25.7 C
Karnataka
Monday, May 20, 2024

    ಕರ್ನಾಟಕದ ಅತ್ಯಂತ ವಿಶಿಷ್ಟ ಶಿವಲಿಂಗಗಳು

    Must read

    ಕೆಂಗೇರಿ ಚಕ್ರಪಾಣಿ


    1 ಕರ್ನಾಟಕದ ಅತ್ಯಂತ ಪ್ರಾಚೀನ ಶಿವಲಿಂಗ ತಾಳಗುಂದದ ಪ್ರಣವೇಶ್ವರ


    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿರುವ ಶಿರಾಳಕೊಪ್ಪದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಅತ್ಯಂತ ಪ್ರಾಚೀನ ಅಗ್ರಹಾರ ತಾಳಗುಂದ. ಇಲ್ಲಿರುವ ಸ್ತಂಭ ಶಾಸನದಿಂದ ಕರ್ನಾಟಕದ ಪ್ರಥಮ ಚಕ್ರವರ್ತಿ ಮಯೂರವರ್ಮನ ಚರಿತ್ರೆ ದೊರೆಯುತ್ತದೆ. ತಾಳಗುಂದದಲ್ಲಿರುವ ಪ್ರಣವೇಶ್ವರ ಲಿಂಗವು ಸುಮಾರು 6 ಅಡಿ ಎತ್ತರವಿದ್ದು 5 ಅಡಿ ಅಗಲವಿರುವ ಬೃಹತ್ ಶಿವಲಿಂಗ. ಅತ್ಯಂತ ಪ್ರಾಚೀನ ಶಿವಲಿಂಗಗಳ ಲಕ್ಷಣವಿರುವ ಈ ಶಿವಲಿಂಗದ ಎದುರಿಗಿರುವ ಸ್ತಂಭಶಾಸನದಲ್ಲಿ ಸಾತಕರ್ಣಿಗಳಿಂದ ಪೂಜಿಸಲ್ಪಟ್ಟಂತಹ ಶಿವ ಎಂದು ಉಲ್ಲೇಖಿಸಲಾಗಿದೆ. ಸಾತಕರ್ಣಿ (ಶಾತವಾಹನರು) ಒಂದು ಅಥವಾ ಎರಡನೆಯ ಶತಮಾನದವರಾಗಿರುವುದರಿಂದ ಪ್ರಸ್ತುತ ಶಿವಲಿಂಗವು ಎರಡನೆಯ ಶತಮಾನಕ್ಕೆ ಸೇರಿದ್ದು ಕನ್ನಡನಾಡಿನ ಅತ್ಯಂತ ಪ್ರಾಚೀನ ಶಿವಲಿಂಗ ಎಂಬ ಕೀರ್ತಿಗೆ ಪಾತ್ರವಾಗಿದೆ.


    2 ಚಂದ್ರವಳ್ಳಿಯ ಧರ್ಮೇಶ್ವರ

    ಚಿತ್ರದುರ್ಗ ಜಿಲ್ಲೆ ಅದೇ ತಾಲ್ಲೂಕಿನ ಜಿಲ್ಲಾಕೇಂದ್ರದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿ ಚಂದ್ರವಳ್ಳಿಯೆಂಬ ಪ್ರಾಚೀನ ಪ್ರದೇಶವಿದೆ. ಇಲ್ಲಿರುವ ಅಂಕಲಿಮಠದ ಬದಿಯಲ್ಲಿ ಒಂದು ಗುಹಾಂತರ ದೇವಾಲಯವಿದೆ. ಇಲ್ಲಿ ಐದು ಶಿವಲಿಂಗಗಳಿದ್ದು ಎಲ್ಲವೂ ಐದನೆಯ ಶತಮಾನಕ್ಕೆ ಸೇರುವ ಶಿವಲಿಂಗಗಳಾಗಿವೆ. ಇಲ್ಲಿರುವ ಶಿವಲಿಂಗಗಳು ಪಂಚಪಾಂಡವರ ಹೆಸರಿನಲ್ಲಿ ಪ್ರತಿಷ್ಠಾಪಿತವಾಗಿವೆ. ಪ್ರಧಾನ ಶಿವಲಿಂಗವಾದ ಧರ್ಮೇಶ್ವರ ಲಿಂಗವು ಸುಮಾರು 5 ಅಡಿ ಎತ್ತರವಿದೆ. ಶಿವಲಿಂಗದ ಪೂಜಾಭಾಗದಲ್ಲಿ ಬ್ರಹ್ಮಸೂತ್ರವು ಸ್ಪಷ್ಟವಾಗಿ ಗೋಚರಿಸುತ್ತದೆ. ಕರಿಶಿಲೆಯಿಂದ ಮಾಡಿರುವ ಧರ್ಮೆಶ್ವರ ಲಿಂಗವು ಪ್ರಾಚೀನತೆಯಿಂದ ಬಹಳ ಮಹತ್ವವಾದ ಶಿವಲಿಂಗವಾಗಿದೆ.

    3. ಬನವಾಸಿಯ ಮಧುಕೇಶ್ವರ

    ಉತ್ತರ ಕನ್ನಡ ಜಿಲ್ಲೆ ಸಿರಸಿ ತಾಲ್ಲೂಕಿನ ಬನವಾಸಿ ಆದಿ ಕದಂಬರ ರಾಜಧಾನಿಯಾಗಿದ್ದ ಸ್ಥಳ. ಇಲ್ಲಿರುವ ಮಧುಕೇಶ್ವರ ದೇವಾಲಯವು ಒಂದು ಸುಂದರವಾದ ಆಲಯ. ಬನವಾಸಿಯ ಮಧುಕೇಶ್ವರ ಲಿಂಗವು ಕದಂಬರ ಆರಾಧ್ಯ ದೈವವಾಗಿದ್ದು ಬಹಳ ಭವ್ಯವಾಗಿದೆ. ಸುಮಾರು ಏಳು ಅಡಿ ಎತ್ತರದ ಶಿವಲಿಂಗವು ಕಲಾತ್ಮಕವಾದ ಪಾಣಿಪೀಠವನ್ನು ಹೊಂದಿದೆ.
    ಬನವಾಸಿಯ ಮಧುಕೇಶ್ವರನ ವಿಶೇಷತೆ, ಶಿವಲಿಂಗವು ಮಧುವಿನ (ಜೇನಿನ) ಬಣ್ಣವನ್ನು ಹೊಂದಿರುವುದು. ಮಧುಕೇಶ್ವರನು ಅಪಾರವಾದ ಭಕ್ತವೃಂದವನ್ನು ಹೊಂದಿರುವನು.

