22.7 C
Karnataka
Tuesday, May 21, 2024

    ಗುರುರಾಘವೇಂದ್ರ ಸಹಕಾರ ಬ್ಯಾಂಕ್‌: ಸಾಲ ಮರುಪಾವತಿ ಮಾಡುವವರಿಗೆ 10 ದಿನದೊಳಗೆ ದಾಖಲೆ ವಾಪಸ್: ಸಚಿವ ಎಸ್.ಟಿ.ಸೋಮಶೇಖರ್

    Must read

    BENGALURU AUG 17

    ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ನಲ್ಲಿ ಸಾಲ ಪಡೆದುಕೊಂಡವರು ಸಾಲ ಮರುಪಾವತಿ ಮಾಡಿದ 10 ದಿನದೊಳಗೆ ಅವರ ಆಸ್ತಿ ಪತ್ರದ ದಾಖಲೆಗಳನ್ನು ನೀಡುವ ಬಗ್ಗೆ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ವಿಕಾಸಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ನಲ್ಲಿನ ಅವ್ಯವಹಾರಗಳ ಕುರಿತ ತನಿಖಾ ಪ್ರಗತಿ ಹಾಗೂ ಪುನಶ್ಚೇತನ ಕುರಿತು ಪರಾಮರ್ಶಿಸಲು ಇಂದು ಸಭೆ ನಡೆಸಲಾಯಿತು. ಸಂಸದರಾದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ ಅವರು ಸಾಕಷ್ಟು ಸಲಹೆಗಳನ್ನು ಕೊಟ್ಟಿದ್ದಾರೆ. ಗುರುರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ನಲ್ಲಿ 1294 ಕೋಟಿ ರೂ. ವಂಚನೆ ಆಗಿರುವುದು ಆಡಿಟ್ ನಿಂದ ತಿಳಿದುಬಂದಿದೆ ಎಂದರು.

    ಗುರುರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ನಲ್ಲಿ ಸಾಲ ಮರುಪಾವತಿ ಮಾಡಲು ಇಚ್ಚಿಸುವವರಿಗೆ ದಾಖಲೆಗಳನ್ನು ಹಿಂದಿರುಗಿಸಲು ವಿಳಂಬವಾಗುತ್ತಿರುವ ಸಂಬಂಧ ಆಡಳಿತಾಧಿಕಾರಿ, ಆರ್ ಬಿಐ, ಸಿಒಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಸಾಲ ಮರುಪಾವತಿ ಮಾಡುವವರಿಗೆ 10 ದಿನಗಳ ಒಳಗೆ ದಾಖಲೆ ನೀಡಲು ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಎಂದು ಹೇಳಿದರು.

    ಸಾಲ ಪಡೆದವರ ಎಲ್ಲಾ ದಾಖಲೆ ಇಡಿ ಬಳಿ ಇದೆ. ಸಿಒಡಿ ತನಿಖೆ ನಡೆಯುತ್ತಿರುವುದರಿಂದ ದಾಖಲೆ ನೀಡಲು ವಿಳಂಬವಾಗುತ್ತದೆ ಎಂದು ಹಣ ಪಾವತಿಗೆ ಸಾಲಗಾರರ ಹಿಂದೇಟು ಹಾಕಬಹುದು. ಆದರೆ ಸಾಲ ಮರುಪಾವತಿ ಮಾಡುವವರಿಗೆ ದಾಖಲೆ ನೀಡುವ ಬಗ್ಗೆ ಚರ್ಚೆ ಮಾಡಲಾಯಿತು. ಇಡಿಗೆ 15 ದಿನಗಳೊಳಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಸಲ್ಲಿಕೆ ಮಾಡಲಿದ್ದಾರೆ. ಸಾಲ ವಸೂಲಾತಿ ಬಗ್ಗೆ ಕೂಡ ಗಂಭೀರ ಚರ್ಚೆಯಾಗಿದೆ. ಸೆ.5ಕ್ಕೆ ಮತ್ತೆ ಸಭೆ ಸೇರಿ ಏನೆಲ್ಲಾ ಪ್ರಗತಿಯಾಗಿದೆ ಎಂಬುದರ ಕುರಿತು ಪರಾಮರ್ಶೆ ಮಾಡಲಾಗುವುದು ಎಂದು ಹೇಳಿದರು.

    ವಶಿಷ್ಠ ಸೌಹಾರ್ದ ಸಹಕಾರಿ ಯಲ್ಲಿ 282 ಕೋಟಿ ವಂಚನೆ ಆಗಿದೆ. ಸಾಲ ವಸೂಲಾತಿ ಬಗೆಗಿನ ಕೋರ್ಟ್ ನೀಡಿದ್ದ ತಡೆ ತೆರವಾಗಿದೆ. ಸಿಒಡಿ ತನಿಖೆ ನಡೆಯುತ್ತಿದ್ದು, ಸಾಲ ವಸೂಲಿಗೆ ತ್ವರಿತವಾಗಿ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

    ಈ ವರ್ಷ 24 ಸಾವಿರ ಕೋಟಿ ರೂ. ಸಾಲ‌ವನ್ನು 33 ಲಕ್ಷ ರೈತರಿಗೆ 21 ಡಿಸಿಸಿ ಬ್ಯಾಂಕ್ ಮುಖಾಂತರ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಯಾರು ಎಷ್ಟು ಸಾಲ‌ ನೀಡಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. 19 ಡಿಸಿಸಿ ಬ್ಯಾಂಕ್ ಗಳಿಗೆ ಅಡಿಷನಲ್ ರಿಜಿಸ್ಟ್ರಾರ್ ಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದರು.

