23.5 C
Karnataka
Monday, May 20, 2024

    Indian Stock Market: ಷೇರುಪೇಟೆಯಲ್ಲಿ ಕಾರ್ಪೊರೇಟ್‌ ಫಲಗಳ ಪ್ರಭಾವ, ಲಾಭಾಂಶದೊಂದಿಗೆ ಮತ್ತು ಲಾಭಾಂಶದ ನಂತರ

    Must read

    ಷೇರುಪೇಟೆಯಲ್ಲಿ ಈ ವಾರ ಅನೇಕ ಕಂಪನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಗಳನ್ನು ಕರೆದು ತಮ್ಮ ವಾರ್ಷಿಕ ವರದಿಗಳಿಗೆ ಷೇರುದಾರರ ಒಪ್ಪಿಗೆ ಪಡೆಯುವುದರೊಂದಿಗೆ ಅವು ಘೋಷಿಸಿದ ಕಾರ್ಪೊರೇಟ್‌ ಫಲಗಳಿಗೆ ಅನುಮೋದನೆ ಪಡೆದಿವೆ, ಪಡೆಯುವತ್ತ ಸಾಗಿವೆ. ಪೇಟೆಯಲ್ಲಿ ಕಾರ್ಪೊರೇಟ್‌ ಫಲಗಳು ಯಾವ ರೀತಿ ಪ್ರಭಾವಿಯಾಗಬಹುದು ಎಂಬುದನ್ನು ತಿಳಿಯೋಣ. ಕಾರ್ಪೊರೇಟ್‌ ಫಲಗಳು ಎಂದರೆ ಕಂಪನಿಗಳು ಘೋಷಿಸುವ ಲಾಭಾಂಶ, ಬೋನಸ್‌ ಷೇರು, ಹಕ್ಕಿನ ಷೇರು ಮುಂತಾದವುಗಳಾಗಿವೆ.

    • ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ ಕಂಪನಿಯು ಜೂಲೈ 7 ನ್ನು‌ 1:2 ರ ಅನುಪಾತದ ಬೋನಸ್ ಷೇರಿಗೆ ನಿಗದಿತ ದಿನವೆಂದು ಪ್ರಕಟಿಸಿತ್ತು. ಈ ಷೇರಿನ ಬೆಲೆಯು ಬೋನಸ್‌ ಷೇರಿನ ಅನುಪಾತ್ತಕ್ಕನುಗುಣವಾಗಿ ರೂ.75 ರ ಸಮೀಪದಲ್ಲಿ ವಹಿವಾಟಾಗುತ್ತಿದೆ. ಸುಮಾರು 470 ಕೋಟಿಗೂ ಹೆಚ್ಚಿನ ಬೋನಸ್‌ ಷೇರುಗಳನ್ನು 8ನೇ ಜುಲೈ ನಿಂದ ವಹಿವಾಟಿಗೆ ಅನುಮತಿಸಿದೆಯಾದರೂ ಹೆಚ್ಚಿನ ಬದಲಾವಣೆಗಳು ಪ್ರದರ್ಶಿತವಾಗಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಕಂಪನಿ ಘೋಷಿಸಿದ, ಬೋನಸ್‌ ಷೇರು ವಿತರಣೆಗೂ ಮುಂಚಿನ ಬಂಡವಾಳಕ್ಕೆ ಪ್ರತಿ ಷೇರಿಗೆ ರೂ.3.60 ರ ಲಾಭಾಂಶಕ್ಕೆ ಆಗಷ್ಟ್‌ 12 ನಿಗದಿತ ದಿನವೆಂದು ಘೋಷಿಸಿದೆ. ಈಗ ಬೋನಸ್‌ ಷೇರುಗಳೂ ಸಹ ಸೇರಿರುವುದರಿಂದ ಲಾಭಾಂಶವನ್ನು ಬೋನಸ್‌ ಷೇರೂ ಸೇರಿ ಪ್ರತಿ ಷೇರಿಗೆ, ರೂ.2.40 ಎಂದು ಸರಿಹೊಂದಿಸಲಾಗಿದೆ. ಈ ಅಂಶವು ಷೇರಿನ ಬೆಲೆಯಲ್ಲಿ ಸ್ಥಿರತೆ ಕಾಪಾಡಿದೆ.
