26.3 C
Karnataka
Thursday, May 9, 2024

    ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು

    Must read

    ಪ್ರಸ್ತುತ ವರ್ಷದಲ್ಲಿ ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ನಾವೆಲ್ಲರೂ ಆಚರಿಸುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನಲ್ಲೂ ದೇಶ ಪ್ರೇಮವನ್ನು ಪ್ರೇರೇಪಿಸಲು ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಒಂದು ಸುಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ವೈಯಕ್ತಿಕ ಸುಖ ಸಂಪತ್ತುಗಳನ್ನು ತ್ಯಜಿಸಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಮಹನೀಯರನ್ನು ಮತ್ತು ಅವರು ಮಾಡಿದ ತ್ಯಾಗ ಮತ್ತು ಸೇವೆಯನ್ನು ನೆನೆಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಈ ದಿಸೆಯಲ್ಲಿಈ ಲೇಖನವನ್ನು ಅವರ ನೆನಪಿಗಾಗಿ ಅರ್ಪಿಸುತ್ತೇನೆ. 

    ನಮಗೆಲ್ಲರಿಗೂ ತಿಳಿದಿರುವಂತೆ ಭಾರತದ ಸ್ವಾತಂತ್ರ್ಯ ಚಳವಳಿಯು ಅನೇಕ ಚಾರಿತ್ರಿಕ ಹೋರಾಟಗಳ ಸರಮಾಲೆ. ಸ್ವಾತಂತ್ರ್ಯ ಚಳುವಳಿಯ ಮೂಲೋದ್ದೇಶ ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸುವುದೆ ಆಗಿತ್ತು. ನವರೋಜಿ, ಗೋಖಲೆ, ರಾನೆಡೆ, ತಿಲಕ್ ಮತ್ತಿರರ ನೇತೃತ್ವದಲ್ಲಿ ಪ್ರಾರಂಭಗೊಂಡ ಸ್ವಾತಂತ್ರ್ಯ ಸಂಗ್ರಾಮವು 1857 ರಿಂದ 1947 ರ ವರೆಗೆ ಸುಮಾರು ತೊಂಬತ್ತು ವರ್ಷಗಳ ಕಾಲ ಸತತವಾಗಿ ನಡೆಯಿತು. ಇದರ ಪ್ರತಿಫಲವಾಗಿ ಸ್ವಾತಂತ್ರ್ಯದ ತದನಂತರ ಜನಿಸಿದ ನಾವುಗಳೆಲ್ಲರೂ ಈ ದಿನ ನೆಮ್ಮದಿಯಿಂದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.

    ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡುವಾಗ ಅಥವಾ ಲೇಖನಗಳನ್ನು ಬರೆಯುವಾಗ ಸಾಮಾನ್ಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಚಳವಳಿಗಳಾದ ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ, ಸಿಪಾಯಿ ದಂಗೆ ಇತ್ಯಾದಿಗಳನ್ನೇ ಉಲ್ಲೇಖಿಸುತ್ತಿರುತ್ತೇವೆ. ಆದರೆ ರಾಜ್ಯಗಳ ಮಟ್ಟದಲ್ಲಿ ನಡೆದಂತಹ ಹಲವಾರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳು ಮತ್ತು ಘಟನೆಗಳು ನಮ್ಮ ನೆನಪಿನಲ್ಲಿಉಳಿಯದೆ ಹೊಸ ತಲೆಮಾರಿನ ಪ್ರಜೆಗಳಿಗೆ ಈ ಘಟನೆಗಳ ಬಗ್ಗೆ ಯಾವುದೇ ಅರಿವು ಮತ್ತು ಮಾಹಿತಿ ಇರುವುದಿಲ್ಲ. ಆದರೆ ರಾಜ್ಯ ಮಟ್ಟದಲ್ಲಿ ನಡೆದ ಘಟನೆಗಳು ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೆ ಬದಲಾಯಿಸಿ ಸಾಮಾನ್ಯ ಪ್ರಜೆಗಳಲ್ಲಿ ದೇಶ ಪ್ರೇಮವನ್ನು ಉತ್ತೇಜಿಸಿ ಮತ್ತು ದ್ವಿಗುಣಗೊಳಿಸಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿರುತ್ತವೆ. ಈ ಲೇಖನದಲ್ಲಿ ಕರ್ನಾಟಕದಲ್ಲಿ ನಡೆದು  ನಮ್ಮ ನೆನಪಿನಲ್ಲಿ ಉಳಿಯದೆ ಮರೆತು ಹೋಗಿರುವ ಕೆಲವು ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತಿದ್ದೇನೆ. 

