22.7 C
Karnataka
Tuesday, May 21, 2024

    ಕೊರೋನಾ ವ್ಯಾಕ್ಸಿನ್ ತಯಾರಾಗಲು ಇನ್ನೆಷ್ಟು ಸಮಯ ಬೇಕು

    Must read

    ರೋಗಕ್ಕೊಂದು ಚಿಕಿತ್ಸೆ ಇಲ್ಲದಿದ್ದರೆ ಸಮಸ್ಯೆಗೊಂದು ಪರಿಹಾರವಿಲ್ಲದಂತೆಯೇ ಸರಿ. ಇಡೀ ಪ್ರಪಂಚದ ಮೇಲೆ ತನ್ನ ಬಲೆಯನ್ನು ಹಾಸಿ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಳ್ಳುವ ಕಾಯಿಲೆಯೊಂದು ತನ್ನನ್ನು ನಿಯಂತ್ರಿಸಬಲ್ಲ ಲಸಿಕೆಯೊಂದರ ಮಾರುಕಟ್ಟೆಯನ್ನು ಹೊತ್ತುಕೊಂಡೇ ಹುಟ್ಟಿರುತ್ತದೆ. ಅದೂ ಅಂತಿಂಥ ಮಾರುಕಟ್ಟೆಯಲ್ಲ. ಇಡೀ ಪ್ರಪಂಚದಲ್ಲಿ ಅತ್ಯಪಾರ ಬೇಡಿಕೆಯಿರುವ ಮಾರುಕಟ್ಟೆಯನ್ನು.

    ಹಾಗಾಗಿ ಕರೋನ ಸೋಂಕಿನ ಶುರುವಾತಿನೊಂದಿಗೇ ಕರೋನ ಲಸಿಕೆಗೂ ಬೇಡಿಕೆ ಹುಟ್ಟಿಕೊಂಡಿತು. ಸ್ಪರ್ಧೆಯೂ ಶುರುವಾಯಿತು. ಲಸಿಕೆಯನ್ನು ಕಂಡುಹಿಡಿಯಲು ಒಂದಷ್ಟು ದೇಶಗಳು ಸ್ಪರ್ಧಿಸಿದರೆ, ಅತ್ಯಂತ ಕಡಿಮೆ ವೆಚ್ಚದಲ್ಲಿ  ಮತ್ತು ಅತ್ಯಂತ ವೇಗವಾಗಿ ಅವುಗಳನ್ನು ತಯಾರಿಸಲು ಉತ್ಪಾದನೆಗೆಂದೇ ಪ್ರಸಿದ್ದವಾದ ದೇಶಗಳು ಒಬ್ಬರ ಮೇಲೊಬ್ಬರು ಮುಗಿಬಿದ್ದು ಸೆಣೆಸುತ್ತಿದ್ದಾರೆ. ಪ್ರಪಂಚದ ಕರೋನ ಸಾವಿನ ಸಂಖ್ಯೆ 483959 ಮೀರಿ ಬೆಳೆಯುತ್ತಿದೆ.9.39 ಮಿಲಿಯನ್ ಗೂ ಹೆಚ್ಚಿನ ಜನ ಸೋಂಕಿತರಾಗಿದ್ದಾರೆ. ಆದರೆ ಇದಕ್ಕೆ ಬೇಕಾದ ಉತ್ತಮ ಗುಣಮಟ್ಟದ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎನ್ನುವ ಪ್ರಶ್ನೆ ಸಧ್ಯಕ್ಕೆ ಇನ್ನೂ ಉಳಿದಿದೆ.

    ವ್ಯಾಕ್ಸಿನ್ ಡೆವೆಲಪ್ ಮೆಂಟ್ ಎನ್ನವುದು ಅಷ್ಟೊಂದು ಸುಲಭದ ಕೆಲಸವೇ?

    ನೂರಾರು ಕಾಯಿಲೆಗಳಿಗೆ ವ್ಯಾಕ್ಸಿನ್ ತಯಾರಿಸಲು ಪ್ರಪಂಚದಲ್ಲಿಸದಾಪ್ರಯತ್ನ ಮತ್ತು ಪ್ರಯೋಗಗಳು ನಡೆಯುತ್ತಲೇ ಇರುತ್ತದೆ.ಇದಕ್ಕೆ ನೂರಾರು ಕೋಟ್ಯಂತರ ರೂಪಾಯಿಗಳ ಹಣವನ್ನು ಹೂಡಬೇಕಾಗುತ್ತದೆ. ಆದರೆ ಯಶಸ್ಸು ಸಿಗುವುದು ಬಹಳ ಕಡಿಮೆ ಬಾರಿ. ಕೊನೆಗೆ ಬೆರಳೆಣಿಕೆಯಷ್ಟೇ  ವ್ಯಾಕ್ಸಿನ್ ಗಳು ಉತ್ಪಾದನೆಯ ಮಟ್ಟದ ಪರವಾನಗಿ ಪಡೆದು ಸಾಮಾನ್ಯ ಜನರಿಗೆ ಲಭ್ಯವಾಗುತ್ತವೆ.ಅಂತಹ ಲಸಿಕೆಗಳು ಒಂದೇ ರೂಪದಲ್ಲಿರುವುದಿಲ್ಲ. ಕಾಲ ಕಳೆದಂತೆಲ್ಲ ಬದಲಾಗುವ ವೈರಾಣುಗಳ ರೂಪಕ್ಕೆ ಹೊಂದುವಂತೆ ಅವುಗಳ ಸ್ವರೂಪವನ್ನೂ ಬದಲು ಮಾಡಲು ಸಾಧ್ಯವಿರಬೇಕಾಗುತ್ತದೆ.ಶ್ರೇಣೀಕೃತ ಉತ್ಪಾದನೆಯನ್ನು ಕಾದಿರಿಸಬೇಕಾಗುತ್ತದೆ.

