23.7 C
Karnataka
Monday, May 13, 2024

    ಪ್ರೀತಿಯಲಿ ಹೆಣ್ಣು ಅಸುರ ವಂಶಸ್ಥೆ ಉಂಡಮೇಲೂ ಅವಳದ್ದು ಅರೆಹೊಟ್ಟೆ

    Must read

    ಕುಳಿತಿದ್ದ ತನ್ನಿಡೀ ದೇಹಭಂಗಿಗೆ ಒಂದು ಪ್ರಶ್ನಾರ್ಥಕ ಚಿಹ್ನೆಯನ್ನು ಒಗ್ಗಿಸಿಕೊಂಡು ಅವರು ಅವನ ಮುಂದೆ ಕೂತಿದ್ದರು. ಆಫೀಸ್ ಬಾಗಿಲು ತೆರೆದೇ ಇತ್ತು.
    ಅವನು ಒಂದಾನೊಂದು ಕಾಲದ ಅವಳ ‘ಅವನೂ’ ಆಗಿದ್ದಿದ್ದರಿಂದಲೂ ಈಗೊಂದು ಉತ್ತಮ ವರ್ಕಿಂಗ್ ರಿಲೇಶನ್ಷಿಪ್ ಉಳಿದಿದ್ದರಿಂದಲೂ ನೇರ ಒಳಹೋದವಳಿಗೆ ಒಳಗಿನ ಬೆಚ್ಚಗಿನ ವಾತಾವರಣಕ್ಕೆ ಸಣ್ಣ ಗೊಂದಲವಾಯಿತು. ಅವನೆದಿರು ಕುಳಿತ ಅರವತ್ತು ಪ್ಲಸ್ ರ ಆ ಮಹಿಳೆ ಕಣ್ಣ ತುಂಬ ಬೆಳಕನ್ನೂ ದೇಹದಲ್ಲಿ ಕಂಡೂ ಕಾಣದಂತ ತಳಮಳವನ್ನೂ ಹೊದ್ದು ಹೇಗಾದರೂ ನನ್ನ ವ್ಯಾಖ್ಯಾನಿಸು ಎನ್ನುತ್ತಿರುವಂತೆ ಕಾಣ್ತಿದೆ.ತೀರ ಸಣ್ಣ ಫಾರ್ಮಾಲಿಟಿಯೂ ಇಲ್ಲದೇ ಒಳನುಗ್ಗಿದ್ದಕ್ಕೆ ಮತ್ತು ಆ ಹೆಣ್ಣು ತನಗಾಗಿಯೇ ನಿರ್ಮಿಸಿಕೊಂಡಿದ್ದ ಆ ಇಂಟಿಮೇಟ್ ಕ್ಷಣಗಳಿಗೆ ಭಂಗ ತಂದಿದ್ದಕ್ಕೆ ಅವಳಿಗೀಗ ಬೇಸರ.
    ಅದೂ ಅಲ್ಲದೇ ಆ ಒಂದು ಕಾಲದ ತನ್ನ ‘ಅವನಿಗೂ’ ಇನ್ನೊಂದು ಹೆಣ್ಣಿಗೂ ಚೇಂಬರಿನ ಮಧ್ಯಮ ಉಷ್ಣಾಂಶದಲ್ಲಿ ನಡೆಯುತ್ತಿದ್ದ ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಧಾತು ಉಪಧಾತು ಯಾವುದೆಂಬುದು ಯಾರಿಗಾದರೂ ತಿಳಿಯುವಷ್ಟು ಸ್ಪಷ್ಟವಿರುವುದು ಸರಿಯಲ್ಲವೆನಿಸಿ ಬಾಗಿಲಲ್ಲೇ ನಿಂತು ಸಾವರಿಸಿಕೊಂಡು ಎಕ್ಸಕ್ಯೂಸ್ ಮೀ ಎಂದಳು.…

    ಇಬ್ಬರೂ ಬಾಗಿಲೆಡೆಗೆ ಒಂದೇ ಸರ್ತಿ ನೋಡಿದರು.

    ಅವರು ಅದೇ ವಾತ್ಸಲ್ಯದ ಧ್ವನಿಯಲ್ಲಿ ‘ಬಾಮ್ಮ’ ಎಂದರೆ ಅವನು ಯಾವತ್ತಿನಂತೆ ‘ಬಾರೋ’ಎನ್ನದೇ ಬನ್ನಿ ಬನ್ನಿ ಅಂತ ಗಾಂಭೀರ್ಯ ತೋರಿದ. ತನ್ನ ಟೈಮ್ ನಾನಸೆನ್ಸ್ ಬಗ್ಗೆ ಕೆಡುಕೆನಿಸಿತಾದರೂ ಹತ್ತು ನಿಮಿಷದ ಲೋಕಾಭಿರಾಮದ ಮಾತು ಪರಿಸ್ಥಿತಿ ಪರಿಸರ ಹದಕ್ಕೆ ತರುವುದರಲ್ಲಿ ಯಶಸ್ವಿಯಾಗಿ ಅವರಿಬ್ಬರೂ ತಮ್ಮ ಸ್ಥಿತಿಯಿಂದ ಹೊರ ಬಂದಿದ್ದರು.

