33.6 C
Karnataka
Friday, May 10, 2024

    Man of the Match ಯಾರು ಎಂದು ತೀರ್ಮಾನಿಸಲಾಗದು!

    Must read

    ಸಂಕೇತದತ್ತ

    ಪ್ರಯೋಗಾತ್ಮಕ ಚಿತ್ರ ಎನ್ನಬಹುದಾದ ಕನ್ನಡದ ಈ ಚಿತ್ರದ ಟೈಟಲ್ ಪ್ರಕಾರ ‘ಮ್ಯಾನ್ ಆಫ್ ದ ಮ್ಯಾಚ್’ ಯಾರು ಎಂದು ತೀರ್ಮಾನಿಸಲಾಗದು!

    ಈ ಪ್ರಶ್ನೆಗೆ ಉತ್ತರ ಹೇಳೋದು ಅಷ್ಟು ಸುಲಭವಲ್ಲ! ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬಂತಿದೆ ಈ ಚಿತ್ರದ ಫಲಿತಾಂಶ!

    ಹಾಸ್ಯ ಕಲಾವಿದ ಧರ್ಮಣ್ಣ ಕಡೂರ್ ಅವರ ಆ್ಯಕ್ಷನ್ ಸೀನ್ ನಿಂದ ಚಿತ್ರ ಆರಂಭವಾಗುತ್ತೆ. ಶಿವು ಮೇಲೆ ಹಾರಿ ಜೋತು ಬೀಳುವ ಧರ್ಮಣ್ಣ ಈ ಚಿತ್ರದಲ್ಲಿ ನಿರ್ಮಾಪಕನ ಪಾತ್ರ ಮಾಡಿದ್ದಾರೆ. ‘ರಾಮ ರಾಮ ರೇ’ ಖ್ಯಾತಿಯ ನಟರಾಜ್ ಇಲ್ಲಿ ನಿರ್ದೇಶಕನ ಪಾತ್ರ ಮಾಡಿದ್ದು ತಮ್ಮ ಚಿತ್ರಕ್ಕೆ ಆಡಿಷನ್ ಮಾಡಲು ತಯಾರಾಗುತ್ತಾರೆ. ಈ ಸಂದರ್ಭದಲ್ಲಿ ಗಾಂಧಿ ಪಾತ್ರಧಾರಿಯ ಎಂಟ್ರಿ ಆಗುತ್ತೆ. ಅಲ್ಲಿಂದ ಎಲ್ಲವೂ ಟ್ವಿಸ್ಟ್ಗಳೇ!

    ಗಾಂಧಿಯನ್ನು ಡ್ರಮ್ ಮೇಲೆ ಕೂರಿಸಿ ಸ್ಟ್ಯಾಚ್ಯು ಮಾಡಿಸುವ ಡೈರೆಕ್ಟರ್ ಪಾತ್ರಧಾರಿ ಆ ಸ್ಟ್ಯಾಚ್ಯು ಸುತ್ತ ಹಲವು ದೃಶ್ಯಗಳ ಬ್ಲಾಕಿಂಗ್ ಮಾಡುತ್ತಾರೆ.ಅಲ್ಲದೇ ಅದೇ ಗಾಂಧಿ ಸ್ಟ್ಯಾಚ್ಯೂ ಮುಂದೆ ಗಲಭೆ-ಗದ್ದಲಗಳಂತಹ ಹಲವಾರು ದೃಶ್ಯಗಳನ್ನು ಮಾಡಿಸುತ್ತಾರೆ ಚಿತ್ರದ ಒಳಗಿನ ಡೈರೆಕ್ಟರ್! ಗಾಂಧಿಯು ಅಲ್ಲಿದ್ದರೂ, ಅವರನ್ನು ಗಣನೆಗೆ ತೆಗೆದುಕೊಳ್ಳದೇ ಯಾವ ಮುಜುಗರವೂ ಇಲ್ಲದೇ ಎಲ್ಲಾ ದೃಶ್ಯಗಳು ಅವರ ಮುಂದೇ ನಡೆಯುತ್ತವೆ. ನಮ್ಮ ನಿಜ ಜೀವನದಲ್ಲಿ ಗಾಂಧಿ ಪ್ರತಿಮೆಗಳ ಮುಂದೆ ನಡೆವಂತೆ! ಈ ದೃಶ್ಯಗಳಲ್ಲಿ ಅಣಕವಿದೆ, ಕೋಪವಿದೆ, ನೋವಿದೆ!

