23.5 C
Karnataka
Monday, May 20, 2024

    ಕೊರೊನಾದ ಎರಡನೇ ಅಲೆ- ಹಾಗೆಂದರೇನು

    Must read

    ಸಮುದ್ರತಟದಲ್ಲಿ ಒಂದು ಅಲೆ ಉಬ್ಬಿ ಬಂದು ಅಪ್ಪಳಿಸಿ ನೆಲಸಮವಾಗುತ್ತದೆ. ಅದರ ಹಿಂದೆಯೇ ಮತ್ತೊಂದು ಅಲೆ ಎತ್ತರಕ್ಕೇರಿ  ಉಬ್ಬಿಬ್ಬಿ ಬಂದು ದಡವನ್ನು ಅಪ್ಪಳಿಸಿ ನೆಲಸಮವಾಗುತ್ತದೆ. ಇದುವರೆಗೆ ಕಾಡಿರುವ ಕೊರೊನ ವೈರಸ್ಸು ಹಲವು ದೇಶಗಳಲ್ಲಿ ಮೊದಲನೆಯ ಅಲೆಯ ಹಂತದಲ್ಲಿದೆ. ಅಂದರೆ ಅದರ ಅಬ್ಬರವಿನ್ನೂ ಮುಗಿದಿಲ್ಲ. ಪ್ರತಿನಿತ್ಯ 50-60 ಸಾವಿರ ಜನರಲ್ಲಿ ಸೋಂಕು ಹರಡುತ್ತಿರುವ ಭಾರತದಲ್ಲಿ ಮೊದಲ ಅಲೆಯಿನ್ನೂ ಎತ್ತರದಲ್ಲೇ ಇದೆ ಮತ್ತು ಕೆಳಮುಖವಾಗಿಲ್ಲ  ಅಥವಾ ನೆಲಸಮವಾಗಿಲ್ಲ.

    ಮೊದಲ ಅಲೆ ಮುಗಿದಿದೆ ಎನ್ನುವ ದೇಶಗಳಲ್ಲಿ ಹೊಸದಾಗಿ ಪತ್ತೆಯಾಗುವ ಸೋಂಕಿತರ ಸಂಖ್ಯೆ ಸೊನ್ನೆಯಾಗಬೇಕು ಅಥವಾ ಒಂದಕಿಗೆ ಇಳಿಯಬೇಕು. ಸಾಯುವವರು ಕೂಡ ಕಡಿಮೆಯಾಗಬೇಕು.ಇದು ಒಂದು ನಿಗದಿತ ಸಮಯದವರೆಗೆ ಬದಲಾಗದಂತಿರಬೇಕು. ಆ ನಂತರ ಮತ್ತೆ ಸೋಂಕುಗಳು ಹೊಸ ಸಂಪರ್ಕದೊಂದಿಗೆ ಶುರುವಾದಲ್ಲಿ ಅದನ್ನು ಎರಡನೆಯ ಅಲೆಯೆನ್ನುತ್ತೇವೆ.

    ಮೊದಲನೆಯ ಅಲೆ ನೆಲಸಮವಾಗುವತ್ತ ಸಾಗಿರುವ ಹಲವು ದೇಶಗಳಲ್ಲಿ ಪೂರ್ಣ ಪ್ರಮಾಣದ ಸಾವುಗಳಿನ್ನೂ ನಿಂತಿಲ್ಲ. ಆದರೆ ಬಹುತೇಕ ಕಡಿಮೆಯಾಗಿವೆ.ಆದರೆ ಈ ದೇಶಗಳಲ್ಲಿ ಇದೀಗ ಎರಡನೆಯ ಅಲೆ ಅಲ್ಲಲ್ಲಿ ಉಬ್ಬಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಿಂದೆಯೇ ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ.ಈ ಕಾರಣ  ಪ್ರತಿಯೊಂದು ದೇಶದಲ್ಲಿ ಎಚ್ಚರಿಕೆ, ಸಾಮಾಜಿಕ ಅಂತರ, ಮಾಸ್ಕಗಳ  ಬಳಕೆ ಎಲ್ಲವೂ ಮುಂದುವರೆಯುತ್ತಿವೆ.

    ಆದರೆ ’ ಅಲೆ  ’ ಅಥವಾ  ’ವೇವ್ ’ ಎನ್ನುವ ಪದ ವೈಜ್ಞಾನಿಕವಲ್ಲ. ಏರಿಳಿತವನ್ನು ಸೂಚಿಸುವ ಜನ ಸಾಮಾನ್ಯರ ಬಳಕೆಗಾಗಿ ಇರುವ ಪದ. ಎರಡನೆಯ ಅಲೆಯ ಸೋಂಕುಗಳು ಮೊದಲ ಅಲೆಯ ಜನರಿಂದಲೇ ಬಂದಿರಬಹುದು.  ಅದನ್ನು ತಿಳಿಯುವುದು ಕಷ್ಟ ಸಾಧ್ಯ. ಒಟ್ಟಿನಲ್ಲಿ ಕೊರೊನಾ ಸೋಂಕಿನ ಕೊಳದಲ್ಲಿ ನೀರಿರುವರೆಗೆ ಅಲೆಗಳು ಮೂಡುತ್ತಲೇ ಇರಬಹುದು ಎನ್ನುವ ಗ್ರಹಿಕೆಯನ್ನು ನೀಡುವ ಪದ.

