22.7 C
Karnataka
Tuesday, May 21, 2024

    ಬಂದದ್ದೆಲ್ಲಾ ಬರಲಿ,ಗೋವಿಂದನ ದಯೆ ಇರಲಿ

    Must read

    ನಮ್ಮ ಹೊಲದ ಬದುವಿನಲ್ಲಿ ಒಂದು ಬಂಡೆ ಇದೆ. ಅದರ ಮಧ್ಯದ ಬಿರುಕಿನಿಂದ ಹುಟ್ಟಿದ್ದ ಒಂದು ಕೇರೆ(ಗೇರು ಬೀಜ ಅಥವಾ ಗೋಡಂಬಿ) ಹಣ್ಣಿನ ಮರ ಇತ್ತು. ಅದರ ಹಣ್ಣು ಕೆಂಪಗೆ ಇದ್ದು ತಿನ್ನಲು ಬಲು ರುಚಿ ಇರ್ತಿತ್ತು. ಅದರ ಬೀಜ ಹಣ್ಣಿನ ಕೆಳಗೆ ನೇತಾಡುತ್ತಿತ್ತು. ಹುಡುಗರಾದ ನಾವು ಹಣ್ಣು ತಿಂದು ಬೀಜವನ್ನು ಒಡೆದು,ಒಳಗಿನ ಬಿಳಿ ಬೀಜವನ್ನು ತಿನ್ನುತ್ತಿದ್ದೆವು. ಈ ಬೀಜವನ್ನು ಒಣಗಿಸಿದರೆ, ಕಪ್ಪುಬಣ್ಣಕ್ಕೆ ತಿರುಗುತ್ತಿತ್ತು. ಒಣಗಿದ ಬೀಜವನ್ನು ಕುಟ್ಟಿ ಒಳಗಿನ ಬೀಜ ತಿನ್ನಬೇಕಾದರೆ ಕಪ್ಪನೆಯ ದ್ರವ ಕೈಗೆ ಅಂಟುತ್ತಿತ್ತು. ಹಾಗೆ ಅಂಟಿದ ದ್ರವ ಕೆಲವು ನನ್ನ ಸ್ನೇಹಿತರಿಗೆ ತಿಂದ ಬಾಯಿಯನ್ನು,ಮುಖವನ್ನು ಊದಿಕೊಳ್ಳುವ ಹಾಗೆ ಮಾಡುತ್ತಿತ್ತು.

    ನಮ್ಮ ಊರಲ್ಲಿಯ ಅಜ್ಜಿಯಂದಿರು ಊದಿಕೊಂಡ ಮುಖದವರಿಗೆ ಅಯ್ಯೋ ನಿಮ್ಮಮ್ಮ ನಿನಗೆ ಕೇರು ಕುಡಿಸಿಲ್ಲ ಅನ್ನಿಸುತ್ತೆ, ಬಾ ಅಂತ ಹತ್ತಿರ ಕರೆದು, ಅದೇ ಒಣಗಿದ ಕೇರು ಬೀಜಕ್ಕೆ ಸುಟ್ಟ ಪಿನ್ನಿನ ಮೊನಚಾದ ತುದಿಯನ್ನು ಚುಚ್ಚಿ, ಅದರ ಕಪ್ಪುರಸ ಪಿನ್ನಿಗೆ ಅಂಟುವಂತೆ ಮಾಡಿ, ಅದನ್ನು ಊದಿ ಕೊಂಡವರ ದೇಹದ ಯಾವುದಾದರೂ ಭಾಗಕ್ಕೆ(ಸಾಮಾನ್ಯವಾಗಿ ಹೊಟ್ಟೆಯ ಮೇಲೆ) ಅಂಟಿಸುತ್ತಿದ್ದರು. ಹಾಗೆ ಅಂಟಿಸಿಕೊಂಡವರಿಗೆ ಮತ್ತೆ ಕೇರುಬೀಜ ತಿಂದಾಗ ಮುಖ ಊದಿಕೊಳ್ಳುತ್ತಿರಲಿಲ್ಲ.

