23.5 C
Karnataka
Sunday, May 19, 2024

    ಕೋವಿಡ್‌ ರಿಸಲ್ಟ್‌ ವಿಳಂಬ ಮಾಡಿದ 40 ಲ್ಯಾಬ್‌ಗಳ ಮೇಲೆ ದಂಡ ಪ್ರಯೋಗ

    Must read


    ಕೋವಿಡ್‌ ಪರೀಕ್ಷೆ ವರದಿಗಳನ್ನು ವಿಳಂಬ ಮಾಡಿದ ಸರಕಾರಿ ಮತ್ತು ಖಾಸಗಿ ಲ್ಯಾಬ್‌ಗಳ ಮೇಲೆ ಸರಕಾರ ಮೊದಲೇ ಎಚ್ಚರಿಕೆ ನೀಡಿದಂತೆ ದಂಡ ಪ್ರಯೋಗ ಮಾಡಿದೆ.

    ಸ್ಯಾಂಪಲ್‌ ಕಳಿಸಿಕೊಟ್ಟ 24 ಗಂಟೆಗಳ ಒಳಗಾಗಿ ರಿಸಲ್ಟ್‌ ಕೊಡದೆ, ಐಸಿಎಂಆರ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡದ ಕಾರಣಕ್ಕೆ ಪ್ರತೀ ಒಂದು ಸ್ಯಾಂಪಲ್‌ ಮೇಲೆ 200 ರೂ.ನಂತೆ ದಂಡ ವಿಧಿಸಲಾಗಿದೆ.

    ರಾಜ್ಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ‌ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಭೆಯ ನಂತರ ಡಿಸಿಎಂ ಈ ಮಾಹಿತಿ ಹಂಚಿಕೊಂಡರು.

    ಡಿಸಿಎಂ ಹೇಳಿದ್ದಿಷ್ಟು;

    • 24 ಗಂಟೆ ಒಳಗಾಗಿ ರಿಸಲ್ಟ್‌ ಕೊಡಬೇಕು ಎಂದು ಸರಕಾರವು ಲ್ಯಾಬ್‌ಗಳಿಗೆ ಡೆಡ್‌ಲೈನ್‌ ವಿಧಿಸಿತ್ತು. ಆದರೆ, ಕೆಲ ಲ್ಯಾಬ್‌ಗಳು ಪರಿಸ್ಥಿತಿಯ ತೀವ್ರತೆ ಅರಿಯದೇ ಉಪೇಕ್ಷೆ ಮಾಡಿರುವುದು ಅಕ್ಷಮ್ಯ. ಹೀಗಾಗಿ ದಂಡ ಹಾಕಲಾಗಿದೆ. ಮೇ 8ರಿಂದ ಜಾರಿಗೆ ಬರುವಂತೆ ದಂಡ ಕ್ರಮ ಕೈಗೊಳ್ಳಲಾಗಿದ್ದು, 3,034 ಸ್ಯಾಂಪಲ್‌ಗಳ ವರದಿ ನೀಡಲು ತಡ ಮಾಡಿದ ಕಾರಣಕ್ಕೆ ಸರಕಾರಿ ಸ್ವಾಮ್ಯದ 9 ಪ್ರಮುಖ ಲ್ಯಾಬ್‌ಗಳಿಗೆ 6,06,800 ರೂ. ಹಾಗೂ ಖಾಸಗಿ ವಲಯದ 31 ಲ್ಯಾಬ್‌ಗಳಿಂದ 7,069 ಸ್ಯಾಂಪಲ್‌ಗಳು ವಿಳಂಬವಾಗಿ ಬಂದಿದ್ದು, ಅವುಗಳಿಗೆ ಒಟ್ಟು 14,13,800 ರೂ. ದಂಡ ವಿಧಿಸಲಾಗಿದೆ.
    • ಐಸಿಎಂಆರ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡದೇ ಫಲಿತಾಂಶದ ವರದಿಗಳನ್ನು ಬಹಿರಂಗ ಮಾಡಿದ ಕಾರಣಕ್ಕಾಗಿ 5 ಲ್ಯಾಬ್‌ಗಳಿಗೆ ದಂಡ ವಿಧಿಸಿ ಮುಚ್ಚಿಸಲಾಗಿದೆ. ಜತೆಗೆ, ಇನ್ನೂ ಬಹಳ ವಿಳಂಬ ಮಾಡಿದ 41 ಲ್ಯಾಬ್‌ಗಳಿಗೆ ಶೋಕಾಸ್‌ ನೋಟೀಸ್ ಜಾರಿ ಮಾಡಲಾಗಿದೆ. ಸ್ಯಾಂಪಲ್‌ ತಲುಪಿದ 24 ಗಂಟೆಯೊಳಗೆ ರಿಸಲ್ಟ್‌ ಕೊಡುವುದರ ಜತೆಗೆ, ಪಾಸಿಟೀವ್‌ ಬಂದವರ ಮಾಹಿತಿಯನ್ನು ಐಸಿಎಂಆರ್‌ ಪೋರ್ಟಲ್‌ಗೆ ಆಪ್‌ಲೋಡ್‌ ಮಾಡಬೇಕು. ಹೀಗೆ ಆಗದಿರುವುದರಿಂದ ಚಿಕಿತ್ಸೆ ತಡವಾಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಲ್ಯಾಬ್‌ಗಳ ಇಂಥ ದೋರಣೆಯನ್ನು ಸಹಿಸಲು ಸಾಧ್ಯವಿಲ್ಲ.
    • 1,100 ಸ್ಯಾಂಪಲ್‌ ರಿಸಲ್ಟ್‌ ತಡ ಮಾಡಿದ್ದಕ್ಕೆ ಮೆಡ್‌ಜಿಯೋನೋಂ ಲ್ಯಾಬ್‌ಗೆ 2,20,000 ರೂ., 862 ರಿಸಲ್ಟ್‌ ತಡ ಮಾಡಿದ ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಲ್ಯಾಬ್‌ಗೆ 1,72,400 ರೂ.,  659 ವರದಿ ವಿಳಂಬ ಮಾಡಿದ ಯುರೋಫಿನ್ಸ್‌ ಕ್ಲಿನಿಕಲ್‌ ಗೆನೆಟಿಕ್ಸ್‌ ಇಂಡಿಯಾ ಲ್ಯಾಬ್‌ಗೆ  1,31,800 ರೂ. ದಂಡ ವಿಧಿಸಲಾಗಿದೆ. ಸರಕಾರಿ ಸ್ವಾಮ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ದಂಡಕ್ಕೆ ತುತ್ತಾದ ಲ್ಯಾಬ್‌ಗಳಿವು.

