26.5 C
Karnataka
Sunday, May 12, 2024

    Omicron Explained : ಓಮಿಕ್ರಾನ್ ಎಂಬ ಕೋವಿಡ್ ಹೊಸ ತಳಿ ತಂದಿರುವ ಆತಂಕ; ಇನ್ನು ಒಂದು ವಾರದಲ್ಲಿ ಸ್ಪಷ್ಟ ಚಿತ್ರಣ

    Must read

    ದಕ್ಷಿಣ ಆಫ್ರಿಕಾದಲ್ಲಿ ಇದೀಗ ಪತ್ತೆಯಾಗಿರುವ ಕೊರೊನಾ ವೈರಸ್ ನ ಹೊಸ ತಳಿ ಆತಂಕವನ್ನು ಹುಟ್ಟು ಹಾಕಿದೆ. ಕಳೆದ ಬಾರಿ ಕಾಣಿಸಿಕೊಂಡ ಡೆಲ್ಟಾ ವೈರಸ್ ಗಿಂತ ಇದು ವೇಗವಾಗಿ ಹರಡುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರ ಬಗ್ಗೆ ಇನ್ನು ಅಧ್ಯಯನಗಳು ನಡೆಯುತ್ತಿವೆ. ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎನ್ನುವುದು ಹಾಗೂ  ಈಗ ಲಭ್ಯ ಇರುವ ಕೊರೋನಾ  ಲಸಿಕೆಗಳು ಇದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯಲು ಇನ್ನೊಂದು ವಾರವಾದರು ಬೇಕಾಗುತ್ತದೆ.

    ಮುನ್ನೆಚ್ಚರಿಕೆಯಾಗಿ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಟ್ಟು ನಿಟ್ಟಿನ  ನಿಗಾ ಇರಿಸಿ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿವೆ.

    ದಕ್ಷಿಣ ಆಫ್ರಿಕಾದ  ವಿಜ್ಞಾನಿಗಳು  ನವೆಂಬರ್ 14 ರಿಂದ 16ರವರೆಗೆ ತೆಗೆದುಕೊಂಡ ಕೊರೊನಾ ವೈರಸ್ ಸ್ಯಾಂಪಲ್ ಗಳನ್ನು ಪರೀಕ್ಷಿಸುತ್ತಿರುವಾಗ ಈ B.11.529  ಸಂಖ್ಯೆಯ  ತಳಿ ಮಂಗಳವಾರ ಬೆಳಕಿಗೆ ಬಂದಿದೆ. ಇದು ಗೊತ್ತಾದ ಕೂಡಲೇ ತಡಮಾಡದೇ ಬುಧವಾರದಂದೇ ಇದರ  ಜಿನೋಮ್ ಸಿಕ್ವೇನ್ಸ್  ಮಾಡಿದ ಅಲ್ಲಿನ ವಿಜ್ಞಾನಿಗಳು ಇದು ಆತಂಕಕಾರಿ ರೂಪಾಂತರಿಯಂತೆ ಭಾಸವಾಗುತ್ತಿರುವುದರಿಂದ  ಕೂಡಲೇ  ಮತ್ತಷ್ಟು ತಾಂತ್ರಿಕ ಪರಿಶೀಲನೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ತರುವಂತೆ  ಅಲ್ಲಿನ ಸರಕಾರವನ್ನು ಕೋರಿದರು.

    ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ದಟ್ಟಣೆ ಇರುವ ಜೊಹನೆಸ್ ಬರ್ಗ್ ಮತ್ತು ಪ್ರಿಟೋರಿಯಾ ನಗರಗಳು ಇರುವ  ಗೌಟೆಂಗ್ ಪ್ರಾಂತ್ಯದಲ್ಲಿ ಈ ರೂಪಾಂತರಿ ಹೆಚ್ಚು ಪತ್ತೆಯಾಗಿದೆ.

