36.3 C
Karnataka
Friday, May 2, 2025
    Home Blog Page 179

    ಕೇವಲ ಕಾಲಪಾನಿಯಿಂದ ಭಾರತವನ್ನು ಕಟ್ಟಿಹಾಕಲು ಚೀನಾಕ್ಕೆ ಸಾಧ್ಯವಿಲ್ಲ

    ಕೊರೊನದಿಂದ ಜಾಗತಿಕವಾಗಿ ಇನ್ನಿಲ್ಲದ ಮುಖಭಂಗಕ್ಕೆ ಈಡಾಗಿರುವ ಚೀನಾ ಮತ್ತೊಮ್ಮೆ ತಾನು ಕೆಲು ಕೆರೆಯುತ್ತಿದೆ, ಹಾಗೂ ಮಿತ್ರದೇಶ ನೇಪಾಳವನ್ನೂ ಚಿವುಟುತ್ತಿದೆ. ರಾಜತಾಂತ್ರಿಕವಾಗಿ ಇಡೀ ಜಗತ್ತಿನ ನಂಬಿಕೆ ಕಳೆದುಕೊಂಡಿರುವ ನೆರೆ ದೇಶಕ್ಕೆ ತಕ್ಕ ಶಾಸ್ತಿ ಮಾಡಲು ಇದೇ ಸಕಾಲ. ಮೋದಿ ಎಲ್ಲ ದೇಶಗಳನ್ನು ಚೀನಾ ವಿರುದ್ಧ ಒಗ್ಗೂಡಿಸಬೇಕು


    ಮತ್ತೊಮ್ಮೆ ಭಾರತ ಮತ್ತು ಚೀನಾ ನಡುವೆ ಬೆಂಕಿ ಬಿದ್ದಿದೆ. ಈ ಸಲ ಅದರ ದಾಳವಾಗಿರುವುದು ನೇಪಾಳವೆಂಬ ನಂಜಿನ ವಾಸನೆಯೇ ಗೊತ್ತಿಲ್ಲದ ದೇಶ. ಜಗತ್ತಿಗೆ ಕೊರೊನ ವೈರಾಣುವನ್ನು ರಫ್ತು ಮಾಡಿ ಅಪಾರ ಸಾವು-ನೋವಿಗೆ ಕಾರಣವಾದ ಕೆಂಪು ದೇಶ ಈಗಲಾದರೂ ಪಾಪಪ್ರಜ್ಞೆಯಿಂದ ಕೊರಗಬೇಕಿತ್ತು, ಆದರೆ ಆ ದೇಶಕ್ಕೆ ಕೊನೆಪಕ್ಷ ಸಣ್ಣ ಪಶ್ಚಾತ್ತಾಪವೂ ಇದ್ದಂತೆ ಇಲ್ಲ. ನೆಹರು ಕಾಲದಿಂದ ಇವತ್ತಿನ ಮೋದಿಯವರೆಗೆ ಅದು ಕುಟಿಲ ರಾಜಕೀಯ ನೀತಿಗಳಿಂದ ಹೊರಬರುವ ಸಾಧ್ಯತೆ ಇಲ್ಲವೇ ಇಲ್ಲ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿಬಿಟ್ಟಿದೆ. ಇತ್ತ ಭಾರತೀಯ ನಾಯಕರ ಜತೆ ಮಾತುಕತೆ ನಡೆಸುವ ನಾಟಕವಾಡುತ್ತಲೇ ಅದರ ವಿರುದ್ಧ ದಿಕ್ಕಿನಲ್ಲಿ ಹಾಲಿನಿಂದ ಕೂದಲು ತೆಗೆಯುವಂತೆ ಒಳಗೊಳಗೇ ಕನ್ನ ಕೊರೆಯುವ ನೀಚ ಮನಃಸ್ಥಿಯ ದೇಶವದು. ಮಾವೋತ್ಸೆತುಂಗ ಕಾಲದಿಂದ ಈಗಿನ ಕ್ಸಿ ಜಿನ್ಪಿಂಗ್ ವರೆಗೂ ಇದೇ ಚಾಳಿ ಚೀನಾದ್ದು.

    ಯಾಕೆ ಹೀಗೆ? : ಅಂತಾರಾಷ್ಟ್ರೀಯ ಮಟ್ಟದ ರಾಜನೀತಿಜ್ಞರು ಹೇಳುವಂತೆ, ಚೀನಾ ಕ್ರೌರ್ಯದಿಂದಲೇ ಅಸ್ತಿತ್ವಕ್ಕೆಬಂದ ದೇಶ. ಪ್ರಕ್ಷುಬ್ಧ ಮನಃಸ್ಥಿತಿಯ ನಾಯಕತ್ವ ಅದರದ್ದು. ಜತೆಗೆ, ಶಾಂತಿ ಎಂಬುದು ಬೀಜಿಂಗಿಗೆ ಪದ. ಮುಕ್ತ ಸಾಹಿತ್ಯ, ಮುಕ್ತ ಮಾತು, ಮುಕ್ತ ಜೀವನಕ್ಕೆ ತೆರೆದುಕೊಳ್ಳದ ಅದಕ್ಕೆ ಸದಾ ಆಭದ್ರತೆಯ ಭಾವ. ಸಮಾಜವಾದವನ್ನು ಒಪ್ಪಿಕೊಂಡಿದ್ದರು ಕೂಡ ಅದರ ಅಂತರಂಗದಲ್ಲಿ ನಿರಂಕುಶತೆಯನ್ನೇ ಆಪೋಷನ ತೆಗೆದುಕೊಂಡಿರುವ ನೆಲವದು. ಈ ಕಾರಣಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯತ್ವ ಪಡೆಯಲು ಭಾರತದ ನೆರವನ್ನು ಪಡೆದಿದ್ದ ಆ ದೇಶ, ಅದೇ ಭಾರತ ಆ ಮಂಡಳಿಯನ್ನು ಸೇರಲು ನಾಚಿಕೆ ಇಲ್ಲದೆ, ರಾಜತಾಂತ್ರಿಕತೆಯ ಕನಿಷ್ಠ ಶಿಷ್ಟಾಚಾರವೂ ಇಲ್ಲದೆ ವಿರೋಧಿಸುತ್ತಿದೆ. ಹೀಗಾಗಿ ಜಗತ್ತಿನ ಯಾವುದೇ ದೇಶಕ್ಕೂ ಚೀನಾ ಮಿತ್ರನಾಗುವುದು ಎಂದರೆ ನಯವಂಚನೆಯನ್ನು ಬಗಲಲ್ಲೇ ಇಟ್ಟುಕೊಂಡಂತೆಯೇ.

    ಜಗತ್ತಿನ ಏಕೈಕ ಹಿಂದೂದೇಶವಾಗಿದ್ದ ನೇಪಾಳವು ಸಹಜವಾಗಿಯೇ ಭಾರತಕ್ಕೆ ಆಪ್ತ ದೇಶವಾಗಿತ್ತು. ಅಲ್ಲಿ ಅರಸೊತ್ತಿಗೆ ಕಾಲದಿಂದ, ಅಂದರೆ ದೊರೆ ಬೀರೇಂದ್ರ ಅವರ ಅವಧಿ, ಅವರು ಹತ್ಯೆಯಾದ ನಂತರ ಪಟ್ಟಕ್ಕೇರಿದ ಜ್ಞಾನೇಂದ್ರ ಅವರವರೆಗೂ ದಿಲ್ಲಿ ಮತ್ತು ಕಾಠ್ಮಂಡು ನಡುವೆ ಸಹಜ, ವಿಶ್ವಾಸಪೂರ್ವಕ ಸ್ನೇಹಬಂಧವೇ ಇತ್ತು. ಎಂಥ ವೇಳೆಯಲ್ಲೂ ಎರಡೂ ದೇಶಗಳ ನಡುವೆ ಅಪನಂಬಿಕೆಗೆ ಅವಕಾಶವೇ ಉಂಟಾಗುವ ಸನ್ನಿವೇಶವೇ ಬರಲಿಲ್ಲ. ಅದಕ್ಕೆ ಈಗ ಚೀನಾ ಹುಳಿ ಹಿಂಡಿದೆ. ಹಿಮಾಲಯದ ತಪ್ಪಲಲ್ಲಿ ನೆಮ್ಮದಿಯಾಗಿದ್ದ ನೇಪಾಳಕ್ಕೆ ಉತ್ತರಕ್ಕೆ ಟಿಬೆಟ್ ಇದ್ದರೆ, ಉಳಿದೆಲ್ಲ ದಿಕ್ಕುಗಳಲ್ಲಿ ಭಾರತವೇ ಇದೆ. ಹೀಗಾಗಿ ಆ ದೇಶದ ಪಾಲಿಗೆ ಭಾರತ ಸದಾ ನಿರ್ಣಾಯಕ, ರಕ್ಷಕ ಹಾಗೂ ನಂಬಿಕೆಯ ಆಪ್ತಬಂಧು. ಆ ಮಾತಿಗೆ ಸಾಕ್ಷಿ ಎಂಬಂತೆ ಭಾರತವೂ ತಾನು ಸ್ವಾಂತಂತ್ರ್ಯಗೊಂಡ ನಂತರ ಯಾವೊತ್ತು ನೇಪಾಳದ ಸಾರ್ವಭೌಮತೆಗೆ ಸವಾಲೊಡ್ಡುವ ರೀತಿ ವರ್ತಿಸಿದ್ದಿಲ್ಲ ಅಥವಾ ಅದೊಂದು ಸಣ್ಣ ದೇಶವೆಂಬ ಹಗುರತನವನ್ನೂ ತೋರಲಿಲ್ಲ. ಆದರೆ, ಅತ್ತ ಅಭಿವೃದ್ಧಿಯೂ ಕಾಣದೆ, ಇತ್ತ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳದ ಆ ದೇಶದ ಅಸ್ಥಿರ ನಾಯಕತ್ವದ ಬಗ್ಗೆ ಎಲ್ಲೋ ಒಂದೆಡೆ ಭಾರತ ಮೈಮರೆತಿತ್ತೇನೋ ಎಂಬ ಮಾತಿತ್ತು.ಸುತ್ತಲೂ ಮುಳ್ಳುಗಳು:ರಾಜತಾಂತ್ರಿವಾಗಿ ಚೌಕಾಶಿ ಮಾಡುತ್ತಲೇ ಮತ್ತೊಂದೆಡೆ ರಕ್ತಪೀಪಾಸುತನಕ್ಕೆ ಒಡ್ಡಿಕೊಳ್ಳುವ ಚೀನಾವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಭಾರತಕ್ಕೆ ತನ್ನ ಸುತ್ತಲೂ ಮಗ್ಗುಲಮುಳ್ಳುಗಳು ಜಾಸ್ತಿಯಾಗುತ್ತಿವೆ.

    ಮೊದಲಿನಿಂದ ಪಾಕ್ ಹಿಂದೆ ನಿಂತು ಭಾರತದ ವಿರುದ್ಧ ಪ್ರಾಕ್ಸಿವಾರ್ ಮಾಡುತ್ತಿರುವ ಚೀನಿ ಖೆಡ್ಡಕ್ಕೆ ೨೦೦೫ರಲ್ಲೇ ದ್ವೀಪದೇಶ ಶ್ರೀಲಂಕಾವೂ ಬಿದ್ದಿತ್ತು. ಅದಾದ ಮೇಲೆ ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವ ಮಾಲ್ಡೀವ್ಸ್ ದ್ವೀಪವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿ ಅಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸುವಲ್ಲಿ ಯಶಸ್ವಿಯೂ ಆಗಿತ್ತು. ಈಗ ಭಾರತದ ಜತೆ 1,751 ಕಿಲೋಮೀಟರ್ ಗಡಿ ಹಂಚಿಕೊಂಡಿರುವ ನೇಪಾಳವನ್ನು ಚಿವುಟುವ ಮೂಲಕ ಭಾರತಕ್ಕೆ ಸವಾಲೊಡ್ಡುತ್ತಿದೆ. ಜತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಭೂತಾನ್ ಮತ್ತು ಆಫ್ಘಾನಿಸ್ತಾನದ ಜತೆ ಭಾರತ ಗಡಿ ಹಂಚಿಕೊಂಡಿದೆ. ಪಾಕ್ ಜತೆ ನಿರಂತರ ತಲೆನೋವಿದ್ದರೂ ಅದಕ್ಕೆ ಕಾಲಕಾಲಕ್ಕೆಬೆಂಕಿ-ತುಪ್ಪ ಸುರಿಯುತ್ತಿರುವ ಚೀನಾ ತನಗೆ ಬೇಕಾದ ಹಾಗೆ ಆ ನತದೃಷ್ಟ ದೇಶಗಳನ್ನು ಕುಣಿಸುತ್ತಿದೆ.

    ಮ್ಯಾನ್ಮಾರ್ ಜತೆಯೂ ಬೀಜಿಂಗಿಗೆ ಉತ್ತಮ ಸಂಬಂಧಗಳೇ ಇವೆಯಾದರೂ ಭಾರತಕ್ಕೆ ಅದರಿಂದ ಸಮಸ್ಯೆಯಾಗಿಲ್ಲ. ಬಾಂಗ್ಲಾದಲ್ಲಿ ಬೇಳೆ ಬೇಯಿಸಿಕೊಳ್ಳಲು ಇನ್ನು ಸಾಧ್ಯವಾಗಿಲ್ಲ. ಇನ್ನು ಹಿಮಾಲಯದ ತಪ್ಪಲಲ್ಲೇ ನೆಮ್ಮದಿಯಾಗಿರುವ ಭೂತಾನ್ ದೇಶಕ್ಕೆ ಭಾರತ-ಚೀನಾ ಪೈಕಿ ಯಾವುದು ಬೆಂಕಿ ಎಂಬ ಸ್ವಷ್ಟ ಅರಿವಿದೆ. ನಮ್ಮೆರಡು ದೇಶಗಳ ನಡುವಿನ ಸಂಬಂಧ ಅತ್ಯುತ್ತಮವಾಗಿದೆ. ಮೊದಲಿನಿಂದ ಸಮಸ್ಯೆ ಇರುವುದು ಪಾಕ್ ಮತ್ತು ಚೀನಾ ನಡುವೆ ಮಾತ್ರ. ಆದರೆ ಭಾರತಕ್ಕೆ ಶತ್ರುಗಳನ್ನು ಹೆಚ್ಚು ಸೃಷ್ಟಿ ಮಾಡುವುದು ಚೀನಾದ ಆದ್ಯತೆಯ ರಾಜತಾಂತ್ರಿಕತೆಯಾಗಿದೆ.

    ಈಗ ಆಗಿದ್ದೇನು?:ಕೊರೊನ ವೈರಸ್ ಸೃಷ್ಟಿಸಿ ಜಗತ್ತನ್ನೇ ಅಪಾಯಕ್ಕೆ ದೂಡಿರುವ ಚೀನಾ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಅದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ ತನಿಖೆ ಶುರುವಾಗಿದೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ರಷ್ಯ ಸೇರಿದಂತೆ ಅಷ್ಟೂ ಖಂಡಗಳ ಮುಕ್ಕಾಲುಪಾಲು ದೇಶಗಳು ಬೀಜಿಂಗ್ ಜತೆ ಮುನಿಸಿಕೊಂಡಿವೆ. ಅಮೆರಿಕವಂತು ಚೀನಾ ಹೆಸರೆತ್ತಿದ್ದರೆ ಉರಿದುರಿದು ಬೀಳುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಂತೂ ಅದು ನಂಬರ್ ೧ ಶತ್ರುರಾಷ್ಟ್ರ. ತನ್ನ ದುಷ್ಟತನದಿಂದ ವಿಷಮ ಪರಿಸ್ಥಿತಿಯನ್ನು ತಂದೊಟ್ಟಿರುವ ಅದರ ವಿರುದ್ಧ ಒಟ್ಟಾಗಿರುವ ಜಾಗತಿಕ ಸಮುದಾಯಕ್ಕೆ ಅಮೆರಿಕ ಹೊರತುಪಡಿಸಿದರೆ ಭಾರತವೇ ನಿರ್ಣಾಯಕ ನಾಯಕತ್ವ ವಹಿಸುತ್ತಿದೆ. ಇಸ್ರೇಲ್ ಕೂಡ ಈ ಕೂಟದ ಬಹುಮುಖ್ಯ ಭಾಗವಾಗಿರುವುದು ಮತ್ತೊಂದು ಶೀತಲ ಸಮರಕ್ಕೆ ಮುನ್ನುಡಿಯೇ? ಗೊತ್ತಾಗುತ್ತಿಲ್ಲ.

    ಚೀನಾ ಲೆಕ್ಕಾಚಾರವೇನು?:ಬಲಾಢ್ಯ ದೇಶಗಳೆಲ್ಲವೂ ತನ್ನ ವಿರುದ್ಧ ತಿರುಗಿಬಿದ್ದಿರುವ ಹೊತ್ತಿನಲ್ಲಿಯೇ ಭಾರತವನ್ನು ಕೆಣಕಿದರೆ ವಿಶ್ವ ಸಮುದಾಯ ಚೌಕಾಶಿಗೆ ಬರಬಹುದು ಎಂದ ಲೆಕ್ಕಾಚಾರವನ್ನು ಬೀಜಿಂಗ್ ಹಾಕುತ್ತಿರುವಂತಿದೆ. ಹೀಗಾಗಿಯೇ ಅದು ನೇಪಾಳವನ್ನು ಮುಂದಿಟ್ಟುಕೊಂಡು ಭಾರತದ ವಿರುದ್ಧ ಕಾಲು ಕೆರೆಯುತ್ತಿದೆ.ದೊಕ್ಲಾಮ್ ಘಟನೆಯ ನಂತರ ತಿಳಿಯಾಗಿದ್ದ ಪರಿಸ್ಥಿತಿ ಇದ್ದಕ್ಕಿದ್ದ ಹಾಗೆ ಬಿಗಿಯಾಗಲು ಕಾರಣ ನೆರೆ ದೇಶ  ಅನುಸರಿಸುತ್ತಿರುವ ರಾಜಕೀಯ ಕುತಂತ್ರಗಾರಿಕೆ. ಉಪ ಖಂಡದಲ್ಲಿ ಹೇಗಾದರೂ ಭಾರತವನ್ನು ಒಂಟಿಯಾಗಿಸಿದರೆ ಏಷ್ಯಾದಲ್ಲಿ ಸೂಪರ್ ಪವರ್ ಆಗಬಹುದು ಎಂಬುದು ಅದಕ್ಕೆ ಗೊತ್ತಿದೆ. ಪಕ್ಕದ ದೇಶಗಳನ್ನು ಎತ್ತಿಕಟ್ಟಿ ವ್ಯಾವಹಾರಿಕವಾಗಿ ಅವುಗಳನ್ನು ತನ್ನ ದಾಸ್ಯದಾಳಗಳನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ಹಿಮಾಲಯ ಹಾಗೂ ಹಿಂದೂ ಮಹಾಸಾಗರದಲ್ಲಿ ರಕ್ಷಣಾ ಬೇಲಿಯನ್ನು ನಿರ್ಮಿಸಬೇಕು ಎಂಬುದೇ ಚೀನಾದ ದಶಕಗಳ ದುಸ್ಸಾಹಸ.ಪಾಕ್ ಪೋಷಿತ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳಿಗೆ ಕಾಮಧೇನುವಾಗಿದ್ದ ೩೭೦ನೇ ವಿಧಿಯನ್ನು ಕಿತ್ತೆಸೆದು ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದೇ ಸಮಸ್ಯೆಗೆ ಮೂಲ ಎಂದು ಹುಯಿಲೆಬ್ಬಿಸುವ ಕೆಲಸವನ್ನು ಚೀನಾ ಶುರುವಿಟ್ಟುಕೊಂಡಿದೆ.

    ಮಂಜಿನ ಪರ್ವತಗಳು, ನದಿ ಝರಿಗಳಿಗೆ ಸೀಮಿತವಾಗಿದ್ದ ತನ್ನ ಭೂ ಪ್ರದೇಶಕ್ಕೆ ಸಮರ್ಪಕ ಬೇಲಿ ಹಾಕಿಕೊಂಡು ಅಭಿವೃದ್ಧಿಯತ್ತ ಮುಖ ಮಾಡಿದ್ದು ಬೀಜಿಂಗ್ ಹೊಟ್ಟೆಗೆ ಬೆಂಕಿ ಹಾಕಿದಂತೆ ಆಗಿದೆ. ಅದರಲ್ಲೂ ಲಡಾಕಿನಲ್ಲಿ ಆರಂಭವಾಗಿರುವ ಅಭಿವೃದ್ಧಿ ಕಾಮಗಾರಿಗಳು ಚೀನಾಕ್ಕೆ ಸವಾಲು ಒಡ್ಡುವಂತಿವೆ. ಮತ್ತೊಂದೆಡೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಯಾವುದ ಕ್ಷಣದಲ್ಲೂ ಭಾರತ ಸೇನೆ ಮುಗಿಬೀಳಬಹುದೆಂಬ ಸಂಗತಿ ಚೀನಾಕ್ಕೆ ಗೊತ್ತಿಲ್ಲದೆ ಏನಿಲ್ಲ! ಅದೇನಾದರೂ ಆಗಿಬಿಟ್ಟರೆ ತಾನೂ ಆಕ್ರಮಿಸಿಕೊಂಡಿರುವ ಕಾಶ್ಮೀರವೂ ಕೈಜಾರುತ್ತದೆ ಎಂಬ ಚೀನಾದ ಆತಂಕವೂ ಸದ್ಯದ ಬಿಕ್ಕಟ್ಟಿಗೆ ಹಿನ್ನೆಲೆ ಇರಬಹುದು.ಜತೆಗೆ, ಕೊರೊನೋತ್ತರ ಕಾಲದಲ್ಲಿ ಚೀನಾದಿಂದ ಬಹುತೇಕ ಜಾಗತಿಕ ಕಂಪನಿಗಳು ಕಾಲ್ಕೀಳುವುದು ಪಕ್ಕ. ಅಮೆರಿಕ, ಯುರೋಪ್ ಮೂಲದ ಅನೇಕ ಉದ್ದಿಮೆಗಳು ಭಾರತಕ್ಕೆ ಶಿಫ್ಟ್ ಆಗುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿಬಿಟ್ಟಿವೆ. ಅಂಥ ಕಂಪನಿಗಳಿಗೆ ಅಮೆರಿಕ ವಿಶೇಷ ಪ್ಯಾಕೇಜ್ ಪ್ರಕಟಿಸಿದೆ. ಬೌದ್ಧಿಕ ಸಂಪತ್ತಿನ ವಿಚಾರದಲ್ಲಿ ಚೀನಾ ಅಪವಂಬಿಕೆಯ ಕುಖ್ಯಾತಿ ಹೊಂದಿರುವುದು ಉದ್ದಿಮೆಗಳು ಕಮ್ಯುನಿಸ್ಟ್ ದೇಶವನ್ನು ತೊರೆಯಲು ಮುಖ್ಯಕಾರಣ. ಸೈಬರ್ ಕ್ರೈಮಿನಲ್ಲಿ ಅದು ವಿರಾಟ್ ರೂಪವನ್ನೇ ತಾಳಿರುವುದು ಈಗಾಗಲೇ ಭಾರತವೂ ಸೇರಿ ಅಮೆರಿಕ, ರಷ್ಯಕ್ಕೂ ತಿಳಿದಿರುವ ಸಂಗತಿ. ಎಲ್ಲ ರೀತಿಯಲ್ಲೂ ನಾಚಿಕೆಯ ಸಂವೇದನೆಯನ್ನು ಬಿಟ್ಟುಕೂತಿರುವ ಚೀನಾಕ್ಕೆ ಈಗ ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರ, ನೇಪಾಳದ ಗಡಿ ನೆಪ ಇಟ್ಟುಕೊಂಡು ಹೊಸ ವರಸೆ ಶುರುವಿಟ್ಟುಕೊಂಡಿದೆ.

