23.5 C
Karnataka
Monday, May 20, 2024

    ಸ್ಥೂಲ ಕಾಯ ಮತ್ತು ಕೋವಿಡ್ ಸೋಂಕು; ಸೊಂಟದ ಸುತ್ತಳತೆ ಮೇಲೆ ಇರಲಿ ಎಚ್ಚರ

    Must read

    ಜುಲೈ 27 ರಂದು ಇಂಗ್ಲೆಂಡ್ ಸರ್ಕಾರ ಜಂಕ್ ಫುಡ್ ಜಾಹೀರಾತುಗಳ ಮೇಲೆ ನಿಯಂತ್ರಣ ಹೇರಿ ರಾತ್ರಿ 9 ಗಂಟೆಯವರೆಗೂ ಜಂಕ್ ಫುಡ್ ಜಾಹೀರಾತು ತೋರಿಸಬಾರದು ಎನ್ನುವ ಕಾನೂನನ್ನು ಜಾರಿಗೆ ತರುವ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದೆ.ಇದಕ್ಕೆ ಕಾರಣ ಕೋವಿಡ್ ಸೋಂಕಿಗೂ ಮತ್ತು ಮಾರಕವಾಗಿ ಸ್ಥೂಲವಾಗಿರುವುದಕ್ಕೂ ಇರುವ ನೇರ ಸಂಬಂಧ.

    ಇಡೀ ಯೂರೋಪಿನಲ್ಲಿ ಸ್ಕಾಂಟ್ಲ್ಯಾಂಡ್ ಅತ್ಯಂತ ಹೆಚ್ಚಿನ ಧಡೂತಿ ದೇಹದ (ಶೇಕಡ 33ರ ವರೆಗೆ) ಜನರನ್ನು ಹೊಂದಿದ್ದರೆ, ಸರಾಸರಿ ಶೇಕಡ 31 ಸ್ಥೂಲಕಾಯತೆಯೊಡನೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಪಂಡಿತರ ಪ್ರಕಾರ ಸ್ಥೂಲಕಾಯದ ನಿಯಂತ್ರಣದ ಬಗೆಗಿನ ನಿರ್ಧಾರವನ್ನು ಸರ್ಕಾರ ಎರಡು ವರ್ಷಗಳ ಹಿಂದೆ ಗಂಭೀರವಾಗಿ ತೆಗೆದುಕೊಂಡಿದ್ದರೆ ಕೋವಿಡ್ ಕಾರಣ ಯು.ಕೆ.ಯಲ್ಲಿ ಸತ್ತ ಜನರ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಬಹುದಾಗಿತ್ತು ಎಂಬುದಾಗಿದೆ

    ತಡವಾಗಿಯಾದರೂ ಇದೀಗ ಕೊಬ್ಬು ಮತ್ತು ಸಕ್ಕರೆಯ ಅಂಶ ಜಾಸ್ತಿಯಿರುವ ವಸ್ತುಗಳ ಮೇಲೆ ’ ಒಂದನ್ನು ಕೊಂಡರೆ, ಮತ್ತೊಂದು ಉಚಿತ ’ ಎನ್ನುವಂತ ಡೀಲ್ ಗಳನ್ನು ನಿಷೇಧಿಸಲಾಗುತ್ತಿದೆ.ಬದಲಿಗೆ, ಆರೋಗ್ಯಕ್ಕೆ ಉತ್ತಮವಾದ ಹಣ್ಣು ಮತ್ತು ತರಕಾರಿ, ಬೇಳೆ, ಮಾಂಸ ಇತ್ಯಾದಿಗಳು ಅಗ್ಗವಾಗಿ ಸಿಗಬೇಕು ಎನ್ನುವ ಕರೆ ಬಲವಾಗುತ್ತದೆ. ವೈದ್ಯರು ವ್ಯಾಯಾಮವನ್ನು ಅದರಲ್ಲೂ ಸೈಕ್ಲಿಂಗ್ ನ್ನು ಚಿಕಿತ್ಸೆಯಾಗಿ ಬರೆದು ಕೊಡಬಹುದಿದೆ. ನಮ್ಮ ಸುತ್ತಲಿನ ಪ್ರಪಂಚ ಬದಲಾದರೆ ಜನರು ಆರೋಗ್ಯಕರ ಜೀವನ ಶೈಲಿಯನ್ನು ಹೊಂದಲು ಸುಲಭವಾಗುತ್ತದೆ ಎನ್ನುವ ತರ್ಕ ಈ ಬದಲಾವಣೆಗಳ ಬೆನ್ನೆಲುಬಾಗಿದೆ.

