24.6 C
Karnataka
Monday, May 20, 2024

    ಮೈಕೊಡವಿಕೊಂಡ ಕಾಂಗ್ರೆಸ್ಸಿಗೆ ತೊಡೆ ತಟ್ಟುವಂತೆ ಮಾಡಿದ ಡಿಕೆಶಿ

    Must read

    * ಪಿ.ಕೆ. ಚನ್ನಕೃಷ್ಣ

    ರಾಜ್ಯ ಕಾಂಗ್ರೆಸ್ಸಿನಲ್ಲಿ ಡಿಕೆಶಿ ಪರ್ವ ಅದ್ಭತವಾಗಿ ಟೇಕಾಫ್ ಆಗಿದೆ. ಕೊರೋನ ಮಾರಿಯೊಂದು ಇಲ್ಲದೆ ಹೋಗಿದ್ದಿದ್ದರೆ ಘಟಾನುಘಟಿಗಳನ್ನು ಹಿಂದಕ್ಕೆ ನೆಟ್ಟಿ ಕೆಪಿಸಿಸಿ ಗಾದಿ ಮೇಲೆ ಬಂದು ಕೂತ ಅವರ ಸಾಹಸಗಾಥೆಗಳ ಬಗ್ಗೆ ಏನಿಲ್ಲವೆಂದರೂ ಒಂದು ವಾರ, ಅದಕ್ಕಿಂತ ಹೆಚ್ಚು ಕಾಲ ಸುದ್ದಿವಾಹಿನಿಗಳಲ್ಲಿ ಭರ್ಜರಿ ಮಸಾಲೆಯುಕ್ತ ಭಜನೆ, ಟೀಕೆ ಟಿಪ್ಪಣಿಗಳ ಮಿಸಳ್ಬಾಜಿಯೇ ಇರುತ್ತಿತ್ತು. ಅವರು ಅಧಿಕಾರ ಸ್ವೀಕರಿಸುವ ಸಮಾರಂಭವೇನಾದರೂ ಆಗಿದ್ದಿದ್ದರೆ, ರಾಜ್ಯ ಕಾಂಗ್ರೆಸ್ ಪಾಲಿಗೆ ಅದೊಂದು ಸ್ಮರಣೀಯ ಕಾರ್ಯಕ್ರಮ ಆಗುತ್ತಿತ್ತು. ಅದು ಅಗದ ಕಾರಣಕ್ಕೆ ಡಿಕೆಶಿ ವಿರೋಧಿಗಳು ಕೊರಿನಾಗೆ ಥ್ಯಾಂಕ್ಸ್ ಹೇಳುತ್ತಿರಬಹುದು.

    ತಿಹಾರದಿಂದ ಹೊರಬಂದು ನೇರ ದಿಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸೆಂಟರ್ ಸೀಟಿನಲ್ಲಿ ಕೂತು ನಿರ್ಣಾಯಕ ಅಥವಾ ನಿರ್ಧಾರಿತ ನಾಯಕನಂತೆ ಪ್ರೆಸ್ಮೀಟ್ ಮಾಡಿ, ಅಲ್ಲಿಂದ ಹೊರಟು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಆ ವ್ಯಕ್ತಿಗೆ ಸಿಕ್ಕ ಅಭೂತಪೂರ್ವ ಸ್ವಾಗತ ಇತರೆ ಪಕ್ಷಗಳ ನಾಯಕರ ಮಾತು ಹಾಗಿರಲಿ, ಸ್ವಪಕ್ಷದವರ ಹೊಟ್ಟೆಯಲ್ಲೇ ಬೆಂಕಿಬೀಳಲು ಕಾರಣವಾಗಿತ್ತು. ಅಲ್ಲಿಂದ ಹೆದ್ದಾರಿ ೭ರಲ್ಲಿ ಪ್ರವಾಹದಂತೆ ಸಾಗಿಬಂದ ಮೆರವಣಿಗೆಯಲ್ಲಿ ಒಂಟಿ ಸಲಗದಂತೆ ಮಿಂಚಿದ್ದರು ಡಿಕೆಶಿ.

