29.4 C
Karnataka
Monday, May 20, 2024

    ಬೆಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಯವರ ಮೊದಲ ಹೆಜ್ಜೆ

    Must read

    ಪ್ರತಿವರ್ಷ ಜನವರಿ ಮೂವತ್ತರಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ಮಹನೀಯರನ್ನು ಗೌರವಿಸುವ ದಿನ. ಈ ಹುತಾತ್ಮರ ದಿನವನ್ನು ಸರ್ವೋದಯ ದಿನ ಎಂದು ಸಹ ಕರೆಯಲ್ಪಡುತ್ತದೆ. ಮಹಾತ್ಮ ಗಾಂಧೀಜಿಯವರು 1948 ರ ಜನವರಿ ಮೂವತ್ತರಂದು ನಾಥುರಾಮ್ ಗೋಡ್ಸೆಯವರ ಗುಂಡಿಗೆ ಬಲಿಯಾಗಿ ಇಹ ಲೋಕವನ್ನು ತ್ಯಜಿಸಿ ಸ್ವರ್ಗಸ್ಥರಾದ ದಿನ. ಈ ದಿನದಂದು ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ರಕ್ಷಣಾಸಚಿವರು ಹಾಗೂ ಮೂರು ಸೇನಾ ಮುಖ್ಯಸ್ಥರುಗಳು, ಅಲಂಕೃತಗೊಂಡ ಸಮಾಧಿ ಸ್ಥಳವಾದ ರಾಜಘಾಟ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಎರಡು ನಿಮಿಷಗಳ ಮೌನವನ್ನು ದೇಶಾದ್ಯಂತ ಬೆಳಿಗ್ಗೆ 11 ಗಂಟೆಗೆ ಆಚರಿಸಲಾಗುತ್ತದೆ. ಸರ್ವ ಧರ್ಮಗಳ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ ಮತ್ತು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಗೌರವವನ್ನು ಸಲ್ಲಿಸಲಾಗುತ್ತದೆ.

    ಸರ್ವೋದಯ ಸಂಸ್ಕೃತದ ಪದ. ಸರ್ವೋದಯ ಎಂದರೆ “Universal uplift” ( ಸಾರ್ವತ್ರಿಕ ಉನ್ನತಿ) ಅಥವಾ “Progress for all” ( ಎಲ್ಲರ ಪ್ರಗತಿ ). ಈ ಪದವನ್ನು ಮೋಹನ್ ದಾಸ್ ಗಾಂಧೀಜಿಯವರು 1908 ರಲ್ಲಿ ಜಾನ್ ರಸ್ಕಿನ್‍ ರ ರಾಜಕೀಯ ಆರ್ಥಿಕತೆಯನ್ನು ಕುರಿತ “unto this last” ಅನುವಾದದ ಶೀರ್ಷಿಕೆಯಾಗಿ ಬಳಸಿದರು ಹಾಗೂ ಅದರ ಪರಿಕಲ್ಪನೆಯನ್ನು ಜೀವನದಲ್ಲಿ ಮುಂದುವರಿಸಿದರು.

    ಮಹಾತ್ಮ ಗಾಂಧೀಜಿಯವರು ಬೆಂಗಳೂರಿಗೆ ಮೊಟ್ಟ ಮೊದಲ ಹೆಜ್ಜೆಯನ್ನಿಟ್ಟ, ಅವರ ಪಾದಗಳು ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಭೂ ಸ್ಪರ್ಶವಾದ ಸಂದರ್ಭ, ನಾಗರಿಕರಲ್ಲಿ ಅವರನ್ನು ಬರಮಾಡಿಕೊಳ್ಳಲು ಇದ್ದಂತಹ ಉತ್ಸಾಹ, ಆನಂದ ಹಾಗೂ ಕಾತುರ ಇವುಗಳ ಬಗ್ಗೆ ಮೆಲಕು ಹಾಕಿಕೊಳ್ಳುತ್ತಾ, ಓದುಗರಲ್ಲಿ ಹಂಚಿಕೊಳ್ಳುವ ಅಭಿಲಾಷೆಯ ಫಲವೇ ಈ ಲೇಖನ.

