22 C
Karnataka
Tuesday, May 21, 2024

    WAR : ಮನುಷ್ಯ ತನಗೆ ತಾನೇ ಭಸ್ಮಾಸುರ ಆಗುತ್ತಿದ್ದಾನೆ!

    Must read


    ಆರನೇ ದಿನಕ್ಕೆ ಕಾಲಿರಿಸಿರುವ ರಷ್ಯಾ-ಉಕ್ರೇನ್ ಯುದ್ಧ ಇವತ್ತು ನಿಲ್ಲಬಹುದು,ಈಗ ನಿಲ್ಲಬಹುದು ಅನ್ನುವ ನಿರೀಕ್ಷೆಯನ್ನು ಮೀರಿ, ದಿನದಿಂದ ದಿನಕ್ಕೆ ತನ್ನ ಭೀಕರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಯಾರದೋ ಯುದ್ಧ ದಾಹಕ್ಕೆ ನಮ್ಮೂರಿನ ಹುಡುಗ ಬಲಿ ಆಗಿದ್ದಾನೆ. ಉನ್ನತ ವ್ಯಾಸಂಗಕ್ಕಾಗಿ ಅಲ್ಲಿಗೆ ಹೋಗಿದ್ದು ಆತನ ತಪ್ಪೇ? ಎಲ್ಲಾ ವಿವಾದಗಳಿಗೂ ಯುದ್ಧವೊಂದೇ ಪರಿಹಾರ ಅಲ್ಲ ಎಂದು ಸಮರೋತ್ಸಾಹಿಗಳಿಗೆ ಬುದ್ಧಿ ಹೇಳುವವರು ಯಾರು?


    ಮೋಸದಿಂದ ಕೊಲ್ಲಬಾರದು, ನಿಶಸ್ತ್ರನಾದವನನ್ನು ಕೊಲ್ಲಬಾರದು, ರಾತ್ರಿ ಆದ ನಂತರ ಯುದ್ಧ ಮಾಡಬಾರದು, ಶರಣಾಗತಿ ಕೋರಿ ಬಂದವನನ್ನು ಕೊಲ್ಲ ಬಾರದು…..ಸರಿಸಮ ಇದ್ದವರೊಟ್ಟಿಗೆ ಸೆಣೆಸಬೇಕು….ಅಮಾಯಕರು, ಮಕ್ಕಳು,ಹೆಂಗಸರ ಮೇಲೆ ಯಾವುದೇ ಹಾನಿ ಆಗಬಾರದು…ಹೀಗೆ ಯುದ್ಧ ಸಂಹಿತೆ ಅಂತ ಹೆಸರಿಟ್ಟು ಯುದ್ಧ ಮಾಡುವಾಗ ಏನೇನು ಮಾಡಬೇಕು ಮಾಡಬಾರದು ಅನ್ನೋ ನಿಯಮಗಳನ್ನು ರೂಪಿಸಿ ನಿಗದಿ ಪಡಿಸಿದ ಜಾಗದಲ್ಲಿ, ನಿಗದಿ ಪಡಿಸಿದ ವೇಳೆಯಂತೆ ಯುದ್ಧಗಳನ್ನು ಮಾಡಿರುವ ನಾಗರಿಕತೆ ಅನ್ನೋದು ಭೂಮಿ ಮೇಲೆ ಇದ್ದರೆ ಅದು ನಮ್ಮದು ಮಾತ್ರ…..ಅಂತ ಅಪ್ಪ ರಾಮಾಯಣ,ಮಹಾಭಾರತದ ಯುದ್ಧ ಪರ್ವ/ಕಾಂಡಗಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದುದು ನನಗೆ ಕುತೂಹಲಕಾರಿಯಾಗಿ ತೋರುತ್ತಿತ್ತು! ಸತ್ತು,ಸಾಯಿಸುವುದಕ್ಕೆ ನಿಯಮಗಳು, ಅದನ್ನು ಪ್ರೇರೇಪಿಸಲೇನೋ ಎಂಬಂತೆ ವೀರಗತಿ , ವೀರ ಮರಣ ಅನ್ನೋ ಪ್ರಶಸ್ತಿ ಪದಗಳು! ಕ್ಷತ್ರಿಯನು ಯುದ್ಧಕ್ಕೆ ಸದಾ ಸಿದ್ಧನಿರಬೇಕು. ಯುದ್ಧ ಬೇಡ ಅನ್ನುವುದು ಹೇಡಿಯ ಲಕ್ಷಣ….ಇಂತಹುದೇ ಯುದ್ಧದ ಮತ್ತು ಯುದ್ಧ ಮಾಡುವವರ ಕುರಿತಾದ ವಿಷಯಗಳನ್ನು ಮೊದಲಿಗೆ ಕೇಳಿಸಿಕೊಳ್ಳುವಾಗ ಏನೇನೋ ಕಲ್ಪಿಸಿಕೊಂಡ ನನ್ನ ಪುಟ್ಟ ಮೆದುಳಿಗೆ ಎಂಥಹುದೋ ಸೋಜಿಗ!

