33.6 C
Karnataka
Friday, May 10, 2024

    ಹುಟ್ಟು ಹಬ್ಬಕ್ಕೆ ಅಣ್ಣನಿಗೆ ನುಡಿ ಹರಕೆ

    Must read

    ಎಸ್.ಜಗನ್ನಾಥರಾವ್ ಬಹುಳೆ

    ನಮ್ಮ ಅಣ್ಣಾವ್ರು ವರನಟ ಡಾ. ರಾಜ್ ಕುಮಾರ್ ಭೌತಿಕವಾಗಿ ನಮ್ಮಿಂದ ದೂರಾಗಿ ಏಪ್ರಿಲ್ 12 ಕ್ಕೆ ಹದಿನಾರು ವರ್ಷಗಳಾದರೆ ಈ ಬಾರಿಯ ಏಪ್ರಿಲ್ 24 ಕ್ಕೆ ಅವರ 93ನೇ ಜನ್ಮದಿನ. ಅಭಿಮಾನಿ ದೇವರುಗಳ ಹೃದಯಗಳಲ್ಲಿ, ನಾಡಿನ ಜನತೆಯ ಸ್ಮೃತಿಗಳಲ್ಲಿ ಮಾತ್ರ ನಿತ್ಯ ನಿರಂತರ ನಂದಾದೀಪವಾಗಿ ಬೆಳಗುತ್ತಿರುವ ಅಣ್ಣಾವ್ರು ಕಳೆದ ಶತಮಾನದಲ್ಲಿಅವತರಿಸಿದ ಕನ್ನಡದ ಅದ್ಭುತ ಚೇತನ ಎನ್ನಲು ಯಾವ ಅತಿಶಯವೂ ಇಲ್ಲ.

    ಚಿತ್ರ ಕೃಪೆ :ಭವಾನಿ ಲಕ್ಷ್ಮಿನಾರಾಯಣ/ CHITHRAPATHA.COM

    ಇದೀಗ ಸಾಮಾಜಿಕ ಜಾಲತಾಣಗಳ ಕ್ರಾಂತಿಯ ಕಾಲ. ತುಸು ಇತ್ತ ಗಮನಿಸಿದರೆ ಸಾಕು ಅಣ್ಣಾವ್ರ ಅಭಿಮಾನದ ಜ್ವಲಂತ ಸಾಕ್ಷಿಗಳು ನಮ್ಮ ಮುಂದೆ ಅಚ್ಚರಿಗಳನ್ನು ಮೂಡಿಸುತ್ತಾ ಹೋಗುತ್ತದೆ. ಒಂದೇ ಎರಡೇ ರಾಜ್ ಕುರಿತು ಹೊರಬಂದಿರುವ ನೂರಾರು ಕೃತಿಗಳಿಂದ, ಸಹಸ್ರಾರು ಲೇಖನಗಳಿಂದ, ಗಣ್ಯರ ಅನುಭವಗಳಿಂದ ಲಹರಿ ಲಹರಿಯಾಗಿ ಹೊರಬರುತ್ತಿರುವ ವಿಚಾರಧಾರೆಗಳು ಪ್ರವಾಹದ ರೀತಿಯಲ್ಲಿ ಉಕ್ಕಿ ಉಕ್ಕಿ ಭೋರ್ಗರೆಯುತ್ತಿದೆ. ರಾಜ್ ಕುರಿತು ಮಾತನಾಡುವವರದೇ ಬಳಗ ಸೃಷ್ಟಿಯಾಗಿಹೋಗಿದೆ. ಯೂಟ್ಯೂಬ್ ಚಾನೆಲ್‌ಗಳಂತೂ ರಾಜ್‌ಗಾಗಿಯೇ ತಮ್ಮ ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಎಲ್ಲಕ್ಕೂ ಲಕ್ಷ ಲಕ್ಷ ವೀಕ್ಷಣೆಗಳು, ಮೆಚ್ಚುಗೆಗಳು ಅಣ್ಣಾವ್ರ ಕುರಿತ ಕಳಕಳಿಯನ್ನು ಸಾರುತ್ತಲೇ ಬಂದಿವೆ.

