29.8 C
Karnataka
Monday, May 13, 2024

    ನಿನ್ನೆ ಅಕಾಲದ ಹುಚ್ಚು ಮಳೆ, ಇಂದು ಸಂಕ್ರಾಂತಿಯ ಕಿರಣದ ಎಳೆ

    Must read

    ಷಷ್ಠಿ ಕಳೆದು ತಿಂಗಳಾಗಿದೆ. ನಮ್ಮ ಕಡೆಗೆ ಷಷ್ಠಿ ಅಂದ್ರೆ ಸಣ್ಣ ಹಬ್ಬ ಅಂತೇನು ತಿಳಿಬೇಡಿ. ಅಡುಗೆ ಮೂರೇ ಬಗೆಯಾದರೂ ಅಚ್ಚುಕಟ್ಟು ಜೋರು. ಮನೆಯ ಮೂಲೆ ಮುಡುಕು ಅಟ್ಟ ಸೂರು ಹಿತ್ಲು ಎಲ್ಲಕ್ಕೂ ಪೊರಕೆಯ ಮೂತಿ ಮುಟ್ಟಿಸದಿದ್ದರೆ ಮನಸ್ಸಿಗೆ ಏನೋ ಸಮಾಧಾನವಿಲ್ಲ.
    ಅಚ್ಚುಕಟ್ಟು ಆಯ್ತೋ.ಈ ಭೂಮಿಯ ಒಳಗಿನ ತಿನ್ನಲು ಅರ್ಹವಾದಂತ ಸಕಲ ಗೆಡ್ಡೆಗೆಣಸಿನ ಜೊತೆಗೆ ,ಬಳ್ಳಿಯಲ್ಲಿ ಬೆಳೆಯುವ ಎಲ್ಲ ತರಕಾರಿಗಳೂ , ಮೊಳಕೆ ಬರಿಸಿದ ಕಾಳು ಸೇರಿಸಿ ಕೂಟು ಮಾಡುವುದು ಷ಼ಷ್ಠಿಯ ಸಂಪ್ರದಾಯ. ಹಾಗೆಯೇ ಆಚೀಚೆ ಮನೆಯವರಿಗೆ ತರಕಾರಿ ಹಂಚುವುದು ವಾಡಿಕೆ. ಖಿಚಡಿ, ಷಷ್ಠಿ ಸಾಂಬಾರು ,ಪಾಯಸ ಅವತ್ತಿಗೆ ಸುಬ್ರಹ್ಮಣ್ಯ ನಿಗೆ ನೈವೇದ್ಯ ನಮ್ಮಲ್ಲಿ.ಷಷ್ಠಿ ಕಳೆದು ಸರಾಸರಿ ತಿಂಗಳಿಗೆ ಸಂಕ್ರಾಂತಿ ಬರ್ತದೆ.ಇದು ಹಿಂದೂಗಳಿಗೆ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ.

    ಷಷ್ಠಿ ತಲೆಯಮೇಲೆ ನಾಲ್ಕು ಮಳೆ ಹನಿ ಗ್ಯಾರೆಂಟಿಯಾದರೆ ಅದರ ನಂತರದ ಸಂಕ್ರಾಂತಿಯಲ್ಲಿ ಕರುಳು ಕಳಚಿಬೀಳುವಷ್ಟು ಚಳಿ. ಅದಾಗಿ ತಿಂಗಳಿಗೆ ಬರುವ ಶಿವರಾತ್ರಿಗೆ ಚಳಿ ಶಿವಶಿವ ಅಂತ ಕೈ ಮುಗಿದು ಹೊರಟುಹೋಗುತ್ತೆ ಎಂಬುವುದು ನಮ್ಮ ಗ್ರಾಮೀಣ ಭಾಗದ ಆಡುಮಾತು.ಜನಪದರ ಈ‌ ಮಾತು ತೀರ ಇತ್ತೀಚಿನವರೆಗೂ ಹಾಗೇ ನಡೆಯುತ್ತಿದ್ದು ಜಾಗತಿಕ ತಾಪಮಾನ ಏರಿಳಿತದ ಕಥೆ ಹೇಳ್ತಾ ಓಷನ್ನಿಗೆ ಡಿಪ್ರೆಷನ್ನು ಎನ್ನುವ ನೆವ ಹೇಳ್ತಾ ಭೂಮಿ ತನ್ನ ಋತುಮಾನದ ಕಾಲಾವಧಿಯನ್ನು ರೀಡಿಫೈನ್ನು ರೀಶಫಲ್ಲೂ ಮಾಡಿಕೊಳ್ತಿದೆ.
    ನೆಲ ನಂಬಿ ಬದುಕುವವರಿಗೆ ರಿಧಮಿಕ್ ಆಗಿ ದಿಗಿಲು ಹುಟ್ಟಿಸ್ತಿದೆ.

