29.8 C
Karnataka
Monday, May 13, 2024

    ಹಾಗಾದಾಗ….

    Must read

    ಬೆಳಗಿನ ಕೆಲಸ ಮುಗಿದು ಹೊರಡುವವರು ಹೋದ ಮೇಲೆ ನನ್ನದೇ ಒಂದು ಪ್ರೀತಿಯ ಏಕಾಂತದಲಿದ್ದಾಗ ಅವಳ ಫೋನು ಬಂತು.
    ಈ ಸಮಯ ಇನ್ನೂ ಚಂದವಾಗಲಿಕ್ಕೆ ಇವಳಿಗೆಂತ ಇನ್ಯಾರು ಬೇಕು ಅಂತ ಅಂದುಕೊಂಡು ಫೋನ್ ರಿಸೀವ್ ಮಾಡಿದವಳಿಗೆ ಆ ಬದಿಯಿಂದ ಬಿಕ್ಕುವ ಸದ್ದು.

    ಎದೆ ಖಳಕ್ಕೆನಿಸಿತು.

    ‘ಯಾಕೋ..ಏನಾಯ್ತು’

    ಅಂತ ಅಕ್ಕರೆಯಿಂದಲೇ ಕೇಳಿದೆ.

    ‘ನಾನೆಷ್ಟು ಬೇಡವೆಂದಿದ್ದೆ.ನಿನಗೂ ಹೇಳಿದ್ದೆ.ಆದರೆ ಅವನೂ ಕೇಳಲಿಲ್ಲ.ನೀನೂ ಆಗಲಿ ಬಿಡು ಒಮ್ಮೆ ಎಂದೆ.ಈಗ ನೋಡು.
    ಮತ್ತೆ ಅವಳ ಕಟ್ಟೆಯೊಡೆಯಿತು.

    ಒಗಟಿನಂತಹ ಮಾತು…ಓಹ್…ಅದರ ಕುರಿತು..!

    ಏನಾಯ್ತೀಗ.?

    ******

    ಮೊನ್ನೆ ಸಂಜೆ ಕರೆ ಮಾಡಿ ಮಾತಾಡಿದವಳ ಭಾವದಲ್ಲಿ ಮೈಯೆಲ್ಲ ಗುಲಾಬಿ.!ಅವಳ ದೇಹದ ತಂತು ಮೀಟುತ್ತಿರುವ ಸದ್ದು ಫೋನಿನ ಈ ಬದಿಗೂ ಮೌನವಾಗೇ ಕೇಳುತ್ತಿತ್ತು.ಅಂಥ ಉತ್ಕಟದಲಿದ್ದಳು ಹುಡುಗಿ.

    ನನಗಿಂತ ಆರು ವರ್ಷ ಚಿಕ್ಕ ಗೆಳತಿ.ಮೂವ್ವತ್ತೈದರ ಆಸುಪಾಸು. ಒಂಟಿ ಬಾಳಿನ ನಂತರದಲ್ಲಿ ಆದದ್ದು ಒಂದು ಗಂಧದಂತ ಪರಿಚಯ. ಚಿಪ್ಪಿನ ಸ್ವಭಾವದ ಈ ಹುಡುಗಿ ತೆರೆದುಕೊಳಲೇ ಇಲ್ಲ ಮೊದಮೊದಲು.
    ಅವನೂ ಬಿಡಲಿಲ್ಲ. ಕಾಡಿ ಬೇಡಿ ತನ್ನದಾಗಿಸಿಕೊಂಡ.
    ಅವಳೆದೆ ಭಾವಗಳಿಗೆ ಬಯಕೆಯ ಕಿಡಿ ಹತ್ತಿಸಿದ್ದ.
    ಮೊಬೈಲಿರುವಾಗ ಮಾತು, ಭೇಟಿ,ಸ್ಪರ್ಶ, ಮುತ್ತು ಇವೆಲ್ಲ ಮುಂದುವರೆಸುವುದು ಬಹಳ ಸಲೀಸು.