    ಉದಾಹರಣೆಗೆ ಜೂನ್  16 ಕ್ಕೆ ನ್ಯೂಝಿಲ್ಯಾಂಡಿನಲ್ಲಿ ಸೋಂಕಿತರ ಸಂಖ್ಯೆ ಸೊನ್ನೆಯನ್ನು ಮುಟ್ಟಿತು. 24 ಗಂಟೆಗಳಲ್ಲಿ ಯಾವೊಂದು ಹೊಸ ಸೋಂಕು ಪತ್ತೆಯಾಗಲಿಲ್ಲ. ಆದರೆ ಹೊರಗಿನಿಂದ ಇಬ್ಬರು ಸೋಂಕಿತರು ಆಕ್ಲ್ಯಾಂಡಿನಲ್ಲಿ ಬಂದಿಳಿದರು. ಜೂನ್ 18 ರಿಂದ ಇವರನ್ನು ಪೂರ್ತಿ ಕ್ವಾರಂಟೈನ್ ನಲ್ಲಿಟ್ಟು ವೈರಸ್ಸನ್ನು ನಿಯಂತ್ರಿಸಲಾಯಿತು.

    ಆದರೆ ಇದೇ ತಿಂಗಳ 11 ರಂದು ಮತ್ತೂ ನಾಲ್ವರು ಸೋಂಕಿತರು ಪತ್ತೆಯಾಗಿದ್ದಾರೆ.  ಅಲ್ಲಿನ ಪ್ರಧಾನಿ ಜಸಿಂದಾ ಆರ್ಡೆಮ್ ಆಕ್ಲ್ಯಾಂಡಿನಲ್ಲಿ ಮತ್ತೆ ಮೂರನೇ ಶ್ರೇಣಿಯ ಎಚ್ಚರಿಕಾ ಕ್ರಮಗಳನ್ನು ಮತ್ತು  ನಿರ್ಬಂಧಗಳನ್ನು ಜಾರಿಗೊಳಿಸಬೇಕಾಯಿತು. ಏಕೆಂದರೆ ಇದಕ್ಕಿನ್ನ ಹೆಚ್ಚು ಸೋಂಕಿತರು ಸಮಾಜದ ಸಮುದಾಯಗಳಲ್ಲಿ ಇರಬಹುದು ಎನ್ನುವ ವಿಚಾರ ಅವರದು. ಈ ನಾಲ್ವರು ಒಂದೇ ಸಂಸಾರದ ಜನ. ಆದರೆ ನಾಲ್ವರೂ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಕೆಲಸಮಾಡುತ್ತಿದ್ದ ಕಾರಣ ಇಡೀ ನಗರದ  ಮೇಲೆ ಜಾಗರೂಕತಾ ನಿರ್ಬಂಧಗಳನ್ನು ಹೇರಲಾಯಿತು.

    ಆ ವೇಳೆಗೆ ಆಸ್ಟ್ರೇಲಿಯಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಒಂದು ತಿಂಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಇದೇ ರೀತಿಯ ಘಟನೆ ನಡೆದಾಗ ಆ ದೇಶ ಬರೀ ಸಂಭಂದಪಟ್ಟ  ಉಪನಗರದ ಏರಿಯಾಗಳನ್ನು ಮಾತ್ರ ಮುಚ್ಚಿತ್ತು. ಆದರೆ ಅದರಿಂದ ಪ್ರಯೋಜನವಾಗಿರಲಿಲ್ಲ. ಇದೇ ಕಾರಣಕ್ಕೆ ನ್ಯೂಜಿಲ್ಯಾಂಡ್ ಬೇರೆಯ ಪ್ರದೇಶಗಳಿಗೆ ವಿನಾಯತಿಯನ್ನು ತೋರಿಸದೆ ಇಡೀ ನಗರದ ವಹಿವಾಟುಗಳನ್ನು ಮುಚ್ಚಿತು.

    ಈ ಮೇಲಿನ ಘಟನೆ ಒತ್ತಿ ಹೇಳುವುದೆಂದರೆ, ಎರಡನೆಯ ಅಲೆಯನ್ನು ಹತ್ತಿಕ್ಕಲು ಕೂಡ ಅತ್ಯಂತ ತ್ವರಿತ ಮತ್ತು ಧೃಡ ನಿರ್ಧಾರಗಳನ್ನು ದೇಶದ ನಾಯಕರು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದಲ್ಲಿ  ವೈರಸ್ಸಿನ ನಿಯಂತ್ರಣ ಸಾಧ್ಯವಾಗುವುದಿಲ್ಲ.