    ಕಳೆದ ವಾರದ ಪ್ರಳಯ ಸ್ವರೂಪಿ ಮಳೆಯಿಂದ ಕಾಫಿ ಭತ್ತ ಮೆಣಸು ಮಾವು ನೆಲಕ್ಕೆ ಸುರಿದಿವೆ.ಧಾನ್ಯದ ಬೆಳೆಗಳು ತೆನೆಯಲ್ಲೋ ಬಣವೆಯಲ್ಲೋ ಮೊಳಕೆಯೊಡೆದು ವ್ಯರ್ಥ ಆಗ್ತಿದೆ.
    ಜನವರಿ ತಿಂಗಳಲ್ಲಿ ಈ ಪಾಟಿ ಮಳೆ ಬಂದಿದ್ದನ್ನು ಆರೇಳು ದಶಕದಲ್ಲಿ ನೋಡಿದ್ದೇ ಇಲ್ಲ ಎನ್ನುತ್ತಲೇ ಈ ಬಾರಿ ಜನವರಿಯಲ್ಲಿ ಸುರಿದ ಮಳೆಗೆ ರೈತರು ಹೈರಾಣಾಗಿ ಹೋಗಿದ್ದಾರೆ.

    ಆಲೂರು ಸಕಲೇಶಪುರ ಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಕೊಯ್ಲಿನ ಕಾಲ ಇದು.ಈ ಹಾದಿಯಲ್ಲಿ ಹಾದುಹೋಗುವ ನಗರವಾಸಿಗಳ ಕಣ್ಣು ತಾಕುವಷ್ಟು ಕಾಫಿಗಿಡ ಹಣ್ಣಾಗಿ ಬಾಗಿದ್ದವು.ಇದ್ದಕ್ಕಿದ್ದಂತೆ ಜನವರಿಯ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಗಿಡದ ಹಣ್ಣೆಲ್ಲವೂ ಉದುರಿ‌ ಮಳೆ ನೀರಿನೊಂದಿಗೆ ಕೊಚ್ಚಿ ಜಲಮೂಲ ಸೇರಿದೆ.ಸಣ್ಣಕ್ಕಿ ನಾಡು ಅಂತಲೇ ಪ್ರಸಿದ್ಧವಾದ ಆಲೂರಿನಲ್ಲಿ ಕೊಯ್ಲು‌ ಮುಗಿದ ಗದ್ದೆಗಳಲ್ಲಿ ನೀರುನುಗ್ಗಿದೆ. ಒಟ್ಟಿದ್ದ ಬಣವೆಗೂ ,ತೆನೆ ಹರವಿದ ಹೊಲಕ್ಕೂ ಮಳೆ ಬಿದ್ದು ಇಡೀ ವರ್ಷದ ಬೆವರು ವ್ಯರ್ಥ ವಾಗಿದೆ.

    ಈ ಎಲ್ಲದರ ನಡುವೆಯೂ ಕಾಲ ನಿಲ್ಲುವುದಿಲ್ಲ. ಮರೆವು‌‌ ಮನುಷ್ಯನಿಗೆ ವರವೇ ಹೌದು.ಕಂಗಾಲಾಗಿದ್ದ ಬೆಳೆಗಾರರು ರೈತರೂ ಮೂರೇ ದಿನಕ್ಕೇ ಮೈಯನ್ನೂ ಮನಸ್ಸನ್ನೂ ಕೊಡವಿಕೊಂಡು ಮತ್ತೆ ಮಾಮೂಲಿಯಂತಾಗಿದ್ದಾನೆ.

    ಸುಗ್ಗಿಯ ಹಬ್ಬ

    ಸಂಕ್ರಾಂತಿ ಬಹುತೇಕ ಎಲ್ಲ ಊರಿನ ಆಚರಣೆಯಂತೆ ನಮ್ಮಲ್ಲೂ ಸುಗ್ಗಿಯ ಹಬ್ಬ. ಯಾವುದೇ ಹಬ್ಬದ ಆಚರಣೆಯ ಕುರಿತು ಹೇಳಬೇಕೆಂದರೂ ದಶಕಗಳ ಹಿಂದಕ್ಕೆ ಹೋಗಿ ನೆನಪುಗಳನ್ನು ಹಸಿರಾಗಿಸಿಕೊಂಡು ವರ್ತಮಾನಕ್ಕೆ ಬರಬೇಕೆನಿಸುತ್ತದೆ.