    ಇದೇನಾ ಇವತ್ತು ವೈರಾಣು ಕೊಲ್ಲಲು ವಿಜ್ಞಾನ ಅಳವಡಿಸಿಕೊಂಡಿರುವ ಲಸಿಕೆ ಅಥವಾ ವ್ಯಾಕ್ಸಿನೇಶನ್?ಇರಬೇಕು ಅನ್ನಿಸ್ತಿದೆ. ಲೂಯಿಸ್ ಪಾಶ್ಚರ್ ಎಂಬ ಫ್ರೆಂಚ್ ವಿಜ್ಞಾನಿ 1880 ರಲ್ಲಿ ಹುಚ್ಚುನಾಯಿ ಕಡಿತಕ್ಕೆ ರೇಬಿಸ್ ಎಂಬ ಲಸಿಕೆ ಕಂಡುಹಿಡಿದ ಅಂತ ನಾವೆಲ್ಲ ಆಗ ಓದಿದ್ದೆವು. ಅವನೂ ಆ ಹುಚ್ಚು ನಾಯಿಯ ಜೊಲ್ಲನ್ನು ಸಂಸ್ಕರಿಸಿ, ಕಡಿಸಿಕೊಂಡವನಿಗೆ ಅದನ್ನೇ ಚುಚ್ಚಿ ಗುಣಪಡಿಸಿದನಂತೆ! ಹಾಲು ಮೊಸರಾಗುವ ವಿಧಾನವನ್ನು ಅವನು ಗಮನಿಸಿ,ಅಭ್ಯಸಿಸಿದನಂತೆ. ಹಾಗೆ ಹಾಲು ಮೊಸರಾಗುವುದಕ್ಕೆ Yeast, Fermentation ಅಂತ ಹೆಸರಿಸಿ, ಫ್ರೆಂಚರಿಗೆ ಪ್ರಿಯವಾದ ಬೀರ್, ವೈನ್ ತಯಾರಿಕೆಯಲ್ಲಿ ನೆರವಾದನಂತೆ. ಮತ್ತೆ ನಾವು ಮನೆಗಳಲ್ಲಿ ಮಳೆಗಾಲದಲ್ಲಿ ನೀರನ್ನು ಕುದಿಸಿ,ಆರಿಸಿ ಕುಡಿತಿದ್ದೆವಲ್ಲ ಅದಕ್ಕೆ ಅವನು ಪ್ಯಾಸ್ಟರೈಸೇಶನ್ (Pastueurization) ಅಂತ ಹೆಸರಿಟ್ಟು ದೊಡ್ಡ ವಿಜ್ಞಾನಿಯಾದನಂತೆ.ನೀರನ್ನು ಕುದಿಸಿ, ಆರಿಸಿಯೇ ವಿಜ್ಞಾನಿ ಆದ ಅಂದ್ರೆ,ಇವನು ನಮ್ಮ ಅಡುಗೆ ಮನೆಗಳನ್ನು ನೋಡಿದ್ರೆ ಏನೇನು ಆಗ್ತಿದ್ದಾನೋ?