    ರಾಜ್ ಕುರಿತು ಇದುವರೆಗೆ ಅಧಿಕೃತವಾಗಿ ಇನ್ನೂರರ ಗಡಿಯಲ್ಲಿ ಪುಸ್ತಕಗಳು ರಚನೆಯಾಗಿವೆಯಾದರೂ ಬರೆಯುತ್ತಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಭೂಗೋಳಕ್ಕೆ ಒಂದು ಎಲ್ಲೆ ಇರಬಹುದು. ರಾಜ್ ವಿಚಾರಗಳಿಗಂತೂ ಎಲ್ಲೆಯೂ ಇಲ್ಲ, ಗಡಿಯಂತೂ ಇಲ್ಲವೇ ಇಲ್ಲ. ಎಲ್ಲೆಡೆ ಹೊಸ ವಿಚಾರಗಳನ್ನು ರಾಜ್ ಕುರಿತು ಹೇಳಬೇಕೆಂಬ ಧಾವಂತ. ಅವರ ಶ್ರೇಷ್ಟತೆಯನ್ನು ದಾಖಲಿಸಬೇಕೆಂಬ ಆತುರ. ಅಬ್ಬಾ! ನಿಜಕ್ಕೂ ರಾಜ್ ಕುರಿತ ಈ ಅಭಿಮಾನ ನಭೂತೋ ನಭವಿಷ್ಯತಿ.

    ಅಚ್ಚರಿ ಎಂದರೆ, ಕರ್ನಾಟಕದಲ್ಲಿ ಅನೇಕ ಮಂದಿ ಗಣ್ಯಾತಿಗಣ್ಯ ಸಾಧಕರಿದ್ದಾಗ್ಯೂ ಜನತೆಯಿಂದ ಈವರೆಗೂ ಸರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಕನ್ನಡ ಜನತೆ ಜನಪ್ರಿಯತೆ ಮತ್ತು ಪ್ರೀತಿಯನ್ನು ಡಾ|| ರಾಜ್‌ರಿಗೆ ಧಾರೆ ಎರೆದಿರುವ ಬಗೆ ನಿಜಕ್ಕೂ ಅದ್ವಿತೀಯ. ಇದು ಸಿನಿಮಾದಿಂದ ಮಾತ್ರ ಸಾಧ್ಯವಾಗಿದೆಯೇ ಎಂದರೆ ಆ ಮಾತನ್ನು ಪೂರ್ಣವಾಗಿ ಒಪ್ಪಲು ಆಗದು. ಆದರೆ, ರಾಜ್ ನಿರ್ವಹಿಸಿದ ಪಾತ್ರಗಳು ಬಹುಮಟ್ಟಿಗೆ ಜನಸಾಮಾನ್ಯರ ನಾಡಿ ಮಿಡಿತಕ್ಕೆ ತಕ್ಷಣ ಸ್ಪಂದಿಸುವ ಪಾತ್ರಗಳೇ ಆಗಿದ್ದರಿಂದ, ಆ ಪಾತ್ರಗಳಲ್ಲಿ ಅವರ ನಡೆ ನುಡಿಗಳಲ್ಲಿ ನಿಜ ಜೀವನಕ್ಕೆ ಅಪವಾದ ತರುವ ಯಾವೊಂದು ಅಂಶವೂ ಇಲ್ಲದ್ದರಿಂದ ರಾಜ್ ರಾಜ್ಯದ ಸಾಮಾನ್ಯ ಜನತೆಗೆ ಭಾವನಾತ್ಮಕವಾಗಿ ತೀರಾ ಹತ್ತಿರವಾದರು ಎಂಬ ವಿಶ್ಲೇಷಣೆ ಅವರ ಪ್ರಚಂಡ ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ.

