23.5 C
Karnataka
Monday, May 20, 2024

    ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ , ಪ್ರಖರ ಚಿಂತಕ ಸಾವರ್ಕರ್ ನೆನಪು

    Must read

    ಇವತ್ತು ಫೆಬ್ರವರಿ 26. 1966 ರ ಇದೇ ದಿನ ಸಾವರ್ಕರ್ ಅವರ ನಿಧನ. ಅವರ ಹೋರಾಟ,ಅದಕ್ಕೆ ಬಳಸಿಕೊಂಡ ತಂತ್ರಗಳು, ವಾಕ್ ಚತುರತೆ, ಬರಹ, ಪ್ರತಿಪಾದಿಸಿದ ನಿಲುವುಗಳು, ಅದಕ್ಕಾಗಿ ಅನುಭವಿಸಿದ ಕಠಿಣ ಶಿಕ್ಷೆ, ಆಗಿನ ಅವರ ಸಮಕಾಲಿಗಳ ಜೊತೆಗಿನ ಸಿದ್ದಾಂತ ಭೇದ ಎಲ್ಲವೂ ಯಾಕೋ ನೆನಪಾದವು. ಇಂತಹ ಎಷ್ಟೋ ಮಹನೀಯರ ಜೀವನ ಚರಿತ್ರೆ ನಮ್ಮ ಇತಿಹಾಸದ ಪುಟಗಳಲ್ಲಿ ಇದ್ದು, ಇವತ್ತಿಗೂ ಅವರವರ ಅನುಯಾಯಿಗಳಿಗೆ ಪ್ರೇರಕರಾಗಿದ್ದಾರೆ. ಎಲ್ಲರೂ ಒಂದಲ್ಲ ಒಂದು ಕಾರಣಗಳಿಗೆ ಇಂದಿಗೂ ಪ್ರಸ್ತುತರಾಗುತ್ತಾರೆ. ಇಂತವರು ಸತ್ತರು ಎನ್ನಲು ಆಗಲ್ಲ. ಅವರ ಭೌತಿಕ ಶರೀರ ಪ್ರಕೃತಿ ಧರ್ಮವನ್ನು ಅನುಸರಿಸಿ ನಶಿಸಲೇ ಬೇಕು, ನಶಿಸಿದೆ ಕೂಡಾ.

    ಬುದ್ಧನಿಂದ ಹಿಡಿದು, ಬಸವಣ್ಣ ಮತ್ತು ನಮ್ಮ ತಲೆಮಾರುಗಳ ಗಾಂಧಿ ತನಕದ ಮಹಾನ್ ಚೇತನಗಳ ಸಾವು ದುರಂತದಲ್ಲಿ ಆಗಿರುವುದು ನಮಗೆ ಅಭಿಪ್ರಾಯ ಭೇದಗಳು ಹಿಂಸೆಯಲ್ಲಿ ಪರ್ಯಾವಸಾನ ಗೊಂಡಿರುವುದನ್ನು ತಿಳಿಸುತ್ತವೆ. ಭಾರತದಲ್ಲೇ ಅಲ್ಲ, ಇಡೀ ಪ್ರಪಂಚದಲ್ಲಿ ಅದು ಸಾಮಾನ್ಯವೇನೋ ಅನ್ನುವಷ್ಟು ಇತಿಹಾಸದ ತುಂಬಾ ಅಂತಹ ಉಲ್ಲೇಖಗಳು ಇವೆ. ಹಾಗೆ ದುರಂತ ಸಾವನ್ನು ಹುತಾತ್ಮರು ಅನ್ನುವ ಮೂಲಕ ಅವರ ದಿವ್ಯ ಚೇತನಗಳನ್ನು ಇಂದಿಗೂ ಜೀವಂತವಾಗಿ ಇಡುವ ಕೆಲಸಗಳೂ ಆಗುತ್ತಿವೆ. ಅದು ಅವರಿಗೆ ಕೊಡುವ ಗೌರವವೂ ಹೌದು. ಕೃತಜ್ಞ ಸಮಾಜ ಪಾಲಿಸಬೇಕು ಸಹಾ.