    Photo by Birmingham Museums Trust on Unsplash

    ಸಂಧಾನ , ಯುದ್ಧ ತಂತ್ರ ಯುದ್ಧದ ಅಂಗ. ಪ್ರಾರಂಭದಲ್ಲಿ ಅಥವಾ ಯುದ್ಧ ಮಧ್ಯೆಯಲ್ಲಿ ಇವುಗಳನ್ನು ಅನುಸರಿಸಬಹುದು. ನಿಜವಾದ ಕ್ಷತ್ರಿಯನ ಯುದ್ಧ ತನ್ನ ಹಕ್ಕುಗಳ,ಪ್ರೆಜೆಗಳ ರಕ್ಷಣೆ ಕುರಿತಾಗಿರಬೇಕು. ಪರ ಧನ, ಪರ ರಾಜ್ಯ, ಪರ ಸ್ತ್ರೀ ಗಾಗಿ ಯುದ್ಧ ಮಾಡುವವನು ಸೋಲುವುದು ನಿಶ್ಚಯ…..ಇಡೀ ಆರ್ಯವರ್ತವನ್ನೇ ಗೆಲ್ಲುವ ಸಾಮರ್ಥ್ಯ ಇದ್ದ ಪಾಂಡವರು ಬೇರೊಬ್ಬ ರಾಜನ ರಾಜ್ಯವನ್ನು ಕಬಳಿಸಲಿಲ್ಲ, ಬದಲಾಗಿ ತಮ್ಮ ಹಕ್ಕಿನ ಐದು ಹಳ್ಳಿಗಳನ್ನಾದರೂ ಕೊಡು ಅಂತ ಶ್ರೀಕೃಷ್ಣ ನ ಮುಖಾಂತರ ಸಂಧಾನ ಮಾಡಿಸಿದರು. ರಾವಣನನ್ನು ಕೊಂದು,ರಾಮ ವಿಭೀಷಣನಿಗೆ ಪಟ್ಟ ಕಟ್ಟಿ ಸೀತೆಯನ್ನು ಕರೆತಂದನೇ ಹೊರತು ಶ್ರೀಲಂಕಾ ನಂದು ಅನ್ನಲಿಲ್ಲ. ಇಂಥ ಧರ್ಮ ಪರ ಜಯಗಳಿಸಲು ಅನಿವಾರ್ಯ ಎಂಬಂತೆ ಅಲ್ಲಲ್ಲಿ ಮೋಸ ಮಾಡುವುದು ತಪ್ಪಾಗಲ್ಲ.ಕರ್ಣ,ವಾಲಿಯಂಥ ಪರಾಕ್ರಮಿಗಳನ್ನು ಮೊಸದಿಂದಲಾದರೂ ಕೊಲ್ಲುವುದು ಅವಶ್ಯಕವಾಗಿರುತ್ತದೆ, ಅಂದಿದ್ದರು. ಈ ನ್ಯಾಯ, ಅನ್ಯಾಯ ನಿರ್ಧರಿಸುವರು ಯಾರು, ಯುದ್ಧ ಮಾಡಿ ಅಂತ ಹೇಳುವವರು ಯಾರು ಅನ್ನುವ ಯೋಚನೆ ತುಂಬಾ ದಿನಗಳವರೆಗೆ ನನ್ನನ್ನು ಕಾಡಿತ್ತು!