    ಭತ್ತದ ಗದ್ದೆಯ ಪ್ರತಿಕೆಲಸಕ್ಕೂ ಈಚೀಚಿನ ವರ್ಷಗಳಲ್ಲಿ ಎಗ್ಗಿಲ್ಲದೇ ಏರುತ್ತಲೇ ಹೋದ ದಿನಗೂಲಿಯ ಜೊತೆಗೆ ಏರಿಕೆಯನ್ನೇ ಕಾಣದ ಬೆಲೆಯಿಂದಾಗಿ ಬಹುತೇಕ ಭತ್ತದ ಗದ್ದೆಗಳು ನಮ್ಮಲ್ಲಿ ಕಾಫಿ ಅಡಿಕೆ ತೋಟಗಳಾಗಿ ಪರಿವರ್ತನೆಯಾಗಿವೆ. ಉಣ್ಣುವ ಅನ್ನವನ್ನಾದರೂ ಗೊಬ್ಬರ ಸೋಕಿಸದೇ ಬೆಳೆದುಕೊಳ್ಳುವ ಆಸೆಯಿದ್ದವರು ಗದ್ದೆ ಮಾಡುತ್ತಿದ್ದಾರೆ.ಜೊತೆಗೆ ಸಣ್ಣ ರೈತರು ಮುಯ್ಯಾಳಿನೊಂದಿಗೆ ನಾಟಿ ,ಒಕ್ಕಲಾಟ ಮುಗಿಸಿ ಕೊಳ್ಳುವ ಶಕ್ತಿ ಇದ್ದವರು ಗದ್ದೆ ಕೃಷಿ ಮಾಡುತ್ತಿದ್ದಾರೆ ಅಷ್ಟೇ.

    ದಶಕಗಳ ಹಿಂದಕ್ಕೆ ಹೋದರೆ ಆಗ ನಾವೆಲ್ಲರೂ ಆರಂಭ ಮಾಡುತ್ತಿದ್ದೆವು.(ಆರಂಭವೆಂದರೆ ಭತ್ತ ಬೆಳೆಯುವುದು ಎಂಬರ್ಥ ನಮ್ಮಲ್ಲಿ) ಸಂಕ್ರಾಂತಿ ಗೆ ಸರಿಯಾಗಿ ಗದ್ದೆ ಮಾಗಿ ಬಂಗಾರ ವರ್ಣ ತಳೆಯುತ್ತಿದ್ದವು.ಸಂಕ್ರಾಂತಿಯ ದಿನ ಬೆಳಿಗ್ಗೆ ಶುಭ ಸಮಯ ನೋಡಿಕೊಂಡು ಮೂರು ಸೂಡು ಪೈರು ಕುಯ್ದು ಅದನ್ನು ಜಗುಲಿಯಲ್ಲೋ ದೇವರ ಮನೆಯಲ್ಲೋ ಅಲಂಕರಿಸಿದ ಮಣೆಯ ಮೇಲಿಟ್ಟು ಹಾಲುತುಪ್ಪ ಎರೆದು ಗಣಪತಿ ಇಟ್ಟು ಪೂಜಿಸುತ್ತಿದ್ದೆವು.ನಂತರ ಅದನ್ನು ಬಡಿದು ಹಿಡಿಯಷ್ಟು ಅಕ್ಕಿ ಮಾಡಿಕೊಂಡು ಆ ಅಕ್ಕಿಯನ್ನು ಮೊದಲಿಗೆ ಹಾಲಿನಲ್ಲಿ ‌ನೆನೆಹಾಕಿ ಅದರ ಜೊತೆಗೆ ‌ಮತ್ತಷ್ಟು ಅಕ್ಕಿ ಸೇರಿಸಿ ಹಾಲು ಸಕ್ಕರೆ ಬೆರೆಸಿ ಮಂದ ಉರಿಯಲ್ಲಿ ಕುದಿಸಿ ಇಳಿಸುವಾಗ ಎರಡು ಅರಿಷಿನದ ಎಲೆ ಹಾಕಿ ಮುಚ್ಚಳ ಮುಚ್ಚಿದರೆ ಘಮಘಮಿಸುವ ಹೊಸಕ್ಕಿ‌ ಪಾಯಸ ನೈವೇದ್ಯಕ್ಕೆ ತಯಾರಾಗ್ತಿತ್ತು.

