35.8 C
Karnataka
Sunday, May 12, 2024

    ಪ್ರತಿ ಕಾಲೇಜಿಗೂ NAAC ಮಾನ್ಯತೆ – NIRF ಶ್ರೇಯಾಂಕ; ಕ್ರಿಯಾ ಯೋಜನೆ ರೂಪಿಸಲು ಸೂಚನೆ

    Must read

    ಉನ್ನತ ಶಿಕ್ಷಣ ವಿಭಾಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವತ್ತ ವೇಗದ ಹೆಜ್ಜೆಗಳನ್ನು ಇಡುತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ರಾಜ್ಯದ ಎಲ್ಲ ವಿಶ್ವವಿದ್ಯಾಲಯ-ಕಾಲೇಜುಗಳ ನಾಕ್‌ ಮಾನ್ಯತೆ, ಎನ್‌ಐಆರ್‌ಎಫ್‌ ರಾಂಕ್‌ (rank) ಪಡೆಯುವ ಸಂಬಂಧ 15 ದಿನಗಳ ಒಳಗಾಗಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಎಲ್ಲ ಕುಲಪತಿಗಳಿಗೆ ಸೂಚಿಸಿದ್ದಾರೆ.

    ಬೆಂಗಳೂರಿನಲ್ಲಿ ಮಂಗಳವಾರ ಸರ್ಕಾರದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ನಡೆಸಿದರಲ್ಲದೆ, ಸುಮಾರು 3 ಗಂಟೆಗೂ ಹೆಚ್ಚು ಸಮಯ ಸಮಾಲೋಚನೆ ನಡೆಸಿದರು. “ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಮ್ಮ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲೊಂದು ಬಹುದೊಡ್ಡ ಬದಲಾವಣೆ. ಇದಕ್ಕೆ ಅನುಗುಣವಾಗಿ ನಾವೆಲ್ಲ ಹೆಜ್ಜೆ ಇಡಬೇಕು. ಸ್ಪರ್ಧಾತ್ಮಕವಾಗಿರುವ ಈ ಸಂದರ್ಭದಲ್ಲಿ ಪ್ರತಿ ವಿವಿಯು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನ (National Institutional Ranking Framework-NIRF) rank ಹೊಂದಿರಬೇಕು ಹಾಗೂ ಪ್ರತಿ ಕಾಲೇಜ್‌ಗೂ ನಾಕ್‌ ಮಾನ್ಯತೆ (NAAC Accreditation) ಇರಲೇಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ಮೊದಲಿನಂತೆ ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಸಾಲುವುದಿಲ್ಲ. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಓಡಬೇಕು. ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಏನೇನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಅದರಂತೆ ನಮ್ಮ ವಿವಿಗಳನ್ನು ವರ್ತಮಾನದ ಅಗತ್ಯಗಳಿಗೆ ಅನುಗುಣವಾಗಿ ಮರು ರೂಪಿಸಬೇಕು. ಅದಕ್ಕೆ ಶಿಕ್ಷಣ ನೀತಿಯನ್ನು ಜೋಡಿಸಬೇಕು ಹಾಗೂ ಜಾಗತಿಕವಾಗಿ ಎಲ್ಲರೂ ಒಪ್ಪಿರುವ ಇಂಥ rank-ಮಾನ್ಯತೆ ಅತ್ಯಗತ್ಯ ಎಂದು ಕುಲಪತಿಗಳಿಗೆ ಉಪ ಮುಖ್ಯಮಂತ್ರಿ ಸಲಹೆ ನೀಡಿದರು.

    ಮುಂದಿನ 3 ವರ್ಷಗಳಲ್ಲಿ ಯಾವ್ಯಾವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು, ಎನ್‌ಐಆರ್‌ಎಫ್‌ ರಾಂಕ್(rank), ನಾಕ್‌ ಮಾನ್ಯತೆ ಪಡೆಯಲು ಏನೆಲ್ಲ ಸಿದ್ಧತೆ ನಡೆಸಲಾಗುವುದು ಎಂಬ ವಿವರಗಳನ್ನು ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಿ ಮುಂದಿನ ಸಭೆಯಲ್ಲಿ ತಿಳಿಸಬೇಕು ಎಂದರು.

    ನಿರ್ಲಕ್ಷ್ಯ ಸಲ್ಲ ಎಂದ ಡಿಸಿಎಂ:

    ಎನ್‌ಐಆರ್‌ಎಫ್‌ ರಾಂಕಿಂಗ್‌- ನಾಕ್‌ ಮಾನ್ಯತೆಯನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಜಾಗತಿಕ ಶಿಕ್ಷಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಬೇಕಾದರೆ, ಹೆಚ್ಚು ಅನುದಾನ ಪಡೆಯಬೇಕಾದರೆ ಕೂಡ ಇವು ಅತ್ಯಗತ್ಯ. ಉನ್ನತ ಶಿಕ್ಷಣವನ್ನು ತಳಮಟ್ಟದಿಂದಲೇ ಬಲಿಷ್ಠಗೊಳಿಸಬೇಕಾದರೆ ಇವೆಲ್ಲ ಅಂಶಗಳು ಅಗತ್ಯ ಎಂದು ಡಿಸಿಎಂ ಹೇಳಿದರು.