    ಹಾಗಾಗಿ ಇದು ಸುಲಭವಲ್ಲ. ಪ್ರತಿಬಾರಿ ಲಸಿಕೆಯೊಂದನ್ನು ಕಂಡುಹಿಡಿದಾಗಲೂ ಮನುಕುಲವನ್ನು ಮಾರಣಹೋಮದಿಂದ ರಕ್ಷಿಸಿದ ದೊಡ್ಡ ಸಾಧನೆಯಾಗುತ್ತದೆ..ಜೊತೆಗೆ ಊಹೆಗೂ ನಿಲುಕದಷ್ಟು ಹಣ ಇದರಲ್ಲಿದೆ.ಹಾಗಾಗಿ ರಾಜಕೀಯದ ಜೊತೆ ಪ್ರಪಂಚವೇ ಇದರಲ್ಲಿ ಬೆರೆಯುತ್ತದೆ.

    ಲಸಿಕೆಯನ್ನು ಕಂಡುಹಿಡಿಯುವಾಗ ಸಾಮಾನ್ಯವಾಗಿ ಪ್ರಿ-ಕ್ಲಿನಿಕಲ್ ಮತ್ತು ನಂತರದ ಕ್ಲಿನಿಕಲ್ ಎಂಬ ಘಟ್ಟಗಳಿರುತ್ತವೆ. ಅವುಗಳಲ್ಲಿಯೂ ಹಲವುಹಂತಗಳಿರುತ್ತವೆ.ಪ್ರಿ-ಕ್ಲಿನಿಕಲ್ ಹಂತದಲ್ಲಿ ಇತರ ಹಂತಗಳ ಜೊತೆ ಟೆಸ್ಟ್ ಟ್ಯೂಬ್ ಗಳಲ್ಲಿ ಮತ್ತು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಹಂತಗಳಿವೆ. ಮುಂದಿನ ಹಂತದಲ್ಲಿ ಅದನ್ನು ಕೆಲವೇ ಕೆಲವರು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದರಲ್ಲೂ ಹಲವು ಹಂತಗಳಿದ್ದು ಇದು ಮುಗಿಯಲು ಹಲವು ವರ್ಷಗಳ ಕಾಲ ಬೇಕಾಗುತ್ತದೆ.ಈ ಪ್ರಯೋಗದ ಎಲ್ಲ ಹಂತಗಳಲ್ಲಿಅತ್ಯಂತ ನೈತಿಕವಾದ ಮತ್ತು  ಕಟ್ಟು ನಿಟ್ಟಾದ ನಿಯಮಗಳನ್ನು ಪಾಲಿಸಲಾಗುತ್ತದೆ. ಆಯ್ಕೆ ಮಾಡಿದ ಜನರಿಂದ ಮಾಹಿತಿಪೂರ್ಣ ಒಪ್ಪಿಗೆಯನ್ನು (informed consent) ಪಡೆಯಬೇಕಾಗುತ್ತದೆ. ಪ್ರಪಂಚದ ಬಹುತೇಕ ದೇಶಗಳು ಈ ಘಟ್ಟದಲ್ಲಿವೆ.

    ಒಂದೇ ವ್ಯಾಕ್ಸಿನ್ ಎಲ್ಲ ಜನರ ಮೇಲೆ ಕೆಲಸ ಮಾಡುತ್ತದೆಯೇ ಇಲ್ಲವೇ ಎನ್ನುವ ಬಗ್ಗೆಯೂ ಖಾತರಿ ಬೇಕಾಗುತ್ತದೆ. ಹೀಗಾಗಿ ಎರಡನೇ ಘಟ್ಟದಲ್ಲಿ ಕ್ಲಿನಿಕಲ್ ಹಂತದ ಮೊದಲ ಹೆಜ್ಜೆಯಾಗಿ ಕೆಲವೊಮ್ಮೆ (ಉದಾಹರಣೆಗೆ- ಬಡ ದೇಶದ  ಕಾಯಿಲೆಗಳು)  ಹಲವು ದೇಶ ಮತ್ತು ಜನಾಂಗದ ಮೇಲೆ ಇದನ್ನು ಪರೀಕ್ಷಿಸಬೇಕಾಗುತ್ತದೆ.

    ಎರಡನೇ ಹಂತದಲ್ಲಿ ಕೃತಕವಾಗಿ ಸೋಂಕನ್ನು ನೀಡಿ ಈ ಲಸಿಕೆ ಅದಕ್ಕೆ ವಿರುದ್ಧವಾಗಿ  ಕೆಲಸಮಾಡಬಲ್ಲದೇ ಎಂದು ಅಳೆಯಬೇಕಾಗುತ್ತದೆ. ನೂರಾರು ಜನರಲ್ಲಿ ಅದರ ಪರಿಣಾಮಗಳು, ಲಕ್ಷಣಗಳು, ರೋಗ ನಿರೋಧಕ ಶಕ್ತಿ ಇತ್ಯಾದಿಗಳನ್ನು ಅಳೆಯಬೇಕಾಗುತ್ತದೆ. ಇವೆರಡೂ ಹಂತದಲ್ಲಿ ಲಸಿಕೆಯಿಂದ ಅಪಾಯ ಇಲ್ಲ ಎಂದಾದರೆ ಮೂರನೆಯ ಹಂತ ತಲುಪುತ್ತಾರೆ.