    ಆಮೇಲೆ…

    ಎಂದಿನಂತೆ ಪ್ರೇಮ ತಣಿಯೊ ವಿಷಯ.

    ಅವನು ಕೇಳಿದ್ದ.ಬೆಚ್ಚಿದ ಈ ಹುಡುಗಿ ನಿರಾಕರಿಸಿದ್ದಳು.
    ಅವಳ ಒಂಟಿ ಬದುಕು ಜಂಟಿಯಾಗುತ್ತಿರುವ ಖುಷಿಗೆ ಅಭಿನಂದನೆ ಹೇಳಿದ ನನ್ನೊಡನೆ ಇದನ್ನೂ ಹೇಳಿಕೊಂಡಳು.ಒಂಥರ ಆತ್ಮೀಯತೆ ನಮ್ಮಿಬ್ಬರ ನಡುವೆ.

    ಒಮ್ಮೆ ಆಗಲಿ ಬಿಡು.ಆಮೇಲೆ ಯೋಚಿಸು ಹೇಳಿದ್ದೆ.

    ಪ್ರಾಯ ಏರುಗೈಯಾಗಿದ್ದ ಕಾಲದಲ್ಲಿ ಅವಳ‌ ಒಂಟಿ ಬದುಕಿಗೆ ಮುಕ್ತಿ ಸಿಗಲೆಂದು ನಾನು ಹಾಗಂದಿದ್ದೆ.ಒಪ್ಪಿ ನಡೆದಿತ್ತು ಎಲ್ಲಾ.
    ಖುಷಿಯಾಗಿದ್ದಳು ಆ ದಿನ.

    ಅದರ ಕುರಿತೇ ಹುಡುಗಿಯ ತಕರಾರು ಈಗ.
    ವಿವರಿಸುವಂತ ವಿಷಯವಲ್ಲದಿದ್ದರೂ ಹಸನಾದ ಸುಖದಲಿದ್ದಾಳೆ ಹುಡುಗಿ ಅನ್ನೋದು ಅವಳ‌ ಮಾತಿನಲ್ಲೇ ತಿಳಿಯುತಿತ್ತು ಅಂದು.
    ಸಂಭ್ರಮಿಸಿದ್ದೆ ನಾನೂ.

    ******

    ‘ಈಗೇನಾಯ್ತೋ’ಎಂದೆ.

    ಬಿಕ್ಕುತ್ತಲೇ “ಡಾಕ್ಟರ್ ಹತ್ತಿರ ಹೋಗಿದ್ದೆ’ ಅಂದಳು.

    ‘ಆರೆ ..ಮೂರೇ ದಿನಕ್ಕೆ ವಾಕರಿಕೆ ಶುರುವಾಯ್ತೆ.?

    ಕಂಗ್ರಾಜ್ಯುಲೇಷನ್ಸ್’

    ಅಂತ ರೇಗಿದರೆ ಸಿರ್ರನೆ ಸಿಡುಕಿದಳು.

    ‘ಅವತ್ತು ಒಂದು ದಿನ ಸರಿಯಿದ್ದೆ.ನೆನಪುಗಳ ಸಂತೆಯಲಿ ಜೊತೆಯಾಗಿ ತಿರುಗಿದ ಹಾಗೆ.ಆದರೆ ಮಾರನೇ ದಿನದಿಂದ ಅಲ್ಲೆಲ್ಲಾ ಕಿರಿಕಿರಿ. ಒಳಗಿಂದ ಮುಳುಮುಳು.ಮಾರನೇ ದಿನಕ್ಕೆ ತುರಿಕೆ,ನವೆ.
    ಕೆಂಡದಂತಹದೊಂದು ಇಟ್ಟರೆ ಸರಿ ಹೋದೀತು ಎನುವ ಹಾಗೆ.ನಿನ್ನೆ ರಾತ್ರಿಯಿಂದಲೇ ಸ್ರಾವ, ಹಿಂಸೆಯ ತೇವ.ಹೇಸಿಗೆ.
    ಡಾಕ್ಟರ್ ಹತ್ರ ಹೋದರೆ ಇನ್ನರ್ ಚೆಕ್ ಅಪ್ ಅಂತೆ.
    ಯಾರಿಗೆ ಬೇಕು ಇದೆಲ್ಲಾ.ಏನೂ ಬೇಡವೆಂದು ತಣ್ಣಗಿದ್ದೆ.ಎಲ್ಲಾ ಆಗಿದ್ದು‌ ನಿನ್ನಿಂದಲೆ’