    ಸದ್ಯಕ್ಕೆ ರಾಜ್ಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯು ಎನ್‌ಐಆರ್‌ಎಫ್‌ ranking‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೈಸೂರು ವಿವಿ-27, ಬೆಂಗಳೂರು ವಿವಿ-68, ಶಿವಮೊಗ್ಗದ ಕುವೆಂಪು ವಿವಿ-73 ಹಾಗೂ ಬೆಳಗಾವಿಯ ವಿಟಿಯು-80ನೇ ಸ್ಥಾನದಲ್ಲಿವೆ. ಮುಂದಿನ ಬಾರಿ ranking‌ ಪಟ್ಟಿ ಸಿದ್ಧವಾಗುವ ಹೊತ್ತಿಗೆ ಮೈಸೂರು ವಿವಿ 20ರೊಳಗಿನ ಸ್ಥಾನಕ್ಕೆ, ಬೆಂಗಳೂರು ವಿವಿ 50ರೊಳಗಿನ ಸ್ಥಾನಕ್ಕೆ ಬರಬೇಕು. ವಿಟಿಯು ಕೂಡ ಇನ್ನೂ ಉತ್ತಮ ಸ್ಥಾನಕ್ಕೆ ಬರಬೇಕು ಎಂದು ಡಿಸಿಎಂ ಅವರು ಕುಲಪತಿಗಳಿಗೆ ತಾಕೀತು ಮಾಡಿದರಲ್ಲದೆ, ಇದೇ ಪಟ್ಟಿಯಲ್ಲಿ ತುಮಕೂರು ಮತ್ತು ಮಂಗಳೂರು ವಿವಿಗಳು 150ರೊಳಗಿನ ಸ್ಥಾನದಲ್ಲಿವೆ. ಉಳಿದ ಯಾವ ವಿವಿಗಳಿಗೂ ಈ ರಾಂಕ್ (rank) ಸಿಕ್ಕಿಲ್ಲ. ಕೊನೆಯ ಪಕ್ಷ ಅದರ ಚೌಕಟ್ಟಿನೊಳಕ್ಕೆ ಬಂದಿಲ್ಲ ಎಂದರು.

    ಬೋಧನೆ, ಕಲಿಕೆ, ಸಂಪನ್ಮೂಲ ಸಂಗ್ರಹ, ಸಂಶೋಧನೆ ಮತ್ತು ವೃತ್ತಿಪರತೆ, ಫಲಿತಾಂಶ, ಜನರನ್ನು ತಲುಪುವ ರೀತಿ ಹಾಗೂ ಅದೇ ಜನರನ್ನು ಒಳಗೊಳ್ಳುವ ರೀತಿಯೂ ಸೇರಿದಂತೆ ಪ್ರಮುಖ ಐದು ಅಂಶಗಳನ್ನು ಆಧಾರವಾಗಿ ಇಟ್ಟಿಕೊಂಡು ಎನ್‌ಐಆರ್‌ಎಫ್‌ ranking‌ ನೀಡಲಾಗುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    3 ವಿವಿಗಳಿಗೆ ಅರ್ಹತೆಯೇ ಇಲ್ಲ:

    ನಮ್ಮ ರಾಜ್ಯದ ಸರಕಾರಿ ಸ್ವಾಮ್ಯದ 19 ವಿವಿಗಳ ಪೈಕಿ ಎನ್‌ಐಆರ್‌ಎಫ್‌ ranking ಪಟ್ಟಿಯಲ್ಲಿ ಎ-ಅದಕ್ಕಿಂತ ಮೇಲ್ಪಟ್ಟು ಸ್ಥಾನದಲ್ಲಿ 6 ವಿವಿ, ಬಿ-ಎ ಹಂತದಲ್ಲಿ 4 ವಿವಿಗಳಿದ್ದರೆ, ಮಾನ್ಯತೆ ಪಡೆದ 9 ವಿವಿಗಳಿವೆ. ಉಳಿದಂತೆ ಇನ್ನೆರಡು ವಿವಿಗಳು ಅರ್ಜಿ ಹಾಕಿಕೊಂಡಿದ್ದು, ಇನ್ನು 4 ವಿವಿಗಳು ಅರ್ಜಿಯನ್ನೇ ಹಾಕಿಲ್ಲ. 3 ವಿವಿಗಳು ಎನ್‌ಐಆರ್‌ಎಫ್‌ ranking ಅರ್ಹತೆಯನ್ನೇ ಹೊಂದಿಲ್ಲ ಎಂದು ಮಾಹಿತಿಯನ್ನು ಬಿಚ್ಚಿಟ್ಟರು ಡಿಸಿಎಂ.