    ಕೋವಿಡ್ ಶುರುವಾದಾಗಿನಿಂದ ಸ್ಥೂಲ ಗಾತ್ರದ ಜನರಿಗೂ ಕೋವಿಡ್ ಸಾವುಗಳಿಗೂ ಹತ್ತಿರದ ಸಂಬಂಧವಿರುವ ಬಗ್ಗೆ ಎಲ್ಲ ದೇಶಗಳಲ್ಲಿ ಸಹಮತ ಅಭಿವ್ಯಕ್ತವಾಗಿದೆ. ದಪ್ಪಗಿರುವವರಲ್ಲಿ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಉಬ್ಬಸ ಇತ್ಯಾದಿ ಹೆಚ್ಚಾಗಿರುವುದು ಮತ್ತೊಂದು ಕಾರಣ.ಇನ್ನೂ ಮುಖ್ಯ ಕಾರಣವೆಂದರೆ ಧಡೂತಿ ದೇಹ ಹೊಂದಿದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದು. ವ್ಯಾಯಾಮ ಮಾಡುವ ಚೈತನ್ಯವೂ ಇವರಲ್ಲಿ ಕಡಿಮೆಯಿರುತ್ತದೆ. ಅದರಲ್ಲೂ ಸೊಂಟದ ಸುತ್ತಲು ಹಬ್ಬುವ ಕೊಬ್ಬು ಇಡೀ ದೇಹದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ಮತ್ತೂ ಹೆಚ್ಚು.ಈ ರೀತಿಯ ಕೊಬ್ಬಿನ ವಿತರಣೆ  ಭಾರತೀಯರಾದ ನಮ್ಮಲ್ಲಿ ಹೆಚ್ಚು ಎನ್ನುವುದು ಕೂಡ ಸಾಬೀತಾಗಿರುವ ವಿಚಾರ.

    ಮಾರಕವಾಗಿ ದೇಹತೂಕವನ್ನು ಹೆಚ್ಚಿಸಿಕೊಳ್ಳುತ್ತಿರುವ ಭಾರತೀಯರ ಸಂಖ್ಯೆಯೂ ಅಧಿಕವಾಗುತ್ತಿದೆ. ವೈದ್ಯಕೀಯ ಲೆಕ್ಕದಲ್ಲಿ ಭಾರತೀಯರ ದೇಹ ಸೇಬಿನಂತೆ ತೂಕವನ್ನು ಗಳಿಸುತ್ತದೆ. ಅಂದರೆ ಹೊಟ್ಟೆ ಮತ್ತು ಸೊಂಟದ ಸುತ್ತ ಕೊಬ್ಬನ್ನು ಶೇಖರಿಸುತ್ತದೆ. ಕೋವಿಡ್ ಜೊತೆ, ಹೃದಯಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಇದು ಆಹ್ವಾನವನ್ನು ನೀಡುತ್ತದೆ.

    ಮಾರಕ ಸ್ಥೂಲಕಾಯತೆ ಏಕೆ ಹೆಚ್ಚಾಗುತ್ತಿದೆ?

     ಆಹಾರೋದ್ಯಮದಲ್ಲಿ ಕೈಗಾರೀಕರಣ ಕಾಲಿಟ್ಟಿದ್ದು ಬಹಳ ಹಿಂದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆಹಾರೋದ್ಯಮ ಕ್ರಾಂತಿ ಮೊದಲಿಗೆ ಶುರುವಾಯಿತು. ಮನೆಯ ಅಡುಗೆ ನಿಧಾನಕ್ಕೆ ಹಿಂದೆ ಸರಿಯಿತು.ಮೊದಲ ಮತ್ತು ಎರಡನೇ ಮಹಾಯುದ್ದಗಳ ಕಾಲದಿಂದಲೇ ಮಹಿಳೆಯರು ಹೊರಗಿನ ಕೆಲಸಗಳ ನೊಗಕ್ಕೆ ಕತ್ತು ಕೊಟ್ಟರು. ಮನೆಯಡುಗೆಗೆ ಸಮಯ ಇಲ್ಲವಾಗಿ, ಸಿದ್ದ ಆಹಾರಗಳು ಬದುಕನ್ನು ಆವರಿಸಿದವು.

    ಇಂಗ್ಲೆಂಡಿನಂತ ದೇಶಗಳಲ್ಲಿ ಈಗಿನ ತಲೆಮಾರಿನವರಿಗೆ ಬೆಳಗೆದ್ದರೆ ಸೀರಿಯಲ್, ಮಧ್ಯಾಹ್ನ  ಅಂಗಡಿಯಲ್ಲಿ ಕೊಳ್ಳುವ ಸ್ಯಾಂಡ್ವಿಚ್, ರಾತ್ರಿಯಾದರೆ ಈಗಾಗಲೇ ಅರೆ ಬರೆ ಬೆಂದಿರುವ/ ತಯಾರಿರುವ ಅಡುಗೆಗಳನ್ನು ಒಂದಿಷ್ಟು ಬಿಸಿ ಮಾಡಿಕೊಂಡು ತಿನ್ನುವ  ದಿನನಿತ್ಯದ ಆಭ್ಯಾಸಗಳಿವೆ.

    ಯುಗಾದಿಗೆ ಒಬ್ಬಟ್ಟು, ಗಣೇಶನ ಹಬ್ಬಕ್ಕೆ ಕಡುಬು,ದೀಪಾವಳಿಗೆ ಕಜ್ಜಾಯ ಎಂದು ಒಂದೊಂದು ಹಬ್ಬಕ್ಕೂ ಬಗೆ ಬಗೆಯ ವಿಷೇಶ ತಿನಿಸುಗಳನ್ನು ಮಾಡಿಕೊಂಡು ತಿನ್ನುವ ನಮ್ಮ ದೇಶದ ಸಂಪ್ರದಾಯಗಳು ಒಂದುಕಡೆಯಿದ್ದರೆ, ವರ್ಷಕ್ಕೆ ಒಂದೇ ಒಂದು ದೊಡ್ಡ ಹಬ್ಬವಾದ ಕ್ರಿಸ್ಮಸ್ ನಲ್ಲಿ ಕೂಡ ಇಂತಹ ದೇಶಗಳು ಹಬ್ಬದ ಎಲ್ಲ ಅಡುಗೆಗಳನ್ನು ಅಂಗಡಿಯಿಂದಲೇ ಕೊಂಡುತಂದು ಓವನ್ನಿನಲ್ಲಿ , ಮೈಕ್ರೋ ಓವನ್ನಿನಲ್ಲಿ ಬಿಸಿಮಾಡಿಕೊಂಡು, ಚೆಂದವಾಗಿ ಊಟದ ಟೇಬಲ್ಲುಗಳನ್ನು ಅಲಂಕರಿಸಿ, ತಾವೂ ಅಲಂಕರಿಸಿಕೊಂಡು ಆನಂದಿಸಿ ತಿಂದು ಮುಗಿಸಿಬಿಡುತ್ತಾರೆ.ಹಬ್ಬದ ಸಮಯದಲ್ಲಿ ಆಹಾರದ ಮಾರಾಟದ ಉದ್ಯಮಗಳು ಬಿಲ್ಲಿಯನ್ನುಗಟ್ಟಲೆ ವಹಿವಾಟನ್ನು ನಡೆಸುತ್ತವೆ.