    ಆದರೆ

    ಆ ಹಿರಿಯ ಹೆಣ್ಣಿಗೆ ಒದಗಿದ್ದ ಅಪರೂಪದ ಕ್ಷಣವನ್ನು ಕಿತ್ತುಕೊಂಡ ವೇದನೆ ಅಲ್ಲಿಂದ ಬಂದ ನಂತರವೂ ಅವಳಲ್ಲಿ ಮುಂದುವರೆದೇ ಇತ್ತು.

    ಮೇಲಿನ ಘಟನೆ ಓದಿದವರು ಅವರವರ ಭಾವಕ್ಕೆ ಭಕ್ತಿಗೆ ಯುಕ್ತಿಗೆ ಆಸಕ್ತಿಗೆ ತಕ್ಕಂತೆ ಪ್ರತಿಕ್ರಿಯೆ ಕೊಡಬಹುದು.ಯಾರೂ ಗ್ರಹಿಸದ,ಗ್ರಹಿಸಿದರೂ ಅದಕ್ಕಿಷ್ಟು ಮಸಾಲೆ ಹಚ್ಚಿ ಒಗ್ಗರಣೆ ಕೊಟ್ಟು ಚಪ್ಪರಿಸುವ,ಸೂಕ್ಷ್ಮ ಮನಸ್ಸಿಗಳಿಗೆ ಮಾತ್ರ ಆ ಕ್ಷಣಗಳ ಮಹತ್ತು ತಿಳಿಯುವ ಸಂಗತಿ ಇದು.

    ಯಾರಿಗೂ ಕೇಡಿಲ್ಲದ ಒಂದು ನಿರುಪದ್ರವಿ ಪ್ಲೆಷರ್.ಆ ಕ್ಷಣದ ಅಮೃತ ಘಳಿಗೆ.
    ಆ ಹಿರಿಯ ಮಹಿಳೆಯ ಬಳಿ ಎಲ್ಲವೂ ಇದೆ. ದೊಡ್ಡ ವಿದ್ಯೆ, ಹುದ್ದೆ,ಹಣ,ಜಮೀನು, ಗಂಡ,ಮಕ್ಕಳು, ಸ್ಥಾನಮಾನ ಆರೋಗ್ಯ ಎಲ್ಲವೂ. ಇಂತಹ ಪ್ರಬುದ್ದ ಹೆಣ್ಣಮಗಳೊಬ್ಬರು ‘ಹೆಣ್ಣಿರುವುದೇ ತನ್ನ ಜಾಣ್ಮೆಯ ಹೊಂಡಕ್ಕೆ ಬೀಳಲು’ ಅಂತ ತಿಳಿದಿರುವ ಆ ಅವನೆದಿರು ಯಾಚಿತರಾಗಿ ನಿಂತಿದ್ದಾರೆ.

    ಯಾಕೆ?

    ಉಹು..ಉತ್ತರವಿಲ್ಲದ ಪ್ರಶ್ನೆ ಇದು.

    ಯಾವ ವಯಸ್ಸಿಗೆ ಯಾವ ಹೊತ್ತಿಗೆ ಯಾವ ಘಳಿಗೆಗೆ ಹೆಣ್ಣಿನ ಅವಶ್ಯಕತೆ ಅನಿವಾರ್ಯತೆ ಗಳೇನು ಎನ್ನುವುದು ಸಾವಿರ ಸಂಶೋಧನೆಗಳ ನಂತರವೂ ನಿಗೂಢವಾಗಿಯೆ ಉಳಿಯುವ ಸಂಗತಿ!!

    ಅಲ್ಲಿಂದ ಹಿಂದಿರುಗಿ ಮನಸ್ಸು ಸಮವಾದ ಮೇಲೆ ಕಾಲದೊಡನೆ ಒಂದೇ ಕೋರಿಕೆ ಇಟ್ಟಳು ಅವಳು.

    ‘ಅವನ ಸೆರಗಿನ ಹಪಹಪಿ ಅವರಿಗೆ ಎಂದೂ ತಿಳಿಯದಿರಲಿ.
    ಆಗಾಗ ಖುಷಿಯ ಕ್ಷಣಗಳು ಅವರ ಹುಡುಕಿ ಬರಲಿ.’
    …..
    ಎಫ್ ಬಿ ಸ್ಟೇಟಸ್ ನಲ್ಲಿ ಹಾಕಿದ್ದ ಪ್ರೇಮದ ತೀವ್ರತೆ ಹೇಳುವ ನಾಲ್ಕು ಸಾಲುಗಳ ಹನಿಗವಿತೆಗೆ ಆರೇಳು ಮಂದಿ ಹೂವು ಹಣ್ಣು ಹೃದಯ ಕೊಡ್ತಿದ್ರು.ಪದ್ಯ ಹುಟ್ಟುವ ಘಳಿಗೆಯ ಪುಳಕದ ಕುರಿತೇ ಹೆಚ್ಚು ಬೆರಗಾಗುವ ನಾನು ಪ್ರಕಟಿಸಿದ ನಂತರ ‘ಅಯ್ಯೋ ಇನ್ನೇನೋ ಆಗಬೇಕಿತ್ತು’ ಅಂತ ಅನ್ನಿಸಿ ಪ್ರತಿಕ್ರಿಯೆಯ ಸಂಭ್ರಮವನ್ನು ಕಳೆದುಕೊಳ್ತೀನಿ.