    ಈಚಲು ಮರದ ಚಳವಳಿ

    ಈ ಚಳುವಳಿಯು ಚಿತ್ರದುರ್ಗ ಜಿಲ್ಲೆಯ ತುರುವನೂರು ಎಂಬ ಕುಗ್ರಾಮದಲ್ಲಿ ನಡೆಯಿತು. ಈ ಒಂದು ಘಟನೆಯಿಂದ ಈ ಹಳ‍್ಳಿಯು ಸ್ವಾತಂತ್ರ್ಯ ಚಳವಳಿಯ ಹಲವಾರು ಚಟುವಟಿಕೆಗಳ ಕೇಂ‍ದ್ರ ಬಿಂದುವಾಗಿತ್ತು. 1939 ರಲ್ಲಿ ಮಹಾತ್ಮ ಗಾಂಧೀಜಿಯವರು ದೇಶಾದ್ಯಂತ ಮದ್ಯಪಾನವನ್ನು ನಿಷೇಧಿಸುವಂತೆ ಕರೆ ನೀಡಿದರು. ಇವರ ಕರೆಗೆ ಓಗೊಟ್ಟು ಸುಮಾರು ಎಂಬತ್ತು ತುರುವನೂರು ಗ್ರಾಮಸ್ಥರು ( ಮಹಿಳೆಯರು ಸೇರಿದಂತೆ ) ಗ್ರಾಮದ ಸುತ್ತಮುತ್ತಲು ಇರುವ ಈಚಲು ಮರಗಳನ್ನು ಕಡಿಯುವುದರ ಮುಖಾಂತರ ಸ್ಪಂದಿಸಿದರು.  ಈ ಹೋರಾಟದಲ್ಲಿ ಗಾಂಧೀವಾದಿಗಳಾದ ದಿವಂಗತ ಎ‍ಸ್. ನಿಜಲಿಂಗಪ‍್ಫನವರು ಮುಂದಾಳತ‍್ವವನ‍್ನು ವಹಿಸಿದ್ದರು. ಇದರ ಫಲವಾಗಿ ಅವರನ್ನು ಬಂಧಿಸಿ ಚಿತ್ರದುರ್ಗದ ಜೈಲಿನಲ್ಲಿ ಒಂದು ವರ್ಷದ ಕಾಲ ಇಡಲಾಯಿತು. ಹಲವಾರು ತಿಂಗಳುಗಳ ಕಾಲ ನಡೆದ ಈ ಚಳವಳಿ ಮಹಾತ್ಮ ಗಾಂಧೀಜಿಯವರ ಗಮನವನ್ನು ಸೆಳೆಯಿತು. ಅವರ ವ್ಯೆಯಕ್ತಿಕ ಕಾರ್ಯದರ್ಶಿಗಳಾದಂತಹ ಮಹದೇವ ದೇಸಾಯಿಯವರು 1942 ರಲ್ಲಿ ಗ್ರಾಮಕ್ಕೆ ಭೇಟಿ ಕೊಟ್ಟು ಚಳುವಳಿಗೆ ಪ್ರೋತ್ಸಾಹವನ್ನು ನೀಡಿದರು. 

    ಈಚಲು ಮರಗಳನ್ನು ಕಡಿದ ಕಾರಣದಿಂದಾಗಿ ಮದ್ಯದ  ಉತ್ಪಾದನೆಯು ಕುಂಠಿತವಾಗಿ ಸರ್ಕಾರದ ಭೊಕ್ಕಸಕ್ಕೆ ಆರ್ಥಿಕವಾಗಿ ಬಹಳಷ್ಟು ನಷ್ಟವಾಯಿತು. ಇದನ್ನು ಗಮನಿಸಿದ ಮೈಸೂರು ಅರಸರು ಗ್ರಾಮಸ‍್ಥರ ಮೇಲೆ ಪುಂಡು ಕಂದಾಯವನ್ನು ಏರಿದರು. ಆದರೆ ಪುಂಡು ಕಂದಾಯ ಕಟ್ಟುವುದನ್ನು ದಿಕ್ಕರಿಸಿ ಕಂದಾಯ ರಹಿತ ಚಳವಳಿಗೆ ಬುನಾದಿಯಾಯಿತು. ಈ ಘಟನೆಯು ಸಣ‍್ಣ ಪ್ರಮಾಣದ್ದು ಎನಿಸಿದರು ಬ್ರಿಟಿಷರ ಆಳ್ವಿಕೆಯ ವಿರುದ್ದ ಹೋರಾಡಲು ಜನರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು. ಈ ಚಳವಳಿಯ ಜ್ಞಾಪಕಾರ್ಥವಾಗಿ 1948ರಲ್ಲಿ ಮಹಾತ್ಮ ಗಾಂಧೀಜಿಯವರ ಪುತ‍್ಥಳಿಯನ್ನು ಅನಾವರಣ ಮಾಡಲಾಯಿತು. ಈ ಪುತ‍್ಥಳಿಯನ್ನು ಗ್ರಾಮದಲ್ಲಿ ಇಂದು ಸಹ ನೋಡಬಹುದಾಗಿದೆ.