    • ಟೈಡ್‌ ವಾಟರ್‌ ಆಯಿಲ್‌ ಲಿಮಿಟೆಡ್‌ ಕಂಪನಿಯು ಪ್ರತಿ ಷೇರಿಗೆ ರೂ.15 ರಂತೆ ಲಾಭಾಂಶ ವಿತರಿಸಲು ಜುಲೈ 5 ನಿಗದಿತ ದಿನವಾಗಿತ್ತು. ಈ ರೂ.2 ರ ಮುಖಬೆಲೆಯ ಷೇರಿನ ಬೆಲೆಯು ಜೂನ್‌ 20 ರಂದು ರೂ.975 ರ ಸಮೀಪವಿದ್ದು ವಾರ್ಷಿಕ ಕನಿಷ್ಠಕ್ಕೆ ಇಳಿದಿತ್ತು. ಆದರೆ ಲಾಭಾಂಶದ ನಂತರದಲ್ಲಿ ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸಿದಂತಾಗಿ ಶುಕ್ರವಾರ 8 ರಂದು ಷೇರಿನ ಬೆಲೆ ರೂ.1,038 ರ ಸಮೀಪಕ್ಕೆ ಜಿಗಿದು ರೂ.1,015 ರಲ್ಲಿ ಕೊನೆಗೊಂಡಿದೆ.
    • 1978 ರಿಂದಲೂ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ರೂ.10 ರ ಮುಖಬೆಲೆಯ ಸ್ಮಾಲ್‌ ಕ್ಯಾಪ್‌ ಕಂಪನಿ ಇಂಡಿಯನ್‌ ಕಾರ್ಡ್‌ ಕ್ಲಾಥಿಂಗ್‌ ಕಂಪನಿ ಲಿಮಿಟೆಡ್‌ ಈವಾರದಲ್ಲಿ 6 ರಂದು ರೂ.315 ರ ಗರಿಷ್ಠದಿಂದ ರೂ.291 ರವರೆಗೂ ಕುಸಿಯಿತು. ಈ ಕಂಪನಿಯು ಆಕರ್ಷಣೀಯ ಮಟ್ಟದ ಪ್ರಗತಿಯನ್ನು ಸಾಧಿಸುತ್ತಿದ್ದು ಕಳೆದ ಮೇ ತಿಂಗಳಲ್ಲಿ ಪ್ರತಿ ಷೇರಿಗೆ ರೂ.25 ರ ವಿಶೇಷ ಲಾಭಾಂಶ ವಿತರಿಸಿದ್ದು, ಈಗ ಮತ್ತೊಮ್ಮೆ ಪ್ರತಿ ಷೇರಿಗೆ ರೂ.25 ರಂತೆ ಲಾಭಾಂಶ ಘೋಷಿಸಿ, ಈ ತಿಂಗಳ 8 ನ್ನು ನಿಗದಿತ ದಿನವೆಂದು ಪ್ರಕಟಿಸಿತ್ತು, ಹಾಗಾಗಿ 8 ರಂದು ಷೇರಿನ ಬೆಲೆ ರೂ.268 ರ ಸಮೀಪದಿಂದ ರೂ.250 ರವರೆಗೂ ಕುಸಿದಿದೆ. ಅಂದರೆ ಕೇವಲ 4/5 ದಿನಗಳಲ್ಲಿ ರೂ.25 ರ ಲಾಭಾಂಶಕ್ಕೆ ಬದಲಾಗಿ ಸುಮಾರು ರೂ.60 ರಷ್ಟು ಕುಸಿತಕಂಡಿರುವ ಅಂಶ, ಕಂಪನಿಯ ಷೇರಿನ ಏರಿಳಿತಗಳನ್ನು ಗಮನಿಸಿ, ವ್ಯಾಲ್ಯೂಪಿಕ್‌ ಎನಿಸಿಕೊಳ್ಳಬಹದಲ್ಲವೇ?
