35.2 C
Karnataka
Friday, May 10, 2024

    ಯಾರನ್ನೋ ಅನುಸರಿಸುವುದಕ್ಕಿಂತ ಅರಿತು ಹೂಡಿಕೆ ಮಾಡಬೇಕು

    Must read

    ಷೇರುಪೇಟೆ ಹೂಡಿಕೆ ಎಂದರೆ ಹೆಚ್ಚಿನವರಿಗೆ ಬಹು ಆಕರ್ಷಣೀಯವಾಗಿರುತ್ತದೆ.  ಕಾರಣ ಹೆಚ್ಚಿನ ಶ್ರಮವಿಲ್ಲದೆ ಸುಲಭವಾಗಿ ಹಣ ಸಂಪಾದಿಸಬಹುದೆಂಬ ಭ್ರಮೆ.  ಷೇರುಪೇಟೆಯು ಸಧ್ಯದ ಮಟ್ಟಿಗೆ ಹೇಳಬೇಕಾದರೆ ಅದು ಒಂದು ರೀತಿಯ ಬ್ರಾಂತುಲೋಕವಾಗಿದೆ.  ಕಾರಣ ಹೆಚ್ಚಿನ ಬೆಳವಣಿಗೆಗಳು ಸಾಮಾನ್ಯರ ಕಲ್ಪನೆಗೂ ಎಟುಕದ ರೀತಿಯಲ್ಲಿರುತ್ತವೆ.  ಆದರೂ ಇಲ್ಲಿ ಸ್ವಲ್ಪಮಟ್ಟಿನ ಸಾಮಾನ್ಯ ಜ್ಞಾನವನ್ನು ಬಳಸಿ ಅಧ್ಯಯನಾಧಾರಿತವಾಗಿ ಚಟುವಟಿಕೆ ನಡೆಸಿದಲ್ಲಿ ಯಶಸ್ಸು ಕಾಣಬಹುದಾಗಿದೆ.  

    ಷೇರುಪೇಟೆಯ ನಿಯಂತ್ರಕರಾದ ʼ ಸೆಬಿ ʼ ಹೇಳುವಂತೆ  ಯಾರನ್ನೋ ಅನುಸರಿಸುವುದಕ್ಕಿಂತ ಅರಿತು ಹೂಡಿಕೆ ಮಾಡಬೇಕು,  ಅದೇ ಯಶಸ್ಸಿನ ಮೂಲ ಮಂತ್ರ.  ಕೇವಲ ಕೆಲವು ದಿನಗಳು,  ತಿಂಗಳು ಹೂಡಿಕೆ ಮಾಡಲಿರುವುದಕ್ಕೆ ಇಷ್ಟೆಲ್ಲಾ ಯೋಚನೆ ಏಕೆ? ಎಂದು ನಿರ್ಲಕ್ಷಿಸುವಂತಿಲ್ಲ.   ಕಾರಣ, ಹೂಡಿಕೆ ಮಾಡಲಿರುವ ಕಂಪನಿಯ ಬಗ್ಗೆ ಅರಿಯದೆ  ನಾವು ನಿರ್ಧರಿಸಿದರೆ ಯಾವ ರೀತಿಯ ಗೊಂದಲದ ಪರಿಸ್ಥಿತಿ ಉಂಟಾಗಬಹುದೆಂಬುದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.  ಅಲ್ಪಕಾಲೀನ ಹೂಡಿಕೆ ಎಂದು ನಿರ್ಧರಿಸಿದರೂ ಕೆಲವೊಮ್ಮೆ ವರ್ಷಗಟ್ಟಲೆ ಹೂಡಿಕೆ ಮುಂದುವರೆಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು, ಕೆಲವೊಮ್ಮೆ ಕಂಪನಿ ರೋಗಗ್ರಸ್ಥವಾಗಿ ಲಿಸ್ಟಿಂಗ್‌ ನಿಂದ ನಿರ್ಗಮಿಸಿದರೆ ಶಾಶ್ವತ ಹೂಡಿಕೆದಾರರಾಗಬೇಕಾಗಬಹುದು.