    ಕೋವಿಡ್ ಗೆ ಕಾರಣವಾಗುವ  SARS-Cov-2 ವೈರಸ್ ಗಳು ಸೇರಿದಂತೆ ಎಲ್ಲಾ ರೀತಿಯ ವೈರಸ್ ಗಳು  ರೂಪಾಂತರ ಹೊಂದುತ್ತಲೆ ಇರುತ್ತವೆ.  ಬಹಳಷ್ಟು  ರೂಪಾಂತರಿಗಳಲ್ಲಿ ಮೂಲ ವೈರಸ್ ನ ಪ್ರಾಥಮಿಕ ಗುಣ ಲಕ್ಷಣಗಳಲ್ಲಿ ಅಂಥ ಭಾರಿ ಎನ್ನಬಹುದಾದ ಬದಲಾವಣೆಯೇನು ಆಗಿರುವುದಿಲ್ಲ. ಹೀಗಾಗಿ ಅವುಗಳಿಗೆ ಈಗಾಗಲೇ  ಲಭ್ಯ ಇರುವ ಔಷಧಗಳು ಮತ್ತು  ಲಸಿಕೆಗಳೇ ರಾಮ ಬಾಣವಾಗಿರುತ್ತವೆ. ಮೂಲ ರೂಪದಿಂದ ಬಹಳಷ್ಟು ಬದಲಾವಣೆ  ಹೊಂದಿದ  ಹೊಸ ತಳಿ ಪತ್ತೆಯಾದರೆ ಅವುಗಳು ಹೇಗೆ ವರ್ತಿಸುತ್ತವೆ ಎಂಬುದು ತಕ್ಷಣಕ್ಕೆ ವಿಜ್ಞಾನಿಗಳಿಗೆ ಅರಿವಾಗುವುದಿಲ್ಲ. ಅವು ಹಾನಿಕಾರಕವಾಗಿಯೂ ಇರಬಹುದು ಅಥವಾ ಅಷ್ಟೇನು ತಕರಾರು ಮಾಡದೆ ಲಸಿಕೆಗೆ ಮಣಿಯುವಂಥ ರೂಪಾಂತರಿಯೂ ಆಗಿರಬಹುದು.

    ಈಗ ಪತ್ತೆಯಾಗಿರುವ ಈ ರೂಪಾಂತರಿ ತಳಿ ಮಾನವ ದೇಹವನ್ನು ಪ್ರವೇಶಿಸಲು ವೈರಸ್ ಗಳು ಪಾಸ್ ಪೋರ್ಟ್ ಆಗಿ ಬಳಸುವ  ಸ್ಪೈಕ್ ಪ್ರೋಟಿನ್ ಗಳ(ಇವು ಶುಗರ್ ಮಾಲಿಕೂಲ್ ಮಾದರಿಯಲ್ಲಿದ್ದು ಸೂಕ್ಷ್ಮ ದರ್ಶಕದಲ್ಲಿ ನೋಡಿದಾಗ ಕಿರೀಟದಂತೆ ಕಾಣುತ್ತದೆ) 30 ರೂಪಾಂತರಿಗಳ (Mutation)ನ್ನು ಹೊಂದಿದೆ.  ಇದು ಇತ್ತೀಚಿನ ಡೆಲ್ಟಾ ವೈರಸ್ ಹೊಂದಿದ್ದ ಸ್ಪೈಕ್ ಪ್ರೋಟಿನ್ ಗಳ ಸಂಖ್ಯೆಗಿಂತ ದುಪ್ಪಟ್ಟು. ಡೆಲ್ಟಾ ವೈರಸ್ ಕೂಡ ಮೂಲ ವೈರಸ್ ಗಿಂತ ತುಂಬಾನೆ ಭಿನ್ನವಾಗಿದೆ. ಈ ಹೊಸ ತಳಿ ಡೆಲ್ಟಾಗಿಂತ ಡಬಲ್ ಮ್ಯೂಟಂಟ್ ಗಳನ್ನು ಹೊಂದಿರುವುದರಿಂದ ಅದರ ಪರಿಣಾಮ ಹೇಗೆ ಆಗಬಹುದು ಎಂಬ ಸಂಗತಿಯೇ ವಿಜ್ಞಾನಿಗಳನ್ನು ಆತಂಕಕ್ಕೆ ತಳ್ಳಿದೆ.

