದೊಡ್ಡದು ಅದರ ಪಕ್ಕದಲ್ಲಿ ಇನ್ನೂ ಸ್ವಲ್ಪ ದೊಡ್ಡದು…. ಹೀಗೆ ಸಾಲಾಗಿ ಜೋಡಿಸಿದಂತೆ ಕಾಣುವ ಹತ್ತನ್ನೆರಡು ಸಣ್ಣ ಅಲ್ಯೂಮಿನಿಯಂ ಪೈಪುಗಳಿಂದ ತಯಾರಾದ ಆ್ಯಂಟೆನಾ . ಅದನ್ನ ಐದಾರು ಮಂದಿ ಲೋಹದ ತಂತಿಯಿಂದ ಒಂದು ದಿಕ್ಕಿಗೆ ಗುರಿಯಾಗಿಸಿ ಕಟ್ಟುತ್ತಿದ್ದಾರೆ .ಕೆಳಗೆ ನಿಂತಿರುವವರು ಒಮ್ಮೆ ಮನೆಯ ಕಡೆ ಮತ್ತೊಮ್ಮೆ ಮಹಡಿಯ ಕಡೆ ನೋಡುತ್ತಾ …. ಬಂತಾ …..ಇಲ್ಲ….ಈಗ ನೋಡು …ಇಲ್ಲ …. ಸ್ವಲ್ಪ ಸ್ವಲ್ಪ ಬರ್ತಿದೆ….ಹಾಂ ಬಂತು ಬಂತು . ಸಾಕು ಕಟ್ಬಿಡಿ . ಹೀಗೆ ಪರಸ್ಪರ ಏರು ಧ್ವನಿಯಲ್ಲಿ ಕೂಗಾಡುತ್ತಿದ್ದಾರೆಂದರೆ ಅವರ ಮನೆಗೆ ಹೊಚ್ಚ ಹೊಸ ಟೀವಿ ಬಂದಿದೆ ಎಂದರ್ಥ .

    ಆಗೆಲ್ಲಾ ಇಂತಾವ್ರ ಮನೆಗೆ ಟೀವಿ ತಂದ್ರಂತೆ ಅನ್ನೋದು ದೊಡ್ಡ ವಿಷಯ . ಆ ಮನೆಯ ಮಕ್ಕಳನ್ನು ಬಡಾವಣೆಯ ಪ್ರತಿಯೊಬ್ಬರೂ ಏನೋ ಹೊಸಾ ಟೀವಿ ತಂದ್ರಂತೆ ಅಂತ ವಿಚಾರಿಸೋವ್ರು . ಮನೆಯ ಯಜಮಾನರಂತೂ…. ಟೀವಿಗೆ ಎಷ್ಟು ಬಿತ್ತು ? ಸ್ಟೆಬಲೈಸರ್ಗೆಷ್ಟು ? ಯಾವ ಕಂಪನಿ ? ಎಲ್ಲಿಂದ ತಂದಿದ್ದು ? ಹೆಂಗ್ ತಂದಿದ್ದು ? …ಹೀಗೆ ಕಂಡಕಂಡಲ್ಲಿ ಪ್ರಶ್ನೆಗಳ ಸುರಿಮಳೆಗೆಯ್ಯೋವ್ರು .
    ಆಗ ಡಯೋನೊರಾ , ಬುಷ್ , ಬಿ ಪಿ ಎಲ್ , ಒನೀಡಾ ಈ ಪ್ರಮುಖ ಕಂಪನಿಗಳದ್ದೇ ಪಾರುಪತ್ಯ .

    ಟೀವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮಗಳೂ ಹಾಗೇ ಇರುತ್ತಿದ್ದವು ವಾರದಲ್ಲಿ ಏನೇನು ಬರುತ್ತೆ ಅನ್ನೋ ‘ ಮುನ್ನೋಟ ‘ . ಹಿಂದಿನ ವಾರದಲ್ಲಿ ಏನೇನು ನಡೆದಿದೆ ಅನ್ನೋದಕ್ಕೆ ‘ ಸುತ್ತಮುತ್ತ ‘ . ಬುಧವಾರ ಸಂಜೆಯ ಚಿತ್ರಮಂಜರಿ ಅದರ ಕೊನೆಯಲ್ಲಿ ಶನಿವಾರ ಸಂಜೆ ಪ್ರಸಾರವಾಗುವ ಕನ್ನಡ ಚಲನಚಿತ್ರ ಯಾವುದು ಅಂತ ತಿಳಿಸೋವ್ರು.
    ಭಾನುವಾರ ಸಂಜೆ ಒಂದು ಹಿಂದಿ ಚಿತ್ರ . ವಾರದ ಮಧ್ಯೆ ಜೈಯಂಟ್ ರೋಬೊರ್ಟ್ , ವಿಕ್ರಮ್ ಔರ್ ಬೇತಾಳ್ , ಮಿಕ್ಕಿ ಅಂಡ್ ಡೊನಾಲ್ಡ್‌ ಎಂಬ ಮಕ್ಕಳ ಪ್ರೊಗ್ರಾಮುಗಳು .ಬುನಿಯಾದ್ , ನುಕ್ಕಡ್ , ಯಹೀ ತೋ ಹೈ ಝಿಂದಗಿ ಎಂಬ ಹಿಂದಿ ಸೀರಿಯಲ್ಗಳು .

    ನಮ್ಮ ಕನ್ನಡದ…. ಕಂಡಕ್ಟರ್ ಕರಿಯಪ್ಪ , ಸಿಹಿ ಕಹಿ , ಗುಡ್ಡದ ಭೂತ , ಸ್ಪೋಟ , ಕ್ರೇಝಿ ಕರ್ನಲ್ ಧಾರಾವಾಹಿಗಳು .ಕಾರ್ಯಕ್ರಮಗಳು ಎಷ್ಟು ಚೆನ್ನಾಗಿತ್ತು ಅಂದ್ರೆ ಅವು ಪ್ರಸಾರವಾಗಿ ದಶಕಗಳೇ ಕಳೆದಿದ್ದರೂ ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ .

    ಟೀವಿ ಇರೊವ್ರ ಮನೆಯಲ್ಲಿ ಆ ಬೀದಿಯ ಬಹುತೇಕ ಮಂದಿ ಕಿಕ್ಕಿರುದು ತುಂಬಿರೋವ್ರು . ಸಿನಿಮಾ ಮಧ್ಯೆ ಹತ್ತು ನಿಮಿಷ ವಾರ್ತೆಗಳು ಬರೋದು, ಮಕ್ಕಳಂತೂ ಎದ್ದು ಹೋದ್ರೆ ಪುನಃ ಎಲ್ಲಿ ಜಾಗ ಸಿಗಲ್ವೋ ಅಂತ ಕುಂತೇ ಇದ್ದು ಸಿನಿಮಾ ಮುಗಿದ ಮೇಲೆ ಎದ್ದು ಹೋಗೊವ್ರು .
    ವಾರದಿಂದ ಕಾದುಕೊಂಡಿದ್ದು ತುಂಬಾನೇ ಇಷ್ಟ ಪಟ್ಟು ನೋಡ್ತಿದ್ದ ಸನ್ನಿವೇಶದಲ್ಲೇ ಈ ಕರೆಂಟ್ ಹೋಗಿಬಿಡೋದು, ಅದ್ಯಾವಾಗ್ ಬರುತ್ತೊ ಹೇಳಕ್ಕಾಗ್ತಿರಲಿಲ್ಲ . ಎಷ್ಟು ಬೇಜಾರಾಗೋದು ಅಂದ್ರೆ… ಹೆಂಗಸ್ರು ಮಕ್ಕಳು ಹಿರಿಯರು ಕಿರಿಯರಯಾದಿಯಾಗಿ ಪ್ರತಿಯೊಬ್ರೂ ಅಂದಿನ ಕೆ ಇ ಬಿ ಯವರಿಗೆ ಶಾಪ ಹಾಕೋವ್ರು . ಕರೆಂಟ್ ಬಂದಾಗ ಆಗೋ ಖುಷಿಯಿತ್ತಲ್ಲ ನಿಜವಾಗ್ಲೂ ಕರೆಂಟ್ ಕಂಡುಹಿಡಿದವರಿಗೂ ಆ ಖುಷಿ ಆಗಿರಲಿಕ್ಕಿಲ್ಲ ಹಂಗ್ ಚೀರ್ತಿದ್ವಿ .

