23.5 C
Karnataka
Monday, May 20, 2024

    MONEY ವಿಕಾಸದೊಂದಿಗೆ ಮನೋವಿಕಾಸ

    Must read

    ಹೂಡಿಕೆಯ ಮೂಲ ಉದ್ದೇಶ ಎಂದರೆ, ಹೂಡಿಕೆಯು ಸುರಕ್ಷಿತವಾಗಿರಬೇಕು, ಹೂಡಿಕೆಯು ಆರ್ಥಿಕ ಬೆಳವಣಿಗೆ ಕಾಣುವುದರೊಂದಿಗೆ ಆಕರ್ಷಣೀಯ ಪ್ರಮಾಣದ ಕಾರ್ಪೊರೇಟ್‌ ಫಲಗಳನ್ನು ವಿತರಿಸುವಂತಿರಬೇಕು. ಅಲ್ಲದೆ ಹೂಡಿಕೆಯು ಮುತ್ತಿನ ಹಾರದಂತಿರಬೇಕು,ಹೂಡಿಕೆಯು ಮನಸ್ಸಿಗೆ ಮುದನೀಡುವಂತಿರಬೇಕು,ಹೂಡಿಕೆಯು ಮನೋಲ್ಲಾಸ ಮೂಡಿಸುವಂತಿರಬೇಕು,ಹೂಡಿಕೆಯು ದೈಹಿಕ ಚೈತನ್ಯ ವೃದ್ಧಿಸುವಂತಿರಬೇಕು,ಹೂಡಿಕೆಯು ಅಗತ್ಯದ ಸಮಯದಲ್ಲಿ ಸಂಜೀವಿನಿಯಂತಿರಬೇಕು,ಹೂಡಿಕೆಯ ಅವಧಿಯಲ್ಲಿ ನಿಯತಕಾಲಿಕ ಮಾಶಾಸನ ಒದಗಿಸುವಂತಿರಬೇಕು,ಹೂಡಿಕೆಯು ಮನಿ ವಿಕಾಸದೊಂದಿಗೆ ಮನೋವಿಕಾಸಕ್ಕೆ ದಾರಿಯಾಗುವಂತಿರಬೇಕು,ಹೂಡಿಕೆಯು ಆರೋಗ್ಯ ಸಮಸ್ಯೆಗಳನ್ನು ದೂರವಿಡುವಂತಿರಬೇಕು ಹೂಡಿಕೆಯು ಮಾನಸಿಕ ತೃಪ್ತಿ, ನೆಮ್ಮದಿ, ಸಂತೋಷಗಳಿಗೆ ರಾಮಬಾಣದಂತಿರಬೇಕು ಆಗಲೇ ಹೂಡಿಕೆಯು ಪರಿಪೂರ್ಣವಾಗುತ್ತದೆ.

    ಆದರೆ ಈಗಿನ ದಿನಗಳಲ್ಲಿ ಇವೆಲ್ಲವನ್ನೂ ಕಂಡುಕೊಳ್ಳುವುದಾಗಲಿ, ಪಡೆದುಕೊಳ್ಳುವುದಾಗಲಿ ಅಸಾಧ್ಯವಲ್ಲದಿದ್ದರೂ ಸುಲಭ ಸಾಧ್ಯವಂತೂ ಅಲ್ಲ. ಇವುಗಳನ್ನು ಗಮನಿಸಿದಾಗ ಕವಿವರ್ಯ ಪುತಿನ ರವರ ಹಗುರಾಗಿಹ ಮೈ, ಕೆಸರಿಲ್ಲದ ಮನ, ಹಂಗಿಲ್ಲದ ಬದುಕು, ಕೇಡೆಣಿಸದ ನಡೆ, ಕೇಡಿಲ್ಲದ ನುಡಿ, ಸಾಕಿವು ಇಹಕೂ ಪರಕೂ – ಮೇಲೇನಿದೆ ಇದಕ್ಕೂ ಎಂಬ ಸಾಲುಗಳು ನೆನಪಾಗುತ್ತವೆ.

