23.5 C
Karnataka
Monday, May 20, 2024

    ರಾಣಿ  ಎರಡನೇ ಎಲಿಝೆಬೆತ್‌ – ಮುಗಿದ ಒಂದು ಅಧ್ಯಾಯ

    Must read

    ಇಂಗ್ಲೆಂಡಿನ ರಾಣಿ ಎರಡನೇ ಎಲಿಜೆಬೆತ್‌ ರಿಗೆ ಈ ಆಧುನಿಕ ಕಾಲದಲ್ಲಿಯೂ ಅತಿ ಪುರಾತನ ರೀತಿಯ ಶಾಸ್ತ್ರ- ಸಂಪ್ರದಾಯ, ಮತ್ತು ರಾಜ ಮರ್ಯಾದೆಗಳೊಡನೆ ಅದ್ದೂರಿಯಾದ ಅಂತಿಮ ಸಂಸ್ಕಾರ ನಿನ್ನೆ ಲಂಡನ್ನಿನಲ್ಲಿ ನಡೆಯಿತು.  8 ನೇ ತಾರೀಖು ಸೆಪ್ಟಂಬರಿನಲ್ಲಿ ಆಕೆ ವಿಧಿವಶರಾಗಿ 10 ದಿನಗಳು ಕಳೆದಿದ್ದವಾದರೂ, ಇಷ್ಟೂ ದಿನಗಳ ಕಾಲ ಆಕೆಯ ಅಂತ್ಯಕ್ರಿಯೆಗಾಗಿ ಅದ್ದೂರಿ ಮತ್ತು ಅತ್ಯಂತ ಶಿಸ್ತಿನ ತಯಾರಿಗಳು, ವಿಧಿಗಳು ನಡೆಯುತ್ತಿದ್ದವು.

    ಈ ಹತ್ತೂ ದಿನಗಳ ಕಾಲ ಯುನೈಟೆಡ್‌ ಕಿಂಗ್ಡಮ್ಮಿನ ಜನತೆ ಆಕೆಗೆ ಗೌರವದ ಮಹಾಪೂರವನ್ನೇ ಹರಿಸಿದ್ದರು.  ಸ್ಕಾಟ್ಲೆಂಡಿನ ರಾಜಧಾನಿ ಎಡಿನ್ಬರೋದಲ್ಲಿ ಮತ್ತು ಇಂಗ್ಲೆಂಡಿನ ರಾಜಧಾನಿ ಲಂಡನ್ನಿನಲ್ಲಿ ಜನರು ಮೈಲುಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಆಕೆಗೆ ಅಂತಿಮ ಗೌರವ ಸಲ್ಲಿಸಿದ್ದರು.“

    ಎಪ್ಪತ್ತು ವರ್ಷ ನಿಸ್ವಾರ್ಥವಾಗಿ ದೇಶಕ್ಕಾಗಿ ಬದುಕಿದ ಆಕೆಗೆ ಅಂತಿಮ ಗೌರವ ಸಲ್ಲಿಸಲು ನಾವು ಇಷ್ಟು ಮಾಡುವುದೇನೂ ದೊಡ್ಡದಲ್ಲ “- ಎಂಬ ನಂಬಿಕೆಯನ್ನು ಹೊತ್ತ ಜನರು ಹಗಲೂ, ರಾತ್ರಿಯೆನ್ನದೆ ಸರತಿಯಲ್ಲಿ ನಿಂತರು. ಕಡು ಚಳಿ, ಮಳೆ, ಬಿಸಿಲು ಯಾವೊಂದೂ ಲೆಕ್ಕವಿಲ್ಲದೆ ಬೆಳೆದ ಈ ಸಾಲು ಒಂದು ಸಂದರ್ಭದಲ್ಲಿ 10 ಮೈಲಿ ( 16 ಕಿ.ಮೀ.)ಗೂ ಹೆಚ್ಚು ಉದ್ದಕ್ಕಿತ್ತು. ರಾಣಿಯ ಮುಖವನ್ನು ನೋಡಲು ಅವಕಾಶವಿಲ್ಲದಿದ್ದರೂ ಆಕೆಯ ಶವಪೆಟ್ಟಿಗೆಯನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡು, ಒಮ್ಮೆ ಅಂತಿಮವಾಗಿ ನಮಸ್ಕರಿಸಲು ಇವರು ಕೆಲವೊಮ್ಮೆ 24 ಗಂಟೆಗೂ ಹೆಚ್ಚು ಕಾಲ ಈ ಸರತಿಯಲ್ಲಿ ನಡೆದು ಬಂದಿದ್ದರು.  ಭಾನುವಾರ ರಾತ್ರಿ 10.44 ಗಂಟೆಗೆ ಇನ್ನೂ ಸರತಿ ಸೇರಿಕೊಳ್ಳಲು ಆಗಮಿಸುತ್ತಿದ್ದ ಜನರನ್ನು ನಯವಾಗಿ ತಡೆದು ನಿಲ್ಲಿಸಲಾಯಿತು. ಏಕೆಂದರೆ  ಆಗಾಗಲೇ ಸರತಿಯಲ್ಲಿದ್ದವರು ವೆಸ್ಟ ಮಿನಿಷ್ಟರ್‌ ಹಾಲನ್ನು ತಲುಪಲು ಸೋಮವಾರ ಬೆಳಗಿನ 6.30 ಗಂಟೆಯಾಗುತ್ತಿತ್ತು.