    ಇಡೀ ಯೂರೋಪಿನಲ್ಲಿ ತಯಾರಾಗುವ ಸಿದ್ದ  ಊಟಗಳ  ಅರ್ಧ ಭಾಗವನ್ನು ಇಂಗ್ಲೆಂಡ್ ಒಂದೇ ತಿನ್ನುತ್ತಿದೆ. 2016 ರಲ್ಲಿ ಮೈಕ್ರೋವೇವ್ ನಲ್ಲಿ ಬಿಸಿ ಮಾಡಿಕೊಂಡು ತಿನ್ನ ಬಹುದಾದ ಸಿದ್ಧ ಆಹಾರದ ಮೇಲೆ ಈ ಜನರು 3 ಬಿಲಿಯನ್ ಪೌಂಡುಗಳನ್ನು ಖರ್ಚುಮಾಡಿದ್ದಾರೆ. ಅಂದರೆ ಪ್ರತಿದಿನ 9 ಮಿಲಿಯನ್ ಪೌಂಡುಗಳನ್ನು ಜನರು ವ್ಯಯಿಸಿದ್ದಾರೆ. ಫ್ರಾನ್ಸ್ ಗಿಂತ ಇಂಗ್ಲಿಷರು ಸಿದ್ಧ ಆಹಾರಗಳ ಮೇಲೆ ಎರಡು ಬಾರಿ ಹೆಚ್ಚಿಗೆ ಹಣ ಹೂಡುತ್ತಿದ್ದಾರೆ. ಸ್ಪೇನ್ ದೇಶಕಿನ್ನ ಆರು ಪಟ್ಟು ಹೆಚ್ಚು ಸಿದ್ದ ಹಾರದ ಮೇಲೆ ಅವಲಂಬಿತರಾಗಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

    2015 ಕ್ಕೆ ಹೋಲಿಸಿದರೆ 2016 ರಲ್ಲಿ ಮತ್ತೂ ಒಂದು ಲಕ್ಷಕ್ಕೂ ಹೆಚ್ಚಿನ ಮನೆಗಳು ಇಂತಹ ಆಹಾರಕ್ಕೆ ಮಣಿದವು. 37 ಮಿಲಿಯನ್ನು ವಹಿವಾಟು ಇದರಿಂದ ಹೆಚ್ಚಿತು.  ಈ ಇಂಗ್ಲಿಷರ ಮನಸ್ಥಿತಿ ಈಗಾಗಲೇ ಎರಡೆರಡು ತಲೆಮಾರುಗಳಿಂದ ಸಿದ್ಧ  ಆಹಾರಗಳ ಕಡೆ ವಾಲಿದೆ. ಈ ಹಿಂದೆ ಫ್ರೀಜರಿನಲ್ಲಿ ಇಟ್ಟಂತ ಅತಿ ತಣ್ಣಗಿನ ಆಹಾರಗಳನ್ನು ಮನೆಯ ವಾತಾವರಣಕ್ಕೆ ತಂದು ನಂತರ ತಿನ್ನುವ ಸಹನೆಯಾದರೂ ಇತ್ತು. ಆದರೆ ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ  ಈಗ ಜನರಲ್ಲಿ ಆ ರೀತಿಯ ಸಹನೆಯೂ ಉಳಿದಿಲ್ಲ. ಹಾಗಾಗಿ ಪ್ರೀಜರಿನಲ್ಲಿ ಇಡುತ್ತಿದ್ದ ತಣ್ಣ  ಆಹಾರದ ವಹಿವಾಟು 25 ಮಿಲಿಯನ್ನುಗಳಷ್ಟು ಕಡಿಮೆಯಾಯ್ತು. ಆದರೆ ಫ್ರಿಜ್ಜಿನಿಂದ ತೆಗೆದು ಒಂದೆರಡು ನಿಮಿಷಗಳಲ್ಲಿ ಬಿಸಿ ಮಾಡಿ ತಿನ್ನುವಂತ  ಅತಿ ಸುಲಭದ, ತತ್ ಕ್ಷಣದ ಅಡುಗೆಯ ವಹಿವಾಟು 62 ಮಿಲಿಯನ್ನು ಪೌಂಡುಗಳಷ್ಟು ಜಾಸ್ತಿಯಾಯ್ತು. ಕಾಲಕ್ಕೆ ವೇಗ ಬಂದಿಲ್ಲ ಎಂದರೆ ನಂಬದಿರುವವರಾದರೂ ಯಾರು?

