34.1 C
Karnataka
Monday, May 13, 2024

    ಹಣದಲ್ಲೂ ಕೆಟ್ಟದ್ದೂ ಒಳ್ಳೆಯದು ಅಂಥ ಇದೆಯಾ

    Must read

    ದುಡಿದ ಹಣ ಎಲ್ಲಿ ಎಷ್ಟು ಖರ್ಚಾಗುತ್ತದೆ ಎಂದು ನಿನ್ನೆ ಹೇಳಿದ್ದ ಮಂಜುನಾಥ ಬೊಮ್ಮಘಟ್ಟ ಅವರು ಈ ಸರಣಿಯ ಮೂರನೇ ಲೇಖನದಲ್ಲಿ ಹಣದಲ್ಲೂ ಒಳ್ಳೆಯ ಹಣ ಕೆಟ್ಟ ಹಣ ಎಂಬುದು ಇದೆಯಾ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

    ಧರ್ಮ,ಅರ್ಥ,ಕಾಮ,ಮೋಕ್ಷ…..ಪುರುಷಾರ್ಥ ಅಂತ ಹೇಳುವ ಈ ನಾಲ್ಕೂ ಶಬ್ದಗಳು , ಮೋಕ್ಷಕ್ಕೆ ದಾರಿಯಲ್ಲಿರುವ ಈ   ಅರ್ಥ..ವೂ ತುಂಬಾ ದಿನಗಳವರೆಗೆ ನನಗೆ ಕುತೂಹಲದ ಸಂಗತಿಗಳಲ್ಲಿ ಒಂದಾಗಿತ್ತು.

    ನಮ್ಮೆಲ್ಲಾ ಹಿರಿಯರು ಧರ್ಮ ಮತ್ತು ಮೋಕ್ಷಗಳ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು ಬಿಟ್ಟರೆ,ಉಳಿದೆರಡು ಪುರುಷಾರ್ಥ ಶಬ್ದಗಳಾದ ಅರ್ಥ,ಕಾಮದ ಬಗ್ಗೆ ಬಹು ದಿನಗಳ ತನಕ ನನ್ನಲ್ಲಿ  ಅವರ್ಣಿಯ ಕೌತುಕ ಹುಟ್ಟಿಸಿದ್ದವು. ತಾಳಲಾರದೆ ಅಪ್ಪನನ್ನು ಕೇಳಿಯೇ ಬಿಟ್ಟಿದ್ದೆ ಒಮ್ಮೆ. ಅರ್ಥ,ಕಾಮವನ್ನು ಮನವರಿಕೆ ಮಾಡುವುದೂ, ಮಾಡಿಕೊಳ್ಳುವುದೂ ತುಂಬಾ ಕ್ಲಿಷ್ಟ. ದೊಡ್ಡವನಾಗು ಎಂದಾದ್ರು ಒಮ್ಮೆ ಮಾತಾಡುವ ಅಂದಿದ್ದರು. ಹಲವಾರು ವಿಷಯಗಳಲ್ಲಿ ಅಪ್ಪನ ಹತ್ತಿರ ದೊಡ್ಡವನಾಗಲೇ ಇಲ್ಲ ನಾನು! ಅವುಗಳಲ್ಲಿ ಇವೆರಡೂ.

    ಧರ್ಮಿಷ್ಠನಾಗಿ,ಮಾಡಬೇಕಾದ ಕರ್ಮದ ಮೂಲಕ ಅರ್ಥವನ್ನು ಸಂಪಾದಿಸಿ, ಸಂನ್ಯಾಸಿಯಾಗದೆ ಸಂಸಾರಿಯಾಗಿ ಮೋಕ್ಷ ಹೊಂದಬೇಕು. ಆಗ ಮಾತ್ರ ಈ ಭವದ ಬಂಧನದಿಂದ ಮುಕ್ತಿ ಅಂತ ಸಂಕ್ಷಿಪ್ತವಾಗಿ ಹೇಳಿ ಮುಗಿಸಿದ್ದರು.ಕೆದಕುವ ಅದಮ್ಯತೆ ಒಳಗಿನಿಂದ ಒತ್ತುತ್ತಿದ್ದರೂ ಸುಮ್ಮನಾಗಿದ್ದೆ.