    4. ಭಾರಂಗಿಯ ಮುಖಲಿಂಗ

    ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಭಾರಂಗಿಯ ಊರ ಹೊರವಲಯದಲ್ಲಿರುವ ಶಿವಲಿಂಗವು ಬಹಳ ವೈಶಿಷ್ಟ್ಯಪೂರ್ಣವಾಗಿದೆ. ಶಿವಲಿಂಗದ ಪೂಜಾಭಾಗವು ಲಿಂಗರೂಪದಲ್ಲಿರದೆ ಮಾನವ ರೂಪದಲ್ಲಿದೆ. ಗುಂಡಾದ ತಲೆ, ನೀಳನಾಸಿಕ, ತೆರೆದ ಕಣ್ಣು, ಅಗಲ ಕಿವಿಗಳನ್ನು ಸ್ಪಷ್ಟವಾಗಿ ಬಿಡಿಸಲಾಗಿದೆ. ಇದೂ ಸಹಾ ಒಂದು ಅಪರೂಪದ ಶಿವಲಿಂಗವಾಗಿದ್ದು ಶಿವಲಿಂಗದ ಪ್ರಭೇದಗಳಾದ ಮುಖಲಿಂಗಕ್ಕೆ ಒಂದು ಉತ್ತಮ ಉದಾಹರಣೆ. ಭಾರಂಗಿಯ ಮುಖಲಿಂಗವು ಒಂಭತ್ತನೆಯ ಶತಮಾನಕ್ಕೆ ಸೇರುತ್ತದೆ.

    5. ಮಹಾಕೂಟದ ಪಂಚಲಿಂಗೇಶ್ವರ

    ಪರಶಿವನನ್ನು ಪಂಚಭೂತಗಳ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ (ಆಕಾಶ, ಅಗ್ನಿ, ವಾಯು, ಜಲ, ಭೂಮಿ). ಅದೇ ರೀತಿಯಾಗಿ ಪರಶಿವನಿಗೆ ವಾಮದೇವ, ತತ್ಪುರುಷ, ಅಘೋರ, ಸದ್ಯೋಜಾತ ಹಾಗೂ ಈಶಾನ ಎಂಬ ಐದು ಮುಖಗಳು. ಭಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿ ಬಾದಾಮಿಯಿಂದ 5 ಕಿ.ಮೀ. ದೂರದಲ್ಲಿರುವ ಮಹಾಕೂಟವು ಚಾಲುಕ್ಯರ ಒಂದು ಪ್ರಮುಖ ಕೇಂದ್ರ, ಚಾಲುಕ್ಯರ ಆರಾಧ್ಯದೈವ ಮುಕುಟೇಶ್ವರ ದೇವಾಲಯದ ಬದಿಯಲ್ಲಿರುವ ಕಲ್ಯಾಣಿಯಲ್ಲಿರುವ ಒಂದು ಮಂಟಪದಲ್ಲಿ ಅಪರೂಪದ ಸೊಗಸಾದ ಪಂಚಲಿಂಗೇಶ್ವರ ಮೂರ್ತಿಯಿದೆ. ನಾಲ್ಕುದಿಕ್ಕಿನಲ್ಲಿಯೂ, ಮುಖಗಳನ್ನು ಹೊಂದಿರುವ ಶಿವಲಿಂಗದ ಐದನೆಯ ಭಾಗ ಈಶಾನ್ಯಲಿಂಗವು ಶಿವಲಿಂಗದ ಶಿರೋಭಾಗವನ್ನು ಪ್ರತಿನಿಧಿಸುತ್ತದೆ. ಬಾದಾಮಿಯ ಚಾಲುಕ್ಯರ ಕಾಲಕ್ಕೆ ಸೇರಿರುವ ಈ ಪಂಚಲಿಂಗೇಶ್ವರ ಲಿಂಗದ ಕಾಲವು ಆರನೆಯ ಶತಮಾನಕ್ಕೆ ಸೇರಿರುತ್ತದೆ. ಇದೇ ರೀತಿಯ ಪಂಚಲಿಂಗೇಶ್ವರ ಲಿಂಗವು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯದ ಸಮೀಪ ದೊರೆಯುತ್ತದೆ. ಹಿಂದೆ ಇಲ್ಲಿ ಪಂಚಲಿಂಗೇಶ್ವರನಿಗಾಗಿಯೇ ದೇವಾಲಯವಿದ್ದುದಾಗಿ ಶಾಸನದಿಂದ ತಿಳಿದು ಬರುತ್ತದೆ. ಶಿವಲಿಂಗವನ್ನು ಇಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಧಾರವಾಡ ಜಿಲ್ಲೆ ಉಣಕಲ್ಲಿನಲ್ಲಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿಯೂ ಸಹ ಪಂಚಲಿಂಗೇಶ್ವರ ಲಿಂಗವಿದೆ.

    6. ಪಂಕಜನಹಳ್ಳಿಯ ಶತಲಿಂಗ

    ಪಂಕಜನಹಳ್ಳಿಯು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಒಂದು ಗ್ರಾಮ. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯದಲ್ಲಿರುವ ಮಲ್ಲಿಕಾರ್ಜುನ ಲಿಂಗದ ಪಾಣಿಪೀಠದ ಮೇಲೆ ಒಂದು ಶಿವಲಿಂಗದಲ್ಲಿ ನೂರು ಶಿವಲಿಂಗಗಳನ್ನು ರಚಿಸಲಾಗಿದೆ. ಚಿಕ್ಕದಾದ ಪಾಣಿಪೀಠದ ಮೇಲಿರುವ ಪೂಜಾಭಾಗದಲ್ಲಿ ನೂರು ಶಿವಲಿಂಗಗಳನ್ನು ಪ್ರತಿನಿಧಿಸುವ ಲಿಂಗದ ಮಾದರಿಯ ಗುಂಡುಕಲ್ಲುಗಳಿವೆ. ಮಲ್ಲಿಕಾರ್ಜುನ ದೇವಾಲಯವನ್ನು ದರ್ಶಿಸುವ ಶಿವಭಕ್ತರಿಗೆ ಒಂದೇ ಬಾರಿಗೆ ನೂರು ಶಿವಲಿಂಗಗಳನ್ನು ದರ್ಶಿಸುವ ಭಾಗ್ಯ ಲಭಿಸುವುದೆಂಬ ನಂಬಿಕೆ ಶಿವಭಕ್ತರದು.

