26.6 C
Karnataka
Saturday, May 11, 2024

    ಕೊರೊನಾ ಸುತ್ತಲಿನ ಮಿಥ್ಯೆಗಳು;ಮೊಬೈಲ್ ನಲ್ಲಿ ಫಾರ್ವರ್ಡ್ ಆಗಿ ಬಂದದ್ದೆಲ್ಲ ಸತ್ಯವಲ್ಲ

    Must read

    ಯಾವುದಾದರೊಂದು ವಿಚಾರದ ಬಗ್ಗೆ  ಯಾರಿಗೂ ಸರಿಯಾದ ಮಾಹಿತಿ ಇಲ್ಲವೆಂದ ಕೂಡಲೇ ಎಲ್ಲರೂ ತಲೆಗೊಂದೊಂದರಂತೆ ಮಾತಾಡಲು ಶುರುಮಾಡುತ್ತಾರೆ. ತಮ್ಮ ನಂಬಿಕೆ ಅಥವಾ ಅನಿಸಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಪರವಾನಗಿ ಸಿಕ್ಕಿತು ಎಂಬಂತೆ ವರ್ತಿಸತೊಡಗುತ್ತಾರೆ. ತಮ್ಮ ಆರೋಗ್ಯ ಮತ್ತು ಪ್ರಾಣದ ವಿಚಾರ ಎಂದ ಕೂಡಲೇ ಇವರನ್ನು ನಂಬುವ ಇತರರು ಸಿಕ್ಕ ಮಾಹಿತಿಯ ಮೂಲವನ್ನು ವಿಚಾರಿಸದೇ ಪಾಲನೆಗೆ ತಂದುಬಿಡುತ್ತಾರೆ. ಭಯ ಅಥವಾ ಗಾಬರಿಯಲ್ಲಿದ್ದಾಗ ಇದು ಜನಸಾಮಾನ್ಯರು ತೋರುವ ಸಹಜ ಪ್ರತಿಕ್ರಿಯೆ.

    ವಿಶ್ವವ್ಯಾಪೀ ಹೊಸವ್ಯಾಧಿ ಶುರುವಾಗಿ ಸರ್ಕಾರಗಳು, ವೈದ್ಯರುಗಳು ತಮಗೆ ಈ ಬಗ್ಗೆ ನಿಖರ ಮಾಹಿತಿ ಇಲ್ಲವೆಂದ ಕೂಡಲೇ ಹಲವರು ತಮ್ಮ ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ಕೆಲವು ಹೊಸ ಅಭ್ಯಾಸಗಳನ್ನು ಜಾರಿಗೆ ತಂದುಬಿಟ್ಟರು.

    ಮನೋ ವೈಜ್ಞಾನಿಕ ಮೂಲಗಳಿಂದ ಅವಲೋಕಿಸಿದರೆ ’ ನಂಬುಗೆ ’ ಗಳು ಮನುಷ್ಯರಲ್ಲಿ ಹೊಸ  ಭರವಸೆ ಮತ್ತು ಧೈರ್ಯಗಳನ್ನು ತುಂಬಬಲ್ಲವು. ಆ ಕಾರಣಕ್ಕೆ ಅವು ಒಳ್ಳೆಯವೇನೋ ನಿಜ. ಆದರೆ ಕೊರೋನಾದಂತಹ  ಸಂದರ್ಭಗಳಲ್ಲಿ ಇವೇ ನಂಬಿಕೆಗಳು ಅವರಲ್ಲಿ ಹುಸಿ ಧೈರ್ಯವನ್ನು ತುಂಬಿ ಅವರು ವೈಜ್ಞಾನಿಕ ಮೂಲಗಳನ್ನು ತಿರಸ್ಕರಿಸುವ ಅಪಾಯವನ್ನು ಸೃಷ್ಟಿಸಬಲ್ಲವು. ಅವರು ತಮ್ಮ ನಂಬಿಕೆಗಳಿಗೆ ಜೋತುಬಿದ್ದು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಪದೇ ಪದೇ ಕೈ ತೊಳೆಯುವ ಅಭ್ಯಾಸಗಳನ್ನು ನಿಲ್ಲಿಸಬಹುದು. ಯಾವುದೇ ರೀತಿ ಪರಿಣಾಮಕಾರಿಯಲ್ಲದಿದ್ದರೂ ತಮಗೆ ತಾವೇ ಅನಗತ್ಯ ಚಿಕಿತ್ಸೆ ಮಾಡಿಕೊಂಡು ಅದರಿಂದಲೇ  ಸಾಯಬಹದು.

    ಇಂಥ ಹೊಸ ಅಭ್ಯಾಸಗಳು ಜನರಲ್ಲಿ ಧಾವಂತವನ್ನೂ ಸೃಷ್ಟಿಸುತ್ತವೆ. ಕೊರೊನಾ ತಡೆಗಟ್ಟಲು ಯಾವುದೋ ಒಂದು ವಸ್ತು ಉಪಯಕ್ತ ಎಂಬ ಹುಸಿ ನಂಬಿಕೆಯೊಂದಿಗೆ ಆ ವಸ್ತುವಿಗೆ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಬೇಡಿಕೆ ಕಾಣಿಸುತ್ತದೆ. ಪೈಪೋಟಿಯ ನಡುವೆ ಜಠಾಪಟಿಯೂ ನಡೆಯುತ್ತದೆ.

    ಇಂತಹ ಹಲವು ಪೈಪೋಟಿಗಳನ್ನು ಬೇಕಂತಲೇ ಹುಟ್ಟು ಹಾಕಿ ಲಾಭ ಮಾಡಿಕೊಳ್ಳುವ ಖದೀಮರೂ ಇದ್ದಾರೆ. ಇವರು ವೈದ್ಯರ ಹೆಸರನ್ನು ಬಳಸಿ ಎಂಥದ್ದೊ ಅಧ್ಯಯನದ ಇಂಗ್ಲಿಷ್ ಪೇಪರ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಅದು ಬರಿಯ ಗಮನಿಸಿದ (observational studies) ವಿಚಾರವೇ ಅಥವಾ ಧೃಡಪಟ್ಟು ಮನ್ನಣೆಗಳಿಸಿ ಸರ್ಕಾರದಿಂದ ಅಂಗೀಕೃತಗೊಂಡ ವಿಚಾರವೇ ಎನ್ನುವುದನ್ನು ಗಮನಿಸದೆ,  ’ಇವು ಯಾಕೆ ಬರೀ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹರಿದಾಡುತ್ತಿವೆ ? ’ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಧಿಡೀರ್ ಎಂದು ಜನರು ಇಂಥವನ್ನು ನಂಬಬಾರದು.

