34.2 C
Karnataka
Thursday, May 9, 2024

    ಮರುಭೂಮಿಗಳ ಮಾಯಾಲೋಕ

    Must read

    ಮರುಭೂಮಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರಣವೆಂದರೆ ಮರಳು ರಾಶಿಗಳಿಂದ ಕೂಡಿದ ಅತಿ ಉಷ್ಣತೆಯ ವಾತಾವರಣವಿರುವ, ಅತಿ ಕಡಿಮೆ ಮಳೆಯಾಗುವ, ಸಸ್ಯಗಳು ಮತ್ತು ಪ್ರಾಣಿಗಳು ಅತಿ ವಿರಳ ಅಥವಾ ಇಲ್ಲವೇ ಇಲ್ಲದ ನಿರ್ಜನ ಪ್ರದೇಶ. ಈ ಚಿತ್ರಣ ಸ್ವಲ್ಪ ಮಟ್ಟಿಗೆ ಸರಿ ಅನಿಸಿದರೂ ಸಹ, ಮರುಭೂಮಿಗಳ ವೈವಿಧ್ಯತೆ ಅಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಸಸ್ಯಗಳು ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವ ರೀತಿ ಇವುಗಳನ್ನು ಗಮನಿಸಿದರೆ ನಮಗೆ ನಿಜವಾಗಿಯೂ ಅಚ್ಚರಿಯುಂಟಾಗಿ, ಮರುಭೂಮಿಗಳು ಮಾಯಾಲೋಕವೇ ಸರಿ ಎಂಬ ಭಾವನೆ ಬರುವುದು ಖಚಿತ.

    ಭೂಗೋಳ ಶಾಸ್ತ್ರದ ಪ್ರಕಾರ ಯಾವ ಪ್ರದೇಶದಲ್ಲಿ ವಾರ್ಷಿಕ ಮಳೆ ಸರಾಸರಿ 250 ಮಿಲಿ ಮೀಟರ್ ಗಿಂತ ಕಡಿಮೆ ಇದೆಯೋ, ಅಂತಹ ಪ್ರದೇಶಗಳನ್ನು ಮರುಭೂಮಿ ಎಂದು ಕರೆಯಲ್ಪಡುತ್ತದೆ.ಸಸ್ಯಗಳಿಗೆ ಮತ್ತು ಪ್ರಾಣಿಗಳಿಗೆ ಜೀವನಕ್ಕೆ ಬೇಕಾದಷ್ಟು ಜಲಾಧಾರವನ್ನು ಒದಗಿಸಲಾಗದಷ್ಟು ಒಣ ವಾತಾವರಣವನ್ನು ಮರುಭೂಮಿಗಳಲ್ಲಿ ನಾವು ಕಾಣುತ್ತೇವೆ.ಮರುಭೂಮಿಗಳಲ್ಲಿ ಹೆಚ್ಚು ಉಷ್ಣತೆ ಮತ್ತು ಶೀತ ವಾತಾವರಣಗಳಿರುವ ಎರಡು ಬಗೆಯ ಮರುಭೂಮಿಗಳನ್ನು ನಾವು ಕಾಣ ಬಹುದು.

    ಭೂಮಿಯ ಒಂದನೇ ಮೂರು ಭಾಗದಷ್ಟು (1/3)ಪ್ರದೇಶ ಮರುಭೂಮಿಗಳಿಂದ ಆವರಿಸಿದೆ. ವಿಶೇಷತೆಯೆಂದರೆ ಮರುಭೂಮಿಗಳನ್ನು ಪ್ರಪಂಚದ ಎಲ್ಲಾ ಆರು ಖಂಡಗಳಲ್ಲಿಯೂ ನಾವು ಕಾಣುತ್ತೇವೆ.ಪ್ರಪಂಚದ ಅತಿದೊಡ್ಡ ಮರುಭೂಮಿ ಅಂಟಾರ್ ಕ್ಟಿಕ್.

    ಮರುಭೂಮಿಗಳನ್ನು ಸಾಮಾನ್ಯವಾಗಿ ಮೂರು ಬಗೆಯ ಮರುಭೂಮಿಗಳಾಗಿ ವರ್ಗಾಯಿಸಲಾಗಿದೆ.

    1) ಉಷ್ಣ ವಲಯದ( tropical) ಮರುಭೂಮಿಗಳು ( ಅತಿ ಉಷ್ಣತೆ ಮತ್ತು ಕಡಿಮೆ ವಾರ್ಷಿಕ ಮಳೆ 250 m m ರಿಂದ 200 m m )

    2) ಸಮಶೀತೋಷ್ಣ ವಲಯದ( temperate)  ಮರುಭೂಮಿಗಳು ( ಸಾಧಾರಣ ಉಷ್ಣತೆ ಮತ್ತು ವಾರ್ಷಿಕ ಮಳೆ 200 m m ರಿಂದ 500 m m )

    3) ಉನ್ನತ ಪ್ರದೇಶದ ಶೀತ ಅಥವಾ ಧೃವ ಮರುಭೂಮಿಗಳು.

