23.7 C
Karnataka
Monday, May 13, 2024

    ಅಮ್ಮ ಹಚ್ಚಿದ ಹೂ ಕುಂಡ

    Must read

    ನಮ್ ಕಡೆ ದೀಪಾವಳಿ ಅಂದರೆ ನನಗೆ ನೆನಪಾಗುವುದು ನನ್ನ ತವರು ಮನೆಯ ದೀಪಾವಳಿಯೇ. ಹಾಗಂತ ಕೊಟ್ಟ ಮನೆಗೂ ಹುಟ್ಟಿದ ಮನೆಗೂ ಘನಂದಾರಿ ದೂರ ಏನಲ್ಲ.ಒಂದೇ ತಾಲೂಕು ಕೂಡ. ಅಬ್ಬಾಬ್ಬಾ ಅಂದರೆ ಇಪ್ಪತ್ತು ಕಿಮಿ.ರಸ್ತೆ ಗುಂಡಿಯಿಂದಾಗಿ ಹದಿನೆಂಟು ನಿಮಿಷದ ಪ್ರಯಾಣ. ಆದರೂ ಅಮ್ಮನ ಮನೆ ದೀಪಾವಳಿಗೂ ಇಲ್ಲಿನ ದೀಪಾವಳಿಗೂ ಡಿಫರೆನ್ಸು ಬಾಳಾ ಇದೆ.

    ಅಲ್ಲಿ ಒಟ್ಟು ಮೂರುದಿನದ ದೀಪಾವಳಿ ಸಡಗರ.ನಮ್ ಕಡಿಗೆಲ್ಲಾ ದೀಪಾವಳಿನಾ ‘ದೀವಳಿಗೆ’ಹಬ್ಬ ಅಂತೀವಿ.ಈ ಹಬ್ಬದ ಒಂದು ಖುಷಿ ಹೇಳೇಬಿಡ್ತಿನಿ. ಮನೇಲಿ ಹಬ್ಬ ಅಂದರೆ ಉಜ್ಜು ತಿಕ್ಕು ತೊಳಿ ಬಳಿ ಗುಡಿಸು ಸಾರಿಸುಗಳಿಂದಾಗಿ ಮನ್ಸು ದೇಹ ಎರಡೂ ಹೈರಾಣಾದ್ರೂ ಚಿಂತಿಲ್ಲ. ಮನೆ ಮಾತ್ರ ಫಳಪಳ ಹೊಳೀಬೇಕು. ಅದೇ ಪದ್ದತಿ. ಅತ್ತೆಮಾವ ಅಂತ ಹಿರಿಯರು ಇಲ್ದೇ ಇದ್ದ ಮನೇಲೂ ಅವರು ನಡೆಸಿದ ತೊಳಿಬಳಿ ಯಜ್ಞವನ್ನು ಮಾಡದೇ ಹೋದರೆ ಏನೋ ಪಾಪ ಪ್ರಜ್ಞೆ.

    ದೀವಳಿಗೆಯ ಖುಷಿ ಏನಾಪ ಅಂದ್ರೆ ಈ ಹಬ್ಬಕ್ಕೆ ‘ತೊಳಿಬಳಿ’ ಸಮಾಚಾರ ಸ್ವಲ್ಪ ಕಡಿಮೆ. ಗೌರಿ ಹಬ್ಬದ ಹಂಗೆ ಪೂಜೆಗೆ ಹೊಂದಿಸುವ ದೊಡ್ಡ ಕೆಲಸ ಇಲ್ವೇ ಇಲ್ಲ. ಯುಗಾದಿ ಹಂಗೆ ಒಬ್ಬಟ್ಟು ಮಾಡೋ ಉಸಾಬರಿ ಇಲ್ಲ.
    ಶಿವರಾತ್ರಿಯ ಹಾಗೇ ತಂಬಿಟ್ಟು ,ಜಾಗರಣೆಯೂ ಇಲ್ಲ. ಷಷ್ಟಿ ಸಂಕ್ರಾಂತಿಯಲ್ಲೂ ಆಯಾ ಋತುಮಾನಕ್ಕನುಸಾರ ಕೆಲಸ,ಅಡುಗೆ ಜೋರಿರುತ್ತೆ. ದೀವಳಿಗೆಗೆ ದೋಸೆಯ ಜೊತೆಗೆ ಸೋರೆಹಣ್ಣಿನ ಪಲ್ಯ ಮತ್ತು ಹಾಲುಪಾಯಸ ಮಾಡಿದ್ರೆ ಮುಗೀತು.