    ಸೋತವನ ಪರ ಮಾತಾಡಲು,ಅವನ ಬಗ್ಗೆ ವಕಾಲತ್ತು ವಹಿಸಲು , ಅವನ ನಿಲುವುಗಳನ್ನು ತಿಳಿಸಲು ಅವಕಾಶವೇ ಇಲ್ಲದ ಇತಿಹಾಸ ಗೆದ್ದವರನ್ನು ಇಂದ್ರ , ಚಂದ್ರ ಎಂದಿದೆ. ಗೆದ್ದವನ ತಪ್ಪೆಲ್ಲವೂ ಯಾವುದೋ ಕಾರಣಕ್ಕೆ ಸಮರ್ಥಿಸಲಾಗಿದೆ. ಸೋತವನ ಶೌರ್ಯವನ್ನೂ ಕೀಳುಮಟ್ಟಕ್ಕಿಳಿಸಿ ಅವಮಾನಿಸಲಾಗಿದೆ. ಯಾವುದೇ ಯುದ್ಧ,ಎಷ್ಟೇ ಸಮರ್ಥಿಸಿಕೊಂಡರೂ ಗೆದ್ದು ಉಳಿದುಕೊಂಡಿರುವುದು ಅಮಾಯಕರ , ಅಸಹಾಯಕರ ಮೌನದ ನಿಟ್ಟುಸಿರಿನಲ್ಲಿ….

    ಶಿಲಾಯುಗದಿಂದ ಲೋಹ ಯುಗಕ್ಕೆ ಬಂದ ಮಾನವ ಲೋಹದಿಂದ ಆಗುವ ಪ್ರಾಣ ಹಾನಿಯನ್ನು ಲೆಕ್ಕಿಸಿ, ಹಲವಾರು ಕದನ ನಿಯಮಗಳನ್ನು ಹಾಕಿಕೊಂಡಿರಬೇಕು. ಯುದ್ಧದ ದುಷ್ಪರಿಣಾಮವನ್ನು ಶ್ರೀ ಕೃಷ್ಣ ಸಂಧಾನ ಕಾಲದಲ್ಲಿ ಧುರ್ಯೋಧನನಿಗೆ ಹೇಳುತ್ತಾನೆ… ಇಡೀ ಕುರುವಂಶದ ಜೊತೆಗೆ ಬಹುತೇಕ ರಾಜರ, ಆರ್ಯರ ನಾಶ ಆಗುತ್ತದೆ. ಉಳಿದ ನಮ್ಮ ಹೆಣ್ಣುಮಕ್ಕಳು ಕುಲ ಸಂಕರಣ ಕ್ಕೆ ಗುರಿಯಾಗುತ್ತಾರೆ. ಪ್ರಾಮಾಣಿಕರು,ಅಸೀಮ ಧೈರ್ಯವಂತರು ನಶಿಸಿ, ಹೇಡಿಗಳು ಬದುಕುಳಿದು ಈ ಪವಿತ್ರ ಭೂಮಿಯ ಪಾತಿವ್ರತೆಗೆ ಕಳಂಕ ತರುತ್ತಾರೆ. ಮತ್ತೊಮ್ಮೆ ಯೋಚಿಸಿ ಯುದ್ಧದ ನಿರ್ಧಾರ ಹಿಂಪಡೆಯುವುದು ಒಳಿತು ಅಂತ ಹೇಳ್ತಾನೆ. ಯುದ್ಧ ಅಮಲು, ಅದನ್ನು ನಿಶ್ಚಯಿಸಿದವನಿಗೆ ಯಾರು ಏನೇ ಹೇಳಿದರೂ ಕೇಳುವುದಿಲ್ಲ!