    ಮಹಾತ್ಮ ಗಾಂಧೀಜಿ ಮತ್ತು ಅವರ ವಿಚಾರಧಾರೆಗಳೆಂದರೆ, ಇಂದಿನ ಯುವಕರಲ್ಲಿ ಅಸಡ್ಡೆ ಮನೋಭಾವ ಎಂಬ ಅಭಿಪ್ರಾಯ ಹಿರಿಯರಲ್ಲಿ ಮೂಡುವುದು ಸಾಮಾನ್ಯ ಸಂಗತಿ. ಆದರೆ ನನ್ನ  ನಲವತ್ತೈದು ವರ್ಷಗಳ ಶೈಕ್ಷಣಿಕ ಸೇವೆಯಲ್ಲಿ ಕಂಡ ವಾಸ್ತವಾಂಶವೇ ವಿಭಿನ್ನ. ಪ್ರಾಥಮಿಕ ಶಾಲೆಯ ಮಕ್ಕಳಿಂದ ಕಾಲೇಜಿನ ವಿದ್ಯಾರ್ಥಿಗಳವರೆಗೆ ಗಾಂಧೀಜಿಯವರನ್ನು ಕುರಿತು ಉಪನ್ಯಾಸಗಳನ್ನು ಮಾಡಿದ್ದೇನೆ. ಅನೇಕ ವಿದ್ವಾಂಸರು, ಗಾಂಧೀಜಿಯವರ ಅನುಯಾಯಿಗಳು ನೀಡಿದ ಭಾಷಣಗಳನ್ನು ಕೇಳಿದ್ದೇನೆ. ನಾನು ಕಂಡಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ವ್ಯಕ್ತಿತ್ವ, ತಪ್ಪುಗಳನ್ನು ಮಾಡಿ ಬುದ್ಧಿಕಲಿತ ಸಂದರ್ಭಗಳು ಹಾಗೂ ಅವರ ತತ್ವಗಳನ್ನು ಮನಕಲಕುವಂತೆ ಹೇಳಿದ ಪಕ್ಷದಲ್ಲಿ, ಅತೀವ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬಹುದು ಮತ್ತು ಯುವಕರ ನಡವಳಿಕೆಗಳಲ್ಲಿ ಅದ್ಬುತವಾದಂತಹ ಬದಲಾವಣೆಗಳನ್ನು ತರಬಹುದೆಂಬ ಸತ್ಯಾಂಶ.

    ಅಮೆರಿಕಾದ ಕಪ್ಪು ಜನಾಂಗದ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಹೇಳಿರುವಂತೆ, “ಗಾಂಧೀಜಿ ಜಗತ್ತಿಗೆ ಅನಿವಾರ್ಯ, ಮರೆತರೆ ವಿಶ್ವದ ನಾಶ”. ಈ ನುಡಿ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ವಿಚಾರಗಳು ಭೂಮಿಯ ಮೇಲೆ ಮನುಕುಲ ಇರುವ ವರೆಗೂ ಪ್ರಸ್ತುತ ಮತ್ತು ಅನಿವಾರ್ಯ ಎಂಬ ಅಂಶವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾಟುವಂತೆ ಮಾಡಿ ಉತ್ತಮವಾದಂತಹ ಪರಿಣಾಮವನ್ನುಂಟು ಮಾಡಬಹುದು. ಯಾವ ರೀತಿಯಲ್ಲಿ ಯಶಸ್ವಿ ಕಾಣಬಹುದು, ಎಂಬುದು ಹಿರಿಯರಿಗೆ ಬಿಟ್ಟ ವಿಷಯ.

