23.5 C
Karnataka
Monday, May 20, 2024

    ಆರ್ಥಿಕತೆಗೆ ಕೊರೊನಾ ವರ್ಷದ ಆಘಾತ

    Must read

    ಕೊರೊನಾ ವೈರಸ್ ದೇಶದ ಆರ್ಥಿಕತೆಗೆ ತಂದಿಟ್ಟ ಆಘಾತ ಅಂತಿದ್ದಲ್ಲ. ಇದರಿಂದ ಚೇತರಿಸಿಕೊಳ್ಳಲು ಕನಿಷ್ಠವೆಂದರೂ ಒಂದು ವರ್ಷ ಕಾಲವಾದರೂ ಭಾರತಕ್ಕೆ ಬೇಕು. ಇದು ಅತಿಶಯೋಕ್ತಿಯಲ್ಲ, ಆದರೆ ವಾಸ್ತವ.

    ಇದನ್ನು ಅರ್ಥೈಸಲು ಬಹುದೊಡ್ಡ ಮಟ್ಟಿನ ಆರ್ಥಿಕ ತಜ್ಞರಾಗುವ ಅಗತ್ಯವೇ ಇಲ್ಲ. ಸಾಮಾನ್ಯ ಜ್ಞಾನ ಇರುವ ಪ್ರತಿಯೊಬ್ಬರಿಗೂ ಮಾರುಕಟ್ಟೆಯಲ್ಲಿ ಯಾವ ರೀತಿ ವ್ಯವಹಾರ ಗಣನೀಯ ಕುಸಿತ ಕಂಡಿದೆ, ಖರೀದಿ ಸಾಮರ್ಥ್ಯ ಯಾವ ರೀತಿ ಇಳಿದು ಹೋಗಿದೆ, ಜನರು ಹೇಗೆ ಹೈರಾಣಾಗಿ ಕೊರೊನಾ ವೈರಸ್ ಸೋಂಕು ಅದರಿಂದಾದ ಲಾಕ್‌ಡೌನ್‌ನ್ನು ಶಪಿಸುತ್ತಿದ್ದಾರೆ ಎಂಬುದನ್ನು ಸ್ವಲ್ಪ ಗ್ರಹಿಸಿದರೂ ಸಾಕು. ತರಕಾರಿ, ದಿನ ನಿತ್ಯದ ಆವಶ್ಯಕ ದಿನಸಿ ವಸ್ತುವಿನಿಂದ ಹಿಡಿದು ಕೈಗಾರಿಕೋತ್ಪನ್ನಗಳ ಮಾರಾಟ ತೀವ್ರಗತಿಯ ಕುಸಿತ ಕಂಡಿದೆ.

    ಎಫ್‌ಐಸಿಸಿಐ (ಫಿಕಿ) ಮತ್ತು ತೆರಿಗೆ ಸಲಹೆಗಾರ ಏಜೆನ್ಸಿ ಆಗಿರುವ ಅಡ್ವೆಸರಿ ಈ ಕುರಿತಂತೆ ಈಗಾಗಲೇ ಸಮೀಕ್ಷೆ ನಡೆಸಿದೆ. ಸುಮಾರು 380ಕ್ಕೂ ಹೆಚ್ಚು ಕೈಗಾರಿಕೆಗಳ ಸಮೀಕ್ಷೆಯನ್ನು ಇದು ನಡೆಸಿದ್ದು, ಬಹುತೇಕ ಕಂಪನಿಗಳು ಭವಿಷ್ಯದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಹುದೊಡ್ಡ ಹೋರಾಟವನ್ನೇ ನಡೆಸಬೇಕಾಗಿದೆ. ಅಲ್ಲಿಗೆ ನಿರುದ್ಯೋಗ ಖಾತರಿ ಎಂಬಂತಾಯಿತು.

