25.7 C
Karnataka
Monday, May 20, 2024

    ಧೈರ್ಯಂ ಸರ್ವತ್ರಸಾಧನಂ

    Must read


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ


    ಧೈರ್ಯಮಿಲ್ಲದಂಗಾವ  ಕಾರ್ಯಮುಂ ಆಗದು –  ‘ರಾಮ ಕಥಾಸಾರ’ದಲ್ಲಿ  ಬರುವ  ಮಾತಿದು. “ಧೈರ್ಯಂ ಸರ್ವತ್ರಸಾಧನಂ” ಎಂಬ ಮಾತು ಎಲ್ಲರಿಗೂ ತಿಳಿದಿರುವಂಥದ್ದೆ.  ಇದನ್ನು ‘ಮನೋಬಲ’, ‘ಆತ್ಮಬಲ’ ಎನ್ನಲೂ ಬಹುದು.  ಧೈರ್ಯವಿಲ್ಲದಿದ್ದರೆ ಜೀವನ ನಡೆಸಲಾಗದು ಎಂದು ದೇವಚಂದ್ರ ವಿವರಿಸುವ  ಒಂದು ಚಿಕ್ಕ ಕತೆ ಈ ಕೃತಿಯಲ್ಲಿದೆ.

    ರೈತನೊಬ್ಬ    ಧೋ! ಎಂದು ಸುರಿಯುವ ಮಳೆಯಲ್ಲಿ  ಉರುವಲು ಇಲ್ಲ ಎನ್ನುವ ಕಾರಣಕ್ಕೆ ಉಪವಾಸವಿರುತ್ತಾನೆ.   ಉರುವಲಿಗೋಸ್ಕರ  ತೀವ್ರ ಹುಡುಕಾಟ ನಡೆಸಿ   ಕಡೆಗೆ ಮಾಡಿಗೆ ಹೊದಿಸಿದ ದೊಡ್ಡ ಕಟ್ಟಿಗೆಯ ತುಂಡನ್ನೆ ಕಡಿಯಲು ಮುಂದಾಗುತ್ತಾನೆ. ಆದರೆ    ಅದು ಕಟ್ಟಿಗೆಯ ರೂಪದಲ್ಲಿದ್ದ ಮಾರಿ ದೇವತೆಯಾಗಿರುತ್ತದೆ. ರೈತನ  ಬದುಕುವ  ಅದಮ್ಯ ಉತ್ಸಾಹ ಕಂಡು  ಮಾರಿ ದೇವತೆ ತನ್ನ ನಿಜ ರೂಪ ತೋರಿಸಿ “ನನ್ನನ್ನು ಕಡಿಯದಿರು! ಇಂದಿನಿಂದ ನಿನ್ನ ಮನೆ ಮುಂದೆ ನಿತ್ಯವೂ ಸೌದೆ ಹೊರೆ  ಇರುವಂತೆ ನೋಡಿಕೊಳ್ಳುತ್ತೇನೆ”  ಎನ್ನುತ್ತದೆ.

    ಹಾಗೆ ಒಂದಷ್ಟು ದಿನಗಳವರೆಗೆ ಮಾರಿ ದೇವತೆ ತನಗೆ ಜೀವದಾನ ಮಾಡಿದ ರೈತನನ್ನು ಕಟ್ಟಿಗೆ ನೀಡಿಯೇ ಸಲಹುತ್ತಿರುತ್ತದೆ. ಈ ವಿಚಾರ  ಹೇಗೋ ತಿಳಿದ ಪಕ್ಕದ ಮನೆಯ ಹೆಂಗಸೂ ಕೂಡ ಗಂಡನಿಗೆ   “ಮಾರಿ ದೇವತೆ ಸೌದೆ ಹಾಕುವಾಗ ನೋಡಿ ಕಡಿಯಲು ಮುಂದಾಗು ಆಗ ನಮಗೆ ನಿತ್ಯವೂ ಸೌದೆ ಹೊರೆ ದೊರೆಯುತ್ತದೆ”  ಎನ್ನುತ್ತಾಳೆ. ಹೆಂಡತಿಯ ಬಲವಂತದಿಂದ ಆ ವ್ಯಕ್ತಿ ಭಂಡ ಧೈರ್ಯ ಮಾಡಿ ಮಾರಿ ದೇವತೆಯನ್ನು ಕಡಿಯಲು ಕೊಡಲಿ ಎತ್ತಿದರೆ   ಕಡಿಯಲು ಸಾಧ್ಯವಾಗುವುದಿಲ್ಲ. ಇಡೀ ದೇಹ ಚೈತನ್ಯ ಕಳೆದುಕೊಂಡಂತೆ ಮರವಟ್ಟಂತೆ  ಕೊಡಲಿ ಎತ್ತಿದ  ಅದೆ ಭಂಗಿಯಲ್ಲಿಯೇ ಇದ್ದು ಬಿಡುತ್ತಾನೆ.

    ಅದನ್ನು ಕಂಡ ಹೆಂಡತಿ ತನ್ನ   ಕಿವಿಯಾಭರಣಗಳನ್ನು ಕೊಟ್ಟು “ನನ್ನ ಗಂಡನನ್ನು  ಬಿಟ್ಟು ಬಿಡು  ಎಂದು ಬೇಡಿಕೊಳ್ಳುತ್ತಾಳೆ.  ಅದಕ್ಕೊಪ್ಪದ ಮಾರಿ ದೇವತೆ “ನಿತ್ಯವೂ ಈ ರೈತನ ಮನೆ ಮುಂದೆ ಸೌದೆ ಹೊರೆ ಹಾಕಿದರೆ ಬಿಡುವೆ” ಎನ್ನುತ್ತದೆ.  ಮರ್ಯಾದೆಗಂಜಿ ದುರಾಸೆ ಪಟ್ಟ  ದಂಪತಿಗಳು ಬಡ ರೈತನ ಮನೆಗೆ ನಿತ್ಯವೂ ಒಂದೊಂದು ಹೊರೆ ಸೌದೆಯನ್ನು ಹಾಕಲು ಮುಂದಾಗುತ್ತಾರೆ. 

    ಇದೊಂದು ಕತೆಯೇ ಆದರೂ ನಮಗೆ ಇದರಿಂದ ದೊರೆಯುವ ಆಶಯವೇನೆಂದರೆ ಯಾವುದೇ ಕೆಲಸ ಮಾಡಲು ಧೈರ್ಯ ಬೇಕು ಆದರೆ ದುರಾಸೆಯಿಂದ ಕೂಡಿದ ಭಂಡ ಧೈರ್ಯ ಬೇಡ ಎಂಬುದು. ಧೈರ್ಯದಲ್ಲೂ ಸಾತ್ವಿಕತೆ ಇರಬೇಕು.  ಆಂತಹ ಧೈರ್ಯ ನಮ್ಮ ಏಳಿಗೆಯ  ಸೂಚಕ. ಹೌದಲ್ವ!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    spot_img

    More articles

    2 COMMENTS

    1. ಮನೊಬಲದ ಬಗ್ಗೆ ಒಳ್ಳೆ ಕಥೆಯನ್ನೆ ಉದಾಹರಿಸಿರುವಿರಿ.ಅಭಿನಂದನೆಗಳು ಮೇಡಂ

    LEAVE A REPLY

    Please enter your comment!
    Please enter your name here

    Latest article

    error: Content is protected !!