    ಉಷ್ಣ ವಲಯದ ಮರುಭೂಮಿಗಳು : ಆಫ್ರಿಕಾದ ಸಹರಾ ಮರುಭೂಮಿ, ಅರೇಭಿಯಾ ಮರುಭೂಮಿ,ಭಾರತದ ಥಾರ್ ಮರುಭೂಮಿ. ಉಷ್ಣ ವಲಯದ ಮರುಭೂಮಿಗಳಲ್ಲಿ ತಾಪಮಾನವು 58ಡಿಗ್ರಿ ಸೆಂಟಿಗ್ರೇಡ್ ತಲುಪುತ್ತದೆ. ಸಮಶೀತೋಷ್ಣದ ಮರುಭೂಮಿಗಳು, ಚೀನಾದ ಗೋಬಿ ಮರುಭೂಮಿ,ಅಮೇರಿಕಾದಕೊಲೊರಾಡೊ ಮರುಭೂಮಿ, ಚಿಲಿ ದೇಶದ ಅಟಕಾಮಾ,ಅರ್ಜೆಂಟೈನಾದ ಪೆಟೆಗೋನಿಯಾ ಮುಂತಾದವು.

    ಸಹರಾ ಮರುಭೂಮಿ | Photo by Greg Gulik from Pexels
    ಥಾರ್ ಮರಭೂಮಿ |Photo by Aimanness Harun on Unsplash

    ಉನ್ನತ ಪ್ರದೇಶದ / ಶೀತ ವಲಯದ ಮರುಭೂಮಿಗಳು : ಆರ್ಕ್ಟಿಕ್  ಹಾಗೂ ಅಂಟಾರ್ಟಿಕಾ ಪ್ರದೇಶಗಳು.ಈ ಮರುಭೂಮಿಗಳು ಹೆಚ್ಚಿನ ಅಕ್ಷಾಂಶದ ಪ್ರದೇಶಗಳಲ್ಲಿ ಕಾಣಿಸುತ್ತವೆ.ಇಲ್ಲಿ ಹೆಚ್ಚಿನ ತಾಪಮಾನವಿಲ್ಲದಿದ್ದರೂ, ಸಸ್ಯ ವರ್ಗ ಇಲ್ಲದೇ ಇರುವುದು ಹಾಗೂ ಕಡಿಮೆ ನೀರಿನ ಆವಿಯಿರುವುದರಿಂದ ಮರುಭೂಮಿ ಎಂದು ಪರಿಗಣಿಸಲಾಗಿದೆ.ಅಂಟಾರ್ಟಿಕಾದ ಒಳಭಾಗ ಮತ್ತು ಆರ್ಕ್ಟಿಕ್ ನ ಹೆಚ್ಚಿನ ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ಮಳೆ 125 ರಿಂದ 200 ಮಿ ಮೀ.

    ಇದೇ ಆಧಾರದ ಮೇರೆಗೆ ಭೂಮಿಯ ನೆರೆ ಗ್ರಹವಾಗಿರುವ ಮಂಗಳ ಗ್ರಹ ಮತ್ತು ಉಪ ಗ್ರಹ ಚಂದ್ರ ಇವುಗಳ ಮೇಲ್ಮೈ ಹಾಗೂ ವಾತಾವರಣ ಮರುಭೂಮಿಯ ಲಕ್ಷಣಗಳನ್ನು ಹೊಂದಿದೆಯೆಂದು ತೀರ್ಮಾನಿಸಲಾಗಿದೆ.

    ಎಡಫಿಕ್( edaphic) ಮರುಭೂಮಿಗಳು: ಇನ್ನು ಕೆಲವು ಪ್ರದೇಶಗಳಲ್ಲಿ ವಾರ್ಷಿಕ ಮಳೆ 250 ಮಿ.ಮೀ ಗಿಂತಲೂ ಹೆಚ್ಚಾಗಿದ್ದರೂ ಸಹ ಶುಷ್ಕ ವಾತಾವರಣ ಹೊಂದಿದ್ದು ಬಂಜರು ಪ್ರದೇಶಗಳಾಗಿವೆ. ಇವುಗಳನ್ನು ಎಡಫಿಕ್( edaphic) ಮರುಭೂಮಿಗಳು ಎಂದು ಕರೆಯುತ್ತಾರೆ. ಮೇಲ್ಮೈ ಜ್ವಾಲಾಮುಖಿ ಸ್ಪೋಟಗಳ ಅವಶೇಷಗಳಿಂದ ಕೂಡಿದ್ದು, ಸರಂಧ್ರಗಳಿರುವ ಕಾರಣ ನೀರು ಬೇಗನೆ ಇಂಗುತ್ತದೆ. ಆದ್ದರಿಂದ ಸಸ್ಯಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವಿರುತ್ತದೆ. ಉದಾಹರಣೆ ಅಮೇರಿಕಾದ ಕೊಲೊರಾಡೊ ಪ್ರಸ್ಥಭೂಮಿ.