    ಆದರೆ ಸಕಲೇಶಪುರ ಆಲೂರು ಸೀಮೆಯ ನಮ್ಮ ಹಳ್ಳಿಗಳಲ್ಲಿ ದೀವಳಿಗೆ ಹಬ್ಬದಲ್ಲಿ ಮನೆಯ ಗಂಡಸರಿಗೆ ಮಾತ್ರ ಜಬರದಸ್ತ ಕೆಲಸ. ನಮ್ಮಲ್ಲಿ ಹುಣ್ಣಿಮೆ ಮುಗಿದಾಗಿಂದ ಅಮಾವಾಸ್ಯೆ ಕಳೆದು ಮೂರು ದಿನದವರೆಗೂ ಒಂದೊಂದು ಊರಿಗೆ ಒಂದೊಂದು ದಿನ ದೀಪಾವಳಿ.ಬಹುಶಃ ಹತ್ತುದಿನಗಳವರೆಗೆ ಒಂದಿಲ್ಲೊಂದು ದಿನ ಒಂದಿಲ್ಲೊಂದು ಊರಲ್ಲಿ ಹಬ್ಬ ನಡೀತಾ ಇರುತ್ತೆ.

    ಮೇಲೆ ಊರು,ಕೆಳ್ಳೆ ಊರು,ಹಿರೇ ಊರು, ಕಿರೇ ಊರು ಅಂತ ಆಯಾ ಊರಿನ ವರ್ಗಕ್ಕನುಸಾರ ಹಬ್ಬ ಮೊದಲು ಬರ್ತದೆ ಅಥವಾ ಕೊನೆಗೇ ಆಗ್ತದೆ.ಆಯಾ ಊರಿಗೆ ಬೇರೆಬೇರೆ ದಿನದಲ್ಲಿ ದೀಪಾವಳಿ ಬಂದು ಬೆಳಗಿ ಹೋಗುವುದು ಪದ್ದತಿಯಾಗಿರುವುದರಿಂದ ನಮ್ಮಲ್ಲಿ “ದಿಕ್ಕಿಲ್ಲದ ದೀಪಾವಳಿ” ಅಂತ ಈ ಹಬ್ಬಕ್ಕೆ ಹೇಳುವುದು ರೂಢಿ. ಇನ್ನೂ ನಮ್ಮಲ್ಲಿ ಕೆಲವು ಮನೆತನಗಳಲ್ಲಿ ಹಿರಿಯರಿಗೆ ಎಡೆ ಇಡುವುದು ಕೂಡ ಸಾಮಾನ್ಯವಾಗಿ ದೀಪಾವಳಿ ಅಮಾವಾಸ್ಯೆಯಂದೇ.

    ನಾವು ಚಿಕ್ಕವರಿದ್ದಾಗ ಬಹುತೇಕ ಎಲ್ಲರ ಮನೆಯಲ್ಲೂ ಕನಿಷ್ಠ ಇಪ್ಪತ್ತು ದನಕರುಗಳು ಇಲ್ಲದ ಮನೆಯೇ ಇಲ್ಲ.ನಾನು ಮದುವೆಯಾಗಿ ಈ‌ ಮನೆಗೆ ಬಂದಾಗ ಗಂಡನ ಮನೆಯಲ್ಲಿ ನೂರಕ್ಕೂ ಮೀರಿ ದನಕರುಗಳು ಇದ್ದವು.
    ದನಕರು ಹೆಚ್ಚಿಗಿದ್ದಷ್ಟೂ ಕೊಟ್ಟಿಗೆ ದೊಡ್ಡದು!ಕೊಟ್ಟಿಗೆ ಗೆ ತಕ್ಕಂತೆ ತಿಪ್ಪೆಯ ಸೈಝು.!ನಾಕು ದಶಕಗಳ ಹಿಂದೆ ತಿಪ್ಪೆಯ ಸೈಝು ಆಕಾರ ನೋಡಿ ಹೆಣ್ಣು ಕೊಡ್ತಿದ್ರಂತೆ.!ತಿಪ್ಪೆಯ ಆಕಾರ ದೊಡ್ಡದಿದ್ದಷ್ಟೂ ಮನೆಯ ಗಂಡಸು ಘನವಾದ ಕೆಲಸಗಾರ ಅಂತ.ಅಂತವನ ಕೈ ಹಿಡಿದರೆ ಮಗಳೂ ಸುರಕ್ಷಿತವಾಗಿರ್ತಾಳೆ ಅಂತೊಂದು ನಂಬಿಕೆ ಇತ್ತಂತೆ. ವಿಷಯಾಂತರ ಆಯ್ತು.ಕ್ಷಮ್ಸಿ.