    ಈ ನಡುವೆ ತರುಣ ಅಂತಲೋ ಹರೆಯ ಅಂತಲೋ ಹೆಸರಿಟ್ಟುಕೊಂಡ ಹುಡುಗನೊಬ್ಬ’ಈ ವಯಸ್ಸಿನಲ್ಲೂ ಇಷ್ಟು ರೋಮ್ಯಾಂಟಿಕ್ ಆಗಿ ಹೇಗೆ ಬರೀತೀರಾ ಆಂಟಿ’
    ಅಂತ ಪ್ರತಿಕ್ರಿಯಿಸಿದ.

    ಅಚ್ಚರಿಯ ಜೊತೆಗೆ ಅವನ ಬಾಲವೃದ್ದಾಪ್ಯಕ್ಕೆ ಮರುಕವೆನಿಸಿತು.

    ಈ ವಯಸ್ಸೂ ಅಂತಂದ್ರೆ ಯಾವ ವಯಸ್ಸು ಮಗುವೇ?

    ಹೆಣ್ಣು ಈ ವಯಸ್ಸಿನಲ್ಲಿ ‌ಮಾತ್ರ ಪ್ರೇಮಕವಿತೆಗಳನ್ನು ಬರೆಯಬಹುದು ಎನ್ನುವ ನಿಯಮ ಮಾಡಿದವರ್ಯಾರೊ?

    ಬಾಯಲ್ಲಿ ಒಂದೆರಡು ಹಲ್ಲು ಉಳಿದ. ,ಪಂಚೇಂದ್ರಿಯಗಳು ಪೂರ್ಣ ಕೆಲಸ ನಿಲ್ಲಿಸಿದ ಕವಿಯೊಬ್ಬರು ಈಗಲೂ ಹೆಣ್ಣಿನ ಕಟಿತುಟಿಗಳನ್ನು ಬಿಡಿಬಿಡಿಯಾಗಿ ವರ್ಣಿಸುವ ಕವಿತೆ ಬರೆದಾಗ ‘ಮನಸ್ಸಿಂದ ಇವರಿನ್ನೂ ಎಷ್ಟು ಯಂಗ್ ಇದಾರೆ’ಅಂತ ಮೆಚ್ಚಿಕೊಂಡವರ ಸಂಖ್ಯೆಯಲ್ಲಿ ಹೆಣ್ಣುಗಳದ್ದೇ ದೊಡ್ಡ ಪಾಲು.

    ನಮಗೆ ಹಾಗನಿಸುವುದು ಇವರಿಗ್ಯಾಕೆ ಹೀಗನಿಸುವುದಿಲ್ಲ.
    ಮುಕ್ತವಾಗಿ ಬರೆದರೆ ಬೋಲ್ಡ್ ಬರೆಯುತ್ತಾಳೆ ಎನ್ನುವ ಹಣೆಪಟ್ಟಿ ಯಾಕೆ?
    ಇದು ಮ್ಯಾನುಪ್ಯಾಕ್ಚರಿಂಗ್ ಡಿಫೆಕ್ಟಾ?

    ಹೊಸ ತಲೆಮಾರಿನವರು ಹೆಚ್ಚು ಮುಕ್ತ ಮನಸ್ಕರಾಗಿದ್ದಾರೆ.
    ಹೆಣ್ಣಿನ ಭಾವನಾತ್ಮಕ ಅವಲಂಬನೆ ದೈಹಿಕ ಅನಿವಾರ್ಯತೆ ಗಳನ್ನು ಅರ್ಥೈಸಿಕೊಳ್ಳಬಲ್ಲವರಾಗಿದ್ದಾರೆ. ಪುಲ್ಲಿಂಗವೇ ಬರೆದಿಟ್ಟ ‘ಹೆಣ್ಣೆಂದರೆ ಹೀಗಿರಬೇಕು’ ಎನ್ನುವ ಮಾದರಿ ಇನ್ನಾದರೂ ಬದಲಾಗಬಹುದು ಎಂದುಕೊಂಡಿದ್ದು ಸುಳ್ಳಾ?

    ಉಹು..

    ಇವನೊಬ್ಬನಿಂದಾಗಿ ಹೊಸ ತಲೆಮಾರನ್ನು ಹೀಗೇ ಅಂತ ನಿರ್ಧರಿಸಲಾರೆ ಎನ್ನುತ್ತಿದೆ ನನ್ನ ಆಶಾವಾದಿ ಮನಸ್ಸು.