    ಹವಾಮಾನ ಪ್ರಕ್ರಿಯೆಯಿಂದ ಮರುಭೂಮಿಗಳು ರೂಪುಗೊಳ್ಳುತ್ತವೆ.ಮರುಭೂಮಿಗಳಲ್ಲಿ ಬೆಳಗಿನ ಮತ್ತು ರಾತ್ರಿಯ ಉಷ್ಣತೆಯಲ್ಲಿ ಅಪಾರ ವ್ಯತ್ಯಾಸವಿರುತ್ತದೆ.ಬೆಳಗಿನ ಸಮಯದಲ್ಲಿ ಅತಿ ಶಾಖದ ವಾತಾವರಣವಿದ್ದರೆ, ರಾತ್ರಿ ವೇಳೆಯಲ್ಲಿ ಅತಿ ಶೀತಲ ವಾತಾವರಣವುಂಟಾಗುತ್ತದೆ. ಈ ಉಷ್ಣತೆಯ ಏರಿಳಿತಗಳಿಂದ ಕಲ್ಲು ಬಂಡೆಗಳಲ್ಲಿ ತುಯ್ತುಗಳುಂಟಾಗಿ( Stress), ಒಡೆದು ಪುಡಿ ಪುಡಿಯಾಗುತ್ತವೆ. ಹಲವಾರು ವರ್ಷಗಳಿಗೊಮ್ಮೆ ( ಕೆಲವು ಸಾರಿ, ನೂರಾರು ವರ್ಷಗಳ ನಂತರ) ಅತಿ ಮಳೆ ಸುರಿದು ಪ್ರವಾಹಗಳು ಸಹ ಉಂಟಾಗುತ್ತವೆ. ಅತಿಯಾಗಿ ಕಾದಿರುವ ಕಲ್ಲು ಬಂಡೆಗಳ ಮೇಲೆ ಮಳೆ ಬಿದ್ದಾಗಲೂ ಸಹ ಕಲ್ಲು ಬಂಡೆಗಳು ಒಡೆದು ಪುಡಿಪುಡಿಯಾಗ ಬಹುದು.ಬಿರುಗಾಳಿ ಬೀಸಿದಾಗ, ಚೆಲ್ಲಾ ಪಿಲ್ಲಿಯಾಗಿ ವಿಶಾಲ ಪ್ರದೇಶಗಳಲ್ಲಿ ಹರಡುತ್ತವೆ. ಬಿರುಗಾಳಿ ಜೊತೆಯಲ್ಲಿ ಬಂದ ಕಲ್ಲಿನ ಪುಡಿ( Saltation) ಮರಳು, ಬಂಡೆಗಳಿಗೆ ಅಪ್ಪಳಿಸಿದಾಗ ಬಂಡೆಯ ಮೇಲ್ಮೈಯಿಂದಲೂ ಕಲ್ಲಿನ ಪುಡಿಗಳು ಉತ್ಪತ್ತಿಯಾಗುತ್ತವೆ.

    ಇದೇ ಪ್ರದೇಶಗಳಲ್ಲಿ ಮರಳು ಹರಡುವ ಜೊತೆಗೆ ಮರಳಿನ ದಿಬ್ಬಗಳು ಸಹ ತಯಾರಾಗುತ್ತವೆ.ಸಾಮಾನ್ಯವಾಗಿ ಮರುಭೂಮಿಗಳಲ್ಲಿ ಘನೀಕರಿಸಿದ ಮಣ್ಣಿನ ಅಥವಾ ಜ್ವಾಲಾಮುಖಿಗಳಿಂದ ಹೊರ ಬಂದ ನಿಕ್ಷೇಪಗಳಿಂದ ಉಂಟಾದರೆ, ಗ್ರಾನೈಟ್, ಸುಣ್ಣದ ಕಲ್ಲು ಮತ್ತು ಮರಳುಗಲ್ಲುಗಳಿಂದ ಮರಳು ತಯಾರಾಗುತ್ತದೆ.ಸುಮಾರು 500 ಅಡಿಗಳಷ್ಟು ಎತ್ತರ ಬೆಳೆಯಬಹುದು. ಮರುಭೂಮಿಯ ಇತರೆ ಲಕ್ಷಣಗಳೆಂದರೆ, ಹೊರ ಚಾಚಿದ ಬಂಡೆಗಳು( rock out crops ), ಒಡ್ಡಿದ ಬೆಡ್ ರಾಕ್ ಗಳು, ಯಾವುದೋ ಕಾಲದಲ್ಲಿ ಹರಿದ ನೀರಿನಿಂದ ತಯಾರುಗೊಂಡ ಜೇಡಿ ಮಣ್ಣಿನ ತರಹದ ರಾಶಿ, ತಾತ್ಕಾಲಿಕವಾಗಿ ಉಂಟಾದ ಸರೋವರಗಳು, ಉಪ್ಪಿನ ಹರಿವಾಣೆಗಳು ( salt pans ) ಅಂತರ್ಜಲದಿಂದ ಉಂಟಾದ ನೀರಿನ ಬುಗ್ಗೆಗಳು ( Springs ), ಬಿಸಿ ನೀರಿನ ಬುಗ್ಗೆಗಳು, ಜಲಧರಗಳು ( aquifers ).ನೀರಿನ ಮೂಲಗಳು ಇರುವ ಕಡೆ ಒಯಸಿಸ್ ಗಳು ನಿರ್ಮಾಣವಾಗಬಹುದು.

    ಈಜಿಪ್ಟ್ ನಲ್ಲಿರುವಒಯಾಸಿಸ್ 150 ಕಿ.ಮೀ ಉದ್ದವಿದ್ದು ಲಿಬಿಯನ್ ಮರುಭೂಮಿಯಅತಿದೊಡ್ಡ ಒಯಸಿಸ್ ಇದಾಗಿದೆ.ಧ್ರುವ ಪ್ರದೇಶಗಳಲ್ಲಿ ಕಾಣುವ ಶೀತ ಮರುಭೂಮಿಗಳಲ್ಲಿ ಗಾಳಿಯು ಬಹಳ ಶೀತದಿಂದ ಕೂಡಿದ್ದು, ಅತಿ ಕಡಿಮೆ ತೇವಾಂಶವಿದ್ದು, ಗಾಳಿಯ ಜೊತೆಯಲ್ಲಿ ಹಿಮ ಸಾಗಿಸಲ್ಪಡುತ್ತದೆ. ಇದರಿಂದ ಹಿಮದ ಬಿರುಗಾಳಿ( Blizzards), ಹಿಮದರಾಶಿಗಳು ಉಂಟಾಗುತ್ತವೆ.