    ಅಸಹನೆಯಂಥ ದುಃಖ ಅವಳ ಸ್ವರದಲ್ಲಿ.

    ಈಗರ್ಥವಾಯಿತು ಅವಳ ಸಮಸ್ಯೆ.ಹೇಳಿದೆಯಾ ಅಂದದ್ದಕ್ಕೆ ‘ಹು..ಮುಜುಗರದಿಂದಲೇ ಹೇಳಿದೆ.ಗಾಬರಿಯಾದ.ಬರ್ತೀನಿ ಡಾಕ್ಟರಲ್ಲಿಗೆ ‘
    ಅಂದ.

    ಎಲ್ಲದಕ್ಕೂ ಎಳ್ಳುನೀರು ಬಿಟ್ಟು ಮೊದಲಿನಂತೆ ತಣ್ಣಗಿರಬೇಕೆಂದುಕೊಂಡು ದಯಮಾಡಿ ಬೇಡವೆಂದೆ.
    ಬೇಡಿದ.

    ಬಿಲ್ಕುಲ್ ಬೇಡವೆಂದೆ.ಬೇಸರಿಸಿದ.

    ತನಗಾವ ಸಮಸ್ಯೆ ಯೂ ಇಲ್ಲವೆಂದ.ಏನೋ ಸಣ್ಣ ಸಮಸ್ಯೆ ಆಗಿದೆ. ಭಯ ಬೀಳಬೇಡ ನಾನಿದ್ದೀನಿ ಎಂದ.

    ಬಹುಶಃ ಇದು ಆಧುನಿಕ ಅನಿಸಿಕೊಂಡಿರುವ ಬಹುತೇಕ ಹೆಣ್ಣು ತನ್ನ ಬದುಕಿನ ಯಾವುದೋ ಕಾಲಘಟ್ಟದಲ್ಲಿ ಒಂದಿಲ್ಲೊಂದು ಬಾರಿ ಅನುಭವಿಸಿಯೇ ಇರುವಂಥ ಘಟನೆ.

    ಕೊಡುಕೊಳ್ಳುವಿಕೆಯ ಪ್ರಿಯ ಕೆಲಸದಲ್ಲಿ ಪಡೆದದ್ದು ಹೆಚ್ಚೋ,ನೀಡಿದ್ದು ಹೆಚ್ಚೊ ಎಂದರೆ ಉತ್ತರ ಅಸ್ಪಷ್ಟ. ಆದರೂ ತೊಂದರೆ ತಾಪತ್ರಯಗಳು ಈ “ಇವಳಿಗೇ” ಹೆಚ್ಚು.