    ಏನಿದು ಬಿಕ್ಕಟ್ಟು:ಎಲ್ಲವೂ ಸರಿ ಇದ್ದಾಗ ಭಾರತ-ನೇಪಾಳದ ಪಾಲಿಗೆ ಕಾಲಾಪಾನಿ ಸಮಸ್ಯೆ ಆಗಿತ್ತಾದರೂ ತಿಕ್ಕಾಟ ನಡೆಸುವಷ್ಟು ದೊಡ್ಡ ಬಿಕ್ಕಟ್ಟು ಆಗಿರಲಿಲ್ಲ. ಯಾವಾಗ ಕಾಶ್ಮೀರಕ್ಕೆ ಮೋದಿ ಸರಕಾರ ೩೭೦ನೇ ವಿಧಿಯನ್ನು ತೆಗೆದು ಪರಮನೆಂಟ್ ಪರಿಹಾರ ಕಂಡಕೊಂಡಿತೋ ಅಲ್ಲಿಗೆ ಆಳವಾದ ಕಂಪನಗಳು ಶುರುವಾದವು. ಕೆಲ ತಿಂಗಳ ಹಿಂದೆ ಕೇಂದ್ರ ಸರಕಾರ ನಕ್ಷೆಯೊಂದನ್ನು ಬಿಡುಗಡೆಗೊಳಿಸಿ ಕಾಲಾಪಾನಿಯನ್ನು ಉತ್ತರಾಖಂಡ್ನ ಭಾಗವೆಂದು ಘೋಷಿಸಿತ್ತು. ಐತಿಹಾಸಿಕವಾಗಿ ಇದು ಸತ್ಯವೇ ಆಗಿತ್ತು. ಇದಾದ ಕೆಲ ದಿನಗಳ ಬಳಿಕ ಚೀನಾ ರಾಜಕೀಯ ನಕಾಶೆಯನ್ನು ಬಿಡುಗಡೆ ಮಾಡಿ ಕಾಲಾಪಾನಿ, ಉತ್ತರಾಖಂಡದ ಲಿಂಪಿಯಾಧುರಾ, ಲಿಪುಲೇಖ್ಗಳು ತಮ್ಮದೆಂದು ವಾದಿಸಿತ್ತು. ಇದೇ ಬಿಕ್ಕಟ್ಟಿನ ಮೂಲ. ಈ ಕಾರಣಕ್ಕಾಗಿ ನೇಪಾಳ, ಚೀನಾ ಒಂದಾಗಿ ಭಾರತದ ವಿರುದ್ಧ ನಿಂತಿವೆ. ಈ ಮೈತ್ರಿ ಅದೆಷ್ಟು ದಿನ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.

    ಹಾಗೆ ನೋಡಿದರೆ, 1960ರಿಂದಲೇ ಕಾಲಾಪಾನಿ ತಿಕ್ಕಾಟವಿತ್ತು. 370 ಚ.ಕಿ.ಮೀ ವ್ಯಾಪ್ತಿಯ ಈ ಭೂ ಪ್ರದೇಶ ಭಾರತದ ಮಟ್ಟಿಗೆ ಬಹಳ ಮುಖ್ಯ. ಇದು ಭಾರತ-ಟಿಬೆಟ್ಟಿನ ಗಡಿ ಪೊಲೀಸರಿಂದ ನಿಯಂತ್ರಿಸಲ್ಪಡುತ್ತಿದ್ದು, 1962ರಿಂದ ಈ ಪೊಲೀಸರು ಇಲ್ಲಿ ಪಹರೆ ಕಾಯುತ್ತಿದ್ದಾರೆ. ಮೂರು ರಾಷ್ಟ್ರಗಳ ಗಡಿಗಳು ಸೇರುವ ಅತಿಸೂಕ್ಷ್ಮ ಜಾಗವಾದ ಇದರ ಮೇಲೆ ಚೀನಾಗೆ ಆರಂಭದಿಂದಲೂ ಕಣ್ಣಿದೆ. ಜತೆಗೆ, ಲಿಂಪಿಯಾಧುರಾ, ಲಿಪುಲೇಖ್ ಕೂಡ ತನ್ನದೇ ಎಂದು ಚೀನಾ ರಾಗ ತೆಗೆಯುತ್ತಿದೆ. ಈ ತಗಾದೆಯನ್ನು ಇಟ್ಟುಕೊಂಡೇ ನೇಪಾಳವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿ ಭಾರತಕ್ಕೆ ತೊಂದರೆ ಕೊಡುವುದು ಚೀನೀ ಕರಾಮತ್ತಾಗಿದೆ. ಬ್ರಿಟೀಷರಿದ್ದ ಕಾಲದಲ್ಲಿಯೇ, ಅಂದರೆ ೧೮೧೬ರಲ್ಲಿ ನೇಪಾಳ ಮತ್ತು ಭಾರತದ ನಡುವೆ ಸುಗೌಳಿ ಒಪ್ಪಂದವೇರ್ಪಟ್ಟಿತ್ತು. ಆದರೆ ಒಪ್ಪಂದದ ಪ್ರಕಾರ ಅಲ್ಲಿ ಪಶ್ಚಿಮ ಭೂ ಪ್ರದೇಶ ನಮ್ಮದು. ಆದರೆ ಅಲ್ಲಿಯೇ ಹರಿಯುವ ಕಾಳೀ ನದಿಯನ್ನು ಒಪ್ಪಂದದಲ್ಲಿ ಉಲ್ಲೇಖೀಸಲಾಗಿಲ್ಲ. ಬಿಕ್ಕಟ್ಟಿಗೆ ಇದೇ ಕಾರಣ. ಕಾಲಪಾನಿಯ ಪಶ್ಚಿಮ ಪ್ರದೇಶದಲ್ಲಿ ಕಾಳೀ ನದಿ ಹರಿಯುತ್ತಿದೆ. ಭಾರತವು ಕಾಲಾಪಾನಿಯ ಪೂರ್ವ ಭಾಗವನ್ನು ಗಡಿಯಾಗಿ ಪರಿಗಣಿಸಿದ್ದು, ಕಾಲಾಪಾನಿ ತನ್ನದು ಎಂದಿದೆ. ಜತೆಗೆ ನೇಪಾಳವೂ ಕ್ಲೈಮ್ ಮಾಡುತ್ತಿದೆ.

    ಭಾರತಕ್ಕೆ ಎಚ್ಚರಿಕೆ ಘಂಟೆ:ಏನೇ ಆಗಲಿ, ಏಷ್ಯಾ ಮಾತ್ರವಲ್ಲ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ  ಭಾರತಕ್ಕೆ ಈ ವಿವಾದ ಒಂದು ಎಚ್ಚರಿಕೆಯ ಘಂಟೆ. ಅಕ್ಕಪಕ್ಕದವರನ್ನು ಎತ್ತಿಕಟ್ಟುತ್ತ ನಮಗೆ ಮುಜುಗರ ಉಂಟುಮಾಡುತ್ತಿರುವ ಚೀನಾಕ್ಕೆ ಪಾಠ ಕಲಿಸಲು ಇದು ಸಕಾಲ. ನೇಪಾಳಕ್ಕೂ ತನ್ನ ಶಕ್ತಿ ಏನು ಎಂಬುದನ್ನು ತೋರಿಸಲು ಇದೇ ಸರಿಯಾದ ಸಮಯ. ಕಬ್ಬಿಣ ಕಾದಾಗಲೇ ಹೊಡೆಯಬೇಕು ಎಂದು ಕೇಂದ್ರಕ್ಕೆ ಅನೇಕ ನಿಪುಣರು ಸಲಹೆ ಮಾಡುತ್ತಿದ್ದಾರೆ. ವಾಪಪೇಯಿ ಅವರ ಕಾಲದಲ್ಲಿಯೇ ಈ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಭಾರತ-ನೇಪಾಳ ಯತ್ನಿಸಿದ್ದುಂಟು. ಆದರೆ ಚೀನಾ ಕಾಲಪಾನಿಗೆ ಬಂದು ವೈರಸ್ಸಿನಂತೆ ಬಂದು ವಕ್ಕರಿಸಿರುವುದು ಕೊಂಚ ಯೋಚಿಸುವಂತೆ ಮಾಡಿದೆ. ಇಲ್ಲಿ ಭಾರತ ಗೆಲ್ಲಲೇಬೇಕು.

    ಇದು ೧೯೬೨ ಅಲ್ಲ. ಜಗತ್ತು ಬದಲಾಗಿದೆ. ಭಾರತವೂ ಬದಲಾಗಿದೆ. ಕೇವಲ ಕಾಲಪಾನಿಯಿಂದ ಭಾರತವನ್ನು ಕಟ್ಟಿಹಾಕಲು ಚೀನಾಕ್ಕೆ ಸಾಧ್ಯವೇ ಇಲ್ಲ.

    ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಬಿಕ್ಕಟ್ಟು

     ‘ಕೃಷಿ ಬಿಕ್ಕಟ್ಟು ಎಂದಾಕ್ಷಣ ರೈತರ ಆತ್ಮಹತ್ಯೆಗಳನ್ನೇ ಬಿಕ್ಕಟ್ಟು ಎಂದು ಬಿಂಬಿಸುವ ಒಂದು ಪರಿಪಾಠ ಬೆಳೆದಿದೆ. ಆದರೆ ರೈತರ ಆತ್ಮಹತ್ಯೆಗಳೇ ಬಿಕ್ಕಟ್ಟಲ್ಲ. ಬದಲಿಗೆ ಅವು ತೀವ್ರವಾದ ಕೃಷಿ ಬಿಕ್ಕಟ್ಟಿನ ಸಿಮ್‌ಟಮ್ಸ್ (ಲಕ್ಷಣಗಳು) ಮಾತ್ರ. ಆತ್ಮಹತ್ಯೆ ಎಂಬುದು ಒಂದು ರೋಗ ಸೂಚಕ ಲಕ್ಷಣವೇ ಹೊರತು ಅದೇ ರೋಗವಲ್ಲ. ತೀವ್ರವಾದ ಆರ್ಥಿಕ, ಸಾಮಾಜಿಕ ಒತ್ತಡಗಳಿಗೆ ಸಿಲುಕಿದ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗೆಂದು ಆತ್ಮಹತ್ಯೆ ಮಾಡಿಕೊಳ್ಳದೆ ಇರುವ ರೈತರು ಆರಾಮಾಗಿದ್ದಾರೆ ಎಂದರ್ಥವಲ್ಲ. ಈ ಕೃಷಿ ಬಿಕ್ಕಟ್ಟಿಗೆ ಒಂದು ಸರ್ವವ್ಯಾಪಿ ಆಯಾಮವಿದೆ. ಭೂಮಿಯ ಒಡೆತನ ಹಾಗೂ ನೇರವಾಗಿ ಉಳುಮೆ ಮಾಡುವುದನ್ನು ಹೊರತುಪಡಿಸಿ ಕೃಷಿ ಕ್ಷೇತ್ರದ ಸರ್ವಸ್ವವನ್ನೂ ಕಾರ್ಪೊರೇಟ್ ಕಂಪೆನಿಗಳೇ ನಿಯಂತ್ರಿಸುತ್ತವೆ. ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಎಲ್ಲವೂ ಇಂದು ಕಾರ್ಪೊರೇಟ್ ಕಂಪೆನಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿರುವುದೇ ಈ ಬಿಕ್ಕಟ್ಟಿಗೆ ಪ್ರಧಾನ ಕಾರಣ’

    ಹೀಗೆನ್ನುತ್ತಾರೆ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್. ಕಳೆದ ಒಂದುವರೆ ದಶಗಳಲ್ಲಿ ದೇಶಾದ್ಯಂತ ಓಡಾಡಿ, ರೈತರ ಆತ್ಮಹತ್ಯೆಯ ಬಗ್ಗೆಯೇ ಅಧ್ಯಯನ ನಡೆಸಿರುವ ಸಾಯಿನಾಥ್ ಅವರ ಮಾತು ಇಂದು ಯಾರಿಗೂ ಬೇಡವಾಗಿದೆ.

    ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸುವ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ನೇರವಾಗಿ ಕೃಷಿ ಕ್ಷೇತ್ರದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ಮಾಡಿಕೊಟ್ಟಿದೆ.

    ರಾಜ್ಯ ಸರ್ಕಾರ ಕೇಂದ್ರ ಈ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ್ದು, ‘ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ತಿದ್ದುಪಡಿತಂದು ಸುಗ್ರೀವಾಜ್ಞೆ ಹೊರಡಿಸಿದೆ.

    ಕಾಯಿದೆಯ ೨ ಸೆಕ್ಷನ್‌ಗಳಿಗೆ ತಿದ್ದುಪಡಿ ತರಲಾಗಿದ್ದು, ಇದರ ಪ್ರಕಾರ ರೈತರು ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧೀನಕ್ಕೆ ಒಳಪಡುವುದಿಲ್ಲ. ರೈತರು ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಬೆಳೆ ಮಾರಾಟ ಮಾಡಬಹುದು ಹಾಗೆಯೇ ಖಾಸಗಿಯವರು ನೇರವಾಗಿ ಬೆಳೆ ಖರೀದಿಸಬಹುದು. ದೇಶಾದ್ಯಂತ ಮಾತ್ರವಲ್ಲ, ಪ್ರಪಂಚಾದ್ಯಂತ ಮಾರಾಟ ಜಾಲ ಹೊಂದಿರುವ ಕಾರ್ಪೊರೇಟ್ ಕಂಪನಿಗಳು ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದವು ಎಂದು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ.

    ನೀತಿ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ಎಪಿಎಂಸಿಗೆ ಕಾಯ್ದೆ ತಿದ್ದುಪಡಿಗೆ ಸೂಚಿಸಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಈಗಾಗಲೇ ನೀತಿ ಆಯೋಗ, ಒಪ್ಪಂದ ಕೃಷಿಗೆ (ಕಾಂಟ್ರ್ಯಾಕ್ಟ್ ಫಾರ್ಮಿಂಗ್) ಪ್ರೋತ್ಸಾಹ ನೀಡಲು ಕಾನೂನು ರೂಪಿಸುವುದರ ಜತೆಗೆ, ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಭೂಮಿಯನ್ನು ಲೀಸ್ ಪಡೆಯಲು ಅವಕಾಶ ಮಾಡಿಕೊಡಲು ಈಗಾಗಲೇ ಕೇಂದ್ರ  ಜಾರಿಗೆ ತಂದಿರುವ ‘ಕೃಷಿ ಭೂಮಿ ಗುತ್ತಿಗೆ ಕಾಯ್ದೆ -೨೦೧೬’ ಅನ್ನೂ ದೇಶಾದ್ಯಂತ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರಕ್ಕೆ ಹೇಳಿದೆ. ಈ ಕ್ರಮಗಳು ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ತಮ್ಮ ಬಿಗಿ ಹಿಡಿತಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಿದೆ. ಇದರ ಪರಿಣಾಮಗಳು ಕೃಷಿ ಉತ್ಪನ್ನಗಳ ಉತ್ಪಾದನೆ ದುಪಟ್ಟಾಗುತ್ತದೆಯೋ, ರೈತರ ಆತ್ಮಹತ್ಯೆ ಪ್ರಕರಣಗಳು ದುಪ್ಪಟ್ಟಾಗುತ್ತದೆಯೋ ಎಂಬುದು ಈಗ ಬಹುದೊಡ್ಡ ಪ್ರಶ್ನೆಯಾಗಿದೆ

    ಏಷ್ಯಾಖಂಡದ ಎರಡನೇ ಬೃಹತ್ ಕೆರೆ ಸಂರಕ್ಷಣೆಗೆ ಟೆಕ್ಕಿಗಳ ಹೋರಾಟ

    ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನಲ್ಲಿರುವ ಸೂಳೆಕೆರೆ ಏಷ್ಯಾಖಂಡದ ಎರಡನೇ ಅತೀ ದೊಡ್ಡ ಕೆರೆ. ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳ ಕುಡಿಯುವ ನೀರಿನ ಸೆಲೆ. ಸಾವಿರಾರು ಹೆಕ್ಟೇರ್ ಹೊಲ-ಗದ್ದೆಗಳಿಗೆ ನೀರುಣಿಸುವ ರೈತರ ಜೀವನಾಡಿ.

    ಶತಮಾನಗಳ ಇತಿಹಾಸವನ್ನು ಅಡಗಿಸಿಕೊಂಡಿರುವ ಈ ತಾಣ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಗುಡ್ಡ-ಬೆಟ್ಟ, ಕಾಡು-ಮೇಡು, ವೀಕ್ಷಣೆಗೆ ನಿಲುಕಿದಷ್ಟು ನೀರಿನ ಸಮ್ಮೋಹನ ಮನೊಲ್ಲಾಸ ನೀಡುವುದರಲ್ಲಿ ಎರಡು ಮಾತಿಲ್ಲ. ಸಿದ್ಧರ ತಪಸ್ಸಿನ ತಾಣ. ಸಿದ್ದೇಶ್ವರರು ಐಕ್ಯವಾದ ದೇಗುಲ ಧಾರ್ಮಿಕ ಕೇಂದ್ರ. ಸ್ವರ್ಗಾವತಿ ಪಟ್ಟಣದ ರಾಜನ ಮಗಳು ಶಾಂತವ್ವೆ ನಿರ್ಮಿಸಿದಳೆಂಬ ಐತಿಹ್ಯ. ಜಾನಪದ, ಐತಿಹ್ಯಗಳೇನೆ ಇರಲಿ ಇಂದಿಗೂ ಲಕ್ಷಾಂತರ ಜನರ ಕುಡಿಯುವ ನೀರಿನ ಸೆಲೆ.

    ಸೂಳೆಕೆರೆ ವೀಕ್ಷಣೆಗೆ ಟೆಕ್ಕಿಗಳ ಸ್ನೇಹಿತರ ಗುಂಪೊಂದು 2016 ರಲ್ಲಿ ಸೂಳೆಕೆರ ವೀಕ್ಷಣೆಗೆಂದು ಧಾವಿಸಿತು. ಸತತ ಬರಗಾಲದ ಹಿನ್ನೆಲೆಯಲ್ಲಿ ಕೆರೆ ಬರಿದಾಗಿತ್ತು. ಭದ್ರಾ ಜಲಾಶಯದಲ್ಲಿಯೂ ನೀರಿನ ಕೊರತೆ. ಹಾಗಾಗಿ ನಾಲೆಯಿಂದ ಕೂಡ ನೀರು ಹರಿಸಿರಲಿಲ್ಲ. ಭಣಗುಡುತ್ತಿರುವ ಬೃಹತ್ ಕೆರೆಯ ದುಸ್ಥಿತಿ ಕಂಡು ಟೆಕ್ಕಿಗಳಿಗೆ ಮನ ನೊಂದಿತು. ಪಾಶ್ಚಾತ್ಯ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿ ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ನಮ್ಮ ನೆಲ-ಜಲ ಸಂರಕ್ಷಣೆಗೆ ಬೇಜಾವಾಬ್ದಾರಿ ತೋರಲಾಗುತ್ತಿದೆ ಎಂಬುದನ್ನು ಮನಗಂಡರು. ಹೊರ ದೇಶದಲ್ಲಿ ಕೆರೆ, ನೀರಿನ ಮೂಲಗಳ ಅಭಿವೃದ್ಧಿಯ ಚಿತ್ರಣ ಕಣ್ಮುಂದೆ ಬಂದು ಬೇಸರವನಿಸಿತು.

    ಸ್ಥಳೀಯ ಟೆಕ್ಕಿಗಳಿಗೆ ತಾಕೀತು ಮಾಡುವ ಮೂಲಕ ಹುರಿದುಂಬಿಸಿದರು. ಸೂಳೆಕೆರೆ ರಕ್ಷಣೆಗೆ ಕಟಿಬದ್ಧರಾಗಿ ಪ್ರಯತ್ನಿಸಬೇಕು ಎಂಬ ಛಲ ತುಂಬಿದರು. ನಮ್ಮ ನೈಸರ್ಗಿಕ ಸಂಪತ್ತು ರಕ್ಷಣೆಗೆ ಏನಾದರೂ ಮಾಡುವ ತುಡಿತ ಮೂಡಿತು. ಮನದಲ್ಲಿ ಬಿಂಬಿಸಿದ ಸಂಕಲ್ಪ ಖಡ್ಗ ಸಂಘ ರಚಿಸುವ ಮೂಲಕ ಕಾರ್ಯೋನ್ಮುಖಗೊಂಡಿತು.