    ಇಂತಹ ಕಪೋಲ ಕಲ್ಪಿತ ಮಿಥ್ಯೆಗಳನ್ನು ಜನಸಾಮಾನ್ಯರಲ್ಲಿ ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಪೋಸ್ಟರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಹರಿಯಬಿಟ್ಟಿದೆ. ಕಪೋಲ ಕಲ್ಪಿತ ಮಿಥ್ಯೆಗಳು ತರುವ ಹಾನಿಗಳಿಂದ ಜನರನ್ನು ರಕ್ಷಿಸುವುದೇ ಇದರ ಉದ್ದೇಶ.

    ಇದುವರೆಗೆ ಕೊರೊನಾ ವಿರುದ್ಧ ಕೆಲಸ ಮಾಡಬಲ್ಲ ಯಾವುದೇ ಔಷದ ಮಾರುಕಟ್ಟೆಗೆ ಬಂದಿಲ್ಲ

    ಭಾರತದಲ್ಲಿಯೂ ಸೇರಿದಂತೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಎಂಬ  ಔಷದ ಕೊರೊನಾ ವಿರುದ್ಧ ಕೆಲಸಮಾಡುತ್ತದೆ ಎಂಬ ನಂಬಿಕೆ ಬಹಳಷ್ಟು ಜನರಲ್ಲಿ ಇತ್ತು. ಅಗತ್ಯವೇ ಇಲ್ಲದಾಗ್ಯೂ ಕೊರೊನಾವನ್ನು ತಡೆಗಟ್ಟಲು ಈ ಔಷಧವನ್ನು ಸೇವಿಸಿದ ಜನರಿದ್ದಾರೆ.

    ಸಾಮಾನ್ಯವಾಗಿ ಮಲೇರಿಯ, ಲ್ಯೂಪಸ್ ಎರಿತೆಮಟೋಸಿಸ್, ರ್ಯೂಮಟ್ಯಾಯ್ಡ್ ಆರ್ಥ್ರೈಟಿಸ್ ಖಾಯಿಲೆಗಳಿಗೆ ಬಳಸುವ ಈ ಔಷದ ಕೊರೊನಾ ವಿರುದ್ಧ ಫಲಕಾರಿಯೇ ಎಂಬ ಅಧ್ಯಯನಗಳು ನಡೆದದ್ದು ನಿಜ. ಅದರೆ ಈ ಔಷದ ಕೊರೊನಾದಿಂದ ಆಗುವ ಸಾವನ್ನಾಗಲೀ ಅಥವಾ  ಕಾಣಿಸಿಕೊಳ್ಳುವ ರೋಗಲಕ್ಷಣಗಳನ್ನಾಗಲೀ ತಡೆವಲ್ಲಿ ನಿಷ್ಪ್ರಯೋಜಕ ಎಂದು ತಿಳಿಯಿತು. ಅಮೆರಿಕಾದ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಕೂಡ ಈ ಹೆಸರಿನಲ್ಲಿ ಜನರಿಗೆ ಭರವಸೆಯ ಮಾತನ್ನಾಡಲು ಪ್ರಯತ್ನಿಸಿದರಾದರೂ ಕೊರೋನಾ ಟಾಸ್ಕ್ ಮುಖ್ಯಸ್ಥ ಡಾ. ಆಂತೊನಿ ಫಾಷಿ ಅದನ್ನು ಅಲ್ಲೆಗೆಳೆದ ನಂತರ ಈ ವಿಚಾರಕ್ಕೆ ಕೊನೆಗೆ ತೆರೆ ಹಾಕಲಾಯಿತು. ಆರೋಗ್ಯ ಇಲಾಖೆಯಲ್ಲಿರುವ ಹಲವರು ಈ ಔಷದದ ಕೊರೊನ ಮೇಲಿನ ಅಧ್ಯಯನ ಪತ್ರಿಕೆಗಳನ್ನೇ ’ಸಾಕ್ಷಿ-ಆಧಾರ’ ಗಳೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದೂ ಉಂಟು.ಇನ್ನು ಜನ ಸಾಮಾನ್ಯರ ಪಾಡೇನು?

    ಈ ಔಷದದ ಮೇಲೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ, ಕೊರೊನಾದ ಯಾವುದೇ ಹಂತದ ಮೇಲೆ ಇದು ಉಪಯಕ್ತವೇ ಎಂಬುದು ಇನ್ನೂ ಖಚಿತವಾಗಬೇಕಿದೆ. ಹಾಗಿರುವಾಗ ಇದನ್ನು ವೈದ್ಯರ ಮೇಲುಸ್ತುವಾರಿಗೆ ಇಲ್ಲದೆ ಸೇವಿಸಿದಲ್ಲಿ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಾಗುತ್ತವೆ. ಸಾವು ಕೂಡ ಉಂಟಾಗಬಲ್ಲದು. ಹಾಗೆಯೇ ವೈದ್ಯರ ಸಲಹೆಯಿಲ್ಲದೆ ಯಾವುದೇ ಇತರೆ ಮಾತ್ರೆ ಅಥವಾ ಔಷಧವನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಹಾನಿ ಮಾಡಬಲ್ಲದು.

    ಇದುವರೆಗೆ ಕೊರೊನಾವನ್ನು ವಾಸಿ ಮಾಡಬಲ್ಲ ಅಥವಾ ತಡೆಯಬಲ್ಲ ಯಾವುದೇ ಔಷಧಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರವಾನಗಿ ಸಿಕ್ಕಿಲ್ಲ. ಈ ಕಾರಣ ಕೊರೊನಾ ವಾಸಿ ಮಾಡುತ್ತದೆಂದು ಹೇಳಿಕೊಳ್ಳುವ ಯಾವುದೇ ಔಷಧಗಳನ್ನು ಬಳಸುವುದರಿಂದ ಉಪಯೋಗವಾಗುವುದಿಲ್ಲ. ಬದಲಿಗೆ ಹಣದ ಖರ್ಚಿನ ಜೊತೆಗೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತಗಳೇ ಹೆಚ್ಚು.

    ಕೊರೊನಾ ಸೋಂಕು ಬರುವುದು ವೈರಸ್ಸಿನಿಂದ. ಹೀಗಾಗಿ ಆಂಟಿ ಬ್ಯಾಕ್ಟೀರಿಯಗಳು ಇದರ ವಿರುದ್ಧವಾಗಿ ಕೆಲಸಮಾಡುವುದುದಿಲ್ಲ. ಆದ್ದರಿಂದ ಸುಮ್ಮ ಸುಮ್ಮನೆ ಆಂಟಿ ಬಯಾಟಿಕ್ಸ್ ತೆಗೆದುಕೊಂಡರೆ ದೇಹಕ್ಕೆ ಹಾನಿಯೇ ಹೊರತು ಯಾವುದೇ ರೀತಿಯ ಲಾಭ ದೊರೆಯುವುದಿಲ್ಲ.

