28.8 C
Karnataka
Friday, May 10, 2024

    Indian Stock Market:ಷೇರುಪೇಟೆ ಚಟುವಟಿಕೆ ಹೂಡಿಕೆಯೋ, ಉಳಿತಾಯವೋ, ವ್ಯವಹಾರವೋ?

    Must read

    ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಷೇರುಪೇಟೆಯಲ್ಲಿನ ಏರಿಳಿತಗಳು ಗ್ರಾಹಕರಿಗೆ ಯಾವ ರೀತಿಯ ಚಟುವಟಿಕೆ ಸರಿ ಎಂಬುದನ್ನು ನಿರ್ಧರಿಸುವುದು ಗೊಂದಲಮಯವಾಗಿರಲೇಬೇಕು.ಕಾರಣ ಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳೂ ಸೇರಿ ಹೆಚ್ಚಿನ ಏರಿಳಿತಗಳನ್ನು, ಸೂಕ್ತ ಕಾರಣಗಳಿಲ್ಲದೆಯೂ ಪ್ರದರ್ಶಿಸುತ್ತಿರುವುದಾಗಿದೆ. ಕೆಲವು ಬೆಳವಣಿಗೆಗಳನ್ನು ತಿಳಿಯೋಣ ಆಗ ಪರಿಸ್ಥಿತಿಯನ್ನರಿಯಲು ಸಾಧ್ಯವಾಗುತ್ತದೆ.

    ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಹೆಗ್ಗುರುತಾದ ಸಂವೇದಿ ಸೂಚ್ಯಂಕ (Sensex) ಅಕ್ಟೋಬರ್‌ ತಿಂಗಳಿನಲ್ಲಿ 62,245 ಪಾಯಿಂಟುಗಳಿಗೆ ತಲುಪಿ ಸರ್ವಕಾಲೀನ ಗರಿಷ್ಠದ ದಾಖಲೆ ಸ್ಥಾಪಿಸಿತು.
    ಅಂದು ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.271.42 ಲಕ್ಷ ಕೋಟಿಯಲ್ಲಿತ್ತು. ನಂತರದಲ್ಲಿ ಮೇ ತಿಂಗಳ ಮಧ್ಯಂತರದಲ್ಲಿ 52,800 ರ ಸಮೀಪಕ್ಕೆ ಕುಸಿದು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.241.34 ಲಕ್ಷ ಕೋಟಿಗೆ ಮೇ 12 ರಂದು ತಲುಪಿತು.
    ಅಲ್ಲಿಂದ ಸೆನ್ಸೆಕ್ಸ್‌ ಪುಟಿದೆದ್ದು ಮೇ ಅಂತ್ಯದಲ್ಲಿ 56,000 ಪಾಯಿಂಟುಗಳ ಸಮೀಪಕ್ಕೆ ಏರಿಕೆ ಕಂಡಿತು. ಜೊತೆಗೆ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.258 ಲಕ್ಷ ಕೋಟೆ ಮೀರಿತು.
    ಜೂನ್‌ ತಿಂಗಳ 17 ರಂದು ಮಧ್ಯಂತರದಲ್ಲಿ ಸೆನ್ಸೆಕ್ಸ್‌ 50,921 ನ್ನು ತಲುಪಿ ವಾರ್ಷಿಕ ಕನಿಷ್ಠದ ದಾಖಲೆ ಬರೆಯಿತು. ಅಂದಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.239.18 ಲಕ್ಷ ಕೋಟಿಗೆ ಕುಸಿದಿತ್ತು. ಆದರೆ ಜುಲೈ ತಿಂಗಳ ಅಂತ್ಯದಲ್ಲಿ ಸೆನ್ಸೆಕ್ಸ್‌ 57,570 ಪಾಯಿಂಟುಗಳೊಂದಿಗೆ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.266.58 ಲಕ್ಷ ಕೋಟಿಗೆ ಜಿಗಿದಿದೆ. ಅಂದರೆ ಮೇ ತಿಂಗಳ ಆರಂಭದಲ್ಲಿ 57,000 ಪಾಯಿಂಟುಗಳಲ್ಲಿದ್ದುದು ಜೂನ್‌ ತಿಂಗಳ ಮಧ್ಯಂತರದಲ್ಲಿ 50,921 ಪಾಯಿಂಟುಗಳಿಗೆ ಕುಸಿದು ಮತ್ತೆ ಜುಲೈ ಅಂತ್ಯಕ್ಕೆ 57 ಸಾವಿರದ ಗಡಿ ದಾಟಿರುವುದು ಹೂಡಿಕೆಯೆನಿಸದು. ಇದು ಒಂದು ರೀತಿಯ ವ್ಯವಹಾರಿಕತೆಗೆ ಪುಷ್ಠಿ ನೀಡುವಂತಹುದಾಗಿದೆ. ಇಂತಹ ವಾತಾವರಣದಲ್ಲಿ ಅನೇಕ ಕಂಪನಿಗಳ ಷೇರಿನ ಬೆಲೆ ಚಲನೆಗಳನ್ನು ಹೆಸರಿಸಬಹುದು.