    ಅದೇ ಗಾಂಧಿ ಪ್ರತಿಮೆಯ ಮುಂದೆ ಹೀರೋ ಹೀರೊಯಿನ್ ಗೆ ಮುತ್ತು ಕೊಡುವ ದೃಶ್ಯವೂ ಇದೆ! ಗಾಂಧಿಯ ಮುಂದೆ ಮುತ್ತು ಕೊಡಲಾಗದು ಎಂಬ ಹೀರೋ ತಕರಾರಿಗೆ ಚಿತ್ರದ ಡೈರೆಕ್ಟರ್ ಪಾತ್ರಧಾರಿ ಹೇಳೋದು ‘ಗಾಂಧಿ ದ್ವೇಷ ಮಾಡಬೇಡಿ ಅಂದ್ರು, ಪ್ರೀತಿ ಮಾಡಬಾರ್ದು ಎಂದಿಲ್ಲಾ!’ ಎನ್ನುವ ಮಾತು ವಿಸ್ತಾರವಾದ ಅರ್ಥ ಕೊಡುತ್ತೆ. ಹೀರೋ ಹಾಗೂ ಹೀರೋಯಿನ್ ಇಬ್ಬರ ಪರಿಚಯವು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿದೆ. ‘ಅಪ್ಪ-ಅಮ್ಮನದು ಕರುಳ ಸಂಬಂಧವಾದ್ರೆ, ಪ್ರೇಮಿಗಳದ್ದು ಬೆರಳ ಸಂಬಂಧ’ ಎಂಬ ಡೈಲಾಗ್ ವಾವ್ ಎನಿಸುತ್ತೆ.

    ಚಿತ್ರದ ಆಡಿಷನ್ ಗೆ ಬಂದವರು ಪಾತ್ರವಾಗ್ತಾರೆ, ಗುಂಪಲ್ಲಿ ಗೋವಿಂದ ಆಗದೇ ತಮ್ಮದೇ ಆದ ಪ್ರತಿಭೆಯನ್ನು ಹೊರ ಹಾಕ್ತಾರೆ. ತಮ್ಮದೇ ಛಾಪಿಗೆ ಟಸ್ಸೇ ಹಾಕೋ ಪ್ರಯತ್ನ ಮಾಡ್ತಾರೆ. ಸಂದರ್ಭಕ್ಕೆ ತಕ್ಕಂತೆ ಕೂಗಾಡ್ತಾರೆ, ಹಾರಾಡ್ತಾರೆ, ನಕ್ಕೂ ನಗಿಸಿ, ಅತ್ತೂ ಕರೆದು ಸಾಂದರ್ಭಿಕ ಶಿಶುವಾಗ್ತಾರೆ!

    ನಿರ್ದೇಶಕನ ಪಾತ್ರದ ಬಲಗೈ ಭಂಟ ಶಿವು, ಆನ್ಸ್ಪಾಟ್ ಸಂಕಲನಕಾರರಾದ ಕೆಂಪರಾಜ್, ನಟರಾಜ್ ಅವರ ಮೊದಲ ಚಿತ್ರಕ್ಕೆ ಶುಭ ಕೋರಲೆಂದು ಬರುವ ಸುಂದರ್ ಹಾಗೂ ವೀಣಾ ಹೀಗೆ ಎಲ್ಲರೂ ಪಾತ್ರವಾಗ್ತಾರೆ!