    ಎಥನಾಲ್, ಮೆಥನಾಲ್ ಮತ್ತು ಬ್ಲೀಚ್ ಗಳು ವಿಷವಸ್ತುಗಳು. ಯಾವುದೇ ರೀತಿಯಲ್ಲೂ ಇವನ್ನು ದೇಹದೊಳಕ್ಕೆ ಸೇರಿಸಬಾರದು. ಇವು ಕೊರೊನಾ ವೈರಸ್ಸನ್ನು ಕೊಲ್ಲುವ ಬದಲು ನಮ್ಮನ್ನೇ ಕೊಲ್ಲಬಲ್ಲ ಅಪಾಯಕಾರಿ ರಾಸಾಯನಿಕಗಳು.

    ಮಾಸ್ಕ್ ಅಥವಾ ಮುಖಗವಸುಗಳು

    ಅದರಂತೆಯೇ  ಮತ್ತೊಂದು ಅತ್ಯಂತ ಕ್ಷುಲ್ಲಕವಾದ ಮತ್ತೊಂದು ಮಿಥ್ಯವೂ ಹರಿದಾಡುತ್ತಿದೆ. ಅದೆಂದರೆ, ಮಾಸ್ಕ್ ಗಳನ್ನು ಧರಿಸುವುದರಿಂದ ಉಸಿರಾಡಲು ತೊಂದರೆಯಾಗುತ್ತದೆ ಎಂಬ ವಿಚಾರ. ಇದು ನಿಜವಲ್ಲ. “ ನಮ್ಮ ವೈದ್ಯರೇ ಹೇಳಿದ್ದಾರೆ, ಮಾಸ್ಕ್ ಉಸಿರಾಟಕ್ಕೆ ತೊಂದರೆಕೊಡುತ್ತದೆಂದು “ ವಾದಮಾಡಿದವರೂ ಇದ್ದಾರೆ.

    ನೆನಪಿಡಿ ತಮ್ಮ ಜೀವಿತವಿಡೀ ಮಾಸ್ಕ್ ಧರಿಸಿ ಕೆಲಸಮಾಡುವ ಬೇಕಾದಷ್ಟು ಜನರಿದ್ದಾರೆ.ಮಾಸ್ಕ್ ಧರಿಸುವುದರಿಂದ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ. “ಜಾಸ್ತಿ ಕಾಲ ಮಾಸ್ಕ್ ಧರಿಸಿದರೆ ಅದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ, ಬೇಕಾದಷ್ಟು ಆಮ್ಲಜನಕ ಸಿಗುವುದಿಲ್ಲ “ ಇತ್ಯಾದಿ ನಂಬಿಕೆಗಳು ನಿಜವಲ್ಲ.

    ಮಾಸ್ಕ್ ಹಾಕಿಕೊಳ್ಳುವುದರಿಂದ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ. ಮುಖಗವಸು ಧರಿಸುವ ಅಭ್ಯಾಸವಿಲ್ಲದಿರುವ ಕಾರಣ ಹಾಗೆನಿಸಬಹುದು ಅಷ್ಟೆ. ಜೊತೆಗೆ ಮನೆಯಲ್ಲಿರುವಾಗ, ನಿದ್ರೆ ಮಾಡುವಾಗ, ವ್ಯಾಯಾಮ ಮಾಡುವಾಗ, ಒಬ್ಬರೇ ಇದ್ದಾಗ, ನಿಮ್ಮದೇ ಖಾಸಗಿ ವಾಹನದಲ್ಲಿ ಓಡಾಡುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ.

    ಮಾಸ್ಕ್ ಬೆವರಿಗೋ ಮತ್ತೊಂದಕ್ಕೋ ಒದ್ದೆಯಾದ ನಂತರ ಅದನ್ನು ಬಿಸಾಡುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದುಕೊಳ್ಳಬಹುದು.  ಒಮ್ಮೆ ಧರಿಸಿ ಬಿಸಾಡುವ ಮಾಸ್ಕ್ ಆದಲ್ಲಿ ಒಂದು ಬಳಕೆಯ ನಂತರ ಬಿಸಾಡಬೇಕು. ಒಗೆದು ಮತ್ತೆ ಧರಿಸುವ ಮಾಸ್ಕ್ ಆದಲ್ಲಿ ಆಗಾಗ ಒಗೆದು ಒಣಗಿಸಿ ಧರಿಸಬೇಕು.

    ಪಾದರಕ್ಷೆಗಳಿಂದ ಕೊರೊನಾ ಎಂಬ ಮಿಥ್ಯೆ

    ಕೆಲವರಿಗೆ  ಪಾದರಕ್ಷೆಗಳಿಂದ ಕೊರೊನಾ ಹರಡುತ್ತದೆಂಬ ನಂಬಿಕೆಗಳಿವೆ, ಇಂತವು  ಮನೆಗೆ ಬಂದ ಕೂಡಲೆ ಶೂ ಮತ್ತು ಚಪ್ಪಲಿಗಳನ್ನು ಆಂಟಿಸೆಪ್ಟಿಕ್ ಸ್ಪ್ರೇ ಮತ್ತು ದ್ರಾವಣಗಳಿಂದ ತೊಳೆಯುವ ಶ್ರಮ ತೆಗೆದುಕೊಳ್ಳುತ್ತಿದ್ದಾರೆ. ಅವುಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಇದು ಸಹಾಯಮಾಡಬಹುದೇ ಹೊರತು ಕೊರೊನ ವಿಚಾರದಲ್ಲಿ ಇದರಿಂದ ಪ್ರಯೋಜನವಾಗುವುದಿಲ್ಲ. ಬೆವರಿನಿಂದ ಕರೋನಾ ಹರಡುವುದಿಲ್ಲ.

    ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

    ಭಾರತದಲ್ಲಿ ಬ್ರಿಟನ್ನಿನಂತೆ ಉಚಿತ ಆರೋಗ್ಯಭಾಗ್ಯ ಎಲ್ಲರಿಗೂ ಇಲ್ಲ. ಇರುವ ಕಡೆಯಲ್ಲಿ ಸರ್ಕಾರಿ ಆಸ್ಪತ್ರೆಗಳೆಂದರೂ ಜನರಿಗೆ ಪೂರ್ಣ ನಂಬಿಕೆಯಿಲ್ಲ. ಖಾಸಗಿ ಆಸ್ಪತ್ರೆಗಳು ಅತ್ಯಂತ ದುಬಾರಿ.

