33.6 C
Karnataka
Monday, May 13, 2024

    ಉಳಿತಾಯವೇ ಆಪದ್ಧನ; ವೆಚ್ಚಬಾಕುತನದಿಂದ ಗೊಂದಲಮಯ ಜೀವನ

    Must read

    ಇಂದಿನ ಬದಲಾವಣೆ ಹೇಗಿದೆ ಎಂದರೆ ಹಲವಾರು ಹವ್ಯಾಸಗಳ ಶೈಲಿಗಳ ವ್ಯಾಖ್ಯಾನವೂ ಬದಲಾಗಿದೆ. ಉಳಿತಾಯ ಎಂದರೆ ಈ ಹಿಂದೆ ಗಳಿಸಿದ, ಅದು ವ್ಯವಹಾರದಿಂದಾಗಲಿ, ಸಂಬಳದಿಂದಾಗಲಿ ಗಳಿಸಿರಬಹುದು ಅದರಲ್ಲಿ ವೆಚ್ಚ ಮಾಡದೆ ಉಳಿಸಿದ ಹಣವಾಗಿತ್ತು. ಆದರೆ ಈಗಿನ ವೆಚ್ಚಬಾಕು ದಿನಗಳಲ್ಲಿ ಉಳಿತಾಯ ಎಂದರೆ ವೆಚ್ಚ ಮಾಡುವುದರಲ್ಲಿ ಕಡಿತವಾದ ಹಣವಾಗಿದೆ. ಒಂದು ಮಾಲ್‌ ಅಥವಾ ಸ್ಟೋರ್‌ ನಿಂದ ಖರೀದಿ ಮಾಡಿದ ಬಿಲ್‌ ನಲ್ಲಿ ಅವರು ಡಿಸ್ಕೌಂಟ್‌ ಮಾಡಿದ ಹಣವನ್ನು ಉಳಿಸಿದ ಹಣವೆಂದು ತೋರಿಸುತ್ತಾರೆ.

    Photo by Micheile Henderson on Unsplash

    ಕಣ್ತಪ್ಪಿನ ಸಂಕೇತ:2020.21 ರ ವರ್ಷಾಂತ್ಯದ ದಿನ ಅಂದರೆ ಮಾರ್ಚ್‌ 31 ರಂದು ಕೇಂದ್ರ ಸರ್ಕಾರದ ವಿತ್ತೀಯ ಮಂತ್ರಾಲಯದ ಆರ್ಥಿಕ ವಿಭಾಗವು ಸುತ್ತೋಲೆ ಹೊರಡಿಸಿ ಏಪ್ರಿಲ್‌ 1 ರಿಂದ ಮುಂದಿನ ಆರು ತಿಂಗಳವರೆಗೂ ಸಣ್ಣ ಉಳಿತಾಯ ಯೋಜನೆ, ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ನಂತಹ ಹಲವಾರು ಯೋಜನೆಗಳಿಗೆ ನೀಡಲಾಗುವ ಬಡ್ಡಿದರವನ್ನು ಭಾರಿ ಕಡಿತವನ್ನು ಪ್ರಕಟಿಸಿತು. ಆದರೆ , ಏಪ್ರಿಲ್‌ 1 ರಂದು ಮುಂಜಾನೆಯೇ ಅದು ಕಣ್ತಪ್ಪಿನಿಂದಾದ ಅಚಾತುರ್ಯವೆಂದು ಕಡಿತದ ಪ್ರಸ್ತಾಪವನ್ನು ಹಿಂಪಡೆದಿದೆ. ಇದು ಮುಂದಿನ ದಿನಗಳಲ್ಲಿ ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಧಾರದ ಮುನ್ಸೂಚನೆಯೂ ಇರಬಹುದು. ಬ್ಯಾಂಕ್‌ ಬಡ್ಡಿದರ ಕಡಿತದ ಕಾರಣ ಬ್ಯಾಂಕ್‌ ಠೇವಣಿಗಳ ಮೇಲಿನ ಬಡ್ಡಿಯೂ ಕಡಿಮೆಯಾಗಿ, ಈ ಮಾಸಿಕ/ ಸಮಯಬದ್ಧ ಆದಾಯವನ್ನವಲಂಭಿಸಿರುವ ಅಸಂಖ್ಯಾತ ಜನಸ್ಥೋಮವನ್ನು ಆಪತ್ತಿಗೆ ತಳ್ಳಿದಂತಾಗುತ್ತದೆ.