    ಅಳವಡಿಕೆ ಸುಲಭವಲ್ಲ

    ಮೇಲ್ನೋಟಕ್ಕೆ ಇವೆಲ್ಲಾ ಸುಲಭವೆನಿಸಿದರೂ ಅಳವಡಿಕೆ ಸುಲಭವಲ್ಲ. ಈಗಿನ ಜೀವನ ಚಕ್ರದ ಚಲನೆಯ ವೇಗವು ಚಿಂತನಾ ಶೈಲಿಗಳನ್ನೇ ಬದಲಿಸಿದೆ. ಎಲ್ಲವಕ್ಕೂ ನಮ್ಮ ವಿವೇಚನಾ ಶಕ್ತಿಯನ್ನು ಬಳಸದೆ ಒಂದು ರೀತಿಯ ಪರಾವಲಂಬಿಗಳಾಗುತ್ತಿದ್ದೇವೆ. ನಮ್ಮ ವೈಯಕ್ತಿಕ ವಿಚಾರಗಳಿಗೂ, ಹಣಕಾಸಿನ ನಿರ್ವಹಣೆ ಮತ್ತು ಹೂಡಿಕೆಗೂ, ಪರರ ವಿಚಾರಗಳನ್ನು, ಚಿಂತನೆಗಳನ್ನೇ ವಿವೇಚಿಸದೆ ಅಳವಡಿಸಿಕೊಳ್ಳುವಷ್ಟು ಅವಲಂಬಿತವಾಗುತ್ತಿದ್ದೇವೆ. ಎಷ್ಟರಮಟ್ಟಿಗೆ ನಾವು ನಮ್ಮ ಚಿಂತನಾ ಸಾಮರ್ಥ್ಯವನ್ನು ಕಡೆಗಣಿಸಿದ್ದೇವೆ ಎಂದರೆ ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟವಾಗುವ ಸುದ್ಧಿಗಳನ್ನು ಸಂಪೂರ್ಣವಾಗಿ ಒಪ್ಪಿ ಅದಕ್ಕನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.

    ಜಾಲತಾಣಗಳಲ್ಲಿ ಪ್ರೊಫೈಲ್‌ಗಳ ದುರುಪಯೋಗವಾಗಬಾರದೆಂಬ ಕಾರಣಕ್ಕಾಗಿ ಲಾಕ್‌ಮಾಡಿ ಸುರಕ್ಷತೆಗೆ ಮುಂದಾಗುವಷ್ಠು ಮುನ್ನೆಚ್ಚರಿಕೆ ವಹಿಸುವ ನಾವು ನಮ್ಮ ಸ್ವಂತ ಹಣವನ್ನು ವಿನಿಯೋಗಿಸುವಾಗ ಏಕೆ ಆ ಭಾವನೆ ಮೂಡುವುದಿಲ್ಲ. ಒಂದು ಬಂಗಾರದ ಗಟ್ಟಿಯನ್ನು ಆಭರಣ ತಯಾರಕರಿಗೆ ನೀಡಿ ಒಂದು ನೆಕ್ಲೇಸ್‌ಮಾಡಿಕೊಡಲು ಕೇಳಿದರೆ, ಅದರಲ್ಲಿ ವೇಸ್ಟೇಜ್‌ಇಲ್ಲದೆ ಮಾಡಲು ಸಾಧ್ಯವಿಲ್ಲ. ಅಂತೆಯೇ, ಒಂದು ಟೀಕ್‌ವುಡ್‌ಲಾಗನ್ನು ನೀಡಿ ಕಿಟಕಿ, ಬಾಗಿಲುಗಳನ್ನು ತಯಾರಿಸಲು ಹೇಳಿದಾಗ ಅದರಲ್ಲಿ ಹೆಚ್ಚಿನ ವೇಸ್ಟೇಜ್‌ಹೋಗುತ್ತದೆ. ಅರೆ ಅವೆಲ್ಲಾ ಏಕೆ ಅದು ದುಬಾರಿಯಾಗುತ್ತದೆ, ಎಂದೆನಿಸುವುದೇ ಇಲ್ಲ. ಕಾರಣ ಅದು ಅನಿವಾರ್ಯ.

    ಹಾಗೆಯೇ ಒಂದು ವೃತ್ತಿಪರರ ಸೇವೆಯನ್ನು ಪಡೆದುಕೊಳ್ಳುವಾಗ ಅವರ ಸೇವೆಗೆ ತಕ್ಕದಾದ ಸೇವಾ ಶುಲ್ಕವನ್ನು ನೀಡದಿದ್ದರೆ ನ್ಯಾಯಸಮ್ಮತವಾದ ಸೇವೆ ಹೇಗೆ ಸಾಧ್ಯ? ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಚಾರ ನೀಡುತ್ತಿರುವ ʼ ನೋ ಬ್ರೋಕರೇಜ್‌ʼ ಸಂಸ್ಥೆಗಳ ಸೇವೆ ಪಡೆದುಕೊಳ್ಳುವಾಗ ಅವುಗಳಲ್ಲಿ ಅಡಕವಾಗಿರುವ ಸೇವೆಗಳ ಅಂಶಗಳನ್ನು ತುಲನೆ ಮಾಡಿ ನಿರ್ಧರಿಸಬೇಕು.