    ಇತ್ತೀಚೆಗೆ ಒಂದು ಕುಟುಂಬದ ಚಿಕ್ಕ ವಯಸ್ಸಿನ ಮಗಳೊಬ್ಬಳಿಗೆ ಕೊರೊನಾ  ಎಂದಕೂಡಲೇ ಆಕೆಯನ್ನು ಖಾಸಗೀ ಆಸ್ಪತ್ರೆಗೆ ಸೇರಿಸಿದರು. ಕೆಲವು ದಿನ ಆಸ್ಪತ್ರೆಯಲ್ಲಿದ್ದು ಮರಳಿದ ನಂತರ ಎರಡನೇ ಮಗಳನ್ನೂ ಆಸ್ಪತ್ರೆಗೆ ಸೇರಿಸಿದರು. ಕೊರೊನಾ ಪಾಸಿಟಿವ್ ಎಂಬುದನ್ನು ಬಿಟ್ಟರೆ ಇಬ್ಬರಲ್ಲೂ ಇನ್ನಾವುದೇ ರೋಗ ಲಕ್ಷಣಗಳಿರಲಿಲ್ಲ. ಲಕ್ಷಾಂತರ ರೂಪಾಯಿ ಕೈ ಬಿಟ್ಟಿತು. ದಿನವೊಂದಕ್ಕೆ ಮಲಗಲು ಮಂಚ-ಹಾಸಿಗೆಯನ್ನು ನೀಡಲು ಪಂಚ ತಾರಾ ಹೋಟೆಲಿಗಿಂತಲೂ ಹೆಚ್ಚು ಶುಲ್ಕ ವಿಧಿಸಿದ ಆಸ್ಪತ್ರೆ ವೈದ್ಯರು ಭೇಟಿಕೊಟ್ಟದ್ದಕ್ಕೆ, ದಾದಿ ಬಂದು ಬರೇ ಇಪ್ಪತ್ತು ರೂಪಾಯಿಗಳ ಮಾತ್ರೆ ಕೊಟ್ಟದ್ದಕ್ಕೆ  ನೂರಾರು ಪಟ್ಟು ಫೀ ತೆಗೆದುಕೊಂಡಿತ್ತು.

    ನಿಜಕ್ಕೂ ಪರೀಕ್ಷೆಯ ವರದಿ ಬಂದ ಕೂಡಲೇ ಆಸ್ಪತ್ರೆಗೆ ದಾಖಲೆಯಾಗಬೇಕೆ?

    ಹಲವರಲ್ಲಿ ಕೊರೊನಾ ಬಂದ ಕೂಡಲೇ ಸಾವಿನ ಭಯ ಆವರಿಸುತ್ತಿದೆ. ಆದರೆ ಇದು ನಿಜಕ್ಕೂ ಅನಗತ್ಯ.ಕೊರೊನಾ ಸೋಂಕು ತಗುಲಿದ ಬಹುತೇಕರು ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ.ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ಅವರ ಮಾರ್ಗದರ್ಶನದಂತೆ ನಡೆಯುವುದು ಸೂಕ್ತ. ಹಿರಿಯರು, ಇತರೆ ಖಾಯಿಲೆಗಳಿಂದ ಈಗಾಗಲೇ ನರಳುತ್ತಿರುವರು ರೋಗ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಡ ಮಾಡದೆ ಬೇಗನೆ ವೈದ್ಯಕೀಯ ಸಲಹೆಯನ್ನು ಕೇಳಬಹುದು. ಮಲೇರಿಯ ಡೆಂಗ್ಯೂ ಜ್ವರವಿರುವ ಜಾಗಗಳಲ್ಲಿ ಬದುಕುತ್ತಿರುವವರು ವಿಶೇಷ ಎಚ್ಚರಿಕೆಯಿಂದ ತುರ್ತಾಗಿ ವೈದ್ಯಕೀಯದ ನೆರವು ತೆಗೆದುಕೊಳ್ಳುವುದು ಅಗತ್ಯ.

    ಸರ್ಕಾರವೇ ತಮ್ಮ ಉಚಿತ ವೈದ್ಯಕೀಯ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದಲ್ಲಿ ಅದು ಬೇರೆಯೇ ವಿಚಾರ. ಆದರೆ ಖಾಸಗಿಯಾಗಿ ಪರೀಕ್ಷೆ ಮಾಡಿಸಿಕೊಂಡು ಸಾವಿನ ಭಯದಿಂದ ಅನಗತ್ಯ ಕಾಳಜಿ ತೆಗೆದುಕೊಳ್ಳುವಷ್ಟು ಕೋವಿಡ್ ಮಾರಕವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುತ್ತದೆ. ರೋಗ ಲಕ್ಷಣಗಳಿಲ್ಲದಿದ್ದಲ್ಲಿ ಯಾರೂ ಅನಗತ್ಯ ಆತಂಕಗಳಿಗೆ ಬ ಲಿಯಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಕೋವಿಡ್ ಸೋಂಕು ಬರುವ ಬಹತೇಕರು ತೊಂದರೆಯೇ ಇಲ್ಲದೆ ಪೂರ್ಣ ಗುಣ ಮುಖರಾಗುತ್ತಾರೆ.

     ಆಲ್ಕೋಹಾಲ್ ಕುಡಿಯುವುದರಿಂದ ಗುಣಮುಖರಾಗುವುದಿಲ್ಲ

    ಅಮೆರಿಕಾದ ಅಧ್ಯಕ್ಷ  ಡೊನಾಲ್ದ್ ಟ್ರಂಪ್  ಡಿಸ್ ಇನ್ಫೆಕ್ಟಂಟ್ ಗಳನ್ನು ಚುಚ್ಚಿಕೊಳ್ಳುವುದರಿಂದ ಕೊರೊನಾವನ್ನು ನಿಯಂತ್ರಿಸಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಈ ಬಗ್ಗೆ ಬಹುತೇಕ ಎಚ್ಚರಿಕೆಗಳು ಕೇಳಿಬಂದವು. ಅದರಂತೆಯೇ ಮದ್ಯವನ್ನು ಸೇವಿಸುವುದರಿಂದ ಕೊರೊನಾವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಬದಲು ಅದು ದೇಹದ ರೋಗನಿರೋಧಕ ಶಕ್ತಿಯನ್ನು ಕುಂಟಿತಗೊಳಿಸಬಹುದು.

    ಅದೇ ರೀತಿ ಸಲೈನ್ ದ್ರಾವಣವನ್ನು ಬಳಸಿ ಮೂಗನ್ನು ಸ್ವಚ್ಚಗೊಳಿಸುವುದು, ಅರಿಶಿನ ನೀರನ್ನು ಬಳಸುವುದು, ಉಪ್ಪು ನೀರನ್ನು ಬಳಸಿ ಗಂಟಲು ಮುಕ್ಕಳಿಸುವುದು ಇತ್ಯಾದಿಗಳು ಬೇರೆ ಹಲವು ಸಂದರ್ಭಗಳಲ್ಲಿ ಸಹಾಯಕವಾಗಬಲ್ಲದಾದರೂ ಇವುಗಳಿಂದ  ಕೊರೊನಾವನ್ನು ತಡೆಯಲು ಅಥವಾ ಕೊರೊನಾದಿಂದ ಮುಕ್ತರಾಗುವುದು ಸಾಧ್ಯವಿಲ್ಲ.

