34.2 C
Karnataka
Thursday, May 9, 2024

    ಪರೀಕ್ಷೆ ಇಲ್ಲದೆ ಪಾಸು ಮಾಡುವುದಕ್ಕಿಂತ ಆನ್ ಲೈನ್ ಪರೀಕ್ಷೆ ನಡೆಸುವುದು ಸೂಕ್ತ

    Must read

    ಕೊರೋನಾ ವೈರಸ್ ನ ಎರಡನೇ ಅಲೆಗೆ ನಾವೆಲ್ಲರೂ ತತ್ತರಿಸಿ ಹೋಗಿದ್ದೇವೆ. ಮೊದಲನೆ ಅಲೆಗಿಂತಲೂ ಈ ಭಾರಿ ಈ ವೈರಸ್ ಹೆಚ್ಚು ಅಪಾಯಕಾರಿಯಾಗಿದ್ದು, ಪ್ರಪಂಚದ ಪ್ರತಿಯೊಬ್ಬ ನಾಗರಿಕನೂ ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದಾನೆ. ನಮ್ಮ ದೇಶದಲ್ಲಂತೂ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಹೊಸ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದು, ಸಾವು ನೋವುಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಕ್ಷೇಮವಾಗಿ, ಆರೋಗ್ಯವಾಗಿರಲು ಕೊರೋನಾ ವೈರಸ್‍ ಅನ್ನು ಓಡಿಸಬೇಕಾಗಿದೆ. ಇದಕ್ಕಿರುವ ಏಕೈಕ ಮಾರ್ಗವೆಂದರೆ ಸರ್ಕಾರದ ಕೋವಿಡ್ ನಿಯಮಗಳನ್ನು ನಾವೆಲ್ಲರೂ ಚಾಚು ತಪ್ಪದೆ ಪಾಲಿಸುವುದು ಮತ್ತು ಯಾವ ಆತಂಕವೂ ಇಲ್ಲದೆ ಲಸಿಕೆಯನ್ನು ಹಾಕಿಸಿಕೊಳ್ಳುವುದು. 

    ಕಳೆದ ವರ್ಷದ (2020) ಮಾರ್ಚ್ ತಿಂಗಳಿನಿಂದಲೂ ಶಿಕ್ಷಣ ಸಂಸ್ಥೆಗಳು ಮುಚ್ಚಿವೆ. ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ವಿದ್ಯಾರ್ಥಿಗಳು ಮನೆಯಿಂದಲೇ ಆನ್ ಲೈನ್ ಮೂಲಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕೊರೋನಾ ಎರಡನೇ ಅಲೆಯು ಪ್ರಬಲವಾಗಿರುವ ಕಾರಣ, ಸೋಂಕು ಹೆಚ್ಚಾಗಿ ಮತ್ತು ವೇಗವಾಗಿ ಹರಡುತ್ತಿದ್ದು ವಿದ್ಯಾರ್ಥಿಗಳ ಜೀವ ಮತ್ತು ಆರೋಗ್ಯದ ದೃಷ್ಟಿಯಿಂದ ಸಿ ಬಿ ಎಸ್ ಇ ಸಂಸ್ಥೆಯು ಹತ್ತನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶವನ್ನು ಹೊರಡಿಸಿದೆ. ಶೈಕ್ಷಣಿಕ ವರ್ಷದಲ್ಲಿ ನಡೆಸಿರುವ ಶಾಲಾ ಮಟ್ಟದ ಪರೀಕ್ಷೆಗಳು ಮತ್ತು ಟೆಸ್ಟ್ ಗಳಲ್ಲಿ ವಿದ್ಯಾರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನಮ್ಮ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಹೊರತು ಪಡಿಸಿ ಉಳಿದ ತರಗತಿಗಳಲ್ಲಿ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

    ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ನಡೆಸ ಬೇಕೆ ಅಥವಾ ಬೇಡವೇ ಎಂಬುವುದರ ಬಗ್ಗೆ ಜೂನ್ ತಿಂಗಳಿನಲ್ಲಿ ಕೋವಿಡ್ ನ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ಮಾಡುವುದಾಗಿ ಸಿ ಬಿ ಎಸ್ ಇ ಸಂಸ್ಥೆ ತಿಳಿಸಿದೆ. ಮಾನ್ಯ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಲಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಹಲವಾರು ರಾಜ್ಯ ಸರ್ಕಾರಗಳೂ ಸಹ ಹತ್ತನೇ ಮತ್ತು ಹನ್ನೆರಡನೇ ತರಗತಿಗಳ ಪರೀಕ್ಷೆಗಳನ್ನು ಮುಂದೂಡಿವೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಬಿಟ್ಟರೆ, ಬೇರೆ ಮಾರ್ಗವಿಲ್ಲವೆಂದೇ ಹೇಳಬಹುದು. ಈ ತೀರ್ಮಾನಗಳನ್ನು ಹಲವಾರು ವಿದ್ಯಾರ್ಥಿಗಳು, ಪೋಷಕರು ಮತ್ತು ಪ್ರಾಂಶುಪಾಲರುಗಳು ಸ್ವಾಗತಿಸಿದ್ದಾರೆ.

    ಪರೀಕ್ಷೆಗಳು ಏಕೆ ಬೇಕು?

    ಅಂತಿಮ ಘಟ್ಟದ ಪರೀಕ್ಷೆಯನ್ನು ನಡೆಸದೇ, ಪರಿಣಾಮಕಾರಿಯಾಗಿ ಮೌಲ್ಯಮಾಪನ ಮಾಡದೇ, ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕೆಲವು ಶಿಕ್ಷಣ ತಜ್ಞರದು. ಪರೀಕ್ಷೆಗಳು ಏಕೆ ಬೇಕು, ಪರೀಕ್ಷೆಗಳ ಉದ್ದೇಶಗಳೇನು ಎಂಬುವುದರ ಬಗ್ಗೆ ತಿಳಿಯೋಣ.

    ಕಲಿಕೆಯ ಪ್ರಕ್ರಿಯೆಯಲ್ಲಿ ಪರೀಕ್ಷೆಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿವೆ. ನಿರ್ದಿಷ್ಟ ವಿಷಯಗಳಲ್ಲಿ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ, ಅವರ ಕಲಿಕಾ ಮಟ್ಟವೇನು, ಯಾವ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಅಧ‍್ಯಾಪನ ಬೇಕಾಗಿದೆ ಎಂಬ ಅಂಶಗಳ ಬಗ್ಗೆ ಅರಿಯಲು ಪರೀಕ್ಷೆಗಳನ್ನು ನಡೆಸುವುದು ಉತ್ತಮವಾದ ಮಾರ್ಗ ಹಾಗೂ ಈ ಅಂಶಗಳು ಪರೀಕ್ಷೆಗಳ ಉದ್ದೇಶಗಳೂ ಸಹ.

    ಈ ಮೌಲ್ಯ ಮಾಪನದಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಸಹ ಅಳೆಯಬಹುದು, ಜೊತೆಗೆ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಮತ್ತು ನ್ಯೂನ್ಯತೆಗಳನ್ನು (Strengths and weaknesses) ಸಹ ಅರಿಯ ಬಹುದು. ಪರೀಕ್ಷೆಗಳಲ್ಲಿನ ವಿದ್ಯಾರ್ಥಿಗಳ ಸಾಧನೆಯಿಂದ ಶಿಕ್ಷಕರಿಗೆ ಅವರ ಪಾಠ ಪ್ರವಚನಗಳ ಶೈಲಿಯನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿಕೊಳ್ಳಲು ಸಹಾಯವಾಗುತ್ತದೆ. ಸೆಕೆಂಡರಿ ಮತ್ತು ಉನ್ನತ ಶಿಕ್ಷಣಗಳ ಮಟ್ಟದಲ್ಲಿ ಪರೀಕ್ಷೆಗಳು ಹೆಚ್ಚಿನ ಮಹತ್ವವನ್ನು ಹೊಂದಿವೆ.