    ಅದಾದ ನಂತರ ಸಂಭವಿಸುತ್ತ ಬಂದ ಬೆಳವಣಿಗೆಗಳು ಕೆಲ ಕಾಂಗ್ರೆಸ್ಸಿಗರ ಕಣ್ಣು ಉರಿಯುವಂತೆ ಮಾಡಿದ್ದವು. ಆ ಹೊತ್ತಿಗೇ ಡಿಕೆಶಿಯೇ ಕೆಪಿಸಿಸಿ ಭತ್ತಳಿಕೆಯಲ್ಲಿರುವ ಮುಂದಿನ ಬ್ರಹ್ಮಾಸ್ತ್ರ ಎಂಬುದು ಕಾರ್ಯಕರ್ತರಿಗೂ ತುಂಬಾ ಚೆನ್ನಾಗಿ ಆರ್ಥವಾಗಿಬಿಟ್ಟಿತ್ತು. ಚಾನ್ಸ್ ಸಿಕ್ಕಾಗಲೆಲ್ಲ ತೆರೆಮರೆಯಲ್ಲಿ ಗುಮ್ಮುತ್ತಿದ್ದ ಅತ್ತ ಮೂಲನಿವಾಸಿಗಳೂ, ಇತ್ತ ವಲಸೆ ಬಂದು ಹಳಬರಾದವರೂ ಮುಂದಿನ ದಿನಗಳಲ್ಲಿ ನಮ್ಮ ರಾಜಿಪರ್ವ ಆರಂಭವಾಯಿತು ಎಂದೆ ಭಾವಿಸಿಬಿಟ್ಟರು. ಡಿಕೆಶಿ ರಾಜಿ ಮಾಡಿಕೊಳ್ಳುವುದಿಲ್ಲ. ಉಳಿದವರಿಗೆ ರಾಜಿ ಮಾಡಿಕೊಳ್ಳದೇ ವಿಧಿಯಿಲ್ಲ. ಅವರನ್ನು ಹತ್ತರದಿಂದ ಹಲವು ದಶಕಗಳಿಂದ ಬಲ್ಲ ಹಿರಿಯ ನಾಯಕರೊಬ್ಬರ ಮಾತಿದು.

    ಪೂರ್ವ ನಿರ್ಧಾರಿತ:
    ಜೈಲಿನಿಂದ ರಿಲೀಸ್ ಆಗಿ ಜನಪಥ ಹತ್ತರಲ್ಲಿ ಸೋನಿಯಾ ಗಾಂಧಿ ಅವರನ್ನು ತಮ್ಮ ಸಹೋದರ ಸುರೇಶ್ ಅವರೊಂದಿಗೆ ಭೇಟಿಯಾದ ಕೂಡಲೇ ಡಿಕೆಶಿ ಅವರು ಕೆಪಿಸಿಸಿ ಪಟ್ಟಕ್ಕೇರುವುದು ಖಚಿತವಾಗಿಬಿಟ್ಟಿತ್ತು. ಸೋನಿಯಾ ಆವತ್ತೇ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಿದ್ದರು. ಅವರು ಆವತ್ತೇ ರಾಜ್ಯ ಕಾಂಗ್ರೆಸ್ ಉಸ್ತವಾರಿ ಕೆ.ಸಿ. ವೇಣುಗೋಪಾಲ್, ಗುಲಾಂ ನಬಿ ಆಜಾದ್ ಮುಂತಾದವರಿಗೆ ಈ ಗುಟ್ಟು ಮುಟ್ಟಿತ್ತು. ಇನ್ನು ದಿನದ ಮೂರೊತ್ತು ಎಐಸಿಸಿ ಪಡಸಾಲೆಯಲ್ಲೇ ಠಿಕಾಣೆ ಹಾಕಿ ಅಲ್ಲೇ ಕಾಫಿ, ಟೀ, ತಿಂಡಗಳನ್ನು ತೀರಿಸಕೊಳ್ಳುವ ರಾಜ್ಯದ ಕಾಯಂ ದಿಲ್ಲಿ ಕಾಂಗ್ರೆಸ್ಸಿಗರಿಗೆ ಕೂಡ ಡಿಕೆಶಿ ನೆಕ್ಸ್ಟ್ ಎನ್ನುವ ಸಣ್ಣ ಸುಳಿವು ಇರಲಿಲ್ಲ. ಅವರು ಕೆಪಿಸಿಸಿ ಅಧಯಕ್ಷರಾಗಲು ಹೇಗೆ ಸಾಧ್ಯ? ಸಿಬಿಇ, ಇಡಿ ಅವರನ್ನು ಸುಮ್ಮನೆ ಬಿಡುತ್ತವೆಯೇ? ಅವರಿಗೆ ಮುಂದೆ ಜೈಲೇ ಗತಿ ಎಂದು ಗಿಣಿಲೆಕ್ಕ ಹಾಕುತ್ತಿದ್ದವರಲ್ಲಿ ಒಬ್ಬರಿಗೂ ಡಿಕೆಶಿ ಉರುಳಿಸುತ್ತಿದ್ದ ಪಗಡೆಗಳ ಲೆಕ್ಕ ಗೊತ್ತಾಗಲೇ ಇಲ್ಲ. ಹೀಗಾಗಿ ಕೆಲ ನಾಯಕಶಿಕಾಮಣಿಗಳು ಅವರಿಗೆ ಹೇಗಾದರೂ ಕೆಪಿಸಿಸಿ ಗಿರಿ ತಪ್ಪಿಸಲು ಅವಿರತವಾಗಿ ಬೆಂಗಳೂರಿನಿಂದ ದಿಲ್ಲಿ ಯಾತ್ರೆ ಮಾಡಿದ್ದು ನಿರುಪಯುಕ್ತವಾಯಿತು ಎಂದು ಹಿರಿಯ ಕಾಂಗ್ರೆಸ್ಸಿಗರೊಬ್ಬರು ಕನ್ನಡ ಪ್ರೆಸ್ ಜತೆ ಹೇಳಿಕೊಂಡಿದ್ದಾರೆ.