    ಥರ್ಮಲ್ ಸ್ಕಾನರ್ ಗಳು ಕೊರೊನಾವನ್ನು ಕಂಡುಹಿಡಿಯುವುದಿಲ್ಲ

    ಇದೀಗ ಎಲ್ಲಿಗೆ ಹೋದರೂ ಉಷ್ಣ ಮಾಪಕವನ್ನು ನಮ್ಮ ಹಣೆಯ ಕಡೆಗೆ ಗುರಿ ಹಿಡಿದು ನಮ್ಮ ದೇಹದ ತಾಪಮಾನವನ್ನು ಅಳೆಯುವುದಕ್ಕೆ ಒಗ್ಗಿಕೊಳ್ಳುತ್ತಿದ್ದೇವೆ. ಪ್ರತಿದಿನ ಕೆಲಸಕ್ಕೆ ಹೋದಾಗ ಬಾಗಿಲ ಬಳಿಯೇ ದೇಹದ ತಾಪಮಾನವನ್ನು ಅಳೆದ ನಂತರ ಕೆಲಸಮಾಡಲು ಅನುಮತಿ ಸಿಗುತ್ತದೆ.

     ಅದರಂತೆ ರೈಲು, ಏರೋಪ್ಲೇನು, ಕೆಲವು ಅಂಗಡಿಗಳು ಕೂಡ ಒಳಬರುವ ಎಲ್ಲರನ್ನೂ ಪರೀಕ್ಷಿಸುತ್ತಿದ್ದಾರೆ. ಆದರೆ ಈ ಥರ್ಮಲ್ ಸ್ಕಾನರ್ ಗಳು ಕರೋನಾ  ಮಾಪಕಗಳಲ್ಲ. ಇದರಿಂದ ಕೊರೊನ ಬಂದಿದೆಯೇ ಇಲ್ಲವೇ ಎಂದು ತಿಳಿಯುವುದಿಲ್ಲ. ದೇಹದ ಉಷ್ಣಾಂಶ ಏರಿದೆಯೇ ಎನ್ನುವ ಒಂದು ಲಕ್ಷಣವನ್ನು ಬಿಟ್ಟರೆ ಮಿಕ್ಕಿದ್ದೇನೂ ಇದರಿಂದ ತಿಳಿಯುವುದಿಲ್ಲ. ಆದರೆ ಜ್ವರ ಎನ್ನುವುದು ಕೊರೊನಾದ ಒಂದು ಲಕ್ಷಣ ಮಾತ್ರ, ಅದಿಲ್ಲದೆಯೂ  ಕೋವಿಡ್ ಸೋಂಕು ಬಂದಿರಬಹುದು. ಅಕಸ್ಮಾತ್ ಜ್ವರ ಇದ್ದರೂ ಅದು ಕೋವಿಡ್ ಅಲ್ಲದೆಯೂ ಇರಬಹುದು.ಆದ್ದರಿಂದ ಈ ಸ್ಕಾನರ್ ಗಳು ಎಚ್ಚರಿಕೆಯನ್ನು ನೀಡಬಲ್ಲವೇ ಹೊರತು ಇವು ಕೊರೊನಾವನ್ನು ಪತ್ತೆ ಹಚ್ಚುವ ಯಂತ್ರಗಳಲ್ಲ.

    ಮೆಣಸಿನ ಕಷಾಯದಿಂದ ಕೊರೊನಾ ದೂರವಾಗುವುದಿಲ್ಲ

    ನೆಗಡಿ ಕೆಮ್ಮಾದಾಗ ಮೆಣಸಿನ ಕಷಾಯವನ್ನು ಕುಡಿಯುವ  ’ಮನೆಯ ಮದ್ದಿನ ’ ಪದ್ಧತಿ ನಮ್ಮಲ್ಲಿದೆ. ಆದರೆ ಕೊರೊನಾ ಸಂಬಂಧವಾಗಿ ಇದು ಕೆಲಸಮಾಡುವುದಿಲ್ಲ. ಕೆಲವರು ತಮ್ಮ ಸೂಪಿಗೆ ಕರಿ ಮೆಣಸಿನ ಪುಡಿಯನ್ನು ಚೆನ್ನಾಗಿ ಸುರವಿಕೊಂಡು ಕೊರೊನಾ ಉಚ್ಚಾಟನೆಯ ಪ್ರಯೋಗಗಳನ್ನೂ ನಡೆಸಿದ್ದಾರೆ. ಆದರೆ ಇದು ಕೊರೊನಾ ವಿಚಾರದಲ್ಲಿ ಉಪಯೋಗಕ್ಕೆ ಬರುವುದಿಲ್ಲ.

    ಅದರಂತೆಯೇ ಬೆಳ್ಳುಳ್ಳಿ ತಿನ್ನುವುದು ಕೂಡ. ಬೆಳ್ಳುಳ್ಳಿಗೆ ಬ್ಯಾಕ್ಟೀರಿಯಾಗಳ ವಿರುದ್ಧ ಕೆಲಸ ಮಾಡುವ ಕೆಲವು ಆರೋಗ್ಯಕರ ಗುಣಗಳಿವೆ. ಆದರೆ, ಇದು ಕೊರೊನ ಅಥವಾ ಇನ್ನಾವುದೇ ವೈರಸ್ಸಿನ ವಿರುದ್ಧ ಸೆಣೆಸಲಾರದು.

    ಅದರ ಬದಲಿಗೆ ಇತರರಿಂದ ಒಂದು ಮೀಟರಿನ ದೂರದ ಅಳತೆಯ ಅಂತರವನ್ನು ಕಾಪಾಡಿಕೊಂಡರೆ ಅದು ಕೊರೊನಾ ಬರದಂತೆ ತಡೆಯುವುದರಲ್ಲಿ ಹೆಚ್ಚಿನ  ಉಪಯೋಗಕ್ಕೆ ಬರಬಲ್ಲದು.ನಿಯಮಿತ ವ್ಯಾಯಾಮ, ಸಮತೋಲಿತ ಪೌಷ್ಟಿಕ ಆಹಾರ, ಸಾಕಷ್ಟು ನೀರಿನ ಸೇವನೆ ಇತ್ಯಾದಿ ಸರಳ ನಿಯಮಗಳ ಪಾಲನೆ ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ.

    ಸೊಳ್ಳೆ ಕಡಿತ ಮತ್ತು ನೊಣಗಳಿಂದ ಕೋವಿಡ್ ಹರಡಬಲ್ಲದೇ?

