22.7 C
Karnataka
Monday, May 20, 2024

    Indian Stock Market: ಚಟುವಟಿಕೆಯನ್ನು ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ

    Must read

    ಷೇರುಪೇಟೆಯಲ್ಲಿ ಉಂಟಾಗುತ್ತಿರುವ ಅತೀವ ಪ್ರಮಾಣದ, ರಭಸದ ಏರಿಳಿತಗಳನ್ನು ಪ್ರದರ್ಶಿಸುತ್ತಿರುವುದಕ್ಕೆ ಮುಖ್ಯ ಕಾರಣ ಪ್ರಮುಖ ಸೂಚ್ಯಂಕಗಳು ಮತ್ತು ಹೆಚ್ಚಿನ ಷೇರುಗಳ ಬೆಲೆಗಳು ಗರಿಷ್ಠ ಮಟ್ಟದಲ್ಲಿರುವುದೇ ಅಗಿದೆ. ಬೆಳವಣಿಗೆ ಎಷ್ಠರಮಟ್ಟಿಗೆ ಆಗಿದೆ ಎಂದರೆ ಷೇರುಗಳ ಬೇಡಿಕೆಯ ಪ್ರಮಾಣ ಅತಿ ಹೆಚ್ಚಾಗಿದ್ದು, ಲಭ್ಯತೆ, ವಿಶೇಷವಾಗಿ ಅಗ್ರಮಾನ್ಯ ಕಂಪನಿಗಳ ಲಭ್ಯತೆಯ ಕೊರತೆಯುಂಟಾಗಿದ್ದು, ಇಂತಹ ಷೇರುಗಳಲ್ಲಿ ಸ್ವಲ್ಪಮಟ್ಟಿನ ಇಳಿಕೆ ಕಂಡಲ್ಲಿ ಅದು ಪುಟಿದೇಳುವ ವೇಗವೂ ಅತಿ ಹೆಚ್ಚಾಗಿರುತ್ತದೆ.

    ಮಾರ್ಚ್‌ 5,2021 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.207.33 ಲಕ್ಷ ಕೋಟಿಯಲ್ಲಿದ್ದು, ಅಂದು ನೋಂದಾವಣೆ ಮಾಡಿಕೊಂಡಿದ್ದ ಗ್ರಾಹಕರ ಸಂಖ್ಯೆಯು 6,27,85,031 ರಲ್ಲಿತ್ತು. ಅದು ಒಂದು ವರ್ಷದ ನಂತರ ಅಂದರೆ ಮಾರ್ಚ್‌ 4, 2022 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.246.79 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ನೋಂದಾಯಿತ ಗ್ರಾಹಕರ ಸಂಖ್ಯೆಯು 9,88,98,797 ಕ್ಕೆ ಏರಿಕೆ ಕಂಡಿದೆ. ಅಂದರೆ ಸುಮಾರು ಮೂರೂವರೆ ಕೋಟಿಗೂ ಹೆಚ್ಚಿನ ಹೂಡಿಕೆದಾರರ ಕಾರಣ ಪೇಟೆಯ ಬಂಡವಾಳೀಕರಣ ಮೌಲ್ಯವು ಅದಕ್ಕನುಗುಣವಾದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದು ಇನ್ನೂ ಹೆಚ್ಚಿನ ಏರಿಕೆ ಕಂಡಿದ್ದು, ಸಧ್ಯ ರಷ್ಯ ಮತ್ತು ಯುಕ್ರೇನ್‌ ಸಂಘರ್ಷದ ಕಾರಣ ಪೇಟೆಯು ಇಳಿಕೆ ಕಂಡಿರುವ ಕಾರಣ ಇದೂ ಸಹ ಕುಸಿತಕ್ಕೊಳಗಾಗಿದೆ.