    ಟೆಕ್ಕಿ ರಘು ಅವರ ನೇತೃತ್ವದಲ್ಲಿ ಸೂಳೆಕೆರೆ ಹೋರಾಟದ ಅಭಿಯಾನಕ್ಕೆ 2017ರಲ್ಲಿ ಮೊದಲ ಹೆಜ್ಜೆ ಇಡಲಾಯಿತು. ಸುಮಾರು 6500 ಎಕರೆ ವಿಸ್ತೀರ್ಣದ ಕೆರೆ. ಸಾಕಷ್ಟು ಹೂಳು ತುಂಬಿ ನೀರಿನ ಸಂಗ್ರಹ ಕುಂಠಿತವಾಗಿರುವುದನ್ನು ಗಮನಸಿಲಾಯಿತು. ಹೂಳು ತೆಗೆಸಲು ಸರ್ಕಾರ ಗಮನ ಸೆಳೆಯಲು ಪ್ರಯತ್ನ ನಡೆಯಿತು. ಈ ನಡುವೆ ಮೊದಲ ಹೆಜ್ಜೆ ಕೆರೆಯ ವಿಸ್ತೀರ್ಣ ಹದ್ದುಬಸ್ತು ಮಾಡಿಸುವುದಾಗಿತ್ತು. ಸುಮಾರು 1 ಸಾವಿರ ಎಕರೆ ಒತ್ತುವರಿ ಆಗಿರಬಹುದೆಂಬ ಸಂಶಯ ಮೂಡಿತು. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಸುವುದು ಮೊದಲ ಆದ್ಯತೆ ಆಗಿತ್ತು.

    ಅದಕ್ಕಾಗಿ ನಾಡಿನ ಹೆಸರಾಂತ ಮಠಾಧೀಶರರು, ಚಿತ್ರನಟರು, ಸಾಮಾಜಿಕ ಹೋರಾಟಗಾರರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಹೋರಾಟದ ರೂಪುರೇಷೆ ಸಿದ್ಧವಾಯಿತು. ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಕೆರೆ ಸಂರಕ್ಷಣೆಗೆ ನೈತಿಕ ಬೆಂಬಲ ಪಡೆದರು. ಸ್ವಾಮೀಜಿ ಕೆರೆ ಉಳಿಸಲು ಹಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೋರಾಟಕ್ಕೆ ಮುನ್ನಡಿ ಬರೆದರು.

    ಪಾಂಡೋಮಟ್ಟಿ ವಿರಕ್ತಮಠದ ಶ್ರೀಗುರುಬಸವ ಸ್ವಾಮೀಜಿ ಹಾಗೂ ಚನ್ನಗಿರಿಯ ಶಾಂತವೀರ ಸ್ವಾಮೀಜಿಗಳು ಟೆಕ್ಕಿಗಳೊಂದಿಗೆ ಕೈ ಜೋಡಿಸಿದರು. ಸ್ಥಳೀಯ ರಾಜಕಾರಣಿಗಳು, ಅಧಿಕಾರಿಶಾಹಿಗಳನ್ನು ಭೇಟಿ ಮಾಡಿ ಸೂಳೆಕೆರೆ ಸರ್ವೇ ನಡೆಸಲು ಮನವಿ ಸಲ್ಲಿಸಲಾಯಿತು. ಆದರೆ ಅವರಿಂದ ನಿರೀಕ್ಷಿಸಿದ ಬೆಂಬಲ ಸಿಗಲಿಲ್ಲ. ಒತ್ತುವರಿ ಮಾಡಿದವರ ಸಂರಕ್ಷಣೆಗೆ ನಿಂತವರಂತೆ ವರ್ತಿಸಿದರು. ಆಗ ಖಡ್ಗ ಸಂಘಕ್ಕೆ ಸ್ವಾಮೀಜಿಗಳು, ಸ್ಥಳೀಯ ಗ್ರಾಮಗಳ ಯುವಕರು, ಪತ್ರಕರ್ತರು ನೊಂದಾಯಿಸಿಕೊಳ್ಳುವ ಮೂಲಕ ಹೋರಾಟದ ಹಾದಿ ಹಿಡಿದರು.

    ಮೊದಲ ಬಾರಿ 2017ರಲ್ಲಿ ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ಹಾಗೂ ಶಾಂತವೀರ ಸ್ವಾಮೀಜಿಗಳ ನೇತೃತ್ವದಲ್ಲಿ ಖಡ್ಗ ಸಂಘದ ಸದಸ್ಯರು ಕಾಲ್ನಡಿಗೆಯ ಜಾಥ ಆಯೋಜಿಸಿದರು. ಸೂಳೆಕರೆಯಿಂದ ಚನ್ನಗಿರಿಗೆ ಕಾಲ್ನಡಿಗೆಯಲ್ಲಿ ಜಾಥಾ ನಡೆಸಿ ಕೆರೆ ಸ್ಥಿತಿ ಬಗ್ಗೆ ಗಮನ ಸೆಳೆದರು. ಸ್ಥಳೀಯರಿಗೆ ಕೆರೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿತು.

    ಆನಂತರ ಕೆರೆ ಅಂಚಿನ ಗ್ರಾಮಗಳಿಗೆ ಇದೇ ತಂಡ ಭೇಟಿ ನೀಡಿ ಗ್ರಾಮಸ್ಥರ ಸಭೆ ನಡೆಸಿತು. ಒತ್ತುವರಿ ಆಗಿದ್ದಲ್ಲಿ ಜಮೀನು ತೆರವುಗೊಳಿಸುವ ಭರವಸೆ ಪಡೆಯಲಾಯಿತು. ಈ ನಿಟ್ಟಿನಲ್ಲಿ ಬೃಹತ್ ಸಾಧನೆ ಖಡ್ಗ ಸಂಘದ ವತಿಯಿಂದ ನಡೆಯಿತು. ಹಲವು ಜಿಲ್ಲಾಧಿಕಾರಿಗಳಿಗೆ ಭೇಟ ಮಾಡಿ ಸರ್ವೆ ನಡೆಸಲು ಒತ್ತಾಯಿಸಲಾಯಿತು. ಕೆಲವರು ಆಸಕ್ತಿ ತೋರಿದರು. ಆದರೂ ಕಾರ್ಯರೂಪಕ್ಕಿಳಿಯಲಿಲ್ಲ. ಪ್ರಧಾನ ಮಂತ್ರಿ ಮೋದಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ವಾಸ್ತವಾಂಶ ಲಿಖಿತ ರೂಪದಲ್ಲಿ ತಿಳಿಸಲಾಯಿತು.

    ಒಟ್ಟಾರೆ ಖಡ್ಗ ಸಂಘದ ಶತ ಪ್ರಯತ್ನದ ನಂತರ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿ ಸರ್ವೇ ನಡೆಸಲು ರೂ.11 ಲಕ್ಷ ಬಿಡುಗಡೆ ಮಾಡಲಾಯಿತು. 2019ರಲ್ಲಿ ಸರ್ವೇ ನಡೆಸಲು ಬೆಳೆ ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ಇಲಾಖೆ ಮುಂದೂಡುತ್ತಾ ಬಂದಿತು. ಸರ್ವೇ ನಡೆಸಿ ಟ್ರೆಂಚ್ ತೆಗೆಸಿ ಕೆರೆಯ ವಿಸ್ತೀರ್ಣ ಹದ್ದುಬಸ್ತು ಮಾಡುವುದು ಖಡ್ಗ ಸಂಘದ ಬದ್ಧತೆ ಆಗಿತ್ತು.

    ದೈವಕೃಪೆ ಎಂಬಂತೆ 2019ರಲ್ಲಿ ಉತ್ತಮ ಮುಂಗಾರು ಮಳೆ ಬಿದ್ದಿತು. ಭದ್ರಾ ಜಲಾಶಯ ತುಂಬಿತು. ಸಾಕಷ್ಟು ನೀರು ನಾಲೆಯ ಮೂಲಕ ಕೆರೆ ತುಂಬಿಸಿತು. ಸಂಗ್ರಹಣಾ ಭಾಗದಲ್ಲಿ ಸಾಕಷ್ಟ ಮಳೆ ಬಿದ್ದ ಕಾರಣ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಸೂಳೆಕೆರೆಯ ಜಲ ಮೂಲ ಹರಿದ್ರಾವತಿ ಹಳ್ಳದಲ್ಲಿ ಸಾಕಷ್ಟು ನೀರು ಹರಿದು ಕೆರೆ ತುಂಬಿತು. ಕೋಡಿ ನೀರು ಅಲ್ಪ ಪ್ರಮಾಣ ಹೊರ ಹರಿಯಿತು. ರೈತರ ಮುಖದಲ್ಲಿ ಸಂತಸ ನಲಿದಾಡಿತು. ಆದರೂ ಸರ್ವೇ ಕಾರ್ಯ ವಿಳಂಬವಾಯಿತು. ನಿರಂತರ ಖಡ್ಗ ಸಂಘದ ಒತ್ತಾಯದ ಮೇರೆಗೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ವೀಕ್ಷಣೆಯಲ್ಲಿ ದ್ರೋಣ್ ಕ್ಯಾಮರ ಮೂಲಕ 2020ರ ಆರಂಭದಲ್ಲಿ ಸರ್ವೇ ಕಾರ್ಯ ನಡೆಯಿತು. ಮುಂದಿನ ಕ್ರಮ ಕೈಗೊಳ್ಳಲು ಇಲಾಖೆ ಕೊರೊನಾ ಸಂಕಷ್ಟದ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ ಎಂದು ಸಂಘದ ಅಧ್ಯಕ್ಷ ರಘು ಮನದ ಮಾತು ಬಿಚ್ಚಿಟ್ಟರು.

    ಸದ್ಯ ಪೂರ್ಣ ಮಟ್ಟದಲ್ಲಿ ನೀರು ತುಂಬಿರುವುದೇ ಕೆರೆಯ ವಿಸ್ತೀರ್ಣದ ಭಾಗವಾಗಿದೆ. ನೀರಾವರಿ ಇಲಾಖೆ ಕೆರೆ ಒತ್ತುವರಿ ತಡೆಯುವಲ್ಲಿ ಮೀನಾ-ಮೇಷ ಎಣಿಸುತ್ತಿದೆ. ಅಕ್ರಮವಾಗಿ ಕೆರೆ ಜಾಗ ಕಬಳಿಸುವವರಿಗೆ ಎಚ್ಚರಿಕೆಯನ್ನು ಖಡ್ಗ ಸಂಘ ನೀಡುತ್ತಿದೆ. ಅಧಿಕಾರಿಗಳಿಂದ ನ್ಯಾಯೋಚಿತ ಬೆಂಬಲ ಸಿಗದೆ. ಸೂಳೆಕೆರೆ ಉಳಿವಿನ ಬಗ್ಗೆ ತೀವ್ರ ಹೋರಾಟದ ಸ್ವರೂಪ ರೂಪಿಸುತ್ತಿದೆ. ಸೂಳೆಕೆರೆಯಿಂದಲೇ ಬದುಕು ಕಟ್ಟಿಕೊಂಡವರು ಅದರ ಉಳಿವಿಗೆ ಒಗ್ಗಾಟ್ಟಾಗಬೇಕಾಗಿದೆ ಎಂದು ಕರೆ ನೀಡಿದರು.

    ಸೂಳೆಕೆರೆ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ಧಿ ಆಮೆಗತಿಲ್ಲಿ ಸಾಗಿದೆ. ಬದ್ಧತೆ ತೋರದ ರಾಜಕಾರಣಿಗಳಿಂದ ಅಮೂಲ್ಯ ಪ್ರಕೃತಿ ಸೌಂದರ್ಯ ಕಳೆರಹಿತವಾಗಿದೆ. ಒಂದಿಷ್ಟು ಅಭಿವೃದ್ಧಿ ನಡೆದಿದೆ. ಆದರೂ ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ಇತ್ತೀಚೆಗೆ ದೋಣಿ ವಿಹಾರ ಕೇಂದ್ರ ಆರಂಭಿಸಲಾಗಿದೆ. ಒಟ್ಟಾರ ಪರಿಪೂರ್ಣಾ ಅಭಿವೃದ್ಧಿಗೆ ಖಡ್ಗ ಸಂಘ ತನು, ಮನ ಧನದೊಂದಿಗೆ ನಿಸ್ವಾರ್ಥವಾಗಿ ಹೋರಾಟ ನಡೆಸಿದೆ. ಅವರ ಹೋರಾಟ ಏತಕ್ಕಾಗಿ ಎಂಬುದನ್ನು ಸಾರ್ವಜನಿಕರು ಅರಿಯಬೇಕಾಗಿದೆ.

    ಸಂಘಕ್ಕೆ ಬೆಂಬಲವಾಗಿ ಚಿತ್ರನಟ ಕಿಶೋರ್, ಸಾಮಾಜಿಕ ಕಾರ್ಯಕರ್ತೆ ರೂಪ ಐಯ್ಯರ್, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಗಡೆ ನಿರ್ದೇಶಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

    ರಘು. ಬಿ.ಆರ್. ಅವರೊಂದಿಗೆ ಬಸವರಾಜ್ ಬೆಳ್ಳೂಡಿ, ಷಣ್ಮುಖ ಸ್ವಾಮಿ, ಕುಬೇಂದ್ರಸ್ವಾಮಿ, ಎಚ್.ಎಂ.ರವಿ, ಪ್ರಶಾಂತ್, ಜಗದೀಶ್ ಹಾಗೂ ಸಾವಿರಾರು ಸದಸ್ಯರು ಕೈ ಜೋಡಿಸಿದ್ದಾರೆ.

    ನಾವು ಕಂಡ ವೆೊದಲ ಸಾಹುಕಾರ

    ಮಾತಾಡಿಸ್ತಿದ್ರು …..ವಿಚಾರಿಸ್ತಿದ್ರು …..ತಮಾಷೆ ಮಾಡ್ತಿದ್ರು …..ನಗಿಸ್ತಿದ್ರು …..ಅವರು ಊಟಕ್ಕೆ ಕೂರ್ತಿದಿದ್ದೇ ಮಕ್ಕಳು ತಿಂದ್ರ ಅಂತ ಕೇಳ್ತಾ , ಅವರು ತಿಂತಾ ನಮ್ಮನ್ನ ಕರೆದು ತಟ್ಟೆಯಲ್ಲಿದ್ದ ತರಕಾರೀನೋ , ಒಂದು ತುತ್ತು ಅನ್ನಾನೋ ತಿನ್ನಿಸ್ತಿದ್ರು . ನಮಗೆ ಮೊದಲು ಹೋಟೆಲ್ಲಿಗೆ ಕರ್ಕೊಂಡು ಹೋಗಿದ್ದವರು , ಮೊದಲ ಡ್ರಾಮಾ ಮೊದಲ ಸಿನಿಮಾ ಮೊದಲ ಸರ್ಕಸ್ ತೋರಿಸಿದ್ದವರು ,ನಮ್ಮ ಮೊದಲ ಹೀರೋ ಅವರು, ಟೂರು ಹೊಡೆಸಿದ್ದವರು ,ಅಟಿಕೆ ಕೊಡಿಸಿದ್ದವರು , ಬಟ್ಟೆ ಹೊಲಿಸಿದ್ದವರು , ನಾವು ಕಂಡ ಮೊದಲ ಸಾಹುಕಾರ ಅಪ್ಪ .

     ಅವರ ಜೇಬಿನಲ್ಲಿ ಸದಾ ದುಡ್ಡಿರುತ್ತಿತ್ತು , ಮನೆಯ ದಿನಸಿಗೇ ಆಗಲಿ ನಮ್ಮ ಮುನಿಸಿಗೇ ಆಗಲಿ ನನ್ ಷರ್ಟ ತಗೊಂಡ್ ಬಾ ಅನ್ನೋವ್ರು ಅದರಿಂದ ದುಡ್ಡು ತೆಗೆದು ಕೊಡೋವ್ರು , ನಮ್ಮ ಮೊದಲ ಪಾಕೆಟ್ ಮೊನಿ ಕೊಟ್ಟವರು , ನಮ್ಮ ಮಣ್ಣಿನ ಹುಂಡಿಗೆ ಹಣ ಹಾಕಿದವರು ಅವರು , ಅಪ್ಪ ನಮ್ಮ ಕಣ್ಣಿಗೆ ಯಾವಾಗಲೂ ಪರ್ಫೆಕ್ಟ್ , ಪಕ್ಕಾ ಜಂಟಲ್ಮನ್, ಯಾವತ್ತೂ ಐರನ್ ಬಟ್ಟೆ ಇಲ್ಲದೇ ಹೊರಗೆ ಹೋಗುತ್ತಿರಲಿಲ್ಲ ಅವರು ಹಾಕುವ ವಾಚು , ಧರಿಸುವ ಚಪ್ಪಲಿ ,ಕಟ್ಟುವ ಬೆಲ್ಟು , ಬರೆಯುವ ಪೆನ್ನು ಪ್ರತಿಯೊಂದು ವಿಶೇಷವಾಗಿ ಇರೋವು , ಅವರು ಮನೆಗೆ ಬೇಗ ಬಂದರೆ ಕೇಳುತ್ತಿದ್ದ ಪ್ರಶ್ನೆ ಮಕ್ಕಳೆಲ್ಲಿ ? ಅವರು ಲೇಟಾಗಿ ಬಂದ್ರೂ ಕೇಳುತ್ತಿದ್ದ ಪ್ರೆಶ್ನೆ ಮಕ್ಕಳು ತಿಂದ್ರ ? ಮಲಗ್ಬಿಟ್ರ ? ನಾವು ಹುಷಾರು ತಪ್ಪಿದಾಗ ಅವರು ಒದ್ದಾಡುತ್ತಿದ್ದರು , ನಮಗೆ ಗಾಯವಾದರೆ ಅವರು ನೋವು ತಿಂತಿದ್ರು .

    ಸಸಿಗಳಂತಿದ್ದ ನಾವು ಗಿಡಗಳಾಗುತ್ತಿದ್ದಂತೆ ಸಣ್ಣದಾಗಿ ಬಗ್ಗಿಸಲು ಶುರು ಮಾಡಿದರು …..ಇದು ತಿನ್ನು, ಇದು ಮಾಡು , ಇದೇ ಓದು , ಹಿಂಗೇ ಇರು , ಇದೇ ಕೋರ್ಸ್ ತಗೋ , ಹೇಳಿದ್ ಮಾತು ಕೇಳು, ಹಂಗೆಲ್ಲಾ ಮಾತಾಡ್ಬೇಡ, ನಿನಗೆ ಅರ್ಥ ಆಗಲ್ಲ, ನಿನಗೆ ಗೊತ್ತಾಗಲ್ಲ …ಹೀಗೆ ಕಿವಿ ಹಿಂಡುವುದು, ಗದರುವುದು ಶುರು ಮಾಡುತ್ತಾರೆ ….ಆಗ ನಮಗೆ ಅಪ್ಪ ಯಾಕೋ ಈ ನಡುವೆ ಸ್ವಲ್ಪ ಸ್ಟ್ರಿಕ್ಟ್ ಆದಂಗ್ ಕಾಣ್ತಾರೆ ಅಂತ ಸ್ವಲ್ಪ ಬೇಸರ ಆಗೋದು , ನಮಗೇನೇ ಬೇಕು ಅಂದ್ರೂ ಅಮ್ಮನ ಮೂಲಕವೇ ಹೇಳುವುದು ಕೇಳುವುದು ಮಾಡತೊಡಗಿದೆವು , ನಮ್ಮ ತಪ್ಪುಗಳಿಗೆ ಅಮ್ಮನನ್ನು ಬೈಯ್ಯುತ್ತಿದ್ದರು , ಎಷ್ಟೋ ಸಾರಿ ವಾದ ಮಾಡುತ್ತಿದ್ದೆವು ಆಗ ಅಮ್ಮ ಬಿಡಿಸಿ ಅವರೆದುರು ನಮ್ಮನ್ನ ಬಯ್ದು ಕಳುಹಿಸುತ್ತಿದ್ದಳು , ಅಪ್ಪನೆದರು ಮಕ್ಕಳು ಬಾಯಿ ಕೊಡುವುದು ಅಮ್ಮನಿಗೂ ಇಷ್ಟವಿರಲಿಲ್ಲ , ಅವರಿಗೆ ಗೊತ್ತು ಅಪ್ಪನ ಬದುಕಿನ ಒದ್ದಾಟ ಗುದ್ದಾಟ ಎಲ್ಲವೂ ಮನೆಗಾಗಿಯೇ ಮಕ್ಕಳಿಗಾಗಿಯೇ ಅಂತ , ಕ್ವಾರ್ಟ್ರೆಸ್ಸು ಬಾಡಿಗೆ ಲೀಸು ಆ ಮನೆ ಈ ಮನೆ ಅಂತೆಲ್ಲಾ ಒದ್ದಾಡಿ ಜಿದ್ದಿಗೆ ಬಿದ್ದು ಹೊಟ್ಟೆ ಬಟ್ಟೆ ಕಟ್ಟಿ ಹಣ ಉಳಿಸಿ ಹಣ ಹೊಂದಿಸಿ ಸಾಲ ಮಾಡಿ ಸೈಟು ತಗೊಂಡು ಓಡಾಡಿ ನಿಂತು ಒಂದು ಸ್ವಂತ ಮನೆ ಕಟ್ಟಿ , ಅಪ್ಲಿಕೇಷನ್ನು ಸೀಟು ಅಲಾಟ್ಮೆಂಟು ಡೊನೇಷನ್ನು ಎಂಬ ಹತ್ತು ಸಮಸ್ಯೆಗಳ ಮಧ್ಯೆ ಎಜುಕೇಷನ್ನು ಕೊಡಿಸಿ , ಎಂಪ್ಲಾಯ್ಮೆಂಟು ಲಾಸ್ಟ್ ಡೇಟು ಎಕ್ಸಾಮು ಇನ್ಫ್ಲೂಯೆನ್ಸು ವೇಕೆನ್ಸಿ ಅನ್ನೋ ನೂರು ಸ್ಪರ್ಧೆಗಳ ಮಧ್ಯೆ ನೌಕರಿ ಕೊಡಿಸಿ , ಸಂಬಂಧ ಹುಡುಕಿ ವಿಚಾರಿಸಿ ಹಣ ಕೂಡಿಟ್ಟು ಪತ್ರಿಕೆ ಹೊಡಿಸಿ ಚೌಟ್ರಿ ಹುಡುಕಿ ವರೊಪಚಾರ ನಿಶ್ಚಿತಾರ್ಥ ಅಂತ ಮದುವೆ ಮಾಡ್ಸಿ…. ಅಬ್ಬಾ… ಏನ್ ಸ್ಟ್ರಾಂಗ್ ಗುರೂ ನಮ್ಮಪ್ಪ ! ಅಂತ ಅಂದ್ಕೋತಿದ್ವಿ , ಇಲ್ಲ ಬೇರೆ ಯಾರಿಂದಾನೂ ಆಗಲ್ಲ ಅದು ಅಪ್ಪನಿಂದ ಮಾತ್ರ ಸಾಧ್ಯ ….ಅಪ್ಪ ಇದಾರೆ ಅಂದ್ರೆ ಧೈರ್ಯ ಅಪ್ಪ ಇದಾರೆ ಅಂದ್ರೆ ಭಯ ….ಗೌರವ ಸಂಸ್ಕಾರ ಶಿಸ್ತು ಸಾಧನೆ ಪ್ರತಿಯೊಂದಕ್ಕೂ ಉದಾಹರಣೆ ” ಅಪ್ಪ ” ಅನ್ನೋ ಮಟ್ಟಿಗೆ ಆಗಿದ್ದರು .