    ಅಂಕೋಲದ ಉಪ್ಪಿನ ಸತ್ಯಾಗ್ರಹ

    ಮಹಾತ್ಮ ಗಾಂಧೀಜಿಯವರ  ನೇತೃತ್ವದಲ್ಲಿ 1930ರ ಮಾರ್ಚ್ 12 ರಿಂದ ಏಪ್ರಿಲ್ 6 ರ ವರೆಗೆ ನಡೆದಂತಹ ದಂಡಿ ಉಪ್ಪಿನ ಸತ್ಯಾಗ್ರಹ ನಮಗೆಲ್ಲರಿಗೂ ತಿಳಿದಿರುವಂತಹ ವಿಷಯ. ಈ ಘಟನೆಯು ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚನ್ನು ತ್ರಿಗುಣಗೊಳಿಸುವಲ್ಲಿ ಯಶಸ್ವಿಯಾಯಿತು. ಈ ದಂಡಿಯಾತ್ರೆಯಲ್ಲಿ ನಮ್ಮ ಈಡೀ ಕರ್ನಾಟಕದಿಂದ ಹಾವೇರಿ ಜಿಲ್ಲೆಯ ಮೈಲಾರ ಮಹದೇವಪ್ಪನವರು ರಾಜ್ಯವನ್ನು ಪ್ರತಿನಿಧಿಸಿದ ಏಕೈಕ ಹೋರಾಟಗಾರ. ಇವರು ಶಬರಿಮತಿ ಆಶ್ರಮದಿಂದ ದಂಡಿಯವರೆಗೂ ಯಾತ್ರೆಯಲ್ಲಿ ಭಾಗವಹಿಸಿದ ಮಹನೀಯರು.

    ದಂಡಿಯಾತ್ರೆಯ ಯಶಸ್ಸನ್ನು ಗಮನಿಸಿದ ಕರ್ನಾಟಕ ರಾಜ್ಯದ ಹೋರಾಟಗಾರರು ರಾಜ್ಯದಲ್ಲೂ ಸಹ ಅದೇ ಮಾದರಿಯಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಹಮ್ಮಿಕೊಳ‍್ಳಲು ನಿರ್ದರಿಸಿದರು. ಇದರ ಬಗ್ಗೆ ಚರ್ಚಿಸಲು ಧಾರವಾಡದಲ್ಲಿ ಸಭೆಯನ್ನು ಕರೆಯಲಾಯಿತು. ಸಭೆಯಲ್ಲಿ ಆರ್.ಆರ್.ದಿವಾಕರ್, ಕಾರ್ನಾಡ್ ಸದಾಶಿವರಾಯರು ಮತ್ತು ಹನುಮಂತ ರಾವ್ ಕೌಜಲಗಿ ಇವರುಗಳನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಗೆ ಉಪ್ಪಿನ ಸತ್ಯಾಗ್ರಹವನ್ನು ನಡೆಸಲು ಸ‍್ಥಳವನ್ನು ಆಯ್ಕೆ ಮಾಡುವಂತೆ ಸೂಚಿಸಲಾಯಿತು. ಅದರಂತೆ ಈ ಸಮಿತಿಯು ಉತ್ತರ ಕನ್ನಡ ಜಿಲ್ಲೆಯ ಅರೇಬಿಯನ್ ಸಮುದ್ರ ತೀರದಲ್ಲಿರುವ ಅಂಕೋಲಾ ಪಟ್ಟಣವನ್ನು ಆಯ್ಕೆ ಮಾಡಿತು. ಅದರಂತೆ 1930 ಏಪ್ರಿಲ್ 13 ರಂದು ಶ್ರೀ ಎಂ. ಪಿ. ನಡಕರ್ಣಿಯವರ ನೇತೃತ್ವದಲ್ಲಿ ಅಂಕೋಲದ ಸಮೀಪದಲ್ಲಿರುವ ಪೂಜಿಗೇರಿ ಎಂಬ ಸ‍್ಥಳದಲ್ಲಿ ಸುಮಾರು ನಲವತ್ತು ಸಾವಿರ ಜನರು ಉಪ್ಪನ್ನು ತಯಾರಿಸುವ ಮೂಲಕ ಬ್ರಿಟಿಷರ ಕಾನೂನನ್ನು ಭಂಗ ಮಾಡಿದರು. ಎನ್. ಎಸ್. ಹರ್ಡಿಕರ್, ಗೋವಿಂದ ನಾಯಕ ಮತ್ತು ಇನ್ನಿತರ ಪ್ರಮುಖರು ಚಳವಳಿಯಲ್ಲಿ ಭಾಗವಹಿಸಿದ್ದರು. ಗ್ರಾಮಸ‍್ಥರು ಮಣ್ಣಿನ ಮಡಕೆಗಳಲ್ಲಿ ಸಮುದ್ರದ ತೀರದಿಂದ ಉಪ್ಪನ್ನು ತಂದು ಪಟ್ಟಣದ ಬೀದಿಗಳಲ್ಲಿ ಯಾವುದೇ ರೀತಿಯಾದಂತಹ ತೆರಿಗೆಯನ್ನು ನೀಡದೆ ಮಾರಾಟ ಮಾಡಿದರು. ಈ ಚಳುವಳಿಯ ಮುಂದಾಳತ್ವವನ್ನು ವಹಿಸಿದ್ದ ನಾಯಕರುಗಳನ್ನು ಬಂಧಿಸಿದರೂ ಸಹ, ಗ್ರಾಮಸ‍್ಥರು ಆರು ವಾರಗಳ ಕಾಲ ಈ ಚಳವಳಿಯನ್ನು ಮುಂದುವರಿಸಿದರು ಎಂದು ದಾಖಲಾಗಿದೆ.

