26.3 C
Karnataka
Thursday, May 9, 2024

    ಮೇಕೆದಾಟು ಮತ್ತು ಕಾಂಗ್ರೆಸ್ ನಾಯಕರ ಚದುರಂಗದಾಟ

    Must read

    This image has an empty alt attribute; its file name is c-rudrappa-1.jpg

    ಸಿ.ರುದ್ರಪ್ಪ

    ತೊಂಬತ್ತರ ದಶಕದ ಕೊನೆಯ ಭಾಗದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ.ಧರಂ ಸಿಂಗ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು.ಎಚ್. ಕೆ .ಪಾಟೀಲ್ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು.ಮೂವರು ನಾಯಕರೂ ಅನ್ಯೋನ್ಯವಾಗಿದ್ದರು.ಕೆಲವರು ಅವರನ್ನು ಪ್ರೀತಿಯಿಂದ “ನೀವು ಸೆಟ್ ದೋಸೆ ರೀತಿ ಇದ್ದೀರಿ “ಎಂದು ಕಿಚಾಯಿಸುತ್ತಿದ್ದರು.ಕಳೆದ ಎರಡೂ ಮುಕ್ಕಾಲು ವರ್ಷಗಳಿಂದಲೂ ಕಾಂಗ್ರೆಸ್ ಮತ್ತೆ ಅಧಿಕಾರದಲ್ಲಿಲ್ಲ.

    ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.ಸಿದ್ದರಾಮಯ್ಯ ವಿಧಾನಸಭೆ ವಿರೋಧಪಕ್ಷದ ನಾಯಕರಾಗಿದ್ದಾರೆ.ಎಸ್ ಆರ್ ಪಾಟೀಲ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದರು.ಆದರೆ ವಿರೋಧ ಪಕ್ಷದ ನಾಯಕರೆಂದರೆ ಸಿದ್ದರಾಮಯ್ಯನವರೇ ಎಂಬ ಭಾವನೆ ಜನರ ಮನಸ್ಸಿನಲ್ಲಿ ಬೇರೂರಿತ್ತು.ಎಸ್ ಆರ್ ಪಾಟೀಲರು ಮಹತ್ವಾಕಾಂಕ್ಷಿ ಹಾಗೂ ಪ್ರಭಾವಶಾಲಿಯಾಗಿರಲಿಲ್ಲ.ಅವರ ಕಾರ್ಯ ವೈಖರಿಯೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.ಆದರೆ ಶಿಷ್ಟಾಚಾರಕ್ಕೆ ಅನುಗುಣವಾಗಿಯಾದರೂ ಅವರಿಗೆ ಸಿಗಬೇಕಾಗಿದ್ದ ಮನ್ನಣೆ ದೊರೆತಿರಲಿಲ್ಲ.ಸುಮ್ಮನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದರು.ಸಾರ್ವಜನಿಕ ಸಮಾರಂಭಗಳಲ್ಲಿ,ಪಕ್ಷದ ವೇದಿಕೆಗಳಲ್ಲಿ ಅಗ್ರಗಣ್ಯ ನಾಯಕರ ಸಾಲಿನಲ್ಲಿ ಅವರಿಗೆ ಸ್ಥಾನ ಸಿಕ್ಕಿದ್ದು ಕಡಿಮೆ.ಪೋಸ್ಟರ್ ಗಳಲ್ಲಂತೂ ಒಂದು ಮೂಲೆಯಲ್ಲಿ ಅವರ ಚಿಕ್ಕ ಫೋಟೋ ಇರುತ್ತಿತ್ತು.ಆದರೆ ಇತ್ತೀಚಿಗೆ ಬಿ ಕೆ ಹರಿಪ್ರಸಾದ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ನಂತರ ರಾಜಕೀಯ ಚಿತ್ರಣ ಬದಲಾಗಿದೆ.ಅವರಿಗೆ ಪಕ್ಷದ ಅಧ್ಯಕ್ಷರು ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕರಿಗೆ ಸರಿ ಸಮಾನವಾದ ಸ್ಥಾನಮಾನವನ್ನು ಕಲ್ಪಿಸಲಾಗುತ್ತಿದೆ.


    ಮೇಕೆದಾಟು ಪಾದಯಾತ್ರೆಯ ಪೋಸ್ಟರ್ ನಲ್ಲಿ ಹರಿಪ್ರಸಾದ್,ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ಸೆಟ್ ದೋಸೆಯಂತೆ ಅವರು ಅನ್ಯೋನ್ಯವಾಗಿದ್ದಾರೆ ಎಂದು ಯಾರಾದರೂ ಭಾವಿಸಿದರೆ ಅದು ಅವರ ಭ್ರಮೆಯಷ್ಟೆ.ಈ ಪೋಸ್ಟರ್ ನಲ್ಲಿ ಹರಿಪ್ರಸಾದ್ ಅಧ್ಯಕ್ಷರ ಬಲಕ್ಕೆ ಇರುವುದು ಕೇವಲ ಕಾಕತಾಳೀಯ ಆಗಿರಲಾರದು.