    7. ಪುರದ ಸಹಸ್ರಲಿಂಗ

    ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಪುರದ ಸೋಮೇಶ್ವರ ದೇವಾಲಯವು ಬಹಳ ವಿಶೇಷತೆಯಿಂದ ಕೂಡಿದೆ. ದೇವಾಲಯದ ಗರ್ಭಗುಡಿಯ ಸುತ್ತಲಿರುವ ಎರಡು ಪ್ರಾಕಾರಗಳಲ್ಲಿ ಶಿವಲಿಂಗಗಳ ಸಾಲುಗಳೇ ಇವೆ. ಇಲ್ಲಿರುವ ಶಿವಲಿಂಗಗಳು ಸಹಾ ಬಹಳ ವೈವಿಧ್ಯತೆಯಿಂದ ಕೂಡಿದೆ. ಒಂದು ಶಿವಲಿಂಗದಲ್ಲಿ ಸಹಸ್ರಲಿಂಗ, ನವಗ್ರಹಗಳನ್ನು ಪ್ರತಿನಿಧಿಸುವ ದಶಲಿಂಗ, ಪಂಚಲಿಂಗ, ಮುಂತಾದ ಶಿವಲಿಂಗಗಳನ್ನು ಪುರದಲ್ಲಿ ಕಾಣಬಹುದು. ಈ ರೀತಿಯ ವಿಶೇಷತೆಯನ್ನು ಹೊಂದಿರುವ ಪುರದ ಸೋಮೇಶ್ವರ ದೇವಾಲಯಕ್ಕೆ ಕೋಟಿಲಿಂಗೇಶ್ವರ ದೇವಾಲಯವೆಂದು ಕರೆಯುವರು. ಕೋಲಾರ ಜಿಲ್ಲೆಯ ಕಮ್ಮಸಂದ್ರದಲ್ಲಿ ಇದೇ ಮಾದರಿಯ ಕೋಟಿಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದ್ದು ಬಹು ಹಿಂದೆಯೇ ಈ ಪರಿಕಲ್ಪನೆಯಲ್ಲಿ ಪುರದ ಸೋಮೇಶ್ವರ ದೇವಾಲಯ ರಚನೆಯಾಗಿರುವುದು ವಿಶೇಷ.

    8.ಸಿರಸಿಯ ಸಹಸ್ರಲಿಂಗ

    ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಸಮೀಪ ಶಾಲ್ಮಲಿ ನದಿಯ ತೀರದಲ್ಲಿ ಸಹಸ್ರಲಿಂಗ ಎಂಬ ದಿವ್ಯಕ್ಷೇತ್ರವಿದೆ. ಇಲ್ಲಿ ನದಿ ತೀರದಲ್ಲಿರುವ ಹುಟ್ಟುಬಂಡೆಗಳ ಮೇಲೆ ಹಲವಾರು ಲಿಂಗಗಳನ್ನು ಕೆತ್ತಲಾಗಿದೆ. ಅಭಿಷೇಕ ಪ್ರಿಯನಾದ ಪರಶಿವನಿಗೆ ಇಲ್ಲಿ ನಿತ್ಯವೂ ನದಿ ನೀರಿನಿಂದ ಸಹಜ ಅಭಿಷೇಕ. ಬೇಸಿಗೆಯ ಕಾಲದಲ್ಲಿ ಶಿವಲಿಂಗಗಳ ದರ್ಶನ ಲಭ್ಯ.

    9.ಬಂದಣಿಕೆಯ ಸಹಸ್ರಲಿಂಗ

    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಂದಣಿಕೆಯು ಹಲವಾರು ದೇವಾಲಯಗಳ ಬೀಡು. ಬಂದಣಿಕೆ ಗ್ರಾಮದ ನಡುವಿರುವ ಶಿವಾಲಯದಲ್ಲಿ ಸಹಸ್ರಲಿಂಗವಿದೆ. ವೃತ್ತಾಕಾರದ ಪಾಣಿಪೀಠದ ಮೇಲಿರುವ ಪೂಜಾ ಭಾಗದಲ್ಲಿ ಒಂದು ಸಾವಿರ ಶಿವಲಿಂಗಗಳನ್ನು ಬಿಡಿಸಲಾಗಿದೆ. ಹತ್ತು ಸಾಲುಗಳಿರುವ ಶಿವಲಿಂಗಗಳಲ್ಲಿ ತಲಾ ನೂರು ಶಿವಲಿಂಗಗಳಂತೆ ಸಹಸ್ರಲಿಂಗಗಳನ್ನು ರಚಿಸಲಾಗಿದೆ.ಧಾರವಾಡ ಸಮೀಪದಲ್ಲಿರುವ ನರೇಂದ್ರ ಎಂಬ ಗ್ರಾಮದಲ್ಲಿಯೂ ಒಂದು ಸುಂದರವಾದ ಸಹಸ್ರಲಿಂಗವಿದೆ.

    10. ಚಾಮರಾಜನಗರದ ಸಹಸ್ರಲಿಂಗ

    ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ರಚಿತವಾದ ಚಾಮರಾಜನಗರ ಜಿಲ್ಲೆಯ ಜಿಲ್ಲಾಕೇಂದ್ರದಲ್ಲಿರುವ ಚಾಮರಾಜೇಶ್ವರ ದೇವಾಲಯವು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಚಿತವಾದ ಸುಂದರ ಆಲಯ. ಚಾಮರಾಜೇಶ್ವರ ದೇವಾಲಯದ ಪ್ರಾಕಾರದಲ್ಲಿ ಬಂದಣಿಕೆಯಲ್ಲಿರುವಂತೆ ಒಂದು ಸಹಸ್ರಲಿಂಗವಿದೆ. ಕಲಾತ್ಮಕವಾದ ಪಾಣಿಪೀಠದ ಮೇಲಿರುವ ಶಿವಲಿಂಗದ ಪೂಜಾಭಾಗದಲ್ಲಿ ಸಹಸ್ರಲಿಂಗಗಳಿವೆ.