    ಇವತ್ತು ಇಂಗ್ಲೆಂಡಿನಲ್ಲಿ ಇಂಗ್ಲಿಷರ ರುಚಿಗೆ ಹೊಂದುವಂತೆ ಮಾಡುವ ಭಾರತದ ಅಡುಗೆಗಳಿಗೆ ಶೇಕಡ 18 ರಷ್ಟು ಬೇಡಿಕೆಯಿದ್ದು ಅದು ಮಂಚೂಣಿಯಲ್ಲಿದೆ. ಚೈನಾಕ್ಕೆ ಶೇಕಡ13, ಇಟಲಿಯ ಅಡುಗೆಗಳಿಗೆ  ಮತ್ತು ಇಂಗ್ಲಿಷರ  ಅಡುಗೆಗಳಿಗೆ ಶೇಕಡ 10 , ಬರ್ಗರ್ ಮುಂತಾದ ಫಾಸ್ಟ್ ಆಹಾರಗಳಿಗೆ ಶೇಕಡ 4ರ ಬೇಡಿಕೆಯಿದೆ. ಇನ್ನಿತರ ಎಲ್ಲ  ಬಗೆಯ ಏಶಿಯನ್ ಆಹಾರಗಳಿಗೆ ಒಟ್ಟಾರೆ ಶೇಕಡ 44 ಜನಪ್ರಿಯತೆಯಿದೆ. ಇನ್ನೊಂದರ್ಥದಲ್ಲಿ ಅಡುಗೆಮನೆಗಳ ರುಚಿ ಕಳೆದಂತೆ ದೇಶ ವಿದೇಶಿ ಆಹಾರಗಳು ಅವರಿಗೆ ಪ್ರಿಯವಾಗಿ ಬಿಟ್ಟಿವೆ. ಈ ಸಿದ್ಧ ಆಹಾರಗಳ ಬೇಡಿಕೆ ಕಳೆದ ವರ್ಷ ಶೇಕಡ 44 ಹೆಚ್ಚಾಯಿತು. ಬ್ರಿಟನ್ನೇ ಅಲ್ಲದೆ ಇನ್ನಿತರ ಯೂರೋಪಿಯನ್ ದೇಶಗಳಲ್ಲಿ ಬೇಡಿಕೆ ಶೇಕಡ 29 ಹೆಚ್ಚಾಯ್ತು. ಇದು ಪ್ರತಿ ವರ್ಷ ಹೆಚ್ಚುತ್ತಲೇ ಇದೆ.

    ಈಗಾಗಲೇ ರೆಡಿಮೇಡ್ ಫುಡ್ ಅನ್ನೇ ಅವಲಂಬಿಸಿ ಬದುಕುವ ಇಂತಹ ಒಂದೆರಡು ತಲೆಮಾರುಗಳು ಬಂದು ಹೋಗಿರುವ ಕಾರಣ ಅವರಿಗೆ ಪ್ರತಿದಿನ ಅಡುಗೆ ಮಾಡುವ ತಂದೆ ತಾಯಿಯರ ಪರಿಚಯವಿಲ್ಲ. ಸಂಸ್ಕರಿಸಿದ ಆಹಾರ, ಅಗ್ಗವಾದ ರುಚಿಯಾದ ಕೊಬ್ಬಿನ ಸಿದ್ಧ ಅಡುಗೆಗಳು, ಜಂಕ್ ಆಹಾರಗಳ ವ್ಯಸನದ ಕಾರಣ ಪಾಶ್ಚಾತ್ಯರಲ್ಲಿ ಸ್ಥೂಲಕಾಯತೆ ಹೆಚ್ಚಿದೆ. ಇದೇ ನಿಟ್ಟಿನಲ್ಲಿ  ಭಾರತವೂ ದಾಪುಗಾಲಿಟ್ಟಿದೆ.

    ಭಾರತದಲ್ಲಿ ಸಿದ್ದ ಆಹಾರ ಉದ್ಯಮ ಮತ್ತು ಸ್ಥೂಲಕಾಯತೆ

    ನಮ್ಮ ದೇಶದ  ಆಹಾರದ ಉದ್ಯಮಗಳು ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ.  ಬಡತನ ಇನ್ನೂ ತಾಂಡವವಾಡುತ್ತಿರುವ ದೇಶ ನಮ್ಮದು. ಬಹುತೇಕ ಬದಲಾವಣೆಗಳು ಕೇವಲ ನಗರಗಳಲ್ಲಿ, ನಗರವಾಸಿಗಳಲ್ಲಿ ಮಾತ್ರ ಕಾಣಿಸುತ್ತಿದೆ. ಆದರೆ ಭಾರತೀಯರ ಆಹಾರ ಪದ್ದತಿಗಳು, ಅಡುಗೆ ಮನೆಗಳು ಖಂಡಿತ ಬದಲಾಗುತ್ತಿವೆ. ಈ ಬದಲಾವಣೆಯ ಚಕ್ರದಲ್ಲಿ ಬಡವರಿಂದ ಬಲ್ಲಿದರವರೆಗೆ ಎಲ್ಲರೂ ತಮಗರಿವಿಲ್ಲದಂತೆಯೇ ಭಾಗಿಗಳಾಗುತ್ತಿದ್ದಾರೆ.