    ದೀವಳಿಗೆ ಹಬ್ಬಕ್ಕೂ ದನಕರುಗಳಿಗೂ ನಮ್ಮಲ್ಲಿ ಅವಿನಾಭಾವ ಸಂಬಂಧ. ಎಲ್ಲಾ ದನಕರುಗಳು ಅಂತಿಲ್ಲದಿದ್ರೂ ಕರೆಯೋ ಹಸು,ಪುಟಾಣಿ ಕರು ,ಜೊತೆಗೆ ಎತ್ತುಗಳಿದ್ರೆ ಅವಕ್ಕೂ ಹಬ್ಬದ ವಿಶೇಷವಾಗಿ ಜಳಕ.
    ಅವು ಅಪರೂಪಕ್ಕೆ ಸಿಕ್ಕುವ ಮೀಯುವ ಸುಖಕ್ಕೆ ಕಿವಿಯೆತ್ತಿ ಕಾಲೆತ್ತಿ ಮೈ ಉಜ್ಜಿಸಿಕೊಂಡಿದ್ದೇ ಉಜ್ಜಿಸಿಕೊಂಡಿದ್ದು.ಸ್ನಾನ ಆದಮೇಲೆ ಕೊಟ್ಟಿಗೆಗೆ ಕಟ್ಟಿ ದೋಸೆ ನೈವೇದ್ಯ. ಕಾಡಿನ ಹೂವುಗಳನ್ನು ಗೋಣಿದಾರದಲ್ಲಿ ಕಟ್ಟಿ ಕೊರಳಿಗೆ ಹಾಕುವ ಖುಷಿ. ಇದರ ಜೊತೆಗೆ ನಾವು ಚಿಕ್ಕವರಿರುವಾಗ
    ದೀಪಾವಳಿ ಹಬ್ಬ ಮಕ್ಕಳ ಹಬ್ಬವೂ ಆಗಿ ಆ ದಿನ ಕೊಟ್ಟಿಗೆಯನ್ನು ತೊಳೆದು ಗದ್ದೆ ಮಣ್ಣು ತಂದು ವಿಧವಿಧವಾದ ಗೊಂಬೆಗಳನ್ನು ಮಾಡಿ (ಮಡಿಕೆ,ಕುಡಿಕೆ, ಮನುಷ್ಯ, ಮಗು,ದನಕರು,ಬೆಕ್ಕು,ಸೂರ್ಯ,ಚಂದ್ರ) ಹಾಲುತಂಬಿಗೆ ಇಡೋ ಗೂಡಿನಲ್ಲಿಡ ಬೇಕಿತ್ತು. ಕೌಟೇಕಾಯಿಯಿಂದ ಹಣತೆ ಮಾಡಿ ಹಚ್ಚಿ ದನಕರುಗಳಿಗೆ ಪೂಜೆ ಮಾಡಿ ,ಮಾಡಿಟ್ಟ ಗೊಂಬೆಗಳಿಗೂ ಪೂಜೆ ಮಾಡಿ ಮನೆಯಲ್ಲಿ ಮಕ್ಕಳೂ ,ದನಕರುಗಳೂ ಸಮೃದ್ದಿಯಾಗಲಿ ಅಂತ ಪೂಜೆ. ಕ್ರಮೇಣ ಹೇಗೋ ಮಕ್ಕಳ ಹಬ್ಬ ನೇಪಥ್ಯಕ್ಕೆ ಸರಿದು‌ ಮರೆಯಾಯ್ತು.

    ಮೊದಲೇ ಹೇಳಿದ್ನಲ್ಲಾ..ತಿಪ್ಪೆಗೂ ದೀವಳಿಗೆಗೂ ಸಮ್ ಸಂಬಂಧ ಅಂತ.
    ತಿಪ್ಪೆ ಅಂತ ಹೆಸರಿಟ್ಟಿರುವುದೇ ಕೊಳಕು ಮಾಡ್ಲಿಕ್ಕೆ ಅನ್ನುವ ಹಾಗೆ ಸಿಕ್ಕಿದ್ದೆಲ್ಲವನ್ನೂ ಸುರಿಯುವ ತಿಪ್ಪೆಗೇ ದೀವಳಿಗೆಯಲ್ಲಿ ಅಲಂಕಾರ ನಮ್ಮಲ್ಲಿ. ತಿಪ್ಪೆ ಸುತ್ತ ಕೆತ್ತಿ ಚೊಕ್ಕ ಮಾಡಿ ಮದ್ಯದಲ್ಲಿ ದೊಡ್ಡ ಕೇದಿಗೆಯ ಗರಿ (ಇದನ್ನು ಚ್ಯಾದಿಗೆ ನೆಡುವುದು ಅಂತಾರೆ)ಮತ್ತು ಲಕ್ಕಿ ಸೊಪ್ಪುಗಳನ್ನು ತಿಪ್ಪೆ ಮದ್ಯೆ ವೇದಿಕೆ ಮಾಡಿ ನಿಲ್ಲಿಸುವುದು.
    ಆಮೇಲೆ ಕರಗಿದ ಆ ಸಗಣಿಯ ಮಧ್ಯಕ್ಕೆ ಹೋಗಿನಿಂತು ವಿಶೇಷವಾಗಿ ಚೆಂಡು ಹೂವುಗಳಿಂದ ಅಲಂಕರಿಸಿ ಪೂಜೆ ಮಾಡಿ ಹಾಲುತುಪ್ಪ ಎರೆಯುವುದು. ಮತ್ತು ಹಾಗೇ ಪೂಜಿಸಿಕೊಂಡ ತಿಪ್ಪೆಯೇ ಪ್ರತಿ ಊರಿನಲ್ಲೂ ಹಬ್ಬ ಮುಗಿದದ್ದಕ್ಕೆ ಸಂಕೇತ.

    ಇದಲ್ಲದೆ..

