23.5 C
Karnataka
Monday, May 20, 2024

    ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ನಿರ್ಧಾರ

    Must read

    NEW DELHI NOV 3

    ಯೋಜಿತ ಕೌಶಲ ತರಬೇತಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ಬುಧವಾರ ಇಲ್ಲಿ ನಿರ್ಧರಿಸಲಾಯಿತು. ಕೇಂದ್ರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಕರ್ನಾಟಕದ ಕೌಶಲಾಭಿವೃದ್ಧಿ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ನಡೆಸಿದ ಸಭೆಯ ವೇಳೆ ಈ ನಿರ್ಧಾರ ಹೊರಹೊಮ್ಮಿತು.

    ಈ ರೀತಿಯ ಸಮೀಕ್ಷೆ ಮಾಡಿಸುವುದರಿಂದ ರಾಜ್ಯದ ಯಾವ್ಯಾವ ವಲಯದಲ್ಲಿ ಎಂತೆಂತಹ ಕೌಶಲಗಳಿಗೆ ಬೇಡಿಕೆ ಇದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಇದನ್ನು ಆಧರಿಸಿ ಪ್ರಸ್ತುತ ಬೇಡಿಕೆಗಳಿಗೆ ಅನುಸಾರವಾಗಿ ಯುವಜನತೆಯನ್ನು ತರಬೇತುಗೊಳಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

    ಇದೇ ವೇಳೆ ರಾಜೀವ್ ಚಂದ್ರಶೇಖರ್ ಅವರು, ರಾಷ್ಟ್ರೀಯ ಮಟ್ಟದ ಐ.ಟಿ.ಸಚಿವರ ಸಮಾವೇಶವೊಂದನ್ನು ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಆಗ ಅಶ್ವತ್ಥ ನಾರಾಯಣ ಅವರು, ಇಂತಹ ಸಮಾವೇಶವನ್ನು ಕರ್ನಾಟಕದಲ್ಲೇ ನಡೆಸಲು ಕೋರಿದರು. ಇದರಿಂದ ಐಟಿ ಹಾಗೂ ಐಟಿಇಎಸ್ ಆಧಾರಿತ ಹೊಸ ತಾಂತ್ರಿಕತೆಗಳಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜೀವ್ ಅವರು, ಈ ಸಂಬಂಧವಾಗಿ ಕೇಂದ್ರ ಇಲಾಖೆಗೆ ಪತ್ರವನ್ನು ಬರೆಯಲು ಸಲಹೆ ನೀಡಿದರು.

    ಸಚಿವ ಅಶ್ವತ್ಥ ನಾರಾಯಣ ಅವರು ‘ಮೇಕ್ ಇನ್ ಇಂಡಿಯಾ’ ರೀತಿಯಲ್ಲಿ ‘ಮೇಕ್ ಇನ್ ಕರ್ನಾಟಕ’ಕ್ಕೆ ಆದ್ಯತೆ ಕೊಡಬೇಕಾದ ಅಗತ್ಯವಿದೆ ಎಂದರು. ಜೊತೆಗೆ, ಕೈಮಗ್ಗದವರು ಸೇರಿದಂತೆ ರಾಜ್ಯದೆಲ್ಲೆಡೆ ಇರುವ ಕುಶಲಕರ್ಮಿಗಳ ಮ್ಯಾಪಿಂಗ್ ಸಿದ್ಧಪಡಿಸಬೇಕಾದ ಮಹತ್ವದ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಅರೆವಾಹಕ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳ ಬೆಳವಣಿಗೆಗೆ ಒತ್ತು ಕೊಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

    ಇದಕ್ಕೆ ಮುನ್ನ ಸಚಿವ ನಾರಾಯಣ ಅವರು ಮಂಗಳವಾರ ಐವರು ಕೇಂದ್ರ ಸಚಿವರನ್ನು ಭೇಟಿಯಾಗಿ ತಮ್ಮ ಇಲಾಖೆಗಳ ಪ್ರಸ್ತಾವಗಳ ಬಗ್ಗೆ ಚರ್ಚಿಸಿ ಸಹಕಾರ ಕೋರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!