    ಮುಂದೆ ಹೋಗುವ ಮುಂಚೆ ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ವ್ಯತ್ಯಾಸವನ್ನ ಸಂಕ್ಷಿಪ್ತವಾಗಿ ತಿಳಿಯುವ. ಬ್ಯಾಕ್ಟೀರಿಯಾ ಗಳು ಏಕ ಜೀವಿ ಕಣಗಳು ಮತ್ತು ಇಂದಿನ ಎಲ್ಲ ಜೀವ ರಾಶಿಗಳ ಪೂರ್ವಜರು. ಇವು ಭೂಮಿಯ ಮೇಲೆ 300 ಕೋಟಿ ವರ್ಷಗಳಿಂದ ಇವೆ. ಇವು ಇಲ್ಲದ ಜಾಗವೇ ಇಲ್ಲ. ಇವು ಎಂತಹ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲೂ ಜೀವಿಸುತ್ತವೆ. ಕೊರೆಯುವ ಮಂಜುಗಡ್ಡೆಯಲ್ಲಿ, ಜ್ವಾಲಾಮುಖಿಗಳಲ್ಲಿ, ಜಡ ವಸ್ತುವಲ್ಲಿ,ಜೀವಿಗಳಲ್ಲಿ, ಗಾಳಿ ಇರುವ ಕಡೆ,ಇಲ್ಲದ ಕಡೆ ಹೀಗೆ ಇದು ಒಂಥರಾ ನಮ್ಮ ಪುರಾಣಗಳಲ್ಲಿ ಬರುವ ಕೆಲವು ಪಾತ್ರಗಳ ರೀತಿ ಇವೆ. ಇವು ಸಾಮಾನ್ಯವಾಗಿ ಗುಂಪುಗಳಲ್ಲಿ, ದುಂಡಗೆ,ನೆಟ್ಟಗೆ,ಸುರುಳಿ ಆಕಾರದಲ್ಲಿರುತ್ತವೆ. ಇವುಗಳಲ್ಲಿ ತೀರಾ ಕಡಿಮೆ ಅಂದ್ರೆ ಪ್ರತಿಶತ ಒಂದರಷ್ಟು ಮಾತ್ರ ಮಾನವನಿಗೆ ಕೆಟ್ಟದ್ದು ಮಾಡುವಂತಹವುಗಳು. ಇವುಗಳು ಪ್ರಾಣಿಗಳಾ,ಸಸ್ಯಗಳಾ,ಜಡವಸ್ತುಗಳಾ ಅಂತ ಕೇಳಿದ್ರೆ, ಎಲ್ಲವೂ ಹೌದು ಅಂತ ಮಾತ್ರ ಹೇಳಬಹುದು. ಒಂದು ತರಹ ಸರ್ವಾಂತರ್ಯಾಮಿ!.

    ಇನ್ನು ವೈರಿ ಅಣು ಅಂತ ಹೆಸರನ್ನು ಹೊಂದಿದ ವೈರಾಣು ಈ ಬ್ಯಾಕ್ಟೀರಿಯಾ ಗಳ ಸತ್ತ ಪಳಿಯುಳಿಕೆ ಅಂತ ಒಂದು ಸಿದ್ದಾಂತ ಹೇಳ್ತಿದೆ. ಇದಕ್ಕೆ ಜೀವ ಇಲ್ಲ. ಬ್ಯಾಕ್ಟೀರಿಯಾಗಿಂತ ತುಂಬಾ ತುಂಬಾ ಚಿಕ್ಕದ್ದು. ಇವು ಜೀವಿಗಳಿಗೆ ಹಾನಿ ಮಾಡೋದೇ ಬಂಡವಾಳ. ಇವುಗಳ ಆಯಸ್ಸು ತುಂಬಾ ಕಡಿಮೆ. ಜಡವಾಗಿರುವ ಇವು ಯಾವುದಾದ್ರೂ ಜೀವಕೋಶ ಸಿಕ್ಕಾಗ ಮಾತ್ರ ಬಲು ಚುರುಕುಗೊಂಡು ಬಹುವೇಗವಾಗಿ ಊಹಿಸಲು ಅಸಾಧ್ಯ ಅನ್ನುವಷ್ಟು ಸಂಖ್ಯೆಯಲ್ಲಿ ವೃದ್ಧಿಹೊಂದಿ, ಆಶ್ರಯಿಸಿದ ಜೀವಕೋಶವನ್ನೇ ಕೊಂದು ಬಿಡುತ್ತದೆ. ಇವು ಒಂದೊಂದೇ ಇರುತ್ತವೆ,ಗುಂಪುಗಳಲ್ಲಿ ಇರೋಲ್ಲ.