    ಹಣ ವಿಷ, ಅದು ಮಧುರ ಸಂಬಂಧಗಳನ್ನು ಹಾಳು ಮಾಡುತ್ತದೆ,ಅದರ ವಿಷಯವಾಗಿ ಒಂದು ಸುಪ್ತ ಜಾಗ್ರತೆ ಬಹು ಮುಖ್ಯ ಅಂತ ಹೇಳುವವರು ಒಂದು ಕಡೆ….ಮತ್ತೊಂದು ಕಡೆ ನಮ್ಮ ಆಧ್ಯಾತ್ಮಿಕರ ಮೋಕ್ಷದ ದಾರಿಗೆ ಬೇಕೇ ಬೇಕಾಗಿದ್ದ ಈ ಅರ್ಥ ಸಹಜವಾಗಿಯೇ ನನ್ನಲ್ಲಿ ಒಂದು ತೆರನಾದ,ಸ್ಪಷ್ಟತೆ ಇಲ್ಲದ ಸಾಮಗ್ರಿಗಳೊಡನೆ ಮನೆ ಮಾಡಿಕೊಂಡಿತ್ತು. ನನಗೆ ನಾನೇ ಸಮಾಧಾನ ಹೇಳಿಕೊಳ್ಳುವಂತೆ ಸಂಸಾರಿಯಾಗಿ,ದುಡಿಯುವ ಮೊದಲು ಧರ್ಮಿಷ್ಠನಾಗಬೇಕೇನೋ ಅಂದು ಕೊಂಡು ಸುಮ್ಮನಿದ್ದೆ.

    ಯಾಕೆಂದರೆ ಆಗ ದುಡಿಯುವ ವಯಸ್ಸು,ಮದುವೆ ಆಗುವ ವಯಸ್ಸು ಎರಡೂ ನನ್ನಲ್ಲಿ  ಇರಲಿಲ್ಲ. ಆದರೂ ಬೇರೆಯವರ ಹಣ,ನನ್ನ ಹಣದ ವ್ಯತ್ಯಾಸ, ಪಾಪದ ಹಣ, ಒಳ್ಳೆ ಹಣದ ವ್ಯತ್ಯಾಸ ತನ್ನದೇ ಆದ ಅರ್ಥದೊಂದಿಗೆ ನನ್ನಲ್ಲಿ ತುಂಬಾ ಎಳೆ ವಯಸ್ಸಿನಲ್ಲೇ ಮನೆ ಮಾಡಿಕೊಂಡಿತ್ತು. ಆಗಾಗ ಕೇಳುತ್ತಿದ್ದ…ಇವನು ಅವನ ಹಣ ತಿಂದು ನೀರು ಕುಡಿದ….ಅನ್ನುವಂತಾ ಮಾತುಗಳು ಹಣವನ್ನೂ ತಿನ್ನುತ್ತಾರಾ ಎನ್ನುವಂತಹ ಬಾಲಿಶ ಅನುಮಾನಕ್ಕೆ ಕಾರಣವಾದದ್ದು ಇದೆ.
    ಸಾಮಾನ್ಯ ಜನರ ಓಡಾಟ,ವ್ಯವಹಾರ ಕೆಲವು ಮೈಲಿಗಳ ಅಂತರಕ್ಕಷ್ಟೇ ಮೀಸಲಿದ್ದ ಸಮಯದಲ್ಲಿ, ನಮ್ಮ ನೆಲದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ವ್ಯಾಪಾರಕ್ಕೆಂದು ನಮ್ಮಲ್ಲಿಯ ವ್ಯಾಪಾರಿ ವರ್ಗ ಖಂಡಾಂತರ ಪ್ರಯಾಣ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭೈರಪ್ಪನವರ ಸಾರ್ಥ ಕಾದಂಬರಿಯಂತೂ ಇದರ ನಿಚ್ಚಳ ರೂಪ ಒದಗಿಸುತ್ತದೆ.  ಇಂಥವರಿಗೆ ರಾಜಾಶ್ರಯಗಳೂ ದೊರೆತ ಸಂದರ್ಭಗಳಿವೆ.