    ಶಾಂತಿ ಮಾರ್ಗದ ಗಾಂಧೀಜಿ ಸಾವು ದುರಂತದಲ್ಲಿ ಆದರೆ, ಕ್ರಾಂತಿಯ ಮಾರ್ಗವನ್ನು ಪ್ರತಿಪಾದಿಸಿದ ಸಾವರ್ಕರ್ ಸಾವು ವಿಚಿತ್ರವಾಗಿದೆ ಮತ್ತು ಶೋಚನೀಯವಾಗಿದೆ! ಅಭಿಪ್ರಾಯ ಭೇದಗಳನ್ನು ಗೌರವಿಸಬೇಕು, ಅದು ನಮ್ಮ ವಿರುದ್ಧ ಇದ್ದವರದ್ದು ಆದರೂ ಸರಿ ಎಂದು ಬ್ರಿಟಿಷ್ ಸರ್ಕಾರ ತನ್ನ ರಾಣಿಯ ಪಟ್ಟಾಭಿಷೇಕದ ನೆಪಮಾಡಿ ಭಾರತದಲ್ಲಿ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿ, ಪಟ್ಟಿ ತಯಾರಿಸುತ್ತದೆ. ಅದರಲ್ಲಿ ಸಾವರ್ಕರ್ ಸಹೋದರರ (ಗಣೇಶ್,ವಿನಾಯಕ) ಹೆಸರು ಇಲ್ಲದ್ದು ನೋಡಿ ಮತ್ತೊಬ್ಬ ಸಹೋದರ (ನಾರಾಯಣ ಸಾವರ್ಕರ್) ಗಾಂಧೀಜಿ ನೆರವು ಕೋರುತ್ತಾರೆ.

    ಗಾಂಧೀಜಿ 1915ರಲ್ಲಿ ದ.ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದರು. 1911 ರಲ್ಲಿ ಸಾವರ್ಕರ್ ಅವರಿಗೆ ಎರೆಡೆರೆದು ಜೀವಾವಧಿ ಕಠಿಣ ಶಿಕ್ಷೆ ವಿಧಿಸಿ ಆಗಿತ್ತು. ಅಲ್ಲಿಗಾಗಲೇ 10 ವರ್ಷ ಕಠಿಣ ಕಾಲಿಪಾನಿ ಶಿಕ್ಷೆ ಯನ್ನು ಅಂಡಮಾನಿನಲ್ಲಿ ಸಾವರ್ಕರ್ ಅನುಭವಿಸಿರುತ್ತಾರೆ. 1909 ರಲ್ಲಿಯೇ ಸಾವರ್ಕರ್ ಗಾಂಧಿಯನ್ನು, ಅವರ ಮಾರ್ಗವನ್ನು ಟೀಕಿಸಿ ಮಾತಾಡಿರುತ್ತಾರೆ, ಅಷ್ಟೇ ಅಲ್ಲ ಕಸ್ತೂರ್ ಬಾ ಅವರ ಮರಣದ ನೆನಪಲ್ಲಿ ಗಾಂಧಿ ಸಂಗ್ರಹಿಸುತ್ತಿದ್ದ ಹುಂಡಿಯ ಹಣವನ್ನು ಕೊಡಲೂ ನಿರಾಕರಿಸಿರುತ್ತಾರೆ. ಅಷ್ಟೊಂದು ಅಭಿಪ್ರಾಯ ಭೇದವಿದ್ದರೂ ಗಾಂಧಿ ಸಾವರ್ಕರ್ ಸಹೋದರನಿಗೆ, ನಾನು ನಿಮಗೆ ಸಹಾಯ ಮಾಡೋವಷ್ಟು ಇಲ್ಲದಿದ್ದರೂ ಒಂದು ಸಲಹೆ ಕೊಡ್ತೀನಿ. ನೀವು ಅವರು ಮಾಡಿರುವ ಎಲ್ಲ ಕೃತ್ಯಗಳೂ ರಾಜಕೀಯ ಪ್ರೇರಿತವೇ ವಿನಾ ವೈಯಕ್ತಿಕ ಅಲ್ಲ ಅಂತ ಬ್ರಿಟಿಷ್ ಸರ್ಕಾರಕ್ಕೆ ಮನವರಿಕೆ ಮಾಡಿ ಅಂದಿದ್ದರು. ಅಷ್ಟೇ ಅಲ್ಲ ಇದೇ ಫೆಬ್ರವರಿ 26,1920 ರ ತಮ್ಮ ವಾರಕ್ಕೊಮ್ಮೆ ಹೊರಬರುತ್ತಿದ್ದ ಯಂಗ್ ಇಂಡಿಯಾ ದಲ್ಲಿ ಇದರ ಬಗ್ಗೆ ಬರೆಯುತ್ತಾರೆ ಕೂಡ.

    ಇವರಿಗೆ ವೀರ ಸಾವರ್ಕರ್ ಅಂತ ಬಿರುದು ಕೊಟ್ಟದ್ದು ಭಗತ್ ಸಿಂಗ್! ಅಷ್ಟೊಂದು ಕ್ರಾಂತಿಬಣಕ್ಕೆ ಇವರು ಸ್ಫೂರ್ತಿದಾಯಕರಾಗಿರುತ್ತಾರೆ. ಭಗತ್ ಸಿಂಗ್ ರನ್ನು ಗಾಂಧಿ ಉಳಿಸಬಹುದಿತ್ತು, ಹಾಗೆ ಮಾಡಲಿಲ್ಲ ಅನ್ನೋದು ಇವತ್ತಿಗೂ ಒಂದು ವರ್ಗದ ವಾದ. ಸಾವರ್ಕರ್ ಹೇಡಿ, ಬ್ರಿಟಿಷರಿಗೆ ಕ್ಷಮಾ ಭಿಕ್ಷೆ ಬೇಡಿದ್ದರು ಅಂತ ಮತ್ತೊಂದು ವರ್ಗದ ವಾದ. ಒಂದೇ ಗುರಿಗೆ ಎರಡು ದಾರಿಗಳಲ್ಲಿ ಇಂತಹ ಅಭಿಪ್ರಾಯ ಭೇದ ಸಾಮಾನ್ಯ.