    ಮೌಲ್ಯಮಾಪನ ವಿಧಾನದಲ್ಲಿ ಎರಡು ಬಗೆಯ ವಿಧಾನಗಳಿವೆ. ರಚನಾತ್ಮಕ ಮೌಲ್ಯಮಾಪನ (Formative Assessment) ಮತ್ತು ಸಾರಾಂಶ ಮೌಲ್ಯಮಾಪನ   (Summative Assessment). ಯಾವುದೇ ಪಾಠ / ಕೋರ್ಸು / ಪಠ್ಯದ ಭಾಗವನ್ನು ಕಲಿಸುವ ಸಮಯದಲ್ಲಿ, ವಿದ್ಯಾರ್ಥಿಗಳ ಕಲಿಕೆಯ ಆಳ, ಕಲಿಕೆಯ ಅವಶ್ಯಕತೆಗಳು, ಶೈಕ್ಷಣಿಕ ಪ್ರಗತಿ ಇವುಗಳನ್ನು ತಿಳಿಯಲು ನಡೆಸುವ ಹಲವಾರು ಮೌಲ್ಯಮಾಪನ ವಿಧಾನಗಳನ್ನು ರಚನಾತ್ಮಕ ಮೌಲ್ಯಮಾಪನ ಪದ್ಧತಿ ಎಂದು ಕರೆಯುತ್ತಾರೆ. ಉದಾಹರಣೆಗೆ ತರಗತಿಗಳಲ್ಲಿ ನಡೆಸುವ ಚರ್ಚೆಗಳು, ಪ್ಲಾಷ್ ಪ್ರಶ್ನೆಗಳು, ಕ್ವಿಜ್ ಗಳು, ವಿದ್ಯಾರ್ಥಿಗಳಿಂದ ಉಪನ್ಯಾಸಗಳು, ಗ್ರೂಪ್ ಚರ್ಚೆಗಳು, ಇತ್ಯಾದಿ.

    ಯಾವುದೇ ಕೋರ್ಸು / ಪಾಠ / ಪಠ್ಯ ಭಾಗದ ಭೋದನೆ ಮುಗಿದ ನಂತರ ಅಂತಿಮವಾಗಿ ವಿದ್ಯಾರ್ಥಿಗಳ ಕಲಿಕೆಯ ಆಳವನ್ನು ಅಳೆಯುವ ಉದ್ದೇಶದಿಂದ ನಡೆಸುವ ಮೌಲ್ಯಮಾಪನ ಪದ್ಧತಿಗೆ ಸಾರಾಂಶ ಮೌಲ್ಯಮಾಪನ ಎಂದು ಕರೆಯುತ್ತಾರೆ. ಉದಾಹರಣೆಗೆ  ಅರ್ಧ ವಾರ್ಷಿಕ ಪರೀಕ್ಷೆ, ವಾರ್ಷಿಕ ಪರೀಕ್ಷೆ ಅಥವಾ ಒಂದು ಅಧ್ಯಾಯದ ಕೊನೆಯಲ್ಲಿ ಮಾಡುವ ಪರೀಕ್ಷೆ.

    ಕಲಿಕೆಯು ಸಂಪೂರ್ಣವಾಗಿ ಪರಿಣಾಮಕಾರಿಯಾಗ ಬೇಕಾದರೆ, ಮೇಲೆ ತಿಳಿಸಿರುವ ಎರಡು ಪದ್ಧತಿಗಳನ್ನು ಸಹ ಅಳವಡಿಸ ಬೇಕಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಅನೇಕ ವಿದ್ಯಾ ಸಂಸ್ಥೆಗಳಲ್ಲಿ ಎರಡು ವಿಧಾನಗಳಲ್ಲಿಯೂ ಮೌಲ್ಯಮಾಪನ ಮಾಡಲಾಗುತ್ತದೆ.

