35.8 C
Karnataka
Sunday, May 12, 2024

    ನಮ್ಮ ಸುತ್ತಲೂ ನಡೆದ ದುರಂತಗಳ ನಡುವೆ ನಾವು ಸಂಭ್ರಮಿಸುವುದು ಸಹ್ಯವೇ?

    Must read

    ಕ್ಯಾಲೆಂಡರ್ ಬದಲಾಗಿದೆ.ಇನ್ನೇನು 2020 ಮರೆಯಾಗಿ 2021 ಕಾಣಿಸಿಕೊಳ್ಳುತ್ತದೆ. ವರ್ಷ ಕಳೆದು ವರ್ಷ ಕಳೆಯುತ್ತಿದ್ದಂತೆ ಹಳೆಯದನ್ನೆಲ್ಲ ತೊಡೆದು ಹೊಸ ಉತ್ಸಾಹದಲ್ಲಿ ಮುನ್ನಡೆಯೋಣ ಎಂಬ ಅನಿಸಿಕೆ ಸಹಜ. 2020 ಜಗತ್ತಿನಲ್ಲಿ ಯಾರೂ ಕಲ್ಪಿಸಿಕೊಳ್ಳಲೇ ಸಾಧ್ಯವಿಲ್ಲದಷ್ಟು ಸಂಕಷ್ಟದ ವರ್ಷವಾಗಿ ಇತಿಹಾಸದಲ್ಲಿ ದಾಖಲಾಗಿತು. ತಾಂತ್ರಿಕವಾಗಿ ಮುಂದುವರಿದ ಮಾನವನನ್ನು ಯಕಃಶ್ಚಿತ್ ವೈರಾಣುವೊಂದು ಅಲ್ಲೋಲ ಕಲ್ಲೋಲ ಮಾಡಿತು.

    ಇಂಗ್ಲಿಷ್ ನಲ್ಲಿ ಕವಿತೆಯೊಂದರ ಪ್ರಖ್ಯಾತ ಸಾಲಿದೆ- This too shall pass. ಇದೂ ಕೊನೆಗೊಳ್ಳುತ್ತದೆ. ನೀವು sit and relax ಎನ್ನುತ್ತದೆ. ಆದರೆ ಎಷ್ಟೋ ಮಂದಿಗೆ ಬದುಕು ಇನ್ನೆಂದೂ ಚೇತರಿಸಿಕೊಳ್ಳದ ಭಾವನಾತ್ಮಕ, ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ದುಡಿಯುತ್ತಿದ್ದ ಕೈಗಳಿಂದ ಕೆಲಸ ಕಿತ್ತುಕೊಂಡಿದೆ. ಸಾರಿಗೆ, ಮಾಧ್ಯಮ, ಸಿನಿಮಾ, ಹೋಟೆಲ್, ನೇಯ್ಗೆ ಇತ್ಯಾದಿ ವಲಯಗಳಲ್ಲಿ ಹೊಟ್ಟೆ ಹೊರೆಯುತ್ತಿದ್ದವರು ಒಂದು ದುಷ್ಟ ಕನಸಿನಂತಹ 2020ರ ವರ್ಷವನ್ನು ಇನ್ನೆಂದಿಗೂ ಮರೆಯಲಾರರು. ಮುಂದೆಂದೂ ಇಂತಹ ವರ್ಷ ಬಾರದೇ ಇರಲಿ, ಕನಿಷ್ಠ ಉಟ್ಟು, ಉಡಲಾದರೂ ದೊರೆಯಲಿ ಎಂದು ಇನ್ನೂ ಮೊರೆ ಇಡುತ್ತಿದ್ದಾರೆ.