    ಈಗ ವರ್ತಮಾನಕ್ಕೆ ಬರ್ತೇನೆ.

    ಕಾಲದ ಹಾದಿಯಲ್ಲಿ ಬರುವ ಬದಲಾವಣೆಗಳೆಲ್ಲವನ್ನೂ ಸಹಜವಾಗಿಯೇ ಸ್ವೀಕರಿಸುವುದನ್ನು ನಾವು ಕಲಿಯಬೇಕು.ಹೊರತು ಪಾದದಲ್ಲಿ ಬಿರುಕು ಬೊಕ್ಕೆ ಗ್ಯಾರೆಂಟಿ.

    ಈಗ ಬಹುತೇಕ ಮಧ್ಯಮ ವರ್ಗದ ಮಲೆನಾಡಿಗರು ಭತ್ತ ಬೆಳೆಯುತ್ತಿರುವುದು ಕಡಿಮೆಯಾಗಿದೆ.ನಮ್ಮ ಪರಿಸರದಲ್ಲಿ ಭತ್ತದ ಇಳುವರಿಯೂ ಬಹಳ ಕಡಿಮೆ.ಆರ್ಥಿಕವಾಗಿ ಹೊರೆಯಾಗುವ ಭತ್ತ ಬೆಳೆದು ನವೆದುಹೋಗುವುದು ಬೇಡ ಎನ್ನುವ ನಿರ್ಧಾರಕ್ಕೆ ಎಂಬತ್ತು ಪ್ರತಿಶತ ಗದ್ದೆ ಉಳ್ಳವರು ನಿರ್ಧರಿಸಿಯಾಗಿದೆ. ಇನ್ನೂ ಅಲ್ಲಿ ಇಲ್ಲಿ ಕಾಣುವ ನಾಕಾರು ಗದ್ದೆಗಳಲ್ಲಿ ಈಗೆಲ್ಲಾ ಕಾಣುವ ಹೈಬ್ರೀಡ್ ತಳಿಯಿಂದಾಗಿ ಸಂಕ್ರಾಂತಿಗೂ ಮೊದಲೇ ಭತ್ತ ಕಣ ಸೇರಿಯಾಗಿರುತ್ತದೆ.
    ಹೊಸಭತ್ತದಿಂದ ಮಾಡಿಸಿದ ಹೊಸ ಅಕ್ಕಿಯಿಂದ ಪಾಯಸ ಮಾಡುವುದು ಸಂಕ್ರಾಂತಿ ಯ ವಿಶೇಷ.

    ಈಗ ಕಾಫಿ ಬೆಳೆಗಾರರ ಕಣದಲ್ಲಿ ರೋಬಾಸ್ಟ ಕಾಫಿ ಒಣಗುತ್ತಿರುತ್ತದೆ.ಅಂಗಳದಲ್ಲಿರುವ ಕಾಫಿಯ ರಾಶಿಯ ಎದಿರು ಸಾರಿಸಿ ರಂಗೋಲಿ ಹಾಕಿ ನಡುವೆ ಸಗಣಿಯ ಬೆನವಣ್ಣನನ್ನು ಕೂರಿಸಿ ಗರಿಕೆ ಮತ್ತು ಹೂವುಗಳಿಂದ ಪೂಜೆ ಮಾಡಿ ಗಣಪನಿಗೂ ಬೆಳೆಯ ರಾಶಿಗೂ,ಸೂರ್ಯನಿಗೂ ಹೊಸಕ್ಕಿ ಪಾಯಸ ನೈವೇದ್ಯ ಮಾಡುವುದು ಸಂಕ್ರಾಂತಿ ಯ ಮುಖ್ಯ ಪೂಜಾ ವಿಧಿ.

    ಈ ಹಿಂದೆಲ್ಲಾ ನಮ್ಮಲ್ಲಿ ಸಂಕ್ರಾಂತಿಗೆ ಎಳ್ಳು ಬೆಲ್ಲ ಮಾಡುವುದು ಅಷ್ಟೇನೂ ಬಳಕೆಯಲ್ಲಿರಲಿಲ್ಲ.ನಗರ ಸ್ಪರ್ಶ ದಿಂದ ಈಗ ಎಳ್ಳುಬೆಲ್ಲ ಎಲ್ಲರ ಮನೆಯಲ್ಲೂ ತಯಾರಾಗ್ತದೆ.ಇದರ ಜೊತೆಗೆ ಸಂಕ್ರಾಂತಿಗೆ ವಿಶೇಷವಾಗಿ ಮಾಡುವುದು ಕುಟ್ಟುಂಡಿ.ಅಂದರೆ ಹುಚ್ಚೆಳ್ಳಿನ ಚಟ್ನಿ ಪುಡಿ. ಜೊತೆಗೆ ಅಕ್ಕಿತರಿಯಿಂದ ತಯಾರಿಸುವ ಕಡುಬು.