     ಅವರೂ ಮನುಷ್ಯರೇ ಅವರಲ್ಲೂ ಕೋಪ ಇತ್ತು ಲೋಪ ಇತ್ತು , ದುಡಿದಿದ್ರೂ ದುಡುಕಿದ್ರೂ , ನಮ್ಮನ್ನೆಲ್ಲಾ ಹೆದರಿಸ್ತಿದ್ದ ಗದರಿಸ್ತಿದ್ದ ಅಪ್ಪಾನೂ ಒಮ್ಮೊಮ್ಮೆ ತಪ್ಪು ಮಾಡಿದಾಗ ಅಮ್ಮನಿಗೆ ಹೆದರುತ್ತಿದ್ರು . ಒಂದಾದ ಮೇಲೆ ಇನ್ನೊಂದು , ಇನ್ನೊಂದಾದ ಮೇಲೆ ಮತ್ತೊಂದು ಜವಾಬ್ದಾರಿ ಮುಗಿಸಿ , ಒತ್ತಡ , ಅನಾರೊಗ್ಯಕ್ಕೆ ಸಿಲುಕಿ ಅವರೂ ಬಳಲಿದ್ದರು, ಅವರಿಗೂ ವಯಸ್ಸಾಗಿತ್ತು …. ಮಗುವಿನಿಂದಲೂ ನೋಡ್ಕೊಂಡು ಬರ್ತಿದ್ದ ಅಪ್ಪ ಸಮಯ ಹೋಗ್ತಿದ್ದಂತೇ ನಮ್ಮ ಮುಂದೆಯೇ ಮಗುವಾಗಿಬಿಟ್ಟಿದ್ದರು , ಯಾವ ದೇಹದ ಮೇಲೆ ನಾವು ಕೂತು ಉಪ್ಪು ಮೂಟೆ ಆಡಿದ್ವೋ ಆ ದೇಹ ಮುಪ್ಪಾಗಿತ್ತು , ಯಾವ ಶಕ್ತಿಯುತ ತೋಳಲ್ಲಿ ನಾವು ಬೆಳದಿದ್ವೋ ಆ ತೋಳು ಶಕ್ತಿ ಕಳೆದುಕೊಂಡು ಆಸರೆ ಬಯಸಿ ಹಾಸಿಗೆ ಸೇರಿತ್ತು

    ಬದುಕು ಕಲಿಸಿದ ಅಪ್ಪ ಒಂದು ದಿನ ನಮ್ಮನ್ನು ಬದುಕಲು ಬಿಟ್ಟು ಹೋಗಿಬಿಡುತ್ತಾರೆ . ಯಜಮಾನ ಅನ್ನೋ ಪದಕ್ಕೆ ಸೂಕ್ತ ಅರ್ಥ ಅವರೇ ಅವರನ್ನು ಬಿಟ್ಟರೆ ಆ ಜಾಗ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ . ಪರಿಪೂರ್ಣ ಬದುಕನ್ನು ಅನುಭವಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಕರ್ತವ್ಯಗಳನ್ನು ಮುಗಿಸಿ ಹೊರಟಿರುತ್ತಾರೆ , ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಲಿಸಿದ ವಿದ್ಯೆ, ತೋರಿಸಿದ ದಾರಿ , ಮೂಡಿಸಿದ ಭರವಸೆ , ಬೆಳೆಸಿದ ರೀತಿ , ಅವರ ಆದರ್ಶಗಳು ಯಾವತ್ತಿಗೂ ನಮ್ಮೊಂದಿಗಿರುತ್ತವೆ ….. ಇವತ್ತು ನಾವು ತಲೆಯೆತ್ತಿ ಬದುಕುತ್ತಿದ್ದೇವೆಂದರೆ ಅದಕ್ಕೆ ಕಾರಣ ” ಅಪ್ಪ ” ಎನ್ನುವ ಆಕಾಶ 

    ಆರ್ಥಿಕತೆಗೆ ಕೊರೊನಾ ವರ್ಷದ ಆಘಾತ

    ಕೊರೊನಾ ವೈರಸ್ ದೇಶದ ಆರ್ಥಿಕತೆಗೆ ತಂದಿಟ್ಟ ಆಘಾತ ಅಂತಿದ್ದಲ್ಲ. ಇದರಿಂದ ಚೇತರಿಸಿಕೊಳ್ಳಲು ಕನಿಷ್ಠವೆಂದರೂ ಒಂದು ವರ್ಷ ಕಾಲವಾದರೂ ಭಾರತಕ್ಕೆ ಬೇಕು. ಇದು ಅತಿಶಯೋಕ್ತಿಯಲ್ಲ, ಆದರೆ ವಾಸ್ತವ.

    ಇದನ್ನು ಅರ್ಥೈಸಲು ಬಹುದೊಡ್ಡ ಮಟ್ಟಿನ ಆರ್ಥಿಕ ತಜ್ಞರಾಗುವ ಅಗತ್ಯವೇ ಇಲ್ಲ. ಸಾಮಾನ್ಯ ಜ್ಞಾನ ಇರುವ ಪ್ರತಿಯೊಬ್ಬರಿಗೂ ಮಾರುಕಟ್ಟೆಯಲ್ಲಿ ಯಾವ ರೀತಿ ವ್ಯವಹಾರ ಗಣನೀಯ ಕುಸಿತ ಕಂಡಿದೆ, ಖರೀದಿ ಸಾಮರ್ಥ್ಯ ಯಾವ ರೀತಿ ಇಳಿದು ಹೋಗಿದೆ, ಜನರು ಹೇಗೆ ಹೈರಾಣಾಗಿ ಕೊರೊನಾ ವೈರಸ್ ಸೋಂಕು ಅದರಿಂದಾದ ಲಾಕ್‌ಡೌನ್‌ನ್ನು ಶಪಿಸುತ್ತಿದ್ದಾರೆ ಎಂಬುದನ್ನು ಸ್ವಲ್ಪ ಗ್ರಹಿಸಿದರೂ ಸಾಕು. ತರಕಾರಿ, ದಿನ ನಿತ್ಯದ ಆವಶ್ಯಕ ದಿನಸಿ ವಸ್ತುವಿನಿಂದ ಹಿಡಿದು ಕೈಗಾರಿಕೋತ್ಪನ್ನಗಳ ಮಾರಾಟ ತೀವ್ರಗತಿಯ ಕುಸಿತ ಕಂಡಿದೆ.

    ಎಫ್‌ಐಸಿಸಿಐ (ಫಿಕಿ) ಮತ್ತು ತೆರಿಗೆ ಸಲಹೆಗಾರ ಏಜೆನ್ಸಿ ಆಗಿರುವ ಅಡ್ವೆಸರಿ ಈ ಕುರಿತಂತೆ ಈಗಾಗಲೇ ಸಮೀಕ್ಷೆ ನಡೆಸಿದೆ. ಸುಮಾರು 380ಕ್ಕೂ ಹೆಚ್ಚು ಕೈಗಾರಿಕೆಗಳ ಸಮೀಕ್ಷೆಯನ್ನು ಇದು ನಡೆಸಿದ್ದು, ಬಹುತೇಕ ಕಂಪನಿಗಳು ಭವಿಷ್ಯದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಹುದೊಡ್ಡ ಹೋರಾಟವನ್ನೇ ನಡೆಸಬೇಕಾಗಿದೆ. ಅಲ್ಲಿಗೆ ನಿರುದ್ಯೋಗ ಖಾತರಿ ಎಂಬಂತಾಯಿತು.

    ಬಹುತೇಕ ಕಂಪನಿಗಳು ಈಗಾಗಲೇ ಕಾಸ್ಟ್ ಕಟ್ಟಿಂಗ್ ನೀತಿಯನ್ನು ಅನುಸರಿಸಲಾರಂಭಿಸಿವೆ. ಅದರಲ್ಲೂ ಮುಖ್ಯವಾಗಿ ರಿಲೆಯನ್ಸ್ ನಂತಹ ದಿಗ್ಗಜ ಕಂಪನಿಯೂ ಶೇ. 10ರಿಂದ 50ರಷ್ಟು ವೇತನ ಕಡಿತಕ್ಕೆ ಮುಂದಾಗಿದೆ. ಇದು ಸಹಜವಾಗಿಯೇ ಜನರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡಲಿದೆ. ಇದರ ಪರಿಣಾಮ ಮತ್ತೆ ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಪ್ರಮಾಣ ಇಳಿಕೆಯಾಗಲಿದೆ.

    ಇನ್ನು ಕೆಲವು ಸಮೀಕ್ಷೆಗಳ ಪ್ರಕಾರ, ಈ ಆರ್ಥಿಕ ವರ್ಷದಲ್ಲಿ ಕೈಗಾರಿಕಾ ಉತ್ಪಾದನೆಗಳ ಮಾರಾಟದ ಪ್ರಮಾಣ ಗಣನೀಯ ಇಳಿಕೆ ಕಾಣಲಿವೆ. ಇನ್ನೇನಿದ್ದರೂ ಮುಂದಿನ ಡಿಸೆಂಬರ್ ವೇಳೆಗೆ ಮಾತ್ರ ಅದರಲ್ಲೂ ಕೊರೊನಾ ಹಾವಳಿ ಸಂಪೂರ್ಣ ಇಳಿಮುಖವಾದರೆ ಮಾತ್ರ ಸಕಾರಾತ್ಮಕ ಬೇಡಿಕೆಯನ್ನು ಕಾಣುವ ನಿರೀಕ್ಷೆಯನ್ನು ಅವು ಇಟ್ಟುಕೊಂಡಿವೆ.

    ಇನ್ನು ಹೊಟೇಲ್ ಮತ್ತು ಸೇವಾವಲಯದ ವಿಷಯಕ್ಕೆ ಬಂದರೆ ಸಹಜವಾಗಿಯೇ ಇವುಗಳು ಅನಿವಾರ್ಯತೆ ಪಟ್ಟಿಯಲ್ಲಿವೆ. ಹೀಗಾಗಿ ಒಂದಿಷ್ಟು ಹಿಂಜರಿಕೆ ಕಂಡರೂ ದಿನ ಕಳೆದಂತೆ ಸುಧಾರಣೆಯ ಹಾದಿಯಲ್ಲಿ ಸಾಗುವ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಮುಂಬಯಿ ಮೂಲಕ ಹೊಟೇಲ್ ಉದ್ಯಮಿ ನರೇಶ್ ರೈ ಅಭಿಪ್ರಾಯ ಪಟ್ಟರು. ಆದರೆ, ದೊಡ್ಡ ಹೊಟೇಲ್ ಗಳು ಚೇತರಿಸಿಕೊಳ್ಳಲು ಇನ್ನಷ್ಟು ಕಾಲ ತೆಗೆದುಕೊಳ್ಳಬಹುದು. ಯಾಕೆಂದರೆ ಪ್ರವಾಸೋದ್ಯಮಕ್ಕೆ ತೀವ್ರತರವಾದ ಹೊಡೆತ ಬೀಳುವುದರಿಂದ ಜನರ ಪ್ರಯಾಣ ಕಡಿಮೆಯಾಗಲಿದೆ. ಇದು ದೊಡ್ಡ ಹೊಟೇಲ್ ಮತ್ತು ಪ್ರವಾಸಿ ಸ್ಥಳಗಳ ಮೇಲೆ ಅವಲಂಬಿತರಾದ ಸಣ್ಣ ಉದ್ಯಮಿಗಳ ವ್ಯವಹಾರದ ಮೇಲೆ ದೀರ್ಘಾವ ದುಷ್ಪರಿಣಾಮ ಬೀರಲಿದೆ ಎಂದವರು ಹೇಳಿದರು.

    ಕೇಂದ್ರ ಸರಕಾರವು ಆರ್ಥಿಕತೆಯ ಚೇತರಿಕೆಗೆ ಈಗಾಗಲೇ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದ್ದು, ಹಂತ ಹಂತವಾಗಿ ಅವುಗಳ ವಿವರ ನೀಡಿದೆ. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದು ಜನರಿಗೆ ನೆರವು ನೀಡಿ ಆ ಮೂಲಕ ಆರ್ಥಿಕತೆಗೆ ಚೇತರಿಕೆ ನೀಡಲು ಕನಿಷ್ಠವೆಂದರೂ 6ರಿಂದ 12 ತಿಂಗಳು ಬೇಕಾಗಬಹುದು ಎಂದು ಆರ್ಥಿಕ ತಜ್ಞ ದಿನೇಶ್ ಕನಾಬರ್ ಅಭಿಪ್ರಾಯ ಪಟ್ಟಿದ್ದಾರೆ. ಮುಖ್ಯವಾಗಿ ಸರಕಾರದ ಯೋಜನೆಯು ಆರ್ಥಿಕತೆಗೆ ನಗದನ್ನು ಒಳಹರಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ. ಇನ್ನು ವ್ಯವಹಾರ ನಡೆಸುವ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಹೆಚ್ಚಿಸುವುದಕ್ಕೆ ಮತ್ತಷ್ಟು ಕಾಲಾವಕಾಶ ಅನಿವಾರ್ಯ ಮತ್ತು ಆವಶ್ಯಕ ಎಂದವರು ಹೇಳಿದರು.

    ಇನ್ನು ಕೈಗಾರಿಕೆಗಳು, ಬ್ಯಾಂಕುಗಳು ಮತ್ತು ಉದ್ಯಮಗಳು ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಬಂಡವಾಳ ಆಕರ್ಷಣೆಯ ನಿಟ್ಟಿನಲ್ಲಿ ಕನಿಷ್ಠವೆಂದರೂ 6ರಿಂದ 12 ತಿಂಗಳ ಕಾಲಾವಕಾಶಕ್ಕೆ ಮನ ಮಾಡಬಹುದು. ಅಲ್ಲಿಗೆ ಒಂದು ವರ್ಷಗಳ ಕಾಲ ಆರ್ಥಿಕತೆಯ ಪರಿಸ್ಥಿತಿ ಇದೇ ರೀತಿ ಮುಂದುವರಿಯಲಿದೆ. ರಫ್ತು ಉದ್ಯಮವನ್ನೇ ನಂಬಿರುವ ಕಂಪನಿಗಳ ಪೈಕಿ ಶೇ. 43ರಷ್ಟು ಸಂಸ್ಥೆಗಳು ಸದ್ಯದ ಮಟ್ಟಿಗೆ ಹೆಚ್ಚಿನ ಉತ್ಪಾದನೆ ಮತ್ತು ಹೂಡಿಕೆಗೆ ಮುಂದಾಗುವ ಸಾ‘್ಯತೆಗಳು ಕಡಿಮೆಯಿವೆ. ಇದರಿಂದ ಸ್ಥಳೀಯವಾಗಿ ಜವಳಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಜ್ರ, ಚಿನ್ನಾಭರಣ ಸೇರಿದಂತೆ ನಾನಾ ಉದ್ಯಮಗಳು ಸೊರಗುವುದು ಖಚಿತ. ಅಂತಿಮವಾಗಿ ಜನರ ಉದ್ಯೋಗಾವಕಾಶ ಕಡಿಮೆಯಾಗಲಿದೆ. ಇದರ ಪರಿಣಾಮವಾಗಿ ಖರೀದಿ ಸಾಮರ್ಥ್ಯ ಇಳಿಕೆಯಾಗಿ, ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ. ಇದು ಒಟ್ಟಾರೆಯಾಗಿ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದಂತೂ ಸ್ಪಷ್ಟ.

    ಮೈಕೊಡವಿಕೊಂಡ ಕಾಂಗ್ರೆಸ್ಸಿಗೆ ತೊಡೆ ತಟ್ಟುವಂತೆ ಮಾಡಿದ ಡಿಕೆಶಿ

    * ಪಿ.ಕೆ. ಚನ್ನಕೃಷ್ಣ

    ರಾಜ್ಯ ಕಾಂಗ್ರೆಸ್ಸಿನಲ್ಲಿ ಡಿಕೆಶಿ ಪರ್ವ ಅದ್ಭತವಾಗಿ ಟೇಕಾಫ್ ಆಗಿದೆ. ಕೊರೋನ ಮಾರಿಯೊಂದು ಇಲ್ಲದೆ ಹೋಗಿದ್ದಿದ್ದರೆ ಘಟಾನುಘಟಿಗಳನ್ನು ಹಿಂದಕ್ಕೆ ನೆಟ್ಟಿ ಕೆಪಿಸಿಸಿ ಗಾದಿ ಮೇಲೆ ಬಂದು ಕೂತ ಅವರ ಸಾಹಸಗಾಥೆಗಳ ಬಗ್ಗೆ ಏನಿಲ್ಲವೆಂದರೂ ಒಂದು ವಾರ, ಅದಕ್ಕಿಂತ ಹೆಚ್ಚು ಕಾಲ ಸುದ್ದಿವಾಹಿನಿಗಳಲ್ಲಿ ಭರ್ಜರಿ ಮಸಾಲೆಯುಕ್ತ ಭಜನೆ, ಟೀಕೆ ಟಿಪ್ಪಣಿಗಳ ಮಿಸಳ್ಬಾಜಿಯೇ ಇರುತ್ತಿತ್ತು. ಅವರು ಅಧಿಕಾರ ಸ್ವೀಕರಿಸುವ ಸಮಾರಂಭವೇನಾದರೂ ಆಗಿದ್ದಿದ್ದರೆ, ರಾಜ್ಯ ಕಾಂಗ್ರೆಸ್ ಪಾಲಿಗೆ ಅದೊಂದು ಸ್ಮರಣೀಯ ಕಾರ್ಯಕ್ರಮ ಆಗುತ್ತಿತ್ತು. ಅದು ಅಗದ ಕಾರಣಕ್ಕೆ ಡಿಕೆಶಿ ವಿರೋಧಿಗಳು ಕೊರಿನಾಗೆ ಥ್ಯಾಂಕ್ಸ್ ಹೇಳುತ್ತಿರಬಹುದು.

    ತಿಹಾರದಿಂದ ಹೊರಬಂದು ನೇರ ದಿಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸೆಂಟರ್ ಸೀಟಿನಲ್ಲಿ ಕೂತು ನಿರ್ಣಾಯಕ ಅಥವಾ ನಿರ್ಧಾರಿತ ನಾಯಕನಂತೆ ಪ್ರೆಸ್ಮೀಟ್ ಮಾಡಿ, ಅಲ್ಲಿಂದ ಹೊರಟು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಆ ವ್ಯಕ್ತಿಗೆ ಸಿಕ್ಕ ಅಭೂತಪೂರ್ವ ಸ್ವಾಗತ ಇತರೆ ಪಕ್ಷಗಳ ನಾಯಕರ ಮಾತು ಹಾಗಿರಲಿ, ಸ್ವಪಕ್ಷದವರ ಹೊಟ್ಟೆಯಲ್ಲೇ ಬೆಂಕಿಬೀಳಲು ಕಾರಣವಾಗಿತ್ತು. ಅಲ್ಲಿಂದ ಹೆದ್ದಾರಿ ೭ರಲ್ಲಿ ಪ್ರವಾಹದಂತೆ ಸಾಗಿಬಂದ ಮೆರವಣಿಗೆಯಲ್ಲಿ ಒಂಟಿ ಸಲಗದಂತೆ ಮಿಂಚಿದ್ದರು ಡಿಕೆಶಿ.

    ಅದಾದ ನಂತರ ಸಂಭವಿಸುತ್ತ ಬಂದ ಬೆಳವಣಿಗೆಗಳು ಕೆಲ ಕಾಂಗ್ರೆಸ್ಸಿಗರ ಕಣ್ಣು ಉರಿಯುವಂತೆ ಮಾಡಿದ್ದವು. ಆ ಹೊತ್ತಿಗೇ ಡಿಕೆಶಿಯೇ ಕೆಪಿಸಿಸಿ ಭತ್ತಳಿಕೆಯಲ್ಲಿರುವ ಮುಂದಿನ ಬ್ರಹ್ಮಾಸ್ತ್ರ ಎಂಬುದು ಕಾರ್ಯಕರ್ತರಿಗೂ ತುಂಬಾ ಚೆನ್ನಾಗಿ ಆರ್ಥವಾಗಿಬಿಟ್ಟಿತ್ತು. ಚಾನ್ಸ್ ಸಿಕ್ಕಾಗಲೆಲ್ಲ ತೆರೆಮರೆಯಲ್ಲಿ ಗುಮ್ಮುತ್ತಿದ್ದ ಅತ್ತ ಮೂಲನಿವಾಸಿಗಳೂ, ಇತ್ತ ವಲಸೆ ಬಂದು ಹಳಬರಾದವರೂ ಮುಂದಿನ ದಿನಗಳಲ್ಲಿ ನಮ್ಮ ರಾಜಿಪರ್ವ ಆರಂಭವಾಯಿತು ಎಂದೆ ಭಾವಿಸಿಬಿಟ್ಟರು. ಡಿಕೆಶಿ ರಾಜಿ ಮಾಡಿಕೊಳ್ಳುವುದಿಲ್ಲ. ಉಳಿದವರಿಗೆ ರಾಜಿ ಮಾಡಿಕೊಳ್ಳದೇ ವಿಧಿಯಿಲ್ಲ. ಅವರನ್ನು ಹತ್ತರದಿಂದ ಹಲವು ದಶಕಗಳಿಂದ ಬಲ್ಲ ಹಿರಿಯ ನಾಯಕರೊಬ್ಬರ ಮಾತಿದು.