    ಷೇರುಪೇಟೆಯಲ್ಲಿ ಹಿಂದೆ ಹೂಡಿಕೆ ಮಾಡಿದ ಹಣ ಈಗ ಹಲವು ಪಟ್ಟು ಹೆಚ್ಚಿದೆ. ಹಾಗೆಯೇ ಈಗ ಹೂಡಿಕೆ ಮಾಡಿದಲ್ಲಿ ಹೂಡಿಕೆ ಹಣ ಹಲವು ಪಟ್ಟು ಹೆಚ್ಚಲಿದೆ ಎಂಬ ಮಾತುಗಳು ಹೆಚ್ಚಿನವರಲ್ಲಿ ಕೇಳಿಬರುತ್ತದೆ. ಈಗ ತಾನೆ ಐ ಪಿ ಒ ಮೂಲಕ ವಿತರಣೆ ಮಾಡಿದ್ದೇವೆ ಅದನ್ನು ನ್ಯಾಯ ಸಮ್ಮತವೆಂದು ತೋರಿಸಲು ಐದು ವರ್ಷಗಳಷ್ಟು ಸಮಯ ನೀಡಬೇಕು ಎಂಬುದು ಕೆಲವರ ವಾದ. ಹೌದು ಸಮಯಾವಕಾಶ ನೀಡದಿದ್ದರೆ ಸಾಧಿಸುವುದಾದರೂ ಹೇಗೆ? ಆದರೆ ಆ ರೀತಿಯ ಸಮಯಾವಕಾಶ ಅಗತ್ಯವಿದ್ದಲ್ಲಿ ತಮ್ಮ ಬ್ರಾಂಡನ್ನು ಬಳಸಿಕೊಂಡು ಐದು ವರ್ಷಗಳ ನಂತರದ ಸಾಧನೆಗೆ ಇಂದೇ ಬೆಲೆಕಟ್ಟಿ ಆ ಬೆಲೆಯಲ್ಲಿ ಅಂದರೆ ಅತಿ ಹೆಚ್ಚಿನ ಪ್ರೀಮಿಯಂನಲ್ಲಿ ಷೇರು ವಿತರಣೆ ಮಾಡುವುದು ಸರಿಯೇ?

    5 ಕೋಟಿಯಿಂದ 10.7 ಕೋಟಿಗೆ ಏರಿಕೆ

    ಕಳೆದ ಎರಡುವರ್ಷಗಳಲ್ಲಿ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ಅಂಶಗಳ ಪ್ರಕಾರ ನೋಂದಾಯಿತ ಹೂಡಿಕೆದಾರರ ಸಂಖ್ಯೆಯು ಸುಮಾರು 5 ಕೋಟಿಯಿಂದ 10.7 ಕೋಟಿಗೆ ಏರಿಕೆಯಾಗಿದೆ. ಅಂದರೆ ಪೇಟೆಯೊಳಗೆ ಹರಿದುಬರುತ್ತಿರುವ ಆಸಕ್ತರ ಹಣ ಅತಿ ಹೆಚ್ಚಾಗುತ್ತಿದೆ. ಹೆಚ್ಚಿನವರು ಮ್ಯೂಚುಯಲ್‌ಫಂಡ್‌ಗಳ ಸಿಪ್‌ಮೂಲಕ ಹೂಡಿಕೆ ಮಾಡುತ್ತಿರುವುದರಿಂದ, ಅದೂ ಸಹ ಷೇರುಪೇಟೆಯತ್ತ ತಿರುಗುವುದರಿಂದ ಪೇಟೆಯೊಳಗೆ ಹರಿದುಬರುತ್ತಿರುವ ಹಣ ಹೆಚ್ಚಾಗಿದೆ. ಆದರೆ ಅದಕ್ಕನುಗುಣವಾಗಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಕಂಪನಿಗಳ ಸಂಖ್ಯೆ ಮಾತ್ರ ಏರಿಕೆಯಾಗಿರದೆ ಅದೇ ಹಂತದಲ್ಲಿದೆ. ಕೆಲವು ಕಂಪನಿಗಳು ಡಿಲೀಸ್ಟ್‌ಆಗಿರುವುದಾಗಲಿ, ಕೆಲವು ಕಂಪನಿಗಳಲ್ಲಿ ವಿಲೀನಗೊಳ್ಳುವ ಕ್ರಮದಿಂದಾಗಿ ವಹಿವಾಟಾಗುತ್ತಿರುವ ಕಂಪನಿಗಳ ಸಂಖ್ಯಾಗಾತ್ರವು ಕ್ಷೀಣಿತವಾಗುತ್ತಿದೆ. ಇದು ಷೇರುಪೇಟೆಯಲ್ಲಿ ಷೇರುಗಳ ಬೆಲೆಗಳಲ್ಲಿ ಏರಿಕೆ ಕಾಣಲಿಕ್ಕೆ ಪೂರಕ ಕಾರಣಗಳಾಗಿವೆ. ಆಯ್ಕೆಗಳು ವಿರಳ, ಬೇಡಿಕೆ ಬಹಳವಾದ ಕಾರಣ ಷೇರಿನ ಬೆಲೆಗಳಲ್ಲಿ ಹೆಚ್ಚು ಹೆಚ್ಚು ಏರಿಳಿತಗಳನ್ನು ಕಾಣಬಹುದಾಗಿದೆ.