    ನಂಬಿಕೆಗೋ,ಬದ್ಧತೆಗೋ ಅಥವಾ ನೈಜತೆಗೋ ಸುರಕ್ಷತೆಯನ್ನು ಹೊರಗಿಟ್ಟು ನಡೆಸಿದ ಕ್ರಿಯೆಯಲ್ಲಿ ಹೆಣ್ಣು ಕೆಲವೊಮ್ಮೆ ಬಹಳಷ್ಟು ದಿನದ ದೈಹಿಕ ಅನಾರೋಗ್ಯ ಅನುಭವಿಸಬೇಕಾದೀತು.
    ಮೊದಲ ದಿನದ ಮೋಹ ಎರಡನೆಯ ದಿನದ ಕಿರಿಕಿರಿಯೊಂದಿಗೆ‌ ಮುಗಿದು ಮೂರನೇ ದಿನ ವಿಪರೀತ ವಾಗಿ ಮಾನಸಿಕವಾಗಿ, ದೈಹಿಕವಾಗಿ ಕೈಯಾರೆ ಮಾಡಿಕೊಂಡಿದ್ದಕ್ಕೆ ತನ್ನ ತಾನೇ ಹಳಿಯುತ್ತ,ಸುಯ್ಯುತ್ತಾ ವೈದ್ಯರ ಬಳಿ ಹೋದರೆinner check upಇರದೇ ಮುಂದಿನ ಮಾತೇ ಇಲ್ಲ.

    ಎಂದೂ ಹೀಗೆಲ್ಲ ಆಗದಿದ್ದವಳಿಗೆ,ಆಗಬಾರದೆಂದುಕೊಂಡವಳಿಗೆ ಡಾಕ್ಟರು ಕೇಳಿದ ಪ್ರಶ್ನೆಗೆ ಹೇಳಿದ ಸುಳ್ಳಿನ ಗಿಲ್ಟೇ ಸಾಕಷ್ಟು ಕಾಡುವಾಗ ಜೀವ ಬಾಯಿಗೆ ಬರುವಂತ ಪ್ರಶ್ನೆಗಳು,ಪರೀಕ್ಷೆಗಳು.!.
    ಭೂಮಿ ಬಾಯಿ ಬಿಡಬಾರದೇ ಅನಿಸುವಂತ ಸಂದರ್ಭ.ಈಗಿವಳೂ ಅದೇ ಪರಿಸ್ಥಿತಿಯಲ್ಲಿದ್ದಾಳೆ.

    ಇದೇ ವಿಷಯದ ಕುರಿತು ಇನ್ನೂ ಅಚ್ಚರಿಯ ವಿಚಾರಗಳಿವೆ.
    ಕೇಳಿದ ನೋಡಿದ ಅಷ್ಟೂ ಘಟನೆಗಳಲ್ಲಿ ಗಂಡಿಗೆ ಯಾವ ತೊಂದರೆಯೂ ಇಲ್ಲ.

    ತಾಪತ್ರಯಗಳೆಲ್ಲವೂ ಹೆಣ್ಣಿನ ನಿಮಿತ್ತವೇ ಸೃಷ್ಟಿಯಾದಂತೆ.
    ಅಂತಹ ತೊಂದರೆ ಗಳಿಂದಾಗಿ ಎದುರಾಗುವ ಮಾನಸಿಕ ಕಿರಿಕಿಯಂತೂ ದೇಹಕಿಂತಲೂ ವಿಷಾದನೀಯ.ಹೇಳಲಾಗದ ಅನುಭವಿಸಲಾಗದ ತಪ್ಪಿತಸ್ಥ ಮನಸ್ಥಿತಿ.

    ‘ಬೇಕಿತ್ತಾ ನಿನಗಿದು.?ಅನುಭವಿಸು ಈಗ ಎನ್ನುವ ಸ್ವಕೌರ್ಯ,ಸ್ವಾನುಕಂಪದ ಅಸಹನೀಯ ಭಾವ.

    ನನ್ನದು ಒಂದೇ ಪ್ರಶ್ನೆ.