    ಪೂರ್ವ ನಿರ್ಧಾರಿತ:
    ಜೈಲಿನಿಂದ ರಿಲೀಸ್ ಆಗಿ ಜನಪಥ ಹತ್ತರಲ್ಲಿ ಸೋನಿಯಾ ಗಾಂಧಿ ಅವರನ್ನು ತಮ್ಮ ಸಹೋದರ ಸುರೇಶ್ ಅವರೊಂದಿಗೆ ಭೇಟಿಯಾದ ಕೂಡಲೇ ಡಿಕೆಶಿ ಅವರು ಕೆಪಿಸಿಸಿ ಪಟ್ಟಕ್ಕೇರುವುದು ಖಚಿತವಾಗಿಬಿಟ್ಟಿತ್ತು. ಸೋನಿಯಾ ಆವತ್ತೇ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಿದ್ದರು. ಅವರು ಆವತ್ತೇ ರಾಜ್ಯ ಕಾಂಗ್ರೆಸ್ ಉಸ್ತವಾರಿ ಕೆ.ಸಿ. ವೇಣುಗೋಪಾಲ್, ಗುಲಾಂ ನಬಿ ಆಜಾದ್ ಮುಂತಾದವರಿಗೆ ಈ ಗುಟ್ಟು ಮುಟ್ಟಿತ್ತು. ಇನ್ನು ದಿನದ ಮೂರೊತ್ತು ಎಐಸಿಸಿ ಪಡಸಾಲೆಯಲ್ಲೇ ಠಿಕಾಣೆ ಹಾಕಿ ಅಲ್ಲೇ ಕಾಫಿ, ಟೀ, ತಿಂಡಗಳನ್ನು ತೀರಿಸಕೊಳ್ಳುವ ರಾಜ್ಯದ ಕಾಯಂ ದಿಲ್ಲಿ ಕಾಂಗ್ರೆಸ್ಸಿಗರಿಗೆ ಕೂಡ ಡಿಕೆಶಿ ನೆಕ್ಸ್ಟ್ ಎನ್ನುವ ಸಣ್ಣ ಸುಳಿವು ಇರಲಿಲ್ಲ. ಅವರು ಕೆಪಿಸಿಸಿ ಅಧಯಕ್ಷರಾಗಲು ಹೇಗೆ ಸಾಧ್ಯ? ಸಿಬಿಇ, ಇಡಿ ಅವರನ್ನು ಸುಮ್ಮನೆ ಬಿಡುತ್ತವೆಯೇ? ಅವರಿಗೆ ಮುಂದೆ ಜೈಲೇ ಗತಿ ಎಂದು ಗಿಣಿಲೆಕ್ಕ ಹಾಕುತ್ತಿದ್ದವರಲ್ಲಿ ಒಬ್ಬರಿಗೂ ಡಿಕೆಶಿ ಉರುಳಿಸುತ್ತಿದ್ದ ಪಗಡೆಗಳ ಲೆಕ್ಕ ಗೊತ್ತಾಗಲೇ ಇಲ್ಲ. ಹೀಗಾಗಿ ಕೆಲ ನಾಯಕಶಿಕಾಮಣಿಗಳು ಅವರಿಗೆ ಹೇಗಾದರೂ ಕೆಪಿಸಿಸಿ ಗಿರಿ ತಪ್ಪಿಸಲು ಅವಿರತವಾಗಿ ಬೆಂಗಳೂರಿನಿಂದ ದಿಲ್ಲಿ ಯಾತ್ರೆ ಮಾಡಿದ್ದು ನಿರುಪಯುಕ್ತವಾಯಿತು ಎಂದು ಹಿರಿಯ ಕಾಂಗ್ರೆಸ್ಸಿಗರೊಬ್ಬರು ಕನ್ನಡ ಪ್ರೆಸ್ ಜತೆ ಹೇಳಿಕೊಂಡಿದ್ದಾರೆ.

    ಮಾರ್ಚ್ ೧೧ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಕೊನೆಗೂ ಪ್ರಕಣೆ ಹೊರಡಿಸಿಬಿಟ್ಟರು. ಡಿಕೆಶಿ ಅಧ್ಯಕ್ಷರಾದರೆ, ಅಕ್ಕಪಕ್ಕದಲ್ಲಿ ಸಲೀಮ್ ಅಹಮದ್ ಮತ್ತು ಈಶ್ವರ ಖಂಡ್ರೆ ಅವರನ್ನು ತಂದು ಕೂರಿಸಲಾಗಿತ್ತು. ಅಷ್ಟಕ್ಕೆ ಡಿಕೆಶಿ ವಿರೋಧಿಗಳು ಬೇಳೆ ಬೇಯಿಸಿಕೊಂಡಿದ್ದರು. ಅವರು ನಡೆಸಿದ ಬ್ಲಾಕ್ಮೇಲ್ ತಂತ್ರಗಳಿಗೆ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅಂತವರೂ ತಾಳ ಹಾಕಿದ್ದರು ಎಂಬುದೇ ದೊಡ್ಡ ಸುದ್ದಿ. ಅಂದರೆ, ಬೆಂಗಳೂರು, ಮೈಸೂರಿನಲ್ಲಿ ತಮ್ಮ ಬೇಳೆ ಬೇಯದು ಅನ್ನುವುದನ್ನು ಅರಿತುಕೊಂಡ ಅವರು ಖರ್ಗೆ ಅವರನ್ನು ದಾಳವನ್ನಾಗಿ ಮಾಡಿಕೊಳ್ಳಲು ಯತ್ನಸಿದರು. ಆದರೆ ವಲಸೆ ಬಂದವರಿಂದ ಮೂಲ ಕಾಂಗ್ರೆಸ್ಸಿಗರು ತೆತ್ತಿದ್ದ ಬೆಲೆಯ ಬಗ್ಗೆ ಗೊತ್ತಿದ್ದ ಖರ್ಗೆ ನಿಜಕ್ಕೂ ತಮ್ಮ ದೊಡ್ಡಸ್ಥಿಕೆ ಉಳಿಸಿಕೊಂಡು ಸುಮ್ಮನಾದರು ಎಂದು ಡಿಕೆಶಿ ಆಪ್ತರೊಬ್ಬರು ಹೇಳುವ ಮಾತು.

    ಕೆಪಿಸಿಸಿ ಕೂಗುತ್ತಿದೆ:
    ಡಿಕೆಶಿ ಪಟ್ಟಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸಿಗರ ಹುರುಪೂ ಮುಗಿಲುಮುಟ್ಟಿದೆ. ಇನ್ನೇನು ಕನಕಪುರ ಬಂಡೆ ಸಿಎಂ ಆಗಿಯೇಬಿಟ್ಟರು ಎನ್ನುವಂತೆ ಅವರ ಜೋಶ್ ಬಂದಿದೆ ಕಾರ್ಯಕರ್ತರಲ್ಲಿ. ಕೊರೊನ ಒಂದಿಲ್ಲದಿದ್ದರೆ ಇಷ್ಟುಹೊತ್ತಿಗೆ ಯಡಿಯೂರಪ್ಪ ಸರಕಾರದ ವಿರುದ್ಧ ರಾಜ್ಯದಲ್ಲಿ ಪ್ರಬಲವಾದ ಅಲೆಯೇಳುವಂತೆ ಮಾಡಿಬಿಡುತ್ತಿದ್ದರು ಡಿಕೆಶಿ. ತಂತ್ರಗಾರಿಕೆಯಲ್ಲಿ ಅವರು ಹೇಗೆ ಎಂಬುದು ಇಡೀ ರಾಜ್ಯಕ್ಕೇನು ದೇಶಕ್ಕೆ ಗೊತ್ತಿರುವ ಸಂಗತಿ. ಅಷ್ಷೇ ಏಕೆ? ಈ ಹೊತ್ತಿಗೆ ಇಡೀ ಮೂವತ್ತೂ ಜಿಲ್ಲೆಗಳನ್ನು ಒಂದು ರೌಂಡ್ ಹಾಕಿ ಬರುತ್ತಿದ್ದರು ಅವರು. ಅವರ ದಮ್ಮು, ತಾಕತ್ತಿನ ಬಗ್ಗೆ ದೂಸರಾ ಮಾತೇ ಇಲ್ಲ. ಈ ಬಗ್ಗೆ ಅವರ ವಿರೋಧಿಗಳೂ ಕೆಮ್ಮಲಾರರು ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತ ಆ.ರ್. ವಿಠ್ಠಲಮೂರ್ತಿ.

    ಡಾ. ಜಿ. ಪರಮೇಶ್ವರ್ ಆಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ಸಿಏಮ ಆಗಿದ್ದರು. ಪರಂ ನೇತೃತ್ವದಲ್ಲೇ ಚುನಾವಣೆ ಎದುರಿಸಿದರೂ ಸಿದ್ದು ಜತೆಗಿನ ಹೊಂದಾಣಿಕೆಯ ಕೊರತೆ ಹಾಗೂ ಮಾಸ್ ಆಫೀಲು ಇಲ್ಲದ ಕಾರಣಕ್ಕೆ ರಣಾಂಗಣದಲ್ಲಿ ಕಾಂಗ್ರೆಸ್ ಸೋಲುವಂತಾಯಿತು. ಸ್ವತಃ ಸಿದ್ದು ಮೈಸೂರಿನಲ್ಲಿ ಸೋತರು. ಬೇರೆ ಗತ್ಯಂತರವಿಲ್ಲದೆ ಜೆಡಿಎಸ್ ಜತೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡು ಸರಕಾರ ಮಾಡಬೇಕಾಯಿತು. ಆ ಮೈತ್ರಿ ಸರಕಾರ ಬರಲು ಎಚ್ ಡಿ ಕುಮಾರಸ್ವಾಮಿ ಮತ್ತು ಡಿ,ಕೆ, ಶಿವಕುಮಾರ್ ಅವರಿಬ್ಬರೇ ಮೂಲ ಕಾರಣರು. ಆಮೇಲೆ ಆಪರೇಷನ್ ಕಮಲ, ಇದಕ್ಕೆ ಕಾಂಗ್ರೆಸ್ಸಿಗರಲ್ಲಿಯೇ ಕೆಲವರು ಕುಮ್ಮಕ್ಕು ನೀಡಿದ್ದು, ಐಟಿ-ಇಡಿ ದಾಳಿ, ಬಳಿಕ ಡಿಕೆಶಿ ಜೈಲುಪಾಲಾಗಿದ್ದು ಇದೆಲ್ಲ ಇತಿಹಾಸ.

    ಆದರೆ ಕೆಪಿಸಿಸಿ ಪಟ್ಟಕ್ಕೆ ಅನೇಕ ಸವಾಲುಗಳ ನಡುವೆಯೂ ಬಂದು ಕೂತ ಡಿಕೆಶಿ ಇತಿಹಾಸ ಸೃಷ್ಟಿ ಮಾಡವುದಂತೂ ಖಂಡಿತ. ಈವರೆಗೂ ತಣ್ಣಗೆ ಮೋಡದ ಕೆಳಗೆ ಮಲಗಿದ್ದ ಹಸುವಿನಂತೆ ಮಲಗಿದ್ದ ರಾಜ್ಯ ಕಾಂಗ್ರೆಸ್ ಹೋರಿಯಂತೆ ಪುಟಿದೆದ್ದಿದೆ. ಸ್ವತಃ ಡಿಕೆಶಿಯೇ ಅಖಾಡಕ್ಕೆ ಇಳಿದಿದ್ದಾರೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಯಡಿಯೂರಪ್ಪ ಸರಕಾರ ಹತ್ತಲ್ಲ, ನೂರು ಮೆಟ್ಟಿಲು ಕೆಳಗಿಳಿದು ಬರುವಂತೆ ಮಾಡಿದ್ದಿ ಇದೇ ಕನಕಪುರ ಬಂಡೆ. ಅದಕ್ಕಾಗಿ ಅವರು ಮೆಜೆಸ್ಟಿಕ್ ನಿಲ್ದಾಣದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಧರಣಿ ಕೂತಿದ್ದು ಕಾಂಗ್ರೆಸ್ ಪಾಲಿಗೆ ಹೊಸ ಚೈತನ್ಯವನ್ನೇ ನೀಡಿದೆ. ಲಾಕ್ ಡೌನ್ ನಡುವೆಯೂ ಸಾವಿರಾರು ಕಾರ್ಯಕರ್ತರು ಅವತ್ತು ಡಿಕೆಶಿ ಜತೆಗೂಡಿದ್ದರು. ಇದರ ಪ್ರತಿಫಲವಾಗಿ ವಲಸೆ ಕಾರ್ಮಿಕರೆಲ್ಲ ನಯಾಪೈಸೆ ಖರ್ಚಿಲ್ಲದೆ ತಮ್ಮ ಊರುಗಳನ್ನು ಸೇರಿಕೊಳ್ಳುವಂತಾಯಿತು. ಕೊರೊನ ವಿಚಾರದಲ್ಲಂತೂ ಅವರು ಸರಕಾರಕ್ಕೆ ಹೆಜ್ಜೆ ಹೆಜ್ಜೆಗೂ ಬಿಸಿ ಮುಟ್ಟಿಸುತ್ತಿದ್ದಾರೆ ಎಂಬುದು ಗುಟ್ಟಾಗೇನೂ ಉಳಿದಿಲ್ಲದ ಸಂಗತಿ.

    ಕಷ್ಟಕಾಲದಲ್ಲೂ ಸಂಘಟನೆ:
    ವೈರಸ್ ಕಾಡುತ್ತಿರುವ ಕಾಲದಲ್ಲಿಯೂ ಅವರು ಪಕ್ಷ ಸಂಘಟನೆಯನ್ನೂ ಮಾಡುತ್ತಿದ್ದಾರೆ. ನಿತ್ಯವೂ ಕಾರ್ಯಕರ್ತರನ್ನು ಬೇಟಿಯಾಗುತ್ತಿದ್ದಾರೆ. ನಾಯಕರ ಮನೆಬಾಗಿಲಿಗೆ ಎಡತಾಕುತ್ತಿದ್ದಾರೆ. ನಿರಾಶೆಗೊಂಡಿದ್ದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ತಮ್ಮ ಮನೆಯಿಂದಲೇ ಜಿಲ್ಲಾ ನಾಯಕರ ಜತೆ ವಿಡಿಯೋ ಸಂವಾದ ಮಾಡುತ್ತಿದ್ದಾರೆ. ತಾವಿರುವ ಪ್ರದೇಶಗಳಲ್ಲಿಯೇ ಕೊರೊನ ಯೋಧರಾಗಿ ಕೆಲಸ ಮಾಡುವಂತೆ ಕಾರ್ಯಕರ್ತರನ್ನು ಉತ್ತೇಜಿಸುತ್ತಿದ್ದಾರೆ. ಅದಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಶ್ರಮಿಸುತ್ತಿದ್ದಾರೆ.

    ಇತ್ತೀಚೆಗೆ ಅವರು ಕಾರ್ಯಕರ್ತರಿಗೆ ನೀಡಿದ್ದ ಸಂದೇಶ ಹೀಗಿತ್ತು. “ಪಕ್ಷ ಬಲಪಡಿಸುವುದು ಎಲ್ಲರ ಕರ್ತವ್ಯ ನಿಜ. ಅದೇ ರೀತಿ ನಿಮ್ಮ ಸುತ್ತಮುತ್ತ ಇರುವ ಜನರ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಗುರುತರ ಹೊಣೆಗಾರಿಕೆ ನಿಮ್ಮ ಮೇಲಿದೆ. ನಮ್ಮ ಮೊದಲ ಆದ್ಯತೆ ಜನರು ಎಂಬುದನ್ನು ಮರೆಯಬಾರದು”

    ಮೆಜೆಸ್ಟಿಕ್ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆ ಆರ್ ಪುರದ ಮುಖಂಡರೊಬ್ಬರು ಕನ್ನಡ ಪ್ರೆಸ್ ಜತೆ ಮಾತನಾಡುತ್ತ ಹೇಳಿದ್ದಿಷ್ಟು… ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಲೀಡ್ ಮಾಡಬಲ್ಲ ನಾಯಕರೊಬ್ಬರು ನಮಗೆ ಇರಲಿಲ್ಲ. ಡಿಕೆಶಿ ಅವರಲ್ಲಿರುವ ಬಹುದೊಡ್ಡ ಕ್ವಾಲಿಟಿ ಅಂದರೆ, ಅವರು ತುಂಬಾ ಬೋಲ್ಡ್, ಧೈರ್ಯವಂತರು, ಜತೆಗೆ ಯಾರಿಗೂ ಹೆದರದ ವ್ಯಕ್ತಿತ್ವ ಅವರದ್ದು. ರಾಜಕಾರಣದಲ್ಲಿ ಅವರು ಯಾರನ್ನೂ ಅನುಕರಣೆ ಮಾಡಲ್ಲ, ಬದಲಿಗೆ ತಮ್ಮದೇ ಒಂದು ಸ್ಟೈಲ್ ಅವರದ್ದು. ಕಾರ್ಯಕರ್ತರಿಗೆ ಅದು ಇಷ್ಟವಾಗಿದೆ ಎನ್ನುತ್ತಾರೆ.

    ಬಹಳ ದಿನಗಳ ನಂತರ ಕೆಪಿಸಿಸಿಗೆ ಕೆಲಸ ಮಾಡುವ ಸಾರಥಿ ಸಿಕ್ಕಿದ್ದಾರೆ. ಇದುವರೆಗೂ ಪಟ್ಟದ ಮೇಲೆ ಬಂದು ಕೂತವರು ಡಿಕ್ಟೇಟ್ ಮಾಡುತ್ತಿದ್ದ ಕೆಲಸಗಳನ್ನಷ್ಟೇ ಮಾಡುತ್ತಾ ಕೇವಲ ಬ್ಯಾನರ್, ಫ್ಲೆಕ್ಸ್ ಕಟ್ಟುತ್ತಿದ್ದ ಕಾರ್ಯಕರ್ತರ ಪಡೆ ಕೂಡ ಈಗ ಮೈಕೊಡವಿ ಮೇಲೆದ್ದಿದೆ.

    ನೋಡೋಣ. ಮುಂದೆ ಕಾದಿವೆ ರೋಚಕ ಅಧ್ಯಾಯಗಳು.

    ಚೀನಾದ ಅಸಹಾಯಕ ಸ್ಥಿತಿಯ ಸಂಪೂರ್ಣ ಲಾಭ ಭಾರತಕ್ಕೆ ದಕ್ಕುವುದೆ?

    ಕೊರೊನಾಸೃಷ್ಟಿಕರ್ತದೇಶಜಾಗತಿಕವಾಗಿಏಕಾಂಗಿ

    • ಚಿರಾಗ್ ಆರ್ ಎಚ್

    ಇನ್ನುಮುಂದೆ ಜಗತ್ತು ಬದಲಾಗಲಿದೆ. ಕೊರೊನಾ ಪೂರ್ವ ಜಗತ್ತು ಮತ್ತು ಕೊರೊನಾ ನಂತರದ ಜಗತ್ತು ಎಂಬುದಾಗಿ ಇತಿಹಾಸ ಕರೆಯಲಿದೆ. ಮಹಾಯುದ್ಧದ ಪೂರ್ವ ಮತ್ತು ಬಳಿಕ ಎಂದು ಹೇಗಿತ್ತೋ, ಹಾಗೆಯೇ ಈಗಲೂ ಆಗುತ್ತದೆ’- ಹಾಗೆಂದು ಹೇಳಿದವರು ಪ್ರಧಾನಿ ನರೇಂದ್ರ ಮೋದಿ. ಇತ್ತೀಚೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೊ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಹೇಳಿರುವ ಈ ಮಾತು, ಜಾಗತಿಕ ರಾಜಕಾರಣಕ್ಕೂ ಅನ್ವಯವಾಗುತ್ತದೆ.

    ಈವರೆಗೆ ಪೌರಾತ್ಯ ರಾಷ್ಟ್ರಗಳ ಪೈಕಿ ಚೀನಾ, ಪಾಶ್ಚಿಮಾತ್ಯ ರಾಷ್ಟ್ರಗಳ ಪೈಕಿ ಅಮೆರಿಕಗಳನ್ನು ಬಲಾಢ್ಯ ರಾಷ್ಟ್ರಗಳೆಂದು ಹೇಳಲಾಗುತ್ತಿತ್ತು. ಕೊರೊನಾ ನಂತರದ ಜಗತ್ತಿನಲ್ಲಿ ಚೀನಾದ ಪ್ರಾಬಲ್ಯ ಕುಗ್ಗಲಿದೆ. ರಾಜಕೀಯ ಮತ್ತು ಆರ್ಥಿಕತೆಯ ಮೂಲವಾದ ಕೈಗಾರಿಕೆ ಎರಡರಲ್ಲೂ ಚೀನಾವನ್ನು ಬಗ್ಗುಬಡಿಯಲು ಎಲ್ಲ ದೇಶಗಳೂ ಕಾದು ಕುಳಿತಿವೆ. ಎಷ್ಟೇ ಕಸರತ್ತು ಮಾಡಿದರೂ ಈ ಪ್ರಹಾರದಿಂದ ಚೀನಾ ತಪ್ಪಿಸಿಕೊಳ್ಳುವುದು ಕಷ್ಟ. ಏಕೆಂದರೆ ಜಾಗತಿಕ ರಾಜಕಾರಣದಲ್ಲಿ ಚೀನಾ ಈಗ ಏಕಾಂಗಿ.