    ಇಡೀ ಪ್ರಪಂಚದಲ್ಲಿ ಇದುವರೆಗೆ  ಸೊಳ್ಳೆ ಕಡಿತ ಮತ್ತು ನೊಣಗಳಿಂದ ಕೊರೊನಾ ವೈರಸ್ಸು ಹರಡಬಲ್ಲದೇ ಎಂಬುದಕ್ಕೆ ಯಾವ ಪುರಾವೆಯೂ ದೊರೆತಿಲ್ಲ. ಕೊರೊನಾ ಹರಡುವುದು ಬಾಯಿ ಮತ್ತು ಮೂಗಿನ ದ್ರವಗಳಿಂದ, ಅಥವಾ ಅವುಗಳು ಯಾವುದಾದರೂ ವಸ್ತುಗಳ ಮೇಲೆ ಬಿದ್ದಿದ್ದಲ್ಲಿ ಅವನ್ನು ಮುಟ್ಟಿ ನಮ್ಮ ಶರೀರಕ್ಕೆ ವರ್ಗಾಯಿಸುವುದರಿಂದ. ಆದರೆ ಸೊಳ್ಳೆ ಮತ್ತು ನೊಣಗಳಿಂದ ಹಲವು ಇತರೆ ಖಾಯಿಲೆಗಳು ಹರಡಬಲ್ಲವು.ಸಾಧ್ಯವಾದಷ್ಟು ಇವುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ನಿಜ. ಆದರೆ ಸೊಳ್ಳೆ ಕಚ್ಚಿದ್ದರಿಂದ ಕೊರೊನಾ ಬಂದಿರಬಹುದೇ ಎಂಬ ಆತಂಕ ಅನಾವಶ್ಯಕ.

    5G ನೆಟ್ ವರ್ಕ್ ನಿಂದ ಕೋವಿಡ್ ಹರಡಬಲ್ಲದೇ?

    ಇದಂತೂ  ಕಥೆಗಳನ್ನು ಹುಟ್ಟು ಹಾಕಿ ಬಿಟ್ಟು ಮಜಾ ತೆಗೆದುಕೊಳ್ಳುವ ಯಾರೋ ಕಿತಾಪತಿ ಜನರು ಹುಟ್ಟುಹಾಕಿದ ಕಪೋಲ ಕಲ್ಪಿತ ಮಿಥ್ಯೆಯಿದು.

    ಇನ್ನೂ ನೇರವಾಗಿ ಹೇಳಬೇಕೆಂದರೆ ಕೋವಿಡ್ ಹರಡಿರುವ 210 ದೇಶಗಳಲ್ಲಿ  ಎಷ್ಟೋ ದೇಶಗಳಲ್ಲಿ 5G ನೆಟ್ ವರ್ಕ ಇಲ್ಲ ಎನ್ನುವುದನ್ನು ಮರೆಯಬೇಡಿ.

    ಸೂರ್ಯನ ಬಿಸಿಲು ಮತ್ತು ಹಿಮ ಎರಡೂ ವೈರಸ್ಸನ್ನು ಕೊಲ್ಲಲಾರವು.

    ಮೊದ ಮೊದಲು ಕೊರೊನಾ ಹರಡಿದ್ದು ಚಳಿಯ ದೇಶಗಳಲ್ಲಿ. ನಮ್ಮ ದೇಶದಲ್ಲಿ ಇದು ಕಡಿಮೆಯಿದ್ದಾಗ ಉಷ್ಣಾಂಶ 25 ಡಿಗ್ರಿಗಿಂತ ಜಾಸ್ತಿಯಿರುವ ಕಡೆ ಕೊರೊನಾ ಬರುವುದಿಲ್ಲ ಎಂಬ ಸುಳ್ಳು ವದಂತಿಗಳು ಹರಡಿದವು. ಆದರೆ ಇದು ನಿಜವಲ್ಲ. ಯಾವುದೇ ತಾಪಮಾನದಲ್ಲೂ ಕೊರೊನಾ ಹರಡಬಲ್ಲದು. ಇದೀಗ ಈ ವಿಶ್ವವ್ಯಾಪೀ ಪಿಡುಗು ಪ್ರಪಂಚದ ಬಹುತೇಕ ದೇಶಗಳಿಗೆ ಹರಡಿರುವುದೇ ಇದಕ್ಕೆ ಸಾಕ್ಷಿ.ಆದ್ದರಿಂದ ಬಿಸಿಲಿನಲ್ಲಿ ನಮ್ಮನ್ನು ನಾವು ಬಾಡಿಸಿಕೊಳ್ಳುವ ಅಗತ್ಯವಿಲ್ಲ.

    ಇನ್ನು ಮುಂಬರುವ ಚಳಿಗಾಲದಲ್ಲಿ ಉಸಿರಾಟದ ತೊಂದರೆ ಮಾಡುವ ಎಲ್ಲ ವೈರಸ್ಸುಗಳ ಉಪಟಳ ಹೆಚ್ಚಾಗುವ ಆತಂಕಗಳೂ ಇವೆ. ಆದರೆ ಹಿಮಸುರಿತ ಕೊರೊನಾವನ್ನು ಕೊಲ್ಲುವುದಿಲ್ಲ.

    ಅದರಂತೆಯೇ ಉಸಿರನ್ನು 10 ಸೆಕೆಂಡುಗಳ ಕಾಲ  ಹಿಡಿಯಬಲ್ಲಿರಾದರೆ ನಿಮಗೆ ಕೋವಿಡ್ ಇಲ್ಲ ಎನ್ನುವ ಕಲ್ಪನೆ ಕೂಡ ಶುದ್ಧ ಸುಳ್ಳು. ಕೋವಿಡ್ ಇರುವವರು ವ್ಯಾಯಾಮ ಮಾಡುವುದು ಕೂಡ ಒಳಿತಲ್ಲ.ಸ್ಟೀಮ್ ಯಂತ್ರದ ಮೂಲಕ ದಿನವೂ ನಮ್ಮ ಮೂಗು ಗಂಟಲನ್ನು ಶುದ್ಧಗೊಳಿಸಿಕೊಂಡರೆ ತೊಂದರೆಯಿಲ್ಲವಾದರೂ ಅದು ಕೊರೋನಾ ಬಾರದೆ ಇರಲು ಮದ್ದಲ್ಲ .ಇದೇ ರೀತಿ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಒಳಿತಾದರೂ ಅದು ಕೋವಿಡ್ ವೈರಸ್ಸನ್ನು ಕೊಲ್ಲಲಾರದು.