    ಹೀಗೆ ಯುದ್ಧದ ಬಗೆಗಿನ ನನ್ನ ಪ್ರಾಥಮಿಕ ತಿಳಿವಳಿಕೆಗಳಲ್ಲಿ ನನ್ನನ್ನು ಆಶ್ಚರ್ಯ ಚಕಿತನನ್ನಾಗಿ ಮಾಡಿದ್ದ ವಿಷಯ ಎಂದರೆ ಯುದ್ಧ ಮಾಡುವ ಸೈನಿಕರ ಬಗೆಗಿನ ಮನಃಸ್ಥಿತಿ! ಯಾವನೋ ಯಾವುದೋ ತೆವಲಿಗೆ ಯುದ್ಧಕ್ಕೆ ಸಿದ್ಧನಾದರೂ ಅಲ್ಲಿ ಬಡಿದುಕೊಂಡು ಸಾಯುವವರು ಎರಡೂ ಕಡೆಯ ಸಾಮಾನ್ಯ ವರ್ಗದ ಸೈನಿಕರು. ಅವರೆಂದೂ ಈ ರಾಜರುಗಳಂತೆ ಐಷಾರಾಮಿ ಜೀವನವನ್ನು ಕಂಡವರಲ್ಲ,ಭೋಗಿಸಿದವರಲ್ಲ. ಆದರೂ ಅದು ಹೇಗೆ ಸಾಯಲು ತಯಾರಾಗಿ ಬಿಡ್ತಾರೆ?

    ಇದರಡಿಯಲ್ಲಿ ಯೋಚಿಸಿದಾಗ ಕಾಣುವುದೇ ಮೊದಲಿಗೆ ಧರ್ಮ,ದೇಶಪ್ರೇಮ ಮುಂತಾದ ಶಬ್ದಗಳು! ರಾಜ ಪ್ರತ್ಯಕ್ಷ ದೈವ ಅಂತ ಹೇಳಿ ದೇವರಿಗಾಗಿ ಪ್ರಾಣ ತೊರೆಯಲು ಪ್ರೇರಣೆ ಪಡೆಯುತ್ತಾರೆ. ಹೋರಾಡದಿದ್ದರೆ ಗೆದ್ದವರು ನಿಮ್ಮ ನೆಮ್ಮದಿ ಹಾಳು ಮಾಡಿ,ನಿಮ್ಮದೆಲ್ಲವನ್ನೂ ನಶಿಸಿ ಹಾಕಿ ಬಿಡುತ್ತಾರೆ ಅಂತ ಉಪದೇಶಿಸುತ್ತಾರೆ. ಅದಕ್ಕಿಂತ ಹೋರಾಡುತ್ತಾ ಸತ್ತರೆ ವೀರ ಸ್ವರ್ಗ ಸಿಗುತ್ತದೆ ಅನ್ನುವ ಆಮಿಷ ತೋರುತ್ತಾರೆ. ಈ ಯುದ್ಧ ಅನಿವಾರ್ಯ ಅನ್ನುವ ಸಂಧರ್ಭಗಳಲ್ಲಿ ಈ ರೀತಿಯ ವ್ಯವಸ್ಥೆಗಳು ಅನಿವಾರ್ಯ ಆಗಿಬಿಡುತ್ತಿದ್ದವು.

