35 C
Karnataka
Saturday, May 11, 2024

    ನೀವೇ ಗಳಿಸಿದ ಹಣ ಬಳಸುವುದರಲ್ಲಿ ಜಿಪುಣರಾಗದೆ ನಿಪುಣರಾಗಬೇಕು

    Must read


    ಕಷ್ಟಪಟ್ಟು ದುಡಿದು ಗಳಿಸಿ ಉಳಿತಾಯ ಮಾಡಿದ ಹಣವನ್ನು ಉಪಯೋಗಿಸಲು ಜೀವನದಲ್ಲಿ ಜಿಪುಣತನ ಮಾಡದೆ ನಿಪುಣರಾಗಬೇಕು. ಉಳಿಸುವ ಸಲುವಾಗಿ ಉಳಿಸಬೇಡಿ . ಗಳಿಸಿ ಉಳಿಸಿದ ಸಂಪತ್ತನ್ನು ಅಗತ್ಯಬಿದ್ದಲ್ಲಿ ಬಳಸುವುದು ಸೂಕ್ತ.

    ನನ್ನ ಸ್ನೇಹಿತರೊಬ್ಬರು ಹತ್ತು ವರ್ಷಗಳ ಹಿಂದೆ ನಿವೃತ್ತರಾದರು. ಈಚೆಗೆ ಅವರು ತುಂಬಾ ಖಿನ್ನರಾಗಿರುತ್ತಿದ್ದರು. ಯಾಕೋ ಇತ್ತೀಚೆಗೆ ಡಲ್ ಆಗಿ ಇರುತ್ತೀರಲ್ಲ ಅಂತ ಒಂದು ಬೆಳಗಿನ ವಾಕಿಂಗ್ ಸಮಯದಲ್ಲಿ ಕೇಳಿದೆ. ಅವರ ಖಿನ್ನತೆಗೆ ಕಾರಣ ಬಡ್ಡಿದರ ಎನ್ನುವುದು ಗೊತ್ತಾಯಿತು.

    ಇತ್ತೀಚಿನ ದಿನದಲ್ಲಿ ಆ ದರ ಇಳಿಮುಖವಾಗಿದ್ದರಿಂದ ಅವರ ಆದಾಯ ದಿನದಿನಕ್ಕೆ ಕ್ಷೀಣಿಸುತ್ತಿದೆ. ಹಾಗಾಗಿ ದಿನನಿತ್ಯದ ಖರ್ಚು ವೆಚ್ಚಕ್ಕೆ ತೊಂದರೆಯಾಗುತ್ತಿದೆ ಎನ್ನುವುದು ಅವರ ಆತಂಕಕ್ಕೆ ಕಾರಣವಾಗಿತ್ತು. . ಇದು ನಿಜಕ್ಕೂ ಯೋಚಿಸುವ ಸಂಗತಿ. ಅವರು ತಮ್ಮ ಹಣಕಾಸು ಸಲಹೆಗಾರರನನ್ನು ಕೇಳಿದಾಗ ಡಿಪಾಸಿಟ್ ಮೊತ್ತವನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ್ದಾರೆ. ಆದರೆ ಡಿಪಾಸಿಟ್ ಮೊತ್ತ ಹೆಚ್ಚಿಸಲು ಹಣವಿರಬೇಕಲ್ಲ. ನಿವೃತ್ತಿಯಾದ ಸಮಯದಲ್ಲಿ ಬರುವ ದೊಡ್ಡ ಮೊತ್ತ ಮತ್ತೆ ಮತ್ತೆ ಬರುವುದಿಲ್ಲ ನೋಡಿ , ಹಾಗಾಗಿ ನಾನು ಅವರಿಗೆ ಠೇವಣಿಯ ಮೊತ್ತದಲ್ಲಿ ಸ್ವಲ್ಪ ಹಣವನ್ನು ತೆಗೆದು ಉಪಯೋಗಿಸಲು ಸೂಚಿಸಿದೆ.

    ಆ ಸೂಚನೆಯಿಂದ ಅವರು ಗಾಬರಿಯಾದರಲ್ಲದೆ ಅದನ್ನು ಸಾರಾಸಗಟಾಗಿ ನಿರಾಕರಿಸಿದರು ಮತ್ತು ಯಾವುದೇ ಕಾರಣಕ್ಕೂ ನಾನು ಆ ಮೂಲ ಠೇವಣಿ ಹಣವನ್ನು ಮುಟ್ಟುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. 