    ಗಾಂಧೀಜಿ ಬೆಂಗಳೂರಿಗೆ ಬಂದ ಆ ದಿನ

    ಈ ದಿಸೆಯಲ್ಲಿ, ಯುವಕರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಹಾಗೂ ನಾಗರಿಕರಲ್ಲಿ ಕುತೂಹಲವನ್ನು ಕೆರಳಿಸುವ ಒಂದು ವಿಷಯವನ್ನು ಈ ಮೂಲಕ ತಿಳಿಸಲು ಬಯಸುತ್ತೇನೆ. ಮೇ 8, 1915 ರಂದು ಗಾಂಧೀಜಿಯವರು ಮೊಟ್ಟ ಮೊದಲಿಗೆ ಬೆಂಗಳೂರಿಗೆ ಬಂದದ್ದು, ಅವರ ಪಾದಗಳು ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಭೂ ಸ್ಪರ್ಶವಾದದ್ದು. ನಮ್ಮ ಹೆಮ್ಮೆಯ ಕರ್ನಾಟಕಕ್ಕೆ, ಗಾಂಧೀಜಿಯವರು ಪ್ರವೇಶ ಮಾಡಿ ಒಂದು ನೂರ ಐದು ವರ್ಷಗಳಾಗಿವೆ. ತದ ನಂತರ, ಗಾಂಧೀಜಿಯವರು 1915 ರಿಂದ 1937 ರ ನಡುವೆ ಕರ್ನಾಟಕಕ್ಕೆ ಹದಿನಾರು ಬಾರಿ ಬಂದಿದ್ದು ನೂರ ಎಂಬತ್ತಾರು ದಿನಗಳನ್ನು ಕಳೆದಿದ್ದಾರೆ. ಬೆಂಗಳೂರಿಗೆ ಹನ್ನೆರಡು ಬಾರಿ ಬಂದಿದ್ದು ಎಂಬತ್ತೊಂದು ದಿನಗಳ ಕಾಲ ವಾಸಿಸಿದ್ದಾರೆ.

    ಗೋಪಾಲ ಕೃಷ್ಣ ಗೋಖಲೆಯವರು ಗಾಂಧೀಜಿಯವರ ರಾಜಕೀಯ ಶಿಕ್ಷಕರು / ಗುರುಗಳು. ಈ ಮಾತನ್ನು ಸ್ವತಃ ಗಾಂಧೀಜಿಯವರೇ ಹೇಳಿದ್ದಾರೆ. ಇನ್ನೂ ಮುಂದುವರೆದು ಹೇಳುವುದಾದರೆ “ನನ್ನ ಬಾಳಿಗೆ ಉತ್ತೇಜನ ಕೊಟ್ಟವರು ಅವರೇ, ಇಂದಿಗೂ ಅವರ ಪ್ರೋತ್ಸಾಹ, ಉತ್ತೇಜನಗಳೇ ನನಗೆ ದಾರಿದೀಪ” ಎಂದು ಗಾಂಧೀಜಿಯವರು ನುಡಿದಿದ್ದಾರೆ. ಗೋಖಲೆಯವರ ಸಲಹೆಯ ಮೇರೆಗೆ ಭಾರತವನ್ನು ತಿಳಿಯಲು, ಗಾಂಧೀಜಿಯವರು ಭಾರತ ದೇಶದ ಪ್ರವಾಸವನ್ನು ಮಾಡಿದರು ಮತ್ತು ಪ್ರವಾಸದ ಬಗ್ಗೆ ಬಹಳಷ್ಟು ಕಾಳಜಿ, ಆಸಕ್ತಿಯನ್ನು ತೋರಿಸಿ ಅಧ್ಯಯನ ಮಾಡಿದರು.