    ಈ ಜಡ ವೈರಾಣು ಮನುಷ್ಯನ ನವ ರಂಧ್ರಗಳ ಮೂಲಕ ಯಾವುದಾದ್ರು ರಂಧ್ರದಿಂದ ಪ್ರವೇಶ ಪಡೆಯುತ್ತವೆ ಅಂತೆ ಅವುಗಳ ಗುಣಕ್ಕೆ ಅನುಸಾರವಾಗಿ. ಪ್ರವೇಶ ಆದ ಸ್ವಲ್ಪದಿನ ತನಗೆ ಅನುಕೂಲವಾದ ಜಾಗದಲ್ಲಿದ್ದು ತನ್ನ ರಾಕ್ಷಸ ಸಂತತಿಯನ್ನು ಬೆಳೆಸುತ್ತೆ. ದೇಹ ಪ್ರತಿರೋಧ ಒಡ್ಡಿದರೆ 15-20 ದಿನಗಳಲ್ಲಿ ಸಾಯುತ್ತೆ ಆದರೆ ತನ್ನ ಮತ್ತೊಂದು ರೂಪವನ್ನು ಜೀವಂತವಾಗಿರಿಸಿ!! ಇದನ್ನು Mutation ಅಂತಾರೆ. ಹೀಗಾಗಿ ಇದು ಒಂಥರಾ ರಕ್ತಬೀಜಾಸುರನ ಸಂತತಿ. ಸತ್ತರೂ ತನಗಿಂತಲೂ ಶಕ್ತಿವಂತ ತಳಿಗಳನ್ನು ಉತ್ಪಾದಿಸಿ ಸಾಯುತ್ತೆ. ಇದರ ಈ ಗುಣವೇ ಮುಂದುವರೆದ ಮಾನವನಿಗೆ ಸವಾಲಾಗಿರೋದು. ಒಂದರ ಗುಣ ಲಕ್ಷಣ ಅಭ್ಯಸಿಸಿ, ಅದಕ್ಕೆ ನಿರೋಧಕ ಕಂಡುಕೊಳ್ಳುವಷ್ಟರಲ್ಲಿ ಇದರ ಮತ್ತೊಂದು ರೂಪ ಕೇಕೆ ಹಾಕುತ್ತದೆ!

    ಬದಲಾದ ಪ್ರಕೃತಿಗೆ ಜೀವಿಗಳನ್ನು ಹೊಂದಿಕೊಳ್ಳುವ ಹಾಗೆ ಮಾಡೋದು ಇದರ ಧರ್ಮವಂತೆ. ಇದು ಇಲ್ಲಿಯತನಕ ನೈಸರ್ಗಿಕ ಕ್ರಿಯೆ ಆಗಿತ್ತು. ಏನೇ ನೈಸರ್ಗಿಕ ವಾದಾದ್ದು ಯಾವುದೇ ಜೀವಿಗಳಿಗೆ ಅನಾನುಕೂಲ ಮಾಡಲ್ಲ,ಸ್ವಲ್ಪ ತೊಂದರೆ ಕೊಡಬಹುದು. ದೇವರು ಕಷ್ಟ ಕೊಟ್ಟು ನಮ್ಮನ್ನು ಗಟ್ಟಿ ಮಾಡ್ತಾನೆ ಅಂತಾರಲ್ಲ,ಹಾಗೆ. ಹಾಗಾಗಿ ನೂರು ವರ್ಷಕ್ಕೊಮ್ಮೆ ಇಂತಹ ವೈರಾಣುವಿನ ಆಕ್ರಮಣ ಸಾಮಾನ್ಯ ಅಂತ ಜೀವವಿಜ್ಞಾನ ಹೇಳಿದೆ. ನೂರು ವರ್ಷಕ್ಕೊಮ್ಮೆ ಮಾನವನ ಮೇಲೆ ಎರಗುವ ಈ ವೈರಾಣುವಿನ ಲಕ್ಷಣ ತಿಳಿಯಲು ಸಾಧ್ಯವೇ ಇಲ್ಲದ ಕಾರಣ, ಇದನ್ನು ಎದುರಿಸಲು ಪೂರ್ವ ತಯಾರಿ ಇಂದಿನ ವಿಜ್ಞಾನಕ್ಕೂ ಅಸಾಧ್ಯ. ಇದು ಎರಗಿದ ಮೇಲಷ್ಟೇ ನಿರೋಧಕದ ಕ್ರಮಗಳು,ತಯಾರಿ ಸಾಧ್ಯ. ಹಾಗಾಗಿ ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳೂ ಇದರ ಹಾವಳಿಗೆ ತತ್ತರಿಸಿ ಹೋಗೋದು.