    ಭಾರತದಲ್ಲಿ ಇದೀಗ ಸೋಂಕಿತರಿಗಾಗಿ ಪರೀಕ್ಷೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಆದರೆ, ಬೃಹತ್ ದೇಶವಾದ ಭಾರತದಲ್ಲಿ ಈ ಸೋಂಕಿತರ ಪರೀಕ್ಷೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂಬುದು ಅಂತಾರಾಷ್ಟ್ರೀಯ ಮಟ್ಟದ ಅಭಿಪ್ರಾಯವಾಗಿದೆ. ಇಲ್ಲದಿದ್ದಲ್ಲಿ ದಿನಕ್ಕೊಂದು ಲಕ್ಷ ಸೋಂಕಿತರು ಪತ್ತೆಯಾಗುವುದೇನೂ ಕಷ್ಟವಿರಲಿಲ್ಲ ಎನ್ನುವುದು ಇವರ ಅಂಬೋಣ.

    ಭಾರತದಲ್ಲಿ ಈಗಾಗಲೇ ಸರಿಸುಮಾರು ವಹಿವಾಟುಗಳು ಶುರುವಾಗಿರುವ ಕಾರಣ ಸೋಂಕು ಹರಡುವುದನ್ನು ತಪ್ಪಿಸುವುದು ಅತ್ಯಂತ ಕಷ್ಟ.ಈ ಕಾರಣ ಮೊದಲ ಅಲೆಯೇ ಇನ್ನೂ ಬಹುಕಾಲ ಇರುವ ಸಾಧ್ಯತೆಗಳಿವೆ.

    ನಾಳಿನಿಂದ ಶುರುವಾಗಲಿರುವ ಗೌರಿ-ಗಣೇಶನ ಹಬ್ಬಕ್ಕೆ ಈ ವರ್ಷ ಸಾರ್ವಜನಿಕ ಸಮಾರಂಭಗಳನ್ನು ಮಾಡಬೇಡಿ, ಹಬ್ಬವನ್ನು ಮನೆಯ ಮಟ್ಟಕ್ಕೆ ಸೀಮಿತಗೊಳಿಸಿ ಎಂದು ಸರ್ಕಾರ ವಿನಂತಿಸಿಕೊಂಡರೂ , ಸಾರ್ವಜನಿಕವಾಗಿ ಮಾಡೇ ತೀರುತ್ತೇವೆಂದು ಹೇಳುವವರು ಇದ್ದಾರೆ. ಸರಕಾರ ಈಗ ಸಾರ್ವಜನಿಕ ಗಣೇಶೋತ್ಸವಗಳಿಗೆ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಸರಕಾರ ಎಷ್ಟೇ ಹೇಳಿದರು ಮಾಸ್ಕ್ ಧರಿಸದೆ, ಅಂತರ ಪಾಲಿಸದೆ ಓಡಾಡುವ ಅನೇಕರನ್ನು ಕಾಣುತ್ತಲೇ ಇದ್ದೇವೆ. ಮಾಸ್ಕ್ ಅನ್ನು ಸರಿಯಾಗಿ ಧರಿಸದೆ ಅದನ್ನು ಕತ್ತಿಗೆ ಸರದಂತೆ ಧರಿಸುವವರು ಸಾಮಾನ್ಯ ವಾಗಿದ್ದಾರೆ. ಹೀಗಾಗಿ ಮೊದಲ ಅಲೆಯೇ ಇನ್ನೂ ಸೊಕ್ಕಿ ಮೆರೆಯುತ್ತಿದೆ. ಹೀಗಿರುವಾಗ ಎರಡನೆಯ ಅಲೆಯ ಬಗ್ಗೆ ಗಂಭೀರವಾದ ವಿಚಾರಮಾಡುವ ಕಾಲವಿನ್ನೂ ಭಾರತಕ್ಕೆ ಬಂದಿಲ್ಲ.

    ಆದರೆ, ಮತ್ತೊಂದು ಬಗೆಯಲ್ಲಿ ಎರಡನೇ ಅಲೆ ಹರಡುವ ಸಾಧ್ಯತೆಗಳಿವೆ. ಕೋವಿಡ್ -19 ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಹೊಸ ಅವತಾರದಲ್ಲಿ ಮರಳಿ ಮತ್ತೆ ಅವಾಂತರ ಮಾಡುವ ಸಾಧ್ಯತೆಗಳಿವೆ. ಇದನ್ನೂ ಎರಡನೆಯ ಅಲೆ ಎನ್ನಬಹುದು ಈ ಎರಡನೆಯ ಭಿನ್ನ ಅಲೆಯ ದರ್ಶನ ಮತ್ತಷ್ಟು ಕಷ್ಟಗಳನ್ನು ತರಬಹುದಾದ ಸಾಧ್ಯತೆಗಳನ್ನು ಪರಿಣಿತರು ಗಂಭೀರವಾಗಿ ತೆಗೆದುಕೊಂಡು ಅದಕ್ಕಾಗಿ ತಯಾರಿಯನ್ನು ಶುರುಮಾಡಿದ್ದಾರೆ.