    ಹಾಗೆಯೇ 2020 ಎಂಬ ದುಃಸ್ವಪ್ನ ಕೊನೆಗೊಂಡಿದೆ. ಈ ವರ್ಷ ಹೇಳಿಕೊಳ್ಳಲು ಹಲವು ಕಥೆಗಳಿವೆ. ಸಾವಿರಾರು ಮೈಲಿ ನಡೆದ ಬಡ ಕಾರ್ಮಿಕರ ಸಂಕಟವಿದೆ. ಅವರಿಗೆ ದೇವರಂತೆ ಬಂದು ನೆರವಾದ, ಯಾವ ರಾಜಕಾರಣಿಯೂ ಶ್ರೀಮಂತನೂ ಆಲೋಚಿಸದ, ಕನಿಷ್ಠ ಮಾನವೀಯತೆಯಿಂದ ನೆರವಾದ ಸಿನಿಮಾದ ಖಳನಟ, ನಿಜ ಜೀವನದ ಹೀರೋ ಸೋನು ಸೂದ್ ಯಶೋಗಾಥೆಯಿದೆ. ದಿಢೀರ್ ಬಂದೆರಗಿದ ಕೋವಿಡ್ ಸಂಕಷ್ಟಕ್ಕೆ ಯಾರು ಹೇಗೆ ಸ್ಪಂದಿಸಬೇಕೆಂದು ತಿಳಿಯದೇ ಹೋದಾಗ ಹೀಗೆ ಸ್ಪಂದಿಸಬಹುದು ಎಂದು ತೋರಿಸಿಕೊಟ್ಟ ಆತನ ಅಂತಃಕರಣವಿದೆ. ಸೇವೆಯನ್ನೇ ಉಸಿರಾಡುವ ರಾಜಕಾರಣಿಗಳು ನಾಚಿಕೊಳ್ಳುವಂತೆ ಕೆಲಸ ಮಾಡಿದ ನಿಜವಾದ ನಾಯಕನಾಗಿ ಸೋನು ಸೂದ್ ಹೊರಹೊಮ್ಮಿದ ವರ್ಷವಿದು.

    ಕ್ಯಾಲೆಂಡರ್ ಬದಲಾದರೆ ಸಂಭ್ರಮಿಸುವುದೇಕೋ! ಸಂಭ್ರಮಕ್ಕೊಂದು ನೆಪ ಸಾಕು. ಹಬ್ಬ ಹರಿದಿನಗಳು ಹುಟ್ಟಿಕೊಂಡಿದ್ದು ಹೀಗೆಯೇ ಅಲ್ಲವೇ?
    ಆದರೆ ಜನರ ಸಂಭ್ರಮಕ್ಕೆ ಈ ವರ್ಷ ನೂರಾರು ಅಡ್ಡಿ ಆತಂಕಗಳು. ಸರ್ಕಾರಗಳು ಕಠಿಣ ನಿಯಮಗಳ ಮೂಲಕ ಸಂಭ್ರಮಕ್ಕೆ ಮೂಗುದಾರ ಹಾಕಬೇಕಾದ ಅನಿವಾರ್ಯತೆ. ಕೆಲಸ ಬಿಟ್ಟವರು, ಊರು ಬಿಟ್ಟವರಿಗೆ ಜೀವನ ಹೊಸ ಅರ್ಥ ತೋರಿಸುತ್ತಿದೆ. ಹಳ್ಳಿಗಳಿಗೆ “ರಿವರ್ಸ್ ಮೈಗ್ರೇಷನ್” ಆಗಿರುವ ಮಂದಿಗೆ ದೂರದ ಬೆಟ್ಟ ನುಣ್ಣಗಾಗಿದೆ.

    ಈ ವರ್ಷ ಎಂದಿನಂತಿಲ್ಲ

    ಬೆಂಗಳೂರು ಪೊಲೀಸರ ಸರ್ಪಗಾವಲಿನಲ್ಲಿದೆ. ನಿಮ್ಮ ಸಂಭ್ರಮಕ್ಕಿಲ್ಲಿ ತಾವಿಲ್ಲ. ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ನಿಮ್ಮ ಆಟಾಟೋಪ ನಡೆಯುವುದಿಲ್ಲ. ಎಂ.ಜಿ.ರೋಡ್, ಬ್ರಿಗೇಡ್ ಕಿಕ್ಕಿರಿಯುವುದಿಲ್ಲ. ಇದರಿಂದ ಬೆಂಗಳೂರಿನ ಬೀದಿ ಬೀದಿಯಲ್ಲಿ ಹೆಣ್ಣುಮಕ್ಕಳ ಮೇಲೆ ಅಸಭ್ಯವಾಗಿ ವರ್ತಿಸಿ ಅದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುವ ಪುನರಾವರ್ತನೆಗೆ ಅವಕಾಶವಿಲ್ಲ ಎಂದು ನಿಟ್ಟುಸಿರು ಬಿಡಬೇಕು. ಈ ವರ್ಷ ನ್ಯೂಸ್ ಚಾನೆಲ್ ಗಳಿಗೆ ಅಂತಹ ಸುದ್ದಿ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಗಳಿಂದಲಂತೂ ಬರುವುದಿಲ್ಲ.

