26 C
Karnataka
Friday, May 17, 2024

    ಮಕ್ಕಳ ವಾಚನಾಭಿರುಚಿ ಹೆಚ್ಚಿಸುವ ಮೋಡಗಳ ಜಗಳ

    Must read

    ಬಾಲಸಾಹಿತ್ಯವನ್ನು ರಚಿಸುವುದು ಸಿದ್ಧಪ್ರಸಿದ್ಧ ಸಾಹಿತಿಗಳಿಗೇ ಕಷ್ಟದ ಕೆಲಸ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಮನಸ್ಸು ಉಳ್ಳವರಿಗೆ ಮಾತ್ರ ಇದು ಸುಲಭವಾಗುತ್ತದೆ. ಬಣ್ಣದ ತಗಡಿನ ತುತ್ತೂರಿ ಬರೆದ ಜಿ.ಪಿ.ರಾಜರತ್ನಂ ಅವರಿಗೆ, ಬೊಮ್ಮನಹಳ್ಳಿಯ ಕಿಂದರಿಜೋಗಿ ಬರೆದ ಕುವೆಂಪು ಅವರಿಗೆ ಅಂಥ ಪ್ರತಿಭೆ ಇತ್ತು. ಓದುವುದರ ಜೊತೆಗೆ ಹಾಡುವುದು ಮತ್ತು ಅಭಿನಯಿಸುವುದು ಎಲ್ಲವೂ ಈ ಕವಿತೆಗಳಲ್ಲಿ ಸಾಧ್ಯವಿತ್ತು. ಬಾಲ್ಯದಲ್ಲಿ ಓದಿದ ಆ ಹಾಡುಗಳನ್ನು ವೃದ್ಧರಾದ ಮೇಲೂ ನೆನಪಿನ ಗಣಿಯಿಂದ ಹೊರಗೆ ತೆಗೆಯಬಹುದು. ತಮ್ಮ ಮೊಮ್ಮಕ್ಕಳೆದುರಿಗೆ ಹಾಡಿ ನಲಿಸಬಹುದು.
    
    ಇಂಥ ಸವಾಲಿನ ಕೆಲಸವನ್ನು ಪ್ರೇಮಾ ಶಿವಾನಂದ ಅವರು ಮಾಡಿದ್ದಾರೆ. `ಮೋಡಗಳ ಜಗಳ' ಎಂಬ ಮಕ್ಕಳ ಚಿತ್ರಕಥಾಪಟವನ್ನು ಅವರು 4ರಿಂದ 6 ವರ್ಷದೊಳಗಿನ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಹೊರತಂದಿದ್ದಾರೆ. ಇದು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಇದೆ. ಪ್ರೇಮಾ ಅವರು ನಾಡಿನ ಪ್ರಮುಖ ಪತ್ರಿಕೆಗಳ ಮೂಲಕ ಸಾಹಿತ್ಯಾಸಕ್ತರಿಗೆ ಪರಿಚಿತರಾದವರು.
    
    ಒಂದು ಸಲ ಒಂದು ಮೋಡಕ್ಕೆ ತಲೆ ನೋವು ಕಾಣಿಸಿಕೊಂಡು ನೆಗಡಿಯೂ ಆಗುತ್ತದೆ. ಅದು ಅಳುವುದಕ್ಕೆ ಆರಂಭಿಸಿದಾಗ ಇನ್ನೊಂದು ಮೋಡ ಅಣಕಿಸಿ ನಗುತ್ತದೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಜಗಳ ಸಿಟ್ಟು ಸೆಡವುಗಳಿಂದ ಕೂಡಿ ಗುಡುಗು ಮಿಂಚುಗಳಾಗುತ್ತವೆ. ಮಳೆ ಆರಂಭವಾಗುತ್ತದೆ. ಆಗಸದಲ್ಲಿ ಕಗ್ಗತ್ತಲು. ಜನರು ಅಂಜುತ್ತಾರೆ. ಆಗ ಕಿರಿಯ ಮೋಡಗಳು ಇಬ್ಬರ ಜಗಳ ನಿಲ್ಲಿಸಲು ಸೂರ್ಯನ ಬಳಿ ತೆರಳುತ್ತವೆ. ಸೂರ್ಯ ಆಗಮಿಸಿ ಇಬ್ಬರಿಗೂ ತಿಳಿಹೇಳಿ ಸಮಾಧಾನಪಡಿಸಿ ಕೈಕುಲುಕಿಸಿ ಜಗಳ ನಿಲ್ಲಿಸುತ್ತಾನೆ. ಮಳೆ ನಿಲ್ಲುತ್ತದೆ. ಸೂರ್ಯನ ಕಿರಣಗಳು ಹರಿದಾಡುತ್ತವೆ. ಜಗಳವಾಡುತ್ತಿದ್ದ ಮೋಡಗಳ ಸ್ನೇಹದ ಕುರುಹಾಗಿ ಕಾಮನಬಿಲ್ಲು ಮೂಡುತ್ತದೆ.
    