    ಮೂರನೇ ಹಂತ ಇನ್ನೂ ದೊಡ್ಡದು.ಈ ಮೂರನೆಯ ಹಂತದಲ್ಲಿ ಸಾವಿರಾರು ಜನರ ಮೇಲೆ ಲಸಿಕೆಯ ಪ್ರಯೋಗ ನಡೆಸಬೇಕಾಗುತ್ತದೆ.ಆದರೆ ಇದನ್ನು ಹಲವು ಜಾಗಗಳಲ್ಲಿ ಮಾಡಬೇಕಾಗುತ್ತದೆ. ಅಲ್ಲಿನ ಜನರಿಗಿರುವ ಹಲವು ಕಾಯಿಲೆಗಳು, ದೇಹ ಪ್ರಕೃತಿ, ಪರಿಸರಗಳಲ್ಲಿ ಇದೇ ಲಸಿಕೆ ಕೆಲಸ ಮಾಡುತ್ತದೆಯೇ ಎಂದು ಅಳೆಯಬೇಕಾಗುತ್ತದೆ.ಅದನ್ನು ದೀರ್ಘಾವಧಿಯಲ್ಲಿ ಮತ್ತೆ ಮತ್ತೆ ಪರೀಕ್ಷೆ ಮಾಡಬೇಕಾಗುತ್ತದೆ. ಲಸಿಕೆ ಈ ನಿಗದಿತ ಸಮಯದಲ್ಲಿ ತನ್ನ ಕಾರ್ಯ ಕ್ಷಮತೆಯನ್ನು ಉಳಿಸಿಕೊಂಡು ಯಾವುದೇ ದುಷ್ಪರಿಣಾಮಗಳಿಂದ ಮುಕ್ತವಾಗಿದ್ದರೆ ಮಾತ್ರ ಅದಕ್ಕೆ ಮಾರಾಟದ ಪರವಾನಗಿ ಸಿಕ್ಕು ಅದು ಸಾರ್ವಜನಿಕರ ಬಳಕೆಗ ಲಭ್ಯವಾಗುತ್ತದೆ.

    ಇದಾದ ನಂತರ ಅದು ಕ್ಲಿನಿಕಲ್ಘಟ್ಟದನಾಲ್ಕನೆಯಹಂತವನ್ನು ಪ್ರವೇಶಿಸುತ್ತದೆ. ಅದನ್ನು post-marketing surveillance ಎಂದು ಕರೆಯುತ್ತಾರೆ. ಅಕಸ್ಮಾತ್ತಾಗಿ  ವಿರಳವಾಗಿ ಆಗಬಹುದಾದ ಕೆಲವು ದುಷ್ಪರಿಣಾಮಗಳನ್ನು ಮತ್ತು ದೀರ್ಘಾವಧಿಯಲ್ಲಿ ಕಾಣಿಸಿಕೊಳ್ಳುವ ಪರಿಣಾಮಗಳನ್ನು ಈ ಹಂತದಲ್ಲಿ ಅಳೆಯಲಾಗುತ್ತದೆ.ಇದಕ್ಕೆಲ್ಲ ಹಲವು ವರ್ಷಗಳೇ ಬೇಕಾಗುತ್ತದೆ.ಬೆರಳೆಣಿಕೆಯಷ್ಟು  ದೇಶಗಳು ಎರಡನೇ ಘಟ್ಟದ ಮೊದಲ ಹಂತಗಳನ್ನು ತಲುಪಿದ್ದಾರೆ.

    ಕರೋನ ವೈರಸ್ ಅಧಿಕೃತವಾಗಿ ದಾಖಲಾದ್ದು 6 ತಿಂಗಳ ಹಿಂದೆ. ಅವುಗಳಲ್ಲಿಈಗಾಗಲೇMERS-CoV (MERS), SARS-CoV, (SARS), SARS-CoV-2, (COVID-19 )  ಎನ್ನುವ ದೊಡ್ಡ ಪಂಗಡಗಳನ್ನು ಮತ್ತು229E (alpha), NL63 (alpha),OC43 (beta),HKU1 (beta) ಎನ್ನುವ ಉಪಪಂಗಡಗಳನ್ನೂ ಗುರುತಿಸಲಾಗಿದೆ. ಇನ್ನೂ ಹಲವು ಸೂಕ್ಷ್ಮ ಬದಲಾವಣೆಗಳ ಜೊತೆಗೆ ಮತ್ತೂ ಹಲವು ಸ್ವರೂಪದ ಕೋವಿಡ್ ವೈರಸ್ಸುಗಳನ್ನು ವಿಂಗಡಿಸಬಹುದು. ಆದರೆ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿರುವುದು ಮನುಷ್ಯರನ್ನು ಸಾಮಾನ್ಯವಾಗಿ ಕಾಡಿರುವ, SARS-CoV-2, (COVID-19) ಗಾಗಿ.

    ಕೋವಿಡ್-19 ಕ್ಕೆ ಲಸಿಕೆಯನ್ನು ಕಂಡುಹಿಡಿಯಲು ಹಲವು ದೇಶಗಳ ಒಟ್ಟು 80 ಜೈವಿಕ ವಿಜ್ಞಾನ ಸಂಸ್ಥೆಗಳು ಸೆಣೆಸುತ್ತಿವೆ.ಪ್ರತಿ  ಸಂಸ್ಥೆ  ಭಿನ್ನವಾದ ರೀತಿಯಲ್ಲಿ ಕೋವಿಡ್ ವೈರಸ್ಸನ್ನು ನಿಷ್ಪಲಗೊಳಿಸುವ ದಾರಿಗಳನ್ನು ಹುಡುಕುತ್ತಿದ್ದಾರೆ.ಅಂದರೆ ಯಾವ ವಿಧಾನ ಅತ್ಯಂತ ಫಲಪ್ರದ ಎನ್ನುವುದರ ಮೇಲೆ ಲಸಿಕೆಯ ಯಶಸ್ಸು ನಿರ್ಧಾರವಾಗುತ್ತದೆ.

    ಕೋವಿಡ್-19 ರ ಮೇಲೆ ಕೆಲಸ ಮಾಡಬಲ್ಲ ಲಸಿಕೆಯ ಸೃಷ್ಟಿಯನ್ನು ತಯಾರು ಮಾಡಲು  ಎಷ್ಟು ಸಮಯ ಬೇಕಾಗಬಹುದು?

    ಸಧ್ಯಕ್ಕೆ ಇದೊಂದು ಯಕ್ಷಪ್ರಶ್ನೆ. ಪ್ರತಿಯೊಂದು ಸಂಸ್ಥೆಯೂ ತಾವೇ ಮೊದಲು ಕಂಡುಹಿಡಿಯುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ.