    ಭಾರತದ ಮಹಾನಗರಿಗಳು ಸಿದ್ಧ ಆಹಾರದ ಮಾರಕಟ್ಟೆಗೆ ಅತ್ಯಂತ ಆಕರ್ಷಕ ತಾಣಗಳಾಗಿವೆ. ಇತರೆ ಸಣ್ಣ ಪುಟ್ಟ ನಗರಗಳಲ್ಲಿ ಇದೇ ಪ್ರಮಾಣದ ವ್ಯತ್ಯಾಸಗಳಿನ್ನೂ ಬಂದಿಲ್ಲ. ಪ್ರತಿ ಮನೆಯಲ್ಲಿಯೂ ಇನ್ನೂ ಅಡುಗೆಯ ಸಂಭ್ರಮ ಇದ್ದೇ ಇದೆ.ಆದರೆ, ಇವೆಲ್ಲ ಅತ್ಯಂತ ವೇಗವಾಗಿ ಬದಲಾಗುತ್ತಿವೆ. ಹಣ ಮತ್ತು ಮಾರುಕಟ್ಟೆಗಳು ಆ ಬಗೆಯ ಒತ್ತಡವನ್ನು ತರುತ್ತಿವೆ.

    ಭಾರತದ ಆರ್ಥಿಕ ಬೆಳವಣಿಗೆ ಹಲವಾರು ವರ್ಷಗಳಿಂದ  ಏರುಮುಖ ಕಂಡಿದೆ. ಹೀಗೇ ಬೆಳೆದರೆ 2025 ರ ವೇಳೆಗೆ ಪ್ರಪಂಚದ 5 ನೇ  ಅತಿದೊಡ್ಡ ವಾಣಿಜ್ಯ ದೇಶವಾಗುತ್ತದೆ ಎನ್ನುವ ಅಂದಾಜಿದೆ. ಆದರೆ ಭಾರತದ  ಇಂದಿನ ಜನಸಂಖ್ಯೆಯಲ್ಲಿ ಶೇಕಡ 50 ಜನರು ಮೂವತ್ತು ವರ್ಷಕ್ಕಿನ್ನ ಕಡಿಮೆ ವಯಸ್ಸಿನವರು. ಇವರ ಸಂಖ್ಯೆ 440 ಮಿಲಿಯನ್ನುಗಳನ್ನೂ ಮೀರಿದೆ. ಬೆಳೆಯುತ್ತಲೇ ಇದೆ. ಇವರಲ್ಲಿ 390 ಮಿಲಿಯನ್ ಜನರು 2000 ನೇ ಇಸವಿಯ ನಂತರ ಹುಟ್ಟಿದವರು. ಇವರಲ್ಲಿ ಶೇಕಡ 81 ಮಂದಿ ಹೋಟೆಲುಗಳಲ್ಲಿ ತಿನ್ನಲು ಬಯಸುತ್ತಾರೆ. ಶೇಕಡ 19 ಮನೆಗೇ ಊಟ ತರಿಸಿಕೊಂಡು ತಿನ್ನುವ ಇರಾದೆ ಇರುವವರು. 2015 ರ ಅಧ್ಯಯನದ ಪ್ರಕಾರ ಸ್ಥಳೀಯ ಬದಲಾವಣೆಗಳೊಂದಿಗೆ ಸ್ಥೂಲಕಾಯದ ಜನರು ನೂರಕ್ಕೆ ಶೇಕಡ 11.8 ರಿಂದ 16.9 ಇದ್ದಾರೆ. ಸೊಂಟದ ಸುತ್ತ  ಕೊಬ್ಬಿರುವವರ ಸಂಖ್ಯೆ ನೂರಕ್ಕೆ ಶೇಕಡ16.9 ರಿಂದ 36.3 ನಷ್ಟಿದೆ. ಭಾರತವೂ ಸೇರಿದಂತೆ ಪ್ರತಿದೇಶದ ಆರೋಗ್ಯದ ವಿಚಾರದಲ್ಲಿ ಸ್ಥೂಲಕಾಯತೆ ಅತ್ಯಂತ ಗಂಭೀರವಾದದ್ದು. ಭಾರತದಲ್ಲಿ ಹೆಂಗಸರಲ್ಲಿ ಸೊಂಟದ ಸುತ್ತಲಿನ ಕೊಬ್ಬು ಗಂಡಸರಿಗಿಂತ ಹೆಚ್ಚಿದೆ.ಆಹಾರದ ಗುಣಮಟ್ಟದ ಆಯ್ಕೆಯ ಜೊತೆ ಪ್ರಮಾಣದ ಬಗ್ಗೆಯೂ ಅರಿವುಮೂಡಬೇಕಿದೆ. ವ್ಯಾಯಾಮಗಳು ಹೆಚ್ಚಬೇಕಿವೆ.