    ಹೊಸ ವರ್ಷವೆಂದರೆ ಏನು? ಕುಡಿತ, ಕುಣಿತ, ಸಂಭ್ರಮ ನಂತರ ಯಾವತ್ತಿನಂತೆ ಎಲ್ಲವನ್ನೂ ಮರೆತು ದಿನಚರಿಯಲ್ಲಿ ತೊಡಗುವುದು. ಈ ವರ್ಷ ಎಂದಿನಂತಿಲ್ಲ. ಜನರ ಜೊತೆಗೂಡಿ ಸಂಭ್ರಮಿಸುವಂತಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಉದಾಸೀನ ಮಾಡಿದರೆ ಕೊರೋನಾ ಅದರ ಮ್ಯುಟೇಷನ್ ವೈರಸ್ ಗಳು ನಿಮ್ಮನ್ನು ಹಣ್ಣು ಮಾಡುತ್ತವೆ.
    ಕೋವಿಡ್ ಒಂದು ನೆಪವಾಗಿ ಕೆಲವು ಕುಟುಂಬಗಳು ಎಂದಿಗೂ ಮರೆಯಲಾಗದ, ಸಹಿಸಲಾಗದ ಸಂಕಷ್ಟಗಳಿಗೆ ಸಿಕ್ಕಿವೆ.

    ಕುಟುಂಬವೊಂದರಲ್ಲಿ ಕೋವಿಡ್ ಬಂದೆರಗಿ ತಾಯಿ, ತಂದೆಯರನ್ನು ಕಳೆದುಕೊಂಡ ಪುಟ್ಟ ಕಂದಮ್ಮಗಳು, ವಿವಾಹಿತೆಯಾಗಿ ಸುಖವಾಗಿದ್ದ ಮಗಳು ಕೋವಿಡ್ ಬಾಧಿತಳಾಗಿ ತವರಿಗೆ ಬಂದವಳು, ತನ್ನೊಂದಿಗೆ ತನ್ನ ತಂದೆ, ತಾಯಿಯರನ್ನೂ ಕರೆದೊಯ್ದ ದಾರುಣ ಘಟನೆಗಳು ಜರುಗಿವೆ. ಮನೆ ಮನೆಯಲ್ಲಿ ಒಂದೊಂದು ದುರಂತ ಕಥೆಗಳು ಅಳಿಸದ ಅಕ್ಷರಗಳಲ್ಲಿ ಇತಿಹಾಸ ಪುಟ ಸೇರಿವೆ. ಇದರ ಮಧ್ಯದಲ್ಲಿ ಮನೆ, ಮಕ್ಕಳನ್ನು ಮರೆತು ಸೇವೆ ಮಾಡಿದ ವೈದ್ಯರ ಒಳ್ಳೆಯತನ ಮನುಷ್ಯರ ಮೇಲೆ ನಂಬಿಕೆಯನ್ನು ಇಮ್ಮಡಿಸಿದರೆ ಅವಕಾಶವಾದಿಗಳಾಗಿ ಜನರ ರಕ್ತ ಹೀರಿದ ಆಸ್ಪತ್ರೆಗಳು ಮಾನವತ್ವದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡಿವೆ.

    ಎಲ್ಲ ವೈರುಧ್ಯಗಳ ವರ್ಷ 2020!

    ನಮ್ಮ ಸುತ್ತಲೂ ನಡೆದ ಇಂತಹ ದುರಂತಗಳ ನಡುವೆ ನಾವು ಸಂಭ್ರಮಿಸುವುದು ಸಹ್ಯವೇ?

    ಪ್ರತಿ ಹೊಸ ವರ್ಷಕ್ಕೆ ಹೊಸ ತೀರ್ಮಾನ. ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನ. ವರ್ಷಾಂತ್ಯವಾದಾಗ ಅದರ ಅವಲೋಕನ ನಡೆಯುತ್ತಿರುತ್ತದೆ. ಈ ವರ್ಷ ಮಾಡಬೇಕಾದ ತೀರ್ಮಾನಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಿ.

    • ಎಲ್ಲದಕ್ಕೂ ವ್ಯವಸ್ಥೆಯನ್ನು ಟೀಕಿಸುತ್ತೇವೆ. ಇದರಲ್ಲಿ ನಮ್ಮ ಜವಾಬ್ದಾರಿಯೇನು ಎಂದು ಅರಿತುಕೊಳ್ಳಿ. ನೀವು ವ್ಯವಸ್ಥೆಯ ಭಾಗ ಹಾಗೂ ನೀವು ಅದರ ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊಂದಿದ್ದೀರಿ ಎಂದು ಅರಿತುಕೊಳ್ಳಿ. ಕೋವಿಡ್ ಕಡ್ಡಾಯವಾಗಿ ಹರಡದಂತೆ ಎಚ್ಚರಿಕೆ ವಹಿಸಿ.