    ಈ ವೈರಸ್ಸಿನ ತಳಿವಿಜ್ಞಾನದ  ಅನುಕ್ರಮವನ್ನು ಪ್ರಕಟಿಸಿದ್ದು 11 ಜನವರಿ 2020 ರಲ್ಲಿ. ಇದನ್ನು ಈ ಜೆನೆಟಿಕ್ ಮ್ಯಾಪ್ ಅನ್ನು ಅತ್ಯಂತ ತ್ವರಿತವಾಗಿ ಬರೆದದ್ದು ಚೈನಾ ದೇಶ.ಅಷ್ಟೇ ಅಲ್ಲದೆ ಅದನ್ನು ವಿಶ್ವದ ಇತರೆ ದೇಶಗಳೊಂದಿಗೆ ಹಂಚಿಕೊಂಡಿತು.

    ಇದರಿಂದಾಗಿ ಲಸಿಕೆಯನ್ನು ಸೃಷ್ಟಿಸುವ ಕಾರ್ಯ ತಟ್ಟನೆ ಶುರುವಾಯಿತು. ಅತ್ಯಂತ ಕಟ್ಟು ನಿಟ್ಟಾದ ನಿಯಮಗಳನ್ನು ಪಾಲಿಸುವ ದೇಶಗಳು ಕೂಡ  ಸಾಂಪ್ರದಾಯಿಕವಾದ ಹಲವು ಘಟ್ಟಗಳನ್ನು ಗಾಳಿಗೆ ತೂರಿ ನಾಗಾಲೋಟದಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲು ತಯಾರಾದವು. 16ಮಾರ್ಚ್ ವೇಳೆಗಾಗಲೇ ಮನುಷ್ಯನ ಮೇಲೆ ಲಸಿಕೆಯ ಮೊದಲ ಪ್ರಯೋಗ ನಡೆಯಿತು.ಅಂದರೆ, ವರ್ಷವಾದರೂ ಬೇಕಿದ್ದ ಹಂತಗಳನ್ನು ಅತಿಕ್ರಮಿಸಿ ಕೇವಲ 65 ದಿನಗಳಲ್ಲಿ ಈ ಹಂತವನ್ನು ತಲುಪಲಾಯಿತು. ಸಣ್ಣ ಪ್ರಮಾಣದಲ್ಲಿ ಮನುಷ್ಯನ ಮೇಲೆ ಲಸಿಕೆಯನ್ನು ಮೊದಲು ಪ್ರಯೋಗ ಮಾಡಿದ್ದು ಅಮೆರಿಕಾದ ಬೋಸ್ಟನ್ ನಗರದ ಮಾಡರ್ನ ಕಂಪನಿ.ಇದಕ್ಕೆ ಹಣ ಹೂಡಿದ್ದು The Coalition for Epidemic Preparedness Innovations (CEPI).ಇವರೊಡನೆ  ಅಮೆರಿಕಾದ ಇನ್ನೂ ನಾಲ್ಕು ಕಂಪನಿಗಳ ಪೈಪೋಟಿಯಲ್ಲಿವೆ. ಇಂಗ್ಲೆಂಡಿನ ಆಕ್ಸ್ ಫರ್ಡ್ ಕೂಡ ಈ ಹಂತವನ್ನು ತಲುಪಿದೆ. ಬೇರೆಯ ಹಲವು ಸಂಸ್ಥೆಗಳೂ ತಮ್ಮ ಚಟುವಟಿಕೆ ನಡೆಸುತ್ತಿದ್ದಾರೆ. ಆಸ್ಟ್ರೇಲಿಯ,ರಷಿಯ, ಚೈನ ಮತ್ತು ಇತರೆ ದೇಶಗಳು ಕೂಡ ಸ್ಪರ್ಧಿಸುತ್ತಿವೆ.

    ಶೇಕಡಾವಾರು ಲೆಕ್ಕದಲ್ಲಿ ಲಸಿಕೆ ತಯಾರಿಯ ಚಟುವಟಿಕೆ  ಉತ್ತರ ಅಮೆರಿಕಾದಲ್ಲಿ 46%, ಚೈನಾ, ಆಸ್ಟ್ರೇಲಿಯಾ ಮತ್ತು ಯೂರೋಪಿನಲ್ಲಿ18% ನಷ್ಟಿದೆ.ಇವರೆಲ್ಲ ಸಣ್ಣ ಪ್ರಮಾಣದಲ್ಲಿ ಮನುಷ್ಯರ  ಮೇಲೆ ಪ್ರಯೋಗ ಶುರುಮಾಡಿದ್ದಾರೆ.ಸದ್ಯಕ್ಕೆ19 ದೇಶಗಳು ಮಂಚೂಣಿಯಲ್ಲಿವೆ. ಇವರಲ್ಲಿ ಯಾರೇ ಗೆದ್ದರೂ ಮನಕುಲಕ್ಕಂತೂ ಉಪಯೋಗವಾಗುತ್ತದೆ. ಶಾರ್ಟ್ ಕಟ್ ಹಾದಿಯಲ್ಲಿ ಅತ್ಯಂತ ತ್ವರಿತ ಗತಿಯಲ್ಲಿ ಇವರಲ್ಲಿ ಯಾರಾದರೂ ಯಶಸ್ವಿಯಾದರೆ ಮುಂದಿನ ವರ್ಷದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಸಿಗಬಹುದೆಂಬ ಆಶಯವಿದೆ.ಆದರೆ ಈ ವರ್ಷವೇ ತಾವಿದನ್ನು ಬಿಡುಗಡೆ ಮಾಡುತ್ತೇವೆಂದು ಹಲವು ಕಂಪನಿಗಳು ಭರವಸೆ ಕೊಡುತ್ತಿವೆ. ಇವುಗಳ ಜೊತೆಗೆ ಕರೋನಾವನ್ನು ಭಾಗಶಃ ತಡೆಗಟ್ಟಲು ನಮ್ಮ ಔಷದಗಳು  ಉಪಯುಕ್ತ ಎನ್ನುವ ತೃತೀಯ ಮಾರುಕಟ್ಟೆಗಳು ಈಗಾಗಲೇ ಹಣ ಮಾಡುತ್ತಿದ್ದಾರೆ.