    ಕುಸಿಯುತ್ತಿರುವ ಬಡ್ಡಿ – ಹರಿದಾಡುತ್ತಿರುವ ಧನ:ಕಡಿತಗೊಳ್ಳುತ್ತಿರುವ ಬ್ಯಾಂಕ್‌ ಬಡ್ಡಿಯಿಂದ ಬೇಸತ್ತು, ಬ್ಯಾಂಕ್‌ ಗಳೇ ವಿತರಿಸಿದ ಪರ್ಪೆಚುಯಲ್‌ ಬಾಂಡ್‌ ಗಳಲ್ಲಿ ಹೂಡಿಕೆ ಮಾಡೋಣವೆಂದರೆ ಯೆಸ್‌ ಬ್ಯಾಂಕ್‌ ನ ರೂ.8,000 ಕೋಟಿಗೂ ಹೆಚ್ಚು, ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ ನ ರೂ.318 ಕೋಟಿ ಹಣದ ಬಾಂಡ್‌ ಗಳನ್ನು write off ಮಾಡಿ ಶೂನ್ಯ ಮಾಡಿದ ಪ್ರಕರಣಗಳು ಅದಕ್ಕೂ ತಡೆಯೊಡ್ಡುತ್ತದೆ.

    ಇತ್ತೀಚೆಗೆ ಹೆಚ್ಚಿನ ಬ್ಯಾಂಕ್‌ ಗಳು ಪರ್ಪೆಚುಯಲ್‌ ಬಾಂಡ್‌ ಗಳ ವಿತರಣೆಗೆ ಮುಂದಾಗುತ್ತಿವೆ. ಅಲ್ಲದೆ ಬ್ಯಾಂಕ್‌ ಗಳಾಗಲಿ, ಕಂಪನಿಗಳಾಗಲಿ ಈಗ ತೇಲಿಬಿಡುತ್ತಿರುವ ಯೋಜನೆಗಳಲ್ಲಿ ನೀಡುವ ಬಡ್ಡಿ ದರವೂ ಸಹ ಅತಿಯಾದ ಕಡಿಮೆಯಾಗಿದೆ. ಜಿ ಐ ಸಿ ಹೌಸಿಂಗ್‌ ಫೈನಾನ್ಸ್‌ ಶೇ.6.94 ಬಡ್ಡಿದರದ ಬಾಂಡ್‌ ಗಳನ್ನು, ಬಜಾಜ್‌ ಫೈನಾನ್ಸ್‌ ಒಂಬತ್ತು ವರ್ಷದ ಅವಧಿಗೆ ಶೇ.6.92% ರಂತೆ, ಎರಡು ವರ್ಷದ ಅವಧಿಗೆ ಶೇ.5.4022 ರಂತೆ, ಮೂರು ವರ್ಷದ ಅವಧಿಗೆ ಶೇ.5.95 ರಂತೆ, ಐ ಆರ್‌ ಎಫ್‌ ಸಿ ಕಂಪನಿ 20 ವರ್ಷದ ಅವಧಿಗೆ ಶೇ.6.80 ರಂತೆ ವಾರ್ಷಿಕ ಬಡ್ಡಿ ನೀಡುವ ಬಾಂಡ್ ಗಳನ್ನು ವಿತರಣೆ ಮಾಡಲು ಯಶಸ್ವಿಯಾಗಿವೆ.

    ಇದು ಪೇಟೆಗಳಲ್ಲಿ ಹರಿದಾಡುವ ಹಣದ ಪ್ರಮಾಣವನ್ನು ತೋರಿಸುತ್ತದೆ. ಇಷ್ಠು ಸುಲಭವಾದ ಬಡ್ಡಿಯಲ್ಲಿ ಅವಶ್ಯವಿರುವ ಹಣ ದೊರೆಯುತ್ತಿರುವಾಗ ಬ್ಯಾಂಕ್‌ ಗಳಿಂದ ಹಣ ಪಡೆಯಲು ಕಾರ್ಪೊರೇಟ್‌ ವಲಯ ಹಿಂಜರಿಯುತ್ತಲಿದೆ. ಈ ಕಾರಣದಿಂದ ಬ್ಯಾಂಕ್‌ ಗಳು ಎಸ್‌ ಎಂ ಎಸ್‌ ಗಳ ಮೂಲಕ ರೀಟೇಲ್‌ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.