    ಶಿವಪುರದ  ಧ್ವಜ ಸತ್ಯಾಗ್ರಹ

     ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜವನ್ನು ( ಕೇಸರಿ, ಬಿಳಿ, ಹಾಗೂ ಹಸಿರು ಬಣ‍್ಣದ ಪಟ್ಟೆಗಳ ಮಧ್ಯೆ ಚರಕವನ್ನು ಹೊಂದಿದಂತೆ ) ಹಾರಿಸದಂತೆ ಬ್ರಟಿಷ್ ಸರ್ಕಾರವು ಆದೇಶವನ್ನು ಹೊರಡಿಸಿತ್ತು. ನಾಗರಿಕ ಸ್ವಾತಂತ್ರ್ಯದ  ಬಗ್ಗೆ ನಿರ್ಬಂಧನೆಗಳನ್ನು ಹೇರಿದ   ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ತ್ರಿವರ್ಣ ಧ್ವಜವನ್ನು ಹಾರಿಸುವುದೇ ಹೋರಾಟಗಾರರ ಸಾಮಾನ್ಯ ನಡವಳಿಕೆಯಾಗಿತ್ತು. ಈ ಚಳವಳಿಯಲ್ಲಿ ಜನರು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು.

    1923 ರಲ್ಲಿ ನಾಗಪುರ ಮತ್ತು ಜಬ್ಬಲ ಪುರಗಳಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು. ಈ ಎರಡು ಘಟನೆಗಳನ್ನು ಹೊರತುಪಡಿಸಿ, 1938 ರಲ್ಲಿ ನಮ್ಮ ರಾಜ್ಯದ ಶಿವಪುರ ಮತ್ತು ವಿದುರಾಷ್ವತಗಳಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು. ಈಗಿನ ಮಂಡ್ಯ ಜಿಲ್ಲೆಯ ಮದ್ದೂರಿನ ಸಮೀಪದಲ್ಲಿರುವ ಶಿವಪುರದಲ್ಲಿ 1938 ರಲ್ಲಿ ಮೈಸೂರು ಕ್ರಾಂಗ್ರೆಸ್ಸಿನ ಮೊದಲ ಸಮ್ಮೇಳನವು ನಡೆಯಿತು. ಈ ಸಮ್ಮೇಳನದಲ್ಲಿ ತಿರುಮಲೇಗೌಡರ ಜಮೀನಿನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದರ ಮೂಲಕ ಧ್ವಜ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಲಾಯಿತು. ಧ್ವಜ ಸತ್ಯಾಗ್ರಹವನ್ನು ನಡೆಸದಂತೆ ಆಗಿನ ಜಿಲ್ಲಾಧಿಕಾರಿಯು ಹೋರಾಟಗಾರರಿಗೆ ಎಚ್ಚರಿಕೆಯನ್ನು ನೀಡಿದರು. ತ್ರಿವರ್ಣ ಧ್ವಜದ ಬದಲು ಮೈಸೂರು ಅರಸರ ಒಡೆಯರ್ ರಾಜ ಸಂತತಿಯ ರಾಜ ಲಾಂಛನವಾದ ಗಂಡಭೇರುಂಡವನ್ನು ಹೊಂದಿರುವ ಧ್ವಜವನ್ನು ಹಾರಿಸುವಂತೆ ಜಿಲ್ಲಾಧಿಕಾರಿಯು ಸೂಚಿಸಿದರು. 