    ಇತ್ತೀಚೆಗೆ ನಡೆದ ವರ್ಲ್ಡ್‌ ಎಕಾನಾಮಿಕ್‌ ಫೋರಂ ಪ್ರಕಾರ ” ಗ್ಲೋಬಲ್‌ ಇನ್ನೋವೆಟಿವೇಶನ್‌ ಇಂಡೆಕ್ಸ್”‌ ವಿಭಾಗದಲ್ಲಿ ಭಾರತದ ಸ್ಥಾನ 46 ಕ್ಕೇರಿದೆ. 2016 ರರಲ್ಲಿ 66 ನೇ ಸ್ಥಾನದಲ್ಲಿತ್ತು. ಅಲ್ಲದೆ ಭಾರತಕ್ಕೆ ಸ್ಟಾರ್ಟ್‌ ಅಪ್‌ ಎಕೋ ಸಿಸ್ಟಂ ವಿಭಾಗದಲ್ಲಿ 3ನೇ ಸ್ಥಾನವನ್ನು ನೀಡಲಾಗಿದೆ. ಇಂಡಿಯಾ ಗ್ಲೋಬಲ್‌ ಇನ್ನೋವೆಶನ್‌ ಸಮ್ಮಿಟ್‌ ನಲ್ಲಿ ವ್ಯಕ್ತಪಡಿಸಿದ ವಿಷಯ ಗಮನಾರ್ಹವಾದುದಾಗಿದೆ. ಅದೆಂದರೆ ಒಂದು ಉದ್ದಿಮೆ ಯಶಸ್ಸು ಕಾಣಬೇಕಾದರೆ ನಿರೀಕ್ಷಿತ ಮಟ್ಟದ ವಹಿವಾಟು, ಸದೃಢತೆ, ಲಾಭಗಳಿಕೆಯ ಸಾಮರ್ಥ್ಯ, ನಂಬಿಕೆಯ ಮಟ್ಟಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಾಗಿದೆ. ಆದರೆ ಈಚಿನ ದಿನಗಳಲ್ಲಿ ಕೇವಲ ವಹಿವಾಟಿನ ಗಾತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದ್ದು, ಕಂಪನಿಯ ಲಾಭಗಳಿಕೆಯ ಅಂಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ.

    ಸಾಮಾನ್ಯವಾಗಿ ಷೇರುಪೇಟೆಯ ಯಶಸ್ಸಿಗೆ ಅವಶ್ಯವಿರುವುದು ಮೌಲ್ಯಾಧಾರಿತ ಖರೀದಿ. ಅಂದರೆ ಒಂದು ಉತ್ತಮ ಕಂಪನಿಯ ಷೇರಿನ ಬೆಲೆ, ಭಾಹ್ಯ ಕಾರಣಗಳ ಪ್ರಭಾವದಿಂದ, ಭಾರಿ ಕುಸಿತ ಕಂಡಾಗ ಅದನ್ನು ಮೌಲ್ಯಾಧಾರಿತ ಖರೀದಿಗೆ ಪರಿವರ್ತಿಸಿಕೊಳ್ಳಬಹುದು. ಈರೀತಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಾಗ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದಲೇ ಎಂದು ನಿರ್ಧರಿಸಿರಬೇಕು. ಒಂದು ವೇಳೆ ಖರೀದಿಸಿದ ಷೇರಿನ ಬೆಲೆಯು ಅನಿರೀಕ್ಷಿತ ಮಟ್ಟದ ಏರಿಕೆಯನ್ನು ಅಲ್ಪಾವಧಿಯಲ್ಲೇ ಪ್ರದರ್ಶಿಸಿದಲ್ಲಿ ಪೂರ್ಣವಾಗಿಯಲ್ಲದಿದ್ದರೂ ಭಾಗಶ:ವಾದರೂ ಲಾಭದ ನಗದೀಕರಣ ಮಾಡಿಕೊಳ್ಳುವುದು ಉತ್ತಮ. ನೆನಪಿರಲಿ ಬ್ಯಾಂಕ್‌ಗಳಲ್ಲಿ ಠೇವಣಿ ಮೊತ್ತವು ದ್ವಿಗುಣವಾಗಲು ಸುಮಾರು 12 ವರ್ಷಗಳ ಸಮಯ ಬೇಕಾಗಬಹುದು. ಅಂದರೆ ಈ ಅಲ್ಪಬಡ್ಡಿದರದ ಯುಗದಲ್ಲಿ ಆಕರ್ಷಕ ಲಾಭವನ್ನು ಪೇಟೆ ಒದಗಿಸಿದಾಗ ಫಲಾನುಭವಿಯಾಗುವುದು ಸರಿಯಾದ ಕ್ರಮ.