    ಪ್ರಚಲಿತ ಸ್ಥಿತಿ

    ಪ್ರಚಲಿತ ಪರಿಸ್ಥಿತಿಯಲ್ಲಿ ಕೋವಿಡ್ 19 ರಣಕೇಕೆ ಹಾಕುತ್ತಾ, ಸಾವಿರಾರು ಪ್ರಾಣಗಳನ್ನು ಬಲಿ ಪಡೆಯುತ್ತಿರುವ ಕಾಲದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲಾ ವಿಧಾನಗಳಲ್ಲಿ ಮೌಲ್ಯಮಾಪನ ಮಾಡುವುದು ನಿಜವಾಗಲೂ ಸಾಧ್ಯವಿಲ್ಲ.

    ಆದ್ದರಿಂದಲೇ, ಸಿ ಬಿ ಎಸ್ ಇ ಸಂಸ್ಥೆಯು ಹತ್ತನೇ ತರಗತಿಯ ಪರೀಕ್ಷೆಗಳನ್ನು ರದ್ಧುಗೊಳಿಸಿ ಶಾಲೆಗಳಲ್ಲಿ ಇದುವರೆವಿಗೂ ನಡೆಸಿರುವ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ನೀಡುವಂತೆ ಆದೇಶವನ್ನು ನೀಡಿದೆ. ಆದರೆ, ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿ, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲಂಬಿಸಿ, ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ರಾಜ್ಯ ಸರ್ಕಾರಗಳು ಸಹ ಪರೀಕ್ಷೆಗಳನ್ನು ನಡೆಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿರುವುದಿಲ್ಲ.

    ಹನ್ನೆರಡನೇ ತರಗತಿಯ ಪರೀಕ್ಷೆ ಒಂದು ಘಟ್ಟದ ಅಂತಿಮ ಪರೀಕ್ಷೆಯಾಗಿದ್ದು, ಈ ಪರೀಕ್ಷೆಯಲ್ಲಿನ ಸಾಧನೆಯ ಆಧಾರದ ಮೇಲೆ, ಮುಂದೆ ವಿದ್ಯಾರ್ಥಿಗಳು, ವೃತ್ತಿಪರ ಶಿಕ್ಷಣವನ್ನು ಆರಿಸಿಕೊಳ್ಳ ಬೇಕಾಗಿದೆ. ಆದ್ದರಿಂದ ಹನ್ನೆರಡನೇ ತರಗತಿಯ ಪರೀಕ್ಷೆಗಳು ಬಹಳ ಮುಖ್ಯ. ಪರೀಕ್ಷೆಗಳನ್ನು ರದ್ದುಗೊಳಿಸಿ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಿದರೆ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಕುಂಠಿತವಾಗುತ್ತದೆ. ನನ್ನ ಅನುಭವದಲ್ಲಿ ಹೇಳುವುದಾದರೆ, ವಿದ್ಯಾರ್ಥಿಗಳು, ಪರೀಕ್ಷೆ ನಡೆಸಲಾಗುತ್ತದೆ ಎಂದರೇ ಮಾತ್ರ, ಮುತುವರ್ಜಿಯಿಂದ, ಶ್ರದ್ಧಾಯುಕ್ತವಾಗಿ ವ್ಯಾಸಂಗ ಮಾಡುತ್ತಾರೆ. ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲಿ ನಡೆಸುವ ಆಂತರಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ತೋರುವುದಿಲ್ಲ.