    ಮಳೆಯಾಗುವ ಪ್ರಕೃತಿ ಸಹಜವಾದ ಕ್ರಿಯೆಯನ್ನು ಮಕ್ಕಳ ಮನಸ್ಸಿಗೆ ನಾಟುವ ಹಾಗೆ ಮೋಡಕ್ಕೆ ನೆಗಡಿಯಾಗುವುದು, ಮೋಡಗಳ ಜಗಳ, ಅದರಿಂದ ಸಿಡಿಲು  ಮಿಂಚು.. ಹೀಗೆ ಕಥೆಯ ರೂಪದಲ್ಲಿ ಪ್ರೇಮಾ ಅವರು ಕಟ್ಟಿಕೊಟ್ಟಿದ್ದಾರೆ. ಸಮರ್ಥ ನಿರ್ದೇಶಕರು ಇದನ್ನು ನಾಟಕವಾಗಿಯೂ ರಂಗದ ಮೇಲೆ ತರಬಹುದಾಗಿದೆ.
    
    ಮುಖಪುಟವೂ ಸೇರಿ ಕೇವಲ 12 ಪುಟಗಳಲ್ಲಿ ಸುಂದರವಾದ ಗ್ರಾಫಿಕ್ಸ್‌ನಲ್ಲಿ ಬಹುಬಣ್ಣಗಳ ಚಿತ್ರದೊಂದಿಗೆ ಮೋಡಗಳ ಜಗಳವನ್ನು ಕಟ್ಟಿಕೊಡಲಾಗಿದೆ. ಕನ್ನಡ ಮತ್ತು ಅದರ ಇಂಗ್ಲಿಷ್‌ ಅನುವಾದ ಅದೇ ಅದೇ ಪುಟಗಳಲ್ಲಿ ಇರುವುದು ಅನುಕೂಲವಾಗಿದೆ. ಇಂಗ್ಲಿಷ್‌‍ ಚೆನ್ನಾಗಿರುವ ಮಕ್ಕಳು ಕನ್ನಡವನ್ನೂ ಕನ್ನಡ ಚೆನ್ನಾಗಿರುವ ಮಕ್ಕಳು ಇಂಗ್ಲಿಷನ್ನೂ ಕಲಿತುಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತದೆ. ಇಂಗ್ಲಿಷ್‌ ಅನುವಾದವನ್ನು (The cloud clash) ಬೃಂದಾ ರಾವ್‌ ಮಾಡಿದ್ದಾರೆ. ಯುವ ಕಲಾವಿದೆ ಸ್ನೇಹಾ ಪೈ ಇದರಲ್ಲಿಯ ಚಿತ್ರಗಳನ್ನು ಚೆಂದವಾಗಿ ಬಿಡಿಸಿದ್ದಾರೆ. ಎನ್‌.ಬಿ.ಗ್ರಾಫಿಕ್ಸ್‌ನವರ ಮುದ್ರಣವೂ ಕಣ್ಸೆಳೆಯುತ್ತದೆ.
    -
    

    ಡಾ.ವಾಸುದೇವ ಶೆಟ್ಟಿ
    ಡಾ.ವಾಸುದೇವ ಶೆಟ್ಟಿ
    ಮೂರು ದಶಕಗಳ ಕಾಲ ಪತ್ರಕರ್ತರಾಗಿದ್ದ ಡಾ.ವಾಸುದೇವ ಶೆಟ್ಟಿ ತಮ್ಮ ಲೇಖನಗಳು, ವಿಮರ್ಶೆಗಳಿಂದ ಗಮನ ಸೆಳೆದವರು.ಕನ್ನಡಪ್ರಭ ದಿನಪತ್ರಿಕೆಯಲ್ಲಿ ಅವರು ಬಹು ಕಾಲ ಕೃತಿ ವಿಮರ್ಶೆ ಮಾಡುತ್ತಿದ್ದರು.ಆಸಕ್ತರು ಅವರ ಬರೆಹಗಳನ್ನು holesaalu.com ನಲ್ಲಿ ನೋಡಬಹುದು.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!