    ಸಗಣಿಯ ಸಣ್ಣಸಣ್ಣ ಉಂಡೆಗಳನ್ನು ಮಾಡಿ ಅದಕ್ಕೆ ಚೆಂಡು ಹೂವು ಸುತ್ತಕ್ಕೂ ಸಿಕ್ಕಿಸಿ ಅದನ್ನು ಸೋರೆ ಎಲೆಯ ಮೇಲಿಟ್ಟು ಅದಕ್ಕೆ ಉತ್ತರಾಣಿ ಕಡ್ಡಿ ಸಿಕ್ಕಿಸಿದರೆ ಅದು ‘ಚರಕ’. ಇದು ಗೊಬ್ಬರದ ಲಕ್ಷ್ಮಿಯ ಸಂಕೇತ. ಈ ಚರಕಗಳನ್ನು ಅಕ್ಕಿ ಜಲಿಸುವ ಜರಡಿಯಲಿಟ್ಟು ಪೂಜಿಸಿ ಹಾಲು ತುಪ್ಪ ಎರೆದು ತಿಪ್ಪೆಯ ಮಧ್ಯಕ್ಕೂ ಮನೆಯಲ್ಲಿರುವ ಅಷ್ಟೂ ಬಾಗಿಲಿಗೂ, ಗೇಟು , ತೋಟ,ಮೇಷಿನು ಮನೆಗೂ ಇಡುವುದು ಮತ್ತು ಐದುದಿನಗಳವರೆಗೂ ಅದನ್ನು ಹಾಗೇಯೇ ಬಿಟ್ಟು ನಂತರ ಪುನಃ ಅದನ್ನು ತಿಪ್ಪೆಗೆ ಇಟ್ಟುಬರುವುದು ಹಬ್ಬದ ಮತ್ತೊಂದು ಆಚರಣೆ. ಹಬ್ಬಕ್ಕೆ ನಮ್ಮಲ್ಲಿ ದೋಸೆ ಮತ್ತು ಸೋರೆಹಣ್ಣಿನ ಪಲ್ಯವೇ ಕಡ್ಡಾಯವಾಗಿ ಎಡೆ.
    ಜೊತೆಗೆ ಹಾಲುಪಾಯಸ. ಸೋರೆಹಣ್ಣೇ ಯಾಕೆಂದರೆ ತಿಪ್ಪೆಯ ಮೇಲೆ ಎರಚಲಾಗಿದ್ದ ಸೋರೆ ಬೀಜಗಳು ಈ ವೇಳೆಗೆ ಫಲ ಕೊಡಲು ಶುರುವಾಗಿರುತ್ತವೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ ‘ಪಾಲಿಸಿ ಇದು.

    ಹಬ್ಬದ ದಿನ ದೋಸೆ ಹಿಟ್ಟನ್ನು ಒಂದು ತಟ್ಟೆಗೆ ತೆಗೆದುಕೊಂಡು ಅದನ್ನು ಮನೆಯ ಅಷ್ಟೂ ದನಕರುಗಳು ,ನಾಯಿ ,ಮನೆಯ ಗೋಡೆ ,ಬಾಗಿಲು,
    ಆಮೇಲೆ ನಮ್ಮೆಲ್ಲರ ಬೆನ್ನ ಮೇಲೂ ಹಾಕಿಕೊಂಡು ಸಂಭ್ರಮಿಸುತ್ತಿದ್ದದ್ದು ಈಗ ನೆನಪು ಅಷ್ಟೆ.ಹಾಗೆ ಮಾರ್ಕು ಮಾಡುವುದನ್ನು ‘ಹುಂಡರಿಕೆ’ ಹೊಡೆಯುವುದು ಅಂತಾರೆ. ಆಗೆಲ್ಲಾ ಯಾರಿಗೆ ಯಾರು ಮೊದಲು ಹುಂಡರಿಕೆ(ದೋಸೆ ಹಿಟ್ಟಿನಲ್ಲಿ ಬೆನ್ನಿಗೆ ಮಾರ್ಕು ಮಾಡುವುದು) ಹೊಡಿತಾರೆ ಅಂತ ಹಠ,ಆಟ. ಇದು ದೀಪಾವಳಿಯ ಇನ್ನೊಂದು ಆಚರಣೆ.

    ಇದಲ್ಲದೆ

    ‘ಬೆಳಗುಂಬಳ ಬೀಳು’ ಅಂತ ಒಂದು ಸಿಕ್ತದೆ. ಇದು ದೀಪಾವಳಿಗೆ ನಮಗೆ ಅಗತ್ಯವಾಗಿ ಬೇಕಾದ ಪರಿಕರ. ಅದನ್ನು ಕೊಯ್ದು ತಂದು ಅದರಿಂದ ಸಣ್ಣ ಮತ್ತು ದೊಡ್ಡ ಉಂಗುರಾಕೃತಿ ಮಾಡಿ ದನಕರುಗಳಿಗೆ, ಅಕ್ಕಿ, ಧನ ,ಧಾನ್ಯ ಕಣಜ,ತೋಟ,ದುಡ್ಡಿನ ಡಬ್ಬ,ಬಂಗಾರದ ಡಬ್ಬ ,ರೇಷ್ಮೆ ವಸ್ತು ಗಳು ಇದೆಲ್ಲಕ್ಕೂ ಇಡುವ ಪದ್ದತಿ.