    ಉದಾಹರಣೆಗೆ ಹೇಳುವುದಾದರೆ, ದಿವಂಗತ ಡಾ.ಎಚ್ ನರಸಿಂಹಯ್ಯನವರು, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ, ಪದವಿ ತರಗತಿಗಳಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಮಟ್ಟದ ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದುಮಾಡಿ, ಆಂತರಿಕ ಮೌಲ್ಯಮಾಪನ ಪದ್ಧತಿಯನ್ನು ಜಾರಿಗೊಳಿಸಿದರು. ಪರಿಣಾಮವಾಗಿ, ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಶ್ರದ್ಧೆಯನ್ನು ತೋರುತ್ತಿರಲಿಲ್ಲ. ಭೌತಶಾಸ್ತ್ರದ ಉಪನ್ಯಾಸಕನಾಗಿ ನಾನು ಗಮನಿಸಿರುವ /  ನನ್ನ ಅನುಭವಕ್ಕೆ ಬಂದಿರುವ ವಿಷಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಮುತುವರ್ಜಿ ಮತ್ತು ಶ್ರದ್ಧೆ ಬರ ಬೇಕಾದರೆ, ಪರೀಕ್ಷೆಗಳನ್ನು ನಡೆಸ ಬೇಕಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ Outcome based learning ಪದ್ಧತಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಈ ಅಂಶವನ್ನು ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿಯೂ ಸಹ ಪ್ರಸ್ತಾಪಿಸಲಾಗಿದೆ. Learning outcomes ನಿರ್ಧರಿಸಲು, ಮೌಲ್ಯಮಾಪನ ಬಹಳ ಮುಖ್ಯ. ಆದರೆ ಪ್ರಚಲಿತ ಪರಿಸ್ಥಿತಿಯಲ್ಲಿ , ಭೌತಿಕವಾಗಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ. ಅಂತಿಮ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸಬಹುದು. ಹಿಂದಿನ ವರ್ಷದ ಮೊದಲ ಅಲೆಯ ಸಂದರ್ಭದಲ್ಲಿ (2020) ಹಲವು ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆಗಳಿತ್ತು, ಆದರೆ ಈಗ ಚಿತ್ರಣ ವಿಭಿನ್ನವಾಗಿದೆ. ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣಕ್ಕೆ ಹೊಂದಿಕೊಂಡಿದ್ದಾರೆ ಮತ್ತು ಇದು ಅನಿವಾರ್ಯವೂ ಕೂಡ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ, ನೆಟ್ ವರ್ಕ್ ಸಂಪರ್ಕ ಸುಧಾರಿಸಿದೆ. ಸಮಸ್ಯೆಯಿರುವ ಕಡೆ, ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ಉನ್ನತ ಶಿಕ್ಷಣ ಮತ್ತು ಸೆಕೆಂಡರಿ ಮಟ್ಟದಲ್ಲಿ ಎಲ್ಲಾ ವಿದ್ಯಾರ್ಥಿಗಳ ಬಳಿ ಟ್ಯಾಬ್ ಅಥವಾ ಸ್ಮಾರ್ಟ್ ಪೋನ್ ಇರುತ್ತದೆ. ಆದ್ದರಿಂದ ಹನ್ನೆರಡನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸಬಹುದು. ವರ್ಷ ಪೂರ್ತಿ ಕಾಲೇಜಿನ ಮಟ್ಟದಲ್ಲಿ ನಡೆಸಿದ ಆಂತರಿಕ ಮೌಲ್ಯಮಾಪನ ಮತ್ತು ಆನ್ ಲೈನ್ ಪರೀಕ್ಷಗಳ ಸಾಧನೆಯನ್ನು 50 : 50 ಅನುಪಾತದಲ್ಲಿ ಪರಿಗಣಿಸಿ ಫಲಿತಾಂಶವನ್ನು ನೀಡುವುದು ಸೂಕ್ತ. ಇದರಿಂದ, ವಿದ್ಯಾರ್ಥಿಗಳ ಕಲಿಕಾ ಧೃಷ್ಟಿಯಿಂದಲೂ ಅನುಕೂಲವಾಗುತ್ತದೆ.                 