    ಸಾಲ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪಗಳಿರುವ ತುಮಕೂರು ಮತ್ತು ಕೋಲಾರ ಡಿಸಿಸಿ ಬ್ಯಾಂಕ್ ಗೆ ಜಿ‌.ಎಮ್.ರವೀಂದ್ರ ಅವರನ್ನು ಅಡಿಷನಲ್ ರಿಜಿಸ್ಟರ್ ಆಗಿ ತನಿಖೆಗೆ ನೇಮಕ ಮಾಡಲಾಗಿದೆ. ಅಲ್ಲದೆ ಈ ಎರಡು ಬ್ಯಾಂಕ್ ಮೇಲಿನ ಆರೋಪದ ಕುರಿತು ಹದಿನೈದು ದಿನದೊಳಗೆ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವಂತೆ ಕೂಡ ಸೂಚಿಸಲಾಗಿದೆ ಎಂದು ತಿಳಿಸಿದರು.

    ಕೋಲಾರ ಡಿಸಿಸಿ ಬ್ಯಾಂಕ್ ನಿಂದ ಸ್ವಸಹಾಯ ಗುಂಪುಗಳಿಗೆ ಮನಸೋಇಚ್ಚೆ ಸಾಲ ನೀಡಲಾಗುತ್ತಿದೆ. ಕೆಲವೇ ಕ್ಷೇತ್ರಗಳಿಗೆ ಹೆಚ್ಚು ಸಾಲ ನೀಡಲಾಗುತ್ತಿದೆ ಎಂಬ ದೂರು ಬಂದಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು.

    ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಕ್ಷೇತ್ರಕ್ಕೆ 100 ಕೋಟಿ ರೂ. ಹಣ ನೀಡಿದ್ದಾರೆ ಎಂಬ ದೂರು ಬಂದಿದೆ. ಸಾಲ ನೀಡುವುದಕ್ಕೆ 10% ಷೇರು ಹಣವನ್ನು ಸಂಗ್ರಹ ಮಾಡಲಾಗುತ್ತದೆ. ಇದರಲ್ಲಿ 5% ಡಿಸಿಸಿ, 5% ಫ್ಯಾಕ್ಸ್ ಗೆ ವರ್ಗಾವಣೆ ಮಾಡಬೇಕು. ಆದರೆ 10% ಷೇರು ಹಣವನ್ನು ಡಿಸಿಸಿ ಬ್ಯಾಂಕ್ ನವರೇ ಇಟ್ಟುಕೊಂಡಿದ್ದಾರೆ ಎಂಬ ದೂರು ಬಂದಿದ್ದು ಈ ಬಗ್ಗೆ ಕೂಡ ತನಿಖೆ ಮಾಡಿ ವರದಿ ಬಂದ ಬಳಿಕ ಕಾನೂನು ರೀತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.

    ಕೋಲಾರ ಡಿಸಿಸಿ ಬ್ಯಾಂಕ್ ಗೆ 623 ಕೋಟಿ ರೂ., ತುಮಕೂರು ಡಿಸಿಸಿ ಬ್ಯಾಂಕ್ ಗೆ 692 ಕೋಟಿ ರೂ. ಸಾಲ ವಿತರಣೆ ಗುರಿ ನಿಗದಿಪಡಿಸಲಾಗಿದೆ. ಆದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ಸಮಾನಾಗಿ ಸಾಲ ಹಂಚಿಕೆ ಮಾಡಿಲ್ಲ. ಬಡ್ಡಿ ಸಹಾಯಧನ ಹೆಚ್ಚು ಕ್ಲೈಮ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ಮಾಡಿ ವರದಿ ನೀಡಲು ವಿಚರಾಣಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

    ತುಮಕೂರಿನಲ್ಲಿ ರೈತರಿಂದ ಅನಧಿಕೃತವಾಗಿ 1300 ರೂ. ಹಣ ಸಂಗ್ರಹ ಮಾಡಿರುವುದರ ಬಗ್ಗೆ ಅಧಿಕೃತವಾಗಿ ಯಾರೂ ದೂರು ನೀಡಿಲ್ಲ.ಸಚಿವ ಮಾಧುಸ್ವಾಮಿ ಅವರು ಹೇಳಿದ ನಂತರ ರೈತರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ತುಮಕೂರು ಮಾತ್ರವಲ್ಲದೆ ಇತರೆ ಡಿಸಿಸಿ ಬ್ಯಾಂಕ್ ಗಳ ಬಗ್ಗೆ ಕೂಡ ಪರಿಶೀಲನೆ ನಡೆಸಲು ಕ್ರಮವಹಿಸಲಾಗುತ್ತಿದೆ. ಈ ವಿಷಯವನ್ನು ಯಾವಾಗಲೋ ಹೇಳಿದ್ದು ಎಂದು ಮಾಧುಸ್ವಾಮಿ ಅವರೇ ಹೇಳಿದ್ದಾರೆ. ಆದರೆ ಇಲಾಖೆ ಮೇಲೆ ಆರೋಪ ಬಂದಾಗ ಆ ಕುರಿತು ಇಲಾಖೆ ಕ್ರಮಕೈಗೊಳ್ಳಲಿದೆ ಎಂದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!