    11. ಹಂಪಿಯ ಸಹಸ್ರಲಿಂಗ

    ವಿಶ್ವವಿಖ್ಯಾತ ಹಂಪಿಯಲ್ಲಿರುವ ಚಕ್ರತೀರ್ಥ ಎಂಬ ಪ್ರದೇಶದಲ್ಲಿ ಶಿವಲಿಂಗದ ವ್ಯೂಹವನ್ನು ಬಿಡಿಸಲಾಗಿದೆ. ತುಂಗಭದ್ರಾ ನದಿಯಲ್ಲಿರುವ ಹುಟ್ಟು ಬಂಡೆಯ ಮೇಲೆ ಒಂದು ಶಿವಲಿಂಗವನ್ನು ಪ್ರಧಾನವಾಗಿ ರಚಿಸಿಕೊಂಡು ಚೌಕಾರಾದಲ್ಲಿ ಶಿವಲಿಂಗಗಳನ್ನು ರಚಿಸಲಾಗಿದೆ. ಹಂಪಿಯಲ್ಲಿರುವ ಮೂಲ್ಯವಂತ ರಘುನಾಥ ದೇವಾಲಯದ ಹಿಂಭಾಗದಲ್ಲಿ ಶಿವಲಿಂಗಗಳ ಎರಡು ಸಾಲುಗಳಿವೆ. ಸಾಲಾಗಿರುವ ಪ್ರತಿ ಶಿವಲಿಂಗಗಳ ಮುಂದೆ ನದಿಯ ಶಿಲ್ಪಗಳನ್ನು ಬಿಡಿಸಿರುವುದು ವಿಶೇಷ.

    12. ಮಹಾಕೂಟದ ಕೋಟಿಲಿಂಗೇಶ್ವರ

    ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿರುವ ಮಹಾಕೂಟದ ಮಹಾಕೋಟೇಶ್ವರ ದೇವಾಲಯದ ಆವರಣದಲ್ಲಿ ಒಂದು ಶಿವಲಿಂಗದಲ್ಲಿ ಕೋಟಿಲಿಂಗಗಳನ್ನು ಬಿಡಿಸಲಾಗಿದೆ. ಶಿವಲಿಂಗದ ಪೂಜಾಭಾಗದಲ್ಲಿ ಸಣ್ಣಸಣ್ಣ ಲಿಂಗಗಳನ್ನು ಬಿಡಿಸಲಾಗಿದ್ದು ಪ್ರತಿ ಲಿಂಗಗಳಲ್ಲಿಯೂ ಅತೀ ಸೂಕ್ಷ್ಮ ಲಿಂಗಗಳಿವೆ.

    13. ಬಂದಣಿಕೆಯ ಬ್ರಹ್ಮೇಶ್ವರ

    ತ್ರಿಮೂರ್ತಿಗಳಲ್ಲೊಬ್ಬನಾದ ಬ್ರಹ್ಮದೇವನಿಗೆ ಸಾಮಾನ್ಯವಾಗಿ ಮೂರ್ತಿಪೂಜೆಯಿರುವುದಿಲ್ಲ. ಆತನನ್ನು ಲಿಂಗ ರೂಪದಲ್ಲಿಯೇ ಆರಾಧಿಸುವ ಸಂಪ್ರದಾಯ. ಬ್ರಹ್ಮಲಿಂಗದ ಪಾಣಿಪೀಠವು ಸಾಮಾನ್ಯವಾಗಿ ಎಡಕ್ಕೆ ತಿರುಗಿರುತ್ತದೆ ಹಾಗೂ ಪಾಣಿಪೀಠದ ಮೇಲೆ ಬ್ರಹ್ಮ ಪೀಠವಾದ ಅರಳಿದ ಕಮಲವನ್ನು ಬಿಡಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಂದಣಿಕೆಯ ತ್ರಿಮೂರ್ತಿ ದೇವಾಲಯದಲ್ಲಿ ಬ್ರಹ್ಮೇಶ್ವರಲಿಂಗವಿದೆ. ಇದೇ ರೀತಿಯ ಬ್ರಹ್ಮೇಶ್ವರ ಲಿಂಗವನ್ನು ಬಳಳಾರಿ ಜಿಲ್ಲೆ ಹೊಸಪೇಟೆ ಸಮೀಪವಿರುವ ಸಂಡೂರಿನ ಕುಮಾರಸ್ವಾಮಿ ದೇವಾಲಯದ ಆವರಣದಲ್ಲಿರುವ ಒಂದು ಶಿವಲಿಂಗದಲ್ಲಿ ಕಾಣಬಹುದು.

    14. ನೆಲಮನೆ, ಚೌಡಪ್ಪನಹಳ್ಳಿ, ಮೋರ್ಕಂಡಿಯ ಹಾಗೂ ಹೆಗ್ಗೆರೆಯ ದಾರಾಲಿಂಗಗಳು

    ದಾರಾಲಿಂಗವು ಶಿವಲಿಂಗದ ಒಂದು ಪ್ರಭೇದ. ಶಿವಲಿಂಗದ ಪೂಜಾಭಾಗದಲ್ಲಿ ಗೆರೆಗಳನ್ನು ಮೂಡಿಸಲಾಗುತ್ತದೆ. ಈ ರೀತಿಯ ರೇಖೆಗಳು 5, 7, 9, 12, 16, 20, 24, 28, 100 ಮುಖಗಳನ್ನು ಹೊಂದಿರಬೇಕೆಂದು ಸುಪ್ರಭೇದಾಗಮದಲ್ಲಿ ವಿವರಿಸಲಾಗಿದೆ. ಪ್ರತಿ ದಾರಾಲಿಂಗಗಳನ್ನು ಅರ್ಜಿಸುವುದರಿಂದ ಆಗುವ ಫಲಶೃತಿಯನ್ನು ಸಹಾ ನೀಡಲಾಗಿದೆ.

    ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಶ್ರೀರಂಗಪಟ್ಟಣ-ಪಾಂಡವಪುರ ರಸ್ತೆಯ ಸಮೀಪ ಶ್ರೀರಂಗಪಟ್ಟಣಕ್ಕೆ ಆರು ಕಿ.ಮೀ. ದೂರದಲ್ಲಿರುವ ನೆಲಮನೆಯೆಂಬ ಗ್ರಾಮದಲ್ಲಿರುವ ಚಂದ್ರಮೌಳೇಶ್ವರ ಲಿಂಗವು ಒಂದು ಅಪರೂಪದ ದಾರಾಲಿಂಗವಾಗಿರುತ್ತದೆ. ಸುಮಾರು ಏಳು ಅಡಿ ಎತ್ತರವಿರುವ ಶಿವಲಿಂಗದ ಪೂಜಾಭಾಗವು ಹದಿನಾರು ಮೂಲೆಗಳನ್ನು (ಗೆರೆಗಳನ್ನು) ಹೊಂದಿದೆ. ಇದೊಂದು ಅಪರೂಪದ ದಾರಾಲಿಂಗವಾಗಿದೆ. ಅಜಿತಾಗಮದಲ್ಲಿ ದಾರಾಲಿಂಗದ ಆರಾಧನೆಯ ಫಲವನ್ನು ನೀಡಲಾಗಿದೆ.ಹದಿನಾರು ಗೆರೆಗಳನ್ನು ಹೊಂದರುವ ದಾರಾಲಿಂಗವು ಸರ್ವಶ್ರೇಷ್ಠವಾದುದೆಂದೂ ಈ ಶಿವಲಿಂಗವನ್ನು ಅರ್ಚಿಸಿದರೆ ಸಂತೋಷ ಮತ್ತು ಸರ್ವಸುಖ ಲಭಿಸುವುದೆಂದು ತಿಳಿಸಲಾಗಿದೆ. ಇದೇ ರೀತಿಯ ದಾರಾಲಿಂಗವು ಬೆಂಗಳೂರು ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯ ಸಮೀಪವಿರುವ ಚೌಡಪ್ಪನಹಳ್ಳಿಯಲ್ಲಿರುವ ತಬ್ಬುಲಿಂಗೇಶ್ವರ ದೇವಾಲಯದಲ್ಲಿದೆ. ದೇವಾಲಯದ ಪ್ರಾಕಾರದಲ್ಲಿ ಎಂಟು ಶಿವಲಿಂಗಗಳಿದ್ದು ಅದರಲ್ಲಿ ಒಂದು ಶಿವಲಿಂಗವು ದಾರಾಲಿಂಗವಾಗಿರುತ್ತದೆ. ದಾರಾಲಿಂಗವು ಒಂಭತ್ತನೆಯ ಶತಮಾನದ ಗಂಗರ ಕಾಲಕ್ಕೆ ಸೇರುತ್ತದೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮೋರ್ಕಂಡಿ ಎಂಬ ಗ್ರಾಮದ ಶಿವಾಲಯದಲ್ಲಿರುವ ಪ್ರಧಾನ ಲಿಂಗವು ಸಹಾ ದಾರಾಲಿಂಗವಾಗಿರುತ್ತದೆ. ಪ್ರಸ್ತುತ ದಾರಾಲಿಂಗವು ಆರು ಮುಖಗಳನ್ನು ಹೊಂದಿರುವುದು ವಿಶೇಷ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಹೆಗ್ಗೆರೆಯಲ್ಲಿರುವ ಶಿವಲಿಂಗವು ಸಹ ಹದಿಮೂರು ಮೂಲೆಗಳುಳ್ಳ ದಾರಾಲಿಂಗವಾಗಿರುತ್ತದೆ.

    15. ಗದಗದ ತ್ರಿಕೂಟೇಶ್ವರ

    ಗದಗ ನಗರದ ಮಧ್ಯದಲ್ಲಿರುವ ತ್ರಿಕೂಟೇಶ್ವರ ದೇವಾಲಯವು ಹನ್ನೊಂದನೆಯ ಶತಮಾನಕ್ಕೆ ಸೇರಿರುವ ಸುಂದರ ಆಲಯ. ಈ ದೇವಾಲಯದಲ್ಲಿರುವ ಶಿವಲಿಂಗದಲ್ಲಿ ತ್ರಿಮೂರ್ತಿಗಳನ್ನು ಲಿಂಗರೂಪದಲ್ಲಿ ಅರ್ಚಿಸಲಾಗುತ್ತಿದೆ. ಪಾಣಿಪೀಠದ ಮೇಲೆ ಮೂರು ಶಿವಲಿಂಗಗಳಿದ್ದು ಬ್ರಹ,್ಮ ಮಹೇಶ್ವರ, ವಿಷ್ಣುಗಳ್ನು ಪ್ರತಿನಿಧಿಸುತ್ತವೆ. ಈ ರೀತಿಯ ತ್ರೈಪುರುಷಾರಾಧನೆಯು ಪ್ರಾಚೀನ ಕರ್ನಾಟಕದಲ್ಲಿ ಪ್ರಚಲಿತದಲ್ಲಿತ್ತು.

    16. ಸವಡಿಯ ತ್ರಿಮೂರ್ತಿಲಿಂಗ

    ಗದಗ ಜಿಲ್ಲೆ ರೋಣ ತಾಲ್ಲೂಕಿನ ಸವಡಿಯಲ್ಲಿ ತ್ರಿಮೂರ್ತೇಶ್ವರ ದೇವಾಲಯವಿದೆ. ಒಂಭತ್ತನೆಯ ಶತಮಾನಕ್ಕೆ ಸೇರಿರುವ ರಾಷ್ಟ್ರಕೂಟರ ದೇವಾಲಯವಿದಾಗಿದ್ದು, ಗರ್ಭಗುಡಿಯಲ್ಲಿ ಒಂದೇ ಪಾಣಿಪೀಠದ ಮೇಲೆ ಮೂರ್ತಿರೂಪದಲ್ಲಿ ಸೃಷ್ಟಿಕರ್ತನಾದ ಬ್ರಹ್ಮದೇವ, ಸ್ಥಿತಿಕರ್ತನಾದ ವಿಷ್ಣು ದೇವರುಗಳು ಮೂರ್ತಿರೂಪದಲ್ಲಿದ್ದಾರೆ. ಲಯಕರ್ತನಾದ ಶಿವದೇವನು ಲಿಂಗರೂಪದಲ್ಲಿರುವನು. ಬ್ರಹ್ಮ, ವಿಷ್ಣುದೇವರ ನಡುವಿರುವ ಲಿಂಗವು ನೋಡಲು ಬಹಳ ದಿವ್ಯವಾಗಿದೆ.

    17. ಮುನವಳ್ಳಿಯ ಪಂಚಲಿಂಗೇಶ್ವರ

    ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನಲ್ಲಿರುವ ಮುನವಳ್ಳಿಯಲ್ಲಿ ಪಂಚಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯದ ವಿಶೇಷವೇನೆಂದರೆ ಒಂದೇ ಪಾಣಿಪೀಠದ ಮೇಲೆ ಐದು ಶಿವಲಿಂಗಗಳನ್ನು ಲಿಂಗರೂದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರಸ್ತುತ ಶಿವಲಿಂಗವನ್ನು ಅಗಸ್ತ್ಯರು ಪ್ರತಿಷ್ಠಾಪಿಸಿದರೆಂದು ಐತಿಹ್ಯ. ಶಿವಲಿಂಗದ ಹಿಂಬದಿಯಲ್ಲಿ ಅಗಸ್ತ್ಯಮುನಿಗಳ ಮೂರ್ತಿಯಿದೆ. ಈ ದೇವಾಲಯದ ಆವರಣದಲ್ಲಿ ಅನೇಕ ದೇವಾಲಯಗಳಿದ್ದು ಒಂದು ದೇವಾಲಯವು ತ್ರಿಕೂಟವಾಗಿದ್ದು ಪ್ರತಿ ಗರ್ಭಗುಡಿಯಲ್ಲಿಯೂ ಶಿವಲಿಂಗಗಳಿವೆ.