    ಸಾಂಪ್ರದಾಯಕ ಹಾದಿಯಲ್ಲಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲು ಸುಮಾರು ಹತ್ತು ವರ್ಷಗಳು ಬೇಕು. ತ್ವರಿತವಾಗಿ ಎಂದರೂ ಎಬೋಲ ಲಸಿಕೆಗೆ ಐದು ವರ್ಷಗಳು ಅಗತ್ಯಬಿತ್ತು.(2014-2019) ಆದರೆ ಕರೋನ ವೈರಸ್ಸಿನ ಲಸಿಕೆಯ ತಯಾರಿಕೆಯ ವೇಗ ಪ್ರಪಂಚದ ಎಲ್ಲ ಕಟ್ಟಲೆಗಳನ್ನು ಮುರಿದಿದೆ. ಕರೋನ ಲಸಿಕೆಯ ತಯಾರಿಗೆ ಒಂದರಿಂದ-ಒಂದೂವರೆ ವರ್ಷ ಸಾಕೇ ಎಂಬ ವಿಚಾರ ಎಲ್ಲರ ಹುಬ್ಬೇರಿಸಿದೆ. ಮನುಷ್ಯನ ಇತಿಹಾಸದಲ್ಲೇ ಇಂತಹ ವೇಗ ಹಿಂದೆಂದೂ ದಾಖಲಾಗಿಲ್ಲ.

    ಕೋವಿಡ್ ಲಸಿಕೆಯೊಂದರ ತಯಾರಿಕೆ ಅತ್ಯಂತ ಕಷ್ಟವಾದ್ದು.ಏಕೆಂದರೆ ಸ್ಪರ್ಧೆ ಇರುವುದು ಅಂತರರಾಷ್ಟ್ರೀಯ  ಸಂಸ್ಥೆಗಳ ನಡುವೆ ಮಾತ್ರವಲ್ಲ. ಕೋವಿಡ್-19 ವೈರಸ್ಸಿನ ಜೊತೆಗೆ ಕೂಡ ಸೆಣೆಸಬೇಕಿದೆ. ಕರೋನ ಅಲೆಗಳೋಪಾದಿಯಲ್ಲಿ ಬರುವ ಸೋಂಕು. ಈಗಾಗಲೇ ಹಲವು ದೇಶಗಳು ಎರಡನೆಯ ಅಲೆಯನ್ನು ಎದುರಿಸುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಕಾಯುವುದಾದರೆ ಈ ವೈರಸ್ಸಿನ ವೇಗದೊಡನೆ ಸೆಣಸಿ ಲಸಿಕೆಯನ್ನು ಕಂಡುಹಿಡಿಯಲು ಸಾದ್ಯವಾಗುವುದಿಲ್ಲ. ಪೂರ್ಣವಾಗುವ ಮುನ್ನವೇ ಪ್ರಯೋಗಕ್ಕೆ ಬೇಕಾದಷ್ಟು ಸೋಂಕಿತ ಜನರನ್ನು ಹೊಂದಿಸುವುದು ದುಸ್ಸಾಧ್ಯವಾಗುತ್ತದೆ.

    ಹಿಂದೆಂದೂ ಇಲ್ಲದ ರೀತಿಯಲ್ಲಿ ಹುಟ್ಟಿಕೊಂಡು ಬೆಳೆಯುತ್ತಿರುವ ಶರ ವೇಗದ ವ್ಯಾಕ್ಸಿನ್ ತಯಾರಿಕೆ ಹೊಸ ಮಾರ್ಗ ದರ್ಶಿಕೆಗಳು ಹಲವರಿಗೆ ಒಗ್ಗಿ ಬರುತ್ತಿಲ್ಲ. ಉಪಯೋಗಿಸಲ್ಪಡುತ್ತಿರುವ ಟೆಕ್ನಾಲಜಿಯೂ ಅತ್ಯಂತ ಹೊಸತು. ಬೇಗನೆ ವ್ಯಾಕ್ಸಿನ್ ತಯಾರುಮಾಡುವ ಒತ್ತಡದಲ್ಲ ಆಗುವ ತಪ್ಪುಗಳು ಜಾಸ್ತಿ ಎನ್ನುವ ಎಚ್ಚರಿಕೆಯ ಗಂಟೆಯನ್ನ ಕಟ್ಟಿಕೊಂಡೇ ವಿಜ್ಞಾನಿಗಳು ಕೆಲಸ ಆರಂಭಿಸಿದ್ದಾರೆ. ಆದರೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಮಾನಿಗಳ ಮೆಚ್ಚುಗೆಗಾಗಿ ಕರೋನ ವ್ಯಾಕ್ಸಿನ್ಖರಾರುವಕ್ಕಾಗಿ ಅಮೆರಿಕಾದ ನವೆಂಬರಿನ ಎಲೆಕ್ಷನ್ ವೇಳೆಗೆ  ತಯಾರಿರುತ್ತದೆ ಎಂದು ಹೇಳಿಕೆ ನೀಡಿದ್ದು ಇದೀಗ ಇತಿಹಾಸದ ಮತ್ತೊಂದು ಹಾಸ್ಯಾಸ್ಪದ ಸಂಗತಿಯಾಗಿ ದಾಖಲಾಗಿದೆ!