    ಇತಿಹಾಸದಲ್ಲಿ ಆಳಿದ ರಾಜರನ್ನು ಬಿಟ್ಟರೆ, ಈ ವ್ಯಾಪಾರಸ್ಥರ ಬಳಿ ಸಂಪತ್ತು ಹೇರಳವಾಗಿರುವುದೂ ದಾಖಲಾಗಿದೆ. ಹಾಗಾಗಿ ದಾನಿಗಳ ಪಟ್ಟಿಯಲ್ಲಿ ಅಂದಿನಿಂದಲೂ ಇಂದಿನವರೆಗೆ ಇವರ ಉಲ್ಲೇಖಗಳೇ ಹೆಚ್ಚು. ವಿದ್ಯಾ ಸಂಸ್ಥೆಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ಇವರು ನೀಡಿರುವ ಕೊಡುಗೆಗಳೇ ಅದ್ಭುತ. ವ್ಯಾಪಾರ,ವ್ಯವಹಾರ ಅಂದರೇನೇ ಬಂಗಾರದಲ್ಲಿಯ ತಾಮ್ರದಂತೆ ಅಲ್ಪ ಸ್ವಲ್ಪ ಅಧರ್ಮ ಇರಲೇ ಬೇಕು,ಅಂದು ಮತ್ತು ಇಂದು. ಅಥವಾ ಅದೇ ಅವರ ವೃತ್ತಿ ಧರ್ಮ ಅಂತ ಕರೆಯಿಸಿಕೊಂಡು ಮಾನ್ಯವಾಗಿತ್ತೋ ಗೊತ್ತಿಲ್ಲ.

    ಏಕೆಲವು ಕಡೆ ವೇಶ್ಯೆಯರೂ ತಾವು ಗಳಿಸಿದ್ದ ಸಂಪತ್ತನ್ನು ಸಾಮಾಜಿಕ ಉದ್ದೇಶಿತ ಯೋಜನೆಗಳಿಗೆ ಕೊಟ್ಟ ಉದಾಹರಣೆ ಗಳೂ ಸಾಕಷ್ಟು ಇವೆ.ಏನೇನೂ ಕಾರಣ ಇಲ್ಲದೆ,ಕೇವಲ ಸಂಪತ್ತನ್ನು ಸೂರೆಗೊಳ್ಳಲು ನಮ್ಮಲ್ಲಿ ಯುದ್ಧಗಳು ನಡೆದಿವೆ.ಹೀಗಾಗಿ ರಾಜರು ಸೂರೆಗೊಂಡ ಸಂಪತ್ತಿಗೂ ಲೆಕ್ಕ ಇಲ್ಲ.