    ದೇವರು ಯಾರ ಪಕ್ಷಪಾತಿಯೂ ಅಲ್ಲವೆನ್ನುವುದಾದರೆ ಯಾಕಾಗಿ ಈ ತಾರತಮ್ಯ .?ಪರಸ್ಪರ ಒಪ್ಪಿಯೇ ಆದಮೇಲೆ ತೊಂದರೆಗೆ ಖಾಲಿ ಇವಳೊಬ್ಬಳೆ ಬಾಧ್ಯ ವಾಗಿಸುವುದಾದರೂ ಯಾಕೆ . ?
    ಪರಿಧಿಯ ಹೊರಗೆ,ಗೆರೆ ದಾಟಿದ ಪಾಪ ಪ್ರಜ್ಞೆಯ ಹೊರತಾಗಿ ದಾಂಪತ್ಯದಲ್ಲೂ ಇದು ತಪ್ಪಿದ್ದಲ್ಲ.
    ಗಂಡ ಬೇಲಿಹಾರಿ ಮೇಯ್ದು ಬಂದಿದ್ದರೂ ಅಮಶಂಕೆ ಶುರುವಾಗುವುದು ಹೆಂಡತಿಗೇ.!

    ಇಂತಹ ವಿಚಾರಗಳಲ್ಲಿ ಶೇಕಡಾ ಎಂಬತ್ತಕ್ಕೂ ಮೀರಿ ಸಮಸ್ಯೆ ಕಾಡುವುದು ಹೆಣ್ಣನ್ನೇ.

    ಆಗ ಮಾಡಬೇಕಿರುವುದು ಏನು?

    ಇಂತಹ ಪರಿಸ್ಥಿತಿಯಲ್ಲಿ ಮೊದಲಿಗೆ ಧೈರ್ಯ ಕಳೆದು ಕೊಳ್ಳ ಬಾರದು.
    ಏನೋ ಆಗಿಹೋಯಿತು ಎಂದುಕೊಂಡರೆ ಖಿನ್ನತೆ ಖಂಡಿತ.ಅದು ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸುವಂತೆ ಮಾಡುತ್ತದೆ.
    ಸಾಧ್ಯವಾದರೆ ತಕ್ಷಣವೇ ಬಿಸಿನೀರಿನ ಟಬ್ ಬಾತ್ ಒಳ್ಳೆಯದು.
    ಕಿರಿಕಿರಿ ಆರಂಭವಾದ ಮೇಲಂತೂ ಟಬ್ ಬಾತ್ ಖಂಡಿತವಾಗಿ ಬೇಕು.
    ದಿನದಲ್ಲಿ ಮೂರುಬಾರಿ ಟಬ್ ಬಾತ್ ಮಾಡಿದರೆ ಎರಡು ದಿನದಲ್ಲಿ ತಹಬಂದಿಗೆ ಬರಬಹುದು.

    ಸಹಜವೆನಿಸಿದರೆ ವೈದ್ಯರ ಅವಶ್ಯಕತೆ ಬೇಡ.
    ಆದರೆ ಸಣ್ಣ ನವೆ ತುರಿಕೆಗಳು ಉಳಿದರೂ ನಿರ್ಲಕ್ಷ್ಯ ಕೂಡದು.
    ತಕ್ಷಣವೇ ವೈದ್ಯರನ್ನು ಕಂಡು ಅವರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿ ಸಹಕರಿಸಿದರೆ ಮತ್ತೆ ಮೊದಲಿನಂತೆ ದಿನಚರಿ ಸುಗಮವಾಗುತ್ತದೆ.

    ಪ್ರಕೃತಿಯಲ್ಲಿ ಪ್ರತಿಯೊಂದೂ ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕಾಗಿಯೇ ಹೀಗಿರುತ್ತದೆ.ಹೆಣ್ಣಿನ ಅಂಗಾಂಗಗಳ ಸಂಕೀರ್ಣತೆ ಬಹುಶಃ ಇದಕ್ಕೆ ಕಾರಣವಿರಬಹುದು.ಏನೇ ಇದ್ದರೂ ಹೆಣ್ಣು ತಾನು ಸುಕೋಮಲವಾಗಿದ್ದೂ ದೃಢವಾಗಿರಲು ಕಲಿಯಬೇಕಿರುವುದು ಇಂದಿನ ವೇಗ ಯುಗದಲ್ಲಿ ಅತ್ಯಂತ ಅನಿವಾರ್ಯ.

    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!