    ಸುರಕ್ಷತೆ – ಸ್ವಯಂ ನಿರ್ಧಾರ :ಯೆಸ್‌ ಬ್ಯಾಂಕ್‌ ನ ರೂ.8,400 ಕೋಟಿ ಮೌಲ್ಯದ ಬಾಂಡ್‌ ಗಳಲ್ಲಾಗಲಿ, ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ನ ರೂ.318 ಕೋಟಿ ಮೌಲ್ಯದ ಬಾಂಡ್‌ ಗಳಲ್ಲಾಗಲಿ ಕೇವಲ ಕೆಲವು ಕಂಪನಿಗಳು ಮಾತ್ರ ಹೂಡಿಕೆ ಮಾಡಿರುವುದಿಲ್ಲ, ಮ್ಯೂಚುಯಲ್‌ ಫಂಡ್‌ ಗಳೂ, ವ್ಯಕ್ತಿಗತ ಹೂಡಿಕೆದಾರರೂ ಸಹ ಹೂಡಿಕೆ ಮಾಡಿರುತ್ತಾರೆ. ಕೆಲವು ಸಂಪದ್ಬರಿತ ಕಂಪನಿಗಳೂ ಸಹ ಹೂಡಿಕೆ ಮಾಡಬಹುದಾಗಿದೆ. ಯೆಸ್‌ ಬ್ಯಾಂಕ್‌ ನ ಬಾಂಡ್‌ ಗಳನ್ನು ಶೂನ್ಯ ಮಾಡುವ ಸಂದರ್ಭದಲ್ಲಿ ಆಗಿನ ಅಂದಾಜು ಸುಮಾರು ರೂ.93,669 ಕೋಟಿ ಹಣವನ್ನು ಅಡಿಷನಲ್‌ ಟೈರ್‌ 1 ಬಾಂಡ್‌ ಗಳಲ್ಲಿ ಹೂಡಲಾಗಿತ್ತು. ದೀರ್ಘಾವಧಿಯ, ಸುಲಭ ಬಡ್ಡಿದರದ, ಹೆಚ್ಚಿನ ಜವಾಬ್ಧಾರಿಯಿಲ್ಲದ ಕೆಳದರ್ಜೆಅ ರೀತಿಯ ಸಂಪನ್ಮೂಲ ಟೈರ್‌ 1 ಮತ್ತು ಟೈರ್‌ 2 ಬಾಂಡ್‌ ಗಳಾಗಿವೆ.

    ಹಣದ ಹೊಳೆ ಸರಾಗವಾಗಿ ಹರಿದಾಡುತ್ತಿರುವ ಈಗಿನ ಸಮಯದಲ್ಲಿ ಕಂಪನಿಗಳು ಉತ್ಪಾದನೆಯಿಂದ ಗಳಿಸಬಹುದಾದ ಲಾಭಕ್ಕೂ ಹೆಚ್ಚಿನ ವೇಗದ ಆದಾಯವನ್ನು ಅದೇ ಕಂಪನಿಗಳ ಷೇರುಗಳು ತಂದು ಕೊಡುತ್ತಿವೆ. ಇದು ಎಲ್ಲಾ ಕಂಪನಿಗಳಿಗೂ ಅನ್ವಯಿಸದು. ಹೂಡಿಕೆಯ ಸುರಕ್ಷತೆಯ ದೃಷ್ಠಿಯಿಂದ, ಅಧಿಕ ಆದಾಯ ಗಳಿಸುವ ದೃಷ್ಠಿಯಿಂದ ಈ ಕೆಲವು ಅಂಶಗಳನ್ನು ಗಮನಿಸಲೇಬೇಕು.

