27 C
Karnataka
Tuesday, May 14, 2024

    2022 Election: 2024ರ ಚುನಾವಣೆಯ ದಿಕ್ಸೂಚಿ

    Must read

    ಅಶೋಕ ಹೆಗಡೆ

    ಭೌತಿಕ ರ‍್ಯಾಲಿಗಳನ್ನು ನಡೆಸಲು ಚುನಾವಣಾ ಆಯೋಗ ಅನುಮತಿ ನೀಡುವುದರೊಂದಿಗೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಕಾವು ಪಡೆದಿದೆ. ಕೆಲವೆಡೆ ಮೊದಲ ಹಂತದ ಮತದಾನವೂ ಮುಕ್ತಾಯವಾಗಿದೆ. ಐದು ರಾಜ್ಯಗಳ ಪೈಕಿ ಹಲವು ಕಾರಣಗಳಿಂದ ಮಹತ್ವ ಪಡೆದಿರುವ ಎರಡು ರಾಜ್ಯಗಳೆಂದರೆ ಉತ್ತರ ಪ್ರದೇಶ-uttara pradesha- ಮತ್ತು ಪಂಜಾಬ್-Punjab. ಈ ಎರಡು ರಾಜ್ಯಗಳ ಫಲಿತಾಂಶ 2024ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕೇಂದ್ರ ಸರಕಾರದ ಮೂರು ಕೃಷಿ ಕಾಯಿದೆಗಳ ವಿರುದ್ಧ ದಿಲ್ಲಿಯಲ್ಲಿ ವರ್ಷ ಕಾಲ ನಡೆದ ಪ್ರತಿಭಟನೆಯಲ್ಲಿ ಈ ಎರಡು ರಾಜ್ಯಗಳೇ ಮುಂಚೂಣಿಯಲ್ಲಿದ್ದವು ಎನ್ನುವುದೂ ಇದಕ್ಕೆ ಕಾರಣ.

    ಉತ್ತರ ಪ್ರದೇಶವು ಮೊದಲಿನಿಂದಲೂ ರಾಷ್ಟ್ರ ರಾಜಕಾರಣದ ದಿಕ್ಕುದೆಸೆಗಳನ್ನು ನಿರ್ಧರಿಸುತ್ತ ಬಂದಿದೆ. ಅದಕ್ಕೆ ಕಾರಣ ಅಲ್ಲಿ 70 ಲೋಕಸಭಾ ಕ್ಷೇತ್ರಗಳಿರುವುದು. 2014ಕ್ಕೂ ಮುನ್ನ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆಯೋ ಅದೇ ಪಕ್ಷದಿಂದು ಹೆಚ್ಚಿನ ಸಂಖ್ಯೆಯ ಸಂಸದರು ಆಯ್ಕೆಯಾಗುತ್ತಿದ್ದರು. ಆದರೆ 2014ರಲ್ಲಿ ಆ ಎಲ್ಲ ಸಂಪ್ರದಾಯ ಮೀರಿ, ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದರೂ ಬಿಜೆಪಿ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ.2019ರಲ್ಲಿಯೂ ಅದೇ ಫಲಿತಾಂಶ ಮರುಕಳಿಸಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ಬಿಜೆಪಿ ಘೋಷಿಸದೇ ಇದ್ದರೂ ಪಕ್ಷ ಪ್ರಚಂಡ ವಿಜಯ ಸಾಧಿಸಿದೆ. ಅದರ ಅರ್ಥ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಬಹಳ ಪ್ರಬಲವಾಗಿ ಬೇರು ಬಿಟ್ಟಿದೆ ಎನ್ನುವುದೇ ಆಗಿದೆ.