    • ಬಾಂಬೆ ಸ್ಟಾಕ್‌ ಎಕ್ಸ್ ಚೇಂಜ್‌ ನ ಎಸ್‌ ಎಂ ಇ ವಿಭಾಗದಲ್ಲಿ ವಹಿವಾಟಾಗುತ್ತಿದ್ದ ಇ ಕೆ ಐ ಎನರ್ಜಿ ಸರ್ವಿಸಸ್‌ ಲಿಮಿಟೆಡ್‌ ಕಂಪನಿಯ ಷೇರಿನ ಬಂಡವಾಳ ರೂ.6.87 ಕೋಟಿ ಇತ್ತು. ಈ ಕಂಪನಿಯ ಷೇರಿನ ಬೆಲೆ ಹಿಂದಿನ ವರ್ಷ ಅಂದರೆ 8ನೇ ಜುಲೈ 2021 ರಂದು ರೂ.198 ರ ಸಮೀಪವಿತ್ತು ಆ ಷೇರಿನ ಬೆಲೆ ಈಗ ರೂ.2,400 ರ ಸಮೀಪದಲ್ಲಿದೆ, ಅದೂ ಪ್ರತಿ ಒಂದು ಷೇರಿಗೆ 3 ಬೋನಸ್‌ ಷೇರು ವಿತರಿಸಿದ ನಂತರದಲ್ಲಿ. ದಿನಾಂಕ 5 ಬೋನಸ್‌ ಷೇರು ವಿತರಣೆಗೆ ನಿಗದಿತ ದಿನವಾಗಿದ್ದು, 4 ರಿಂದ ಬೋನಸ್‌ ಷೇರಿನ ನಂತರದ ವಹಿವಾಟು ಆರಂಭವಾದ ಕಾರಣ ಅಂದು ಷೇರನ್ನು ಎಸ್‌ ಎಂ ಇ ವಿಭಾಗದಿಂದ ಮುಖ್ಯ ವೇದಿಕೆಗೆ ಅಂದರೆ ʼ ಬಿʼ ಗುಂಪಿಗೆ ವರ್ಗಾಯಿಸಲಾಯಿತು. ಆರಂಭದ ದಿನ ಕನಿಷ್ಠ ರೂ.2,000 ದ ಸಮೀಪದಲ್ಲಿದ್ದು ನಂತರ ದಿನಾಂಕ 6 ರಂದು ರೂ.2,964 ರ ಸಮೀಪದವರೆಗೂ ಏರಿಕೆ ಕಂಡಿತು. ವಾರಾಂತ್ಯದಲ್ಲಿ ಅಂದರೆ ಶುಕ್ರವಾರ 8 ರಂದು ರೂ.2,390 ರವರೆಗೂ ಕುಸಿದು ರೂ.2,402 ರಲ್ಲಿ ಕೊನೆಗೊಂಡಿದೆ. 1:3 ರ ಅನುಪಾತದ ಬೋನಸ್‌ ಷೇರುಗಳು ಇನ್ನು ಲೀಸ್ಟಿಂಗ್‌ ಆಗಬೇಕಿದೆ. ಅದು ಲೀಸ್ಟ್‌ ಆದ ನಂತರ ಪೇಟೆ ಎಷ್ಟರ ಮಟ್ಟಿಗೆ ಸ್ಥಿರತೆ ಕಾಣಬಹುದು ಎಂಬ ಅಂಶವನ್ನಾಧರಿಸಿ ಹೂಡಿಕೆ ಬಗ್ಗೆ ನಿರ್ಧರಿಸುವುದು ಉತ್ತಮ.
    • ಟೈಟಾನ್‌ ಕಂಪನಿ ಲಿಮಿಟೆಡ್‌ ಷೇರಿನ ಬೆಲೆ ಶುಕ್ರವಾರದಂದು ದಿನದ ಮದ್ಯಂತರದಲ್ಲಿ ರೂ.2,152 ರ ವರೆಗೂ ಏರಿಕೆ ಕಂಡು ರೂ.2,144 ರ ಸಮೀಪ ಕೊನೆಗೊಂಡಿದೆ. ಶುಕ್ರವಾರದ ಚಟುವಟಿಕೆಯು ಕಂಪನಿ ವಿತರಿಸಲಿರುವ ಪ್ರತಿ ಷೇರಿಗೆ ರೂ.7.50 ಯ ಲಾಭಾಂಶದ ನಂತರದ ವಹಿವಾಟಾಗಿದೆ. ಈ ಕಂಪನಿ ಷೇರಿನ ಬೆಲೆ ಜುಲೈ ಒಂದರಂದು ರೂ.1,827 ರ ಸಮೀಪದವರೆಗೂ ಇಳಿಕೆ ಕಂಡಿದ್ದು, ಲಾಭಾಂಶಸಹಿತ ವಹಿವಾಟಿನ ದಿನ 7 ರಂದು ಷೇರಿನ ಬೆಲೆ ರೂ.2,170 ರ ಸಮೀಪಕ್ಕೆ ಜಿಗಿದಿತ್ತು. ಅಂದರೆ ಒಂದೇ ವಾರದಲ್ಲಿ ರೂ.300 ಹೆಚ್ಚಿನ ಏರಿಕೆಯನ್ನು ಪ್ರದರ್ಶಿಸಿದ ಅಗ್ರಮಾನ್ಯ ಸೆನ್ಸೆಕ್ಸ್‌ ಕಂಪನಿಯಾಗಿದೆ.