    ಇದನ್ನೂ ಓದಿ: ಆನ್‍ಲೈನ್ ಶಿಕ್ಷಣ ಭವಿಷ್ಯತ್ತಿನ ಶಿಕ್ಷಣ

    Photo by Glenn Carstens-Peters on Unsplash

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ.
    spot_img

    More articles

    18 COMMENTS

    1. During the early stages of the pandemic, when the nature of the coronavirus was still unknown, most universities made the decision to temporarily avoid all in-person contact and close their campuses completely.
      Without a clear understanding of how the coronavirus operated and the most effective measures to prevent its spread, collecting students into one room for a prolonged period was no longer considered safe.

      So doing online exams are best decision
      However, examinations are a critical part of the higher education process and a necessary step in providing students with accurate grades.

    2. ಪರೀಕ್ಷೆಗಳು ವಿದ್ಯಾರ್ಥಿಗಳ ಬೌದ್ಧಿಕತೆಯನ್ನು ಹೆಚ್ಚಿಸಲು ಸಹಕಾರಿ. ಮಾನಸಿಕವಾಗಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಅವರಲ್ಲಿ ತುಂಬಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಜ್ಞಾವಂತಿಕೆ ಬೆಳೆಯುವ ಹಂತದಲ್ಲಿ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟು ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಒಂದು ವರ್ಷದಿಂದ ಇಲ್ಲವಾಗಿವೆ. ನಿಜಕ್ಕೂ ಇದು ಶೋಚನೀಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆನ್‌ಲೈನ್ ಮೂಲಕ ಮಾಡಬಹುದಾದ ಪ್ರಯತ್ನಗಳನ್ನು ಮಾಡುವುದೇ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಉಳಿದಿರುವ ದಾರಿ. ಈ ದೃಷ್ಟಿಯಿಂದ ಆನ್‌ಲೈನ್ ಪರೀಕ್ಷೆಗಳನ್ನು ನಡೆಸುವ ಆವಶ್ಯಕತೆಯನ್ನು ಮಾನ್ಯ ಪ್ರಾಚಾರ್ಯರು ವಿವರಿಸಿದ್ದಾರೆ. ಸರ್ಕಾರವು ಅವರ ಸಲಹೆಯನ್ನು ಪರಿಗಣಿಸುವುದೊಳಿತು. ನಮಸ್ಕಾರ

    3. ನೆಟ್ ವರ್ಕ್ ಸಮಸ್ಯೆ ಇರುವ ಕಡೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದೀರಿ, ಜೊತೆಗೆ ಈ ನಿಟ್ಟಿನಲ್ಲಿ ಎಂತಹ ಕ್ರಮಗಳು ಸೂಕ್ತ ಎಂದು ಸಲಹೆ ಕೊಡಬಹುದಿತ್ತು ಎಂದು ನನ್ನ ಅಭಿಪ್ರಾಯ. ಆನ್ ಲೈನ್ ಪರೀಕ್ಷೆಯನ್ನು ಮಾಡುವುದು ಖಂಡಿತ ಒಳ್ಳೆಯದು. 👍

    4. ಆನ್ಲೈನ್ ಪರೀಕ್ಷೆ ನೇ ಈಗಿನ ಪರಿಸ್ಥಿತಿಯಲ್ಲಿ ಉತ್ತಮ. ಪರೀಕ್ಷೆ ಮಾಡದೆ ಇರೋದಕ್ಕಿಂತ ಈ ರೀತಿ ಮಾಡೋದೆ ಒಳ್ಳೆಯದು.

    5. Your idea is good. But students start giving reason that , they are not getting network at their place. Again this will be supported from intellectual community

    6. On- line examn could be conducted for 2/3 days in each subject with different question papers.This might solve network ptroblem to some extent.

    7. Really thoughtful of you to share such lovely information on this platform. Great way to engage with our student community. Thank you for inspiring!