    ಭಾರತೀಯರ ಗಳಿಕೆಯ ದೊಡ್ಡ ಭಾಗ ಆಹಾರ ಮತ್ತು ದಿನಸಿಗಳ ಮೇಲೆ ಖರ್ಚಾಗುತ್ತದೆ. ಇದೇನು ಉತ್ಪ್ರೇಕ್ಷೆಯಲ್ಲ. ಯಾಕೆಂದರೆ ಭಾರತೀಯರು ಊಟಕ್ಕೆ ಖರ್ಚು ಮಾಡುವುದು ಬೇರೆ ದೇಶಗಳಿಗಿನ್ನ ಅತಿ ಹೆಚ್ಚು ಎನ್ನಬಹುದು.  ಒಬ್ಬ ಭಾರತೀಯನ ದುಡಿಮೆಯ ಅಂದಾಜು ಶೇಕಡ 31 ಭಾಗ ಊಟಗಳ ಮೇಲೆ ಖರ್ಚಾಗುತ್ತದೆ. ಚೈನೀಯರು ಶೇಕಡ 25, ಬ್ರೆಝಿಲ್ ನವರು ಶೇಕಡ17 ಮತ್ತು ಅಮೆರಿಕನ್ನರು ಶೇಕಡ 9 ಮಾತ್ರ ಊಟಕ್ಕೆ ಸಂಬಂಧಪಟ್ಟಂತೆ  ಖರ್ಚುಮಾಡುವುದು. ಇದಕ್ಕೆ ನಮ್ಮ ಬದುಕಿನ ಶೈಲಿಯೂ ಕಾರಣವಿರಬಹುದು. ಮೂರೂ ಹೊತ್ತು ದೊಡ್ಡ ಊಟಗಳನ್ನು ಮಾಡುವುದು, ಊಟಕ್ಕೆ ಅತಿ ಪ್ರಾಮುಖ್ಯತೆ ಕೊಡುವುದು, ಊಟದ ಸುತ್ತಲೇ ಎಲ್ಲ ಕಾರ್ಯಕ್ರಮಗಳನ್ನು ಮಾಡುವುದು ಎಲ್ಲವೂ ಕಾರಣವಿರಬಹುದು. ಹೀಗಾಗಿಯೇ ಸಿದ್ದ ಆಹಾರದ ಉದ್ಯಮಗಳು ಇಂತಹ ಭೋಜನಪ್ರಿಯ  ಭಾರತವನ್ನು  ತಮ್ಮ ಕರ್ಮಕ್ಷೇತ್ರ ಮಾಡಿಕೊಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

    ಭಾರತದ ಸಿದ್ದ ಆಹಾರದ  ಉದ್ಯಮಗಳ ಒಟ್ಟು ಮೊತ್ತ ಇಡೀ ಪ್ರಪಂಚದಲ್ಲಿ ಈಗಾಗಲೇ ಆರನೆಯ ಸ್ಥಾನದಲ್ಲಿದೆ. ಸದ್ಯಕ್ಕೆ ಶೇಕಡ 70 ವಹಿವಾಟು ಚಿಲ್ಲರೆ ವ್ಯಾಪಾರಿಗಳಿಂದ ಉತ್ಪನ್ನವಾಗುತ್ತಿದೆ. ಪೂರ್ತಿ ಸರ್ವೀಸು ಕೊಡುವ ರೆಸ್ಟೋರೆಂಟ್ ಗಳು ಉದ್ಯಮ ಶೇಕಡ 56.6 ನಷ್ಟಿದೆ. ಇದರ ಹಿಂದೆ ಫಾಸ್ಟ್ ಫುಡ್ ಉದ್ಯಮ ಶೇಕಡ16.3, ಬೀದಿ ಬದಿಯ  ಆಹಾರ ಮಳಿಗೆಗಳು ಶೇಕಡ 14.6 ಇದ್ದರೆ, ಕೆಫೆ ಮತ್ತು ಬಾರ್ ಗಳು ಶೇಕಡ 12.5 ರಷ್ಟು ಉದ್ಯಮವನ್ನು ಹೊಂದಿವೆ. ಈ ಅಂಕಿ ಸಂಖ್ಯೆಗಳು ಎಂದಿಗಿಂತಲೂ ಅತ್ಯಧಿಕವಾಗಿರುವುದು ಭಾರತದ ಹೊಸ ಮಿಡಿತವನ್ನು ಡಾಳಾಗಿ ಹೇಳುತ್ತವೆ.

    ಜಾಗತೀಕರಣ ತಂದಿರುವ ಬದಲಾವಣೆಗಳು

    ಜಾಗತೀಕರಣದ ಕಾರಣ ವಿದೇಶೀ ಆಹಾರಗಳು, ಫ್ಯೂಷನ್ ಫುಡ್ ಗಳು ಹೆಚ್ಚುತ್ತಿವೆ. ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿಗಳೂ ಹೆಚ್ಚುತ್ತಿವೆ. ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಕಾಳಜಿಯಿರುವ ಜನರ ದೊಡ್ಡ ದಂಡೇ ಇದೆ.

    ನಿಧಾನಕ್ಕೆ ಉಪ್ಪು, ಖಾರ, ಸಕ್ಕರೆ, ಕೊಬ್ಬು ಕಡಿಮೆಯಿರುವ ಆಹಾರಗಳ ಮಹತ್ವವನ್ನು ಜನರು ಅರಿಯಲು ಶುರುಮಾಡಿದ್ದಾರೆ. ಆದರೆ ಇವರ ಸಂಖ್ಯೆ ಕೇವಲ 5 ಮಿಲಿಯನ್ನು ಮಾತ್ರ ಎಂಬುದು ಹುಬ್ಬೇರಿಸುವಂತೆ ಮಾಡುತ್ತದೆ. ಆದರೆ ಇವರ ಸಂಖ್ಯೆ  ಪ್ರತಿವರ್ಷ ಶೇಕಡ 10-15 ನಷ್ಟು ಬೆಳೆಯುತ್ತಿದೆ ಎನ್ನುವುದಷ್ಟೇ ಸಮಾಧಾನದ ಸಂಗತಿ.

    ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಬೆಳೆವ ಆಹಾರಗಳನ್ನು ಉತ್ಪಾದಿಸುವಲ್ಲಿ ಭಾರತ ಮಂ ಣಿಯಲ್ಲಿದೆ. ಬೆಂಗಳೂರಿನಲ್ಲಿ 2013 ರಲ್ಲಿ ನಡೆದ ಸರ್ವೆಯ ಪ್ರಕಾರ ಶೇಕಡ 90 ಜನರು ಈ ಬಗೆಯ ಆಹಾರಕ್ಕೆ ಹೆಚ್ಚು ಹಣ ಕೊಡಲು ತಯಾರಿದ್ದಾರೆ. ಆದರೆ ಶೇಕಡ 83 ಜನರಿಗೆ ಯಾರು ಇವನ್ನು ಮಾರುತ್ತಾರೆ, ಎಲ್ಲ ಬಗೆಯ ಆಹಾರಗಳೂ ಈ ರೇಂಜಿನಲ್ಲಿ ಸಿಗುತ್ತವೆಯೇ ಮತ್ತು ವರ್ಷವಿಡೀ ಇವು ಲಭ್ಯವಿವೆಯೇ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲದೆ ಇವುಗಳ ಮೇಲಿನ ಅವಲಂಬನೆಯಿಂದ ಹಿಂತೆಗೆಯುವಂತೆ ಮಾಡಿದೆ.

    ಭಾರತೀಯರನ್ನು ಸಿದ್ದ ಆಹಾರದ  ಸೌಲಭ್ಯ , ರುಚಿಗಳು ಮ್ಯಾಗ್ನೆಟ್ನಂತೆ ಸೆಳೆದಿವೆ ಎನ್ನುವುದರಲ್ಲಿ ಶಂಕೆಯಿಲ್ಲ. ಆದರೆ ಸಧ್ಯಕ್ಕೆ ಪ್ರಿ ಪ್ಯಾಕೇಜ್ ಮಾಡಿರುವ  ಆಹಾರಗಳನ್ನು  ಖರೀದಿಸುತ್ತಿರುವ ಶೇಕಡ 90 ಜನರಲ್ಲಿ ಕೇವಲ ಶೇಕಡ 30ರಷ್ಟು ಜನ ಮಾತ್ರವೇ ಈ ಆಹಾರಗಳ ಪೋಷಕಾಂಶಗಳ ಬಗ್ಗೆ ಓದುವ ಪ್ರಯತ್ನ ಮಾಡುತ್ತಿದ್ದಾರೆ.  ಇವರಲ್ಲಿ ಕೂಡ ಸಕ್ಕರೆ ಮತ್ತು ಕೊಬ್ಬಿನ ಅಂಶಗಳ ಬಗ್ಗೆ ಗಮನ ಇರುವುದು ತಾವು ದಪ್ಪಗಾದರೆ ಎನ್ನುವ ಸೌಂದರ್ಯದ ಕಾರಣದಿಂದಲೇ ಹೊರತು ಆರೋಗ್ಯದ ಕಾಳಜಿಗಳು ಇಲ್ಲವಾಗಿವೆ. ಜನರಲ್ಲಿ ಯಾವ ಆಹಾರಗಳು ತಮಗೆ ಉತ್ತಮ ಎನ್ನುವ ತಿಳಿವಳಿಕೆ ಇಲ್ಲದಿರುವುದು ಒಂದು ಕಾರಣವಾದರೆ ಮಾಹಿತಿಗಳು ಬಹಳ ತಾಂತ್ರಿಕ ವಿವರಣೆಯನ್ನು ಮಾತ್ರ ಹೊಂದಿರುವುದು ಇನ್ನೊಂದು  ಕಾರಣ.

    ಈ ಸಿದ್ದ ಆಹಾರಗಳ ಭರಾಟೆ ನಿಲ್ಲುವಂತವೇ?

    ಒಂದಾನೊಂದು ಕಾಲದಲ್ಲಿ ಚಾಕಲೇಟಿನಂತ ಸಿಹಿ ಪದಾರ್ಥ ಮುಂದುವರೆದ ದೇಶಗಳಲ್ಲಿ ಕೂಡ ಕೇವಲ ಶ್ರೀಮಂತರ ಸ್ವತ್ತಾಗಿತ್ತು. ಬೆಲೆ ಗಗನ ಮುಟ್ಟುತ್ತಿತ್ತು. ಕೈಗಾರಿಕಾ ಕ್ರಾಂತಿಯಾದ ನಂತರ ಎಲ್ಲ  ಉತ್ಪಾದನೆಗಳೂ ಔದ್ಯಮಿಕ ಮಟ್ಟ ತಲುಪಿದವು. ಬೆಲೆಗಳು ಕುಸಿದವು. ಸಣ್ಣ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಬೀಗ ಹಾಕಿ ನಷ್ಟ ಅನುಭವಿಸಿದರು. ಆದರೆ ಬಡವನಿಗೂ ಚಾಕಲೇಟಿನಂತಹ ಸಿಹಿ ದೊರಕುವುದು ಸಾಧ್ಯವಾಯಿತು.  ಲಾಭ-ನಷ್ಟಗಳ ಲೆಕ್ಕಾಚಾರ ಗೌಣವಾಯಿತು.ಕಾಲ ಚಕ್ರವನ್ನು ನಿಲ್ಲಿಸುವುದು ಸಾದ್ಯವಿಲ್ಲ. ಈ ಸಿದ್ದ ಆಹಾರಗಳ ಭರಾಟೆ ಕೂಡ ಅಂತದ್ದೇ ಎನ್ನ ಬಹುದೇನೋ?