    ಉತ್ತರ ಪ್ರದೇಶವು ಭೌಗೋಳಿಕ ವಿಸ್ತೀರ್ಣದಿಂದ ಮಾತ್ರ ಮಹತ್ವದ್ದಲ್ಲ. ಅಲ್ಲಿ ನೂರಾರು ಉಪ ಜಾತಿಗಳಿವೆ, ಸಮುದಾಯಗಳಿವೆ. ಹತ್ತಾರು ಸಣ್ಣಪುಟ್ಟ ಪಕ್ಷಗಳಿವೆ. ಅವು ಇಡೀ ರಾಜ್ಯಕ್ಕೆ ವ್ಯಾಪಿಸಿಕೊಂಡಿರದಿದ್ದರೂ, ನಿರ್ದಿಷ್ಟ ಪ್ರದೇಶಗಳಲ್ಲಿ ಕೆಲವು ಜಾತಿ, ಕೆಲವು ಪಕ್ಷಗಳು ಬಲಿಷ್ಠವಾಗಿವೆ. ಹೀಗಾಗಿ ಉತ್ತರ ಪ್ರದೇಶದ ರಣತಂತ್ರ ರೂಪಿಸುವಾಗ ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. 2014ರ ಲೋಕಸಬೆ ಮತ್ತು2017ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರು ತಿಂಗಳುಗಳ ಕಾಲ ಉತ್ತರ ಪ್ರದೇಶದಲ್ಲಿಯೇ ನೆಲೆಸಿ ಇಂತಹ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನೂ ಗಮನಿಸಿ, ಅರ್ಥ ಮಾಡಿಕೊಂಡಿದ್ದರಿಮದಲೇ ಪ್ರಚಂಡ ಗೆಲುವು ಸಾಧ್ಯವಾಯಿತು. ಈ ಸಲವೂ ಅಮಿತ್ ಶಾ ಉತ್ತರ ಪ್ರದೇಶದಲ್ಲಿಯೇ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಅವರ ಜತೆಗೆ ಯೋಗಿ ಆದಿತ್ಯನಾಥ್ -yogi adityanath-ಎಂಬ ಫೈರ್ ಬ್ರಾಂಡ್ ಕೂಡ ಇದೆ. ಹೀಗಾಗಿ ಬಿಜೆಪಿಯ ಸತತ ಎರಡನೇ ಬಾರಿಗೆ ಸರಕಾರ ರಚಿಸಿ ದಾಖಲೆ ಬರೆಯುತ್ತದೆ ಎಂದು ಹೇಳಲಾಗುತ್ತಿದೆ.ಬಿಜೆಪಿಗೆ ಸವಾಲಾಗಿರುವುದು ಅಖಿಲೇಶ್ ಯಾದವ್-akhilesh yadav- ನೇತೃತ್ವದ ಸಮಾಜವಾದಿ ಪಕ್ಷ. ಅವರು ಜಾಟ್ ಸಮುದಾಯದವರ ಪಕ್ಷ ಎಂದೇ ಹೇಳಲಾಗಿರುವ ರಾಷ್ಟ್ರೀಯ ಲೋಕದಳ ಜತೆ ಮೈತ್ರಿ ಮಾಡಿಕೊಂಡಿರುವುದು ಹೆಚ್ಚನ ಲಾಭ ತಂದುಕೊಡುತ್ತದೆ ಎಂದು ವಿಶ್ಲೇಷಿಸಲಾಗಿದೆ.