     

    ಅಲ್ಲಿಂದ ಮುಂದಕ್ಕೆ ಅಂತಿಮ ದಿನದ ಕಾರ್ಯಕ್ರಮ ಶುರುಮಾಡಬೇಕಿತ್ತು.

     ಸೋಮವಾರವನ್ನು, ರಾಣಿಯ ಅಂತಿಮ ಶವ ಯಾತ್ರೆಯನ್ನು ವೀಕ್ಷಿಸಲು ಅನುಕೂಲವಾಗುವಂತೆ ರಜೆಯೆಂದು ಘೋಷಿಸಲಾಗಿತ್ತು. ಹಾಗೆಂದು ಇದು ಹೇರಿಕೆಯಾಗಿರಲಿಲ್ಲ. ಖಾಸಗೀ ವ್ಯಾಪಾರದವರು ಅವರಿಗೆ ಬೇಕಿದ್ದಲ್ಲಿ ಕೆಲಸ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಇಡೀ ದೇಶ ಸೋಮವಾರ ಈ ಅಂತಿಮ ಯಾತ್ರೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿತು.

    ಕಳೆದ ಹತ್ತು ದಿನಗಳಿಂದ ಇಂಗ್ಲೆಂಡಿನ ರಾಣಿ‌ ಎರಡನೇ  ಎಲಿಝಬೆತ್ ಗೆ , ಅವರ ಸಂಸಾರದವರು, ಅರಮನೆಯವರು, ಇಡೀ ದೇಶದ ಪ್ರಜೆಗಳು ಮತ್ತು ಪ್ರಪಂಚದ ಎಲ್ಲ ನಾಯಕರುಗಳು ನಾನಾ ರೀತಿಯಲ್ಲಿ   ಅಂತಿಮ  ಗೌರವ ಸಲ್ಲಿಸಿದ್ದಾರೆ. ಅದಕ್ಕಾಗಿ ಲಂಡನ್ನಿಗೆ ಬಂದಿಳಿದ ಜನರ ಸಂಖ್ಯೆ ಅಗಾಧವಾಗಿತ್ತು. ಈ ಕಾರಣ ನಡೆದ ಸಿದ್ಧತೆಗಳೂ ಬೃಹತ್‌ ಮಟ್ಟದ ಕಾರ್ಯಾಚರಣೆಗಳಾಗಿದ್ದವು. ಅಂತಿಮ ಯಾತ್ರೆಯ ಮೆರವಣಿಗೆ ನೋಡಲು ಬಂದವರಿಗಾಗಿ ಅಭೂತಪೂರ್ವ ಸಿದ್ಧತೆಗಳನ್ನು ನಡೆಸಲಾಗಿತ್ತು.