    ಆಕರ್ಷಣೀಯ ಲಾಭಾಂಶ ಮತ್ತು ಕಾರ್ಪೊರೇಟ್‌ಫಲಗಳನ್ನು ವಿತರಿಸಿದ ಕಂಪನಿಗಳ ಪಟ್ಟಿ ಇಂತಿದೆ.

    Name of CompanyMarket rateDividendsPrevious year Rs.
    BPCL3285+5+679.00
    COAL INDIA1979+ 5 +316.00
    GAIL1474+5+ buyback+1  5.00 + buyback
    H P C L23314.00  22.75
    I O C1185 + 4 +3.6012.00
    IRCON ( 2)400.70+0.70+0.65  2.15 + 1:1 BONUS
    R V N L331.58  2.72
    IRFC220.77+0.63  1.05
    N M D C (1)1279.01 +5.73 7.76 + BUY BACK
    N T P C1554.00 + 3.00 6.15 + BUYBACK
    P  F C1122.25+2.50+6.00+1.2510.00
    POWER GRID CORP2257 +5.50+ 2.25 9.00 + 1: 3 BONUS
    OIL INDIA2503.50+5.75+5.00 5.00
    R E C1192.50+6.00+4.80 8.71
    SAIL764.00+2.50+2.25 2.80
    BALMER LAWRI INVESTMENTS37730.0038.00 (37.50 PRVYR)
    SANOFI6,900490.00365.00

    *ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ. ಇದು ಕೇವಲ ಮಾಹಿತಿಗಾಗಿ ಮಾತ್ರ. ಯಾವುದೇ ಶಿಫಾರಸ್ಸಿನ ದೃಷ್ಠಿಯಿಂದಲ್ಲ.

    ಮೇಲಿನ ಕಂಪನಿಗಳು ಆಕರ್ಷಣಿಯ ಪ್ರಮಾಣದ ಲಾಭಾಂಶಗಳನ್ನು ಹಿಂದಿನ ವರ್ಷಗಳಲ್ಲಿ ವಿತರಿಸಿವೆ. ಆದರೆ ಮುಂದೆಯೂ ಇದೇ ರೀತಿಯ ವಿತರಣೆಯಾಗಬಹುದೆಂದು ನಿಶ್ಚಿತವಾಗಿ ಹೇಳಲು ಅಸಾಧ್ಯ. ಆದರೂ ಹೂಡಿಕೆ ಮಾಡಿದ ಮೇಲೆ ಆ ಕಂಪನಿಗಳಲ್ಲುಂಟಾಗುವ ಪ್ರಭಾವಿ ನಡೆಗಳ ಮೇಲೆ ನಿಗಾ ಇರಿಸಿರಬೇಕು.

    ಇನ್ನು ಕೆಲವು ಅಗ್ರ ಮಾನ್ಯ ಕಂಪನಿಗಳು ಕಾರ್ಪೊರೇಟ್‌ಫಲಗಳ ಆಧಾರದ ಮೇಲೆ ಅಲ್ಪ ಕಾಲೀನದಲ್ಲೇ ಅಪೂರ್ವ ಅವಕಾಶಗಳನ್ನು ಕಲ್ಪಿಸುತ್ತವೆ. ಇದಕ್ಕೆ ಉದಾಹರಣೆಗಳು ಇಂತಿವೆ.

    ಬೋನಸ್‌ ಷೇರಿನ ವಿಚಾರದಲ್ಲಿ ಪ್ರಮುಖ ಕಂಪನಿಗಳಾದ ಹಿಂದೂಜಾ ಗ್ಲೋಬಲ್‌ ಸೊಲೂಷನ್ಸ್‌, ಬಿ ಎಸ್‌ ಇ , ಗೋದಾವರಿ ಪವರ್‌ ಅಂಡ್‌ ಇಸ್ಪಾಟ್‌, ಮುಂತಾದ ಕಂಪನಿಗಳು, ಷೇರಿನ ಮುಖಬೆಲೆ ಸೀಳಿಕೆ ಸಂದರ್ಭದಲ್ಲಿ ಐ ಆರ್‌ ಸಿ ಟಿ ಸಿ, ಜುಬಿಲಿಯಂಟ್‌ ಫುಡ್‌, ಸರಿಗಮ ಇಂಡಿಯಾ, ವರ್ಧಮಾನ್‌ ಟೆಕ್ಸ್‌ಟೈಲ್ಸ್‌ ನಂತಹಕಂಪನಿಗಳು ಪ್ರದರ್ಶಿಸಿದ ಏರಿಳಿತಗಳ ವೈಖರಿ, ಲಾಭಾಂಶ ಗಳ ಘೋಷಣೆಯ ನಂತರ ಕಂಪನಿಗಳಾದ ಸನೋಫಿ, ಇನಿಯೋಸ್‌ ಸ್ಟೈರೊಲೂಷನ್‌, ವೇದಾಂತ, ಟಾಟಾ ಇನ್ವೆಸ್ಟ್ ಮೆಂಟ್ಸ್‌, ಟಾಟಾ ಕೆಮಿಕಲ್ಸ್‌, ಜಿ ಎಂ ಡಿ ಸಿ, ಇಂಡಿಯನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ನಂತಹ ಅಗ್ರಮಾನ್ಯ ಕಂಪನಿಗಳು ಪ್ರದರ್ಶಿಸಿದ ರಭಸದ ಏರಿಳಿತಗಳು ಪೇಟೆಯಲ್ಲಿ ವಹಿವಾಟುದಾರರ, ಹೂಡಿಕೆದಾರರ ಚಿಂತನಾ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.