    ಅಂತಾರಾಷ್ಟ್ರೀಯ ಸಹಕಾರ, ಪಾಲಿಸಿ ಮೇಕರ್ ಗಳ ನಡುವಿನ ಹೊಂದಾಣಿಕೆ, ಹಣ ಹೂಡುವ ಜನ,ಆಯಾ ದೇಶ ಮತ್ತು ವಿದೇಶಗಳ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಭಿನ್ನ ಸರಕಾರಗಳು ಒತ್ತಟ್ಟಿಗೆ ಬಂದು ಕೆಲಸಮಾಡದಿದ್ದರೆ ಮತ್ತು ಲಸಿಕೆಯೊಂದರ ತಯಾರಿಯಲ್ಲಿ  ನಡೆಯುವ ರಾಜಕೀಯವನ್ನು ದೂರವಿಡದಿದ್ದರೆ ಕರೋನ ವೈರಸ್ ಗೆ ಲಸಿಕೆ ತಯಾರಿಸುವುದು ಸುಲಭವಲ್ಲ ಎನ್ನುವ ವಾಸ್ತವ ಎಲ್ಲರನ್ನೂ ಬಲವಾಗಿ ತಟ್ಟಿದೆ.ಇದೆಷ್ಟು ಕಷ್ಟವನ್ನು ತಂದೊಡ್ಡಿದೆಯೆಂದರೆ ಲಸಿಕೆ ತಯಾರಿಕೆಗೆ ಹೂಡಿದ್ದ ಹಣವೆಲ್ಲ ಪ್ರಯೋಜನಕ್ಕೇ ಬರದೆ ನಷ್ಟವನ್ನು ತಂದೊಡಿದ್ದರೂ ಸ್ಪರ್ಧೆಗೆ ಇಳಿದಿದ್ದ ಹಲವು ಕಂಪನಿಗಳು ಈಗಾಗಲೇ ಸೋಲೊಪ್ಪಿಕೊಂಡು ಹಿಂತೆಗೆದಿದ್ದಾರೆ.ಮನುಷ್ಯರ ಮೇಲಿನ ಪ್ರಯೋಗದ ಹಂತದಲ್ಲಿ ಎಡವುವ ಕುದುರೆಗಳೇ ಅಧಿಕ.ಈ ಕುದುರೆಗಳ ರೇಸಿನಲ್ಲಿ ಎಲ್ಲವೂ ಗುರಿಯವರೆಗೆ ಓಡದಿರುವ ಸಾಧ್ಯತೆಗಳೇ ಹೆಚ್ಚು.

    ಹಾಗಿದ್ದೂ ಇದಕ್ಕಾಗಿ ಸ್ಪರ್ಧೆಯೇ ನಡೆಯುತ್ತಿರುವಾಗ ಇದರಲ್ಲಿ ಎಷ್ಟು ಹಣವಿರಬಹುದು?

    ಅಮೆರಿಕಾದಲ್ಲಿ ಮಂಚೂಣಿಯಲ್ಲಿರುವ ಮಾಡರ್ನ್ ಕಂಪೆನಿ ಎರಡನೇ ಘಟ್ಟವನ್ನು ತಲುಪುತ್ತಿದ್ದಂತೆ ಅದೇ ಕಂಪನಿ ರೇಸಿನಲ್ಲಿ ಗೆಲ್ಲುತ್ತದೆ ಎಂಬಂಥ ಉತ್ಪ್ರೇಕ್ಷಿತ ವಾತಾವರಣ ಸೃಷ್ಟಿಯಾಯ್ತು.ಅದು ತನ್ನ ಪ್ರಗತಿಯನ್ನು ಸಾರ್ವಜನಿಕವಾಗಿ ತಿಳಿಸಿದ ಒಂದೆರೆಡೇ ಗಂಟೆಗಳಲ್ಲಿ  17.6 ಮಿಲಿಯನ್ ಡಾಲರುಗಳಷ್ಟು ಮೊತ್ತದ ಶೇರುಗಳ ಮಾರಾಟವಾಯ್ತು.ಇದುವರೆಗೆ ಈ ಕಂಪನಿ 1.3 ಬಿಲಿಯನ್ ಡಾಲರ್ ಗಳಷ್ಟು ಶೇರುಗಳನ್ನು ಮಾರಿದೆ. ಈ ಕಂಪನಿಯ ಟಾಲ್ ಝ್ಯಾಕ್ ಮತ್ತು ಲಾರೆನ್ಸ್ ಕಿಮ್ ಎಂಬ ಬರೇ ಇಬ್ಬರು ಎಕ್ಸೆಕ್ಯೂಟಿವ್ ಮೆಡಿಕಲ್ ಆಫೀಸರುಗಳು  ಒಟ್ಟು 30 ಮಿಲಿಯನ್ ಮೊತ್ತದ ಶೇರುಗಳನ್ನು ಮಾರಿಕೊಂಡಿದ್ದಾರೆ.

    ಇಂಗ್ಲೆಂಡಿನಲ್ಲಿ ಮಂಚೂಣಿಯಲ್ಲಿರುವ ಆಕ್ಸಫರ್ಡ್ ಗೆ ಸರ್ಕಾರ 43 ಮಿಲಿಯನ್  ಪೌಂಡುಗಳನ್ನು ಹೂಡಿದೆ. ಇದರ  ಫಲಿತಾಂಶದ ಮೇಲೆ ಅಪಾರ ಭರವಸೆಯನ್ನಿಟ್ಟಿರುವ ಭಾರತದ ಉತ್ಪಾದಕ ಕಂಪನಿಯೊಂದು ಲಸಿಕೆಯ ತಯಾರಿ ಪೂರ್ಣವಾಗಿಲ್ಲದಿದ್ದರೂ ಈಗಾಗಲೇ ಲಸಿಕೆಯನ್ನು ಉತ್ಪಾದಿಸಿ ತಯಾರಿಟ್ಟುಕೊಂಡು ಅಧಿಕೃತ ಫಲಿತಾಂಶ ಹೊರಬೀಳಲು ಕಾಯುತ್ತಿದೆ ಎಂಬ ವದಂತಿಯಿದೆ. ಅಕಸ್ಮಾತ್ ಋಣಾತ್ಮಕ ಫಲಿತಾಂಶ ಬಂದರೆ ಅದೆಲ್ಲವನ್ನೂ ನಾಶಪಡಿಸಲು ತಯಾರಿದೆ ಎಂದರೆ ಇದರಲ್ಲಿರುವ ಹಣದ ಕಲ್ಪಿತ ಅಂದಾಜು ಸಿಗಬಹುದು.