    ಈಗ ಒಂದು ಪ್ರಶ್ನೆ ಉದ್ಭವಿಸುತ್ತದೆ ಏನೆಂದರೆ ನೀವೇ ಗಳಿಸಿ ಉಳಿಸಿದ ಹಣ ನಿಮ್ಮ ಕಷ್ಟಕ್ಕಾಗದಿದ್ದ ಮೇಲೆ ಅಂತಹ ಉಳಿತಾಯದಿಂದ ಪ್ರಯೋಜನವಾದರೂ ಏನು ಎಂದು, ಹೌದೋ ಅಲ್ಲವೊ ಹೇಳಿ.ಅನೇಕರಿಗೆ ಉಳಿತಾಯದ ಹಣವನ್ನು ಯಾವಾಗ ಬಳಸಬೇಕು ಎಂಬುದೇ ಒಂದು ಸವಾಲಾಗಿರುತ್ತದೆ. ಅದನ್ನು ತುರ್ತುಪರಿಸ್ಥಿತಿಯಲ್ಲಿ ಮಾತ್ರ ಬಳಸಬೇಕು ಎಂಬುದು ಕೆಲವರ ವಾದ.

    ಈಗ ಬಂದಿರುವ ಕೋವಿಡ್ ಸಾಂಕ್ರಾಮಿಕ ರೋಗದಿಂದ ಪ್ರತಿಯೊಬ್ಬರೂ ಒಂದಲ್ಲಾ ಒಂದು ವಿಧದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದೇವೆ. ಇದು ತುರ್ತು ಪರಿಸ್ಥಿತಿ ಅಲ್ಲದಿದ್ದರೆ ಮತ್ತಿನ್ನೇನು? ಈ ಕಷ್ಟ ಸಂದರ್ಭದಲ್ಲೂ ನಾವು ನಮ್ಮ ಉಳಿತಾಯದ ಹಣವನ್ನು ಉಪಯೋಗಿಸುವುದಿಲ್ಲ ಎಂದರೆ ಅದಕ್ಕೆ ಅರ್ಥವಿದೆಯೇ? 

    ನನ್ನ ಗೆಳೆಯರೊಬ್ಬರ ಸಹೋದರ ಇಪ್ಪತ್ತೈದು ವರ್ಷಗಳ ಕಾಲ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕೆಲಸ ಮಾಡಿ ಆರು ತಿಂಗಳ ಹಿಂದೆ ನಿವೃತ್ತರಾದರು. ಆಡಳಿತ ಮಂಡಳಿಯು ಮಾರ್ಚ್ ತಿಂಗಳ ನಂತರ ನಿಮ್ಮ ನಿವೃತ್ತಿಯ ಹಣ, ಪಿಎಫ್ , ಗ್ರಾಚ್ಯುಟಿ ಎಲ್ಲವನ್ನೂ ಕೊಡುತ್ತೇವೆ ಎಂದು ಆಶ್ವಾಸನೆ ಕೊಟ್ಟರಂತೆ. ಮಾರ್ಚ್ ಅಂತ್ಯದಲ್ಲಿ ಕೋವಿಡ್ ನಿಂದ ಲಾಕ್ ಡೌನ್ ಘೋಷಣೆಯಾಗಿ ಶಾಲೆಗಳನ್ನು ಮುಚ್ಚಲಾಯಿತು. ಆಗ ಆ ವಿದ್ಯಾಸಂಸ್ಥೆಯ ಮುಖ್ಯಸ್ಥರು ನಿಮ್ಮ ಎಲ್ಲಾ ಹಣವನ್ನು ಪರಿಸ್ಥಿತಿ ಸುಧಾರಿಸಿದ ಮೇಲೆ ಕೊಡುವುದಾಗಿ ಹೇಳಿದರಂತೆ. ಇದುವರೆಗೂ ಸಂಬಳವೂ ಇಲ್ಲ ಮತ್ತು ನಿವೃತ್ತಿಯಾದ ನಂತರ ಬರುವ ಬೆನಿಫಿಟ್ಸ್ ಸಹ ಇಲ್ಲ . ಇದು ತುರ್ತು ಪರಿಸ್ಥಿತಿಯಲ್ಲವೇ? ಇಂತಹ ಸಂದರ್ಭಗಳಲ್ಲೂ ನೀವು ಉಳಿತಾಯದ ಹಣವನ್ನು ಉಪಯೋಗಿಸಲು ಹಿಂಜರಿಯುವುದು ಏಕೆ ?