    ಮರಳಿನಿಂದ ಮತ್ತು ಧೂಳಿನಿಂದ ಕೂಡಿದ ಬಿರುಗಾಳಿ ಬೀಸುವುದು ಮರುಭೂಮಿಗಳಲ್ಲಿ ಸರ್ವೇ ಸಾಮಾನ್ಯ. ಇವುಗಳನ್ನು ಸ್ಯಾಂಡ್ ಸ್ಟಾರ್ಮ್ಸ ಮತ್ತು ಡಸ್ಟ್ ಸ್ಟಾರ್ಮ್ಸ ಎಂದು ಕರೆಯುತ್ತಾರೆ.ಹಲವು ಬಾರಿ, ಬಿರುಗಾಳಿ, ಧೂಳನ್ನು ಆರು ಕಿಲೋ ಮೀಟರ್ ಎತ್ತರಕ್ಕೆ ಒಯ್ಯಬಹುದು.ಹಲವಾರು ದಿನಗಳು ಗಾಳಿಯಲ್ಲಿ ತೇಲುತ್ತಾ, ಸೂರ್ಯನ ಬೆಳಕಿಗೆ ಅಡ್ಡಕಟ್ಟಿ ಕತ್ತಲೆಯ ವಾತಾವರಣ ಉಂಟಾಗಬಹುದು.

    2001 ರಲ್ಲಿ ಚೈನಾದ ಮರುಭೂಮಿಯಲ್ಲಿ ಬೀಸಿದ ಬಿರುಗಾಳಿಯು 6.5 ದಶಲಕ್ಷ ( ಮಿಲಿಯನ್ ) ಟನ್ ನಷ್ಟು ಧೂಳನ್ನು 134 ದಶಲಕ್ಷ ಚದರ ಕಿಲೋ ಮೀಟರ್ ಪ್ರದೇಶವನ್ನು ಆವರಿಸಿತ್ತು ಎಂದು ಅಧ್ಯಯನದ ಮೂಲಕ ಅಂದಾಜು ಮಾಡಲಾಗಿದೆ.ಪ್ರಪಂಚದಲ್ಲಿ ಮರುಭೂಮಿಗಳ ಶೇಖಡಾ 20 ರಷ್ಟು ಮಾತ್ರ ಮರಳಿನಿಂದ ಕೂಡಿದೆ ಅಂದರೆ ನಮಗೆ ಅಚ್ಚರಿಯಾಗುತ್ತದೆ.

    ಪ್ರಪಂಚದಲ್ಲಿ ಅತಿ ಒಣ ಪ್ರದೇಶವಿರುವ ಅಟಕಾಮ ಮರುಭೂಮಿಯಲ್ಲಿ ಸರಾಸರಿ ವಾರ್ಷಿಕ ಮಳೆ ಕೇವಲ 1 ಮಿಲಿ ಮೀಟರ್ ರಷ್ಟು ಇದ್ದು, ಕಳೆದ ನಾಲ್ಕು ನೂರು ಐವತ್ತು ವರ್ಷಗಳಿಂದ (450) ಗಮನಾರ್ಹವಾಗಿ ಮಳೆಯಾಗದೆ ಇರುವುದಕ್ಕೆ ಪುರಾವೆಗಳಿವೆ. ಹೋಲಿಕೆಗೆ ನಮ್ಮ ಬೆಂಗಳೂರು ನಗರದಲ್ಲಿ ವಾರ್ಷಿಕ ಸರಾಸರಿ ಮಳೆ ಒಂಬೈನೂರ ಎಪ್ಪತ್ತು ಮಿಲಿ ಮೀಟರ್ (970 m m).

    ಮರುಭೂಮಿಗಳಲ್ಲಿ ಸಸ್ಯಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವಿದ್ದು ಕಡಿಮೆ ಮಳೆ, ಅತೀ ಉಷ್ಣತೆ ಮತ್ತು ಬಿರುಗಾಳಿಗಳಿಂದ ಬೆಳವಣಿಗೆ ಕುಂಟಿತಗೊಳ್ಳುತ್ತದೆ.ನೀರು ಮತ್ತು ತೇವಾಂಶಗಳನ್ನು ಕಾಪಾಡಿಕೊಳ್ಳುವುದೇ ಮರುಭೂಮಿಗಳಸಸ್ಯಗಳಿಗಿರುವಸವಾಲು.