    ಮಾರ್ಚ್ ೧೧ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಕೊನೆಗೂ ಪ್ರಕಣೆ ಹೊರಡಿಸಿಬಿಟ್ಟರು. ಡಿಕೆಶಿ ಅಧ್ಯಕ್ಷರಾದರೆ, ಅಕ್ಕಪಕ್ಕದಲ್ಲಿ ಸಲೀಮ್ ಅಹಮದ್ ಮತ್ತು ಈಶ್ವರ ಖಂಡ್ರೆ ಅವರನ್ನು ತಂದು ಕೂರಿಸಲಾಗಿತ್ತು. ಅಷ್ಟಕ್ಕೆ ಡಿಕೆಶಿ ವಿರೋಧಿಗಳು ಬೇಳೆ ಬೇಯಿಸಿಕೊಂಡಿದ್ದರು. ಅವರು ನಡೆಸಿದ ಬ್ಲಾಕ್ಮೇಲ್ ತಂತ್ರಗಳಿಗೆ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅಂತವರೂ ತಾಳ ಹಾಕಿದ್ದರು ಎಂಬುದೇ ದೊಡ್ಡ ಸುದ್ದಿ. ಅಂದರೆ, ಬೆಂಗಳೂರು, ಮೈಸೂರಿನಲ್ಲಿ ತಮ್ಮ ಬೇಳೆ ಬೇಯದು ಅನ್ನುವುದನ್ನು ಅರಿತುಕೊಂಡ ಅವರು ಖರ್ಗೆ ಅವರನ್ನು ದಾಳವನ್ನಾಗಿ ಮಾಡಿಕೊಳ್ಳಲು ಯತ್ನಸಿದರು. ಆದರೆ ವಲಸೆ ಬಂದವರಿಂದ ಮೂಲ ಕಾಂಗ್ರೆಸ್ಸಿಗರು ತೆತ್ತಿದ್ದ ಬೆಲೆಯ ಬಗ್ಗೆ ಗೊತ್ತಿದ್ದ ಖರ್ಗೆ ನಿಜಕ್ಕೂ ತಮ್ಮ ದೊಡ್ಡಸ್ಥಿಕೆ ಉಳಿಸಿಕೊಂಡು ಸುಮ್ಮನಾದರು ಎಂದು ಡಿಕೆಶಿ ಆಪ್ತರೊಬ್ಬರು ಹೇಳುವ ಮಾತು.