    ಆದರೆ ಈಗಿನ ಕರೊನಾ ಪುರಾಣ ಸ್ವಲ್ಪ ಭಿನ್ನವಾಗಿದೆ. ಏನಂದ್ರೆ ಅತೀ ಬುದ್ಧಿವಂತ,ಸ್ವಾರ್ಥ ಮನುಷ್ಯ ತನ್ನ ತೆವಲನ್ನು ಮಾನವ ಜನಾಂಗದ ಮೇಲೆ ವಿಕೃತವಾಗಿ ತೀರಿಸಿಕೊಳ್ಳಲು ಈ ರಾಕ್ಷಸನನ್ನು ಎಬ್ಬಿಸಿದ್ದಾನಂತೆ! ಇದು ಪ್ರಕೃತಿ ನಿರ್ಮಿತವಾಗಿದ್ದರೆ ನಿಯಂತ್ರಣ ಸುಲಭ. ಒಂದು ವೇಳೆ ಮಾನವ ನಿರ್ಮಿತ ಆದ್ರೆ ಮಾತ್ರ ಇದರ ಭೀಕರತೆ ಊಹಿಸಲು ಅಸಾಧ್ಯ ಅನ್ನುವಷ್ಟು ಆಗುತ್ತದೆ. ಎಷ್ಟಾದರೂ ಪ್ರಕೃತಿ ಮಾನವನ ಹಿಡಿತದಲ್ಲಿದೆಯಲ್ಲಾ? ಇಂತಹ ಸಂದರ್ಭಗಳನ್ನು ನಮ್ಮ ಪುರಾಣಗಳಲ್ಲಿ ರಾಕ್ಷಸರ ಅಟ್ಟಹಾಸಕ್ಕೆ ನೊಂದ ಭೂದೇವಿ ವಿಷ್ಣುವಿನಲ್ಲಿ ನೋವು ತೋಡಿಕೊಂಡು ನೆರವು ಕೇಳಿರುವುದನ್ನು ಬಹು ರೋಮಾಂಚನವಾಗಿ ವಿವರಿಸಿದ್ದಾರೆ. ಅಂದರೆ ಇಂತಹ ರಾಕ್ಷಸರೂ ಈ ಭೂಮಿಯ ಮೇಲಿರೋದು ಹೊಸದೇನಲ್ಲ ಮತ್ತು ಮನುಕುಲವನ್ನು ನರಳಿಸಿ, ವಿಕೃತ ಆನಂದ ಪಡೆಯೋದೂ ಹೊಸದಲ್ಲ ಅನ್ನೋದನ್ನ ನಮ್ಮ ಹಿರಿಯರು ಪುರಾಣದ ಮುಖಾಂತರ ನಮಗೆ ಹೇಳಿ ಧೈರ್ಯ ತುಂಬಿದ್ದಾರೆ.