    ನಮಗೆಲ್ಲರಿಗೂ ತಿಳಿದಿರುವಂತೆ , ಸಸ್ಯಗಳ ಬೆಳವಣಿಗೆಗೆ ದ್ಯುತಿ ಸಂಶ್ಲೇಷಣೆ ಕ್ರಿಯೆ ( photosynthesis ) ಬಹಳ ಮುಖ್ಯ. ಈ ಕ್ರಿಯೆ ಬೆಳಗಿನ ಸಮಯದಲ್ಲಿ, ಸೂರ್ಯನ ಕಿರಣಗಳ ಸಹಾಯದಿಂದ ನಡೆಯ ಬೇಕು. ಆದರೆ ಬೆಳಗಿನ ಸಮಯದಲ್ಲಿ, ಮರುಭೂಮಿಗಳ ತಾಪಮಾನ ಅತಿ ಹೆಚ್ಚು ಇರುತ್ತದೆ. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅವಶ್ಯಕವಿರುವ ಇಂಗಾಲದ ಡೈ ಆಕ್ಸೈಡ್ ನ್ನು ಪಡೆಯಲು ಸ್ಟೋಮಾಟವನ್ನು (ಪತ್ರರಂಧ್ರ) ತೆರೆದರೆ, ಬಾಷ್ವೀಕರಣ( evapo transpiration ) ಉಂಟಾಗಿ ನೀರು ಆವಿಯಾಗುತ್ತದೆ. ಮರುಭೂಮಿಗಳ ಸಸ್ಯಗಳಲ್ಲಿ ನೀರಿನ ಸಂರಕ್ಷಣೆ ಬಹಳ ಮುಖ್ಯ. ಆದ್ದರಿಂದ ಸಸ್ಯಗಳೆಲ್ಲ ಕ್ಯಾಮ್ ದ್ಯುತಿ ಸಂಶ್ಲೇಷಣೆ ಕ್ರಿಯೆಯನ್ನು ಬಳಸಿ,ಬೆಳಗಿನ ಸಮಯದಲ್ಲಿ ಪತ್ರ ರಂಧ್ರ ಮುಚ್ಚಿದ್ದು, ರಾತ್ರಿ ವೇಳೆಯಲ್ಲಿ ತೆರೆದು, ಇಂಗಾಲದ ಡೈ ಆಕ್ಸೈಡ ನ್ನು ಹೀರಿಕೊಂಡು ಶೇಖರಿಸುತ್ತವೆ. ಉದಾಹರಣೆ ಕಾಕ್ಟಿ, ಭ್ರೊಮೀಲಿಯಡ್ಸ್.

    ಮರುಭೂಮಿಗಳ ಸಸ್ಯ ವರ್ಗ

    ಥಾರ್ ಮರುಭೂಮಿ |Photo by Andrew Slifkin on Unsplash

    ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳ ಎಲೆಗಳು ಬಹಳ ಚಿಕ್ಕದಾಗಿರುತ್ತವೆ ಅಥವಾ ಎಲೆಗಳು ಇರುವುದಿಲ್ಲ, ಕಳ್ಳಿ ಜಾತಿಯ ಗಿಡಗಳು ಮರುಭೂಮಿಗಳ ವಿಶೇಷತೆ ಎಂದೇ ಹೇಳಬಹುದು.ಕ್ಲೋರ್ ಫಿಲ್ ನ್ನು ಸಸ್ಯಗಳ ಎಲೆಗಳಲ್ಲಿ ಕಾಣಬಹುದು.ಆದರೆ ಮರುಭೂಮಿಗಳ ಸಸ್ಯಗಳಲ್ಲಿ ಕ್ಲೋರ್ ಫಿಲ್ ಕಾಂಡಗಳಲ್ಲಿರುತ್ತದೆ.ನೀರನ್ನು ಶೇಖರಿಸಲು ಸಾಧ್ಯವಾಗುವಂತೆ ಕಾಂಡಗಳು ಮಾರ್ಪಾಡಾಗಿರುತ್ತವೆ.ಮಳೆ ಬಂದಾಗ ಅತಿ ಶೀಘ್ರವಾಗಿ ಬೇರುಗಳು ನೀರನ್ನು ಹೀರಿಕೊಂಡು ಕಾಂಡಗಳಲ್ಲಿ ಶೇಖರಿಸುತ್ತವೆ. ಸೋಮೋರಾನ್ ಮರುಭೂಮಿಯ ದೈತ್ಯಾಕಾರದ ಸಗೋರಾ ಎಂಬ ಕಳ್ಳಿಗಿಡ 150 ಅಡಿಗಳ ಎತ್ತರಕ್ಕೆ ಬೆಳೆಯುತ್ತದೆ ಮತ್ತು ಕಾಂಡದಲ್ಲಿ ಎಂಟು ಟನ್ ನಷ್ಟು ( ಸುಮಾರು 600 ಬಕೆಟ್ ನೀರು) ನೀರನ್ನು ಶೇಖರಿಸ ಬಲ್ಲದು. 200 ವರ್ಷಗಳ ಜೀವವಿರುವ ಈ ಗಿಡ ಬೇರೆ ಗಿಡಗಳಿಗೆ ನೆರಳು ನೀಡುವುದರ ಜೊತೆಗೆಮರುಭೂಮಿಗಳ ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಅನುಕೂಲವಾಗಿದೆ.