    ಒಂದು ಮನೆಯನ್ನು ಖರೀದಿಸುವಾಗ ಅದು ಇರುವ ಸ್ಥಳ, ವಾತಾವರಣ, ಮಾರಾಟಗಾರರ ಮಾಲಿಕತ್ವ ದಾಖಲೆಗಳು,   ಕಟ್ಟಡದ ಗುಣಮಟ್ಟ, ಕಟ್ಟಡಕ್ಕೆ ಹಾಕಿರುವ ಬುನಾದಿ, ಎಲ್ಲಕ್ಕೂ ಮಿಗಿಲಾಗಿ ಆ ಮನೆಯನ್ನು ಯಾವ ಗಾತ್ರದ ನಿವೇಶನದಲ್ಲಿ ಕಟ್ಟಲಾಗಿದೆ, ಮುಂತಾದವುಗಳನ್ನು ಪರಿಶೀಲಿಸುತ್ತೇವೆ.  ಅದರಂತೆಯೇ ಒಂದು ಷೇರು ಖರೀದಿಗೆ ಮುನ್ನ ಆ ಕಂಪನಿಯ ಯೋಗ್ಯತಾ ಮಟ್ಟವನ್ನು ಮಾಪನಮಾಡಿ ನಿರ್ಧರಿಸುವುದು ಅತ್ಯವಶ್ಯಕ.   ಆರಂಭದಲ್ಲಿ ಕೇವಲ ಪೇಟೆಯ ಬೆಲೆಯೊಂದೇ ಮುಖ್ಯವಲ್ಲ  ಖರೀದಿಸುವ ಷೇರಿನ ಮುಖಬೆಲೆ ಏನು ಅದಕ್ಕನುಗುಣವಾಗಿ ಷೇರಿನ ಬೆಲೆಯನ್ನು ಮಾಪನ ಮಾಡಬೇಕು.   ನಂತರ ಇತರೆ ಮಾನದಂಡಗಳಾದ ಕಂಪನಿಯ ಸಾಧನೆ, ಚಟುವಟಿಕೆಯ ವಲಯ, ಆ ವಲಯಕ್ಕಿರುವ ಭವಿಷ್ಯ, ಕಂಪನಿಯ ಆಡಳಿತ ಮಂಡಳಿಯ ಗುಣಮಟ್ಟ, ಅವರು ಹೂಡಿಕೆದಾರಿ ಸ್ನೇಹ ಚಿಂತನಾ ಮನಸ್ಕರೇ ಮುಂತಾದವುಗಳನ್ನರಿಯಬೇಕು.  ಏನೂ ಅರಿಯದೆ ಕೇವಲ ಅಲಂಕಾರಿಕ ಪ್ರಚಾರ,  ವಿಚಾರಗಳ ಮೇಲೆ ನಿರ್ಧರಿಸಿದಲ್ಲಿ ಅಪಾಯಕ್ಕೆ ಆಹ್ವಾನವಿತಂತೆ.  ಹೂಡಿಕೆ ಮಾಡುವಾಗ ಕಂಪನಿಗಳ ಆಂತರಿಕ ಸದೃಢ ಗುಣಗಳ ಬಗ್ಗೆ ತಿಳಿವಳಿಕೆ ಅತ್ಯವಶ್ಯ.  ಕಂಪನಿಗಳು ಉತ್ಪಾದನಾ ವಲಯದಲ್ಲಿದ್ದು, ಉತ್ತಮ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿರುವುದು ಉತ್ತಮ.

    ಕೆಲವು ನಿದರ್ಶನಗಳನ್ನು ಪರಿಶೀಲಿಸೋಣ:

    1.  2015: ಯು ಪಿ ಹೋಟೆಲ್ಸ್  ಲಿಮಿಟೆಡ್‌   ಕಂಪನಿಯು 2001 ರಲ್ಲಿ ಬಾಂಬೆ ಸ್ಟಾಕ್ಎಕ್ಸ್ಚೇಂಜ್  ನಲ್ಲಿ ವಹಿವಾಟಿಗೆ ಲಿಸ್ಟಿಂಗ್  ಮಾಡಿಕೊಂಡಿತು.  ಈ ಕಂಪನಿಯು 2011 ರಲ್ಲಿ ಪ್ರತಿ ಷೇರಿಗೆ ರೂ.10 ರಂತೆ, 2012 ಮತ್ತು 2013 ರಲ್ಲಿ ಪ್ರತಿ ಷೇರಿಗೆ ರೂ.5 ರಂತೆ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ.  ಕಾರಣಾಂತರಗಳಿಂದ  2015 ರಲ್ಲಿ ಕಂಪನಿಯ ಷೇರುಗಳನ್ನು ವಹಿವಾಟಿನಿಂದ ಅಮಾನತುಗೊಳಿಸುವ ಮೂಲಕ ಹೂಡಿಕೆದಾರರ ಹಣವು ನಿಶ್ಕ್ರಿಯಗೊಂಡಿತು.     ಆದರೆ ಸುಮಾರು 7 ವರ್ಷಗಳ ನಂತರ ಕಂಪನಿಯು ಎಲ್ಲಾ ಲೋಪಗಳನ್ನು ಸರಿಪಡಿಸಿಕೊಂಡು ಈ ವರ್ಷದ ಮಾರ್ಚ್ ನಲ್ಲಿ ಲಿಸ್ಟಿಂಗ್ ಮಾಡಿಕೊಂಡು ವಹಿವಾಟಾಗಲು  ಆರಂಭಿಸಲಾಯಿತು.  60 ವರ್ಷಗಳ ಇತಿಹಾಸವುಳ್ಳ ಈ ಕಂಪನಿ  ಈಗ  ರೂ.500 ರ ಸಮೀಪ ವಹಿವಾಟಾಗುತ್ತಿದೆ. ಅಂದರೆ ಸಂಪೂರ್ಣ ನಶಿಸಿ ಹೋಗಿದ್ದ ಮೌಲ್ಯವು ಪುಟಿದೆದ್ದು ಉತ್ತಮ ಲಾಭ ಗಳಿಸಿಕೊಟ್ಟಿರುವುದು ಕಂಪನಿಯಲ್ಲಡಗಿರುವ ಆಂತರಿಕ ಸ್ವತ್ತು ಮತ್ತು ಆಡಳಿತ ಮಂಡಳಿಯ ಚಿಂತನೆಯಾಗಿದೆ.

    2.  2001 : ಬರೋಡಾ ರೆಯಾನ್  ಕಾರ್ಪೊರೇಷನ್   ಲಿಮಿಟೆಡ್ಕಂಪನಿಯು 2001 ರಿಂದಲೂ ಕಾರಣಾಂತರಗಳಿಂದ ಅಮಾನತುಗೊಂಡಿದ್ದು, ಹೂಡಿಕೆದಾರರ ಹಣವು ನಿಶ್ಕ್ರಿಯಗೊಂಡು ಪೂರ್ತಿಯಾಗಿ ನಶಿಸಿದೆ ಎಂದು ಭಾವಿಸಿದ್ದರೆ  20 ವರ್ಷಗಳ ನಂತರ ಈ ವರ್ಷ ಜೂನ್1 ರಿಂದ  ಅಮಾನತ್ತನ್ನು ತೆರವುಗೊಳಿಸಿಕೊಂಡು  ಪುನ: ಲೀಸ್ಟಿಂಗ್  ಮಾಡಿಕೊಂಡಿತು. ಆರಂಭದ ದಿನ ರೂ.4.42 ರಲ್ಲಿದ್ದ ಷೇರಿನ ದರವು ರೂ.160 ಕ್ಕೆ ಕೇವಲ ಮೂರೇ ತಿಂಗಳ ಅಂತರದಲ್ಲಿ ಪುಟಿದೆದ್ದಿರುವ ನಿದರ್ಶನವು  ಷೇರುಪೇಟೆಯ ವಿಸ್ಮಯಕಾರಿ ಗುಣ.

    3. ಹಿಂದೂಸ್ಥಾನ್‌ಫುಡ್ಸ್‌  ಲಿಮಿಟೆಡ್‌1997 ರಲ್ಲಿ ಅಮಾನತುಗೊಂಡಿತ್ತು.  2012 ರಲ್ಲಿ ಆ ಕಂಪನಿಯು ಮತ್ತೊಮ್ಮೆ ವಹಿವಾಟಿಗೆ ಬಿಡುಗಡೆಯಾಯಿತು.    ಜುಲೈ 2022 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಿದೆ. ಈಗಲೂ  ರೂ.460 ರ ಸಮೀಪದಲ್ಲಿ ವಹಿವಾಟಾಗುತ್ತಿದೆ.