    ಇದೆಲ್ಲದರ ಮಧ್ಯೆ ಕೆಲವರು ರಾತ್ರೋರಾತ್ರಿ ತಮ್ಮ ಮನೆಯ ಟೀವಿಗೆ ಮೂರು ಕಲರಿನ ಗಾಜು ಮುಖವಾಡವೊಂದನ್ನು ತಂದು ತಗುಲಿಸಿಬಿಡುತ್ತಿದ್ದರು. ಮೊದಲಿಗೆ ನಾವು ಅದನ್ನೇ ಕಲರ್ ಟೀವಿ ಎಂದು ಯಾಮಾರಿದ್ದೆವು. ನಂತರ ಬಂತು ನೋಡಿ ಬಜಾರಿಗೆ ಕಲರ್ ಟೀವಿ ಜಗತ್ತಿನಾದ್ಯಂತ ಸಂಚಲವನ್ನೇ ಸೃಷ್ಟಿ ಮಾಡಿಬಿಟ್ಟಿತು.

    ಮನೆಗಳಲ್ಲಿ ಹಿರಿಯರು ಟೀವಿಯನ್ನು ಟೀಬಿ ಎಂದು ಖಾಯಿಲೆಯ ಹೆಸರಿನಿಂದ ಕರೆಯವ್ರು ಅವರು ಅದ್ಯಾವ ಬಾಯಲ್ಲಿ ಹಾಗೆ ಕರೆದರೋ, ಟೀವಿ ನಿಜಕ್ಕೂ ಖಾಯಿಲೆಯಂತೆಯೇ ಆವರಿಸಿಕೊಂಡುಬಿಟ್ಟಿತ್ತು .ನಂತರದ ವರುಷಗಳಲ್ಲಿ ಅದ್ಯಾಕೋ ಜನರಿಗೆ ದೂರದರ್ಶನದ ಮೇಲಿದ್ದ ಪ್ರೀತಿ ಆಸಕ್ತಿ ಕ್ರಮೇಣ ದೂರವಾಗುತ್ತಾ ಹೋಯಿತು.

    ಹಿಂದೆಲ್ಲಾ ಒಂದೇ ಟೀವಿ ಒಂದೇ ಚಾನಲ್ಲು ಹಲವು ಮನೆ ಮನಗಳನ್ನು ಒಂದು ಮಾಡಿತ್ತು ಇಂದು ಮನೆಗೆ ಎರಡು ಮೂರು ಟೀವಿಗಳಿದ್ದು ಸಾವಿರಾರು ಚಾನಲ್ಗಳಿದ್ದರೂ ಯಾರನ್ನೂ ಒಂದು ಮಾಡಿಲ್ಲ. ಬದಲಾಗಿ ಪ್ರತ್ಯೇಕಿಸಿದೆ.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    5 COMMENTS

    1. ನಿಮ್ಮ ಬರಹದಲ್ಲಿನ ಪ್ರತಿಯೊಂದು ಸಂಗತಿ ಅಕ್ಷರಶಃ ಸತ್ಯ ಸರ್. ನಮ್ಮನೆಯಲ್ಲಿಯೂ ಈ ಅನುಭವಗಳು ಆಗಿವೆ

    2. ಮಾಸ್ತಿಯವರ ಬರವಣಿಗೆಯ ಠೀವಿ… ಅಂದಿನ ಟಿವಿ ನೋಡುವ ಗಮ್ಮತಿಗೆ ಹೋಲಿಸಬಹುದು… ಹಳೆಯ ನೆನಪುಗಳು… ಕಾರೋನೋ (ಈಗಿನ ಕರೋನ ಅಲ್ಲ ) ಟಿವಿ ಕೂಡ ಫೇಮಸ್

      ಪೋರ್ಟೇಬಲ್ ಟಿವಿ
      ಡ್ಯಾನೊರ… ನೈಬರ್ ಎನಿಮಿ ಓನರ್ ಪ್ರೈಡ್
      ಭಾನುವಾರ ರಾಮಾಯಣ
      ಗುರುವಾರ ಕನ್ನಡ ಹಾಡುಗಳು

      ಇನ್ನೂ ಎಷ್ಟೆಷ್ಟು…👌

    3. ಮಳೆಗಾಲದಲ್ಲಿ ಬೀಸುವ ಗಾಳಿಯ ಬಿರುಸಿಗೆ ಹಲಸಿನ ಮರದ ತುದಿಯಲ್ಲಿ ಕಟ್ಟಿದ ಆಂಟೇನಾ ತಿರುಗಿ ಟಿವಿ ಕಾಣದಿದ್ದೂ ಇದೆ

    LEAVE A REPLY

    Please enter your comment!
    Please enter your name here

    Latest article

    error: Content is protected !!