35.7 C
Karnataka
Saturday, May 11, 2024

    smile please ಅನ್ನುತ್ತಿದ್ದ ಕ್ಯಾಮರಾಮ್ಯಾನ್ ತನ್ನ smile ಅನ್ನೇ ಕಳೆದುಕೊಂಡಿದ್ದಾನೆ

    Must read

    ಒಳಗೆ ಕಾಲಿಡುತ್ತಿದ್ದಂತೆ ಗೋಡೆ ಶೋಕೇಸು ಟೇಬಲ್ಲಿನ ಗಾಜುಪೀಸಿನ ಅಡಿಯಲ್ಲಿ ಹೀಗೆ ಎಲ್ಲಂದರಲ್ಲಿ ಕಣ್ಣಿಗೆ ರಾಚಿಸುವ ಬಣ್ಣ ಬಣ್ಣದ ತರಹೇವಾರಿ ಗಾತ್ರದ ಚಿತ್ರಪಟಗಳು .

    ವಿವಿಧ ಸ್ಥಳಗಳಲ್ಲಿ , ಸುಪ್ರಸಿದ್ಧ ನಟ ನಟಿಯರೊಂದಿಗೆ , ರಾಜಕೀಯ ಧುರೀಣರೊಂದಿಗೆ , ಕ್ರೀಡಾ ಕ್ಷೇತ್ರದ ದಿಗ್ಗಜರೊಂದಿಗೆ ಎಲ್ಲಾ ರಂಗದ ಸಿಲೆಬ್ರೆಟಿಗಳೊಂದಿಗೆ ಒಬ್ಬಾತ ಆ ಪಟಗಳಲ್ಲಿ ಕಾಣಸಿಗುತ್ತಿದ್ದ . ಆ ವ್ಯಕ್ತಿಯೇ ಆ ಸ್ಟುಡಿಯೋದ ಮಾಲೀಕ ಮತ್ತು ಅದೇ ಕೌತುಕದ ಫೋಟೋ ಸ್ಟುಡಿಯೋ .

    ಹಿಂದೆಲ್ಲಾ ಪ್ರತೀ ಸ್ಟುಡಿಯೋದ ವಿನ್ಯಾಸ ಒಂದೇ ರೀತಿಯಾಗಿದ್ದರೂ ಅದರಲ್ಲಿರುವ ಎರಡು ಕೋಣೆಗಳಲ್ಲಿ ಒಂದು ಡಾರ್ಕ್ ರೂಂ ಎಂದು ಕುತೂಹಲಕಾರಿಯಾಗಿಯೂ ಮತ್ತೊಂದು ಫೋಟೋ ತೆಗೆಸಿಕೊಳ್ಳುವ ರೂಮು ಎಂದು ಆತ್ಯಾಕರ್ಷಕವಾಗಿಯೂ ಇರೋದು. ಒಂದು ನಿಲುವುಗನ್ನಡಿ ಅದರ ಮುಂದೆ ಬಾಚಣಿಗೆ ಜೊತೆಗೊಂದು ಪೌಡರಿನ ಡಬ್ಬ . ಗೋಡೆಗೆ ಇಳಿಬಿಟ್ಟ ಉದ್ದನೆಯ ಕಪ್ಪು ಬಿಳಿ ಮತ್ತು ಆಕಾಶ ನೀಲಿ ರಂಗಿನ ಪರದೆಗಳು .ಒಂದು ಮರದ ಸ್ಟೂಲು ಅದರ ಎದುರಿಗೇ ಸ್ಟ್ಯಾಂಡಿನಲ್ಲಿ ರಾಜನಂತೆ ಕಂಗೊಳಿಸುತ್ತಿದ್ದ ಕಡುಗಪ್ಪು ಕ್ಯಾಮರಾ .