    4. ,   ಆರ್ಟೆಕ್‌ ಪವರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಕಂಪನಿಯು 2001 ರಲ್ಲಿ ಅಮಾನತುಗೊಂಡಿತ್ತು.  2012 ರಲ್ಲಿ ಅಮಾನತನ್ನು ತೆರವುಗೊಳಿಸಿಕೊಂಡು ಪುನ: ವಹಿವಾಟಿಗೆ ಬಿಡುಗಡೆಯಾಯಿತು.   2015 ರಲ್ಲಿ ಕಂಪನಿ ಹೆಸರನ್ನು  ಆರ್ಟೆಕ್‌ಪವರ್‌ ಅಂಡ್‌ ಟ್ರೇಡಿಂಗ್‌ ಲಿಮಿಟೆಡ್‌ಎಂದು ಬದಲಿಸಿಕೊಂಡಿತು. 2020 ರಲ್ಲಿ ಮತ್ತೆ ವಹಿವಾಟಿನಿಂದ ಅಮಾನತುಗೊಂಡಿತು.


    5.  ನೈಲೋಫಿಲ್ಸ್‌ ಲಿಮಿಟೆಡ್‌ ಕಂಪನಿಯು 2002 ರಿಂದಲೂ ವಿಧಿಸಿದ್ದ   ಅಮಾನತನ್ನು 2012 ರಲ್ಲಿ  ತೆರವುಗೊಳಿಸಿಕೊಂಡು ಪೇಟೆಯನ್ನು ಮರು ಪವೇಶಿಸಿತು.   ಈ ಕಂಪನಿಯ ಹೆಸರನ್ನು ಆರ್ವ್‌ ಇನ್‌ಫ್ರಾಟೆಲ್‌ ಲಿಮಿಟೆಡ್‌ ಎಂದು 2016 ರಲ್ಲಿ ಬದಲಾಯಿಸಿಕೊಂಡಿತು.
    6. ಐ ಎಫ್‌ಎಂ ಇಂಪೆಕ್ಸ್‌ ಗ್ಲೋಬಲ್‌ ಲಿಮಿಟೆಡ್‌ ಕಂಪನಿಯ ಮೇಲೆ 2002 ರಲ್ಲಿ ವಿಧಿಸಿದ್ದ ಅಮಾನತು  ತೆರವುಗೊಳಿಸಿಕೊಂಡು 2012 ರಲ್ಲಿ ರಿಲೀಸ್ಟಿಂಗ್‌ ಮಾಡಿಕೊಂಡಿತು.  ಈ  ಕಂಪನಿ ತನ್ನ ಹೆಸರನ್ನು 2018 ರಲ್ಲಿ ಎನ್‌ ಎಂ ಎಸ್‌ ರಿಸೋರ್ಸಸ್‌ಗ್ಲೋಬಲ್‌  ಲಿಮಿಟೆಡ್‌ಎಂದು ಬದಲಿಸಿಕೊಂಡಿದೆ.


    7. 2005 ರಲ್ಲಿ ಅಮಾನತುಗೊಂಡಿದ್ದ ಕಂಪನಿಯಾದ  ಸೀಕ್ವೆಲ್ ಇ ರೂಟರ್ಸ್ ಲಿಮಿಟೆಡ್,  2012 ರಲ್ಲಿ ಎಲ್ಲಾ ನ್ಯೂನ್ಯತೆಗಳನ್ನು ತೆರವುಗೊಳಿಸಿಕೊಂಡು ರಿಲೀಸ್ಟ್‌ ಮಾಡಿಕೊಂಡಿತು.   ಈ ಕಂಪನಿ 2017 ರಲ್ಲಿ ತನ್ನ ಹೆಸರನ್ನು ಕ್ರಾಫ್ಟನ್ಡೆವೆಲಪರ್ಸ್ಲಿಮಿಟೆಡ್( KKRRAFTON Developers Ltd) ಎಂದು ಬದಲಿಸಿಕೊಂಡು  ವಹಿವಾಟಾಗುತ್ತಿತ್ತು, ಸೆಪ್ಟೆಂಬರ್2022 ರಲ್ಲಿ ಕಂಪನಿಯು ಷೇರುವಿನಿಮಯ ಕೇಂದ್ರಕ್ಕ ಪಾವತಿಸ ಬೇಕಾದ ಲೀಸ್ಟಿಂಗ್ಫೀಸ್ಪಾವತಿಸಲು ಅಸಮರ್ಥವಾದ ಕಾರಣ ಅಮಾನತುಗೊಳಿಸಲಾಯಿತು.