    ಭಾಷಾ ಶುದ್ಧತೆ

    ಡಾ|| ರಾಜ್ ಅವರ ಕನ್ನಡ ಭಾಷಾ ಶುದ್ಧತೆ ಅಪ್ಪಟ ದೇಶೀ ತುಪ್ಪದಂತೆ. ಪರಿಶುದ್ಧವಾಗಿ ನಾಡಭಾಷೆಯನ್ನು ಮಾತಾಡುವ ಯಾವುದೇ ಕಲಾವಿದ ಆ ಭಾಷೆಯ ಜನತೆಗೆ ತೀರಾ ಹತ್ತಿರವಾಗುತ್ತಾನೆ ಎನ್ನುವುದಕ್ಕೆ ಜೀವಂತ ಸಾಕ್ಷಿ ರಾಜ್. ಅವರ ಉಚ್ಚಾರಣೆಯಲ್ಲಿ ಅವರು ಸಂಭಾಷಣೆಯನ್ನು ಹೇಳುವ ಶೈಲಿಯಲ್ಲಿ ಆರ್ಭಟವಿಲ್ಲ. ಸಂಸ್ಕೃತಿ ಇದೆ, ಸಂಸ್ಕಾರವಿದೆ.
    ನಿಜ ಜೀವನದಲ್ಲಿ ಅವರು ನಡೆದುಕೊಳ್ಳುವ ರೀತಿ, ಅವರ ಸೌಜನ್ಯ, ಅವರ ಸರಳತೆಗಳು ಅವರ ವ್ಯಕ್ತಿತ್ವವನ್ನು ನೂರು ಪಟ್ಟು ಹೆಚ್ಚಿಸಿರುವ ಗುಣಗಳು. ಅವರೆಂದೂ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಮೆರೆದವರಲ್ಲ. ತಮ್ಮ ಕೂಲಿಂಗ್ ಗ್ಲಾಸ್ ಮೂಲಕ ಹೊರ ಜೀವನವನ್ನು ಬೇರೊಂದು ಬಣ್ಣದಿಂದ ನೋಡಲಿಲ್ಲ. ಜನತೆಯೊಂದಿಗೆ ನೇರವಾಗಿ ನಿರ್ವಂಚನೆಯಿಂದ ಬೆರೆತರು. ಅವರು ಪದೇ ಪದೇ ಹೇಳುವಂತೆ ಜನಸ್ತೋಮದ ಅಪಾರ ಅಭಿಮಾನ ಸೂಸುವ ಕಣ್ಣುಗಳಲ್ಲಿ ಭಗವಂತನನ್ನೇ ಕಂಡರು. ಜನತೆ ಬೇರೆಯಾಗಲಿಲ್ಲ, ಅವರು ಬೇರೆಯಾಗಲಿಲ್ಲ.

    ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ಅವರು ಹೇಳುವಂತೆ “ಡಾ|| ರಾಜ್ ವ್ಯಕ್ತಿತ್ವವೇ ಒಂದು ರೀತಿಯ ಅದ್ವೈತ! ಪ್ರಾಯಶಃ ಭಾರತದಲ್ಲಿ ಇನ್ಯಾವ ರಾಜ್ಯದಲ್ಲಿಯೂ ಇನ್ನಾವ ಊಬ್ಬ ವ್ಯಕ್ತಿಯೂ ಸಮಷ್ಠಿಯೊಂದಿಗೆ ತನ್ನ ವ್ಯಕ್ತಿತ್ವವನ್ನು ಈ ರೀತಿ ಲೀನವಾಗಿಸಿಕೊಂಡಿರಲಾರ.”

    ಇದೇ ವಿಚಾರವಾಗಿ ಒಮ್ಮೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸುತ್ತಾ “ಈ ರಾಜ್ ನಮ್ಮವನು ಅಂತಾರಲ್ಲ ಅದುವೇ ನಾನು ಜೀವನದಲ್ಲಿ ಮಾಡಿದ ‘ಸಂಪಾದನೆ’. ಅಭಿಮಾನಕ್ಕೆ ಪ್ರತಿಯಾಗಿ ಕೊಡುವುದಕ್ಕೆ ಇದ್ದದ್ದು ಒಂದೇ ಪದ. ಅದುವೇ ಅಭಿಮಾನಿ ದೇವರುಗಳೇ ಎಂಬುದು. ಕನ್ನಡದ ಕೋಟ್ಯಾನುಕೋಟಿ ದೇವರುಗಳ ಅಭಿಮಾನ ಪಡೆದ ನಾನು ಕೋಟ್ಯಧಿಪತಿಯೇ ಅಲ್ಲವೆ? ಎಂದಿದ್ದರು.