    ಅಂತೆಯೇ ಸೋಪಿನಿಂದ ಕೈ ತೊಳೆದ ನಂತರ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಿದ ನಂತರ ಹ್ಯಾಂಡ್  ಡ್ರೈ ಯರ್ ನಿಂದ ಕೈಗಳನ್ನು ಹೆಚ್ಚು ಕಾಲ ಒಣಗಿಸಿಕೊಳ್ಳುವ ಅಗತ್ಯ ಇಲ್ಲ. 20 ಸೆಕೆಂಡಿಗೂ ಹೆಚ್ಚು ಕಾಲ ಸೋಪಿನಲ್ಲಿ ಕೈ ತೊಳೆದು ನಂತರ ಅಗತ್ಯಕ್ಕೆ ತಕ್ಕಂತೆ ಕೈ ಒಣಗಿಸಿಕೊಂಡರೆ ಸಾಕು.

    ಇದು ವೃದ್ಧರಿಗೆ ಮಾತ್ರ ಬರುವ ಖಾಯಿಲೆಯೇ?

    ಕೊರೊನಾ ಸೋಂಕು ಯಾರಿಗೆ ಬೇಕಾದರೂ ಬರಬಹುದು. ಪ್ರಾಣಿಗಳಿಗೂ ಸೋಂಕು ಹರಡಬಹುದು. ಆದರೆ ಸಾವಿನ ಸಂಖ್ಯೆ ಇತರೆ ವಯಸ್ಸಾದವರಲ್ಲಿ, ಇತರೆ ಕಾಯಿಲೆ ಇರುವವರಲ್ಲಿ ಮತ್ತು ಧಡೂತಿ ದೇಹದವರಲ್ಲಿ ಹೆಚ್ಚು ಕಂಡುಬಂದಿದೆ.

    ಹೊರಗಡೆಯಿಂದ ತರುವ ಕಾಯಿ-ಪಲ್ಲೆಗಳನ್ನು ಸೋಪು ಹಾಕಿ ತೊಳೆಯಬೇಕೆ?

    ಕೊರೊನಾ ವೈರಸ್ಸು ಗಾಳಿಯಲ್ಲಿ ಮೂರುಗಂಟೆಯವರೆಗೆ, ಲೋಹದ ಮೇಲೆ 5 ಗಂಟೆಯವರೆಗೆ ಕಾರ್ಡ್ ಬೋರ್ಡ್ ಗಳ ಮೇಲೆ 24 ಗಂಟೆ, ಪ್ಲಾಸ್ಟಿಕ್ ನ ಮೇಲೆ 72 ಗಂಟೆ ಬದುಕುಳಿಯಬಹುದೆಂಬ ಹೇಳಿಕೆಗಳು ಹೊರಬಂದವು.ಬ್ಯಾಂಕು ನೋಟುಗಳು, ಪಿನ್ ಪ್ಯಾಡ್ ಗಳನ್ನು ಉಪಯೋಗಿಸುವ ಬಗ್ಗೆ ಎಚ್ಚರಿಕೆಗಳೂ  ಕೇಳಿಬಂದವು.ಅದರ ಜೊತೆಯಲ್ಲೇ ಆಹಾರದ ಬಗ್ಗೆಯೂ ಆತಂಕ ಶುರುವಾಯಿತು.

    ನಮ್ಮ ಚರ್ಮ ಅತ್ಯಂತ ಸಣ್ಣ ರಂಧ್ರಗಳನ್ನು ಒಳಗೊಂಡಿದೆ. ಆದರೆ ತರಕಾರಿಗಳ ಮೇಲ್ಮೈ  ಅದಕ್ಕಿಂತ ಹೆಚ್ಚು ಸಣ್ಣ ತೂತಗಳಿಂದ ಕೂಡಿದೆ. ಸೋಪಿನಂತ ವಸ್ತು ಚರ್ಮಕ್ಕಿಂತ ಆಳವಾಗಿ ತರಕಾರಿಗಳನ್ನು ಹೊಗಬಲ್ಲದು.ತರಕಾರಿಗಳ ಮೂಲಕ ಇಂತಹ ಸೋಪನ್ನು ಹೆಚ್ಚು ತಿಂದರೆ ನಮ್ಮ ಆರೋಗ್ಯಕ್ಕೆ ಹಾನಿಯಾಗಬಲ್ಲದು. ಉದಾ. ವಾಂತಿ, ಭೇದಿ, ಹೊಟ್ಟೆ ನೋವು ಇತ್ಯಾದಿ.

    ಮತ್ತೆ ಕೆಲವರು ಕಾಯಿ ಪಲ್ಲೆಗಳನ್ನು ವಿನೆಗರ್, ಉಪ್ಪು, ಬೇಕಿಂಗ್ ಸೋಡ, ಪೊಟಾಸ್ಸಿಯಂ ಪರಮಾಂಗನೇಟ್  ಇತ್ಯಾದಿಗಳಿಂದ ಸ್ವಚ್ಚಗೊಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಇವ್ಯಾವ ವಸ್ತುಗಳನ್ನೂ ತರಕಾರಿಗಳನ್ನು ಸ್ವಚ್ಛಗೊಳಿಸಲು ಉಪಯೋಗಿಸಿ ಎಂಬ ಸಲಹೆಗಳಿಲ್ಲ.

    ಪ್ಯಾಕೆಟ್ ಗಳಲ್ಲಿ ಬರುವ ಪದಾರ್ಥಗಳನ್ನು ಈಗಾಗಲೇ ಅಂಗಡಿಯವರು ತೊಳೆದಿರುತ್ತಾರೆ. ಮೇಲಿನ ಪ್ಲಾಸ್ಟಿಕ್ ನ್ನು ಕಿತ್ತಸೆದು ಒಳಗಿನದನ್ನು  ನೀರಿನಿಂದ ತೊಳೆದರೆ ಸಾಕು. ಇನ್ನು ರಾಶಿಯಿಂದ ಆಯ್ದ ತರಕಾರಿಗಳನ್ನು ಕೊರೊನಾ ಇರಲಿ, ಬಿಡಲಿ, ನೀರಿನಿಂದ ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಆದರೆ ಸೋಪು ಹಾಕಿ ಉಜ್ಜುವ ಅಗತ್ಯವಿಲ್ಲ.ಬೇಯಿಸಿದ ಆಹಾರದಲ್ಲಿ ಬ್ಯಾಕ್ಟೀರಿಯಾ ಮತ್ತು ಸಾರ್ಸ್ ನಂತಹ ವೈರಸ್ಸುಗಳು ಬದುಕುಳಿಯುವುದಿಲ್ಲ. 60 ಡಿಗ್ರಿ ತಾಪಮಾನದಲ್ಲಿ 30 ನಿಮಿಷ ಬೆಂದ ಅಡುಗೆಯಲ್ಲಿ ಕೊರೊನಾ ಇರುವುದಿಲ್ಲ.ಹೆಚ್ಚಿನ ತಾಪಮಾನದಲ್ಲಿ ಕಡಿಮೆ ಕಾಲ ಬೆಂದ ಆಹಾರ ಪದಾರ್ಥಗಳಲ್ಲಿಯೂ ಅವು ಇರುವುದಿಲ್ಲ.