    ಇದಾಗಿ ಎರಡನೇ ದಿನಕ್ಕೆ ಮತ್ತೆ

    ‘ಆಂಟಿ..ಪದ್ಯ ಫುಲ್ ಪ್ರೋವೊಕಿಂಗು’ಎಂದ. ಅವನ ಆ ಆಂಟಿ ಎನ್ನುವ ಸಂಭೋಧನೆಯೇ ಅಸಭ್ಯವೆನಿಸಿ ಆ ವೃದ್ದ ತರುಣನನ್ನು ಮುಲಾಜಿಲ್ಲದೆ ಬ್ಲಾಕಿಸಿ ಅಯ್ಯೋ ಜೀವಿಯೇ ಅಂದುಕೊಂಡು ಸುಮ್ಮನಾದೆ.

    ಈ ವೈರುಧ್ಯ ಯಾಕೆ?

    ಯಾವ ತೋರುಗಾರಿಕೆಗೆ ಮಹಿಳಾ ದಿನ..?
    ಗಂಡು ಮಕ್ಕಳನ್ನು ಬೆಳೆಸುವಲ್ಲಿ ಮತ್ತುಮತ್ತೂ ತಪ್ಪುತ್ತಿದ್ದೀವಾ ನಾವು?

    ಇವಳ ಧಾರಣ ಪ್ರತಿಭೆ ಮತ್ತು ಹಡೆಯುವ ಶಕ್ತಿ ಯಿಂದಾಗಿ ಹೆಣ್ಣನ್ನು ಒಂದು ಮುಟಿಗೆ ಮಿಗಿಲೇ ಎತ್ತರದಲ್ಲಿಡಬೇಕಾದ ಮನುಕುಲ ಪ್ರಾಣಿಗಳಿಗಿಂತಲೂ ಕೀಳಾಗಿ ಯಾಕೆ ವರ್ತಿಸುತ್ತದೆ.


    ಒಂದು ಅಚ್ಚರಿಯ ಸಂಗತಿಯನ್ನು ಈ ಒಂದು ದಶಕದೀಚೆಗೆ ಗಮನಿಸುತ್ತಿದ್ದೇನೆ.
    ವಿದೇಶದಿಂದ ಬಂದಂತಹ ದಂಪತಿಗಳಲ್ಲಿ ಗಂಡು ಹೆಚ್ಚು ಪ್ರಜ್ಞಾವಂತನಾಗಿ ವರ್ತಿಸುವುದು, ತನ್ನ ಹೆಣ್ಣಿನ ಆತ್ಮ ಗೌರವದ ರಕ್ಷಣೆ ಮತ್ತು ಅವಳ ಸ್ವಂತದ ಸ್ವಾತಂತ್ರ್ಯ ಕ್ಕೆ ಗೌರವ ಕೊಡುವುದು ಕಾಣಿಸುತ್ತಿದೆ.

    ಇದು ಹೇಗೆ ಸಾಧ್ಯವಾಯಿತು..?

    ”ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ”
    ಎನ್ನುವ ಸಾಲನ್ನೇ ಗಿಳಿಪಾಠದಂತೆ ಒಪ್ಪಿಸುತ್ತಿರುವ ನಮ್ಮವರದ್ದು ತೋರಿಕೆಯ ಪೂಜೆಯಾ?
    ಪಾಶ್ಚಿಮಾತ್ಯ ಸಂಸ್ಕ್ರತಿ ಅಂತ ಮಾತುಮಾತಿಗೂ ಹೀಗಳೆಯುತ್ತಿದ್ದ ಮಂದಿ ಅಲ್ಲಿಂದ ಬಂದವರಿಂದ ಕಿಂಚಿತ್‌ ಕಲಿತರೂ ಇಲ್ಲಿನ ತರತಮ ದೂರವಾಗಬಹುದಾ?

    ಹೆಣ್ಣನ್ನು ದೇವಿ ಎಂದು ಭಾಷಣ ಹೇಳುತ್ತಲೇ ಅವಳ ದೇಹಭಾಷೆಯನ್ನು ಹಡೆಯುವುದಕ್ಕೂ ಹಾದರಕ್ಕೂ ಮಾತ್ರ ಎನ್ನುವಂತೆ ನೋಡುವ ಪ್ರಜ್ಞಾವಂತರು ವಿದ್ಯಾವಂತರು ಎಷ್ಟಿಲ್ಲ‌ ನಮ್ಮ ನಡುವೆ?

    ತತ್ರ ದೇವತಾ ಎನ್ನುವಲ್ಲಿ ತತ್ತರ ದೇವತಾ ಎನ್ನುವಂತ ಪರಿಸರ ಬೆಳೆದಿದ್ದು ಯಾವಾಗ?
    ಅದಕ್ಕೆ ತಕ್ಕಂತೆ ಹೆಣ್ಣಿನ ಮಾನದ ಕುರಿತೇ ಇರುವ ಕೊಳಕು ಬೈಗುಳಗಳ ಪದಗಳು ಇಲ್ಲಿ ಇನ್ನೂ ಅತೀ ಸಹಜವೆನ್ನುವಂತೆ ಬಳಕೆಯಾಗುತ್ತಿವೆ ಎಂದರೆ ಮಹಿಳಾ ದಿನದ ಅರ್ಥವೇನು?
    …..
    ಮೊನ್ನೆ ಅಂತರರಾಷ್ಟ್ರೀಯ ಆಹಾರ ತಜ್ಞೆ ರುಜುತಾ ದಿವಾಕರ್ ಒಂದು ಮಾತನ್ನು ಹೇಳಿದರು.