    ಇನ್ನು, ಖಾಸಗಿ ಲ್ಯಾಬ್‌ಗಳಿಗೆ ಬಂದರೆ 938 ವರದಿಗಳನ್ನು ತಡವಾಗಿ ನೀಡಿದ ಡಾ.ಲಾಲ್‌ ಪಾಥ್‌ಲ್ಯಾಬ್ಸ್‌ಗೆ 1,87,600 ರೂ., 918  ರಿಸಲ್ಟ್‌ ನೀಡಲು ತಡ ಮಾಡಿದ್ದಕ್ಕೆ ಮೆಡ್‌ಜಿಯೋನೋಂ ಲ್ಯಾಬ್‌ಗೆ 1,83,600 ರೂ., ಮಣಿಪಾಲ್‌ ಆಸ್ಪತ್ರೆಯ ಲ್ಯಾಬ್‌ 880  ವರದಿಗಳನ್ನು ತಡ ಮಾಡಿದ್ದಕ್ಕಾಗಿ 1,76,000 ರೂ., 756 ರಿಸಲ್ಟ್‌ ತಡ ಮಾಡಿದ ಪ್ರಿಮಾ ಡಯಾಗ್ನಿಸ್ಟಿಕ್‌ ಲ್ಯಾಬ್‌ಗೆ 1,51,200 ರೂ., 585 ವರದಿ ವಿಳಂಬ ಮಾಡಿದ 1ಎಂಜಿ ಲ್ಯಾಬ್ಸ್‌ಗೆ 1,17,000 ರೂ., ಬೆಂಗಳೂರು ಅರ್ಬನ್‌ ಲ್ಯಾಬ್ಸ್‌ (05) 509 ವರದಿಗಳನ್ನು ವಿಳಂಬ ಮಾಡಿದ್ದಕ್ಕಾಗಿ 1,01,800 ರೂ. ದಂಡ ವಿಧಿಸಲಾಗಿದೆ. ಖಾಸಗಿ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ದಂಡಕ್ಕೆ ತುತ್ತಾದ ಲ್ಯಾಬ್‌ಗಳಿವು.