    • ಡಾಕ್ಟರ್‌ ರೆಡ್ಡೀಸ್‌ ಲ್ಯಾಬೊರೇಟರೀಸ್‌ ಲಿಮಿಟೆಡ್‌ ಕಂಪನಿಯು ಪ್ರತಿ ಷೇರಿಗೆ ರೂ.30 ರಂತೆ ಲಾಭಾಂಶ ಘೋಷಣೆ ಮಾಡಿದ್ದು ಅದಕ್ಕೆ ಈ ತಿಂಗಳ 13 ನಿಗದಿತ ದಿನವಾಗಿದೆ. ನಿಗದಿತ ದಿನ ಸಮೀಪಿಸುತ್ತಿರುವಾಗಲೇ ಷೇರಿನ ಬೆಲೆಯಲ್ಲಿ ಏರಿಕೆ ಪ್ರದರ್ಶಿತವಾಗುತ್ತಿದೆ. ಜೂನ್‌ 20 ರಂದು ಷೇರಿನ ಬೆಲೆ ರೂ.4,107 ರ ಸಮೀಪವಿದ್ದು ಗುರುವಾರ 7 ರಂದು ಷೇರಿನ ಬೆಲೆ ರೂ.4,443 ರ ವರೆಗೂ ಏರಿಕೆ ಕಂಡು ರೂ.4,403 ರಲ್ಲಿ ವಾರಾಂತ್ಯ ಕಂಡಿದೆ. ಈ ಮಧ್ಯೆ ಅಮೇರಿಕಾದ ಎಫ್‌ ಡಿ ಎ ಯು ತನ್ನ ಇನ್ಸ್ಪೆಕ್ಷನ್‌ ನಲ್ಲಿ ಎರಡು ಅಬ್ಸರ್ವೇಶನ್‌ ಗಳನ್ನು ನೀಡಿದೆ ಎಂಬ ಅಂಶವು ಅಷ್ಟು ಪ್ರಭಾವಿಯಾಗಿಲ್ಲ.
    • ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಪ್ರತಿ ಷೇರಿಗೆ ರೂ.6.50 ಯಂತೆ ಲಾಭಾಂಶ ವಿತರಿಸಿದೆ. ಇದಕ್ಕೆ 16 ನೇ ಜೂನ್‌ ನಿಗದಿತ ದಿನವಾಗಿತ್ತು. ಆ ಸಮಯದಲ್ಲಿ ಷೇರಿನ ಬೆಲೆ ರೂ.195 ರ ಸಮೀಪವಿತ್ತು. ಲಾಭಾಂಶದ ನಂತರದಲ್ಲಿ 20 ರಂದು ಷೇರಿನ ಬೆಲೆ ರೂ.176 ರ ಸಮೀಪದವರೆಗೂ ಇಳಿಕೆ ಕಂಡಿತು. ನಂತರದಲ್ಲಿ ಮತ್ತೆ ಏರಿಕೆ ಕಂಡು 27 ರಂದು ರೂ.190 ರ ಗಡಿ ತಲುಪಿತು. ಮತ್ತೆ ಜುಲೈ ಒಂದರಂದು ರೂ.178 ರವರೆಗೂ ಇಳಿಕೆ ಕಂಡು ಶುಕ್ರವಾರ 8 ರಂದು ರೂ.212 ಕ್ಕೆ ಪುಟಿದೆದ್ದಿದೆ. 211 ರ ಸಮೀಪ ಕೊನೆಗೊಂಡಿದೆ.

    ಹೀಗೆ ಕಂಪನಿಗಳಾದ ಅಸ್ಟ್ರಜೆನಿಕಾ ಫಾರ್ಮಸ್ಯುಟಿಕಲ್ಸ್‌, ಟಾಟಾ ಸ್ಟೀಲ್‌, ಎಸ್ಕಾರ್ಟ್ಸ್‌, ರೆಡಿಂಗ್ಟನ್‌, ಹಿಂದೂಸ್ಥಾನ್‌ ಏರೋನಾಟಿಕ್ಸ್‌,l ಮಹೀಂದ್ರ ಅಂಡ್‌ ಮಹೀಂದ್ರ, ಎಲ್‌ ಅಂಡ್‌ ಟಿ ಟೆಕ್ನಾಲಜೀಸ್‌ ಮುಂತಾದ ಅಗ್ರಮಾನ್ಯ ಕಂಪನಿಗಳು ಲಾಭಾಂಶದ ಮುನ್ನ ಮತ್ತು ಲಾಭಾಂಶದ ನಂತರದಲ್ಲಿ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿ ಅವಕಾಶಗಳನ್ನು ಸೃಷ್ಠಿಸಿಕೊಟ್ಟಿವೆ/ ಕೊಡುತ್ತಿವೆ. ಸಮಯಾಧರಿಸಿ, ಅವಕಾಶಗಳನ್ನು ಬಳಸಿಕೊಳ್ಳುವ ವ್ಯಾಲ್ಯು ಪಿಕ್‌ ಚಟುವಟಿಕೆ ಇಂದಿನ ಅಗತ್ಯವಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!