    ದಕ್ಷಿಣ ಆಫ್ರಿಕದಲ್ಲಿ ದಿಗ್ವಿಜಯವನ್ನು ಸಾಧಿಸಿ, 1914 ರಲ್ಲಿ ತಾಯ್ನಾಡಿಗೆ ಮರಳಿದ ಕರ್ಮವೀರ ಗಾಂಧೀಜಿಯವರನ್ನು ಸ್ವಾಗತಿಸಲು ಇಡೀ ಬೆಂಗಳೂರು ನಗರ ಬಹಳ ಉತ್ಸಾಹದಿಂದ ಶೃಂಗಾರಗೊಂಡಿತ್ತು. ಗಾಂಧೀಜಿಯವರು ಮತ್ತು ಅವರ ಪತ್ನಿ ಕಸ್ತೂರಿ ಬಾ ರವರು ಮದರಾಸಿನಿಂದ ರೈಲಿನಲ್ಲಿ ಪ್ರಯಾಣಿಸಿ ಬೆಂಗಳೂರನ್ನು ತಲುಪಿದರು. ಕರ್ನಾಟಕದ ಹಿರಿಯ ಸಾಹಿತಿ ಡಿ. ವಿ ಗುಂಡಪ್ಪನವರು, ಅಂದಿನ ಮದರಾಸಿನ ಜಿ. ಎ ನಟೇಶನ್ ರವರ ಸಹಾಯವನ್ನು ಪಡೆದು, ಗಾಂಧೀಜಿಯವರು ಬೆಂಗಳೂರಿಗೆ ಪ್ರವಾಸ ಕೈಗೊಳ‍್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ದಕ್ಷಿಣ ಆಫ್ರಿಕಾದ ಸತ್ಯಾಗ್ರಹಕ್ಕೆ ನಿಧಿ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಕಾರಣದಿಂದಲೋ ಏನೋ, ಕನ್ನಡಿಗರಿಂದ ಬೆಂಗಳೂರಿಗೆ ಬರಬೇಕೆಂಬ ಆಹ್ವಾನವು ಗಾಂಧೀಜಿಯವರನ್ನು ತಲುಪಿದಾಗ ಸಂತೋಷದಿಂದ ಆಹ್ವಾನವನ್ನು ಮನ್ನಿಸಿದರು. ನಮ್ಮ ಕರ್ನಾಟಕ ಜನತೆಯ ಅದೃಷ್ಟ. ಮೇ 08, 1915 ರಂದು, ಗಾಂಧೀಜಿಯವರು ಪತ್ನಿ ಸಮೇತರಾಗಿ ಬೆಂಗಳೂರಿಗೆ ರೈಲಿನಲ್ಲಿ ಬಂದಿಳಿದರು. ಗಾಂಧೀಜಿಯವರು ಬಹಳ ಸರಳ ವ್ಯಕ್ತಿ. ಅದಕ್ಕೆ ನಿದರ್ಶನವೆಂಬಂತೆ, ಕೈಯಲ್ಲಿ ಒಂದು ಬಟ್ಟೆಗಳ ಗಂಟು ಮತ್ತು ನೀರಿನ ಬಾಟಲ್ ಹಿಡಿದು, ಅರ್ಧ ತೋಳಿನ ಷರ್ಟ್, ಪಂಚೆ ಮತ್ತು ಗುಜರಾತಿನ ಟರ್ಬನ್ ಧರಿಸಿದ್ದರು. ಅವರ ಪತ್ನಿಯು ಸಹ, ಬಹಳ ಸರಳವಾಗಿ ಕೆಂಪು ಹಂಚಿರುವ ಬಿಳಿ ಬಣ್ಣದ ಸೀರೆಯನ್ನು ಉಟ್ಟಿದ್ದರು.