     ಇದೇ ತಿಂಗಳ 4-5, ಜೂನ್ ರಂದು ಲಂಡನ್ನಿನಲ್ಲಿ ಇದಕ್ಕಾಗಿ ಒಂದು ಲಸಿಕೆಗಳ ಗ್ಲೋಬಲ್ ಸಮ್ಮಿಟ್ ನಡೆಯಿತು.ಯುನೈಟೆಡ್ ಕಿಂಗ್ಡಮ್ಮಿನ ಪ್ರಧಾನಿ ಬೋರಿಸ್ ಜಾನ್ಸನ್ನನ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ’ವೇಗ ’,’ಗ್ಲೋಬಲ್ ಮಟ್ಟದ ಉತ್ಪಾದನೆ ’ ಮತ್ತು  ’ಇಡೀ ಪ್ರಪಂಚಕ್ಕೆ ಅದರ ಸರಬರಾಜು ’ ಈ ಮೂರು ಅಂಶಗಳನ್ನು ಸಾಧಿಸಲು ಎಲ್ಲ ದೇಶಗಳು ಹಣ ಹೂಡಿ, ಪ್ರಯತ್ನಪಟ್ಟು ಮತ್ತು ಹಂಚಿಕೊಳ್ಳುವುದಕ್ಕೆ ಒಪ್ಪಿ ಒಗ್ಗೂಡಿಕೆಲಸ ಮಾಡಬೇಕೆಂದು ಒತ್ತಾಯ ಹೇರಲಾಯ್ತು.

    ಇಲ್ಲಿ ಸೇರಿದ್ದ ನಾಯಕರು,52 ಸಂಸ್ಥೆಗಳ ಮುಖ್ಯಸ್ಥರು ಅಂತರ ರಾಷ್ಟ್ರೀಯ  ಲಸಿಕೆ ಕಾರ್ಯಕ್ರಮಗಳ ಮುಂದಾಳತ್ವ ವಹಿಸುವ ಗ್ಯಾವಿ ( Gavi, the vaccine alliance) ಎನ್ನುವ ಸಂಸ್ಥೆ ಗೆ 8.8 ಬಿಲಿಯನ್ ಡಾಲರುಗಳನ್ನು ನೀಡಲು ಒಪ್ಪಿವೆ. ಇದರಿಂದ ಮುಂದಿನ ಐದು ವರ್ಷಗಳಲ್ಲ 8 ಮಿಲಿಯನ್ ಜನರ ಬದುಕನ್ನು ಉಳಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.

    ಸ್ವಿಟ್ಜ್ ರ್ ಲ್ಯಾಂಡಿನ ಜಿನೀವ ನಗರದಲ್ಲಿ ಮುಖ್ಯ ಕಚೇರಿ ಹೊಂದಿರುವ GAVI (Global Alliance for Vaccines and Immunization)  WHO ಗಿಂತ ಹೆಚ್ಚು ನಂಬಿಕೆಯನ್ನು ಉಳಿಸಿಕೊಂಡ ಸಂಸ್ಥೆಯಾಗಿದೆ. ಇದೇ ಸಮಯದಲ್ಲಿ ಕರೋನದ ಅಬ್ಬರದಲ್ಲಿ ನಿಂತೇ ಹೋಗಿದ್ದ ಇತರೆ ಮಹಾಮಾರಿಗಳ ಲಸಿಕೆ ಕಾರ್ಯಕ್ರಮಕ್ಕೆ ಮತ್ತೆ ಜೀವ ತುಂಬಲು 300 ಮಿಲಿಯನ್ ಡಾಲರ್ ಗಳನ್ನು ಕಾದಿರಿಸಿದೆ.ಇದರಿಂದ ಪ್ರಪಂಚದ 50% ಮಕ್ಕಳಿಗೆ ಒಳಿತಾಗಲಿದೆ.ಜೂನ್ 7ರಂದು ಚೈನಾ ತಾನು ಮೊದಲಿಗೆ ಲಸಿಕೆಯನ್ನು ಕಂಡುಹಿಡಿಯುವುದಾದರೆ ಅದನ್ನು ಪ್ರಪಂಚದ ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆಂಬ ಹೇಳಿಕೆ ನೀಡಿತು.

    ಇಷ್ಟೆಲ್ಲ ಪ್ರಯತ್ನಕ್ಕೆ ಮಹತ್ತರ ಕಾರಣಗಳಿವೆ

    2009 ರಲ್ಲಿ H1N1 ಗೆ ಲಸಿಕೆಯೊಂದು ದೊರೆಯುವಂತಾದಾಗ ಪ್ರಪಂಚದ ಸಿರಿವಂತ ದೇಶಗಳು ತಟ್ಟನೆ ಲಸಿಕೆಗಳನ್ನು ಖರೀದಿಸಿಬಿಟ್ಟವು. ಕೊಳ್ಳುವ ಬಲವಿರದ ಬಡ ದೇಶದ ಪ್ರಜೆಗಳಿಗೆ ಇದು ದೊರೆಯುವುದು ಬಹಳ ನಿಧಾನವಾಯಿತು. ಭಾರತಕ್ಕೆ ಇಡೀ ಪ್ರಪಂಚಕ್ಕೆ ಅತಿ ಕಡಿಮೆ ದರದಲ್ಲಿ ಮತ್ತು ಅತಿ ವೇಗವಾಗಿ ಲಸಿಕೆಯನ್ನು ತಯಾರಿಸಿಕೊಡಬಲ್ಲ ಸಾಮರ್ಥ್ಯವಿದೆ. ಅದೇನಾದರೂ ಮೊದಲಿಗೆ ತನ್ನ 1.37 ಬಿಲಿಯನ್ ಪ್ರಜೆಗಳಿಗೆ ಲಸಿಕೆ ಹಾಕುವ ನಿರ್ದಾರ ತೆಗೆದುಕೊಂಡಲ್ಲಿ ಇತರೆ ರಾಷ್ಟ್ರಗಳು ಬಹುಕಾಲ ಕಾಯಬೇಕಾಗುತ್ತದೆ.