    8. ಒಬ್ಬರು ಬೇರೆ ಕಾಲೇಜಿನ ಉಪನ್ಯಾಸಕರನ್ನು ಸ್ಥಿರ ಜಾಗೃತ ದಳದ ಸಿಬ್ಬಂದಿಯಾಗಿ ನೇಮಿಸಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಿ ಕಡಿಮೆ ವಿದ್ಯಾರ್ಥಿಗಳ ಹಂಚಿಕೆಯೊಂದಿಗೆ
      ಸಾಮಾಜಿಕ ಅಂತರದಲ್ಲಿ ಕರೋನ ಸ್ವಲ್ಪ ಕಡಿಮೆಯಾದ ನಂತರ ಪರೀಕ್ಷೆ ನಡೆಸುವುದು ಉತ್ತಮ. ಪ್ರತಿವರ್ಷ ಒಂದೊಂದು ಅಲೆ ಇರುತ್ತದೆ ಏನೋ ಕಾರಣ ಕೊಟ್ಟು ನೆಪಮಾತ್ರಕ್ಕೆ ಪರೀಕ್ಷೆ ನಡೆಸುವುದು ಅಥವಾ ತೇರ್ಗಡೆ ಮಾಡುವುದರಿಂದ ಪ್ರಯೋಜನವಿಲ್ಲ .ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸವಾಗುತ್ತದೆ ಮತ್ತು ವ್ಯರ್ಥವಾಗಿ ಪದವಿ ಪ್ರಮಾಣ ಪತ್ರ ನೀಡಿದಂತೆ ಹೋದ ವರ್ಷ ಕೂಡ ಏನು ಬರದಿರುವ ವಿದ್ಯಾರ್ಥಿಗಳಿಗೆ 95℅ ಮೇಲೆ ಫಲಿತಾಂಶ ನೀಡಿರುವುದು ಪ್ರಯೋಜನವಿಲ್ಲ

    9. ಹಳ್ಳಿಗಳಲ್ಲಿ ನೆಟ್ ವರ್ಕ್ ಇಂಜಿನಿಯರುಗಳನ್ನು ಕಳುಹಿಸಿ ಆನ್ ಲ್ಲೆನ್ ಕ್ಲಾಸ್ ಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಭಾಗವಹಿಸುವ ಸುಧಾರಣೆಗಳನ್ನು ಮಾಡಬೇಕು ಯಾವೊಬ್ವವಿದ್ಯಾರ್ಥಿಯ ನೆಟ್ ವರ್ಕ್ ಇಲ್ಲ ಎಂಬ ಕಾರಣದಿಂದ ಗೈರು ಹಾಜರಾಗುವ ಕಾರಣ ಸೃಷ್ಟಿಯಾಗದಂತೆ ನೆಬ್ ವರ್ಕ್ ಎಂಜಿನಯರುಗಳು ನೋಡಿಕೊಳ್ಳಬೇಕು ಪಾಠ ಪ್ರವಚನಗಳು ಸಮಸ್ಯೆ ಇಲ್ಲದೆ ನಡೆದರೆ ಆನ್ ಲೈನ್ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸಬಹುದು

    10. ಆಗೇ ಪಾಸ್ ಮಾಡೋದು ಉತ್ತಮ ನನ್ನ ಪ್ರಕಾರ
      ಏಕೆ ಅಂದ್ರೆ. ಎಲ್ಲರೂ ಒಂದೇ ತರ ಇರೋದಿಲ್ಲ. ಸಮಸ್ಯೆ, ಮೊಬೈಲ್ ಸಮಸ್ಯೆ,
      ಕೆಲಸ,
      ನೀವು ಏನೋ ಅಲ್ಲಿ ಇದ್ದು ಆನ್ಲೈನ್ ಎಕ್ಸಾಮ್ ಮಾಡಬೇಕು ಅಂದ್ರೆ ಹೇಗೇ. ಹಳ್ಳಿ ಅಲ್ಲಿ ಇರೋ ವಿದ್ಯಾರ್ಥಿಗಳ ಪರಿಸ್ಥಿತಿ ಏನು.

    LEAVE A REPLY

    Please enter your comment!
    Please enter your name here

    Latest article

    error: Content is protected !!