    ಗಾಂಧೀಜಿಯವರನ್ನು ಕಾಣಲು ರೈಲ್ವೆ ನಿಲ್ದಾಣದ ಬಳಿ ಸಾವಿರಾರು ಜನ ಸೇರಿದ್ದರು. ಗಾಂಧೀಜಿಯವರನ್ನು ಕಂಡು ಜನ ಪುಳಕಿತರಾದರು. ಕೆಲವರು ಗಾಂಧೀಜಿಯವರನ್ನು ಕಂಡಾಗ ಜೀವನ ಸಾರ್ಥಕವಾಯಿತೆಂದರು. ಬೀದಿ, ಬೀದಿಗಳಲ್ಲಿ ಮಾವಿನ ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಗಾಂಧೀಜಿ ಮತ್ತು ಕಸ್ತೂರಿ ಬಾ ರವರನ್ನು ಅತಿಥಿ ಗೃಹಕ್ಕೆ ಕರೆದೊಯ್ಯಲು, ಅಲಂಕರಿಸಿದ ಕುದುರೆಗಳ ಗಾಡಿ ಸಿದ್ಧವಾಗಿತ್ತು. ಗಾಂಧೀಜಿಯವರು ಅತಿಥಿ ಗೃಹವು ಕೇವಲ ಅರ್ಧ ಮೈಲಿಯಷ್ಟು ದೂರದಲ್ಲಿದೆ ಎಂದು ತಿಳಿದು ಕುದುರೆ ಗಾಡಿಯಲ್ಲಿ ಪ್ರಯಾಣಿಸಲು ನಿರಾಕರಿಸಿ, ಬಿಡಾರದತ್ತ ಕಾಲು ನಡಿಗೆಯಲ್ಲಿಯೆ ಹೊರಟರು. ಇದು ಅವರ ಸರಳಿಕೆಯ ಪ್ರತೀಕ. 

     ಬಿಡಾರವು ಈಗಿನ ಆನಂದ್ ರಾವ್ ವೃತ್ತ ಇದೆಯಲ್ಲ ಅದರ ಹತ್ತಿರವೇ ಇದ್ದ, ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್ ಕೃಷ್ಣ ಸ್ವಾಮಿ ಅಯ್ಯಂಗಾರ್ ರವರು ಹೊಸದಾಗಿ ನಿರ್ಮಿಸಿದ ನೂತನ ಗೃಹ. ಈಗಿರುವ ಶ್ರೀ ವೈಷ್ಣವ ಸಭಾ ಕಟ್ಟಡದ ಎದುರು.

    ಉಭಯ ಕುಶಲೋಪರಿಯಾದ ನಂತರ, ಸ್ನಾನ ಮತ್ತು ತಿಂಡಿಯ ವ್ಯವಸ್ಥೆಯನ್ನು ಮಾಡಲಾಯಿತು. ಗಾಂಧೀಜಿಯವರ ಆಹಾರ ಬಹಳ ಸರಳ.  ಕಡಲೆಕಾಯಿ ಮತ್ತು ಪರಂಗಿಹಣ‍್ಣು ಅವರ ಇಷ್ಟವಾದ ಆಹಾರ.  ಅತಿಥೆಯರು ಗಾಂಧೀಜಿಯವರಿಗೆ ಸೇಬಿನಹಣ‍್ಣು ಮತ್ತು ಕಡಲೆಕಾಯಿ ನೀಡಿದರಂತೆ. ಹೆಚ್ಚು ಬೆಲೆಯುಳ‍್ಳ ಸೇಬಿನಹಣ‍್ಣಿನ ಅವಶ್ಯಕತೆಯಿಲ್ಲವೆಂದು ತಿಳಿಸಿ, ಪರಂಗಿಹಣ‍್ಣನ್ನು ತರುವಂತೆ ಆದೇಶ ನೀಡಿದರಂತೆ.