    `ಜೈವಿಕ ಅಸ್ತ್ರವಾಗಿ ಕೊರೊನಾ ಬಳಸಿಕೊಳ್ಳಲು ಚೀನಾ ಮುಂದಾಗಿತ್ತು. ಕೊರೊನಾ ಮಾನವ ನಿರ್ಮಿತ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ತಿಂಗಳ ಹಿಂದೆಯೇ ಆರೋಪಿಸಿದಾಗ ಜಗತ್ತಿನ ಯಾವ ರಾಷ್ಟ್ರಗಳೂ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಚೀನಾದ ಬೆನ್ನಿಗೆ ವಿಶ್ವ ಆರೋಗ್ಯ ಸಂಸ್ಥೆ ನಿಂತಿದೆ ಎಂದು ಆಪಾದಿಸಿದಾಗಲೂ ಬಹುತೇಕ ದೇಶಗಳು ಗಂಭೀರವಾಗಿ ಪರಿಗಣಿಸಲಿಲ್ಲ. ಚೀನಾದ ವುಹಾನ್ ನಗರದಿಂದ ಹೊರಟ ಸೋಂಕು ಯಾವಾಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಗ್ಗುಲು ಮುರಿಯಿತೋ, ಜನರ ಜೀವಗಳನ್ನು ಸಾವಿರದ ಸಂಖ್ಯೆಯಲ್ಲಿ ಆಪೋಶನ ತೆಗೆದುಕೊಳ್ಳುವುದು ಶುರುವಾಯಿತೋ ಆಗ ಎಲ್ಲರೂ ಟ್ರಂಪ್ ಆರೋಪದ ಕುರಿತು ಯೋಚನೆ ಮಾಡಲಾರಂಭಿಸಿದರು. ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಐರೋಪ್ಯ ಒಕ್ಕೂಟದ ಬಹುತೇಕ ದೇಶಗಳು ಸೋಂಕಿನ ಮೂಲದ ಕುರಿತು ಜಾಗತಿಕ ತನಿಖೆಯಾಗಲೇಬೇಕು ಎಂದು ಪಟ್ಟು ಹಿಡಿದಿವೆ. ವಿಶ್ವ ಆರೋಗ್ಯ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿಯೂ ಈ ಕುರಿತು ಹಕ್ಕೊತ್ತಾಯ ಮಂಡಿಸಲು ಮುಂದಾಗಿವೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಏಕಾಂಗಿಯಾಗಿರುವ ಚೀನಾ, ಈಗ ಕೊರೊನಾದಿಂದಾಗಿ ಮತ್ತೆ ಒಬ್ಬಂಟಿಯಾಗಿದೆ.

    ಕೊರೊನಾ ಮಾನವ ನಿರ್ಮಿತವೊ, ನೈಸರ್ಗಿಕ ಸೋಂಕೋ ಎನ್ನುವುದು ಸದ್ಯಕ್ಕೆ ಅಪ್ರಸ್ತುತ. ಆದರೆ ಆರಂಭದಲ್ಲಿಯೇ ಈ ಸೋಂಕಿನ ತೀವ್ರತೆ ಎಷ್ಟು ಎನ್ನವುದು ಅರಿವಿದ್ದರೂ ಅದನ್ನು ಜಾಗತಿಕ ಸಮುದಾಯದಿಂದ ಮುಚ್ಚಿಟ್ಟು ಚೀನಾ ಮೋಸ ಮಾಡಿದೆ ಎನ್ನುವುದು ಬಹುತೇಕ ದೇಶಗಳ ಆರೋಪ. ಅದಕ್ಕೆ ಉತ್ತರ ನೀಡಲಾಗದೇ ಚೀನಾ ಮತ್ತು ಅದರ ಬೆಂಬಲಕ್ಕೆ ನಿಂತಿರುವ ವಿಶ್ವ ಆರೋಗ್ಯ ಸಂಸ್ಥೆ ಹೆಣಗಾಡುತ್ತಿವೆ.

    ಇನ್ನೊಂದೆಡೆ ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಸ್ಪೇನ್, ಐರೋಪ್ಯ ಒಕ್ಕೂಟದಲ್ಲಿ ಚೀನಾದ ಏಕೈಕ ಮಿತ್ರ ರಾಷ್ಟ್ರಇಟಲಿ ಸಹ ಚೀನಾದಿಂದ ತಮ್ಮ ದೇಶದ ಕೈಗಾರಿಕೆಗಳನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರ ಮಾಡಿವೆ. ಬಹಳಷ್ಟು ದೇಶಗಳು ಚೀನಾ ಉತ್ಪನ್ನಗಳನ್ನೇ ನಿಷೇಧಿಸಲು ನಿರ್ಧರಿಸಿವೆ. ಭಾರತ, ಸ್ಪೇನ್ ಮೊದಲಾದ ರಾಷ್ಟ್ರಗಳಿಗೆ ಕಳಪೆ ಗುಣಮಟ್ಟದ ಕೊರೊನಾ ಆ್ಯಂಟಿಬಾಡಿ ಟೆಸ್ಟ್ ಕಿಟ್ ಹಾಗೂ ವೈಯಕ್ತಿಕ ಸುರಕ್ಷತಾ ಕಿಟ್ (ಪಿಪಿಇ) ಪೂರೈಕೆ ಮಾಡಿ ಅವಮಾನ ಅನುಭವಿಸಿರುವ ಚೀನಾಕ್ಕೆ ಇದು ಬಹುದೊಡ್ಡ ಹೊಡೆತ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಲಾಭಕೋರತನವೇ ಮುಖ್ಯವೆಂದು ಭಾವಿಸಿರುವ ಚೀನಾ ನಂಬಿಕೆಗೆ ಅರ್ಹವಲ್ಲದ ದೇಶ ಎನ್ನುವ ಭಾವನೆ ಜಾಗತಿಕ ಸಮುದಾಯದಲ್ಲಿ ಬಲಗೊಂಡಿದೆ.

    ಭಾರತಕ್ಕೆ ಅನುಕೂಲ: ಏಕಾಂಗಿಯಾಗಿ ನಿಂತಿರುವ ಚೀನಾದ ಅಸಹಾಯಕ ಸ್ಥಿತಿಯ ಸಂಪೂರ್ಣ ಲಾಭ ದಕ್ಕುವುದು ಭಾರತಕ್ಕೆ ಎನ್ನುವುದು ನಿರ್ವಿವಾದ. ಚತುರ ರಾಜತಾಂತ್ರಿಕ ನೀತಿಗಳಿಂದ ವಿಶ್ವದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುತ್ತ ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದ ಲಾಭ ಪಡೆಯದಷ್ಟು ದಡ್ಡರೇನಲ್ಲ. ಮುಖ್ಯವಾಗಿ, ಜಾಗತಿಕವಾಗಿ ಚೀನಾ ಬಲಹೀನವಾದಷ್ಟೂ ಚೀನಾದ ನೆರವನ್ನ ನಂಬಿಕೊಂಡಿರುವ ನಮ್ಮ ನೆರೆಯ ಪಾಕಿಸ್ತಾನ ಕೂಡ ದುರ್ಬಲವಾಗುತ್ತ ಹೋಗುತ್ತದೆ. ಅಮೆರಿಕಕ್ಕೂ ಚೀನಾ ವಿರುದ್ಧ ಭಾರತದಂತಹ ಗೆಳೆಯನ ಅಗತ್ಯವಿದೆ. ಆರ್ಥಿಕವಾಗಿ, ಸ್ವದೇಶಿ ಬಿತ್ತವನ್ನು ಬಿತ್ತುವ ಮೂಲಕ ಚೀನಾ ಉತ್ಪನ್ನಗಳಿಗೆ ಗೇಟ್‌ಪಾಸ್ ನೀಡುವ ಸೂಚನೆಯನ್ನು ಮೋದಿ ನೀಡಿದ್ದಾರೆ. ಚೀನಾದಿಂದ ಕಾಲ್ಕಿಳುವ ಕಂಪನಿಗಳಿಗೆ ಭಾರತ ಕೆಂಪುಹಾಸು ಹಾಸಿದೆ. ಈ ಸೂಕ್ಷ್ಮಗಳೆಲ್ಲ ಚೀನಾಕ್ಕೆ ಅರ್ಥವಾಗುವುದಿಲ್ಲ ಎಂದಲ್ಲ. ಅರ್ಥವಾಗಿರುವುದರಿಂದಲೇ ಸಿಕ್ಕಿಂನಲ್ಲಿ ಚೀನಾ ಯೋಧರು ಭಾರತೀಯ ಸೈನಿಕರ ಜತೆ ಜಗಳ ತೆಗೆದದ್ದು, ಲಡಾಖ್‌ನಲ್ಲಿ ವಾಸ್ತವ ಗಡಿ ರೇಖೆ ಬಳಿ ಚೀನಾ ಯುದ್ಧ ವಿಮಾನಗಳು ಹಾರಾಟ ನಡೆಸಿದ್ದು. ಭಾರತ ಇದನ್ನೆಲ್ಲ ಎದುರಿಸಿ ತಕ್ಕ ಪ್ರತ್ಯುತ್ತರ ನೀಡುವಷ್ಟು ಸಮರ್ಥವಾಗಿದೆ.

    ಕಿರುತೆರೆ ಚಿತ್ರೀಕರಣಕ್ಕೆ ಅನುಮತಿ: ಕೆ-ಟಿವಿಯಲ್ಲಿ ಭುಗಿಲೆದ್ದ ವಿವಾದ

    ಅಧ್ಯಕ್ಷರ ಏಕಪಕ್ಷೀಯ ನಿರ್ಧಾರ ಎಂದ ಕಾರ್ಯದರ್ಶಿ

    ಕಳೆದ ವಾರ ಕಿರುತೆರೆ ಚಿತ್ರೀಕರಣವನ್ನು ಮನೆಯೊಳಗೆ ಮಾಡಿಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ ಈ ಅನುಮತಿ ನೀಡಿದ ತಕ್ಷಣ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಶನ್‌ ಒಳಗಿದ್ದ ವಿವಾದ ಹೊರ ಬಂದಿದೆ.

    ಹೌದು, ಕರ್ನಾಟಕ ಟೆಲಿವಿಷನ್‌ ಅಸೋಸಿಯೇಶನ್‌ ಅಧ್ಯಕ್ಷ ಶಿವಕುಮಾರ್‌ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸೀರಿಯಲ್‌ಗಳನ್ನು ಮನೆಯೊಳಗೆ ಶೂಟಿಂಗ್‌ ಮಾಡಿಕೊಳ್ಳುತ್ತೇವೆ ನಮಗೆ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ್ದರು. ಅದರಂತೆ ಮನೆಯೊಳಗೆ ಚಿತ್ರೀಕರಣ ಮಾಡಿಕೊಳ್ಳಬಹುದು, ಶುಚಿತ್ವ ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಂಬಂತಹ ನಿಯಮಗಳನ್ನು ಸೂಚಿಸಿ ಸರ್ಕಾರ ಅನುಮತಿ ನೀಡಿತು. ಆದರೆ ಈ ನಿರ್ಧಾರವನ್ನು ಕೆಲವರು ವಿರೋಧಿಸಿ ಸಾರ್ವಜನಿಕವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

    ಸಾಂದರ್ಬಿಕ ಚಿತ್ರ

    ಶೂಟಿಂಗ್‌ ಅನುಮತಿ ಪತ್ರ ಎಂಬುದು ಗೊತ್ತಿರಲಿಲ್ಲ.

    ಶಿವಕುಮಾರ್ ಚಿತ್ರೀಕರಣಕ್ಕೆ ಅನುಮತಿಗೆ ಮನವಿ ಸಲ್ಲಿಸುವಾಗ ನಟಿ ತಾರಾ ಅವರ ಜತೆ ಇದ್ದರು. ಆದರೆ ಚಿತ್ರೀಕರಣಕ್ಕೆ ಅನುಮತಿ ಪತ್ರ ನೀಡಲು ಬಂದಿದ್ಧಾರೆ ಎಂಬುದರ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಆಗ ಸಿಎಂ ಆಫೀಸ್‌ ಬಳಿ ಇದ್ದಾಗ ಅವರು ಬಂದು ಮನವಿ ಕೊಟ್ಟು ಹೋದರು ಹಾಗಾಗಿ ಆ ಫೊಟೋದಲ್ಲಿ ನಾನಿದ್ದೇನೆ ಎಂದು ಅವರು ಮರು ದಿನ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲಿಂದಲೇ ವಿವಾದ ಆರಂಭವಾಯಿತು.

    ಅಧ್ಯಕ್ಷರ ವಿರುದ್ಧ ಕಾರ್ಯದರ್ಶಿ ಮಾತು

    ಕೆಟಿವಿಯ ಕಾರ್ಯದರ್ಶಿ ವೀರೇಂದ್ರ ಬೆಳ್ಳಿಚುಕ್ಕಿ ಮಾಧ್ಯಮಗಳ ಜತೆ ಮಾತನಾಡಿ ‘ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಮನವಿ ಪತ್ರಕ್ಕೆ ಕಾರ್ಯದರ್ಶಿಯಾದ ನನ್ನ ಸಹಿ ಪಡೆಯದೇ ತೆಗೆದುಕೊಂಡಿಲ್ಲ. ಅಲ್ಲದೇ ಈ ಸಮಯದಲ್ಲಿ ನಿರ್ಮಾಪಕರ ಜತೆ ಮಾತನಾಡಿ, ಮನವಿ ಸಲ್ಲಿಸಬೇಕಿತ್ತು. ಈ ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಚಿತ್ರೀಕರಣ ಮಾಡುವುದು ಒಳ್ಳೆಯದಲ್ಲಿ ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಅಲ್ಲದೇ ಅಧ್ಯಕ್ಷರು ಯಾರಿಗೂ ಹೇಳದೆ ಅವರಷ್ಟಕ್ಕೆ ಅವರೇ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾತನಾಡಿದರು.

    ಕಾರ್ಯಕಾರಿ ಸಮಿತಿ ಎದುರು ಮನವಿ ಸಲ್ಲಿಸುತ್ತಿರುವ ಬಗ್ಗೆ ಚರ್ಚೆ ಮಾಡಿಯೇ ಪತ್ರ ತೆಗೆದುಕೊಂಡು ಹೋಗಿದ್ದು, ಎಂದು ಅಧ್ಯಕ್ಷ ಶಿವಕುಮಾರ್‌ ಹೇಳಿದ್ದಾರೆ. ಇದನ್ನೆಲ್ಲ ನೋಡಿದರೆ ಕೆಟಿವಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗುತ್ತದೆ.  ಜತೆಗೆ ಕೆಟಿವಿ ಚುನಾವಣೆ ಹತ್ತಿರ ಇರುವುದರಿಂದ ಈ ಘಟನೆಯನ್ನು ವಿವಾದಕ್ಕೆ ತಿರುಗಿಸಲಾಗಿದೆಯಂತೆ.

    ಸಾಂದರ್ಬಿಕ ಚಿತ್ರ

    ವಿಶೇಷ ಎಂದರೆ ಮೇ 11 ರಿಂದ ಚಿತ್ರೀಕರಣ ಆರಂಭ ಮಾಡುತ್ತೇವೆ ಎಂದಿದ್ದ ಕೆಟಿವಿ ಮರುದಿನ ಸಭೆ ನಡೆಸಿ 21 ರ ನಂತರ ಚಿತ್ರೀಕರಣ ಆರಂಭಿಸುವುದಾಗಿ ಅನೌನ್ಸ್‌ ಮಾಡಿತು. ಇದರ ಜತೆಗೆ ಕೆಲ ಹಿರಿಯ ನಟ, ನಟಿಯರು ಚಿತ್ರೀಕರಣಕ್ಕೆ ಬರಲು ಹಿಂದೇಟು ಹಾಕಿದರು ಎನ್ನುವ ಮಾಹಿತಿ ಸಹ ಲಭ್ಯವಾಯಿತು.

    ಅನುಮತಿ ಪಡೆದಿರುವುದು ಅಧ್ಯಕ್ಷ ಶಿವಕುಮಾರ್‌ ಅವರ ವೈಯಕ್ತಿಕ  ಹಿತಾಸಕ್ತಿ ಎಂಬ ಮಾತುಗಳು ಸಹ ಕೇಳಿ ಬಂದವು. ಶಿವಕುಮಾರ್‌ ಅವರು ಮೂಲತಃ ನಿರ್ಮಾಪಕರು ಅವರ ನಿರ್ಮಾಣ ಸಂಸ್ಥೆಯಿಂದ ಒಂದೆರೆಡು ಸೀರಿಯಲ್‌ಗಳು, ಅಡುಗೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಅದಕ್ಕೆ ಸಹಾಯವಾಗಲಿ ಎಂದು ಅವಸರವಾಗಿ ಅನುಮತಿ ಪಡೆದುಕೊಂಡಿದ್ದಾರೆ ಎಂದು ಕೆಲವರು ಮಾತನಾಡಿಕೊಂಡರು.

    ಇದರ ಜತೆಗೆ ಖಾಸಗಿ ವಾಹಿನಿಯೊಂದು ರೇಟಿಂಗ್‌ನಲ್ಲಿ  ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ನಿರ್ಮಾಣ ಸಂಸ್ಥೆಗಳಿಗೆ ಚಿತ್ರೀಕರಣಕ್ಕೆ ಒತ್ತಾಯ ಮಾಡಿ ಸರ್ಕಾರದ ಮಟ್ಟದಲ್ಲಿಯೂ ಒತ್ತಡ ಹೇರಿ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡಿದೆ ಎಂಬ ಮಾತುಗಳು ಸಹ ಹೆಚ್ಚಾಗಿ ಕೇಳಿ ಬಂದಿವೆ.

    ಈ ಎಲ್ಲ ಘಟನೆಗಳನ್ನು ನೋಡಿದರೆ ಕಿರುತೆರೆ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವುದು ದೊಡ್ಡ ವಿವಾದಕ್ಕೆ ತಿರುಗಿದೆ ಎಂಬುದು ಸ್ಪಷ್ಟವಾಗುತ್ತದೆ.

    ಮಾಲ್ಗುಡಿ ಡೇಸ್ ಕನ್ನಡಕ್ಕೆ ಬಂದಿದ್ದು ಹೇಗೆ ಗೊತ್ತಾ

    .

    2007ರಲ್ಲಿ ಆರಂಭಗೊಂಡ ಡಬ್ಬಿಂಗ್ ಪರ ಹೋರಾಟ ಮಾಲ್ಗುಡಿ ಡೇಸ್ ಟೀವಿ ಧಾರವಾಹಿ ಕನ್ನಡದಲ್ಲಿ ಪ್ರಸಾರ ವಾಗುವುದರೊಂದಿಗೆ ನಿರ್ಣಾಯಕ ಹಂತ ತಲುಪಿದೆ. ವಿರೋಧದ ದನಿ ಎದ್ದಾಗಲೆಲ್ಲಾ ಅದನ್ನು ಸಮರ್ಥವಾಗಿ ಎದುರಿಸಿದ ಬನವಾಸಿ ಬಳಗದ ಆನಂದ್ ತಮ್ಮ ಬಳಗ ಮತ್ತು ಕನ್ನಡ ಗ್ರಾಹಕ ಕೂಟ ನಡೆಸಿದ ಹೋರಾಟವನ್ನು ಇಲ್ಲಿ ಮೆಲುಕು ಹಾಕಿದ್ದಾರೆ.

    2007ನೇ ವರ್ಷದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಡಬ್ಬಿಂಗ್ ಕೂಗು ಬನವಾಸಿ ಬಳಗದ ಮೂಲಕ ಕೇಳಿಬಂತು.ಮುಂದೆ ಇದು 2008 ರಿಂದ ಕನ್ನಡ ಗ್ರಾಹಕ ಕೂಟದಿಂದ ಎದ್ದ ಡಬ್ಬಿಂಗ್ ಪರವಾದ ಕೂಗು ಹಾಗೂ ಜನ ಜಾಗೃತಿ, 2012 ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಡಬ್ಬಿಂಗ್ ತಡೆಯುತ್ತಿರುವ ಹತೋಟಿ ಕೂಟಗಳ ನಡೆಯನ್ನು ಪ್ರಶ್ನಿಸಿ ಕನ್ನಡ ಗ್ರಾಹಕ ಕೂಟವು ಸಿಸಿಐನಲ್ಲಿ ಕೇಸನ್ನು ದಾಖಲಿಸಿತ್ತು. ಅದು ಮುಂದುವರೆದು, 2015 ರಲ್ಲಿ ಸಿಸಿಐನಿಂದ ಡಬ್ಬಿಂಗ್ ಪರವಾದ ತೀರ್ಪು ಬಂದು, ಹತೋಟಿ ಕೂಟಗಳಿಗೆ ದಂಡವನ್ನು ವಿಧಿಸಿತ್ತು. ಅದಾದ ಮೇಲೆ, ಡಬ್ಬಿಂಗ್ ಚಿತ್ರಗಳನ್ನು ಹೊರತರಲು, ಡಬ್ಬಿಂಗ್ ಪರವಾದವರು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದರು. 2016ರ ಹೊತ್ತಿಗೆ ಸಮಾನ ಮನಸ್ಕರೆಲ್ಲಾ ಸೇರಿ, ಹಣ ಹೂಡಿ ಡಬ್ಬಿಂಗ್ ಚಿತ್ರಗಳನ್ನು ಮಾಡುವ ಕೆಲಸ ನಡೆಯುತ್ತಿತ್ತು.  ಹರಿವು ಕ್ರಿಯೇಷನ್ಸ್ ತಂಡದ ಸದಸ್ಯರು, ಕನ್ನಡ ಗ್ರಾಹಕ ಕೂಟ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನೆರವಿನೊಂದಿಗೆ ಹಲವು ಡಬ್ಬಿಂಗ್ ಚಿತ್ರಗಳನ್ನು ಹೊರತರುವುದಕ್ಕಾಗಿ ಪ್ರಯತ್ನ ನಡೆಸುತ್ತಿತ್ತು. ಡಬ್ಬಿಂಗ್‌ನಿಂದ ಆಗುವ ಒಳಿತುಗಳನ್ನು ಅರಿತು, ಗಾಂಧಿನಗರದಲ್ಲಿ ಮೊತ್ತ ಮೊದಲ ಬಾರಿಗೆ ಡಬ್ಬಿಂಗ್ ಮಾಡಲು ಮುಂದೆ ಬಂದವರು ದರ್ಶನ್ ಎಂಟರ್‌ಪ್ರೈಸೆಸ್‌ನ ಕೃಷ್ಣ ಮೂರ್ತಿಯವರು. ಅವರ ಜೊತೆಗೂಡಿ ಸಿನೆಮಾಗಳನ್ನು ಡಬ್ ಮಾಡುವ ಕೆಲಸ ಒಂದೆಡೆ ಸಾಗುತ್ತಿತ್ತು.