    ಕೆಲವು ಉಳಿತಾಯದಾರರ ಮನೋಭಾವ ಹೇಗೆ ಎಂದರೆ ಉಳಿತಾಯದ ಹಣವನ್ನು ಯಾವ ಕಾರಣಕ್ಕೂ ಬಳಸಬಾರದು , ಅದು ಪಾಪದ ಕೆಲಸವೆಂದೇ ಅವರ ಭಾವನೆ. ಅದನ್ನು ರಕ್ಷಿಸುವುದೇ ಸ್ವಯಂ ಶಿಸ್ತಿನ ಪರಮಾವಧಿ ಎಂಬುದು ಅವರ ಅನಿಸಿಕೆ. ಇಂತಹ ಮನೋಭಾವ ನಿಜಕ್ಕೂ ಸಲ್ಲದು. ಅವರಿಗೆ ತಮ್ಮ ಉಳಿತಾಯ ಮುಂದಿನ ಪೀಳಿಗೆಗೆ ಅಥವಾ ಸಮಾಜಕ್ಕೆ ಉಪಯೋಗಕ್ಕೆ ಬರುತ್ತದೆ ಎಂಬ ಭಾವನೆ ಇದ್ದಿರಲೂ ಬಹುದು. ಆದರೆ ಉಳಿಸಿರುವ ಹಣವನ್ನು ಬಳಸದಿರಲು ಮುಖ್ಯ ಕಾರಣ ಭಯ. ಉಳಿತಾಯದ ಹಣ ಖರ್ಚಾಗ್ತಾ ಆಗ್ತಾ ಎಲ್ಲಿ ಒಂದು ದಿನ ಏನೂ ಉಳಿಯುವುದಿಲ್ಲವೋ ಎಂಬ ಭೀತಿ. 

    ಈ ವಿಷಯವಾಗಿ ಒಮ್ಮೆ ನನ್ನ ಗೆಳೆಯನ ಜೊತೆ ಚರ್ಚಿಸುತ್ತಿದ್ದೆ . ಉದಾಹರಣೆಗೆ, ಒಬ್ಬರ ಬಳಿ ಉಳಿತಾಯ ಮತ್ತು ಹೂಡಿಕೆ ಸೇರಿ ಒಂದು ಕೋಟಿ ರೂಪಾಯಿಗಳಿವೆ ಅಂತ ಭಾವಿಸೋಣ. ಅವರ ವಾರ್ಷಿಕ ಖರ್ಚು ಆರು ಲಕ್ಷ ರೂಪಾಯಿಗಳು. ಬಡ್ಡಿ ಮತ್ತು ಇತರೆ ಆದಾಯದಿಂದ ಸುಮಾರು ನಾಲ್ಕು ಲಕ್ಷ ಬರುತ್ತದೆ, ಖರ್ಚಿಗೆ ಕಮ್ಮಿ ಬರುವುದು ಎರಡು ಲಕ್ಷ ರೂಪಾಯಿಗಳು ಮಾತ್ರ. ಇದನ್ನು ಮೂಲಧನದಿಂದ ತೆಗೆದು ಬಳಸಿದರೂ ಇನ್ನೂ ಇಪ್ಪತ್ತು ವರ್ಷ ಸುಖವಾಗಿ ಜೀವನ ಮಾಡಬಹುದು. ಅದು ಅವರಿಗೆ ಬೇಡ .

    ಜೀವನಕ್ಕೆ ಬೇಕಾದ ಮೂಲ ವಸ್ತುಗಳನ್ನೂ ಖರೀದಿಸದೆ ತಮಗೆ ತಾವೇ ವಂಚಿಸಿಕೊಂಡು ಉಳಿತಾಯ ಮಾಡುವುದರಲ್ಲಿ ಯಾವ ಪುರುಷಾರ್ಥ ಸಾಧಿಸುತ್ತಾರೆ ತಿಳಿಯದು. ನಿಜ ಹೇಳಬೇಕೆಂದರೆ ಮುಂದಿನ ಪೀಳಿಗೆ ಮತ್ತು ಸಮಾಜ ಇವರಿಂದ ಇವೆಲ್ಲವನ್ನೂ ನಿರೀಕ್ಷಿಸುತ್ತಲೇ ಇಲ್ಲ. ಒಂದು ಮಾತ್ರ ನಿಜ ನಾವು ಯಾವ ಬಾಧ್ಯತೆಯನ್ನು ಆದಷ್ಟೂ ಬಿಟ್ಟು ಹೋಗದಿರುವುದೇ ಒಳ್ಳೆಯದು. ಗಳಿಸಿದ ಹಾಗೂ ಉಳಿಸಿದ ಹಣ ನಮಗೆ ಬೇಕಾಗಿರುವಾಗ ಉಪಯೋಗಿಸದೆ ಬರೀ ಕೂಡಿಟ್ಟರೆ ಯಾರಿಗೆ ಲಾಭ ಹೇಳಿ.