    ಸ್ವಾಮಿ ಪ್ರಸಾದ್ ಮೌರ್ಯ ಅವರಂತಹ ಒಬಿಸಿ ನಾಯಕರು ಬಿಜೆಪಿ ತೊರೆದು ಎಸ್ಪಿ ಸೇರಿರುವುದು ಸಹ ಪ್ಲಸ್ ಪಾಯಿಂಟ್. ಆದರೆ, ಇದರಿಂದ ಕಳೆದ ಸಲಕ್ಕೆ ಹೋಲಿಸಿದರೆ ಎಸ್ಪಿ ಸ್ಥಾನ ಗಳಿಕೆ ಹೆಚ್ಚಾಗಬಹುದೇ ವಿನಃ ಸರಕಾರ ರಚಿಸಲು ಅಗತ್ಯವಿರುವಷ್ಟು ಸಂಖ್ಯೆಯ ಶಾಸಕರ ಗೆಲುವುಗೆ ಕಾರಣವಾಗುವುದಿಲ್ಲ ಎನ್ನುವುದೂ ನಿಜ. ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರನ್ನು ಟೀಕಿಸಿದರೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು ಎನ್ನುವುದನ್ನು ಮನಗಂಡಿರುವ ಬಿಜೆಪಿಯು ಚೌಧರಿಯನ್ನು ಟೀಕಿಸುವುದನ್ನು ನಿಲ್ಲಿಸಿದೆ. ಅಲ್ಲದೇ ಬಹುಜನ ಸಮಾಜಪಾರ್ಟಿ ನಾಯಕಿ ಮಾಯಾವತಿ ತಟಸ್ಥ ಧೋರಣೆ ತಾಳಿರುವುದು, ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಇರುವುದು ಬಿಜೆಪಿಗೆ ಅನುಕೂಲ ಎಂದು ಹೇಳಲಾಗುತ್ತಿದೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಚೈತನ್ಯ ತುಂಬಲು ಹರಸಾಹಸ ಮಡುತ್ತಿದ್ದಾರೆ. ಅವರದು ಏಕಾಂಗಿ ಹೋರಾಟ. ಮಹಿಳೆಯರನ್ನು ಸೆಳೆಯುವ ಸಂಗತಿಗಳನ್ನು ಪ್ರಚಾರ ಭಾಷಣ, ಪ್ರಣಾಳಿಕೆಗಳಲ್ಲಿ ಪ್ರಸ್ತಾಪಿಸಿ ಗೆಲುವು ಸಾಧಿಸುವ ತಂತ್ರಗಾರಿಕೆ ಅವರದು. 30 ವರ್ಷಗಳ ಬಳಿಕ ಮೊದಲ ಬಾರಿ ಎಲ್ಲ 403 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಪಕ್ಷ ಸ್ಪರ್ಧೆ ಮಾಡಿದೆ. ಆದರೆ ಆ ಪಕ್ಷಕ್ಕೆ ರಾಜ್ಯದಲ್ಲಿ ಪ್ರಭಾವಿ ನಾಯಕರೇ ಇಲ್ಲ. ಹೀಗಾಗಿ ಸಂಘಟನೆಯ ಬಲದಿಂದ ಕಾಂಗ್ರೆಸ್ ಸೊರಗಿದೆ. ಯಾವ ಹಂತದಲ್ಲಿಯೂ ಪೈಪೋಟಿ ನೀಡುವ ಸ್ಥಿತಿಯಲ್ಲಿ ಪಕ್ಷ ಇಲ್ಲ ಎನ್ನುವುದು ವಾಸ್ತವ.

    ಆಪ್‌ಗೆ ಪಂಜಾಬ್ ಕನಸು
    ಪಂಜಾಬ್‌ನಲ್ಲಿ ಕಾಂಗ್ರೆಸ್ ಒಳಜಗಳವೇ ಆ ಪಕ್ಷಕ್ಕೆ ಮುಳ್ಳಾಗಲಿದೆ. ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಪಕ್ಷದ ಹಿರಿಯ ನಾಯಕ ಸುನೀಲ್ ಜಾಖಡ್ ಅವರಿಗೆ ಅಸಮಾಧಾನ ತಂದಿದೆ. ಜಾಖಡ್ ಅಂತೂ ಸಕ್ರಿಯ ರಾಜಕಾರಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ. ಸತತ ಸಂಘರ್ಷದ ಮೂಲಕ ಕ್ಯಾಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಖುರ್ಚಿಯಿಂದ ಇಳಿಸುವಲ್ಲಿ ಯಶಸ್ವಿಯಾದ ಸಿಧು, ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲಾಗದೇ ಸೋತಿದ್ದಾರೆ. ಇದು ಅವರ ಒರಟುತನ ಮತ್ತು ಹಠಮಾರಿತನದ ಪರಿಣಾಮ. ಅದನ್ನು ಖುದ್ದು ರಾಹುಲ್ ಗಾಂಧಿಯವರೇ ಪರೋಕ್ಷವಾಗಿ ಹೇಳಿದ್ದಾರೆ. ಜತೆಗೆ ಚನ್ನಿ ದಲಿತ ಸಿಖ್ ಎನ್ನುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಲಿದೆ.