    ಸಕ್ಯುಲೆಂಟ್ ಸಸ್ಯಗಳ( Succulent plants ) ಎಲೆಗಳಲ್ಲಿ, ಕಾಂಡಗಳಲ್ಲಿ ಅಥವಾ ಗೆಡ್ಡೆಗಳಲ್ಲಿ ನೀರನ್ನು ಶೇಖರಿಸಿಕೊಳ್ಳುತ್ತವೆ. ಎಲೆಗಳು ಮತ್ತು ಕಾಂಡಗಳ ಮೇಲೆ ಮೇಣದಂತ ಪೊರೆ ಇರುತ್ತದೆ.ಇದರಿಂದ ನೀರು ಆವಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಕೆಲವು ಸಸ್ಯಗಳಲ್ಲಿ ಮಳೆ ಬಂದಾಗ ಮಾತ್ರ ಎಲೆಗಳು ಚಿಗುರುತ್ತವೆ ಮತ್ತು ಶೀಘ್ರವಾಗಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ.ಒಣ ವಾತಾವರಣ ಸೃಷ್ಟಿಯಾದಾಗ ಎಲೆಗಳು ಉದುರಿ ಹೋಗುತ್ತವೆ.ಕಾಂಡಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುತ್ತವೆ.ಉದಾಹರಣೆ ಬ್ಲ್ಯಾಕ್ ಬ್ರಷ್.ಇನ್ನು ಕೆಲವು ಸಸ್ಯ ಜಾತಿಗಳಲ್ಲಿ ವಾರ್ಷಿಕಸಸ್ಯಗಳು ಭೀಕರ ಕ್ಷಾಮ ಮತ್ತು ಒಣ ವಾತಾವರಣ ಇರುವ ವರೆವಿಗೂ ಹಲವಾರು ವರ್ಷಗಳು ಬೀಜಗಳು ನೆಲದಲ್ಲಿರುತ್ತವೆ.ಮಳೆ ಬಂದ ತಕ್ಷಣ, ಕೆಲವೇ ದಿನಗಳಲ್ಲಿ ಬೀಜಗಳು ಮೊಳಕೆ ಹೊಡೆದು, ಸಸ್ಯಗಳಾಗಿ, ಹೂವು ಬಿಟ್ಟು ಮತ್ತು ಬೀಜಗಳಾಗಿ ನೆಲಕ್ಕೆ ಉದುರುತ್ತವೆ.ಮತ್ತೊಂದು ಜೀವ ಚಕ್ರಕ್ಕೆ ಕಾಯುತ್ತವೆ. ಉದಾಹರಣೆ ಈವನಿಂಗ್  ಪ್ರಿಮ್ ರೋಸ್,ಗ್ಲೋಬ್ನ್ಯೂಲ್ಲೊ, ಸಿಗೊ ಲಿಲಿ.

    ಮರುಭೂಮಿಗಳಪ್ರಾಣಿ ವರ್ಗ

    Photo by Matteo sacco from Pexels

    ಮರುಭೂಮಿಗಳ ವಾತಾವರಣಕ್ಕೆ ಹೊಂದಿಕೊಂಡು ಜೀವಿಸುವ ಪ್ರಾಣಿಗಳಿಗೆ ಜೈರೊಕೋಲ್ಸ್( Xero coles ) ಎಂದು ಕರೆಯುತ್ತಾರೆ. ಈ ಪ್ರಾಣಿಗಳು ಎದುರಿಸುವ ದೊಡ್ಡ ಸವಾಲುಗಳೆಂದರೆ ನೀರಿನ ಕೊರತೆ ಮತ್ತು ಅತೀ ಉಷ್ಣತೆ.ದೇಹದಲ್ಲಿ ನೀರಿನಾಂಶವನ್ನು ಉಳಿಸುವುದು, ಆವಿಯಾಗುವಿಕೆಯನ್ನು ತಡೆಗಟ್ಟುವುದು ಬಹಳ ಮುಖ್ಯ. ಪ್ರಾಣಿಗಳು ರಾತ್ರಿ ಸಮಯದಲ್ಲಿ ಹೆಚ್ಚು ಸಕ್ರಿಯವಾದ ಕಾರ್ಯಾಚರಣೆ ಮಾಡುತ್ತವೆ.ಮರುಭೂಮಿಗಳಲ್ಲಿ ವಾಸಿಸುವ ಸಸ್ತನಿಗಳು ಹೆಚ್ಚು ಬೆವರುವುದಿಲ್ಲ.

    ಉದಾಹರಣೆಗೆ ಒಂಟೆ 49 ಡಿಗ್ರಿ ಸೆಂಟಿಗ್ರೇಡನ ತಾಪಮಾನದಲ್ಲಿಯೂ ಸಹ ಬೆವರುವುದಿಲ್ಲ. ಒಂಟೆಯು “ಮರುಭೂಮಿಯ ಹಡಗು” ಎಂದೇ ಪ್ರಖ್ಯಾತಿಯನ್ನು ಹೊಂದಿದೆ. ಒಂಟೆಯ ದೇಹದ ವೈಶಿಷ್ಟ್ಯತೆಯೆಂದರೆ, ಬೆನ್ನಿನ ಮೇಲಿರುವ ಉಬ್ಬು( hump). ಉಬ್ಬಿನಲ್ಲಿ ಕೊಬ್ಬಿನ ಅಂಶವನ್ನು ಶೇಖರಿಸುತ್ತದೆ. ಹೆಚ್ಚು ತಾಪಮಾನವಿರುವ ಸಂದರ್ಭಗಳಲ್ಲಿಯೂ ಸಹ ಹತ್ತು ದಿನಗಳಾದರೂ ನೀರು ಕುಡಿಯದೇ ಇರಬಲ್ಲದು. ಉಬ್ಬಿನಲ್ಲಿರುವ ಕಬ್ಬಿನಂಶವು ಮೆಟಾ ಬೊಲಿಸ್ ಆದಾಗ  ( meta bolisation) ಒಂದು ಗ್ರಾಂ ಕೊಬ್ಬಿನಾಂಶಕ್ಕೆ ಒಂದು ಗ್ರಾಂ ಗಿಂತ ಹೆಚ್ಚು ನೀರು ಉತ್ಪತ್ತಿಯಾಗುತ್ತದೆ.

    ನಿರ್ಜಲೀಕರಣದಿಂದ( dehydration) ದೇಹದ ಶೇಖಡಾ 30 ರಷ್ಟು ತೂಕವನ್ನು ಕಳೆದುಕೊಂಡರು ಜೀವಿಸ ಬಲ್ಲದು. ನೀರು ದೊರೆತಾಗ, 600 ಕೆಜಿ ನೀರನ್ನು ಕುಡಿಯುವ ಸಾಮರ್ಥ್ಯವನ್ನು ಹೊಂದಿದೆ.ಬೇರೆ ಪ್ರಾಣಿಗಳು ಸಾಮಾನ್ಯವಾಗಿ ದಿನ ಒಂದಕ್ಕೆ 20 ರಿಂದ 40 ಲೀಟರ್ ನೀರನ್ನು ದೇಹದ ಮೂಲಕ ಕಳೆದುಕೊಂಡರೆ, ಒಂಟೆ ಕೇವಲ ಒಂದೂವರೆ ಲೀಟರ್ ನಷ್ಟು ನೀರನ್ನು ಮಾತ್ರ ಕಳೆದುಕೊಳ್ಳುತ್ತದೆ.