    ಜಿ ಎಂ ಎಂ ಫೌಡ್ಲರ್ ಲಿಮಿಟೆಡ್:

    ಈ ಕಂಪನಿಯು ಈ ತಿಂಗಳ 10 ರಂದು ಪ್ರತಿ ಷೇರಿಗೆ ಎರಡರಂತೆ 2:1 ರ ಅನುಪಾತದಲ್ಲಿ ಬೋನಸ್‌ ಷೇರನ್ನು ವಿತರಿಸಿತು. ಆಗ ಷೇರಿನ ಬೆಲೆಯು ರೂ.4,200 ರ ಸಮೀಪದಲ್ಲಿದ್ದು, ಬೋನಸ್‌ ಷೇರು ವಿತರಣೆಯ ನಂತರೆ ಷೇರಿನ ಬೆಲೆ ಕುಸಿಯುತ್ತಾ 28 ರಂದು ರೂ.1,336 ರ ವರೆಗೂ ಇಳಿಯಿತು. 29 ನೇ ಶುಕ್ರವಾರದಂದು ಷೇರಿನ ಬೆಲೆ ರೂ.1,428 ರ ಸಮೀಪದಿಂದ ರೂ.1,611 ರವರೆಗೂ ಏರಿಕೆ ಕಂಡು ಅಂತ್ಯದಲ್ಲಿ ರೂ.1,599 ರ ಸಮೀಪ ಕೊನೆಗೊಂಡಿದೆ. ಈ ಷೇರಿನ ವಹಿವಾಟು ಈ ತಿಂಗಳ 15 ರಿಂದಲೂ ಸುಮಾರು ಶೇ.50 ಕ್ಕೂ ಹೆಚ್ಚಿನ ವಿಲೇವಾರಿ ಆಧರಿತ ಚುಕ್ತಾ ಚಟುವಟಿಕೆಯಾಗಿದ್ದು, ಶುಕ್ರವಾರದಂದು ಷೇರಿನ ಬೆಲೆ ಶೇ.20 ರಷ್ಟು ಏರಿಕೆ ಕಂಡ ಕಾರಣ ಮಾರಾಟದ ಪ್ರಮಾಣದೊಂದಿಗೆ ವಿಲೇವಾರಿ ಆಧರಿತ ಚುಕ್ತಾ ವಹಿವಾಟು ಕ್ಷೀಣಿತವಾಗಿದ್ದು, ದೈನಂದಿನ ಚುಕ್ತಾ ಚಟುವಟಿಕೆ ಹೆಚ್ಚಾಗಿದೆ. ಅಂದರೆ ಒಂದೇ ದಿನ ಭಾರಿ ಪ್ರಮಾಣದ ಏರಿಳಿತದ ಕಾರಣ ಡೇ ಟ್ರೇಡಿಂಗ್‌ ಹೆಚ್ಚಾಗಿದೆ. ಇದನ್ನು ಅಂದು ನಡದ ವಹಿವಾಟಿನ ಗಾತ್ರವೂ ಪುಷ್ಠೀಕರಿಸುತ್ತದೆ. ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ 28 ರಂದು ವಹಿವಾಟಾದ ಷೇರುಗಳ ಸಂಖ್ಯೆಗಿಂತ 29 ರಂದು ನಡೆದ ಚಟುವಟಿಕೆಗಳಲ್ಲಿ8 ಪಟ್ಟು ಹೆಚ್ಷಾಗಿದೆ. ಆದರೆ NSE ಯಲ್ಲಿ 28ರಂದು 88 ಸಾವಿರ ಷೇರುಗಳು ವಹಿವಾಟಾದರೆ, 29 ರಂದು 15 ಲಕ್ಷ 94 ಸಾವಿರ ಷೇರುಗಳು ವಹಿವಾಟಾಗಿವೆ. ಅಂದರೆ ಆ ದಿನ ಡೇ ಟ್ರೇಡಿಂಗ್‌ ನೊಂದಿಗೆ ಪ್ರಾಫಿಟ್‌ ಬುಕಿಂಗ್‌ ಆಗಿರಲೂ ಸಾಧ್ಯವಿದೆ.