    ಮೆನೋಫಾಸ್ ಸಮಯದ ಹಾಟ್ ಫ್ಲಷಸ್ ಕಳೆಯುವವರಿಗೂ ‘ಡೋಂಟ್ ಸ್ಲೀಪ್ ವಿತ್ ಯುವರ್ ಹಸ್ಬೆಂಡ್!’

    ಅದಕ್ಕೆ ಅವರು ಕೊಡುವ ಕಾರಣ ಕೇಳಿ ದಿಗ್ಭ್ರಮೆ ಆಯಿತು.

    ಹೆಣ್ಣಿಗೆ ಈ ಸಮಯದಲ್ಲಾಗುವ ಶೆಕೆ,ಥಂಡಿ, ಪದೇಪದೆ ಮೂತ್ರದ ಅವಸರಗಳಿಂದ ಗಂಡಿಗೆ ಕಿರಿಕಿರಿ ಆಗ್ತದಂತೆ.ಅವನ ನಿದ್ದೆ ಹಾಳಾಗಿದ್ದಕ್ಕೆ ಸಂಸಾರ ಏರುಪೇರಾಗಬಹುದಂತೆ.
    ಅದೇ ಗಂಡಿಗೆ ಅರವತ್ತು ಸುಮಾರಿಗೆ ತೀವ್ರವಾಗುವ ಅ್ಯಂಡ್ರೋಪಾಸ್ ನಲ್ಲಿ ಅವರಲ್ಲಾಗುವ ಅನಾರೋಗ್ಯದ ಲಕ್ಷಣಗಳನ್ನು ಹೆಣ್ಣು ಮಮತೆಯಿಂದಲೂ ಪ್ರೇಮದಿಂದಲೂ ಆಲಿಸುವುದನ್ನು ಆರೈಕೆ ಮಾಡುವುದನ್ನೂ ಸಂಭ್ರಮಿಸುತ್ತಾಳಂತೆ!
    ಹಾಗಿದ್ದರೆ ಇದು ನಿಜಕ್ಕೂ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟೇ ಅಂತ ನಮ್ಮ ಪಾಡಿಗೆ ನಾವು ಮಹಿಳಾ ದಿನವನ್ನು ಆಚರಿಸಿ ಸಂಭ್ರಮಿಸೋಣವಾ?
    ….
    ಈಚೆಗೆ ಒಂದು ಘಟನೆ ನಡೆಯಿತು.
    ಎಪ್ಪತ್ತರ ಸುಮಾರಿನ ಅವರೊಂದಿಗೆ ನನಗೆ ಬಹುಕಾಲದ ಆತ್ಮಿಯತೆ.
    ಬಹಳ ಪ್ರಜ್ಞಾವಂತರಾದ ಅವರೊಂದಿಗೆ ಯಾವುದೇ ಸಂಗತಿಗಳನ್ನೂ ಹೇಳಿಕೇಳಿ ಸಂವಾದಿಸುವುದು ,ಅರಿವಿನ ಪರಿಧಿ ಹಿರಿದಾಗಿಸಿಕೊಳ್ಳುವುದು ನನಗಿಷ್ಟ.
    ಮೊನ್ನೆ ಇಂಥದ್ದೇ ವಿಚಾರ.

    ಪ್ರಾಸಂಗಿಕವಾಗಿ ಮಾತು ಶೃಂಗಾರದ ಕವಿಸಮಯದ ಕಡೆಗೆ ತಿರುಗಿತು.ಕೆಲವು ಸಾಲುಗಳನ್ನು ಉಲ್ಲೇಖಿಸಿ ಎಷ್ಟು ಸಹಜವಾದ ಭಾವವಿದೆ ಇಲ್ಲಿ ಎಂದೆ.ಎಷ್ಟೋ ವರ್ಷದ ಪರಿಚಯದ ಅವರಲ್ಲಿ ಒಂದು ಕ್ಷಣ ಮನೋವಿಕಾರವಾಯಿತು ಕಾಣುತ್ತೆ.

    ‘ಈಗ ನೀವು ಹೇಳಿದ ಸಾಲುಗಳನ್ನು ವಿವರಿಸಬಹುದಾ, ಕೇಳಲು ಉತ್ಸುಕನಾಗಿರುವೆ’
    ಎಂದರು.

    ಎಂದೂ ತನ್ನ ಮಿತಿ ದಾಟದ ಮನುಷ್ಯನಲ್ಲಾಗುತ್ತಿರುವ ವಿಕೃತಿ ಆ ಕ್ಷಣಕ್ಕೆ ಅರಿವಿಗೆ ಬಂದಿತ್ತು‌ ನನಗೆ.