    ಸಿದ್ಧ ಆಹಾರವನ್ನು ಮಾರುಕಟ್ಟೆಗಳಿಂದ ತಡೆಯುವುದು ಸಾಧ್ಯವಿಲ್ಲ. ಆದರೆ ಅವುಗಳ ಗುಣಮಟ್ಟವನ್ನು ಕಾಪಾಡುವುದು ಸರ್ಕಾರದ ಕೆಲಸವಾಗಬೇಕು. ಈ ಬಗ್ಗೆ  ನಿಷ್ಕಳಂಕಿತ ಅಧ್ಯಯನಗಳು, ವರದಿಗಳು ಹೊರಬರಬೇಕು. ನಿಯಂತ್ರಣ ಬೇಕು. ಮಾಧ್ಮಮಗಳು, ವೈದ್ಯರುಗಳು ಜನರಿಗೆ ಮಾಹಿತಿ ನೀಡಬೇಕು. ಅಲ್ಲಿಯವರೆಗೆ ಜನಸಾಮಾನ್ಯರು ಬರಿಯ ನಾಲಿಗೆಯ ತೀರ್ಮಾನಕ್ಕೆ ಮಾತ್ರ ಮಣಿಯದೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಸಂಸ್ಕರಿಸಿದ, ಹೆಚ್ಚು ರಾಸಾಯನಿಕ ಮತ್ತು ಕೊಬ್ಬಿನಂಶವಿರುವ ಆಹಾರಗಳಿಂದ ನಮ್ಮ ದೇಹಕ್ಕೆ ಹಾನಿಯಾಗುತ್ತದೆ ಎಂದು ತಿಳಿದಿರುವುದು ಮುಖ್ಯ.

    ಇಲ್ಲದಿದ್ದಲ್ಲಿ ಪ್ರಗತಿಯ ಹೆಸರಲ್ಲಿ ಹಾಡುಹಗಲೇ ಜನರ ಕಿಸೆಯಿಂದ ದುಡ್ಡು ಖಾಲಿಯಾಗಿ, ಅನಾರೋಗ್ಯದ ಖರೀದಿ ನಡೆಯಬಹುದು. ಸಾಮಾಜಿಕ ಮಟ್ಟದಲ್ಲಿ ಆಹಾರದ ಶುಚಿತ್ವ, ಪ್ರಮಾಣ, ಪೋಷಕಾಂಶಗಳ ಬಗ್ಗೆ ಅರಿವು ಮೂಡದಿದ್ದಲ್ಲಿ, ಮೂಡಿಸದಿದ್ದಲ್ಲಿ ಭಾರತೀಯರ ಸಿದ್ಧ ಆಹಾರದ ಬಿಲಿಯನ್ನುಗಟ್ಟಳೆ ಉದ್ಯಮಗಳು ನಿಯಂತ್ರಣವಿಲ್ಲದ ನಾಯಿ ಕೊಡೆಗಳಾಗಬಹುದು. ಮಧ್ಯ ಮತ್ತು ಧೂಮಪಾನಗಳಂತೆ  ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರೋತ್ಪನ್ನ ಮಾಡುವ ಉದ್ಯಮಗಳು ಸರ್ಕಾರಗಳನ್ನು ನಿಯಂತ್ರಿಸುವ ಮುನ್ನವೇ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಿದೆ.

    ಕೋವಿಡ್ ಇರಲಿ ಜೊತೆಗೆ ಇತರೆ ಖಾಯಿಲೆಗಳನ್ನು ಕೂಡ ದೂರವಿಟ್ಟು, ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲಂತ ಆರೋಗ್ಯಕರ ಊಟ, ವ್ಯಾಯಾಮ ಮತ್ತು ಜೀವನಶೈಲಿ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಗಳಿಸಿಕೊಳ್ಳಲು ಸರ್ಕಾರ, ಮಾದ್ಯಮ ಮತ್ತು ಜನರು ಮುಂದೆಯೂ ಶ್ರಮಿಸಬೇಕಿದೆ.

    Photo by Kobby Mendez on Unsplash

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    5 COMMENTS

    1. ತುಂಬಾ ಉಪಯುಕ್ತ ಮಾಹಿತಿ. ವಂದನೆಗಳು ಮೇಡಂ

    2. ಸಮಗ್ರ ಬರಹ. ಬಹಳ ಸಂಶೋಧನೆ ಮಾಡಿ ವ್ಯಾಪಕವಾಗಿ ವಿಶ್ಲೇಷಣೆ ಮಾಡಿ ಬರೆದಿದ್ದೀರಿ. ಕನ್ನಡಕ್ಕೆ ನೀವು ದೊರಕಿದೆ ಅನನ್ಯ ವೈಜ್ಞಾನಿಕ ವಿಶ್ಲೇಷಕರ ಲೇಖಕರು.

      ಕೇಶವ

    3. Very informative article. It is well-known that objestity is bad for health. The COVID-19 pandemic has again proved it. At least, people would now realise the negative impact of obestity and show intrest to minimize the body weight. The article has also given valuable suggestions how to reduce the body weight. In addition to food (junt food items, modern lifestyle in terms of less of physical works is also a causative factor for obesity. Thanks for very educative article with statistical evidence. Let this article be read by many people and get motivated to take care of their health.

    LEAVE A REPLY

    Please enter your comment!
    Please enter your name here

    Latest article

    error: Content is protected !!