    ಸ್ಥಿರವಾಗಿ ನಿಂತ ಪ್ರತಿ ಕಂಬ, ಪೆಟ್ಟಿಗೆ ಮತ್ತು  ವಸ್ತುಗಳನ್ನು ಪೂರ್ಣವಾಗಿ ಬಿಚ್ಚಿ ಸ್ಪೋಟಕ ವಸ್ತುಗಳಿಗಾಗಿ ತಡಕಿ ಅವನ್ನು ಮತ್ತೆ ಜೋಡಿಸಲಾಗಿತ್ತು ಆಯಕಟ್ಟಿನ ಜಾಗಗಳ ತಾರಸಿಗಳಿಂದ ಬೈನಾಕ್ಯಲರ್‌ ಹಿಡಿದ ಪೋಲೀಸರು ಅಂಗುಲಂಗುಲವನ್ನೂ ತಮ್ಮ ಕಣ್ಣುಗಳಿಂದಲೇ ಸ್ಕಾನ್‌ ಮಾಡಿದ್ಧರು. ಶ್ವಾನಪಡೆ, ಅಶ್ವಪಡೆಯ ಪೋಲೀಸರು ಸಂದು -ಗೊಂದುಗಳ ಕೂಲಂಕಷ ಪರೀಕ್ಷೆಯನ್ನು ಮಾಡಲಾಯಿತು. ಸಿ.ಸಿ. ಟಿ.ವಿ ಕ್ಯಾಮರಾಗಳ ಮೂಲಕ ಇಡೀ ಲಂಡನ್ನಿನ ಪ್ರತಿ ಹಾದಿಯನ್ನೂ ಕುಳಿತು ನೋಡಬಹುದಾದ ವ್ಯವಸ್ಥೆಗಳನ್ನು ಚುರುಕುಗೊಳಿಸಲಾಗಿತ್ತು. ಪ್ರಪಂಚದ ನಾನಾ ಭಾಗಗಳಿಂದ ಮತ್ತು ದೇಶದ ಎಲ್ಲೆಡೆಗಳಿಂದ ಬಂದಿಳಿದ ಜನರಲ್ಲಿ ಅವರು ಕೇಳಬಹುದಾದ, ಕಾಣಬಹುದಾದ ಯಾವುದೇ ಸಂಶಯಾಸ್ಪದ ವಿಷಯಗಳನ್ನು ತಕ್ಷಣವೇ ಪೋಲೀಸರಿಗೆ ತಿಳಿಸಲು ಟೀವಿ ಮತ್ತಿತರ ಮಾಧ್ಯಮಗಳ ಮೂಲಕ ವಿನಂತಿಸಿಕೊಳ್ಳಲಾಯಿತು.. ಚರಿತ್ರೆಯಲ್ಲಿ ಇನ್ಯಾವತ್ತೂ ಆಗದಂತಹ ಬಿಗಿ ಭದ್ರತೆಗಳ ಎಚ್ಚರಿಕೆಗಳನ್ನು ಲಂಡನ್ನಿನಲ್ಲಿ  ನಡೆಸಲಾಯಿತು. . ಅದಕ್ಕಾಗಿ ದೇಶದ ಪ್ರತಿ ಪೋಲೀಸು ತುಕಡಿಗಳಿಂದ ಆಫೀಸರುಗಳು ಲಂಡನ್ನಿಗೆ ಬಂದಿಳಿದಿದ್ದರು. ಹತ್ತು ಸಾವಿರ ಜನ ಪೋಲೀಸರು ಒತ್ತಟ್ಟಿಗೆ ಒಂದು ಕಾರ್ಯಕ್ರಮದ ಬಗ್ಗೆ ಈ ಬೃಹತ್‌ ಮಟ್ಟದ ಎಚ್ಚರಿಕೆ ವಹಿಸಿರುವುದು ಬ್ರಿಟಿಷರ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ದಾಖಲಾಗಿರುವುದು.

    ಈ ವಿಧಿಗಳಲ್ಲಿ ಭಾಗಿಗಳಾಗಲು ಪ್ರಪಂಚದ ನಾನಾ ದೇಶಗಳ ಸರ್ವೋಚ್ಚ ನಾಯಕರುಗಳು ಲಂಡನ್ನಿಗೆ ಬಂದಿಳಿದಿದ್ದರು. ಅಮೆರಿಕಾ, ಕೆನಡಾ, ಭಾರತ, ಘಾನ, ಬಾರ್ಬಡೋಸ್‌ ಜೋರ್ಡನ್,‌ ಬ್ರೆಝಿಲ್‌, ಫಿಜಿ, ಫ್ರಾನ್ಸ್‌, ಹಾಂಗ್-ಕಾಂಗ್‌, ಜರ್ಮನಿ, ಇಟಲಿ,ನ್ಯೂಝಿಲ್ಯಾಂಡ್‌, ಆಷ್ಟ್ರೇಲಿಯ, ಸೌದಿಯ ದೊರೆಯಾದಿಯಾಗಿ ಎಲ್ಲರೂ ಅಂತ್ಯಕ್ರಿಯೆಯ ಅಂತಿಮ ಸಂಸ್ಕಾರಕ್ಕೆ ಬಂದಿಳಿದಾಗ ಲಂಡನ್‌ ನಗರ ಅತ್ಯಂತ ಕಾಳಜಿ ವಹಿಸಿ ಮೇಲಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.