    ಮುಂದಿನ ಮೂರುನಿಮಿಷವನ್ನು ಎಷ್ಟು ಘನತೆಯಿಂದ ನಿಭಾಯಿಸುತ್ತೇನೆ ಎನ್ನುವುದರ ಮೇಲೆ ಬದುಕಿನ ಉಳಿದ ನನ್ನ ಅವರ ಬಾಂಧವ್ಯ ನಿರ್ಧರಿತವಾಗ್ತದೆ ಎನ್ನುವ ಸಂಗತಿ ಮಿಂಚಿನಂತೆ ಹೊಳೆಯಿತು.

    ಕೆಲವು ಪ್ರೇಮದ ಸಾಲುಗಳನ್ನು ಉಲ್ಲೇಖಿಸಿ ಪ್ರೇಮವನ್ನು ಕಾಮವನ್ನೂ ಆಧ್ಯಾತ್ಮದ ಎತ್ತರಕ್ಕೆ ಒಯ್ದಿರುವ ಈ ಶ್ರೇಷ್ಟತೆ ನೋಡಿ ಎಂದೆ.

    ಬಹುಶಃ ಅವರ ಆ ಡಿಸ್ಟಾರ್ಷನ್ ಒಂದೂವರೆ ನಿಮಿಷದ್ದಿರಬೇಕು.

    ತಕ್ಷಣವೇ ವಾಸ್ತವಕ್ಕೆ ಬಂದು ‘ನಿಜ..ಇದಕ್ಕಾಗಿಯೇ ನನಗೆ ನಿನ್ನೊಂದಿಗೆ ಮಾತುಕತೆ ಇಷ್ಟ’
    ಎನ್ನುತ್ತಾ ಎಂದಿನ‌ ಮಮತೆಯ ಮಾತು ಮುಂದುವರೆಸಿದರು. ಆ ಕ್ಷಣದಲ್ಲಿ ನಾನು ಅವರೊಳಗಾದ ಆ ಬದಲಾವಣೆ ನನಗೆ ತಿಳಿದು ಅಸಹ್ಯವಾಯಿತು ಎನ್ನುವುದನ್ನು ತೋರಿಸಿಕೊಂಡಿದ್ದರೆ ಬಹುಶಃ ನನ್ನನ್ನು ಎದುರಾದಾಗಲೆಲ್ಲ ಅವರು ಕೀಳರಿಮೆಯಿಂದ ನರಳುತ್ತಿದ್ದರು. ನಮ್ಮ ಆತ್ಮೀಯ ಬಾಂಧವ್ಯ ಮುಗಿದೇ ಹೋಗುತ್ತಿತ್ತು.
    …..
    ಇಲ್ಲೊಬ್ಬಳು ಹೆಣ್ಣು ಗಂಡನ ಎರಡೆರಡು ಮದುವೆ ,ಮೂರ್ನಾಲ್ಕು ಹೊರಸಂಬಂಧಗಳಿಂದ ಬೇಸತ್ತು ಪ್ರತೀಕಾರಕ್ಕಾಗಿಯೇ ತನ್ನ ಉದ್ದ ನಿಲುವಂಗಿಯ ಹೊರತಾಗಿ ಇಣುಕುವ ತನ್ನ ಕಾಡಿಗೆ ಹಚ್ಚಿದ ಕಣ್ಣಿನಿಂದಲೇ ಕರೆ ನೀಡಿ ಸರಿಸಮಾನ ಪುರುಷನನ್ನು ಕೂಡಿ ಒಂದು ಬಗೆಯ ನಿರಾಳ ಅನುಭವಿಸಿದ್ದಳು.
    ….

    ಹೆಣ್ಣಿನ ಸ್ವಾತಂತ್ರ್ಯಕ್ಕೆ ಸದಾ ಮಿತಿ ಹೇರುವ ಕುರಿತು ಪುಂಖಾನುಪುಂಖವಾಗಿ ಬರೆಯುವ ಈ ಇವಳ ಬದುಕು ಬರೀ ಮುಳ್ಳಿನ ಹಾಸಿಗೆ.ಇವಳ ಮಾತು ಕೃತಿಗೆ ಸಮಾಜದಲ್ಲಿ ದೊರಕಿರುವ ಮನ್ನಣೆಗೆ ಸದಾ ಕುಹಕವಾಡುವುದನ್ನೇ ರೂಢಿಸಿಕೊಂಡಿದ್ದಾನೆ ಆಕೆಯ ಗಂಡ. ಮಾತಿಗೂ ಮೊದಲೂ ಅವನಾಡುವ ಅxxx ಅxxx ಎನ್ನುವ ಹೊಲಸು ಪದಗಳಿಗೆ ಪ್ರತಿಯಾಗಿ ಅವಳು ನಗುನಗುತ್ತ ಸಂಸಾರ ತೂಗಿಸಬೇಕು ಅಂತ ನಿರೀಕ್ಷೆ ಮಾಡ್ತಾನೆ.