    ಹೀಗಿದ್ದೂ, ನಮ್ಮ ಹಿರಿಯರು ಇಂತಹ ಮೂಲದಿಂದ ಬಂದ ಹಣ ಅಥವಾ ಸಂಪತ್ತನ್ನು  ಅನೇಕ ಸಮಾಜಮುಖಿ ಕಾರ್ಯಗಳಿಗೆ,ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸಿದ್ದರು ಅಂದರೆ ಹಣ ಹಣವೇ, ಅದರಲ್ಲಿ ಕೆಟ್ಟದ್ದು,ಒಳ್ಳೆಯದ್ದು ಅಂತ ಇರುವುದಿಲ್ಲವೇನೋ ಎನ್ನುವ ಅನುಮಾನವೂ ಬಂದಿದ್ದಿದೆ. ಹಲವಾರು ವೃತ್ತಿಧರ್ಮಗಳನ್ನು ಅದರದೇ ಆದ ಕಟ್ಟಳೆಗಳೊಂದಿಗೆ ಅಂಗೀಕರಿಸಿ,ಆಗಿನ ಸಮಾಜ ಒಪ್ಪಿತ್ತೇನೋ,ಅಥವಾ ಒಪ್ಪಬೇಕಾದ ಅನಿವಾರ್ಯತೆಯೂ ಉಂಟಾಗಿತ್ತೇನೋ. ಯಾಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಕಟುಕರೂ ಇದ್ದಾರೆ, ಸನ್ಯಾಸಿಗಳೂ ಇದ್ದಾರೆ. ಕೆರೆಯ ನೀರನ್ನು ಕೆರೆಗೇ ಚೆಲ್ಲುವುದರಿಂದ ನೀರಿನ ಮಲಿನತೆ ಗೌಣವಾಗುವ ಹಾಗೆ ಧಾರ್ಮಿಕ ಮತ್ತು  ಜನೋಪಯೋಗಿ ಕಾರ್ಯಗಳಿಗೆ ವಿನಿಯೋಗ ಆಗುವ ಹಣದ ಮಾಲಿನತೆಯೂ ಗೌಣವಾಗಿರಬೇಕು.

    ಹಾಗಾಗಿಯೇ ಇಂದಿಗೂ ನಮ್ಮ ದೇವಸ್ಥಾನದ ಹುಂಡಿಯಲ್ಲಿ ದೊರೆಯುವ ಹಣ ನಮಗೆ ಪರಮ ಪವಿತ್ರವಾಗಿ ಗೋಚರಿಸುವುದು.
    ಹುಟ್ಟಿನಲ್ಲಿ ಪವಿತ್ರತೆ ಪಡೆದು, ಹರಿಯುವಾಗ ಮಲಿನವಾಗಿ ಮತ್ತೆ  ಸೇರಿದ ಸಮುದ್ರದಲ್ಲಿ ಲೀನವಾಗಿ ಪವಿತ್ರತೆ ಹೊಂದುವ  ನಮ್ಮ ನದಿಗಳಂತೆ, ಈ ಹಣವೂ ಏನೋ. ಹಾಗಾಗಿ ಇದಕ್ಕೆ ಚಲಿಸುವ,ಚಂಚಲತ್ವ ಉಳ್ಳ ಗುಣವನ್ನು ಉಪಾಧಿಸಿರಬೇಕು ನಮ್ಮವರು. ಸಮಾಜದ ಒಳಿತಿಗಾಗಿ ರೂಪಗೊಂಡು, ಸಮಾಜದಲ್ಲಿ ಹರಿದಾಡುವಾಗ ಮಲಿನವಾಗಿ, ಕೊನೆಗೆ ಸಮಾಜಮುಖಿ ಕಾರ್ಯಗಳಲ್ಲಿ ವಿನಿಯೋಗವಾದಾಗ ಹಣ ಅದರ ಪಾವಿತ್ರತೆಯನ್ನು ಕಂಡುಕೊಂಡಿರಬೇಕು.
    ನದಿಯ ಎಲ್ಲಾ ನೀರು ಹರಿದು ಸಮುದ್ರ ಸೇರಲ್ಲ. ಅಲ್ಲಲ್ಲಿ ನಿಂತು ಕೊಳಚೆ ಗುಂಡಿಗಳಾಗಿ ಮಾರ್ಪಾಡುತ್ತವೆ. ಹಾಗೆ ಕೆಲ ಹಣ ಕೆಲವು ಕಡೆ ನಿಂತು ಕೊಚ್ಛೆ ಆಗುತ್ತದೆ. ಅದರ ಕೆಟ್ಟ ವಾಸನೆ ಸಮಾಜಕ್ಕೆ ಬಡಿದು,ಇಡೀ ಹಣವನ್ನೇ ಕೆಟ್ಟದ್ದು ಎಂದು ಬಿಂಬಿಸಿಬಿಟ್ಟಿತಾ?…ಗೊತ್ತಿಲ್ಲ.
    ಅಥವಾ ಹಣ ತಾನಿರುವ ಸ್ಥಾನಕ್ಕನುಗುಣವಾಗಿ ತನ್ನ ಗುಣವನ್ನು ಬದಲಾಯಿಸಿ ಕೊಳ್ಳುತ್ತಾ? ಮೋಸಗಾರನ ಹಣ ಕೆಟ್ಟದ್ದು, ಸನ್ಯಾಸಿಯ ಹಣ ಒಳ್ಳೆಯದಾ?! ಆದರೂ ನೀರಿನಂತೆ ಹರಿದುಬಂದು ಒಂದೆಡೆ ಸೇರುವ ಇದರ ಗುಣ ನನಗೆ ಅದ್ಭುತವಾಗಿ ಕಾಣುತ್ತದೆ.