    ಒಂದು ರೀತಿ ಬೇಗ ಬೇಗ ಡ್ರಾ – ಬೇಗ ಬೇಗ ಬಹುಮಾನ ಎಂಬಂತಹ ಪರಿಸ್ಥಿತಿಯಲ್ಲಿರಲು ಕಾರಣ ಪೇಟೆಯ ಮೇಲೆ ಪ್ರಭಾವಿಯಾಗಬಲ್ಲ ಅಂಶಗಳು ಹೆಚ್ಚಾಗಿದ್ದು, ಯಾವ ಸಂದರ್ಭದಲ್ಲಿ ಯಾವ ಅಂಶ ನಾಯಕತ್ವ ವಹಿಸಿ ಪ್ರಭಾವ ಬೀರುತ್ತದೆಂಬುದನ್ನು ಕಲ್ಪಿಸಲಸಾಧ್ಯವಾದ ಹಂತದಲ್ಲಿರುವಾಗ, ಕಣ್ಣಿಗೆ ಗೋಚರವಾಗುವ ಪರದೆಯ ಮೇಲಿನ ಅಂಕಿ ಅಂಶಗಳನ್ನಾಧರಿಸಿ ನಿರ್ಧರಿಸಿದಲ್ಲಿ, ಬಂಡವಾಳ ಸುರಕ್ಷತೆಯೊಂದಿಗೆ, ಸ್ವಲ್ಪಮಟ್ಟಿನ ಆದಾಯಕ್ಕೂ ಆಸ್ಪದವಾಗಬಹುದಲ್ಲವೇ?

    ಒಂದು ಕಂಪನಿಯು ಆಕರ್ಷಣೀಯ ರೀತಿಯಲ್ಲಿ ಫಲಿತಾಂಶ ಪ್ರಕಟಿಸಿದಲ್ಲಿ, ಆ ಷೇರಿನ ಬೆಲೆ ಮುಂಚಿತವಾಗಿಯೇ ಏರಿಕೆ ಕಂಡ ಕಾರಣ ಮೇನೇಜ್‌ ಮೆಂಟ್‌ ನ ಕಾಮೆಂಟರಿ ಪ್ರೋತ್ಸಾಹದಾಯಕವಿಲ್ಲ ಎಂಬ ನೆಪದಿಂದ ಭಾರಿ ಪ್ರಮಾಣದ ಕುಸಿತವನ್ನು ಫಾರ್ಮ ವಲಯದ ಕಂಪನಿ ಪ್ರದರ್ಶಿಸಿದೆ. ಒಂದು ಕಂಪನಿಯು ತನ್ನ ಕಾರ್ಯವ್ಯಾಪ್ತಿಯನ್ನು ಪೇಂಟ್ಸ್‌ ವಿಭಾಕ್ಕೆ ವಿಸ್ತರಿಸಲು ಸುಮಾರು ರೂ.50 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂಬ ಸುದ್ಧಿಯು ಪೇಂಟ್ಸ್ ವಲಯದ ಷೇರುಗಳ ಕುಸಿತಕ್ಕೆ ಕಾರಣವಾಯಿತು. ಕೇವಲ ಪ್ರಸ್ತಾವನೆಗೆ ಈ ರೀತಿ ಸ್ಪಂದನೆ. ಈ ಯೋಜನೆ ಜಾರಿಯಾಗಲು ಹಲವಾರು ವರ್ಷಗಳೇ ಬೇಕಾಗಬಹುದಾದರೂ, ಭಾವನಾತ್ಮಕವಾಗಿ ಸ್ಪಂಧಿಸುವ ಇಂದಿನ ಶೈಲಿ ಇದಾಗಿದೆ. ಸೀಮೆಂಟ್‌ ಕಂಪನಿಯು ತನ್ನ ಉತ್ಪಾಧನೆಯನ್ನು ಹೆಚ್ಚಿಸಲು ಸುಮಾರು ರೂ.12 ಸಾವಿರ ಕೋಟಿ ಹೂಡಿಕೆ ಮಾಡುವ ಯೋಜನೆ ಪ್ರಕಟಿಸಿದರೆ ಆ ಷೇರಿನ ಬೆಲೆ ರೂ.400 ಕ್ಕೂ ಹೆಚ್ಚಿನ ಕುಸಿತಕ್ಕೊಳಗಾಗಬೇಕಾಯಿತು. ಈವಾರ ಟೆಕ್ಸ್‌ ಟೈಲ್‌ ವಿಭಾಗದ ಕಂಪನಿಗಳು ಭಾರಿ ಏರಿಕೆಯನ್ನು ಒಂದು ದಿನ ಪಡೆದುಕೊಂಡವು. ಆದರೆ ನಂತರದ ದಿನವೇ ಹೆಚ್ಚಿನ ಕುಸಿತಕ್ಕೊಳಗಾದವು. ಅಂದರೆ ಅವಕಾಶಗಳು ಮಿಂಚಿನ ವೇಗದಲ್ಲಿ ಸೃಷ್ಠಿಯಾಗಿ , ಕ್ಷಿಪಣಿ ವೇಗದಲ್ಲಿ ಮಾಯವಾಗುತ್ತಿವೆ.