    04.03.2022 Pre-opening sensex

    ಇತ್ತೀಚಿನ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಅಂಕಿ ಅಂಶಗಳ ಪ್ರಕಾರ ವಿವಿಧ ರಾಜ್ಯಗಳಲ್ಲುಂಟಾದ ಹೂಡಿಕೆದಾರರ ವಾರ್ಷಿಕ ಹೆಚ್ಚಳದ, 26 ನೇ ಫೆಬ್ರವರಿ 2022 ರಂದು, ಪ್ರಮಾಣವು ಈ ಕೆಳಗಿನಂತಿದೆ. ಶೇ.90 ಕ್ಕೂ ಹೆಚ್ಚಿನ ಏರಿಕೆ ಕಂಡಂತಹ ರಾಜ್ಯಗಳ ವಿವರ:

    ಅಸ್ಸಾಂ: ಶೇ.308.16,ಲಕ್ಷದ್ವೀಪ: ಶೇ.109.40,ಅರುಣಾಚಲ ಪ್ರದೇಶ: ಶೇ.124.56,ಬಿಹಾರ: ಶೇ.116.15,ಮಧ್ಯಪ್ರದೇಶ: ಶೇ.109.40,ಒರಿಸ್ಸಾ: ಶೇ.106.16, ಮಿಜೋರಾಂ: ಶೇ.96.55,ಹಿಮಾಚಲ್‌ ಪ್ರದೇಶ: ಶೇ.95.35,ಮಣಿಪುರ: ಶೇ.95.31,ತ್ರಿಪುರಾ: ಶೇ.93.11,ಅಂಡಮಾನ್‌ ಅಂಡ್‌ ನಿಕೋಬಾರ್‌: ಶೇ.92.49,ನಾಗಾಲ್ಯಾಂಡ್‌: ಶೇ.91.79,ಮೇಘಾಲಯ: ಶೇ.90.87

    ಈ ಎಲ್ಲಾ ರಾಜ್ಯಗಳಲ್ಲಿ ಆರ್ಥಿಕ ಸಾಕ್ಷರತೆಯ ಮಟ್ಟ ಯಾವ ಹಂತದಲ್ಲಿದೆ ಎಂಬುದು ತಿಳಿಯದಿದ್ದರೂ ಅವರ ಆಸಕ್ತಿ ಮೆಚ್ಚುವಂತಹುದಾಗಿದೆ. ಉಳಿದಂತೆ ಕರ್ನಾಟಕದಲ್ಲಿ ಹೊಸದಾಗಿ ಪೇಟೆ ಪ್ರವೇಶಿಸಿದವರ ಸಂಖ್ಯೆಯು ಶೇ.52.12 ರಷ್ಟಿದ್ದರೆ, ಗೋವಾದಲ್ಲಿ ಶೇ.44.21 ರಷ್ಟಿದೆ. ಗುಜರಾತ್‌ ನಲ್ಲಿ ಶೇ.32.33 ರಷ್ಟಿದೆ. ತಮಿಳುನಾಡಿನಲ್ಲಿ ಶೇ.35.51 ರಷ್ಟಿದೆ.

    ಇತ್ತೀಚೆಗೆ ಅಂದರೆ ಫೆಬ್ರವರಿ 14 ರಂದು ಸೆನ್ಸೆಕ್ಸ್‌ 1,747 ಪಾಯಿಂಟುಗಳ ಕುಸಿತ ಕಂಡು, 15 ರಂದು 1,736 ಪಾಯಿಂಟುಗಳ ಚೇತರಿಕೆ ಕಂಡ ವೇಗ ಮತ್ತು 24 ರಂದು ಕಂಡ ಭಾರಿ ಕುಸಿತ ಅಂದರೆ 2,702 ಪಾಯಿಂಟುಗಳ ಭರ್ಜರಿ ಕುಸಿತ ಮತ್ತು 25 ರಂದು ಕಂಡು ಬಂದ 1,328 ಪಾಯಿಂಟುಗಳ ಪುಟಿದೇಳುವ ರೀತಿಗಳು, ನಂತರದಲ್ಲಿ ಒಂದೇ ದಿನದಲ್ಲಿ ಪ್ರದರ್ಶಿತವಾಗುತ್ತಿರುವ ಏರಿಳಿತಗಳ ಶೈಲಿ ಹೂಡಿಕೆದಾರರನ್ನು ಅವಕಾಶವಾದಿಗಳನ್ನಾಗಿಸಿ, ದೀರ್ಘಕಾಲೀನ ಹೂಡಿಕೆಯನ್ನು ಅರ್ಥಹೀನವಾಗಿಸಿದೆ.