    ಒಂಟೆ ಉಸಿರು ಬಿಟ್ಟಾಗ (ನಿಶ್ವಸಸುವಿಕೆ), ನೀರಿನ ಆವಿ ಮೂಗಿನಲ್ಲಿಯೇ ಇದ್ದು, ಮರು ಹೀರಿಕೆಯಾಗಿ ದೇಹವನ್ನು ಸೇರುತ್ತದೆ.ಒಂಟೆಗೆ ಅಗಲವಾಗಿರುವ ಪಾದಗಳಿರುವುದರಿಂದ ಮರಳಿನ ಮೇಲೆ ಸುಲಭವಾಗಿ ನಡೆಯಬಲ್ಲದು.ಎರಡು ಉಬ್ಬುಗಳಿರುವ ಒಂಟೆಯನ್ನು ಬ್ಯಾಕ್ಟ್ರಿಯನ್ ಒಂಟೆಯೆಂದು ಕರೆಯುತ್ತಾರೆ.

    ಇದೇ ರೀತಿ ಕಾಂಗರೊ ಇಲಿ ಮರುಭೂಮಿಗಳ ವಾತಾವರಣಕ್ಕೆ ಹೊಂದಿಕೊಂಡಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ.ಕಾಂಗರೂ ಇಲಿ ನೀರು ಕುಡಿಯುವುದೇ ಇಲ್ಲ. ಕುಡಿಯುವ ಅವಶ್ಯಕತೆಯೂ ಇಲ್ಲ. ಇದು ಹೆಚ್ಚಾಗಿ ಒಣಗಿದ ಬೀಜಗಳನ್ನು ತಿನ್ನುತ್ತದೆ.ಹೀಗೆ ತಿಂದಂತಹ ಬೀಜಗಳುಮೆಟಾಬೊಲಿಸಿಂಆಗುವ ಸಮಯದಲ್ಲಿ ಉಂಟಾಗುವ ನೀರುಇದಕ್ಕೆ ಸಾಕಾಗುತ್ತದೆ.ಒಂದು ಗ್ರಾಂ ಬೀಜದಿಂದ ಅರ್ಧ ಗ್ರಾಂನಷ್ಟು ನೀರನ್ನು ಪಡೆಯಬಲ್ಲದು.ಇದರ ಮೂತ್ರದಲ್ಲಿ ಸಹ ನೀರು ಹೋಗದೆ ಗಟ್ಟಿ ಹರಳಿನ ರೂಪದಲ್ಲಿ ಮೂತ್ರ ವಿಸರ್ಜನೆಯಾಗುತ್ತದೆ.ಸ್ನಾನಕ್ಕೆ ನೀರಿನ ಅವಶ್ಯಕತೆಯಿಲ್ಲದೆ, ಮರಳಿನಲ್ಲಿ ಉರುಳಿ ಡಸ್ಟ್ ಬಾತ್ ಮಾಡುತ್ತದೆ.ಇದರ ದೇಹದಲ್ಲಿ ಬೆವರಿನ ಗ್ರಂಥಿಗಳು ಬಹಳಷ್ಟು ಕಡಿಮೆ ಇದ್ದು, ಬೆಳಗಿನ ಹೊತ್ತು ಬಿಲದಲ್ಲಿದ್ದು, ರಾತ್ರಿಯ ವೇಳೆಯಲ್ಲಿ ಮಾತ್ರ ಸಕ್ರಿಯವಾಗಿ ಕಾರ್ಯಾಚರಣೆ ಮಾಡುತ್ತದೆ.