    ಮುಂದಿನ ತಿಂಗಳುಗಳಲ್ಲಿ ಚಳಿಗಾಲ ಆರಂಭವಾದಾಗ ’ ವಿಂಟರ್ ಫ್ಲೂ”  ಎನ್ನುವ ಮತ್ತೊಂದು ಬಗೆಯ ಜ್ವರ ಕೆಮ್ಮು ದಮ್ಮಿನ ಸೋಂಕು ಶುರುವಾಗಲಿದೆ. ಇದು ಚಳಿ ದೇಶಗಳಲ್ಲಿ ಪ್ರತಿವರ್ಷವೂ ನಡೆಯುವ ವಿದ್ಯಮಾನ.ಇಂತಹ ದೇಶಗಳಲ್ಲಿ  ಕೋವಿಡ್-19 ಈ ಹಳೆಯ ವೈರಸ್ಸಿನ ಜೊತೆ ಸೇರಿ ಹೊಸದೊಂದು ಅವತಾರ ತಾಳಿ ಕಾಡುವ ಸಾಧ್ಯತೆಗಳ ಬಗ್ಗೆ ಎಲ್ಲರೂ ಆತಂಕದಲ್ಲಿರುವುದು ಅತ್ಯಂತ ನಿಜ. ಆಗ ಹೊಸದೊಂದು ವೈರಸ್ಸಿನ ತಳಿಯೇ ಸೃಷ್ಟಿಯಾಗುವ ಸಾದ್ಯತೆಗಳ ಬಗ್ಗೆ ಎಲ್ಲರಗೂ ಅಧೈರ್ಯವಿದೆ. ಹಾಗೆ ಆದಲ್ಲಿ ಅದರ ಅಲೆ ಮತ್ತೆ ಪ್ರಪಂಚವನ್ನು ತನ್ನ ಸೆಳೆತಕ್ಕೆ ತೆಗೆದುಕೊಳ್ಳಬಹುದು.

    ಚೈನಾದಲ್ಲಿ ಮೊದಲು ಶುರುವಾಗಿ, ಇಡೀ ಪ್ರಪಂಚಕ್ಕೆ ಹರಡಿದಂತೆ, ಪ್ರಪಂಚದ ಯಾವುದೇ ದೇಶದಲ್ಲಿ ಈ ವೈರಸ್ಸು ಬೇರೊಂದು ಸ್ವರೂಪಕ್ಕೆ ರೂಪಾಂತರ ಹೊಂದಿದರೂ ಅದು ಮತ್ತೆ ಪ್ರಪಂಚದಲ್ಲೆಲ್ಲ ಹರಡುವ ಸಾಧ್ಯತೆಗಳಿವೆ. ಹಾಗಾದಲ್ಲಿ ಪ್ರಪಂಚದ ವಹಿವಾಟುಗಳಿಗೆ ಮತ್ತೊಮ್ಮೆ ಕೊಖ್ ಬೀಳಲಿದೆ.

    ಎರಡನೆಯ ಅಲೆಯ ಸ್ವರೂಪ ಹೇಗಿರಬಹುದು?

    ಈ ಬಗ್ಗೆ ಪ್ರಪಂಚಕ್ಕಿನ್ನೂ ಹೆಚ್ಚಿನ ಅರಿವಿಲ್ಲ. ಇದರ ಅಗಾಧತೆ ಮೊದಲಿನಷ್ಟೇ ಗಂಭೀರವೇ?- ಎನ್ನುವ ಬಗ್ಗೆ ತಿಳಿದವರಿಗೂ ಕರಾರುವಕ್ಕಾಗಿ ಹೇಳಲು ಸಾಧ್ಯವಾಗಿಲ್ಲ.

    ಆದರೆ, ಮೊದಲ ಅಲೆಯಿಂದಾಗಿ ತೆರೆದುಕೊಂಡಿರುವ  ಆರೋಗ್ಯ ಕೇಂದ್ರಗಳು, ತಪಾಸಣಾ ಕೇಂದ್ರಗಳು, ಚಿಕಿತ್ಸಾ ಆಸ್ಪತ್ರೆಗಳು, ಅವಲಂಬಿತ ಸಹಾಯಕ ಘಟಕಗಳನ್ನು ತತ್ ಕ್ಷಣ ಪುನರುಜ್ಜೀವನಗೊಳಿಸಲು ಸಾಧ್ಯವಿದೆ. ಈಗಾಗಲೇ ಖರೀದಿಸಿರುವ ವೆಂಟಿಲೇಟರ್ ಗಳು, ತರಬೇತುಗೊಳಿಸಿರುವ ಸಿಬ್ಬಂದಿ ಇವರ ಬಳಕೆಯನ್ನು ಮತ್ತೆ ಮಾಡಬಹುದಾಗಿದೆ. ಈಗಾಗಲೇ ಜಾರಿಯಿರುವ ಕಾಂಟಾಕ್ಟ್ ಟ್ರೇಸಿಂಗ್, ಬಳಸಿರುವ ಚಿಕಿತ್ಸೆಗಳು, ಮಾಸ್ಕ್, ಸಾಮಾಜಿಕ ಅಂತರಗಳು, ಕ್ವಾರಂಟೈನ್ ಕೇಂದ್ರಗಳು ಇತ್ಯಾದಿ ಅನುಭವಗಳನ್ನು ಬಳಸಿಕೊಂಡು ಸೋಂಕು ಹರಡುವಿಕೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ ಎನ್ನುವ ಆಶಾವಾದಗಳಿವೆ.