    ಯಾವ ವಸ್ತು ಬೆಳೆದು ಸಮೃದ್ಧ ವಾಗಬೇಕೋ ಅದೆಲ್ಲಕ್ಕೂ ಬೆಳಗುಂಬಳದ ಉಂಗುರ ಇಡುವುದು ಹಬ್ಬದ ಕುರುಹು. ಬೆಳಗುಂಬಳಕ್ಕೆ ವಿಶೇಷವಾದ ಬೆಳೆಯುವ ಶಕ್ತಿ ಇದೆಯಾದ್ದರಿಂದ ಹಾಗೇ ಅದನ್ನು ಇಟ್ಟ ಸಾಮಾಗ್ರಿಗಳೆಲ್ಲವೂ ವೃದ್ದಿಸಲಿ ಎನ್ನುವ ನಂಬಿಕೆಯೊಂದಿಗೆ ಇದನ್ನು ಮಾಡ್ತೇವೆ. ನಾನು ಚಿಕ್ಕವಳಿದ್ದಾಗ ಅಪ್ಪನಿಂದ ಬೆರಳಿಗೆ ಉಂಗುರ ಮಾಡಿಸಿ ಹಾಕಿಕೊಂಡಿದ್ದಲ್ಲದೆ ತಲೆಗೂದಲಿಗೂ ಬೆಳಗುಂಬುಳದ ಉಂಗುರ ಹಾಕಿಸಿಕೊಳ್ತಿದ್ದೆ. (ಇನ್ನು ‌ಮೂರೇ ದಿನಕ್ಕೆ ನನ್ನ ತಲೆಗೂದಲು ಸೊಂಟದವರೆಗೂ ಬೆಳೆದಿರುತ್ತೆ ಅಂತ ಸಂಭ್ರಮಿಸಿಕೊಂಡು ಆಮೇಲೆ ಆ ಸಿನೆಮಾ ನಟಿಯರ ಥರ ನಾನೂ ಜಡೆಯನ್ನು ಕುಣಿಸಿ ನಡೆಯಬಹುದು ಅಂತೆಲ್ಲಾ ಕನಸು ಕಾಣ್ತಿದ್ದೆ.)

    ಹಬ್ಬ ಮುಗಿದು ತಿಪ್ಪೆಗೆ ಹಾಲುತುಪ್ಪ ಎರೆದು ಪೂಜೆ ಮಾಡಿ,ಬಸವಣ್ಣನ‌ ಕಟ್ಟೆ ಪೂಜೆ ಮಾಡಿ ಊಟ ಮುಗಿದ ಮೇಲೆ ಏನಿದ್ರೂ ಪಟಾಕಿಯ ಸಡಗರ.
    ಅಣ್ಣತಮ್ಮ ನಿಗೆ ಸದ್ದು ಮಾಡುವ ದೊಡ್ಡ ಪಟಾಕಿಗಳಾದರೆ ನಂಗೆ ಹೂಕುಂಡ,ಸುಸುರು ಬತ್ತಿ,ವಿಷ್ಣು ಚಕ್ರ, ಹಾವು ಬಹಳ ಇಷ್ಟ. ಅದೆಷ್ಟೇ ಇಷ್ಟವಾದರೂ ಸುಸುರು ಬತ್ತಿ ಹಚ್ಚಲಿಕ್ಕೂ ನಂಗೆ ಜೀವ ಭಯ. ನಾನು ಮತ್ತು ನಮ್ಮ ಮನೆ ನಾಯಿ ಪಟಾಕಿ ಸಮಯಕ್ಕೆ ಹೆದರಿ ಮನೆ ಮೂಲೆ ಸೇರಿರತಿದ್ವಿ. ಆಗೆಲ್ಲಾ ನಂಗೆ ಹೆದರಪುಕ್ಲಿ ಅಂತ ಅಡ್ಡಹೆಸರು ಕಾಯಮ್ಮು.

    ಇನ್ನು ಲಕ್ಷ್ಮಿ ಪೂಜೆ.

    ಎಲ್ಲಾ ಊರಿನಂತೆ ಅಮಾವಾಸ್ಯೆ ದಿವಸದಂದು ಮಾಡುವುದು.
    ಸಂಜೆಯ ಶುಭ ಘಳಿಗೆ ನೋಡಿ ಅಮ್ಮ ದೀಪ ಹಚ್ಚಿ ಶುಭಾರಂಭ ಮಾಡ್ತಿದ್ರು. ಮನೆಯಲ್ಲಿದ್ದ ದೊಡ್ಡ ಕಟ್ಟು ಹಾಕಿದ ಲಕ್ಷ್ಮಿ ಫೋಟೊ ವನ್ನು ಗೋಡೆಯಿಂದ ಕೆಳಗಿಳಿಸಿ ಒರೆಸಿ ಶುಭ್ರ ಮಾಡಿ ತಳಿರು ಬಾಳೆಕಂದುಗಳಿಂದ ಅಲಂಕೃತವಾದ ಕುರ್ಚಿಯಲ್ಲಿ ಕೂರಿಸಿ, ಅದಕ್ಕೆ ವಿಧ ವಿಧವಾದ ನಾಣ್ಯಗಳನ್ನು ಸುಂದರವಾಗಿ ಹಾರದಂತೆ ಅಂಟಿಸಿ ,ಐದರ ಹತ್ತರ ನೂರರ ನೋಟುಗಳನ್ನು ಹಾರ ಮಾಡಿ ಹಾಕಿ ಪೂಜಿಸಿ ಗರ್ಜಿಕಾಯಿ,ಚಿತ್ರಾನ್ನದ ನೈವೇದ್ಯ..

