29.4 C
Karnataka
Monday, May 13, 2024

    ಹೂಡಿಕೆಯಲ್ಲಿ ಬಂಡವಾಳ ಸುರಕ್ಷತೆಗೆ ಇರಲಿ ಆದ್ಯತೆ

    Must read

    ಆರ್ಥಿಕ ಸಾಕ್ಷರತೆಯನ್ನು ಪಡೆಯಲು ಇಂದಿನ ವ್ಯವಸ್ಥೆಯನ್ನರಿತು ಅದಕ್ಕನುಗುಣವಾಗಿ ನಮ್ಮ ಚಿಂತನೆಗಳನ್ನು, ಕಾರ್ಯಗಳನ್ನು, ನಡೆಯನ್ನು ಬದಲಿಸಿಕೊಳ್ಳುವುದು ಹೆಚ್ಚು ಅಗತ್ಯ.

    ದಿನೇ ದಿನೇ ವಿವಿಧ ರೀತಿಯ ನಕಾರಾತ್ಮಕ ನಡೆಗಳು ಪ್ರದರ್ಶಿತವಾಗುತ್ತಿರುವ ಈಗಿನ ದಿನಗಳಲ್ಲಿ ಎಲ್ಲರೂ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಲು ಬಯಸುತ್ತಾರೆ. ಅದಕ್ಕೆ ತಕ್ಕಂತೆ ಕಾನೂನಾತ್ಮಕ ಪ್ರಕ್ರಿಯೆಗಳು ಸಹ ಕ್ಲಿಷ್ಟಕರವಾಗಿದ್ದು, ಜನಸಾಮಾನ್ಯರಿಗೆ ಸುಲಭವಂತೂ ಅಲ್ಲ. ಈ ಪರಿಸ್ಥಿತಿಯಲ್ಲಿ ನಿವೃತ್ತರು, ಹಿರಿಯ ನಾಗರಿಕರು, ಮಾಸಿಕ ಅದಾಯ ಅಪೇಕ್ಷಿತರುಗಳ ಅಗತ್ಯತೆಗೆ ಸ್ಪಂದಿಸುವ ಸೂಕ್ತ, ಹಣವನ್ನು ನಿಖರವಾಗಿ ಹಿಂದಿರುಗಿಸಬಲ್ಲ ಯೋಜನೆಗಳು ಅತಿ ವಿರಳವಾಗಿವೆ. ಸರ್ಕಾರಗಳಾಗಲಿ, ಅರ್‌ ಬಿ ಐ ಆಗಲಿ ಜಾರಿಗೊಳಿಸುತ್ತಿರುವ ಸುಧಾರಣಾ ಕ್ರಮಗಳು, ಬದಲಾವಣೆಗಳು ಜನಸಾಮಾನ್ಯರ ಹಿತದಿಂದ ಎಂಬ ಭಾವನೆಯಿದೆ. ಆದರೂ ಗೊಂದಲಮಯ ಸನ್ನಿವೇಶವಂತೂ ಕಡಿಮೆಯಾಗಿಲ್ಲ.

    ಬ್ಯಾಂಕ್‌ ಗಳಲ್ಲಿ ಠೇವಣಿ ಎಂದರೆ ಕೇವಲ ಶೇಕಡ 6ರಷ್ಠು ಬಡ್ಡಿ ಲಭಿಸುತ್ತದೆ. ಸರ್ಕಾರಿ ಕಂಪನಿಗಳಲ್ಲಿ ಬಾಂಡ್‌ ಹೂಡಿಕೆಗೆ ಸುಮಾರು ಶೇಕಡ7 ಸಮೀಪ ಬಡ್ಡಿ ದೊರೆಯುತ್ತದೆ. ಖಾಸಗಿ ಕಂಪನಿಗಳ ಸೆಕ್ಯೂರ್ಡ್‌ ಬಾಂಡ್‌ ಗಳಲ್ಲಿಯೂ ಗ್ಯಾರಂಟಿ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಷೇರುಪೇಟೆಯಲ್ಲಿ ಹೆಚ್ಚಿನ ಕಂಪನಿಗಳ ಷೇರಿನ ಬೆಲೆಗಳೆಲ್ಲಾ ಗಗನಕ್ಕೆ ಚಿಮ್ಮಿವೆ. ಕೆಲವು ಕಂಪನಿಗಳು ಗಜಗಾತ್ರದ ಪ್ರಮಾಣದಲ್ಲಿ ಸಂಪನ್ಮೂಲ ಸಂಗ್ರಹಣೆ ಮಾಡುತ್ತಿವೆ.