    ಇದೆಲ್ಲಾ ನಾಗರಿಕತೆಯ ಪ್ರಯಾಣದಲ್ಲಿ ಯಾವುದೋ ಘಟ್ಟಗಳಲ್ಲಿ ಅನಿವಾರ್ಯ ಆಗಿದ್ದಾಗ ಮಾಡಿಕೊಂಡಂತಹ ವ್ಯವಸ್ಥೆಗಳಿದ್ದಿರಬಹುದು, ಮುಂದುವರೆದ ಮಾನವ ಇಂತಹ ಮೃಗೀಯ ವ್ಯವಸ್ಥೆ ಒಪ್ಪಲಿಕ್ಕಿಲ್ಲ ಅನ್ನುವ ನನ್ನ ಯೋಚನೆ ನಿಜವಲ್ಲ ಅನ್ನುವುದನ್ನು ಪ್ರಪಂಚದ ಒಂದಿಲ್ಲೊಂದು ಕಡೆ ಈ ಯುದ್ಧದ ಕಾರ್ಮೋಡಗಳು ಕವಿದಾಗ ಅನ್ನಿಸುತ್ತಿತ್ತು. 20 ವರ್ಷಗಳ ಹಿಂದಿನ ಕಾರ್ಗಿಲ್ ಯುದ್ಧ, ಅದರಲ್ಲಿ ಭಾಗವಹಿಸಿ ಸತ್ತ ನನ್ನ ಸ್ನೇಹಿತರು ತುಂಬಾ ದಿನಗಳವರೆಗೆ ನನ್ನ ಕಾಡಿದ್ದರು. ಆ ದುಃಖ ಮರೆಸಿ, ಬೇರೆಯವರಿಗೆ ಸ್ಫೂರ್ತಿ ತುಂಬಲು ಅವರಿಗೆ ನೀಡಲಾದ ಮರಣೋತ್ತರ ಸನ್ಮಾನಗಳು ನನ್ನನ್ನು ಬಲು ಯೋಚಿಸುವಂತೆ ಮಾಡಿದ್ದವು. ಮನುಷ್ಯನ ತಿಳಿವಳಿಕೆಗೂ ಈ ಯುದ್ಧಕ್ಕೂ ಯಾವುದೇ ಸಂಬಂಧ ಇಲ್ಲ.ಇದು ನಿರಂತರ,ಚಿರನೂತನ! ಸುತ್ತಲಿನ ಬೆಳವಣಿಗೆಗಳೂ ಸೈನ್ಯ, ಯುದ್ಧ ಮುಂದುವರಿದ ಮಾನವನ ಶಾಂತಿಗೆ ಅತೀ ಮುಖ್ಯ ಅಂತ ಸಾರಿ ಹೇಳುತ್ತಿವೆ.