    ನಟನೆಯ ಹುಚ್ಚಿರುವ ಭಾವಿ ಪತ್ನಿಯನ್ನು ಪ್ರೋತ್ಸಾಹಿಸಲು ಆಡಿಷನ್ಗೆ ಬಂದವನೂ ತನಗೇ ಗೊತ್ತಿಲ್ಲದೇ ಪಾತ್ರವಾಗ್ತಾನೆ. ಎಲ್ಲಾ ಪಾತ್ರಗಳ ನಡುವೆ ಸಂಪರ್ಕದ ಕೊಂಡಿಯಾಗ್ತಾನೆ. ಸಂಘರ್ಷಣೆಯ ಮೂಲವಾಗ್ತಾನೆ. ಸಾಫ್ಟ್ವೇರ್ ಕೆಲಸಗಾರನಾದರೂ ರಫ್ ಅಂಡ್ ಟಫ್ ಆಗ್ತಾನೆ. ಮದುವೆಯಾಗಬೇಕಿದ್ದ ಹುಡುಗಿಯನ್ನೇ ದ್ವೇಷಿಸುವ ಹಂತಕ್ಕೆ ಹೋಗ್ತಾನೆ. ಎಲ್ಲವೂ ಸಮಯ, ಸಂದರ್ಭ ಹಾಗೂ ಮೇಲಿನ ನಿರ್ದೇಶಕನ ಕೈವಾಡ! ಆಡಿಸುವಾತನ ಕೈಗೊಂಬೆಗಳು ಪಾತ್ರಧಾರಿಗಳು ಎಂಬ ಅಗೋಚರ ಸಂದೇಶ ಇಲ್ಲಿ ಪ್ರಸ್ತುತವಾಗುತ್ತೆ!

    ಚಿತ್ರದಲ್ಲಿ ಹೀರೋ ಆಗುವ ಕನಸನ್ನು ಹೊತ್ತ ಹುಡುಗ ಆಡಿಷನ್ಗೇ ಕಟ್ ಔಟ್ ಜೊತೆಗೇ ಬರ್ತಾನೆ. ಸಿನಿಮಾ ಕ್ಷೇತ್ರದಲ್ಲಿ ನಟಿಸಲು ಬರುವ ಪ್ರತಿಯೊಬ್ಬನ ಪ್ರತಿರೂಪವನ್ನು ಈ ಹೀರೋ ಪಾತ್ರದ ಮೂಲಕ ತಂದಿದ್ದಾರೆ ರಿಯಲ್ ನಿರ್ದೇಶಕರು!

    ನಟ-ನಟಿಯರಾಗಲೇ ಬೇಕೆಂದು ಬರುವವರ ಆಸೆ-ಆಕಾಂಕ್ಷೆಗಳನ್ನೂ, ನಟಿಸಲು ಛಾನ್ಸ್ಗಾಗಿ ವರ್ಷಗಟ್ಟಲೇ ಸೈಕಲ್ ಹೊಡೆವವರನ್ನೂ, ನಟನೆಗಾಗಿ ಯಾವ ತ್ಯಾಗಕ್ಕೂ ಸಿದ್ಧವಾಗಿರುವ ಸಿನಿಕರನ್ನೂ ಇಲ್ಲಿ ಪಾತ್ರವಾಗಿಸಿದ್ದಾರೆ!

    ಅವರೆಲ್ಲರ ಕಷ್ಟ ಕಾರ್ಪಣ್ಯ ನೋವುಗಳನ್ನು ನೇರಾನೇರಾ ಆಯಾಯ ಪಾತ್ರಗಳ‌ ಮೂಲಕ ಬಿಂಬಿಸಲಾಗಿದೆ!