    ಆದರೆ ಜೊತೆ ಜೊತೆಯಲ್ಲೆ, ಕೆಲವು ಆತಂಕಗಳಿವೆ.

    ಮೊದಲು ಈ ವಿಶ್ವವ್ಯಾಪಿ ವ್ಯಾಧಿ ಅಪ್ಪಳಿಸಿದಾಗ ಜನರು ಭಯಭೀತಿಯಿಂದ ನಿಯಮಗಳನ್ನು ಪಾಲಿಸಿದರು.ಆದರೆ ಈಗ ಜನರ ಸಹನೆ ಮೀರಿದೆ. ಆರ್ಥಿಕ ಕಷ್ಟ -ನಷ್ಟಗಳನ್ನು ತಡೆದುಕೊಳ್ಳುವ ತಾಳ್ಮೆ ಮುಗಿದಿದೆ. ಸರ್ಕಾರಗಳು ನಲುಗಿವೆ. ವಾಣಿಜ್ಯ ಕುಸಿದಿದೆ. ದೇಶ-ವಿದೇಶಗಳ ಓಡಾಟ, ಪ್ರವಾಸ, ಸಾರಿಗೆ, ವಿಮಾನ ಎಲ್ಲವೂ ತತ್ತರಿಸಿವೆ. ಹೀಗಾಗಿ ಎರಡನೆಯ ಅಲೆಯನ್ನು ತಡೆದುಕೊಳ್ಳುವ ಜನರ ಮತ್ತು ಸಂಘ ಸಂಸ್ಥೆ, ಸರ್ಕಾರಗಳ ಹರವು ಸಂಕುಚಿಸಿವೆ. ಹಾಗಾದಲ್ಲಿ ನಾವು ಇದುವರೆಗೆ ಮಾಡಿಕೊಂಡ ವ್ಯವಸ್ಥೆಗಳು ನಲುಗಿಹೋಗುತ್ತವೆ. ಮೊದಲ ಅಲೆಯನ್ನು ತಡೆಗಟ್ಟಿದಷ್ಟು ಪರಿಣಾಮಕಾರಿಯಾಗಿ ಎರಡನೆಯ ಅಲೆಯನ್ನು ತಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ ಎನ್ನುವ ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ.

    ಅಸಲಿಗೆ ದಿನಕ್ಕೆ ಸಾವಿರಾರು ಸೋಂಕಿತರು ಪತ್ತೆಯಾಗುತ್ತಿರುವಾಗಲೇ ಲಾಕ್ ಡೌನ್ ಅನ್ನು ಸಡಿಲಗೊಳಿಸಬೇಕಾದ ಸ್ಥಿತಿಯನ್ನು ಬಂದು ಮುಟ್ಟಿರುವ ನೂರಾರು ದೇಶಗಳಲ್ಲಿ ಇದೇ ಕಾರಣಕ್ಕೆ ಎರಡನೇ ಅಲೆ ಮೊದಲಿಗಿಂತ ಹೆಚ್ಚು ಅಪಾಯಕಾರಿ ಮತ್ತು ಸಾವು ನೋವುಗಳನ್ನು ತರಬಲ್ಲದು ಎನ್ನುವ ಆತಂಕ ಇದ್ದೇ ಇದೆ.

    ಎರಡನೇ ಅಲೆಯ ಆತಂಕದಲ್ಲಿರುವ ದೇಶಗಳು

    250,000 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕನ್ನು ನೋಡಿರುವ 45 ದೇಶಗಳಿವೆ. ಇವುಗಳಲ್ಲಿ 21 ದೇಶಗಳು ಲಾಕ್ ಡೌನ್ ನ್ನು ಸಡಿಲಿಸಿವೆ. ಇವುಗಳಲ್ಲಿ 10 ದೇಶಗಳು ಎರಡನೇ ಅಲೆಯ ಸೋಂಕನ್ನು ವರದಿಮಾಡಿವೆ. ಈ ಹತ್ತು ದೇಶಗಳು ಕೊರೊನಾ ವೈರಸ್ಸಿನ ನಿಯಂತ್ರಣದಲ್ಲಿ  ಸಡಿಲವಾದ ಆಸಕ್ತಿ ತೋರಿಸಿದ ದೇಶಗಳಾಗಿವೆ. ಆಕ್ಸ್ ಫರ್ಡ್ ನ ಕೊರೊನಾ ವೈರಸ್ ಟ್ರಾಕರ್ ಪ್ರಕಾರ ಅಮೆರಿಕಾ, ಇರಾನ್, ಜೆರ್ಮನಿ, ಸ್ವಿಟ್ಜರ್ ಲ್ಯಾಂಡ್, ಫ್ರಾನ್ಸ್ ಇತ್ಯಾದಿ ದೇಶಗಳು ಈ ಪಟ್ಟಿಯಲ್ಲಿವೆ. ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ, ಇದೀಗ ಮತ್ತೆ ಈ ದೇಶಗಳಲ್ಲಿ ಬಲಗೊಳ್ಳುತ್ತ ಸಂತಾನ ವೃದ್ಧಿಯನ್ನು ನಡೆಸುತ್ತಿವೆ. ಎರಡು ವಾರಗಳ ಹಿಂದೆ ಭಾನುವಾರದಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಲ್ಲಿ ಅತ್ಯಧಿಕ  ಕೊರೊನಾ ವೈರಸ್ಸುಗಳ ಸೋಂಕಿತರನ್ನು ಇತ್ತೀಚೆಗೆ ಕಂಡ ಬಗ್ಗೆ ವರದಿ ಮಾಡಿ ಆತಂಕ ವ್ಯಕ್ತಪಡಿಸಿತು.