    green helicopter near big fire
    Photo by Chandler Cruttenden on Unsplash

    ಆರನೇ ದಿನಕ್ಕೆ ಕಾಲಿರಿಸಿರುವ ರಷ್ಯಾ-ಉಕ್ರೇನ್ ಯುದ್ಧ ಇವತ್ತು ನಿಲ್ಲಬಹುದು,ಈಗ ನಿಲ್ಲಬಹುದು ಅನ್ನುವ ನನ್ನ ನಿರೀಕ್ಷೆಯನ್ನು ಮೀರಿ, ದಿನದಿಂದ ದಿನಕ್ಕೆ ತನ್ನ ಭೀಕರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಲ್ಲಿಯ ಎಲ್ಲಾ ರಂಗದ ಪ್ರಜೆಗಳು, ಹೆಂಗಸರು,ವೃದ್ಧರು, ಮಕ್ಕಳು ಕೈಯಲ್ಲಿ ಸಿಕ್ಕ ಸಿಕ್ಕ ಆಯುಧಗಳನ್ನು ಹಿಡಿದು ಹೊರಬರುತ್ತಿರುವುದನ್ನು ನೋಡಿ ನನ್ನ ಯುದ್ಧದ ಬಗೆಗಿನ ಅನಿಸಿಕೆಗಳಿಗೆ ಹೊಸ ವ್ಯಾಖ್ಯಾನ ದೊರಕುತ್ತಿದೆ. ಯುದ್ಧಕ್ಕೆ ನಿಂತ ಇಬ್ಬರಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಅಂತ ಯೋಚಿಸೋದೇ ಮೂರ್ಖತನ. ಯಾವುದರ ಅರಿವೆಯೂ ಇಲ್ಲದೆ ಅಲ್ಲಿ ಜನ್ಮ ತಾಳಿದ ಅದೆಷ್ಟು ಜೀವಗಳು ಇದರಿಂದ ನರಳಬೇಕಲ್ಲಾ ಅಂತ ಯೋಚಿಸಿದರೆ, ಹಿಂಸೆ ಆಗುತ್ತೆ. ಎಲ್ಲೋ ಕೆಲವು ಬಯಲುಗಳಿಗೆ ಮೀಸಲಿರುತ್ತಿದ್ದ ಹಳೆಯ ಯುದ್ಧಗಳನ್ನು ಮನೆಯ ಅಂಗಳಕ್ಕೇ ತಂದಿರುವ ಸುಧಾರಿತ ಮಾನವನನ್ನು ಏನೆನ್ನಬೇಕೋ ತಿಳಿಯದಾಗಿದೆ. ಇಡೀ ವಿಶ್ವವೇ ಒಂದು ಮನೆಯಂತಾಗಿರುವ ಈಗಿನ ದಿನಗಳಲ್ಲಿ ಉಕ್ರೇನ್ ನ ಬಾಂಬುಗಳಿಗೆ ನನ್ನ ನಿಮ್ಮ ನೆರೆ ಹೊರೆಯವರೂ ಅಲ್ಲಿದ್ದು ಸತ್ತರೆ ದೊಡ್ಡ ವಿಷಯವೇ ಅಲ್ಲ. ಇನ್ನೆರೆಡು ದಿನ ಹೀಗೆ ಈ ಯುದ್ಧ ಮುಂದುವರಿದರೆ, ಅಣು ಬಾಂಬುಗಳ ಪ್ರವೇಶವಾಗಿ ನಾವು,ನೀವುಗಳೂ ಇದರಿಂದ ಹೊರತಾಗುವುದು ಅಸಾಧ್ಯವಾಗಬಹುದು.

    ಅಮೆರಿಕಾ- ಇರಾಕ್ , ಕಾರ್ಗಿಲ್ ಯುದ್ಧ, ಇಸ್ರೇಲ್-ಜೆರುಸಲಂ, ಈಗಿನ ರಷ್ಯಾ-ಉಕ್ರೇನ್ ಹಿಂದಿನ ಇತಿಹಾಸದ ಯಾವುದೇ ಯುದ್ಧಗಳಿಗಿಂತಲೂ ಹೆಚ್ಚು ಮಾನವನಿಗೆ ಹಾನಿ ಮಾಡುತ್ತಿವೆ. ಕಾರಣ ಮುಂದುವರಿದ ಯುದ್ಧ ಸಾಮಗ್ರಿಗಳು. ರಷ್ಯಾ ಅಣು ಬಾಂಬನ್ನು ಹೊರತೆಗಿಯುವ ಮಾತಾಡುತ್ತಿದೆ! ಯಾರದೋ ಅಣತಿಗೆ, ಎಲ್ಲಿಗೋ ಬಾಂಬು ಹಾಕಲು, ಯಾವುದೋ ಯಂತ್ರದ ಗುಂಡಿ ಒತ್ತುವುದು ಇಂದು ಯುದ್ಧ ಎನ್ನಿಸಿಕೊಂಡಿದೆ. ಇದಕ್ಕೆ ಯುದ್ಧ ಸಂಹಿತೆ ಇದೆಯಾ?