1938 ರ ಏಪ್ರಿಲ್ 9 ರಂದು ಎರಡೂ ಧ್ವಜಗಳನ್ನು ಹಾರಿಸುವಂತೆ ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾದಂತಹ ಟಿ. ಸಿದ‍್ಧಲಿಂಗಯ್ಯನವರಿಗೆ ಸೂಚಿಸಲಾಗಿತ್ತು. ಮಹಿಳೆಯರು ಸೇರಿದಂತೆ ತಿರುಮಲೇಗೌಡರ ಜಮೀನಿನಲ್ಲಿ ಸುಮಾರು ಹತ್ತು ಸಾವಿರ ಜನ ಈ ಸಮಾರಂಭದಲ್ಲಿ ಭಾಗವಹಿಸಲು ಸೇರಿದ್ದರು. ಅರವತ್ತು ಅಡಿ ಎತ್ತರದ ಅಡಿಕೆ ಮರವನ್ನು ಧ್ವಜ ಸ‍್ಥಂಭವಾಗಿ ಉಪಯೋಗಿಸಲಾಗಿತ್ತು. ಈ ಧ್ವಜ ಸ‍್ಥಂಭವನ್ನು ರಕ್ಷಿಸಲು ಮೂವತ್ತು ಮಹಿಳೆಯರು ಸುತ್ತ ನಿಂತಿದ್ದರು. ಸಿದ್ಧಲಿಂಗಯ್ಯನವರು ತ್ರಿವರ್ಣ ಧ್ವಜವನ್ನು ಇನ್ನೇನು ಹಾರಿಸಬೇಕು ಎನ್ನುವಷ್ಟರಲ್ಲಿ ಪೊಲೀಸರು ಅವರನ್ನು ಬಂಧಿಸಿದರು. ಅವರ ಪಕ್ಕದಲ್ಲೇ ನಿಂತಿದ್ದ ಮತ್ತೊಬ್ಬ ನಾಯಕರಾದಂತಹ ಎಂ. ಎನ್. ಜೋಯಿಷ್ ರವರು ದಾರವನ್ನು ಎಳೆಯುವುದರ ಮೂಲಕ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಮೂಲಕ ಕಾರ್ಯಕ್ರಮದ ಉದ್ದೇಶವನ್ನು ಈಡೇರಿಸಿದರು. ಅಲ್ಲಿದ್ದ ಎಲ್ಲ ನಾಯಕರುಗಳನ್ನು ಬ್ರಿಟಿಷರು ಬಂಧಿಸಿ, ಸೆರೆ ಮನೆಗೆ ಕಳುಹಿಸಿದರು. ಆದರೂ ಈ ಧ್ವಜ ಸತ್ಯಾಗ್ರಹ ಹಲವಾರು ದಿನಗಳು ಯಶಸ್ವಿಯಾಗಿ ನಡೆದು ಅಕ್ಕ ಪಕ್ಕದ ಊರು ಮತ್ತು ಜಿಲ್ಲೆಗಳಿಂದ ಸಾವಿರಾರು ನಾಗರಿಕರು ಶಿವಪುರಕ್ಕೆ ಆಗಮಿಸಿ ಹಾರಾಡುತ್ತಿರುವ ಧ್ವಜವನ್ನು ಕಣ್ತುಂಬ ನೋಡಿ ಆನಂದಿಸಿದರು. ಈ ಘಟನೆಯು ಶಿವಪುರ ಧ್ವಜ ಸತ್ಯಾಗ್ರಹ ಎಂದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು ಮುತುವರ್ಜಿ ವಹಿಸಿದ ಕಾರಣ, ಈ ಸತ್ಯಾಗ್ರಹದ ಸ್ಮರಣಾರ್ಥವಾಗಿ ಶಿವಪುರದಲ್ಲಿ ಸತ್ಯಾಗ್ರಹ ಸೌಧವನ್ನು ನಿರ್ಮಿಸಲಾಗಿದೆ. ದುರದೃಷ್ಟವಸಾತ್ ಈ ಸೌಧದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲವೆಂಬ ದೂರುಗಳು  ಕೇಳಿ ಬರುತ್ತಿವೆ. ಸರ್ಕಾರವು ಸೂಕ್ತ ಕ್ರಮವನ್ನು ಕೈಗೊಳ‍್ಳುತ್ತದೆಂದು ಆಶಿಸೋಣ.

