22.7 C
Karnataka
Monday, May 20, 2024

    ಬೆಲ್ಲದ ಪೋನ್ ಟ್ಯಾಪ್ ಆರೋಪ; ನ್ಯಾಯಾಂಗ ತನಿಖೆಗೆ ಸಿದ್ಧರಾಮಯ್ಯ ಆಗ್ರಹ

    Must read

    ತಮ್ಮ ಪೋನ್ ಟ್ಯಾಪ್ ಆಗ್ತಿದೆ ಎಂದು ಬಿಜೆಪಿಯ ಭಿನ್ನಮತೀಯ ಶಾಸಕ ಅರವಿಂದ್ ಬೆಲ್ಲದ ಅವರು ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು. ಈ ಆರೋಪವನ್ನು ತಿಪ್ಪೆ ಸಾರಿಸುವ ಸ್ಪಷ್ಟೀಕರಣದ ಮೂಲಕ ಮುಚ್ಚಿಹಾಕುವ ಪ್ರಯತ್ನ ಮಾಡದೆ ಈ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಸತ್ಯ ಸಂಗತಿಯನ್ನು ಬಯಲಿಗೆ ತರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

    ಪೋನ್ ಟ್ಯಾಪಿಂಗ್ ಆಗುತ್ತಿರುವುದನ್ನು ಬಹಿರಂಗಪಡಿಸುವ ಧೈರ್ಯ ತೋರಿದ ಶಾಸಕ ಅರವಿಂದ ಬೆಲ್ಲದ ಅವರನ್ನು ಅಭಿನಂದಿಸುತ್ತೇನೆ. ಇದು ಕೇವಲ ಬೆಲ್ಲದರೊಬ್ಬರ ಪೋನ್ ಗೆ ಸಂಬಂಧಿಸಿದ್ದಾಗಿರಲಿಕ್ಕಿಲ್ಲ, ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯರೆಂದು ಗುರುತಿಸಿಕೊಂಡಿರುವ ಇತರ ಶಾಸಕರು ಮಾತ್ರವಲ್ಲ ವಿರೋಧಪಕ್ಷದ ನಾಯಕರ ಪೋನ್ ಗಳ ಕದ್ದಾಲಿಕೆಯೂ ನಡೆದಿರುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ರಾಜ್ಯ ಬಿಜೆಪಿಯ ಭಿನ್ನಮತೀಯ ನಾಯಕರಿಂದ ಮುಖ್ಯಮಂತ್ರಿಗಳನ್ನು ಪದಚ್ಯುತಿಗೊಳಿಸುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂತಹದ್ದೊಂದು ಆರೋಪ ವ್ಯಕ್ತವಾಗಿದೆ. ಅರವಿಂದ ಬೆಲ್ಲದ ಅವರು ಭಿನ್ನಮತೀಯರ ಜೊತೆ ಗುರುತಿಸಿಕೊಂಡಿರುವ ಪ್ರಮುಖ ಶಾಸಕರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಪದ ಗುರಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಗಿರುತ್ತಾರೆ.
    ಬೆಲ್ಲದ ಅವರ ಆರೋಪದ ತನಿಖೆಯನ್ನು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಯಾವ ಸಂಸ್ಥೆ ನಡೆಸಿದರೂ ಅದರಿಂದ ಸತ್ಯ ಸಂಗತಿ ಖಂಡಿತ ಹೊರಬರಲಾರದು. ಆದ್ದರಿಂದ ಈ ತನಿಖೆಯನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದಲೇ ನಡೆಸುವುದು ಸೂಕ್ತವಾಗಿದೆ. ಬೆಲ್ಲದ ಅವರು ತನ್ನ ಆರೋಪದಲ್ಲಿ ಈಗಾಗಲೇ ಜೈಲಲ್ಲಿರುವ ಯುವರಾಜ ಸ್ವಾಮಿ ಎಂಬ ವ್ಯಕ್ತಿಯ ಹೆಸರೂ ಪ್ರಸ್ತಾಪವಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

    ಇಡೀ ರಾಜ್ಯ ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯದ ಜನತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಾಗಲೇ ಆಡಳಿತಾರೂಢ ಬಿಜೆಪಿಯ ನಾಯಕರು ಬೀದಿಬೀದಿಗಳಲ್ಲಿ ಕಚ್ಚಾಟಕ್ಕೆ ಇಳಿದಿರುವುದು ನೋಡಿದರೆ ಇವರಿಗೆ ಅಧಿಕಾರದ ಲಾಲಸೆ ಮಾತ್ರ ಇದೆ ಹೊರತು ರಾಜ್ಯದ ಜನರ ಹಿತರಕ್ಷಣೆಯ ಕಾಳಜಿ ಕಿಂಚಿತ್ತೂ ಇಲ್ಲ ಎನ್ನುವುದು ಸಾಬೀತಾಗಿದೆ.
    ಭಿನ್ನಮತೀಯ ಚಟುವಟಿಕೆಗಳಿಂದಾಗಿ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಬ್ಧವಾಗಿದೆ.ಈ ಪರಿಸ್ಥಿವತಿಯನ್ನು ಘನತೆವೆತ್ತ ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಈ ಜನದ್ರೋಹಿ ಸರ್ಕಾರವನ್ನು ವಜಾಮಾಡಬೇಕು ಎಂದು ಸಿದ್ಧರಾಮಯ್ಯ ಆಗ್ರಹ ಪಡಿಸಿದ್ದಾರೆ.


    ಬೆಲ್ಲದ ಆರೋಪ ಏನು?

    ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅರವಿಂದ ಬೆಲ್ಲದ ತಮ್ಮ ಪೋನ್ ಟ್ಯಾಪ್ ಆಗುತ್ತಿರುವ ಸಂಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪೀಕರ್, ಗೃಹ ಮಂತ್ರಿ, ಪೋಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!