    ವಿರೋಧಿಸಿದರೆ ಅಥವಾ ಅವನಿಗೆ ಅರಿವಾಗಲಿ ಅಂತ ತಿರುಗಿಬಿದ್ದರೆ ಅವನದ್ದು‌ ಮಾಮೂಲಿ ಡೈಲಾಗು..’ನಾನು ಗಂಡಸು..ಏನ್ ಬೇಕಾದರೂ ಆಡ್ತೀನಿ ಮಾಡ್ತೀನಿ..ಹೆಣ್ಣಿಗೆ ಅಂಕೆಶಂಕೆ ಇರಬೇಕು’ ಅವನ ಕೊಳಕು ಮನಸ್ಥಿತಿ ಗೆ ಮತ್ತಷ್ಟು ಕುಮ್ಮಕ್ಕು ಕೊಡುವ ಆತನ ತಾಯಿ.
    ಹೊರಗಿನ ಸಮಾಜಕ್ಕೆ ಆಕೆ ಎಷ್ಟು ಜೀವನ್ಮುಖಿಯಾಗಿದ್ದಾಳೋ ಒಳಗೆ ನಿತ್ಯವೋ ಬತ್ತಿ ಬರಡಾಗುತ್ತಿದ್ದಾಳೆ.ಆ ಧರ್ಮದ ಮಿತಿಯ ಬಗ್ಗೆ ಬರೆದದ್ದು ನಗೆಪಾಟಲಿನ ಸಂಗತಿ ಎನಿಸುತ್ತದೆ ಅವಳಿಗೆ.
    ಕಾರಣ…
    ಇವಳ ಆ ಧರ್ಮದ ಒಬ್ಬ ಆತ್ಮೀಯ ಗೆಳೆಯ ತನ್ನ ಸಣ್ಣ ಓದಿನ ಹೆಂಡತಿಯನ್ನು ಅಕ್ಷರಶಃ ಕಣ್ಣ ರೆಪ್ಪೆಯೊಳಗಿಟ್ಟು ಪ್ರೀತಿಸುತ್ತಾನೆ.ತನ್ನ ಹೆಂಡತಿಯನ್ನು ಹೊಗಳುವ ಯಾವ ಅವಕಾಶವನ್ನೂ ಅವನು ತಪ್ಪಿಸಿಕೊಂಡಿದ್ದು ಕಂಡಿಲ್ಲ.
    …..

    ಮಹಿಳಾ ದಿನಕ್ಕೆ ಇಂಥದ್ದೇ ಹೇಳಬೇಕು ಅಂತ ತಿಳಿಯದ ಹೊತ್ತಿನಲ್ಲಿ ಸುತ್ತೂ ಕಂಡ ಸಂಗತಿಗಳ ಕೊಲ್ಯಾಜ್ ಎದುರಿಗಿಟ್ಟಿದ್ದೇನೆ.ಒಂದು ಹೆಣ್ಣಿನ ಸಾಧನೆ ಮತ್ತು ಯಶಸ್ಸನ್ನು ಅವಳ ಸಂಗಾತಿ ಅವಳಿಗೆ ಕೊಡುವ ಗೌರವ ಪ್ರೀತಿಯ ಆಧಾರದ ಮೇಲೇ ಅಳೆಯಬೇಕೆನಿಸುತ್ತಿರುವುದು ನನ್ನ ತಿಳಿವಳಿಕೆಯ ಮಿತಿಯೂ ಇರಬಹುದು.
    ಒಂದು ಅದ್ಭುತವಾದ ಸಂಶೋಧನ ತಂಡದ ಜೊತೆಗೆ ಭಾಗವಹಿಸುವ ಗೌರವ ಪಡೆದು ಯಶಸ್ಸಿನೊಂದಿಗೆ ಹಿಂದಿರುಗಿದ ‌ಹೆಣ್ಣಿಗೆ ತನ್ನ ಸಂಗಾತಿಯಿಂದ ಸಂದೇಹದ ಉಡುಗೊರೆ ಸಿಕ್ಕರೆ ಅವಳು ನೆಮ್ಮದಿಯಾಗಿರಬಲ್ಲಳೆ?

    ಅಥವಾ ಮನೆ ಗೆದ್ದು ಮಾರು ಗೆದ್ದರೆ ಮಾತ್ರ ಅದು ನಿಜವಾದ ಯಶಸ್ಸು ಅಂತ ಕಟಕಿಯಾಡಿದರೆ ಅವಳ ಸಂತೋಷ ಉಳಿಯಬಹುದೇ?

    ಇಲ್ಲಿ ಯಾವುದು ಸ್ವಾತಂತ್ರ್ಯ…
    ಮಿತಿಯೆನ್ನುವುದರ ವ್ಯಾಖ್ಯಾನ ಏನು..
    ಕೋಟೆ ದಾಟಿ ಹೋಗು ಅಂತ ದಿಡ್ಡಿ ಬಾಗಿಲು ತಾವೇ ತೆಗೆದು ಹಿಂದಿನಿಂದ ತಲವಾರು ಇರಿಯುವ ಗಂಡಸರು ಶೇಕಡವಾರು ಎಷ್ಟಿರಬಹುದು.
    ಸರಿ ಎಂದರೇನು?
    ಇದು ತಪ್ಪೆನ್ನುವುದಕ್ಕೆ ಪುರಾವೆ ಯಾರು?
    ….
    ಹೆಣ್ಣು ತನ್ನ ಅತ್ಯುನ್ನತ ಸಾಧನೆಯ ಹೊಸಿಲಿನಲ್ಲಿ ನಿಂತಾಗಲೂ ಅವಳಿಂದ ಬರುವ ಮೊದಲ ಮಾತು’ನನ್ನ ಕುಟುಂಬದ ಸಹಕಾರ ಇಲ್ಲಿ ಬಹಳ ದೊಡ್ಡದು’.