    ಕಾಕತಾಳೀಯವೇನೊ ಎಂಬಂತೆ, ಗಾಂಧೀವಾದಿಗಳು, ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಮ್ಮ ಪ್ರಾಂಶುಪಾಲರಾಗಿದ್ದ, ಡಾ ಎಚ್ .ನರಸಿಂಹಯ್ಯನವರಿಗೂ ಸಹ, ಕಡಲೆಕಾಯಿ ಎಂದರೆ ಬಹಳ ಇಷ್ಟ. ಕೆಲವು ಸಂದರ್ಭಗಳಲ್ಲಿ ಹಾಸ್ಟಲ್ ನಲ್ಲಿದ್ದ ಅವರ ಕೊಠಡಿಗೆ ಅಥವಾ ಕಚೇರಿಗೆ ಹೋದಾಗ ವಿದ್ಯಾರ್ಥಿಗಳಿಗೆ ಕಡಲೆಕಾಯಿ ತರಿಸಿ ಕೊಟ್ಟಿದ್ದುಂಟು.

    ಆ ದಿನದ ಮೊದಲನೇ ಸಾರ್ವಜನಿಕ ಕಾರ್ಯಕ್ರಮವನ್ನು ಅಂದಿನ ಸರ್ಕಾರಿ  ಫ್ರೌಡ ಶಾಲೆ, ಇಂದಿನ ಸರಕಾರಿ ವಿಜ್ಞಾನ ಮತ್ತು ಕಲಾ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು. ಅಂದಿನ ಗಣ್ಯಾತಿಗಣ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಗಾಂಧೀಜಿಯವರಿಗೆ ನೀಡಿದ ಭಿನ್ನವತ್ತಳೆಯನ್ನು ಆಂಗ್ಲಭಾಷೆಯಲ್ಲಿ ಶ್ರೀ ಕೃಷ‍್ಣ ಅಯ್ಯ‍ರ್‍ರವರು ಓದಿದರೆ, ಡಿ. ವಿ. ಗುಂಡಪ್ಪನವರು ಕನ್ನಡದಲ್ಲಿ ಓದಿದರು. ಗೋಪಾಲ ಕೃಷ‍್ಣ ಗೋಖಲೆಯವರ ಭಾವಚಿತ್ರವನ್ನು ಗಾಂಧೀಜಿಯವರು ಅನಾವರಣ ಮಾಡಿದರು. ಗಾಂಧೀಜಿಯವರು ಗೋಖಲೆಯವರ ವ್ಯಕ್ತಿತ್ವದ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿ, ಪ್ರಗತಿಪಥದಲ್ಲಿ ಒಂದೊಂದು ಹೆಜ್ಜೆಯಾಗಿ ಹೋಗ ಬೇಕೆಂದು ಕಿವಿಮಾತನ್ನು ಹೇಳಿದರು. ಗಾಂಧೀಜಿಯವರು ಅನಾವರಣವನ್ನು ಮಾಡಿದ ಗೋಖಲೆಯವರ ಭಾವಚಿತ್ರವನ್ನು ಗೋಖಲೆ ಸಾರ್ವಜನಿಕ ಸಂಸ‍್ಥೆಯಲ್ಲಿ ಈಗಲೂ ನೋಡಲು ಲಭ್ಯವಿದೆ.