    ನೇರ ಮಾತು, ನೇರ ನಡೆ

    ರಾಜ್ ಎಂಥಹುದೇ ಸಂದರ್ಭದಲ್ಲಿ ಸಹ ತಮ್ಮ ಸಹಜಶೀಲತೆಯನ್ನು ತೋರುವಲ್ಲಿ ಸಂಕೋಚ ಪಡುತ್ತಿರಲಿಲ್ಲ. ನೇರ ಮಾತು, ನೇರ ನಡೆ, ಇದಕ್ಕೊಂದು ಪುಟ್ಟ ಉದಾಹರಣೆ. ಬೆಂಗಳೂರು-ಮೀರಜ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲು ಕೇಂದ್ರ ಸರ್ಕಾರದ ಮಂತ್ರಿಗಳು, ರಾಜ್ಯ ಸರ್ಕಾರದ ಮಂತ್ರಿಗಳು, ಗಣ್ಯರು ಸೇರಿದ್ದ ಸಭೆ, ಸಾರ್ವಜನಿಕ ಬೃಹತ್ ಸಮಾರಂಭ. ರಾಜ್ಯದ ರೈಲ್ವೆ ಪ್ರಗತಿಯ ಬಗ್ಗೆ ಹಿರಿಯರು, ಗಣ್ಯರು, ಮಂತ್ರಿಗಳು ಮಾತಾಡಿದ ಮೇಲೆ, ಹಸಿರು ನಿಶಾನೆ ತೋರಿದ ಮುಖ್ಯ ಅತಿಥಿ ರಾಜ್ ಮಾತನಾಡಲು ಆರಂಭಿಸಿ ಔಪಾಚಾರಿಕ ಮಾತುಗಳಾದ ಬಳಿಕ ನೇರವಾಗಿ ನೆನಪಿನಾಳಕ್ಕೆ ಇಳಿದರು. ಅವರು ಹಿಂದೆ ನಾಟಕ ಕಂಪನಿಯಲಿದ್ದಾಗ ಮೀಟರ್‌ಗೇಜ್ ರೈಲಿನಲ್ಲಿ ಓಡಾಡಿದ್ದು. ಮದ್ರಾಸ್-ಬೆಂಗಳೂರು ನಡುವಿನ ಪ್ರಯಾಣದ ಸೊಗಸು. ಪ್ರಯಾಣಿಸಿ ಇಳಿದಾಗ ಮೈಯೆಲ್ಲಾ ಉಗಿಬಂಡಿ ಹೊಗೆಯಿಂದ ಕಪ್ಪಾಗಿ ಬಿಡುತ್ತಿದ್ದ ಪ್ರಸಂಗವನ್ನು ರಸವತ್ತಾಗಿ ವರ್ಣಿಸಿದರು. ತಮ್ಮ ಸ್ಥಾನಗಳ ಘನತೆಯನ್ನು, ತಮ್ಮ ಉಪಸ್ಥಿತಿಯ ಘನತೆಯನ್ನು ಕಾಪಾಡಿಕೊಂಡು ಎತ್ತರದ ಭಾಷಣಗಳನ್ನು ಮಾಡುವ ಮಂದಿಯ ಮಧ್ಯೆ, ಉಗಿಬಂಡಿಯ ಹೊಗೆಯಿಂದ ತಾವು ಕಪ್ಪಾಗಿದ್ದ ಸರಳಾತಿ ಸರಳ ಉದಾಹರಣೆಯನ್ನು ಜೀವನದ ಭಾಗವಾಗಿ ನೆನೆದ ರಾಜ ಪರಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