    8. 1983 ರಿಂದಲೂ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಮಾಡಿಕೊಂಡು ಹಲವಾರು ವರ್ಷ ಆಕರ್ಷಣೀಯ ಮಟ್ಟದಲ್ಲಿ ವಿಜೃಂಭಿಸಿದ ಓಸ್ವಾಲ್‌ ಆಗ್ರೋ ಮಿಲ್ಸ್‌ ನ ಪ್ರವರ್ತಕರಾದ  ಅಭಯ್‌ ಓಸ್ವಾಲ್‌  ರವರ ಓಸ್ವಾಲ್‌ ಗ್ರೀನ್‌ ಟೆಕ್‌ ( ಹಿಂದೆ ಈ ಕಂಪನಿ ಹೆಸರು ಬಿಂದಾಲ್‌ ಆಗ್ರೋ ಲಿಮಿಟೆಡ್‌ ಎಂದಿತ್ತು)  ಕಂಪನಿಯು 2011 ರಲ್ಲಿ 14.17% ರಷ್ಟು ಭಾಗಿತ್ವವನ್ನು ಎನ್‌ ಡಿ ಟಿ ವಿ ಕಂಪನಿಯಲ್ಲಿ ರೂ.24.4 ಕೋಟಿ ಹೂಡಿಕೆಯ ಮೂಲಕ ಪಡೆದುಕೊಂಡಿದ್ದರು.  2016 ರಲ್ಲಿ 9.75% ಭಾಗಿತ್ವವನ್ನು ರೂ.51 ಕೋಟಿಗೆ ಮಾರಾಟಮಾಡಿದರು. ಉಳಿದ 4.42% ಭಾಗಿತ್ವವನ್ನು ಶೀಘ್ರವೇ ಮಾರಾಟಮಾಡುವುದಾಗಿ ಕಂಪನಿ ತಿಳಿಸಿತ್ತು.


    ಈ ರೀತಿಯ ಅನಿರೀಕ್ಷಿತ ಬೆಳವಣಿಗೆಗಳು, ಹಲವಾರು ಬಾರಿ ಅಸಹಜಮಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.   ಇದಕ್ಕೆ ಮುಖ್ಯ ಕಾರಣ ಷೇರುಪೇಟೆ ಬಗ್ಗೆ ಮಾಹಿತಿ ಇಲ್ಲದೆ, ಇತ್ತೀಚೆಗೆ ಪೇಟೆ ಪ್ರವೇಶಿಸುತ್ತಿರುವವರ ಸಂಖ್ಯೆಯು ಅತಿ ಹೆಚ್ಚಾಗುತ್ತಿದೆ.  ಕಳೆದ ಎರಡು ತಿಂಗಳುಗಳಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಅಂಕಿ ಅಂಶಗಳ ಪ್ರಕಾರ,  ಸುಮಾರು 46 ಲಕ್ಷ ಹೊಸ ಹೂಡಿಕೆದಾರರು ಪೇಟೆ ಪ್ರವೇಶಿಸಿದ್ದಾರೆ, ಅದಕ್ಕನುಗುಣವಾಗಿ ಹೂಡಿಕೆಗೆ ಲಭ್ಯವಿರುವ ಕಂಪನಿಗಳ ಸಂಖ್ಯೆ ಏರಿಕೆ ಕಂಡಿಲ್ಲ.  ಈ ಹೂಡಿಕೆದಾರರ ದಟ್ಟಣೆಯೂ ಸಹ ಈ ರೀತಿಯ ಅಸಹಜಮಯ ಏರಿಳಿತಗಳಿಗೆ ಕಾರಣವಾಗಿ, ಪೇಟೆಯನ್ನು ಬೇಗ ಬೇಗ ಡ್ರಾ- ಬೇಗ ಬೇಗ ಬಹುಮಾನ ಎಂಬುವ ಪರಿಸ್ಥಿತಿಗೆ ತಳ್ಳಿದೆ.  ಆದರೆ ಹೂಡಿಕೆ ಎಂದು ಪರಿಶೀಲಿಸಿದಾಗ VALUE PICK – PRAFIT BOOK ಸುಲಭ ಸಮೀಕರಣವು  RTMM ( real time market movement ) ಪದ್ಧತಿ ಮೂಲಕ ಸ್ವಲ್ಪ ಮಟ್ಟಿನ ಯಶಸ್ಸು ತಂದು ಕೊಡಬಹುದಾಗಿದೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!