    ಸಂಕ್ರಾಂತಿ ಪುರುಷ

    ಹಿಂದಿನ ದಿನವೇ ಸಂಕ್ರಾಂತಿ ಪುರುಷನ ಆಗಮನದ ಮಾಹಿತಿ ತಿಳಿದು ಸಂಕ್ರಾಂತಿ ಪುರುಷ ಹುಟ್ಟುವ ಮೊದಲೇ ರಾಶಿ ಪೂಜೆ, ಸೂರ್ಯನ ಪೂಜೆ ಮುಗಿಸಿ ರಾಶಿಯೊಳಗೆ ಎರಡೆರಡು ಕಡುಬು ತೂರಿಸುವುದು ನಮ್ಮಲ್ಲಿ ಸಂಕ್ರಾಂತಿ ಆಚರಣೆ.ಇದಕ್ಕೆ ‘ಕಡುಬು ಸಿಕ್ಕಿಸುವುದು’ ಎನ್ನುತ್ತಾರೆ.
    ಒಳ್ಳೆಯ ಘಳಿಗೆಯಲ್ಲಿ ರಾಶಿಗೆ ಕಡುಬು ಸಿಕ್ಕಿಸುವುದು ಮುಗಿಯಬೇಕು.ಈ ಕಡುಬು ಸಿಕ್ಕಿಸುವುದು ಕೇವಲ ಬೆಳೆಯ ರಾಶಿಗಷ್ಟೇ ಅಲ್ಲ.
    ಗೋದಾಮು ,ಬಳಸುವ ಯಂತ್ರಗಳು, ಕಾಫಿ ತುಂಬಿಸಿದ ಚೀಲಗಳೊಳಗೂ ಇಡುತ್ತಾರೆ.ಇವೆಲ್ಲವೂ ಸಂಕ್ರಾಂತಿ ಪುರುಷ ಮೂಡುವ ಮೊದಲೇ ಮಾಡಿದರೆ ಸಂಕ್ರಾಂತಿ ಆಚರಣೆ ಮುಗಿದಂತೆ.

    ಈ ನಡುವೆ ಸಂಕ್ರಾಂತಿ ಪುರುಷ ನಡುರಾತ್ರಿಯೇನಾದರೂ ಹುಟ್ಟಿದರೆ ಅದರ ಹಿಂದಿನ ಸಂಜೆಯೇ ಕಡುಬು ಸಿಕ್ಕಿಸುವ ವಿಧಿ ಮುಗಿಸಿಕೊಳ್ತೀವಿ.ಹಳ್ಳಿಯಲ್ಲಿ ಎಳ್ಳುಬೀರುವ ಆಚರಣೆ ಇಲ್ಲವಾದರೂ ಹಬ್ಬದ ವಾರದಲ್ಲಿ ಮನೆಗೆ ಬರುವ‌ ಅತಿಥಿಗಳಿಗೆ ಎಳ್ಳುಬೆಲ್ಲದ ಆತಿಥ್ಯ ಗ್ಯಾರೆಂಟಿ.

    ಸಂಕ್ರಾಂತಿಗೆ ವಿಶೇಷವಾಗಿ ಮಡಿಮೈಲಿಗೆಯ ನೇಮಗಳು ಇಲ್ಲ.ಸುಗ್ಗಿಯನ್ನು ಸಂಭ್ರಮಿಸುವುದಷ್ಟೇ ಹಬ್ಬದ ಉದ್ದೇಶ. ಜೊತೆಗೆ ಮಾಗಿಕಾಲಕ್ಕೆ ಪರಿಸರದಲ್ಲಿ ಒಣಹವೆ ಹೆಚ್ಚಿ ದೇಹದ ತೇವಾಂಶ ಇಂಗುವುದರಿಂದ ಅದರ ಮರುಪೂರಣಕ್ಕಾಗಿ ಎಣ್ಣೆ ತುಪ್ಪ ಹೆಚ್ಚಾಗಿ ಬಳಸಿ ಮಾಡುವ ಆಹಾರದ ನೈವೇದ್ಯ ದೇವರಿಗೆ.ದೇವರ ನೆಪದಲ್ಲಿ ನಮಗೂ.ಒಟ್ಟಾರೆ ಒಂದು ಸಾದಾಸೀದ ಸಂಭ್ರಮದ ಹಬ್ಬವಾಗಿ ಸಂಕ್ರಾಂತಿ ನಮ್ಮೂರಿಗೆ ಬಂದು ಹೋಗುತ್ತದೆ.