    ಇಂತಹ ಅಭಿಪ್ರಾಯ ಭೇದದ ಪರಮೋಚ್ಚತೆ ಏನೋ ಎಂಬಂತೆ ಗಾಂಧಿ ಹತ್ಯೆಯ ದುರಂತದಲ್ಲಿ ಸಾವರ್ಕರ್ ದೋಷಿತರು ಅಂತ ಸ್ವತಂತ್ರ ಭಾರತದ ಸರ್ಕಾರ ಆರೋಪಿಸಿ, ಕಟಕಟೆಯಲ್ಲಿ ನಿಲ್ಲಿಸಿ ಬಿಡುತ್ತೆ! ಸಾವರ್ಕರ್ ತುಂಬಾ ನೊಂದು ಬಿಡುತ್ತಾರೆ. ನಿರ್ದೋಷಿ ಅಂತ ಸಾಬೀತಾಗಿ ಬಂದರೂ 1964 ರಲ್ಲಿ ಸಕ್ರಿಯ ರಾಜಕಾರಣದಿಂದ ದೂರವಾಗ್ತಾರೆ. ಮಹಾಮೌನಕ್ಕೆ ಶರಣಾಗಿ ಬಿಡ್ತಾರೆ. ಅಂದಿನ ವಿದ್ಯಾಮಾನಗಳು ಅವರನ್ನ ಯಾವ ಪರಿ ಹಿಂಸಿಸಿದ್ದವು ಅಂದ್ರೆ, ಫೆಬ್ರವರಿ 1,1966 ರಿಂದ ಊಟ, ನೀರು,ನಿದ್ರೆ ಬಿಟ್ಟು 26 ಕ್ಕೆ ಪ್ರಾಣವನ್ನೂ ಬಿಡ್ತಾರೆ!

    ಇಡೀ ಬ್ರಿಟಿಷ್ ಸರ್ಕಾರವನ್ನು ಅಲುಗಾಡಿಸಿದ ಮಹಾನ್ ಹೋರಾಟಗಾರ, ತನ್ನ ವೈಖರಿ,ಲೇಖನಿಯಿಂದ ಸಾವಿರಾರು ಕ್ರಾಂತಿಕಾರಿಗಳಿಗೆ ಜನ್ಮ ನೀಡಿ ಹುತಾತ್ಮರನ್ನಾಗಿಸಿದ ಸಾವರ್ಕರ್, ಅನ್ನ ನೀರು ಬಿಟ್ಟು ಸಾವನ್ನಪ್ಪಿದರು ಅಂತ ಓದುವಾಗ ಅವ್ಯಕ್ತ ವೇದನೆ ಆಗುತ್ತದೆ. ತನ್ನದೇ ಜನ ತನ್ನನ್ನು ನಡೆಸಿಕೊಂಡ ರೀತಿಗೆ ಝರ್ಝರಿತರಾಗಿ ಬಿಡ್ತಾರೆ. ಯಾಕೋ ಸಾವು ಕೂಡಾ ಸಾವರ್ಕರ್ ಅವರಿಗೆ ಅಗೌರವ ತೋರಿ ದುರಂತ ನಾಯಕನನ್ನಾಗಿ ಮಾಡಿ ಬಿಡ್ತೇನೋ ಅಂತ ಅನ್ನಿಸಿ ಬಿಡ್ತು.

    ಹೌದು ಊರೆಲ್ಲಾ ಒಂದಾದ್ರು ಹೋರಾಡಬಹುದು, ಮನೆಯವರೇ ಎದುರಾದ್ರೆ ಸ್ಥೈರ್ಯ ಕುಂದಿ ಬಿಡುತ್ತದೆ !

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    3 COMMENTS

    1. ಸಾವರ್ಕರ್ ನಿಲುವಿನ ವಾಸ್ತವತೆಯನ್ನು ಮನಕರಗುವಂತೆ ಬರೆದ ಲೇಖನ ಅವರ ರಾಷ್ಟ್ರ ಪ್ರೇಮಕ್ಕೆ ಅರ್ಪಣೆ ಗೆಳೆಯ

    LEAVE A REPLY

    Please enter your comment!
    Please enter your name here

    Latest article

    error: Content is protected !!