    ಈಗಿನ ಚಿಂತನೆಗಳು ಹೇಗಿದೆ ಎಂದರೆ ನಮ್ಮ ಪ್ರೊಫೈಲ್‌ ನ ಅಂಶಗಳು ದುರುಪಯೋಗಪಡಿಸಿಕೊಳ್ಳಬಾರದೆಂದು ಅದನ್ನು ಲಾಕ್‌ ಮಾಡುತ್ತೇವೆ ಆದರೆ ಹಣಕಾಸಿನ ವಿಚಾರದಲ್ಲಿ ನಮ್ಮ ಸುರಕ್ಷತೆಯನ್ನು ಸಾಧಿಸಲು ನಿರ್ಲಕ್ಷಿಸುತ್ತೇವೆ. ಕಾರಣ ಪೇಟೆಯಲ್ಲಿ ಸಹಜವಾಗಿ ನಮಗೆ ದೊರೆತಂತ ಅವಕಾಶಗಳನ್ನು ಕೈಚೆಲ್ಲುತ್ತೇವೆ. ಕಾಣದೆ ಇರುವ ಪ್ರಚಾರಿಕ ತಂತ್ರದ ಅಲಂಕಾರಿಕ ಪದಗಳಿಗೆ ಮೋಹಿತರಾಗಿ ನಮ್ಮ ಚಿಂತನೆಗಳನ್ನು ಮರೆತುಬಿಡುತ್ತೇವೆ. ಒಂದು ಪ್ರಮುಖ ಸರಳ ಹೂಡಿಕೆಯ ಸೂತ್ರವೆಂದರೆ, ಇನ್ಫೋಸಿಸ್‌ ಸಂಸ್ಥೆಯ ಪ್ರವರ್ತಕರಾದ ನಾರಾಯಣ ಮೂರ್ತಿಯವರಂತೆ, ಒಂದು ಕಂಪನಿಯು ಯಶಸ್ವಿಯಾಗಬೇಕಾದರೆ ಆ ಕಂಪನಿಯ ಟಾಪ್‌ ಲೈನ್‌ ಮತ್ತು ಬಾಟಮ್‌ ಲೈನ್‌ ಸಾಧನಾ ಅಂಶಗಳು ಉತ್ತಮವಾಗಿರಬೇಕು. ಆದರೆ ಈಗಿನ ದಿನಗಳಲ್ಲಿ ಕೇವಲ ಟಾಪ್‌ ಲೈನ್‌ ಬೆಳವಣಿಗೆಗಳಿಗೆ ಒತ್ತು ನೀಡಿ ಕಂಪನಿಗಳು ಹಾನಿಗೊಳಗಾಗಿದ್ದರೂ, ಅಲಂಕಾರಿಕ ಪದಗಳನ್ನು, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಾಧನೆ ಮಾಡಬಹುದೆಂಬ ಅಂಶಗಳನ್ನು ಬಿಂಬಿಸಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಸಹಜವಾಗಿ ಕಂಪನಿಗಳು ಲಾಭಗಳಿಕೆಯೊಂದಿಗೆ ಹೂಡಿಕೆದಾರರಿಗೆ ಪ್ರತಿಫಲಗಳನ್ನು ನೀಡುವ ಕಂಪನಿಗಳ ಬಗ್ಗೆ ಚಕಾರವೆತ್ತದೆ ಕಡೆಗಣಿಸುವುದು ವಾಡಿಕೆಯಾಗಿದೆ.