    ಈ ಸಂಪನ್ಮೂಲ ಸಂಗ್ರಹಣೆಯಲ್ಲಿ ಸಾರ್ವಜನಿಕ ವಲಯದ ಕಂಪನಿಗಳೇನು ಹಿಂದಿಲ್ಲ. ಸಧ್ಯ ತೇಲಿಬಿಟ್ಟಿರುವ ಪವರ್‌ ಫೈನಾನ್ಸ್‌ ಕಂಪನಿಯ ಶೇಕಡ 7.15ರ ಬಾಂಡ್‌ ಗಳೂ ಹೆಚ್ಚಿನ ಬೇಡಿಕೆ ಕಂಡಿರುವುದು ಪೇಟೆಯಲ್ಲಿ ಹರಿದಾಡುತ್ತಿರುವ ಹೆಚ್ಚುವರಿ ಹಣದ ಪ್ರಮಾಣವನ್ನು ತೋರಿಸುತ್ತದೆ. ಸಂಪನ್ಮೂಲ ಸಂಗ್ರಹಣೆ ಮಾಡುತ್ತಿರುವ ಕಾರ್ಪೊರೇಟ್‌ ಗಳು ಕಡಿಮೆ ಬೆಲೆಯಲ್ಲಿ ವಿತರಿಸಲು ಪ್ರಯತ್ನಿಸುತ್ತವೆ. ಠೇವಣಿ / ಹೂಡಿಕೆ ಮಾಡುವವರು ಹೆಚ್ಚುವರಿ ಆದಾಯ ಗಳಿಸಿಕೊಡುವ ಕಂಪನಿಗಳತ್ತ ಸ್ಪರ್ಧಾತ್ಮಕವಾಗಿ ಒಲವು ಮೂಡಿಸಿಕೊಂಡಿದ್ದಾರೆ. ಹಾಗಾಗಿ ಕೆಲವು ಕಳಪೆ ಕಂಪನಿಗಳೂ ತೇಲಿಬಿಡುವ ಠೇವಣಿ ಯೋಜನೆಗಳು ಭಾರಿ ಪ್ರಮಾಣದ ಸಂಗ್ರಹಣೆ ಮಾಡಿಕೊಳ್ಳುತಿರುವುದನ್ನ ಕಾಣಬಹುದು.

    ಜಾಗತೀಕರಣಕ್ಕೂ ಮುಂಚಿನ ದಿನಗಳಲ್ಲಿ ಅನೇಕ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳು ಉತ್ಪಾದನ ವಲಯದ ಕಂಪನಿಗಳ ರೀತಿಯೇ ಗ್ರಾಹಕರಿಂದ ಠೇವಣಿ ಸ್ವೀಕರಿಸುತ್ತಿದ್ದವು. ಅವು ಉತ್ಪಾದನಾ ಕಂಪನಿಗಳಿಗಿಂತ ಸ್ವಲ್ಪ ಮಟ್ಟಿನ ಹೆಚ್ಚಿನ ಬಡ್ಡಿ ನೀಡುತ್ತಿದ್ದವು.ನಂತರ ಬದಲಾದ ಪರಿಸ್ಥಿತಿಯಲ್ಲಿ ಅನೇಕ ಕಂಪನಿಗಳು ಆಪತ್ತಿಗೆ ತುತ್ತಾಗಿ ಠೇವಣಿ ಹಣ ಹಿಂದಿರುಗಿಸುವಲ್ಲಿ ವಿಫಲಗೊಂಡವು. ನಂತರದ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ಕಂಪನಿಗಳು ಸಹ ಠೇವಣಿದಾರರ ಹಣ ಹಿಂದಿರುಗಿಸುವಲ್ಲಿ ವಿಫಲಗೊಂಡವು. ಈ ಮಧ್ಯೆ ಅನೇಕ ಪೊಂಜಿ ಯೋಜನೆಗಳೂ ತೇಲಿಬಂದು ಅಮಾಯಕ ಹೂಡಿಕೆದಾರರ ಹಣವನ್ನು ಕರಗಿಸಿವೆ.