    ಸುಮಾರು ಶೇ.58 ರಷ್ಟು ಹೂಡಿಕೆದಾರರು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅದಕ್ಕನುಗುಣವಾಗಿ ಲಭ್ಯವಾಗುವ ಲೀಸ್ಟೆಡ್‌ ಕಂಪನಿಗಳಲ್ಲಿ ಹೆಚ್ಚಿನ
    ಬದಲಾವಣೆಗಳಿಲ್ಲವಾದ್ದರಿಂದ ಉತ್ತಮ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿ ಅವು ಏರಿಕೆ ಕಂಡರೆ, ಉಳಿದ ಕಂಪನಿಗಳೂ ಏರಿಕೆ ಕಾಣಬಹುದೆಂಬ ನಿರೀಕ್ಷೆಯಿಂದ ಖರೀದಿಗೆ ಮುಂದಾಗುವವರಲ್ಲಿ ಹೊಸ ಹೂಡಿಕೆದಾರರೇ ಹೆಚ್ಚಾಗಿರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನಿಸಲೇಬೇಕಾದ ಕೆಲವು ಅಂಶಗಳು, ಇತರೆ ಮೂಲಭೂತ ಅಂಶಗಳೊಂದಿಗೆ, ಹೂಡಿಕೆಯನ್ನು ಸುರಕ್ಷಿತಗೊಳಿಸಬಹುದು.

    ಆರಂಭಿಕ ಷೇರು ವಿತರಣೆಗಳು ( I P Os)

    1. ವಿತರಣೆ ಮಾಡುತ್ತಿರುವ ಷೇರಿನ ಮುಖಬೆಲೆ
    2. ಷೇರಿನ ವಿತರಣಾ ಬೆಲೆ ( ಪ್ರೀಮಿಯಂನೊಂದಿಗೆ)
    3. ವಿತರಣೆ ಮಾಡುತ್ತಿರುವ ಕಂಪನಿಯ ವಲಯ ಮತ್ತು ಆ ಕಂಪನಿಯ ಉತ್ಪನ್ನಗಳಿಗಿರುವ ಭವಿಷ್ಯ
    4. ವಿತರಣೆಗೂ ಮುನ್ನ ದಿನಗಳಲ್ಲಿ ಕಂಪನಿಯು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳಾಗಿ ಪರಿವರ್ತಿಸಲಾಗಿದೆಯೇ ?
    5. ವಿತರಣೆಯಲ್ಲಿ ಹೊಸ ಷೇರುಗಳಿವೆಯೇ ಅಥವಾ ಸಂಪೂರ್ಣವಾಗಿ ಅವು ಪ್ರವರ್ತಕರು ಮತ್ತು ಖಾಸಗಿ ಹೂಡಿಕೆದಾರರು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟ ಮಾಡುತ್ತಿರುವರೇ ? ಸಂಪೂರ್ಣವಾಗಿ ಆಫರ್‌ ಫಾರ್‌ ಸೇಲ್‌ ಮಾರಾಟವಾದಲ್ಲಿ ಸಂಗ್ರಹಣೆ ಪೂರ್ತಿ ಪ್ರವರ್ತಕರು ಮತ್ತು ಖಾಸಗಿ ಹೂಡಿಕೆದಾರರಿಗೆ ಸೇರುತ್ತದೆ. ಕಂಪನಿಗೆ ಯಾವ ರೀತಿಯ ಅನುಕೂಲವೂ ಇರುವುದಿಲ್ಲ.
    6. ವಿತರಣೆಗೂ ಮುನ್ನ ಕಂಪನಿಯ ಪ್ರವರ್ತಕರು ಷೇರಿನ ಮುಖಬೆಲೆ ಸೀಳಿಕೆ ಮಾಡಿರುವರೇ ?
    7. ಪ್ರವರ್ತಕರು ಷೇರುಗಳನ್ನು ಪಡೆದುಕೊಂಡಿರುವ ಬೆಲೆ ಮತ್ತು ಅವರು ಮಾರಾಟಮಾಡುತ್ತಿರುವ ಬೆಲೆಗಳಲಿರುವ ವ್ಯತ್ಯಾಸ
    8. ವಿತರಣೆಗೂ ಮುನ್ನ ಆ ಕಂಪನಿಯು ಭಾರಿ ಪ್ರಮಾಣದ ಲಾಭಾಂಶವನ್ನಾಗಲಿ, ಬೋನಸ್‌ ಷೇರುಗಳನ್ನಾಗಲಿ ವಿತರಿಸಿ ತನ್ನಲ್ಲಿರುವ ಮೀಸಲು ನಿಧಿಯ ಹುಂಡಿಯನ್ನು ಬರಿದಾಗಿಸಿದೆಯೇ ? ಕಂಪನಿ ಹಾನಿಗೊಳಗಾಗಿದ್ದರೂ ಬೋನಸ್‌ ಷೇರು ವಿತರಣೆ ಮಾಡಿಕೊಳ್ಳಲು ಮೀಸಲು ನಿಧಿಯನ್ನು ಬಳಸಿಕೊಳ್ಳಬಹುದು.
    9. ಕಂಪನಿಯು ನಿಗದಿಪಡಿಸಿರುವ ಪ್ರೀಮಿಯಂ ಬೆಲೆಯು ಕಂಪನಿಯ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿದೆಯೇ. ಅಂದರೆ ಕಂಪನಿಯು ಸ್ಥಿರ ಆಸ್ತಿಯನ್ನು ಹೊಂದಿದ್ದರೆ ಉತ್ತಮ.