    ಲಕ್ಷ್ಮಿ ಗೆ ಸುಸುರು ಬತ್ತಿಯಿಂದಲೇ ಆರತಿ ಪೂಜೆ ಎಲ್ಲವೂ.ಏ
    ಪೂಜೆ ಊಟ ಮುಗಿದ ಮೇಲೆ ನಾವು ಮೂವರು ಮಕ್ಜಳೂ ಹಂಚಿಕೊಟ್ಟಿದ್ದ ಪಟಾಕಿ ಹಿಡಿದು ನೀರೊಲೆಯಿಂದ ಕೆಂಡ ಇರುವ ಕೊಳ್ಳಿ ತಂದು ಅಂಗಳಕಿಟ್ಟುಕೊಂಡು ಪಟಾಕಿ ಹಚ್ಚುವ ಸಡಗರ.

    ಅಣ್ಣ ತಮ್ಮ ಸದ್ದು ಮಾಡುವ ಪಟಾಕಿ ಸುಟ್ಟರೆ ನಾನು ನಡುಗುವ ಕೈಗಳಲಿ ವಿಷ್ಣು ಚಕ್ರಕ್ಕೆ ಊದುಬತ್ತಿಯನ್ನು ಉದ್ದಾನುದ್ದ ಕೋಲಿಗೆ ಸಿಕ್ಕಿಸಿ ಕಿಡಿ ತಾಗಿಸಿ ಎದ್ದೆನೊಬಿದ್ದೆನೊ ಎನುವಂತೆ ಜಗುಲಿ ಸೇರಿಕೊಳ್ತಿದ್ದೆ.

    ಅಪ್ಪ ನನ್ನ ಭಯ ನೋಡಲಾಗದೆ ನನ್ನ ಪಾಲಿನ ಪಟಾಕಿಗೆ ಅವರೇ ಕಿಡಿ ತಾಗಿಸಿ ನನ್ನ ನೋಡಲು ಕರೆಯುತ್ತಿದ್ದರು.ಸುಮಾರು ರಾತ್ರಿ ಹನ್ನೊಂದು ಗಂಟೆವರೆಗೂ ನಡೆಯುತ್ತಿದ್ದ ಈ ಪಟಾಕಿ ಸಂಭ್ರಮ ನಾವು ಹೈಸ್ಕೂಲ್ ಮುಗಿಸುವವರೆಗೂ ಸ್ವಾರಸ್ಯಕರ ವಾಗೇ ನಡೆಯಿತು. ಆಮೇಲೆ ನಾವೆಲ್ಲರೂ ವಿಪರೀತ ಬುದ್ದಿವಂತರಾದೆವೇನೋ. ಪಟಾಕಿ ಹಚ್ಚುವುದು ಮಾಲಿನ್ಯ ಅಂತ ಅನ್ನಿಸಿ ಸುಮ್ಮನಾದೆವು.

    ಅಮಾವಾಸ್ಯೆ ಮಾರನೆ ದಿನ ಬೆಟ್ಟ ಹತ್ತುವ ಖುಷಿ. ಮನೆಯ ಎದುರಿನ ಪಾರ್ವತಮ್ಮನ ಬೆಟ್ಟ ಹತ್ತಿ ಹಣ್ಣುಕಾಯಿ ಮಾಡಿಕೊಂಡು ಊರವರೆಲ್ಲಾ ಸೇರಿ ಸಂಭ್ರಮಿಸಿದರೆ ಮೂರುದಿನಕ್ಕೆ ದೀಪಾವಳಿ ಮುಗಿಯುತ್ತಿತ್ತಾದರೂ ನಾವು ಅದನ್ನು ಹಾಗೆ ಮುಗಿಸಗೊಡುತ್ತಿರಲಿಲ್ಲ.

    ಹಬ್ಬದ ಮಾರನೇದಿನ ಪಟಾಕಿ ಸಿಡಿಸಿದ ಮದ್ದುಗಳನ್ನು ಒಟ್ಟು ಜೋಡಿಸುವ ಸಂಭ್ರಮ. ಯಾರಿಗೆ ಹೆಚ್ಚು ಸಿಕ್ತು. ಯಾವುದರಲ್ಲಿ ಹೆಚ್ಚು ಮದ್ದಿದೆ ಅಂತ ಅಳೆಯುವ ಖುಷಿ. ಹಾಗೆ ಚುಚುರೇ ಮದ್ದು ಉಳಿದಿರುವ ಮೊದಲೇ ಸುಟ್ಟಿರುವ ಪಟಾಕಿಗಳನ್ನು ಸೂಂಯ್ ಅನ್ನಿಸುವ,ಟುಸ್ ಅನ್ನಿಸುವ,ಭಗ್ ಅನ್ನಿಸುವ ಸುಖ ಈಗಿನ ಯಾವ ಹಂಡ್ರೆಡ್ ಶಾಟ್ಸ್ ಪಟಾಕಿಗೂ ಬರಲು ಸಾಧ್ಯವೇ ಇಲ್ಲ. ಅದು ಮಾತ್ರ ನಿಜವಾದ ದೀಪಾವಳಿ ಅನಿಸ್ತದೆ ನಂಗೆ.