    ರಾಷ್ಟ್ರ ಮಟ್ಟದಲ್ಲಿ ಆರ್ ಎಸ್ ಎಸ್ ಸಿದ್ದಾಂತವನ್ನು ವಿರೋಧಿಸುತ್ತಿರುವವರು ಮತ್ತು “ಮೋದಿ ಭಂಜಕರ”ಪಟ್ಟಿಯಲ್ಲಿ ಸಿದ್ದರಾಮಯ್ಯನವರ ಹೆಸರು ಪ್ರಮುಖವಾಗಿದೆ.ಅದೇ ರೀತಿ ಹರಿಪ್ರಸಾದ್ ಕೂಡ ಸಂಘ ಪರಿವಾರ ಮತ್ತು ಕೋಮುವಾದದ ಉಗ್ರ ಟೀಕಾಕಾರರು.ಅವರಿಗೆ ರಾಷ್ಟ್ರ ರಾಜಕಾರಣದ ಅಪರೂಪದ ಲೋಕದೃಷ್ಟಿ ಮತ್ತು ಭೌದ್ದಿಕ ಪ್ರಖರತೆ(intellectual vigour)ಇದೆ.ದೆಹಲಿ ವರಿಷ್ಠರ ಅಂತಃಪುರಕ್ಕೆ ನೇರ ಪ್ರವೇಶವಿರುವ ಕೆಲವೇ ನಾಯಕರಲ್ಲಿ ಅವರೂ ಒಬ್ಬರು.ಸಿದ್ದರಾಮಯ್ಯನವರಂತೆ ಹರಿಪ್ರಸಾದ್ ಕೂಡ ಒಬ್ಬ ಪರಿಣಾಮಕಾರಿ ಸಂಸದೀಯ ಪಟು.ಶಿವಮೊಗ್ಗದಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಯುವಕನ ಕುಟುಂಬದವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದರೆ ಕಾಂಗ್ರೆಸ್ ಸ್ಪರ್ಧಿಸುವುದಿಲ್ಲ ಎಂದು ಸವಾಲು ಹಾಕುವ ಮೂಲಕ ರಾಜ್ಯದ ಗಮನ ಸೆಳೆದವರು.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹರಿಪ್ರಸಾದ್ ಅವರಿಂದ ಅಂತರ ಕಾಯ್ದುಕೊಂಡಿದ್ದರು.ಸಿದ್ದರಾಮಯ್ಯನವರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಕೆಲವು ರಾಜಕೀಯ ಹಿತಾಸಕ್ತಿಗಳು ಹರಿಪ್ರಸಾದ್ ಅವರನ್ನುಈಗ ಬಳಸುತ್ತಿವೆಯೇ?ಅಥವಾ ಹರಿಪ್ರಸಾದ್ ತಮಗೆ ಗೊತ್ತಿಲ್ಲದಂತೆಯೇ ಸಿದ್ದರಾಮಯ್ಯನವರ ವಿರುದ್ದದ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆಯೇ?ಇಂತಹ ಕುತೂಹಲಗಳು ಸಹಜ.ಕಾಂಗ್ರೆಸ್ ನಲ್ಲಿ ರಾಜಕೀಯ ಚದುರಂಗದಾಟದ ದಾಳಗಳು ಮತ್ತು ಪ್ರತಿದಾಳಗಳು ಸಲೀಸಾಗಿ ಉರುಳುತ್ತಿವೆ.

    ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಕಾಂಗ್ರೆಸ್ ಪಕ್ಷದ ಕಚೇರಿಗಿಂತ ಕಾಂಗ್ರೆಸ್ ಶಾಸಕಾಂಗ ಪಕ್ಷದ(CLP)ಕಚೇರಿ,ವಿರೋಧ ಪಕ್ಷದ ನಾಯಕರ ಕೊಠಡಿ ಅಥವಾ ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯನವರೊಂದಿಗೆ ಕಾಣಿಸಿಕೊಳ್ಳುತ್ತಿರುವುದೇ ಹೆಚ್ಚು.ಕಾರ್ಯಾಧ್ಯಕ್ಷರುಗಳಂತೂ ಇಬ್ಬರೂ ನಾಯಕರ ನಡುವೆ ಹರಿದು ಹಂಚಿ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.ಒಟ್ಟಿನಲ್ಲಿ ಕಾಂಗ್ರೆಸ್ ವಿದ್ಯಮಾನ ಒಂದು ನೆರಳು-ಬೆಳಕಿನ ಆಟದಂತೆ ಭಾಸವಾಗುತ್ತಿದೆ.ಕಾವೇರಿ ನದಿಗೆ ಅಡ್ಡಲಾಗಿ ಒಂದು ಸಮಾನಾಂತರ ಜಲಾಶಯ(balancing reservoir)ನಿರ್ಮಾಣ ಮಾಡುವುದು ಮೇಕೆದಾಟು ಯೋಜನೆಯ ಉದ್ದೇಶ.ಅದೇ ರೀತಿ ಕಾಂಗ್ರೆಸ್ ಪಕ್ಷದ ವಿವಿಧ ನಾಯಕರ ನಡುವೆ ಒಂದು balancing act ನಡೆಯುತ್ತಿದೆ.


    ಸಿ ರುದ್ರಪ್ಪ ನಾಡಿನ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!