    ಮೊದಲಿಗೆ ಡಬ್ಬಿಂಗ್ ಆಗಿ ತೆರೆಕಂಡ ಚಿತ್ರ ನಾನು ನನ್ನ ಪ್ರೀತಿ ಎನ್ನುವ ಚಿತ್ರ. ಅದು ಉತ್ತರ ಕರ್ನಾಟಕದ ಒಂದೆರಡು ಕಡೆ ಮಾತ್ರ ಬಿಡುಗಡೆಯ ಭಾಗ್ಯ ಕಂಡಿತು. ಮುಖ್ಯವಾಗಿ ಡಬ್ಬಿಂಗ್ ವಿರೋಧಿಗಳ ಸವಾಲನ್ನು ಎದುರಿಸಿ ಬೆಂಗಳೂರಿನಲ್ಲಿ ತೆರೆಕಂಡ ಚಿತ್ರ ಸತ್ಯದೇವ್ ಐಪಿಎಸ್. ಇದಾದ ನಂತರ ಒಂದರ ಹಿಂದೊಂದು ಹಲವಾರು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಪ್ರದರ್ಶನ ಭಾಗ್ಯ ಕಂಡವು.. ಮೂಲ ಚಿತ್ರದ ಜೊತೆಗೆ ನೇರ ಬಿಡುಗಡೆಯಾದದ್ದು ಡಿಯರ್ ಕಾಮ್ರೇಡ್, ಕಿರಿಕ್ ಲವ್ ಸ್ಟೋರಿ.. ಡಬ್ಬಿಂಗ್ ಗುಣಮಟ್ಟವು ಕೂಡ ಚಿತ್ರದಿಂದ ಚಿತ್ರಕ್ಕೆ ಏರಿಕೆ ಯಾಗುತ್ತ ಹೋಯಿತು. ಧೀರ ಕಮಾಂಡೋ ಚಿತ್ರಗಳು ಇದಕ್ಕೆ ಕುರುಹಾಗಿ ನಿಂತರೆ ಜಗಮಲ್ಲ ಚಿತ್ರದ ಡಬ್ಬಿಂಗ್ ಹೊಸ ಮಾನದಂಡಗಳನ್ನು ಹುಟ್ಟುಹಾಕಿದ್ದು ಸತ್ಯ. ಹಲವಾರು ಇಂಗ್ಲಿಷ್ ಚಿತ್ರಗಳು ಕನ್ನಡಕ್ಕೆ ಡಬ್ ಆದವು. ಪ್ರಮುಖವಾಗಿ ಫಾಸ್ಟ್ ಅಂಡ್ ಫ್ಯುರಿಯಸ್, ಟರ್ಮಿನೇಟರ್ 3 ಇವುಗಳನ್ನು ಹೆಸರಿಸಬಹುದು. ಮುಂದಿನ ದಿನಗಳಲ್ಲಿ ಅನೇಕ ದೊಡ್ಡ ದೊಡ್ಡ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ಮೂಲ ಚಿತ್ರದೊಡನೆ ಕರ್ನಾಟಕದಲ್ಲಿ ಬಿಡುಗಡೆಯಾಗಲಿ ವೆ.

    ಅಂತರ್ಜಾಲದಲ್ಲಿ ಡಬ್ಬಿಂಗ್

    ಇದೇ ಸಮಯದಲ್ಲಿ zee5, ಅಮೆಜಾನ್ ಪ್ರೈಮ್ ಮೊದಲಾದ ತಾಣಗಳಲ್ಲಿ ಅನೇಕ ಪರಭಾಷಾ ಧಾರವಾಹಿಗಳು ಚಲನಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ನೋಡುಗರಿಗೆ ದೊರೆತವು. ದೂರದರ್ಶನದ ಅನೇಕ ವಾಹಿನಿಗಳು ವಿಶೇಷವಾಗಿ ಡಿಸ್ಕವರಿ, ಡಿಸ್ನಿ, ಚಿಂಟು ಮೊದಲಾದವು ಕನ್ನಡದಲ್ಲಿ ಡಬ್ಬಿಂಗ್ ಮಾಡಿದ ಕಾರ್ಯಕ್ರಮ ಹಾಕತೊಡಗಿದವು.

    ಟಿವಿಯಲ್ಲಿ ಡಬ್ಬಿಂಗ್ ಕಾರ್ಯಕ್ರಮ

    ಡಬ್ಬಿಂಗ್ ಪರವಾದ ನ್ಯಾಯಾಲಯದ ಹೋರಾಟಕ್ಕೆ ಮುಖ್ಯವಾದ ಕಾರಣ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಬೇಕಾಗಿದ್ದ ಸತ್ಯಮೇವ ಜಯತೆ ಕಾರ್ಯಕ್ರಮಕ್ಕೆ ಹತೋಟಿ ಕೂಟಗಳು ಒಡ್ಡಿದ ತಡೆ. ಇದೀಗ ಕಾನೂನು ಹೋರಾಟಗಳು ಮುಗಿದ ನಂತರ ಹಲವಾರು ಡಬ್ಬಿಂಗ್ ಆದ ಚಲನಚಿತ್ರಗಳು ದೂರದರ್ಶನಗಳ ಟಿವಿಯಲ್ಲಿ ಪ್ರಸಾರವಾದ ತೊಡಗಿದವು. ಅವುಗಳಲ್ಲಿ ಹೆಚ್ಚಿನವು ಹಳೆಯ ಪರಭಾಷಾ ಚಿತ್ರಗಳು. ಡಬ್ಬಿಂಗ್ ಆದ ಧಾರವಾಹಿಯ ಪ್ರಸಾರ ಆರಂಭವಾಗುವ ಸೂಚನೆ ಸಿಕ್ಕಿದ್ದು ಮಹಾಭಾರತ ಧಾರವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರಮಾಡಲು ಸುವರ್ಣ ವಾಹಿನಿಯವರು ಮುಂದಾದಾಗಲೆ. ಹತೋಟಿ ಕೂಟಗಳು ಇದಕ್ಕೂ ಅಡ್ಡಿ ಮಾಡಿದ ಸುದ್ದಿ ಕೇಳಿಬಂತು. ಅಷ್ಟರಲ್ಲಿ ಜೀ ಕನ್ನಡ ವಾಹಿನಿಯವರು ಮಾಲ್ಗುಡಿ ಡೇಸ್ ಧಾರವಾಹಿಯನ್ನು ಕನ್ನಡದಲ್ಲಿ ಪ್ರಸಾರಮಾಡಲು ಮುಂದಾದರು. ಮಾಲ್ಗುಡಿ ಡೇಸ್ ಶಂಕರ್ ನಾಗ್ ನಿರ್ದೇಶಿಸಿದ ಕನ್ನಡಿಗರ ಹೆಮ್ಮೆ ಯ ಧಾರವಾಹಿ.. ದುರಂತವೆಂದರೆ ಇದು ಕನ್ನಡದಲ್ಲೇ ಇರಲಿಲ್ಲ. ಈ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಟಿವಿಯಲ್ಲಿ ಪ್ರಸಾರವಾಗುವಂತೆ ಮಾಡಿದ್ದೆ ಒಂದು ದೊಡ್ಡ ಕಥೆ.

    ಮಾಲ್ಗುಡಿ ಡೇಸ್ ಕನ್ನಡಕ್ಕೆ: ಕನಸು ನನಸಾದ ಕಥೆ

    ಹೀಗೆ ಕೆಲಸ ಮಾಡುತ್ತಿರುವವರಿಗೆ, ಶಂಕರ್ ನಾಗ್ ಅವರ ಮೇರುಕೃತಿ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ತರಬೇಕು ಎಂಬ ತುಡಿತ ಹೆಚ್ಚಿತ್ತು. ಡಬ್ಬಿಂಗ್ ವಿರೋಧದಿಂದಾಗಿ ಕನ್ನಡಿಗರೇ ನಿರ್ಮಿಸಿದ್ದ ಈ ಧಾರಾವಾಹಿ ಕನ್ನಡದಲ್ಲಿ ಬರದಂತೆ ನೋಡಿಕೊಳ್ಳಲಾಗಿತ್ತು. ಹರಿವು ತಂಡದವರು ಮಾಲ್ಗುಡಿ ಡೇಸ್‌ನ ಮೂಲವನ್ನು ಹುಡುಕುತ್ತಾ ಹೊರಟರು.  ಕರ್ನಾಟಕದಲ್ಲಿ ಸತ್ಯದೇವ್ ಐಪಿಎಸ್ ಹಾಗೂ ಧೀರ ಚಿತ್ರಗಳು ತೆರೆಕಂಡು ಡಬ್ಬಿಂಗ್ ಪರವಾದ ಕೆಲಸದಲ್ಲಿ ಮುನ್ನಡೆ ಸಾಧಿಸಲಾಗಿತ್ತು.

    ಹರಿವು ತಂಡದವರು, 2017 ರಲ್ಲಿ ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಕಂಪನಿಯನ್ನು ಸ್ಥಾಪಿಸಿ, ಡಬ್ಬಿಂಗ್ ಚಿತ್ರಗಳನ್ನು ನಿರ್ಮಿಸುವ ಕೆಲಸಕ್ಕೆ ಕೈಹಾಕಿದರು. ಹರಿವು ಕ್ರಿಯೇಷನ್ಸ್ ಕಂಪನಿಯ ಮೊಟ್ಟ ಮೊದಲ ಪ್ರಾಜೆಕ್ಟ್ ಮಾಲ್ಗುಡಿ ಡೇಸ್ ಆಗಬೇಕು ಎಂಬ ಕನಸು ಅವರದಾಗಿತ್ತು. ಅದಕ್ಕಾಗಿ ಮತ್ತೊಮ್ಮೆ ಹುಡುಕಾಟ ಆರಂಭವಾಯಿತು. ಆದರೆ ಹಕ್ಕುಗಳು ಬಗ್ಗೆ ಸರಿಯಾದ ಮಾಹಿತಿ ಸಿಗಲಿಲ್ಲ, ಡಬ್ಬಿಂಗ್ ಚಿತ್ರಗಳ ಹರಿವು ನಿಲ್ಲಬಾರದು ಎಂಬ ಕಾರಣಕ್ಕೆ ಕೂಡಲೇ ಹಾಲಿವುಡ್ ಮಾದರಿಯ ಕಮಾಂಡೋ ಚಿತ್ರವನ್ನು ಆರಿಸಿ ಡಬ್ ಮಾಡಿ, ಗಾಂಧಿನಗರದಿಂದ ಹಿಡಿದು ಕರ್ನಾಟಕದ ಉದ್ದಗಲಕ್ಕೂ ಬಿಡುಗಡೆ ಮಾಡಿದ್ದು ಈಗ ಇತಿಹಾಸ. ಕಮಾಂಡೊ ಕೆಲಸ ಮುಗಿದ ಮೇಲೆ, ಮತ್ತೊಮ್ಮೆ ಮಾಲ್ಗುಡಿ ಡೇಸ್ ಹಿಂದೆ ಬಿದ್ದಿತು ಹರಿವು ತಂಡ. ಹಲವು ಮುಂಬೈ ಪ್ರಯಾಣಗಳ ಬಳಿಕ, ಮಾಲ್ಗುಡಿ ಡೇಸ್‌ಗಾಗಿ ಇಷ್ಟೊಂದು ಹುಡುಕಾಟ ಮಾಡುತ್ತಿರುವ ಈ ತಂಡದವರ ಪ್ರಯತ್ನ ಕಂಡು, ಒಂದು ಸನ್ನಿವೇಶದಲ್ಲಿ ಹಿಂದಿ ಚಿತ್ರರಂಗದ ದೊಡ್ಡ ಕಂಪನಿಯೊಂದು ನೆರವಿಗೆ ಬಂದಿತು. ಇದರ ಹಕ್ಕುಗಳ ಮೂಲ ಬೇರೆಲ್ಲೂ ಇಲ್ಲ, ಅಲ್ಟ್ರಾದವರ ಬಳಿ ಇದೆ ಎಂದು, ಅದರ ಸಿಇಓ ಫೋನ್‌ ನಂಬರನ್ನೇ ಒದಗಿಸಿತು.

    ಹಕ್ಕುಗಳ ಮೂಲವೇನೋ ಸಿಕ್ಕಿತು, ಇನ್ನು ಮುಂದಿದ್ದ ಸವಾಲೆಂದರೆ ಮಾಲ್ಗುಡಿ ಡೇಸ್‌ ಅನ್ನು ಕನ್ನಡಕ್ಕೆ ಡಬ್ ಮಾಡಲು ಅವರನ್ನು ಒಪ್ಪಿಸುವುದು. ಅದಕ್ಕಾಗಿ, ಇಡೀ ಮಾಲ್ಗುಡಿ ಡೇಸ್‌ನ ಹಿನ್ನಲೆ, #MalgudiDaysInKannada ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಆಗುತ್ತಿರುವ ಟ್ವಿಟರ್ ಟ್ರೆಂಡ್, ಈ ಟ್ರೆಂಡ್ ಕುರಿತು ಪತ್ರಿಕೆಗಳಲ್ಲಿ ಮೂಡಿಬಂದ ವರದಿ, ಮಾಲ್ಗುಡಿ ಡೇಸ್ ಶೂಟಿಂಗ್ ಆದ ಶಿವಮೊಗ್ಗದ ಅರಸಾಳು ರೈಲ್ವೇ ಸ್ಟೇಷನ್ ಅನ್ನು ಮಾಲ್ಗುಡಿ ಸ್ಟೇಷನ್ ಎಂದು ಬದಲಾಯಿಸಲು ಹೊರಟಿರುವ ವರದಿ, ಶಂಕರ್ ನಾಗ್ ಅವರಿಗೆ ಈಗಲೂ ಇರುವ ಬೇಡಿಕೆ ತಿಳಿಸಲು ಅವರ ಹೆಸರಲ್ಲಿರುವ ಆಟೋ ಸಂಘಗಳು, ಅಭಿಮಾನಿ ಬಳಗದ ಮಾಹಿತಿ, ಮಾಲ್ಗುಡಿಯಲ್ಲಿ ವಿಷ್ಣುವರ್ಧನ್, ಗಿರೀಶ್ ಕಾರ್ನಾಡ್, ರಮೇಶ್ ಭಟ್, ವೈಶಾಲಿ ಕಾಸರವಳ್ಳಿ, ಹೀಗೆ ಕನ್ನಡದ ಮೇರು ನಟರು ನಟಿಸಿದ್ದಾರೆ ಎಂಬ ವಿವರ, ಮಾಲ್ಗುಡಿ ಡೇಸ್ ಶೂಟಿಂಗ್ ಆಗಿದ್ದ ಕರ್ನಾಟಕದ ಜಾಗಗಳ ವಿವರ,  ಹೀಗೆ ಮಾಲ್ಗುಡಿಯ ಇಂಚಿಂಚನ್ನು ಕಲೆಹಾಕಿ, ಅಲ್ಟ್ರಾ ಸಿಇಓ ಮುಂದೆ ಇಟ್ಟರು. ಇದನ್ನು ಕನ್ನಡದಲ್ಲಿ ಡಬ್ ಮಾಡಿ ಕೊಟ್ಟರೆ ಕರ್ನಾಟಕದ ಮಂದಿಗೆ ಆಗುವ ಉಪಯೋಗ ಹಾಗೂ ವ್ಯಾಪಾರದಲ್ಲಿ ಅವರಿಗಾಗುವ ಲಾಭವನ್ನು ತಿಳಿಸಿಕೊಡಲಾಯಿತು. ಈ ಎಲ್ಲಾ ವಿವರಗಳನ್ನು ಪಡೆದು, ಆಳವಾಗಿ ಅರಿತು, ಡಬ್ಬಿಂಗ್ ಹಕ್ಕುಗಳನ್ನು ಕೊಡುವುದಿಲ್ಲ, ಬದಲಾಗಿ ನಾವೇ ಡಬ್ ಮಾಡಿಸುತ್ತೇವೆ! ಎಂದು ತುಂಬು ಮನದಿಂದ ಅವರು ಮುಂದೆ ಬಂದರು. ನೀವೇ ಡಬ್ಬಿಂಗ್ ಸೇವೆ ಕೊಡಿ ಎಂದು ಅಲ್ಟ್ರಾದವರು ಹರಿವುಗೆ ಹೇಳಿದರು.

    ಅಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಲಾಗಿತ್ತು. ಡಬ್ ಮಾಡಿಸುವ ದೊಡ್ಡ ಜವಾಬ್ದಾರಿ ಹರಿವು ತಂಡದ ಮೇಲಿತ್ತು. ಕನ್ನಡ ಚಲನಚಿತ್ರರಂಗ ಕಂಡ ಮೇರು ಡಬ್ಬಿಂಗ್ ಕಲಾವಿದ ಅಂದರೆ ಸುದರ್ಶನ್ ಅವರು. ಅದಾಗಲೇ ಸತ್ಯದೇವ್ ಐಪಿಎಸ್ ಹಾಗೂ ಧೀರ ಚಿತ್ರಗಳನ್ನು ಡಬ್ ಮಾಡಿಕೊಟ್ಟಿದ್ದರು. ಸುದರ್ಶನ್ ಅವರೇ ಮಾಲ್ಗುಡಿಯನ್ನು ಕನ್ನಡಕ್ಕೆ ತರುವ ತಂತ್ರಜ್ಞರಾಗಲಿ ಎಂದು ತೀರ್ಮಾನಿಸಿ ಕೆಲಸ ಆರಂಭಿಸಲಾಯಿತು. ಅಬ್ಬಾ, ಮಾಸ್ಟರ್ ಮಂಜುನಾಥ್ ಅವರ ದನಿಗಾಗಿ ನಡೆದು ಹುಡುಕಾಟ ಅಷ್ಟಿಷ್ಟಲ್ಲ, ಹಲವಾರು ಹುಡುಗರ ದನಿಯನ್ನು ಒರೆಹಚ್ಚಿ ನೋಡಿದ ಮೇಲೆ, ಒಂದು ದನಿ ಆಯ್ಕೆಯಾಯಿತು. ಗಿರೀಶ್ ಕಾರ್ನಾಡ್, ಅನಂತ್ ನಾಗ್, ವಿಷ್ಣುವರ್ಧನ್, ಶಂಕರ್‌ನಾಗ್ ಎಲ್ಲರ ದನಿಗಳು ಮತ್ತೊಮ್ಮೆ ಕನ್ನಡದಲ್ಲಿ ಮೊಳಗಿದವು. ದನಿ ಕಲಾವಿದರ ಕೈಚಳಕ ಕೆಲಸಮಾಡಿತು.  ಹಗಲಿರುಳು ಎನ್ನದೇ ಕೆಲಸ ಸಾಗಿತು. ಎಲ್ಲಾ 54 ಎಪಿಸೋಡ್‌ಗಳ ಕೆಲಸ ಮುಗಿದು ಅಮೇಜಾನ್‌ ಪ್ರೈಮ್‌ನಲ್ಲಿ ಮಾಲ್ಗುಡಿ ಡೇಸ್ ಕನ್ನಡ ಕಂಡಾಗ ಒಂದು ನಿಟ್ಟುಸಿರು ಬಿಟ್ಟಾಗಿತ್ತು. ನಮ್ಮ ಕೆಲಸ ಇಷ್ಟೇ ಅಲ್ಲ ಎಂಬುದು ಕನ್ನಡ ಗ್ರಾಹಕ ಕೂಟ ಹಾಗೂ ಹರಿವು ತಂಡಕ್ಕೆ ತಿಳಿದಿತ್ತು. ಮುಂದಿನದು ಟೀವಿಯಲ್ಲಿ ಬರುವ ಹಾಗೆ ಮಾಡುವುದು. ಅಲ್ಟ್ರಾದವರೊಡನೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ ಹರಿವು ತಂಡ, ಯಾವುದೇ ಫಲಾಪೇಕ್ಷೆ ಇಲ್ಲದೇ ಟೀವಿಯಲ್ಲಿ ಇದನ್ನು ಮಾರಲು ಪ್ರಯತ್ನಿಸುವುದಾಗಿ ಹೇಳಿತ್ತು. ಸುಮಾರು ಒಂದು ವರ್ಷದಿಂದ ಕನ್ನಡ ಟೀವಿ ಚಾನೆಲ್‌ಗಳ ಬಾಗಿಲನ್ನು ಹಲವಾರು ಬಾರಿ ಬಡಿದಿತ್ತು. ಹೆಚ್ಚು ಕಡಿಮೆ ಎಲ್ಲಾ ಟೀವಿ ಚಾನೆಲ್‌ಗಳಿಗೂ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

    ಕೊರೊನಾ, ಪ್ರಕೃತಿಗೆ ಲಾಭನಾ?

    ಕೃತಿಯ ಮಡಿಲಲ್ಲಿಯೇ ಹುಟ್ಟಿದ ಅತಿಸಣ್ಣ ವೈರಸ್ ಒಂದು,ಪ್ರಕೃತಿಮಡಿಲಿನಪ್ರಾಣಿಗಳಲ್ಲಿಯೇ ದುರಂಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯನ ಅಸ್ತಿತ್ವವನ್ನೇ ಅಲುಗಾಡಿಸಿದೆ. ಒಂದು ನಿಮಿಷವನ್ನೂ ವ್ಯರ್ಥ ಮಾಡದೆ, ‘ಉತ್ಪಾದಕತೆ’ಯ ಬಗ್ಗೆಯೇ ಕೊಟ್ಯಂತರ ಶಬ್ದಗಳನ್ನಾಡುತ್ತಿದ್ದ ಮನುಕುಲವನ್ನೇ ಕಟ್ಟಿಹಾಕಿದೆ. ಈಗ ಎಲ್ಲೆಲ್ಲೂ ಸಾವಿನ ನರ್ತನ, ಆತಂಕ, ಭಯ, ನಷ್ಟದ ಲೆಕ್ಕಾಚಾರ. ಮುಂದೇನು?

    ಕೋವಿಡ್-19 ವೈರಸ್ ಕಾಣಿಸಿಕೊಂಡ ನಂತರ ಜಗತ್ತು ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಪ್ರಮುಖವಾದುದ್ದೆಂದರೆ ಪರಿಸರ ಮಾಲಿನ್ಯ ಕಡಿಮೆಯಾಗಿರುವುದು. ಪ್ರಪಂಚದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಿಸಿ, ಸ್ಥಬ್ದವಾಗಿದ್ದರಿಂದ ಸಹಜವಾಗಿಯೇ ಪ್ರಕೃತಿಯ ಮೇಲಿನ ಒತ್ತಡ ಕಡಿಮೆಯಾಗಿದೆ. ಜೀವ-ಜಂತುಗಳು, ಪ್ರಾಣಿ-ಪಕ್ಷಿಗಳು ಮನುಷ್ಯರ ಭಯವಿಲ್ಲದೆ ಪ್ರಕೃತಿಯ ಮಡಿಲಲ್ಲಿ ಸ್ವತಂತ್ರವಾಗಿ ಸಂಚರಿಸುತ್ತಿವೆ. ಆಗಾಗ ಮನುಷ್ಯನ ನೆಲೆಗಳಿಗೂ ಭೇಟಿ ನೀಡಿ, ಸುದ್ದಿಯಾಗುತ್ತಿವೆ.