    ಸೆಕಂಡರಿ ಮಾರ್ಕೆಟ್‌ ವ್ಯವಹಾರಗಳು (SECONDARY MARKET)

    1. ಖರೀದಿಸುತ್ತಿರುವ ಕಂಪನಿಯು ಯಾವ ಗುಂಪು/ಸಮೂಹದಲ್ಲಿದೆ.
    2. ಖರೀದಿಸುತ್ತಿರುವ ಕಂಪನಿಯು ಲಾಭಗಳಿಸುತ್ತಿದೆಯೇ? ಲಾಭ ಗಳಿಕೆಯು ಕಂಪನಿಯ ವಹಿವಾಟಿನ ಗಾತ್ರಕ್ಕನುಗುಣವಾಗಿದೆಯೇ?
    3. ಆ ಕಂಪನಿಯ ಆಡಳಿತ ಮಂಡಳಿಯ ಚಿಂತನೆ ಹೂಡಿಕೆದಾರರ ಸ್ನೇಹಿಯಾಗಿದ್ದು ಗಳಿಸಿದ ಲಾಭದಲ್ಲಿ ಆಕರ್ಷಕ ಮಟ್ಟದ ಲಾಭಾಂಶ, ಬೋನಸ್‌ ಷೇರುಗಳ ವಿತರಣೆ ಮಾಡಿದೆಯೇ
    4. ಕಂಪನಿಯಲ್ಲಿ ಪ್ರವರ್ತಕರ ಭಾಗಿತ್ವ, ರೀಟೇಲ್‌ ಹೂಡಿಕೆದಾರರ ಭಾಗಿತ್ವ ಮತ್ತು ಇತರೆ ಹೂಡಿಕೆದಾರರ ಭಾಗಿತ್ವದ ಪ್ರಮಾಣ
    5. ಪ್ರವರ್ತಕರ ಭಾಗಿತ್ವದಲ್ಲಿ ಅಡವಿಟ್ಟ ಪ್ರಮಾಣ ಎಷ್ಟಿರಬಹುದು ಎಂಬುದು ಮುಖ್ಯ
    6. ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಯು ಸ್ಥಿರಾಸ್ತಿಯನ್ನು ಹೊಂದಿದ್ದರೆ ಉತ್ತಮ. ಕೇವಲ ಬ್ರಾಂಡ್‌ ವ್ಯಾಲ್ಯು ಹೊಂದಿದ್ದರೆ ಸುರಕ್ಷತೆಯ ಮಟ್ಟ ವಿರಳ.
    7. ಕಂಪನಿ ಷೇರಿನ ಮುಖಬೆಲೆ ಎಷ್ಟಿದೆ ಇದು ಲಾಭಾಂಶದ ಶೇಕಡಾವಾರು ಪ್ರಮಾಣದ ಲೆಕ್ಕಾಚಾರಕ್ಕೆ ಅವಶ್ಯ.
    8. ಕಂಪನಿಯೇನಾದರೂ ತನ್ನ ಹೆಸರನ್ನು ಬದಲಿಸಿಕೊಳ್ಳುತ್ತಿದೆಯೇ?
    9. ಕಂಪನಿಯ ನೀತಿಪಾಲನಾ ಮಟ್ಟವು ಹೇಗಿದೆ, ಅದರ ಮೇಲೇನಾದರೂ ಗುರುತರವಾದ ಅರೋಪಗಳು, ಕಾನೂನಿನ ಕ್ರಮಗಳಿವೆಯೇ?
    10. ಮುಖ್ಯವಾಗಿ ಕೇವಲ ವಿಶ್ಲೇಷಣೆಗಳನ್ನು ಅನುಸರಿಸುವ ಬದಲು, ಕಂಪನಿಗಳ ಅರ್ಹತಾ ಮಟ್ಟವನ್ನು ಮಾಪನ ಮಾಡುವ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.