    (ಪ್ರಪಂಚದ ಎಲ್ಲ ದೇಶಗಳಿಗೆ ರಾಣಿಯ ಅಂತ್ಯಕ್ರಿಯೆಗೆ ಬರುವಂತೆ ಆಮಂತ್ರಣಗಳು ಹೋದರೂ, ಸಿರಿಯಾ, ವೆನೆಝುಯೆಲ,ಆಪ್ಘಾನಿಸ್ತಾನ, ರಷಿಯಾ, ಮತ್ತು ಬೆಲರೂಸ್‌ ಗಳನ್ನು ಹೊರತುಪಡಿಸಲಾಗಿತ್ತು.  ಚೈನಾದ ಪ್ರತಿನಿಧಿಗಳು ಮತ್ತು ಸೌದಿಯ ದೊರೆಯ ಉಪಸ್ಥಿತಿಗಳನ್ನು ಇಲ್ಲಿನ ಹಲವರು ವಿರೋಧಿಸಿದ್ದರು)

    ಜೊತೆಗೆ ರಾಣಿಯ  ಮರಿಮೊಮ್ಮಕ್ಕಳುಗಳ ಸಮೇತ ಇಡೀ  ಕುಟುಂಬ ಮೆರವಣಿಗೆಯಲ್ಲಿ ನಡೆದು ಹೋದ ಕಾರಣ, ಮೆರವಣಿಗೆ ನಡೆದ ರಸ್ತೆಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿತ್ತು.

    ಲಕ್ಷಕ್ಕೂ ಹೆಚು ಜನರು ಈ ಅಂತಿಮ ಯಾತ್ರೆಯನ್ನು ಸ್ವತಃ ವೀಕ್ಷಿಸಲು ಲಂಡನ್ನಿಗೆ ಬಂದಿಳಿದಿದ್ದರು.  ಈ ಕಾರಣ ಆದಷ್ಟೂ ಇದ್ದಲ್ಲೇ ವೀಕ್ಷಿಸಲು ಜನರಿಗೆ ಸರ್ಕಾರ ವಿನಂತಿಸಿಕೊಂಡಿತ್ತು. ಅದಕ್ಕೆ ಅನುಕೂಲವಾಗುವಂತೆ 125  ವೀಕ್ಷಣಾ ಮಂದಿರಗಳಲ್ಲಿ ಅಂತಿಮ ಯಾತ್ರೆಯ ನೇರ ಪ್ರಸಾರವನ್ನು ಹಮ್ಮಿಕೊಳ್ಳಲಾಗಿತ್ತು. ಚರ್ಚ್‌ ಮತ್ತು ಕ್ಯಾಥಿಡ್ರಲ್‌ ಗಳಲ್ಲಿ ಮತ್ತು ಟೀವಿ ಚಾನಲ್ಲುಗಳಲ್ಲಿ ಅದಕ್ಕೆಂದೇ 24 ತಾಸುಗಳ ಪ್ರಸಾರವನ್ನು ನೀಡಲಾಯಿತು

    ಪ್ರಪಂಚದ ಎಲ್ಲ ಮಾಧ್ಯಮಗಳೂ ರಾಣಿಯ ಅಂತಿಮ ಯಾತ್ರೆಯ ಅಭೂತಪೂರ್ವ ದೃಶ್ಯಗಳನ್ನು ಪ್ರಸಾರ ಮಾಡಿದರು. ಹಾಗಾಗಿ ವಿಶ್ವದ ಬಿಲಿಯನ್ನು ಗಟ್ಟಳೆ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.ಎನ್ನಲಾಗಿದೆ.