    18. ಕೊಡಗೇನಹಳ್ಳಿಯ ಕುಕ್ಕುಟಾಂಡಲಿಂಗ

    ಕೋಳಿಯ ಮೊಟ್ಟೆಯ ಆಕಾರದಲ್ಲಿ ಶಿವಲಿಂಗಗಳನ್ನು ಸ್ಥಾಪಿಸುವ ಪದ್ಧತಿಯೂ ಇತ್ತು. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಧುಗಿರಿ-ಹಿಂದೂಪುರ ರಸ್ತೆಯಲ್ಲಿರುವ ಕೊಡಗೇನಹಳ್ಳಿಯಲ್ಲಿರುವ ಶಿವಲಿಂಗವು ಕುಕ್ಕುಟಾಂಡಾಕಾರವನ್ನು ಹೊಂದಿದೆ. ಸುಮಾರು ಐದು ಅಡಿ ಎತ್ತರದ ಶಿವಲಿಂಗದ ಪೂಜಾಭಾಗವು ಮೊಟ್ಟೆಯಾಕಾರವನ್ನು ಹೊಂದಿದ್ದು ಈ ರೀತಿಯ ರಚನೆಯ ಶಿವಲಿಂಗಗಳ ಪ್ರಭೇದಗಳಲ್ಲೊಂದು ಕೊಡಗೇನಹಳ್ಳಿಯ ಶಿವಲಿಂಗದ ಮೇಲಿನ ಬ್ರಹ್ಮಸೂತ್ರದ ಆಧಾರದಿಂದ ಇದರ ಕಾಲವನ್ನು ಹತ್ತನೆಯ ಶತಮಾನುಕ್ಕೆ ಸೇರಿಸಬಹುದು.

    19. ಯಗಟಿಯ ಶ್ರೀಚಕ್ರಲಿಂಗ

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟಿಯಲ್ಲಿ ಅನೇಕ ದೇವಾಲಯಗಳಿವೆ. ಯಗಟಿಯ ಕೆರೆಯ ಅಂಚಿನಲ್ಲಿರುವ ಕಲ್ಲೇಶ್ವರ ದೇವಾಲಯವು ಹೊಯ್ಸಳರ ದೊರೆ ವಿಷ್ಣುವರ್ಧನನ ಕಾಲಕ್ಕೆ ಸೇರಿರುತ್ತದೆ. ನವೀಕೃತಗೊಂಡ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗದ ಪಾಣಿಪೀಠದ ಮೇಲೆ ಶ್ರೀಚಕ್ರವನ್ನು ಬಿಡಿಸಲಾಗಿದೆ. ಹಾಗಾಗಿ ಇದು ಶಿವ ಮತ್ತು ಶಕ್ತಿಯರ ಸಮಾಗಮವನ್ನು ಹೊಂದಿರುವ ಅಪರಪದ ಶಿವಲಿಂಗವಾಗಿದೆ.

    20. ಯಗಟೀಪುರದ ಜಟಾಧಾರಿ ಮಲ್ಲಿಕಾರ್ಜುನ

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟೀಪುರದಲ್ಲಿ ಸುಪ್ರಸಿದ್ಧ ಮಲ್ಲಿಕಾರ್ಜುನ ದೇವಾಲಯವಿದೆ. ದೇವಾಲಯವು ಪೂರ್ವಾಭಿಮುಖವಾಗಿ ವೇದಾವತಿ ನದಿಯ ದಂಡೆಯ ಮೇಲೆ ವಿಶಾಲವಾದ ಪ್ರಾಕಾರ ಮಂಟಪಗಳ ನಡುವೆ ವಿರಾಜಮಾನವಾಗಿ ಶೋಭಿಸುತ್ತಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ದೇವನು ಒಂದು ಬಂಡೆಯ ಮೇಲೆ ಮೂಡಿರುತ್ತಾನೆ. ಶಿವಲಿಂಗದ ಶಿವ ಜಟೆಯನ್ನು ಸಹಾ ಸ್ಪಷ್ಟವಾಗಿ ಮೂಡಿಸಲಾಗಿದೆ. ಯಗಟೀಪುರದ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವವು ಫಾಲ್ಗುಣ ಶುದ್ಧದಲ್ಲಿ ಬರುವ ಮಖಾನಕ್ಷತ್ರದಲ್ಲಿ ಬಹು ವೈಭವದಿಂದ ಜರುಗುತ್ತದೆ. ಆ ಸುದಿನ ಗರ್ಭಗುಡಿಯಲ್ಲಿ ತೀರ್ಥೋದ್ಭವವಾಗುತ್ತದೆ.

    21. ತುರುವೇಕೆರೆಯ ಗಂಗಾಧರೇಶ್ವರ

    ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಕೇಂದ್ರದಲ್ಲಿರುವ ಗಂಗಾಧರೇಶ್ವರ ದೇವಾಲಯವು ಬಹಳ ವೈವಿಧ್ಯತೆಯನ್ನು ಹೊಂದಿದೆ. ಗಂಗಾಧರೇಶ್ವರ ಎಂದು ಕರೆಯುವ ಶಿವಲಿಂಗದ ಪೂಜಾಭಾಗದಲ್ಲಿ ಪದ್ಮಾಸನ ಹಾಕಿ ಕುಳಿತಿರುವ ಗಂಗೆಯಿರುವಳು. ಗಂಗೆಯ ಸುತ್ತ ಸರ್ಪದ ಮಾದರಿಯಲ್ಲಿ ಜಟೆ ಮತ್ತು ಸುರುಳಿ ಸುರುಳಿಯಂತೆ ಚಿತ್ರಿಸಿರುವ ಜಡೆಯನ್ನು ಸಹ ಮೂಡಿಸಲಾಗಿದೆ. ಗಂಗೆಯ ಹಿಂದೆ ಅಗ್ನಿಯಿದ್ದು ಅದನ್ನು ತಣಿಸಲು ಗಂಗೆಯಿರುವಂತೆ ಚಿತ್ರಿಸಲಾಗಿದೆ. ಶಿವನ ಜಟೆಯು ಸುರುಳಿಯಾಕಾರದಲ್ಲಿದ್ದು ಅದರಲ್ಲಿ 27 ನಕ್ಷತ್ರಗಳನ್ನು ಗುರುತಿಸಲಾಗಿದೆ. ಗಂಗೆಯ ಎರಡು ಬದಿಯಲ್ಲಿ ಸೂರ್ಯಚಂದ್ರವಿರುವುದು. ಇದು ಒಂದು ಅಪರೂಪದ ಶಿವಲಿಂಗವಾಗಿದ್ದು ಕರ್ನಾಟಕದ ಬೇರ್ಯಾವ ದೇವಾಲಯದಲ್ಲೂ ಪ್ರಧಾನ ದೇವತೆಯಾಗಿ ಪೂಜೆಗೊಳ್ಳುವ ಉದಾಹರಣೆಯು ದೊರೆಯುವುದಿಲ್ಲ.