    ಈ ಸಂದರ್ಭದಲ್ಲಿ ಕೆಲವು ಕಂಪನಿಗಳ ಉದಾಹರಣೆಗಳನ್ನು ಓದುಗರ ಗಮನಕ್ಕೆ ತರಬೇಕೆನಿಸುತ್ತದೆ.

    ಮಹಾರಾಷ್ಟ್ರ ಅಪೆಕ್ಸ್‌ ಕಾರ್ಪೊರೇಷನ್‌ ಲಿ:ಕರ್ನಾಟಕದ ಬ್ಯಾಂಕಿಂಗ್‌ ಉಗಮ ಜಿಲ್ಲೆಯಲ್ಲಿ ಸ್ಥಾಪಿತವಾಗಿ ಮೂರು ತಲೆಮಾರುಗಳ ಈ ಎನ್‌ ಬಿ ಎಫ್‌ ಸಿ ಕಂಪನಿಯು 2002 ರಲ್ಲಿ ತನ್ನ ಠೇವಣಿದಾರರ ಸುಮಾರು ರೂ.300 ಕೋಟಿಯಷ್ಟರ ಹಣವನ್ನು ಹಿಂದಿರುಗಿಸಲು ಆರ್ಥಿಕ ತೊಂದರೆಗೊಳಗಾಯಿತು ಆಗ ಕಂಪನಿಯು ಸ್ವಯಂಪ್ರೇರಿತವಾಗಿ ತನ್ನ ಠೇವಣಿದಾರರ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸುವದಾಗಿ ನ್ಯಾಯಾಲಯದ ಅನುಮತಿ ಪಡೆದು ಎಲ್ಲಾ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸಿ ನೈತಿಕತೆಯಿಂದ ಮೆರೆಯಿತು.

    ಆದರೆ ಸೆಕ್ಯೂರ್ಡ್‌ ನಾನ್‌ ಕನ್ವರ್ಟಬಲ್ ಗಳೆಂದು ಕೆಲವು ಕಂಪನಿಗಳು ವಿತರಣೆ ಮಾಡಿದ ಬಾಂಡ್ ಗಳು ಒಂದೆರಡು ವರ್ಷಗಳಲ್ಲೇ ಆಪತ್ತಿಗೆ ಸಿಲುಕಿ ಹೂಡಿಕೆದಾರರಿಗೆ ತೊಂದರೆ ಉಂಟುಮಾಡಿದ ಉದಾಹರಣೆಗಳಿವೆ.

    ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್: 1984 ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ಹೌಸಿಂಗ್‌ ಫೈನಾನ್ಸ್‌ ಕಂಪನಿಯಾದ, ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ 2015 ರಿಂದ 2018 ರವರೆಗೂ ಹಲವಾರು ಸರಣಿಯ ನಾನ್‌ ಕನ್ವರ್ಟಬಲ್‌ ಬಾಂಡ್‌ ಯೋಜನೆಗಳ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿದೆ.