    ಟೆಸ್ಟ್‌ ಹೆಚ್ಚಿಸಲು ಸೂಚನೆ:

    ಸದ್ಯಕ್ಕೆ 9 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವುದರಿಂದ ಎಲ್ಲಡೆ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಮನೆಮನೆಗೂ ತೆರಳಿ ರೋಗ ಲಕ್ಷಣಗಳಿದ್ದವರನ್ನು ಪರೀಕ್ಷೆ ಮಾಡಬೇಕು. ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟು ಮಾಡಬೇಕು. ಒಬ್ಬ ಪಾಸೀಟಿವ್‌ ಬಂದವರು ಪತ್ತೆಯಾದರೆ ಅವರಿಗೆ ಪ್ರಾಥಮಿಕ ಹಂತದಲ್ಲಿ ಸಂಪರ್ಕಕ್ಕೆ ಬಂದ ಕನಿಷ್ಠ ನಾಲ್ವರನ್ನಾದರೂ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಸೋಂಕು ಕಂಡು ಬಂದರೆ ಅಂಥವರನ್ನು ಕೂಡಲೇ ಸ್ಥಳೀಯ ಕೋವಿಡ್‌ ಕೇರ್‌ಗಳಿಗೆ ಶಿಫ್ಟ್‌ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

    ಚಾಮರಾಜನಗರದಲ್ಲಿ ಕಿಟ್‌ಗಳಿಲ್ಲ ಅಂತ ನೆಪ ಹೇಳಿ ಪರೀಕ್ಷೆ ನಡೆಸುತ್ತಿಲ್ಲ ಎಂಬ ಮಾಹಿತಿಯನ್ನು ಶಾಲಿನಿ ರಜನೀಶ್‌ ಗಮನಕ್ಕೆ ತಂದರು. ಕೂಡಲೇ ಅಲ್ಲಿಗೆ ಅಗತ್ಯವಾದ ರಾಟ್‌ & ಆರ್‌ಟಿಪಿಸಿಆರ್‌ ಕಿಟ್‌ಗಳನ್ನು ಕಳಿಸುವಂತೆ ಸೂಚಿಸಿದ್ದೇನೆ.

    ಬ್ಲ್ಯಾಕ್‌ ಫಂಗಸ್‌ ತುರ್ತು ಔಷಧಿ ಖರೀದಿ:

    ಸದ್ಯಕ್ಕೆ ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ ಔಷಧಿಗೆ ಬಹಳ ಬೇಡಿಕೆ ಇದ್ದು, ತಮ್ಮಲ್ಲಿ ಸ್ಟಾಕ್‌ ಇದ್ದರೆ ಯಾರು ಬೇಕಾದರೂ ತುರ್ತಾಗಿ  ಪೂರೈಕೆ ಮಾಡಬಹುದು. ನಿಗದಿತ ದರ ನೀಡಿ ಸರಕಾರ ತಕ್ಷಣ ಖರೀದಿ ಮಾಡಲಿದೆ. ಆಂಫೊಟೆರಿಸಿನ್-ಬಿ ಔಷಧಿಯನ್ನು (Amphotericin-B; 50mg) 3 ಲಕ್ಷ ವೈಲ್ಸ್‌ ಖರೀದಿ ಮಾಡುವಂತೆ ಸಭೆಯಲ್ಲಿದ್ದ ಕೋವಿಡ್ ಔಷಧಿ ಉಸ್ತುವಾರಿ ಅಧಿಕಾರಿ‌ ಅಜುಂ ಪರ್ವೇಜ್‌ ಅವರಿಗೆ ನಿರ್ದೇಶನ ನೀಡಲಾಯಿತು. ಇನ್ನು, ರಾಜ್ಯದಲ್ಲಿ ರೆಮಿಡಿಸಿವರ್‌ ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ದಾಸ್ತಾನಿದೆ.

    ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಲ್ಯಾಬ್‌ ಉಸ್ತುವಾರಿ ಅಧಿಕಾರಿ ಶಾಲಿನಿ ರಜನೀಶ್‌,  ಕೋವಿಡ್ ಔಷಧಿ ಉಸ್ತುವಾರಿ ಅಧಿಕಾರಿ‌ ಅಜುಂ ಪರ್ವೇಜ್‌, ಡಿಸಿಎಂ ಕಾರ್ಯದರ್ಶಿ ಪ್ರದೀಪ್‌ ಪ್ರಭಾಕರ್‌ ಮುಂತಾದವರು ಸಭೆಯಲ್ಲಿದ್ದರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!