    1. ಉತ್ತಮ ಅಗ್ರಮಾನ್ಯ ಕಂಪನಿಗಳಲ್ಲಿ ಇದು ಸಾಧ್ಯವಾಗಿದೆ. ಕೇವಲ ಬಾಹ್ಯ ಕಾರಣಗಳ ಪ್ರಭಾವದಿಂದ ಏರಿಕೆ ಕಾಣುತ್ತಿರುವ ಕಂಪನಿಗಳಿಂದ ದೂರವಿದ್ದು ಕಂಪನಿಗಳ ಆಂತರಿಕ ಸಾಮರ್ಥ್ಯವನ್ನಾಧರಿಸಿ ನಿರ್ಧರಿಸಬೇಕು. ಕಂಪನಿಗಳು ಉತ್ತಮ ಚಾರಿತ್ರ್ಯವುಳ್ಳವಾಗಿರಬೇಕು
    2. ಹೂಡಿಕೆಗಾಗಿ ಆಯ್ಕೆಮಾಡಿಕೊಂಡ ಕಂಪನಿಯಲ್ಲಿ ಹೂಡಿಕೆಯ ಮೊತ್ತದಲ್ಲಿ, ಅರ್ಹತೆಯ ಆಧಾರದ ಮೇಲೆ ಶೇ.5 ರಿಂದ 10 ರಷ್ಠಕ್ಕೆ ಸೀಮಿತವಾದರೆ ಒಳಿತು. ಬೃಹತ್‌ ಗಾತ್ರದ ಕಂಪನಿಗಳಾಗಿದ್ದು, ತಮ್ಮಚಟುವಟಿಕೆಯ ವಲಯದಲ್ಲಿ ಯಶಸ್ಸು ಕಾಣುವ ಮಟ್ಟದಲ್ಲಿರಬೇಕು. ಕೇವಲ ಸುದ್ಧಿಸಮಾಚಾರಗಳನ್ನಾಧರಿಸಿ ನಿರ್ಧರಿಸಬಾರದು.
    3. ಕಂಪನಿಗಳು ಉತ್ತಮ ಕಾರ್ಪೊರೇಟ್‌ ಫಲಗಳನ್ನು ವಿತರಿಸುವಂತಹವಾಗಿರುವ ಹೂಡಿಕೆದಾರರ ಸ್ನೇಹಿಯಾಗಿರಬೇಕು.
    4. ಉತ್ತಮ ಗುಣಮಟ್ಟದ ಕಾರ್ಪೊರೇಟ್‌ ನೀತಿಪಾಲನೆಯುಳ್ಳವಾಗಿರಬೇಕು.
    5. ಕಂಪನಿಗಳು ಉತ್ತಮವಾಗಿದ್ದು, ಸಂಪದ್ಭರಿತವಾಗಿದ್ದರೂ, ಕೆಲವು ಸಂದರ್ಭದಲ್ಲಿ ಅವು ಇಂಟರ್‌ ಕಾರ್ಪೊರೇಟ್‌ ಡಿಪಾಜಿಟ್‌ ಗಳ ಮೂಲಕ ಇತರೆ ಕಂಪನಿಗಳಿಗೆ ನೀಡಿರುತ್ತವೆ. ಹಣ ಪಡೆದುಕೊಂಡ ಕಂಪನಿಗಳು ಆರ್ಥಿಕ ಒತ್ತಡಕ್ಕೊಳಗಾದಲ್ಲಿ ಉತ್ತಮ ಕಂಪನಿಯ ಹಣವು ಕರಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಂಪನಿಗಳು ನಿರ್ವಹಿಸುವ ಹೂಡಿಕೆ ಜಾಲದಲ್ಲಿರುವ ಕಂಪನಿಗಳ ಬಗ್ಗೆಯೂ ಗಮನವಿರಬೇಕು.
    6. ಬದಲಾವಣೆಗಳ ವೇಗ ಹೆಚ್ಚಾಗಿದ್ದು ರೇಟಿಂಗ್‌ ಕಂಪನಿಗಳ ರೇಟಿಂಗ್‌, ವಿಶ್ಲೇಷಕರ ಅಭಿಪ್ರಯಗಳೂ ಸಹ ಅಷ್ಠೇ ವೇಗವಾಗಿ ಬದಲಾಗುತ್ತವೆ. ಆದ್ದರಿಂದ ಇಂತಹ ಅಂಶಗಳನ್ನೇ ಆಧಾರವಾಗಿರಿಸಿಕೊಂಡು ನಿರ್ಧರಿಸುವುದಕ್ಕಿಂತ ಇತರೆ ಅಂಶಗಳನ್ನೂ ಸಹ ಪರಿಗಣಿಸಬೇಕು.