    ಒಂದು ಮಾಹಿತಿಯ  ಪ್ರಕಾರ ಪ್ರಪಂಚಾದ್ಯಂತ ಧಾರ್ಮಿಕ (ಎಲ್ಲಾ ಧರ್ಮಗಳು ಸೇರಿ) ಕೆಲಸಗಳಿಗೆ ಹೆಚ್ಚು ಹಣ ವಿನಿಯೋಗವಾಗುವುದಂತೆ!ಅಲ್ಲಿಂದ ಮತ್ತೆ ಸಮಾಜಕ್ಕೆ ಹಲವು ಮುಖಗಳಲ್ಲಿ ಬಂದು ತನ್ನ ವೃತ್ತಿ ಅರಂಭಿಸುತ್ತದೆ, ಸಮುದ್ರದ ನೀರು ಆವಿಯಾಗಿ,ಮಳೆಯಾಗಿ,ಮತ್ತೆ ನದಿಯಾಗಿ  ಹರಿದಂತೆ.

    ಈ ಹಣದ ಸ್ವರೂಪವನ್ನು ಇದರ ವಿರಾಟ ರೂಪದಲ್ಲಿ ನೋಡಿದ ಮೇಲೆ ನಮ್ಮ ನಿಮ್ಮ ಕೈಯಲ್ಲಿರುವುದು ಒಳ್ಳೆಯ ಹಣವಾ ಅಥವಾ ಕೆಟ್ಟ ಹಣವಾ?! ಅನ್ನುವ ಜಿಜ್ಞಾಸೆ ಹುಟ್ಟುವುದು ಸಾಮಾನ್ಯವಲ್ಲವೇ? ಅಥವಾ ಹಣ ಹಣವೇ , ಒಳ್ಳೆಯದು,ಕೆಟ್ಟದ್ದು ಅನ್ನುವುದು  ನಮ್ಮ ಮಾನಸಿಕ ಭ್ರಮೆಯಾ? ಇಲ್ಲವಾದರೆ ನಮ್ಮ ನಮ್ಮ ವಿವೇಚನೆಯ ಪರಿಧಿಯಲ್ಲಿ ಹಣದ ಸ್ವರೂಪವನ್ನು ಹಿಡಿದಿಟ್ಟು ಬಿಟ್ಟಿದ್ದೇವಾ? ಇಂತಹ  ಸರಣಿ ಸರಣಿ ಪ್ರೆಶ್ನೆಗಳು ನನ್ನನ್ನು ಒಂದು ಕಾಲದಲ್ಲಿ ಕಾಡಿದ್ದಿದೆ. ಉತ್ತರ ಸಿಕ್ಕಿತ್ತಾ??…ನಾನಾ ರೂಪದಲ್ಲಿ ನನ್ನ ಬಳಿ ಬರುತ್ತಿದ್ದ ಹಣವನ್ನು ಇದು ಹೀಗೆ ಅಂತ ಹೇಗೆ ಹೇಳಲಿ??