    ಬ್ಯಾಕ್ಟೀರಿಯಾಗಳಿಗೆ ಸೂಕ್ಷ್ಮಾಣುಜೀವಿ ಅಂತ ಹೆಸರಿಸಿ, ಇವುಗಳಿಗೆ ವೈರಿ ಅಣು ಅಂತ ನಮ್ಮವರು ಹೆಸರಿಸಿದ್ದಾರೆ ಅಂದ್ರೆ, ಇವುಗಳ ಹುಟ್ಟು,ಜಾತಕ,ನೆಂಟರಿಷ್ಟರು,ಬಂಧುಬಳಗ ,ಕಾರ್ಯ ವೈಖರಿ ಗೊತ್ತಿರಲೇ ಬೇಕೆಂಬುದು ನನ್ನ ಬಲವಾದ ನಂಬಿಕೆ. Measles ಅಂತ ಕರೆಸಿಕೊಂಡ ದಡಾರ ವನ್ನು ಅಮ್ಮ ಅಂದು ಬೇವಿನ ಎಲೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಂಡಿದ್ದರು. ಈ ವೈರಿ ಅಣುಗಳು ಗಾಳಿಯಲ್ಲಿಯೂ ಬರುತ್ತವೆ ಅನ್ನುವ ಅಂಶ ತಿಳಿದೇ ಊರುಗಳ ಹೊರವಲಯದಲ್ಲಿ ಗಾಳೆಮ್ಮ ದೇವಿಯ ಗುಡಿ ಕಟ್ಟಿಸಿಕೊಂಡಿದ್ದರು. ಕಾಲಕ್ಕನುಸಾರವಾಗಿ,ಋತುಮಾನ ಬಡಲಾವಣೆಯೊಂದಿಗೆ ಬರುತ್ತಿದ್ದ ಇದರ ನಾನಾ ಮುಖಗಳಲ್ಲಿ ಒಂದಾದ ನೆಗಡಿ,ಕೆಮ್ಮು,ಜ್ವರ ಮುಂತಾದುವುಗಳಿಗೆ ನಮ್ಮ ಅಡುಗೆ ಮನೆಯಲ್ಲಿನ ಸಾಮಗ್ರಿಗಳಲ್ಲೇ ಔಷಧಿಗಳನ್ನು ಇರಿಸಿದ್ದರು. ಹೊಸಮಳೆ ಬಂದಾಗ ಬರುತ್ತಿದ್ದ ನೆಗಡಿಗೆ ಶುಂಠಿ ಕಾಫಿ ಅಂತ ಜೀರಿಗೆ, ಶುಂಠಿ, ಬೆಲ್ಲ,ಕೊತ್ತಂಬರಿ ಬೀಜ, ಕರಿಬೇವು ಎಲೆಗಳನ್ನು ಬೆರೆಸಿ,ಬೇಯಿಸಿ ಕುಡಿಯಲು ಕೊಡ್ತಿದ್ದದ್ದು ನಮಗೆಲ್ಲ ಗೊತ್ತೇ ಇದೆ. ಗಂಟಲು ತುರಿಸಿದರೆ, ಇನ್ನೂ ನೆಗಡಿ ಇದ್ದರೆ, ಉಪ್ಪು ನೀರಿನ ಗಾರ್ಗ್ಲಿಂಗ್ ಜೊತೆ ರಾಗಿಹಿಟ್ಟನ್ನು ಕೆಂಡದ ಮೇಲೆ ಹಾಕಿ,ಅದರ ಹೊಗೆಯನ್ನು ಮೂಗಿನ ಹೊಳ್ಳೆಗಳ ಮುಖಾಂತರ ತೆಗೆದುಕೊಂಡು,ಬಾಯಲ್ಲಿ ಬಿಡಲು ಹೇಳ್ತಿದ್ದರು. ಹೊಸ ನೀರಲ್ಲಿ ತುಂಬಾ ಅಪಾಯಕಾರಿ ವೈರಸ್ ಇರುತ್ತವೆ. ಈಜಾಡುವಾಗ, ಕುಡಿಯುವಾಗ ಹುಷಾರು ಅಂತ ಹೇಳ್ತಿದ್ದರು. ನೀರನ್ನು ಕುದಿಸಿ,ಆರಿಸಿ ಕುಡಿಯುತ್ತಿದ್ದೆವು. ಹಾಗಾಗಿ ಈ ಕರೊನಾ ಸಹ ಅದೇ ಜಾತಿಯದು, ಹೆದರಬೇಡಿ ಅಂದಿದ್ರು. ಆದ್ರೆ ಇದರ ಹಿಂದೆ ಪಾಪಿ ಮಾನವ ಇರೋದೇ ಆಘಾತಕರ.

    ಇಂಥಹ ದೇಸೀ ಜ್ಞಾನ ಹೊಂದಿದ್ದ ಭಾರತ ಪ್ರಥಮವಾಗಿ ವೈರಾಣುವಿನ ವಿರುದ್ಧ ಹೋರಾಡಲು ನಿಂತು covaccine ಮತ್ತು covishield ಎನ್ನುವಂತಹ ಲಸಿಕೆ ತಯಾರಿಸಿ ವಿಶ್ವಕ್ಕೆ ಮಾದರಿ ಆದದ್ದು ನನಗಂತೂ ಗರ್ವದ ವಿಷಯ. ಹೈದರಾಬಾದ್ DRDO ಅನ್ನೋ ಸೈನ್ಯದ ಸಂಶೋಧನಾ ಕೇಂದ್ರ 2DG ಅನ್ನುವ ಮತ್ತೊಂದು ಪ್ರಭಾವೀ ಔಷಧಿಯನ್ನು ಕಂಡುಕೊಂಡಿದೆ. ಇದರ ಮೊದಲ ಹಂತದ ಪ್ರಯೋಗ ಸಾಕಷ್ಟು ಉತ್ತೇಜನಕಾರಿ ಫಲಿತಾಂಶ ನೀಡಿದೆ. ವೈರಿಯನ್ನು ಕೊಲ್ಲಲು ಎಲ್ಲಾ ಅಸ್ತ್ರಗಳು ಇದ್ದರೆ ಏನೂ ತಪ್ಪಲ್ಲ. ಆದರೆ ವೈರಿ ಮಾನವ ಆಗುತ್ತಿರುವುದು ಆತಂಕದ ವಿಷಯ. ಇದು ವೈರಾಣುವಿಗಿಂತಲೂ ಅಪಾಯಕಾರಿ ಬೆಳವಣಿಗೆ.