    ಶಿರೋಮಣಿ ಅಕಾಲಿದಳದ ಜತೆಗೆ ಮೈತ್ರಿ ಇಲ್ಲದೇ ಬಿಜೆಪಿ ಎದುರಿಸುತ್ತಿರುವ ಮೊದಲ ಚುನಾವಣೆ ಇದು. ಕ್ಯಾ.ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಹಾಗೂ ಅಕಾಲಿದಳ (ಸಂಯುಕ್ತ) ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಮೊದಲ ಸಲ ಪಂಜಾಬ್‌ನಲ್ಲಿ ಮೈತ್ರಿಕೂಟದ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದೆ. ಅಮರಿಂದರ್ ಅವರ ಬಲವೇ ಬಿಜೆಪಿಗೆ ಶಕ್ತಿ. ಎರಡೂ ಪಕ್ಷಗಳು ರಾಷ್ಟ್ರೀಯತೆ, ಸಿಧುಗೆ ಪಾಕಿಸ್ತಾನ ಜತೆಗಿನ ಮೈತ್ರಿ, ಡ್ರಗ್ಸ್ ಪಿಡುಗನ್ನು ಪ್ರಸ್ತಾಪಿಸುತ್ತಿವೆ.

    ಈಗಿರುವ ವಿಧಾನಸಭೆಯಲ್ಲಿ ಪ್ರತಿಪಕ್ಷವಾಗಿರುವ ಆಮ್ ಆದ್ಮಿ ಪಾರ್ಟಿ ಅಧಿಕಾರದ ಸನಿಹಕ್ಕೆ ಬಂದರೂ, ಬಹುಮತಕ್ಕೆ ಒಂದೆರಡು ಸ್ಥಾನಗಳ ಕೊರತೆ ಎದುರಾಗಬಹುದು ಎಂದು ಸಮೀಕ್ಷೆಗಳು ಅಂದಾಜಿಸಿವೆ. ಎರಡು ಲೋಕಸಭೆ ಚುನಾವಣೆಗಳಲ್ಲಿಯೂ ಪಕ್ಷ ಉತ್ತಮ ಸಾಧನೆ ಮಾಡಿದೆ. ಉಚಿತ ವಿದ್ಯುತ್‌ನಂತಹ ಘೋಷಣೆಗಳು ಜನರ ಮನ ಗೆಲ್ಲುತ್ತಿವೆ.

    ಉಳಿದೆಡೆ ಬಿಜೆಪಿಗಿಲ್ಲ ಸಮಸ್ಯೆ
    ಇನ್ನು, ಉತ್ತರಾಖಂಡ, ಗೋವಾ, ಮಣಿಪುರಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಉತ್ತರಾಖಂಡದಲ್ಲಿ ಒಂದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದು, ಆಡಳಿತ ವಿರೋಧ ಅಲೆ ಕೊಂಚ ಹಿನ್ನಡೆ ತರಬಹುದು. ನಿಸ್ತೇಜ ಕಾಂಗ್ರೆಸ್ ಮತ್ತು ಮೋದಿ ಅಲೆಯಿಂದ ಪಕ್ಷ ಅಧಿಕಾರ ಉಳಿಸಿಕೊಳ್ಳಲಿದೆ. ಗೋವಾದಲ್ಲಿ ತೃಣಮೂಲ ಕಾಂಗ್ರೆಸ್, ಆಪ್‌ಗಳೂ ಅದೃಷ್ಟ ಪರೀಕ್ಷೆಗೆ ಮುಂದಾಗಿವೆಯಾದರೂ, ಯಶಸ್ಸು ಪಡೆಯುವ ಸಾಧ್ಯತೆ ಬಹಳ ಕಡಿಮೆ. ಮಣಿಪುರದಲ್ಲಿಯೂ ಬಿಜೆಪಿಗೆ ಯಾವ ತೊಂದರೆಯೂ ಇಲ್ಲ.


    ಲೇಖಕರು ವೃತ್ತಿಯಲ್ಲಿ ಲೆಕ್ಕ ಸಲಹೆಗಾರರು, ಪ್ರವೃತ್ತಿಯಲ್ಲಿ ರಾಜಕೀಯ ವಿಶ್ಲೇಷಕರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!