    ಬಹುತೇಕ ಕಂಪನಿಗಳು ಈಗಾಗಲೇ ಕಾಸ್ಟ್ ಕಟ್ಟಿಂಗ್ ನೀತಿಯನ್ನು ಅನುಸರಿಸಲಾರಂಭಿಸಿವೆ. ಅದರಲ್ಲೂ ಮುಖ್ಯವಾಗಿ ರಿಲೆಯನ್ಸ್ ನಂತಹ ದಿಗ್ಗಜ ಕಂಪನಿಯೂ ಶೇ. 10ರಿಂದ 50ರಷ್ಟು ವೇತನ ಕಡಿತಕ್ಕೆ ಮುಂದಾಗಿದೆ. ಇದು ಸಹಜವಾಗಿಯೇ ಜನರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡಲಿದೆ. ಇದರ ಪರಿಣಾಮ ಮತ್ತೆ ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಪ್ರಮಾಣ ಇಳಿಕೆಯಾಗಲಿದೆ.

    ಇನ್ನು ಕೆಲವು ಸಮೀಕ್ಷೆಗಳ ಪ್ರಕಾರ, ಈ ಆರ್ಥಿಕ ವರ್ಷದಲ್ಲಿ ಕೈಗಾರಿಕಾ ಉತ್ಪಾದನೆಗಳ ಮಾರಾಟದ ಪ್ರಮಾಣ ಗಣನೀಯ ಇಳಿಕೆ ಕಾಣಲಿವೆ. ಇನ್ನೇನಿದ್ದರೂ ಮುಂದಿನ ಡಿಸೆಂಬರ್ ವೇಳೆಗೆ ಮಾತ್ರ ಅದರಲ್ಲೂ ಕೊರೊನಾ ಹಾವಳಿ ಸಂಪೂರ್ಣ ಇಳಿಮುಖವಾದರೆ ಮಾತ್ರ ಸಕಾರಾತ್ಮಕ ಬೇಡಿಕೆಯನ್ನು ಕಾಣುವ ನಿರೀಕ್ಷೆಯನ್ನು ಅವು ಇಟ್ಟುಕೊಂಡಿವೆ.

    ಇನ್ನು ಹೊಟೇಲ್ ಮತ್ತು ಸೇವಾವಲಯದ ವಿಷಯಕ್ಕೆ ಬಂದರೆ ಸಹಜವಾಗಿಯೇ ಇವುಗಳು ಅನಿವಾರ್ಯತೆ ಪಟ್ಟಿಯಲ್ಲಿವೆ. ಹೀಗಾಗಿ ಒಂದಿಷ್ಟು ಹಿಂಜರಿಕೆ ಕಂಡರೂ ದಿನ ಕಳೆದಂತೆ ಸುಧಾರಣೆಯ ಹಾದಿಯಲ್ಲಿ ಸಾಗುವ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಮುಂಬಯಿ ಮೂಲಕ ಹೊಟೇಲ್ ಉದ್ಯಮಿ ನರೇಶ್ ರೈ ಅಭಿಪ್ರಾಯ ಪಟ್ಟರು. ಆದರೆ, ದೊಡ್ಡ ಹೊಟೇಲ್ ಗಳು ಚೇತರಿಸಿಕೊಳ್ಳಲು ಇನ್ನಷ್ಟು ಕಾಲ ತೆಗೆದುಕೊಳ್ಳಬಹುದು. ಯಾಕೆಂದರೆ ಪ್ರವಾಸೋದ್ಯಮಕ್ಕೆ ತೀವ್ರತರವಾದ ಹೊಡೆತ ಬೀಳುವುದರಿಂದ ಜನರ ಪ್ರಯಾಣ ಕಡಿಮೆಯಾಗಲಿದೆ. ಇದು ದೊಡ್ಡ ಹೊಟೇಲ್ ಮತ್ತು ಪ್ರವಾಸಿ ಸ್ಥಳಗಳ ಮೇಲೆ ಅವಲಂಬಿತರಾದ ಸಣ್ಣ ಉದ್ಯಮಿಗಳ ವ್ಯವಹಾರದ ಮೇಲೆ ದೀರ್ಘಾವ ದುಷ್ಪರಿಣಾಮ ಬೀರಲಿದೆ ಎಂದವರು ಹೇಳಿದರು.