    2019 ಆರಂಭದಲ್ಲಿ ಮಾಧ್ಯಮವೊಂದರಲ್ಲಿ ಈ ಕಂಪೆನಿಯ ಆರ್ಥಿಕ ಸ್ಥಿತಿಗತಿ ಬಗೆ ಪ್ರಕಟವಾದ ವರದಿಯಿಂದಾಗಿ ಷೇರುಪೇಟೆಯಲ್ಲಿ ಇದರ ಷೇರಿನ ಬೆಲೆಗಳು ತರಗೆಲೆಗಳಂತೆ ಉದುರಿಹೋಯಿತು. ಕಂಪನಿಯು ವಿತರಿಸಿದ ರೂ.1,000 ಮುಖಬೆಲೆಯ ಸೆಕ್ಯೂರ್ಡ್‌ ನಾನ್‌ ಕನ್ವರ್ಟಬಲ್ ಬಾಂಡ್‌ ಗಳು ಆರಂಭಿಕ ದಿನಗಳಲ್ಲಿ ಮುಖಬೆಲೆಯ ಸಮೀಪದಲ್ಲಿ ವಹಿವಾಟಾಗುತ್ತಿದ್ದವು. ಆದರೆ ಈ ಸುದ್ಧಿಯು ಅವುಗಳ ಬೆಲೆಯನ್ನೂ ಸಹ ಭಾರಿ ಕುಸಿತಕ್ಕೊಳಪಡಿಸಿದವು. ವಿವಿಧ ಬಡ್ಡಿ ದರಗಳ ಈ ಸೆಕ್ಯೂರ್ಡ್‌ ನಾನ್‌ ಕನ್ವರ್ಟಬಲ್ ಬಾಂಡ್‌ ಗಳು ರೂ.1,000 ದ ಮುಖಬೆಲೆ ಹೊಂದಿದ್ದು ಸಧ್ಯ ರೂ.285 ರ ಸಮೀಪದಿಂದ ರೂ.340 ರ ಅಂತರದಲ್ಲಿ ವಹಿವಾಟಾಗುತ್ತಿವೆ. ಸೆಕ್ಯೂರ್ಡ್‌ ಎಂಬ ಮೋಹಕ ಪದಕ್ಕೆ ಆಕರ್ಷಿತರಾದ ಬಹಳಷ್ಟು ಹೂಡಿಕೆದಾರರು ತಮ್ಮ ಹೂಡಿಕೆಯ ಹಚ್ಚಿನ ಭಾಗವನ್ನು ಕರಗಿಸಿಕೊಂಡಂತಾಗಿದೆ.

    ಹೂಡಿಕೆದಾರರೆಂದರೆ ಕೇವಲ ವ್ಯಕ್ತಿಗಳು ಮಾತ್ರವಲ್ಲ, ಬಹಳಷ್ಟು ಮ್ಯೂಚುಯಲ್‌ ಫಂಡ್‌ ಗಳು, ಹಣಕಾಸಿನ ಸಂಸ್ಥೆಗಳೂ, ಕಾರ್ಪೊರೇಟ್‌ ಗಳೂ ಸೇರಿರುತ್ತವೆ.‌ ಇದರಿಂದ ಸರಪಳಿ ರೀತಿ ವಿವಿಧ ಕಂಪನಿಗಳು ಆಪತ್ತಿಗೊಳಗಾಗಿವೆ. ಈ ಗೊಂದಲ ಇನ್ನು ಮುಂದುವರೆಯುತ್ತಿದ್ದು ಕಂಪನಿಯನ್ನು ಖರೀದಿಸಲು ಕೆಲವು ಪ್ರಖ್ಯಾತ ಕಂಪನಿಗಳು ಪ್ರಯತ್ನಿಸುತ್ತಿವೆ. ಒಂದು ಲಕ್ಷ ಕೋಟಿ ರೂಪಾಯಿಗಳಷ್ಠು ಬಾಧ್ಯತೆಯಿರುವ ಈ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ರೂ.37 ಸಾವಿರ ಕೋಟಿಗೆ ಖರೀದಿಗೆ ಮುಂದಾಗಿದ್ದಾರೆ ಎಂದರೆ ಉಳಿದ ರೂ.63 ಸಾವಿರ ಕೋಟಿ ಹಣವನ್ನು ತುಂಬಲು ಸಾಧ್ಯವಿಲ್ಲವೆಂದಾಯಿತು.
    ಇದು ಇಲ್ಲಿಗೇ ನಿಲ್ಲದೆ, ಈ ಹಾನಿಯು chain ತರಹ ಪಾಸ್ ಆಗಿ ಇತರೆ ಕಂಪನಿಗಳನ್ನು ಸಹ ತೊಂದರೆಗೊಳಗಾಗುವಂತಾಗಬಹುದು.