    ಈಸೂರು ಚಳುವಳಿ

    ಈಸೂರು ದಂಗೆ – ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಸ್ವಯಂ ಘೋಷಿಸಿದ ಏಕೈಕ ಗ್ರಾಮ

     ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದಲ್ಲಿ ನಮಗೆ ಹಲವಾರು ಕುತೂಹಲಕಾರಿ ವಿಷಯಗಳು ತಿಳಿಯುತ್ತವೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಬ್ರಿಟಿಷರ ಆಳ್ವಿಕೆಗೆ ಸೆಡ್ಡು ಹೊಡೆದು, ತಮ್ಮ ಗ್ರಾಮವು ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವನ್ನು ಪಡೆದಿದೆ ಎಂದು ಘೋಷಣೆ ಮಾಡಿದ ಏಕೈಕ ಗ್ರಾಮ ಈಸೂರು. ಈ ಘಟನೆಯು ಬ್ರಿಟಿಷರಿಗೆ ಆತಂಕವನ್ನುಂಟುಮಾಡಿತು. ಇದರಿಂದ ದಿಕ್ಕು ತೋಚದೆ ಬ್ರಿಟಿಷರು ಕಂಗಾಲಾದರು.

    ಈಸೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಚಿಕ್ಕ ಗ್ರಾಮ. ಶಿವಮೊಗ್ಗದಿಂದ ಸುಮಾರು ಐವತ್ತು ಕಿ. ಮೀ ದೂರದಲ್ಲಿದೆ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳಲ್ಲಿ ಈಸೂರು ಗ್ರಾಮ ಅಚ್ಚ ಅಳಿಯದೆ ಉಳಿದಿದೆ. “ಭಾರತ ಬಿಟ್ಟು ತೊಲಗಿ” ಚಳುವಳಿಯು ನಡೆದ ನಂತರ 1942 ರಲ್ಲಿ, ಈಸೂರು ಗ್ರಾಮಸ್ಥರು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಿದ್ದೇವೆ ಎಂದು ಘೋಷಿಸಿ, ಸಮಾನಾಂತರ ಸರ್ಕಾರವನ್ನು ನಡೆಸಿ, ಚರಿತ್ರೆಯನ್ನು ಸೃಷ್ಟಿಸಿದರು. ನೈಸರ್ಗಿಕ ವಿಪತ್ತಿನ ಕಾರಣದಿಂದಾಗಿ, ರೈತರು ಅಪಾರ ನಷ್ಟವನ್ನು ಅನುಭವಿಸಿದ ಹಿನ್ನಲೆಯಲ್ಲಿ, ಭೂ ಕಂದಾಯವನ್ನು ಕಟ್ಟಲು ನಿರಾಕರಿಸಿದರು. ಬ್ರಿಟಿಷರ ಬೆದರಿಸುವ ತಂತ್ರಗಳಿಗೆ ಸೊಪ್ಪು ಹಾಕದೆ, ಅವರ ವಿರುದ್ಧ ಧೈರ್ಯವಾಗಿ ಹಾಗೂ ಆತ್ಮ ವಿಶ್ವಾಸದಿಂದ ಹೋರಾಡಿದರು. ಕಡತಗಳಿಗೆ ಬೆಂಕಿ ಹಾಕಿ ಸುಟ್ಟರು. ಬ್ರಿಟಿಷ್ ಅಧಿಕಾರಿಗಳು ಯಾರೂ ಗ್ರಾಮವನ್ನು ಪ್ರವೇಶಿಸದಂತೆ ನಿರ್ಬಂಧವನ್ನು ಹೇರಿದರು.