    ಸಮಾರಂಭದ ನಂತರ, ಗಾಂಧೀಜಿಯವರನ್ನು ಕುದುರೆಗಾಡಿಯಲ್ಲಿ ತಂಗಿದ್ದ ಬಿಡಾರಕ್ಕೆ ವಾಪಸ್ಸು ಕರೆತರುವಾಗ, ಗಾಡಿಯಲ್ಲಿ ಪುಟ್ಟಣ‍್ಣಶೆಟ್ಟರು ಮತ್ತು ಕೃಷ‍್ಣ ಅಯ್ಯರ್  ಅವರುಗಳು ಇದ್ದರು.  ಅವರಿಬ್ಬರೂ ಗಾಂಧೀಜಿಯವರಿಗೆ ಸೆಂಟ್ರಲ್ ಕಾಲೇಜನ್ನು ತೋರಿಸಿದರಂತೆ. ಆಗ, ಸೆಂಟ್ರಲ್ ಕಾಲೇಜಿನ ಕಟ್ಟಡವನ್ನು ನೋಡಲು ಆಸಕ್ತಿ ತೋರದ ಗಾಂಧೀಜಿಯವರು, ಬಡವರು, ದೀನ ದಲಿತರು ವಾಸಿಸುವ ಸ‍್ಥಳಗಳನ್ನು ತೋರಿಸಿ ಎಂದರಂತೆ. ಅವರ ಬಯಕೆಯ ಪ್ರಕಾರ, ಅರಳೇಪೇಟೆ ಮಾರ್ಗವಾಗಿ, ಬಿಡಾರಕ್ಕೆ ವಾಪಸ್ಸು ಕರೆತಂದರಂತೆ. ಈ ಒಂದು ಪ್ರಸಂಗ, ಗಾಂಧೀಜಿಯವರಿಗೆ ಬಡವರ ಮೇಲಿದ್ದ ಪ್ರೀತಿ, ಕಾಳಜಿಗೆ ಸಾಕ್ಷಿ.

    ನಂತರ, ನಗರದ ಪ್ರಮುಖರೊಡನೆ, ದೇಶದ ಬಡತನ, ಇಂಗ್ಲೀಷ್ ಭಾಷೆಯ ಪರಿಣಾಮ, ಆಧುನಿಕ ನಾಗರೀಕತೆ ಮತ್ತು ಅದರ ಪಾಪದ ಮೂಲಗಳು,  ಭಾರತೀಯ ಸಂಸ್ಕೃತಿ ಮತ್ತು ಆದರ್ಶಗಳು, ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ವಿಚಾರ ವಿನಿಮಯಗಳು ನಡೆದವು.

    ಅಂದು ಸಂಜೆ,  ಲಾಲ್ ಭಾಗಿನ ಗಾಜಿನ ಮನೆಯಲ್ಲಿ ಒಂದು ದೊಡ್ಡ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಕನ್ನಡ, ಉರ್ದು ಮತ್ತು ತೆಲುಗು ಭಾಷೆಗಳಲ್ಲಿ ಪದ್ಯಗಳನ್ನು ಓದಿ, ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ರಾಜಕೀಯಕ್ಕು, ರಾಜಕೀಯ ಸಂಸ‍್ಥೆಗಳಿಗೂ ಧಾರ್ಮಿಕ ಸ್ವರೂಪವನ್ನು ಕೊಡಬೇಕೆಂಬ ಅಂಶಗಳನ್ನು ತಿಳಿಸಿದರು. ಸಾರ್ವಜನಿಕ ಸೇವಕರಿಗೆ ಹೆಚ್ಚು ಆಡಂಬರವಿಲ್ಲದೆ ಕಾರ್ಯ ನಿರ್ವಹಿಸಲು ಕರೆಯನ್ನು ಕೊಟ್ಟರು. ಸಂಜೆ, ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರು, ಮೈಸೂರಿನಿಂದ ಕಾರಿನಲ್ಲಿ ಬಂದು ಗಾಂಧೀಜಿಯವರನ್ನು ಭೇಟಿ ಮಾಡಿದರು. ಸಂಘಟಕರು, ಮೊದಲನೆ ದರ್ಜೆ ರೈಲು ಡಬ್ಬಿಯಲ್ಲಿ ಪ್ರಯಾಣಿಸಲು ಗಾಂಧೀಜಿಯವರಿಗೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ನಯವಾಗಿ ನಿರಾಕರಿಸಿ, ಮೂರನೇ ದರ್ಜೆಯ ಡಬ್ಬಿಯಲ್ಲಿ ಪ್ರಯಾಣ ಮಾಡಿದರು. ರಾತ್ರಿ, ಗಾಂಧೀಜಿಯವರು ವಾಪಸ್ಸಾದರು.