    ಪ್ರತಿ ತೈಮಾಸಿಕದಲ್ಲೂ ಡಿವಿಡೆಂಡ್‌ – ಹೂಡಿಕೆದಾರರಿಗೆ ವರದಾನ:

    ಹೂಡಿಕೆ ಹೇಗಿರಬೇಕೆಂದರೆ ಬಂಡವಾಳ ಸ್ಥಿರತೆಯೊಂದಿಗೆ ಏಳ್ಗೆ ಹೊಂದುವುದರೊಂದಿಗೆ, ಆಗಿಂದಾಗ್ಗೆ ಆದಾಯವನ್ನು ಒದಗಿಸುವಂತಹದ್ದಾಗಿದ್ದರೆ ಒಳಿತು. ಇತ್ತೀಚೆಗೆ ಸಾರ್ವಜನಿಕ ವಲಯದ ಕಂಪನಿಗಳು ಹೆಚ್ಚಿನ ಆಕರ್ಷಕಮಯ ಪ್ರಮಾಣದ ಡಿವಿಡೆಂಡ್‌ ಗಳನ್ನು ಪ್ರಕಟಿಸಿ, ವಿತರಿಸುತ್ತಿವೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಕಂಪನಿಗಳು ಪ್ರತಿ ತ್ರೈಮಾಸಿಕದ ಅಂತ್ಯದಲ್ಲೂ ಡಿವಿಡೆಂಡ್‌ ಗಳನ್ನು ವಿತರಿಸಬಹುದು ಎಂಬ ನೀತಿಯೂ ಪ್ರೇರಕಶಕ್ತಿಯಾಗಿದೆ.

    ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ :ಈ ಕಂಪನಿಯಿಂದ ದೇಶದ ಶೇ.35 ರಷ್ಠರ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಈ ಕಂಪನಿಯ 10 ರೂಪಾಯಿ ಮುಖಬೆಲೆಯ ಷೇರಿನ ಬೆಲೆ ರೂ.93/94 ರಲ್ಲಿದೆ. ಇದರ ವಾರ್ಷಿಕ ಗರಿಷ್ಠವು ರೂ.105 ಆಗಿದ್ದು ಚುರುಕಾದ ವಹಿವಾಟು ಪ್ರದರ್ಶಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ರೂ.105 ರಿಂದ ರೂ.91 ರವರೆಗೂ ಕುಸಿದಿದೆ. ಇದಕ್ಕೆ ಕಾರಣ ಕಂಪನಿಯು ಎರಡು ತಿಂಗಳಲ್ಲಿ ಎರಡು ಬಾರಿ ಡಿವಿಡೆಂಡ್‌ ವಿತರಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರತಿ ಷೇರಿಗೆ ರೂ.7.50 ಯಂತೆ, ಮಾರ್ಚ್‌ ನಲ್ಲಿ ಪ್ರತಿ ಷೇರಿಗೆ ರೂ.3.00 ರಂತೆ ಡಿವಿಡೆಂಡ್‌ ವಿತರಿಸಿದೆ. ಅಂದರೆ ರೂ.100 ರ ಸಮೀಪದ ಷೇರು ರೂ.10.50 ಯಷ್ಠರ ಡಿವಿಡೆಂಡ್‌ ವಿತರಿಸಿ, ಮಾರ್ಚ್‌ ಅಂತ್ಯದ ತೈಮಾಸಿಕದ ಡಿವಿಡೆಂಡ್‌ ವಿತರಣೆ ನಿರೀಕ್ಷಿಸಬಹುದಾಗಿದೆ. ಹಿಂದಿನ ವರ್ಷದ ಮಾರ್ಚ್‌ ಸಮಯದಲ್ಲಿ ರೂ.105 ವಾರ್ಷಿಕ ಕನಿಷ್ಠದಲ್ಲಿದ್ದ ಈ ಷೇರಿನ ಬೆಲೆಯು ಈ ವರ್ಷದ ವಾರ್ಷಿಕ ಗರಿಷ್ಠವಾಗಿದೆ.