    ಕೆಪಿಸಿಸಿ ಕೂಗುತ್ತಿದೆ:
    ಡಿಕೆಶಿ ಪಟ್ಟಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸಿಗರ ಹುರುಪೂ ಮುಗಿಲುಮುಟ್ಟಿದೆ. ಇನ್ನೇನು ಕನಕಪುರ ಬಂಡೆ ಸಿಎಂ ಆಗಿಯೇಬಿಟ್ಟರು ಎನ್ನುವಂತೆ ಅವರ ಜೋಶ್ ಬಂದಿದೆ ಕಾರ್ಯಕರ್ತರಲ್ಲಿ. ಕೊರೊನ ಒಂದಿಲ್ಲದಿದ್ದರೆ ಇಷ್ಟುಹೊತ್ತಿಗೆ ಯಡಿಯೂರಪ್ಪ ಸರಕಾರದ ವಿರುದ್ಧ ರಾಜ್ಯದಲ್ಲಿ ಪ್ರಬಲವಾದ ಅಲೆಯೇಳುವಂತೆ ಮಾಡಿಬಿಡುತ್ತಿದ್ದರು ಡಿಕೆಶಿ. ತಂತ್ರಗಾರಿಕೆಯಲ್ಲಿ ಅವರು ಹೇಗೆ ಎಂಬುದು ಇಡೀ ರಾಜ್ಯಕ್ಕೇನು ದೇಶಕ್ಕೆ ಗೊತ್ತಿರುವ ಸಂಗತಿ. ಅಷ್ಷೇ ಏಕೆ? ಈ ಹೊತ್ತಿಗೆ ಇಡೀ ಮೂವತ್ತೂ ಜಿಲ್ಲೆಗಳನ್ನು ಒಂದು ರೌಂಡ್ ಹಾಕಿ ಬರುತ್ತಿದ್ದರು ಅವರು. ಅವರ ದಮ್ಮು, ತಾಕತ್ತಿನ ಬಗ್ಗೆ ದೂಸರಾ ಮಾತೇ ಇಲ್ಲ. ಈ ಬಗ್ಗೆ ಅವರ ವಿರೋಧಿಗಳೂ ಕೆಮ್ಮಲಾರರು ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತ ಆ.ರ್. ವಿಠ್ಠಲಮೂರ್ತಿ.

    ಡಾ. ಜಿ. ಪರಮೇಶ್ವರ್ ಆಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ಸಿಏಮ ಆಗಿದ್ದರು. ಪರಂ ನೇತೃತ್ವದಲ್ಲೇ ಚುನಾವಣೆ ಎದುರಿಸಿದರೂ ಸಿದ್ದು ಜತೆಗಿನ ಹೊಂದಾಣಿಕೆಯ ಕೊರತೆ ಹಾಗೂ ಮಾಸ್ ಆಫೀಲು ಇಲ್ಲದ ಕಾರಣಕ್ಕೆ ರಣಾಂಗಣದಲ್ಲಿ ಕಾಂಗ್ರೆಸ್ ಸೋಲುವಂತಾಯಿತು. ಸ್ವತಃ ಸಿದ್ದು ಮೈಸೂರಿನಲ್ಲಿ ಸೋತರು. ಬೇರೆ ಗತ್ಯಂತರವಿಲ್ಲದೆ ಜೆಡಿಎಸ್ ಜತೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡು ಸರಕಾರ ಮಾಡಬೇಕಾಯಿತು. ಆ ಮೈತ್ರಿ ಸರಕಾರ ಬರಲು ಎಚ್ ಡಿ ಕುಮಾರಸ್ವಾಮಿ ಮತ್ತು ಡಿ,ಕೆ, ಶಿವಕುಮಾರ್ ಅವರಿಬ್ಬರೇ ಮೂಲ ಕಾರಣರು. ಆಮೇಲೆ ಆಪರೇಷನ್ ಕಮಲ, ಇದಕ್ಕೆ ಕಾಂಗ್ರೆಸ್ಸಿಗರಲ್ಲಿಯೇ ಕೆಲವರು ಕುಮ್ಮಕ್ಕು ನೀಡಿದ್ದು, ಐಟಿ-ಇಡಿ ದಾಳಿ, ಬಳಿಕ ಡಿಕೆಶಿ ಜೈಲುಪಾಲಾಗಿದ್ದು ಇದೆಲ್ಲ ಇತಿಹಾಸ.