    ಪ್ರಪಂಚದಲ್ಲಿ ಅತ್ಯಧಿಕ ಸೋಂಕಿತರನ್ನು ಹೊಂದಿರುವ ಮೊದಲ ಹನ್ನೆರಡು ದೇಶಗಳು ಒಂಭತ್ತು ದೇಶಗಳಿನ್ನೂ ಪ್ರತಿದಿನ ಹೆಚ್ಚಾಗುತ್ತಲೇ ಇರುವ ಮಾದರಿಯ ಸೋಂಕಿತರ ಸಂಖ್ಯೆಯನ್ನು ನೀಡಿದ್ದರೆ ಇನ್ನು ಮೂರು ದೇಶಗಳಲ್ಲಿ ಈ ರೇಖೆ ಕೆಳಮುಖವಾಗಿ ಸಾಗಿವೆ.ಆದರೆ, ಈ ಎಲ್ಲ ದೇಶಗಳು ತಮ್ಮ ಆರ್ಥಿಕತೆಯನ್ನು ಈಗಾಗಲೇ ಸಡಿಲಗೊಳಿಸಿವೆ.

    ಅಂದರೆ ಆಯಾ ದೇಶಗಳ ಲಾಕ್ ಡೌನ್ ನ್ನು ನೂರು ಅಂಕಗಳೊಂದಿಗೆ (Stringency scale) ನಾವು ಅಳೆಯುವುದಾದರೆ ಅದರಲ್ಲಿ 70 ಕ್ಕಿನ್ನ ಕಡಿಮೆ ಅಂಕಗಳಿಸುವ ದೇಶಗಳನ್ನು  ರಿಲ್ಯಾಕ್ಸಡ್  ಅಥವಾ ಸಡಿಲ ನೀತಿಯ ದೇಶಗಳೆಂದು ಕರೆಯಬಹುದು. ಈ ದೇಶಗಳು ಕೊರೊನಾ ವಿರುದ್ಧ ಮಾಡುವ ಪ್ರಚಾರ ಪ್ರಣಾಳಿಕೆಗಳು, ಸೋಂಕನ್ನು ಹತ್ತಿಕ್ಕಲು ತೆಗೆದುಕೊಳ್ಳುವ ಕ್ರಮ ಮತ್ತು  ಲಾಕ್ ಡೌನ್ ಕ್ರಮಗಳನ್ನು ಆಧರಿಸಿ ಈ ಸೂಚ್ಯಂಕದ ಗಣನೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಅಳೆಯುತ್ತದೆ.

    ಉದಾಹರಣೆಗೆ ಕಟ್ಟು ನಿಟ್ಟಾದ ಕ್ರಮಗಳನ್ನು ಕೈ ಬಿಟ್ಟಕೂಡಲೆ ಜರ್ಮನಿಗೆ ದೊರಕಿದ್ದ 73 ಅಂಕಗಳು ಐವತ್ತಕ್ಕಿಳಿದವು. ಹತ್ತು ದಿನದ ಕೆಳಗೆ ಜರ್ಮನಿಯಲ್ಲಿ ಕೊರೊನಾ ಸಂತಾನೋತ್ಪತ್ತಿಯ ವೇಗ  ಮೂರಕ್ಕೇರಿತು. ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಏರತೊಡಗಿತು. ಸೌದಿ ಅರೇಬಿಯ ಮತ್ತು ಇರಾನಿನಲ್ಲೂ ಸಂಖ್ಯೆಗಳು ಏರು ಮುಖದಲ್ಲಿ ಸಾಗಿ ಎರಡನೇ ಅಲೆಯನ್ನು ಖಾತರಿಪಡಿಸಿದವು.ಆದರೆ ವಿಚಿತ್ರವೆಂಬಂತೆ ಇಟಲಿಯಲ್ಲಿ ಕ್ರಮಗಳನ್ನು ಸಡಿಲಗೊಳಿಸಿದರೂ ಸೋಂಕಿತರ ಸಂಖ್ಯೆ ಏರಿಲ್ಲ. ಆದರೆ ಅಲ್ಲಿ ಕೂಡ ಶಿಸ್ತಾಗಿ ನಿಯಮಗಳನ್ನು ಪಾಲಿಸಬೇಕು ಎನ್ನುವುದು ಪಂಡಿತರ ಪ್ರತಿಕ್ರಿಯೆಯಾಗಿದೆ.