    ರಾಣಿಯ ಶವಯಾತ್ರೆ ರಾಜ ಚಾರ್ಲ್ಸ ರ ನೇತೃತ್ವದಲ್ಲಿ  ವೆಸ್ಟ್‌ ಮಿನ್ಸ್ಟರ್‌ ಹಾಲ್‌ ನಿಂದ (ಹೌಸಸ್‌ ಆಫ್ ಪಾರ್ಲಿಮೆಂಟ್‌‌) ಹೊರಟಿತು.  123 ವರ್ಷ ಹಳೆಯದಾದ ಗನ್‌ ಹೊರುವ ಬಂಡಿಯನ್ನೇ ರಥವನ್ನಾಗಿ ಮಾಡಲಾಗಿತ್ತು. ರಾಯಲ್‌ ನೇವಿಯ 98 ಯೋಧರು ಇದನ್ನು ಶಿಸ್ತಿನ ನಡಿಗೆಯಲ್ಲಿ ಕೊಂಡೊಯ್ದರು. ಈ ರಥದ ಹಿಂದೆ ರಾಣಿಯ ಕುಟುಂಬದ ಸದಸ್ಯರು ನಡೆದು ಬಂದರು. ಸಾವಿರಾರು  ಮಿಲಿಟರಿ ಸೈನಿಕರು ತಮ್ಮ ವಿವಿಧ ವರ್ಣಗಳ ಪೋಷಾಕು ಧರಿಸಿ ಅದರ ಜೊತೆ ಪಥ ಸಂಚಲನೆ ಮಾಡಿದರು. ಆ ದೃಶ್ಯಗಳು ವರ್ಣರಂಜಿತವಾಗಿದ್ದವು. ,ಅತ್ಯಂತ ಶಿಸ್ತು ಮತ್ತು ಸಂಯಮಗಳ ಕವಾಯತುಗಳನ್ನು ಒಳಗೊಂಡಿದ್ದವು. ವಾದ್ಯಕ್ಕೆ ಸರಿಯಾದ ಹೆಜ್ಜೆ ಜೋಡಿಸಿ ನಡೆದ ಈ ಮೆರವಣಿಗೆ ಹಲವಾರು ಪ್ರಮುಖ ರಸ್ತೆಗಳಲ್ಲಿ ಹಾದು ಹೋಯಿತು.

    ರಾಣಿಯ ಶವಪೆಟ್ಟಿಗೆಯನ್ನು ವೆಸ್ಟ್‌ ಮಿನ್ಸ್ಟರ್‌ ಅಬ್ಬಿಗೆ ಗೆ ತರಲಾಯಿತು. ಇಲ್ಲಿ ದೇಶದ ಪ್ರಧಾನಿಯಾದಿಯಾಗಿ ಎಲ್ಲ ಗಣ್ಯರು, ಕಾಮನ್‌ ವೆಲ್ತ್‌ ದೇಶಗಳ ಮತ್ತು ಪ್ರಪಂಚದ ಹಲವು ದೇಶಗಳ ನಾಯಕರು ರಾಣಿಗೆ ನಮನ ಸಲ್ಲಿಸಿದರು. 100 ಕ್ಕೂ ಹೆಚ್ಚಿನ ದೇಶಗಳ ಪ್ರತಿನಿಧಿಗಳು ಒಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು ಇಂಗ್ಲೆಂಡಿನ ಅರಸೊತ್ತಿಗೆಯ ಪ್ರಭಾವದ ಶಕ್ತಿಯ ಪ್ರತೀಕವಾಗಿತ್ತು. ಸಮಾಜದ ವಿವಿಧ ಸ್ತರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಲವಾರು ಜನರು, ಆರೋಗ್ಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ಆಹ್ವಾನಿತ ಜನಸಾಮಾನ್ಯರು  ಕೂಡ ಈ ಸಂದರ್ಭದಲ್ಲಿ ಗೌರವದಿಂದ ಭಾಗವಹಿಸಿದ್ದರು.