    ಆರ್‌ ಇ ಸಿ ಲಿಮಿಟೆಡ್:ಈ ಕಂಪನಿ ಪ್ರತಿ ಷೇರಿಗೆ ರೂ.6 ರಂತೆ ನವೆಂಬರ್‌ 2020 ರಲ್ಲಿ ಮಧ್ಯಂತರ ಡಿವಿಡೆಂಡ್‌ ವಿತರಿಸಿ, ಮತ್ತೊಮ್ಮೆ ಮಾರ್ಚ್‌ 2021 ರಲ್ಲಿ ಪ್ರತಿ ಷೇರಿಗೆ ರೂ.5 ರಂತೆ ಡಿವಿಡೆಂಡ್‌ ವಿತರಿಸಿದೆ. ಅಂದರೆ ರೂ.130/35 ರ ಸಮೀಪದ ಉತ್ತಮ ಕಂಪನಿಯ ಷೇರು ಈಗಾಗಲೇ ರೂ.11 ರಷ್ಠು ಡಿವಿಡೆಂಡ್‌ ವಿತರಿಸಿದೆ. ಮಾರ್ಚ್‌ ವರ್ಷಾಂತ್ಯದ ಡಿವಿಡೆಂಡ್‌ ಯಾವ ಪ್ರಮಾಣದಲ್ಲಿರಬಹುದೆಂಬುದೇ ಕುತೂಹಲಕಾರಿ ಅಂಶ.

    ಎನ್‌ ಎಂ ಡಿ ಸಿ :ಮೈನಿಂಗ್‌ ವಿಭಾಗದ ಸಾರ್ವಜನಿಕ ವಲಯದ ಈ ಕಂಪನಿ 2010 ರಲ್ಲಿ ರೂ.300 ರಂತೆ, 2018 ರಲ್ಲಿ ಪ್ರತಿ ಷೇರಿಗೆ ರೂ.153.50 ಯಂತೆ ಷೇರು ವಿತರಿಸಿತ್ತು. ಸಧ್ಯ ಈ ಷೇರಿನ ಬೆಲೆ ರೂ.138 ರ ಸಮೀಪ ವಹಿವಾಟಾಗುತ್ತಿದೆ. ಈ ಬೆಲೆಯು ವಾರ್ಷಿಕ ಗರಿಷ್ಠದ ಸಮೀಪವಿದ್ದರೂ 2018 ರಲ್ಲಿ ವಿತರಿಸಿದ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿದೆ. 2019 ರಲ್ಲಿ ಪ್ರತಿ ಷೇರಿಗೆ ರೂ.5.52 ರಂತೆ, 2020 ರಲ್ಲಿ ರೂ.5.29 ರಂತೆ ಡಿವಿಡೆಂಡ್‌ ವಿತರಿಸಿದ ಈ ಕಂಪನಿ ಈ ವರ್ಷದ ಮಾರ್ಚ್‌ ನಲ್ಲಿ ರೂ.7.76 ರಂತೆ ಮಧ್ಯಂತರ ಡಿವಿಡೆಂಡ್‌ ವಿತರಿಸಿದೆ.

    ಕೋಲ್‌ ಇಂಡಿಯಾ:2010 ರಲ್ಲಿ ಪ್ರತಿ ಷೇರಿಗೆ ರೂ.245 ರಂತೆ ಐ ಪಿ ಒ ಮೂಲಕ ಪೇಟೆ ಪ್ರವೇಶಿಸಿದ ಈ ಕಂಪನಿ 2014 ರಲ್ಲಿ ಪ್ರತಿ ಷೇರಿಗೆ ರೂ.29 ರಂತೆ, 2016 ರಲ್ಲಿ ರೂ.27.40 ರಂತೆ, 2018 ರಲ್ಲಿ ರೂ.23.75 ಇತರೆ ವರ್ಷಗಳಲ್ಲೂ ಆಕರ್ಷಕ ಪ್ರಮಾಣದ ಡಿವಿಡೆಂಡ್‌ ಗಳನ್ನು ವಿತರಿಸಿದೆ. ಈ ವರ್ಷ ಈಗಾಗಲೇ ಪ್ರತಿ ಷೇರಿಗೆ ರೂ.12.50 ಯಂತೆ ಡಿವಿಡೆಂಡ್‌ ವಿತರಿಸಿದೆ. ಅಂದರೆ ಸಧ್ಯ ರೂ.133 ರ ಸಮೀಪದಲ್ಲಿರುವ ಉತ್ತಮ ಕಂಪನಿಯೊಂದು ಈ ಪ್ರಮಾಣದ ಡಿವಿಡೆಂಡ್‌ ವಿತರಿಸುತ್ತಿರುವುದು ಹೂಡಿಕೆದಾರರನ್ನು ಹರ್ಷಿತಗೊಳಿಸುವುದಲ್ಲವೇ?

    ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ :ಈ ವರ್ಷ ಮಾರ್ಚ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.8 ರಂತೆ ಡಿವಿಡೆಂಡ್‌ ವಿತರಿಸಿದ ಈ ಕಂಪನಿ ಹಿಂದಿನ ವರ್ಷವೂ ರೂ.9.50 ರಂತೆ ಡಿವಿಡೆಂಡ್‌ ವಿತರಿಸಿದೆ. ಸಧ್ಯ ಈ ಷೇರಿನ ಬೆಲೆ ರೂ.114 ರ ಸಮೀಪವಿದ್ದು, ಷೇರಿನ ಬೆಲೆಯು, ಕಂಪನಿ ವಿತರಿಸುವ ಡಿವಿಡೆಂಡ್‌ ಆಧರಿಸಿ ನೋಡಿದಾಗ ಹೂಡಿಕೆಗೆ ಆಕರ್ಷಣೀಯವೆನಿಸುತ್ತದೆ.

    ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ :ರಕ್ಷಣಾ ವಲಯದ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಈ ಕಂಪನಿಯ ಷೇರಿನ ಬೆಲೆ ರೂ.337 ರ ಸಮೀಪವಿದೆ. ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಷೇರಿಗೆ ರೂ.330 ರಂತೆ ಆಫರ್‌ ಫಾರ್‌ ಸೇಲ್‌ ಮೂಲಕ ಬಂಡವಾಳ ಹಿಂತೆಗೆತವನ್ನು ಮಾಡಿತು. ರೀಟೇಲ್‌ ಹೂಡಿಕೆದಾರರಿಗೆ ರೂ.20 ರ ಡಿಸ್ಕೌಂಟ್‌ ನೀಡಿತು. ಈ ಕಂಪನಿ ಹಿಂದಿನ ತಿಂಗಳು ಪ್ರತಿ ಷೇರಿಗೆ ರೂ.6.70 ರಂತೆ ಮಧ್ಯಂತರ ಡಿವಿಡೆಂಡ್‌ ವಿತರಿಸಿದೆ.

    ಸಾರ್ವಜನಿಕ ವಲಯದ ಕಂಪನಿಗಳಾದ ಗೇಲ್‌ ಇಂಡಿಯಾ, ಭಾರತ್‌ ಎಲೆಕ್ಟ್ರಾನಿಕ್ಸ್‌, ಆಯಿಲ್‌ ಇಂಡಿಯಾ, ಒ ಎನ್‌ ಜಿ ಸಿ, ಭಾರತ್‌ ಪೆಟ್ರೋಲಿಯಂ, ಹಿಂದೂಸ್ಥಾನ್‌ ಪೆಟ್ರೋಲಿಯಂ, ಎನ್‌ ಟಿ ಪಿ ಸಿ, ಮುಂತಾದವು ಸಹ ಉತ್ತಮ ಡಿವಿಡೆಂಡ್‌ ನೀಡುತ್ತಿರುವ ಕಂಪನಿಗಳಾಗಿವೆ. ಭಾರಿ ಗಾತ್ರದ ಕಂಪನಿಗಳಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಹಿಂದಿನ ವರ್ಷ, ರೂ.2000 ದಲ್ಲಿರುವ ಪ್ರತಿ ಷೇರಿಗೆ ರೂ.6.50 ಯಂತೆ, ಟಾಟಾ ಸ್ಟೀಲ್‌ ರೂ. 800 ರ ಸಮೀಪವಿರುವ ಪ್ರತಿ ಷೇರಿಗೆ ರೂ.10 ರಂತೆ, ಎಂ ಆರ್‌ ಏಫ್‌ ತನ್ನ ರೂ.85,000 ರೂಪಾಯಿಯ ಷೇರಿಗೆ ರೂ.97 ರ ಡಿವಿಡೆಂಡ್‌ ನೀಡಿದೆ. ಹೀಗಾಗಿ ಏರಿಕೆ ಕಂಡಾಗ ಮಾರಾಟಮಾಡಿದರೆ ಮಾತ್ರ ಲಾಭದಾಯಕ. ಇಲ್ಲವಾದಲ್ಲಿ ಕೇವಲ ಮಾನಸಿಕ ಭಾಂದವ್ಯಗಳನ್ನು ಬೆಳೆಸುತ್ತವೆಯೇ ಹೊರತು, ಆರ್ಥಿಕವಾಗಿ ಅನುಕೂಲ ಮಾಡಿಕೊಡುವುದಿಲ್ಲ.