    ಪಾತ್ರ ಯಾರು ಪಾತ್ರವಲ್ಲದವರು ಯಾರು! ಯಾರು ಮುಖ್ಯ, ಯಾರು ಮುಖ್ಯವಲ್ಲಾ! ಯಾರ ಜೀವನದಿ ಯಾರು ಯಾವ ಪಾತ್ರವಾಗ್ತಾರೆ ಅನ್ನೋ ಒಳಮರ್ಮವನ್ನು ಇಲ್ಲಿ ತಿಳಿಸಲಾಗಿದೆ.

    ಜಾಲಿ ಮೂಡಿನ, ಹುರುಪು ಉತ್ಸಾಹದ ವಾಸುಕಿ ವೈಭವ್ ಹಾಗೂ ತಂಡದ ಹಾಡು-ಕುಣಿತವಿದೆ. ರಂಗಮಂದಿರದ ತೆರೆ‌ಯ ಮುಂದಿನ ಹಾಗೂ ತೆರೆಯ ಹಿಂದಿನ ಕತೆ-ವ್ಯಥೆಯ ಚಿತ್ರಿಸುವ ಹಾಡಿದೆ. ಪ್ರೇಮ-ಪ್ರೀತಿಯ ಗುಂಗಿನ ರಂಜನೆಯ ಹಾಡಿದೆ. ಪಂಚ್ ಡೈಲಾಗ್ಗೆ ಧರ್ಮಣ್ಣ ಇದ್ದಾರೆ.

    ನನ್ನೊಳು ಮಾಯೆಯೋ ಮಾಯೆಯೊಳು ನಾನೋ ಎಂಬ ತಾಕಲಾಟವನ್ನು ವಿಭಿನ್ನ ಕೋನದಲ್ಲಿ ರಿಯಾಲಿಟಿ ಶೋ ರೀತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ ಸೂತ್ರಧಾರ ಸತ್ಯ‌ಪ್ರಕಾಶ್!

    ಒಂದೇ ದಿನದಿ ನಡೆವ ಕತೆಯಿದು. ಹಾಗಿದ್ದೂ ಎಲ್ಲೂ ಕಂಟಿನ್ಯುಟಿ ಮಿಸ್ ಆಗದಂತೆ ಎಚ್ಚರ ವಹಿಸಿದ್ದಾರೆ. ಪೋಲಿಸರ ಪ್ರವೇಶದ ದೃಶ್ಯಗಳಿಗೆ ಕತ್ತರಿ ಬೀಳಬಹುದಿತ್ತು!

    ಕ್ಯಾಮರ ಹಿಂದಿನ ಲವಿತ್ ಹಾಗೂ ಮದನ್ ಅವರ ಕ್ಯಾಮರ ಕೋನಗಳು, ಚಲನವಲನಗಳು ಮೆಚ್ಚಲರ್ಹ. ಈ ಚಿತ್ರದ ಸಂಕಲನವನ್ನು ಮಾಡಿರುವ ಬಿ ಎಸ್ ಕೆಂಪರಾಜ್ ಅವರಿಗೆ ಈ ಚಿತ್ರವು 275ನೇ ಚಿತ್ರವಂತೆ! ಅಲ್ಲದೇ ಈ ಚಿತ್ರದಲ್ಲಿ ಸಂಕಲನಕಾರನ ಪಾತ್ರವನ್ನು ವಹಿಸಿದ್ದು ನೈಜವಾಗಿಯೇ ನಟಿಸಿದ್ದಾರೆ.