    ಹುಲುಮಾನವನ ಮೇಲೆ ಮುನಿಯದಿರು

    ಆದರೂ..ಈ ಬಾರಿಯ ಸಂಕ್ರಾಂತಿಗೆ
    ‘ಹುಲುಮಾನವನ ಮೇಲೆ ಮುನಿಯದಿರು ತಾಯೇ’
    ಅಂತ ಪ್ರಕೃತಿಯನ್ನು ಕೇಳಿಕೊಳ್ಳುವುದರ ಜೊತೆಗೆ ಮಣ್ಣು ಮುನಿಯದಂತೆ ನಮ್ಮ ನಡಾವಳಿಗಳಲ್ಲಿ ಬದಲಾವಣೆ ಮಾಡಿಕೊಂಡು ಹಬ್ಬ ಆಚರಿಸುವುದು ನಿಜವಾದ ಸಂಕ್ರಾಂತಿ ಹಬ್ಬದ ಆಚರಣೆ.

    ಉತ್ತರಾಯಣದ ಹೊಸ ಬೆಳಕು
    ನೇಯ್ದ ಬಲೆಯಂತಹ ಬದುಕು
    ನಿನ್ನೆ ಅಕಾಲದ ಹುಚ್ಚು ಮಳೆ
    ಇಂದು ಸಂಕ್ರಾಂತಿಯ ಕಿರಣದ ಎಳೆ
    ಮತ್ತೆಮತ್ತೆ ನಿರೀಕ್ಷೆ
    ಇರಲಿ ಬೆಳಕೇ
    ನಮಗೆ ನಿನ್ನ ಶ್ರೀರಕ್ಷೆ.

    ಎಲ್ಲ ಓದುಗರಿಗೂ ಸಂಕ್ರಾಂತಿಯ ಶುಭಾಶಯಗಳು

    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    5 COMMENTS

    1. ಸಂಕ್ರಾಂತಿ ಗ್ರಾಮೀಣ ಸೊಗಡಿನ ಆಚರಣೆ ಬಗ್ಗೆ ಅದ್ಬುತ ಲೇಖನ. ನಮ್ಮದು ಚನ್ನಗಿರಿ ತಾಲ್ಲೂಕು. ಅಡಿಕೆ ನಾಡೆಂದೇ ಪ್ರಸಿದ್ದಿ. ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಮಾವು ಪ್ರಮುಖ ಬೆಳೆ. ನಮ್ಮಲ್ಲಿ ಕಣಸುಗ್ಗಿ ರಾಶಿ ಪೂಜೆ, ದಾನ ಎಲ್ಲವೂ ಮಾಯವಾಗಿವೆ. ಕಣಸುಗ್ಗಿಯ ಸೊಗಡೇ ಇಲ್ಲವಾಗಿದೆ. ಆಧುನಿಕತೆಯಲ್ಲಿ ಸಾಂಪ್ರದಾಯಿಕ ರೈತರ ಸುಗ್ಗಿ ಇಲ್ಲವಾಗಿದೆ. ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡೊದಕ್ಕೆ ಸೀಮಿತವಾಗಿದೆ.
      ನಿಮ್ಮ ಕಡೆ ಆಚರಣೆ ಚೆನ್ನಾಗಿದೆ

    2. ಮಲೆನಾಡಿನ ಚಿತ್ರಣವನ್ನು ಕಟ್ಟಿಕೊಡುವ ಈಗಿನ ತಲೆಮಾರಿನ ಲೇಖಕ/ ಲೇಖಕಿಯರಲ್ಲಿ ನಂದಿನಿ ಹೆದ್ದುರ್ಗ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಸೊಗಸಾದ ಬರವಣಿಗೆ. ಸಂಕ್ರಾಂತಿ ಹುಗ್ಗಿ ಸವಿದಷ್ಟೆ ಆನಂದವಾಯಿತು.

    LEAVE A REPLY

    Please enter your comment!
    Please enter your name here

    Latest article

    error: Content is protected !!