    ತಾನ್ಲಾ ಪ್ಲಾಟ್‌ ಫಾರ್ಮ್ಸ್‌ ಲಿಮಿಟೆಡ್‌ :

    ಐ ಟಿ ವಲಯದ ಈ ಕಂಪನಿ ಜೂನ್‌ ತ್ರೈಮಾಸಿಕದ ಸಾಧನೆಯು ಅಷ್ಠು ಪರಿಣಾಮಕಾರಿಯಾಗಿರದೆ ಇದ್ದ ಕಾರಣ ಷೇರಿನ ಬೆಲೆ ಒಂದೇ ವಾರದಲ್ಲಿ ಅಂದರೆ ಜುಲೈ 22 ರಂದು ಒಂದು ಸಾವರ ರೂಪಾಯಿಗಳ ಸಮೀಪವಿದ್ದು, ನಂತರದ ಒಂದು ವಾರದಲ್ಲಿ ಅಂದರೆ ಗುರುವಾರ 28 ರಂದು ರೂ.585 ರ ಕನಿಷ್ಠ ಬೆಲೆಗೆ ಕುಸಿದು ಅಂದು ಕೆಳ ಆವರಣಮಿತಿಯಲ್ಲಿ ಲಾಕ್‌ ಆಗಿತ್ತು. ಆದರೆ ನಂತರದ 29 ರಂದು ಷೇರಿನ ಬೆಲೆ ಪುಟಿದೆದ್ದು ರೂ.699 ರವರೆಗೂ ಏರಿಕೆ ಕಂಡು ರೂ.694 ರ ಸಮೀಪ ಕೊನೆಗೊಂಡಿದೆ. ಈ ಬದಲಾವಣೆಗೆ ಪೂರಕವಾದ ಅಂಶ ಎಂದರೆ ಕಂಪನಿಯ ಆಡಳಿತ ಮಂಡಳಿಯು 4 ರಂದು ಸಭೆ ಸೇರಲಿದೆ. ಅಂದು ಕಂಪನಿಯು ತನ್ನ ಲಾಭಾಂಶ ನೀತಿಯನ್ನು ಪರಿಶೀಲಿಸಲಿದೆ ಮತ್ತು ಮಧ್ಯಂತರ ಲಾಭಾಂಶ ಪ್ರಕಟಿಸುವ ಬಗ್ಗೆಯೂ ನಿರ್ಧರಿಸಲಿದೆ. ಆಗಸ್ಟ್‌ 18 ರಿಂದ ಪ್ರತಿ ಷೇರಿಗೆ ರೂ.2 ರಂತೆ ವಿತರಿಸಲಿರುವ ಲಾಭಾಂಶ ರಹಿತ ವಹಿವಾಟು ಆರಂಭವಾಗಲಿದೆ.