    ಆಡಿಷನ್ ಮೂಲಕವೇ ಚಿತ್ರವನ್ನು ಕಟ್ಟಿಕೊಟ್ಟದ್ದರಿಂದ ಸಿನಿಮಾ ಕೆಲವು ದೃಶ್ಯಗಳನ್ನು ನಾಟಕದ ಬ್ಲಾಕಿಂಗಗಳಂತೆ ಸಂಯೋಜಿಸಲಾಗಿದೆ. ಕೆಲವು ಬಾರಿ ಲೈಟಿಂಗ್ ಎಫೆಕ್ಟ್ ಕೂಡ ಥಿಯೇಟರ್ ಹಿನ್ನೆಲೆಯಲ್ಲೇ ಕಂಡು ಬರುತ್ತೆ. ಆದರೆ ಕ್ಯಾಮರಾ ಆ್ಯಂಗಲ್ ಮಾತ್ರ ಈ ದಿನಮಾನದ ಸಿನಿಮಾ ಕ್ಷೇತ್ರದ ಅಪಡೇಟೆಡ್ ವರ್ಶನ್ನಲ್ಲಿದೆ. ಡೈರೆಕ್ಟರ್ ಪಾತ್ರದ ಕ್ಲೋಸಪ್ಗಳ ತಂತ್ರಜ್ಞಾನ ಮೆಚ್ಚಲರ್ಹ.

    ನಟರಾಜ್ ಅವರ ಹಲವು ಸ್ತರಗಳ ವೈವಿಧ್ಯಮಯವಾದ ನಗು ಪ್ರೇಕ್ಷಕರಿಗೆ ಇಷ್ಟವಾಗುತ್ತೆ.ಆದರೆ ಕ್ಲೈಮ್ಯಾಕ್ಸ್ನಲ್ಲಿ ನಟರಾಜ್ ಬೇರೆ ಶೇಡ್ಗೆ ಜಾರ್ತಾರೆ!

    ಎಲ್ಲೆಡೆಯೂ ಕ್ಯಾಮರ ಇದ್ದು ಶೂಟಿಂಗ್ ಫ್ಲೋರ್ ಒಳಗೂ, ಫ್ಲೋರ್ ಹೊರಗೂ ನಡೆಯುವ ನೈಜ ದೃಶ್ಯಗಳು ಚಿತ್ರದ ದೃಶ್ಯಗಳಾಗಿವೆ. ಚಿತ್ರದ ನಂತರ ತಮ್ಮನ್ನೂ ಕ್ಯಾಮರಗಳು ಫಾಲೋ ಮಾಡ್ತಾ ಇದೆಯಾ ಎಂಬ ಗುಮಾನಿಯಲ್ಲಿ ನೋಡುಗ ಸಮ್ಮೋಹನ ಸ್ಥಿತಿಗೆ ಜಾರುತ್ತಾನೆ.

    ಇನ್ಡೋರ್ ನಿಂದ ಔಟ್ಡೋರ್ ಗೆ, ಔಟ್ಡೋರ್ ನಿಂದ ಇಂಡೋರ್ ಗೆ ಶಿಫ್ಟ್ ಆಗುವ ದೃಶ್ಯಗಳ ನಡುವಿನ ಫ್ಲೋರ್ ನ ದೊಡ್ಡ ಬಾಗಿಲು ಕೂಡ ಇಲ್ಲಿ ಪಾತ್ರದಂತೆ ಭಾಸವಾಗುತ್ತೆ!

    ‘ಇದೇನ್ ದಿ ಗೇಟ್ ವೇ ಆಫ್ ಇಂಡಿಯಾನಾ? ತೆಗಿರೋ ಎಂಬ ಧರ್ಮಣ್ಣನ ಮಾತೂ, ಒಳಗೂ ಹೊರಗೂ ಓಡಾಡುವ ಗಾಂಧಿಯ ಪಾತ್ರವೂ, ಕೆಲವು ದೃಶ್ಯಗಳಲ್ಲಿ ಗಾಂಧಿ ಪಾತ್ರಕ್ಕೆ ಅವಕಾಶ ಕೊಡದೇ ಸ್ಕಿಪ್ ಮಾಡುವ ರೀತಿಯು ಕೆಲವು ಸೂಕ್ಷ್ಮತೆಗಳನ್ನೂ, ನಿರ್ದೇಶಕನ ಒಳಗಿನ ನಿರ್ಧಾರಗಳನ್ನೂ ಪರಿಚಯಿಸುತ್ತದೆ.