    ದೇಹದ ಮೇಲೆ ಪೊರೆ ಬೆಳೆದು, ಅದರಿಂದಲೇ ಗೂಡನ್ನು ನಿರ್ಮಿಸಿಕೊಂಡು, ತಾಪಮಾನ ಹೆಚ್ಚಾಗಿರುವ ಬೇಸಿಗೆ ಕಾಲದಲ್ಲಿ ಕೆಲವು ವರ್ಷಗಳ ಕಾಲ ಮರಳಿನಲ್ಲಿ ಬಿಲ ತೋಡಿಕೊಂಡು ಜೀವಿಸುವ ಕಪ್ಪೆಯ ಜೀವನ ಶೈಲಿ ಇನ್ನೂ ಆಶ್ಚರ್ಯಕರ. ಗೂಡು ಕಟ್ಟುವ ಕಪ್ಪೆಗಳು ( cocoon forming ), ಭೂಮಿಯ ಮೇಲ್ಮೈನ ನೀರಿನಾಂಶ ಕಡಿಮೆಯಾಗುವ ಮೊದಲೇ ಸುಮಾರು 1 ಮೀಟರ್ ಆಳದ ಬಿಲವನ್ನು ತೋಡಿಕೊಂಡು, ಮೂಗಿನ ಹೊಳ್ಳೆಗಳನ್ನು ಹೊರತುಪಡಿಸಿ, ಉಳಿದ ದೇಹವೆಲ್ಲಾ ಮುಚ್ಚಿಕೊಳ್ಳುವಂತೆ ಪೊರೆಯು ಬೆಳೆದು, ಗೂಡನ್ನು ಕಟ್ಟಿಕೊಂಡು, ಅದರ ಒಳಗೆ ಸೇರಿಕೊಳ್ಳುತ್ತದೆ. ಕಡಿಮೆ ವೇಗದಲ್ಲಿ ಉಸಿರಾಡುತ್ತದೆ. ಈ ಸ್ಥಿತಿಯನ್ನು ಗ್ರೀಷ್ಮ ನಿಷ್ಕ್ರಿಯತೆ ಅಥವಾ ಗ್ರೀಷ್ಮ ನಿದ್ದೆ ( aestivation) ಎಂದು ಕರೆಯುತ್ತಾರೆ. ಮೆಟಾಬೊಲಿಸಂನ ವೇಗವನ್ನು ಸಹ ಒಂದನೇ ಐದು ಭಾಗದಷ್ಟು ಕಡಿಮೆ ಮಾಡಿಕೊಳ್ಳುತ್ತದೆ.ಆದ್ದರಿಂದ ಬಿಲದಲ್ಲಿ ಹಲವಾರು ವರ್ಷಗಳು ಜೀವಿಸುತ್ತದೆ.ಹೊರಗೆ ಬರುವವರೆವಿಗೆ ತಾಜ್ಯ ವಿಸರ್ಜನೆ ಇರುವುದಿಲ್ಲ.

    ಉದಾಹರಣೆ, ಪಶ್ಚಿಮ ಮತ್ತು ಮಧ್ಯ ಆಸ್ಟ್ರೇಲಿಯಾ ದೇಶದ ಬೆಂಗಾಡಿನಲ್ಲಿ ಕಂಡು ಬರುವ ಮೈನ್ಸ್ ಕಪ್ಪೆ.ಸಾಮಾನ್ಯವಾಗಿ, ಕಪ್ಪೆಗಳು ನೀರಿನಲ್ಲಿ ಮೊಟ್ಟೆಯಿಡುವುದನ್ನು ನಾವುಗಳು ನೋಡಿದ್ದೇವೆ.ಮರುಭೂಮಿಯಲ್ಲಿ ವಾಸಿಸುವ ಕಪ್ಪೆಗಳು ಮಣ್ಣಿನಲ್ಲಿಯೇ ಮೊಟ್ಟೆಯಿಡುತ್ತವೆ.ಮಳೆ ಬಂದು ನೀರು ಹರಿದಾಗ, ಮೊಟ್ಟಗಳು ಹೊಡೆದು, ಟ್ಯಾಡ್ ಪೋಲ್ ಗಳು (ಮರಿಕಪ್ಪೆಗಳು) ನೀರನ್ನು ಸೇರುತ್ತವೆ.

    ಮರುಭೂಮಿಗಳಲ್ಲಿ ಹಲವಾರು ಜಾತಿಯ ಕೀಟಗಳನ್ನು, ಪಕ್ಷಿಗಳನ್ನು ಮತ್ತು ಸಸ್ತನಿಗಳನ್ನು ನಾವು ಕಾಣಬಹುದು.ಇವುಗಳ ಜೀವನಶೈಲಿ, ಮರುಭೂಮಿಗಳ ವಾತಾವರಣಕ್ಕೆ ಹೊಂದಿಕೊಳ್ಳುವ ಪದ್ಧತಿಗಳನ್ನು ಗಮನಿಸಿದರೆ ಒಂದೊಂದು ಪ್ರಾಣಿಯದು ಒಂದೊಂದು ವಿಚಿತ್ರ ಶೈಲಿ.ಪ್ರತಿಯೊಂದನ್ನು ವಿವರಿಸುವುದು ನಿಜವಾಗಲು ಕಷ್ಟ ಸಾಧ್ಯ. ನಿಜವಾಗಲೂ ಮರುಭೂಮಿಗಳು ಮಾಯಾಲೋಕವೇ ಸರಿ.

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ.
    spot_img

    More articles

    4 COMMENTS

    1. ತುಂಬ ಮಾಹಿತಿಯಿಂದ ಕೂಡಿದ ಲೇಖನ. ಅಭಿನಂದನೆಗಳು

    2. The writer or author is a physic person. His knowledge about environment and biological aspects of desserts is highly appreciable

    3. ಲೇಖನ ಬಹಳ ಮಾಹಿತಿಯುಕ್ತ ವಾಗಿದೆ. ವಿವಿಧ ರೀತಿಯ ಮರುಭೂಮಿ ಗಳು, ಅಲ್ಲಿನ ಜೀವವೈವಿಧ್ಯ ಕುತೂಹಲದಿಂದ ಕೂಡಿದೆ. ಪ್ರಕ್ರೃತಿಯ ಒಡಲು ಬೆರಗು ಮತ್ತು ನಿಗೂಢವಾಗಿದೆ

    4. ಲೇಖನ ಮಾಹಿತಿಪೂರ್ಣವಾಗಿದೆ. ಪ್ರಕೃತಿಯ ವಿಸ್ಮಯ, ವೈಚಿತ್ರ್ಯ, ನಿಗೂಢತೆ, ವೈಶಿಷ್ಟ್ಯ ಎಲ್ಲವೂ ಕುತೂಹಲ ಮೂಡಿಸುತ್ತದೆ. ಮರುಭೂಮಿಗಳ ಬಗೆಗೆ ಬಹಳಷ್ಟು ವಿಚಾರಗಳನ್ನು ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!