     ಸುಮಾರು 2000 ಜನರು ಹನ್ನೆರಡು ಗಂಟೆಯ ವೇಳೆಗೆ ರಾಷ್ರೆಗೀತೆಯನ್ನು ಹಾಡಿ ನಮನಗಳನ್ನು ಸಲ್ಲಿಸಿದ ನಂತರ, ಇಡೀ ರಾಜಮನೆತನ ಮಂದಿ, ಮುಂದಿನ ಯಾತ್ರೆಗೆ ಸೇರಿದರು.ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಸಹೋದರಿ ಮತ್ತಿತರ ಪರಿವಾರದವರೆಲ್ಲ  ಡ್ಯೂಕ್ ಆಫ್‌ ವೆಲ್ಲಿಂಗ್ಟನ್‌ ಕಮಾನಿನೆಡೆಗೆ ಮೆರವಣಿಗೆಯ ಭಾಗವಾಗಿ ಹಒರಟರು. ಕಾಮನ್‌ ವೆಲ್ತ್‌ ದೇಶದ ಮತ್ತಿತರ ಹಲವು ದೇಶಗಳ ಸೈನಿಕ ತುಕಡಿಗಳು ಕೂಡ ಭಾಗವಹಿಸಿ ಗೌರವ ಸಲ್ಲಿಸಿದವು.

    ರಾಣಿ ಎಲಿಝೆಬೆತ್‌ ರ ಕುದುರೆ ಮತ್ತು ನಾಯಿಗಳ ಮೇಲಿನ ಪ್ರೀತಿಯೂ ಬಹಳ ಪ್ರಸಿದ್ದವೇ ಹೀಗಾಗಿ. ಆಕೆಯ ಕುದುರೆ ಎಮ್ಮಾ ಮತ್ತು ನಾಯಿಗಳಾದ  ಸ್ಯಾಂಡಿ ಮತ್ತು ಮಿಕ್‌ ಗಳಿಗೂ ಈ ಅಂತಿಮ ಯಾತ್ರೆಯನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು.

    ರಾಯಲ್‌ ನೇವಿಯವರು ಎಳೆದು ನಡೆದ  ರಥದ ಪಥಚಲನೆಯ ಶಿಸ್ತು ಮತ್ತು ಶಿಷ್ಟಾಚಾರಗಳು ರಾಜಮನೆತನದ ರೀತಿ ರಿವಾಜುಗಳು ಅದನ್ನು ವೀಕ್ಷಿಸಿದವರ ಮನದಲ್ಲಿ ಅಳಿಯದ ನೆನಪುಗಳನ್ನು ಬರೆದವು. ಆ ನಂತರ ರಾಣಿಯ ಶವಪೆಟ್ಟಿಗೆಯನ್ನು ಶವಯಾತ್ರೆಯ ಕಾರಿಗೆ (funeral hearse) ಗೆ ಹಸ್ತಾಂತರಿಸಲಾಯಿತು. ಇಲ್ಲಿಂದ ರಾಣಿಯನ್ನು ಆಕೆ ಹುಟ್ಟಿ ಬೆಳೆದ ನಯನ ಮನೋಹರ  ವಿಂಡ್ಸರ್‌ ಕ್ಯಾಸಲ್‌ ಗೆ ತರಲಾಯಿತು. ದಾರಿಯುದ್ದಕ್ಕೂ ಈ ದೃಶ್ಯವನ್ನು ನೋಡಲು ನಿಂತ ಜನರು ರಾಣಿಯ ಕಾರಿಗೆ ಹೂಗಳನ್ನು ಎಸೆದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.

    ವಿಂಡ್ಸರ್‌ ಕ್ಯಾಸೆಲ್ಲಿನಲ್ಲಿರುವ ಸೇಂಟ್‌ ಜಾರ್ಜ್‌ನ ಚಾಪೆಲ್ಲಿಗೆ  ತಲುಪಿದ ನಂತರ ಇದುವರೆಗೆ ಪ್ರಪಂಚಕ್ಕೆಲ್ಲ ಪ್ರಸಾರವಾದ ರಾಣಿಯ ಅಂತಿಮ ಕ್ರಿಯೆಗಳನ್ನು ಆಕೆಯ ಸಂಸಾರದ ಖಾಸಗೀ ಅಂತ್ಯ ಸಂಸ್ಕಾರಕ್ಕೆ ಒಪ್ಪಿಸಲಾಯಿತು.