    ಒಳ್ಳೆಯ ನೀರನ್ನು ಕುಡಿದವರು ಆರೋಗ್ಯವಂತರಾಗಿಯೂ, ಕೊಚ್ಛೆ ನೀರು ಕುಡಿದವರು ಅನಾರೋಗ್ಯ ಪೀಡಿತರಾಗುವುದು ನೈಸರ್ಗಿಕವಾಗಿ ಕಂಡುಕೊಂಡ ಸತ್ಯದಂತೆ, ಹಣ ಬೀರುವ ಪರಿಣಾಮದಿಂದ ಕೆಟ್ಟದ್ದೇ,ಒಳ್ಳೆಯದೇ ಅಂತ ಹೇಳಬಹುದು. ಯಾವ ಹಣ ಬಂದಾಗ ನನಗೆ ಆತ್ಮಸಂತೋಷ ಆಗಿ ಧನ್ಯತೆಯ ಭಾವನೆ ಆಗುತ್ತಿತ್ತೋ ಆಗ ಅದು ಒಳ್ಳೆಯ ಹಣ ಅಂತಾನೂ, ಯಾವ ಹಣ ಬಂದಾಗ ಮನಸ್ಸಿಗೆ ಕಿರಿಕಿರಿಯಾಗಿ,ನಿದ್ರೆ ಇಲ್ಲದೆ ಒರಳಾಡುತ್ತಿದ್ದೇನೋ ಆಗ ಕೆಟ್ಟ ಹಣ ಅಂತಲೂ ನನ್ನಷ್ಟಕ್ಕೆ ಅರ್ಥೈಸಿಕೊಂಡಿದ್ದೇನೆ. ಒಳ್ಳೆ ಹಣ ಸ್ವಚ್ಛ ತಿಳಿನೀರಂತೆ ನಳ ನಳಿಸುತ್ತಿದ್ದರೆ, ಕೆಟ್ಟ ಹಣ ತಡೆದುಕೊಳ್ಳಲಾರದ ದುರ್ವಾಸನೆಯಿಂದ, ನರಳುವವರ ಆಕ್ರಂದನದಿಂದ, ವಾಸಿಯಾಗದ ರೋಗಗಳ ರಕ್ತ,ಕೀವುಗಳಿಂದ ತುಂಬಿರುತ್ತಿತ್ತು. ಸ್ವಚ್ಛ ಮಾಡಲೆಂದು ಹಲವಾರು ತೀರ್ಥಕ್ಷೇತ್ರ ಅಲೆದು, ಅಲ್ಲಿಯ ಪವಿತ್ರ ತೀರ್ಥಗಳಿಂದ ತೊಳೆದು ನೋಡಿದೆ. ಆಗಲಿಲ್ಲ. ಇನ್ನು ಅದರ ಹಿಂಸೆ ಭರಿಸಲಾಗದೆ ಮತ್ತೆ ನರಳುವವರಿಗೆ,ಹಸಿದವರಿಗೆ ಕೊಡುತ್ತಿದ್ದೆ ನೋಡಿ, ಆಗ ಮತ್ತೆ ಅದು ಗರಿಗರಿಯಾಗಿ ನಳಿಸಿದಂತೆ ಅನ್ನಿಸುತ್ತಿತ್ತು!