    • ಸಹಾಯ ಮಾಡಿ. ಸಾವಿರಾರು ಮೈಲಿ ನಡೆದು ಹೊರಟವರಿಗೆ ದಾರಿಯಲ್ಲಿ ಯಾವುದೇ ಕೋವಿಡ್ ಭಯವಿಲ್ಲದೆ ನೀರು, ಊಟ ನೀಡಿದ ಎಷ್ಟೋ ಕಾರುಣ್ಯ ಹೃದಯಗಳಲ್ಲಿ ಮಾನವತೆ ಇನ್ನೂ ಜೀವಂತವಾಗಿದೆ. ಸಹ ಜೀವಿಗಳಲ್ಲಿ ಇಂತಹ ಮಾನವತೆ ರೂಢಿಸಿಕೊಳ್ಳಿ.

    • ನೀವು ಉದ್ಯೋಗ ನೀಡುವ ಸ್ಥಾನದಲ್ಲಿದ್ದರೆ ಎಷ್ಟು ಸಾಧ್ಯವೋ ಅಷ್ಟು ಉದ್ಯೋಗ ಉಳಿಸಲು ಪ್ರಯತ್ನಿಸಿ, ಉದ್ಯಮಿಗಳಾದರೆ ಹೊಸ ಉದ್ಯೋಗದ ಸಾಧ್ಯತೆ ಸೃಷ್ಟಿಸಿ ಕೆಲಸ ಕಳೆದುಕೊಂಡವರಿಗೆ ನೆರವಾಗಿರಿ.

    • ಕೋವಿಡ್ ಸನ್ನಿವೇಶದಿಂದ ಹಲವು ಉದ್ಯಮ ನಷ್ಟವಾದರೆ ಹಲವರು ಡಿಜಿಟಲ್ ರೂಪದಲ್ಲಿ ಹೊಸ ವ್ಯಾಪ್ತಿ ಕಂಡುಕೊಂಡಿದ್ದಾರೆ. ನೀವು ಎಂತಹ ಸಣ್ಣ ಕೆಲಸವನ್ನಾದರೂ ಮಾಡಿ ಅದನ್ನು ಡಿಜಿಟೈಸ್ ಮಾಡುವ ಮೂಲಕ ಅದರ ಅನುಕೂಲ ಪಡೆಯಿರಿ.

    • ಸಂಭ್ರಮಿಸುವ ಮುನ್ನ ನಿಮ್ಮ ಸುತ್ತಲೂ ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡುವ ಆಲೋಚನೆ ಮಾಡಿ. ಹೊಸ ವರ್ಷ ಅವರಿಗೂ ಸಂಭ್ರಮ ತರಲಿ.

    • ನೀವು ಕೊಳ್ಳುವಾಗ ನಿಮ್ಮ ಬಳಿ ಹಣ ಇದೆ ಎಂದಲ್ಲ, ಅದರ ಉತ್ಪಾದಕರಾದ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಕೊಳ್ಳಿರಿ. ಈ ಸಂಕಷ್ಟದ ಸಮಯದಲ್ಲಿ ನೇಕಾರರು, ಕರಕುಶಲ ಕರ್ಮಿಗಳು, ಸಿನಿಮಾ ಕಾರ್ಮಿಕರು, ಅರೆಕಾಲಿಕ ಶಿಕ್ಷಕರು, ವಾಹನ ಚಾಲಕರು ಮುಂತಾದವರಿಗೆ ಅವರ ಸೇವೆಗಳನ್ನು ಕೊಳ್ಳುವ ಅಗತ್ಯವಿದೆ.

    • ಪೋಷಕರು ಕೆಲಸ ಕಳೆದುಕೊಂಡಿದ್ದರಿಂದ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ನಿಮ್ಮ ಸುತ್ತಲೂ ಇದ್ದಲ್ಲಿ ಅವರಿಗೆ ನೆರವಾಗಿರಿ.


    ಹೀಗೆ ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಸಂಭ್ರಮಿಸಲು ಸಜ್ಜಾಗಿರಿ.

    ವಿ. ಎಲ್. ಪ್ರಕಾಶ್
    ವಿ. ಎಲ್. ಪ್ರಕಾಶ್
    ವಿ.ಎಲ್.ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೇ ಬರಹದ ವ್ಯವಸಾಯ. ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕ.
    spot_img

    More articles

    3 COMMENTS

    1. ವಿ ಎಲ್. ಪ್ರಕಾಶ್ ಅವರ ಲೇಖನವಾಸ್ತವ ವನ್ನು ಪ್ರತಿಬಿಂಬಿಸಿದೆ. ಮುಂದಿನ ದಿನಗಳ ಕನಸು, ಭರವಸೆ ಇದೆ. 🙏👌👍

    LEAVE A REPLY

    Please enter your comment!
    Please enter your name here

    Latest article

    error: Content is protected !!