    ಇಂಗ್ಲೆಂಡಿನ ತಜ್ಞರ ಪ್ರಕಾರ, ಅವರು ಈ ರೂಪಾಂತರವನ್ನು ಹಿಂದೆ ಗಮನಿಸಿಲ್ಲ.ಹೀಗಾಗಿ ಇದು ಬೇರೆ ಮ್ಯೂಟೆಂಟ್ ಗಳ  ಜೊತೆ  ಸೇರಿದಾಗ ಹೇಗೆ ವರ್ತಿಸಬಹುದು ಎಂಬುದು ಗೊತ್ತಾಗುತ್ತಿಲ್ಲ. ತುಂಬಾ ಸಂಕೀರ್ಣವಾಗಿರುವ ಈ ಮ್ಯೂಟೆಂಟ್ ಗಳ ಬಗ್ಗೆ  ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ. ಇದರ ಸಂಪೂರ್ಣ ತಪಾಸಣೆಗೆ ಇನ್ನು ಒಂದು ವಾರವಾದರು ಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಆದರೆ ಒಂದು ಸಮಾಧಾನಕರ ಅಂಶವೆಂದರೆ ಹೊಸ ರೂಪಾಂತರಿ ತಗುಲಿಸಿಕೊಂಡವರಲ್ಲಿ ಇದುವರಿಗಿನ ಕೋವಿಡ್ ಗಿಂತ ಭಿನ್ನವಾದ ರೋಗ ಲಕ್ಷಣಗಳು ಕಂಡು ಬಂದಿಲ್ಲ.  ಕೆಲವರಲ್ಲಿ ರೋಗ ಲಕ್ಷಣಗಳು ಕೂಡ ಗೋಚರಿಸಿಲ್ಲ.

    ದಕ್ಷಿಣ ಆಫ್ರಿಕಾದ ಎಂಟು ಪ್ರಾಂತ್ಯಗಳಲ್ಲಿ ಈ ತಳಿ ಪತ್ತೆಯಾಗಿದೆ. ಈಗ ಅಲ್ಲಿನ  ಹೊಸ ಪ್ರಕರಣ   ಗುರುವಾರ ಒಂದೇ ದಿನ  ನಿತ್ಯದ ಸರಾಸರಿಗಿಂತ ದುಪ್ಪಟ್ಟಾಗಿದೆ. ಅದರ ಅರ್ಥ ಈ ರೂಪಾಂತರಿಯ ಪ್ರಸರಣ ವೇಗ ಹೆಚ್ಚು. ಪಕ್ಕದ ಬೋಟ್ಸ್ ವಾನ್ ದಲ್ಲಿ 4 ಕೇಸುಗಳು ಪತ್ತೆಯಾಗಿದೆ. ಸೌತ್ ಆಫ್ರಿಕಾದಿಂದ ಹಾಂಗ್ ಕಾಂಗ್ ಗೆ ಬಂದ ಒಬ್ಬ ಪ್ರಯಾಣಿಕನಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ಅದೇ ರೀತಿ  ಇಸ್ರೇಲ್ ಮತ್ತು ಬೆಲ್ಜಿಯಂನಲ್ಲಿ ಒದೊಂದು ಕೇಸು ಪತ್ತೆಯಾಗಿದೆ. ಈ ಕೇಸುಗಳೆಲ್ಲಾ ದಕ್ಷಿಣಾ ಆಫ್ರಿಕಾದಿಂದ ಬಂದವರು.ಒಟ್ಟಾರೆಯಾಗಿ ಇದೀಗ ದಕ್ಷಿಣ ಆಫ್ರಿಕಾ ಒಂದರಲ್ಲೇ 58 ಕೇಸು, ಬೋಟ್ಸಾವಾನ್ ನಲ್ಲಿ  6 ಮತ್ತು ಹಾಂಗ್ ಕಾಂಗ್ ನಲ್ಲಿ  ಇಬ್ಬರು  ಪೀಡಿತರಿದ್ದಾರೆ.

    ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ  ಹೇಳಿರುವ ಪ್ರಕಾರ  ಈ ರೂಪಾಂತರಿಯನ್ನು   ಆತಂಕ ತರಬಹುದಾದ ವೈರಸ್ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ. ಸದ್ಯ ಅದಕ್ಕೆ ಗ್ರೀಕ್ ಹೆಸರು ಓಮಿಕ್ರಾನ್ ಎಂದು ನಾಮಕರಣ ಮಾಡಲಾಗಿದೆ.

    ಈಗಾಗಲೇ  ಆಲ್ಫಾ,  ಬೀಟಾ  ಗಾಮ ಮತ್ತು ಡೆಲ್ಟಾ ರೂಪಾಂತರಿಗಳನ್ನು ವೇರಿಯೆಂಟ್ಸ್ ಆಫ್ ಕನ್ಸರ್ನ್ (voc)ಪಟ್ಟಿಗೆ ಸೇರಿಸಲಾಗಿದೆ. ಈ ಹಿಂದಿನ ಎರಡು ರೂಪಾಂತರಿಗಳನ್ನು ಲಂಬ್ಡಾ ಮತ್ತು ಮು ಎಂದು ಹೆಸರಿಸಲಾಗಿತ್ತು.

    ರೂಪಾಂತರಿಗಳು ಹರಡುವ ವೇಗ, ಅದು ಹಬ್ಬಿರುವ ದೇಶ, ಮಾಡುವ ಅವಾಂತರ ಮತ್ತು ಲಸಿಕೆಗೆ ಅದು ಪ್ರತಿಕ್ರಿಯಿಸುವ  ರೀತಿಯನ್ನು ಅಧ್ಯಯಮ ಮಾಡಿ ಅವುಗಳನ್ನು ವರ್ಗೀಕರಣ ಮಾಡಲಾಗುತ್ತದೆ.

    ಈ ಹೊಸ ತಳಿ ಇನ್ನು ಭಾರತಕ್ಕೆ ಬಂದಿಲ್ಲ. ಇದುವರೆವಿಗೂ  ಒಂದು ಕೇಸು ಕೂಡ ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ , ಆತಂಕ ಬೇಡ. ಆದರೆ ಎಲ್ಲರೂ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

    ಅಲ್ಲದೆ ವೈರಸ್ ಗಳು ರೂಪಾಂತರ ಹೊಂದುವುದು ಸಹಜ ಪ್ರತಿಕ್ರಿಯೆ.  ಈಗಿನ ಲಸಿಕೆಗಳು ಈ ಹಿಂದಿನ ಎಲ್ಲಾ ರೂಪಾಂತರಿಗಳನ್ನು ಹಿಮ್ಮೆಟ್ಟಿಸಿದೆ. ಹೀಗಾಗಿ ಆತಂಕ ಪಡಬೇಕಾದ ಅಗತ್ಯ ಕಾಣುತ್ತಿಲ್ಲ. ಅದರ ಜೊತೆಗೆ ಕೋವಿಡ್ ಶಿಷ್ಟಾಚಾರವನ್ನು ಯಾವುದೇ ಕಾರಣದಿಂದಲೂ ನಿರ್ಲಕ್ಷಿಸದೆ ಮುಂದುವರಿಸುವುದು ಅಗತ್ಯವಾಗಿದೆ.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    2 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!