    ಸರ್ವೋದಯ ದಿನ ಆಚರಣೆಯ   ಸಂದರ್ಭದಲ್ಲಿ ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದಿರುವ, ವಿಶ್ವ ನಾಯಕ, ಅಹಿಂಸಾತ್ಮಕ ಚಳವಳಿಗೆ ಬುನಾದಿ ಹಾಕಿದ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹೋರಾಡಿದ, ಮಹಾತ್ಮ ಗಾಂಧೀಜಿಯವರ ವಿಚಾರಗಳು ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತ ಎಂಬ ಅಂಶವನ್ನು ಯುವಕರಿಗೆ ತಿಳಿಸಲು ಪ್ರಯತ್ನಿಸೋಣ. ಗಾಂಧೀಜಿಯವರ ನಾಲ್ಕು ಮೂಲಭೂತ ತತ್ವಗಳಾದಂತ ಸತ್ಯ, ಅಹಿಂಸೆ, ಸರ್ವೋದಯ ಮತ್ತು ಸತ್ಯಾಗ್ರಹ ಇವುಗಳನ್ನು ಪಾಲಿಸೋಣ. ಅನುಷ‍್ಠಾನಕ್ಕೆ ಶ್ರಮಿಸೋಣ. ಸಮಾಜದಲ್ಲಿ ಸಮಾನತೆಯ ಭಾವನೆಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಳ‍್ಳೋಣ.

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ.
    spot_img

    More articles

    4 COMMENTS

    1. ನಮ್ಮ ಕನ್ನಡ ನಾಡಿಗೆ ಗಾಂಧೀಜಿಯವರು ನೀಡಿದ ಭೇಟಿಗಳ ಬಗ್ಗೆ ಈ ಲೇಖನ ವಿಸ್ತೃತ ವಾಗಿ ತಿಳಿಸುತ್ತದೆ. ಈ ಸಮಯೋಚಿತ ಲೇಖನಕ್ಕಾಗಿ ಧನ್ಯವಾದಗಳು.

    2. ಗಾಂಧೀಜಿಯವರ ಬೆಂಗಳೂರು ಭೇಟಿಯ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಮಾನ್ಯ ಪ್ರಾಂಶುಪಾಲರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ಅಂದಿನ ಮಹೋನ್ನತ ನಾಯಕರು ಮತ್ತು ಸಾಹಿತಿಗಳು ಮಹಾತ್ಮಾ ಗಾಂಧಿಯವರ ಮೇಲೆ ಇಟ್ಟ ಗೌರವ ಆದರಗಳು ಅವರ ವ್ಯಕ್ತಿತ್ವವನ್ನು ಸಾರಿ ಹೇಳುತ್ತವೆ. ಅವರ ಜೀವನಾದರ್ಶಗಳು ಸದಾ ಸರ್ವರಲ್ಲೂ ಉದಯಿಸುತ್ತಿರುವಂತೆ ಮಾಡಲು ಇಂತಹ ಲೇಖನಗಳು ಸಹಕಾರಿ. ವಂದನೆಗಳು

    3. The article is a picture of 1911 India and Bangalore. The details about Gandhi’s simplicity and meeting with sir MV is great. The people who lived in that era are Lucky

    4. ದಕ್ಷಿಣ ಆಫ್ರಿಕಾ ಸತ್ಯಾಗ್ರಹ ಕ್ಕೆ ಕರ್ನಾಟಕ ದಿಂದ ನಿಧಿ ಸಂಗ್ರಹವಾದ ವಿಚಾರ ತಿಳಿದು ಖುಷಿ ಆಯಿತು. ಹುತಾತ್ಮ ದಿನದ ಸಂದರ್ಭದಲ್ಲಿ ಗಾಂಧೀಜಿ ಯವರ ಲೇಖನ ಸಮಯೋಚಿತವಾಗಿದೆ. ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!