    ಹೀಗೆ ಒಂದು ಚಿತ್ರದ ಚಿತ್ರೀಕರಣದಲ್ಲಿ ನಡೆವ ಒಳ ಮರ್ಮಗಳನ್ನೂ, ಕಂಡೂ ಕಾಣದ ಕೈಗಳ ಕೈವಾಡಗಳನ್ನೂ, ನಿರ್ಮಾಪಕರ ದಬ್ಬಾಳಿಕೆಯನ್ನೂ, ನಿರ್ದೇಶಕರ ಮೇಲಿನ ಒತ್ತಡವನ್ನೂ, ಪಾತ್ರಧಾರಿಗಳ ಅಸ್ಥಿರತೆಯನ್ನೂ, ಸಹಕಲಾವಿದರ ಹಣಕಾಸಿನ ದುಸ್ಥಿತಿಯನ್ನೂ, ಅಸೋಸಿಯೇಟ್ ಡೈರೆಕ್ಟರ್ ಗ ನೈಜ ವಸ್ತುಸ್ಥಿತಿಯನ್ನೂ, ಹೀಗೆ ಚಿತ್ರವೊಂದು ನಿರ್ಮಾಣವಾಗುವಲ್ಲಿ ಅದರ ಹಿಂದಿನ ಎಲ್ಲ ಸ್ಥರಗಳಲ್ಲಿನ ಏರುಪೇರುಗಳನ್ನೂ ಕಟ್ಟಿಕೊಡುವ ಪ್ರಯತ್ನವನ್ನು ಈ ಚಿತ್ರದ ಸೂತ್ರಧಾರ ಡಿ ಸತ್ಯ ಪ್ರಕಾಶ್ ಮಾಡಿದ್ದಾರೆ.

    ಇಲ್ಲಿ ಗಾಂಧಿ ಪಾತ್ರಧಾರಿಯನ್ನು ಚಿತ್ರಿಸಿರುವ ಪರಿಯು ಪ್ರಸ್ತುತ ಸಮಾಜದಲ್ಲಿನ ಗಾಂಧಿಯ ಪರಿಸ್ಥಿತಿಗೆ ಕನ್ನಡಿಯಾಗಿದೆ.ಪ್ರತಿಮೆಯಾಗಿದ್ದ ಗಾಂಧಿ ಜೀವಂತ ಗಾಂಧಿಯಾಗ್ತಾರೆ. ಸ್ವಾರ್ಥಪರ ಸಮಾಜದ ಘರ್ಷಣೆಯಲ್ಲಿ ಈ ಗಾಂಧಿ ತಮ್ಮ ಪರಿಕರಗಳನ್ನು ಕಳೆದು ಕೊಳ್ತಾರೆ. ಸಮಾಜದಿಂದ ದೂರಾಗ್ತಾರೆ. ಚಿತ್ರದ ಡೈರೆಕ್ಟರ್ ಪಾತ್ರಧಾರಿಯು ಗಾಂಧಿಯ ಆ ಪರಿಕರಗಳನ್ನು ಧರಿಸಿ ತಾನೂ ಗಾಂಧಿಯ ದಾರಿಯನ್ನೇ ಹಿಡಿಯುತ್ತಾನೆ ಎಂಬಲ್ಲಿಗೆ ಚಿತ್ರ ಬಂದು ನಿಲ್ಲುತ್ತೆ!

    ಇಂತಹ ವಿಭಿನ್ನ ಕೋನದ ಕ್ಲೈಮ್ಯಾಕ್ಸ್ ನೋಡಿದ ನೋಡುಗರ ಮನದ ಭಿತ್ತಿಯಲ್ಲಿ ಗಾಂಧಿ ಚಿತ್ರವಾಗ್ತಾರೆ!

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!