    ಹಾಗಾಗಿ ನ್ಯಾಯವಾಗಿ ಸಂಪಾದಿಸಿದವರ ಹಣ ಒಳ್ಳೆಯದಾ,ಕೆಟ್ಟ ರೀತಿಯಲ್ಲಿ ಶೇಖರಿಸಿದ ಹಣ ಕೆಟ್ಟದ್ದಾ ಅಂತ ನಾನಿನ್ನು ನಿರ್ಧರಿಸುವ ಸ್ಥಿತಿ ತಲುಪಿಲ್ಲ. ಯಾಕೆಂದರೆ ನನ್ನಲ್ಲಿಯ ಹಣ ಎಂತಹದ್ದು ಅಂತಾನೇ ತಿಳಿಯದ ಅಜ್ಞಾನದಲ್ಲಿ ನಾನಿದ್ದೇನೆ. ವ್ಯಾಪಾರದ ಸಂತೆಯಲ್ಲಿ ನನ್ನ ಸರಕನ್ನು ಮಾರುವ ಭರದಲ್ಲಿದ್ದೇನೆ. ಬಂದ ಹಣದಿಂದ ಆಹಾರ ಪದಾರ್ಥ ಕೊಂಡು ಹೋಗಿ ಸಂಸಾರ ಸಮೇತನಾಗಿ ಊಟ ಮಾಡುತ್ತೇನೆ. ಊಟ ಮಾಡಿ ನೆಮ್ಮದಿಯಿಂದ ನಿದ್ದೆ ಮಾಡಿ,ಮಾಡಿದ ಊಟ ಮೈಗೆ ಹತ್ತಿ ಚೇತನ ಸಿಕ್ಕಿತ್ತಾ ಒಳ್ಳೆಯದೆಂದೂ, ಬಾರದ ರೋಗ ಬಂದು,ಗಳಿಸಿದ್ದೆಲ್ಲ ಖರ್ಚು ಮಾಡಿ ದಿವಾಳಿಯಾಗಿ ಭಿಕಾರಿಯಾದ್ರೆ ಕೆಟ್ಟದ್ದೆಂದೂ ಸಮಬುದ್ಧಿಯ,ಸಹೃದಯಿ,ವಿದ್ಯಾವಂತರು,ವಿವೇಕಿಗಳು ಅರ್ಥೈಸುತ್ತಾರೆ.

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img
    Previous article
    Next article

    More articles

    6 COMMENTS

    1. ನಿಮ್ಮ ಲೇಖನ ತುಂಬಾ ವಿಮರ್ಶೆ ಇಂದ ಕೂಡಿದ್ದು ತುಂಬಾ ಚೆನ್ನಾಗಿ ಪ್ರಸ್ತಾವನೆ ಮಾಡಿದ್ದೀರಿ.
      ಹಣ ಅಂದ್ರೆ ದ್ರವ್ಯ ಅದನ್ನು ವಿನಯೋಗಿಸುವವರಿಗೆ ಅದು ಕೆಟ್ಟದ್ದೋ ಅಥವಾ ಒಳ್ಳೆಯದ್ದೋ ಅಂತ ಯಾರು ಧಾರ್ಮಿಕ, ಸಾಮಾಜಿಕ, ಹಾಗೂ ಎಲ್ಲ ರಂಗಗಳಲ್ಲಿ ಯಾವ ರೀತಿ ಅವರು ವಿನಯೋಗಿಸುತ್ತಾರೆ ಅದು ಕೂಡ ಪ್ರಮುಖ ಅಂಶ.
      ಹಾಗೆಯೇ ಯಾರು ಸದ್ವಿನಿಯೋಗ ಕಾರ್ಯಗಳಿಗೆ ಉಪಯೋಗಿಸುತ್ತಾರೋ ಅವರಿಗೇ ಆ ದ್ರವ್ಯದ ಮೂಲ ಗೊತ್ತಿರುತ್ತದೆ . ಆದ್ರೆ ನಮಗೆ ಸಾಧ್ಯವಾದಷ್ಟು ಸತ್ಯ, ಪ್ರಾಮಾಣಿಕತೆ , ನ್ಯಾಯದ ದ್ರವ್ಯ ಉಪಯೋಗಿಸುವಂತೆ ನಮ್ಮ ಇತಿಹಾಸ ತಿಳಿಸುತ್ತದೆ.
      ಉದಾಹರಣೆಗೆ nuclear energy ಇಂದ ಒಳ್ಳೆಯ ಹಾಗೂ ಕೆಟ್ಟ ಕೆಲಸ ಮಾಡಬಹುದು . ಹಣದ ವಿನಯೋಗ ಒಳ್ಳೆಯದು ಅದರ ಮೂಲ ವಿನಯೋಗಿಸುವವರಿಗೆ ತಿಳಿದಿರುತ್ತದೆ ಎಂದು ನನ್ನ ಅನಿಸಿಕೆ