    ಎಸ್‌ ಬಿ ಐ ಕಾರ್ಡ್ಸ್‌ ಅಂಡ್‌ ಪೇಮೆಂಟ್ಸ್‌ ಸರ್ವಿಸಸ್‌ ಲಿಮಿಟೆಡ್ :

    ಈ ಕಂಪನಿಯ ಷೇರಿನ ಬೆಲೆ ಡಿಸೆಂಬರ್‌ ತಿಂಗಳಲ್ಲಿ ರೂ.1,000 ಕ್ಕೂ ಹೆಚ್ಚಿದ್ದು ನಂತರದಲ್ಲಿ ಪ್ರತಿ ತಿಂಗಳೂ ನಿರಂತರವಾಗಿ ಕುಸಿಯಿತು. ಜೂನ್‌ ತಿಂಗಳಲ್ಲಿ ರೂ.656 ರ ಸಮೀಪಕ್ಕೆ ಜಾರಿ ನಂತರ ಸ್ವಲ್ಪಮಟ್ಟಿನ ಮೌಲ್ಯಾಧಾರಿತ ಖರೀದಿಯ ಕಾರಣ ಗುರುವಾರದಂದು ಕಂಪನಿಯ ತ್ರೈಮಾಸಿಕ ಫಲಿತಾಂಶದ ಕಾರಣ ಸುಮಾರು ರೂ.54 ರಷ್ಟು ಏರಿಕೆಯನ್ನು ಕಂಡುಕೊಂಡಿತು. ಶುಕ್ರವಾರವೂ ಚುರುಕಾದ ಚಟುವಟಿಕೆಯಿಂದ ಮುನ್ನುಗ್ಗಿ ರೂ.968 ರವರೆಗೂ ಏರಿಕೆ ಕಂಡು ರೂ.937 ರ ಸಮೀಪ ಕೊನೆಗೊಂಡಿದೆ. ಈ ರೀತಿಯ ಅನಿರೀಕ್ಷಿತ ಮಟ್ಟದ ಏರಿಕೆಗೆ ಕೇವಲ ಕಂಪನಿಗಳ ಸಾಧನೆಯೊಂದೇ ಮುಖ್ಯವಲ್ಲ ಉತ್ತಮ ಕಂಪನಿಯಾಗಿದ್ದಲ್ಲಿ, ಅದು ಹಿಂದೆ ಕಂಡಿರುವ ಕುಸಿತದ ಪ್ರಮಾಣಕ್ಕನುಗುಣವಾಗಿ ಪುಟಿದೇಳುವ ಸಾಧ್ಯತೆಗಳು ಹೆಚ್ಚು. ಈ ರೀತಿಯ ಚೇತರಿಕೆಯ ಗರಿಷ್ಠ ಬೆಲೆಗಳು ಸ್ಥಿರತೆ ಕಾಣುವುದು ಸಹ ಬಹು ಅಪರೂಪ.

    ಸಿ ಎಲ್ ಎಸ್ ಎ ಸಂಸ್ಥೆಯು ಎಸ್ ಬಿ ಐ ಕಾರ್ಡ್ಸ್ ಅಂಡ್ ಪೇಮೆಂಟ್ ಸರ್ವಿಸಸ್ ಕಂಪನಿಯ ಷೇರಿಗೆ ʼ ಸೆಲ್ʼ ರೇಟಿಂಗ್ ಕೊಟ್ಟಿದೆ. ಸೋಜಿಗವೆಂದರೆ ಈ ಸುದ್ಧಿ ಹೊರಬಂದ ದಿನ ಷೇರಿನ ಬೆಲೆಯು ಸುಮಾರು 48 ರೂಪಾಯಿಗಳಷ್ಠು ಏರಿಕೆ ಕಂಡು ದಿನದ ಅಂತ್ಯದಲ್ಲಿ ರೂ.42 ರಷ್ಟರ ಏರಿಕೆಯಿಂದ ಕೊನೆಗೊಂಡಿದೆ. ಈ ಷೇರಿನ ಬೆಲೆ ರೂ.754 ರ ಸಮೀಪದಿಂದ ರೂ.937 ರವರೆಗೂ ಏರಿಕೆಯನ್ನು ಕೇವಲ ಒಂದು ತಿಂಗಳಲ್ಲಿ ಕಂಡಿದೆ. ಇಂತಹ ಏರಿಕೆಯ ಹಿನ್ನೆಲೆಯಲ್ಲಿ ಮಾರಾಟದ ರೇಟಿಂಗ್ ನೀಡಿರುವುದು ʼ ಪ್ರಾಫಿಟ್ ಬುಕ್ಕಿಂಗ್ʼ ಗೆ ಸೂಕ್ತವಾದ ಸಮಯವೆನ್ನಬಹುದು. ಆದರೆ ಕಂಪನಿಯು ಅಂದೇ ಪ್ರಕಟಿಸಿದ ತನ್ನ ತ್ರೈಮಾಸಿಕ ಫಲಿತಾಂಶವು ಪ್ರೋತ್ಸಾಹದಾಯಕವಾಗಿದ್ದಂತೆ ಕಂಡಿದ್ದು, ಈ ಸೆಲ್ ರೇಟಿಂಗ್ ಎಷ್ಟು ಪರಿಣಾಮಕಾರಿ ಎಂಬುದು ಸೋಜಿಗದ ಸಂಗತಿಯಾಗಿದೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ನೋವಾರ್ಟಿಸ್‌ ಇಂಡಿಯಾ ಲಿಮಿಟೆಡ್:

    ಫಾರ್ಮಾ ವಲಯದ ಈ ಕಂಪನಿ ಷೇರು 1983 ರಿಂದಲೂ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಆಗಿ ವಹಿವಾಟಾಗುತ್ತಿರುವ ಕಂಪನಿ. ಮಾರ್ಚ್‌ ತಿಂಗಳ ತ್ರೈಮಾಸಿಕದಲ್ಲಿ ಮತ್ತು ಹಿಂದಿನ ವರ್ಷ ಹಾನಿಗೊಳಗಾಗಿದ್ದ ಕಂಪನಿ, ಆದರೂ ಪ್ರತಿ ಷೇರಿಗೆ ರೂ.10 ರ ಲಾಭಾಂಶವನ್ನು ಘೋಷಿಸಿ ವಿತರಿಸಿದ ಕಂಪನಿ. ಮೇ ತಿಂಗಳ ಅಂತ್ಯದಲ್ಲಿ ರೂ.566 ರ ವಾರ್ಷಿಕ ಕನಿಷ್ಠ ಬೆಲೆಗೆ ಕುಸಿದಿತ್ತು. ಜುಲೈನಲ್ಲಿ ಲಾಭಾಂಶ ವಿತರಣೆಯ ನಂತರದಲ್ಲಿ ಕಂಪನಿ ಘೋಷಿಸಿದ ಸಕಾರಾತ್ಮಕ ತ್ರೈಮಾಸಿಕ ಫಲಿತಾಂಶ ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸುವಂತೆ ಮಾಡಿತು. ಬುಧವಾರದಂದು ರೂ.653 ರ ಸಮೀಪದಲ್ಲಿದ್ದಂತಹ ಷೇರಿನ ಬೆಲೆ ಗುರುವಾರದಂದು ಆರಂಭದಿಂದಲೇ ಏರಿಕೆ ಕಂಡು ರೂ.694 ರಿಂದ ರೂ.760 ರ ಗಡಿ ದಾಟಿತು. ವಾರಾಂತ್ಯದಲ್ಲಿ ರೂ.722 ರ ಸಮೀಪ ಕೊನೆಗೊಂಡಿದೆ.