    ಬ್ರಿಟಿಷ್ ಪೊಲೀಸರು ಗ್ರಾಮವನ್ನು ಪ್ರವೇಶಿಸದಂತೆ ಎಲ್ಲಾ ದಾರಿಗಳಿಗೆ ಬೇಲಿಯನ್ನು ಹಾಕಿದರು. ಸೆಪ್ಟೆಂಬರ್ 29, 1942 ರಂದು ವೀರಭದ್ರೇಶ್ವರ ದೇವಸ್ಥಾನದ ಶಿಖರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಗ್ರಾಮದ ಪ್ರವೇಶ ದ್ವಾರದಲ್ಲಿ, “ಸ್ವರಾಜ್ ಸರ್ಕಾರ” ಎಂಬ ಫಲಕವನ್ನು ನೆಟ್ಟರು. ಬ್ರಿಟಿಷ್ ಪೊಲೀಸರು ಗ್ರಾಮವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಗ್ರಾಮಸ್ಥರು ವಿರೋಧಿಸಿದರು. ಇದರಿಂದ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆಯಾಗಿ, ಗ್ರಾಮಸ್ಥರನ್ನು ಪೊಲೀಸರು ಸಿಕ್ಕಾಪಟ್ಟೆ ಹೊಡೆದರು. ಈ ಘರ್ಷಣೆಯಲ್ಲಿ ಇಬ್ಬರು ಕಂದಾಯ ಇಲಾಖೆಯ ಅಧಿಕಾರಿಗಳು ಪ್ರಾಣವನ್ನು ಕಳೆದುಕೊಂಡರು ಮತ್ತು ನೂರಾರು ಗ್ರಾಮಸ್ಥರು ಗಾಯಗೊಂಡರು. ಈ ದಂಗೆಯು ಗ್ರಾಮದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿತು. ಗ್ರಾಮದ ನೂರಾರು ಜನರನ್ನು ಪೊಲೀಸರು ಬಂಧಿಸಿದರು ಮತ್ತು ಐದು ಯುವಕರನ್ನು ಗಲ್ಲಿಗೇರಿಸಿದರು. ಬಂಧಿಸಿದ ಎಲ್ಲರಿಗೂ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು. ಗ್ರಾಮದ ಮೇಲೆ ಬ್ರಿಟಿಷರಿಂದ  ನಡೆಯಬಹುದಾದಂತ ಆಕ್ರಮಣವನ್ನರಿತ ಗ್ರಾಮಸ್ಥರು ಸಮೀಪದ ಕಾಡಿನಲ್ಲಿ ಅವಿತುಕೊಂಡರು. ಆದರೆ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಗ್ರಾಮದಲ್ಲಿಯೇ ಉಳಿದುಕೊಂಡರು. ಇದನ್ನರಿತ ಬ್ರಿಟಿಷ್ ಪೊಲೀಸರು ಗ್ರಾಮಕ್ಕೆ ಪ್ರವೇಶಿಸಿ, ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲೆ ನಿರ್ದಾಕ್ಷಿಣ್ಯವಾಗಿ ಹಿಂಸಾತ್ಮಕ ದಾಳಿ ನಡೆಸಿ, ಬೆದರಿಸಿ ಗಾಯಗೊಳಿಸಿದರು. ಸ್ವಾತಂತ್ರ್ಯ ಬಂದ ನಂತರ, ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಅವರಿಗೆ ಅದ್ದೂರಿ ಸ್ವಾಗತವನ್ನು ನೀಡಿ ಗ್ರಾಮಕ್ಕೆ ಬರ ಮಾಡಿಕೊಳ್ಳಲಾಯಿತು. 

    ಹಲಗಲಿ ಬೇಡರ ದಂಗೆ (1857)