     ಮಾಲಿನ್ಯ (ಪಲ್ಯುಟ್) ಎಂದರೆ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನ ಪ್ರಕಾರ ಶುದ್ಧತೆ ಮತ್ತು ಪವಿತ್ರತೆಯನ್ನು ಕೆಡಿಸು; (ನೀರು ಮುಂತಾದವನ್ನು) ಕೊಳೆ ಮಾಡು, ಹೊಲಸುಗೊಳಿಸು ಎಂದರ್ಥ. ಪಲ್ಯೂಷನ್ ಎಂದರೆ ಮಲಿನೀಕರಣ, ಮಲಿನ ಮಾಡು ಎಂದು. ಪರಿಸರ ಮಾಲಿನ್ಯದ ವಿಷಯದಲ್ಲಿ ಈ ಶಬ್ದಗಳ ಅರ್ಥಗಳಿಗೆ ಒಂದಿಷ್ಟೂ ಕುಂದುಂಟಾಗದಂತೆ ಮನುಷ್ಯ ನಡೆದುಕೊಂಡು ಬಂದಿದ್ದಾನೆ. ಅಂದ ಹಾಗೆ ಮನುಷ್ಯ ಕೂಡ ಈ ಪರಿಸರದ ಭಾಗ, ಆತನೂ ಒಂದು ಪ್ರಾಣಿಯೇ!

    ಪ್ರಕೃತಿಯ ಮಡಿಲಲ್ಲಿಯೇ ಹುಟ್ಟಿದ ಅತಿಸಣ್ಣ ವೈರಸ್ ಒಂದು,ಪ್ರಕೃತಿಮಡಿಲಿನಪ್ರಾಣಿಗಳಲ್ಲಿಯೇ ದುರಂಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯನ ಅಸ್ತಿತ್ವವನ್ನೇ ಅಲುಗಾಡಿಸಿದೆ. ಒಂದು ನಿಮಿಷವನ್ನೂ ವ್ಯರ್ಥ ಮಾಡದೆ, ‘ಉತ್ಪಾದಕತೆ’ಯ ಬಗ್ಗೆಯೇ ಕೊಟ್ಯಂತರ ಶಬ್ದಗಳನ್ನಾಡುತ್ತಿದ್ದ ಮನುಕುಲವನ್ನೇ ಕಟ್ಟಿಹಾಕಿದೆ. ಈಗ ಎಲ್ಲೆಲ್ಲೂ ಸಾವಿನ ನರ್ತನ, ಆತಂಕ, ಭಯ, ನಷ್ಟದ ಲೆಕ್ಕಾಚಾರ. ಮುಂದೇನು? ಯಾರಿಗೂ ಗೊತ್ತಿಲ್ಲ.

    ಆದರೆ ಪ್ರಕೃತಿಗೆ ಮಾತ್ರ ಲಾಭದ ಮೇಲೆ ಲಾಭ. ಬೇರೆ ದೇಶಗಳ ಕತೆ ಇರಲಿ, ನಮ್ಮ ದೇಶದಲ್ಲಿಯೇ ಕಳೆದ ಮಾರ್ಚ್ ಅಂತ್ಯಕ್ಕೆ ಮುಗಿದ ಆರ್ಥಿಕ ಸಾಲಿನಲ್ಲಿ ಹಸಿರು ಮನೆ ಮೇಲೆ ಪರಿಣಾಮ ಬೀರುವ ಅನಿಲಗಳ ಉತ್ಪಾದನೆ ಶೇ. 1.4 ರಷ್ಟು ಕಡಿಮೆಯಾಗಿದೆ. ಈ ರೀತಿ ಸಿಒ2 (CO2) ಬಿಡುಗಡೆ ಕಡಿಮೆಯಾಗಿರುವುದು ಕಳೆದ ನಾಲ್ಕು ದಶಕಗಳಲ್ಲಿಯೇ ಇದು ಮೊದಲು! ಹೊಸ ಆರ್ಥಿಕ ಸಾಲಿನಲ್ಲಿ ಇನ್ನಷ್ಟು ಕಡಿಮೆಯಾಗುವ ಸೂಚನೆ ಇದೆ. ಇಂಗಾಲ ತಜ್ಞರ ಅಂದಾಜಿನ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್ನಲ್ಲಿ ಶೇ. 15ರಷ್ಟು ಮತ್ತು ಏಪ್ರಿಲ್ನಲ್ಲಿ ಶೇ.30ರಷ್ಟು ಇಂಗಾಲ ಉತ್ಪಾದನೆ ಕಡಿಮೆಯಾಗಿದೆ. ಅಂದಹಾಗೆ ಅತಿಹೆಚ್ಚು ಇಂಗಾಲ (CO2) ಉತ್ಪಾದಿಸುವ ದೇಶಗಳ ಪೈಕಿ ಭಾರತ ಮೂರನೇಸ್ಥಾನದಲ್ಲಿದೆ.

    ನಮ್ಮ ದೇಶದಲ್ಲಿ ಮಾತ್ರವಲ್ಲ, ಅಭಿವೃದ್ಧಿಯೆಂಬ ಮರೀಚಿಕೆಯ ಬೆನ್ನು ಹತ್ತಿ, ಜಗತ್ತಿನ ನಂ.1 ಪಟ್ಟಕ್ಕಾಗಿ ಹಾತೊರೆಯುತ್ತಿರುವ ನಮ್ಮ ನೆರೆಯ ಚೀನಾದಲ್ಲಿ ಜನವರಿ ನಂತರ ಹಸಿರು ಮನೆ ಮೇಲೆ ಪರಿಣಾಮ ಬೀರುವ ಇಂಗಾಲದ ಉತ್ಪಾದನೆ ಶೇ.25ರಷ್ಟು ಕಡಿಮೆಯಾಗಿದೆ. ಕಲ್ಲಿದ್ದಲು ಬಳಕೆ ಶೇ. 40ರಷ್ಟು ಕುಸಿದಿದೆ. ಇಟಲಿಯಲ್ಲಿ ಮಾರ್ಚ್9ರಿಂದ ಲಾಕ್ಡೌನ್ ಜಾರಿಗೆ ತರಲಾಗಿದ್ದು, ಅಲ್ಲಿಯ ಸೆಟಲೈಟ್ಗಳು ಇಂಗಾಲ ಉತ್ಪಾದನೆ ತಳಮಟ್ಟಕ್ಕೆ ಇಳಿದಿರುವ ಚಿತ್ರಗಳನ್ನು ರವಾನಿಸಿವೆ.

     ಜಗತ್ತಿಗೇ ದೊಡ್ಡಣ್ಣನಂತೆ ಬೀಗುತ್ತಿದ್ದ ಅಮೆರಿಕ, ಹವಾಮಾನ ವೈಪರಿತ್ಯಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳಿಂದ ದೂರ ಉಳಿದು, ಆನೆ ನಡೆದಿದ್ದೇ ದಾರಿ ಎಂಬಂತೆ ಮೆರೆಯುತ್ತಿತ್ತು. ಈಗ ಪ್ರಕೃತಿಯೇ ಆ ದೇಶಕ್ಕೂ ಪಾಠ ಕಲಿಸಿದೆ. ಕೊಲಂಬಿಯಾ ವಿವಿಯ ಹೊಸ ಅಧ್ಯಯನದ ಪ್ರಕಾರ ಅಮೆರಿಕದ ನ್ಯೂಯಾರ್ಕ್ನಲ್ಲಿನ ಕಾರ್ಬನ್ ಮಾನೋಕ್ಸೈಡ್ನಮಟ್ಟ ಕಳೆದ ಮಾರ್ಚ್ಗೆಹೋಲಿಸಿದಲ್ಲಿ ಶೇ. 50ರಷ್ಟು ಕಡಿಮೆಯಾಗಿದೆ.

    ಇದು ಮೊದಲೇನು ಅಲ್ಲ

    ಕಳೆದ ಐವತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಹೀಗೆ ಇಂಗಾಲದ ಉತ್ಪಾದನೆ ಕಡಿಮೆಯಾಗಿರುವುದು ಇದು ಮೊದಲೇನೂ ಅಲ್ಲ. 1973ರ ಮೊತ್ತ ಮೊದಲ ಮತ್ತು 1979ರ ಎರಡನೇ ತೈಲಬಿಕ್ಕಟ್ಟಿನ ಸಂದರ್ಭದಲ್ಲಿ, 1991ರಲ್ಲಿ ರಷ್ಯಾದ ಒಕ್ಕೂಟ ವ್ಯವಸ್ಥೆ ಪತನಗೊಂಡಾಗ, 1997ರ ಏಷ್ಯಾ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು 2008ರ ವಿಶ್ವ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಕೂಡ ಇದೇ ರೀತಿಯಾಗಿ ಹಸಿರು ಮನೆ ಮೇಲೆ ಪರಿಣಾಮ ಬೀರುವ ಅನಿಲಗಳ ಉತ್ಪಾದನೆ ಕಡಿಮೆಯಾಗಿತ್ತು. 2009ರಲ್ಲಿ ಜಾಗತಿಕ ಸಿಒ2 ಉತ್ಪಾದನೆ ಅದರ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ.1.4 ರಷ್ಟು ಕುಸಿದಿತ್ತು. ಆದರೆ ಒಂದೇ ವರ್ಷದಲ್ಲಿ ಅಂದರೆ 2010ರಲ್ಲಿಯೇ ಶೇ. 5.2ರಷ್ಟು ಹೆಚ್ಚಳ ದಾಖಲಿಸಿತ್ತು!

    ಆಶ್ಚರ್ಯಕರ ಬೆಳವಣಿಗೆಯೆಂದರೆ, 2008 ಆರ್ಥಿಕ ಹಿಂಜರಿತದ ನಂತರ ಜಾಗತಿಕ ಅನಿಲ ಹೊರಸೂಸುವಿಕೆಯ ಪ್ರಮಾಣದಲ್ಲಿ ಅಭಿವೃದ್ಧಿಶೀಲ ದೇಶಗಳಿಗಿಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲು ಹೆಚ್ಚುತ್ತಾ ಬಂದಿದೆ. 2010ರಲ್ಲಿಯೇ ಇಂಗಾಲದಂತಹ ಅನಿಗಳ ಉತ್ಪಾದನೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲು ಶೇ.50.3ರಷ್ಟಿತ್ತು. ಈಗ ಚೀನಾದ ಪಾಲೇ ಶೇ.28ರಷ್ಟು. ಅಮೆರಿಕದ ಪಾಲು ಶೇ. 14, ಮೂರನೇ ಸ್ಥಾನದಲ್ಲಿರುವ ಭಾರತದ ಪಾಲು ಶೇ.7.

     ಈಗ ಕೊರೊನಾ ವೈರಸ್ಗೆಕಾರಣವಾಗಿರುವಂತೆ ಹವಾಮಾನ ವೈಪರಿತ್ಯದ ತೊಂದರೆಗಳಿಗೂ ಚೀನಾವೇ ಕಾರಣವಾಗಿದೆ ಎಂಬುದನ್ನು ಇಲ್ಲಿ ಬಿಡಿಸಿಯೇನೂ ಹೇಳಬೇಕಾಗಿಲ್ಲ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದ್ದ ಭಾರತ ಕೂಡ ಚೀನಾದೊಂದಿಗೆ ಪೈಪೋಟಿಗಿಳಿದು, ಜಗತ್ತಿನ ಉದ್ಯಮಗಳನ್ನು ತನ್ನತ್ತ ಸೆಳೆಯಲು ಹೊರಟಿದೆ. ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೇರಲು ತೀವ್ರ ಪೈಪೋಟಿ ನಡೆಸಿದೆ!

    ಮುಂದೇನು?

    ಲಾಕ್ಡೌನ್ಸಂದರ್ಭದಲ್ಲಿ ಬೆಂಗಳೂರಿಗೆ ನವಿಲು, ಮಂಗಳೂರಿಗೆ ಕಾಡೆಮ್ಮೆ, ಮುಂಬಯಿಗೆ ಚಿರತೆ ಹೀಗೆ ಬೃಹತ್ನಗರಗಳಿಗೂ ವನ್ಯಜೀವಿಗಳುಲಗ್ಗೆ ಇಟ್ಟಿವೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದ ವಿವಿಧ ದೇಶಗಳೂ ಈ ವಿದ್ಯಮಾನಕ್ಕೆ ಸಾಕ್ಷಿಯಾಗಿವೆ. ಪ್ರಕೃತಿಯ ಮಡಿಲಿನ ಪ್ರವಾಸಿ ತಾಣಗಳು ವನ್ಯಜೀವಿಗಳ ಬೀಡಾಗುತ್ತಿವೆ. ವಾಯುಮಾಲಿನ್ಯ ಕಡಿಮೆಯಾಗಿರುವುದು ಎಲ್ಲರ ಅನುಭವಕ್ಕೂ ಬಂದಿದೆ. ಜಲಮಾಲಿನ್ಯಕ್ಕೆ ಹೆಸರಾದ ಗಂಗೆ, ಯಮುನೆ, ಕಾವೇರಿಗಳಲ್ಲಿ ಶುದ್ಧ ನೀರು ಹರಿಯಲಾರಂಭಿಸಿದೆ. ಮಾಲಿನ್ಯದ ಕವಚದಿಂದ ಕಾಣದಾಗಿದ್ದ ದೂರದ ಬೆಟ್ಟಗಳು ಕೈ ಬೀಸಿ ಕರೆಯುತ್ತಿವೆ. ಇದೆಲ್ಲವೂ ಪ್ರಕೃತಿ ಸಹಜ ಪ್ರಕ್ರಿಯೆಗಳು ಎನಿಸಿದರೂ, ಇದರಲ್ಲಿ ಏನೋ ಸಂದೇಶ ಅಡಗಿದೆ ಎಂಬ ವಿಶ್ಲೇಷಣೆ ಬಹಳ ಜೋರಾಗಿ ನಡೆದಿದೆ.

    ನಿಜ, ಪ್ರಕೃತಿಯ ಮೇಲೆ ಮನುಜನ ಒತ್ತಡ ಕಡಿಮೆಯಾಗಿದೆ. ಆದರೆ ಇದೆಷ್ಟು ದಿನ? ಮನುಷ್ಯ ಹೀಗೆ ಕೈ ಕಟ್ಟಿ ಬಹಳ ಸಮಯ ಕೂರುವಂತಿಲ್ಲ. ನಿಧಾನವಾಗಿಯಾದರೂ ಮೊದಲಿನ ಅಭಿವೃದ್ಧಿಯ ರೈಲನ್ನು ಏರಲೇಬೇಕು. ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗದಂತೆ ನೋಡಿಕೋಳ್ಳಬೇಕು! ಹಸಿವೆಂಬ ಮಹಾರಕ್ಕಸನನ್ನು ಮಣಿಸಿ, ಮನುಜರೆಲ್ಲರ ಸಾವನ್ನು ಮುಂದೂಡಲೇಬೇಕು. ಇದಕ್ಕೆಲ್ಲ ಈಗ ಮನೆಯಲ್ಲಿಯೇ ಕುಳಿತು ಲೆಕ್ಕಾಚಾರ ಹಾಕಲಾಗುತ್ತಿದೆ. ಕೊರೊನಾದ ಭೀತಿ ಕಡಿಮೆಯಾಗುತ್ತಿದ್ದಂತೆಯೇ ಸಮಯದ ಚೌಕಟ್ಟಿನಲ್ಲಿ ಕೆಲಸ ಆರಂಭವಾಗಿಯೇ ಬಿಡುತ್ತದೆ. ಇದು ಪ್ರಕೃತಿಯ ಮೇಲೆ ಈ ಹಿಂದಿಗಿಂತಲೂ ಹೆಚ್ಚು ಒತ್ತಡಬೀರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಲಾರಂಭಿಸಿದೆ.

    ಕುಸಿದು ಬಿದ್ದ ಆರ್ಥಿಕತೆಯನ್ನು ಎತ್ತಿ ಹಿಡಿಯುವುದು ಈಗ ಎಲ್ಲ ದೇಶಗಳ ಮುಂದಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಆಮೆ ಹೆಜ್ಜೆ ಇಟ್ಟರಾಗದು, ಆನೆಯಂತೆ ನುಗ್ಗಲೇಬೇಕಾಗಿದೆ. ಹೀಗೆ ನುಗ್ಗುವಾಗ ಪರಿಸರದ ಮೇಲೆ ಬೀಳುವ ಒತ್ತಡದ ಲೆಕ್ಕಾಚಾರ ಹಾಕುತ್ತಾ ಕೂತರೆ ‘ವಿಫಲತೆ’ಯ ಪಟ್ಟ ಗ್ಯಾರಂಟಿ. ಬಲಿಷ್ಠ ಆರ್ಥಿಕತೆಯಲ್ಲಿ ನಮ್ಮ ದೇಶ ಎಷ್ಟನೇ ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ಮುಖ್ಯ. ಹೀಗಾಗಿಯೇ ಈಗಾಗಲೇ ಚೀನಾ ನವೀಕರಿಸಬಹುದಾದ ಇಂಧನಗಳ ಉತ್ಪಾದಿಸುವ ಯೋಜನೆಗಳನ್ನು ಪಕ್ಕಕ್ಕೆ ಸರಿಸಿದೆ. ದೇಶದಾದ್ಯಂತ ಸ್ಥಾಪಿಸಲುದ್ದೇಶಿಸಿದ್ದ ಸೋಲಾರ್ ಫಾರ್ಮ್ ಯೋಜನೆಯನ್ನು ಮುಂದೂಡಿದೆ. ಅಲ್ಲದೆ, ನಿರ್ಮಾಣ ಕಾಮಗಾರಿಗಳನ್ನು ಪ್ರೋತ್ಸಾಹಿಸಲು 3.5 ಟ್ರಿಲಿಯನ್ ಡಾಲರ್ಗಳ ಯೋಜನೆ ಘೋಷಿಸಿದೆ. ಬೇರೆ ದೇಶಗಳೂ ಇದೇ ದಾರಿಯಲ್ಲಿ ಸಾಗಿವೆ. ಕೆನಡಾ ತೈಲ ಮತ್ತು ಅನಿಲ ಉದ್ಯಮಕ್ಕೆ ಬೃಹತ್ ನೆರವಿನ ಪ್ಯಾಕೇಜ್ ಘೋಷಿಸಿದ್ದರೆ, ಅಮೆರಿಕ ತಾನೇನು ಕಡಿಮೆ ಎಂದು ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ಏರ್ಲೈನ್ಸ್ಉದ್ಯಮಕ್ಕೆ 60 ಶತಕೋಟಿ ಡಾಲರ್ ನೆರವು ಸೇರಿದಂತೆ 2 ಟ್ರಿಲಿಯನ್ ಡಾಲರ್ಗಳ (ಒಟ್ಟಾರೆ ಜಿಡಿಪಿಯ ಶೇ. 13ರಷ್ಟು) ಪ್ಯಾಕೇಜ್ ಪ್ರಕಟಿಸಿದೆ.

    ನಮ್ಮ ದೇಶ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಸುಸ್ಥಿರ ಅಭಿವೃದ್ಧಿಯನ್ನು ಮರೆತು, ಆರ್ಥಿಕ ಅಭಿವೃದ್ಧಿಯನ್ನೇ ಎತ್ತಿ ಹಿಡಿಯಲು ಜಿಡಿಪಿಯ ಶೇ. 10ರಷ್ಟು ಅಂದೆ 20ಲಕ್ಷ ಕೋಟಿಗಳ ಪ್ಯಾಕೇಜ್ ಪ್ರಕಟಿಸಿದೆ. ಇದೆಲ್ಲವೂ ಮತ್ತೆ ಕುಸಿದು ಬಿದ್ದಿರುವ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ನಡೆಸಿರುವ ಪ್ರಯತ್ನಗಳು. ಅಂದರೆ ಮೊದಲಿನಂತೆಯೇ ಎಲ್ಲವನ್ನೂ ‘ಸರಿ’ ದಾರಿಗೆ ತರಲಾಗುತ್ತದೆ! ಇಲ್ಲಿ ಪರಿಸರ ಮಾಲಿನ್ಯದ, ಅದರ ಪರಿಣಾಮಗಳ ವಿಷಯ ಎಲ್ಲರಿಗೂ ನಗಣ್ಯ.

     ಜಾಗತಿಕವಾಗಿ ಸೋಲಾರ್ ಬ್ಯಾಟರಿಯ ಮತ್ತು ವಿದ್ಯುತ್ವಾಹನಗಳ ಬೇಡಿಕೆ ಶೇ. 16ರಷ್ಟು ಈಗಾಗಲೇ ಕುಸಿದಿದೆ. ಈಕುಸಿತದ ಪ್ರಮಾಣ ಬಹಳ ಜಾಸ್ತಿಯಾಗುವ ನಿರೀಕ್ಷೆ ಇದೆಎಂದುಮಾರುಕಟ್ಟೆವಿಶ್ಲೇಷಕರುಹೇಳುತ್ತಿದ್ದಾರೆ. ತೈಲ ಬೆಲೆ ಕುಸಿತ ಕೂಡಇನ್ನಷ್ಟು ಅನಾಹುತಗಳಿಗೆ ಕಾರಣವಾಗಲಿದೆ. ಪರಿಸರಕ್ಕೆ, ಭೂತಾಪಮಾನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳ ಕುರಿತು ಚರ್ಚಿಸಲು ಇನ್ನು ಕೆಲವು ವರ್ಷ ಯಾರಿಗೂ ಸಮಯವಿರುವುದಿಲ್ಲ! ಲಾಕ್ಡೌನ್ ಸಂದರ್ಭಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದ ವನ್ಯಜೀವಿಗಳು ಮುಂದೆ ಇನ್ನಷ್ಟು ನರಕಯಾತನೆ ಅನುಭಿಸಬೇಕಾಗುತ್ತದೆ, ಮತ್ತೊಂದು ಬಲಿಷ್ಠ ವೈರಾಣು ಸೃಷ್ಟಿಯಾಗುವವರೆಗೂ!

    error: Content is protected !!