    ಚಾಮರಾಜನಗರ ಜಿಲ್ಲೆ ಅದೇ ತಾಲ್ಲೂಕಿನ ಉಮತ್ತೂರಿನಲ್ಲಿರುವ ಭಜಂಗೇಶ್ವರ ದೇವಾಲಯದ ಪ್ರಾಕಾರ ಮಂಟಪದಲ್ಲಿರುವ ಶಿವಲಿಂಗಗಳ ಸಾಲಿನಲ್ಲಿ ಗಂಗಾಧರೇಶ್ವರ ಲಿಂಗವಿದ್ದು, ಗಾತ್ರದಲ್ಲಿ ತುರುವೇಕೆರೆಯ ಗಂಗಾಧರೇಶ್ವರನಿಗಿಂತ ಚಿಕ್ಕದಿದೆ.

    22. ಮುದ್ಲಾಪುರದ ಸ್ವಯಂಭುವೇಶ್ವರ

    ಶಿವಲಿಂಗಗಳನ್ನು ಮಾನವನಿರ್ಮಿತವಾಗಿ ಪೂಜಿಸುವುದಲ್ಲದೇ ಸ್ವಯಂಭು ರೂಪದಲ್ಲಿಯೂ ಪೂಜಿಸಲಾಗುತ್ತದೆ. ಇಲ್ಲಿ ಸಹಜವಾಗಿರುವ ಶಿಲೆಗಳನ್ನು ಯಾವ ಕೆತ್ತನೆಯ ಕೆಲಸವು ಇಲ್ಲದೇ ಸ್ಥಾಪಿಸಲಾಗುವುದು.ಈ ರೀತಿಯ ಶಿವಲಿಂಗಗಳು ಪ್ರಾಚೀನತೆಯಿಂದಲೂ ಬಹಳ ಮಹತ್ವವಾಗಿರುತ್ತದೆ. ಹಾಸನ ಜಿಲ್ಲೆ ಅದೇ ತಾಲ್ಲೂಕು ಮುದ್ಲಾಪುರ ಎಂಬ ಗ್ರಾಮವು ಹಾಸನ-ಹಳೇಬೀಡು ರಸ್ತೆಯಲ್ಲಿರುವ ಇಸ್ರೋ ಕೇಂದ್ರದ ಸಮೀಪದಲ್ಲಿದೆ. ಮುದ್ಲಾಪುರದ ಶಿವಲಿಂಗವು ಸ್ವಯಂಭು ಲಿಂಗವಾಗಿರುತ್ತದೆ. ಶಿವಲಿಂಗದಲ್ಲಿ ಐದು ಉದ್ಬುಗಳಿದ್ದು ಪಂಚಲಿಂಗಗಳನ್ನು ಪ್ರತಿನಿಧಿಸುತ್ತದೆ.ಗದಗ ಜಿಲ್ಲೆ ಅದೇ ತಾಲ್ಲೂಕಿನ ಹೊಂಬಳದಲ್ಲಿಯೂ ಸಹಾ ಹನ್ನೊಂದನೆಯ ಶತಮಾನದ ಶಂಕರಲಿಂಗೇಶ್ವರ ದೇವಾಲಯದಲ್ಲಿ ಇದೇ ರೀತಿಯ ಶಿವಲಿಂಗವಿದೆ.

    23. ಹಂಪಿಯ ಬಡಾಲಿಂಗ

    ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ವಿಶ್ವವಿಖ್ಯಾತ ಹಂಪಿಯಲ್ಲಿರುವ ಯೋಗಾ-ಲಕ್ಷ್ಮೀನರಸಿಂಹನ ಮೂರ್ತಿಯ ಬದಿಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಸುಮಾರು ಹತ್ತು ಅಡಿಗೂ ಅಧಿಕ ಎತ್ತರದಲ್ಲಿರುವ ಶಿವಲಿಂಗದ ಅಡಿಯಲ್ಲಿ ಸದಾ ನೀರಿರುವುದು ವಿಶೇಷತೆ. ಬಡಾಲಿಂಗವು ನಮ್ಮ ನಾಡಿನ ವಿಜಯನಗರ ಅರಸರ ಕೊಡುಗೆ.