    ಹಬ್ಬಕ್ಕೆ ಹೊಸಬಟ್ಟೆ ,ಉಡುಗೊರೆ ಏನೂ ಇರದಿದ್ದರೂ ನೂರು ರೂಪಾಯಿ ಪಟಾಕಿಯನ್ನು ಮೂರುಜನಕ್ಕೂ ಹಂಚುತ್ತಿದ್ರು ಅಮ್ಮ.
    ಆಮೇಲೆ ಅಮ್ಮನಿಗೆ ದೊಡ್ಡದಾದ ಎರಡು ಹೂಕುಂಡ. ಸ್ಪೆಷಲ್ ಆಗಿ ಸೆಪರೇಟ್ ಆಗಿ ಕೊಟ್ಟು ಹಚ್ಚಿಸ್ತಿದ್ವಿ. ಅಮ್ಮ ಹಚ್ಚಿದ ಆ ಹೂಕುಂಡದ ನಂತರವೇ ದೀವಳಿಗೆಯ ಪಟಾಕಿ ಸಡಗರವನ್ನು ನಮಗೆ ಸಂಭ್ರಮಿಸಲಿಕ್ಕೆ ಬಿಡ್ತಿದ್ದಿದ್ದು.

    ಸಂಭ್ರಮಿಸುತ್ತಿದ್ದ ಆ ಹಳೆಯ ದಿನಗಳ ಹಳಹಳಿಕೆಯಾ ಇದು.? ಅಂತ ನೀವು ಕೇಳಿದ್ರೆ ಖಂಡಿತವಾಗಿ ಇಲ್ಲ ಅಂತೀನಿ.ನೆನಪುಗಳನ್ನು ಮತ್ತೆಮತ್ತೆ ಕಣ್ತೆರೆ ಮುಂದೆ ತಂದು ನೋಡುವುದು ಎಷ್ಟು ಸೊಗಸು ಅಂತೀರಾ ಗೊತ್ತೇ.?

    ನಾನು ಸೇರಿದ ಮನೆಯಲ್ಲಿ ದೀಪಾವಳಿ ಹಬ್ಬ ಅಂದರೆ ಬರೀ ಕೂಗಿನ ಹಬ್ಬ. ಅಂದರೆ ನಮಗೆ ಅಮಾವಾಸ್ಯೆಗೂ ಮೂರು ದಿನ ಮೊದಲೆ ಹಬ್ಬ.
    ನೀರು ತುಂಬುವ ಹಬ್ಬದ ದಿನವೇ ನಮ್ಮ ಹಬ್ಬ ಆಗಿಹೋಗ್ತದೆ.ಇದೂ ಒಂಥರಾ ಸೊಗಸೇ.

    ಆ ದಿನ ಮೊದಲ ಜಾವಕ್ಕೇ ಎದ್ದು ‘ಲಕ್ಯೋ ಲಕ್ಯೋ ಕೂಹೂ ‘ಅಂತ ಪ್ರತಿಯೊಂದು ‌ಮನೆಯ ಗಂಡಸರು ಎರಡೆರೆಡು ಬಾರಿ ಕೂಗಬೇಕು. ನಂತರ ಮದ್ದಿನ ಸೊಪ್ಪು ತಂದು ಗದ್ದೆ ತೋಟಕ್ಕೆ ಹಾಕಬೇಕು.
    ಈ ಮದ್ದಿನ ಸೊಪ್ಪನ್ನು ಜಮೀನಿಗೆ,ಮನೆಯ ಗೇಟಿಗೆ ಹಾಕುವ ಪದ್ದತಿ ಬಹುಶಃ ನಮ್ಮ ಹಾಸನ ಜಿಲ್ಲೆಯ ಎಲ್ಲ ಊರುಗಳಲ್ಲೂ ಇದೆ.
    ನಾ ಸೇರಿದ ಮನೆಯಲ್ಲಿ ತಿಪ್ಪೆ ಪೂಜೆ ,ಚರಕ ಇವೆಲ್ಲವೂ ಇದ್ದರೂ ಕ್ರಮೇಣ ಈ ಎಲ್ಲಾ ಆಚರಣೆಗಳೂ ಸಣ್ಣದಾಗುತ್ತಿವೆ.