    ಶಸ್ತ್ರ, ಶಾಸ್ತ್ರ ಕೆಲವೇ ಕೈಗಳಲ್ಲಿ ನಮ್ಮ ಪರಂಪರೆ ಕೊಟ್ಟಿತ್ತು. ಎಲ್ಲರಿಗೂ ಅಲ್ಲ. ಅಂತಹ ಕೈಗಳಿಗೆ ಸರಿಯಾದ ಶಿಕ್ಷಣ, ಒಳ್ಳೆ ಕೆಡುಕು ಹೇಳಿಕೊಟ್ಟು,ಯಾವಾಗ, ಹೇಗೆ, ಎಲ್ಲಿ ಉಪಯೋಗಿಸಬೇಕು ಎನ್ನುವಂತಹ ನಿಯಮಗಳನ್ನೂ ಹಾಕಿತ್ತು. ಈಗ ಸಿಕ್ಕ,ಸಿಕ್ಕವರ ಕೈಗಳಿಗೆ ಶಸ್ತ್ರ ಸಿಕ್ಕು ನಿಯಮ,ನಿರ್ಬಂಧನಗಳ ಗಂಧ,ಗಾಳಿ ಇಲ್ಲದೆ ಮಾನವ ಕುಲ ಅಯೋಮಾಯವಾಗ್ತಿದೆ. ಗುಂಡಿ ಒತ್ತುವುದೇ ಈಗ ಯುದ್ಧವಂತೆ… ಆ ಗುಂಡಿಯನ್ನು ಎಂತಹ ಮನುಷ್ಯ ಒತ್ತುತ್ತಾನೋ ಅಥವಾ ಪ್ರಾಣಿಯೇ ಒತ್ತುತ್ತೋ ಅಂತೂ ಮನುಷ್ಯ ತನಗೆ ತಾನೇ ಭಸ್ಮಾಸುರ ಆಗುತ್ತಿದ್ದಾನೆ….ಅಂತ ಅಪ್ಪ ಕಾರ್ಗಿಲ್ ಯುದ್ಧದ ಸಮಯದಲ್ಲಿ ಹೇಳಿದ್ದು ನೆನಪಿಗೆ ಬರ್ತಿದೆ.

    .

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    4 COMMENTS

    1. ಯೋಧರನ್ನು ದೇಶ ರಕ್ಷಕರೆಂದೇ ಹೋಗಳುತ್ತಾ ಸಾವಿನ ದವಡೆಗೆ ದೂಡುತ್ತಾರೆ. ಯುದ್ಧದಲ್ಲಿ ಪ್ರಾಣಕ್ಕೆ ಬೆಲೆಯಿಲ್ಲ, ಯುದ್ಧ ಕೇವಲ ಮುರ್ಖ ನಾಯಕರ ತೆವಲು ಮಾತ್ರ, 2ನೇ ಪ್ರಪಂಚ ಮಹಾಯುದ್ಧದ ಸಮಯದಲ್ಲಿ ನಿರಾಶ್ರೀತರ ಸಮಸ್ಯೆ ಬೇರೆಯಾಗಿತ್ತು, ಇಂದು ಬೇರೆಯಾಗಿದೆ. ಅವಕಾಶ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿರುವ ಇಂದಿನ ಯುದ್ಧಪ್ರೇಮದ ನಾಯಕತ್ವಗಳಿಂದ ನಲುಗಿತ್ತಿರುವ ಜೀವಸಂಕುಲ ವಿಸ್ಜೇಶವಾಗಿ ಮನುಕುಲದ ಕನ್ನತೆರೆಸುವಂತಿದೆ ನಿಮ್ಮ ಅದ್ಭುತ ಲೇಖನ

    2. ಸಂದರ್ಭೋಚಿತ ಲೇಖನ, ನನ್ನಂಥ ಸಾವಿರಾರು ಓದುಗರ ಮನದಲ್ಲಿ ಮೂಡುವ ಪ್ರಶ್ನೆಗಳ ದ್ವನಿ ಈ ಲೇಖನ. ಧನ್ಯವಾದ ಮಂಜುನಾಥ್,,.

    3. ಸಂದರ್ಭೋಚಿತ ಲೇಖನ. ನನ್ನಂಥ ಸಾವಿರಾರು ಓದುಗರ ಮನದಲ್ಲಿ ಮೂಡುವ ಪ್ರಶ್ನೆಗೆ ಲೇಖನ ದ ಉತ್ತರಿಸಿದ ಮಂಜುನಾಥ್ ಅವರಿಗೆ ಧನ್ಯವಾದಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!