    24. ಬೃಹತ್ ಲಿಂಗಗಳು

    ಕನ್ನಡ ನಾಡಿನಲ್ಲಿ ಅನೇಕ ಬೃಹತ್ ಶಿವಲಿಂಗಗಳಿರುವ ದೇವಾಲಯಗಳವೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಸಖರಾಯಪಟ್ಟಣದ ಸಮೀಪವಿರುವ ಅಯ್ಯನಕೆರೆಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಬಲ್ಲಾಳೇಶ್ವರ ಲಿಂಗವೆಂದು ಕರೆಯುವ ಶಿವಲಿಂಗವು ಹೊಯ್ಸಳರ ಕಾಲದ ರಚನೆ. ಶಿವಲಿಂಗದ ಪಾಣಿಪೀಠವು ಅತ್ಯಂತ ಕಲಾತ್ಮಕವಾಗಿದೆ. ದೇವಾಲಯವು ಅಯ್ಯನಕೆರೆಯೆಂದು ಕರೆಯುವ ಸುಂದರವಾದ ಕೆರೆಯ ಬದಿಯಲ್ಲಿದ್ದು ಪರಿಸರವು ಅತ್ಯಂತ ರಮಣೀಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬೊಮ್ಮವಾರ ಎಂಬ ಗ್ರಾಮದಲ್ಲಿ ಸುಮಾರು ಹತ್ತು ಅಡಿಗಳಷ್ಟು ಅಗಲವಿರುವ ಪಾಣಿಪೀಠವನ್ನು ಹೊಂದಿರುವ ಬೃಹತ್ ಶಿವಲಿಂಗವಿದೆ. ಸುಂದರೇಶ್ವರರೆಂದು ಕರೆಯುವ ಈ ಶಿವಲಿಂಗವು ಇಡೀ ದೇವಾಲಯದ ಗರ್ಭಗುಡಿಯನ್ನು ಆವರಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪ ಅನಗೊಂಡನಹಳ್ಳಿಯ,ಲ್ಲಿ ಬಾಣೇಶ್ವರ ಎಂದು ಕರೆಯಲ್ಪಡುವ, ಜಿಲ್ಲೆಯಲ್ಲಿಯೇ ಅತ್ಯಂತ ಎತ್ತರದ ಶಿವಲಿಂಗವಿದೆ. ಬಾಣೇಶ್ವರಲಿಂಗವು ಒಂಭತ್ತು ಅಡಿ ಎತ್ತರವಿದ್ದು ಹತ್ತನೆಯ ಶತಮಾನಕ್ಕೆ ಸೇರುತ್ತದೆ.

    25. ಕೆಂಗೇರಿಯ ಸೋಮೇಶ್ವರ ದೇವಾಲಯ

    ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಕೆಂಗೇರಿಯು ಹತ್ತನೆಯ ಶತಮಾನದಿಂದಲೂ ಅಸ್ತಿತ್ವದಲ್ಲಿದ್ದ ಪ್ರಾಚೀನ ಗ್ರಾಮ. ಕೆಂಗೇರಿಯ ಕೋಟೆ ಪ್ರದೇಶದಲ್ಲಿ ಹತ್ತನೆಯ ಶತಮಾನಕ್ಕೆ ಸೇರುವ ಶಿವಲಿಂಗವನ್ನು ಹೊಂದಿರುವ ಸೋಮೇಶ್ವರ ದೇವಾಲಯವಿದೆ. ಎಲ್ಲ ಪ್ರಾಚೀನ ಶಿವ ದೇವಾಲಯಗಳ ನಿಯಮದಂತೆ ಊರ ಹೊರಗೆ ಈಶಾನ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಶಿವಲಿಂಗವಿದೆ. ಶಿವಲಿಂಗದ ಪೂಜಾಭಾಗದಲ್ಲಿ ಬ್ರಹ್ಮಸೂತ್ರವು ಸ್ಪಷ್ಟವಾಗಿ ಗೋಚರಿಸುತ್ತದೆ ಹಾಗೂ ಇದರ ವಿನ್ಯಾಸದಿಂದ ಹತ್ತನೆಯ ಶತಮಾನದ ಕಾಲಘಟ್ಟಕ್ಕೆ ಶಿವಲಿಂಗವನ್ನು ಸೇರಿಸಬಹುದು.
    ಕೆಂಗೇರಿಯ ಸೋಮೇಶ್ವರನಿಗೆ ಮಹಾಶಿವರಾತ್ರಿ ಹಾಗೂ ಕಾರ್ತಿಕಮಾಸದ ಸೋಮವಾರಗಳಲ್ಲಿ ವಿಶೇಷ ಪೂಜಾ ಕೈಂಕರ್ಯವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವೈಭವವಾಗಿ ಜರುಗುವುದು. ಶಿವರಾತ್ರಿಯ ಮಾರನೆಯ ದಿನ ಬೆಳಿಗೆ ಸೂರ್ಯದೇವನ ಕಿರಣಗಳು ಶಿವಲಿಂಗದ ಮೇಲಿ ಬೀಳುವುದು ಬಹು ವಿಶೇಷ.

    ಕೆಂಗೇರಿ ಚಕ್ರಪಾಣಿ ಅವರು ನಾಡಿನ ಹಿರಿಯ ಛಾಯಗ್ರಾಹಕರು ಹಾಗೂ ಇತಿಹಾಸ ಸಂಶೋಧಕರು. ಸಹಪಾಠಿ ಮುನಿ ಅಂಜನಪ್ಪನವರ ಪ್ರೇರಣೆಯಿಂದ ಛಾಯಾಗ್ರಹಣವನ್ನು ಹವ್ಯಾಸವಾಗಿ ಬೆಳೆಸಿಕೊಂಡ ಚಕ್ರಪಾಣಿ ಅದನ್ನು ದೇವಾಲಯಗಳ ಚಿತ್ರೀಕರಣಕ್ಕೆ ಬಳಸಿಕೊಂಡರು. ಇತಿಹಾಸ ತಜ್ಞ ಡಾ.ಎಚ್. ಎಸ್ .ಗೋಪಾಲರಾವ್. ಡಾ. ದೇವರಕೊಂಡಾರೆಡ್ಡಿ, ಡಾ. ಪಿ.ವಿ .ಕೃಷ್ಣಮೂರ್ತಿ,ಡಾ. ಕೆ. ಆರ್. ಗಣೇಶ್ ಅವರ ಮಾರ್ಗದರ್ಶನದಿಂದ ದೇವಾಲಯಗಳ ಇತಿಹಾಸ ಅಧ್ಯಯನದಲ್ಲಿ ಆಸಕ್ತಿ ಬೆಳೆಯಿತು. ದೂರಸಂಪರ್ಕ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಹೋದ್ಯೋಗಿಗಳ ಒತ್ತಾಸೆಯಂತೆ ತಾವು ಸೆರೆಹಿಡಿದ ಛಾಯಚಿತ್ರಗಳ ಪ್ರದರ್ಶನ ಏರ್ಪಡಿಸಲು ಆರಂಭಿಸಿದರು. ಈಗ ಅವರ ಬಳಿ 2000ಕ್ಕೂ ಹೆಚ್ಚು ಛಾಯಚಿತ್ರಗಳ ಸಂಗ್ರಹ ಇದೆ. ನಾಡಿನಾದ್ಯಂತ ಈ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗವನ್ನು ಕಟ್ಟಿಕೊಂಡು ಅದರ ಮೂಲಕ ಮಿತ್ರರನ್ನು ಪುರಾತನ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರದಲ್ಲಿ ತೊಡಗಿಕೊಂಡಿರುವ ಧರ್ಮಸ್ಥಳದ ಶ್ರೀ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ಇವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.

    spot_img

    More articles

    2 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!