    ಅದೇನೇ ಇದ್ದರೂ,

    ಈಗಲೂ ದೀಪಾವಳಿಗೆ ಚೆಂಡು ಹೂವು, ದೋಸೆಯ ಜೊತೆಗೆ ಸೋರೆ ಪಲ್ಯ,ಚರಕ ಮತ್ತು ತಿಪ್ಪೆಯ ಪೂಜೆ, ಉತ್ತರಾಣಿ ಕಡ್ಡಿ,ಬೆಳಗುಂಬಳದ ಬಳ್ಳಿ ,ಲಕ್ಯೋ ಲಕ್ಯೊ ಕೂಹೂ…ಇಂದಿಗೂ ನಮ್ಮಲ್ಲಿ ಮಹತ್ವ ಉಳಿಸಿಕೊಂಡಿವೆ.

    ಕಣ್ಣ ಹಣತೆಗೆ
    ಕತ್ತಲನು
    ಅದ್ದಿ ತಿದ್ದಿಕೊಂಡೆ.
    ಅವನು…

    ‘ಈಗ ದೀಪಾವಳಿ ‘ಎಂದ..

    ಬೆಳಕಿನ ಹಬ್ಬ ಸರ್ವರಿಗೂ ಶುಭ ತರಲಿ.

    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    5 COMMENTS

    1. ವಾವ್…ಮಲೆನಾಡ ದೀವಳಿಗೆಯ ಆಚರಣೆ ಆದ್ಭತವಾಗಿದೆ. ತಿಪ್ಪೆ ಪೂಜೆ ಕ್ಷಣ ದಂಗು ಬಡಿಸಿತಾದರೂ ನಿಸರ್ಗ ಪೂಜಕ ಹಿರಿಯರಿಗೆ ತಿಪ್ಪೆಯ ಮಹತ್ವ ಗೊತ್ತಿದ್ದೇ ಪೂಜಿಸಿದರೇನೋ….

    2. ದೀಪಾವಳಿ ಆಚರಣೆ ಎಲ್ಲೆಡೆ ಸಾಮ್ಯತೆ ಇದ್ದರೂ, ಪ್ರಾದೇಶಿಕವಾಗಿ ವಿಶೇಷತೆ ಇದ್ದೆ ಇದೆ. ನಿಮ್ಮ ಬರಹದ ಅನುಭವ ನಮಗಾದರೂ ಕೆಲ ವಿಶಿಷ್ಟ ಆಚರಣೆಗಳು ಗಮನ ಸೆಳೆಯುತ್ತವೆ. ಸವಿವರವಾದ ಲೇಖನ ಓದಲು ಖುಷಿ ನೀಡುತ್ತೆ

    3. ಹಬ್ಬ ಒಂದೇ ಆದರೂ ಅದನ್ನು ಆಚರಿಸುವ ಪರಿ ಎಷ್ಟು ವಿಭಿನ್ನ! ತುಂಬ ಸುಂದರ ಲೇಖನ. ಕೇಶವ

    4. ನಿಜ ದೀಪಾವಳಿ ಹಬ್ಬದ ಆಚರಣೆ ಒಂದೊಂದು ಕಡೆ ಒಂದೊಂದು ತರ ಇದೆ. ಬಲಿವೇಂದ್ರನ ರೂಪ ಮತ್ತು ಆಚರಣೆ ಬೇರೆ ಬೇರೆ. ನಮ್ಮ ಉತ್ತರ ಕನ್ನಡದ ಹವ್ಯಕ ಸಮುದಾಯದಲ್ಲಿ ಕೆಂಪು ಸೌತೆಕಾಯಿಗೆ ಕಣ್ಣು, ಮೂಗು, ಬಾಯಿ ಕಾಡಿಗೆಯಲ್ಲಿ ಬರೆದು ಅದರ ಮೇಲೆ ಅಡಿಕೆ ಹಿಂಗಾರು ಇಟ್ಟು ಪೂಜಿಸುವರು. ಅವತ್ತು ದನಗಳಿಗೆ ಸಿಂಗಾರ ಮಾಡಿ ಅವುಗಳಿಗೆ ತಿನ್ನಲು ದೋಸೆ ಕೊಡುತ್ತೇವೆ. ದನಗಳಿಗೆ ಅಡಿಕೆ, ಮಾವಿನ ಎಲೆ ಎಲ್ಲಾ ಸೇರಿಸಿ ಹಾರಿ ಮಾಡಿ ಹಾಕುತ್ತೇವೆ.ಗೊಬ್ಬರದ ಗುಂಡಿಗೆ ಹುಲಿರಾಯನ ಕೋಲು ನೆಟ್ಟು ದಿಪ್ಪಳ ದಿಪ್ಪಳದಿವೋಳಿಗೆಯೋ ಹಬ್ಬಕ್ಕೆ ಒಂದು ಹೋಳಿಗೆಯೋ ಅಂತ ಕೂಗಿ. ದೊಂದಿ ಹಚ್ಚಿ ಇಡೀ ಮನೆಯಲ್ಲಿ ಇಟ್ಟು ಆರತಿ ಮಾಡಿ. ಬಲಿವೇಂದ್ರನ ಹಿಂದೆ ಹೋಗಿ ಮುಂದೆ ಬಾ ಅಂತ ಹೇಳಿ ಹಬ್ಬ ಮುಗಿಸುವರು.

    LEAVE A REPLY

    Please enter your comment!
    Please enter your name here

    Latest article

    error: Content is protected !!