    ಆದರೆ ಕೆಪಿಸಿಸಿ ಪಟ್ಟಕ್ಕೆ ಅನೇಕ ಸವಾಲುಗಳ ನಡುವೆಯೂ ಬಂದು ಕೂತ ಡಿಕೆಶಿ ಇತಿಹಾಸ ಸೃಷ್ಟಿ ಮಾಡವುದಂತೂ ಖಂಡಿತ. ಈವರೆಗೂ ತಣ್ಣಗೆ ಮೋಡದ ಕೆಳಗೆ ಮಲಗಿದ್ದ ಹಸುವಿನಂತೆ ಮಲಗಿದ್ದ ರಾಜ್ಯ ಕಾಂಗ್ರೆಸ್ ಹೋರಿಯಂತೆ ಪುಟಿದೆದ್ದಿದೆ. ಸ್ವತಃ ಡಿಕೆಶಿಯೇ ಅಖಾಡಕ್ಕೆ ಇಳಿದಿದ್ದಾರೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಯಡಿಯೂರಪ್ಪ ಸರಕಾರ ಹತ್ತಲ್ಲ, ನೂರು ಮೆಟ್ಟಿಲು ಕೆಳಗಿಳಿದು ಬರುವಂತೆ ಮಾಡಿದ್ದಿ ಇದೇ ಕನಕಪುರ ಬಂಡೆ. ಅದಕ್ಕಾಗಿ ಅವರು ಮೆಜೆಸ್ಟಿಕ್ ನಿಲ್ದಾಣದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಧರಣಿ ಕೂತಿದ್ದು ಕಾಂಗ್ರೆಸ್ ಪಾಲಿಗೆ ಹೊಸ ಚೈತನ್ಯವನ್ನೇ ನೀಡಿದೆ. ಲಾಕ್ ಡೌನ್ ನಡುವೆಯೂ ಸಾವಿರಾರು ಕಾರ್ಯಕರ್ತರು ಅವತ್ತು ಡಿಕೆಶಿ ಜತೆಗೂಡಿದ್ದರು. ಇದರ ಪ್ರತಿಫಲವಾಗಿ ವಲಸೆ ಕಾರ್ಮಿಕರೆಲ್ಲ ನಯಾಪೈಸೆ ಖರ್ಚಿಲ್ಲದೆ ತಮ್ಮ ಊರುಗಳನ್ನು ಸೇರಿಕೊಳ್ಳುವಂತಾಯಿತು. ಕೊರೊನ ವಿಚಾರದಲ್ಲಂತೂ ಅವರು ಸರಕಾರಕ್ಕೆ ಹೆಜ್ಜೆ ಹೆಜ್ಜೆಗೂ ಬಿಸಿ ಮುಟ್ಟಿಸುತ್ತಿದ್ದಾರೆ ಎಂಬುದು ಗುಟ್ಟಾಗೇನೂ ಉಳಿದಿಲ್ಲದ ಸಂಗತಿ.

    ಕಷ್ಟಕಾಲದಲ್ಲೂ ಸಂಘಟನೆ:
    ವೈರಸ್ ಕಾಡುತ್ತಿರುವ ಕಾಲದಲ್ಲಿಯೂ ಅವರು ಪಕ್ಷ ಸಂಘಟನೆಯನ್ನೂ ಮಾಡುತ್ತಿದ್ದಾರೆ. ನಿತ್ಯವೂ ಕಾರ್ಯಕರ್ತರನ್ನು ಬೇಟಿಯಾಗುತ್ತಿದ್ದಾರೆ. ನಾಯಕರ ಮನೆಬಾಗಿಲಿಗೆ ಎಡತಾಕುತ್ತಿದ್ದಾರೆ. ನಿರಾಶೆಗೊಂಡಿದ್ದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ತಮ್ಮ ಮನೆಯಿಂದಲೇ ಜಿಲ್ಲಾ ನಾಯಕರ ಜತೆ ವಿಡಿಯೋ ಸಂವಾದ ಮಾಡುತ್ತಿದ್ದಾರೆ. ತಾವಿರುವ ಪ್ರದೇಶಗಳಲ್ಲಿಯೇ ಕೊರೊನ ಯೋಧರಾಗಿ ಕೆಲಸ ಮಾಡುವಂತೆ ಕಾರ್ಯಕರ್ತರನ್ನು ಉತ್ತೇಜಿಸುತ್ತಿದ್ದಾರೆ. ಅದಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಶ್ರಮಿಸುತ್ತಿದ್ದಾರೆ.