    ಈ ಸಂದರ್ಭದಲ್ಲಿ ಕಂಪನಿಗಳನ್ನು ಹೋಲಿಕೆ ಮಾಡುವ ಮುನ್ನ ಲೆವೆಲ ಪ್ಲೇಯಿಂಗ್‌ ವೇದಿಕೆಯನ್ನು ಸಿದ್ಧಗೊಳಿಸಿಕೊಂಡು ಮಾಪನಮಾಡಬೇಕು. ಉದಾಹರಣೆಗೆ ಎಲ್‌ ಐ ಸಿ ಆಫ್‌ ಇಂಡಿಯಾದ ಷೇರಿನ ಬೆಲೆ ಭಾರಿ ಕುಸಿತಕ್ಕೊಳಗಾಗಿದೆ ಎಂಬ ಪ್ರಚಾರ ಹೆಚ್ಚಾಗುತ್ತಿದೆ. ಆದರೆ ಆ ಷೇರಿನ ಮುಖಬೆಲೆ ರೂ.10 ಆಗಿದ್ದು ಇತರೆ ಹೊಸ ಕಂಪನಿಗಳಾದ ಡೆಲಿವರಿ, ಪೇಟಿಎಂ, ನೈಕಾ, ಝೊಮೆಟೋ, ವಿಜಯ್‌ ಡಯಾಗ್ನಾಸ್ಟಿಕ್ಸ್‌, ಮುಂತಾದವುಗಳ ಷೇರಿನ ಮುಖಬೆಲೆ ರೂ.1 ಆಗಿದೆ. ಅಂದರೆ ಎಲ್‌ ಐ ಸಿ ಷೇರನ್ನು ಈ ಕಂಪನಿಗಳಿಗೆ ಹೋಲಿಸಬೇಕಾದಲ್ಲಿ ರೂ.10 ರ ಮುಖಬೆಲೆಯ ಷೇರನ್ನು ರೂ.1 ಕ್ಕೆ ಪರಿವರ್ತಿಸಿ ಅಂದರೆ ಈಗಿನ ರೂ.800 ರ ಸಮೀಪವಿರುವ ಷೇರು ರೂ.80 ಆಗುತ್ತದೆ. ರೂ.80 ರ ಸಮೀಪವಿರುವ, ಅತಿ ಹೆಚ್ಚಿನ ರಿಯಲ್‌ ಎಸ್ಟೇಟ್ ಸ್ವತ್ತನ್ನು ಹೊಂದಿರುವ, ಗಣನೀಯ ಪ್ರಮಾಣದ ಭಾಗಿತ್ವವನ್ನು ಅಗ್ರಮಾನ್ಯ ಕಂಪನಿಗಳಲ್ಲಿ ಹೊಂದಿರುವ, ಆಕರ್ಷಣೀಯ ಮಟ್ಟದ ಲಾಭಗಳಿಸುತ್ತಿರುವ, ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ, ಕೈಗಾರಿಕೋದ್ಯಮವನ್ನು ಪೋಷಿಸಿ ಬೆಳೆಸುತ್ತಿರುವ, ಸಾರ್ವಜನಿಕ ಜವಾಬ್ಧಾರಿಯನ್ನು ವಿಮಾ ಯೋಜನೆಗಳ ಮೂಲಕ ನಿರ್ವಹಿಸುತ್ತಿರುವ, ಅಪಾರ ಸಂಖ್ಯೆಯ ಪ್ರತಿನಿಧಿಗಳಿಗೆ ಜೀವನ ಕಟ್ಟಿಕೊಟ್ಟಿರುವ ಒಂದು ಬೃಹತ್‌ ಸಂಸ್ಥೆಯ ಸಾಧನೆಯ ಮುಂದೆ ಇತರೆ ಕಂಪನಿಗಳು, ಅದರಲ್ಲೂ ಹಾನಿಗೊಳಗಾಗಿದ್ದರೂ, ವೈವಿಧ್ಯಮಯ ಅಲಂಕಾರಿಕ ಶಬ್ಧಗಳಿಂದ ಮರಳುಮಾಡಲಿಚ್ಚಿಸುತ್ತಿರುವ ಕಂಪನಿಗಳ ಬಗ್ಗೆ ಅರಿತು ಹೂಡಿಕೆ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಮಾತ್ರ ಉತ್ತಮ ಪ್ರತಿಫಲ ಪಡೆದುಕೊಳ್ಳಲು ಸಾಧ್ಯ.

    ಇದರಿಂದ ಹೂಡಿಕೆಯು ಮನಿ ವಿಕಾಸದೊಂದಿಗೆ ಮನೋವಿಕಾಸಕ್ಕೆ ದಾರಿಮಾಡಿಕೊಟ್ಟಂತಾಗುವುದಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!