    ಲಸಿಕೆಗಳು ಕೋವಿಡ್ ನಂತಹ ಸರ್ವವ್ಯಾಪಿ  ವ್ಯಾಧಿಯ ಮೇಲೆ ಪರಿಣಾಮಕಾರಿಯಾಗಬೇಕೆಂದರೆ ಪ್ರಪಂಚದ ಎಲ್ಲ ಕಡೆ ಆ ವ್ಯಾಕ್ಸಿನ್ ಲಭ್ಯವಾಗಬೇಕು. ಇಲ್ಲದಿದ್ದಲ್ಲಿ ಮತ್ತೆ ಇಂತಹ ಪ್ಯಾಂಡಮಿಕ್ ಹರಡಬಲ್ಲದು. ಈ ಅರಿವನ್ನು ನೀಡುವ ನಿಟ್ಟಿನಲ್ಲಿ ಕೋವಿಡ್ ಜಾಗತಿಕಗೊಂಡಿರುವ ಈ ಲೋಕದ ಹಾದಿಯನ್ನೇ ಬದಲಿಸಿದೆ.ಅದೇ ರೀತಿ ಲಸಿಕೆ ತಯಾರಿಕೆಯ ಎಲ್ಲ ನಿಯಮ ಮತ್ತು ಕಟ್ಟಲೆಗಳನ್ನು ಕೂಡ ಸಾರಾ ಸಗಟಾಗಿ ಮುರಿದಿದೆ.

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    10 COMMENTS

    1. ಎಲ್ಲರಿಗೂ ತಿಳಿಯುವ ಹಾಗೆ ವಿವರಿಸಿರುವಿರಿ. ಹಲವಾರು ಕಂಪನಿಗಳು ನಾವು ಕೊಡುವ ಔಷಧಿ ತಗೊಂಡರೆ ಬರೋದೇ ಇಲ್ಲ ಅಂತಾನೂ ಪ್ರಚಾರ ಮಾಡಿದಾರೆ. ಆದರೆ ನಿಮ ಲೇಖನ ಎಲ್ಲ ಗೊಂದಲಕೆ ತೆರೆ ಹಾಕುತ್ತದೆ

    2. ಅತ್ಯಂತ ಸಂಪದ್ಭರಿತ ವೈಜ್ಞಾನಿಕ ಮಾಹಿತಿಗಳನ್ನು ಅಕ್ಷರಕ್ಕಿಳಿಸಿರುವ ಪ್ರಯತ್ನ ಶ್ಲಾಘನೀಯ. ಜೈವಿಕ ಬದಲಾವಣೆ ಹೊಂದುವ ವೈರಸ್ ಗೆ,ಲಸಿಕೆ ಕಂಡುಹಿಡಿಯುವುದು ಕಷ್ಟಸಾಧ್ಯವಾಗಿ,ವಿಳಂಬವಾದರೂ ಅಸಾದ್ಯವೇನಲ್ಲ ಅಂತ ತಿಳಿದು ಸಮಾಧಾನ ಆಯ್ತು. ಹಲವಾರು ನಿಯಮ ಉಲ್ಲಂಘಿಸಿ,ಇಂತಹ ತುರ್ತುಪರಿಸ್ಥಿತಿ ಯಲ್ಲಿ ಲಸಿಕೆಯನ್ನು ಮಾನವ ಜನಾಂಗಕ್ಕೆ ಕೊಡಮಾಡಿದರೆ ಅನುಕೂಲ.

    3. ಕರೋನಾ ಡೈರಿ ಅಂಕಣವನ್ನು ಆರಂಭದಿಂದಲೂ ಓದುತ್ತಿದ್ದೇನೆ. ಲೇಖಕಿ ಪ್ರತಿವಾರವೂ ಓದುಗರಿಗೆ ಹೊಸ ವಿಷಯನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿಕೊಡುತ್ತಾರೆ. ಜನ ಸಾಮಾನ್ಯರನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಸಿಕ್ಕಿದೆ. ಲೇಖಕಿಯ ಸಮೃದ್ಧ ಜ್ಞಾನ ಭಂಡಾರ ಕನ್ನಡಪ್ರೆಸ್.ಕಾಮ್ ಮೂಲಕ ನಮಗೂ ಸಿಗುತ್ತಿದೆ. ಧನ್ಯವಾದಗಳು.

    4. ಯಾವುದೇ ಲಸಿಕೆಯ ಪೂರ್ವ ತಯ್ಯಾರಿ ಎಷ್ಟೊಂದು ಸಂಶೋಧನೆಗಳನ್ನು ಹೊಂದಿ, ಎಷ್ಟೆಲ್ಲ ನಿಖರತೆಯೊಂದಿಗೆ ಜಗತ್ತನ್ನು ತಲುಪುತ್ತದೆ ಎಂದು ಬಹಳ ಮನಸ್ಸಿಗೆ ನಾಟುವಂತೆ ವಿವರಿಸಿದ್ದಾರೆ.ಲೇಖಕಿಗೆ ಧನ್ಯವಾದಗಳು.

    5. ಓದಿ ಅಭಿಪ್ರಾಯಗಳನ್ನು ಬರೆದು ತಿಳಿಸಿದ ಎಲ್ಲರಿಗೂ ಧನ್ಯವಾದಗಳು.

    6. ತುಂಬಾ ಉಪಯುಕ್ತ ಮಾಹಿತಿ ಕೊರೋನ ಲಸಿಕೆ ಶೀಘ್ರದಲ್ಲೇ ಬೆಳಕಿಗೆ ಬರಲಿ ಸರ್ವಜನರು ನಿಟ್ಟುಸಿರು ಬಿಡುವಂತಾಗಲಿ .
      ಇಂತಹ ಅತ್ಯುತ್ತಮ ಮಾಹಿತಿ ಮಾರ್ಗದರ್ಶನ ನೀಡುತ್ತಿರುವ kannadapress.com ಗೆ ಹೃತ್ಪೂರ್ವಕ ಅಭಿನಂದನೆಗಳು. ಜೈ ಕರ್ನಾಟಕ ಮಾತೆ

    LEAVE A REPLY

    Please enter your comment!
    Please enter your name here

    Latest article

    error: Content is protected !!