    ಈ ರೀತಿಯ ಅಸಹಜ ಏರಿಳಿತಗಳನ್ನು ಅನೇಕ ಪ್ರಮುಖ ಕಂಪನಿಗಳಲ್ಲಿ ಅಂದರೆ ಎಸ್ಕಾರ್ಟ್ಸ್‌, ಟಾಟಾ ಸ್ಟೀಲ್‌, ಗ್ರಾಸಿಂ, ಜಿಎಂಎಂ ಫೌಡ್ಲರ್, ಡಿಕ್ಸನ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಟಿಸಿಎಸ್‌, ವೇದಾಂತ, ಹಿಂಡಲ್ಕೊ, ರಿಲಯನ್ಸ್‌ ಇಂಡಸ್ಟ್ರೀಸ್‌, ಡಾಕ್ಟರ್‌ ಲಾಲ್‌ ಪತ್‌ ಲ್ಯಾಬ್‌, ಬಾಟಾ ಇಂಡಿಯಾ, ದೀಪಕ್‌ ನೈಟ್ರೈಟ್‌, ಎಸ್‌ ಬಿ ಐ, ಕೆನರಾ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಹೆಚ್‌ ಡಿ ಎಫ್‌ ಸಿ, ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌, ಐ ಸಿ ಐ ಸಿ ಐ ಬ್ಯಾಂಕ್‌, ಕಾಲ್ಗೇಟ್‌, ಅಲ್ಟ್ರಾಟೆಕ್‌, ಏಶಿಯನ್‌ ಪೇಂಟ್ಸ್‌, ಬರ್ಜರ್‌ ಪೇಂಟ್ಸ್‌, ಲೌರಸ್‌ ಲ್ಯಾಬ್‌, ಚೆನ್ನೈ ಪೆಟ್ರೋ, ಟಾಟಾ ಮೋಟಾರ್ಸ್‌, ಐಟಿಸಿ, ಹಿಂದೂಸ್ಥಾನ್‌ಝಿಂಕ್‌, ಹೆಚ್‌ಎ ಎಲ್‌, ಟಾಟ ಕಮ್ಯುನಿಕೇಷನ್ಸ್‌ ನಂತಹ ಕಂಪನಿಗಳಲ್ಲಿಯೂ ಕಳೆದ ಒಂದು ವಾರದಲ್ಲಿ ಕಂಡುಬಂದಿದೆ. ಹಾಗಾಗಿ ಉತ್ತಮ ಅಗ್ರಮಾನ್ಯ ಕಂಪನಿಗಳು ಒದಗಿಸುವ ಅವಕಾಶಗಳು ಆಕರ್ಷಣೀಯವಾಗಿರುವಾಗ ಕಳಪೆ ಕಂಪನಿಗಳತ್ತ ಗಮನಹರಿಸುವ ಅವಶ್ಯಕತೆ ಇರದು.

    ಈ ರೀತಿಯ ಭಾರಿ ಏರಿಳಿತಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಪೇಟೆಯಲ್ಲಿ ಅತಿ ಹೆಚ್ಚು ಕಂಪನಿಗಳನ್ನು ಲೀಸ್ಟಿಂಗ್‌ ಮಾಡಿಕೊಂಡಿರುವ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಕಂಪನಿಗಳ ಸಂಖ್ಯೆ ಸ್ಥಿರವಾಗಿದ್ದು, ಚಟುವಟಿಕೆದಾರರ ಸಂಖ್ಯೆ ಅತಿ ಹೆಚ್ಚಾಗಿ ಬೆಳೆಯುತ್ತಿರುವ ಕಾರಣ ಬೇಡಿಕೆ ಹೆಚ್ಚುತ್ತಿದೆ. ಯಾವುದೇ ಒಂದು ಸಾಧನೆಯಾಧಾರಿತ ಕಂಪನಿಯ ಷೇರಿನ ಬೆಲೆ ಕುಸಿತ ಕಂಡಿದೆ ಎಂದರೆ ಅದಕ್ಕೆ ಅನಿರೀಕ್ಷಿತ ಮಟ್ಟದ ಬೇಡಿಕೆ ಬರುತ್ತಿದೆ. ವ್ಯಾಲ್ಯೂ ಪಿಕ್‌ – ಪ್ರಾಫಿಟ್‌ ಬುಕ್‌ ಚಟುವಟಿಕೆ ಮೂಲಕವಷ್ಠೇ ಸುರಕ್ಷತೆಯನ್ನು ಕಾಣಬಹುದಾಗಿದೆಯಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    1. ಷೇರುಪೇಟೆಯ ಬಗ್ಗೆ ಅತ್ಯುತ್ತಮ ಮಾಹಿತಿ ನೀಡುತ್ತಿರುವ ಕೆ.ಜಿ.ಕೃಪಾಲ್ ಅವರಿಗೆ ಧನ್ಯವಾದ.

    LEAVE A REPLY

    Please enter your comment!
    Please enter your name here

    Latest article

    error: Content is protected !!