    ಇಂದಿನ ಸಂದರ್ಭಕ್ಕೆ ಮಾದರಿ ಎನಿಸುವ ಎರಡು ಪ್ರಸಂಗಗಳನ್ನು ರಾಜ್ ಕುರಿತು ಇಲ್ಲಿ ನೆನೆಯಲು ಇಚ್ಛಿಸುತ್ತೇನೆ. ಇತ್ತೀಚೆಗೆ ಕನ್ನಡ ಚಲನಚಿತ್ರಗಳಿಗೆ ಪ್ರಮುಖ ಪಾತ್ರಧಾರಿಗಳನ್ನಾಗಿ ನಮ್ಮ ದೊಡ್ಡ ದೊಡ್ಡ ಹೀರೋಗಳು ಪರಭಾಷೆಯ ಪ್ರಸಿದ್ಧರನ್ನು ಕರೆತರುವ ಬಗ್ಗೆ ವಿಮರ್ಶೆಗಳು ನಡೆಯುತ್ತಲೇ ಇದೆ. ಡಾ. ರಾಜ್‌ರ ಎರಡು ಮಹೋನ್ನತ ಚಿತ್ರಗಳಾದ ಶಂಕರ್‌ಗುರು ಮತ್ತು ಬಬ್ರುವಾಹನ ಚಿತ್ರಗಳಿಗೂ ಇದೇ ಮಾತುಕತೆ ನಡೆದಿತ್ತು. ಶಂಕರ್‌ಗುರುವಿಗೆ ಇಮೇಜ್ ದೃಷ್ಟಿಯಿಂದ ಹಿಂದಿ ಭಾಷೆಯ ಖ್ಯಾತ ವಿಲನ್‌ಗಳನ್ನು ಕರೆಸುವ ಬಗ್ಗೆ ಚರ್ಚೆ ಆಗಿತ್ತು. ರಾಜ್ ಒಪ್ಪಲೇ ಇಲ್ಲ. ಅದೇ ಕಾಸ್ಟ್ಯೂಮ್‌ಗಳನ್ನು ನಮ್ಮವರಿಗೆ ಹಾಕಿ ಮಾಡಿಸಿ ಎಂದು ಪಟ್ಟು ಹಿಡಿದರು. ತೂಗುದೀಪ, ವಜ್ರಮುನಿ, ಶನಿಮಹಾದೇವಪ್ಪ ಚಿತ್ರದ ವಿಲನ್‌ಗಳಾಗಿ ಮಿಂಚಲು ಕಾರಣವಾಯಿತು. ಹಾಗೆಯೇ ಬಬ್ರುವಾಹನ ಚಿತ್ರದ ಕೃಷ್ಣನ ಪಾತ್ರಧಾರಿಯಾಗಿ ಪರಭಾಷೆಯ ಪ್ರಸಿದ್ಧ ನಟರನ್ನು ಕರೆಸಲು ತೀರ್ಮಾನವಾಗಿತ್ತು. ರಾಜ್ ನಮ್ಮ ಹುಡುಗ ರಾಮಕೃಷ್ಣನೇ ಕೃಷ್ಣನಾಗಲಿ ಎಂದು ಅಭಿಪ್ರಾಯ ನೀಡಿದರು. ಅದು ರಾಮಕೃಷ್ಣರ ಪ್ರವೇಶಕ್ಕೆ ಮಹತ್ವದ ಚಿತ್ರವಾಯಿತು. ನಮ್ಮವರ ಮೇಲಿದ್ದ ಅಣ್ಣಾವ್ರ ಅಭಿಮಾನವನ್ನು ಇದೇ ರೀತಿ ಇಂದಿನವರು ಮುಂದುವರೆಸಬಹುದಲ್ಲವೆ? ಇಂಥ ಅನೇಕ ದಾರಿಗಳನ್ನು ರಾಜ್ ಹಾಕಿಕೊಟ್ಟಿದ್ದಾರೆ.