    ಗಳಿಸಿದ ಸ್ಥಿರ ಮತ್ತು ಚರಾಸ್ಥಿ ಹಾಗೂ ಉಳಿಸಿದ ಹಣವನ್ನು ಈ ರೀತಿಯೂ ಉಪಯೋಗಿಸಬಹುದು:

    1. ಮನೆಯ ಆದಾಯ ಕಡಿಮೆಯಾದಾಗ ಆಸ್ತಿಯನ್ನು ಅಡವಿಟ್ಟು ಬ್ಯಾಂಕ್ ನಲ್ಲಿ ಸಾಲತೆಗೆದು ಕೊಂಡರೆ ಬಡ್ಡಿದರವೂ ಕಮ್ಮಿ ಇರುತ್ತದೆ ಹಾಗೂ ಸ್ಥಿತಿ ಸುಧಾರಿಸಿದ ನಂತರ ಸಾಲ ಮರುಪಾವತಿ ಮಾಡಬಹುದು. ರಿವರ್ಸ್ ಮಾಟ್ಗೇಜನ್ನೂ ಬಳಸಬಹುದು.

    2. ಆಸ್ತಿಯಲ್ಲಿ ಸಣ್ಣ ಭಾಗವನ್ನು ಮಾರಿ ಕಷ್ಟ ಸಮಯದಲ್ಲಿ ಬಳಸಬಹುದು ಸಮಯ ಉತ್ತಮವಾದಾಗ ಪುನಃ ಕೊಂಡುಕೊಳ್ಳಬಹುದು. ಕೃಷಿ ಉದ್ಯಮದಲ್ಲಿ ಇದು ಸಾಮಾನ್ಯ. ಹಸುಗಳು, ಮೇಕೆಗಳು , ಕುರಿ ಕೋಳಿಗಳನ್ನು ತುರ್ತುಪರಿಸ್ಥಿತಿಯಲ್ಲಿ ಮಾರಿ ಜೀವನವನ್ನು ನಡೆಸುತ್ತಾರೆ ನಂತರ ಪರಿಸ್ಥಿತಿ ಸರಿಯಾದ ಮೇಲೆ ಕೊಂಡುಕೊಳ್ಳುತ್ತಾರೆ.

    3. ಸ್ಥಿರ ಠೇವಣಿ, ಮ್ಯೂಚುಯಲ್ ಫಂಡ್ ನಲ್ಲಿ ಹೂಡಿದ ಮೊತ್ತದಲ್ಲಿ ಸ್ವಲ್ಪ ಹಣ ವಾಪಸ್ಸು ಪಡೆದು ಉಪಯೋಗಿಸಬಹುದು.

    4. ಆಪತ್ಕಾಲಕ್ಕಾಗಿ ಯಾವಾಗಲೂ ಸ್ವಲ್ಪ ಹಣವನ್ನು ಮೀಸಲಿಡುವ ಅಭ್ಯಾಸ ಮಾಡಿಕೊಂಡರೆ ಕಷ್ಟ ಬಂದಾಗ ಉಪಯೋಗಿಸಬಹುದು.

     ಕೆಲವರು ಕುಟುಂಬದವರಿಂದ ತಮ್ಮ ಉಳಿತಾಯದ ವಿಷಯವನ್ನು ರಹಸ್ಯವಾಗಿಟ್ಟಿರುತ್ತಾರೆ. ಹೆಂಡತಿ ಮಕ್ಕಳಿಗೂ ತಿಳಿದಿರುವುದಿಲ್ಲ . ಅಕಾಲಿಕ ದುರ್ಘಟನೆ ಸಂಭವಿಸಿದರೆ ಅಂತಹ ನಿಧಿ ಸರ್ಕಾರಕ್ಕೆ ನಿಗದಿತ ಸಮಯದ ನಂತರ ಸೇರ್ಪಡೆಯಾಗುತ್ತದೆ ಮತ್ತು ನಿಜವಾದ ವಾರಸುದಾರರಿಗೆ ಠೇವಣಿಯನ್ನು ಹಿಂಪಡೆಯಲು ಬಹಳ ತೊಂದರೆಯಾಗುತ್ತದೆ.

    ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿಗಳಲ್ಲಿ ಸುಮಾರು 32 ಸಾವಿರ ಕೋಟಿ ಕ್ಲೇಮು ಮಾಡದ ಠೇವಣಿ ಹಣ ಇದೆ ಎಂದು ಭಾರತ ಸರಕಾರ ಲೋಕಸಭೆಯಲ್ಲಿ 2019 ರಲ್ಲಿ ಘೋಷಿಸಿದೆ. 

    ಗಳಿಕೆ ಹಾಗೂ ಉಳಿತಾಯವನ್ನು ಎಷ್ಟು ನಿಪುಣತೆಯಿಂದ ಯೋಚಿಸಿ ಮಾಡುತ್ತೇವೆಯೋ ಅಷ್ಟೇ ನಿಪುಣತೆ ಅದನ್ನು ಸದುಪಯೋಗಿಸಲೂ ಬೇಕು. ನಾವೇ ಗಳಿಸಿದ ಹಣವನ್ನು ನಮ್ಮ ಕಷ್ಟ ನಷ್ಟ ಗಳಿಗೆ ಉಪಯೋಗಿಸುವುದರಲ್ಲಿ ಜಿಪುಣತನ ಬೇಡ.

    Photo by Damir Spanic on Unsplash

    ಆರ್. ಶ್ರೀನಿವಾಸ್
    ಆರ್. ಶ್ರೀನಿವಾಸ್
    ನಿವೃತ್ತ ಬ್ಯಾಂಕರ್. ಬೆಂಗಳೂರು ನಿವಾಸಿ. ಬರವಣಿಗೆಯಲ್ಲಿ ಆಸಕ್ತಿ
    spot_img
    Previous article
    Next article

    More articles

    10 COMMENTS

    1. ನಿಜ.‌ಕಷ್ಟ ಕಾಲದಲ್ಲಿ ಬಂಗಾರ ಇದ್ದರೆ ಅಡವಿಡಬಹುದು. ಅಥವಾ ಕೂಡಿಟ್ಟ ಹಣದಲ್ಲಿ ಸ್ವಲ್ಪ ಬಳಸಿಕೊಳ್ಳಬಹುದು. ಆದರೆ ತುಂಬಾ ಜನ ಬಡ್ಡಿ ಕೊಟ್ಟು ಬೇರೆ ಸಾಲ ತರುವರು.ಅದು ಮತ್ತೂ ಹೊರೆಯಾಗುತ್ತಿದೆ . ದುಡಿಯುವ ಹಣ ಯಾವ ಕಾರಣಕ್ಕೆ ಉಳಿಸಬೇಕು ಅದು ಹೇಗೆಲ್ಲಾ ಉಪಯೋಗಕ್ಕೆ ಬರುತ್ತದೆ ಅಂತ ಲೇಖಕರು ವಿವರಿಸಿದ್ದಾರೆ . ವಂದನೆಗಳು

    2. ಒಪ್ಪ ಬೇಕಾದ ವಿಷಯ ಆದರೆ ಜನಗಳು ಇಂಗ್ಲೀಷ್ನಲ್ಲಿ ಹೇಳ್ದಂಗೆ ಈ ಮೈಂಡ್ಸೆಟ್ನಿಂದ ಬಿಡುಗಡೆಯಾಗ ಬೇಕಲ್ರಿ??

    3. ಲೇಖನ ತುಂಬಾ ಚೆನ್ನಾಗಿದೆ. ಜಿಪುಣರಾಗದೇ ನಿಪುಣರಾಗೋಣ ಎಂಬ ಮಾತಿನಲ್ಲೇ ಎಲ್ಲಾ ಸತ್ವ ಅಡಗಿದೆ.ಉತ್ತಮ ಸಲಹೆ ಕೊಟ್ಟ ಶ್ರೀನಿವಾಸ್ ರವರಿಗೆ ಧನ್ಯವಾದಗಳು.

    4. Good analysis of the subject, you are absolutely correct to spend in emergency time instead of keeping for future. At the same time we should be judicious and needy spending.
      Keep your writing more and more.
      All the best.

    LEAVE A REPLY

    Please enter your comment!
    Please enter your name here

    Latest article

    error: Content is protected !!