    ಬಹಳ ಸಲೀಸಾಗಿ ಪ್ರತಿ ಯಶಸ್ವಿ ಗಂಡಿನ ಹಿಂದೆ ಹೆಣ್ಣಿದ್ದಾಳೆ ಎನ್ನುವ ತಂಗಳು ಮಾತು ಬಳಸುತ್ತದೆ ನಮ್ಮ ಸಮಾಜ. ಅದೇ ಬಗೆಯಲ್ಲಿ ಹೆಣ್ಣು ಸಾಧಿಸಲು ಕೂಡ ಕುಟುಂಬದ ಸಹಕಾರ ಮುಖ್ಯ ಎನ್ನುವುದನ್ನು ಅರಿಯುವ ಕಾಲ ಯಾವಾಗ ಬರಬಹುದು?
    ಅಥವಾ ಯಾರ ಸಹಕಾರವಿಲ್ಲದೆಯೂ ಸಾಧಿಸಿದ,ಯಶಸ್ವಿಯಾದ ಹೆಣ್ಣಿನ ಕಣ್ಣು ಹೊಮ್ಮಿಸುವ ಒಂಟಿತನದ ಅಸಹಾಯಕತೆಗೆ ಉತ್ತರ ಏನು?

    ಯಾವುದೇ ಮಹಿಳೆಯ ದೃಷ್ಟಿಕೋನವೆಂಬುದು ಅವಳು ಸದ್ಯ ಸಲ್ಲುತ್ತಿರುವ ಸಂಸಾರದ ಪರಿಸರ ಮತ್ತು ಅವಳ ಬಾಳಿನಲ್ಲಿ ಸಂಭವಿಸಿದ ಘಟನಾವಳಿಗಳಿಂದ ರೂಪುಗೊಂಡಿರುತ್ತದೆ.
    ಇದು ಬಹುಶಃ ನನ್ನ ಪರಿಸರದಲ್ಲಿ ‌ನಾನು ಕಂಡ ಸಂಗತಿಗಳು. ಇದಮಿತ್ಥಂ ಎನ್ನುವ ತೀರ್ಮಾನ ಹೇಳಲು ನನ್ನ ಎಟುಕಿಗೆ ಸಿಗುವ ಪ್ರಪಂಚ ಚಿಕ್ಕದು.
    ಅಥವಾ ಹೇಳುವುದಕ್ಕೂ ಮುನ್ನ ನಾನೇ ಗೊಂದಲ ವೈರುಧ್ಯಗಳ ಮೂಟೆ ಎನಿಸುತ್ತದೆ.

    ಮೇಲೆ ಹೇಳಿದ ಯಾವ ತೊಂದರೆಯೂ ಇಲ್ಲದ ಸುಖಿ ದಂಪತಿಗಳ ಸಂತತಿಯೂ ನಮ್ಮ ನಡುವೆ ಬೇಕಾಷ್ಟಿದೆ.ಅಂತಹವರ ಸಂಖ್ಯೆ ಅನಂತವಾಗಲಿ ಅನ್ನುವ ಆಶಯದೊಂದಿಗೇ ಹೀಗೂ ಇದ್ದಾರೆ ಎನ್ನುವುದೂ ತಿಳಿದಿದ್ದರೆ ಆ ಅವರ ದೃಷ್ಟಿಗೆ ಇನ್ನಷ್ಟು ಮೆರುಗು ಸಿಗುತ್ತದೆ ಎನ್ನುವ ಸಣ್ಣ ಸ್ವಾರ್ಥ ನನಗೆ.

    ನನ್ನದೇ ಕವಿತೆಯ ಒಂದು ಸಾಲಿದೆ.

    ‘ಗಂಡೇ..
    ಪ್ರೀತಿಯಲಿ ಹೆಣ್ಣು ಅಸುರ ವಂಶಸ್ಥೆ.
    ಉಂಡಮೇಲೂ ಅವಳದ್ದು ಅರೆಹೊಟ್ಟೆ.
    ಅದ ತುಂಬಿಸುವುದರೆಡೆಗಷ್ಟೆ
    ಇರಲಿ
    ನಿಮ್ಮ ನಿಷ್ಠೆ’

    ಮಹಿಳಾ ದಿನ ಸಾರ್ಥಕ್ಯವೆನಿಸುವುದು ಈ ಕವಿತೆಗೊಂದು ಅರ್ಥ ದೊರೆತಾಗ ಎನ್ನುವುದನ್ನು ‌ಮಾತ್ರ ಈ ಹೊತ್ತಿಗೆ ಹೇಳಬಲ್ಲೆ.

    ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156



    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!