    ನಾವುಗಳು ನಮ್ಮೂರಿನ ಸ್ಟುಡಿಯೋಗೆ ಕಾಲಿಡಲು ಪ್ರಮುಖ ಕಾರಣ ಅಂದ್ರೆ ಅದು ಪಾಸ್‌ಪೋರ್ಟ್ ಸೈಝಿನ ಭಾವಚಿತ್ರ .
    ಶಾಲೆಯ ಪ್ರವೇಶಕ್ಕೆ , ಹೈಸ್ಕೂಲು ಕಾಲೇಜಿನ ಗುರುತಿನ ಚೀಟಿಗೆ . ಲೈಬ್ರೆರಿ ಕಾರ್ಡಿಗೆ , ಬಸ್ ಪಾಸಿಗೆ . ಎಂಪ್ಲಾಯ್ಮೆಂಟ್ ಕಾರ್ಡಿಗೆ . ಹೀಗೆ ಪಾಸ್‌ಪೋರ್ಟ್ ಸೈಝಿನ ಫೋಟೋ ನಮಗೆ ಅತೀ ಜರೂರಿನದ್ದಾಗಿತ್ತು . ಫೋಟೋ ತೆಗೆದು ಮಾರನೆಯ ದಿನ ತೊಳೆದು ಒಣಗಾಕಿ ಅದನ್ನು ಸರಿಯಾದ ಅಳತೆಗೆ ಕತ್ತರಿಸಿ ಕವರಿನಲ್ಲಿ ಹಾಕಿ ಮೂರು ಫೋಟೋಗಳ ಜೊತೆ ಒಂದು ಸಣ್ಣ ಎಕ್ಸ್ ರೇ ಪ್ರತಿಯಂತೆ ಕಾಣುವ ಕಂದು ಬಣ್ಣದ ನೆಗೆಟಿವ್ ಕೊಡುತ್ತಿದ್ದರು .ನಾವು ಆ ನೆಗೆಟೀವನ್ನು ಜೋಪಾನ ಮಾಡಿ ಅದರಲ್ಲಿ ನಮಗೆ ಬೇಕೆಂದಾಗ ಪ್ರಿಂಟ್ ಹಾಕಿಸಿಕೊಳ್ಳುತ್ತಿದ್ದೆವು .

    ಹಿಂದೆಲ್ಲಾ ನೆಂಟರ ಮನೆಗೋ ಸ್ನೇಹಿತರ ಮನೆಗೋ ಒಟ್ನಲ್ಲಿ ಯಾರದೇ ಮನೆಗೆ ಹೋದ್ರು ಅವರ ಮನೆಯ ಗೋಡೆಯ ಮೇಲೆ ಆ ಮನೆಯ ಯಜಮಾನರ ಫೋಟೋ ಮಕ್ಕಳ ಬಾಲ್ಯದ ಫೋಟೋ . ಡ್ರೈವರ್ ಆಗಿದ್ರೆ ಕಾರಿನ ಜೊತೆ . ಕಾರ್ಮಿಕನೋ ಸೈನಿಕನೋ ಪೋಲೀಸೋ ಆಗಿದ್ರೆ ಸಮವಸ್ತ್ರದಲ್ಲಿ ಇರುವ ಫೋಟೋಗಳು , ಇದರ ಜೊತೆಗೆ ಒಂದಷ್ಟು ಫೋಟೋಗಳು ಆಲ್ಬಮ್ಗಳಲ್ಲಿ ಕಾಣಸಿಗುತ್ತಿತ್ತು .

    ಒಂದೊಂದು ಫೋಟೋ ಹಿಂದೆಯೂ ಅದರದ್ದೇ ಆದ ಕತೆಯಿರುತ್ತಿತ್ತು . ಆ ಫೋಟೋ ಎಲ್ಲಿ ತೆಗೆದೆದ್ದು ಅದನ್ನು ತೆಗೆದ ಫೋಟೋಗ್ರಾಫರ್ ಯಾರು ಎಲ್ಲವನ್ನೂ ಆ ಮನೆಯವರು ಹಂಚಿಕೊಳ್ಳುತ್ತಿದ್ದರು .

    ಪ್ರತೀ ಕುಟುಂಬಕ್ಕೊಬ್ಬ ಫೋಟೋಗ್ರಾಫರ್ ಆಪ್ತನಾಗಿರುತ್ತಿದ್ದ . ಮನೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ ಮುಂಚೇನೇ ಅವರನ್ನು ಕರೆಸಿ ತಿಂಡಿ ಕಾಫಿ ಮಾಡಿಸಿ. ಒಂದಷ್ಟು ಮುಂಗಡ ಹಣ ನೀಡಿ ಚೆನ್ನಾಗಿ ತೆಗೀಬೇಕಪ್ಪ ಅಂತ ಕಾರ್ಯಕ್ರಮಕ್ಕೆ ಬುಕ್ ಮಾಡಿಕೊಂಡು ಕಳಿಸುತ್ತಿದ್ದರು .

    ಇಂದು ಮೊಬೈಲ್ ಕ್ರಾಂತಿಯಿಂದ ಫೋಟೋ ಸ್ಟುಡಿಯೋಗಳು ಮುಚ್ಚುವ ಹಂತ ತಲುಪಿದ್ದು ಲಕ್ಷಾಂತರ ಫೋಟೋಗ್ರಾಫರ್ಗಳ ಬದುಕು ಅತಂತ್ರವಾಗಿದೆ.ಕ್ಯಾಮರಾ ಕೈಯಲ್ಲಿ ಹಿಡಿದು ಸ್ಮೈಲ್ ಪ್ಲೀಸ್ ಅನ್ನುತ್ತಿದ್ದ ಕ್ಯಾಮರಾಮ್ಯಾನ್ ತನ್ನ ಸ್ಮೈಲನ್ನೇ ಕಳೆದುಕೊಂಡಿದ್ದಾನೆ .

    Photo by Alexander Dummer from Pexels

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!