    ಒಂಭತ್ತು ದೇಶಗಳಲ್ಲಿ  ದಕ್ಷಿಣ ಅಮೆರಿಕಾದ ಮೂರು ದೇಶಗಳು ಬಿಗಿಯಾದ ಲಾಕ್ ಡೌನ್ (?) ಪಾಲಿಸಿದರೂ ಬೊಲಿವಿಯ, ಅರ್ಜೆಂಟಿನಾ ಮತ್ತು ಕೊಲಂಬಿಯ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಹೋಗಿದ್ದು ಈ ಹಿಂದೆ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಇವುಗಳಲ್ಲಿ ಅರ್ಜೆಂಟಿನಾ ಮೊದಲೇ ಲಾಕ್ ಡೌನ್ ಪ್ರವೇಶಿಸಿ ಬಹುಕಾಲ ಸೋಂಕನ್ನು ಹತ್ತಿಕ್ಕಿತ್ತಾದರೂ ಅದನ್ನು ಸಡಿಲಗೊಳಿಸಿದ ಕೂಡಲೇ ಅತಿಹೆಚ್ಚಿನ ಸೋಂಕಿತರನ್ನು ವರದಿ ಮಾಡಿತು.ಭಾರತದಲ್ಲಿಯೂ ಇದೇ ನಡೆದದ್ದು.

    ಮೊದಮೊದಲಿನಲ್ಲೇ 200,000 ಸೋಂಕಿತರನ್ನು ಹೊಂದಿದ್ದ  ಇರಾನ್ ಏಪ್ರಲ್ ಅಥವಾ ಮೇ ವೇಳೆಗೆ ಸೋಂಕಿತರು ಕಡಿಮೆಯಾಗುತ್ತಿರುವ ಬಗ್ಗೆ ಹೇಳಿತ್ತು. ಒಂದು ವಾರದ ಕಾಲ ಅಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತ ಹೋಗಿತ್ತು.ಒಂದು ತಿಂಗಳ ಕಾಲ ಅದು ಕಡಿಮೆಯೇ ಉಳಿದು ಆ ದೇಶಕ್ಕೆ ಆಶಾ ದೀಪವನ್ನು ಹಚ್ಚಿಟ್ಟಿತ್ತು.

    ಆದರೆ ನಂತರ ಶುರುವಾದ ಎರಡನೇ ಅಲೆಯ ಸೋಂಕುಗಳು ಮತ್ತೆ ಆ ದೇಶವನ್ನು ಕಾಲೂರುವಂತೆ ಮಾಡಿತು.ಇದೀಗ ಎರಡನೆಯ ಅಲೆಯೂ ಮತ್ತೆ ನೆಲಸಮವಾಗುತ್ತಿದೆ. ಇಸ್ರೇಲ್, ಸೌದಿ ಅರೇಬಿಯ ಇತರೆ ದೇಶಗಳಲ್ಲಿ ಎರಡನೇ ಅಲೆ ನಿಧಾನವಾಗಿ ಮೇಲೇರಿತು. ಕೆಲವನ್ನು ಮೊದಲನೇ ಅಲೆಯ ಸೋಂಕೇ ಅಥವಾ ಎರಡನೆಯ ಅಲೆಯ ಸೋಂಕೇ ಎಂದು ಹೇಳಲಾಗಲಿಲ್ಲ. ಏಕೆಂದರೆ ಕೆಲವು ಬಾರಿ ಅದು ಗರಿಷ್ಠ ಮಟ್ಟ (ಪೀಕ್) ಮುಟ್ಟಿದ ವರದಿ ಸುಳ್ಳಾಗಿತ್ತು. ಹಾಗಾಗಿ ಎರಡನೇ ಅಲೆ ಅಂದುಕೊಂಡಿದ್ದು ಇನ್ನೂ ಮೊದಲ ಅಲೆಯ ಮುಂದುವರಿಕೆಯಾಗಿದ್ದ ವರದಿಗಳು ಬಂದಿವೆ. ಚೈನಾದಲ್ಲಿ, ಏಪ್ರಿಲ್ ವೇಳೆಗೆ ಮುಗಿದೇ ಹೋಯಿತು ಎಂದುಕೊಂಡಿದ್ದ ಸೋಂಕು, ಜೂನ್ ವೇಳೆಗೆ ಮತ್ತೆ ಕಾಣಿಸಿಕೊಂಡು ಅಲ್ಲಿಯ ಜನರಿಗೆ ಭಾರೀ ಆತಂಕವನ್ನು ಹುಟ್ಟಿಸಿತು.ಇದೀಗ ಅದನ್ನ ಹತ್ತಿಕ್ಕಿದ ವರದಿ ಬಂದಿದೆ.