    ಡಾ|| ರಾಜ್ ಗಾಯನವನ್ನು ಮಾನಸಿಕ ಉಲ್ಲಾಸತೆಗೆ, ಆಧ್ಯಾತ್ಮ ಭಾವನೆಗೆ, ಸಂಗೀತದ ಅನುಭೂತಿಗೆ ಸಾವಧಾನದಿಂದ, ಸಾವಕಾಶವಾಗಿ ಆಲಿಸುವ ಕೋಟ್ಯಂತರ ಮಂದಿ ಆಲಿಸುವವರಿದ್ದಾರೆ. ಅಷ್ಟೇಕೆ? ಸೂಪರ್‌ಸ್ಟಾರ್ ರಜನೀಕಾಂತ್ ಅವರೇ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿ ಎತ್ತರಕ್ಕೆ ಬೆಳೆದು ನಿಂತಿದ್ದರೂ ಸಹಿತ ಅವರು ನೆಮ್ಮದಿಯನ್ನು ಕಾಣುವ ಕೆಲವು ಸಾಧನಗಳಲ್ಲಿ ಡಾ|| ರಾಜ್ ಭಕ್ತಿಗಾಯನವೂ ಒಂದಾಗಿದೆ. ರಾಜ್ ಗಾಯನದ ಚಿತ್ರಗೀತೆ ಆನಂದವನ್ನು ನೀಡಿದರೆ, ಭಕ್ತಿಗೀತೆ ಪವಿತ್ರತೆಯ ಜಳಕ ಮಾಡಿಸುತ್ತದೆ. ಒಟ್ಟಾರೆ ಬದುಕಿನ ಜಂಜಡದಲ್ಲಿ ಮುಳುಗಿದವನಿಗೆ ರಾಜ್ ಪರೋಕ್ಷವಾಗಿ ನಿಜಾರ್ಥದಲ್ಲಿ ಡಾಕ್ಟರ್ ಆಗಿ ಉಳಿದಿದ್ದಾರೆ.

    ಎಸ್ ಜಗನ್ನಾಥ ರಾವ್ ಬಹುಳೆ

    ವೃತ್ತಿಯಿಂದ ಸರ್ಕಾರಿ ಸೇವೆ. ಪ್ರವೃತ್ತಿಯಿಂದ ಬರಹಗಾರರು. ಇದುವರೆಗೆ ಕಲೆ, ಸಂಸ್ಕೃತಿ, ಚಿತ್ರ ರಂಗ, ಇತಿಹಾಸ ಗಳಿಗೆ ಸಂಬಂಧಿಸಿದಂತೆ ಅಸಂಖ್ಯಾತ ಲೇಖನಗಳನ್ನು ಬರೆದಿದ್ದಾರೆ. ಮೂವತ್ತೊಂದು ಪುಸ್ತಕಗಳು ರಚಿಸಿದ್ದಾರೆ. ಅದರಲ್ಲಿ ವರನಟ ಡಾ. ರಾಜ್ ಕುಮಾರ್ ಅವರ ಕುರಿತು ವಿಶ್ಲೇಷಣಾತ್ಮಕ ಹದಿನಾಲ್ಕು ಉಪಯುಕ್ತ ಪುಸ್ತಕಗಳಿರುವುದು ವಿಶೇಷ. ಹಲವು ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದಾರೆ. ಸ್ವಯಂ ಡಾ.ರಾಜ್ ಅವರಿಂದಲೇ ಸನ್ಮಾನಿತರಾಗಿರುವ ಭಾಗ್ಯವಂತರು. ಎರಡು ದಶಕಗಳಿಂದ ಡಾ.ರಾಜ್ ಜನ್ಮದಿನಕ್ಕೊಂದು ವಿಶೇಷ ಲೇಖನ ಬರೆಯುತ್ತ ಬಂದಿರುವ ವ್ರತಧಾರಿ.

    spot_img

    More articles

    3 COMMENTS

    1. ಎಸ್. ಜಗನ್ನಾಥರಾವ್ ಅವರು ವರನಟರ ಬಗ್ಗೆ ಅತ್ಯುತ್ತಮ ಮಾಹಿತಿಗಳ ನ್ನು ತಿಳುಹಿಸಿ ದ್ದಾರೆ. ಧನ್ಯವಾದಗಳು. 🙏

    LEAVE A REPLY

    Please enter your comment!
    Please enter your name here

    Latest article

    error: Content is protected !!