    11. ಕಂಪನಿಗಳ ಬ್ರಾಂಡ್‌ ವ್ಯಾಮೋಹದಿಂದ ಹೊರಬಂದು ಸಹಜ ನಿರ್ಧಾರಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ: ಶುಕ್ರವಾರದಂದು ಸೆನ್ಸೆಕ್ಸ್‌ ತನ್ನ ಕುಸಿತದ ಹಾದಿಯಲ್ಲಿ ಸಾಗಿತ್ತು. ಅದಕ್ಕನುಗುಣವಾಗಿ ಸೆನ್ಸೆಕ್ಸ್‌ ನ 23 ಕಂಪನಿಗಳು ಹಾನಿಗೊಳಗಾದವು. ಅವುಗಳಲ್ಲಿ ಶೇ.5 ಕ್ಕೂ ಹೆಚ್ಚಿನ ಇಳಿಕೆ ಕಂಡದ್ದು ಟೈಟಾನ್‌ ಕಂಪನಿ. ಈ ಕಂಪನಿ ಶ್ರೇಷ್ಠವಾದುದೇನೋ ಸರಿ. ಆದರೆ ಹೂಡಿಕೆ ಮಾಡುವವರು, ಖರೀದಿಸುವ ಮುನ್ನ ಆ ಕಂಪನಿಯಲ್ಲಿ ಹೂಡಿಕೆ ಮಾಡಿದಲ್ಲಿ ಬಂಡವಾಳ ವೃದ್ಧಿಯಾಗಲು ಅವಕಾಶವಿದೆಯೇ ಎಂಬುದನ್ನು ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಬೇಕು. ಅಂದರೆ ಸುಮಾರು ರೂ.130 ರಷ್ಟು ಒಂದೇ ದಿನ ಕರಗಿಸಿದ ಈ ಕಂಪನಿಯ ಷೇರಿನ ಮುಖಬೆಲೆ ರೂ.1. ಅಂದೇ ಬಿ ಎಸ್‌ ಇ ಐಪಿಒ ಸೂಚ್ಯಕದಲ್ಲಿರುವ ಕಲ್ಯಾಣ್‌ ಜ್ಯುವೆಲ್ಲರ್ಸ್‌ ದಿನದ ಮದ್ಯಂತರದಲ್ಲಿ, ಸುಮಾರು ರೂ.3 ರಷ್ಟು ಏರಿಕೆಯನ್ನು ಪಡೆದುಕೊಂಡಿತ್ತು. ಈ ಷೇರಿನ ಮುಖಬೆಲೆ ರೂ.10. ಅಂದರೆ ಒಂದೇ ದಿನ ರೂ.130 ನ್ನು ಕಳೆದುಕೊಂಡ ಷೇರಿನಲ್ಲಿ ಅಡಕವಾಗಿರುವ ಅಪಾಯದ ಮಟ್ಟಕ್ಕೆ ಎರಡು ಕಲ್ಯಾಣ್‌ ಜುವೆಲ್ಲರ್ಸ್‌ ಷೇರನ್ನು ಖರೀದಿಸಬಹುದಾಗಿದೆ. ಅಂದರೆ ಇಂತಹ ನಿರ್ಧಾರವನ್ನು ಕೈಗೊಳ್ಳುವ ಮುನ್ನ ತುಲನಾತ್ಮಕ ಚಿಂತನೆ ಅಗತ್ಯ. Value pick – prafit book ಎಂಬುದು ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ. ಯಾವುದೇ ಒಂದು ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು. ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ. ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ.

    ಪ್ರತಿ ದಿನವೂ, ಪ್ರತಿಗಳಿಗೆಯೂ ಪೇಟೆಯಲ್ಲಿ ಲಾಭಗಳಿಸುವ ಬಗ್ಗೆ ಹೊಸ ಹೊಸ ಮಾದರಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಹಾಗಾಗಿ ಚಟುವಟಿಕೆಯನ್ನು ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!