    ಇತ್ತೀಚೆಗೆ ಅವರು ಕಾರ್ಯಕರ್ತರಿಗೆ ನೀಡಿದ್ದ ಸಂದೇಶ ಹೀಗಿತ್ತು. “ಪಕ್ಷ ಬಲಪಡಿಸುವುದು ಎಲ್ಲರ ಕರ್ತವ್ಯ ನಿಜ. ಅದೇ ರೀತಿ ನಿಮ್ಮ ಸುತ್ತಮುತ್ತ ಇರುವ ಜನರ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಗುರುತರ ಹೊಣೆಗಾರಿಕೆ ನಿಮ್ಮ ಮೇಲಿದೆ. ನಮ್ಮ ಮೊದಲ ಆದ್ಯತೆ ಜನರು ಎಂಬುದನ್ನು ಮರೆಯಬಾರದು”

    ಮೆಜೆಸ್ಟಿಕ್ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆ ಆರ್ ಪುರದ ಮುಖಂಡರೊಬ್ಬರು ಕನ್ನಡ ಪ್ರೆಸ್ ಜತೆ ಮಾತನಾಡುತ್ತ ಹೇಳಿದ್ದಿಷ್ಟು… ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಲೀಡ್ ಮಾಡಬಲ್ಲ ನಾಯಕರೊಬ್ಬರು ನಮಗೆ ಇರಲಿಲ್ಲ. ಡಿಕೆಶಿ ಅವರಲ್ಲಿರುವ ಬಹುದೊಡ್ಡ ಕ್ವಾಲಿಟಿ ಅಂದರೆ, ಅವರು ತುಂಬಾ ಬೋಲ್ಡ್, ಧೈರ್ಯವಂತರು, ಜತೆಗೆ ಯಾರಿಗೂ ಹೆದರದ ವ್ಯಕ್ತಿತ್ವ ಅವರದ್ದು. ರಾಜಕಾರಣದಲ್ಲಿ ಅವರು ಯಾರನ್ನೂ ಅನುಕರಣೆ ಮಾಡಲ್ಲ, ಬದಲಿಗೆ ತಮ್ಮದೇ ಒಂದು ಸ್ಟೈಲ್ ಅವರದ್ದು. ಕಾರ್ಯಕರ್ತರಿಗೆ ಅದು ಇಷ್ಟವಾಗಿದೆ ಎನ್ನುತ್ತಾರೆ.

    ಬಹಳ ದಿನಗಳ ನಂತರ ಕೆಪಿಸಿಸಿಗೆ ಕೆಲಸ ಮಾಡುವ ಸಾರಥಿ ಸಿಕ್ಕಿದ್ದಾರೆ. ಇದುವರೆಗೂ ಪಟ್ಟದ ಮೇಲೆ ಬಂದು ಕೂತವರು ಡಿಕ್ಟೇಟ್ ಮಾಡುತ್ತಿದ್ದ ಕೆಲಸಗಳನ್ನಷ್ಟೇ ಮಾಡುತ್ತಾ ಕೇವಲ ಬ್ಯಾನರ್, ಫ್ಲೆಕ್ಸ್ ಕಟ್ಟುತ್ತಿದ್ದ ಕಾರ್ಯಕರ್ತರ ಪಡೆ ಕೂಡ ಈಗ ಮೈಕೊಡವಿ ಮೇಲೆದ್ದಿದೆ.

    ನೋಡೋಣ. ಮುಂದೆ ಕಾದಿವೆ ರೋಚಕ ಅಧ್ಯಾಯಗಳು.

    ಚನ್ನಕೃಷ್ಣ ಪಿ ಕೆ
    ಚನ್ನಕೃಷ್ಣ ಪಿ ಕೆhttps://cknewsnow.com/
    ಸಿಕೆ ನ್ಯೂಸ್ ನೌ.ಕಾಮ್ ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!