    ನಾಕ್‌ ಮಾನ್ಯತೆ; 50 ಕಾಲೇಜ್‌ಗಳು ಮಾತ್ರ

    ರಾಜ್ಯದಲ್ಲಿ ಒಟ್ಟು 430 ಕಾಲೇಜ್‌ಗಳಿದ್ದು, ಕೇವಲ 50 ಕಾಲೇಜುಗಳಿಗೆ ಮಾತ್ರ ನಾಕ್‌ ಮಾನ್ಯತೆ ಸಿಕ್ಕಿದೆ. ಕೊನೆ ಪಕ್ಷ ಮುಂದಿನ ಮೂರು ವರ್ಷಗಳಲ್ಲಿ 230 ಕಾಲೇಜ್‌ಗಳನ್ನು ನಾಕ್‌ ವ್ಯಾಪ್ತಿಗೆ ತರಬೇಕೆನ್ನುವ ಗುರಿ ಹಾಕಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಪ್ರತಿ ವಿವಿ ವ್ಯಾಪ್ತಿಯಲ್ಲೂ ಇಬ್ಬರು ನಾಕ್‌ ಸಂಯೋಜಕರನ್ನು ನೇಮಕ ಮಾಡಲಾಗಿದ್ದು, ಅವರಿಂದ ಕಾಲೇಜ್‌ಗಳಿಗೆ ಕಾರ್ಯಾಗಾರ ಮಾಡಿಸಲಾಗುತ್ತಿದೆ ಎಂದ ಅವರು; ಎ-ಅದಕ್ಕೂ ಮೇಲ್ಪಟ್ಟು 9 ಕಾಲೇಜ್‌, ಬಿ-ಎ ಮಟ್ಟದಲ್ಲಿ 170 ಕಾಲೇಜ್‌ಗಳಿವೆ. ಇನ್ನು ನಾಕ್‌ ಮಾನ್ಯತೆಯನ್ನೇ ಪಡೆಯದ 246 ಕಾಲೇಜ್‌ಗಳಿದ್ದು, ಇದಕ್ಕೆ ಅರ್ಹತೆಯೇ ಇಲ್ಲದ 26 ಕಾಲೇಜ್‌ಗಳಿವೆ. ಸದ್ಯಕ್ಕೆ 9 ಕಾಲೇಜ್‌ಗಳ ನಾಕ್‌ ಮಾನ್ಯತೆಗೆ ಅರ್ಜಿ ಹಾಕಿಕೊಂಡಿದ್ದರೆ, ಉಳಿದ 167 ಕಾಲೇಜ್‌ಗಳಿಗೆ ಅರ್ಹತೆಯೇ ಇಲ್ಲದ ಸ್ಥಿತಿ ಇದೆ. ಇದೆಲ್ಲವನ್ನು ಸುಧಾರಿಸಿ ಮುಂದಿನ ಮೂರು ವರ್ಷಗಳಲ್ಲಿ 230 ಕಾಲೇಜ್‌ಗಳನ್ನು ನಾಕ್‌ ವ್ಯಾಪ್ತಿಗೆ ತರಬೇಕು ಎಂದು ಹೇಳಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರನಾಯಕ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ ಮುಂತಾದವರು ಪಾಲ್ಗೊಂಡಿದ್ದರು.

    spot_img

    More articles

    2 COMMENTS

    1. ಬುನಾದಿ ಆಧಾರಿತ ಶಿಕ್ಷಣವಿಲ್ಲದೇ,ಚಟುವಟಿಕೆ ಆಧಾರಿತ ವಿದ್ಯೆ ಕಲಿಯದೆ,ಪದವಿ ಮುಗಿಯುವಷ್ಟರಲ್ಲಿ ಯಾವುದಾದರೂ ಒಂದ ಜೀವನಾಗತ್ಯ ವೃತ್ತಿಯಲ್ಲಿ ನಿಪುಣತೆ ಸಿಗದೆ ಇಂತಹ ಯಾವ ವಿದ್ಯೆಯೂ ವ್ಯರ್ಥ ಎನಿಸುತ್ತದೆ.

    2. ಎಲ್ಲ ಕ್ರಮಗಳ ಬಗ್ಗೆ ಮಾತನಾಡುವ ಶಿಕ್ಷಣ ಸಚಿವರು…
      ಖಾಸಗಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಿಗೆ ನೀಡುತ್ತಿರುವ ಸಂಬಳದ ಬಗ್ಗೆ ವಿಶೇಷ ಗಮನ ಹರಿಸ ಬೇಕಾದ ಅಗತ್ಯ ಬಹಳ ಇದೆ. ಆಗ ಮಾತ್ರ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಾಧ್ಯ…!
      ಶಿಕ್ಷಣ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಭಾವಿಸೋಣವೇ…!

    LEAVE A REPLY

    Please enter your comment!
    Please enter your name here

    Latest article

    error: Content is protected !!