    ಅಮೆರಿಕಾದಲ್ಲಿ ಮೊದಲ ಅಲೆಯೇ ತಗ್ಗಲಿಲ್ಲ. ಬಹುಕಾಲ ಹೊಸ ಸೋಂಕಿತರನ್ನು ವರದಿಮಾಡುತ್ತಲೇ ಇದ್ದರು.ಆದರೆ, ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಮೇ ಮತ್ತು ಜೂನ್ ವೇಳೆಗೆ ನಿಖರವಾದ ದಾಖಲೆಗಳೊಂದಿಗೆ ಮೊದಲ ಅಲೆ ನೆಲಸಮನಾಗುತ್ತ ಹೋಯಿತು. ಆದರೆ ಹಲವಾರು ನಗರಗಳಲ್ಲಿ ಎರಡನೆಯ ಅಲೆಯ ವರದಿಯಾಗಿ ಆಯಾ ನಗರಗಳಲ್ಲಿ ಮತ್ತೆ ಲಾಕ್ ಡೌನ್ ನ್ನು  ಘೋಷಿಸಲಾಯಿತು. ಭಾರತದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಇದುವರೆಗೆ ಸೋಂಕಿತರ ಸಂಖ್ಯೆ ಏರುಹಾದಿಯಲ್ಲಿಯೇ ಸಾಗಿದ್ದು, ಶೃಂಗ ಶಿಖರವನ್ನಿನ್ನೂ ಮುಟ್ಟಿಲ್ಲ. ಯಾರಿಂದ ಸೋಂಕು ಬಂದಿರಬಹುದೆಂಬುದನ್ನು ಇದೀಗ ಕಂಡುಹಿಡಿಯಲು ಸಾದ್ಯವಾಗದೆ ಇದು ಸಮುದಾಯಮಟ್ಟದಲ್ಲಿ  ಹರಡುತ್ತಲೇ ಇದೆ.

    ಜೀವನಿರೋಧಕ ಶಕ್ತಿ ಕಡಿಮೆ ಇರುವ  ಜನಸಮುದಾಯಗಳಲ್ಲಿ ಅತಿ ಹೆಚ್ಚಿನ ಸೋಂಕು ಹರಡಬಲ್ಲದು. ಈ ಕಾರಣ ನಾವು ವಾಸ್ತವ ಪರಿಸ್ಥಿತಿಯನ್ನು ಮರೆತು ಆರ್ಥಿಕತೆಯನ್ನು ಪೂರ್ತಿ ಸಡಿಲಿಸಕೂಡದು. ಇದುವರೆಗೆ ಪಾಲಿಸಿದ ಸಾಮಾಜಿಕ ಅಂತರ,ಮಾಸ್ಕ್ ಗಳು, ದೀರ್ಘಕಾಲ ಕೈ ತೊಳೆಯುವುದು ಇತ್ಯಾದಿಯನ್ನು ಬಹುಕಾಲ ಮುಂದುವರೆಸಬೇಕಾಗಿದೆ.ಇಲ್ಲದಿದ್ದಲ್ಲಿ ಮೊದಲ ಅಲೆಯ ಮಾರಣ ಹೋಮಕ್ಕಿಂತ ಹೆಚ್ಚು ಗಂಭೀರವಾದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    10 COMMENTS

    1. ಎರಡನೇ ಅಲೆಯ ಆತಂಕವನ್ನೂ‌ಮೀರಿ ಭಾರತದಂತ ದೇಶದಲ್ಲಿ ಕೊರೊನಾ ಮತ್ತದರ ಮುಂಬರುವ ಸಂತಾನಗಳ ಕುರಿತು ದಿವ್ಯ ನಿರ್ಲಕ್ಷ್ಯವೊಂದು ಮೂಡುವುದು ನಿಜವಾದ ಆತಂಕವಾಗಿದೆ.

      • ನಿಜ. ಸರಿವ ಸಮಯ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಾ ಹೆಚ್ಚು ನಿರ್ಲಕ್ಷ್ಯ ಕ್ಕೆ ಎಡೆ ಮಾಡಿಕೊಟ್ಟಿದೆ.

    2. covid eradane aleyva ankiamshagala sahitha vimarshatmaka lekhan uttamavagi niroopisalpttide. bharathadalli ondhane aleye mugidilla eradane ale shuruvadare innenu emba aathanka.
      Nice Article madam

    3. ಓ ದೇವಾ ಇದರಿಂದ ಆದ ಅನಾಹುತವೇ ತುಂಬಾ. Matte ಶುರುವಾದರೆ ಪಾರಾಗೋದು ಹೇಗೆ.

      • ಹೌದು .ಸಮಯವಷ್ಟೇ ನಿರ್ಧರಿಸಬೇಕಾದ ವಿಚಾರವಾದರು ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಾದ ಕಾಲ ಇನ್ನೂ ಮುಗಿದಿಲ್ಲ.

    4. ಒಂದನೆ ಅಲೆಯೇ ಇಷ್ಟೊಂದು ತಲ್ಲಣ ಎಬ್ಬಿಸಿರುವ ಕೊರೋನಾ ಎರಡನೆ ಅಲೆಯ ಪರಿಣಾಮ ಯಾವ ಬಗೆಯ ಅಲ್ಲೋಲ ಕಲ್ಲೋಲ ಎಬ್ಬಿಸುತ್ತದೆ ಎನ್ನುವುದು ಸಧ್ಯ ಊಹೆಗೆ ನಿಲುಕದು. ಯಾವುದಕ್ಜೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಲೇ ಎಚ್ಚೆತ್ತುಕೊಂಡು ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಎರಡನೆ ಅಲೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಾಣತ್ಕಮಕವಾಗಿ ತಿಳಿಸಿಕೊಟ್ಟ ಲೇಖಕರಿಗೆ ಧನ್ಯವಾದಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!