    ಷೇರುಪೇಟೆ ಮತ್ತು ಬ್ಯಾಂಕ್ ಠೇವಣಿ :ಬ್ಯಾಂಕ್‌ ಡಿಪಾಜಿಟ್‌ ಗಳಿಗೂ ಷೇರುಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಬ್ಯಾಂಕ್‌ ಡಿಪಾಜಿಟ್‌ ಗಳು ನಿಗದಿತ ಅವಧಿಯದಾಗಿದ್ದು, ಅವಧಿಗೆ ಮುನ್ನ ಹಣ ಹಿಂಪಡೆದರೆ, ಬಡ್ಡಿದರವೂ ಕಡಿತಗೊಳ್ಳುವುದು. ಆದರೆ ಷೇರುಗಳಲ್ಲಿ ಪೇಟೆಯ ದರ ಹೆಚ್ಚಿದಾಗ ಅಥವಾ ಅವಶ್ಯಕತೆ ಇದ್ದಾಗ ಪೇಟೆಯಲ್ಲಿ ಮಾರಾಟ ಮಾಡಿ ಹಣವನ್ನು ಟಿ+2 ಆಧಾರದ ಮೇಲೆ ಹಿಂಪಡೆಯಲು ಸಾಧ್ಯ. ಇಷ್ಠು ಕ್ಷಿಪ್ರವಾಗಿ ನಗದೀಕರಿಸಲು ಸಾಧ್ಯವಿರುವ ಏಕೈಕ ಸ್ವತ್ತು ಷೇರುಪೇಟೆಯಾಗಿದೆ. ಹೀಗೆ ಮಾರಾಟ ಮಾಡಿದ ಷೇರುಗಳ ಬೆಲೆಗಳು ಮತ್ತೊಮ್ಮೆ ಕುಸಿತ ಕಂಡಾಗ ಖರೀದಿಸಲು ಸಾಧ್ಯವಿದೆ. ಸಾಮಾನ್ಯವಾಗಿ ಕಂಪನಿಗಳು ಡಿವಿಡೆಂಡ್‌ ವಿತರಿಸಿದ ನಂತರ ಷೇರಿನ ಬೆಲೆಗಳು ಇಳಿಕೆ ಕಾಣುತ್ತವೆ. ಆ ಸಂದರ್ಭವು ಹೂಡಿಕೆಗೆ ಆಯ್ಕೆಗೆ ಉತ್ತಮವಾಗಿರುತ್ತದೆ. ಏರಿಳಿತಗಳ ಚಕ್ರದ ಲಾಭ ಪಡೆಯಬಹುದು.

    ಎಚ್ಚರಿಕೆ:ಸಧ್ಯ ಬರುತ್ತಿರುವ ಎಲ್ಲಾ ಸ್ಥಳೀಯ ಮತ್ತು ವಿದೇಶಿ ವಿಶ್ಲೇಷಕರ ಅಭಿಪ್ರಾಯಗಳು ಸಕಾರಾತ್ಮಕವಾಗಿವೆ. ಆದರೆ ಹೂಡಿಕೆದಾರರು ಗಮನದಲ್ಲಿರಿಸಬೇಕಾದ ಅಂಶವೆಂದರೆ, ಹಿಂದಿನ ವರ್ಷ ಅನಿರೀಕ್ಷಿತವಾದ ಲಾಕ್‌ ಡೌನ್‌ ಸಂದರ್ಭದಲ್ಲಿ ಹಲವಾರು ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ತಮ್ಮ ಸಿಬ್ಬಂದಿಗೆ ಸಂಬಳ ವಿತರಿಸಲೂ ಸಹ ಸಾಹಸಮಾಡಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಅಂದರೆ ವಾಸ್ಥವವೇ ಬೇರೆ, ವಿಶ್ಲೇಷಣೆಗಳೇ ಬೇರೆ. ಎಲ್ಲಾ ಚಿಂತನೆಗಳಿಗೂ ತೆರೆದಿಡಿ ಮನ, ಆದರೆ ಸೂಕ್ತವಾಗಿರುವುದನ್ನ ನಿರ್ಧರಿಸಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    2 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!