    2. Money does not have colour or any classification good, bad or dirty. It is a very relative term. The Professionals like Doctors, Lawyers and Engineers do make money depending on their expertise. Likewise in any profession. All money in religious places may not be good as last year we saw many religious heads serving jail terms. Here want to quote Alfred Nobel Swedish scientist invented Dynamite which can be used both for constructive purpose as well as destructive. His money after his death is used in Nobel Prize for peace , literature and science.
      Any time we should be confident of our action which is always right as per our conscious and money, name and fame are all fair and we deserve to have them and are proud owners.
      Mr.Manjunath Bommagatta’s this article is a gem.

    3. ಹಣದಲ್ಲಿ ಒಳ್ಳುವ ಹಣ. ಕೆಟ್ಟ ಹಣ ಇರುತ್ತೆ ಅಂತ ಚಿಕ್ಕವರಿದ್ದಾಗ ಗೊತ್ತಿರಲಿಲ್ಲ. ನಂತರದ ವರ್ಷ ದಲ್ಲಿ ಕಪ್ಪು ಹಣ. ಬಿಳಿ ಹಣ ಅಂತ ಶುರುವಾಗಿದೆ. ಮೊದಮೊದಲು ನಂಗೆ ಅರ್ಥ ನೇ ಆಗ್ತಿರಲಿಲ್ಲ ಹಣಕ್ಕೂ ಬಣ್ಣ ಇದೆ ಅಂತ ಯೋಚನೆ ಮಾಡೋ ಹಾಗೆ ಆಗ್ತಿತ್ತು. ನಂತರ ಗೊತ್ತಾಯಿತು. Bm ನಿಮ್ಮ ಬರವಣಿಗೆ ಅರ್ಥ ಆಗದೇ ಇರೋರಿಗೂ ಸುಲಭ ವಾಗಿ ಅರ್ಥ ಆಗುತ್ತಿದೆ. ಧನ್ಯವಾದಗಳು

    4. ಪರಿಶ್ರಮ ದಿಂದ ಬಂದ ಹಣ ನೀಡಿದ ತೃಪ್ತಿಯನ್ನು ಅಡ್ಡದಾರಿಯಲ್ಲಿ ಬಂದ ಹಣ ನೀಡುವುದಿಲ್ಲ. ಇಂದು ಹಣ ಹೇಗೆ ಬಂತು ಅನ್ನೋದಕ್ಕಿಂತ ಹಣವಿದ್ದರೆ ಸ್ಟೇಟಸ್. ಹಾಗಾಗಿ ಎಲ್ಲಾ ಒಳ್ಳೆಯ ಹಣವೇ ಅನಿಸಿದೆ. ಹಣದ ವಿಷಯದಲ್ಲಿ ಪ್ರಾಮಾಣಿಕತೆ ಹಾಗೂ ಅಪ್ರಾಮಾಣಿಕತೆ ನಡುವಿನ ಅಂತರ ಕಡಿಮೆ ಆಗಿದೆ. ಕಷ್ಟ ಪಟ್ಟು ದುಡಿದ ಹಣ ದುಂದುವೆಚ್ಚಕ್ಕಿರುವುದಿಲ್ಲ. ಪಾಪದ ಹಣ ನೀರಿನಂತೆ ಕೊಳ್ಳುಬಾಕ ಸಂಸ್ಕೃತಿ ಸೃಷ್ಟಿಸಿದೆ. ತುಲಾತ್ಮಕ ಲೇಖನ, ಅದರಲ್ಲಿನ ವೈದಾಟ, ತುಡಿತ ಪ್ರಾಮಾಣಿಕ ವಾಗಿ ಮೂಡಿದೆ. ಸರಣಿ ಬರವಣಿಗೆ ಮುಂದುವರಿಯಲಿ

    LEAVE A REPLY

    Please enter your comment!
    Please enter your name here

    Latest article

    error: Content is protected !!