    ಅದೃಷ್ಟವೆಂದರೆ The US Food and Drug Administration  ಪ್ರಕಾರ ಇದುವರೆಗೆ ಆಹಾರ ಮತ್ತು ಆಹಾರದ ಪ್ಯಾಕೇಜಿಂಗ್ ಮೂಲಕ ಕೊರೋನಾ ಹರಡಿದ ವರದಿಯಾಗಿಲ್ಲ. ಆದರೆ ಉಪಯೋಗಿಸುವ ಮುನ್ನ ತರಕಾರಿ-ಕಾಯಿ -ಪಲ್ಲೆಗಳನ್ನು ಅಗತ್ಯವಾಗಿ ನೀರಿನಿಂದ ಸ್ವಚ್ಛಗೊಳಿಸಿರಿ.  ತರಕಾರಿಗಳ ಬಳಕೆಯ ನಂತರ ನಿಮ್ಮ ಕೈ ಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ.

     

     

     

     

     

     

     

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    16 COMMENTS

    1. ಡಾಕ್ಟರ್ ಮೇಡಂ, ತಾವು ಹೇಳುವುದು ವೈಜ್ಞಾನಿಕವಾಗಿ ಸರಿ ಇರಬಹುದು. ಆದರೆ, ಏನು ಮಾಡಬೇಕು ಎಂಬುದನ್ನು ಖಚಿತವಾಗಿ ಅಲ್ಲದಿದ್ದರೂ,
      ಭರವಸೆದಾಯಕವಾಗಿ ( ಸುಳ್ಳನ್ನಲ್ಲ )ಹೇಳಲು ಸಾಧ್ಯವಾಗಬೇಕಲ್ಲವೇ? ಈ ಭರವಸೆಯನ್ನು ತುಂಬುವ ಕೆಲಸ ತಾವೇ ಮಾಡಬೇಕು, ಏಕೆಂದರೆ ತಾವು ವೈದ್ಯರು. ದೇಹದೊಂದಿಗೆ ಮನಸ್ಸು, ಭಾವನೆ, ಭಾವಕೋಶ ಇತ್ಯಾದಿ ಸೂಕ್ಷ್ಮಗಳನ್ನು ಹೊಂದಿರುವ ಮನುಷ್ಯರಿಗೆ ತಮ್ಮಿಂದ ಬರೀ ಔಷಧೀಯ ಸತ್ಯಾಸತ್ಯತೆ ಮಾಹಿತಿ ಸಾಕಾಗುವುದಿಲ್ಲ, ಅಲ್ಲವೇ ಮೇಡಂ.
      ಗೌರವ ಅಭಿಮಾನ ಪೂರ್ವಕ ವಂದನೆಗಳೊಂದಿಗೆ
      ಶಿಹೊಂ

      • ಖಂಡಿತ. ಮನಸ್ಸಿಗೆ ಭರವಸೆಗಳು. ಹಿತವೆನಿಸುತ್ತವೆ. ಆದರೆ ಭರವಸೆ, ಸತ್ಯ ಮತ್ತು ಮಿಥ್ಯೆಗಳ ನಡುವಿನ ವ್ಯತ್ಯಾಸ ಗೊತ್ತಿದ್ದರೆ ಅನಾವಶ್ಯಕ ಶ್ರಮ, ಆತಂಕಗಳನ್ನು ದೂರವಿಡಬಹುದು.
        ಹಾಗೂ ಕೆಲವನ್ನು ಪಾಲಿಸುವ ಇಷ್ಟವಿದ್ದರೆ ಪಾಲಿಸಬಹುದು. ಜೊತೆಗೆ ಎಲ್ಲರೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ಮರೆಯಬಾರದು ಅಷ್ಟೇ.

      • Plenty of water, nutritious food, regular exercise should be fine. However experts say vitamin D is good to boost immunity.
        If some one is short of vitamins they can take supllements as per their Doctor’s advice irrespective of Covid or not.

    2. ಸಾಮಾನ್ಯ ಜನರಿಗೆ ವಾಸ್ತವ ತಿಳಿಸುವ ಒಂದು ಉಪಯುಕ್ತ ಲೇಖನ.

    3. ವಿವರವಾದ ಲೇಖನ. ಕಷಾಯ ಕುಡಿದರೆ ಕರೋನಾ ಬರೋದಿಲ್ಲ ಅನ್ನೋದು ನಿಜವಲ್ಲ. ಕಾರಣ ಉತ್ತರ ಕನ್ನಡ ದ ಕೆಲವು ಸಮುದಾಯದಲ್ಲಿ ಪ್ರತೀ ನಿತ್ಯ ನೀರಿಗಿಂತ ಜಾಸ್ತಿ ಕಷಾಯನೇ ಕುಡಿಯೋದು.‌ಆದರೂ ಕರೋನಾ ಅಲ್ಲೂ ಹಾನಿ ಮಾಡಿದೆ

    4. ಚೆನ್ನಾಗಿದೆ. ತಪ್ಪು ತಿಳಿವಳಿಕೆ ದೂರ ಮಾಡುತ್ತದೆ.

    5. ವಾಟ್ಯಾಪ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಹರಿಯುವ ಕೊರೊನಾ ಮಾರಿಯ ಕುರಿತ ಸುಳ್ಳು ಸುದ್ದಿಗಳಿಗೆ ಕೊನೆಯೇ ಇಲ್ಲ. ನಿಮ್ಮ ಲೇಖನ ಜನಸಾಮಾನ್ಯರಿಗೆ ತುಂಬ ಉಪಯುಕ್ತ. ಕೊರೊನಾಗೆ ಹೆದರಿಕೊಂಡ ಮನುಷ್ಯ ತನ್ನ ಸಮಾಧಾನಕ್ಕೆ ತನ್ನ ನಂಬಿಕೆಗಳಿಗೆ ಅನುಗುಣವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಲೇ ಇದ್ದಾನೆ. ಇದಕ್ಕೆ ವಿಜ್ಞಾನವೂ ಹೊರತಾಗಿಲ್ಲ ಎನ್ನುವುದಕ್ಕೆ ಪ್ರತಿಷ್ಠಿತ ಜರ್ನಲ್ ಗಳೂ ಕೂಡ ಅರೆಬೆಂದ ರಿಸರ್ಚ್ ಪೇಪರುಗಳನ್ನು ಪ್ರಕಟಿಸಿ ಮೀಡಿಯಾವನ್ನು ಜನರನ್ನು ಇನ್ನೂ ಗೊಂದಲಕ್ಕೆ ಕೆಡವಿದೆ. ಸಮಯೋಚಿತ ಲೇಖನ

    LEAVE A REPLY

    Please enter your comment!
    Please enter your name here

    Latest article

    error: Content is protected !!