    ಹಲಗಲಿ ಇಂದಿನ ಬಾಗಲಕೋಟೆ ಜಿಲ್ಲೆಯ (ಹಿಂದಿನ ಬಿಜಾಪುರ ಜಿಲ್ಲೆ) ಮುಧೋಳ ತಾಲ್ಲೂಕಿನಲ್ಲಿರುವ ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿ ಹೆಚ್ಚಿನ ಜನ ಬೇಡ ಜನಾಂಗಕ್ಕೆ ಸೇರಿದವರಾಗಿದ್ದರು. ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡುವುದು ಮತ್ತು ಅರಣ್ಯದಲ್ಲಿ ಸಿಗಬಹುದಾದ ಪದಾರ್ಥಗಳನ್ನು ಮಾರಿ ಜೀವನ ನಡೆಸುತ್ತಿದ್ದರು. ಇವರ ಕಸುಬಿಗೆ ಅಗತ್ಯವಾದ ಬಿಲ್ಲು ಬಾಣ, ಕತ್ತಿ, ಕೊಡಲಿ ಮುಂತಾದ ಆಯುಧಗಳು ಸದಾ ಇವರ ಬಳಿ ಇರುತ್ತಿದ್ದವು. ಕಡಿಮೆ ಮಳೆಯಿಂದಾಗಿ ಬರಗಾಲ ಬಂದಾಗ, ದರೋಡೆ ಮಾಡುತ್ತಿದ್ದರೆಂಬ ಆಧಾರವಿಲ್ಲದ ವಿಷಯ ಸಾಮಾನ್ಯರಲ್ಲಿ ಮತ್ತು ಸರ್ಕಾರದಲ್ಲಿ ಹರಿದಾಡುತ್ತಿತ್ತು. ಇದನ್ನು ತಿಳಿದ ಬ್ರಿಟಿಷ್ ಸರ್ಕಾರ ಬೇಡ ಜನಾಂಗದವರೆಲ್ಲರೂ ಕೂಡಲೇ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಆದೇಶವನ್ನು ಮಾಡಿತು. ಆದೇಶದ ಪ್ರಕಾರ ಭಾರತೀಯರು ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಆಯುಧಗಳನ್ನು, ಪಿಸ್ತೂಲ್ ಗಳನ್ನು ಹೊಂದುವಂತಿಲ್ಲ ಮತ್ತು ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಆಜ್ಞಾಪಿಸಲಾಯಿತು. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಆಯುಧಗಳು ಅತ್ಯಗತ್ಯ. ಆದ್ದರಿಂದ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಲು ಸಾಧ್ಯವಿಲ್ಲವೆಂದು ಬೇಡ ಜನಾಂಗದವರು ಆಜ್ಞೆಯನ್ನು ಪಾಲಿಸಲು ನಿರಾಕರಿಸಿದರು. ಈ ನಿರಾಕರಣೆ ಬ್ರಿಟಿಷರ ಕೋಪಕ್ಕೆ ಕಾರಣವಾಯಿತು. 1857 ರ ನವೆಂಬರ್ 29 ರಂದು, ಹಲಗಲಿ ಗ್ರಾಮಕ್ಕೆ ಬ್ರಿಟಿಷರ ಪೊಲೀಸರು ಆಕ್ರಮಣ ಮಾಡಿ, ಬೆಂಕಿ ಹಚ್ಚಿ, ನೂರಾರು ಬೇಡ ಜನಾಂಗದವರನ್ನುಬಂಧಿಸಿ ಜೈಲಿಗೆ ಕಳುಹಿಸಿದರು. ಹಲವಾರು ಜನರನ್ನು ಗುಂಡಿಕ್ಕಿ ಸಾಯಿಸಲಾಯಿತು. ಸುಮಾರು ಇಪ್ಪತ್ತು ಬೇಡರನ್ನು ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸಲಾಯಿತು. ಬ್ರಿಟಿಷರ ವಿರುದ್ಧ ಧೈರ್ಯದಿಂದ ಪ್ರತಿಭಟಿಸಿ, ಸ್ವಾತಂತ್ರ್ಯದ ಕಿಚ್ಚನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಹಚ್ಚಿದ ಬೇಡ ಜನಾಂಗದ ನಾಗರೀಕರು ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನವನ್ನುಪಡೆದಿದ್ದಾರೆ. ಹಲಗಲಿ ಬೇಡ ಜನಾಂಗದವರು ತೋರಿಸಿದ ಸ್ವಾಭಿಮಾನ ಮತ್ತು ಅವರ ಬಲಿದಾನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸಮಂಜಸ ಮತ್ತು ನಮ್ಮ ಆದ್ಯ ಕರ್ತವ್ಯ. ಈ ಘಟನೆಗಳಲ್ಲಿ ಭಾಗವಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ದೇಶ ಪ್ರೇಮ, ತ್ಯಾಗ ಮತ್ತು ನಿಸ್ವಾರ್ಥ ದೇಶ ಸೇವೆಯನ್ನು ಅನುಕರಣೆ ಮಾಡಿ, ಮುಂದಿನ ಪೀಳಿಗೆಗೆ ನಾವೆಲ್ಲರೂ ಆದರ್ಶ ವ್ಯಕ್ತಿಗಳಾಗೋಣ. 

    ಜೈ ಭುವನೇಶ್ವರಿ, ಜೈ ಭಾರತಾಂಬೆ.

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ.
    spot_img

    More articles

    3 COMMENTS

    1. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಭೌತಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಬಿ. ಎಸ್. ಶ್ರೀಕಂಠ ಸರ್ ರವರು ಇತಿಹಾಸದ ವಿಷಯದಲ್ಲಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು ಬಡವ – ಬಲ್ಲಿದ ಎನ್ನುವ ಭೇದ-ಭಾವವಿಲ್ಲದೆ ತಮ್ಮ ಜಾತಿ – ಮತವನ್ನು ಗಮನಿಸದೇ, ತಮ್ಮ ತನು ಮನ ಧನವನ್ನು ತ್ಯಾಗ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ಬರಲು ಹೋರಾಡಿದ ಕರ್ನಾಟಕದ ಪ್ರಮುಖ ಘಟನೆಗಳನ್ನು ಈ ಲೇಖನದಲ್ಲಿ ಅನಾವರಣಗೊಳಿಸಿದ್ದಾರೆ. ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಲೇಖನ ಬರೆದ ಸಿಂಧಿ ಕಾಲೇಜಿನ ನಿರ್ದೇಶಕರಾದ ಡಾಕ್ಟರ್ ಬಿ ಎಸ್ ಶ್ರೀಕಂಠ ಸರ್ ಅವರಿಗೆ ಧನ್ಯವಾದಗಳು.

    2. ಚೆನ್ನಮ್ಮಾಳ ಹೋರಾಟದ ಕಿಚ್ಚು , ಮೈಲಾರ ಮಹಾದೇವಯ್ಯನವರ ಸತತ ಹೋರಾಟ ಚಿರಸ್ಮರಣೀಯ . ಬರವಣಿಗೆ ಮಾಹಿತಿದಾಯಕವಾಗಿದೆ ಸರ್ ಅಭಿನಂದನೆ

    LEAVE A REPLY

    Please enter your comment!
    Please enter your name here

    Latest article

    error: Content is protected !!