    ಇದರೊಂದಿಗೆ ಸ್ರೈ ಇನ್‌ ಫ್ರಾಸ್ಟ್ರಕ್ಚರ್‌ ಕಂಪನಿಯೂ ತನ್ನ ಬಾಂಡ್‌ ದಾರರಿಗೆ ಕೊಡಬೇಕಾದ ಬಡ್ಡಿಯಾಗಲಿ, ಮೂಲ ಹೂಡಿಕೆಹಣವನ್ನಾಗಲಿ ಹಿಂದಿರುಗಿಸಲು ಸಾಧ್ಯವಿಲ್ಲದಾಗಿದೆ. ಈ ಕಾರಣ ಈ ವಿಚಾರವು ಆರ್‌ ಬಿ ಐ ನ ಸ್ಪೆಷಲ್‌ ಆಡಿಟ್‌ ಗೆ ಒಳಗಾಗಿದೆ. ಆದ್ದರಿಂದ ಹೂಡಿಕೆ ಮಾಡುವಾಗ ಕಂಪನಿಗಳ ಬಗ್ಗೆ ಅರಿತು ಹೂಡಿಕೆ ಮಾಡಬೇಕು. ಸ್ವಯಂ ಘೋಷಿತ ಸುರಕ್ಷತೆ ಎಂಬುದು ಶಾಶ್ವತವಲ್ಲ.

    ಆದರೆ ಷೇರುಗಳಲ್ಲಿ ಹೂಡಿಕೆ ಮಾಡಿದಾಗ ಅಪಾಯದ ಅರಿವು ಇರುತ್ತದೆ. ಅಂದರೆ ಹೂಡಿಕೆ ಮಾಡಿದ ಕಂಪನಿಯು ಆಪತ್ತಿಗೆ ಒಳಗಾದಾಗ, ಹಾನಿಗೊಳಗಾದಾಗ ಹೂಡಿಕೆ ಮಾಡಿದ ಷೇರಿನ ಹಣದವರೆಗೂ ಮಾತ್ರ ಜವಾಬ್ಧಾರರಗಿರುತ್ತಾರೆ. ಅದರಂತೆ ಈ ಹಿಂದೆ ಮಜ್‌ ಡಾ ಇಂಡಸ್ಟ್ರೀಸ್‌ಷೇರಿನ ಬೆಲೆ ರೂ.1,400 ರಿಂದ ಜಾರಿ ಶೂನ್ಯವಾದಾಗಲೂ, ಯುನಿಟೆಕ್‌ ಕಂಪನಿ ಷೇರು ರೂ.20ಸಾವಿರದ ಗಡಿಯಿಂದ ಏಕ ಅಂಕಿಗೆ ಬಂದಾಗಲೂ, ಸ್ಟಾರ್‌ ಪ್ರಚಾರಕರ ಕಾರಣ ರೂ.600ಕ್ಕೂ ಹೆಚ್ಚಿದ್ದ ಗೀತಾಂಜಲಿ ಜೆಮ್ಸ್‌ ಷೇರಿನ ಬೆಲೆ ಶೂನ್ಯವಾದಾಗಲು ಯಾರೂ ಪ್ರಶ್ನಿಸಲಿಲ್ಲ, ಕಾರಣ ಷೇರುಗಳಲ್ಲಿ ಹೂಡಿಕೆ ಮಾಡಿದಲ್ಲಿಅಪಾಯಕ್ಕೆ ಯಾರೂ ಹೊಣೆಗಾರರಲ್ಲ ಎಂಬುದು ಜಗಜ್ಜಾಹಿರವಾದ ಅಂಶ. ಆದರೆ ನಿಶ್ಚಿತ ಕೂಪನ್‌ ದರದ ಬಾಂಡ್‌ ಗಳನ್ನುವಿತರಿಸಿದಾಗ ಕಂಪನಿ, ಪ್ರವರ್ತಕರು ಜವಾಬ್ಧಾರರಾಗಬೇಕು. ಲಕ್ಷಗಟ್ಟಲೆ ಮುಖಬೆಲೆಯಿರುವ ಬಾಂಡ್‌ ಗಳಲ್ಲಿ ಹೂಡಿಕೆ ಮಾಡಿದವರಿಗೆ ಯಾವುದೇ ರೀತಿಯ ಅಗೋಚರವಾದನಿಯಮಗಳಡಿ write off ಮಾಡುವುದು ನೈತಿಕತೆ ಅಲ್ಲ. ಇಂತಹ ಬೆಳವಣಿಗೆಯನ್ನು ಯೆಸ್‌ ಬ್ಯಾಂಕ್‌, ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ ಗಳು ಪ್ರದರ್ಶಿಸಿವೆ.

    ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದಾಗ ಉತ್ತಮ ಕಂಪೆನಿಗಳ ಷೇರಿನಲ್ಲಿ ಹೂಡಿಕೆಮಾಡುವುದು ಜಾಣತನ ಎನ್ನಬಹುದು. ಉದಾಹರಣೆಗೆ : ಟಾಟಾ ಸ್ಟೀಲ್‌ ಕಂಪನಿ 2010 ರಲ್ಲಿ ರೂ.600 ಕ್ಕೂ ಹೆಚ್ಚಿದ್ದು 2013 ರಲ್ಲಿ ರೂ.195 ರವರೆಗೂ ಕುಸಿದು, 2018 ರಲ್ಲಿ ರೂ.780 ರ ಸಮೀಪಕ್ಕೆ ಜಿಗಿಯಿತು. ಕಳೆದ ಮಾರ್ಚ್‌ ನಲ್ಲಿ ರೂ.251 ರವರೆಗೂ ಕುಸಿದಿದ್ದ ಈ ಷೇರು ಮತ್ತೆ ಈಗ ರೂ.700 ನ್ನು ದಾಟಿದೆ..ಇದೇ ರೀತಿ ಅಗ್ರಮಾನ್ಯ ಕಂಪನಿಗಳಾದ ರಿಲಯನ್ಸ್‌ ಇಂಡಸ್ಟ್ರೀಸ್‌, ಎಸ್‌ ಬಿ ಐ, ಐ ಟಿ ಸಿ, ಎಲ್‌ ಅಂಡ್‌ ಟಿ, ಎಂ ಅಂಡ್‌ ಎಂ ನಂತಹ ಅನೇಕ ಕಂಪನಿಗಳು ಪ್ರದರ್ಶಿಸಿವೆ.

    ಷೇರಿನ ದರಗಳು ಗರಿಷ್ಠದಲ್ಲಿದ್ದಾಗ ಹೊರಬಂದು ಬೆಲೆಗಳು ಕುಸಿತದಲ್ಲಿದ್ದಾಗ ಖರೀದಿಸುವ ಹವ್ಯಾಸವಾದ VALUE PICK- PROFIT BOOK ಹವ್ಯಾಸವನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಭಾರಿ ಸಂಖ್ಯಾ ಗಾತ್ರದ, ಗಜಗಾತ್ರದ ಚಟುವಟಿಕೆಗಿಂತ ಸೀಮಿತ ಸಂಖ್ಯೆಯ ಷೇರುಗಳಲ್ಲಿ ಸುರಕ್ಷಿತ ವಹಿವಾಟು ಸೂಕ್ತ. ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕಾದ ಕಂಪನಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ಅಪಾಯ ಕಡಿಮೆ. ಒಂದು ವೇಳೆ ಕಂಪನಿಯು ತೊಂದರೆಯಲ್ಲಿದೆ ಎಂದೆನಿಸಿದಲ್ಲಿ ಲಾಸ್‌ ಬುಕ್‌ ಮಾಡಿಕೊಂಡು ಹೊರಬರಬಹುದು. ಹಾಗೆ ಮಾಡಿದಲ್ಲಿ ಹಾನಿಯ ಅಂಶವು ಸೀಮಿತವಾಗಿರುತ್ತದೆ.

    ಒಟ್ಟಾರೆ ಹೂಡಿಕೆಗೆ ಇದೇ ಯೋಜನೆ ಸುರಕ್ಷಿತ, ಸೂಕ್ತ ಎಂದು ನಿಖರವಾಗಿ ಗುರುತಿಸುವುದು ಅಸಾಧ್ಯ. ಅವುಗಳಲ್ಲಿ ಅಡಕವಾಗಿರುವ ಸಕಾರಾತ್ಮಕ, ನಕಾರಾತ್ಮಕ ಅಂಶಗಳನ್ನಾಧರಿಸಿ, ಸಂದರ್ಭಕ್ಕನುಗುಣವಾಗಿ ನಿರ್ಧರಿಸಬೇಕು. ಅವಶ್ಯವಿದ್ದಲ್ಲಿ ಸೂಕ್ತ ನೈಪುಣ್ಯತೆಯುಳ್ಳವರ ಮಾರ್ಗದರ್ಶನ ಪಡೆಯಬಹುದು. ಬಂಡವಾಳ ಸುರಕ್ಷತೆಗೆ ಇರಲಿ ಆದ್ಯತೆ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!