    ಕೇಂದ್ರ ಸರಕಾರವು ಆರ್ಥಿಕತೆಯ ಚೇತರಿಕೆಗೆ ಈಗಾಗಲೇ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದ್ದು, ಹಂತ ಹಂತವಾಗಿ ಅವುಗಳ ವಿವರ ನೀಡಿದೆ. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದು ಜನರಿಗೆ ನೆರವು ನೀಡಿ ಆ ಮೂಲಕ ಆರ್ಥಿಕತೆಗೆ ಚೇತರಿಕೆ ನೀಡಲು ಕನಿಷ್ಠವೆಂದರೂ 6ರಿಂದ 12 ತಿಂಗಳು ಬೇಕಾಗಬಹುದು ಎಂದು ಆರ್ಥಿಕ ತಜ್ಞ ದಿನೇಶ್ ಕನಾಬರ್ ಅಭಿಪ್ರಾಯ ಪಟ್ಟಿದ್ದಾರೆ. ಮುಖ್ಯವಾಗಿ ಸರಕಾರದ ಯೋಜನೆಯು ಆರ್ಥಿಕತೆಗೆ ನಗದನ್ನು ಒಳಹರಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ. ಇನ್ನು ವ್ಯವಹಾರ ನಡೆಸುವ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಹೆಚ್ಚಿಸುವುದಕ್ಕೆ ಮತ್ತಷ್ಟು ಕಾಲಾವಕಾಶ ಅನಿವಾರ್ಯ ಮತ್ತು ಆವಶ್ಯಕ ಎಂದವರು ಹೇಳಿದರು.

    ಇನ್ನು ಕೈಗಾರಿಕೆಗಳು, ಬ್ಯಾಂಕುಗಳು ಮತ್ತು ಉದ್ಯಮಗಳು ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಬಂಡವಾಳ ಆಕರ್ಷಣೆಯ ನಿಟ್ಟಿನಲ್ಲಿ ಕನಿಷ್ಠವೆಂದರೂ 6ರಿಂದ 12 ತಿಂಗಳ ಕಾಲಾವಕಾಶಕ್ಕೆ ಮನ ಮಾಡಬಹುದು. ಅಲ್ಲಿಗೆ ಒಂದು ವರ್ಷಗಳ ಕಾಲ ಆರ್ಥಿಕತೆಯ ಪರಿಸ್ಥಿತಿ ಇದೇ ರೀತಿ ಮುಂದುವರಿಯಲಿದೆ. ರಫ್ತು ಉದ್ಯಮವನ್ನೇ ನಂಬಿರುವ ಕಂಪನಿಗಳ ಪೈಕಿ ಶೇ. 43ರಷ್ಟು ಸಂಸ್ಥೆಗಳು ಸದ್ಯದ ಮಟ್ಟಿಗೆ ಹೆಚ್ಚಿನ ಉತ್ಪಾದನೆ ಮತ್ತು ಹೂಡಿಕೆಗೆ ಮುಂದಾಗುವ ಸಾ‘್ಯತೆಗಳು ಕಡಿಮೆಯಿವೆ. ಇದರಿಂದ ಸ್ಥಳೀಯವಾಗಿ ಜವಳಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಜ್ರ, ಚಿನ್ನಾಭರಣ ಸೇರಿದಂತೆ ನಾನಾ ಉದ್ಯಮಗಳು ಸೊರಗುವುದು ಖಚಿತ. ಅಂತಿಮವಾಗಿ ಜನರ ಉದ್ಯೋಗಾವಕಾಶ ಕಡಿಮೆಯಾಗಲಿದೆ. ಇದರ ಪರಿಣಾಮವಾಗಿ ಖರೀದಿ ಸಾಮರ್ಥ್ಯ ಇಳಿಕೆಯಾಗಿ, ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ. ಇದು ಒಟ್ಟಾರೆಯಾಗಿ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದಂತೂ ಸ್ಪಷ್ಟ.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!