     ಸೇಂಟ್‌ ಜಾರ್ಜ್‌ ಚಾಪೆಲ್ಲಿನಲ್ಲಿ ಅಕೆಯ ಪತಿ ಫಿಲಿಪ್ ಮತ್ತು ಆಕೆಯ ತಂದೆ ತಾಯಿಯರ ಮತ್ತು ಸಹೋದರಿಯ ಸಮಾಧಿಯೂ ಇರುವ ಕಾರಣ ಅಲ್ಲಿಯೇ ರಾಣಿಯ ಸಮಾಧಿ ಕಾರ್ಯಕ್ರಮ ನಡೆಯಿತು.

    ರಾತ್ರಿಯ 7.30 ಗಂಟೆ (ಭಾರತದ  11.30 ) ರ ವೇಳೆಗೆ ಶುರುವಾದ ಅಂತಿಮ ಸಂಸ್ಕಾರದ ಕೊನೆಯ ಘಟ್ಟದ ನಂತರ ಆಕೆಯ  ಸಮಾಧಿ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.

    ಹತ್ತು ದಿನಗಳ  ಹಿಂದೆಯೇ ರಾಣಿ ವಿಧಿವಶರಾಗಿದ್ದರೂ,  ಆಕೆ ಇನ್ನೂ ತಮ್ಮ ನಡುವೆಯೇ ಇರುವರೆಂಬ ಯಾವದೋ  ಒಂದು ಭಾವಕೋಶ ತಟ್ಟನೆ ಬರಿದಾದ ಆ ಕ್ಷಣದಲ್ಲಿ ಜನರ  ದುಃಖದ ಕಟ್ಟೆಯೊಡೆದಿತ್ತು.

    ಇಂತವರಿಗೆ ಸಮಾಧಾನ ಕೊಡಲು ಅಲ್ಲಲ್ಲಿ ಅಳವಡಿಸಿದ್ದ ತೆರೆಗಳ ಮೇಲೆ ಆಕೆಯ ಬದುಕಿನ ತುಣುಕುಗಳ ಪ್ರಸಾರ ಶುರುವಾಯಿತು. ಇವೆಲ್ಲದರ ನಡುವೆ ಅರಸೊತ್ತಿಗೆಯನ್ನು ವಿರೋಧಿಸುವ ಅಲ್ಪ ಸಂಖ್ಯಾತ ಜನರ ಕೂಗು ಅತ್ಯಂತ ಕ್ಷೀಣವಾಗಿದ್ದು ಆಶ್ಚರ್ಯವೆನಿಸಲಿಲ್ಲ.

     ಎರಡು ಯುದ್ಧಗಳು, ಆಂತರಿಕ ಕಲಹಗಳು, ವಿಭಜನೆಗಳು, ಆಗಾಗ ಕದಡಿದ ಶಾಂತಿ ಈ ಎಲ್ಲ ಸಂದರ್ಭಗಳಲ್ಲಿ ಇಡೀ ದೇಶವನ್ನು ಇಡಿಯಾಗಿ ಹಿಡಿದಿಡಲು  ಸಮರ್ಥಳಾಗಿದ್ದ  ರಾಣಿಯೊಬ್ಬಳ ಕಾಲ ನಿನ್ನೆಗೆ ನಿಜಕ್ಕೂ ಮುಗಿದಿತ್ತು. ಆದರೆ, ಸಾವಿನಲ್ಲೂ ತನ್ನ ಸಾಮ್ರಾಜ್ಯವನ್ನು ಒತ್ತಟ್ಟಿಗೆ ತರುವಲ್ಲಿ  ಆಕೆ ಅಭೂತಪೂರ್ವವಾಗಿ ಯಶಸ್ವಿಯಾಗಿದ್ದಳು.

    ವ್ಯಕ್ತಿಯಾಗಿ ಆಕೆ ಬೆಳೆದದ್ದು ರಾಜಮನೆತನದಲ್ಲಿ, ಬದುಕಿದ್ದು ರಾಣಿಯಾಗಿ. ಸಾವಿನಲ್ಲಿಯೂ ಕೂಡ  ಸಂಯುಕ್ತ ರಾಷ್ಟ್ರದ ಕಣ್ಮಣಿಯಾಗಿಯೇ ಆಕೆ ಮೆರೆದರು.  ಮುಂದೆಯೂ ಹಾಗೆಯೇ ಉಳಿದುಕೊಳ್ಳುವರು ಎನ್ನುವುದರಲ್ಲಿ ಸಂಶಯವಿಲ್ಲ.

                                                                              

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!