    ರಾಸಾಯನಿಕವನ್ನು ಮಣ್ಣಿಗೆ ಸೇರಿಸಿದ ದಿನದಿಂದ ಪ್ರಕೃತಿಯ ಸ್ವಾಸ್ಥ್ಯ ಕೆಡುತ್ತಾ ಬಂದಿದೆ. ಮುನಿದ ಪ್ರಕೃತಿಗೆ ತಿರುಗೇಟನ್ನು ನಾವು ಮತ್ತೆ ರಾಸಾಯನಿಕಗಳಿಂದ ಕೊಡುವುದು ಅನಿವಾರ್ಯ ಎಂಬಂಥ ಸ್ಥಿತಿ ತಲುಪಿದ್ದೇವೆ. ಪ್ರಕೃತಿಯಿಂದ ಬರುವ ಎಲ್ಲ ರೋಗಗಳಿಗೂ ಪ್ರಕೃತಿಯೇ ಔಷಧಿ ಒದಗಿಸುತ್ತದೆ ಅನ್ನುವುದು ಸಾಮಾನ್ಯ ತಿಳಿವಳಿಕೆ. ಆದರೆ ಈಗ ರೋಗಗಳೂ ಮಾನವ ನಿರ್ಮಿತವಂತೆ, ಇದು ಬಲು ಅಪಾಯಕಾರಿ. ಇನ್ನು 3ನೇ ಕರೊನಾ ಅಲೆ ಬರುತ್ತಿದೆಯಂತೆ. ಪ್ರಕೃತಿಯದ್ದಾಗಿದ್ದರೆ 2ನೇ ಅಲೆಗೆ ಕೊನೆಗೊಳ್ಳಬೇಕಿತ್ತು. ಮಾನವ ನಿರ್ಮಿತವಾಗಿದ್ದರೆ ಇನ್ನೆಷ್ಟೋ ಅಲೆಗಳು ಬರುವ ಸಂಭವ ಇರಬಹುದು. ಇದಕ್ಕೆ ಬೇರೆಯದೇ ಔಷಧಿಯ ಅಗತ್ಯ ಇದೆ ಅಂತ ಅನ್ನಿಸುವುದಿಲ್ಲವೇ?! ಭೂ ಭಾರ ಹೆಚ್ಚಾದಾಗ ಭಗವಂತ ಅವತರಿಸುತ್ತಾನೆ ಅನ್ನೋ ನಂಬಿಕೆಯನ್ನು ನಮ್ಮ ಹಿರಿಯರು ಅನುಸರಿಸಿ ನಮಗೂ ಅನುಸರಿಸಲು ಹೇಳಿದ್ದಾರೆ. ಇದರಲ್ಲಿ ಎನಿಲ್ಲದಿದ್ದರೂ ಹತಾಶೆ ಮನಸ್ಸಿಗೆ ಎಂತಹದೋ ಧೈರ್ಯವನ್ನಂತೂ ತುಂಬುತ್ತದೆ.

    ನಾವು ನೀವು ಲಸಿಕೆ ಹಾಕಿಸಿಕೊಂಡು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಸ್ವಾಸ್ಥ್ಯ ಕಾಪಾಡಿಕೊಳ್ಳೋದು ಬಹು ಮುಖ್ಯವಾದ ಕರ್ತವ್ಯವಾಗಿದೆ ಈಗ. ಬಂದದ್ದೆಲ್ಲಾ ಬರಲಿ,ಗೋವಿಂದನ ದಯೆ ಇರಲಿ.

    ಸರ್ವೇ ಜನಾಃ ಸುಖಿನೋ ಭವಂತು.

    Photo by cottonbro from Pexels

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!